Dec 012013
 

ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

  231 Responses to “ಪದ್ಯ ಸಪ್ತಾಹ ೮೯: ಸಮಸ್ಯಾ ಪೂರಣ”

  1. Honeymoon
    ಚತುರೆಯರಿನಿಯರನುಂ ವರಿ
    ಸುತಲೊಂದಿಗೆ ತೆರಳಲಾಗ ಮಧುಚಂದಿರಕಂ|
    ರತಿಗೊದಗಿರಲ್ ವಿಲಾಸವ-
    ಸತಿ (pleasure resort), ಸತಿಯರ್ ಕೂಡಿಕೊಂಡು ಸಂತತಿಯಾಯ್ತೈ!

    • ಪ್ರಸಾದು, ಚೆನ್ನಾಗಿದೆ, ‘ಚಂದಿರ’ ಹಳಗನ್ನಡದ ಪ್ರಯೋಗವಾಗುವುದಿಲ್ಲವಲ್ಲವೇ?. ಒಂದೊಮ್ಮೆ ಆದರೂ ‘ ಮಧುಚಂದಿರ’ ಅರಿಸಮಾಸವಾಗುತ್ತದೆಯಲ್ಲವೇ?

      • ಹಾಕಿಕೊಳ್ಳದೆ ಪೋಗೆ ಪೊಡೆಗೆ ನೀನಿದನು ಟೀ
        ಕಾಕಾರನರಿಸಮಾಸವನು ಕೇಳೈ|
        ಸಾಕು ಕೇಳಲ್ಕಾಗದೆಂಬೆ ನಾ ಬಳಸಿದೊಡೆ
        ಲೋಕಾಯತನದ ಶೋ/ಪ್ರಾದಿ ಪದವಂ|
        (ಶೋ ಅಥವಾ ಪ್ರ ಅಕ್ಷರಗಳಿಂದ ಆರಂಭವಾಗುವ ಪದಗಳು)

        • ಚಂದಿರ ಎಂಬುದು ಸಂಸ್ಕೃತವೂ ಆದೀತು. ಜಗನ್ನಾಥ ಪಂಡಿತನ ಪ್ರಯೋಗ ಹೀಗಿದೆ :
          ಮುಕುಂದಮುಖಚಂದಿರೇ ಚಿರಮಿದಂ ಚಕೋರಾಯತಾಮ್

          • ಚಂದಿರ ಪ್ರಯೋಗದ ಸ್ಪಷ್ಟೀಕರಣಕ್ಕೆ ಧನ್ಯವಾದಗಳು ಗಣೇಶ್ ಸರ್ 🙂

  2. ಪ್ರಿಯ ಸೋಮ,

    ಸಮಸ್ಯೆಯ ಸಾಲು ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ !
    ”ಸಂತತಿಯಾಯ್ತೇ” ಅಲ್ಲ.

    • ಗಣೇಶ್ ಸರ್, ಹೌದು ಇದನ್ನು ಯಾರೋ ಆಗಲೇ ಸರಿಪಡಿಸಿದ್ದಾರೆ, ಧನ್ಯವಾದಗಳು 🙂

  3. ಮತವಬಯಸಿ ನಾರಿಯರ,
    ಸ್ಥಿತಿಯಂ ತಿಳಿದು ಕರೆದರ್ರ್ಧುರೀಣೆಯನಾಗಳ್
    ಚತುರೆಕಲೆಸೆಕೆಳತಿಯರಂ,
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್

    ಸತಿ = ಸ್ತ್ರೀ
    ಸಂತತಿ = ಸಮೂಹ
    [ಪ್ರಚಾರಕ್ಕೆಂದು ಸಮೂಹವನ್ನು ಧುರಿಣೆ ಮಾಡಿಕೊಂಡಳೆಂದು]

  4. ಪತಿಯಸ್ಥಿತಿಯಿಂ ಮತ್ತೆಸ-
    ವತಿಮತ್ಸರದಿ೦ದೆಮಾದ್ರಿ ಬಂಜೆಯೆನಿಸಿರಲ್ |
    ಖತಿಶಮನ೦ಗೊಳೆ ಕಡೆಗೀ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

    ಖತಿ – ಕೋಪ.

    • ಐಡಿಯಾ ಬಹಳ ಚೆನ್ನಾಗಿದೆ ಶ್ರೀಶ :). ಕಂದದಲ್ಲಿ ಎರಡನೆಯ ಸಾಲಿನ ಕೊನೆಯ ಗಣದ ಕೊನೆಯ ಅಕ್ಷರ ಲಘುವಾಗುವ ಹಾಗಿಲ್ಲವಲ್ಲ, ಹಾಗೂ ಮಾದ್ರೀ ಎಂದುಕೊಂಡರೆ ಸಂಬೋಧನೆಯಾಗುತ್ತದೆ ಪ್ರಥಮಾವಿಭಕ್ತಿಯಾಗುವುದಿಲ್ಲ, ಹಾಗಾಗಿ 2ನೇಯ ಸಾಲಿನ ಕಡೆಯ ಗಣವನ್ನು ಸವರಿಸಬೇಕು.

    • ಸೋಮ,
      ಪದ್ಯಮನದಿನ್ನೊರ್ಮೆ ಗಮನಿಸಲ್ ಕಾಂಬಿರೈ
      ಚೋದ್ಯಮನು ಕಾರಂತರಡಗಿಸಿಹುದಂ|
      ವೇದ್ಯಮಾಗಳ್ ’ಪ್ರಥಮಶಾಸ್ತ್ರ’(ಪ್ರಥಮಾವಿಭಕ್ತಿ)-’ಸಂಬೋಧ’ಗಳ
      ಹೃದ್ಯನಡುವಣದ ಪ್ರಯೋಗಯೋಗಂ|

      • ಹೌದು ಪ್ರಸಾದು,

        ಇನ್ನೊಮ್ಮೆ ಓದಿದೆ ಸರಿಯಾಗಿಯೇ ಇದೆ ಎನಿಸುತ್ತದೆ ‘ಮಾದ್ರೀಖತಿ’

        ಒರೆಯಲ್ ಮಾದ್ರೀಖತಿಯೆಂ
        ದರಿಯದೆ ಪೋದೆನೆ ಮರಳ್ದು ಪಡೆವೆಂ ವಚಮಂ

        🙂

    • ಪ್ರಿಯ ಶ್ರೀಶ – ಬಹಳ ಒಳ್ಳೆ ಹೂರಣ ತುಂಬಿದ ಪದ್ಯ… 🙂

      • ಪ್ರಸಾದು, ಗುರು ಮತ್ತು ಸೋಮರಿಗೆ ಥ್ಯಾಂಕ್ಸು.

        ಸೋಮಣ್ಣ,
        ಮಾದ್ರಿಯನ್ನು ಎತ್ತಿ ಮುಂದಕ್ಕೆಹಾಕಿದ್ದೇನೆ.. ಓಕೆ ನಾ? 🙂

    • ಮಾದ್ರಿಯನ್ನು ಎತ್ತಿ ಮುಂದಕ್ಕೆ ಹಾಕಿದಿರೆ?
      ಈಗ ಸರಿಯಾದುದೈ ಸಾಹುಕಾರನೆ ಶ್ರೀಶ (ವಿಷ್ಣು)
      ರೇಗಿರಲ್ ಬಡವ ಸಹಪಾಠಿಯುಂ (ಸೋಮಶೇಖರ) ತಾಂ|
      ರೋಗಿಷ್ಟ ಪಾಂಡುವಿನ ಕೊರತೆಯಂ ಪರಿಗಣಿಸಿ
      ಬೇಗುದಿಯ ತಪ್ಪಿಸಿಹೆ ಮಾದ್ರಿಯಳದೇಂ?|

  5. ಚತುರಂ ವಿಕ್ರಮನೆಯ್ದಿರ-
    ಲತಿ ಚಿತ್ರಮೆನಿಪ್ಪ ಪುರುಷರಿಲ್ಲದೆಡೆಯೊಳಂ
    ಕುತುಕದೊಳಿರೆ ಬೂತೆಂದಿತು
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!!
    ಭಟ್ಟಿ ವಿಕ್ರಮಾದಿತ್ಯನ ಕಥೆಯೊಂದರಲ್ಲಿ ಸ್ತ್ರೀಯರು ಮಾತ್ರವೇ ಇರುವ ರಾಜ್ಯವೊಂದಕ್ಕೆ ಅವನು ಹೋಗುತ್ತಾನೆಂದು ಓದಿದ ನೆನಪು. ಆ ಸಂದರ್ಭವನ್ನು ಇಟ್ಟುಕೊಂಡು (ಕಥೆ ಇಲ್ಲವೆಂದಾದರೆ ಕಲ್ಪಿಸಿಕೊಂಡು!!) 😉
    “ಚತುರಂ ವಿಕ್ರಮನೆಯ್ದಿರಲ್ ಅತಿ ಚಿತ್ರಮೆನಿಪ್ಪ ಪುರುಷರಿಲ್ಲದ ಎಡೆಯೊಳಂ (ಎಡೆ=ಸ್ಥಳ) ಕುತುಕದೊಳಿರೆ ಬೂತು ಎಂದಿತು “ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್”

    • ಇಲ್ಲದ್ದನ್ನೂ ಕಲ್ಪಿಸುವುದೇ ಕವಿತೆಯಲ್ಲವೇ, ಚೆನ್ನಾಗಿದೆ

    • ಗಣೇಶ,
      There is a breed of mango called Amrapali. It is very tasty. It is a cross between Mallika and Rasapuri. Only the grafted sapling is rearable. If you plant the seed of Amrapali, you will get either Mallika or Rasapuri; not Amrapali.
      ಮಾವೊಳುಂಟಾಮ್ರಪಾಲಿ ರಖಮೆಂದೆಮಗದ
      ನ್ನೀವರೈ ಮಲ್ಲಿಕಾ-ರಸಪುರಿ ಕಸಿ|
      ಕಾವುದೈ ಕಾಯ್ಗಳನು ಮಾತ್ರಮೀ ಕಸಿಸಸಿಯು
      ಜೀವಮಿರದೋಟೆಯೊಳಗಾ ಫಲದೊಳಂ|

  6. ಮೊದಲು ಬರೆದ ಪದ್ಯವನ್ನು ತಿದ್ದುವ ಪ್ರಯತ್ನವನ್ನು ಮಾಡಿದ್ದೇನೆ. 🙂
    ಅತಿಯಾದವಿಲಿಗಳೆಂದದ
    ಮಿತಮಾಡಲ್ತಂದಬೆಕ್ಕಬಳಗವೆ ಬೆಳೆಯಲ್,
    ಪತಿಯೆಂದ – ” ಹಾ!! ಪ್ರಿಯಸುತನ
    ಸತಿ,ಸತಿಯರ್ ಕೂಡಿ, ಕೊಂಡು, -ಸಂತತಿಯಾಯ್ತಯ್!! ”
    ಕೊಂಡು=ಖರೀದಿಸಿ
    ಪತಿ=ಮನೆಯ ಒಡೆಯ ; ಕೊಂಡದ್ದು ಬೆಕ್ಕನ್ನು;

    • ಇಲ್ಲಿ ಜಿಜ್ಞಾಸೆ ಮಾಡಬೇಕಾಗಿರುವುದಿಷ್ಟೇ: ಈ ಐಡಿಯ ಹೇಗೆ ಹೊಳೆಯಿತು ಎಂದು 🙂

  7. ಶರಣನ ವೇಷವಹೊದ್ದಿಹ ದುರುಳನ್
    ನರರೊಳು ನಂಬಿಕೆಪುಟ್ಟಿಸೊ ದೆಸೆಯೊಳ್
    ಪರಶರಣರ ವಚನಂಗಳ ಪೇಳುತ ಶಿವನೊಬ್ಬನೆ ಪುರುಷ |
    ನರರೆಲ್ಲರು ಸತಿಯರ್ ಹರಗೆನ್ನಲು
    ನೆರೆದವನೊಬ್ಬನ್ ಹಾಸ್ಯದಿ ಪೇಳ್ದನ್
    ಹರಹರ!!, ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್, ಅಹ್!

    4 4 4 4
    4 4 4 4
    4 4 4 4 4 4 + guru

    • ಆಹಾ!! ಒಳ್ಳೆಯ ರೀತಿಯಲ್ಲಿ ಛಂದಸ್ಸು ಬದಲಾಯಿಸಲು ಪ್ರಯತ್ನಿಸಿದ್ದೀರಾದರೂ, ಗಣ ವಿಭಾಗಿಸಿದಾಗ
      “ಹರಹರ| ಸತಿಸತಿ|ಯರ್ ಕೂ|”ಡಿಕೊಂಡು” |ಸಂತತಿ|ಯಾಯ್ತಯ್|ಅಹ್!” ಆಗುತ್ತದೆ. ಕಂದಪದ್ಯದಲ್ಲಿರುವ ಜಗಣ (“ಡಿಕೊಂಡು”)ದಿಂದಾಗಿ ಪರಿವರ್ಧಿನಿ ಷಟ್ಪದಿಯ ನಿಯಮಕ್ಕೆ ಭಂಗವಾಗುತ್ತದೆಯಲ್ಲ!!
      ಅಲ್ಲದೇ ಕೊನೆಯಲ್ಲಿ ವಿಸಂಧಿ ದೋಷ ಬರುವುದಾದರೂ “ಸಂತತಿಯಾಯ್ತಯ್ಯಾ(ಹ್)” ಎಂದು ಮಾಡಿದರೆ ದೋಷ ಹೋಗುತ್ತದೆ.

    • ಕಲ್ಪನೆ ಚೆನ್ನಾಗಿದೆ. ಬೇರೆ ಛಂದಸ್ಸಿಗೆ ಹೊಂದಿಸಿಕೊಂಡಿರುವುದು ಮತ್ತೂ ಶ್ಲಾಘ್ಯ. ಕೊಪ್ಪಲತೋಟರು ಸೂಚಿಸಿರುವ ಸವರಣೆಗಳನ್ನು ಗಮನಿಸಿಕೊಳ್ಳಿ.
      ವೇಷವಹೊದ್ದಿಹ ~ ವೇಷಮನಾಂತಿಹ (ಸಾಧುವೇ ಕೊಪ್ಪಲತೋಟರೆ?)
      ಪುಟ್ಟಿಸೊ ~ ಪುಟ್ಟಿಪ
      ಪೇಳುತ ~ ಪೇಳಿಹ
      ಪುರುಷ ~ ಪುರುಷಂ

      • ಷಟ್ಪದಿ ನಡುಗನ್ನಡವಾದ ಕಾರಣ ಕೆಲವೊಂದು ಕಡೆ/ಬಿಂದುಗಳಲ್ಲಿ ತೊಂದರೆಯಾಗುವುದಿಲ್ಲವೇನೋ!.ಆದರೆ ‘ಪೇಳುತ~ಪೇಳುತೆ’ ಸರಿಯಾಗುತ್ತದೆಯಲ್ಲ!

        • ೧) ಸಹಜವಾಗಿ ಗುರ್ವಕ್ಷರ ಮಾಡುವ ಅವಕಾಶವಿರುವಾಗ ಕರ್ಷಣವೇಕೆ ಎಂದು ಬಿಂದುವನ್ನು ಸೂಚಿಸಿದೆ.
          ೨) ಹೌದು ’ಪೇಳುತ’ ಸರಿಯಾಗುತ್ತದೆ. ಮುಂದಿನ ಪಾದದಲ್ಲಿ continuation ಇರುವುದನ್ನು ನಾನು ಗಮನಿಸಿರಲಿಲ್ಲ.

  8. ಸ್ತುತಿಸುತ್ತಿರಲಾ ದೇವರ
    ಸತಿಸತಿಯರ್ ಕೂಡಿಕೊಂಡು, ಸಂತತಿಯಾಯ್ತೈ
    ಮತಿಯೊಳ್ ಭಕ್ತಿರತಮುಮ
    ಚ್ಯುತನೊಳ್ ನಂಬಿಕೆಯುಮುಳ್ಳ ಸಂಸ್ಕೃತಿಪರಮುಂ||
    (ಸತಿ ಸತಿಯರ್ ಕೂಡಿಕೊಂಡು ದೇವರ ಸ್ತುತಿಸುತ್ತಿರಲಾ, ಸಂತತಿಯು ಮತಿಯೊಳ್ ಭಕ್ತಿರತಮುಂ ಅಚ್ಯುತನೊಳ್ ನಂಬಿಕೆಯುಮುಳ್ಳ ಸಂಸ್ಕೃತಿ ಪರಮುಂ ಆಯ್ತೈ) 🙂

    • ಅದು ಕೊಪ್ಪಲತೋಟನ ಪೂರಣವೆಂದರೆ, ಬಹಳ ಚೆನ್ನಾಗಿದೆ 🙂

    • ಸೊಗಸಾದುದು ಪರಿಹಾರಂ
      ವಿಗಲಿತವೇದ್ಯಾಂತರೀಯಮೆನಲಿದು ಕಾವ್ಯಂ|

      • ಧನ್ಯವಾದಗಳು ಸರ್:-)
        ಅಗುಳ್ದೆಂ ತೋಷದೆ ಮಿಗೆ ಸೋ-
        ಜಿಗಮಾದುದನೇಕ ವಿಧದ ಪರಿಹಾರಗಳಿಂ*||
        (ಬೇರೆ ಪರಿಹಾರ ಮಾರ್ಗಗಳು ಕಾಣುತ್ತಲೇ ಇರಲಿಲ್ಲ:-( ಈಗ ಉಳಿದವರ ಪರಿಹಾರಗಳಿಂದ ಸೋಜಿಗವಾಯ್ತು!!)

        (*”ಪರಿಹಾರಂಗಳಿಂ” ಸಾಧುರೂಪವಾಗಿತ್ತೇ?)

    • ಭಳಾ

  9. ಹತರಾಗಲ್ಕಾಣ್ಮರ್ಕಳ್
    ಚ್ಯುತಮಾಯ್ತಯ್ ಬರ್ದುಕಿನಾಶಯಂಗಳದೆನುತುಂ (ಬರ್ದುಕಿ -> ಶಿಥಿಲದ್ವಿತ್ವ)
    ಚಿತೆಯೇರುತಲಗ್ನಿಯೊಳಾ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್

    • ಸೋಮ,
      ಚಿತೆಯೇರ್ವುದಗ್ನಿಯೊಳಾ… ಎಂದು ಸವರಿದರೆ, ಸತಿಸತಿಯರ್ ಕೂಡಿಕೊಂಡು ಆ ಸಂತತಿ ಅಗ್ನಿಯೊಳು ಚಿತೆಯೇರ್ವುದಾಯ್ತಯ್ ಎಂದು ಅನ್ವಯ ಮಾಡಬಹುದು.

      • ಪ್ರಸಾದು, ‘ಚಿತೆಯೇರ್ವುದಗ್ನಿಯೊಳಾ’ ಇಲ್ಲಿ ಒಂದು ಮಾತ್ರೆ ಕಡಿಮೆಯಿದೆ, ಬೇರೆ ರೀತಿಯಲ್ಲಿ ಸವರಿಸಿದ್ದೇನೆ, ನೋಡಿ

      • ಹೌದು. ’ಚಿತೆಯೇರ್ವುದುಮಗ್ನಿಯೊಳಾ’ ಎಂದು ಸವರಬೇಕು.
        ನನ್ನ ಪಾಯಿಂಟ್ ಇಷ್ಟೆ – ’ಸಂತತಿ (group) ಚಿತೆಯೇರುವುದಾಯಿತು’ ಎಂದು.
        ನಿಮ್ಮ ಪದ್ಯದಲ್ಲಿ ’ಸಂತತಿ’ಯು progeny ಎಂಬ ಅರ್ಥವನ್ನು ಬಿಂಬಿಸುತ್ತದೆಯಲ್ಲವೆ. ನನ್ನ ಗ್ರಹಿಕೆಯಲ್ಲಿ ತಪ್ಪಿದ್ದರೆ ತಿಳಿಸಿ, ಮನ್ನಿಸಿ.

        • ನೀವು ಹೇಳೋದು ಸರಿ, ಸಮಾಧಾನವಾಗುತ್ತಿಲ್ಲ ಇನ್ನೊಮ್ಮೆ ಸವರಿಸಬೇಕು, ಮಾಡೋಣ 🙂

  10. ನನ್ನ ಪೂರಣ ಹಳೆಯ ಸಂಸ್ಕೃತಪದ್ಯಗಳ ಶೈಲಿಯಲ್ಲಿ. ಬೇರೇನೂ ಹೊಳೆಯದೆ ಇದ್ದಾಗ. 🙂

    ಗತಿ ಪತಿಗಾರ್? ಆರ್ ಶುಭದಾ
    ರತಿಯಂ ಬೆಳಗಿಪರ್? ಅದೆಂತು ಬಾಳೊಳ್ ಸೊಗಮಯ್?
    ಸತಿಪತಿರತಿಯಿಂ ಫಲಮೇಂ?
    ಸತಿ, ಸತಿಯರ್, ಕೂಡಿಕೊಂಡು, ಸಂತತಿಯಾಯ್ತಯ್ ||

    • 🙂 ಆಹಾ!

      ಕಂದದ ಕಿರುವಾಯೊಳ್ ತಾಂ
      ಪೊಂದಿಸೆ ನಾಲ್ಕೆನುತೆ ಚೋದ್ಯಗಳನಂ ಮಗುಳ್ದಾ-
      ಕ್ರಂದಿಸೆ ಪಳಗನ್ನಡದೊಳ್
      ಪಿಂದಿರ್ಪೆನೆನುತೆ ಬೆರಂಗನಂ ತೋರ್ಪರಲಾ

      ನಮಗೆ ಹಳಗನ್ನಡ ಕಷ್ಟ ಸಂಸ್ಕೃತ ಸುಲಭ ಅಂತ ಹೇಳುತ್ತಲೇ ಕಂದದ ಇಕ್ಕಟ್ಟಿನಲ್ಲಿ ನಾಲ್ಕು ಪ್ರಶ್ನೆಯನ್ನು ಹೊಂದಿಸಿ ಸಮಂಜಸ ಉತ್ತರ ಕೊಡುವ ರಾಘವೇಂದ್ರ ಬೆರಗನ್ನು ಮೂಡಿಸುವರಲ್ಲವೇ?

    • ಪರಿಹರಣಕ್ರಮ ತಿಳಿಯದೆ ಗೊಂದಲವಾಗಿತ್ತು. ಈಗ ತಿಳಿಯಿತು. ತುಂಬ ಚೆನ್ನಾಗಿದೆ.

    • ಒಳ್ಳೆಯ ಕ್ರಮಾಲಂಕಾರಪೂರಣ. ಸೋಮನೆಂದಂತೆ ಕಂದದ ಅಲ್ಪಕುಕ್ಷಿಯಲ್ಲಿದು ಒಳ್ಳೆಯ ಸಾಧನೆ.

    • ಚೆನ್ನಾಗಿದೆ. ಇದೇ ರೀತಿಯೆ ಪೂರಣವನ್ನು ನಾನು ಇನ್ನೊಂದು ಸಮಸ್ಯೆಗೆ ಹಾಕಿದ್ದೆ. “ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್” ಎನ್ನುವ ಸಮಸ್ಯೆಗೆ ಹಾಕಿದ ನನ್ನ ಹಲವು ಪೂರಣಗಳಲ್ಲಿ ಇಂತಹುದೂ ಒಂದು.

  11. ಪತಿವಿರಹಮೆರ್ದೆಯೊಳ್ ಪ್ರೋ-
    ಷಿತಪಥಿಕೆ ತಳೆಯುತಲಿಂದುದೌತ್ಯಕುಪವನ-
    ಕ್ಷಿತಿವಿಡಿಯೆ ಸಾರ್ಥವಾಹರ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

    • ಪ್ರಿಯಸೋಮ,
      ಈ ಕಂದದಲ್ಲಿ ಲಘುಗಳು ಅತಿಯಾಗಿ ಗತಿಹಿತವೂ ತುಸು ಹದಗೆಟ್ಟು ಪದ್ಯಕ್ಕೆ ಕಳೆಗೂಡಿದಂ.ತಿಲ್ಲ. ದಯಮಾಡಿ ಸವರಿಸುವುದು

    • “ಎರ್ದೆ” ಎನ್ನುವ ಶಬ್ದ ನಿತ್ಯವೂ ಶಿಥಿಲದ್ವಿತ್ವವನ್ನು ಆಶ್ರಯಿಸುವುದು. ಆದ್ದರಿಂದ ಅದನ್ನು ಎರಡು ಲಘುಗಳಾಗಿ ಬಳಸುವುದೇ ಒಳಿತು.

      • “ಎರ್ದೆ” ಎನ್ನುವ ಶಬ್ದ ನಿತ್ಯವೂ ಶಿಥಿಲದ್ವಿತ್ವವನ್ನು ಆಶ್ರಯಿಸುವುದು ಎಂಬ ಮಾಹಿತಿಗೆ ಧನ್ಯವಾದಗಳು ಶ್ರೀಕಾಂತರೆ, ಈ ಪದ್ಯಬವನ್ನು ಸವರಿಸುತ್ತೇನೆ

  12. ಪ್ರತಿವಸ್ತು ಕೊಂಡು ಪೋಗಲ್
    ಮತಿವಿರಸಮೆರಗೆ ಮರಳ್ದು ಪಣ್ಯಮೆನಲ್ ಹಾ
    ಪ್ರತಿವನಿತೆ ವಿಪಣಮೀಕ್ಷಿಸೆ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್

    ಮತಿವಿರಸಮೆರಗೆ – ಇಷ್ಟ ಆಗದಿದ್ದರೆ

    ಇಷ್ಟ ಆಗದಿದ್ದರೆ ವಸ್ತುಗಳನ್ನು ವಾಪಸ್ ಪಡೆಯುತ್ತೇವೆ ಅಂತ ಹೇಳಿದ ತಕ್ಷಣ ಎಲ್ಲರ ಹೆಂಡತಿಯರೂ ಅಂಗಡಿಗೆ ಮುತ್ತಿಗೆ ಹಾಕಿ unmanageable ಆಯ್ತು ಅಂಗಡಿ

  13. ಮಿತಮಲ್ತು ಪೆರ್ಚು ಗೆಯ್ಮೆ
    ಕ್ಷಿತಿಯರಸಂಗೆನುತೆ ಸಂಧಿಯೊಳ್ ಪರಿಣಯಮಂ
    ಪತಿರಾಯಂ ಗೆಯ್ದಿರಲಾ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

  14. ವ್ರತದೊಳ್ ನೈಷ್ಠಿಕಮುಂ ಕೇಳ್
    ಹಿತಮುಂ ಗಡಮೆಂದು ವಿಪ್ರನೊರ್ವಂ ಸೆಳೆಯಲ್
    ಮಿತಮತಿಗಳ್ ಸೋಲ್ತುದರಿಂ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

    mass psychology, if one falls… others will follow

  15. ಜೊತೆ ಸೇರಿಸೆ ಪಿಂಡಗಳಂ
    ಧೃತಿವಂತೆ ಜರಾ, ಪ್ರಲಾಪಿಸಿರೆ ಘನವನದೊಳ್ |
    ಹತಭಾಗ್ಯ ಬೃಹದ್ರಥನಾ
    ಸತಿಸತಿಯರ್, ಕೂಡಿಕೊಂಡು ಸಂತತಿಯಾಯ್ತಯ್ ||

    ‘ಕೂಡಿಕೊಂಡು’ ಪದವನ್ನು ಕೀಲಕವನ್ನಾಗಿ ಮಾಡಿಕೊಂಡು ಪದ್ಯ ರಚಿಸಲು ಪ್ರಯತ್ನಿಸಿದ್ದೇನೆ.

    ಮಗಧರಾಜ ಬೃಹದ್ರಥನಿಗೆ ಇಬ್ಬರು ಪತ್ನಿಯರು. ಸಂತಾನವಿರಲಿಲ್ಲ. ಸಂತಾನಪ್ರಾಪ್ತಿಗಾಗಿ ಒಬ್ಬ ಋಷಿ ಕೊಟ್ಟ ಹಣ್ಣನ್ನು ಎರಡು ಭಾಗ ಮಾಡಿ ಇಬ್ಬರು ಹೆಂಡತಿಯರಿಗೂ ಕೊಟ್ಟಿದ್ದುದರ ಫಲವಾಗಿ ಎರಡು ಹೋಳುಗಳಾಗಿ ಜನಿಸಿದ ಮಗುವನ್ನು ಹೆದರಿ ವನದಲ್ಲಿ ಬಿಸುಟಾಗ ಅಲ್ಲಿ ಬಂದ ಜರಾ ಎಂಬ ರಾಕ್ಷಸಿ ಎರಡು ಹೋಳುಗಳನ್ನು ಸೇರಿಸಿದಾಗ ಮಗು ಜೀವಂತವಾಗಿ ಅಳಲು ಪ್ರಾರಂಭಿಸಿತು. ಜರೆಗೆ ಮಗುವನ್ನು ತಿನ್ನಲು ಮನಸ್ಸಾಗದೆ ರಾಜನಿಗೇ ಒಪ್ಪಿಸಿದಳು. ಇದು ಜರಾ-ಸಂಧ ಹುಟ್ಟಿದ ಕಥೆ.

    • bahaLa cennAgide Sudheer Sir

    • ಸುಧೀರ್,
      ಮಹಾಭಾರತದ ಒಂದು ತುಣುಕನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಪದ್ಯವಂತೂ ಚೆನ್ನಾಗಿದೆ.
      ಪ್ರಲಾಪಿಸಿರೆ ಘನವನದೊಳ್ – ’ಮಗು’ ಎಂಬ ಪದ ತಂದರೆ ಸೂಕ್ತ. ಇಲ್ಲದಿದ್ದರೆ ಪ್ರಲಾಪವು ಜರಾ ಅಥವಾ ಬೃಹದ್ರಥರಿಗೆ ಅನ್ವಯವಾಗುತ್ತದೆ.

    • ಚೆನ್ನಾಹಿದೆ ಸುಧೀರ್. ಜರಾ ಬದಲು ಜರೆ ಹಾಕಬಹುದು. ಕನ್ನಡಕ್ಕೆ ಅದೆ ಸರಿ. ಮಾತ್ರೆಗಳ ಲೆಕ್ಕದಲ್ಲೂ ವ್ಯತ್ಯಾಸವಾಗುವುದಿಲ್ಲ.

      • Thanks, Srikanth. Agreed.
        BTW, ನಾನೇ ‘ಜರೆ’ದರೆ ಓದುವವರಿಗೇನು ಉಳಿಯಿತು? 🙂

  16. ಹಿತಮತಿಋತಮೇ ಸೃಷ್ಠಿ
    ಸ್ಥಿತಿಲಯದೀ ಚಕ್ರಕೆಣ್ಣೆಯಿರೆ, ತೆರೆಮರೆಯಿಂ
    ಪತಿಕಾರ್ಯದೊಳ್ ಲಕುಮಿ ಸರ-
    ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

    ಇಲ್ಲಿ ಸತಿ = ಪಾರ್ವತಿ ಎಂಬ ಅರ್ಥದಲ್ಲಿ ಬಳಸಿದ್ದೇನೆ.
    ಈ ಜೀವಸಂತತಿಗೆ ಲಕ್ಷ್ಮಿ (ಹಿತ), ಸರಸ್ವತಿ(ಮತಿ) ಮತ್ತು ಪಾರ್ವತಿಯರ (ಋತ) ತೆರೆಮರೆಯ ಕೊಡುಗೆಯೂ ಅಷ್ಟೇ ಮುಖ್ಯವಾಯ್ತು ಎಂದು ಹೇಳುವ ಪ್ರಯತ್ನ.

    • ಚತುರಮಿದಲ್ತೇ ಸತಿ, ಸರ-
      ಸತಿ ಲಕುಮಿಯರಿಂ ರವೀಂದ್ರನೊರೆದಾ ಪದ್ಯಂ

    • clap clap

    • ಆಹಾ! ಎಂಥ ಸೊಗಸಾದ ಪರಿಹಾರ!!

    • ಬಲುಸೊಗಸು ರವೀಂದ್ರ. ಈ ಐಡಿಯ ನನ್ನ ತಲೆಯಲ್ಲಿ ಓಡುತ್ತಿತ್ತು. ನೀನು ಮುಂಚಿಕೊಂಡೆ.

    • ಸೋಮ, ಪ್ರಸಾದು, ರಾಗ, ಶ್ರೀಕಾಂತರಿಗೆ ಧನ್ಯವಾದಗಳು! ಶ್ರೀಕಾಂತರೇ, ನೀವೂ ಬರೆಯಿರಿ! ನಿಮ್ಮ ಪಳಗನ್ನಡದ ಫಳಫಳಗನ್ನಡವ ನೋಡುವುದೇ ಚಂದ 🙂

  17. on a lighter note 🙂

    ಗತಕಾಲವಿದಲ್ಲವು ಭಾ
    ರತದಲ್ಲೂ ಲೆಸ್ಬಿಯನ್ವಿವಾಹವು ಲೀಗಲ್!
    ದತ್ತು ಮಗುವನು ಪಡೆಯುವರ್ –
    ಸತಿಸತಿಯರ್ ಸೇರಿಕೊಂಡು ಸಂತತಿಯಾಯ್ತಯ್ ||

    • ಒಳ್ಳೆಯ ಪರಿಹಾರ.

      • ಸಮಸ್ಯೆಯನ್ನೇ ನಮಸ್ಯೆಯನ್ನಾಗಿಸಿದ ಸುಧೀರನಿಗೆ ನಮನ!

    • ಇದೊಂದೇ ಲೀಗಲ್ ಆದ ಪರಿಹಾರ 🙂

      ದತ್ತು ಮಗು ತೊಗೊಳಕ್ಕೆ ಹೋಗಿ, ಹೆತ್ತ ಮಗು ಪ್ರಾಸನ್ನ ಬಿಟ್ಬಿಟ್ರಲ್ಲಾ 🙂

      ಅನ್ವಯ ಹೀಗೆ ಮಾಡಬೇಕೆ? ಸತಿಸತಿಯರ್ ಸೇರಿಕೊಂಡು ದತ್ತು ಮಗುವನು ಪಡೆಯುವರ್ , ಸಂತತಿಯಾಯ್ತಯ್ .
      ಆಗ, ಪಡೆಯುವರ್ ಬದಲಿಗೆ, ಪಡೆದಿರಲ್ ಮಾಡಿದರೆ, ಸಂತತಿಯಾಯ್ತಯ್ ಗೂ ಲಿಂಕ್ ಸಿಕ್ಕು ಅನ್ವಯಕ್ಲೇಶ ತಪ್ಪುತ್ತದಲ್ಲವೇ?

      • 🙂
        Thanks for the comment Shreesha. I have used the hyphen at the end of the third pada. Though uncommon in Kannada and Sanskrit poems, I feel we can use the hyphen to stop the sentence and then introduce a general conclusion. Howzzat?

  18. ಕೃತಖೇಚರನಲ್ತೇ ಮೇಣ್
    ಕೃತವಾರಿಧ್ಯಪ್ರಗಾಧಚರನಲ್ತೇ ತಾಂ
    ಕೃತಕಪ್ರಜನನದೊರೆವನೆ?
    ‘ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!’

    What cannot human do?
    ಕೃತಖೇಚರ – one who constructed airplane
    ಕೃತವಾರಿಧ್ಯಪ್ರಗಾಧಚರ – one who constructed submarine
    ಕೃತಕಪ್ರಜನನ – artificial reproduction methedology

    • Terrestrial Air and submarine – ಉಚ್ಚನೀಚ ಶ್ರೇಣಿಗಳನ್ನು ಇನ್ನೂ ಕಾಯ್ದುಕೊಂಡಿರುವಿರಿ. ಕೊನೆಯ ಪಾದದ ಆಶಯ (ಸಮಾನತೆ) ಸಿದ್ಧಿಸಿಲ್ಲ. ಮರಳಿ ಯತ್ನವ ಮಾಡು, ಹೇ ಮನುಜ 🙂

  19. ಧೃತಿಗೆಟ್ಟು ಸ್ತ್ರೀ ಕುಲವುಂ
    ಮತಿಗೆಟ್ಟ ಪುರುಷ ಸಮಾಜದೊಳ್ ನೊಂದಿಹ ಸಂ
    ಗತಿಯಂ ಚಿಂತಿಸಿಲಾ ಮಾ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ||

    • ಪುರುಷರಸಮಾಜಮಂ ಮೊತ್ತದೊಳ್ ದೂಷಿಪುದು,
      ನೆರಿಗೆ ಸಿಕ್ಕಿಸಿ ಮೆರೆವುದೇಕತೆಯನು|
      ಭರದೊಳೇಕತೆಯ ಸಾಧನದೆ ಮಾಸತಿ-(ಸಾಮಾನ್ಯ)ಸತಿಗ
      ಳೆರಡಿಂತು ನೀಂ ಗೈದಿರೌ ಶ್ರೇಣಿಯಂ|

  20. ಮತಿಚೋದಿಪ ಭೌಮ್ಯಂಗಳ್
    ದ್ಯುತಿಯಿಂದೆಮೆರೆವ ರಸಜ್ಞರಚನೆಗಳಿಂ ಭಾ-
    ರತಿಯಾ ಸೊಲ್ಗಳಿನಾ ಸರ
    ಸತಿ, ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್

    ಸರಸತಿ, ಸತಿ ಎಂಬ ಹೆಸರಿನ ಲೇಖಕಿಯರು ಸೇರಿ ಬರೆದ ಉತ್ತಮವಾದ ಗ್ರಂಥದ ಪೂರಣ

  21. ಈ ಸಮಸ್ಯೆಗೆ ನಾನು ಬಲುಮುನ್ನವೇ ಅವಧಾನವೊಂದರಲ್ಲಿ ನೀಡಿದ ಪರಿಹಾರವಿಂತಿದೆ:

    ಚತುರಹರಿಯ ಕೃಪೆಯಿಂದಂ
    ಸ್ಥಿತಿಯುತ್ತಮಿಸುತ್ತುಮಿಂದ್ರಪುರಿ ಕಯ್ಕೂಡಲ್ |
    ನುತಪಾಂಡವರ್ಗಮುಚಿತವ-
    ಸತಿ-ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ||

    ಮೊದಲೇ ದ್ರೌಪದಿಯನ್ನು ಮದುವೆಯಾದ ಪಾಂಡವರಿಗೆ ಇದೀಗ ಕೃಷ್ಣನ ನೆರವೂ ದಕ್ಕಿ ಖಾಂಡವಪ್ರಸ್ಥವು ಇಂದ್ರಪ್ರಸ್ಥವೆನಿಸಿ ಅಂತೂ ಒಟ್ಟಿನಲ್ಲಿ ಅವರಿಗೆ ಸತಿ ಮತ್ತು ವಸತಿಗಳು ಒದಗಿ ಬಂದು ಉಪಪಾಂಡವರುದಿಸಿದರೆಂದು ಪೂರಣದ ತಾತ್ಪರ್ಯ.

    • ನಾನೂ ಇದೇ ಕೀಲಕ ಬಳಸಿಕೊಂಡಿರುವೆನೆಂಬುದೇ ಸಮಾಧಾನಕರ. ಕಯ್ಕೂಡಲ್~ಒದಗಲ್, ಉಚಿತದ~ವಿಲಾಸದ ಎಂಬ ಸಾಮ್ಯಗಳೂ ಇವೆ.

    • ವಸತಿ ಕೀಲಕವನ್ನು ಬಳಸಿ, ಪಾಂಡವರಸುಸ್ಥಿತಿಯ ಪೂರಣ ಬಹಳ ಚೆನ್ನಾಗಿದೆ ಗಣೇಶ್ ಸರ್

    • ಸತಿಯಿದ್ದರೆ ಮಾತ್ರ ಸಾಲದು. ಸಂತತಿಯಾಗಲು ಅನುಕೂಲವಸತಿಯೂ ಅಗತ್ಯ ಅನ್ನೋದನ್ನ ಚೆನ್ನಾಗಿ ತೋರಿಸಿದ್ದೀರ

      • ಸದ್ಯ, ‘ಅನುಕೂಲವಸತಿಯೂ’ ಪದವನ್ನು ಟಂಕಿಸುವಾಗ ಟೈಪೊ ಆಗಲಿಲ್ಲ. 5 ಮತ್ತು 6ನೆಯ ಅಕ್ಷರಗಳು swap ಆಗಿದ್ದರೆ ಗತಿ!

  22. Just in jest. Not a serious allegation.
    ಮಿತದಿಂದಾಚರಿಸಿರ್ದಾ
    ಋತುವೊಳು ಸಂಕಷ್ಟ-ವೈಭವಾದಿ ವ್ರತಗಳ್|
    ಪತಿಯಂ ಗಣಿಸದೆ ನಡೆಸಲ್
    ಸತಿ-ಸತಿಯರ್ ಕೂಡಿಕೊಂಡು, ಸಂತತಿಯಾಯ್ತಯ್!
    ಸಂತತಿ = ಸಂತತ – ವಿಜೃಂಭಣೆಯಿಂದ ನಡೆಯುತ್ತಿವೆ ಎಂಬ ಅರ್ಥದಲ್ಲಿ

  23. ಧಾತೃಸ್ತ್ರೀಸೃಷ್ಟಿಯದು ಗ-
    ರತಿ, ಧೀರೆ, ಗುಣವತಿ, ಮುಗ್ಢೆ, ಚತುರೆ, ಸುಮತಿಯರ್ |
    ಪತಿರತೆ, ಕೋಮಲೆ, ದುಷ್ಟಾ-
    ಸತಿ, ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ||

    ಬ್ರಹ್ಮನ ಸ್ತ್ರೀಸೃಷ್ಟಿಯಲ್ಲಿ ಎಲ್ಲ ರೀತಿಯ ಸ್ತ್ರೀಯರೂ ಇರುವರು –
    ಗರತಿ, ……ದುಷ್ಟ+ಅಸತಿ, ಸತಿಯರ್

  24. ಅತಿಶೂಲೆಯೊಳಿರ್ದಜನಕ
    ಸುತೆ,ತುಂಬು ಬಸರಿಯತಂಗಿಸಾಶ್ರಮದೊಳಗಂ
    ಜತನದಿನೆರವಾದಾಗಳ್
    ಸತಿಸತಿಯರ್ ಕೂಡಿಕೊಂಡು, – ಸಂತತಿಯಾಯ್ತಯ್

    • ಕಾಂಚನಾರವರೆ,
      ಪದ್ಯ ಚೆನ್ನಾಗಿದೆ.
      ———
      ಪದ್ಯಪಾನಿಗಳಲ್ಲಿ ವಿನಂತಿ,
      ಇನ್ನುಮುಂದೆ ’ಹೆಂಗಳೆಯರು ಸೇರಿ ಪ್ರಸವಕಾರ್ಯವನ್ನು ನೆರವೇರಿಸಿದರು’ ಎಂದು ಪದ್ಯ ರಚಿಸುವಿರಾದರೆ, ದಯವಿಟ್ಟು ಆ (ಪ್ರಸಿದ್ಧ) ನವಮಾತೆಯ ಹೆಸರನ್ನು ಮಾತ್ರ ತಿಳಿಸಿರಿ ಸಾಕು. ಕಾಂಚನಾರವರ ಈ ಪದ್ಯದಲ್ಲಿ ಆ ಹೆಸರನ್ನು ಅಳವಡಿಸಿಕೊಂಡು, ಕಾಲ-ದೇಶ-ಸಂದರ್ಭಗಳನ್ನು ಹೊಂದಿಸಿಕೊಂಡು ನಾವೇ ಓದಿಕೊಳ್ಳುತ್ತೇವೆ.
      ವಿಶೇಷ ಸೂಚನೆ:
      1) ಸ್ಪಷ್ಟೀಕರಿಸುವ ಘೋರಾಗತ್ಯವಿರುವ ಪ್ರಕರಣಗಳಲ್ಲಿ ಮಾತ್ರ ಮಗುವಿನ ತಂದೆಯ ಹೆಸರನ್ನು ತಿಳಿಸಿರಿ.
      2) ’ಪದ್ಯ ಚೆನ್ನಾಗಿದೆ’ ಎಂಬ Auto Responder ಹೊಗಳಿಕೆ ತಪ್ಪದೆ ಸಲ್ಲುತ್ತದೆ. 🙂

    • Good one!

  25. ಪತಿಯರತಿಪ್ರೀತಿಯಿಂ ಪ್ರತಿ-
    ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ |
    ಪ್ರತಿ ಜನಗಣತಿಯ ಗುಣಿತವು
    ಶತಶತ ಕೋಟಿಯನು ದಾಟೆ ಸಂಕಟವಾಯ್ತಯ್ ।।

    • ‘ಅತಿಪ್ರೀತಿಯಿಂ ಪ್ರತಿಸತಿ’ ಕೂಡುವಲ್ಲಿ ಜನಸಂಖ್ಯಾಸ್ಫೋಟದೊಡನೆ ಮಾತ್ರಾಸ್ಫೋಟವೂ ಆಗಿದೆಯಲ್ಲ, ಮೊದಲ ಸಾಲಿನ ಮಾತ್ರೆಗಳನ್ನು ಗನಮನಿಸಿರಿ ಉಷಾ ರವರೆ. ಐಡಿಯಾ ಚೆನ್ನಾಗಿದೆ 🙂

      • ಹೌದು, “ಪ್ರೀತಿ”ಯಿಂದಾಗಿ ಹೆಚ್ಚಾಗಿದೆ ಸೋಮ. ವಿಧಿಯಿಲ್ಲ, ಸರಿಪಡಿಸಲು ಅಲ್ಪವಿರಾಮ(ಕಾಮ)ವನ್ನೇ ತರಬೇಕಿದೆ !!

  26. ಸುಧೀರ್, ಕಾಂಚನಾ ಮತ್ತು ಉಷಾ ಅವರ ಈಚಿನ ಪೂರಣಗಳೆಲ್ಲ ಸೊಗಸಾಗಿವೆ.ಅಲ್ಪಕಾಲದಲ್ಲಿ ಅನಲ್ಪರೀತಿಯ ಪೂರಣಗಳನ್ನು ಒದವಿಸುತ್ತಿರುವ ಎಲ್ಲ ರಸಿಕರಿಗೆ ಅಭಿನಂದನೆ. ಅಲ್ಲಲ್ಲಿ ಪದಶುದ್ಧಿಯ ದೃಷ್ಟಿಯಿಂದ ಕೆಲವರಲ್ಲಿ ಸಣ್ಣ-ಪುಟ್ಟ ಲೋಪದೋಷಗಳು ತಲೆದೋರಿರಬಹುದಾದರೂ ಬಲುಮಟ್ಟಿಗೆ ಎಲ್ಲರೂ ನೂತನಕಲ್ಪನಪ್ರಾವಣ್ಯಾನುಪ್ರಾಣಿತರೆಂಬುದು ತುಂಬ ಹಿಗ್ಗಿನ ಸಂಗತಿ.ಇದು ಪ್ರಾಯಿಕವಾಗಿ ಪದ್ಯಪಾನದ ಎಲ್ಲ ಸಂಚಿಕೆಗಳಿಗೂ ಅನ್ವಯಿಸುವಂಥ ಮಾತು.

  27. ಪಿತನಾ ಕಶ್ಯಪನೊರ್ಮೆ ಜ-
    ಗತೀತಳದೆ ಜೀವ ಸೃಷ್ಟಿಗಂ ನೋಂತಿರ್ದಂ|
    ಜತೆಯಾಗಲ್ಕೆನುತವನಂ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್||

    (ಪಿತಂ ಆ ಕಶ್ಯಪಂ ಒರ್ಮೆ ಜಗತೀ ತಳದೊಳ್ ಜೀವಸೃಷ್ಟಿಗಂ ನೋಂತಿರ್ದಂ. ಜತೆ ಆಗಲ್ಕೆನುತೆ ಅವನಂ ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ |)
    ಕಶ್ಯಪ ಭೂಮಿಯಲ್ಲಿ ಅಂಡಜ ಸ್ವೇದಜ ಇತ್ಯಾದಿ ರೀತಿಯಲ್ಲಿ ಜೀವಸೃಷ್ಟಿಯನ್ನು ಮಾಡಲು ಪ್ರಾರಂಭಿಸಿದನೆಂದೂ ಅವನಿಗೆ ಸತಿ ಸತಿಯರು ಜತೆಯಾಗಿ ಕೂಡಿಕೊಂಡು ಈ ಸಂತತಿಯಾಯಿತು ಎಂಬ ಪುರಾಣಾಧಾರಿತ ಪೂರಣ.

    • ಚೆನ್ನಿಹುದಿದು ಕೊಪ್ಪಳ ಕೇಳ್
      ಚೆನ್ನಂ ಹೆಂಡಿರುಗಳುಂ ಪ್ರಜೆಗಳನಿತುಮಿರಲ್|
      ಪನ್ನತಿಕೆಯಂ ಮೆರೆವೆ ನೀ
      ನೆನ್ನ ಗಣಿಸಲಿಂತೊರೆರ್ದೆ ಬೊಮ್ಮಗೆನುತ್ತುಂ 🙂

      ಪ್ರಜೆಗಳು=ಮಕ್ಕಳು

    • Nice

      • ಮೂರ್ತಿಗಳೆ,
        ‘ಎರ್ದೆ’ ನಿತ್ಯ ಶಿ.ದ್ವಿ. ಎಂದು ಹೇಳಿದಿರಿ. ‘ತೊರೆರ್ದೆ’ಯೂ ಅಂತೆಯೆ?

        • “ಹೃದಯ”ದ ತದ್ಭವ “ಎರ್ದೆ>ಎದೆ” ಹಾಗಾಗಿ ಅದು ನಿತ್ಯಶಿಥಿಲದ್ವಿತ್ವ. “ತೊರೆರ್ದೆ” ಹೇಗೆ ಬಂತು. “ತೊರೆದೆಯೇ?”
          “ತೋರೆರ್ದೆ=ತೋರ+ಎರ್ದೆ!!? ವಿಶಾಲವಾದ ಹೃದಯವಾದರೆ ಶಿ.ದ್ವಿ;-) 😉

          • ‘ತೊರೆರ್ದೆ’ಗೂ ‘ಎದೆ’ಗೂ ಯಾವ ಸಂಬಂಧವೂ ಇಲ್ಲ. ತೊರೆರ್ದೆ=ತೊರೆದೆ ಸರಿಯೆ?

          • ತೊರೆದೆ ಬದಲು ತೊರೆರ್ದೆ ರೂಪ ಇದ್ದಂತಿಲ್ಲ.(ನನ್ನ ಅರಿವಿನ ಮಿತಿಯಲ್ಲಿ) ಎಲ್ಲಾದರೂ ಪೂರ್ವಕವಿಗಳು ಬಳಕೆ ಮಾಡಿದ್ದಿದೆಯಾ?

          • ಎರ್ದೆ ಶಬ್ದ ಹೃದಯದ ತದ್ಭವವಲ್ಲ. ಅದು ದ್ರಾವಿಡಮೂಲದ ಅಚ್ಚಗನ್ನಡ ಶಬ್ದವೆಂದೇ ಭಾಷಾತಜ್ಞರಿಂದ ಪರಿಗಣಿತ.

            ತೊರೆರ್ದೆ- ಸುಧೀರ್ ಹೇಳುವುದೇ ಸರಿ, ನನಗೆ ತಿಳಿದಮಟ್ಟಿಗೆ

  28. ಪತಿ ಪಟ್ಟಣಕ್ಕೈದಿರೆ ಶ್ರೀ-
    ಮತಿ ಪ್ರಸವ ಬಾಧೆಯಿಂ ಬಳಲಿರಲ್!!
    ಸ್ಥಿತಿಯರಿತರ್ ಬಿಜ್ಜೋದರ
    ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!!.

    • ಸುಜಿತರಿಗೆ ಪದ್ಯಪಾನಕ್ಕೆ ಸ್ವಾಗತ. ಕಲ್ಪನೆ ಚೆನ್ನವೂ ನವೀನವೂ ಆಗಿದೆ. ಸ್ವಲ್ಪವೇ ಸವರಣೆ ಬೇಕಿದೆ. ಎರಡನೆಯ ಗಣದಲ್ಲಿ ಒಂದು ಮಾತ್ರ ಹೆಚ್ಚು ಇದೆ. ಎರಡನೆಯ ಪಾದದ ಕೊನೆಯಲ್ಲಿ ಒಂದು ಗಣ ಲುಪ್ತವಾಗಿದೆ.
      ಪತಿ ಪಟ್ಟಣಕೈದಿರೆ ಶ್ರೀ-
      ಮತಿ ಪ್ರಸವ ಬಾಧೆಯಿಂ ಬಳಲಿ ನೊಂದಿರ್ದಳ್|
      ಸ್ಥಿತಿಯರಿತರ್ ಬಿಜ್ಜೋದರ
      ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್||

      ಪದ್ಯರಚನೆಯನ್ನು ಬಿಡದೆ ಮುಂದುವರಿಸಿರಿ.

      • ನನ್ನ ಭಾರವನ್ನಿಳಿಸಿದ ಪ್ರಸಾದರಿಗೂ ನೂತನಪದ್ಯಪಾನಿಗಳಾದ ಸುಜಿತರಿಗೂ ಧನ್ಯವಾದ.

  29. ‘ತಾತಾ’ ಭಾಷೆಯ ಸೂತ್ರವಿ
    ದು ‘ತಿಸ’ ಪ್ರತ್ಯಯವು ಸಂಧಿಯೊಳು ಬದಲಾಯ್ತಯ್ |
    ‘ಅಂತ’ ಪ್ರತ್ಯಯಕೆ. ಉದಾ –
    ಸತಿಸತಿಯರ್ ಕೂಡಿ ಸಂತತಿಯಾಯ್ತಯ್ |

    ‘ತಾತಾ-ಪಾಣಿನಿ’ ಬಿರುದಾಂಕಿತನಾದ ನಾನು ಹಳೆಯ ಬುಡಕಟ್ಟಿನ ಭಾಷೆಗಳಲ್ಲಿ ವಿಸಿಷ್ಟವಾದ ‘ತಾತಾ’ ಭಾಷೆಯನ್ನು ಬಲ್ಲ ಏಕೈಕ ಜೀವಂತ ವ್ಯಕ್ತಿ ಎಂದು ತಮಗೆಲ್ಲಾ ತಿಳಿದೇ ಇದೆ.
    ಅ ಭಾಷೆಯ ವ್ಯಾಕರಣವು ನಶಿಸಿ ಹೋಗಬಾರದೆಂದು ನಾನು ಆಗಾಗ ಪಾಠಗಳನ್ನು ಪ್ರಕಟಿಸುತ್ತಲೇ ಬಂದಿರುವೆ.
    ಈ ಹೊತ್ತಿನ ಸೂತ್ರ – ‘ತಿಸಂತ’.
    ಬಹಳ ಮುಖ್ಯವಾದ ಏಕಪದ ಸೂತ್ರ. ‘ಸಂಧಿ’ ಮತ್ತು ‘ತಾತಾ’ ಪದಗಳು ಹಿಂದಿನ ಸೂತ್ರಗಳಿಂದ ತೆಗೆದುಕೊಂಡು ಅನ್ವಯ ಮಾಡಿಕೊಳ್ಳಬೇಕು.
    ಸತಿ+ಸತಿ = ಸತಿಸತಿ = ಸ(ಅಂತ)ತಿ = ಸಂತತಿ.
    ಹೀಗೆ ಪದದ ನಿಷ್ಪತ್ತಿ.
    🙂

    • ಪ್ರಾಸಾಘಾತಂ ಪ್ರಾಸಕೀಯುತ್ತುಮಿಂತೇಂ
      ಮೋಸಂ ಗೆಯ್ವೀ ಚಾತುರೀಘಾತುಕಾರ್ಥಂ !!
      ಹಾ! ಸೌಧೀರೋದ್ಯೋಗದ ವ್ಯಾಕೃತಿಶ್ರೀ-
      ತ್ರಾಸಂ! ತ್ರಾಸಂ ತೂಗಳೇಂ ವಾಣಿ ಜಾಣಿಂ?

    • Very imaginative. It has opened up a new method of pariharaNa. Your predecessor in this lineage is the one who designed ಕ್ರಮಾಲಂಕಾರಪೂರಣ (See 10 above by Sri Raghavendra HebbaLalu).
      Recently I had battled it out with Dr. Srikaanth Murthy and learnt that ಸಿಂಹ & ಗಜಪ್ರಾಸ shall not be mixed up even in kaMda despite it permitting jagaNa starters in even pAda-s.
      Occasionally such chATupadya-s have staked claim for some relaxation.
      ಆ ಪದ್ಯಮನುಂ ಮೇಣಾ
      ಛಾಪಿನ ವಾಕ್ಯಾರ್ಥಮನ್ನುಮೊರೆದೊಡೆ ನೀನಾ|
      ಭಾಪಿನ ತಾತಾ ಭಾಷೆಯೊ
      ಳಾಪೋಶನಗೈದೆಯೆಂದರಿವೆವಾಗದನುಂ||

  30. …ನಿಜಸೌಧವಸತಿ-ಸತಿಯರ್ … ಎಂದು ಮಾಡಬೇಕೆಂದಿದ್ದೆ. ’ವಸತಿ’ ಆಗಲೇ Register ಆಗಿದೆ. ಹಾಗಾಗಿ ಜಗತಃಪಿತರೌ ಶರಣಂ…

    ಸತಿಯೆನೆ ನಾಶಂ ಲಯಪತಿ
    ಸತಿಯೆನೆ ಶೈಲಜೆಯೆ ಪ್ರಕೃತಿ ಸೃಷ್ಟಿವಿಧಾನಂ
    ಋತಮೀಯಬೇಧಚಕ್ರಂ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

  31. ಈ ವರೆಗೆ ಯಾರೂ ಸದ್ಯದ ಸಮಸ್ಯೆಗೆ ಕಲ್ಪಿಸಿರದ ಪರಿಹಾರವೆಂಬ ಭಾವನೆ(ಭ್ರಮೆ?)ಯಿಂದ ಇದೊಂದು ಪೂರಣ:

    ಸತಿಯೊರ್ವಳಂಡಮಂ ಭ್ರೂ-
    ಣತೆಗೇರಿಸುತನ್ಯಸತಿಯ ಬಾಡಿಗೆತಾಯೆಂ-
    ದತಿಚತುರವೈದ್ಯರೊಪ್ಪಿಸೆ
    ಸತಿ-ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ !

    • Beautiful, Ganesh Sir. The hallmark of an elegant solurion is that once it is revealed, it seems so obvious and we all wonder why we didnt think of it. You’ve definitely bested us all

      • agree

      • Good pUraNa gaNesh sir, fully agree with Sudheer, so obvious one… how did I misssss? 🙂

      • sir ಎಂಬ ಸಂಬೋಧನೆಯು ನನಗೆ ಹಾಗೆಯೇ
        ಸಿರ್ರೆಂದು ಮುನಿಸನೇ ಬರಿಸುತಿಹುದು |
        ಗಿರ್ರೆಂದು ತಲೆ ತಿರುಗಿದಂತಾಯ್ತು ನೀ ಕೂಡ
        ಗುರ್ರೆನ್ನ(ಗುರು ಶಬ್ದದ ತದ್ಭವ !?! :-)ಲಿಂತು ಮಿತ್ರನೆ ಸುಧೀರ!

    • ಸಂಶೋಧನೆಗಳಿಂದ ಪದ್ಯಪಾನದಲ್ಲಂತೂ ಸಮಸ್ಯೆಯ ಪರಿಹಾರವಾಯಿತು.:-)

  32. ಪತಿಯುಂ ನೀಡಿದ ಛಾಂದಸ
    ಪಂತಿ ಸಮಸ್ಯೆ ಬಿಡಿಸಲ್ ವನಿತೆಯರ್ ನೆರೆದರ್!!
    ಕುತುಕವಿದೇನ್ ಮಂತಣದಿಂ
    ಸತಿ ಸತಿಯರ್ ಕೂಡಿಕೊಂಡು, ಸಂತತಿಯಾಯ್ತಯ್!!

    • ಜಿತರಿಗೆ ಪದ್ಯಪಾನಕ್ಕೆ ಸ್ವಾಗತ. ಚಿತ್ರಣ ಚೆನ್ನಾಗಿದೆ. ಕೆಲವು ಸವರಣೆಗಳು ಬೇಕಿವೆ.
      ೧) ಎರಡನೆಯ ಪಾದದಲ್ಲಿ ಗಜಪ್ರಾಸಸಂಕರವಾಗಿದೆ. (ಅಲ್ಲದೆ, ಅದು ‘ಪಂಥಿ’ ಅಲ್ಲವೆ?)
      ೨) ಮೂರನೆಯ ಪಾದ: ‘ಮಂತು’ (ಕಡೆಗೋಲು) ಪದವಿದೆಯಾದರೂ, ಮಂತನ ಎಂದರೆ ಮನೆತನ ಎಂಬ ಅರ್ಥವಿದೆ. ಹಾಗಾಗಿ ಅದು ‘ಮಂಥನದಿಂ’ ಆಗಬೇಕಲ್ಲವೆ?

      ನಿಯತವಾಗಿ ಕವನಿಸಿ. ಧನ್ಯವಾದ.

      • ಪ್ರಸಾದ್ ರವರಿಗೆತಿದ್ದಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು.
        ಕನ್ನಡ ರತ್ನಕೋಶ ದಲ್ಲಿ ಪಂತಿ ಪದಕ್ಕೆ ಪಂಕ್ತಿ (ಸಾಲು) ಎಂಬ ಅರ್ಥನೀಡಿದ್ದಾರೆ.
        ಗಂಡನೊಬ್ಬ ನೀಡಿದ ಛಂದಸ್ಸಿನ ಸಮಸ್ಯಾಸಾಲನ್ನು ಪೂರ್ತಿಗೊಳಿಸಲು ಹೆಂಗಸರು ಒಟ್ಟು ಗೂಡಿದರು. ಹೆಂಗಸರೇ ಸೇರಿ ಮಂತಣ(ರತ್ನಕೋಶ-ಮಂತ್ರಾಲೋಚನೆ, ಸಭೆ) ದಲ್ಲಿ ಕಾವ್ಯ ಕಂದನನ್ನ ಸೃಷ್ಟಿಸಿದರು ಎಂಬ ಚಿತ್ರಣ ವನ್ನು ತರಲು ಪ್ರಯತ್ನಿಸಿದ್ದೇನೆ.

        • ಓಹ್. ನಾನು ಮಂತಣವನ್ನು ಮಂತನ ಎಂದು ಓದಿಕೊಂಡೆ. ಕ್ಷಮಿಸಿ. ’ಪಂತಿ’ ಅರ್ಥ ತಿಳಿಸಿದ್ದಕ್ಕೆ ಕೃತಜ್ಞತೆಗಳು. ಅಲ್ಲಿಗೆ, ಅರ್ಥಕ್ಲೇಶಗಳಿಲ್ಲ ಎಂದಾಯಿತು. ಎರಡನೆಯ ಪಾದದ ಗಜಪ್ರಾಸವನ್ನು ಮಾತ್ರ ಸವರಿಸಬೇಕು.

  33. ಗತಸಂಸ್ಕೃತಿಯೆಮದೆನುತುಂ
    ಶತಪಥಮೆರ್ಚುತೆ ಹರಪ್ಪ-ಲಿಪಿಯಂ ಬಿಡಿಸಲ್
    ಧೃತಿಯಂ ಕ್ಷೀಣಿಪ ಮುದ್ರಿಕೆ
    ‘ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್’

    when harappa scripts were being deciphered, new seal disproved previous mapping of symbols by yielding meaningless statement and the Indologist suffered a setback.

  34. ಎರಡೇ ದಿನಗಳಲ್ಲಿ ನೂರಕ್ಕೂ ಮೇಲಿನ ಪ್ರತಿಕ್ರಿಯೆಗಳು. ಇದರಲ್ಲಿ ಸೋಮನ ಕೈವಾಡದ ಪಾತ್ರವೇ ಪ್ರಮುಖವೆಂದು ನನ್ನ ಊಹೆ.

  35. ನೋಡಿ ತರುಣನಂ ನಕ್ಕಾ ಕ್ಷಣಂ
    ಕಾಡ ಹರಟೆಯ ಸತಿಸತಿಯರ್
    ಕೂಡಿಕೊಂಡು ಸಂತತಿಯಾಯ್ತಯ್ಯೋ
    ಗಾಡಿಕಾರ್ತಿಗೆ ದಿನಮೇಳರೊಳ್

    • ಗಾಡಿಕಾರ್ತಿಯ ಸಂತತಿಯದೇಂ?
      ಪಾಡುಮಿದುಮಲ್ತೆಲ್ಲ ಪೆಣ್ಗಳದ್!
      ಆಡಿಕೊಂಡಿರ್ದವರು ಬೆಳೆಯಲ್ ನೋಡನೋಡುತಲೇ|
      ಗಾಡಿಕಾರ್ತಿಯ ಪೆರ್ಮೆಯಿದು ಕೇಳ್
      ಬೇಡವೆಂಬೆನು ಸೂಲಗಿತ್ತಿಯು
      ಗಾಡಿಕುತುಕಲಿನಲ್ಲೆ ಹೆರಿಗೆಯ ಮಾಡಿಸುವಳಲ್ತೆ||

    • Srikanthare, Good pUraNa and adaptation of samasya in a different chaMdas

    • ಗಣೇಶರೆ- ನನ್ನ ಕಿರಿಯಕ್ಕರ ಕೀಳಿಗೆ ಕಿರಿದಾಯಿತೆ?- ತಮ್ಮ ಪ್ರತಿಕ್ರಿಯೆಬರಲಿಲ್ಲವಲ್ಲ 🙂

      • ನಾನೇನೆ ಸುಮ್ಕಿವ್ನಿ ಸಂಖ್ಯೆ ವೊಂದರೊಳಂಗೆ (Sl No.1)
        ಐನಾತಿ* ಪದ್ಯಾವ ಬರ್ದ್ರೂ|
        ಮೀನಮೇಷವೆನುತ್ತೆ ರಚಿಸಿ ಮೂವತ್ತೈದ (Sl No.35)
        ಕ್ಕೇನಯ್ಯ ನಿಮ್ಮ ಪುಲಾರ|| 🙂

        *ಇನ್ಯಾರಾದರೂ ಇದನ್ನು ಅನುಮೋದಿಸುವವರೆಗೆ, ಇಲ್ಲಿರುವುದು ಪ್ರಾಸ-ವಿಡಂಬನೆಗಳು ಮಾತ್ರ ಎಂದು ತಿಳಿಯತಕ್ಕದ್ದು.

  36. ಅತಿಯುತ್ಸಾಹದೆ ಲಕುಮಿಯ‌
    ವ್ರತಮಂಗೈಯುತಲಿಪೂಜಿಸಲ್ ಪ್ರತಿದಿನವು
    ನ್ನತಿಯಂಕಾಣುತ್ತಿರಲೀ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತ

  37. ..

  38. will correct and out back

  39. ರಾಮಾಯಣದಲ್ಲಿ ದಶರಥನ ಮೂವರು ಹೆಂಡತಿಯರಲ್ಲಿ ಸುಮಿತ್ರೆಗೆ ಮಾತ್ರ ಅವಳಿ ಮಕ್ಕಳು ಹುಟ್ಟಿದ ಪ್ರಸಿದ್ಧ ಸಂದರ್ಭ.

    ಸ್ತುತರಾಮಾಯಣದ ಕಥೆ. ಸ-
    ವತಿಯರ್ ಹಂಚಲು ಸುಮಿತ್ರೆಗೂ ಪಾಯಸಮಂ |
    ಪತಿಯೊಲವಿನವೋಲ್ ದಶರಥ
    ಸತಿಸತಿಯರ್, ಕೂಡಿಕೊಂಡು ಸಂತತಿಯಾಯ್ತಯ್ ||

  40. ಮತಭೇದವ ತೊಡೆದಿರಲಾ
    ಗತಾನುಭವವಚನವೇದ ಜನಸಂಗಮದೊಳ್ ।
    ಪತಿಲಿಂಗ ಶರಣ ಸತಿಯೆನೆ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ।।

    • ಗತಾನುಭವ – ಈ ಪ್ರಯೋಗ ಸಾಧುವೇ?

      • ಚೀದಿ, ನೀವು ಛಂದಸ್ಸಿನ ವಿಷಯ ಕೇಳುತ್ತಿದ್ದರೆ, ಹೌದು ಈ ಪ್ರಯೋಗ ಸಾಧು. ಕಂದದ ಸಮಪಾದಗಳನ್ನು ಜಗಣದಿಂದ ಆರಂಭಿಸಬಹುದು. ಅದು ಅರಿಸಮಾಸವೂ ಅಲ್ಲ.

      • ಧನ್ಯವಾದಗಳು ಪ್ರಸಾದ್ ಸರ್, ಚೇದಿ,
        “ಆಗತಾನುಭವ” ಎಂದುಕೊಂಡದ್ದು. ಸರಿಯಿದೆಯೇ? ತಿಳಿಯುತ್ತಿಲ್ಲ.

    • ಒಳ್ಳೆಯ ಕಲ್ಪನೆ;ಅಭಿನಂದನೆಗಳು

      • ಧನ್ಯವಾದಗಳು ಗಣೇಶ್ ಸರ್,
        ನೀವು ಹೇಳಿರುವಂತೆ ಪದ ಪ್ರಯೋಗದಲ್ಲಿ(ಪದಶುದ್ಧತೆಯಲ್ಲಿ) ತೊಡಕಾಗುತ್ತಿದೆ. ಸರಿಪಡಿಸಿಕೊಳ್ಳುತ್ತೇನೆ.

  41. ಪತಿಯಂ ಕಳಕೊಂಡಿಪ್ಪಾ
    ಸತಿಯರ್ ಜೊತೆಗೂಡಿ ಪೊಂದಿ ವಾಸಿಸೆ ಮುದದಿಂ, |
    ಸುತರೆಂದರ್,”ಸದ್ಗೃಹದೊಳ್
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್” ||

  42. ಜಿತ-ಸುಜಿತರೆಂಬ ಇಬ್ಬರು ಹೊಸ ಕವಿಗಳು ಆಗಮಿಸಿದಾರೆ. ಅವರಿಗೆ ಸ್ವಾಗತ:
    ಇರ್ವರೈದಿರ್ಪರಿಲ್ಲಿ ಪೊಸಬರ್ ಕಬ್ಬಿಗರು
    ಒರ್ವರು ಸುಜಿತರು ಜಿತರಿನ್ನೊರ್ವರೈ|
    ಪೂರ್ವಪಾನಿಗಳನ್ನು ಸೇರೆ ಬಂದಿರಲಿವರು
    ಗರ್ವದಿಂದೆಂಬೆ ‘ನಾಂ ಸಜಿತರ್’ಈಗಳ್||

    • ಪ್ರಸಾದ್ ರವರೆ
      ಜಿತ ಮತ್ತು ಸುಜಿತ ಇಬ್ಬರೂ ಒಂದೇ. I just edited profile name …….
      ಪೂರ್ವಪಾನಿಗಳ ಸ್ನೇಹಪೂರ್ವಕ ಸ್ವಾಗತಕ್ಕೆ ದನ್ಯವಾದಗಳು.

      • Too costly a move. You should not have done so. No going back now. You have to continue posting verses in two names. And when you do so, pit one against the other in a fierce competition.

  43. ಶೃತಿಯೋಳೇಳು ರಮಣಿಮಣಿ
    ಸತಿಸತಿಯರ್ ಕೂಡಿಕೊಂಡು, ಸಂತತಿಯಾಯ್ತಯ್
    ಕೃತಿರಾಗಸ್ವರಜತಿಗಳು
    ಚಿತ್ತದೊಳೀವಾಣಿಸೃಷ್ಟಿಗೆಬೆರಗಿದೆನುನಾನ್ ।।

    • ವೇ,
      ಅಪರೂಪವಾಗಿಬಿಟ್ಟಿರಿ.
      1) ಶೃತಿ ತಪ್ಪು. ಅದು ಶ್ರುತಿ ಎಂದಾಗಬೇಕು.
      2) ಶ್ರುತಿಯೊಳೇಳೇಳು ಆಗಬೇಕು (ಯೋx). ಆಗ ಮಾತ್ರೆ ಲೆಕ್ಕ ತಪ್ಪುತ್ತದೆ. ಶ್ರುತಿಯೊಳುಮೇಳು/ಳಗೇಳು ಎಂದು ಸವರಬಹುದು.
      3) ಬೆರಗಿದೆನು ಸರಿಯೆ? ಬೆರಗಾದೆನು, ಬೆರಗ ಹೊಂದಿದೆ ಸಾಧು. ಇಲ್ಲಿ ‘ಗೆ ಬೆರಗುಗೊಂಡೆಂ’ ಎಂದು ಸವರಬಹುದು.
      4) ಕೊನೆಯ ಪಾದದಲ್ಲಿ ಪ್ರಾಸ ತಪ್ಪಿದೆ (ತ್ತ). ಸವರಿಸಿ.
      ಆಗಾಗ ಬರುತ್ತಿರಿ.

  44. Have you all seen my comment under 24 above?

  45. ಮಣಿಪ್ರವಾಳವನ್ನು ನೆನಪಿಸುವ ಒಂದು ಪರಿಹಾರ. Take it lightly, please.

    ಅತಿಸುಂದರರಾತ್ರಿಯೊಳಾ
    ರತಿಪತಿಮದನಂ ವಿಜೃಂಭಿಸೆ ಪೀಡಿತ ಪತಿಯರ್ |
    (पूर्णॆ चंद्रॆ विलसति
    सति) ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ||

    • ಸಂಸ್ಕೃತದ ‘ಸತಿ ಸಪ್ತಮಿ’ ಪ್ರಯೋಗವನ್ನು ‘ಸಪ್ತಪದಿ’ಯಾದವರಿಗೆ ಪ್ರಯೋಗಿಸಿದಿರಿ:-) ಒಳ್ಳೇ ಮಾರ್ಗ:-)

    • ’ವಿಲಸತಿ ಸತಿ’ ಅಂದ್ರೆ ’ವಿಲವಿಲ ವದ್ದ್ದಾಡ್ತಾ ಅವ್ರೆ’ ಅಂತ್ಲೆ?

    • ಇಂಥ ’ಮಣಿಪ್ರವಾಳ’ಪೂರಣಗಳನ್ನು ಹಿಂದಿನ ಅವಧಾನಿಗಳು ಕೆಲವರು ಮಾಡಿದ್ದಾರೆ. ನಾನೂ sos ರೂಪದಲ್ಲಿ ಕೆಲವೊಮ್ಮೆ ಮಾಡಿದ್ದೆನಾದರೂ ಸುಧೀರನ ಪೂರಣದ ಹದ ಬಲುಸೊಗಸಾಗಿದೆ.

    • Sudheer- there is an excess of one mAtre in the second foot.

  46. ಪತಿಯೇಂ! ಮುಳಿದನೆ? ಕೇಳ್ ಸ್ತ್ರೀ-
    ಹಿತರಕ್ಷಣೆ ಪೂಣ್ಕೆಯೆಮ್ಮ ಮಂಡಲಿಯೊಳ್ ಶೋ-
    ಷಿತೆ ನೀಂ ಹಾ! ಎನೆ ಮೌಗ್ಧದ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್

    ಸ್ತ್ರೀ ಸಮಾಜ/ಮಂಡಲಿ ಇತ್ಯಾದಿಗಳು ಮುಗ್ಧ ಸ್ತ್ರೀಯರನ್ನು ನಿನ್ನ ಗಂಡ ಸರಿಯಿಲ್ಲ ಶೋಷಿಸುತ್ತಿದ್ದಾನೆ, ನಮ್ಮ ಮಂಡಲಿ ಸೇರು ಹೋರಾಡೋಣ ಎಂದು ಸಲ್ಲದ ವಿರಸವನ್ನು ಸಂಸಾರದಲ್ಲಿ ತೊಂಬುವ ಪೂರಣ

  47. ಅತಿಚತುರ ಸ್ತ್ರೀಯರೆ ಪುರ
    ದೆ ತಮ್ಮ ಕಲೆಯಿಂದೆ ನಾಟಕಮನಾಡುತಿರಲ್
    ಗತಿಯೇಂ? ಭೀಮಾರ್ಜುನರಾ
    ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್||
    (ಅತಿ ಚತುರರಾದ ಸ್ತ್ರೀಯರೇ ತಮ್ಮ ಕಲೆಯಿಂದ ನಾಟಕವನ್ನಾಡುತ್ತಿರುವಾಗ ಬೇರೆ ಗತಿಯುಂಟೇ! ಭೀಮ ಮತ್ತು ಅರ್ಜುನರ (ಮಹಾಭಾರತದ ಭೀಮ ಅರ್ಜುನರಲ್ಲ.!!ಯಾರೋ ಇಬ್ಬರು Mr.X and Mr.Y ಎಂದು ಹೇಳಬಹುದು.ಮಾತ್ರೆಗಳ ಲೆಕ್ಕಕ್ಕೆ ಹೊಂದಿದ ಕಾರಣ ಭೀಮಾರ್ಜುನರು ಬಂದರು:-) ) ಸತಿಸತಿಯರು ಕೂಡಿಕೊಂಡು ಸಂತತಿಯಾಯಿತು.)

  48. ಇನ್ನೊಂದು
    ಶಿತಿಕಂಠ-ತಪನ-ತೇಜಮ
    ನತಿವೇಗದಿಂ ಅನಲದೇವನ್ ಎಸೆಯಲ್ ನದಿಯೊಳ್
    ಮತಿಯಿಂ ಶರದೊಳಿಡಲ್ ಶಿವ
    ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ||

    ಕುಮಾರಸಂಭವ: ಮಹಾದೇವನ ತಪನೋಪಮ-ತೇಜಸ್ಸನ್ನು ಭರಿಸಲಾಗದೆ ಅಗ್ನಿದೇವನು ಗಂಗೆಯೊಳೆಸೆದಾಗ, ಆ ಗಂಗೆಯು ಶರದಲ್ಲಿ (ಹುಲ್ಲಿನಲ್ಲಿ) ಅದನ್ನಿಟ್ಟ ಮೇಲೆ, ಶಿವಸತಿ (ಗಂಗೆ ಅಥವಾ ಪಾರ್ವತಿ) ಮತ್ತು ಕೃತ್ತಿಕಾ ದೇವಿಯರು ಸೇರಿ ಸುಬ್ರಹ್ಮಣ್ಯನ ಜನನವಾಯ್ತು.

  49. ವ್ಯಥೆಯೊಳಿರಲ್ ಕಾರಾಗೃಹ
    ಮಿತಿಯೊಳ್ ದೇವಕಿಗೆ ಕಂದನಂತುದಿಸಿದವಂ
    ಸುತನಾಗಿ ಬೆಳೆದ ನಂದನ
    ಸತಿ, ಸತಿಯರ್ ಕೂಡಿಕೊಂಡು ಸoತತಿಯಾಯ್ತಯ್
    ಸತಿಯರ್ = ಗೋಕುಲದ ಇತರ ಸ್ತ್ರೀಯರು

  50. ಮತ್ತೊಂದು:
    Baby Boomer!

    ಶತಮಾನದ ಸಂಗರದೊಳ್ ಅ
    ಜಿತರಾಗಳ್ ಅಮೆರಿಕದೇಶಜನರ್ ಅಮಿತಸುಖರ್ |
    ರತರ್ ಉದ್ಯೋಗದೊಳ್ ಆಪ್ತವ
    ಸತಿ-ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ||

    ಎರಡನೆಯ ಮಹಾಯುದ್ಧದ ನಂತರ ಗೆದ್ದು ಮರಳಿದ ಅಮೆರಿಕದ ಸೈನಿಕರಿಗೆ ಹಾಗೂ ಇತರರಿಗೆ ಉದ್ಯೋಗಗಳು ಹೇರಳವಾಗಿ ದೊರೆತವು. ಸರ್ಕಾರದಿಂದ ಕಡಿಮೆ ದರದಲ್ಲಿ ಮನೆಸಾಲವನ್ನು ಪಡೆದರು. ಈ ಕಾರಣಗಳಿಂದ ಹಿಂದೆಂದೂ ಇರದ ಹಾಗೆ ಜನಸಂಖ್ಯೆ ಹೆಚ್ಚಿತು. ಆ ಕಾಲದಲ್ಲಿ (1946-1963) ಹುಟ್ಟಿದವರನ್ನು Baby Boomers ಎಂದು ಕರೆಯುವ ವಾಡಿಕೆ ಇದೆ. ರಾಗರ ವಸತಿ-ಸತಿಯರ್ ಕೀಲಕವೇ ಇದಕ್ಕೆ ಸ್ಫೂರ್ತಿ,

  51. ಸು’ಧೀರ’ ಮಾರ್ಗದಲ್ಲಿ; On a lighter note.

    ಅತಿ ಮೋಹದಸತಿ ಪತಿಯಿಂ
    ಗತಿಸಿರೆ ಬಡಿದಿಹುದಸಂತತಿವಿರಹದು:ಖಂ | *ಬಡಿದಿಹುದು ಅಸಂತತಿ ಮತ್ತು ವಿರಹ ಧು:ಖ
    ಸ್ಥಿತಿಗಂ ಹೊಂದುವ ತರುಣಿಯ
    “ಸತಿ ಸತ್ Year”, ಕೂಡಿಕೊಂಡು ಸಂತತಿಯಾಯ್ತಯ್ ||

    happy ending 🙂 -:) 🙂

    • ಇದು ಧೀರಮಾರ್ಗವಲ್ಲ. ವೀರಮಾರ್ಗ! ಕಲ್ಪನೆ-ಪರಿಹಾರಗಳಂತೂ ಚೆನ್ನಾಗಿವೆ.

    • Ha ha ha :-). Good show

    • ಸತಿ(ಯಾಗಿ) “ಸತ್ ear”!! ಮಾಡಿಕೊಂಡು ಕೇಳಿಸಿಕೊಂಡೆ ಶ್ರೀಶ, ಪೂರಣ ತುಂಬಾ ಚೆನ್ನಾಗಿದೆ.
      ಎಲ್ಲರ ಪೂರಣಗಳೂ ತುಂಬಾ ಸೊಗಸಾಗಿ, ವಿಭಿನ್ನವಾಗಿವೆ. ಸಕ್ರಿಯವಾಗಿ ಪ್ರತಿಕ್ರಯಿಸಲಾಗುತ್ತಿಲ್ಲವಾದರೂ ಬಹಳವಾಗಿ ಆನಂದಿಸುತ್ತಿರುವೆ. ಎಲ್ಲ ಪದ್ಯಪಾನ ಮಿತ್ರರಿಗೂ ಧನ್ಯವಾದಗಳು.

  52. ಈಗಾಗಲೇ ಈ ರೀತಿ ಪೂರಣ/ಗಳು ಬಂದಿರಬಹುದೇನೋ. ಆದರೂ ಕಂದಪದ್ಯ ಬರೆಯುವ ಮೊದಲ ಪ್ರಯತ್ನ ಮಾಡಿ ಹಾಕುತ್ತಿದ್ದೇನೆ.

    ಕೃತದೌರ್ಜನ್ಯವಿರುದ್ಧಂ
    ಖತಿ ತೋರಲ್ತಾವ್ ಪರಸ್ಪರಕರಗಳಂ ಮೇಣ್
    ಕೃತಿದಕ್ಷರ್ ಪಿಡಿದಿರಲಾ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್

    ಖತಿ=ಕೋಪ (source=shreesha :P)
    ಸಂತತಿಗೆ= continouous line/row (apte dictionary)

    ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ಸತಿಯರು ಸಂತತಿ (human chain) ಮಾಡಿದರು ಎಂಬ ಪೂರಣ

    • Good capturing of a nuance of meaning of the word ಸಂತತಿ. Hard to believe this is your first kaMda. Let you beget more kaMda-s 😉

    • ಹೌದಾ ಜಿ ಎಸ್, ಮೊದಲನೇಯದ… ಆಶ್ಚರ್ಯ? ಚೆನ್ನಾಗಿದೆ ಪದ್ಯ 🙂

      • ಪ್ರಸಾದು ಮತ್ತು ಸೋಮಣ್ಣ, ನಿಮ್ಮಿಬ್ಬರ ಪ್ರೋತ್ಸಾಹಕ್ಕೆ ಧನ್ಯವಾದಗಳು.

      • ಸೋಮ,
        ನಿಮ್ಮನ್ನು ಆಶ್ಚರ್ಯಗೊಳಿಸಿದ ವಿಷಯ ಏನೆಂದು ನನಗೆ ಗೊತ್ತು. ಇದು ರಾಘವೇಂದ್ರರ ಕಾನೀನಕಂದ ಎಂದಲ್ಲವೆ?
        ಅಂಗ್ ನೋಡುದ್ರೆ, ಇಂತಾ ಕಂದ್ಗೋಳು ಸಂದಾಕೇ ಇರ್ತಾವೆ, ’ದಾಟು’ನಾಗೆ ಬೈರಪ್ನೋರ್ ಯೋಳ್ದಂಗೆ, ಸಾದರವಳ್ಳಿಯೋರ ಇಷಯದಾಗೆ 😉

    • ಜಿ ಎಸ್! ಒಳ್ಳೆಯ ಕಂದನನ್ನೇ ಹಡೆದಿದ್ದೀಯಯ್ಯಾ!! ಅಭಿನಂದನೆಗಳು:-)

  53. ಜೊತೆಯೊಳ್ ಗಡಂಗಿಗೈದುತೆ
    ಪತಿಪತಿಯರ್ ಮುಳುಗುತೇಳಲುನ್ಮಾದದೊಳಂ|
    ಕುತಕದ ವ್ರತಗಳ ಗುಂಗೊಳು
    ಸತಿ-ಸತಿಯರ್ ಕೂಡಿಕೊಂಡು, ಸಂತತಿಯಾಯ್ತಯ್!

  54. ಪ್ರತಿಶತವರ್ಧಶತ ರಿಯಾ
    ಯಿತಿಯಿರಲೊಸ್ತುಪ್ರದರ್ಶನಕೆ ಸಿರಿಮತಿಯರ್ |
    ಇತಿಮಿತಿಯರಿಯದಲೋಡಿರೆ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ||

    ಸಂತತಿ = ಗುಂಪು = ಸಂತೆ+ಅತಿ !
    (50% Discount Saleನ ಚಿತ್ರಣ)

    ಕಾಂಚನ,ಶಕುಂತಲಾ,ಭಾಲಾ ತಪ್ಪುತಿಳಿಯಬೇಡಿ, ಸುಮ್ಮನೆ (ಪ್ರಸಾದ್ ಸರ್ ಸಮಾಧಾನಕ್ಕೆ!) ಹೀಗೆ ಬರೆದದ್ದು. “ಸತಿ”ಯರೆಂದಿದ್ದರೂ “ಸಿರಿ”ಮತಿಯರೇ !!

    • sante + ati will become santeyati. ati is a samskrita word. So santati = sante + ati will not work.

      • ಗ್ರಾಮಿಣ ಭಾಷೆಯಲ್ಲಿ ಸಂತೆಯನ್ನು ಸಂತ್ ಅಂತ ಮಾತಿನಲ್ಲಿ ಹೇಳಬಹುದೇನೋ … ಉದಾಹರಣೆಗೆ…” ನಾ ಸಂತ್ಗೋಗಿದ್ದೆ.” for ನಾನು ಸಂತೆಗೆ ಹೋಗಿದ್ದೆ. ಆದ್ದರಿಂದ ರಿಯಾಯಿತಿ ಸಿಗಬಹುದ?

        • ಇಲ್ಲ ವ್ಯಾಕರಣಶುದ್ಧಪ್ರಯೋಗಗಳಿಗೆ ಮಾತ್ರ ಅಭಿಜಾತ ಛಂದಸ್ಸುಗಳಲ್ಲಿ ಅವಕಾಶ, ಮಹಾಕವಿಗಳ ಹಳಗನ್ನಡ ಪ್ರಯೋಗವನ್ನು ಗಮನಿಸಿರಿ

        • ಓದುಗ,
          ಅಂಗಾದ್ರೆ ಇಡೀ ಪದ್ಯಾವ ಅಂಗೇಯ ಬರೀಬೇಕು – ಕೋಲಾರುದ್ದೋ ಕೊಳ್ಳೇಗಾಲುದ್ದೋ ಭಾಷೇನಾಗೆ. ಊಂ ಅಂಬ್ತೀನಿ!

      • ನಮಸ್ಕಾರ ರಾಘವೇಂದ್ರ ಅವರೆ,
        ಸಂಧಿ ವಿಷಯದಲ್ಲಿ ನಿಮ್ಮ “ಹೆಬ್ಬಳಲು!” ಅರ್ಥವಾಗುತ್ತಿದೆ. ಆದರೆ ಅದು ನಾನು “ಸಂತತಿ”ಗೆ ಕೊಟ್ಟ ವಿವರಣೆ ಅಷ್ಟೆ.( ಸಂದರ್ಭಕ್ಕೆ ಹೊಂದಿದಂತೆ – ಅದಕ್ಕಾಗಿಯೇ ಆ “!” ಚಿನ್ಹೆ )
        ಪೂರಣದಲ್ಲಿ “ಗುಂಪು/ಸಮೂಹ” ಎನ್ನುವ ಅರ್ಥದಲ್ಲೇ ಬಳಸಿದ್ದೇನೆ. ಆಗಲಿ, “ಸಂತೆ+ಅತಿ”ಯನ್ನು “ಸಂತೆ-ಅತಿ” ಮಾಡಿಕೊಳ್ಳೋಣವೇ?

    • ವರದಕ್ಷಿಣೆ ೫೦%, ಮದುವೆಖರ್ಚು ೫೦%

      ವರದಕ್ಷಿಣೆಯ ಕೊಳ್ಳದೆಲೆ ತಾರೆ ಪೆಣ್ಣನ
      ರ್ಧ ರಿಯಾಯಿತಿಯೊಳಿದುವೆ ಪಾಡು ಕೇಳೌ|
      ತ್ವರದೆ ಸಾಗುವಳಲ್ತೆ ಕಾಲದೇಶದೊಳೆಲ್ಲು
      ದರವಿಕ್ರಯದೊಳರ್ಧವಿರೆ ರಿಯಾಯ್ತಿ||

      ಉಷಾರವರೆ, ಕ್ಷಮೆ ಇರಲಿ.

  55. ಸತಿಪತಿಯರ್ ಕೂಡುತೆ ಸಂ-
    ತತಿಯಪ್ಪುದದು ಬಲುಸಾಜಮೆನಗಿದು ಚೋದ್ಯಂ |
    ಮತಿಹೀನರಿದನೊರೆದರೇಂ ?!
    “ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್” ||

    • clap clap. ತುಂಬ ಚೆನ್ನಾದ ವಿವೃತಿ. ’ಮತಿಹೀನರಿಂತೊರೆದರೇಂ?’ ಎಂದರೆ ಇನ್ನೂ ಸೊಗಯಿಸುತ್ತದೆ. ಆದರೆ,

      ಸತಿಭರ್ತ ಬೆರೆತಾಗ ಸಂತತಿಯು ಸಾಜವದು
      ಋತವಿದನ್ನರಿತಿಹುದು ಲೋಕಮೆಲ್ಲಂ|
      ಕುತಕಮಾಯ್ತೆನಗೀಗಳಪ್ಪುದೆನೆ ನೀವು ಸಂ
      ತತಿಯು ಸಾಜವು-ಚೋದ್ಯಮೆರಡುಮೆಂದುಂ||

      ಅಥವಾ
      ಏಳೆ|| ಒಂದೊಮ್ಮೆ ಇಂತೆಂದುಮೆಂದಿರೇನದು ಸಾಜ
      ಮಂದಿಗಂ, ನಿಮಗಂ ಬಲುಚೋದ್ಯಂ|

  56. ಹಿತಮೈ ಬಾಲೆಯರಾಟಂ
    ಪತಿಪಾತ್ರವ ಮಾಳ್ಪರಾರುಮಿರದಿರಲಾಗಳ್
    ಸ್ಮಿತರಹ ! ಗೊಂಬೆಗಳೊಡನಾ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತೈ ||

    [ಆಟದಲ್ಲಿ ಪತಿಯ ಪಾತ್ರಕ್ಕೆ ಬಾಲಕರು ಸಿಗದಿದ್ದಾಗ ಮುಗ್ಧ ಬಾಲೆಯರು ಸತಿ ಸತಿಯರಲ್ಲೇ ಸಂತತಿ ಬೆಳೆಸಿಕೊಂಡರು]

  57. ಧೃತಿಗೆಟ್ಟಿದ ಮಹಿಳೆಯು ಹೆಂ
    ಡತಿ ನೀತಿಯಚಿತ್ರಿಸುತ್ತೆ ಕತೆಯೊಳಗಂ ವ
    ಕ್ರತೆಯಿಂದಿಡಲೀ ಶೀರ್ಷಿಕೆ –
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್

  58. ಜಿತನಾಗಲಿಂದ್ರಿಯಗಳಿಂ
    ಮತಿ ಬಂಧುರಮಾಗೆ ಕೋಮಲ ಸ್ತ್ರೀತ್ವತೆಯಿಂ
    ಹಿತ ಸಾತ್ವಿಕ ಮೈತ್ರಿಯೊಳೀ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತೈ ||
    [ ಪತಿಯೂ ಕೂಡ ಸ್ತ್ರೀಭಾವ ಹೊಂದಿ ಸತಿಯಂತಾಗಿದ್ದನೆಂಬ ಭಾವವನ್ನು ರಸಿಕರು ಒಪ್ಪುವರು ಎಂಬ ವಿಶ್ವಾಸದಿಂದ ಹಾಕಿದ್ದೇನೆ :-)]

  59. ಗತಿಸೆ ನರಕಾಸುರ ನೃಪ ಸ-
    ರತಿಸಾಲಿನಲಿ ಹದಿನಾರುಸಾವಿರ ಪೆಣ್ಗಳ್ |
    ಪತಿ ಕೃಷ್ಣನ ವರಿಸಿ ಬರಲ್
    ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್ ||

    🙂
    ಸಂತತಿ ಎಂದರೆ ಸಾಲು, continuity ಎಂಬ ಅರ್ಥ ಇಟ್ಟುಕೊಂಡು ಒಂದು ಪರಿಹಾರ. ’ಎರಡು ಮೈಲಿ’ ಎಂಬ ಪದಗಳನ್ನು ಸೇರಿಸಲು ಕಂದದಲ್ಲಿ ಜಾಗವಾಗಲಿಲ್ಲ 🙁

    • ತಾಳಿಕಟ್ಟುವ ಕಷ್ಟಕಾರ್ಯದೊಳು ಕೈಸೋಲು
      ತಾಳುಗಳಿಗದ ಕೃಷ್ಣ ಗೈದನೌಟ್-ಸೋರ್ಸ್|
      ತಾಳಲಾರಿರ ವ್ಯಾಖ್ಯೆ? ತಿಳಿದುದೇನೊಮ್ಮೆಗೇ
      ಮೇಳಮೈದಿದ ಮಾಯೆಯಿಂದಮೆಂದುಂ||

      ಸುಧೀರ್, ಇದು ನನ್ನ ಎಂದಿನ ಪ್ರತಿಕ್ರಿಯೆ. ನಿಮ್ಮ ಕಲ್ಪನೆ-ರಚನೆಗಳು ಸೊಗಸಾಗಿವೆ.

  60. ಅತಿಶಯದಿ ಸತೀಶನ ಜನ
    ಸತಿಯೆಂದೇ ಕರೆವರಲ್ತೆ, ಸತ್ಯಮ್ಮನಿಗಂ
    ಪತಿಯಾದಂ, ಸಂಭ್ರಮಿಸುತ
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್! 🙂

  61. ಯತಿ ವಡಿ ಪ್ರಾಸವ ನಿಲ್ಲಿಸಿ
    ದತಿಸುಂದರಿ ಕವನ ಕವಿಗೆ, ವನಮಧ್ಯದೊಳಂ
    ಲತೆಗುಡಿಯೊಳ್ ಪೂರ್ಣಿಮೆಯವ
    ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

    ಅವಸತಿ = ರಾತ್ರಿ

  62. ಪದ್ಯಪಾನಿಮಿತ್ರರೆಲ್ಲ ದಯಮಾಡಿ ಮನ್ನಿಸಬೇಕು. ಈಚಿನ ಕೆಲದಿನಗಳಿಂದ ಪದ್ಯಪಾನದ ಎಲ್ಲ ಪದ್ಯಗಳನ್ನು ಓದಲಾಗುತ್ತಿದ್ದರೂ ಪ್ರತಿಕ್ರಿಯಿಸಲಾಗದಂಥ ಕಾರ್ಯಾಂತರಗಳು ಒದಗಿಬಂದು ನಾನು ಎಷ್ಟೋ ಒಳ್ಳೆಯ ಸಮಸ್ಯಾಪೂರ್ತಿಗಳನ್ನು ಕುರಿತು ನನ್ನ ಮೆಚ್ಚುಗೆಯನ್ನೂ ಮತ್ತೆ ಕೆಲವೊಂದಕ್ಕೆ ಸವರಣೆಗಳನ್ನೂ ನೀಡಲಾಗದೆ ಹೋದೆ. ಹೆಚ್ಚಾಗಿ ಗಣಕಯಂತ್ರದ ಮೇಲೆ ದುಡಿಯಲು ದೇಹ ಸಹಕರಿಸದು. ಇಂತಿರಲು ಈ ನನ್ನ ಲೋಪವನ್ನು ಬಲುಮಟ್ಟಿಗೆ ಸೋಮ, ಪ್ರಸಾದು, ಶ್ರೀಕಾಂತ್ ಮುಂತಾದವರು ನೀಗಿಸಿದುದಕ್ಕಾಗಿ ಅವರಿಗೆ ನನ್ನ ವಿಶೇಷಧನ್ಯವಾದ. ವಿನೋದದ ಹಾದಿಯಲ್ಲಿ ಸಮಸ್ಯೆಗಳನ್ನು ಪೂರೈಸುವಾಗ ಛಂದೋವ್ಯಾಕರಣಗಳ ಪ್ರಾಥಮಿಕಸ್ತರದ ಒಪ್ಪವನ್ನೂ ಕೆಲವೊಂದು ಪರಿಹಾರಗಳು ಜಾರಿಸಿಕೊಂಡಿದ್ದುವು. ಇದು ಒಂದು ನಿಟ್ಟಿನಿಂದ ಆಸ್ವಾದ್ಯವೇ ಆದರೂ ಮತ್ತೊಂದು ರೀತಿಯಿಂದ ಅಪೇಕ್ಷಣೀಯವಲ್ಲವೆಂದು ನನ್ನ ವಿನಮ್ರಸೂಚನೆ.
    ಏನೇ ಆಗಲಿ ಸಮಸ್ಯಾಪೂರಣಕ್ಕೆ ದಕ್ಕುತ್ತಿರುವ ಅತ್ಯಂತಮಹೋತ್ಸಾಹದ ಪ್ರತಿಕ್ರಿಯೆಗೆ ನಾನು ಎಲ್ಲ ಪದ್ಯಪಾನಿಮಿತ್ರರಿಗೂ ಮಿಗಿಲು ಕೃತಜ್ಞನಾಗಿದ್ದೇನೆ.

    (ಇಂದು ಮುಂಜಾನೆ ಈ ನನ್ನ ಅಭಿಪ್ರಾಯಗಳನ್ನು ಹಲವು ಪದ್ಯಗಳ ರೂಪದಲ್ಲಿ ಟಂಕಿಸಿದೆನಾದರೂ submit ಮಾಡುವಷ್ಟರಲ್ಲಿ ಎಲ್ಲವೂ ಹೊಳೆಯಲ್ಲಿ ತೊಳೆದ ಹುಣಿಸೆಯಂತೆ wash-out ಆದುವು. ಹೀಗಾಗಿ ನಿರಾಶೆಯಿಂದ ಇದೀಗ ಶುಷ್ಕಗದ್ಯದಲ್ಲಿ ನಿವೇದಿಸುತ್ತಿದ್ದೇನೆ:-(

  63. ಖತಿಜನ್ಯತಪಂ ಸಿದ್ಧಿಸೆ
    ಹತಿಸಲ್ ಭೀಷ್ಮನ ಶಿಖಂಡಿ ಗಂಧರ್ವವರೋ
    ದ್ಧತಿಯಿಂದಂ ವೈವಾಹದಿ
    ಸತಿ ಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್!

    ಹೆಣ್ಣಾದ ಅಂಬೆ ಗಂಧರ್ವ ವರದಿಂದ ಪುಂಸ್ತ್ವಪಡೆದು ಮದುವೆಯಾಗಿ ಸಂತಾನಪಡೆದ ಭಾರತಕಥಾಂಶ

  64. ಧನ್ಯವಾದ ಪ್ರಸಾದರೆ. ನನ್ನ ಪದ್ಯದಲ್ಲಿ – ಅದು ಸಾಜ,ಇದು ಚೋದ್ಯ-ಎಂಬುದಾಗಿ ಸ್ಪಷ್ಟವಾಗಿ ವಿಂಗಡಿಸಿದ್ದೇನೆ.ಹೀಗಾಗಿ ನಿಮ್ಮ ಪದ್ಯ ವಿನೋದಾತ್ಮಕವೆಂದು ಭಾವಿಸುವೆ.

    ಸತಿಸತಿಯರ್ ಕೂಡಿ ಸುತರಪ್ಪ ಚೋದ್ಯಮಂ
    ಮತಿಹೀನರೊರೆದರೆಂದಿರ್ಪೆಂ||

    • ನಿಮ್ಮ ಗ್ರಹಿಕೆ ಸರಿಯಾಗಿದೆ. ನಾನು ಬೇಕೆಂದೇ ಚಾಟುವಾಡಿದೆ. ಸಾಜ-ಚೋದ್ಯಗಳಾವುವೆಂದು ನೀವು ಸ್ಪಷ್ಟವಾಗಿ ತೋರಿಸಿದ್ದೀರಿ.

      • ಮಾನ್ಯ ಪ್ರಸಾದರೆ,ನಿಮ್ಮ ಚಾಟುರಚನೆಗಳು ಎಂದಿನಂತೆ ಮನರಂಜಿಸಿವೆ.ಎಲ್ಲರನ್ನು ನಗಿಸುವಂಥ ನಿಮ್ಮ ಹವ್ಯಾಸ ತುಂಬ ಒಳ್ಳೆಯದು.

  65. ಗತಿಯಂ ಕಾಣಿಸೆ ಕೃತಿಯಿಂ
    ಮತಿಯೊಳ್ ಮೂಡಿದ ಪದಾರ್ಥವಮ್ ಸ್ನೇಹಿತೆಯರ್
    ನುತಿಗರ್ಹವೆನಲ್ ಕಾವ್ಯಮ್
    ಸತಿಸತಿಯರ್ ಕೂಡಿಕೊಂಡು ಸಂತತಿಯಾಯ್ತಯ್

    ನಿನ್ನೆ ತರಗತಿಯಿಂದ ಮನೆಗೆ ಹೋಗುತ್ತಿದ್ದಾಗ ಶ್ರೀಲಲಿತ ಹೇಳಿದ ’ಸಂತತಿಯೆಂದಂರೆ ಗ್ರಂಥ ರಚನೆಯೂ ಆಗಬಹುದು’ ಎಂಬ ಎಳೆಯನ್ನು ಆಧರಿಸಿ ರಚಿಸಿದ್ದು.’ಕೃ’ ಶಿಥಿಲದ್ವಿತ್ವವಾಗುತ್ತೆಂದು ತಿಳಿದಿದ್ದೇನೆ. ಸ್ನೇಹಿತೆಯರಿಬ್ಬರು ಕೂಡಿ ರಚಿಸಿದ ಕೃತಿಯ ಬಗ್ಗೆ ಬರೆದ ಪದ್ಯ.

    • ಚೆನ್ನಾದ ಪರಿಹಾರ. ಸಪ್ತಸಂತಾನದಲ್ಲಿ ಕೃತಿಯೂ ಒಂದೆಂದು ಸುಪ್ರಸಿದ್ಧ. ಹೀಗಾಗಿ ಈ ಪರಿಹಾರವು ಸೊಗಸಾದ ಹೊಸ ಹಾದಿಯನ್ನೇ ತೋರಿದೆ. ಅಭಿನಂದನೆಗಳು. ಇನ್ನು ಕೃತಿಯೆಂಬಲ್ಲಿ ಶಿಥಿಲದ್ವಿತ್ವವೇನಿಲ್ಲ. ಅದು ನಿಯತವಾಗಿ ಲಘುಘಟಿತವೇ. ಆದುದರಿಂದ ನಿಮ್ಮ ಕಂದಪದ್ಯದ ಛಂದಸ್ಸೇನೂ ಕೆಟ್ಟಿಲ್ಲ.ಭಾಷೆ ಮತ್ತು ಭಾವ-ಬಂಧಗಳ ದೃಷ್ಟಿಯಿಂದ ಇದು ಅನವದ್ಯವಾಗಿದೆ.

Leave a Reply to ಗಾಯತ್ರಿ ಇಂದಾವರ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)