Mar 042012
 

ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಿ ಇಲ್ಲಿ ತೋರ್ಪಡಿಸಿರಿ

  58 Responses to “ಪದ್ಯಸಪ್ತಾಹ – ೧೦ – ಲಹರಿ”

  1. ಉಪಾಹಾರವನ್ನು ಕೊಂಡು ಈ ಬಾರಿಯ ಲಹರಿ ಕಾರ್ಯಕ್ರಮಕ್ಕೆ ತೊಡಗೋಣ, ಎನಂತೀರಿ?

    ಕುದ್ದ ನೀರೊಳಗಕ್ಕಿ ಶಾವಿಗೆ
    ಯದ್ದಿ ಮುಳುಗಿಸಿ ಹದಕೆ ಬೆಂದಿರೆ
    ಉದ್ದುಸಾಸಿವೆ ಕಡಲೆ ಹಚ್ಚನೆಮೆಣಸಕಾಯಿಗಳಿಂ
    ಶುದ್ಧತುಪ್ಪದೊಳಿಂಗುಕೊಬ್ಬರಿ
    ಬಿದ್ದು ಘಮ್ಮನೆಯೊಗ್ಗರಿಸಲಾ
    ಗೆದ್ದು ಬಂದರು ಸದ್ದು ಮಾಡದೆ ಮೆದ್ದರುಪ್ಪಿಟ್ಟಮ್

  2. ಇವತ್ತು (ಮಾರ್ಚ್ ೪) ಇಲ್ಲಿ ಸ್ಯಾನ್ ಹೊಸೆಯಲ್ಲಿ ನಾವು ಎರಡು ಕನ್ನಡ ನಾಟಕಗಳನ್ನ ಮಾಡ್ತಾ ಇದ್ದೇವೆ. ಕಾರ್ಯಕ್ರಮದ ಹೆಸರು “ನಾಟಕ ಚೈತ್ರ”. ಜೊತೆಗೆ ಇಲ್ಲಿ ಆಗಲೇ ಎಲೆ ಚಿಗುರುವ ಮೊದಲೇ ಹೂ ಬಿಡುವ ಮರಗಳಲ್ಲೆಲ್ಲ ಹೂವು ತುಂಬಿದ ಕಾಲ. ಅಲ್ಲದೇ, ಕನ್ನಡಿಗರ ಪ್ರೀತಿಯ ಮಲ್ಲಿಗೆ ಇಲ್ಲಿ ದುರ್ಲಭ. ಈ ಹಿನ್ನೆಲೆಯಲ್ಲಿ ಈ ಭಾಮಿನಿಯನ್ನು ಓದಬೇಕಾಗಿ ಕೋರಿಕೆ:

    ಚಿಗುರು ತುಂಬಿರೆ ಸುತ್ತ ಮುತ್ತಲು
    ಮುಗುಳು ತುಂಬಿರೆ ಸಾಲುಮರ ಮ-
    ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ
    ನಗುವ ತಾರಲು ಮುದವ ತೋರಲು
    ಸೊಗವ ತೋರುತ ಮನವನೊಮ್ಮೆಲೆ
    ಹಗುರವಾಗಿಸೆ ಮತ್ತೆ ಬಂದಿದೆ ನಾಟಕದ ಚೈತ್ರ!

    -ಹಂಸಾನಂದಿ

  3. ನಿದ್ರೆ

    ಅರಸ ಪಂಡಿತ ಶೂರ ಸುಜ್ಞಾಜ್ಞರೇ ಇರಲಿ
    ವೃದ್ಧ ಯುವರೆಲ್ಲರೂ ಧರ್ಯ ತಪ್ಪಿ |
    ಕಣ್ಮುಚ್ಚಿ ತಲೆಬಾಗಿ ಮೈ ಕುಗ್ಗಿ ಶರಣಹರು
    ನಿದ್ರಾದಿದೇವಿಯಲಿ ಸೋಲನೊಪ್ಪಿ ||

  4. ಸುಮಾರು ೮ ವರುಷಗಳ ಹಿಂದೆ ಆರಂಭವಾದ “ರಘುವಂಶ” ವ್ಯಾಸಂಗ ಗೋಷ್ಠಿಯು ಒಂದು ಮುಖ್ಯವಾದ ಘಟ್ಟ ತಲುಪಲಿದೆ, ಅದಕ್ಕೆ ಕಾರಣೀಭೂತರಾದ ಮುಖ್ಯತ್ರಯಕ್ಕೆ

    ಮಂದಾಕ್ರಾಂತಾ||
    ಕ್ಷೇತ್ರಂದತ್ತ್ವಾ ಸ್ಫುರದುಪಕೃತೀ ಕಾಂಚನಾರಾಮಚಂದ್ರೌ |

    ಕ್ಷಿಪ್ತಂಬೀಜಂ ವರರಘುಕಥಾ ತತ್ರರಾಗೇಣನೀತಮ್||

    ಪಕ್ಷೇಪಕ್ಷೇ ವಚನಸರಿತಾ ಪೂರಯತ್ಯಾಲವಾಲಮ್|

    ಜಾತಾವೃಕ್ಷೇ ರಸಿಕಹೃದಯಾಃ ಕಾವ್ಯಶಿಷ್ಯಾಃ ಸುಮಾಭಾಃ||

    ( ರಾಮಚಂದ್ರ – ಕಾಂಚನಾ ಅವರಿತ್ತ ಜಾಗದಲ್ಲಿ ಕಾವ್ಯರಸಙ್ಙರಾದ ರಾಗ (ಗಣೇಶರು)

    ರಘುವಂಶ ವ್ಯಾಸಂಗ ಗೋಷ್ಠಿಯ ಬೀಜ ಬಿತ್ತಿದರು , ತಮ್ಮ ವಚನಗಂಗೆಯಿಂದ ಪಕ್ಷಕ್ಕೆ

    ಒಮ್ಮೆ ಪಾತಿತುಂಬಿಸಿ ಆರಿಕೆಮಾಡಿದರು , ಅದರ ಸಂಯುಕ್ತ ಫಲಿತವೇ ಈ ಹೆಮ್ಮರ

    ಇಂದು ನಾನಾ ಕಾವ್ಯಸಹೃದಯರೆಂಬ ಹೂಗಳಿಗೆ ಆಶ್ರಯವಾಗಿದೆ. )

    ಕಾವ್ಯದ ಕಾಲಯಾನ||

    ಕಂದ||

    ಕವಿಕುಲ ಗುರುವಿನ ಪದಗಳ |

    ಛವಿಯನು ಹಿಡಿಯುತ ಗಮಿಸಲು ಮುಂದೆಯೆ ನಾವ್ಗಳ್ ||

    ಕವಿತೆಗಳು ಮಾತ್ರ ಕಾಲದ |

    ಗವಿಯಲಿ ಬಗೆಯನು ಸೆಳೆದಿದೆ ಹಿಮ್ಮುಖ ಸವಿಯಿಂ|| (ಬಗೆ- ಮನಸ್ಸು)

    • ಕೆಲವು ತಿದ್ದುಪಡಿಗಳು.
      ಪ್ರಸಾದ್,
      ರಘುವಂಶದ ಗೋಷ್ಟಿಯು ಸುಮಾರು ೩ -೩ ೧/೨ ವರ್ಷಗಳ ಕಾಲ ಲಲಿತ , ರಾಘವೇಂದ್ರ ಅವರ ಬಸವೇಶ್ವರ ನಗರದ ಮನೆಯಲ್ಲಿ ನಡೆಯಿತು(೨೦೦೪ – ೨೦೦೭ ರ ವರೆಗೆ ಎಂದು ನೆನಪು). ಇದನ್ನೂ ಜ್ಣಾಪಿಸಿಕೊಳ್ಳಬಹುದು.

  5. ಈ ಸಾನೆಟ್ ಅನ್ನು ಹೋದ ವರ್ಷ ಛಂದಸ್ಸಿನ ತರಗತಿಗಳು ನಡೆದಾಗ ಬರೆದಿದ್ದೆ.

    ಕಾವ್ಯಲೋಕ (ಸಾನೆಟ್ ರೀತಿಯಲ್ಲಿ)

    ಭಾವಗಳ್ ನಲಿದಾಡುವಂಕಣ ಕವಿಯಲೋಕ
    ಸೋಲುಗೆಲವು ಸಮವಿಲ್ಲೆರಡಕೊಂದೇ ಬೆಲೆಯು
    ಆನಂದದನುಭವಕೆ ಸೀಮೆಯಿಲ್ಲದ ನೆಲೆಯು
    ದಿವ್ಯಾನುಭವದೆ ಮುಳುಗೆದ್ದವರಿಗಿದು ನಾಕ

    ಸಂದಿಗೊಂದಿಗಳಲ್ಲಿಡಗಿದ ಭಾವ ಹವಳವ
    ಮೇಲೆತ್ತಲಂಕರಿಸುವುದು ಸರಸ ಕವಿಯಾಟ
    ರಸಿಕಮೆಚ್ಚಲವನಿಗೆ ಜೇನು ಪಾಯಸದೂಟ
    ಸ್ಫೂರ್ತಿಸೆಲೆ ಸಿಗದಿರಲು ನಿಲ್ಲಿಸನು ಕಾಯಕವ

    ರಸಪಾನ ಜೀವನಕೆ ಧನ್ಯತೆಯ ಮೂಡಿಸಲು
    ರಸಿಕ ಕವಿಯೊಂದಾಗಿ ಹಾದಿ ಸುಗಮವೆನಿಸಲು
    ಮನದೆ ಸಾರ್ಥಕ ಭಾವ ಕವಿಗೆ ಮೃದುಕುಸುಮದೊಲು
    ಮೊಗ್ಗು ಹೂವಾಗಿರಲು ವನದೆ ಹರಡಲು ಘಮಲು

    ಬಯಕೆಯಿರಲೀ ತುಂಬು ಸಂತೋಷದ ಗಳಿಗೆಗೆ
    ಬರುವಳೇ ಬೇಗ ರಸದೊಡತಿ ಯನ್ನಯಬಳಿಗೆ ?

    • > ಸ್ಫೂರ್ತಿಸೆಲೆ ಸಿಗದಿರಲು ನಿಲ್ಲಿಸನು ಕಾಯಕವ

      ಅದು ತರವೇ. Somerset Maugham ಒಂದೊ ಎರಡೊ ಸಾವಿರ ಪದಗಳಷ್ಟು ಬರೆವಣಿಗೆ – ಚೆನ್ನಾದ್ದೋ ಅಲ್ಲವೋ – ಕಾಗದಕ್ಕಿಳಿಸದೆ ಮನೆಯಿಂದ ಕದಲುತ್ತಿರಲಿಲ್ಲವಂತೆ. ನಿಜವಿರಬಹುದು ಉತ್ಪ್ರೇಕ್ಷೆಯೂ ಇದ್ದೀತು, ಆದರೆ ಕೈ ಕೆಸರಾದರಲ್ಲವೆ ಬಾಯ್ಮೊಸರು?

      ಸುನೀತ ಚೆನ್ನಾಗಿದೆ ಗಾಯತ್ರಿ.

    • ಗಾಯತ್ರಿ,

      ಚೆನ್ನಾಗಿದೆ, ನಿಮ್ಮಿ೦ದ ಹೆಚ್ಚು ಪದ್ಯಗಳನ್ನು ಆಶಿಸುತ್ತೇವೆ:)

      ಸೋನೆಟ್ ಎ೦ದರೆ ರಾಮಾಯಣದರ್ಶನದ ಮಹಾಛ೦ದಸ್ಸೇ?

      • ಸೋಮ – ಇದು ೫ ಮತ್ರೆಗಳ ಸರಳ ರಗಳೆ ಛಂದಸು. ಸುನೀತದಲ್ಲಿ ೩ ಚೌಪದಿಗಳಿದ್ದು ಕೊನೆಗ ೨ ಸಾಲಿನ ದ್ವಿಪದಿಯಿರುತ್ತದೆ (ಒಟ್ಟು ೧೪ ಸಾಲುಗಳು). ವಿವಿಧ ಸಾಲುಗಳಲ್ಲಿ ಅಂತ್ಯಪ್ರಾಸಗಳು ಕಾಣುತ್ತವೆ.
        “ಯಾವ ಜನ್ಮದ ಮೈತ್ರಿ …” ಕೂಡ ಒದು ಸುನೀತವೆ. ಪದ್ಯಪಾನದಲ್ಲೇ, ಹಿಂದೆ ಕಣಾದ ರಾಘವರು ಬರೆದ “ಒಂದು ವಿರಕ್ತ ಸುನೀತ” ವಿದೆ (http://padyapaana.com/?p=44).

        • ಕನ್ನಡದಲ್ಲಿ ಸಾನೆಟ್ ತುಂಬ ವಿಖ್ಯಾತ. ಕುವೆಂಪು (ಕೃತ್ತಿಕೆ), ಮಾಸ್ತಿ(ಮಲಾರ), ಬೇಂದ್ರೆ(ಉಯ್ಯಾಲೆ), ಪುತಿನ, (ಇವರೊಬ್ಬರು ಮಾತ್ರ ಇದಕ್ಕೆ ಆದಿಪ್ರಾಸವನ್ನು ಬಳಸಿದ್ದಾರೆ),ಗೋವಿಂದಪೈ(ಇವರೇ ಕನ್ನಡಲ್ಲ್ಲಿ ಮೊದಲ ಸಾನೆಟ್ ಬರೆದವರು) ಮುಂತಾದ ಹಲವರು ಸಾನೆಟ್ ರಚನೆಯಲ್ಲಿ ಪ್ರಸಿದ್ಧರು. ಇವರಲ್ಲಿ ಪ್ರಾಸಗಳ ಅನೇಕವೈವಿಧ್ಯವನ್ನು ಕಾಣಬಹುದು. ಪ್ರಾಸ-ಮಾತ್ರೆ-ಗಣಗಳಲ್ಲಿ ಶೈಥಿಲ್ಯವನ್ನು ಹಾಗೆಯೇ ಉಳಿಸಿಕೊಂಡವರಲ್ಲಿ ಕೆ.ಎಸ್.ನ,ಚೆನ್ನವೀರ ಕಣವಿ, ಎನ್.ಎಸ್.ಎಲ್, ಎಚ್.ಎಸ್.ವಿ. ಮುಂತಾದವರಿದ್ದಾರೆ. ಡಾ||ಪಿ.ಎಸ್. ಗೀತಾ ಅವರು ಕನ್ನಡದಲ್ಲಿ ಸಾನೆಟ್ ಬಗೆಗೆ ಸಂಶೋಧನೆ ಮಾಡಿದ್ದಾರೆ.

    • ಗ್ಗಾಯತ್ರಿ,
      ತುಂಬಾ ಸುಂದರವಾದ ಭಾವ, ಅಷ್ಟೇಸುಂದರ ಸುನೀತದ ಬಂಧ. ಅದರಲ್ಲೂ ಎರಡನೆಯ ಚೌಪದಿಯ ಆಶಯ ನನಗೆ ತುಂಬಾ ಹಿಡಿಸಿತು.

  6. ಪ್ರಸಾದ್,
    ರಘುವಂಶದ ಗೋಷ್ಟಿಯು ಸುಮಾರು ೨ -೨ ೧/೨ ವರ್ಷಗಳ ಕಾಲ ಲಲಿತ , ರಾಘವೇಂದ್ರ ಅವರ ಬಸವೇಶ್ವರ ನಗರದ ಮನೆಯಲ್ಲಿ ನಡೆಯಿತು(೨೦೦೪ – ೨೦೦೬ ರ ವರೆಗೆ ಎಂದು ನೆನಪು). ಇದನ್ನೂ ಜ್ಣಾಪಿಸಿಕೊಳ್ಳಬಹುದು.

  7. ಸೋಮ,
    ಧನ್ಯವಾದಗಳು. ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಸಾನೆಟ್ ಬಗ್ಗೆ ವಿಸ್ತಾರವಾಗಿ ತಮ್ಮ ‘ಕನ್ನಡ ಛಂದ:ಸ್ವರೂಪ’ ದಲ್ಲಿ ಬರೆದಿದ್ದಾರೆ. ನನ್ನನ್ನು ಆಕರ್ಷಿಸಿದ್ದು ಈ ಬಗೆಯ ಕವಿತೆಯಲ್ಲಿನ ಭಾವದ ತಿರುವು( volta ಎಂದು ಕರೆಯುತ್ತಾರೆ . ಇದು ಕೊನೆಯ ೨ ಸಾಲಿನಲ್ಲಿ ಆಗಬೇಕೆಂದು ಹೇಳುತ್ತಾರೆ) ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸಿಗುವ ೧೪ ಸಾಲುಗಳು. ಅಂತ್ಯಪ್ರಾಸದಲ್ಲೂ ಅನೇಕ ಬಗೆಯ ವೈವಿಧ್ಯತೆ(ವಿವಿಧತೆ?, abba, cddc, efef + ೧ ದ್ವಿಪದಿ ) ತರಬಹುದು.

    ಜೀವೆಂ,
    ಧನ್ಯವಾದಗಳು. ನಿಮ್ಮ ಉಪ್ಪಿಟ್ಟಿನ ಪದ್ಯ ಓದಿ ರುಚಿಯಾದ ಉಪ್ಪಿಟ್ಟನ್ನೇ ತಿಂದಷ್ಟು ಖುಷಿಯಾಯಿತು.

    • ಹೌದು; ಸಾನೆಟ್ಟಿನ ಜೀವವಿರುವುದೇ ಈ ತಿರುವಿನಲ್ಲಿ. ಷೇಕ್ಸ್ಪೀರಿಯನ್ ಸಾನೆಟ್ಟಿನಲ್ಲಿ ಕಡೆಯ ಎಡು ಸಾಲುಗಳಲ್ಲಿಯೂ ಪೆಟ್ರಾರ್ಕಿಯನ್ ಸಾನೆಟ್ಟಿನಲ್ಲಿ ಕಡೆಯ ಆರು ಸಾಲುಗಳಲ್ಲಿಯೂ ಈ ಭಾವದ ತಿರುವು ಬರುತ್ತದೆ.
      ಆದರೆ ನನಗೆ ನಮ್ಮ ಸೀಸಪದ್ಯವನ್ನು ಸಾನೆಟ್ಟಿಗಿಂತ ಸಮರ್ಥವಾಗಿ ತೆಲುಗಿನ ಕವಿಗಳು ಬಳಸಿಕೊಂಡಿದ್ದಾರೆಂದು ಎನಿಸುತ್ತದೆ. ಈ ಬಗೆಗೆ ಲೇಖನವನ್ನೂ ಬರೆದಿದ್ದೇನೆ. ಸೀಸಪದ್ಯದಲ್ಲಿ ಬರಿಯ ಪ್ರಾಸದಷ್ಟೇ ಅಲ್ಲದೆ ಛಂದೋಭೇದಗಳ, ಗತಿವೈವಿಧ್ಯಗಳ ಹದವೂ ಮಿಗಿಲಾಗಿದೆ. ಆಸಕ್ತರು ಅತ್ತಲೂ ಗಮನ ಹರಿಸಬಹುದು. ಕನ್ನಡನವೋದಯದ ಕವಿಗಳು ಸೀಸಪದ್ಯವನ್ನೂ ಸಮರ್ಥವಾಗಿ ಬಳಸಿದ್ದಾರೆ. ಆದರೆ ತೆಲುಗಿನ ನಾಚನಸೋಮನ, ಶ್ರೀನಾಥ, ಪೋತನ, ಕೃಷ್ಣದೇವರಾಯ, ಕರುಣಶ್ರೀ ಮುಂತಾದವರ ಸೀಸಪದ್ಯಗಳ ಸಾಧನೆ ಅಸಾಧಾರಣ.

  8. ಅರ್ಜುನ ಯುದ್ಧವನೊಲ್ಲೆಯೆಂದು ಬಿಲ್ಲನ್ನು ಕೆಳಗೆಸೆದಾಗ, ಕೃಷ್ಣನಿಗೆ ಹೀಗೆನಿಸಿರಬಹುದು ::
    ಈ ಮಹಾಶಯರಾ ಸಮಸ್ಯೆಯ
    ನೇಮದಿಂ ಪರಿಹರಿಸ ಬಂದರೆ
    ಸೀಮೆಗಿಲ್ಲದ ನೆಪಗಳನ್ನೊಡ್ಡಿರುವ ಪೇಡಿಯವೊಲ್ |
    ಭೂಮದೀವ್ಯಾಮೋಹವಿವನಲಿ
    ಪ್ರೇಮ ಬಂಧನವಕಟವೀಗನು –
    ಲೋಮದಿಂದೊರೆದೊರೆಯಬೇಕಷ್ಟಾದಶಾಧ್ಯಾಯಿ ||

    • ತುಂಬ ಚೆನ್ನಾದ ಪದ್ಯ. ರಾಮ್, ನಿಮಗೆ ದಿಟವಾಗಿ ಭಾಮಿನಿ ಒಲಿದಿದ್ದಾಳೆ:-)
      ಒಳ್ಳೆಯ ಪದಪದ್ಧತಿ, ಬಿಗಿಯಾದ ಪಾದಗಳ ಓಟ, ಕಡೆಯ ಸಾಲಿನ ಖಂಡಪ್ರಾಸದ ಸರಿಯಾದ ಹದ ಹಾಗೂ ಅತೀವಮಾರ್ಮಿಕಭಾವಗಳೆಲ್ಲ ಸೇರಿ ಷಟ್ಪದಿಯು ರಸಪದಿಯಾಗಿದೆ.ಇಲ್ಲಿಯ ಹಾಸ್ಯಧ್ವನಿಯೂ ನಿಮ್ಮ ಮನೋಧರ್ಮದ ಕೈಗನ್ನಡಿ:-)
      ಪೇಡಿ(ಹೇಡಿ)ಪದಕ್ಕೆ ಬದಲಾಗಿ ಹಂದೆ ಅಥವಾ ಪಂದೆ ಎನ್ನುವ ಪದ ಮತ್ತೂ ಒಳಿತು.

      • ಮೆಚ್ಚುಗೆಗೆ ಧನ್ಯವಾದಗಳು. ಇದರಿಂದ ದೊರೆಯುವ ಶಕ್ತಿ ಅಪಾರ 🙂
        ಪಂದೆ ಶಬ್ದವಂತೂ ಬಹಳ ಚೆನ್ನಾಗಿದೆ. ಈ ಶಬ್ದದ ಅರಿವು ನನಗಿರಲಿಲ್ಲ. ಇದಕ್ಕಾಗಿ ಹೆಚ್ಚಿನ ಧನ್ಯವಾದಗಳು [ಮುಂದೆಯೂ ಪದ್ಯ ರಚನೆಯಲ್ಲಿ ಪ್ರಾಸಕ್ಕೆ ಉಪಯೋಗ ಬರುವಂತೆ ಕಾಣುತ್ತದೆ :-)].

        ಹೊಸದಾಗಿಸಿದ ಪದ್ಯ ::
        ಈ ಮಹಾಶಯರಾ ಸಮಸ್ಯೆಯ
        ನೇಮದಿಂ ಪರಿಹರಿಸ ಬಂದರೆ
        ಸೀಮೆಗಿಲ್ಲದ ನೆಪಗಳನ್ನೊಡ್ಡಿರುವ ಪಂದೆಯವೊಲ್ |
        ಭೂಮದೀವ್ಯಾಮೋಹವಿವನಲಿ
        ಪ್ರೇಮ ಬಂಧನವಕಟವೀಗನು –
        ಲೋಮದಿಂದೊರೆದೊರೆಯಬೇಕಷ್ಟಾದಶಾಧ್ಯಾಯಿ ||

  9. ಗಾಯತ್ರಿಯವರ ತಿದ್ದುಪಡಿಗಳಿಗೆ ಧನ್ಯವಾದಗಳು ,

    ಮಂದಾಕ್ರಾಂತದ ಪ್ರಭಾವವೋ ಎಂಬಂತೆ ಮತಿಮಂದವಾಯಿತು,
    ರಾಘವೇಂದ್ರ – ಲಲಿತಾರಿಗೂ ಮತ್ತು ಎಲ್ಲಾ ಸಂಸ್ಥಾಪಕ ಸದಸ್ಯರಿಗೂ, ಸಹಪಾಠಿಗಳಿಗೂ ಧನ್ಯವಾದ

    ಎಲ್ಲರಿಗುಮೀಗನಮೋಸಹಪಾಠಿಮಿತ್ರರೆ |

    ಉಲ್ಲಾಸವಿತ್ತವರೆ ಬೆಳಕಪಿಡಿದವರೆ ||

    ಬೆಲ್ಲಗಬ್ಬದ ಸೊಗವ ನಮಗೆ ತಂದಿರಿನೀವು |

    ಕೊಳ್ಳಿರೀ ನಮನವನು – ಕಬ್ಬದಮ್ಮ ||

  10. ನನ್ನ ಪದ್ಯ ರಚನೆಯ ಕಲಿಕೆಯ ಸಮಸ್ಸೆಯ ಮೇಲೆ ಬರೆದ ಪದ್ಯ .ದಯವಿಟ್ಟು ತಪ್ಪುಗಳನ್ನು ತಿದ್ದಿ .

    ತಿಣುಕಿದೆನು ನಾನಿಂದು ಭಾಮೆಯ

    ಕೆಣಕಿ ಜಗಣವನು ಸವರಲರಿಯೆ,

    ಜೇನು ಗೂಡಿಗೆ ಕಲ್ಲು ಹೊಡೆದೆ ಕೆಣಕಿ ಯಿವಳನು ನಾ

    ಮನವ ಪಳಗಿಸಿ ತನುವ ಪೋಷಿಸಿ

    ಮನಕೆ ತೋರಿದ ಮಣಿಗಳಾರನು

    ಪೋಣಿಸುತಲಿ ತೊರೆದನರಿ ಸಮಾಸಗಳ ತಿಣುಕುತಲಿ.

    • ಗೆಳೆಯ! ನಿಮ್ಮೀ ಯತ್ನವಂತೂ
      ಬಳೆಯಿಸಿದೆ ಭಾವುಕತೆಯಂ, ಸಂ-
      ಮಿಳನಗೊಂಡಿದೆ ಯತ್ನಜನ್ಯಪರಿಶ್ರಮದ ಖೇದ!!
      ಕಳವಳಗಳಂತಿರಲಿ, ನಲವಿಂ
      ತಿಳಿಯಿರೈ ಮತ್ತೊಮ್ಮೆ ನೋಡು-
      ತ್ತಳೆಯಿರೈ ಛಂದೋನಿಯಮಗಳನೀಗಲೇ, ಸುಲಭಂ!!

    • ಮುಮುಕ್ಷು – ನಿಮ್ಮ ಪ್ರಯತ್ನಕ್ಕೆ ಜೈ 🙂

      ನನಗೆ ಕಾಣಿಸಿದ ಕೆಲ ಸವರಣೆಗಳು ::

      ೩ನೆ ಸಾಲಿನಲ್ಲಿ :: ಹೊಡೆದೆ – ಇಲ್ಲಿ ನಾಲ್ಕು ಮಾತ್ರೆಗಳ ಬದಲು ಮೂರೇ ಬಂದಿವೆ. “ಹೊಡೆದೆನು” ಮಾಡಿದರೆ ಸರಿಯಾದೀತು
      ೬ನೆ ಸಾಲಿನಲ್ಲಿ :: ಮಾತ್ರೆಗಳ ಲೆಕ್ಕವು ಬಹಳಷ್ಟು ಪದಗಳನ್ನು ಒಡೆಯುವುದರಿಂದಲೋ, ಅನೇಕ ಲಘುಗಳಿರುವುದರಿಂದಲೋ, ಸ್ವಲ್ಪ ಓದಲು ತೊಡಕೆನಿಸಿತು.

      ಇನ್ನು, ೩ ಹಾಗು ೬ನೆ ಸಾಲಿನಲ್ಲಿರುವ ಪ್ರಾಸದ ವಿನ್ಯಾಸ ಉಳಿದ ಸಾಲುಗಳಿಗಿಂತ ಭಿನ್ನವಾಗಿದೆ. ಈ ಕೆಳಗಿನ ಪ್ರಾಸದ ಪಾಠಗಳು ಉಪಯುಕ್ತವಾದಾವು.

      ಪ್ರಾಸವಿಚಾರ – http://padyapaana.com/?page_id=635
      ಆದಿಪ್ರಾಸ – http://padyapaana.com/?page_id=637

      ಪ್ರಯತ್ನ ಹೀಗೆ ಮುಂದುವರಿಸುತ್ತೀರೆಂದು ಆಶಿಸುತ್ತೇನೆ [ಮೋಕ್ಷವನ್ನೇ ಅರಸುತ್ತಿರುವವರಿಗೆ, ಛಂದಸ್ಸು, ಪ್ರಾಸ ಇವೆಲ್ಲ ಸರಾಗವಾಗಿ ದಕ್ಕೀತು :-)].

      • ತುಂಬಾ ಧನ್ಯವಾದಗಳು ಸರ್ ತಿದ್ದಿಕೊಳ್ಳುತ್ತೇನೆ .

  11. ಸಾಧ್ವೀ ಜಾರರ ಕಂದಜನನ ಸಂಭ್ರಮದಲ್ಲಿ ನಾನು ಪಟ್ಟ ಪಾಡಿನ ಬಗ್ಗೆ ಬರೆಯೋಣವೆನ್ನಿಸಿತು.

    ನೆರೆಯಲ್ಕಂದದೊಳಂತ್ಯಪಾದಮಿದಿರಲ್ಬಿಟ್ಟದ್ದು ತುಂಬಲ್ಕಿರೆ
    ಬರೆದಾಕಂದದೊಳಾದಿಯೊಳ್ಮಡಗಿರಲ್ಸಿಂಹಂ ಗಜಂ ಬೇಕಿರೆ
    ಸರಿಕಂಡಂತದರೊಳ್ತರಲ್ಕೆಗುರುಗಳ್ಜಾರಲ್ಕೆ ಪಾದಾಂತ್ಯದಿಂ
    ಅರಿತೆಂನಾನರಿದಾದಕಂದವಿಧಿಯನ್ನಾರೈಸಿದಾ ಪಾಠದಿಂ

    ಕಲಿಕೆಯ ಸಾಮಗ್ರಿಯಿಂದ ಕಂದ ಲಕ್ಷಣಗಳ ಪಾಠವನ್ನು ಓದಿ ತಿದ್ದಾವಣೆಗೆ ಯತ್ನಿಸಿದೆ.

    • ಸಣ್ಣ ಪುಟ್ಟ ಸವರಣೆಗಳೊಂದಿಗೆ

      ನೆರೆಯಲ್ಕಂದದೊಳಂತ್ಯಪಾದಮಿದಿರಲ್ಬಿಟ್ಟದ್ದು ತುಂಬಲ್ಕಿರ
      ಲ್ಬರೆದಾಕಂದದೊಳಾದಿಯೊಳ್ಮಡಗಿರಲ್ಸಿಂಹಂ ಗಜಂ ಬೇಕಿರ
      ಲ್ಸರಿಕಂಡಂತದರೊಳ್ತರಲ್ಕೆಗುರುಗಳ್ಜಾರಲ್ಕೆ ಪಾದಾಂತ್ಯದಿಂ
      ಅರಿತೆಂನಾನರಿದಾದಕಂದವಿಧಿಯನ್ನಾರೈದುಮಾ ಪಾಠಮಂ

      • ನೊಂದ ಪಾಡೆಲ್ಲವೂ ಹಾಡಾಗಬೇಕೆಂಬ ಬೇಂದ್ರೆಯವರ ಹಾಗೆ ನೀವೂ ನಿಮ್ಮ ಪಾಡನ್ನು ಸೊಗಸಾಗಿ ಹಾಡಾಗಿಸಿದ್ದೀರಿ; ಧನ್ಯವಾದ. ಇದೀಗ ಅನವದ್ಯಪದ್ಯ ತಯಾರಾಗಿದೆ.

        • ಇದೆಲ್ಲಮಂ ನಿಮ್ಮ ಮೆಚ್ಚುಗೆಯ ನಲ್ವಾತು ಪೆತ್ತುದು. ಮಣಿದಪೆಂ.

  12. ಇತ್ತೀಚೆಗೆ ನಡೆದ ಉತ್ತರಪ್ರದೇಶದ ಚುನಾವಣಾಫಲಿತಾ೦ಶದ ಹಿನ್ನೆಲೆಯಲ್ಲಿ ಒಬ್ಬ ಮಹನೀಯ(?)ನಿಗಾದ ಪಾಡಿನ ಬಗ್ಗೆ

    ದುರಭಿಮಾನದ ಗುಳ್ಳೆ ಹೊಗಳುಭಟ್ಟರ ಗುಳ್ಳೆ
    ಗುರುತರದೆ ಮಾಧ್ಯಮವು ಪೊರೆದ ಗುಳ್ಳೆ
    ಮೆರೆಯುತಿರಲಬ್ಬರಕೆ ಸಮವಿಲ್ಲದಾ ಗುಳ್ಳೆ
    ಬೆರಗಾಗುವೆನೆ ಸಿಡಿದು ತಿರೆಕಚ್ಚಿತು

  13. ತಪ್ಪಗಳನ್ನು ತಿದ್ದಿ ………….

    ಶ್ರೀಶ ನಿನ್ನಯ ಮಾತು ಕೇಳದೆ

    ರಾಶಿ ರಾಶಿಯ ಪಾಪ ವೆಸಗಿದೆ

    ವಾಸಿ ಮಾಡೋ ನಿನ್ನ ನಂಬಿದೆ ಬಿಡದೆ ಅನವರತ

    ಘಾಸಿ ಗೊಂಡೆನು ದುಃಖ ದಿಂದಲಿ

    ರೋಸಿ ಹೋದೆನು ಬಣ್ಣ ಪಡುತಲಿ

    ಶ್ರೀಶ ನಿನ್ನಯ ಬಿಡದೆ ಬೇಡುವೆ ಕಾಯ ಬೇಕೆನ್ನ.

  14. ಮಸಾಲೆದೋಸೆ ತಿನ್ನುವ ಆಸೆಯುಳ್ಳವನಿಗೆ ಮಾರ್ನಮಿ[ನವರಾತ್ರಿ]ಯ ವ್ರತ ಅಡ್ಡಬಂದಂತೇ ಕಾವ್ಯಪ್ರಿಯನಾದ ನನಗೆ ಕೆಲಸದ ಒತ್ತಡ ಕೆಲವೊಮ್ಮೆ ಬರೆಯಲು ಅವಕಾಶಕೊಡುವುದಿಲ್ಲ. ಕೋವಿದರ ಸಂಘಕ್ಕೆ ಸೇರಿದ ಕಾಗೆಯ ಪರಿಸ್ಥಿತಿ ನಿಜಕ್ಕೂ ಕಷ್ಟವೇ ಸರಿ. ಕಾಗೆಯನ್ನು ಕೋಗಿಲೆಯಾಗೆಂದು ಹಾಡಲು ಕರೆದ ಗಣೇಶರಿಗೂ ಮತ್ತು ಎಲ್ಲಾ ಕಾವ್ಯಬಂಧುಗಳಿಗೂ ಆಗಾಗ ನಮಿಸುತ್ತಾ ಹೀಗೇ ಅಪ್ರಸ್ತುತ ಪ್ರಸ್ತುತಿ ಮಾಡುತ್ತಾ ನಡೆಯಲು ಪ್ರಯತ್ನಿಸುತ್ತೇನೆ. ಭಾಮಿನಿ ನನಗೆ ಪ್ರೀತಿಯ ಶೈಲಿ; ಪದ್ಯಪಾನದಲ್ಲಿ ಮತ್ತೇರುವುದು ಭಾಮಿನಿ ಕುಡಿದಾಗ ಮಾತ್ರ! ತಪ್ಪುಗಳಿದ್ದರೆ ದಯಮಾಡಿ ಗುರುತಿಸುವುದು.

    ಗಾಳಿಯಲಿ ಸುರಗಂಧಸೂಸುತ
    ಮೇಳದೊಳಗಾಡುತಲಿ ರಂಗಲಿ
    ಬೀಳುತಿರ್ದರು ಬಿಡದೆ ಮೆರೆದರು ಚಿನ್ನದೋಕುಳಿಯ |
    ಗೀಳು ಜನಪದ ನಾಟ್ಯ ನರ್ತನ
    ತಾಳಸಹಿತದಿ ಗೀತಗಾಯನ
    ಹೋಳಿತರುವುತಲಿತ್ತು ಕಣ್ಣಲಿ ರನ್ನದೋಕುಳಿಯ ||

    • ಪದ್ಯ ನನಗೆ ಬಹಳ ಹಿಡಿಸಿತು. ಹಾಗು ::
      ಕಾಗೆಯೆಂದೇಕೆಂಬುವಿರಿ ಮೇಣ್
      ಕೋಗಿಲೆಯ ಮಾತೇಕೆ ಗೆಳೆಯರೆ
      ಸಾಗುತಿರೆ ನಾವೆಲ್ಲ ಕೂಡಿಯೆ ಕಾವ್ಯದೇವಿಯೆಡೆ |
      ಬೇಗ ಹೊರಟಾ ಪಯಣಗಾರರು
      ವೇಗದಲಿ ಹರದಾರಿ ಕಳೆದಿರ –
      ಲೀಗ ಹೊರಟವರೆಲ್ಲ ಮುಟ್ಟರೆ ಕಾಲದಲಿ ಗುರಿಯ ||

      • ಬಾಗಿನಮಿಪೆನು ನಿಮ್ಮ ಅನಿಸಿಕೆ
        ಮಾಗಿನಿಂತಿಹ ಮನದ ಪಕ್ವತೆ
        ಭೋಗಿಸುವರೇ ಭೋಗಷಟ್ಪದಿ ವೇಗದಲಿ ಹರಿಸಿ |
        ಸಾಗರೋತ್ತರ ದೇಶಕೆಲ್ಲಕು
        ಸಾಗಲೀಕಥೆ ಸೀಮೆಹರಿಯುತ
        ಬೀಗಿ ಕನ್ನಡಭಾಷೆ ಬೆಳಗಲಿ ಮನಕೆ ತಂಪೆರೆಸಿ ||

      • ರಾಮಚಂದ್ರರವರೇ.
        ವಿ.ಆರ್. ಭಟ್ ರಿಗೆ ಕೊಟ್ಟ ಉತ್ತರರೂಪದ ಷಟ್ಪದಿ ತುಂಬ ಹಿಡಿಸಿತು ಅದರಲ್ಲೂ ಉತ್ತರಾರ್ಧದ ಸಾಲುಗಳು. ಹೊಸದಾಗಿ ಛಂದೋಬದ್ಧವಾದ ಪದ್ಯ ರಚಿಸುವ ಪ್ರಯತ್ನ ಮಾಡುವವರಿಗೆ ನಿಜಕ್ಕೂ ಪ್ರೋತ್ಸಾಹದಾಯಕ ನುಡಿಗಳು.
        ನಿಮ್ಮ ಹುರಿ ದುಂಬಿಕೆಗೆ ಭಾಮಿನಿಯ ನುಡಿ ನಮನ

        ಕಾವ್ಯ ದೇವಿಯ ಗೇಹದೆದುರಲಿ
        ನವ್ಯರಾರೋ ಬಂದು ನಿಂದಿರೆ
        ಭವ್ಯ ಬರವನು ಕೋರ್ವ ತೆರದಲಿ ತೋರ್ದುವೀ ವಚನಂ|
        ಕಾವ್ಯ ಕರ್ಮದಿ ರಕ್ತಿ ತೋರಲು
        ದಿವ್ಯದನುಭವ ಚಿತ್ತಕಾಗಲು
        ಧನ್ಯರಾದೆವು ಪದ್ಯ ಪಾನದ ರಸವನೀಂಟುತಲೀ|

        • ಇದೊ ನಲ್ಬರವಂ ಕೋರಿದೆ-
          ವಿದೊ ಕೊಳ್ಳಿಂ ನಮ್ಮ ವಂದನೆಗಳಂ ನಲವಿಂ|
          ಪದಪಿಂ ಷಟ್ಪದಿಯಂ ಬರೆ-
          ದುದಕೆಂದಿನ್ನೊಂದು ಧನ್ಯವಾದಕವಿತೆಯಂ!!

  15. ಹೋಳಿ ಹಬ್ಬಕ್ಕೊ೦ದು ಪದ್ಯ

    ಅ೦ಗಳದೊಳ್ ತಾ೦ ಚೆ೦ದದಿ
    ಪೆ೦ಗೆಳೆಯರ್ ಬಣ್ಣವನ್ನನೆರೆಚುತ ಕುಣಿಯಲ್
    ರ೦ಗಿನ ಪೂಗಳ್ಗಕಟಾ
    ಭೃ೦ಗಗಳಿ೦ ಸಖವಿಯೋಗ ದುಃಖವೆಗತಿಯೈ

    • ಸವರಣೆ:

      ಅ೦ಗಳದೊಳ್ ತಾ೦ ಚೆ೦ದದಿ
      ಪೆ೦ಗೆಳೆಯರ್ ಬಣ್ಣವನ್ನೆರೆಚುತಲಿ ಕುಣಿವರ್
      ರ೦ಗಿನ ಪೂಗಳ್ಗಕಟಾ
      ಭೃ೦ಗಗಳಿ೦ ಸಖವಿಯೋಗದುಃಖವೆಗತಿಯೈ

  16. ಶ್ರೀರಾಗಂ ಮನ್ನಿಕೆನ್ನೀ ಪ್ರಸಂಗಾಧಿಕ್ಯಮಂ

    ಗುರುವೆನಲೀಯಂ ತನ್ನಂ
    ಕರೆವೊಡೆಸಾಕದುಗಣೇಶನೆಂಬಂ ಪೇಳ್ವೆಂ
    ಗುರುಛನ್ದಕೆತಾನಾಗಿರೆ
    ಗುರುವಪ್ಪೆಡೆಗಾಲಘುತ್ವಸಲ್ಲದುಮೆಂಬಂ

    • ನಿಮ್ಮ ವಾದ ಚೆನ್ನಾಗಿದೆ. ಗಣೇಶರ ಉತ್ತರವೇನು ನೋಡೋಣ 🙂

    • vAda sogasAgide:)

    • ವಾದದ ಕತದಿಂದಾದೊಡ-
      ಮಾದುದು ನವನವಲಪದ್ಯರಚನಾಮೋದಂ|
      ಹ್ಲಾದಕರಪದ್ಯರಚನೆಗೆ
      ಸಾದರದಿಂ ಗುರುಲಘೂಪಯೋಗಂ ಸಲ್ಗುಂ||
      (ನವಲ=ನವತೆಯನ್ನು ತಂದೀಯುವಂಥದ್ದು)

      ಗುರುವೆನಲ್ ಬಗೆ ಭಾರಮದಪ್ಪುದಯ್;
      ಮೆರೆವುದೇ ಗುರುಮಾತ್ರದ ಪದ್ಯದಿಂ
      ಸರಸಕಾವ್ಯಕಲೆ? ಪ್ರಿಯಮೈತ್ರಿಯೇ
      ಸರಿ ಸದಾ ಜಗಣಂ ಬರಲೆನ್ನವೊಲ್!!

      (ನನ್ನ ಹೆಸರೇ ಜಗಣದಿಂದ ಕೂಡಿದೆ; ಇದು ಅತ್ಯಂತವಿಚಿತ್ರವೂ ಸೊಗಸೂ ಆದ ಗಣ. ಇಲ್ಲಿಯ ಪ್ಲುತಗತಿ ಗಮನಾರ್ಹ. ಈ ಪ್ಲುತಿಯು –jump– ಲಘುತ್ವದಿಂದಲ್ಲ್ದೆ ಗುರುತ್ವದಿಂದ ಬಾರದು:-)

  17. ಇದಲ್ಲವೇ ಗಂಧದವನ ಕೂಡ ಗುದ್ದಾಟ! ಜೊತೆಗೆ ‘ಸದಾ ಜಗಣಂ ಬರಲಿ’ ಎಂದಿದ್ದೀರಿ.

    ರಾಮಚಂದ್ರ, ಸೋಮ, ನಿಮ್ಮ ಮೆಚ್ಚುಗೆಗೂ ಬೆಂಬಲ(!)ಕ್ಕೂ ಧನ್ಯವಾದಗಳು.

  18. ಇಂದ್ರವಜ್ರಂ:
    ಬಂದಾಗ ಕಾಲಂ ಕಳಚಲ್ಕೆ ವೇಷಂ
    ಎಂದೆಂದು ನೀನಾಗವನಂತೆ ಸಿದ್ಧನ್
    ಹೊಂದಿದ್ದ ಪಿಳ್ಳಂಗೊವಿಯನ್ನು ಪುಕ್ಕಂ
    ಸಂದಾಗ ದೌತ್ಯಂ ತೆಗೆದಿಟ್ಟ ಕೃಷ್ಣನ್

    • ತೃತೀಯಪಾದಂ ಗುಳೆಯೆದ್ದು ಪೋಯ್ತೇಂ!!:-)

      • LoL
        Exactly ಏನು ದೋಷ? ಪಿಳ್ಳಂಗೋವಿ ಬದಲು ಪಿಳ್ಳಂಗೊವಿ ಮಾಡಿದ್ದೇನೆ. ತಪ್ಪೆ ತಿಳಿಸಿ.
        Recast ಮಾಡಿದ್ದೇನೆ:
        ಬಂದಾಗ ಕಾಲಂ ಕಳಚಲ್ಕೆ ವೇಷಂ
        ಎಂದಾರೆ ನೀನಾಗವನಂತೆ ಸಿದ್ಧನ್|
        ಚಂದಾದ ಪುಕ್ಕಂ-ಕೊಳಲನ್ನು ಕೃಷ್ಣಂ
        ಸಂದಾಗ ದೌತ್ಯಂ ತೆಗೆದಿಟ್ಟು ಸಾರ್ದನ್||

        • ಪುಕ್ಕ ಎಂಬ ಪದವು ನವಿಲಿನ ಗರಿ ಎನ್ನುವ ಅರ್ಥವನ್ನು ನೀಡಿತೇ? ಪುಕ್ಕ ಎಂದರೆ ಯಾವುದೇ ಹಕ್ಕಿಯ ಬಾಲ. ಆದರೆ ಗರಿ ಎಂದರೆ ನವಿಲಿನದೆಂದು ತತ್ಕ್ಷಣ ಸ್ಫುರಿಸುತ್ತದೆ.
          ಹೀಗಾಗಿ ಪುಕ್ಕಕ್ಕೆ ಬದಲಾಗಿ ಬರ್ಹಂ ಎಂಬ ನವಿಲುಗರಿಗೇ ನಿರ್ದಿಷ್ಟವಾದ ಪದವನ್ನು ಬಳಸಬಹುದು.

  19. ಹಿಡಿವೆನೆಂದರೆಯಿಡುವ ಚಿಂತೆಯೊ
    ಬಿಡುವೆನೆಂದರೆ ಬಿಡದ ಮಾಯೆಯೊ
    ಬಿಡದೆ ಕಾಡುವ ವಿಧಿಯ ಬೇಡಲಿ ಹೇಗೆ ನಾನೀಗ|
    ಕಾಡ ಮಧ್ಯದಿ ಚಂದ್ರಹಾಸನ
    ಬಿಡದೆ ಕಾದನು ಪರಮಪುರುಷನು
    ಯಿಡಲಿ ಹಾಗೆಯೆ ನಿನ್ನ ಸಲಹುತ ಗುರುವು ಕಾಪಿಡಲಿ||

    • ಮಂಜಪ್ಪನವರೆ – ಪದ್ಯಪಾನಕ್ಕೆ ಸ್ವಾಗತ. ಚೆನ್ನಾದ ಪದ್ಯ.
      ೪ನೆ ಸಾಲಿನಲ್ಲಿ ಆದಿಪ್ರಾಸದ ಬಗೆ ಬೇರೆಯಾಗಿದೆ. “ಕಾಡ” ಅನ್ನುವುದನ್ನು “ಅಡವಿ” ಮಾಡಿದರೆ ಸರಿಹೋದೀತು.

  20. ತಾಯಿ ಬಯ್ವಳೊ ಪೆಟ್ಟು ಹೊಡೆವಳೊ
    ಕೈಯಲೆತ್ತೀ ಮುತ್ತು ಕೊಡುವಳೊ
    ಬಾಯಿ ಬಾರದ ಶಿಶುವೆ ಸಹಿಸಿಕೊಯೆಲ್ಲ ಶಿಕ್ಷೆಗಳಾ|
    ಗಾಯಗೊಳದಿರು ಮನದಿ ಕೊರಗುತ
    ನೋಯದಿರು ಮುಂಗಾಣು ಸುಖಗಳ
    ಕಾಯುತಿರಲೀ ಭಾವ ನಿನ್ನನುಯೆಲ್ಲ ದಿಶೆಯಿಂದಾ||

    • ಮಂಜಪ್ಪ ಅವರೇ,

      ಪದ್ಯಪಾನಕ್ಕೆ ಸ್ವಾಗತ (ಮೊದಲನೆಯ ಬಾರಿ ಪೋಸ್ಟ್ ಮಾಡಿರುವಿರಿ ಅಲ್ಲವೇ!). ಭಾಮಿನಿಯ ಬ೦ಧವು ಚೆನ್ನಾಗಿ ಮೊದಲ ಪದ್ಯದಲ್ಲೇ ಮೂಡಿದೆ. ಹೀಗೆ ಬರೆಯುವುದನ್ನು ಮುಂದುವರಿಸುವಿರೆಂದು ಆಶಿಸುತ್ತೇವೆ:)

    • ಶಿಶುವಿನ ಅಸಹಾಯಕತೆಯನ್ನು ಸೊಗಸಾಗಿ ಮೂಡಿಸಿದ್ದೀರಿ.

    • ಪದ್ಯಪಾನಕ್ಕೆ ಸ್ವಾಗತ ಮತ್ತು ನಿಮ್ಮ ಪ್ರಯತ್ನ ಸ್ತುತ್ಯ. ಆದರೆ ಮೊದಲ ಪದ್ಯದ ಮೂರನೆಯ ಸಾಲಿನಲ್ಲಿ ಪ್ರಾಸ ವ್ಯತ್ಯಾಸವಾಗಿದೆ; ಸಿಂಹಪ್ರಾಸವಿರಬೇಕಾದ ಎಡೆಯಲ್ಲಿ ಗಜಪ್ರಾಸ ಬಂದಿದೆ. ( ಈ ವಿವರಗಳಿಗೆ ನಮ್ಮ ಪಾಠ್ಯಸಾಮಗ್ರಿಯನ್ನು ನೋಡಿರಿ). ಅಲ್ಲದೆ ಹಲವೆಡೆ ವಿಸಂಧಿದೋಷವಾಗಿದೆ ಅಥವಾ ಸ್ವರಸಂಧಿಯನ್ನು ತಪ್ಪಾಗಿ ಮಾಡಲಾಗಿದೆ. ದಯಮಾಡಿ ಇದನ್ನು ಸವರಿಸಿಕೊಳ್ಳಿರಿ. ಮೊದಲ ಹೆಜ್ಜೆಗೇ ಇದೇನು ಪಾಠವೆಂದು ಬೇಸರಿಸದಿರಿ:-)

  21. ಒಂದು ತಿವದಿ:

    ನೇಸಱಿಂ ಬೆಳಕಕ್ಕು ನೇಸಱಿಂ ಬಿಸಿಲಕ್ಕು
    ನೇಸಱತ್ತಣಿಂ ನೀರಕ್ಕು ಬೆಳಸಕ್ಕು
    ನೇಸಱು ಸುಟ್ಟು ಕಱುಕಕ್ಕು

    ಕೆಲ ಕಾಲದ ಹಿಂದೆ ನನ್ನ ಭಾಮಿನಿಯೊಂದಿಗೆ ಪಟ್ಟಾಂಗ ಹೊಡೆಯುತ್ತಾ ಮಾತು ಸೂರ್ಯನ ಕಡೆಗೆ ತಿರುಗಿ ಆಕೆಯಿಂದ “ಸೂರ್ಯನಿಂದ ನಮಗೆ ಏನೆಲ್ಲಾ ಉಪಕಾರವಾಗುತ್ತೆ; ಆದರೆ ತನ್ನನ್ನು ತಾನೇ ಸುಟ್ಟುಕೊಂಡು ನಮ್ಮನ್ನು ಉಪಕರಿಸುತ್ತಿದ್ದಾನೋ ಏನೋ” ಎಂಬ ಆಲೋಚನೆಯೂ ಜೊತೆಗೆ “ಇದನ್ನು ಪದ್ಯವಾಗೇಕೆ ಬರೆಯಬಾರದು?” ಎಂಬ rhetorical ಪ್ರಶ್ನೆಯೂ ಒಟ್ಟಿಗೆ ಬಂದವು. ಅದಾಗಿ ಈ ಪ್ರಯತ್ನ.

  22. ಜೀವನ ಧರ್ಮ ಯೋಗದಿ ಹೊಳೆದ ಕೇತ
    ಕಿವನದ ಹೂಗಳ ಜ್ಞಾಪಿಸಿಯಾಯ್ದು ಪರೀಕ್ಷಿಸಿ |
    ಜೀವನ ನಂಬಿಕೆಯ ಸಂಸ್ಕೃತಿಯ ತಿಳಿಸಿ ಕ
    ಗ್ಗವನಿತ್ತ ಸೋಮಿಯಾ ಮಾವನಿಗೆಮ್ಮ ನಮನ ||

  23. ಪದ್ಯಪಾನಕ್ಕೆ ನವೀನಮಿತ್ರರಾದ ನವೀನರಿಗೆ ಸ್ವಾಗತ. ಡಿವಿಜಿ ಅವರ ಬಗೆಗಿನ ಈ ನಿಮ್ಮ ಕವಿತೆಯು ನಾಳಿನ ಅವರ ೧೨೬ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಮತ್ತೂ ಸೊಗಸಾಗಿದೆ. ಆದರೆ ನೀವು ಛಂದಸ್ಸಿನ ಮೂಲಭೂತಪಾಠಗಲನ್ನು ಮತ್ತೊಮ್ಮೆ ಚೆನ್ನಾಗಿ ಗಮನಿಸಿಕೊಳ್ಳುವುದು ಒಳಿತು. ಏಕೆಂದರೆ ಇಲ್ಲಿ ಸಾಕಷ್ಟು ಛಂದಸ್ಸಂಬಂಧಿದೋಷಗಳಿವೆ. ಹಾಗೆಯೇ ಪ್ರಾಸದ ಬಗೆಗೂ ತಿಳಿಯಬೇಕಿದೆ. ಇರಲಿ, ಡಿವಿಜಿಯವರನ್ನು ಮೆಚ್ಚುವ ನಿಮಗೆ ಅವರ ಅಭಿಮಾನಪಾತ್ರವಾದ ಪದ್ಯರಚನಾವಿಧಾನವನ್ನು ಮಯ್ಗೂಡಿಸಿಕೊಳ್ಳುವುದು ಅರಿದಾಗದು. ವಿಜಯೋsಸ್ತು.

    • ಛಂದೊಬದ್ದವಾಗಿ ರಚನೆ ಮಾಡದಿದ್ದು ನನ್ನ ತಪ್ಪು..ಇದರಿಂದ ರಸ ಬಂಗವಾಗಿದ್ದರೆ ನಿಮ್ಮ ಕ್ಷಮೆ ಕೇಳುತ್ತೇನೆ..

  24. ದಯವಿಟ್ಟು ತಪ್ಪುಗಳನ್ನು ತಿದ್ದಿ .

    ನನ್ನ ಮಗನಿಗೆ ಕಥೆ ಹೇಳುವಾಗ ರಚಿಸಿದ್ದು

    —–

    ಅಂದ ಚಂದದ ಬಂಧ ಹೊಂದಿದ

    ಒಂದು ಭಾಮಿನಿ ರಚಿಸಿ ಕೊಡುವೆನು

    ನಂದ ನಂದನ ಗುಣವ ವರ್ಣಿಸಿಯಿಂದು ನಿನಗಾಗಿ

    ಬಂದ ಸಂಕಟ ಕಳೆದುಕೊಂಡರು

    ಕುಂದು ಕೊರತೆಯ ನೀಗಿಕೊಂಡರು

    ವೇದ ವೇದ್ಯನ ದಯದಿ ಪಾಂಡವರಂದು ಯುದ್ಧದಲಿ.

    —-

    ನನ್ನ ಸ್ನೇಹಿತ “ಮಧು” ವಿನ ಜನ್ಮ ದಿನದ ಶುಭಾಶಯ ಈ ರೀತಿ ಮಾಡಿದ್ದೇನೆ

    ——

    ಮಧುವ ನರಸುವ ದುಂಬಿಯಂದದಿ

    ವೇದ ಶಾಸ್ತ್ರವ ನರಸ ಬಯಸುವ

    ಸಾಧುಗುಣದ ಮಧುಯಿವನಮಿತ ಹರಿತಮತಿ ಜನುಮ ದಿ

    ನದ ಶುಭಾಶಯಗಳಿವನಿಗರಲಿ

    ನಂದದ ಹುರುಪು ಹೊಂದಿ ಬದುಕಲಿ

    ಮುಂದೆ ಎಂದಿಗು ಬಂದ ಭಾಗ್ಯವು ಕುಂದದೇ ಯಿರಲಿ.

    —–

    ಲೋಕಸಂಗ್ರಹದ ವಿಚಾರ ಸುಳಿದಾಗ ಬರೆದದ್ದು

    —–

    ಲೋಕ ಸಂಗ್ರಹ ಕಾರ್ಯವೆಸಗುತ

    ಲೋಕನಾಯಕನಂತೆ ಜಗದಲಿ

    ಲೋಕ ಸೇವೆಯ ಮಾಡು ಮರೆಯದೆ ಲೋಕ ಚರಿಸುತಲಿ

    ಲೋಕ ಮೂರನು ಸತತ ಪಾಲಿಸಿ

    ಲೋಕ ಪುಟ್ಟಿಸಿ ಅದನು ಲಯಿಸುವ

    ಲೋಕ ಗುರುವಿನ ಮಾನವ ಮೆಚ್ಚಿಸಿ ಜಯಿಸು ಲೋಕವನು

    —–

Leave a Reply to manjappabg Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)