Nov 092012
 

ಸರ, ಸಿರಿ, ಸುರು, ಸೆರೆ – ಇವನ್ನು ಬಳಸಿ, ಅರ್ಜುನ ಗಾಂಡೀವವನ್ನು ಬಿಡಬೇಕಾದ ಸಂದರ್ಭವನ್ನು ಚಂಪಕಮಾಲೆಯಲ್ಲಿ ವಿಸ್ತರಿಸಿ:

ಇದನ್ನು ಮುಂದುವರಿಸಿ ಸರಸರ, ಸಿರಿಸಿರಿ, ಸುರುಸುರು, ಸೆರೆಸೆರೆ – ಎಂದಿಟ್ಟೂ ಪ್ರಯತ್ನಿಸಬಹುದು.

[ ಚಂಪಕಮಾಲೆಯ ನಡೆ – ಸುಲಲಿತಶಾಂತಕಾಂತಸುಮಕೋಮಲಚಂಪಕಮಾಲೆಯಪ್ಪುಗಂ]

ಪದ್ಯನಿದರ್ಶನಂ ೨:
[ಇದಕ್ಕೆ ಮೇಲಿನ ಸಮಸ್ಯೆಗೆ ಸಂಬಂಧವಿಲ್ಲ. ಇದೊಂದು ಉದಾಹರಣೆಯ ಪದ್ಯ. ಪದ್ಯಪಾನಿಗಳು ಇವನ್ನು ಕಂಠಸ್ಥಮಾಡಿಕೊಳ್ಳುವುದಕ್ಕೆ ಯಾವುದೇ ಪೇಟೆಂಟ್ ಗಳ ಅಡ್ಡಿಇಲ್ಲ :-)]
[ಶಕುಂತಲ ನಾಟಕದ ನಾಲ್ಕನೆಯ ಅಂಕದಲ್ಲಿ ಬರುವ ಪದ್ಯದ ಅನುವಾದ – ಅನುವಾದಿಸಿದವರು ಬಸವಪ್ಪಶಾಸ್ತ್ರಿ ]
ಜಲವನದಾವಳೀಂಟಳೆರೆದಲ್ಲದೆ ನಿಮ್ಮಯ ಪಾತೆಗಂಬುವಂ
ತಳಿರ್ಗಳ ಕೊಯ್ಯಳಾವಳೊಲವಿಂ ಮಿಗೆ ಸಿಂಗರದಾಸೆಯುಳ್ಳೊಡಂ
ಅಲರ್ಗಳ ತಾಳೆ ನೀವು ಮೊದಲುತ್ಸವವಾಂತಪಳಾವಳಾ ಶಕುಂ-
ತಳೆ ಪತಿಸದ್ಮಕೈದಿದಪಳಾಕೆಗನುಜ್ಞೆಯ ನೀವುದೆಲ್ಲರುಂ||
[ಜಲವನ್ + ಅದಾವಳ್ + ಈಂಟಳ್ {ಕುಡಿಯಳ್} ಎರೆದಲ್ಲದೆ ನಿಮ್ಮಯ ಪಾತೆಗೆ ಅಂಬುವಂ, ಅಲರ್ = ಅರಳಿದ ಹೂವು.] ತಳಿರ್ಗಳ, ಅಲರ್ಗಳ – ಇಲ್ಲಿ ಶಿಥಿಲದ್ವಿತ್ವವಿದೆ.

  30 Responses to “ಪದ್ಯಸಪ್ತಾಹ – ೪೫; ದತ್ತಪದಿ”

  1. ಸರಸ ರಮಾವಿನೋದಿಹರಿ ಸಾರಥಿಯಾಗಿರೆ ತೇರನತ್ತಹಾ
    ಯ್ಸಿರಿ, ಸಿರಿಮಲ್ಲಭೂಪಬಲ ನೋಳ್ಪೆನನಲ್, ರಥನಿಲ್ಲೆ ಮಧ್ಯದೊಳ್,
    ಸೆರೆ ಸೆರೆಸಿಕ್ಕಿದಂತೆ, ನರ ಬಾಂಧವ ಮಿತ್ರ ಜನಾಳಿ ಮೋಹದಿಂ
    ಸುರು ಸುರುಳಾಗೆಬಲ್ಮೆ, ನಡುಗುತ್ತ ಬೆಮರ್ದನು ಬೀಳೆ ಗಾಂಡಿವಂ

    (ತೇರನತ್ತಹಾಯ್ಸಿರಿ = ಉಭಯಸೈನದ ಮಧ್ಯಕ್ಕೆ ರಥವನ್ನು ನಡೆಸಿರಿ ಎಂದು ಅರ್ಜುನ ಹೇಳಿದಾಗ,
    ಸೆರೆಸೆರೆಸಿಕ್ಕಿದಂತಾಗೆ= ಗಂಟಲಿನ ನರ ಸೇದುಹೋಗಿ, ಸೆರೆ (ಮದ್ಯ) ಸೆರೆಸಿಕ್ಕಿದಂತೆ(ಅಹಂಕಾರದ ಅಮಲಿಳಿವ ಮೊದಲಹಂತ), ಸೆರೆಯೇ ಸೆರೆಸಿಕ್ಕಿದಂತೆ ಎಂದೂ ಅರ್ಥಮಾಡಬಹುದು (ಒಬ್ಬನ ಸತ್ವಪರೀಕ್ಷೆ ಮೊದಲಬಾರಿಗೆ ತನ್ನ ಸಂಕುಚಿತ ವ್ಯಕ್ತಿಶಭಾವಬೀಜಗಳು ಬೆಂದು, ಅಂಹಂಕಾರದ ಅಮಲು ಇಳಿಯುವ criticality on crossroads ನ ಸತ್ಯದ ಅನುಭವ), ಸುರುಸುರುಳಾಗೆ = ಮುದುಡು, ಕುಂದು, ಬಾಡು)

  2. ಸರಸರನೆಂದು ವಹ್ನಿಯಪರಾಂಬುಧಿಯಿಂದೊಗೆತಂದು ಪಾರ್ಥನೊಳ್
    ಸಿರಿಸಿರಿಯಾಗಿ ನಕ್ಕು ಧನುವಂ ತೊರೆಯೆಂದಿರಲುರ್ವಿವಂದ ಗೋಣ್-
    ಸೆರೆ, ಸೆರೆಗೊಂಡ ಗಾಂಡಿವದ ನೇಹಮನೊಯ್ಯನೆ ಸುಯ್ಯಲಿತ್ತು ಮಾ-
    ಸುರುಸುರುಚಿಪ್ರಚಂಡಭುಜದಂಡ! ಎನುತ್ತುಮದೆಂತೊ ನೀಗುಗುಂ.

    ಇದು ಮಹಾಭಾರತದ ಮಹಾಪ್ರಾಸ್ಥಾನಿಕಪರ್ವದಲ್ಲಿ ಬರುವ ಘಟನೆಯನ್ನು ಆಧರಿಸಿ ರೂಪುಗೊಂಡ ಪರಿಹಾರ:
    ಪಾಂಡವರೆಲ್ಲ ಮಹಾಪ್ರಸ್ಥಾನಕ್ಕೆ ತೆರಳುವಾಗ ಅರ್ಜುನನ ಭುಜದ ಮೇಲೆ ಇನ್ನೂ ಗಾಂಡಿ(ಡೀ)ವವಿದ್ದಿತು. ಆದರೆ ಆಗ ಅವನಿಗದನ್ನು ಬಳಸುವ ಬಲವೇ ಇರಲಿಲ್ಲ (ಶ್ರೀಕೃಷ್ಣನ ನಿರ್ಯಾಣದ ಬಳಿಕ ಅವನ ಶಕ್ತಿಯೇ ಬತ್ತಿದಂತಾಗಿತ್ತು).
    ಐವರೂ ಹಸ್ತಿನೆಯಿಂದ ಉತ್ತರದತ್ತ ಹೊರಟು ಮತ್ತೆ ಪಶ್ಚಿಮಕ್ಕೆ ತಿರುಗಿ ದ್ವಾರಾವತಿಯತ್ತ ಬರುತ್ತಾರೆ. ಮುಳುಗಡೆಗೆ ಒಳಗಾಗಿದ್ದ ಆ ನಗರದ ಅವಶೇಷಗಳನ್ನು ಕಾಣುತ್ತ ಬರುವಾಗ ಸಾಗರಗರ್ಭದಿಂದ ಎದ್ದ ಅಗ್ನಿಯು ತಾನು ಹಿಂದೆ ವರುಣನಿಂದ ಪಡೆದು ತಂದು ಅರ್ಜುನನಿಗೆ ನೀಡಿದ್ದ ಗಾಂದೀವ-ಅಕ್ಷಯತೂಣೀರಗಳನ್ನು ಇದೀಗ ಸಮುದ್ರದಲ್ಲಿ ಹಾಕಬೇಕೆನ್ನುತಾನೆ. ಆಗ ಅರ್ಜುನನು ಅದನ್ನು ಶಿರಸಾವಹಿಸುತ್ತಾನೆ. ಈ ಸಂದರ್ಭವೇ
    ಪ್ರಸ್ತುತಪದ್ಯದ ಹಿನ್ನೆಲೆ. ಈ ಪದ್ಯದ ತಾತ್ಪರ್ಯವಿಂತಿದೆ:

    ಸರಸರನೆ ಪಶ್ಚಿಮಸಾಗರದ (ಅಪರಾಂಭುಧಿ) ಒಡಲಿನಿಂದ ಹೊಮ್ಮಿದ ಅಗ್ನಿಯು (ವಹ್ನಿ)
    ಅರ್ಜುನನಿಗೆ ಧನುಸ್ತ್ಯಾಗದ ಆದೇಶವನ್ನು ನಗುನಗುತ್ತ ನೀಡಿದಾಗ ಅವನು ಗಂಟಲಸೆರೆ(ನರ) ಉಬ್ಬಿಬಂದು ಕೈಯಲ್ಲಿದ್ದ (ಸೆರೆಗೊಂಡ, ಸೆರೆ ಎಂಬುದಕ್ಕೆ ಅಂಜಲಿ ಎನ್ನುವ ಅರ್ಥವಿದೆ) ಬಿಲ್ಲನ್ನು ತೊರೆಯುತ್ತಾನೆ. ಈವರೆಗೆ ಅದರೊಡನೆ ಇದ್ದುದರ ಪ್ರೀತಿಸಂಕೇತವಾಗಿ ಕೊರಳ ಸೆರೆಯುಕ್ಕಿಬಂದ ದುಃಖವು “ಎಲೈ! ಹೊಳೆಹೊಳೆಯುವ (ಉರು+ಸುರುಚಿ+ಪ್ರಚಂಡ)ಭುಜವೇ! ನೀನಿನ್ನು ಮಾಸು (ಅರ್ಥಾತ್ ಗಾಂಡೀವವಿಲ್ಲದೆ ಮಂಕಾಗು)” ಎಂದು ಉದ್ಗರಿಸುತ್ತ ಅದು ಹೇಗೆಯೋ ಬಲುನೋವಿನಿಂದ ಆ ಬಿಲ್ಲನ್ನು ತೊರೆಯುವುದು.

    ಅಯ್ಯಾ! ರವೀಂದ್ರಹೊಳ್ಳ ಮಹಾಶಯ!! ಈ ಪರಿಯಲ್ಲಿ ನೋಡಲಿಕ್ಕೆ ತೀರ ಸರಳವಾದ, ಆದರೆ ವ್ಯಾಕರಣಶುದ್ಧವಾಗಿ ಪರಿಹರಿಸಲು ಬಲು ಕಷ್ಟವಾದ ದತ್ತಪದಿಯನ್ನು ಸವಾಲಾಗಿ ಒಡ್ಡಿದರೆ ಸಾಮಾನ್ಯಪದ್ಯಪಾನಿಗಳ ಪಾಡೇನು? ಚಂದ್ರಮೌಳಿಯವರೇನೋ ಸೊಗಸಾಗಿ ಪೂರಯ್ಸಿದ್ದಾರೆ. ಆದರೆ ನನಗಂತೂ “ಸುರುಸುರು” ಸಾಕಷ್ಟು ತ್ರಾಸ ನೀಡಿತು; ಸುರು ಮಾಡ್ಲಿಕ್ಕೇ ಭಾರೀ ಹರ್ಕತ್ ಆತಲ್ಲೋ ಮಾರಾಯ!!! 🙂

    • ಗಣೇಶರೇ,
      ಪದ್ಯವನ್ನು ಬರೆಯದೇ, ಸಮಸ್ಯೆಕೊಟ್ಟು ಈ ಪ್ರಮಾದವಾಯ್ತು. ಪದ್ಯಪಾನಿಗಳಲ್ಲಿ ಕ್ಷಮೆಕೋರುತ್ತ, ಸಮಸ್ಯಯನ್ನು ಸ್ವಲ್ಪ ಬದಲಿಸಿದ್ದೇನೆ.

  3. ನನ್ನ ಮೊದಲನೆಯ ಚಂಪಕಮಾಲೆ

    ಸರಸರದಿ೦ದೆ ಧಾವಿಸುತೆ ಬಾಣಮೆನಲ್ಕೆನೆಕ್ಲೀಬಭಾವಗಳ್
    ಸಿರಿಸಿರಿಯೆ೦ದೆ ಬಾ೦ಧವರನು೦ ಕೊನೆಗಾಣಿಪುದೀ ವಿನಾಶದಾ
    ಸುರು, ಸುರುಳಿಟ್ಟಿತೈ ಒಡಲ ರಾಜಸಕ್ಷಾತ್ರವಿಶೇಷವೊಡ್ಡಿತಯ್
    ಸೆರೆ, ಸೆರೆಯಾಗುತಾರ್ತಮನದಿ೦ ಬಿಡಲಸ್ತ್ರಮನ೦ ಧನ೦ಜಯ೦

    ಸಿರಿಸಿರಿಯೆ೦ದೆ – ಸ೦ಪತ್ತು… ಸ೦ಪತ್ತು… ಎ೦ದು
    ಸುರು – ಶಬ್ಧ
    ಸೆರೆ – ಬೇಡುವ ಭ೦ಗಿ

    • ಸೋಮ, ಮಾತ್ರೆಗಳು ಕೆಲವುಕಡೆ ಜಾಸ್ತಿಯಾಗಿದೆ. ಚಂಪಕಮಾಲೆಯಲ್ಲಿ ಯೆಲ್ಲೂ ೨ ಗುರುಗಳು ಒಟ್ಟಿಗೆ ಕಾಣಿಸುವುದಿಲ್ಲ. ೧ ಮತ್ತು ೩ನೇ ಸಾಲಿನಲ್ಲಿ ಸ್ವಲ್ಪ ತಪ್ಪಾಗಿದೆ.

    • ಕಷ್ಟವಾದುದನ್ನು ಯತ್ನಿಸಿದ ಶ್ರೇಯಸ್ಸು ಅವಿಸ್ಮಾರ್ಯ. ಆದರೆ ಹೊಳ್ಲ ಹೇಳಿದಂತೆ ಸಾಕಷ್ಟು ಸವರಣೆಗಳಿವೆ.

  4. ಸರಸ ರಸೇಂದುವಂ ತೊರೆವ ಯಾಮಿನಿಯೋಲ್ ಮೊಗಕಪ್ಪಡರ್ದು ಮೆಯ್-
    ಸಿರಿ ಸಿರಿಗುಂದಿ ಬೆಂದು ತನುವಿಂ ಧನುವಂ ತೆಗೆದಿಟ್ಟು ಪಾರ್ಥನಾ
    ಸಿರಿಸರಿಗಂಗೆ ತನ್ನ ನಮನಂಗಳ ಸಲ್ಲಿಸಿ ಮೀಂಟಿ ಪೇಳ್ದನೀ
    ’ಸೆರೆ ಸೆರೆಯಲ್ತು ಮಿತ್ರ, ಯಮನೌತಣಕಿಟ್ಟಿಹ ವರ್ಷಘಂಟೆಯೈ’

    [ಸರಿಗ = ಸಮಾನವಯಸ್ಕ, ಸ್ನೇಹಿ.]

    • ಇದು, ಅರ್ಜುನ ಬನ್ನಿಯಮರದಲ್ಲಿ, ಗಾಂಡೀವವನ್ನು ಬಿಡಬೇಕಾದ ಸಂದರ್ಭ. ವರ್ಷಘಂಟೆ = ೧ ವರ್ಷಕ್ಕೆ SET ಮಾಡಿದ ALARM CLOCK ಎಂದು ಹೇಳುವ ಯತ್ನ.

    • ತುಂಬ ಒಳ್ಳೆಯ ಪದ್ಯ.ಶೈಲಿ ಮತ್ತು ಭಾವಗಳೆರಡರಿಂದಲೂ ಸೊಗಸಿದೆ. ಆದರೆ ಸರಸರಸೇಂದು ಎನ್ನುವಲ್ಲಿ ಪುನರುಕ್ತಿ ಬರಲಿಲ್ಲವೇ? (ಸ+ರಸ, ರಸ+ಇಂದು)
      ಉಳಿದಂತೆ ದತ್ತಪದಗಳ ಗರ್ಭೀಕರಣ ಕೌಶಲದಿಂದ ಕೂಡಿದೆ.

      • ಸರಸ = ಸುಂದರವಾದ, ರಸೇಂದು ರಸಕ್ಕೆ ಅಮೃತವೆಂದಿದೆ. ರಸಮಂ ಸೂಸುವ ಇಂದು ಎಂದು ಸಮಾಸ ಮಾಡಬಹುದೇ?

      • ಆಗದೆನಿಸುತ್ತದೆ. ಏಕೆಂದರೆ ಸರಸ ಎಂಬುದೇ ರಸದಿಂದ ಹೊಮ್ಮಿದ ಪದ:-) ಇದನ್ನು ತಾನೇ ನಾನು contest ಮಾಡಿದ್ದು:-)

  5. ಸರಸರ ಸಂಚ ಸಂಕುಲಿತ ಸಂಗರ ಸಂಗತ ಸಂತನರ್ಜುನಂ
    ಸಿರಿಸಿರಿ ಸಾರ ಸಂಪದದ ಸಂಯುಗ ಸಂಯಮ ಸೂಸೆ ಸಾಹಸಂ
    ಸುರುಸುರು ಸೂನು ಸೂತನೊಡೆ ಸೂಚಿತ ಸೂತಕ ಸೂದ ಸಂಭವಂ
    ಸೆರೆಸೆರೆ ಸಾರಿ ಸಂತಪಿಸಿ ಸಾತ್ವಿಕ ಕಿತ್ತೊಗೆ ಬಿಲ್ಲು ಬಾಣವಂ |

    (ಸರಸರ =ಆರಂಭದ ಧ್ವನಿ, ಸಿರಿ= ಸಂಪತ್ತು, ಸುರು= ಪ್ರಾರಂಭ,ಮೊದಮೊದಲು, ಸೆರೆ= ಚಾಚಿದ ಕೈ)
    “ಸ” ಅಕ್ಷರತೆ (ಕಲಿಕೆ)ಯಲ್ಲಿ ಸಂದ “ಸಂಪಿಗೆಮಾಲೆ”. ಕುತೂಹಲದಿಂದ ಮೂಡಿದ್ದು. ಅಸಂಬದ್ಧವೆನಿಸಿದರೆ ಕ್ಷಮಿಸಿ.
    ಅರ್ಜುನ / ಬಿಲ್ಲುಬಾಣ ಕ್ಕೆ ಸಮನಾದ “ಸ” ಅಕ್ಷರ ಪದ ಸಿಗಲಿಲ್ಲ.

    • ಪ್ರಯತ್ನ ಸ್ತುತ್ಯ. ಆದರೆ ಅರ್ಥ ಮಾತ್ರ ತಿಳಿಯುತ್ತಿಲ್ಲ.:-) ಜೊತೆಗೆ ಜಿದ್ದಿನಿಂದ ಸಕಾರವನ್ನು ಆದ್ಯಂತ ಬಳಸಲೇಬೇಕೆಂಬ ಗೀಳು ಬೇಕಿಲ್ಲ:-)

      • ಗಣೇಶ್ ಸರ್,
        ಅರ್ಜುನನಿಗೆ “ಸವ್ಯಸಾಚಿ” ಪದ ದೊರೆತು, 1ನೇ ಸಾಲನ್ನು “ಸವ್ಯಸಾಚಿಯುಂ”(ನಾನನಾನನಾ) ಎಂದು, 4ನೇ ಸಾಲನ್ನ “ತನ್ನ ಸಾಚಿಯಂ”(ನಾನನಾನನಾ) ಎಂದು ಬದಲಿಸುವ ಸಂಭ್ರಮದಲ್ಲಿದ್ದೆ. ಪದ್ಯಪಾನದಲ್ಲಿ “ಅರ್ಜುನ ವಿಷಾದ ಯೋಗ” ಉಷಾ ವಿಷಮ ಯೋಗವಾಗಿಬಿಟ್ಟಿದೆ !
        “ಆರಂಭದ ಶಂಖ ಧ್ವನಿಯ ಗಾಬರಿತುಂಬಿದ ಯುದ್ಧ ಕೂಟದ ನಡುವೆ “ಸಂಯಮಿ”ಅರ್ಜುನ, ಎಲ್ಲ ಸಿರಿಸಂಪತ್ತುಗಳ ನಡುವೆ ಸಂಭವಿಸಲಿರುವ ವಧೆ(ಸೂದ)ಯ
        ಸೂತಕವನ್ನು, ತನ್ನ ಪ್ರೇರಕ(ಸೂನು) ಸೂತ್ರಧಾರಿ ಸಾರಥಿ(ಸೂತ)ಗೆ ತಿಳಿಸಿ, ಶಸ್ತ್ರಾಸ್ತ್ರ ತ್ಯಜಿಸಿ ಕೈಚಾಚಿ ವಿಷಾಧಿಸುವ” ಚಿತ್ರಣಕ್ಕೆ ಪ್ರಯತ್ನಿಸಿದ್ದು .
        ವೃತ್ತದಲ್ಲಿ ಪ್ರಥಮ ಪ್ರಯತ್ನ, ಕ್ಷಮಿಸಿರಿ. ಹಳೆಗನ್ನಡ “ವಿಭಕ್ತಿಪ್ರತ್ಯಯ” ಮತ್ತು ಕ್ರಿಯಾಪದಗಳ(ಕಾಲ) ಸೂಕ್ತರೂಪಗಳ ಬಗ್ಗೆ ದಯವಿಟ್ಟು ತಿಳಿಸಿಕೊಡಿ.

        • ಹಳಗನ್ನಡದ ವ್ಯಾಕರಣಸೂಕ್ಷ್ಮಗಳ ಬಗೆಗೆ ಬೇಗದಲ್ಲಿಯೇ ಪಾಠಗಳನ್ನು ಮಾಡೋಣ. ನಿಮ್ಮ ಪ್ರಥಮವೃತ್ತನಿರ್ವಾಹಪ್ರಯತ್ನವು ಸರ್ವಥಾ ಸ್ತುತ್ಯ.

          • ಧನ್ಯವಾದಗಳು ಗಣೇಶ್ ಸರ್. ನಿಮ್ಮ ಮಾತುಗಳು ಸಂತಸ ತಂದಿವೆ.

  6. ಸರಸರನಾರಮೇಲೆ ಸಲೆ ಸಾರ್ದೆಯೊ ಪೋರಲು ಪಾರ್ಥ ನಿಲ್ಲುನಿಲ್ |
    ಸಿರಿಸಿರಿಗಾಗಿ ಸೋದರರ ಜೀವವ ಜೀವುವೆಯೇನೊ ಸೊಲ್ಲುಸೊಲ್ |
    ಸುರುಸುರು ಪತ್ತಿ ಕತ್ತಿ ಸುಳಿಸುತ್ತಿತು ಮುತ್ತಿತು ವೈರ್ಯದಾ ಕನಲ್ |
    ಸೆರೆಸೆರೆಯಾದೆ ರೋಷಕಿದು ಛೀಯೆನೆ ಚಿತ್ತವೆನಲ್ಕೆ ಬಿಟ್ಟ ಬಿಲ್ ||

    • ಶ್ರೀಕಾಂತರೇ, ವೀರೇಂದ್ರ ಸೆಹ್ವಾಗ್ ಮೊದಲ ಪಂದ್ಯಗಳಲ್ಲೇ ಶತಕ ಸಿಡಿಸಿದಂತೆ, ಇಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೀರ.
      ತುಂಬಾ ಸಂತೋಷ. ಒಂದೂ ತಪ್ಪುಗಳಿಲ್ಲದೇ, ಚಂಪಕಮಾಲೆಯನ್ನು ಹೆಣೆದಿರುವುದು, ಸರಸ್ವತಿಗೆ ಪ್ರಿಯವಾಗ ಬಲ್ಲದು.
      ಇಲ್ಲಿ ಪುನರುಕ್ತಿ ದೋಷ ನುಸುಳಿದೆ. ಈ ದತ್ತಪದಿಯಲ್ಲಿ ಪುನರುಕ್ತಿದೋಷವನ್ನು ಹೋಗಲಾಡಿಸುವುದು ಸ್ವಾರಸ್ಯವನ್ನು ಇಮ್ಮಡಿಸುತ್ತದೆ.
      ಇನ್ನೊಮ್ಮೆ, ಬದಲಿಸಿದ ದತ್ತಪದಿಯೊಂದಿಗೆ ಪದ್ಯವನ್ನು ಸವರಿಸಿ,

      • ನಿಜಕ್ಕೂ ಈ ಪದ್ಯವು ಮೆಚ್ಚುವಂತಿದೆ. ಹೊಳ್ಳರೆಂದಂತೆ ಪುನರುಕ್ತಿಯನ್ನು ಪರಿಹರಿಸಿದರೆ ಮತ್ತೂ ಒಳಿತು. ಆದರೆ ಇಡಿಯ ಪದ್ಯವನ್ನು ಪುನರುಕ್ತಪದಗಳಿಂದ ತುಂಬುವ ಮೂಲಕ ಹಾಗೂ ತ್ವರೆ, ರೋಷ, ಛೇಡಿಸುವಿಕೆ ಮುಂತಾದ ಉದ್ವಿಗ್ನಭಾವಗಳನ್ನು ತರುವ ಮೂಲಕ ಈ ಪುನರುಕ್ತಿಗೆ ಔಚಿತ್ಯವನ್ನು ತಂದ ನಿಮ್ಮ ಜಾಣ್ಮೆ ತುಂಬ ಸ್ತುತ್ಯ. ನಿಮಗೆ ಮತ್ತೂ ಒಳ್ಳೆಯ ಪದ್ಯರಚನೆಗೆ ಶಕ್ತಿಯಿದೆ.

        • ಹೊಳ್ಳರೆ, ಗಣೇಶರೆ
          ನಿಮ್ಮ ಮೆಚ್ಚುಗೆಯ ಮಾತುಗಳು ಹುಮ್ಮಸ್ಸನಿಮ್ಮಡಿಸಿತು. ಗಣೇಶರು ಹೇಳಿದಂತೆ ಇಲ್ಲಿ ಪುನರುಕ್ತಿಯನ್ನು ಭಾವೋತ್ಕಟತೆ ಪ್ರಕಟಿಸಲು ಬಳಸಿದ್ದೇನೆ. (ಸಿರಿಸಿರಿ, ಸೆರೆಸೆರೆ, ಸೊಲ್ಲುಸೊಲ್, ನಿಲ್ಲುನಿಲ್).
          ಅದನ್ನು ಬದಲಿಸಿದರೆ ಆ ಭಾವ ಕುಂದಿ ಮನಸ್ಸಾಕ್ಷಿ ಗಟ್ಟಿಸಿ, ಮೂದಲಿಸಿ, ಪ್ರಚೋದಿಸಿ ಹೇಳುವುದನ್ನು ಬಿಟ್ಟು ದೈನ್ಯದಿಂದ ಬೇಡಿ ಕೊಳ್ಳುವಂತೆ ಭಾಸವಾಯಿತು. ಅದಕ್ಕೆ ಸುಮನಾಗಿಬಿಟ್ಟೆ. ಅರ್ಜುನನಂತಹ ಕ್ಷತ್ರಿಯನ ಮನಸ್ಸಾಕ್ಷಿಗೂ ಕ್ಷತ್ರಿಯಗುಣ ಇರಬೇಕಲ್ಲವೆ!

          • ನಿಮ್ಮ ಮಾತಿಗ ಮನ್ನಣೆ ಕೊಡದೆ ಇರಲಾದೀತೆ. ಬದಲಿಸಿದ್ದೀನಿ, ಇದರ ತಪ್ಪೊಪ್ಪುಗಳನ್ನು ಸ್ವಲ್ಪ ನೋಡ್ತೀರ

            ಸರಸರನಾರಮೇಲೆ ಸಲೆ ಸಾರ್ವೆಯೊ ಪೋರಲು ಪಾರ್ಥ ತಾಳು ನಿಲ್ |
            ಸಿರಿಶಿರಿಗಾಗಿ ಸೋದರರ ಜೀವವ ಜಿಯುವೆಯೇನೊ ಕೇಳುಸೊಲ್ |
            ಸುರುಸುರು ಪತ್ತಿ ಕತ್ತಿ ಸುಳಿಸುತ್ತಿತು ಮುತ್ತಿತು ವೈರ್ಯದಾ ಕನಲ್ |
            ಸೆರೆಸೆರೆಯಾಯ್ತು ರೋಷಕಿದು ಛೀಯೆನೆ ಚಿತ್ತವೆನಲ್ಕೆ ಬಿಟ್ಟ ಬಿಲ್ ||

            ಶಿರಿ- ಬಾಣ, ಖಡ್ಗ (ಕ್ಷಾತ್ರ ಧರ್ಮಕ್ಕಾಗಿ ಎಂದಿಲ್ಲಿ ಸುಚನೆ)
            ಸೊಲ್- ಮಾತು, ಬುದ್ಧಿಮಾತು
            ಸೆರೆ- ನರನಾಡಿ
            ಕೊನೆಯ ಪಾದದಲ್ಲಿ “ಸೆರೆಸೆರೆಯಾಯ್ತು ರೋಷಕೆರೆ” ಎಂದೂ ಹಾಕಬಹುದು (ನರನರವೂ ರೋಷಕ್ಕೆ ಆಹಾರವಾಯಿತು ಎನ್ನುವರ್ಥದಲ್ಲಿ)

          • ಎರಡನೆಯ ಪಾದದಲ್ಲಿ “ಜೀವುವೆ” ಎಂದಿರಬೇಕು, “ಜಿಯುವೆ” ಎಂದು ತಪ್ಪಾಗಿ ಒತ್ತಿಬಿಟ್ಟಿದ್ದೀನಿ.

  7. ಹೊಳ್ಳ,
    ನಾನಿನ್ನೂ ಪದ್ಯರಚಿಸಲು ಪ್ರಯತ್ನಿಸಿಲ್ಲ. ದತ್ತಪದಗಳು ತುಸು ಕಷ್ಟ ಎನಿಸಿ, ನೀವು ಪದ್ಯರಚಿಸುವ ಮುನ್ನವೇ ನನ್ನ ಪ್ರತಿಕ್ರಿಯೆಯನ್ನು ಹಾಕಬೇಕೆಂದು ಎಣಿಸಿದ್ದೆ. ಇಷ್ಟರಲ್ಲಿ ನೀವು ಪದ್ಯ ರಚಿಸಿಬಿಟ್ಟಿದ್ದರೂ, ನನ್ನ ಈ ತ್ರಿಪದಿ waste ಆಗಬಾರದೆಂದು ಹಾಕಿದ್ದೇನೆ.

    ದತ್ತಪದಂಗಳನಿತ್ತಿರೊ ಸುಮ್ಮನೆ
    ಹೊತ್ತಿಗೆ ಮೂರು ಮೊಳವನ್ನೂ| ನೇಯದೆ
    ನೆತ್ತರು ಕಾರಿ ಸಾಯ್ಲೆಂದು||

  8. Honed:
    ದತ್ತಪದಂಗಳನಿತ್ತಿರೊ ನೇಯದೆ
    ಹೊತ್ತಿಗೆ ಮೂರ್ಮಳವ ನೀವು| ನಾವೆಲ್ಲ
    ನೆತ್ತರು ಕಾರಿ ಸಾಯ್ಲೆಂದು||

    • ಆಹ್ಹಹ್ಹಾ! ಗುರುಗಳು ಈಗಾಗಲೇ ’ಸುರುಸುರು’ಬತ್ತಿಯನ್ನಿಟ್ಟಿದ್ದಾಗಿದೆ. ಈಗ ನಿಮ್ಮ ಸರದಿಯೋ?
      ನಾನು ಕೇಳಿದ್ದು, ನಾಲ್ಕು ಮೊಳ ಚಂಪಕಮಾಲೆಯನ್ನು. ನೀವು ಮೂರು ಮೊಳಕ್ಕೇ ಸಾವಿನ ಮಾತಾಡುತ್ತಿದ್ದೀರಿ..ಗೊತ್ತಾಗಲಿಲ್ಲ 🙂
      ಬದಲಿಸಿದ ದತ್ತಪದಿಯನ್ನು ಪರಿಹರಿಸಿ, ಪದ್ಯಪಾನದಲ್ಲಿ ಸತ್ತ ಸೂತಕ ಬೇಡ, ಹೊಸ ಪದ್ಯಹುಟ್ಟಿದ ಸೂತಕವೇ ಸಾಕು 🙂

    • ಮೊತ್ತಮೊದಲಿನಲ್ಲಿ ತೆತ್ತಿದ್ದ ಪದ್ಯವೇ
      ಚಿತ್ತಾಗದಂತೆ ಸಂದಿತ್ತು – ರಂಪಣ್ಣ!!
      ಮತ್ತೆ ತಿದ್ದಿದ್ದು ತಪ್ಪಾಯ್ತು!! 🙂

      ದಯಮಾಡಿ ತ್ರಿಪದಿಯ ಲಕ್ಷಣವನ್ನು ನೋಡಿ. ನಿಮ್ಮ ತಿದ್ದುಗೆಯಲ್ಲಿ ಸಾಂಗತ್ಯದ ಸೂತಕ ಬಂದಿದೆ:-)

    • ೧) ನೀವು ಮಾದರಿಗಾದರೂ ಸಂಜೆಗೆ ಮೂರು ಮೊಳ ನೇಯ್ದಿದ್ದರೆ, ಶ್ರೀ ಗಣೇಶರಾಗಲೀ ನಾನಾಗಲೀ ಗಪ್-ಚಿಪ್ ಎನ್ನುತ್ತಿರಲಿಲ್ಲ; ಎನ್ನಲು ಅವಕಾಶವಿರುತ್ತಿರಲಿಲ್ಲ 😉
      ೨) Idiomatic ‘ಮೂರುಮೊಳ’ಕ್ಕೆ ಸಾಲುಗಳೂ ಮೂರು (ತ್ರಿಪದಿ).
      ೩) ಸಾವಿನದನ್ನು ಸೂತಕವೆನ್ನುತ್ತಾರೆ, ಸರಿ. ಹುಟ್ಟಿನದನ್ನು ‘ಪುರುಡು’ ಎನ್ನುತ್ತಾರೆ. ವಿಪರ್ಯಾಸವೆಂದರೆ ಎರಡೂ ೧೧ ದಿನಗಳವು!
      ೪) ನನ್ನ ಪದ್ಯ ಇನ್ನೇನು ಬಂತು.

  9. ಅರ್ಜುನ ಗಾಂಡೀವವನ್ನು ತ್ಯಾಗಮಾಡುವ ಮತ್ತೊಂದು ಸಂದರ್ಭವನ್ನು ಕಲ್ಪಿಸಿ ರಚಿಸಿದ್ದೀನಿ. ಅವನು ತನ್ನ ಪುಟ್ಟ ಮಗನನ್ನು ಮುದ್ದಿಸಲೋಸುಗ ತನ್ನ ಆಯುಧಗಳನ್ನು ತ್ಯಜಿಸುವನೆನ್ನುವಂತೆ.

    ಸರಸರ ಸಪ್ಪಳಿಕ್ಕುತಲಿ ಸಾರಿದ ಸೂನುವ ಕೂಗಿ ಬಾರೆನೆ |
    ಸಿರಿಸಿರಿಯಾದ ನಿನ್ನ ಮೊಗ ಚಿಪ್ಪಲಿ ಪುಟ್ಟಿದ ಮುತ್ತ ತಾರೆನೆ |
    ಸುರುಸುರು ಚುಚ್ಚಿ ಘಾಸಿಗೊಳಿಸುಂ ಕಣೆಜೇಯೆನೆ ಕಂದ ಮಾರೆನೆ |
    ಸೆರೆಸೆರೆಯಳ್ಕರುಕ್ಕುತಲಿ ಜಿಷ್ಣು ಧನುಶ್ಕಣೆ ಬಿಟ್ಟು ತೀರನೆ ||

    ಜೇ- ಬಿಲ್ಲಿನ ಹೆದೆ
    ಮಾರೆನೆ= ಮಾರು+ ಎನೆ; ಮಾರು= ಉತ್ತರ, ಪ್ರತಿನುಡಿ
    ಸೆರೆಸೆರೆ- ನರನಾಡಿಗಳಲ್ಲೆಲ್ಲ
    ಅಳ್ಕರು- ಪ್ರೀತಿ

  10. During the Mahabharata war, when Yudhishtira asked Arjuna whether he was done with Karna, he answered in the negative. Yudhishtira was upset and derided Arjuna saying that he was incapable of wielding the Gandiva; better give it to Krishna who would do it for him! Offended, Arjuna took out his sword to kill Yudhishtira, as he had earlier on taken an oath to kill anyone that told him to part with the Gandiva. Krishna said that it was not wise to adhere to dharma blindly; killing an elderly person like Yudhishtira was adharma. The way out was to humiliate Yudhishtira by derogatory words which would amount to killing him. Arjuna complies first and then takes out his sword to kill himself in atonement. Krishna advises that Arjuna rather indulge in self-glorification which is as good as self killing.
    Moral: Be moderate.
    ಧರ್ಮರಾಜ ಉವಾಚ (ಚಂಪಕಮಾಲೆ):
    ಬಿಸುಡೆನೆ ಬಿಲ್ಲಿನಾ ಪೆಸರದೇಕೆನಲಾನ್ ಸವರರ್ದ ಕರ್ಣನಂ
    ಮಸಕ*ದಿನಾಗ ಛೇಡಿಸಿರಿಯಲ್ಕರವಾಲವ ಕೊಲ್ಲಲೆನ್ನನುಂ|
    ವೆಸನದೆ ಪಾರ್ಥ ತಾನುಸುರುತಾಗಲವಾಚ್ಯವ ಹತ್ಯೆಯಂದದಂ
    ಕುಸಿಯುತಲಾತ್ಮಹತ್ಯೆ, ಸೆರೆಯುಬ್ಬಿರಲಾತುಮ ಗಾನಗೈವರೇಂ||
    *great agitation

Leave a Reply to Shrikaanth K. Murthy Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)