Jul 272011
 

ಗೆಳೆಯರೇ, ಪದ್ಯಗಳನ್ನು ಹೊಸವಿಧಾನದಲ್ಲಿ ರಚಿಸೋಣವೇ ?
ಸಮಸ್ಯಾಪೂರ್ಣದ ಆಟವಾಡೋಣವೇ ???
ಇಗೋ ನನ್ನ ಕಡೆಯಿ೦ದ ಮೊದಲ ಸಾಲು….
ಇದು ಭಾಮಿನಿ ಷಟ್ಪದಿಯ ಕೊನೆಯ ಸಾಲು….ಮೊದಲ ೫ ಸಾಲುಗಳನ್ನು ರಚಿಸಿ ನಿಮ್ಮ ಪರಿಹಾರ ತಿಳಿಸಿ….
ನಾನು ಕಡೆಯಪಕ್ಷ ೨ ಪರಿಹಾರಗಳನ್ನು ಆಗಷ್ಟ್ ೭ ರ೦ದು ಪೋಸ್ಟ್ ಮಾಡುವೆ….
ಸಮಸ್ಯೆ ಇ೦ತಿದೆ:

“ನೀರ ತಿನ್ನಲು ಮರಣವಪ್ಪಿದ ರಾಜ ಸಭೆಯೊಳಗೇ”

  22 Responses to “ಸಮಸ್ಯಾಪೂರ್ಣ”

  1. ಶ್ರೀಶ, ನನ್ನದೊಂದು ಪ್ರಯತ್ನ 🙂

    ವೈರ ಮೂಡಣ ತೆಂಕಣರಲದು
    ಘೋರ ತಾರಕವೇರಿರಲು, ಅತಿ
    ಮೂರ್ಖ ಮೂಡಣದಧಿಪ ಸಂಧಿಗೆ ತೆಂಕಣನ ಕರೆದ
    ಸಾರುವೆನೆ ಸಂದೇಶ ಶಾಂತಿಯ
    ಧೂರ್ತ ತೆಂಕನು ತಂದ ಸಿಹಿ ಎಳೆ
    ನೀರ ತಿನ್ನಲು ಮರಣವಪ್ಪಿದ ರಾಜ ಸಭೆಯೊಳಗೆ

  2. ಬಾರ ಹೊಸತು ವಿಧಾನಗಳಲೀ
    ಸಾರುತಸಮಸ್ಯೆಗಳಲಾಡುತ
    ತೋರಿಸುವ ನವ ರಚನೆಗಳದೀ ರಸಗಳಾ ಸೊಬಗ ||
    ಪೂರಯಿಸಿ ಹಿಂದಿರುವ ಸಾಲುಗ –
    ಳಾರು ಪದಗಳ ಭಾಮಿನಿಯಲೀ
    "ನೀರ ತಿನ್ನಲು ಮರಣವಪ್ಪಿದ ರಾಜ ಸಭೆಯೊಳಗೆ" ||

    ತೀರ ಸಣ್ಣ ವಯಸ್ಸಿನಿಂದಲೆ
    ಭಾರಿ ನೊಂದನವನಲರಜಿಯಲಿ
    ಕ್ಷೀರದುತ್ಪಾದನೆಗಳೊಡನೆಂ ಸಾತ್ಮ್ಯವಿಲ್ಲವಗೆ [ಸಾತ್ ಮ್ ಯ ವಿಲ್ಲವಗೆ] ||
    ಸಾರಿದಾ ಹೊಸಾದೂಟದಂಗಡಿ
    ಪೂರ ಕಳಿಸಿದ ಟಿಕ್ಕೆಗಳ ಪ –
    ನ್ನೀರ ತಿನ್ನಲು ಮರಣವಪ್ಪಿದ ರಾಜ ಸಭೆಯೊಳಗೆ ||

  3. ವೀರ ಜನಮೇಜಯನು ತಾಯಿಯ
    ತೀರ ಪಿತನವಗಡವ ಕೇಳಲು
    ನೀರೆ ಮಾದ್ರಾವತಿಯು ಪೇಳ್ದಳು ದುಃಖತುಂಬುತಲಿ|
    ಭೀರು ತಕ್ಷಕ ವಿಷವ ತುಂಬಿದ
    ಚಾರುಫಲವನು ನೀಡಲೆನ್ನಯ
    ನೀರ ತಿನ್ನಲು ಮರಣವಪ್ಪಿದ ರಾಜಸಭೆಯೊಳಗೆ||

    ನೀರ = ಇನಿಯ
    http://en.wikipedia.org/wiki/Takshaka

  4. ರವೀಂದ್ರ – ನಿಮ್ಮ ಉತ್ತರ ಬಹಳ ಚೆನ್ನಾಗಿದೆ.

  5. ನನ್ನ ೨ನೇ ಪದ್ಯದ (ಮೇಲೆ ಕಾಮೆಂಟಿನಲ್ಲಿ) ೪ನೇ ಪಾದದಲ್ಲಿ ಒಂದು ದೋಷವಿದೆ. ಅದನ್ನು, ಹೀಗೆ ಓದಿಕೊಳ್ಳಿರಿ ::
    ಸಾರಿದಾ ಹೊಸದೂಟದಂಗಡಿ

  6. Soma,
    Nice try….but please put something before neeru to make it eatable 🙂

    Ramachandra,
    Wonderful….swalpa maatre vyatyaasa aagide….4th line nalli….
    aadru milk products mele alergy iro raajanna…ee reeti saaysbaardittu 🙂

    Raveendra,
    man…u are a silent killer…..terrific…..
    yes, neera = priya, iniya….that was in my mind when i thought of this problem…..
    cool….
    am very very happy….will post my solutions this weekend

  7. Thanks Shreesha, Ramachandra. All Dictionary Krupa.

  8. ಮೆರೆದ ದುರುಳರ ಕೊಡಹಲೊಲ್ಲದೆ
    ಮರೆಯುತಿಹರೆನ್ನರಸರೈವರು
    ಹರಿಯ ನಾಮವ ಹೊದೆದು ನಿಂದುದ ದ್ಯೂತಸಭೆಯೊಳಗೆ
    ಅರಿಯ ಶೋಣಿತ ಹೀರದೆನ್ನೊಡ
    ಲುರಿಯು ತಣಿಯದು ಬಿಡದಿರೈ ಕ
    ಣ್ಣೀರ ತಿನ್ನಲು “ಮರಣವಪ್ಪಿದ ರಾಜಸಭೆಯೊಳಗೆ"

  9. ನನ್ನ ಪದ್ಯದ ೩ನೇ ಸಾಲನ್ನು ಹೀಗೆ ಓದಿಕೊಳ್ಳುವುದು:

    "ಹರಿಯ ನಾಮವ ಹೊದೆದು ನಿಂದುದ ಲೆತ್ತಸಭೆಯೊಳಗೆ"

  10. ಅಬ್ಬಾ ೪ ಪರಿಹಾರಗಳು ಅದ್ಭುತ 🙂

    ಶ್ರೀಶ,
    ಸ್ವಲ್ಪ adjust ಮಾಡಿದ್ರೆ ಎಳನೀರನ್ನ ತಿನ್ನಬಹುದು ಗಂಜಿ/ಕಾಯಿ ಎಳನೀರಿನ ಭಾಗ ಆಲ್ಲವೆ 😉
    ಆದ್ರೆ, ನೀ ಹೇಳೋದನ್ನ ಒಪ್ಪ್ತೀನಿ "ಎಳನೀರನ್ನ ತಿನ್ನಲು" ಪ್ರಯೋಗ ಚೆನ್ನಾಗಿದೆ ಅಂತ ನನಗೆ ಅನ್ನಿಸಲಿಲ್ಲ 🙂

    ರಾಮ್,
    ಅಲರ್ಜಿ ಐಡಿಯಾ ತುಂಬಾ ಚೆನ್ನಾಗಿದೆ 🙂
    ಪಾಪ ರಾಜಣ್ಣ

    ರವೀಂದ್ರ,
    ನೀರ = ಇನಿಯ ಪ್ರಯೋಗ ಮತ್ತು ಪದ್ಯ ತುಂಬಾ ಚೆನ್ನಾಗಿದೆ.

    ರಜನೀಶ,
    ಒಳ್ಳೆ ವಿಷಯವನ್ನು ಆರಿಸಿದ್ದೀರಿ. ಕೆಳಗಿನ ಸಾಲಿನ ಅರ್ಥ ಸರಿಯಾಗಿ ಗೊತ್ತಾಗ್ಲಿಲ್ಲ? ದಯವಿಟ್ಟು ತಿಳಿಸಿ
    ಬಿಡದಿರೈ ಕಣ್ಣೀರ ತಿನ್ನಲು “ಮರಣವಪ್ಪಿದ ರಾಜಸಭೆಯೊಳಗೆ"

  11. "ಕೌರವರೊಂದಿಗೆ ಸಂಧಾನಮಾಡಹೊರಟಂಥ ಪಾಂಡವರ ಸಭೆ (ಮರಣವಪ್ಪಿದೆ=)ನಿರ್ವೀಯವಾಗಿದೆ. ಸಂಧಾನಮಾಡಿಕೊಂಡು,(ಅವಮಾನದ ನೋವಿನಿಂದಾಗಿ ಹರಳುಗಟ್ಟಿರುವ)ಕಣ್ಣೀರನ್ನು ತಿನ್ನಲು ತನ್ನನ್ನು ಬಿಡದಿರು… ಯುದ್ಧಾಹ್ವಾನವನ್ನು ಕೊಟ್ಟು ಬಾ…" ಎಂದು ದ್ರೌಪದಿಯು ಕೃಷ್ಣನನ್ನು ಬೇಡಿದಳು" ಎಂಬ ಅರ್ಥನ್ನು ಕಾಣಿಸಲೆತ್ನಿಸಿರುವೆ.

  12. Rajaneesh, thanks for the meaning 🙂

  13. ಶ್ರೀಶ,
    ಇನ್ನೊಂದು ಪ್ರಯತ್ನ

    ಸಾರ ಜೀವಕೆ ಯಾವುದರಲಿದೆ?
    ಭೂರಿ ಭೋಜನವೇಕೆ ಬೇಕಿದೆ?
    ಮಾರನೇನನು ಪಡೆದ ಕೆಣಕಲು ರುದ್ರನಲಿ ತಪವ?
    ಊರನಾಳುವ ಶೂರನಾರೈ?
    ಧೀರಮತಿಗವಕಾಶವೆಲ್ಲಿದೆ?
    ನೀರ, ತಿನ್ನಲು, ಮರಣವಪ್ಪಿದ, ರಾಜ, ಸಭೆಯೊಳಗೆ

    😉

  14. ಬೀರು ಕುಡಿಯುತ ತಿಂದುದೆಣ್ಣೆಯ
    ಹೀರಿರುವ ಬಲು ಖಾದ್ಯ ತಿನಿಸುಗ –
    ಳಾರು ವರ್ಷಕು ಮೀರಿ ಹೃದಯಾಘಾತದಾನಂತರ ||
    ಜೋರಿನೆದೆ ಬಡಿತವದು ಬಡಿದಿರೆ
    ಚೀರಿ ಲೇಹ್ಯವ, ಜೊತೆಗೆ ಕಲಸಿ
    ನೀರ, ತಿನ್ನಲು ಮರಣವಪ್ಪಿದ ರಾಜಸ ಭೆಯೊಳಗೆ ||
    [ಭ – ಸಾಮ್ಯ, ಹೋಲಿಕೆ]

  15. ಶೂರರೆಲ್ಲರು ಸೈನಿಕೋತ್ತಮ –
    ರಾರು ಯುಧ್ಧಕೆ ಹೆದರಲೊಲ್ಲರು
    ಯೇರು ಯೌವ್ವನವೊಂದು ಕಾಡುವುದವರ ರಾತ್ರಿಯಲಿ ||
    ತೋರಿದರು ವಾರಾಂಗನೆಯರಾ
    ಭೂರಿ ಶೃಂಗಾರಗಳದಾಟವ –
    ನೀ ರತಿನ್ ನಲುಮ ರಣವಪ್ಪಿದರಾ ಜಸಭೆಯೊಳಗೆ ||

    ನಲುಮ = ನಲ್ಮೆ [ಒಂದು ನ್ ಬೇಡವಾಗಿದೆ. ಆದರೂ ಇದೆ :-(]
    ಜಸ = ಶೋಭೆ [ಇದರಿಂದ ಜಸಭೆ = ಶೋಭೆ ಎಂದು ಎಳೆದಿದ್ದೇನೆ]
    ಅಷ್ಟು ಸರಿಯಿಲ್ಲ – ಆದರೂ …

  16. ತನ್ನ ಸಭೆಯೊಳಗೆ ಏನನ್ನೋ ತಿಂದು ಮೃತ ಪಟ್ಟ ವ್ಯಕ್ತಿಯ ಬಗ್ಗೆ ರಾಜನು ಮಂತ್ರಿಯನ್ನು ವಿಚಾರಿಸಲು ಮಂತ್ರಿ ದುಃಖದಿಂದ ಇನ್ತೆಂದನು:

    'ಈರ'ನೆಂದೇ ಹಳ್ಳಿ ಹೆಸರನು
    ವೀರಭದ್ರನು ಕರೆದುಕೊಳ್ಳುವ
    ಮಾರುವೇಷದೆ ಪಾಕಶಾಲೆಯೂಳಾತ ಸೈನ್ಯದವ
    ವೈರ ತಂತ್ರವಶಂಕಿಸುತ ವಾ
    -ಹಾರ ಪರೆಕಿಸೆ ಮುನ್ನ, ರಾಜನ್,
    ಈರ ತಿನ್ನಲು ಮರಣವಪ್ಪಿದ ರಾಜಸಭೆಯೊಳಗೆ

    ರಾಜನ್ + ಈರ = ರಾಜನೀರ

  17. Soma – Good idea 🙂

  18. ಒಹೋ…ಅದ್ಭುತಾದ್ಭುತ….ರಜನೀಶ್, ಸೋಮ ಮತ್ತು ರಾಮಚ೦ದ್ರರಿಗೆ ಧನ್ಯವಾದಗಳು….ನನ್ನ ಒ೦ದು ಪರಿಹಾರ ಹೀಗಿದೆ….

    ಶೂರಕಾನನದರಸಿಜೊತೆತಾ
    ಮೂರು ರಾತ್ರಿಯ ಕಳೆದ ಸ೦ಗತಿ
    ಯೂರ ಜನಗಳ ಬಾಯಿಮಾತಿಗೆ ಕವಳವಾಗಿರಲೂ|
    ಭಾರದೆದೆಯಲಿ ರಾಜನೆದುರಿಗೆ
    ಶೂರ ನನ್ನಕೆ ಕಲಸಿ ವಿಷಮಯ
    ನೀರ ತಿನ್ನಲು ಮರಣವಪ್ಪಿದ ರಾಜ ಸಭೆಯೊಳಗೇ ||

    ಇನ್ನೊ೦ದು ಒ೦ದೆರಡು ರಿಪೇರಿ ಬಾಕಿ ಇದೆ…ಬಹುಷ: ನಾಳೆ….

  19. ಚೆನ್ನಾಗಿದೆ ಶ್ರೀಶ,

    ಕಾನನದ ಶೂರ ಇಷ್ಟೊಂದು risk ತೊಗೋಳೋದೆ, ಮರಣ ದಂಡನೆ ಆತನಿಗೆ ಕಟ್ಟಿಟ್ಟ ಬುತ್ತಿ 🙂

  20. ನನ್ನ ಹಿಂದಿನ ಪರಿಹಾರವನ್ನು ಪೀಠಿಕೆ ತೆಗೆಯುವ ಸಲುವಾಗಿ ಹೀಗೆ ಬದಲಿಸಿದ್ದೇನೆ

    ಧೀರ ಮಂತ್ರಿಯು ದೊರೆಗೆ ಪೆಳ್ದನು
    "ವೀರನೆಂಬುವನ್ 'ಈರ'ಹೆಸರೊಳು
    ಮಾರುವೇಷದೆಪಾಕಶಾಲೆಯೂಳಿದ್ದ ಸೈನಿಕನು
    ವೈರ ತಂತ್ರವಶಂಕಿಸುತಲಾ-
    ಹಾರ ಪರೆಕಿಸೆಮುನ್ನ, ರಾಜನ್,
    ಈರ ತಿನ್ನಲು ಮರಣವಪ್ಪಿದ ರಾಜಸಭೆಯೊಳಗೆ"

  21. ಈಗಿನ ಕಾಲದಲ್ಲೂ ಇಂಥಹ ಕಾವ್ಯ ಹೆಣೆಯುವ ವೀರರಿರುವುದು ನೋಡಿ ನಿಜಕ್ಕೂ ಆಶ್ಚರ್ಯವೆನಿಸುತ್ತಿದೆ. ಒಂದು ಸಮಸ್ಯೆಯನ್ನು ಇಷ್ಟೆಲ್ಲಾ ರೀತಿಯಲ್ಲಿ ಬಿಡಿಸಿರುವ ಸೋಮ,ರಜನೀಶ, ರಾಮಚಂದ್ರ ಮತ್ತು ಕಶ್ಯಪ ಇವರಿಗೆ ನನ್ನ ನಮನಗಳು. ಶ್ರೀಶರೇ ನೀವು ಇದೇ ರೀತಿ ಕಾವ್ಯರಸಿಕರನ್ನು ರಂಜಿಸಿ ಎಂದು ಹಾರೈಸುತ್ತೇನೆ.

  22. ಇನ್ನೊಂದು ಪರಿಹಾರ ::

    ತೀರ ಬಸವಳಿದಿದ್ದ ಜನತೆಯ
    ಘೋರ ಹೆದರಿಕೆ ಕಾಡುತಿರಲದು
    ಶೂರ ರಾಜನು ಕೂಡಲೆ ಹೂಡಿದನು ಪರಿಹಾರ ||
    ಭಾರಿ ಭೀತಿಯ ನಾಶನದ, ಭಯ –
    ಹಾರಿ ಯಾಗದ ಸಾದವನು, ಬ್ –
    ನ್ನೀರ ತಿನ್ನಲು, ಮರಣವಪ್ಪಿದ ರಾಜ ಸಭೆಯೊಳಗೆ ||

Leave a Reply to K.B.S Ramachandra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)