Nov 032012
 

ಗೆಳೆಯರೇ,
ವಿದ್ವತ್ತು, ಧಾರಣೆ ಮತ್ತು ಹಾಸ್ಯಚಮತ್ಕಾರಗಳು ಕಾಲನಾಲಯದಲ್ಲಿ ಹರಿಯುವ ನದಿಗಳು. ಇವೆಲ್ಲಾ ಒಂದೇ ಕಡೆ ಸಂಗಮವಾದ ಅಪೂರ್ವ ತಾಣದಲ್ಲಿ ಅವಧಾನಿಯ ಉದಯವಾಗುತ್ತದೆ. ಅವಧಾನದ ಜುಳುಜುಳು ಸದ್ದು ಮೂಡುತ್ತದೆ. ಜಗತ್ತಿನ ಅಹಂಕಾರದ ಪೊರೆಕಳಚಿ, ವಿಭೂತಿಯ ಅನುಭವವಾಗುತ್ತದೆ. ಇಂಥಾ ಸುಸಂದರ್ಭವೊಂದು ನಮ್ಮೆದುರಿಗಿದೆ. ನಮ್ಮ ಪದ್ಯಪಾನದ ಬೆನ್ನೆಲುಬಾದ ಗಣೇಶರು ನವೆಂಬರ್ ೩೦, ಡಿಸೆಂಬರ್ ೧, ೨ಕ್ಕೆ ಶತಾವಧಾನವನ್ನು ನಡೆಸಲಿದ್ದಾರೆ. [ವಿವರಗಳು ಇಲ್ಲಿದೆ.]
ಇನ್ನು ನಮ್ಮ ಕೆಲಸ. ಪದ್ಯಪಾನಿಗಳು ಕಾಲರ್ ಮಡಚಿ, ತೊಡೆ ತಟ್ಟಿ ಸಿದ್ಧವಾಗಬೇಕಿದೆ. ಪದ್ಯಪಾನಿಗಳು ಮೊದಲಸಾಲಿನಲ್ಲಿ ಕುಳಿತು, ಹಳಗನ್ನಡ ಪದ್ಯದುದಯವನ್ನು ನೋಡುನೋಡುತ್ತಾ ಆನಂದಿಸುವಂತಾಗಬೇಕಾಗಿದೆ. ಇನ್ನು ಅರ್ಥವನ್ನು ಗದ್ಯದಲ್ಲಿ ಬಿಡಿಸುವವರೆಗೆ ಕಾದು, ತಲೆಯಾಡಿಸುವುದು, ಕುರುಡನಿಗೆ ಸೂರ್ಯೋದಯದ ಸೌಂದರ್ಯವನ್ನು ವರ್ಣಿಸಿದಂತೆಯೇ, ಪರಿಪೂರ್ಣವಾಗದು. ಆದ್ದರಿಂದ ಇನ್ನುಳಿದ ದಿನಗಳಿಗಾಗಿ, ಪದ್ಯಪಾನ ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ. ಒಂದಿಷ್ಟು ಪೂರ್ವಸೂರಿಗಳ ಪದ್ಯಗಳನ್ನು, ಚಿತ್ರಕಾವ್ಯಾದಿಗಳನ್ನೂ, ಇನ್ನಷ್ಟು ಛಂದಸ್ಸುಗಳನ್ನೂ  ನಮ್ಮದಾಗಿಸಲು ಪ್ರಯತ್ನಿಸೋಣವೆಂಬುದು ನಮ್ಮಾಸೆ.

ವರ್ಣನೆ:ಯಾವುದಾದರೂ ವಿಡಂಬನೆಯನ್ನೋ ಸಹೃದಯಪ್ರಿಯವಾಗಬಲ್ಲ ಹಾಸ್ಯವನ್ನೋ ನಿಮ್ಮ ಇಷ್ಟವಾದ ಛಂದಸ್ಸಿನಲ್ಲಿ ತಿಳಿಸಿ. ಒಂದೆರಡು ಉದಾಹರಣೆಗಳು:
ಕಾಲವನೆಳ್ಳಷ್ಟೂ ಪೋಲುಮಾಡದೆ ಕಾರ್ಯಶೀಲನಾಗಿದ್ದೊಂದು ಗಳಿಗೆ
ಕಾಲನ್ನು ಚಾಚಿ ಮೈಮರೆತಾಗಲೇ ಬಂದ ಮೇಲಾಧಿಕಾರಿಯು ಬಳಿಗೆ [ಗಣೇಶರ ರಚನೆ. ಕಾವ್ಯಕಲ್ಪದಿಂದ]

ಇನ್ನೊಂದು ಉದಾಹರಣೆ:
ಗಾಥಾಸಪ್ತಶತಿಯಲ್ಲಿ ಬರುವ ಪದ್ಯವನ್ನು, ತೀ.ನಂ.ಶ್ರೀ. ’ಭಾರತೀಯ ಕಾವ್ಯಮೀಮಾಂಸೆ’ಯಲ್ಲಿ ಹೀಗೆ ಅನುವಾದಿಸಿದ್ದಾರೆ.
ಅಯ್ಯೋ, ಗದ್ದೆಗೆ ನಾನು ಹೋಗೆನು, ನೆಲ್ಲನು
ತಿಂದುಕೊಳ್ಳಲಿ ಗಿಳಿವಿಂಡು;
ಅರಿತರಿತೂ ದಾರಿಹೋಕರು ದಾರಿಯ
ಬೆಸಗೊಳುವರು ಮತ್ತೆ,ಮತ್ತೆ.
[ಮೂಲ ಪ್ರಾಕೃತದ ಸಂಸ್ಕೃತಛಾಯೆ ಹೀಗಿದೆ:
ಕಷ್ಟಂ ನ ಯಾಮಿ ಕ್ಷೇತ್ರಂ ಖಾದ್ಯತಾಂ ಶಾಲಿರಪಿ ಕೀರನಿವಹೈಃ
ಜಾನಂತೋಪಿ ಪಥಿಕಾಃ ಪೃಚ್ಛಂತಿ ಪುನಃಪುನೋ ಮಾರ್ಗಂ||
[ಈ ಮುಗ್ಧೆ ಸುಂದರಿಯಾಗಿದ್ದು, ಪಥಿಕರಿಗೆ, ದಾರಿ ಕೇಳುವ ನೆಪದಲ್ಲಿ ಇವಳನ್ನು ಮಾತನಾಡಿಸುವುದೇ ಗುರಿ ಎಂಬ ಭಾವವಿದೆ.]

ಪದ್ಯನಿದರ್ಶನಂ:
ರನ್ನನ ಗದಾಯುದ್ಧದಿಂದ:
ಆ ರವಮಂ ನಿರ್ಜಿತ ಕಂ-
ಠೀರವರವಮಂ ನಿರಸ್ತಘನರವಮಂ ಕೋ-
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ||
[ನಿರಸ್ತ = ಮೀರಿದ, ಘನ = ಮೋಡ] [ಪುನರುಕ್ತಿದೋಷವಿಲ್ಲದೇ, ರವವನ್ನು ಪ್ರತಿಧ್ವನಿಸಿದ್ದಲ್ಲದೇ, ಕೊನೆಯ ಸಾಲಿನ ಧ್ವನಿಯನ್ನೂ ಗಮನಿಸಿ]

  18 Responses to “ಪದ್ಯಸಪ್ತಾಹ – ೪೪; ವರ್ಣನೆ”

  1. “ಗಣೇಶ್ ಸರ್ ರವರ ಶತಾವಧಾನ”!!!
    ನನ್ನ ಜೀವಿತದ ಮಹದಾಸೆ ಫಲಿಸಿದೆ. 2 ದಿನ ಕೆಲಸಕ್ಕೆ ರಜೆ ಹಾಕಿಯಾಯಿತು !

  2. [ಪದ್ಯ]ಪಾನಮತ್ತರೇ !! ಸಲಾಮು 🙂 🙂

    ಕುರಿಯಮರಿಗಳ ತಂದು ಮನೆಗಳ
    ಹೊರಗೆ ಕಟ್ಟುತ ಸೊಪ್ಪು ಸದೆಗಳ
    ಹೊರೆಯ ಚೆಲ್ಲಿಸಿ ಕೊಯ್ವ ಪರಿಯನು ತೋರಬೇಡೆನಗೆ |
    ಹಿರಿದು ಕತ್ತಿಯ ದನದ ಕುತ್ತಿಗೆ
    ಹರಿವ ಮಂದಿಯು ಹಂದಿ ಜೀವನ
    ತೊರೆದು ಮಾನವರಾಗುವಂತೆಯೆ ಮತಿಯ ನೀಡುವುದು ||

    ಭರದೆ ಎಳೆಯುತ ಗಾಡಿಗೇರಿಸಿ
    ಗರಗರನೆ ತಿರುಗಿಸುತ ಕೋಳಿಯ
    ಜರಿದು ಜಾಗವೆ ಇರದ ಪಂಜರದೊಳಗೆ ತೂರಿಸುತ |
    ಸರಿಸಿ ತೆರೆಯುತ ಕದವನಾಪರಿ
    ಬಿರುಸಿನಿಂದಾಚೆಯಲಿ ಕತ್ತನು
    ತಿರುಚಿ ಎಸೆಯುತ ಸುಡಿಸಿಕೊಳ್ಳುವ ಜನ್ಮಬೇಡೆನಗೆ ||

    ಕರೆದು ಊಡಿಸಿ ಮುದ್ದುಗರೆವರೆ
    ತೊರೆದು ಕರುಣಾಭಾವವೆಲ್ಲವ
    ನೆರೆದು ಸುತ್ತಲು ಎತ್ತಿ ಕತ್ತರಿಸುವರು ಮೊಲಗಳನು |
    ಹರಣವಪ್ಪುವ ಜೀವಿಗಳನೇ
    ಕರಿದು ತಿಂದರೆ ಪಾಪ ಪೋಪುದು
    ಅರರೆ ನಿಮಗೇನಷ್ಟು ಸಂಕಟವೆಂಬ ಧೋರಣೆಯು ||

    ಇವು ನಾನು ಬ್ಲಾಗ್ ನಲ್ಲಿ ಬರೆದ ಲೇಖನದ ಕೆಲವು ಪದ್ಯಗಳು, ಇನ್ನಷ್ಟು ಬೇಕೆಂದಾದರೆ ಪುರುಸೊತ್ತಿರುವವರು ದಯವಿಟ್ಟು ಹೀಗೊಮ್ಮೆ ಕಣ್ಣಾಡಿಸುವುದು :

    http://nimmodanevrbhat.blogspot.in/2012/10/blog-post_31.html

  3. ತೆಲುಗಿನಲ್ಲಿ ಅವಧಾನವಿಶೇಷ ವಿಪುಲ. ಅದು ಚಾಟುಪದ್ಯಗಳ ಹಾಸ್ಯ ಚಮತ್ಕಾರಗಳ ಗಣಿ. ಈ ಸಂಜೆ ಅದರ ಬಗ್ಗೆ ಯೋಚಿಸಿದಾಗ ಟಂಕಿಸಿದ ಕರಡು ಲೇಖನವಿದು. ಪದ್ಯಗಳಮೂಲವನ್ನು ಸಮಯಾಭಾವದಿಂದ ಕೊಟ್ಟಿಲ್ಲ. ಅನುವಾದವೂ ಹಾಗೇ ನೇರವಾಗಿ ಟಂಕಿಸಿದ್ದು. ಸ್ಖಾಲಿತ್ಯವಿದ್ದಲ್ಲಿ ಕ್ಷಮೆಯಿರಲಿ.

    ಧೂಮಪಾನ ಹಾನಿಕರ – ಆದರೆ ಕಾವ್ಯದಲ್ಲಿ ಹಾಸ್ಯಕರ

    ಖಗಪತಿಯಮೃತವ ತರುತಿರೆ
    ಭುಗಭುಗವೆಂದುಕ್ಕಿಹೊರಳಿ ಭೂಮಿಗೆಬೀಳಲ್
    ಹೊಗೆಸೊಪ್ಪುಹುಟ್ಟಿಬೆಳೆದುದು
    ಹೊಗೆಯಂಸೇವಿಸದಫಲವೆ ಮಹಿಷದ ಜನ್ಮಂ

    ರಾವಣ ಯುದ್ಧದೊಳಂದಾ
    ಪಾವನ ಸೌಮಿತ್ರಿಮೂರ್ಛೆಗೊಂಡಾಕ್ಷಣದೊಳ್
    ತಾವಿದ್ದಿರೆ ಹೊಗೆಸೊಪ್ಪಿಗೆ
    ಪಾವನಿ ಸಂಜೀವಿಗೇಕೆ ಹಾರುವ ನೃಪತೀ

    (ಪಾವನಿ= ಪವನಪುತ್ರ ಹನುಮ)

    ಸಮಸ್ಯಾಪೂರಣಗಳಲ್ಲಿ ದುಷ್ಕರಪ್ರಾಸಗಳು ಅವಧಾನಿಗೆ ಒಂದು ಸವಾಲು. ಮಾಚೆರ್ಲವೆಂಕನ್ನ ಅವಧಾನಿಗೆ ಪೃಚ್ಛಕ ನೀಡಿದ ಸಮಸ್ಯೆ ಇದು :

    ವಕ್ತ್ರಂಗಳ್ ದಶ ಕಣ್ಣದೈದು ಕರಗಳ್ ಸಾಹಸ್ರವಯ್ ವರ್ಣಿಸಲ್

    ಅವಧಾನಿಯ ಪೂರಣ:

    ಈಕ್ತ್ರಾಪ್ರಾಸವು ಕಷ್ಟವಾಗಿಹುದೆ? ನೀವೆಷ್ಟೆಷ್ಟುಹಾರಾಡಿದರ್
    ವಾಕ್ತ್ರಾಸಂಬದು ಸತ್ಕವೀಂದ್ರಪಥದೊಳ್ ತಾನಿಲ್ಲವೈ ಪೇಳುವೆನ್
    ದಿಕ್ತ್ರಾರಾತಿಗೆ ಪಾರ್ವತೀಶ್ವರನಿಗಂ ದಿಗ್ಮಪ್ರಭಾರಾಶಿಗಂ
    ವಕ್ತ್ರಂಗಳ್ ದಶ ಕಣ್ಣದೈದು ಕರಗಳ್ ಸಾಹಸ್ರವಯ್ ವರ್ಣಿಸಲ್

    (ಈ ಕ್ತ್ರಾ ಪ್ರಾಸ ಕಷ್ಟವೆಂದು, ಅವಧಾನಿ ಸೋಲುವನೆಂದು ಹಾರಾಡುವಿರಾ! ಅವಧಾನಿಗೆ ವಾಕ್ತ್ರಾಸವೇ ಇಲ್ಲ. ರಾವಣ ದಶಮುಖ, ಶಿವಗಿರಿಜೆಯರಿಗೆ ಐದು ಕಣ್ನುಗಳು ಮತ್ತು ಸೂರ್ಯನಿಗೆ ಸಹಸ್ರ ಕರಗಳು)

    ಕ್ರಮಾಲಂಕಾರಾನುಪ್ರಾಣಿತವಾದ ಈ ಚತುಷ್ಪಾದ ಯಮಕಚಿತ್ರಕವಿತೆಯನ್ನು ನೋಡಿ.

    ಸೀಸ || ರಾಜನಂದನ ರಾಜ ರಾಜಾತ್ಮಜರು ಸಾಟಿ ನಮ್ಮನಲ್ಲಯ ವೇಮ ಧರಣಿ ಪತಿಗೆ
    ರಾಜನಂದನ ರಾಜ ರಾಜಾತ್ಮಜರು ಸಾಟಿ ನಮ್ಮನಲ್ಲಯ ವೇಮ ಧರಣಿ ಪತಿಗೆ
    ರಾಜನಂದನ ರಾಜ ರಾಜಾತ್ಮಜರು ಸಾಟಿ ನಮ್ಮನಲ್ಲಯ ವೇಮ ಧರಣಿ ಪತಿಗೆ
    ರಾಜನಂದನ ರಾಜ ರಾಜಾತ್ಮಜರು ಸಾಟಿ ನಮ್ಮನಲ್ಲಯ ವೇಮ ಧರಣಿ ಪತಿಗೆ

    ತೇಟ ಗೀತ|| ಭಾವ ಭವ ಭೋಗ ಸತ್ಕಳಾ ಭಾವಗಳನು
    ಭಾವ ಭವ ಭೋಗ ಸತ್ಕಳಾ ಭಾವಗಳನು
    ಭಾವ ಭವ ಭೋಗ ಸತ್ಕಳಾ ಭಾವಗಳನು
    ಭಾವ ಭವ ಭೋಗ ಸತ್ಕಳಾ ಭಾವಗಳನು
    ಮೊದಲಪಾದ (ಸೀಸಪದ್ಯ ಮತ್ತು ತೇಟಗೀತಿ)
    ರಾಜ=ಚಂದ್ರನಿಗೆ, ನಂದನ=ಮಗನಾದ ಬುಧನು, ರಾಜ, ರ=ಸಮರ್ಥನಾದ, ಅಜ=ಈಶ್ವರನು, ರಾಜ=ದೇವೇಂದ್ರನು, ಆತ್ಮಜ=ಬ್ರಹ್ಮ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಬುದ್ಧಿಯಲ್ಲಿ, ಭವ= ಐಶ್ವರ್ಯದಲ್ಲಿ, ಭೋಗ=ವೈಭವದಲ್ಲಿ, ಸತ್ಕಳಾ= ಶ್ರೇಷ್ಠವಾದ ವಿದ್ಯೆಗಳ, ಭಾವ=ಅತಿಶಯದಲ್ಲಿ…. ಹೀಗೆ ಸೀಸಪದ್ಯದ ಮೊದಲಪಾದಕ್ಕೆ ಮತ್ತು ತೇಟಗೀತಿಯ ಮೊದಲಪಾದಕ್ಕೂ ಕ್ರಮವಾಗಿ ಅನ್ವಯಿಸಿಕೊಳ್ಳಬೇಕು.

    ಎರಡನೆಯಪಾದ
    ರಾಜನಂದನ, ರ=ಮನೋಹರವಾದ, ಅಜ=ಶಿವನಿಗೆ, ನಂದನ=ಮಗನಾದ ಕುಮಾರಸ್ವಾಮಿ, ರಾಜ=ಕುಬೇರ, ರಾಜ ರ=ಶ್ರೇಷ್ಠನಾದ ಅಜ= ರಘುಕುಮಾರನಾದ ಅಜ, ಆತ್ಮಜ = ಚಂದ್ರ, ಇವರು ಸಾಟಿ. ಯಾವುದರಲ್ಲಿ ಎಂದರೆ, ಭಾವ=ಕ್ರಿಯೆಯಲ್ಲಿ, ಭವ=ಧನದಲ್ಲಿ, ಭೋಗ=ಪಾಲನೆಯಲ್ಲಿ, ಸತ್ಕಳಾ, ಸತ್=ಯೋಗ್ಯವಾದ, ಕಳಾ=ಕಾಂತಿಯ, ಭಾವ=ಬೃಂದದಲ್ಲಿ ಹೀಗೆ ಸೀಸಪದ್ಯದ ಎರಡನೆಯ ಪಾದಕ್ಕೆ ಮತ್ತು ತೇಟಗೀತಿಯ ಎರಡನೆಯ ಪಾದಕ್ಕೂ ಕ್ರಮವಾಗಿ ಅನ್ವಯಿಸಿಕೊಳ್ಳಬೇಕು.

    ಮೂರನೆಯಪಾದ
    ರಾಜನಂದನ, ರ= ಚಿನ್ನದಂಥ ದೀಪ್ತಿಯುಳ್ಳ, ಅಜ=ಬ್ರಹ್ಮನಿಗೆ, ನಂದನ=ಪುತ್ರನಾದ ಸನತ್ಕುಮಾರನೂ, ರಾಜ= ಕ್ಷತ್ರಿಯನು, ರಾಜ ರ=ಶ್ರೇಷ್ಠನಾದ ಅ=ಬ್ರಹ್ಮನ ಜ=ಮಗ ವಸಿಷ್ಠನೂ, ಆತ್ಮ= ಬೃಹಸ್ಪತಿಯಲ್ಲಿ ಜ=ಹುಟ್ಟಿದ ಕಚನೂ ಸಾಟಿ. ಯಾವವಿಷಯಗಳಲ್ಲಿ ಎಂದರೆ, ಭಾವ=ಆತ್ಮಜ್ಞಾನದಲ್ಲಿ, ಭವ=ಜನನದಲ್ಲಿ, ಭೋಗ=ಅನುಭವದಲ್ಲಿ, ಸತ್ಕಳಾ=ಅಭಿವೃದ್ಧಿಹೊಂದುವ, ಭಾವ=ಪದ್ಧತಿಯಲ್ಲಿ. (ಎರಡೂ ಪದ್ಯಗಳ ಮೂರನೆಯಪಾದವನ್ನು ಅನ್ವಯಿಸಿಕೋಳ್ಳಬೇಕು)

    ನಾಲ್ಕನೆಯಪಾದ
    ರಾಜನಂದನ, ರ=ಗೌರವಯುಕ್ತನಾದ ಅಜ=ಮನ್ಮಥನಿಗೆ ನಂದನ=ಕುಮಾರನಾದ ಅನಿರುದ್ಧನು, ರಾಜ, ರ= ಎಲ್ಲೆಡೆ ವ್ಯಾಪಿಸಿರುವ ಅಜ= ವಿಷ್ಣು, ರಾಜ=ಯಕ್ಷ, ಆತ್ಮಜ=ಮನ್ಮಥ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಆಕಾರದಲ್ಲಿ, ಭವ=ಸಂಸಾರದಲ್ಲಿ, ಭೋಗ= ಸಂಭೋಗದಲ್ಲಿ, ಸತ್ಕಳಾ= ಸೌಂದರ್ಯದ ಒಂದು ಭಾವ=ರೀತಿಯಲ್ಲಿ.

    ಶ್ರೀನಾಥಕವಿಯ ಸಮಸ್ಯಾಪೂರಣ

    ಒಂದು ಸಂದರ್ಭದಲ್ಲಿ ಒಂದು ಸಭೆಯ ವಿದ್ವಾಂಸರು ಶ್ರೀನಾಥಮಹಾಕವಿಯನ್ನು ಛೇಡಿಸಲು, ತಾವೆಲ್ಲಾ ಸಮರ್ಥರು ಎಂದು ಸೂಚಿಸಲು “ ಎಲ್ಲರು ಎಲ್ಲರೇ ನಿಜದೊಳೆಲ್ಲರು ಎಲ್ಲರೆ ಎಲ್ಲರೆಲ್ಲರೇ” ಎಂಬ ಸಮಸ್ಯೆಯನ್ನು ಕೊಟ್ಟರಂತೆ. ಶ್ರೀನಾಥನ ಅದ್ಭುತ ಪೂರಣ ಹೀಗಿದೆ:

    ಇಲ್ಲಿರೆ ಭೈರವಾಶ್ವಗಳು ಇಲ್ಲಿರೆ ಪಾರ್ಥನ ತೇರ ಟೆಕ್ಕೆಗಳ್
    ಇಲ್ಲಿರೆ ಪ್ರಾಕ್ಕಿಟೀಶ್ವರರು ಇಲ್ಲಿದೊ ಕಾಲನ ವಾಹನಂಗಳುಂ
    ಇಲ್ಲಿರೆ ಕೃಷ್ಣಜನ್ಮದೊಳು ಕೂಗಿದ ವೀರರದೀಸದಸ್ಸಿನೊಳ್
    ಎಲ್ಲರು ಎಲ್ಲರೇ ನಿಜದೊಳೆಲ್ಲರು ಎಲ್ಲರೆ ಎಲ್ಲರೆಲ್ಲರೇ

    (ಭೈರವಾಶ್ವಗಳು =ನಾಯಿಗಳು, ಪಾರ್ಥನ ರಥಧ್ವಜ= ಕೋತಿಗಳು, ಪ್ರಾಕ್ಕಿಟೀಶ್ವರರು= ಹಂದಿಗಳು, ಕಾಲನ ವಾಹನ = ಕೋಣ, ಕೃಷ್ಣಜನನಕಾಲದಲ್ಲಿ ಕೂಗಿದವು = ಕತ್ತೆಗಳು. ಆ ಸಭಾಸದರನ್ನು ಆರೀತಿ ನಿಂದಾಹೇಳನಗೈದನಂತೆ)

    ಶ್ರೀನಾಥ ಶೃಂಗಾರಪ್ರಿಯನಲ್ಲದೆ ಹಾಸ್ಯಪ್ರಿಯನೂ ಆಗಿದ್ದವ. ದಕ್ಷಿಣದೇಶಕ್ಕೆ ಬಂದಾಗ ಅಲ್ಲಿನ ತಮಿಳು ಹೆಣ್ಣನ್ನು ವರ್ಣಿಸಿದರೀತಿಯನ್ನು ಮೂಲದಲ್ಲೇ ಓದಿ ಆನಂದಿಸಬೇಕು:

    ಮೇತಗರಿಪಿಲ್ಲ ಪೋರುನ ಮೇಕಪಿಲ್ಲ
    ಪಾರುಬೋತು ತನಮುನಬಂದಿಪಿಲ್ಲ
    ಎಲ್ಲಪನುಲನು ಜೆರುಪಂಗ ಪಿಲ್ಲಿಪಿಲ್ಲ
    ಅಂದಮುನಗ್ರೋತಿಪಿಲ್ಲ ಯೀಯರವಪಿಲ್ಲ

    ಕರಿಯಮರಿ ಮೇವಿನಲಿ ಮೇಕೆಮರಿ ಪೋರಿನಲಿ
    ಸರಿದುಬೆದರೋಟದಲಿ ಹಂದಿಮರಿಯೆ
    ನೆರಪಿದೆಲ್ಲವಕೆಡಿಸುವುದರಲ್ಲಿ ಮಾರ್ಜಾಲ
    ಮೆರೆವಂದದೊಳುಕಪಿಯೆ ತಮಿಳಹೆಣ್ಣು

    ತೆನಾಲಿರಾಮ ಕೃಷ್ಣ, ಒಕ್ಕಣ್ಣನಾದ ತಿರುಮಲರಾಯನನ್ನು ಸ್ವಭಾವೋಕ್ತಿಮಾಧುರ್ಯದಿಂದ ವರ್ಣಿಸಿದ್ದು ಹೀಗೆ:

    ಹೆಣ್ಣೊಂದಿಗಿರಲು ರುದ್ರನೆ
    ಹೆಣ್ಣಿನಜೊತೆಯಿರದತಾನು ಶುಕ್ರಾಚಾರ್ಯನ್
    ಅಣ್ಣಾ! ತಿರುಮಲರಾಯನು
    ಕಣ್ಣೊಂದಿರದಷ್ಟೆ ತಾನು ಮನ್ಮಥಸಮನೇ

    (ಅವನ ಪತ್ನಿಯೊಂದಿಗೆ ಇದ್ದರೆ ಅವನಿಗೆ ಮೂರುಕಣ್ಣಲ್ಲವೇ, ಹಾಗಾಗಿ ಆಗ ಅವನು ಶಿವ. ಒಬ್ಬನೇ ಇದ್ದಾಗ ಅಸುರಗುರುವಾದ ಶುಕ್ರಾಚಾರ್ಯ (ಒಕ್ಕಣ್ಣ), ಕಣ್ಣೊಂದಿಲ್ಲ ಎಂಬುದನ್ನು ಬಿಟ್ಟರೆ ಅವನು ಮನಥನೇ!)

    ನಕ್ಷತ್ರರಾಶಿಯ ಚಿತ್ರಕವಿತೆ:

    ಕನ್ಯೆಗದೈದು ಜಂಘೆಗಳು ಕನ್ಯೆಗದೇಳು ವಿಶಾಲ ನೇತ್ರಗಳ್
    ಕನ್ಯೆಗೆ ನಾಲ್ಕು ಕಣ್ಣುಗಳು ಕನ್ಯೆಗದಾರು ಕುಚದ್ವಯಂಗಳಯ್
    ಕನ್ಯೆಗೆ ದ್ವಾದಶಂ ತಿಳಿಯೆ ಸಣ್ಣನೆ ಕಟಿಗಳವುಂಟದಂಥಹಾ
    ಕನ್ಯೆಯು ಪ್ರಾಪ್ತಿಸಲ್ ದಶವದಾಗಲು ಬೇಕೊಲೊ ರಂಗನಾಯಕಾ

    ಅಂಗಾಗವರ್ಣನೆ ಮತ್ತು ರಾಶಿಗಳ ಅನ್ವಯದಿಂದ ಅರ್ಥಸಾಧನೆ. ಕನ್ಯಾರಾಶಿಯನ್ನು ಕೇಂದ್ರವಾಗಿ ಗ್ರಹಿಸಿ, ಅಲ್ಲಿಂದ ಐದನೆಯದಾದ ಮಕರರಾಶಿಗೆ, ಅಂದರೆ ಮೊಸಳೆಯಆಕಾರಕ್ಕೆ ಕನ್ಯೆಯ ಜಂಘೆಗಳು, ಏಳನೆಯದಾದ ಮೀನರಾಶಿಗೆ, ಮೀನಾಕ್ಷಿಯಂತೆ, ನೇತ್ರಗಳು. ಆರನೆಯದಾದ ಕುಂಭರಾಶಿಗೆ ಕುಚದ್ವಯಗಳು, ಹನ್ನೆರೆಡನೆಯ ಸಿಂಹರಾಶಿಗೆ , ಸಿಂಹಕಟಿ- ಸಣ್ಣನೆಯ ನಡುವನ್ನು ಹೋಲಿಸಿ, ಹತ್ತನೆಯದಾದ ಮಿಥುನರಾಶಿಯ ಪ್ರಭಾವದಿಂದ ಅಂಥಕನ್ಯೆ ನಿನಗೆ ಪ್ರಾಪ್ತಿಯಾಗಲಿ ಎಂದು ಕವಿಯ ಚಿತ್ರಚಿತ್ರೀಕರಣ.

    ದಶಾವತಾರಗಳನ್ನು ಒಬ್ಬ ಕವಿ ಒಂದು ಚಂಪಕಮಾಲಾವೃತ್ತದಲ್ಲಿ ವರ್ಣಿಸಿ ಸೈಯೆನಿಸಿಕೊಂಡರೆ ಮತ್ತೊಬ್ಬ ಪ್ರಚಂಡ, ಇದಕ್ಕೆ ಚಂಪಕಮಾಲೆಯಂಥಾ ದೊಡ್ಡ ವೃತ್ತಬೇಕೇಕೆ, ಅರ್ಧ ಕಂದಪದ್ಯಸಾಕು ಎಂದು ಹೀಗೆ ಹೇಳಿದನಂತೆ

    ವನಚರಗಳು ನಾಲ್ಕರಿಯಲ್
    ಮನುಜಾಕೃತಿಯೈದು ಮೇಲಿನಶ್ವಾರೋಹೀ
    ನಿನಗಿದೊವಂದನೆ ನರಹರಿ
    ಯನುಪಮಸೌಖ್ಯಂಗಳನ್ನು ನೀಡೈನಮಗಂ

    (ವನ=ನೀರು, ವನಚರ=ಜಲಚರ, ಮತ್ಸ್ಯ, ಕೂರ್ಮ, ವನಚರ= ಅಡವಿಯಪ್ರಾಣಿ= ವರಾಹ, ನೃಸಿಂಹ, ಮನುಜಾಕೃತಿಗಳು ಐದು: ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಅಶ್ವಾರೋಹಿ= ಕಲ್ಕಿ)

    ತಿಗಣೆಯಕಾಟ

    ಶಿವನದ್ರಿಯ ಸೇರಿ ಶಯನ
    ರವಿಚಂದ್ರರುಮನೆಯಲಿರರು ರಾಜೀವಾಕ್ಷನ್
    ಅವಿರಳದಿಂ ಶೇಷನಮೇ
    ಲ್ಪವಳಿಪನೈ ತಿಗಣೆಕಡಿತ ತಡೆಯದೆ ಸುಮತೀ

    • ಸರ್, ತುಂಬಾ ಚೆನ್ನಾಗಿದೆ. ಕನ್ನಡ ಭಾಷಾಂತರಗಳೂ ಸುಂದರ. ಧನ್ಯವಾದಗಳು.

    • ಅನುವಾದದೊಳು೦ ಗಡ ಸೊಗ-
      ಸನು ಭಾಪೆನುವೊಲ್ ತರುತ್ತಲೀಪರಿವಿಧದೊಳ್
      ತಿನಿಸಲ್ ಕನ್ನಡ ರಸಿಕ-
      ರ್ಗೆನಲೀ ಪಣ್ಗಳ ರಸಾಲತೆಯು ಸೆಳೆಪುದಲಾ

    • ಅವಸರದಿಂದಂ ಗೆಯ್ದೊಡ-
      ಮವಸರಮೈನಟ್ಟಿ ಪದ್ಯಮಾಧುರ್ಯಮುತೋ|
      ಅವಸರಣಚ್ಯುತಗತ್ಯಾ
      ಕವನಂಗಳ್ ಕಸವರಂಗಳಾದುವು ನಿಮ್ಮಾ!!!
      (ಸುಮ್ಮನೆ ಅವಸರ ಎಂಬ ಪದದ ವಿವಿಧಾರ್ಥಚ್ಛಾಯೆಗಳು ಕನ್ನಡ-ತೆಲುಗು-ಸಂಸ್ಕೃತಗಳಲ್ಲಿ ಹೇಗೆ ಮಾರ್ಪಡುವುವೆಂಬುದನ್ನು ಸೂಚಿಸಲು ಈ ಪದ್ಯ:-)

      • ಸೋಮರವೀಂದ್ರರ ನುಡಿಗಳು
        ವಾಮದ ಬಲದೆರಡುನಾಡಿಯಾಡುವತೆರದಿಂ
        ಭ್ರಾಮಕ’ರಾಗ’ ಸುಷುಮ್ನಂ
        ನೇಮಿಸಲೊಪ್ಪುಗೆ ಸರಾಗವಾಯ್ತುಸಿರಾಟಂ

  4. ಗಣಿತಾಧಾರಿತ “ಬಿಂದು ಬಂಧ” ಪದ್ಯದ ಸಾಲು:

    ಅಗಣಿತಮದು ರೇಖಾ ಬಿಂ
    ದು ಗುಣಿತವದನಂತ ಬಾಹು ಬಂಧದ ಮಣಿತಂ |
    ಸಗುಣ ಘನ ಗೋಲ ತತ್ವಂ
    ತ್ರಿಗುಣಾತೀತ ಗುರುವಿಂದೆ ಪರಿಧೀ ಸತ್ವಂ ||

    (ಗಣಿತದ ಬಿಂದು,ರೇಖೆ,ಆಕೃತಿ-ತ್ರಿಭುಜ,ಚತುರ್ಭುಜ…
    “ಗೋಲ”ದಂತೆ ಗೋಚರಿಸುವ “ಅನಂತ ಭುಜಾಕೃತಿ”,
    ಮಧ್ಯ ಬಿಂದು – ಆ ಬಿಂದು ಸುತ್ತಿಹ ರೇಖೆಯಿಂದಾದ “ಗೋಲ”,
    ಆ ಗೋಲದ ಪರಿಧಿ = ಪೈ X d (ವ್ಯಾಸ)
    ಪೈ = 3.14 (ತ್ರಿಗುಣಾತೀತ !!)
    ವ್ಯಾಸ = ಗುರು
    ತ್ರಿಗುಣಾತೀತ ಗುರುವಿಂದ ಬರುವ “ಪರಿಧಿ” / ಪರಿ “ಧೀ” ಸತ್ವ )

  5. A friend of mine is getting married. His name is Jagannath and the
    bride’s name is Vishala: She is his niece (ಅಕ್ಕನ ಮಗಳು). I composed
    this verse for the wedding invitation card:
    ಹೆಸರೆನ್ನದಿರ್ದೊಡೇಂ ವರ’ಜಗನ್ನಾಥ’ನೆ
    ನ್ನುಸಿರಾಗಬಂದವಳದಿರೆ ‘ವಿಶಾಲ’|
    ಬಸವಳಿದು ಹುಡುಕಿರಲು ವಿಶ್ವದೆಲ್ಲೆಡೆ ವಧುವ
    ಜಸವು ಹಿತ್ತಲೊಳಾಯ್ತು ಸೋದರಿಕೆಯೊಳ್||

    • I don’t know why, he was not satisfied with the above verse. He asked me to pen another. When I shared it with Sri RG, he said there was no reason for my friend to dislike it. I promptly relayed his opinion to my friend. Nevertheless, he insisted that I pen another verse. This is what I could manage.

      Title: Shawl for Gun

      ಕೊಡುವರೆ ವಿshawlಅಳ ಜgunನಾಥನಿಗೆ ವರಿಸಿ
      ಕಡೆಗಣಿಸುತವಳ ಸೌಖ್ಯವ ಪೆತ್ತವರ್|
      ಗುಡುಗಿಸಿರೆ ಕೋವಿಯನು ಹೊದ್ದಿಪರೆ ಶಾಲವಗೆ
      ಗಿಡಗಕ್ಕೆ ಕೊಟ್ಟವೋಲರಗಿಣಿಯನು||

      • ಪ್ರಸಾದ್ ಸರ್,
        ನಿಮ್ಮ “ಜಯ”ಜgunನಾಥನಿಗೆ ಸಿಕ್ಕಿರುವುದು ವಿ”ಜಯ”ದ ಶಾಲು – ನಮ್ಮ “ವಿಶಾಲು”

    • ಅಹ್ಹಹಾ! ಪಾಪ! ರಾಜಭೋಜ ಎಂದೆಲ್ಲಾ ಹೊಗಳಿಸಿಕೊಳ್ಳ ಬೇಕೆಂದಿದ್ದ ಜಗನ್ನಾಥರಿಗೆ ೨ನೇ ಪದ್ಯದಲ್ಲೂ ಚೆನ್ನಾಗಿ ಕಾಲೆಳೆದಿದ್ದೀರಿ 🙂

      ರಂಗನಾಥಪ್ರಸಾದಮನಾಶಿಸಲ್ಕೆ ನೀಂ
      ಮಂಗನಂ ಮಾಡಿದಿರಿ ವರವೀರನಂ
      ಜಂಗಮದ ಸುಖದಿಂದ ಮನೆಕಾಯಲಾಗುವಗೆ
      ಹೆಂಗಸರ ಕಹಿಮಾತ ಗುಳಿಗೆಕೊಟ್ಟು 🙂

  6. ತುಪ್ಪಬಡಿಸುವ ’ಧಾರಾ’ಳತನ

    ’ಅಭಿನವಕಾಳಿದಾಸ ’ ನಡಿಮಿಂಟಿ ಸರ್ವಮಂಗಳೇಶ್ವರಶಾಸ್ತ್ರಿ (೧೭೫೯-೧೮೩೯) ವೇದವಿದ, ಶಾಸ್ತ್ರಪಾರಂಗತ, ಸರಸ(ವಿರಸ)ಕವಿತಾಧುರೀಣ, ಚಮತ್ಕಾರಶಿರೋಮಣಿ ಹಾಗು ಸದ್ಯಃಸ್ಫೂರ್ತಿಮೂರ್ತಿ. ಸುಲಭಸಂಸ್ಕೃತಾಭ್ಯಾಸ ಬಾಲಸುಬೋಧಾನುವರ್ತಿಯಾಗಲು ರಂಜಕವಾಗಿರಚಿಸಿದ ಶಬ್ದಮಂಜರೀ, ಸಮಾಸಕುಸುಮಾವಳಿಃ, ವಿಭಕ್ತಿವಿಲಾಸಮ್ ಮತ್ತು ರಾಮಾಯಣಸಂಗ್ರಹಂ ಅವರ ಪ್ರಮುಖ ಕೃತಿಗಳು. ಮಹಾಮಹರಾದ ಚಳ್ಲಪಿಳ್ಳವೇಂಕಟಶಾಸ್ತ್ರಿಗಳು, ಪೂಜ್ಯರಾದ ವೇಟೂರಿ ಪ್ರಭಾಕರಶಾಸ್ತ್ರಿಗಳೂ ಅವರ ಶಾಸ್ತ್ರಪಾರಂಗತೆಯನ್ನು ಕುರಿತು ಬರೆದಿದ್ದಾರೆ.

    ಶ್ರೀ ಶಾಸ್ತ್ರಿಗಳ ದಕ್ಷಿಣದೇಶಸಂಚಾರಸಂದರ್ಭವೊಂದರಲ್ಲಿ, ಆನಂದತಾಂಡವಪುರವೆನ್ನುವ ಒಂದು ಅಗ್ರಹಾರಕ್ಕೆ ತಾವು ಬಂದು, ಅಲ್ಲಿನ ಪ್ರಸಿದ್ಧ ತಮಿಳುಪಂಡಿತರನ್ನು ಜಯಿಸಿದರು. ಆದಿನ ಭೋಜನಕ್ಕಾಗಿ ದೊಡ್ದ ತಮಿಳುಬ್ರಾಹ್ಮಣಗೃಹಸ್ಥನಮನೆಗೆ ಬಂದು ಊಟಮಾಡುತ್ತಾ, ಅನ್ನ-ತೊವ್ವೆಯನ್ನು ಕಲೆಸುತ್ತಿದ್ದಾಗ, ತಮಗೆ ತೃಪ್ತಿಕರವಾಗಿ ತುಪ್ಪಬಡಿಸಲಿಲ್ಲವಾದ್ದರಿಂದ ಈ ಶ್ಲೋಕವನ್ನು ಹೇಳಿದರು.

    ಆನಂದತಾಂಡವಪುರೇ ದ್ರವಿಡಸ್ಯಗೇಹೇ
    ಚಿತ್ರಂ ವಸಿಷ್ಟವನಿತಾ ಸಮಮಾಜ್ಯಪ್ರಾತ್ರಂ
    ವಿದ್ಯುಲ್ಲತೇವ ಪರಿನೃತ್ಯತಿ ತತ್ರದರ್ವೀ
    ಧಾರಾಂವಿಲೋಕಯತಿ ಕಶ್ಚನ ಯೋಗಿಸಿದ್ಧಃ

    (ಆನಂದತಾಂಡವಪುರದ ಒಬ್ಬ ದ್ರಾವಿಡನ ಮನೆಯಲ್ಲಿ, ತುಪ್ಪದ ಬಟ್ಟಲು, ವಸಿಷ್ಟವನಿತೆಯಾದ ಅರುಂಧತಿ ನಕ್ಷಂತ್ರದಂತೆ ಇದೆ,( ಸ್ಪಷ್ಟವಾಗಿ ಕಾಣಿಸದು) ಬಡಿಸುವ ದರ್ವಿ(ಚಮಚ) ವಿದ್ಯುಲ್ಲತೆಯಂತೆ ನೃತ್ಯಮಾಡುತ್ತ ಸುಳಿದಡಗುತ್ತಿದೆ. ಇನ್ನು ಆ ತುಪ್ಪದಧಾರೆಯೋ ದಿವ್ಯದೃಷ್ಟಿಯಿರುವ ಮಹಾನುಭಾವರಿಗೆ ಮಾತ್ರ ಗೋಚರ, ಅವರು ಮಾತ್ರವೇನೋಡಬಲ್ಲರು (ಏನೂಕಾಣಿಸುವುದಿಲ್ಲ). ಇದೇನು ವಿಚಿತ್ರ!!

    • ನಡಿಮಿಂಟಿ ಮಂಗಳೇಶ್ವರಶಾಸ್ತ್ರಿಗಳ ಸೊಗಸಾದ ಚಾಟುವನ್ನು ಹಂಚಿಕೊಂಡ ಮೌಳಿಯವರಿಗೆ ವಂದನೆ. ನನ್ನ”ಕವಿತೆಗೊಂದು ಕಥೆ’ ಕೃತಿಯಲ್ಲಿಯೂ ಇವರ ಹಲಕೆಲವೊಂದು ಸಂಗತಿಗಳನ್ನು ವಿವರಿಸಿದ್ದೇನೆ. ಆಸಕ್ತರು ಅಲ್ಲಿ ಕಾಣಬಹುದು. (ಆದರೆ ಸದ್ಯಕ್ಕೆ ಈ ಕೃತಿಯ ಪ್ರತಿಗಳು ಸಿಗುತ್ತಿಲ್ಲ; ಪುನರ್ಮುದ್ರಣವಾಗಿಲ್ಲ:-)
      ತುಪ್ಪಬಡಿಸಾಟದ ಬಡಿವಾರದ ಬಗೆಗೆ ಮತ್ತೊಂದು ಅಜ್ಞಾತಸಂಸೃತಚಾಟುಪದ್ಯವಿಂತಿದೆ:

      ಸಂಚಾರಣೀ ಪಲ್ಲವಿನೀ ಲತೇವ
      ಸೌದಾಮನೀ ಭೂಮಿಗತೇವ ವಾsಥ|
      ಘೃತಸ್ಯ ಧಾರಾ ಪತಿತಾ ನು ಕಿಂ ವಾ
      ದಿವಂ ಗತಾ ವಾಪಿ ಭುವಂ ಗತಾ ವಾ??
      ( ಲತೆಯೋ ಚಲಿಪಾ, ವಿದ್ಯು-
      ಲತೆಯೋ ಮೇಣ್ ಭೂಮಿಗಿಳಿದು ಬಿನ್ನಣಮೆಸೆವಾ?
      ಘೃತಧಾರೆ ಬಟ್ಟಲಿಂದಂ
      ಕ್ಷಿತಿಗೆರಗಿತೊ ಬಾನ್ಗೆ ಪಾರಿತೋ ಜಾರ್ದತ್ತೋ??

  7. ಮೌಳಿಯವರೆ, ಮತ್ತೆ ಸುಂದರಚಾಟುಪದ್ಯವನ್ನು ಕೇಳಿಸಿದಿರಿ. ಧನ್ಯವಾದಗಳು

    ಲಾಸ್ಯಾತಿಲಾಸ್ಯಕವನಂ ರಸಿಕಾಳಿಗೆ ಸ್ವಾ
    ರಸ್ಯಪ್ರಸಾರಕರಣಂ ಗಡಮಾಶುಕಾವ್ಯಂ
    ಹಾಸ್ಯಪ್ರಧಾನ ರಸಪದ್ಯ ವಿರಾಜಿತಂ ಭಾ-
    ಷಾಸ್ಯಂದನಕ್ರಮದಿನಾದುದು ತುಪ್ಪದೂಟಂ

    • ಅನವದ್ಯಮಪ್ಪ ಕವನಂ
      ಘನಶೈಲೀಸುಭಗಂ ರಸಾವಹಂ|
      ಮನಸಾ ಮೆಚ್ಚಿದೆನಿದೆನಾ-
      ನೆನಗಾದತ್ತು ತಪಃಫಲೋದಯಂ||

      • ಕ್ಷಮಿಸಿರಿ; ಎರಡನೆಯ ಪಾದದಲ್ಲಿ ಸ್ವಲ್ಪ ತಿದ್ದುಪಡಿ ಬೇಕಿದೆ:

        ಮನಸಾ ಪ್ರಶಂಸಿಸುವೆನಾ-
        …………………………

  8. ಸ್ವಾರಸ್ಯವೆನಿಸಿದ ಕೆಲವು ಚಾಟುಗಳನ್ನು, ವಿಜ್ಞರಿಗೆ ಪರಿಚಿತವಾದರೂ, ಮಿತ್ರ ರವಿಂದ್ರಸೂಚಿಸಿದಂತೆ, ಇಲ್ಲಿ ಹಂಚಿಕೊಳ್ಳುತ್ತಿರುವುದು ಸೂಕ್ತವಾಗಿದೆಯೆಂದು, ಗಣೇಶರ, ರವಿಸೋಮರ ಒತ್ತಾಸೆಯನುಡಿಗಳಿಂದ ವ್ಯಕ್ತವಾಗುತ್ತಿದೆ. ಮಿಕ್ಕವರೂ ಓದಿ ಆನಂದಿಸಿರುವರೆಂದು ನಂಬುವೆ.
    ಈ ಲಹರಿಯಲ್ಲಿ ಇಲ್ಲೊಂದು ಪ್ರಹೇಳಿಕಾರೂಪದ ಚಾಟು. ಸರಳಸೌಲಭ್ಯಕ್ಕಾಗಿ ಮೂಲಸಂಸ್ಕೃತ, ಕನ್ನಡ ಪದ್ಯವಚನಾನುವಾದದೊಡನೆ :

    “ಆದೌ ಗೃಹೀತ ಪಾಣಿಃ
    ಪಶ್ಚಾದಾರೂಢ ಕಟಿ ಜಘನ ಭಾಗಾ |
    ನಖಮುಖ ಲಾಲನ ಸುಖದಾ”
    “ಸಾ ಕಿಂ ರಾಮಾಸಿ?” “ನೈವ ಭೋಃ ಸಾಮಾ” ||

    “ಕರವಂ ಗ್ರಹಿಸಿಮೊದಲು ನಂ-
    ತರದೊಳ್ ಕಟಿಜಘನಗಳನು ದಕ್ಕಿಸಿಕೊಂಡುಂ
    ಸುರಿಪುದು ಸುಖ ನಖಮುಖದಿಂ”
    ಹರಿಣಾಕ್ಷಿಯೆ? ಅಲ್ಲವೊ ತುರಿಗಜ್ಜಿಯೆ ಮಿತ್ರಾ

    (ಒಬ್ಬ ಯುವಕ ತನ್ನ ಮಿತ್ರನಿಗೆ ಹೀಗೆ ಹೇಳಿದ) ಆದೌ ಗೃಹೀತಪಾಣಿಃ= ಮೊದಲು ಪಾಣಿಗ್ರಹಣಮಾಡಿ, ಪಶ್ಚಾತ್ ಆರೂಢ ಕಟಿ ಜಘನಭಾಗಾ = ನಂತರ ಕಟಿ ಜಘನಭಾಗದ ಮೇಲೆ ಹತ್ತಿ, ನಖಮುಖ ಲಾಲನ ಸುಖದಾ= ಉಗುರಿನ ಕೊನೆಗಳಿಂದ ಚುಚ್ಚಿ ಸುಖವನ್ನು ಕಲ್ಪಿಸುವುದು. (ಇದನ್ನು ಕೇಳಿದ ಮಿತ್ರನ ಪ್ರಶ್ನೆ) ಸಾ ರಾಮಾ ಕಿಂ? = ಹಾಗೆ ಮಾಡಿದ್ದು ನಿನ್ನ ಪ್ರಿಯೆತಾನೆ? (ಯುವಕನ ಸಮಾಧಾನ) ಅಲ್ಲವಯ್ಯಾ ಮಹಾನುಭಾವಾ ! ಗಜ್ಜಿ ತುರಿಕೆಯೋ!!

Leave a Reply to raveendrak Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)