May 192013
 

ಈ ಕೆಳಗಿನ ಚಿತ್ರದಿಂದ ನಿಮ್ಮಲ್ಲಿ ಉದ್ದೀಪನಗೊಳ್ಳುವ ಭಾವನೆಗಳಿಗೆ ಪದ್ಯಗಳ ರೂಪ ನೀಡಿ ಇಲ್ಲಿ ಪ್ರಕಟಿಸಿರಿ. ಛಂದಸ್ಸು ನಿಮ್ಮ ಆಯ್ಕೆ

ಹೂವು ಕಟ್ಟುತ್ತಿರುವ ಹುಡುಗಿ

ಹೂವು ಕಟ್ಟುತ್ತಿರುವ ಹುಡುಗಿ

ಚಿತ್ರದ ಕೃಪೆ – ಅಂತರ್ಜಾಲ

  207 Responses to “ಪದ್ಯಸಪ್ತಾಹ ೭೦ : ಚಿತ್ರಕ್ಕೆ ಪದ್ಯ”

  1. ಉತ್ಪಲಮಾಲೆ:
    ಕೋಮಲೆಯೊಳ್ ಮನಂ ಬೆರೆತು ಪೋದುದರಿಂದೆ ಕಪೋತದೌತ್ಯದಿಂ
    ಪ್ರೇಮಮನೀಕ್ಷಿಸಲ್ಕೆ, ಸುಮದಿಂ ಪೊಸಗಂಪಿನ ಮಾಲೆಯಂ ವಿಹಂ-
    ಗಾಮಿಯಿನೇ ಪ್ರಿಯಂಗೆ ಸಖಿಯೀವೆನೆನುತ್ತಿರೆ, ಕೂರಿತಂಬುಗಳ್
    ಕಾಮನಿನೆಚ್ಚಲಾಣ್ಮನಹಹಾ ಮಗುದೊಂದನೆ ದೌತ್ಯಕೋತನೇಂ?

    ಮೊದಲನೆಯ ಕಪೋತದೂತನಿನ್ನು ಮರಳೇಯಿಲ್ಲ ಅಷ್ಟರಲ್ಲೆ ಮನ್ಮಥಪ್ರೇರಿತನಾದ ತರುಣನು ಮತ್ತೊಂದು ಪಾರಿವಾಳವನ್ನು ಆಶ್ರಯಿಸಿ ಕಳುಹಿಸಿದನು.

    • Fine idea sOma. I am sure this idea will remain unsurpassed.
      ಅವುಗಳಲ್ಲಿ ಒಂದು ಗಂಡು ಒಂದು ಹೆಣ್ಣು ಪಾರಿವಾಳ ಎಂದು ಕಲ್ಪನೆಯನ್ನು ಬೆಳಸಿ, ’ಎರಡೂ ದದ್ದ, ಹೊರಕ್ ಹಾಕು’ ಎಂಬ ಗಾದೆಗೆ ಲಕ್ಷ್ಯವಾಗಿ 😉

      • ಧನ್ಯವಾದ ಪ್ರಸಾದು, ಒಂದು ಗಂಡು ಒಂದು ಹೆಣ್ಣು ಪಾರಿವಾಳ ಕಲ್ಪನೆ ಇನ್ನೂ ಚೆನ್ನಾಗಿದೆ 🙂

  2. ದೂರದಿಗಂತವ ದಿಟ್ಟಿಸಿ ನೋಡುತ
    ಯಾರನೊ ಮನದಲಿ ನೆನೆಯುತಲಿ |
    ಪೋರಿಯು ಹೂವನು ಪೋಣಿಸುತಿರುವಳು
    ಮಾರನ ಶರಕಾಗಿಹಳು ಬಲಿ ||

    • ಅಪರೂಪದ ಚತುರ್ಮಾತ್ರೆ. ಸರಳಸುಂದರವಾಗಿದೆ. ಕೊನೆಯೆರಡು ಸಾಲುಗಳನ್ನು ಪ್ರಶ್ನಾರ್ಥಕವಾಗಿಸಬಹುದೇನೋ:
      ಪೋರಿಯು ಹೂವನು ಪೋಣಿಸುತಿರುವಳೊ
      ಮಾರನ ಶರಕಾಗಿಹಳೊ ಬಲಿ ||

    • bahaLa cheluvAgide 🙂

  3. ಝೂಮೌಟು (Zoom out) ಮಾಡುತ್ತೆ ನೀ ಮೌನದಿಂ ನೋಡು
    ಬಾ ಮೌಲ್ಯ ಮೆರೆದೀ ಕೃತಿಯನ್ನು| ನರಸಿಂಹ
    ಸ್ವಾಮಿಯ’ದಿರುವಂತಿಗೆ’ಯಲ್ತೆ||

    • ನರಸಿಂಹ ಸ್ವಾಮಿಯವರ ಯಾವ ಗೀತೆಯನ್ನು ಹೋಲುತ್ತದೆ ಈ ಚಿತ್ರ, ಚಿತ್ರ ಬಹಳ ಹಿಡಿಸಿತು ಕಲ್ಪನೆ ತಿಳಿಯುವ ಆಸೆ

    • ‘ಇರುವಂತಿಗೆ’ (=ಮಲ್ಲಿಗೆ) ಎಂಬುದು ಕೆ.ಎಸ್.ನ.ರವರ ಕವನಸಂಕಲನವೊಂದರ ಹೆಸರು. ಆ ಕೃತಿಯ ಮುಖಪುಟ ಛಾಯಾಚಿತ್ರ ಇದು, Zoom out ಮಾಡಿದರೆ ಕೃತಿಯ ಹಾಗೂ ಕೃತಿಕಾರರ ಹೆಸರು ಕಾಣುತ್ತದೆ ಎಂಬ ಕಲ್ಪನೆ.

  4. ಪಲರಿಂ ಪ್ರೇಷಿತ ಖಗಗಳ್
    ನೆಲಮಂ ಸಿಂಗರಿಸಲಾಣ್ಮನಿರ್ದಪ ಪಥದೊಳ್
    ನೆಲಸುಗೆ ದೃಷ್ಟಿಯದೆಂದಾ
    ಗೆಲುಮೆಯ ನೋಟದೆ ನಿರೀಕ್ಷಿಪಳ್ ತರುಣಿ ಗಡಾ

    ಗೆಲುಮೆ ಸರಿಯಾದ ಪ್ರಯೋಗವೇ?

  5. ಸೋಮನ ಪದ್ಯದ ಬಗೆಗೆ ಪ್ರಸಾದು ಹೇಳಿದಂತೆ ಅದು ನಿಜಕ್ಕೂ ಅದ್ವಿತೀಯಕಲ್ಪನೆ. ಆ ಪದ್ಯದ ಹಳಗನ್ನಡಶೈಲಿಯೂ ಸೊಗಸಾಗಿದೆ. ಆದರೆ ಕೆಲವೊಂದು ಚಿಕ್ಕ ತಪ್ಪುಗಳನ್ನು ಸವರಿಸಬೇಕು. ಉದಾ: “ಸಖಳೀವ….” ಎಂಬುದು ಸಖಿಯೀವ ಎಂದಾಗಬೇಕು. ಈ ಪ್ರಮಾದವನ್ನು ಹಿಂದೆಯೂ ಸೋಮನು ಮಾಡಿದಂತೆ ನನ್ನ ನೆನಪು:-) ಸಖ ಶಬ್ದಕ್ಕೆ ಸಖಿ ಎಂಬುದೇ ಯುಕ್ತಸ್ತ್ರೀಲಿಂಗರೂಪ. ಅಂತೆಯೇ ಆಣ್ಮನು ಎಂಬುದು ನಡು/ಹೊಸಗನ್ನಡಗಳಿಗೆ ಸರಿ. ಹಳಗನ್ನಡಕ್ಕೆ ಆಣ್ಮನ್ ಎಂಬುದೇ ಯುಕ್ತ. ಕಡೆಯಲ್ಲಿ ಸ ಬಳಸಿದ ಪದ “ಆಶ್ರಿಸಿರ್ಪ…” ಎಂಬುದೂ ಅಸಾಧುರೂಪ. ಇದು ಆಶ್ರಯಿಸಿರ್ಪ ಎಂದೇ ಆಗಬೇಕು. ಆದರೆ ಇದರಿಂದ ಛಂದಸ್ಸು ಕೆಡುತ್ತದೆ. ಹೀಗಾಗಿ ಎವೆಲ್ಲಕ್ಕೆ ಸಲ್ಲುವಂತೆ
    “ಕಾಮನಿನೆಚ್ಚಲಾಣ್ಮನಹಹಾ ಮಗುದೊಂದನೆ ದೌತ್ಯಕೋತನೇಂ?” ಎಂದು ಸವರಿಸಿದ್ದೇನೆ. ರಾಜಗೋಪಾಲರ ಚೌಪದಿಯೂ ಪ್ರಸಾದರ ತ್ರಿಪದಿಯೂ ಹದವಾಗಿವೆ.
    ಸೋಮನ ಕಂದವು ಆತನದೇ ಮುನ್ನಿನ ಉತ್ಪಲಮಾಲಿಕೆಯ ಮುಂದೆ ಬಾಡಿದಂತಿದೆ:-)

    • ಗಣೇಶ್ ಸರ್ ಧನ್ಯವಾದಗಳು, ಮೂಲದಲ್ಲೆ ಸವರಿಸಿದ್ದೇನೆ 🙂
      ಹೌದು ಸಖಳ್ ಪ್ರಮಾದ ಮೊದಲೂ ಆಗಿದೆ, ಮರೆತಿದ್ದೆ:)

      • ಪ್ರಮಾದವನ್ನು ’ಮೂಲದಲ್ಲೇ ಸರಿಪಡಿಸಿ’ದ್ದೀರೋ? ಸಖಳ್, ಪ್ರಮಾದ, ಮೊದಲೂ, ಮರೆವು – ಈ ಪದಗಳನ್ನು ಬಳಸಿ ದತ್ತಪದಿ:

        ಸಾಂ|| ಸಖಳ ಪ್ರಮಾದವದಾಗಿದ್ರೂ ಮೊದಲೂವೆ
        ನಖಶಿಖ ಸುಡಲಿಲ್ಲ ಸದ್ಯ!
        ಸುಖದಿಂದಲಂದಿನಿಂದಿರಲಾಯ್ತು ಮರೆತದ
        ಮುಖವುಳಿದದ್ದೇನೆ ಪುಣ್ಯ!!

        • ಜಾಣ್ಮೆ ಚೆನ್ನಾಗಿದೆ:), ಆದ್ರೆ ಪ್ರಸಾದು,

          ಸಾಸಿsರsಮಿತ್ತsರುs ಮೀಸೆsಯsದುಳಿವುsದೆs?
          ಮಾಸsದsದಡಿಕೆsಯs ದೋಷs
          ಲೇಸೇನುs ಪದ್ಯಮsನೊರೆವೊsಡೆ ಶ್ಲೇಷsದೆs?
          ಸೂಸsದs ಪದಮೆಲ್ಲೀ? ‘ಮರೆವು‘!!!

          ಸಖಳ್, ಪ್ರಮಾದ, ಮೊದಲೂ, ಮರೆವು ನಲ್ಲಿ ಮರೆವು ಮರೆತೇಬಿಟ್ಟಿರಲ್ಲ,ನಿಮ್ಮ ಜಾಣತನದ ಪದ್ಯ ಠೇವಣಿ ಕಳೆದುಕೊಳ್ತಲ್ಲ ದತ್ತಪದಿಯ ಮೂಲಭೂತ ನಿಯಮದ ಉಲ್ಲಂಘನೆಯಿಂದ, ಈಗ ಬದಲಿಸಿದ್ರೆ ಜನ ಮೆಚ್ಚೋಲ್ಲ 😉

          • ಹಾದಿರಂಪರನ್ನು ಹಿಡಿದು ಹಾಕಿದೆಯಲ್ತೆ
            ಮೋದದಿಂದೆ ದತ್ತಪದಿಯ ಚದುರೊಳ್ |
            ಬೀದಿಮಾರಿಯನ್ನು ಮನೆಗೆ ಬಾರೆಂದ ವೋಲ್
            ಮೋದದಿರ್ಕೆ ರಂಪರಿನ್ನು ನಿನ್ನಂ 🙂

          • howdu sir calculated risk namma prasAdu jote 🙂

          • ಸೋಮ,
            ಗಣೇಶರು ’ಬೀದಿಮಾರಿ’ ಎಂದು ಯಾರನ್ನು ಕುರಿತು ಹೇಳಿದ್ದಾರೆಂದು ಗಮನಿಸಿ.

          • howdu prasAdu… gottu, adakke calculated risk aMdiddu 🙂

        • ನೀವು ‘ಮರೆತಿದ್ದೆ’ ಎಂದಿರುವಿರಿ. ನಾನು ‘ಮರೆತದ’ (ಮರೆತು+ಅದನ್ನು) ಎಂದು ಬಳಸಿದ್ದೇನೆ.
          ಬಹಳವೇನಲ್ಲ ಕೇಳ್ ಚ್ಯುತಿಯೆನ್ನ ಮಾನದ
          ಕಹಿಯಲ್ಲವಡಕೆ ಪ್ರಮಾಣ|
          ಕುಹಕವೀಡೇರದೈ ರಾಗರದೆಂದೆಂದು
          ಸಹವಾನು ಬಿಟ್ಟಿಲ್ಲ ಮೀಸೆ||

          • ದತ್ತsಪsದಿಗಳೊಡನೆs ಸಂಧಿsಯs ಮಾಳ್ಪುದೆs
            ಎತ್ತsಣsದರಿವಿsದುs? ಭ್ರಮೆಯಿಂದೆs
            ಸುತ್ತುತೆs ಜಟ್ಟಿಯುs ನೆಲಗಚ್ಚೆs ನಗುವsರs
            ಗತ್ತಿನಿಂದೆದರಿsಸುsವುದುs ತsರsವೆs?

  6. ನನ್ನ ಕಲ್ಪನೆ ಹೀಗಿದೆ:

    ವಲನವಿಭ್ರಮಮಿರ್ಪ ಪಾರಿವಂಗಳ ಬೆಳ್ಪೊ?
    ನಲಿವ ಕಂಪಿನ ಮಲ್ಲಿಕೆಗಳ ಬೆಳ್ಪೊ ?
    ನಲಿನಾಕ್ಷಿ! ವಿರಹಪಾಂಡುರಮಪ್ಪ ನಿನ್ನೊಡಲಿ-
    ಗೊಲಿದ ಪೋಲ್ಕೆಯೆನಿಪ್ಪುದೆನ್ನೊಳುಲಿಯೌ !!

    • ಆಚೀಚೆಯಾ ಧವಲಧಾತುವಾಗಿಸಲಿಲ್ಲ
      ಯಾಚಿಸಿದೊಡಾಗುವಳೆ ಗೌರಳಾಕೆ|
      ಪೀಚುಕಾವ್ಯದಿನೆನ್ನ ಕೃಷ್ಣಸುಂದರಿಯನ್ನು
      ದೋಚಲಾರೈ ಸಖನೆ ಬಣ್ಣನೆಯಿನಿಂ||

      • ವಿರಹವೈಧುರ್ಯದಿಂ ಬೆಳ್ಪುವೋದಪುದನೆರ್ದೆ-
        ಮರುಕದಿಂ ಪರಿಭಾವಿಸಿಮ್ ! ಪ್ರಸಾದು!!
        ಮರಳಿಬಂದವರಲ್ತೆ ಯೂರೋಪಿನಿಂದೀಗಳ್
        ಅರಿಯಿರಾ ಭಾವಮಂ ಹಾದಿರಂಪ:-)

      • I know. I went off at a tangent on purpose. I still will:
        ಟೀನ್ಸು ನಾವೇನಲ್ಲ ವಿರಹದಿಂ ಬಳಲೆವೈ
        ಸೈನ್ಸು-ದಾಂಪತ್ಯದಾ (ದಾಂಪತ್ಯಸೈನ್ಸಿನ) ಚರ್ಚೆಯೇಕೈ|
        ಫ್ರಾನ್ಸು ಮೇಣ್ ಸ್ವಿಸ್ಸಿನಾ ನಗರಂಗಳೊಳು ಪೊಂದಿ
        ದೌನ್ಸು ಶ್ವೇತವು ಗಲಿತವಿಟಲಿ-ಗ್ರೀಸೊಳ್||

        • ಸೊಗಸಾದ ಪದ್ಯಪ್ರತಿಕ್ರಿಯೆ ಮೂಡಿದೆ
          ನಗುವಲ್ಲಿ ಚೆಲ್ಲಿದೆ ಬೆಳ್ಳಿಬಿಳುಪು |
          ಮುಗುಳಾದ ವೈನೋದಿಕವಿಧಾನವಿಂತಾಗೆ
          ಜಗವೆಲ್ಲ ನೈಲಿಂಪ ಹಾದಿರಂಪ!!

          (ಇದು ಸೊಬಗಿನ ಸೋನೆ ಎಂಬ ಹೆಸರಿನ ತ್ರಿಮೂರ್ತಿಗಣಬಂಧ. ಸಾಂಗತ್ಯಕ್ಕೆ ಹತ್ತು ದಿನದ ದಾಯಾದ:-)

  7. ಪ್ರೇಮಕ್ಕಾಗಲ್ಲವು ಕಾಮಕ್ಕಾಗಲ್ಲವ –
    ದೀ ಮುಗ್ದೆ ಕಾಯುತಿರುವದು – ಮಾದೇವ
    ಸ್ವಾಮಿಯ ಪೂಜಾಸಮಯಕ್ಕೆ

    [Not a poem per se. Just a comment in poetic structure 🙂 ]

    • Two Mahadevs have found their way to the state legislature in the recent elections: MahadevAPPA and Mahadeva PRASAD. Who is she waiting for:
      ಗೆದ್ದೆತ್ತಿನ್ಬಾಲsವ ಜಿದ್ದಿದ್ರೂ ಪಿಡಿವsರು
      ಗೆದ್ದಿರ್ಪರೀರ್ವsರೊಳಗಾವ| ಮಾದೇವುನ್
      ಗೆದ್ದೌಳ’ದಪ್ನೋ’? ‘ಪರಸಾದೊ’?

  8. ಬಾಲೆsಯs ಮುಗ್ಧsತೆs, ಶೀಲೆsಯ ಸ್ನಿಗ್ಧsತೆs
    ಹಾಲಂತೆs, ಮಲ್ಲೆs ಮೊಗ್ಗಂತೆs – ಶಿವನಾಣೆs
    ಬಾಲs ಸೂರ್ಯನ ಹೊಂಗರದಾಣೆs

    [ಹೊಂಗರ = ಹೊನ್ನಿನ ಕರ = ಹೊಂಬಿಸಿಲು]

    • ರಾಮಚಂದ್ರ. ನಿಮ್ಮ ಪದ್ಯದ ಭಾವ ಚೆನ್ನಾಗಿದೆ. ನನ್ನದೂ ಅದೇ ವಾದವೆ. ಹೊಂಗರ ಅರಿಸಮಾಸವಲ್ಲವೆ? ನೀವ್ಉ ಕರವನ್ನು ಕನ್ನಡ ಶಬ್ದದಂತೆ ಬಳಸಿದ್ದೀರಿ. ಕಕಾರವನ್ನು ಗಕಾರವಾಗಿಯೂ ಮಾರ್ಪಡಿಸಿದ್ದೀರಿ, ಕನ್ನಡದ ಸಂಧಿಯಂತೆ

  9. ಸೊರಗೆ ಕೋಮಳೆ ನೆನೆಯುತಿನಿಯನ;
    ಕರದೊಳಿರೆ ಸುಮಮಾಲೆ ವರಶ
    ರ್ವರನಶರದಾಘಾತವನು ತಾ ತಡೆಯಲಾರದೆಯೆ
    ಬಿರಿದ ಪೂಗಳ ಮಾಲೆ ಸುಖಿಸದೆ
    ವಿರಹ ತಾಪವದಾಯ್ತು ಪ್ರೇಮಲ
    ಹರಿಯ ವೇಗಕೆ ಕೊಚ್ಚಿಪೋಗುತೆ ತಾನು ಚಿಂತಿಸಿರೆ

    ನಾಕಸೊಗವೂ ನರಕ ತಪನವ
    ನೇಕ ವಿಧವಿಧದನುಭವಂಗಳ
    ಟಂಕಿಸಿರಲಾ ತರುಣ ಬಾಲೆಯ ಹೃದಯಭಿತ್ತಿಯೊಳು
    ಮೂಕಭಾವಕೆ ದನಿಯ ನೀಡುತ
    ಲಾಕಪೋತಂಗಳಿಗೆ ಉಲಿದಳು
    “ಜಾ ಕಬೂತರ್ ಜಾ”ಯೆನುತಲಾ ಖಗಮಕರುಹಿದಳು

    • Sorry…but this is the corrected version –

      ಸೊರಗೆ ಕೋಮಳೆ ನೆನೆಯುತಿನಿಯನ;
      ಕರದೊಳಿರೆ ಸುಮಮಾಲೆ ವರಶ
      ರ್ವರನಶರದಾಘಾತವನು ತಾ ತಡೆಯಲಾರದೆಯೆ
      ಬಿರಿದ ಪೂಗಳ ಮಾಲೆ ಸುಖಿಸದೆ
      ವಿರಹ ತಾಪವದಾಯ್ತು ಪ್ರೇಮಲ
      ಹರಿಯ ವೇಗಕೆ ಕೊಚ್ಚಿಪೋಗುತೆ ತಾನು ಚಿಂತಿಸಿರೆ

      ನಾಕಸೊಗವೂ ನರಕ ತಪನವ
      ನೇಕ ವಿಧವಿಧದನುಭವಗಳನು
      ಟಂಕಿಸಿರಲಾ ತರುಣ ಬಾಲೆಯ ಹೃದಯಭಿತ್ತಿಯೊಳು
      ಮೂಕಭಾವಕೆ ದನಿಯ ನೀಡುತ
      ಲಾಕಪೋತಸಮೂಹಕುಲಿದಳು
      “ಜಾ ಕಬೂತರ್ ಜಾ”ಯೆನುತಲಾ ಖಗಮಕರುಹಿದಳು

      • ಕಪೋತಸಮೂಹಕುಲಿದಳು….. ಖಗಮಕರುಹಿದಳು – Repetition. This 2nd verse needs to be further honed.

        • Sorry for d mistakes sir…n it’s quite simple…ಖಗಮಕರುಹಿದಳು can be made ಖಗವ ಕಳುಹಿದಳು to overcome the repetition….anyways , the version expected by u is here –

          ಸೊರಗೆ ಕೋಮಳೆ ನೆನೆಯುತಿನಿಯನ;
          ಕರದೊಳಿರೆ ಸುಮಮಾಲೆ ವರಶ
          ರ್ವರನಶರದಾಘಾತವನು ತಾ ತಡೆಯಲಾರದೆಯೆ
          ಬಿರಿದ ಪೂಗಳ ಮಾಲೆ ಸುಖಿಸದೆ
          ವಿರಹ ತಾಪವದಾಯ್ತು ಪ್ರೇಮಲ
          ಹರಿಯ ವೇಗಕೆ ಕೊಚ್ಚಿಪೋಗುತೆ ತಾನು ಚಿಂತಿಸಿರೆ

          ನಾಕಸೊಗವೂ ನರಕ ತಪನವ
          ನೇಕ ವಿಧವಿಧದನುಭವಗಳನು
          ಟಂಕಿಸಿರಲಾ ತರುಣ ಬಾಲೆಯ ಹೃದಯಭಿತ್ತಿಯೊಳು
          ಮೂಕಭಾವಕೆ ದನಿಯ ನೀಡುತ
          ಲಾಕಪೋತಸಮೂಹಕುಲಿದಳು
          “ಜಾ ಕಬೂತರ್ ಜಾ”ಯೆನುತಲಾ ಖಗವ ಕಳುಹಿದಳು… 😛 🙂

          • ಪದ್ಯಗಳು ಚೆನ್ನಾಗಿವೆ. ಆದರೆ ಎರಡನೆಯ ಪದ್ಯದ ಮೂರನೆಯ ಸಾಲಿನಲ್ಲಿ ಪ್ರಾಸವು ತಪ್ಪಿದೆ. ಇದು ಪ್ರಸಾದು ಅವರ ಕೃಶಾನುದೃಷ್ಟಿಗೂ ಬೀಳಲಿಲ್ಲವೆಂದರೆ ಮೌರ್ಯನನ್ನು ಯಾವ ಚಾಣಕ್ಯನು ಕಾಪಾಡಿದ್ದಿರಬಹುದು?? 🙂

        • This 2nd verse needs to be further honed – ಎಂದು ಹೇಳಿದ್ದೇನಲ್ಲ, ಇದೆಲ್ಲವನ್ನೂ ಸೇರಿಸಿಯೇ.

  10. ತೊಟ್ಟು ನಲಿವಲಿ ಲಂಗರವಿಕೆಯ
    ಬುಟ್ಟಿ ಹೂಗಳ ಕಿತ್ತುತಂದಾ
    ಪುಟ್ಟ ಹುಡುಗಿಯು ಮುಟ್ಟಿಸವರುತ ಮಡಿಲೊಳಿಟ್ಟಿಹಳು ।
    ಇಟ್ಟು ಹೂಗಳ ಪಕ್ಕಪಕ್ಕದೆ
    ಗಟ್ಟಿ ದಾರವ ಸುತ್ತಿ ಬೆರಳಲಿ
    ಕಟ್ಟಿ ಜೊತೆಯಲಿ ಬಾಲೆ ಮಾಲೆಯ ಕನಸಕಟ್ಟಿಹಳು ॥

    • Yes. Way to go…

    • ಚೆಲುವಾದ ಪದ್ಯ. ಅನವದ್ಯವಾಗಿದೆ. ಆದರೆ ಹತ್ತಿರದ ಪಾರಿವಾಳಗಳ ಬಗೆಗೆ ನಿಮ್ಮ ಪದ್ಯವೇಕೆ ಮೌನವಾಗಿದೆ?

    • ಮಾಲೆಯ ಕನಸಕಟ್ಟಿಹಳು – tumbA chennAgide

    • ಧನ್ಯವಾದಗಳು ಗಣೇಶ್ ಸರ್, ಪ್ರಸಾದ್ ಸರ್, ಸೋಮ,
      ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳು ನನ್ನ ಉತ್ಸಾಹವನ್ನು ಹೆಚ್ಚಿಸಿವೆ.

  11. ಧೃತ್ವಾ ಯಾಮಿ ಶಿರೀಷಪುಷ್ಪರಚಿತಾಂ ಮಾಲಾಂ ಲತಾಮಂಟಪಂ ದೃಷ್ವಾ ಮಾಂ ಕುಸುಮೈರಲಂಕೃತವತೀಂ
    ತುಷ್ಯೇತ್ ಸ ಕಾಂತೋ ಮಮ।
    ಇತ್ಥಂ ಮನ್ಮಥಜಾಲಬದ್ಥತರುಣೀ ಗ್ರಥ್ನಾತಿ ಮಾಲಾಂ ಗೃಹದ್ವಾರೇ ಸೂರ್ಯವಿಸೃಷ್ಟದೀಧಿತಿಚಯೇ ರಕ್ತೇನುರಕ್ತಾ ಪ್ರಿಯೇ॥

    (ಪ್ರಿಯೇ ಅನುರಕ್ತಾ ಮನ್ಮಥಜಾಲಬದ್ಧತರುಣೀ ಗೃಹದ್ವಾರೇ ರಕ್ತೇ ಸೂರ್ಯವಿಸೃಷ್ಟದೀಧಿತಿಚಯೇ……..)

    • ನನಗೂ ಅರ್ಥವಾಗುವಷ್ಟು ಸರಳಸ್ಪಷ್ಟವಾಗಿದೆ. ‘ದೀಧಿತಿ’ ಎಂಬ ಪದವನ್ನು ಮಾತ್ರ ನಿಘಂಟುವಿನಲ್ಲಿ ನೋಡುವುದಾಯಿತು. ಧನ್ಯವಾದಗಳು. ಅದರ ಕನ್ನಡಾನುವಾದ (ಮತ್ತೇಭದಲ್ಲಿ):

      ಮುಡಿದುಂ ಪುಷ್ಪಶಿರೀಷಮಾಲೆಯನು ನಾಂ| ಸಾರ್ವೆಂ ಲತಾಮಂಟಪಂ
      ಬೆಡಗಂ ಕಾಣುತಲೆನ್ನ ಕಾಂತವದನಂ| ಸಂತೋಷದಿಂದುರ್ಬಲೆಂ
      ದೆಡೆಯೊಳ್ ದ್ವಾರದೆ ಸೂರ್ಯರಶ್ಮಿಯರುಣೋ| ದ್ದೀಪ್ತಾನನಂ ಪೊತ್ತು ತಾಂ
      ತುಡಿಯುತ್ತಲ್ ಸ್ಮರಪೀಡದಿಂ ಕುಸುಮಮಂ| ತಾ ಪೋಣಿಪಳ್ ಮಾಲೆಯೊಳ್
      (ಮೂರನೆಯ ಪಾದದಲ್ಲಿ ಯತಿದೋಷವಿದೆ)

      • ಅಡ್ಡಿಯಿಲ್ಲ; ಯತಿಭಂಗದಿಂದ ವೃತ್ತಗಳಿಗೆ ಕನ್ನಡದ ಮಟ್ಟಿಗೆ ತೊಂದರೆಯಿಲ್ಲ. ಏಕೆಂದರೆ ಕೇಶಿರಾಜನೇ ಯತಿವಿಲಂಘನದಿಂದರಿದಲ್ತೆ ಕನ್ನಡಂ ಎಂದಿದ್ದಾನೆ. ಅಂದಹಾಗೆ, ಕನ್ನಡಕ್ಕೆ ಯತಿಯಿಲ್ಲ ಕೋಣಂಗೆ ಮತಿಯಿಲ್ಲ ಎಂಬ ಗಾದೆಯನ್ನು ಮರೆತಿರಾ?

        ನಿಮ್ಮ ಅನುವಾದವು ಒಂದೆರಡು ವ್ಯಾಕರಣಪ್ರಮಾದಗಳ ಹೊರತಾಗಿ ಚೆನ್ನಾಗಿದೆ.

      • PrasAdu avarE, padya saralaspshtavAgiralu nanna shabdadAridrya kAranave horatu pratibhe alla. AnuvAda sogasAgide.

        • ಶಬ್ದದಾರಿದ್ರ್ಯದಿಂದಾದ ಪದ್ಯದ ಅನುವಾದ ಎಂತು ಸೊಗಯಿಸುತ್ತದೆ 😉 ನಿಮ್ಮ ಸೌಜನ್ಯಕ್ಕೆ ನನ್ನ ಕೃತಜ್ಞತೆಗಳು.

    • ಅನ್ಯಾದೃಶಪ್ರನಯಿನೀ ಗ್ರಥಿತಾ ಭವದ್ವಾ-
      ವೃತ್ತೇನ ಸೂರ್ಯ! ರಮಣೀಯತಯಾ ಮಯಾಪಿ|
      ಪದ್ಯಂ ವಿಲೋಕ್ಯ ಮುದುಪಾಸಿತಮಿತ್ಯಲಂ ಹೃ-
      ನ್ಮಾದ್ಯಂ ಕಿಮಪ್ಯತಿತರಾಂ ತನುತೇsತ್ರ ವಲ್ಗು ||

  12. ಆಡಬಾರಳದೆಷ್ಟು ಕರೆದರು
    ಕೂಡವೆಮ್ಮಯ ಬಾಲ್ಯ ಗೆಳತಿಯು
    ಕಾಡುತಿರ್ಪುದದಾರು ಚೆಲುವೆಯನೆಂಬುದನು ಪೇಳಿ
    ಬೇಡಿ ತಿನಿಸನು ಪಡೆದು ನಿತ್ಯವು
    ಕೂಡಿ ವೇಳೆಯ ಕಳೆದ ನಮ್ಮನು
    ದೂಡಿ ಹೊಂದಿಹರಾರು ತಾಣವನಾಕೆ ಹೃದಯದೊಳು

    • ಒರ್ವರೊರ್ವರೆ ಕಳಚಿಕೊಳ್ವರು
      ಗರ್ವ ತೋರುತ ಗೆಳತಿಯರು ತಾವ್
      ಪರ್ವವೊದಗಲು ಮದುವೆಯೆಂಬುವ, ಜೋಡಿಪೊಂದುತಲಿ|
      ಕಾರ್ವರಲ್ತೆಲೆ ದ್ವೇಷವನು ತಾವ್
      ಪೂರ್ವಸಖಿಯರವಳೊಳಗಾವಳ
      ಕೋರ್ವ ಮಾರನದಾದಿಲೈದುತೆ ಸರದಿ ತಗ್ಗಿಸಿರಲ್||

    • ಆಹಾ! ಅಪರಂಜಿ ಕಾಂಚನದಂತೆ ಅಪ್ಪಟ ಕಾವ್ಯವಿದು. ಪಾರಿವಾಳಗಳ ಜನಾಂತಿಕವಾಕ್ಯ(aside talk)ವಾಗಿ ರೂಪುಗೊಂಡ ಈ ಕವಿತೆಯ ರಸಸ್ವಾರಸ್ಯವು ಮನನೀಯ.

    • bahaLa chennAgide padya

    • kAchana avare padya tumba chennAgide

    • ಪದ್ಯದ ವಸ್ತು ಹಾಗೂ ಡಿಕ್ಶನ್ ತುಂಬ ಚೆನ್ನಾಗಿದೆ – ಅದರಲ್ಲೂ ಕೊನೆಯ ಸಾಲು. ಮೂರನೆಯ ಪಾದದಲ್ಲಿ ’ಪೇಳಿ’ ಎಂಬ ಪದ ಬೇಕಿಲ್ಲ. ಆ ಸಾಲನ್ನು ಹೀಗೆ ಮಾಡಬಹುದೇನೋ: ಕಾಡುತಿರ್ಪುದದೇನು ತಿಳಿಯೆವು ಚೆಲುವೆಯೀಕೆಯನು|

    • ಕಾಂಚನ, ಪದ್ಯ ತುಂಬಾ ಇಷ್ಟವಾಯಿತು.

    • ಚೆಲುವಾದ ಕಲ್ಪನೆ 🙂

  13. Repetition. Ignore this.
    ನನಗೂ ಅರ್ಥವಾಗುವಷ್ಟು ಸರಳಸ್ಪಷ್ಟವಾಗಿದೆ. ‘ದೀಧಿತಿ’ ಎಂಬ ಪದವನ್ನು ಮಾತ್ರ ನಿಘಂಟುವಿನಲ್ಲಿ ನೋಡುವುದಾಯಿತು. ಧನ್ಯವಾದಗಳು. ಅದರ ಕನ್ನಡಾನುವಾದ (ಮತ್ತೇಭದಲ್ಲಿ):

    ಮುಡಿದುಂ ಪುಷ್ಪಶಿರೀಷಮಾಲೆಯನು ನಾಂ| ಸಾರ್ವೆಂ ಲತಾಮಂಟಪಂ
    ಬೆಡಗಂ ಕಾಣುತಲೆನ್ನ ಕಾಂತವದನಂ| ಸಂತೋಷದಿಂದುರ್ಬಲೆಂ
    ದೆಡೆಯೊಳ್ ದ್ವಾರದೆ ಸೂರ್ಯರಶ್ಮಿಯರುಣೋ| ದ್ದೀಪ್ತಾನನಂ ಪೊತ್ತು ತಾಂ
    ತುಡಿಯುತ್ತಲ್ ಸ್ಮರಪೀಡದಿಂ ಕುಸುಮಮಂ| ತಾ ಪೋಣಿಪಳ್ ಮಾಲೆಯೊಳ್
    (ಮೂರನೆಯ ಪಾದದಲ್ಲಿ ಯತಿದೋಷವಿದೆ)

  14. ಮಾಸಿದ ಭಿತ್ತಿಯ ಮುಂದೀ
    ಮಾಸದ ಮಾಧುರ್ಯಧುರ್ಯೆ ಸುಮನೋಗ್ರಥನೋ-
    ಲ್ಲಾಸಿನಿ ಚಿಂತಿಸುತಿರ್ಪಳೆ
    ಲೇಸಿಂದೆ ಕಪೋತಚುಂಬನಶ್ರೀಪ್ರಿಯನಂ ?

    (ಪಾರಿವಾಳಗಳು ಚುಂಬನಕ್ರಿಯೆಗೆ ಹೆಸರಾದುವುದು. “ಪಾರಾವತಶ್ಚುಂಬನೇ” ಎಂದು ಪೂರ್ವಕವಿಕಲ್ಪನೆಗಳಿವೆ)

    ತೆರೆದ ಕದಂ ತೆರೆದ ದಿನಂ
    ತೆರೆದ ಸುಮಸ್ತಬಕಪಾತ್ರೆ ತೆರೆಗೈ ತೆರೆಗಣ್ |
    ತೆರೆದ ಕಪೋತವಿಲಾಸಂ
    ತೆರೆದಿರ್ದುದೆ ತೆರೆಯ ಮರೆಯಲಿರ್ದುದೆ ಹೃದಯಂ?

    • ಚಿತ್ರದ ಅಂತರಂಗವನ್ನು ನಿಮ್ಮ ಎರಡನೆಯ ಪದ್ಯದಲ್ಲಿ ಎಷ್ಟು ಸುಂದರವಾಗಿ ತೆರೆದಿಟ್ಟಿದ್ದೀರಿ. ಧನ್ಯವಾದಗಳು.

    • ತೆರೆದಿರ್ಪುದಿದು ಪೊಸಬಗೆಯ ಸ್ವಭಾವೋಕ್ತಿ ಗವಾಕ್ಷಿಯಂ.

      • ಇದು ಛಂದೋಬದ್ಧಪಾದದ ಹಾಗೆ ತೋರುತ್ತಿದೆ. ಆದರೆ ಯಾವುದೇ ಪ್ರಸಿದ್ಧಬಂಧದ ಹಾಗಿಲ್ಲ. ಇದೊಂದು ವೃತ್ತಗಂಧಿಯಾದ ಸಾಲೇ?

        ಶ್ರೀಶ ಮತ್ತು ರಾಮಚಂದ್ರಿಗೆ ಧನ್ಯವಾದಗಳು.

    • ಮಾಸಿದ, ಮಾಸದ… ತೆರೆದ, ಮರೆಯ ಬಳಕೆಗಳು ಬಹಳ ಚೆನ್ನಾಗಿ ಮೂಡಿವೆ ಇದು ವ್ಯತಿರೇಕಾಲಂಕಾರವೆ

      • ಇಲ್ಲಿ ವಿರೋಧಾಲಂಕಾರದ ಛಾಯೆಯಿದೆ:-) ಪದ್ಯದಲ್ಲಿ ಮುಖ್ಯವಾಗಿ ಸಸಂದೇಹ ಮತ್ತು ಸೂಕ್ಷ್ಮ, ಲೇಶ, ಊಹೆ ಮುಂತಾದ ಅಪ್ರಸಿದ್ಧಾಲಂಕಾರಗಳಿವೆ. ಎರಡನೆಯ ಪದ್ಯದಲ್ಲಿ ನೀವೆಂದಂತೆ ವ್ಯತಿರೇಕದ ಪ್ರಾಧಾನ್ಯವಿದೆ. ನಿಮ್ಮ ಅಲಂಕಾರಸಂವೇದನೆ ಅಭಿನಂದನೀಯ:-)

    • ಇದೇನು? ಚಿತ್ರಕೆ ಪದ್ಯವೋ, ಪದ್ಯದ ಚಿತ್ರವೋ?
      ತೆರೆದಿರ್ಪುದು ತೆರೆಯಂ, ಮೆರೆದಿರ್ಪುದು ಹೃದಯಂ !
      ಗಣೇಶ್ ಸರ್, ಇದು ಯಾವ ಛಂದಸ್ಸು ?

    • ಲೇಸೆಂದನುಸರಿಸಿದೊಡು
      ಲ್ಲಾಸದೆ ಚುಂಬಿಪ ಕಪೋತರೀತಿಯನೆಂದುಂ|
      ಮಾಸುಗುಮಾಕರ್ಷಣೆಯಾ
      ಮಾಸಿಹ ಭಿತ್ತಿವೊಲು ರಾಗ ಕೇಳಜಚರ ನೀಂ||

      ಉಲ್ಲಾಸದೆ = ’ಅತಿಯಾಗಿ’ ಎಂದು ಗ್ರಹಿಸಬೇಕು

      ನಿಮ್ಮ ಐಡಿಯವನ್ನು ಕೌಂಟರ್ ಮಾಡಿರುವುದರಿಂದ, ನಿಮ್ಮ ಪದ್ಯದ್ದೇ ಪ್ರಾಸಪದಗಳನ್ನು ರಿವರ್ಸ್ ಆರ್ಡರ‍್ನಲ್ಲಿ (chronologically) ಬಳಸಿದ್ದೇನೆ.

    • ತೆರೆತೆರೆಯಾಗಿ ತೆರೆದಿಟ್ಟಿದ್ದೀರಿ ಭಾವವನ್ನು. ಭಳ

  15. ೧. ದೂರದ ದೇಶಕೆ ತೆರಳಿದನಿನಿಯನು
    ಬಾರನದೇಕೋ ಈ ವರೆಗೆ |
    ದಾರಿಯ ಕಾಯುತ ಹೂವನು ಕಟ್ಟೆ ಕಿ-
    ಶೋರಿಯು ಕುಳಿತಳು ಬಾಗಿಲಲಿ ||

    . ನಾರಿಯ ಚಿತ್ತವ ಸೆಳೆವೆಡೆ ಸೋತಿರೆ
    “ಬಾರಾ ಪೋಗುವ” ಎನ್ನುತಲಿ |
    ಪಾರಿವ ಸ೦ಗಾತಿಯನೆಚ್ಚರಿಸುತ
    ಹಾರಲು ರೆಕ್ಕೆಯ ಬಿಚ್ಚಿಹುದು ||

    ೨. ಪಾರಿವಾಳಗಳೆರಡು ಬಾಗಿಲಲಿ ಬ೦ದಿಹವು
    ದೂರದಾಗಸದಿ ರವಿ ಮುಳುಗುತಿಹನು |
    ವಾರಿಜಾನನೆ ಕೃಷ್ಣೆ ಬಾಲಕಿಯ ಮೊಗದಲ್ಲಿ
    ತೋರಿಹುದು ಎ೦ತಹದೊ ಮಿಶ್ರಭಾವ ||

    ೩. ಹೂವ ಕಟ್ಟುತ ಹುಡುಗಿಯಿ೦ತು ಯೋಚಿಸುತಿಹಳು
    ಯಾವ ಮುಡಿ ಸೇರುವುದೊ ಈ ಮಾಲೆಯು |
    ದೇವನಡಿಗಾದರೂ ಸೇರಬಹುದಲ್ಲದಲೆ
    ಯಾವ ಚಿತ್ರದ ಪಟದಿ ಶೋಭಿಸುವುದೊ ||

    ಈ ಪ್ರಯತ್ನಗಳಲ್ಲಿ ದೋಷಗಳಿದ್ದರೆ ದಯವಿಟ್ಟು ತಿಳಿಯಪಡಿಸಿ

    • ಪಾರಿವ ಎ೦ಬ ಶಬ್ದ ಉಚಿತವೆ?

      ಪ್ರಸಾದರು ಮೊದಲೇ ಒ೦ದುಕಡೆ ಅವಳನ್ನು ಕೃಷ್ಣಸು೦ದರಿ ಎ೦ದಿದ್ದಾರೆ. ಆದ್ದರಿ೦ದ ಕೃಷ್ಣೆ ಪದಪ್ರಯೋಗ.

      • ಪಾರಿವ ಎಂಬುದು ಸಾಧುಶಬ್ದ. ಕನ್ನಡದಲ್ಲಿ ಪಾರಾವತದ ತದ್ಭವವಾಗಿ ಪ್ರಸಿದ್ಧ.

    • ಆ ಕೊನೆಯ ಪದ್ಯವನ್ನು ನಾನು ಹೀಗೆ ಬರೆಯುತ್ತಿದ್ದೆ:

      ಹೂವ ಕಟ್ಟುತಲಿಂತು ಬಾಲೆ ತಾ ಚಿಂತಿಪಳು
      ಯಾವ ಮುಡಿಯೇರ್ವುದೀ ಮಾಲೆಯೆಂದು|
      ದೇವನಡಿಯನು ಸೇರ್ವ ಯೋಗವಿದಕುಂಟೊ ಯಾ
      ಭಾವಚಿತ್ರವೆ ಗತಿಯೊ ಮೃತಮಂತ್ರಿಯಾ||

      ಐಡಿಯ ಬಿಡಿ. ಭಾಷೆಯನ್ನು ಹೀಗೆ ಸ್ವಲ್ಪ ಹಳತಾಗಿಸಿ.

      • ಸವರಿಸಿದುದಕ್ಕೆ ಧನ್ಯವಾದಗಳು.ಮು೦ದೆ ನಿಮ್ಮ ಸಲಹೆಯ೦ತೆಯೇ ಪ್ರಯತ್ನಿಸುತ್ತೇನೆ.

      • ರಾಜಗೋಪಾಲರು ಮೃತ ಮಂತ್ರಿಯ ಬಗ್ಗೇನೂ ಬರೇದಿರಲಿಲ್ಲವಲ್ಲ !

        • ಅದಕ್ಕೇ ‘ಐಡಿಯ ಬಿಡಿ’ ಎಂದು ಕೇವೀಟ್ ಹಾಕಿರುವುದು ನಾನು 😉 ಮತ್ತದ್ನೆ ಹಿಡ್ಕತ್ತ್ಯಲ್ಲೆ!

  16. ರ|| ಕಾಳನೀಡುವೆಯ ಮಾಲೆಕಟ್ಟಿನೀ ?
    ಪೇಳು ದೃಷ್ಟಿ ನಿನದೆಲ್ಲಿ ನೆಟ್ಟಿದೇ?
    ನೋಳದೋಲ್ ಹೆಣೆವ ಮಾಲೆಯಾವುದೀ
    ವೇಳೆಯೊಳ್? ಸುಮವೊ ? ಸಪ್ನವೋ ಸಖೀ?

    ನೋಳದ – ಮುಂದೆಹೋಗದ

    • ಸುಮಮಾಲೆಯೋ? ಸ್ವಪ್ನಮಾಲೆಯೋ? ಚೆನ್ನಾಗಿದೆ ಶ್ರೀಶ.
      ಎರಡನೆಯ ಪಾದಾಂತ್ಯವನ್ನೂ ’ಈ’ಕಾರವಾಗಿಸಬಹುದು.

      • ಸ್ವಪ್ನದ ಮಾಲೆಯ ಕಲ್ಪನೆ ಬಹಳ ಚೆನ್ನಾಗಿದೆ, ಕೆಲವೊಂದು ಸಂದರ್ಭಗಳಲ್ಲಿ ಸ್ವಪ್ನದಮಾಲೆಯನ್ನೇ ಸದಾ ಹೆಣೆಯುತ್ತಿರುತ್ತೇವಲ್ಲವೆ ಶ್ರೀಶ 😉

    • ಹೃದ್ಯಮಾದುದು ಕವಿತ್ವಕಲ್ಪನಂ;
      ಪದ್ಯಬಂಧದೆ ನೆಗಳ್ದುದಾದೊಡಂ
      ಚೋದ್ಯಮಪ್ಪ ನುಡಿಜಾರ್ ; ಪ್ರಗಲ್ಭರಿಂ
      ಸ್ವಾದ್ಯಮಪ್ಪ ಕವನಂ ನಿರೀಕ್ಷಿತಂ 🙂

      • ಧನ್ಯವಾದಗಳು..

        ಸಾರ್,
        ಪ್ರಯತ್ನ ಪಡುತ್ತಿದ್ದೇನೆ…..ಮತ್ತಷ್ಟು ಬರೆಯುವೆ.

  17. ತರಣಿ ಉದಯಿಪ ಮುನ್ನ ಮಲ್ಲಿಕ ನಿಕುಂಜದಿಂ
    ಪೂಗಳಂ ಕಿಳ್ತಿರಲು ಬೇಸರಿಸಿ ಕುಸುಮಗಳ್
    ಮುಳಿದು ಕುಸುಮಳನಳಿದು ಅರಳದಿರ್ ತಾವಾಗೆ ತಾಯ್ಗಿಡವು ಮಂಕಾಯಿತು –> (ಕುಸುಮಳನ್ ಅಳಿದು. ಕುಸುಮ ಕಲ್ಪಿತ ಹೆಸರು)
    ಇತ್ತ ಪೂಗಳ ಕಿಳ್ತ ತರುಣಿ ಪೂ ಪೋಣಿಸಲ್
    ತನ್ನಿನಿಯ ನೆನವಾಗೆ ಬಾಗಿಲಂ ತಾತೆರೆಯೆ
    ಇನ ಇನಿಯ ಕೆಂಪಾಗಿ ಮೂಡಣದಿ ತಾ ಮೂಡೆ ನಕ್ಕರಳಿದವು ಹೂಗಳೂ.

    ಅಂದು ತರುಗಳ ನಡುವೆ ಕರು ಹಿಡಿದು ನಿಂದಂದು
    ಕಂದು ಪೀತಾಂಬರದ ಉಡುಗೆಯನ್ನುಟ್ಟಂದು
    ಬಂದು ಮರೆಯಲಿ ನಿಂದ ನೀಲ ದನಗಾಹಿಯನು ಮನವೇಕೆ ನೆನೆಯುತ್ತಿದೇ
    ಗಂಧದಾ ನಾಮವನು ವಧನಕೊಪ್ಪುವ ತೆರದಿ
    ಚೆಂದದಿಂ ಸಿಂಗರಿಸಿ ನಿಂದ ಆ ಮಾದವನ
    ಬಣ್ಣವನು ತಾ ಬಯಸಿ ಆಗಸವ ತಾನೋಡೆ ಮುಗಿಲಿನ್ನೂ ಕೆಂಪಾಗಿದೆ.

    ಮನದ ಕಲರವ ನೂರು
    ಇರುವ ಕಲರವ ಮೂರು ( ಕಲರವ : ಪಾರಿವಾಳ,ಪಾರಾವತ)
    ಕಲ್ಪಿಸಲು ಕಾವ್ಯವನು
    ಸಾಲುಗಳು ಸಾಕಾಗಿದೆ…….

    (ನಿಕುಂಜ = ಪೊದೆ ಅನ್ನೋ ಅರ್ಥದಲ್ಲಿ)

    ಇದು ನನ್ನ ಮೊದಲನೇ ಛಂದೋಬದ್ಧವಾದ(ಹಾಗೆ ತಿಳಿದಿರುವ) ಕಾವ್ಯ. ಸೂರ್ಯನನು ಕಾಣುವ ಮುನ್ನವೇ ಮಲ್ಲಿಗೆ ಹೂವನ್ನು ಗಿಡದಿಂದ ಬೇರ್ಪಡಿಸಿದಾಗ ಅವುಗಳು ತರುಣಿಯ (ಹೆಸರು ಕುಸುಮ) ಮೇಲೆ ಬೇಸರಿಸಿ, ಆಕೆಯನ್ನು ಅಳಿದು ಅರಳದೆ ಇದ್ದಾಗ, ತರುಣಿ ಹೂ ಪೋಣಿಸುವಾಗ ತನ್ನ ಇನಿಯನನು ನೆನೆದು ಕಾಣುವನೇನೋ ಎಂದು ಬಾಗಿಲನು ತೆರೆದಾಗ, ಅವಳ ಇನಿಯನ ಬದುಲು ಮಲ್ಲಿಗೆಯ ಇನಿಯ ಸೂರ್ಯನ(ಸೂರ್ಯನ ಬೆಳಕಿಗೆ ಮಲ್ಲಿಗೆ ಅರಳುವುದರಿಂದ ಹಾಗೆ ಭಾವಿಸಿದ್ದೇನೆ) ಕಿರಣಗಳು ಬಾಗಿಲ ಮೂಲಕ ಪ್ರವೇಶಿಸಿದಾಗ ಅವನನ್ನು ಕಂಡು, ಅರಳದ ಮಲ್ಲಿಗೆಗಳು ಅರಳಿದವು ಎಂಬುದು ಮೊದಲನೇ ಕಾವ್ಯ.. ತನ್ನ ಇನಿಯ ಮಾದವನಲ್ಲದೆ ಮತ್ಯಾರೂ ಆಗಿರದೆ ಅವನನ್ನು ಮೊದಲ ಬಾರಿಗೆ ಕಂಡದ್ದನ್ನು ನೆನೆದು ಮತ್ತೆ ಅವನ ನೀಲ ಬಣ್ಣವನು ನೋಡ ಬಯಸಿ ಆಗಸವನ್ನು ನೋಡಿದಾಗ ಇನ್ನೂ ಮುಂಜಾವಿನ ಕೆಂಬಣ್ಣ ಆಗಸದಿಂದ ಮಾಸಿರಲಿಲ್ಲ ಎಂಬುದು ಎರಡನೇ ಕಾವ್ಯದ ಅರ್ಥ.

    ಮೊದಲ ಬಾರಿಗೆ ಆಗಬಹುದಾದ ತಪ್ಪುಗಳನ್ನು ತಿದ್ದಿ.. ನನ್ನನ್ನೂ ನಿಮ್ಮ ಗರಡಿಗೆ ಸೇರಿಸಿಕೊಳ್ಳಿ…

    • ಪ್ರಿಯ ಅನಲ ಅವರೇ,

      ಪದ್ಯಪಾನದ ‘ಗರಡಿ’ಗೆ ಸ್ವಾಗತ

      ಅನಲನೆಂಬಂಕಿತಂ ಸಲ್ಗುಮೇ ಮಾರ್ದವತೆ-
      ಯನುನಯಿಸುತಿರ್ಪಂಗೆ ಪದ್ಯದೊಳ್ ಪೇಳ್?

      ನಿಮ್ಮ ವಾರ್ಧಕ ಷಟ್ಪದಿಗಳ ಭಾವ ಬಹಳ ಹಿಡಿಸಿತು, ಮಲ್ಲಿಗೆ ಹೂಗಳು ಸೂರ್ಯನನ್ನು ನೋಡಿ ಅರಳಿದುವು ಮತ್ತು ಕೃಷ್ಣವರ್ಣದ ಆಕಾಶವನ್ನು ನಿರೀಕ್ಷಿಸುತ್ತಿರುವ ಕೃಷ್ಣಾನುರಕ್ತೆ… ಉತ್ತಮವಾದ ಕಲ್ಪನೆಗಳು.

      ಒಂದೆರಡು ಅಂಶಗಳನ್ನು ಗಮನಿಸಿ:
      ಸಂಧಿ ಅವಕಾಶವಿರುವಲ್ಲಿ ಸಂಧಿ ಮಾಡಲೇಬೇಕಾಗುತ್ತದೆ, ಉದಾ: ತರಣಿ ಉದಯಿಪ = ತರುಣಿಯುದಯಿಪ
      ಸಂಸ್ಕೃತ ಕನ್ನಡಪದಗಳನ್ನು ಸಮಾಸಮಾಡುವಂತಿಲ್ಲ, ಉದಾ: ಇನ ಇನಿಯ X

      ಪದ್ಯಪಾನದ ಗರಡಿಯಲ್ಲಿ ಪಳಗಿ ಉತ್ತಮ ಜಟ್ಟಿಯಾಗುವಿರೆಂದು ಆಶಿಸುತ್ತೇನೆ:)

    • ಮಲ್ಲಿಗೆಯ ಇನಿಯ ಸೂರ್ಯ, ಅದನ್ನು ಅರಳಿಸುವ… ಹೂಗಳನ್ನು ಬೇರ್ಪಡಿಸಿದ್ದಕ್ಕೆ ಅವಳಿಗೆ ನೀಲವರ್ಣ elusive…ಚೆನ್ನಾದ ಕಲ್ಪನೆ.
      ೧) ವಿಸಂಧಿಗಳು ತೀರ ದೂಷಿತವೇನಲ್ಲ. ಆದರೂ ಸರಿಪಡಿಸುವುದೊಳ್ಳೆಯದು.
      ೨) ಹೂಗಳೂ, ನೆನೆಯುತ್ತಿದೇ ಇತ್ಯಾದಿಗಳ ಪಾದಾಂತ್ಯ ಅಕ್ಷರಗಳು ಹೇಗೂ ಗುರ್ವಕ್ಷರಗಳು. ಅವನ್ನು ದೀರ್ಘ ಮಾಡಿದರೆ ಕಾಗುಣಿತ ಕೆಡುತ್ತದೆ.
      ೩) ಅರಳದಿರ್ ತಾವಾಗೆ – ಸ್ವಲ್ಪ ಸವರಿಸಿ
      (ಯಃಕಶ್ಚಿತ್ ಅಬ್ಸರ್ವೇಶನ್: ವಧನ – ಮಾದವ: ಮಹಾಪ್ರಾಣಪಲ್ಲಟ. ಟೈಪೋ ಇರಬಹುದು 😉 )

  18. ಕಡೆಗುಳಿದ ಬಿಳಿಮಲ್ಲೆ ರಾಶಿಯನೆ ತಾಬಾಲೆ
    ಕಡೆಗಣಿಸಿ ಮೈಮರೆತು ಕನಸಕಾಣು
    ತೆಡಬದಿಯ ಬಿಳಿಹಕ್ಕಿ ಹಿಂಡನೇ ಹೂವೆಂದು
    ಹಿಡಿಯುವಳೆ ಕೈಯೊತ್ತಿ ಮಾಲೆಕಟ್ಟೆ ।

    • ‘ತ್ತೆಡಬದಿಯ’ ಎಂದು ಬರೆದರೆ, ಪೂರ್ವಾರ್ಧಕ್ಕೆ ಅಲ್ಪವಿರಾಮವಾದರೂ ಹಾಕಿದಂತಾಗುತ್ತದೆ.

    • ಎಡಬದಿಯ ಬಿಳಿಹಕ್ಕಿಹಿಂಡನೇ ಹೂವೆಂದು
      ಹಿಡಿಯುವೊಡೆ ಕೈನೀಡಿ ಮಾಲೆಕಟ್ಟಲ್।
      ಅಡಿಯದರ ಹಿಡಿದುಕಟ್ಟಲಿ ದಾರದೊಳಗಾಕೆ
      ಮುಡಿಗೆ ಜೀರದೊವೋಲು ತಡೆಯೊ ದೇವ||

      • “ತೊಡಿಸಿದರೆ” ಸಾಕಯ್ಯೋ …. !ಎಂದಿರಾ? ಟೈಪೋ ಇರಬಹುದೇ?

      • ಇಲ್ಲ. ಟೈಪೊ ಇಲ್ಲ. ಹೂವೆಂದು ಪಾರಿವಾಳವನ್ನು ತೆಗೆದುಕೊಂಡರೆ ಚಿಂತಿಲ್ಲ. ದಾರವನ್ನು ಅದರ ಕಾಲಿಗೆ ಕಟ್ಟಲಿ, ಅದರ ಕೊರಳಿಗೆ ಬಿಗಿಯುವುದು ಬೇಡ, ಅಷ್ಟೆ. ಆ ಸಾಲನ್ನು ಪುನಾರಚಿಸಿದ್ದೇನೆ.

      • ಅಂಶಚ್ಛಂದಸ್ಸಿನ ನಿಯಮಗಳೆಲ್ಲ ಹೃ-
        ದಂಶದೆ ನಿಲ್ಲದೆ ಹೋದುವೇನು?
        ವಾಂಶಿಕಮಾಧುರ್ಯದಲ್ಲಿಂತಪಸ್ವರ-
        ವಂಶಗಳಾಳ್ವುದೆ ಹಾದಿರಂಪ ?

        ನಿಮ್ಮ “ಸೊಬಗಿನ ಸೋನೆ” ಪದ್ಯದ ಮೂರನೆಯ ಮತ್ತು ನಾಲ್ಕನೆಯ
        ಪಾದಗಳ ಮೊದಲ ಗಣಗಳು ವಿಷ್ಣುವಿಗೆ ಬದಲಾಗಿ ರುದ್ರಗಳಾಗಿವೆ. ದಯವಿಟ್ಟು ಸವರಿಸಿರಿ.

      • If you are referring to my verse ಎಡಬದಿಯ ಬಿಳಿಹಕ್ಕಿಹಿಂಡನೇ ……………… ತೊಡಿಸದಿರೆ ಸಾಕಯ್ಯೊ ಕೊರಳಿಗದನು, then it is in ಪಂಚಮಾತ್ರ, not in ಸೊಬಗಿನಸೋನೆ. ನೀವು ನನಗೆ ಸೊಬಗಿನಸೋನೆಯನ್ನು ಕಲಿಸಿಯೇ ಇರಲಿಲ್ಲ. ಈಗ ಪರೋಕ್ಷವಾಗಿ ಕಲಿಸಿದ್ದೀರಾಗಿ, ಈಗ ಅದರಲ್ಲಿ ರಚಿಸುತ್ತೇನೆ:

        ಸೊಬಗಿನಸೋನೆಯೊಳೀತೆರ ವ್ಯತ್ಯಯ-
        ಚುಬುಕನದೆಂಬರು ಪಂಚಮಾತ್ರ|
        ಸೊಬಗೆನಿಪಂಶದೀ ವೃತ್ತಮನಿಂದು ನೀಂ
        ಜಬರಿಂದೆ ಕಲಿಸಿರೆ ಬರೆದೆನೀಗಳ್||

    • Nice twist

  19. ಹೆಕ್ಕಿ ಹೂಗಳ ಹೆಣೆವ ನೆಪದಲಿ
    ದಕ್ಕಿದೇಕಾಂತದಲೊಳಮನದಿ
    ನಕ್ಕ ಬಾಲೆಯ ಮುಗ್ಧ ಮೌನಕೆ ತಕ್ಕ ಕಾರಣವಂ ।
    ಹಕ್ಕಿಹಿಂಡದು ಕಾಳ ನೆನಪಲಿ
    ಹೊಕ್ಕಲಾತಂಕದಲೊಳಮನೆಯ
    ಲಕ್ಕ ಕಂಡಿರೆ ಕೇಳಿ ನಕ್ಕಿವೆ ಪಕ್ಕ ಕಾಣವನುಂ ॥

  20. ಮುಖಕಾಂತಿಯಿಂದೆ ಚೆನ್ನೆಯು
    ಸುಖಮಿರ್ದಪುದೆನೆ ಬೆಡಂಗಿರಲ್ವಸ್ತ್ರದೊಳು೦ |
    ಸಖಿತಾಂ ಕಪೋತಕಾದೊಡೆ
    ನಖದಿ೦ದೇತಕೊ ಕಳರ್ಚುತಿರ್ಪಳ್ ಸುಮಮಂ |

    ಇದು ಒಂದು ಸ್ತಬ್ದ ಚಿತ್ರವಾದ್ದರಿಂದ, ಇವಳು ಹೂ ಕಟ್ಟುತ್ತಿದ್ದಾಳೆ ಎನ್ನುವುದರ ಬದಲಾಗಿ ಕಟ್ಟಿದ ಮಾಲೆಯನ್ನು ಬಿಡಿಸುತ್ತಿದ್ದಾಳೆ ಎಂಬ ಚಿತ್ರಣ ವಾಚ್ಯದಲ್ಲಿ ಕೊಟ್ಟಿದ್ದಾಗಿದೆ. ಎಲ್ಲ ಸರಿಯಿರುವಂತೆ ಕಾಣುತ್ತಿರುವಳಾದರೂ ಇದೇಕೋ ಹೀಗೆ ಮಾಡುತ್ತಿದ್ದಾಳೆ ಎಂಬ ಸಂದೇಹವಷ್ಟೇ.

    • ಇದೀಗ ನಿಮ್ಮ ಪದ್ಯಕ್ಕೆ ಮತ್ತೂ ಮಿಗಿಲಾದ ಹಳಗನ್ನಡದ ಹದ ತುಂಬಿತು:-)
      ಒಂದೆರಡು ಸವರಣೆ:
      …………….ಚೆನ್ನೆಯು
      ………………………………………|
      ……………ಕಪೋತಕಾದೊಡೆ
      ………………………………………||

      ಕಟ್ಟಿರ್ಪ ಮಾಲೆಯಂ ಸತಿಯ ಕೊರಲೊಳ್ ತೊಡಿಸೆ
      ದಿಟ್ಟಮಿರ್ದಪ ನಿಮಗದೇಕೆ ಪಾಪಂ |
      ನಟ್ಟನೋಟದೆ ಕನಸುಗೊಂಡೀ ಮುಗುದೆಯೊಲ್ದು
      ಕಟ್ಟುವೀ ಮಾಲೆಯಂ ಬಿಡಿಸುವಾಸೆ? 🙂

      • ಧನ್ಯವಾದಗಳು ಸಾರ್,

        ಸರಿಪಡಿಸಿದ್ದೇನೆ…
        ಯಾರದೋ ಧ್ಯಾನದಲ್ಲಿ ಇವಳು ಕಟ್ಟುತ್ತಿದ್ದ ಮಾಲೆಯನ್ನು ತನಗರಿವಿಲ್ಲದಂತೆಯೇ ಬಿಡಿಸುತ್ತಿದ್ದಾಳೆ ಎ೦ಬುದನ್ನು ಸೂಚಿಸಲು ಪ್ರಯತ್ನಿಸಿದೆ…ನೋಡುವುದಕ್ಕೆ ಎಲ್ಲ ಸರಿಯಿರುವಂತೆ ಕಂಡರೂ ಏಕೆ ಹೀಗೆ ಮಾಡುತ್ತಿದ್ದಾಳೆಂದು ನೋಡುಗರು ಪ್ರಶ್ನಿಸಿಕೊಂಡರೂ, ಅವಳ ಆಂತರ್ಯ ಬೇರೆಯೆಲ್ಲೋ ಮುಳುಗಿದೆ 🙂

        ಗುಣಮಿದು ಶೃಂಗಾರಕೆ ಹತಾಶೆಯ ಅಭಿವ್ಯಕ್ತಿಯಲ್ತು.

  21. ಹಳೆಗೋಡೆ ಹಳೆಬಣ್ಣ ಹಳೆಪಾತ್ರೆ ಹಳೆಯುಡುಗೆ
    ಹಳೆಗಾಲವಿರ್ದೊಡೇಂ ಚಿತ್ರವಿದರ|
    ಹಳೆಯದೆಲ್ಲವ ಹಳಿಯದಿರು ರೂಕ್ಷಮೆನುತೆಂದು
    ಹಳೆಯದಾ ಭಾವಮೆಂದೆಂದು ಪೊಸತೈ|| (ಅವಳ ಮುಖಭಾವ)

    • ಪ್ರಸಾದುರವರೇ ನಿಮ್ಮ ಪದ್ಯವನ್ನು ಅನುವಾದಿಸುವ ಪ್ರಯತ್ನ-
      ವಸ್ತ್ರಂ ಚ ಪಾತ್ರಂ ಚ ಭಿತ್ತೇಶ್ಚ ವರ್ಣಃ
      ಸರ್ವಾಣಿ ವಸ್ತೂನಿ ಪುರಾತನಾನಿ॥
      ಚಿತ್ರೇ ತು ಸಂತೀತಿ ನ ಚಿನ್ತಯನ್ತು
      ಯತೋಸ್ತಿ ಭಾವಃ ಚಿರನೂತನೋತ್ರ॥

    • ಹಳೆಪಾತ್ರೆ ಹಳೆ ಕಬುಣಾ ಹಳೆ ಪೇಪರ್ ಥಾಹೋಯಿ- ಹಾಡು ನೆನಪಿಗೆ ತಂದಿರಿ. ಆಹ;)

  22. ಹುಡುಗಿಯು ಹೂಗಳ ರೂಪದಲ್ಲಿನ ತನ್ನ ಆಸೆ ಆಕಾಂಕ್ಷೆಗಳ ಮಾಲೆ ಕಟ್ಟುತ್ತಿದ್ದಾಳೆ. ಇದನ್ನು ಕಂಡ ಸೂರ್ಯನು ಪ್ರೀತಿಯಿಂದ ಆಕೆಗೆ ಮುತ್ತಿಡುತ್ತಿದ್ದಾನೆ (ಹುಡುಗಿಯ ಮುಖದ ಮೇಲೆ ಬೀಳುತ್ತಿರುವ ಬೆಳಕನ್ನು ಗಮನಿಸಿ) ಎಂಬುದು ಪದ್ಯದ ಭಾವ.
    ಪದ್ಯದ ಛಂದಸ್ಸು ಮತ್ತು ಈ ಹುಡುಗಿ ಕಟ್ಟುತ್ತಿರುವ ಮಾಲೆ ಎರಡೂ ಒಂದೇ ಆಗಿದೆ. 🙂 🙂

    ಕೋಸುತಿರ್ಪಳಬೋಧಬಾಲಕಿಯಾನು ಪೂಗಳಮಾಲೆಯಂ
    ಬೇಸಱೊಡ್ಡಲನೇಕ ಕಾರಣಮಿಕ್ಕೆಯೊಳ್ ತನಗಿರ್ದೊಡಂ
    ಭಾಸಿತಾಕ್ಷಿಯಗಾಧಕಾಂಕ್ಷೆಯನೊಪ್ಪದಿಂ ಕುಸುಮಂಗಳೊಳ್
    ಸೂಸಿರಲ್ಕೊಱಲಿಂಗರಂಗಳರಾಯನಿಂತು ಕರ್ದುಂಕಿದನ್

    (‘ಕರ್ದುಂಕು’ ಎಂಬ ಪದ ಶಿಥಿಲದ್ವಿತ್ವದಲ್ಲಿದೆ)

    ಕೋಸು = ಹೆಣೆ, ಪೋಣಿಸು
    ಇಕ್ಕೆ = ಮನೆ
    ಭಾಸಿತಾಕ್ಷಿ = ಹೊಳೆವ ಕಣ್ಣುಳ್ಳವಳು
    ಒಱಲ್ = ಪ್ರೀತಿ
    ಗರಂಗಳರಾಯ = ಸೂರ್ಯ
    ಕರ್ದುಂಕು = ಮುತ್ತಿಡು

    • ಮಲ್ಲಿಕಾಸುಮಮಾಲೆಯಂ ನವಮಲ್ಲಿಕೋತ್ತರಮಾಲೆಯೊಳ್
      ಪುಲ್ಲಿತೋಕ್ತಿವಧೂಕೃಪಾಕರವೇಲ್ಲಿತಾತ್ಮನಿರಲ್ಕೆ ನೀಂ|
      ಸೊಲ್ಲಿಸಿರ್ಪ ವಿಧಾನಮುಂ ಬಗೆ ಗೆಲ್ಲಿಸಿರ್ಪ ವಿವೇಕಮುಂ
      ಝಲ್ಲೆನಿಪ್ಪ ಕವಿತ್ವದೊಳ್ ರಸಗೀತಪಲ್ಲವಿಯಾದುದಯ್ !!

    • bahaLa chennAgide maurya:)

    • Now I am scared to appreciate….that you will reply back saying “maama” 🙂
      Really a very good effort. keep it up sir.

      • che che….nothing offensive…ದೊಡ್ಡೋರ್ನೆಲ್ಲಾ ಮಾಮಾ / ಅತ್ತೆ ಅಂತಾ ಕರೆಯೋದು ನನ್ನ ವಾಡಿಕೆ….ಅಂಕಲ್, ಆಂಟಿ ವಿದೇಶಿ ಆಯ್ತು….ಮಾಮಾ, ಅತ್ತೆ ದೇಶಿ….ನಿಮ್ಗೆ ಇಷ್ಟ ಆಗ್ಲಿಲ್ಲ ಅಂದ್ರೆ ಇನ್ಮೇಲೆ ಹಾಗೆ ಕರೆಯಲ್ಲ…sorry ! 🙂

        • priya Maurya, as long as you are writing good padyas its good!, pl keep up the good work. Feel free 🙂

    • ಪ್ರಿಯ ಮೌರ್ಯ,
      ಹಳೆಗನ್ನಡದ ತುಂಬು ಪರಿಮಳದ “ಮಲ್ಲಿಕಾ ಮಾಲೆ”ಗೆ ಅಭಿನಂದನೆಗಳು. ಶತಾವಧಾನದಲ್ಲಿ ನಾನು ಬಹುಮಾನವಾಗಿ ಪಡೆದ “ಪದ್ಯಪಾನದ T-Shirt”ನ ನಿನಗೆ ಉಡುಗೊರೆಯಾಗಿ ಕೊಡುತಿದ್ದೇನೆ.

      • ಹಿಂದೊಮ್ಮೆ ನಾನು ಕುಚೋದ್ಯಕ್ಕಾಗಿ ‘ಇಮ್ಮಡಿಮೌರ್ಯ’ ಎಂದಿದ್ದೆ. ಆಳನ್ನು ನೋಡಿದಮೇಲೆ ನಾನು ಹೇಳಿದ್ದು ಸರಿ ಎನಿಸಿತು. ಮೌರ್ಯನ ಅಳತೆ XXL.

        • ಹೀಗೆಲ್ಲಾ ಹೇಳಿ ಅವರ ಟಿ-ಶರ್ಟ್ನನ್ನು ತಪ್ಪಿಸುವ ಹುನ್ನಾರ ಸಮಂಜಸವಲ್ಲ. ನಿಮ್ಮ ರಂಪಕ್ಕೆ ಹೆದರಿ ಉಷಾರವರು ಆ ಟಿ-ಶರ್ಟನ್ನು ನಿಮಗೇನೂ ಕೊಡಲಾರರು 🙂
          ಅಂದ ಹಾಗೆ, ಕುಚೋದ್ಯಕ್ಕಾಗಿ ನಿಮ್ಮನ್ನು ಏನಂತ ಕರೆಯೋಣ? [ಗಾತ್ರದ ದೃಷ್ಟಿಯಿಂದ – ಉಳಿದಂತೆ ಅನೇಕ ಬಿರುದುಗಳಿವೆಯಲ್ಲ] 🙂

        • ೧) ಅವರು ಅದನ್ನು ನೇರವಾಗಿ ನನಗೇನೂ ಕೊಡುವುದು ಬೇಡ. ಮೌರ್ಯನಿಗೇ ಕೊಡಲಿ. ಅಲ್ಲಿಂದ ಅದು ನನಗೆ ರವಾನೆಯಾಗುತ್ತದೆ.
          ೨) ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನೋಣವೆ? ಗಮನಿಸಿ: ಗಾತ್ರದ ದೃಷ್ಟಿಯಿಂದಲೂ ಬಿರುದುಗಳಿವೆ, ಬಣ್ಣದ ದೃಷ್ಟಿಯಿಂದಲೂ ಇವೆ.
          ೩) ’ನನ್ನ’ ರಂಪ ಅಂತ ಏನೂ ಇಲ್ಲ. ’ನಾನೇ’ ರಂಪ. ರಂ=ರಂಗನಾಥ, ಪ=ಪ್ರಸಾದ್

          • ’ನನ್ನ’ ರಂಪ ಅಂತ ಏನೂ ಇಲ್ಲ. ’ನಾನೇ’ ರಂಪ. ರಂ=ರಂಗನಾಥ, ಪ=ಪ್ರಸಾದ್

            ಹೌದೇ ಪ್ರಸಾದು, ಹಾಗಿದ್ದರೆ ಹಾದಿರಂಪ ಅಂಕಿತದಲ್ಲಿ, ‘ಹಾದಿ’ ಎಂದರೆ ಏನರ್ಥ?

            ಅಂಕಿsತsಮಲ್ತಲ್ತಿsದನ್ವರ್ಥsಮೇ! ಜನರಂ
            ಮಂಕಾಗಿsಸುವ ನಿಮ್ಮs ಬಲ್ಮೆs ಪೆರ್ಚೈ
            ಬಿಂಕsವs ತೋರsದೆs ಸಮ್ಮsತಿs ಸೂಚಿsಸಿs
            ಶಂಕೆsಯೆs? ನಾನಿಮ್ಮs ಅಭಿಮಾನಿs 🙂

          • ” ರಂಪ “ಚನ್ನಾಗಿದೆ. “ಹಾದಿ”ಎಂದರೆ “ಹಾಸ್ಯ – ದಿಗ್ಗಜ” ಆಗಬಹುದೇ ?

          • Oho, dhArALavAgi Agabahudu

          • ರೋದಿಸುತಿರ್ದೆನಾನಿನಿತು ದಿನಂಗಳು
            ಬೀದಿಪಾಲಾಗಿರ್ದು ಸೋಮ|
            ಕಾದಿದ್ದೆ ತಮ್ಮವೋಲಭಿಮಾನಿಗಳಿಗಾಗಿ
            ಹಾದಿಗೆ ಬಂದಿರ್ಪೆನೀಗಳ್||
            ರೋದನವೆನ್ನದದಾರಯ್ಯ ಕೇಳ್ವರು
            ಸೇದಿಪೋಗಿತ್ತೆನ್ನ ಜಿಹ್ವೆ|
            ಮೇದರು (ಮಾತ ನೇಯುವವರು) ತಮ್ಮಂಥರ್ ಕಲಿಸಲಕ್ಕರವೆಲ್ಡ
            ಸೀದ ತಾನಾದನ್ ಪ್ರಸಾದು||
            ವೇದsವsನೋದsಲಾರೆನು ನಿಮ್ಮೊsಲಂದsದೆs
            ಗಾದೆsಗsಳೊಂದಷ್ಟs ಬಲ್ಲೆs|
            ಸೌದೆsಯೊಳ್ ಸೆದೆಯsದೆ ಶಾಂತಿsಲೆs ತಿಳಿಪೊsಡೆs
            ಹೈದsನೆsನಿsಪs ಪ್ರsಸಾದು||

      • ಅಯ್ಯಯ್ಯೋ ಕ್ಷಮಿಸಿ…ಇನ್ಮೇಲೆ ಯಾರನ್ನೂ ಮಾಮಾ ಅಂತಾ ಕರೆಯಲ್ಲ…ತ್ರಾಹಿ ತ್ರಾಹಿ…ಸ್ವಲ್ಪ ಕರುಣೆ ತೋರಿಸಿ..!!

        ರಾಹುಕಾಲಂ ಗಡಾ ಸೋಮರಂ ಮಾಮನೆಂ
        ದಾಹಿಸಲ್ಕಾಂ ಕುಚೋದ್ಯಂಗಳಜ್ಞಾನದಿಂ
        ಪಾಹಿಯೆಂದೆಂಬೆನಾಮೆಲ್ಲರೊಳ್ ಭೀತಿಯಿಂ
        ದೂಹೆಯಂ ದಾಂಟಿತೀ ಚುಲ್ಲ “ಮಾಮಾಯಣಂ”

      • ಉಷಾ ma’am…ಸುಮ್ನೆ ನಿಮ್ಗೆ ತೊಂದ್ರೆ ಯಾಕೆ ?…ಗಿಫ಼್ಟು ಪಫ಼್ಟು ಎಲ್ಲಾ ಏನೂ ಬೇಡಿ… 🙂

        • ನೀನು ಗಂಡಸರನ್ನೋ ’ಮಾಮ’ ಅನ್ನೋಲ್ಲ ಅಂದದ್ದು? ಹೆಂಗಸರನ್ನು ಇನ್ನೂ ’ಮಾಮ್’ ಎಂದೇ ಕರೆಯುತ್ತಿದ್ದಿ?

    • It should either be:
      ಕೋಸುತಿrpenaಬೋಧಬಾಲಕಿಯಾನು ಪೂಗಳಮಾಲೆಯಂ OR
      ಕೋಸುತಿರ್ಪಳಬೋಧಬಾಲಕಿ tAnu ಪೂಗಳಮಾಲೆಯಂ

      • ಸವರಿಸಿದ್ದೇನೆ ಸಾರ್ –

        ಕೋಸುತಿರ್ಪಳಬೋಧಬಾಲಕಿ ತಾನು ಪೂಗಳಮಾಲೆಯಂ
        ಬೇಸಱೊಡ್ಡಲನೇಕ ಕಾರಣಮಿಕ್ಕೆಯೊಳ್ ತನಗಿರ್ದೊಡಂ
        ಭಾಸಿತಾಕ್ಷಿಯಗಾಧಕಾಂಕ್ಷೆಯನೊಪ್ಪದಿಂ ಕುಸುಮಂಗಳೊಳ್
        ಸೂಸಿರಲ್ಕೊಱಲಿಂಗರಂಗಳರಾಯನಿಂತು ಕರ್ದುಂಕಿದನ್

  23. Yaa khuda…this is d first padya completely approved by masterji…thank u masterji n soma maama.
    ..!!! 🙂 🙂

    • ಮಾಷ್ಟರ್ ಜೀಯೆಂಬೀ ದುರ-
      ದೃಷ್ಟದ ಸಂಬುದ್ಧಿ (way of addressing) ಬೇಕೆ ಶ್ರೀಶಾ!! ಮೌರ್ಯಾ !!
      ಇಷ್ಟರೊಳೀ ಪರಿ ಬಿಗುಪೇಂ?
      ತುಷ್ಟಿಸುವೆಂ ಮಾಮನಲ್ಲಮೆಂದಾಂ ಸೋಮಾ !!

  24. “ಇರವಂತಿಗೆ”

    ಚಂಬುತುಂಬಿಹ ನೀರ ಚಿಮುಕಿಸೆ
    ಬಿಂಬ ಕಂಡಿದೆ ಹೂವಲೀ
    ತುಂಬು ಬೆಳಕಿನಲೊಲವು ಚಿಮ್ಮಿರೆ
    ನಂಬು ಕಂಡಿದೆ ಕಣ್ಣಲೀ ॥

    ರೂಪಗಂಧವ ಬೆಸೆಯೆ ಮಾಲೆಯ
    ದೀಪ ಕಂಗಳ ಬೆಳಕ(ಲಪ)ಲೀ
    ರೂಪದಂದವ ನೆಸೆಯೆ ಬಾಲೆಯ
    ಛಾಪು ಕಂಡಿದೆ ಹೊಳಪಲೀ ॥

    ಪಾರಿವಾಳದ ಪರಿವೆಯಿಲ್ಲದ
    ನೀರೆಯೀಪರಿ”ವೇಷ”ವೂ !
    ಪಾರಿಜಾತದ ಇರುವಿನಲ್ಲಿಯೆ
    ಯಾರಿಗೀಪರಿ”ಹಾರ”ವೂ ?

    • Nice agin usha

      • ಧನ್ಯವಾದಗಳು ಶ್ರೀಕಾಂತ್ ಸರ್,
        ಇದೇ ಖುಷಿಯಲ್ಲಿ, “ಇರವಂತಿಗೆ” ಈ ಪಲ್ಲವಿ. (ಈ ಹಾಡನ್ನ “ಯಾವ ಮೋಹನ ಮುರಳಿ ಕರೆಯಿತು ….” ಧಾಟಿಯಲ್ಲಿ ನಿಜವಾಗಿ ಹಾಡಿ ಅನುಭವಿಸಿದ್ದೇನೆ !)

        ಯಾವ ಕಾವ್ಯದ ಕಲ್ಪ ಸೆಳೆದಿದೆ
        ಭಾವದಾಳಕೆ ನಿನ್ನನೂ
        ಯಾವ ಮಂಗಳ ಮಂತ್ರ ಮುಸುಕಿದೆ
        ಕಾವ ನಿನ್ನಯ ಕಣ್ಣನೂ ॥ಪ ॥

        ಇಂಬುತುಂಬಲುವಂಬ ಚಿಮುಕಿಸೆ
        ….

        ಹೊರಗೆ ಕಂಡಿದೆ ಹೂವ ಹೆಣೆಯುವ
        ಬೆರಳ ಗಂಟಿನ ದಾಸ್ಯವೂ
        ಸರಲೆಯೊಳಡೆ ಭಾವ ಬೆಸೆಯುವ
        ಕೊರಳ ನಂಟಿನ ಲಾಸ್ಯವೂ ॥೪ ॥

  25. ಪೊತ್ತುಮೀರ್ದರು ಗೆಣೆಯನೊಡಗೂಡಿ ಬೆರೆಯುವೀ
    ಚಿತ್ತಸಂಯಮಕೋಟೆಯೊಳ್ ಬಂಧಿ ನಾ
    ಸುತ್ತಿಹೇಕಾಂಗಿತನಮಂ ಖಗಕೆ ಪೇಳುವದು
    ಕತ್ತಲೆಯ ಕಹಿಯಿನಂಗೊರೆದಂತೆಯೆ

    • ಕತ್ತಲೆಯ ಕಹಿಯೊರೆಯದಿರದೆಂದುಮಿನನಿಗೆ
      ಚ್ಚೆತ್ತುಕೊಂಡೊಡಮಾತ ಕಷ್ಟಮಲ್ತೆ|
      ಪೊತ್ತಿರುಳು ತಡಮಾಗಿ ಗೆಣೆಯ ಬಂದಾನದೋ
      ಚಿತ್ತಸಂಯಮ ಘಾಟನುಳಿಸಿಕೊಳ್ಳೌ||

    • ಕಾಂಚನ ಅವರೆ. ಸುಖಿಯ ಕೈಲಿ ಆಪತ್ತು ಹೇಳಿಕೊಳ್ಳುವ ಪೇಚಾಟದ ಭಾವ ಛಲೋ ಅದೆ

  26. ದೇವ ಪೂಜೆಗೆನುತ್ತ ತಂದಿರೆ ಹೂವು ತುಂಬಿದ ಪಾತ್ರೆಯ
    ಹೂವ ಕೋದಿಹಳೀಕೆ ಮಲ್ಲಿಗೆ ಮಾಲೆಯೊಂದನು ಮಾಡುತ
    ಯಾವ ಧ್ಯಾನವದಾವ ಮಾಯವದೆತ್ತಲೋಡಿವೆ ಕಂಗಳು?
    ಸಾವಧಾನದೊಳೀಕೆ ಯಾರನು ಕಾಯುತಾ ನಸು ನಕ್ಕಳೊ!

  27. ಸೊಲ್ಲಿರದ ಚಿತ್ರಪಟಕೆಲ್ಲಿಂದಬಂದುದೀ
    ಮಲ್ಲಿಗೆಯ ಪರಿಮಳದ ಸಲ್ಲಾಪವು?
    ಉಲ್ಲಾಸ ಮೊಳೆದೆದ್ದು ಪದದ ಮೊಗ್ಗುಗಳಾಗು
    ತೆಲ್ಲರೆದೆಯಾಳದಿಂ ಪದ್ಯಮಾಯ್ತೆ?

    • ಚಂದ್ರಮೌಳಿಯವರೇ ಬಹಳ ಚೆನ್ನಾಗಿದೆ ಕಲ್ಪನೆ 🙂

    • ತುಂಬ ಚೆನ್ನಾದ ಪದ್ಯ. ಈ ವರೆಗೆ ಈ ಚಿತ್ರಕ್ಕೆ ಬರುತ್ತಿದ್ದ ಪದ್ಯಪ್ರತಿಕ್ರಿಯೆಗಳಿಗಿಂತ ವಿಭಿನ್ನವಾಗಿ ಹೊಮ್ಮಿದ ಈ ಕಲ್ಪನೆಯು ಮತ್ತಷ್ಟು ವಿನೂತನಪದ್ಯಗಳಿಗೆ ಪ್ರೇರಣೆಯಾದೀತು. ಇದು ತಾನೆ ಪ್ರತಿಭೆಯ ಆನಂತ್ಯದ ಲಕ್ಷಣ!! ಧನ್ಯವಾದಗಳು.

      • ಚೆನ್ನಾದ ಪದ್ಯಗಳ ಚಿಲುಮೆ ಮೈಮರೆಸಿರಲು
        ಬಿನ್ನಣದ ಹಾಸ್ಯದಿಂಬಣ್ಣವಡೆದು
        ಇನ್ನೊಂದು ಪದ್ಯವೇ! ಮೆಚ್ಚುನುಡಿಸಾಕೆಂಬು
        ದೆನ್ನಭಾವವು, ನಮನ ಧನ್ಯವಾದ

    • ಕವಿಯ ಸ್ವಾತಂತ್ರ್ಯವಲ್ಲದಿಹುದಿನ್ನೇನಿದೋ
      ಕವನ ಪುಟ್ಟದು ಬಿಗಿದ ತುಟಿಮೊಗ್ಗಿನಿಂ|
      ತವಕದಲಿ ಬಿರಿಯುತಲಿ ಸೊಲ್ಲಗೈವುದು ಜಿಹ್ವೆ
      ಗವಿಭಾವದಿಂದಲ್ಲ ಪೊರದ್ರವ್ಯದಿಂ 😉

      (ಎದೆಯಾಳದಿಂ Vs ಗವಿಭಾವದಿಂದಲ್ಲ)

  28. ಚೆನ್ನೆಚೆಲ್ವೆಯ ನೋಡುವುದಕಂ
    ಮುನ್ನವೇ ತಾ ಬರ್ಪೆನೆನ್ನ-
    ಲ್ಲಿನ್ನುಬಾರದ ಕಾರಣವ ಮನದೊಳಗೆ ಹೆಣೆದಿರಲು|
    ಕೆನ್ನೆಯಿಂ ಪುಸಿನಗೆಯ ಸೂಸುತೆ
    ಸನ್ನೆ ತೋರ್ದಳ್ ಹುಬ್ಬನೇರಿಸಿ
    ತನ್ನಿನಿಯನಂ ಕರೆದುತಾರೆನೆ ಖಗಗಳಂ ಪೇಳ್ದಳ್

    • ಬರ್ಪೆನೆನಲು/ಬರ್ಪೆನೆನಲ್+ಇನ್ನು=ಬರ್ಪೆನೆನಲಿನ್ನು
      ಬರ್ಪೆನೆನ್ನಲ್ಲಿನ್ನು=ಬರ್ಪೆನೆನ್ನಲ್ಲಿ+ಇನ್ನು – ಸ್ಪಷ್ಟತೆ ಇರದು.

      ಖಗಗಳಿಗೆ ಪೇಳ್ದಳ್ or ಖಗಗಳಂ ಕೋರ್ದಳ್

      ಚೆನ್ನೆಚೆಲ್ವೆಯ ನೋಡುವುದಕಂ
      ಮುನ್ನಮೇ ತಾ ಬರ್ಪೆನೆಂದಿಹ
      ಚೆನ್ನ ಬಾರದ ಕಾರಣವ ಮನದೊಳಗೆ ಹೆಣೆಯುತಲಿ|
      ಕೆನ್ನೆಯಿಂ ಪುಸಿನಗೆಯ ಸೂಸುತೆ
      ಸನ್ನೆ ತೋರುತೆ ಹುಬ್ಬನೆಬ್ಬಿಸಿ
      ತನ್ನಿನಿಯನಂ ಕರೆದುತಾರೆನೆ ಖಗಗಳಂ ಕೋರ್ದಳ್||

      ಇನ್ನೂ ಚೆನ್ನಾಗಿ ಸವರಲು ನೀವೇ ಪ್ರಯತ್ನಿಸಿ

  29. ಪ್ರಸಾದುರವರೇ ನಿಮ್ಮ ಪದ್ಯವನ್ನು ಅನುವಾದಿಸುವ ಪ್ರಯತ್ನ-
    ವಸ್ತ್ರಂ ಚ ಪಾತ್ರಂ ಚ ಭಿತ್ತೇಶ್ಚ ವರ್ಣಃ
    ಸರ್ವಾಣಿ ವಸ್ತೂನಿ ಪುರಾತನಾನಿ॥
    ಚಿತ್ರೇ ತು ಸಂತೀತಿ ನ ಚಿನ್ತಯನ್ತು
    ಯತೋಸ್ತಿ ಭಾವಃ ಚಿರನೂತನೋತ್ರ॥

    • ಭಿತ್ತೇಶ್ಚ ಎಂಬಲ್ಲಿ ಛಂದಸ್ಸು ಹಳಿತಪ್ಪಿದೆ. ದಯಮಾಡಿ ಸವರಿಸಿರಿ

      • ’…ಪ್ರದೇಶವರ್ಣಃ’ ಎಂದರೆ ಸರಿಯದೀತೇನೋ (ಶಿ.ದ್ವಿ)

  30. ತರುಣಿ ಮುಸ್ಸಂಜೆಯಲಿ ಹೊರಬರದೆ ತಾನಿರಲ್,
    ಅರುಣ ತಾಂ ಕಾತುರದಿ ಕಾಂತೆಯನು ಕಾದು|
    ಮರೆಸಿ ಹೂಗುಚ್ಚಗಳ ಹೊರಗವಳ ಸೆಳೆಯಲ್ಕೆ
    ಇರಿಸಿಹನು ಖಗಗಳನವಳ ಬಾಗಿಲಿಗೆ||

    • ಅರುಣ ಕಾದಿಹ ತರುಣಿ ಬೇರಲ್ಲವಾಕೆಯೇ
      ಕರುಣಾಳು ಕರ್ಣನಂ ಪೆರುವ ಮಾತೆ|
      ನಿರುಕಿಪನು ಮಾತ್ರಮಿನ್ನೆರಡು ಘಳಿಗೆಗಳಾತ
      ಕರವಚಾಚುವ ಮುನ್ನಮವಳವರೆಗಂ||

      ಕಶ್ಯಪ್,
      ೧) ಸಮಪಾದಗಳು ಸ್ವರಾಕ್ಷರದಿಂದ ಆರಂಭಗೊಂಡು ವಿಸಂಧಿದೋಷವಾಗಿದೆ – ತಾನಿರಲರುಣ, ಸೆಳೆಯಲ್ಕಿರಿಸಿ
      ೨) ಸಮಪಾದಗಳ ಕೊನೆಯಗಣದಲ್ಲಿ ಒಂದು ಗುರು ಮಾತ್ರ ಇರಬೇಕು. ಇಲ್ಲಿ ಹೆಚ್ಚು ಇದೆ. ಕಡೆಯಪಕ್ಷ ’ಮಂಕುತಿಮ್ಮನ ಕಗ್ಗ’ದಲ್ಲಿರುವಂತೆಯಾದರೂ ೨೦-೧೯-೨೦-೧೭ ಮಾಡಬೇಕು.
      ೩) ಕೊನೆಯ ಪಾದದಲ್ಲಿ ಲಘುಗಳು ಹೆಚ್ಚಾಗಿ ಗತಿ ಕ್ಲಿಷ್ಟವಾಗಿದೆ.
      ೪) ಗುಚ್ಚ ತಪ್ಪು. ಗುಚ್ಛ ಆಗಬೇಕು
      ಸವರಿಸಿ ಮತ್ತೆ ಬರೆಯಿರಿ.

    • ಬಹುದಿನಗಳ ಬಳಿಕ ಮತ್ತೆ ಕಾಣಿಸಿಕೊಂಡ ಕಾಶ್ಯಪರಿಗೆ ಸ್ವಾಗತ. ನಿಮ್ಮ ಪದ್ಯದ ಪರಿಷ್ಕಾರಕ್ಕೆ ಪ್ರಸಾದು ಅವರಿತ್ತ ಸಲಹೆಗಳು ಯುಕ್ತ.

    • ಧನ್ಯವಾದಗಳು ಪ್ರಸಾದು ಅವರೇ. ಪದ್ಯರಚನೆಯ ಕೆಲವು ಮೂಲಭೂತ ಅಂಶಗಳನ್ನು ನಾನು ಮರೆತು ಬರೆದಂತಿದೆ. ಪುನಃ ಪದ್ಯವನ್ನು ರಚಿಸಿ ಟಂಕಿಸುತ್ತೇನೆ. ಒಂದು ಸಂದೇಹವಿದೆ: ಸಮಸಾಲಿನ ಕೊನೆಯಗಣದಲ್ಲಿ ೩/೪ ಮತ್ತು ೧/೨ ಮಾತ್ರೆ ಇದ್ದಾಗ, ಎಲ್ಲವು ಲಘುವಾದಲ್ಲಿ ಅಥವಾ ಒಂದು ಗುರು ಒಂದು ಲಘುವಾದಲ್ಲಿ (ನನ್ನ ಪದ್ಯದಲ್ಲಿರುವಂತೆ) ಗತಿ ಕೆಡುತ್ತದೆಯೇ? ತಮ್ಮ (೨)ನೇ ಸಲಹೆಯನ್ನು ವಿಸ್ತರಿಸಬಹುದೇ?

      ಗಣೇಶ್ ಸರ್: ಧನ್ಯವಾದಗಳು.

    • ೧) ನಿಮ್ಮ ಪದ್ಯದಲ್ಲಿನ ವಿಸಂಧಿದೋಷಗಳನ್ನು ಸರಿಪಡಿಸಿದರೆ ಅದು ಹೀಗಾಗುತ್ತದೆ:
      ತರುಣಿ ಮುಸ್ಸಂಜೆಯಲಿ ಹೊರಬರದೆ /ತಾನಿರ/
      ಲರುಣ ತಾಂ ಕಾತುರದಿ ಕಾಂತೆಯನು /ಕಾದು/|
      ಮರೆಸಿ ಹೂಗುಚ್ಚಗಳ ಹೊರಗವಳ /ಸೆಳೆಯ/
      ಲ್ಕಿರಿಸಿಹನು ಖಗಗಳನವಳ ಬಾಗಿ/ಲಿಗೆ/||

      ಆಗ ಬೆಸಪಾದಗಳ ಕೊನೆಯಗಣಗಳಲ್ಲಿ ೪ ಮಾತ್ರೆಗಳಾಗುತ್ತವೆ. ಅವನ್ನು ಹೀಗೆ ಕಾಗುಣಿತದಲ್ಲಿ ಸರಿಪಡಿಸದಿದ್ದರೂ, ಉಚ್ಚಾರಣೆಯಲ್ಲಿ ೪ ಮಾತ್ರೆಗಳೇ ಇರುತ್ತವೆ. ಬೆಸಪಾದಗಳ ಕೊನೆಯಲ್ಲಿ ಒಂದು ಗುರುವಿಗಿಂತ ಹೆಚ್ಚು (೩ ಮತ್ತು ೨) ಮಾತ್ರೆಗಳಿವೆ.

      ಒಂದು ಮಾದರಿ ತಿದ್ದುಪಡಿ ಇಲ್ಲಿದೆ:
      ತರುಣಿ ಮುಸ್ಸಂಜೆಯಲಿ ಪೊರಮಟ್ಟುವಳೆನುತ್ತ
      ಲರುಣ ಕಾತರದೊಳಾಕೆಯನು ಕಾದು|
      ಇರಿಸಿರ್ಪನೇಂ ಪಕ್ಷಿಯನು ಮನೆಯ ಬಾಗಿಲೊಳ್
      ಮರೆಸಿ ಪೂಕಟ್ಟುವುದ, ಸೆಳೆಯಲವಳ||

      ೨) ಡಿವಿಜಿಯವರು ಮಾಡಿಕೊಂಡಿರುವ ತಿದ್ದುಪಡಿಯೆಂದರೆ ಎರಡನೆಯ ಪಾದದ ಊನ(ಕೊನೆಯ)ಗಣದಲ್ಲಿ ಹೆಚ್ಚು ಮಾತ್ರೆಗಳನ್ನಿರಿಸಿರುವುದು. ಉದಾ: ಕುದುರೆ ನೀ/ನವನು ಪೇ/ಳ್ದಂತೆ ಪಯ/ಣಿಗರು|; ಅಕ್ಕರದ/ ಬರಹಕ್ಕೆ/ ಮೊದಲಿಗನ/ದಾರು|; ಕಾಗೆ ಕ/ದ್ದುಣುವ ಭ/ಕ್ಷ್ಯವನು ಕಂ/ಡು ಕರುಬೆ|; ಚೇತ ಕೆರ/ಳಿರೆ ಕಣ್ಣು/ಕಿವಿಗಳಾ/ತುರದಿಂ|; ಕೊನೆಗೆ ಕಾ/ಡೊಳೊ ಮಸಾ/ಣದೊಳೊ ಮ/ತ್ತೆಲ್ಲೋ| (ಈಗ ಕಗ್ಗ ತಿರುವಿಹಾಕಿದೆ. ಎರಡನೆಯ ಪಾದದ ಊನಗಣದಲ್ಲಿ ’ನಾನನ’ ಬಳಸಿದಂತಿಲ್ಲ. ಅದು ಐದಕ್ಕೆ ಕರ್ಷಣೆಗೊಳ್ಳುತ್ತದೆ ಎಂದಿರಬೇಕು!). ನಾಲ್ಕನೆಯ ಪಾದದಲ್ಲಾದರೋ, ಅವರೂ ಹದಿನೇಳೇ ಮಾತ್ರೆಗಳನ್ನು ಉಳಿಸಿಕೊಂಡಿದ್ದಾರೆ.

  31. ನಿಜ-ಹೃದಿ ನವ-ಜಾತೈ-ರ್ಮುಗ್ಧ-ತರ್ಷ-ಪ್ರಸೂನೈ-
    ರ್ಯುವತಿ-ಸಹಜ-ಭಾವ್ಯೈಃ ಕೋಮಲೈ-ಶ್ಶುಭ್ರ-ವರ್ಣೈಃ |
    ಗಿರಿಶ-ಚರಣ-ಧೇಯಂ ಪ್ರಾರ್ಥನಾ-ರಾಜಿ-ಮಾಲಾ-
    ಮವಿದಿತ-ಸುಖ-ದುಃಖಾ ಗ್ರಥ್ನತೀವಾಸ್ತಿ ಬಾಲಾ ||

    • ಬಾಲೆಯ ಮನಸ್ಸಿನಲ್ಲಿ ಯುವತಿಯರಿಗೆ ಸಹಜವಾಗಿ ಉದಯಿಸುವ ಕನಸುಗಳು, ಆಸೆಗಳೇ ಹೂಗಳು.
      ಆವು ಮುಗ್ಧವಾಗಿವೆ, ಶುಭ್ರವಾಗಿವೆ, ಹೊಸದಾಗಿ ಹುಟ್ಟಿವೆ, ಕೋಮಲವಾಗಿವೆ.
      ಅವುಗಳನ್ನೇ ಒಟ್ಟಿಗೆ ಮಾಡಿ, ಅವುಗಳನ್ನು ನನಸು ಮಾಡಿಸು ಎಂಬ ಪ್ರಾರ್ಥನೆಯ ಸಾಲಿನಂತೆ
      ಸುಖ, ದುಃಖ, ಏನೂ ಅರಿಯದ ಬಾಲೆಯು ದೇವರ ಪಾದಕ್ಕೆ (ಅಪ್ಪ್ಲಿಕೇಶನ್ ನಂತೆ) ಅರ್ಪಿಸಲು
      ಮಾಲೆಯಂತೆ ಕಟ್ಟುತ್ತಿರುವ ಹಾಗೆ ತೋರುತ್ತಿದೆ – ಎನ್ನುವುದು ಪದ್ಯದ ಅಭಿಪ್ರಾಯ

    • ಸುಧೀರರಿಗೆ ಮಗದೊಮ್ಮೆ ಸ್ವಾಗತ,

      ಮಾ|| ಅಲರುಗಳನು ಕಟ್ಟಲ್| ದೂರದೊಳ್ಗೊಂದಕೊಂದಂ
      ಸಲುವುದೆನುವಿರೇಂ ನೀಂ| ದೇವ-ಪೆಣ್ಗಳ್ಗೆ ಹಾರಂ
      ಬಲುಮೆಕವನ ನಿಚ್ಚಂ| ನೇಯೆ ಸಾಮರ್ಥ್ಯಮಿದ್ದುಂ
      ತಿಲದೊಲಿರಿಸಲೇಕೈ| ಪಕ್ಷದೊಳ್ಗೊಮ್ಮೆ ಮಾತ್ರಂ

      • like

        • ಭವತಾ+ಉಪನಿಷತ್ಕಪೋತಿಕಾ-
          ಯುಗಲಂ ಚಿತ್ರಗತಂ ನು ವಿಸ್ಮೃತಮ್ |
          ಇತಿ ಹಾಸಮರಾಲಮಾಲಿಕಾ
          ವಲತೇ ಮನ್ಮುಖಶಾರದಾಂಬರೇ || 🙂 🙂

        • न तु विस्मृतमावाभ्याम्
          गतचित्रविहंगमाः।
          त्रीणि सन्ति खगाश्चात्र
          कथं भाज्ये तृतीयकम्॥

          • ಪ್ರಸಾದು,
            ಸೋಮಣ್ಣನ ಮೊದಲ ಪದ್ಯಕ್ಕೆ ನೀವೇ “ಒಂದು ಗಂಡು ಒಂದು ಹೆಣ್ಣು ಎರಡು ದದ್ದ ಹೊರಕ್ಕೆ ಹಾಕು” ಎಂದವರು. ಈಗ ಕಾಣಿಸಿತೇ ಮೂರನೇಯ ಪಾರಿವಾಳ? 😛

        • ನನಗೆ ಆಗಲೂ ಮೂರನೆಯದು ಕಾಣಿಸಿತ್ತು 😉 ಅವುಗಳ ಪೈಕಿ ಅವರು ಎರಡನ್ನು ಆಯ್ಕೆಮಾಡಿಕೊಂಡು ಪದ್ಯಹೊಸೆದಿದ್ದರಿಂದ, ನಾನೂ ಅಷ್ಟಕ್ಕೇ ಸೀಮಿತಗೊಳ್ಳಬೇಕಾಯಿತು!

  32. ಪಾರಿವಾಳಗಳೆರಡು ಬಾಗಿಲಿಂದಾಚೆಯೆರಚಿರುವ ಕಾಳುಗಳನ್ನು ತಿನಲಿಕೆಂದು
    ಹಾರಿಬಂದಿಹುದನ್ನು ನೋಡುತ್ತ ಕುಳಿತಿಹಳು ಬಾಲೆ ತಾಂ ಹೂಗಳಂ ಪೋಣಿಸುತ್ತ
    ಪಾರಿವಗಳಿನ್ನೆರಡು ಮನೆಯೊಳಗೆ ಬಂದಿಹವು ಹುಡುಗಿಯಾ ಚಿತ್ತವನು ಸೆಳೆಯಲೆಂದು
    ತೀರದಾಲೋಚನೆಗೆ ಮನಕೊಟ್ಟ ಬಾಲಿಕೆಯ ಗಮನವಂ ಸೆಳೆವಲ್ಲಿ ವಿಫಲವಾಯ್ತೆ ||

    ಹುಡುಗಿಯ ಶೂನ್ಯದೃಷ್ಟಿ ಮನೆಯ ಹೊರಗೆ ಇರುವುದರಿಂದ ಅಲ್ಲಿಯೂ ಹಕ್ಕಿಗಳಿರುವುವೆಂಬ ಭಾವ.

    ಛಂದಸ್ಸಿನಲ್ಲಿ ಎಡವಿರಬಹುದು. ತಪ್ಪಿದ್ದರೆ ದಯವಿಟ್ಟು ಸೂಚಿಸಿ. ಸವರಿಸಿಕೊಳ್ಳುತ್ತೇನೆ.

    • ರಾಜಗೋಪಾಲರೆ. ಪದ್ಯದ ಓಟ ಸರಿಯಾಗಿದೆ. ಆದರೆ ಭಾಷೆಯಲ್ಲಿ ನಡುಗನ್ನಡ ಹಳೆಗನ್ನಡಗಳನ್ನು ಬೆರೆಸಿದ್ದೀರ. ಎಲ್ಲ ನಡುಗನ್ನಡವಾಗಿದ್ದರೆ ಲೇಸು.
      ಉದಾ- ತಾಂ ಪೂಗಳಂ ಬದಲು ತಾ ಪೂಗಳನು ಬಂದರೆ ವಾಸಿ

  33. My late entry

    ಮಗಮಗ ಸುಮಮಾಲೆ ಕಟ್ಟುತಿರ್ಕುಂ
    ಮುಗುದೆ ಬೆರಲ್ಗಳ ಮೋಡಿ ನೋಡ ಬರ್ಕುಂ
    ಖಗಗಳು ನಡೆ ಕಲ್ತು ಸೊರ್ಕುತಿರ್ಕುಂ
    ಸೊಗಸಿಗೆ ಸೊಲ್ಲದು ಸೋತು ಪೋದುದಲ್ತೇ!

    ತರುಣಿಯ ಹೂಕಟ್ಟುವ ಬೆರಳುಗಳನ್ನು ನೋಡಿ ಪಾರಿವಾಳಗಳು ತಮ್ಮ ನಡಿಗೆಯನ್ನು ಕಲಿತವೆಂದು ಕಲ್ಪನೆ

    • ಗಝಲೊಂದರ ಸಾಲುಗಳು ಹೀಗಿವೆ:
      नहीं देखे साकी ने हमसे शराबी
      के मैखाने में भी गए पीते-पीते
      (Even the Bartender has not seen a drunkard like me. Even as I enter a bar, I will be in an inebriated state)

      ಸ|| ಅಡಿಯನಿಡುಗು ಮೂರ್ತಿ ಪಾನದೊಳ್
      ಹೊಡೆದರುಮೆಂಟ್ರಿಯ ಲೇಟಿನಿಂದಲುಂ|
      ಕುಡಿತಕೆನುತೆ ಬರ್ಪಮುನ್ನಮೇ
      ನುಡಿಯಿರ? ’ಸೊಲ್ಲದು ಸೋತು ಪೋದು’ದೇಂ?||

      • ಲೇಟಾಗಿ ಬರ್ಪಾಗ ನೀಟಾಗಿ ಹೇಳೋಕೆ
        ಸೂಟಾಗೋ ಸೊಲ್ಲೇ ಸಿಗಲೊಲ್ದೇ ಸುಸ್ತಾದೆ
        ಡೌಟೇಕೆ ಟೈಟೇನಾಗಿಲ್ಲ 🙂

      • ಡೌಟಿಲ್ಲ ಗೊತ್ತುಂಟು ಟೈಟಲ್ಲ ನೀಮೇನು-
        ಮೌಟಪ್ಪರಲ್ಲ ಸುಲಭದೊಳ್|
        ಔಟಪ್ಪರಲ್ಲ ಸುಲಭದೊಳ್, ’ಪದ’ವಲ್ದೆ
        ಟೈಟಿದ್ರೆ ’ಪದ್ಯ’ ಬರ್ತಿತ್ತೇಂ||

        (’ಪದ’ ಬ್ಯಾರೆ, ’ಪದ್ಯ’ ಬ್ಯಾರೆ. ಔಟಾದಾಗ ಪದ ಬತ್ತೈತೆ, ನ್ಯಟ್ಗಿದ್ದಾಗ್ ಪದ್ಯ ಬತ್ತೈತೆ)

        • ಹಂಗಂತೀರ ಬುದ್ದಿ? ತೆಪ್ಪು ತಿಳಕ್ಯಂಬುಟಿದ್ದೆ

          ನೀಮೇನು ಟೈಟಲ್ಲ ಅನ್ನೋದನ್ನ ತಿರುಗಿಸಿ ಹಾಕ್ಕೊಳ್ಳಿ. ಆಗ ಪ್ರಾಸ ನಿಯಮ ತಪ್ಪೋದಿಲ್ಲ

  34. मालां खगानां बहुशोभनीयां सूत्रं विना संसृजति प्रवृष्टे |
    कथं धरित्रीति विचिन्तमाना सूत्रेण बध्नाति सुमाञ्च बाला ||

    not sure about विचिन्तमाना I assume चिन्त् धातु is उभयपदी.

    ಪಕ್ಷಿಗಳನ್ನು ನೋಡುತ್ತಾ, ಭೂಮಿಯು ಮಳೆಗಾಲದ ಆರಂಭದಲ್ಲಿ ದಾರವೇ ಇಲ್ಲದೆ ಹೇಗೆ ಪಕ್ಷಿಗಳ ಮಾಲೆಯನ್ನೇ ಕಟ್ಟುತ್ತಾಳೆ (ಪಕ್ಷಿಗಳು ಹಾರುವಾಗ ಅವು ಒಂದು pattern ಅನುಸರಿಸುವುದರಿಂದ ಮಾಲೆಯಂತೆ ಕಾಣುತ್ತದೆ) ಎಂದು ಚಿಂತಿಸುತ್ತಾ ಬಾಲೆಯು ಹೂಗಳನ್ನು ದಾರದ ಸಹಾಯದಿಂದ ಕಟ್ಟುತ್ತಿದ್ದಾಳೆ ಎಂಬ ಕಲ್ಪನೆ/ಆಶಯ

    • ಕಲ್ಪನೆ ಚೆನ್ನಾಗಿದೆ.
      ಕೆಲವೊಂದು ಸವರಣೆಗಳು: ಪ್ರವೃಷ್ಟ್ಯಾಂ, ವಿಚಿಂತಯಂತೀ, ಸುಮಾನಿ ಬಾಲಾ
      ( ವೃಷ್ಟಿ ಸ್ತ್ರೀಲಿಂಗ, “ಚಿಂತ್’ ಧಾತುವು ಚುರಾದಿ ಗಣದ್ದು. ಚಿಂತಯಮಾನಾ ಎಂದು ಶಾನಚ್ ರೂಪ. ಅದರೆ ಅದರಿಂದ ಛಂದಸ್ಸು ಕೆಡುತ್ತದೆ; ಸುಮಂ ನಪುಂಸಕಲಿಂಗಶಬ್ದ)

      • ಧನ್ಯವಾದಗಳು, ನಿಮ್ಮ ಸಲಹೆಯಂತೆ ತಿದ್ದಿದ್ದೇನೆ

        मालां खगानां बहुशोभनीयां सूत्रं विना संसृजति प्रवृष्ट्यां |
        कथं धरित्रीति विचिन्तयन्ती सूत्रेण बध्नाति सुमानि बाला ||

    • ಅಧರ್ಮಿ ಸ್ಥಾವರ(ಹೂವು)ಗಳು ಯಾದೃಚ್ಛಿಕವಾಗಿ ಇರುತ್ತವೆ. ಅವನ್ನು ನಮಗೆ ಇಷ್ಟವಾಗುವಂತೆ ಜೋಡಿಸಿಕೊಳ್ಳಬೇಕು. ಧರ್ಮಿಷ್ಠ ಜಂಗಮ(ಹಕ್ಕಿ)ಗಳು ತಮಗೆ ಇಷ್ಟಬಂದಂತೆ ಇರಬಹುದಾದರೂ ನಮಗೆ ಇಷ್ಟವಾಗುವ ರೀತಿಯಲ್ಲಿ ಹವಣುಗೊಳ್ಳುತ್ತವೆ.
      विपर्यासं सखे त्वेत
      द्व्यावृत्तिः खग-पुष्पयोः।
      (पुष्प) स्थावरं ग्रथितव्यं त
      (खग) ज्जङ्गमस्स्वयमन्वितम्॥

      ದೋಷಗಳಿದ್ದೇ ಇರ್ತಾವೆ. ಹೇಳಿ.

      • ನನ್ನ ಪದ್ಯಕ್ಕೆ ಒಳ್ಳೆ post script ಕೊಟ್ಟಿದ್ದೀರ A welcome change that you have not taken a tangential path :P. ಮುಂದೆ ಎಲ್ಲರಿಗೂ ಹೀಗೆ ಒಳ್ಳೆ post scriptsಗಳನ್ನೇ ಕೊಡುತ್ತೀರಿ ಎಂದು ಆಶಿಸುತ್ತೇನೆ
        सखि शब्द सम्बोधन विभक्ति is सखे

        • ಜಿ.ಎಸ್.,
          ನನಗೆ ನಾಗರಹಾವು ಚಿತ್ರ ಜ್ಞಾಪಕಕ್ಕೆ ಬರುತ್ತಿದೆ. ಅದರಲ್ಲಿ ಅಲಮೇಲುವಿನ ತಾಯಿ (ಪೂಜೆಯ ಮಧ್ಯದಲ್ಲಿ) ರಾಮಾಚಾರಿಗೆ ಹೇಳುತ್ತಾಳೆ, “ನಮಸ್ತೇsಸ್ತು ಮಹಾಮಾಯೇ… ಯಾಕೆಲ್ಲಾsರತ್ರನೂ ಛೀ ಥೂ ಅನ್ನುಸ್ಕೊತ್ಯ! ಇನ್ಮೇಲಾದ್ರೂ ಸರಿಯಾಗಿ ನಡಕೋ… ಶ್ರೀಪೀಠೇ ಸುರಪೂಜಿತೇ…”

          • ಉನ್ನತಾಸನಮಿತ್ತು ಕೆನ್ನೆಗೊಂದೇಟಿತ್ತು
            ಚೆನ್ನಪ್ಪಂತೆನ್ನಂ ಬೈವರೈ ಕೊಳ್ವುದು
            ಬನ್ನಮೊ ಕಾಣೆನ್ ಪೂಜೆಯೊ

      • 1) ಧನ್ಯವಾದಗಳು. ನಿಮಗೆ ಒಂದೇನೆ ಸಿಕ್ಕಿದ್ದು ದೋಷ?
        2) “… you have not taken a tangential path. ಮುಂದೆ ಎಲ್ಲರಿಗೂ ಹೀಗೆ ಒಳ್ಳೆ post scriptsಗಳನ್ನೇ ಕೊಡುತ್ತೀರಿ ಎಂದು ಆಶಿಸುತ್ತೇನೆ” – ಸಖೇ, please get Sri RG’s permission for checking me from lateral thinking.

  35. ಮಲ್ಲಿಗೆಯ ಮೊಗ್ಗರುಳುವೊಲು ಹಿಗ್ಗಿ ಸುಂದರತೆ
    ಮಲ್ಲನೆಯೆ ಕಣ್ಣೋಟದಿಂ ಸೂಸಿರಲ್
    ಚೆಲ್ಲಿರುವ ಹೊಂಗಿರಣ, ಪಾರಿವಾಳದ ಜೋಡಿ
    ಫುಲ್ಲಶರನೊಡನಾಡೆ ಸೆಳೆದಿರ್ಪವೇಂ?

    [ಫುಲ್ಲಶರ = ಮನ್ಮಥ]

    ಮೊಗ್ಗ ಕಟ್ಟುವ ತೆರದಿ ಭಾವಗಳ ಹತ್ತಿಕ್ಕೆ
    ತಗ್ಗುವುದೆ ಯೌವನದ ರಸದುಬ್ಬರ
    ಸುಗ್ಗಿಯೊಲು ಹಿಗ್ಗಿರುವ ಸೂಕ್ಷ್ಮ ಸಂವೇದನೆಗೆ
    ಡೊಗ್ಗುವುದೆ ಲೇಸಲ್ತೆ ಪೊಡೆದಾಟಕಂ?

    [ಡೊಗ್ಗು = ಬಾಗು, ವಂದಿಸು]

    • “ಬಗ್ಗು”ವುದೆ ಲೇಸಲ್ತೆ ಡೊಗ್ಗಿಗಿಂತ ! 🙂

    • ಬಗ್ಗುವುದೆ ಲೇಸಲ್ತೆ ಪೊಡೆಕಾಟಕಂ – Baski to reduce the waistline 😉 ಪೊಡೆ = ಹೊಟ್ಟೆ

    • ಬಗ್ಗುವುದೆ ಲೇಸಲ್ತೆ ಪೊಡೆದಾಟkiM ಎಂದಾಗಬೇಕು. ಬಗ್ಗುವುದು and ಪೊಡೆದಾಟkaM are mutually contradictory (ಪೊಡೆದಾಟಕಂ/ಕಿಂ = ಹೊಡೆದಾಟಕ್ಕೆ/ಕ್ಕಿಂತ)

    • … ಸೂಕ್ಷ್ಮ ಸಂವೇದನೆಗೆ ಡೊಗ್ಗುವುದೆ ಲೇಸಲ್ತೆ ಪೊಡೆದಾಟಕಂ?

      ಸೂಕ್ಷ್ಮವಿರೆ ಸಂವೇದ ಪೊಡೆದಾಟಕೆಡೆಯುಂಟೆ
      ಚಾಕ್ಷ್ಮವಾ (gracious) ಭಾವವೈ ಬಹ್ವಪೇಕ್ಷ್ಯಂ|
      ಪಕ್ಷ್ಮಕೋನದಿನಿರಿವ ರೂಕ್ಷದಿಟ್ಟಿಯದಲ್ತೆ
      ಯಕ್ಷ್ಮ(sickness)ಕಾರಕ ವಿಕತ್ಥನವಿಭ್ರಮಂ||

  36. ನೇಸರ ಪುಟ್ಟುವ ವೇಳೆಗೆ
    ಬೇಸರ ಬಿಟ್ಟೆಳ್ದು ಪಾರಿವೆಗಳೊಡನುಡಿವಾ
    ಪೂಸರಕಟ್ಟುವ ಪುಡುಗಿಗೆ
    ಪೂಸರಲನ ಲೇಪವೇಕೆ ಪುಟ್ಟಿಸುವಿರೊ ನೀಂ ||

    • ಬಿಟ್ಟೆಳ್ದು = ಬಿಟ್ಟು+ಎಳ್ದು > ಎದ್ದು?
      ಪೂಸರಲನ = ಮನ್ಮಥನ?

    • ಏಕೆ, ನಾವು ಅರ್ಹರಲ್ಲವೆ? ಪೂಸರಲೇಪವ ನೀವೇ ಪುಟ್ಟಿಸಬೇಕೆ?

      ಲೇಪವ ಸುಮಶರ ಗೈದಿಹ
      ನಾ ಪೆಣ್ಣಿನ ಕಣ್ಣಿಗಾಂ ಮರುಳು ನಿಮ್ಮವೊಲೇ|
      ಔಪಾಸನಕೇ’ಕಾಂತ’ಕೆ
      ಕೋಪದಿನೆಮ್ಮಯ ಶಿರಕ್ಕುಲೂಕಮನಿಡುಗೇಂ??

      • ಆ ಪುಟ್ಟ ಅರಿಯದ ಹುಡುಗಿಗೆ ಸುಮ್ಮನೇಕೆ ಮನ್ಮಥಾರೋಪಣೆ ಅಂತ ನಾನು ಹೇಳ್ತಿರೋದು. ಬಾಗಿಲಕಡೆ ನೋಡಿದಾಕ್ಷಣ ನಲ್ಲನಿಗಾಗಿಯೇ ಕಾಯುತಿರಬೇಕು ಎನ್ನುವ ಪೂರ್ವಾಗ್ರಹವೇಕೆ?

      • ಗೊತ್ತಾಯ್ತು. ’ನೀಂ’ ಎನ್ನುವುದನ್ನೇ ಬೃಂಹಣ ಮಾಡಿ, ನಮ್ಮನ್ನು ತಪ್ಪಿಸಿ ಆ ಪುಟ್ಟಹುಡುಗಿಯನ್ನು ಖುದ್ದು ಪಟಾಯಿಸುವ ಹುನ್ನಾರ ನಡೆಸಿದ್ದೀರಿ ಎಂದು ಗೇಲಿಯಾಡಿದ್ದೇನೆ ಅಷ್ಟೇ.

  37. ಮುಗುಳು ನಗೆಯಾ ತಪದಲುದಿನ
    ಜಗದ ಕಾರಣಿ ಹಗಲುಬೆಳಕಿನ
    ಯುಗದ ಮಾಲೆಯ ಕಟ್ಟುತಿರುವಂತಿರುಳ ಗಂಟಿನಲೀ |
    ಮುಗಿಲ ನಡುವಿನೊಳರುಣನಂದದೆ
    ನಗುತೆ ಕಾಮಿನಿ ಬಿಳಿಯ ಸುಮಗಳ
    ಸೊಗದ ಮಾಲೆಯ ಕಟ್ಟುತಿರುವಳು ಬೆರಳ ನಂಟಿನಲೀ ||

  38. ಪ್ರಿಯ ಪದ್ಯಪಾನ ಮಿತ್ರರೇ

    ಕಳೆದ ವಾರದ ಕಾವ್ಯ ರಸದೌತಣ ತುಂಬ ಚೆನ್ನಾಗಿತ್ತು ರಾಗರು ,ಪ್ರಸಾದು,ಚಂದ್ರಮೌಳಿ ಮೌರ್ಯಾದಿ ಕವಿಗಳ ಪ್ರತಿಭೆಯನ್ನು ಕಂಡ ನಾವು ಧನ್ಯರು . ತ್ಯಾಗರಾಜರ ಮಾತುಗಳಲ್ಲಿ ‘ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು’ ಧನ್ಯವಾದಗಳು

    • Thanks. I think you should now graduate from gadya to padya. Please give half an hour daily to the video lessons on prosody (chandassu) and rhetoric (alaMkAra) in this website.

  39. ಪೊತ್ತೇರಿ ನಲ್ವೆಳಗ ಪೊನ್ಬುವಿಗೆಲ್ಲ ತೀಟಂ
    ಮತ್ತೇರಿ ತಾಂ ತಕಿಟ ಮಾಳ್ಪ ಕವೋತಕೂಟಂ
    ಮುತ್ತನ್ನ ಮಲ್ಲಿಗೆಯ ಮೊಗ್ಗಿನಮಾಲೆ ಮಾಟಂ
    ಚಿತ್ತಂ ಕವಾಟದೆಡೆ ಚೆಲ್ವೆಯ ದಿಟ್ಟನೋಟಂ

    • ಒಂದಲ್ತೆ ಭಿತ್ತಿಯನು ಕೊಟ್ಟುದು ರಾಮಚಂದ್ರನ್
      ಸೌಂದರ್ಯದಾ ಪಟದಿನಂಶಗಳೊಳ್ಗಿವಂ ನೀ|
      ಮೊಂದೊಂದನುಂ ಬಿಡಿಸಲೇಕೆ: ಕಪೋತ, ಪುಷ್ಪಂ,
      ಕಂದಿರ್ಪ ಭೂಮಿ, ಗೃಹದ್ವಾರ, ಕುಮಾರಿ, ನೋಟಂ||

      • ಒಂದೊಂದುಮಂ ಬಿಡಿಸಿ ಬಣ್ಣಿಸೆ ಚಂದಮಲ್ತೇ
        ಬಂಧಂಗಳಿಂದವನು ಬಂಧಿಸಲೇಕೆ ಪೇಳ್ ಸಂ-
        ಬಂಧಂಗಳೋದುವರೆ ಕಲ್ಪಿಸಿಕೊಳ್ಳಲಂದಂ
        ನಂದಂಗಳಿಮ್ಮಡಿಸಿ ಸಾರ್ಥಕಮಪ್ಪುದಲ್ತೇ

      • ’ಬಂಧಂಗಳಿಂದವನು ಬಂಧಿಸಲೇತಕೆಂ’ದೇಂ?
        ಬಂಧಂ ವಸಂತತಿಲಕಂ ನಿಮಗಾಶ್ರಿತಂ ದಲ್
        ಕಂಧಂ, ತಡಂಕೆ ಕರಗಳ್, ಸಲೆ ಚಿಮ್ಮುಗೀಗಳ್
        ಗಂಧಂ ಭವತ್ಪ್ರಖರಖ್ಯಾತಿಯದೆಂತೊ ಜೃಂಭಂ||

        ಕಂಧಂ ಚಿಮ್ಮುಗು – ಕುಂಬಳಕಾಯಿಕಳ್ಳ
        ಪ್ರಖರಖ್ಯಾತಿ (ಶಿ.ದ್ವಿ.) – notoriety

      • ಈ ಸರಣಿಯಲ್ಲಿ ನನ್ನದು 27 ಪದ್ಯಗಳಾದವು (8 ಪಂಚಮಾತ್ರೆ, 4 ಸಾಂಗತ್ಯ, 3 ಕಂದ, 3 ತ್ರಿಪದಿ, 2 ವಸಂತತಿಲಕ, 2 ಸಂಸ್ಕೃತ ಅನುಷ್ಟುಭ್, ತಲಾ 1 ಮತ್ತೇಭ, ಸೊಬಗಿನಸೋನೆ, ಮಾಲಿನೀ, ಭಾಮಿನಿ, ಸದಪರವಕ್ತ್ರ). ಗುರವೇ ನಮಃ

        ’ನಂದಂಗಳಿಮ್ಮಡಿಸಿ’ – ಸಾಮಾನ್ಯವಾಗಿ, ಆನಂದ, ಸಂತೋಷ ಹಾಗೂ ತದ್ವಿರುದ್ಧಾರ್ಥಕ ಪದಗಳು ಕೆಲವು ಏಕವಚನದಲ್ಲೇ ಪ್ರಯುಕ್ತವಾಗುತ್ತವೆ. ಅಪವಾದ: ನನ್ನ ಪರಿಚಯದವರೊಬ್ಬರು ಯಾವಾಗಲೂ ಹೇಳುವುದುಂಟು, “ನನಗೆ ಒಂದು ವಾರದಿಂದ ಜ್ವರಗಳು, ನೆಗಡಿಗಳು, ಕೆಮ್ಮುಗಳು…” ಎಂದು. ಒಮ್ಮೆ ತಡೆಯದೆ ಹೇಳಿಬಿಟ್ಟೆ, “ಡಾಕ್ಟರುಗಳಿಗೆ ತೋರಿಸಬಾರದೆ!”

        • ಹಹ! ನಮಗೆ ತಿಳಿದವರಲ್ಲಿ ಒಬ್ಬರೂ ಹಾಗೇನೆ. “ಅವರು ನಮ್ಮ ಕ್ಲಾಸ್ಮೇಟುಗಳು” (ಒಬ್ಬರನ್ನು ಕುರಿತು) ಇತ್ಯಾದಿಯಾಇ ಹೇಳೋದು 🙂
          ನಾನು ಅಂದಂ ನಂದಂಗಳ್ ಎಂದು ಎರಡನ್ನೂ ಸೇರಿಸಿ ಬಹುವಚನದಲ್ಲಿ ಹೇಳಿದ್ದಷ್ಟೆ.
          ನಿಮ್ಮ ಪದ್ಯಗಳ ಎಣಿಸುವ ಅಭ್ಯಾಸ ನನಗೆ ತಮಿಳಿನ ಒಂದು ಗಾದೆಯನ್ನು ನೆನಪಿಗೆ ತಂದಿತು- “ಆತ್ತುಲ ಪೋಟ್ಟಾಲುಂ ಅಳಂದು ಪೋಡು”- ಹೊಳೆಗೆ ಹಾಕಿದರೂ ಅಳೆದು ಹಾಕು ಅಂತ. 🙂

          • ಭಿಕ್ಷುಗಳು ಕಾದುಕೊಂಡಿರುವ ಪದ್ಯಪಾನವೆಂಬ ಹೊಳೆಗೆ ಹಾಕಿದರೂ!

    • 2nd half

      ಕಾವೇರಿ ಮಿಂದು ಜನಕಂ ತ್ವರೆಯಿಂ ಮರಳ್ವಂ
      ದೇವರ್ಗೆ ಪೂಜಿಸಲದೇ ಕ್ಷಣ ಕೂರ್ತುಕೊಳ್ವಂ
      ನೀವಿನ್ನುಮಿರ್ದೊಡೊಡನೇ ಜರೆವನ್ ಕೆರಳ್ವಂ
      ಪೋ ವಾಗ್ವಿಲಾಸಿಗಳೆ ಪುರ್ರನೆ ಪಾರಿಪೋಗಿಂ

      ವಾಗ್ವಿಲಾಸಿ- ಪಾರಿವಾಳ

      • ಮೂರನೆ ಪಾದದಲ್ಲಿ ಡೊಡನೇ ಎಂದಾಗಬೇಕೇನೊ. ಕೊನೆಯ ಪಾದದ ಪೋ ಎಂಬ ಶಬ್ದದ ಅರ್ಥ ತಿಳಿಯಲಿಲ್ಲ.

        • ಪೋ ಎಂದರೆ ಹೋಗು ಎಂದೆ ಅರ್ಥ. “ತಿರುಗ” ಎಂದು ನಾಯಿಗಳನ್ನು ಓಡಿಸುವಂತೆ

          • ಕ್ಷಮಿಸಿ. ಪಾರಿವಾಳಗಳೇ ಪಾರಿಪೋಗಿ ಎಂದು ಮುಂದೆ ಹೇಳಿರುವಾಗ ಈ ಪೋ ಶಬ್ದವು ಹೇಗೆ ಅನ್ವಯವಾಗುವುದು ಎಂದು ತಿಳಿಯಲಿಲ್ಲ ಅಷ್ಟೆ.

          • ಕ್ಷಮೆ ಕೇಳುವ ಅಗತ್ಯವಿಲ್ಲ ರಾಜಗೋಪಾಲರೆ. ಪದ್ಯವನ್ನು ಮತ್ತೆ ಪೂರ್ತಿ ಓದಿ. ಅನ್ವಯ ಮಾಡಿಕೊಳ್ಳುವುದು ಸುಲಭವಾದೀತು. ಭಾವವನ್ನು ಒತ್ತಿ ಹೇಳಿದಂತಾಗುತ್ತೆ.
            ಅಂದಹಾಗೆ ಮೇಲಿರುವ ನಿಮ್ಮ ಒಂದು ಪದ್ಯದ ಬಗ್ಗೆ ನಾನೆರಡು ಮಾತುಗಳನ್ನು ಬರೆದಿದ್ದೆ. ಅದನ್ನು ನೀವು ಗಮನಿಸಿದಹಾಗೆ ಇಲ್ಲವಲ್ಲ?

  40. ಬಾಗಿಲು ತೆರೆದಿದೆ ಬೆಳಕದು ಚಲ್ಲಿದೆ
    ಪೂಗಳು ಬಿರಿದಿವೆ ಕಣ್ಗಳು ಬಿಚ್ಚಿವೆ
    ಬೀಗಿದ ಖಗವದು ರೆಕ್ಕೆಯ ಹರಡಿದೆ
    ಹೀಗಿರೆ ಹುಡುಗಿಯ ಮನವೇಂ ಮುದುಡಿದೆ?

    • ಚತುರ್ಮಾತ್ರಾಗಣಗಳು ನಿರಂತರವಾಗಿ ಬಂದು ವಿಚ್ಛಿತ್ತಿ/ವಿಶ್ರಾಂತಿಗೆ ಎಡೆ ಸಿಗ್ತಿಲ್ಲ. ಸಮಪಾದಗಳಲ್ಲಿ ಕೊನೆಯ ನಾಲ್ಕು ಮಾತ್ರೆಯ ಗಣದ ಬದಲಾಗಿ ಒಂದು ಗುರು ಹಾಕಿದರೆ, ಹತೋಟಿಗೆ ಬರುತ್ತೆ ಅನ್ನೋದು ನನ್ನ ಅಭಿಪ್ರಾಯ.

  41. ಕಲದಿಂ ಗಮ್ಮನೆ ಗಂಧಮುಣ್ಮೆಯದರೊಳ್ ಕೈಯಿಕ್ಕುತುಂ ಬಾಲೆ ತಾನ್
    ಅಲರೊಂದೊಂದುಮನಾಯ್ದು ಕಟ್ಟಿದಪಳಾ ಹಾರಂ ವಲಂ ಸುಂದರಂ
    ಕೆಲದೊಳ್ ಕೂತಕಪೋತಮೇತಕದನೇ ಕೆಂಗಣ್ಣಿನಿಂ ನೋಳ್ಪುದೋ
    ಕಲಮಂ ಕುಂದದೊಳಿರ್ಪುದೆಂದೆಣಿಸಲೇಂ ಥಾಯ್ನಾಡಿನಿಂ ಬಂದುದೇಂ?

    ಕಲ-ಪಾತ್ರೆ
    ಕಲಮ- ಅಕ್ಕಿ
    ಕುಂದ- ಮಲ್ಲಿಗೆ
    ಥಾಯ್ನಾಡು- Thailand

    ok the background- “Thai fragrant jasmine rice” is a variety of rice.
    ಪಾತ್ರೆಯೊಳಗಿರುವ ಮಲ್ಲಿಗೆಯನ್ನು ಕಂಡ ಪಾರಿವಾಳಗಳು ಅದರ ಘಮ ಮತ್ತು ಬಣ್ಣಗಳನ್ನು ನೋಡಿ ಅದನ್ನು ಥಾಯ್ಲಾಂಡಿನ ಅಕ್ಕಿ ಎಂದು ಭ್ರಮಿಸಿ ಅದನ್ನೇ ನೋಡುತ್ತಿವೆ ಎಂದು ಕಲ್ಪನೆ. ಅದರಿಂದ ಇವು ಆ ದೇಶದಿಂದ ಬಂದಿರಬಹುದೇ ಎಂದು ಊಹೆ.

Leave a Reply to Maurya Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)