Apr 072012
 

ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ ::

ಭೂಕಂಪನದಾನಂತರ

  45 Responses to “ಪದ್ಯಸಪ್ತಾಹ – ೧೫ – ಚಿತ್ರಕ್ಕೆ ಪದ್ಯ”

 1. ಯತಿ-ಗಣ–ಮಾತ್ರಾ-ಪ್ರಾಸ-
  ಸ್ಥಿತಿಯೆಲ್ಲಂ ಜರಿದುಬಿಳ್ದ ಪದ್ಯದ ನಡುವೊಳ್|
  ಗತಿಗೆಟ್ಟ ಭಾವವೊಂದೇ
  ಧೃತಿಯಿಂ ನಿಲ್ವಂತೆ ನಾಳೆಬೆಳಕಿದು ಸಲ್ಗುಂ||

  (ಚಿತ್ರದಲ್ಲಿರುವ ಒಂಟಿ ಕಂದನ ವಿಷಣ್ಣವಾದರೂ ಬದುಕುಳಿದ ಬಗೆಯನ್ನು ಭಾವಿಸಿ ನುಡಿದ ಕವಿತೆಯಿದು)

  ಪ್ರಳಯಕೆ ಮನ್ನ ಬರ್ಪನವನಾವನೊ ನೋಹನೊ ಆದಿಮತ್ಸ್ಯನೋ
  ತಳಮಳಮೆಲ್ಲಮಂ ದಡಕೆ ಮುಟ್ಟಿಪನೆಂಬ ಮತೀಯಸತ್ಯಮಿ-
  ರ್ಪಿಳೆಯೊಳದೆಲ್ಲಿ ಕಾಣದೆಯೆ ಪೋದುದೆ ಹಾರ್ದಸಹಾಯಹಸ್ತಮೆಂ-
  ದಳುತಿದೆ ತಬ್ಬಿ ತಬ್ಬಲಿಯಿದೀ ಕ್ಷಿತಿಕಂಪಮನೆಮ್ಮಬಾಳ್ತೆಯೋಲ್

  ( ನಮ್ಮನ್ನು ಯಾರೋ ದೇವರು ಉದ್ಧರಿಸುವನೆಂದು ನಾವು ಭಾವಿಸುವಂತೆಯೇ ಈ ಕಂದನು ಭೂಕಂಪದ ಅಳಿವನ್ನೇ ಅಪ್ಪಿ ಅಳುತ್ತಿದ್ದಾನೆಂಬುದು ಇಲ್ಲಿಯ ಭಾವ)

  • ಗತಿಗೆಟ್ಟ್ ಭಾವ, ಭೂಕಂಪದಿಂದಾದ ಅಳಿವು ಇಷ್ಟೇ ಉಳಿದು, ಅದೊಂದನ್ನೇ ನೆಚ್ಚಿಕೊಳ್ಳುವ ಭಾವ ವಿಷಾದಕಾರಿಯಾಗಿದ್ದರೂ ಬಹಳ ಬಹಳ ಚೆನ್ನಾಗಿದೆ. ಎರಡನೆ ಪದ್ಯವಂತೂ ಈ ಚಿತ್ರದ ತಿರುಳನ್ನೂ, ಆ ಹೆಣ್ಣಿನ ಮನಸ್ಸಿನ ನಿರಾಶೆ, ಹತಾಶೆ ಗಳನ್ನೂ ಎತ್ತಿ ತೋರಿದೆ.

 2. ಈ ಮು೦ಚೆ ಇದೇ ವಸ್ತುವಿಗೆ ಒ೦ದುಪದ್ಯ ಬರೆದಿದ್ದೆ. ಇದು ಪದ್ಯಪಾನಕ್ಕೆ (ಹಿ೦ದೆ ಕಾವ್ಯಕುತೂಹಲವೆ೦ಬ ಹೆಸರಿತ್ತು) ನಾನು ಮಾಡಿದ ಮೊದಲ post ಆಗಿತ್ತು:

  ಶಿವನ ಕಾಲ್ತುಳಿತದಲಿ ಅಲೆತಾಂ-
  ಡವದ ನಾಟ್ಯಕೆ ಹೆಜ್ಜೆ ಹಾಕಿತೆ?
  ಜವನ ಮಹಿಷನೆ ಕಪ್ಪು ತೆರೆಗಳ ರೂಪ ತಾಳಿದನೆs?
  ರವಿಯ ಬೆಳಕನೆ ಮಾಸುವಂದದಿ
  ಕವಿಸುತಲಿ ಕತ್ತಲೆಯ ನಿಮಿಷದೆ
  ಸವೆಸಿದುದು ಜೀವಗಳ ಶರಧಿಯ ಮಂಥನದ ವಿಷವೇ?

  • ಸೋಮ – ಈ ಪದ್ಯಕ್ಕೆ ಮತ್ತೊಮ್ಮೆ “ಭೇಷ್” ಸಲ್ಲುತ್ತದೆ.

 3. ವ್ಯಾಕುಲತೆಯ ತಡೆಯಲ್ಕೇ
  ಭೂಕ೦ಪನದೀಕ್ಷಣ೦ ನಿರತವು೦ ನಡೆಸಲ್
  ಸಾಕೆನುತಾಟದೆ ನಿರಕ್ತ-
  ನಾಕಸುಕ೦ ವಿಧಿಯಮು೦ದೆ ನರನು೦ ತುಚ್ಛ೦

  ಕಸುಕ – ಕಸೆದುಕೊಳ್ಳುವವನು

  • ಭೂಕ೦ಪನದೀಕ್ಷಣ೦ – monitoring seismic activity (which is done on a continuous basis in Japan)

 4. ಅಳಿದುಹೋದರು ಮತ್ತೆ ಬರುವರೆ
  ಕಳೆದುದೆಲ್ಲವು ಮರಳಿ ಸಿಗುವುದೆ
  ಇಳೆಯ ಜೀವನ ನೀರಮೇಲಿನ ಗುಳ್ಳೆಗಳತರವು |
  ಹಳಿಯಲೇನುಂಟಿಲ್ಲಿ ಕಾರಣ
  ಬಳಗವಿಲ್ಲದ ಬರಡು ಜೀವನ
  ಹೊಳೆವ ನವಬೆಳಕೊಂದು ನೀಗಲಿ ಅಳ್ಳೆದೆಯ ತುಸುವು ||

 5. ಜಟ್ಟಿಗಳು ಕಾದುವೆಡೆ ಹರಿದೊಂದು ಕಟ್ಟಿರುವೆ ಪಟ್ಟಿನಲಿ ಸಿಲುಕಿದೊಡೆ ನಿರುಕಿಸುವರೆ
  ಪಟ್ಟಣವ ಬಿರಿದಭೂಖಂಡದಾಚೀಚೆಯಲಿ ಕಟ್ಟಲದ ನೆಲತಾಯಿ ಗಮನಿಸುವಳೆ
  ಅಟ್ಟುದನೆಯುಣ್ಣುವುದು ನೆಟ್ಟುದನೆ ಪಡೆಯುವುದು ಕೊಟ್ಟುದನೆ ಗಳಿಸುವುದು ತಪ್ಪದೆಂದೂ
  ದಟ್ಟಣೆಯನೆಬ್ಬಿಸಿದ ದಿಟ್ಟತನವಿಂದೇಕೆ ಬಿಟ್ಟುನಡೆದಿದೆಯೂರಜನರೆದೆಗಳ
  ಕಟ್ಟೆಮೀರಿದ ದುಃಖವನು ಹರಿಯ ಬಿಡುವದುವೆ ಗಟ್ಟಿಮನಸಿನಮನೆಗೆ ತಳದಪಾಯ
  ಕೆಟ್ಟುದನು ಕಳೆಯುತ್ತ ಸುಟ್ಟುದನು ತೊಳೆಯುತ್ತ ಒಟ್ಟಾಗಿ ಕಟ್ಟೋಣ ಹೊಸತುಬಾಳು

  • ಜೀವೆಂ – ಒಂದೇ ಪ್ರಾಸವನ್ನು ಹಿಡಿದು, ಅಲ್ಲಲ್ಲಿ ಅನುಪ್ರಾಸಗಳನ್ನೂ ಇಟ್ಟು ಮೂರು ಪದ್ಯಗಳ್ನ್ನು ಚೆನ್ನಾಗಿ ಬರೆದಿದ್ದೀರಿ.

 6. ಪ್ರಕೃತಿಯ ಉಳಿವಿಗಾಗಿ ಹೋರಾಡುತ್ತಿದ್ದವಳು ಭೂಕಂಪನದಾನಂತರ ಈ ತರದಲ್ಲಿ ರೋದಿಸಬಹುದೇ…

  ಇಳೆಯಲೆಲ್ಲ ಕೊಳೆ ತುಳುಕುತಿರಲು
  ತೊಳೆಯುವ ಬಗೆಯ ತಿಳಿಯದೆಯೆ ನೀ
  ಯೊಳಗೊಳಗೆ ಕಂಪಿಸುತ ತಾಳದೆಯೆ ಹೊರಗೆಡಹಿದೆಯಾ?
  ತಳಮಳಿಸುತಲಿ ಪೇಳ್ದೆನೆಲ್ಲರ-
  ಲುಳಿಸಿರಿ ಧರೆಯನೆಂದು ಕೂಗುತ
  ಬಳಿಯಲಾರಿಹರಿಂದು ಸಾಕ್ಷಿಯ ಹೇಳಲೆನ್ನ ಜೊತೆಗೆ ?

  • ಜನನಿಯವರೇ,
   ನೀವು ಭಾಮಿನಿ ಷಟ್ಪದಿಯಲ್ಲಿ ಪ್ರಯತ್ನಿಸಿದಿರೆ೦ದು ಭಾವಿಸುತ್ತಾ,ಸಣ್ಣ ಮಾತ್ರಾದೋಷಗಳನ್ನು ಸರಿಪಡಿಸಲು ಪ್ರಯತ್ನಿಸಿದ್ದೇನೆ.

   ಇಳೆಯ ಮುಸುಕಿದ ಕೊಳೆಯ ರಾಶಿಯ
   ತೊಳೆವ ಬಗೆಯನು ತಿಳಿಯದೆಯೆ ನೀ
   ಯೊಳಗೊಳಗೆ ರೋಷದಲಿ ತಾಳದೆ ಕ೦ಪಿಸಿದೆ ತಾಯೇ
   ತಳಮಳಿಸುತಲಿ ಪೇಳ್ದೆನೆಲ್ಲರ-
   ನುಳಿಸಿರೀ ಧರೆಯೆ೦ದು ಕೂಗುತ
   ಬಳಿಯಲಾರಿಹರಿಂದು ಸಾಕ್ಷಿಯ ಹೇಳಲೆನ್ನ ಜೊತೆ ?

   • ಸಣ್ಣ ತಪ್ಪಿದೆ,ತಿದ್ದಿದೆ.

    ಇಳೆಯ ಮುಸುಕಿದ ಕೊಳೆಯ ರಾಶಿಯ
    ತೊಳೆವ ಬಗೆಯನು ತಿಳಿಯದೆಯೆ ನೀ
    ನೊಳಗೊಳಗೆ ರೋಷದಲಿ ತಾಳದೆ ಕ೦ಪಿಸಿದೆ ತಾಯೇ
    ತಳಮಳಿಸುತಲಿ ಪೇಳ್ದೆನೆಲ್ಲರ-
    ನುಳಿಸಿರೀ ಧರೆಯೆ೦ದು ಕೂಗುತ
    ಬಳಿಯಲಾರಿಹರಿಂದು ಸಾಕ್ಷಿಯ ಹೇಳಲೆನ್ನ ಜೊತೆ ?

    • ಧನ್ಯವಾದಗಳು ಮುಳಿಯದವರೇ… ನಿನ್ನೆ ಭೂಕಂಪನದ ಸುದ್ದಿಯನ್ನು ದೂರದರ್ಶನದಲ್ಲಿ ನೋಡುತಿರಲು ಈ ಎಲ್ಲ ಕವನಗಳು ಒಮ್ಮೆ ನೆನಪಾದವು…

     ಈಗ ಪದ್ಯ ಚೆನ್ನಾಗಿದೆ…
     ಸಣ್ಣ ಸಂಶಯ…
     “ಲುಳಿಸಿರಿ ಧರೆಯನೆಂದು ಕೂಗುತ” ಸಾಲನ್ನು “ನುಳಿಸಿರೀ ಧರೆಯೆ೦ದು ಕೂಗುತ” ಕಾರಣ ತಿಳಿಯಬಹುದೇ?

     • ಅಲ್ಲಿಯೂ ಮಾತ್ರೆಗಳು ಸರಿಯಾಗಿ ಹೊ೦ದುತ್ತಿವೆ.ಆದರೆ ಹಾಡುವಾಗ ಎಡವಿದ೦ತಾಯ್ತು.ಹಾಗಾಗಿ ಬದಲಿಸಿದೆ ಅಷ್ಟೇ.

     • ಜನನಿಯವರೆ,
      ಲಘು ಬಾಹುಳ್ಯದಿಂದ ಒಮ್ಮೊಮ್ಮೆ ಧಾಟಿಯಲ್ಲಿ ಓದುವುದಕ್ಕೆ ತೊಡಕಾಗುವುದು. “ಲುಳಿಸಿರಿ ಧರಯನೆಂದು …” ಎಂಬಲ್ಲಿ ನೇರವಾಗಿ ೭ ಲಘುಗಳು ಬಂದಿವೆ. ಗಣಗಳ ಒಡೆಯುವಿಕೆ ಪದಗಳಿಗನುಸಾರವಾಗಿದ್ದರೆ ಈ ತೊಡಕು ಕಡಿಮೆಯೆನಿಸಬಹುದು.
      ರಘುರವರು ಮಾಡಿದ ಬದಲಾವಣೆಯಲ್ಲಿ, ಗುರುವಿನ ಅಳವಡಿಕೆಯಾಗಿರುವುದರಿಂದ ಓದುವುದು ಸಸಾರವಾಯಿತು. ಹಾಗೇ “ಲುಳಿಸಿ ಧರೆಯನ್ನೆಂದು ಕೂಗುತ” ಅಂದರೂ ತೊಡಕಿನ ನಿವಾರಣೆಯಾಗುತ್ತದೆ.

 7. ಭೂಮಿಜೆಯ ಮನ ಬಿರಿದು ಬೆಂದಿತು
  ರಾಮನಾಜ್ಞೆಯ ಝಳಕೆ ಕಮರಿತು
  ಸೋಮನಂದದಿ ತಣಿಸಿದನು ಮುನಿ ಚಂದನದ ನುಡಿಯೊಳ್
  ಭೂಮಿ ಬಿರಿದಿರೆ ಹೊಯ್ದು ನಲುಗಿರೆ
  ಕಾರ್ಮುಗಿಲು ಕವಿದು ರಣವಾಗಿರೆ
  ಪಾಮರಳ ಬಾಳನು ಬೆಳಗಿಸುವ ಭಾನುವಾವನು ಪೇಳ್

 8. ಈ ಚಿತ್ರದಲ್ಲಿಯ ವ್ಯಕ್ತಿಯನ್ನು ಒಬ್ಬಳು ಹೆಣ್ಣೆಂದು ಭಾವಿಸಿ ಮೇಲಿನ ಪದ್ಯ ಬರೆದಿದ್ದೇನೆ.

 9. ಯಾಕಾಗಿ ತಾಯೆ ನಿನಗಿಷ್ಟತಿಯಾದ ಕೋಪಂ ?
  ಸಾಕಾಯ್ತೆ ಕಂದರುಗಳಾ ವಿಪರೀತದಾಟಂ ?
  ಅಕ್ಕುಂ ಗೃಹಂ ನಿಜದ ನಾಕವು ಮಾತೆಯಿಂದಲ್ –
  ತಕ್ಕಾದುದೀ ನುಡಿಯ ಪೇಳದೆ, ತೋರ್ಕೆಯೊಪ್ಪೇಂ ?

  [ತೋರ್ಕೆ = ಪ್ರದರ್ಶನ]
  [ಛಂದಸ್ಸು = ವಸಂತ ತಿಲಕ]

 10. Kudos to my friends for their excellent verses, Ganesh Sir’s and Soma’s verses are superb. Here is my small attempt

  आशासौधशतानि यान्ति ममतास्थूणाधृतानि क्षयं
  भिद्यन्ते प्रणयाम्बुवर्धिततरा नैके कुटुम्बद्रुमाः ।
  मातस्ते क्षणिकेन कम्पनकलाखेलेन लोकोऽधुना
  नीतो दग्धविधेर्हठादभिमुखं व्याघ्रस्य पान्थो यथा ॥

  Hopes, mansions supported on pillars of ego, are razed to the ground in hundreds. Families, trees nourished continuously with waters of filial love, are uprooted aplently. Your momentary mischievous shaking, O Mother, brings humanity face to face with its miserable fate, like a traveller with a tiger.

  You could also read the first two lines of the verse as follows – Hopes and mansions, supported by pillars and ego are razed to the ground. Families and trees, nourished with love and waters, are uprooted aplently

  • ಧನ್ಯವಾದಗಳು ಶ೦ಕರ್, ರಾಮ್:)

   ಶ೦ಕರ್, ನಿಮ್ಮ ಪದ್ಯವು ಎ೦ದಿನ೦ತೆ ಅತಿಸು೦ದರ:)

  • ಕಂಪಮೇತು ಕ್ಷಮಾ ಶಂಪಾಕ್ಷಿಪ್ರಮೇತ್ವಪಿ ಜೀವಿತಮ್|
   ಯದ್ಯಸ್ತಿ ಶಾಂಕರಂ ಕಾವ್ಯಂ ಝಂಪಾಮಿ ಕ್ಲೇಶಕೂರ್ದಿತಮ್||

 11. Read ‘aplenty’ for ‘aplently’ in the translation. Sorry for the error

 12. ಗುಜರಾತ್ ಭೂಕ೦ಪವನ್ನು ಅನುಭವಿಸಿದ ಕ್ಷಣಗಳು ನೆನಪಾಗಿ ಒಮ್ಮೆ ನನ್ನಲ್ಲೂ ಕ೦ಪನವಾಯಿತು,ಚಿತ್ರ ನೋಡಿ.

  ಉಡುಗಿಹೋಯಿತು ದನಿಯು ಚಣದಲಿ
  ಮಡಿಲು ಬರಿದಾಯ್ತಯ್ಯೊ ಧಾರಿಣಿ
  ಗಡಗಡನೆ ತಾ ನಡುಗುತೊಡನೆಯೆ ತನುವ ಮರೆಯುತಿರೆ
  ಪೊಡವಿಯಿಯಾಣ್ಮನ ಲೀಲೆಗದೊ ಸ
  ದ್ದಡಗಿ ಪೋದುದು ಲೋಕದಬ್ಬರ
  ಕಡಲಿನುಬ್ಬರಕಿದು ಮುಹೂರ್ತವೆ ಪೇಳಲಾರಿಹರು?

  • {ಸಣ್ಣ ತಪ್ಪು ತಿದ್ದಿದೆ.}
   ಉಡುಗಿಹೋಯಿತು ದನಿಯು ಚಣದಲಿ
   ಮಡಿಲು ಬರಿದಾಯ್ತಯ್ಯೊ ಧಾರಿಣಿ
   ಗಡಗಡನೆ ತಾ ನಡುಗುತೊಡನೆಯೆ ತನುವ ಮರೆಯುತಿರೆ
   ಪೊಡವಿಯಾಣ್ಮನ ಲೀಲೆಗದೊ ಸ
   ದ್ದಡಗಿ ಪೋದುದು ಲೋಕದಬ್ಬರ
   ಕಡಲಿನುಬ್ಬರಕಿದು ಮುಹೂರ್ತವೆ ಪೇಳಲಾರಿಹರು?

 13. ಕಟ್ಟ ಹೊರಟಿರೆ ಹೊಸತು ನಾಡನು
  ಹುಟ್ಟನಡಗಿಸುತಟ್ಟಿತೀ ವಿಧಿ
  ಯಟ್ಟಹಾಸಕ್ಕಿ೦ದು ಧರಣಿಯು ನಡುಗಿದಳೊ ಬೆದರಿ?
  ಉಟ್ಟ ಬಟ್ಟೆಯೆ ಗತಿಯು ಹೊಟ್ಟೆಗೆ
  ಹಿಟ್ಟು ಕಡೆಯಲಸಾಧ್ಯ ನಿಮಿಷದೊ
  ಳಟ್ಟವಾಗಸವಾಯ್ತು ಸೃಷ್ಟಿಯ ವಿಕಟದಾಟಕ್ಕೆ

 14. ಒಬ್ಬ ದೇವಪುತ್ರ, ಶೈಶವಾವಸ್ಥೆಯಲ್ಲಿರುವವನು. ಇವನೂ ತನ್ನ ಹಿರಿಯರಂತೆಯೇ ಲೋಕದೊಡನೆ, ಲೋಕದ ಸಾಮಗ್ರಿಗಳೊಡನೆ ಆಟವಾಡುತ್ತಾನೆ. ಆದರೆ ಹಿರಿಯರಷ್ಟು ನಾಜೂಕಾಗಿ ಆಡಲಾರ.
  ಮಲ್ಲಿಕಾಮಾಲೆ
  ಬಾಲ ತಾನಹ ಚಿಕ್ಕವನ್| ಸುರನೋರ್ವನಾತ್ಮಜನೀತನೈ
  ಲೀಲೆ ತೋರುವನೀಗಲೇ| ಸುರಲೋಗರಾಟವನಾಡುವನ್
  ಖೇಲವೀತನದೀತೆರಂ| ಪೆರತಲ್ಲ ತಂದೆಯದಂತೆಯೇ
  ಲೋಲವೀತನ ರೀತಿಯೊಳ್| ಪಿರಿಯರ್ದು ಕಾಣದು ನೋಡದೋ!

 15. ಬಾಲ ತಾ ಬಲು ತುಂಟನೈ| ಸುರನೋರ್ವನಾತ್ಮಜನೀತನೈ
  ಲೀಲೆ ತೋರುವನೀಗಲೇ| ಸುರಲೋಗರಾಟವನಾಡುವನ್
  ಖೇಲವೀತನದೀತೆರಂ| ಪೆರತಲ್ಲ ತಂದೆಯದಂತೆಯೇ
  ಲೋಲ ಜೃಂಬಿತವೀತನಾ| ನಯವಂತೆ ಹಾನಿಯು ಬೊಮ್ಮನಾ

 16. ಕಳೆದೆಲ್ಲವಾಸ್ತಿಯು ಅಳಿದೆಲ್ಲ ಸಂಬಂಧ
  ಮುಳುಗಿದಂತಾಗೆ ಸರ್ವರ್ಸ್ವ – ಕುಳಿತುನೀ
  ನಳಬೇಡ ಹೃದಯ ವೊಡೆದಾತು ||

  ಬೀಸುವ ದೊಣ್ಣೆಯು ದೇಸವ ಕೆಡಗುತ್ತ್
  ಮಾಸದೆ ಬಿಡಲು ನಿನ್ನನ್ನು – ನೀನಾದೆ
  ಕಾಸಿದ ಬೆಣ್ಣೆ ಘೃತದಂತೆ ||

  ಆದದ್ದು ಆಯಿತು ಹೋದದ್ದು ಹೋಯಿತು
  ಕಾದಿಹೆ ಬರವ ನೀನ್ಯಾರ – ತಂಗ್ಯವ್ವ
  ನೀದಾರಿ ಮುಂದೆ ಹುಡುಕೇಳು ||

  [ಅಂಶ ಛಂದಸ್ಸ್ – ತ್ರಿಪದಿ]

 17. ಊರಿನೊಳಿಲ್ಲದಾದೆನಲ ನಾಂ ದಿನ ಮೂರದರಿಂದೆ ಪದ್ಯಪಾ-
  ನೇರಿತಮೆಲ್ಲಮಂ ಪರಿಕಿಸುತ್ತೆ ಮದೀಯನಿವೇದನಂಗಳಂ|
  ಸಾರಲಿಕಾದುದಿಲ್ಲ; ಕೃಪೆದೋರ್ವುದು ನೇಹಿರೆಲ್ಲರಿಂತಿರಲ್
  ಭೂರಿಕವಿತ್ವಪೂರವಿದಕಂ ಮುದವೇರಿ ನಮಸ್ಕರಿಪ್ಪೆನಯ್||

 18. ಪದ್ಯಪಾನದ ಮಿತ್ರರೆಲ್ಲರಿಗೆ ನನ್ನ ಒಂದು ನಿವೇದನೆ:

  ಯಾರ ಪದ್ಯಕ್ಕೂ ನಾನೇ ತಿದ್ದುಗೆ-ಮೆಚ್ಚುಗೆಗಳನ್ನು ಸೂಚಿಸಬೇಕೆಂಬ ಅಲಿಖಿತನಿಯಮವಿರುವ ಹಾಗೆ ದಯಮಾಡಿ ಯಾರೂ ಭಾವಿಸದಿರಿ:-)
  ಎಲ್ಲರೂ ತಮಗೆ ತಿಳಿದ ಮಟ್ಟಿಗೆ ಇತರರ ಪದ್ಯಗಳಲ್ಲಿ ಗುಣ-ದೋಷಗಳ ವಿಮರ್ಶನವನ್ನು ಮಾಡಿರಿ. ಇದರಿಂದ ಎಲ್ಲರಿಗೂ ಭಾಗವಹಿಸುವಿಕೆಯ ಲವಲವಿಕೆ ಬರುವುದಲ್ಲದೆ ಅವರವರ ಸರ್ಜನಶೀಲತೆಯ ಜೊತೆಗೆ ವಿಮರ್ಶನಶೀಲತೆಯೂ ಪರಿಪಾಕಗೊಳ್ಲುತ್ತದೆ. ಇದು ಮತ್ತೆ ಪದ್ಯರಚನಎಗೇ ಇಂಬೀಯುತ್ತದೆ. ದಿಟವೇ, ಕೆಲವರು ಈ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಈಚೆಗೆ ಅದು ಕಡಮೆಯಾದಂತಿದೆ:-)
  ಇದರಲ್ಲಿ ನನ್ನ ಸ್ವಾರ್ಥವೂ ಅಡಗಿದೆ, ನಾನೇ ಎಲ್ಲರ ರಚನೆಗಳ ವಿಮರ್ಶಕನಾಗುವ ಭಾರ ಸ್ವಲ್ಪ ಇಳಿಯುತ್ತದೆ:-)

 19. अन्तर्जालगवाक्षान्तर्निविष्टप्रातिभेक्षणैः ।
  उदीक्षितो भवान्मित्रैर्दिवसत्रितयावधि ॥

  ಸರ್, ಮೂರನೆಯ ಪಾದದ ಕೊನೆಯಲ್ಲಿ ಒಂದಕ್ಷರ ಕಡಿಮೆಯಿದೆ ಅನಿಸುತ್ತಿದೆ.

 20. ಕೊನೆಯ ಪಾದವನ್ನು ತಿದ್ದಿದ್ದೇನೆ – अनेकदिवसावधि ಎಂದಾಗಬೇಕು

  • Whose verse has shortage of one letter? I think both the verses are correct (mine and yours:-).. I am really confused!!!

 21. (ನನ್ನ ಚೊಚ್ಚಲ ಸೀಸ ಪದ್ಯ, ಭಾಷೆಯಲ್ಲಿ ಹಳೆ-ಹೊಸಗನ್ನಡಗಳೆಲ್ಲ ಸಂಮಿಶ್ರಣವಾಗಿ ಅಡುಗೆಯಲ್ಲಿ ಹೊಸರುಚಿ ತಯಾರಿಸಿದಂತಾಗಿದೆ:-):-P

  ಭೂದೇವಿ ಭಾರದಿಂ ರೋಸಿಹಳು ಮೇಣ್ ವಿಷ್ಣು-ವಿರಹದಿಂ ತಪ್ತಳೆಂತೆಂಬವೋಲೇ |
  ಶ್ರೀದೇವಿಯೊಡನಿರ್ಪ ಮಚ್ಚರದಿ ಕೊನರಿ ತಾ ಪೊರಮಟ್ಟು ನಿಂತಳೈ ಹರಿಯ ಕಡೆಗೆ |
  ಕಾದು ಸೂರ್ಯನ ಬಿಸಿಗೆ ಕುದಿದು ಬಡಬಾನಲಕೆ ಕಂಪಿಸಿರ್ಪಳು ಜನರ ಕ್ರೂರ ನಡೆಯಿಂ |
  ಗುಡುಗಿ ತಾ ಕೊಡವಿದಳು ಸೌಧಗಳನರೆ ಕ್ಷಣದಿ ಜಠರಾಗ್ನಿಗಾಹುತಿಯನಿಕ್ಕುತಿರ್ಪಳ್ ||
  ಕಾಲವಶವಾಗಿರಲು ಬಂಧುಜೀವಿಗಳೆಲ್ಲವೂ
  ರೋದಿಸುವರಿತ್ತಕಡೆ ಬದುಕಿರ್ಪ ಬಾಂಧವರ್ಗಳ್|
  ಏನೀ ವಿಪರ್ಯಾಸ ? ಮಾಳ್ಪ ತಪ್ಪಿಗೆ ಪಡೆದುದಂ
  ಕಂಡು ದುಃಖವ ಪೊಂದಿ, ವಿಧಿಯ ನಿಂದಿಸುವುದಲ್ತೇ?

  • This very neat seesa-padya of DVG style. Even the language and contents are decent. However, I expect even more innovative and imaginative imagery in your versification as you are capable enough of doing it so! haNNiruva marakkE kallu beeruvudu!!!

   • Its my pleasure.. thank u sir:-) haNNiruv marakkE kallu esedare haNNu mAtra beeLuttade maravE allavalla:-)

 22. Sir,
  ನೇಹಿರೆಲ್ಲರಿಂತಿರಲ್ – ಇಲ್ಲಿ ಒಂದಕ್ಷರ ಕಡಿಮೆಯಾಗಿದೆ ಅಲ್ವಾ?

 23. विनयेन भूषितानां
  काप्यन्या श्रीर्भवादृशां विदुषाम् ।
  यच्छति यच्छुकचञ्चू-
  हतये स्वं तत्फलं द्विगुणमधुरम् ॥

  • ಶುಕಮುಖಹತಮಪಿ ಸುತರಾಂ
   ಸುಮಧುರಮಪಿ ವೃಂತಗಲಿತಮಪಿ ಘನವಿಪಿನೇ|
   ಬಹುಬೀಜಫಲಂ ಭಜತೇ
   ರುಚಿಮತ್ತಾಂ ಸದ್ವಿಮರ್ಶಸೋಪಸ್ಕರತಃ||
   (ಉಪಸ್ಕಾರಾಸ್ತು ಲವಣ-ಮರೀಚಚೂರ್ಣಾದ್ಯಾಃ)

   “ವಿನಯಮೊಡವರಿದ ವಿದ್ವ-
   ದ್ಘನತೆಯದಾವುದೊ ಮನೋಹರತೆಯಿಂ ಪೊಳೆಗುಂ|
   ಗಿಣಿಗಚ್ಚಿದ ಪಣ್ಸವಿ ಬಹು-
   ಗುಣಮಲ್ತೆ” ಎನುತ್ತೆ ಶಂಕರಂ ಕವನಿಸಿದಂ||

   ಗಿಳಿಗಚ್ಚಿರ್ಕೆ, ಮರನೊಳೇ
   ಕಳಿತಿರ್ಕೆ, ವನೀಜಮೆಂದೆನಿಸುತಿರ್ಕೆ ಮುಗುಳ್|
   ತಳೆಯದು ಸವಿಯಂ ಸೀಬೆಯೊ-
   ಳಿಳಿಯದೆ ಮೇಣ್ ಸದ್ವಿಮರ್ಶಸೋಪಸ್ಕರಮುಂ||
   ( ಸೀಬೆಯು ಹೇಗೇ ಹಣ್ಣಾಗಿರಲಿ, ಗಿಳಿಯೇ ಕಚ್ಚಿರಲಿ, ತಾನಾಗಿ ಕಳಿತು ಗಿಡದಿಂದ ಜಾರಲಿ; ಸಜ್ಜನರ ವಿಮರ್ಶನವೆಂಬ ಉಪ್ಪು-ಖಾರದ ಪುಡಿಗಳಿಲ್ಲದೆ ಸವಿಗೂಡದು)

 24. ಪದ್ಯ ರಚನೆಯಲ್ಲಿ ಅತ್ಯಂತ ಶೈಶವಾವಸ್ಥೆಯಲ್ಲಿರುವ ನನ್ನ ಪ್ರಶ್ನೆಗಳಿಗೆ ಉತ್ತರಿಸಿದ ‘ರಾಮಚಂದ್ರ’ ಹಾಗೂ ‘ರಘು ಮುಳಿಯ’ ಇಬ್ಬರಿಗೂ ಧನ್ಯವಾದಗಳು…

 25. ಮೇಲಿನ ಪದ್ಯಗಳಿಗೆ ಈ ಪದ್ಯ ಯಾವ ರೀತಿಯಲ್ಲಿಯೂ ಸಾಟಿಯಲ್ಲವಾದರೂ ಪೋಸ್ಟ್ ಮಾಡುವ ಭಂಡಧೈರ್ಯ ಮಾಡುತ್ತಿದ್ದೇನೆ. ದಯವಿಟ್ಟು ತಪ್ಪುಗಳನ್ನು ತಿಳಿಸಿ,ತಿದ್ದಿ ಸಹಕರಿಸಿ.(ಮೊದಲ ಸಾಲಿನಲ್ಲಿ ತಾಯುದರವದು ಎಂದು ಮಾಡಿದರೆ ಆರಿಸಮಾಸವಾಗುತ್ತದೆಯೇ?)

  ಬುವಿಯ ತಾಯುದರವದು ಬಿರಿದಿರೆ
  ಕವಿಯುತಿರೆ ಕಾರ್ಮೋಡ ಬದುಕಿಗೆ
  ಜವನ ತಾಂಡವ ಮೇರೆ ಮೀರುತ ಬಿಡದೆ ನಡೆಯುತಿರೆ
  ಸವಿಯಗಂಗಳ ಬಾಲೆಯೋರ್ವಳು
  ಕಿವಿಯ ಮುಚ್ಚುತ ಬಿಕ್ಕುತಿರ್ದಳು
  ಗವಿಯೊಳಗೆ ಸಿಲುಕಿರುವ ಹುಲ್ಲೆಯ ಮರಿಯ ರೀತಿಯಲಿ

  • Good one. ಭುವಿ should be buvi, alpapraaNa. taayudara is not an ari-samaasa.

   • ಧನ್ಯವಾದಗಳು ಸರ್. ನಿಮ್ಮ ಸೂಚನೆಂತೆ ಮೊದಲ ಸಾಲನ್ನು ಸರಿಪಡಿಸಿದ್ದೇನೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)