Sep 222011
 

ನಾಲ್ಕನೆಯ ಸಾಲು :

ಸುಗ್ರೀವನೆಡಗಾಲಶುನಕ ಕಚ್ಚಲ್

  19 Responses to “ಪಂಚಮಾತ್ರಾಚೌಪದಿಯಲ್ಲಿ ಒಂದುಸಮಸ್ಯೆ”

  1. ಮೌಳಿಯವರೆ::‌ ಪದ್ಯಪಾನಕ್ಕೆ ನೇರವಾಗಿ ಹಾಕಿದ ಮೊದಲ Post ಇದು. ಧನ್ಯವಾದಗಳು

    • ಬ್ಲಾಗಿನ ಆನುಕೂಲ್ಯದಹಿಂದಿನ ಶ್ರಮ ಸುವ್ಯಕ್ತ. ಧನ್ಯವಾದಗಳು

  2. ಉಗ್ರವಾಯ್ತೇ ಪ್ರಾಸ? ನಿಗ್ರಹಿಸೆ ತೊಡಕಾಯ್ತೆ
    ವಿಗ್ರಹಿಪ ರಿಪುವ೦ತೆಯೀ ಸಮಸ್ಯೆ?
    ಅಗ್ರದೆಲೆ ಯೂಟದ೦ತೆ ಗ್ರಹಿಸಿ ಗೆಳೆಯರೇ
    ಸುಗ್ರೀವನೂ ತೊಗಲುಗೊ೦ಬೆಯಪ್ಪನ್

    • ಈ ಸಮಸ್ಯೆ ಅವಧಾನಕ್ಷೇತ್ರದಲ್ಲಿ ಪ್ರಖ್ಯಾತ – ಪುರಾತನ. ಅದನ್ನು ಪರಿಚಯಿಸಲು ಮತ್ತು ಚೌಪದಿಯರಚನೆಗೆ ಉತ್ತೇಜಿಸಲು ಈ ಯತ್ನ. .ಶ್ರೀಗಣೇಶರು ಮೊದಲಿಗೇ ಕಣ್ಣಾಮುಚ್ಚಾಲೆಯನ್ನು ಕೊನೆಗಾಣಿಸಿ, ಈ ಸಮಸ್ಯಯ ಪೂರಣಕ್ಕೆ ಹೂರಣ ಸಿದ್ಧಮಾಡಿಕೊಟ್ಟಿದ್ದಾರೆ. ಚೌಪದಿಯ ಕಣಕದಲ್ಲಿ ತಟ್ಟಿ ತಯಾರಿಸುವುದು ಮಾತ್ರ ಉಳಿದಿದೆ. ಇದು ಅವರ ಪದ್ಯಸೂಚನೆಗೆ ಪ್ರತಿಸ್ಪಂದೆನೆ :
      ನ್ಯಗ್ರೋದಬೀಜ ಹೆಮ್ಮರದಸೂಚನೆ, ಯದ-
      ವ್ಯಗ್ರತೆಯೆ, ಬಯಲು ತೊಡಕಾಟ ವಿರದೆ
      ಶೀಘ್ರಪರಿಹಾರ ಸೌಲಭ್ಯ ಕೈಸೂಚಿಯ ಕು-
      ಶಾಗ್ರಮತಿಗೀ ಹಳೆ ಸಮಸ್ಯೆ ಹೊಸದೇ?

      • ಶತಾವಧಾನಿಯವರು ಕೊಟ್ಟ ಸೂಚನೆಯು ನನ್ನ ಮಂದ ಬುಧ್ಧಿಗೆ ತಿಳಿಯುತ್ತಿಲ್ಲ… ಸರಿಯಾದ ಪರಿಹಾರವನ್ನು ಕಾತುರದಿಂದ ಕಾದುನೋದುತ್ತಿದ್ದೇನೆ 🙂

        • ಸೋಮ,
          ಗಣೇಶರ ಸೂಚನೆಯಲ್ಲಿ ಸುಗ್ರೀವ ಎಂಬ ತೊಗಲು ಬೊಂಬೆಯನ್ನು ಶುನಕ ಕಚ್ಚಿದೆ

  3. ಗಣೇಶರ ಪದ್ಯದಿಂದುದಿತವಾದ ಪ್ರಶ್ನೆ ::
    ‘ಸುಗ್ರೀವ’ ಪದಕ್ಕೆ, ‘ವಿಗ್ರಹಿಪ’ ‘ಅಗ್ರ’ ಇವು ಪ್ರಾಸವಾಗುತ್ತವೆಯೇ? ಅಂದರೆ, ‘ಗ್ರ’ ಕ್ಕೆ ದೀರ್ಘಾಕ್ಷರ ಬೇಡವೇ?

    ನನ್ನ ಪೂರಣ ಹೀಗಿದೆ ::

    ಸುಗ್ರಾಸಗಳನುಂಡು ಬೆಳೆದಿರ್ದ ಕುನ್ನಿಯು –
    ವ್ಯಗ್ರಾತಿರೇಕದಲಿ ಮುನಿದಿತ್ತು ಹಸಿವಿನಲಿ |
    ಅಗ್ರೇಸರಂಗೆ ಹಿರಿಚಿಂತೆಗಳ ಬಿಡುವಾಯ್ತು
    ಸುಗ್ರೀವನೆಡಗಾಲ ಶುನಕ ಕಚ್ಚಲ್ ||

    • ಈ ಸಮಸ್ಯೆಗೆ ಯವುದಾದರೂ ಗಂಭೀರ ಪೂರಣವಿರಬಹುದೆಂದು ಹುಡುಕಾಡಿದೆ. ಶುನಕ ಎಂಬುದಕ್ಕೆ ನಾಯಿ ಹೊರತು ಇನ್ನಾವ ಅರ್ಥವೂ ಇಲ್ಲ. ಗ್ರೀವ ಅಂಬುದಕ್ಕೆ ಕುತ್ತಿಗೆಯ ಅರ್ಥ ತೆಗೆದುಕೊಂಡರೂ ಏನೂ ಬಗೆಹರಿಯದಾಯ್ತು. ಆದ್ದರಿಂದ ಸಾಧರಣವಾಗಿಯೇ ಪೂರೈಸಿದ್ದೇನೆ.

    • ಎರಡನೆ ಸಾಲು ಕೂಡ, ರಗಳೆಯಂತೆ ೫+೫+೫+೫ ಆಗಿದೆ. ಹೀಗೆ ಸರಿಮಾಡಬಹುದೆನಿಸುತ್ತದೆ ::
      ಸುಗ್ರಾಸಗಳನುಂಡು ಬೆಳೆದಿರ್ದ ಕುನ್ನಿಯದು
      ವ್ಯಗ್ರಾತಿರೇಕಗೊಂಡಿತ್ತು ಹಸಿವಿನಲಿ |
      ಅಗ್ರೇಸರಂಗೆ ಹಿರಿಚಿಂತೆಗಳ ಬಿಡುವಾಯ್ತು
      ಸುಗ್ರೀವನೆಡಗಾಲ ಶುನಕ ಕಚ್ಚಲ್ ||

  4. ಪದ್ಯಪಾನಮತ್ತನಾಗಿ ಬರೆದಿದ್ದೇನೆ. ಕ್ಷಮಿಸಿ, ಸಮಸ್ಯೆಗೆ ಸಂಬದ್ಧವಿಲ್ಲ 🙂

    ಹಿಗ್ಗಿನಿಂ ಬ್ಲಾಗ್ಸ್ಪಾಟ್ನ ತೆಕ್ಕೆಯಿಂ ಹೊರಬಂದು
    ನುಗ್ಗುತಿದೆ ಹಕ್ಕಿಮರಿಯೆಗ್ಗಿಲ್ಲದೆ
    ಅಸುವಾಗೆಯವಧಾನಿ ಅಶನಾಗೆ ನಾವ್ನೀವು
    ಹೆಸರನುಳಿಸುವ ದೂರ ಸಾಗದೇನು

    ಪದಗಳೀದ್ರಾಕ್ಷಿಗಳ ಸುಪ್ರಾಸದಲಿ ತೊಳೆದು
    ವಿಧವಿಧದ ಛಂದಪಾತ್ರೆಯೊಳಗಿಟ್ಟು
    ಕಲ್ಪನೆಯ ಕಿಣ್ವದಲಿ ಚೆನ್ನಾಗಿ ಹುಳಿಬರಿಸಿ
    ಜಲ್ಪಿಸುತ ಸವಿಯುವನೆ ಪದ್ಯಪಾನಿ

    ಪದ್ಯಪಾನದ ಮತ್ತು ನಿದ್ದೆದೇವಿಗೆ ಕುತ್ತು
    ಸದ್ಯಕನವರಿಕೆಯೂ ಪ್ರಾಸಬದ್ಧ
    ಹೃದ್ಯಕವನಾಂಗಿಯದೆ ಬಲುಗುಂಗು ಸವಿರಂಗು
    ಮದ್ಯಮಾನಿನಿಯರನು ಮೀರಿಸುತಿದೆ

  5. ವ್ಯಗ್ರದಿಂ ಮತಿಗೆಟ್ಟು ಕೂಗಿದನು ಆಚಣದಿ
    ಉಗ್ರರೂಪದಿ ಕೋಪ ತೋರಿಸುತಲಿ
    ಅಗ್ರಜನು ಅವನಾಗೆ ಅಕ್ಕರೆಯ ಅವನನುಜ
    ಸುಗ್ರೀವನೆಡಗಾಲ ಶುನಕ ಕಚ್ಚಲ್ ||

  6. ರಾಮಾಯಣದಲ್ಲಿ “ಲಕ್ಷ್ಮಣನ ಕೋಪ” ಸುಂದರವಾದ ಭಾಗ. “ಅಣ್ಣ, ಕಪಿಗೆ ಒಳ್ಳೆಯ ನಡವಳಿಕೆ ಎಲ್ಲಿಂದ ಬಂತು” ಎಂದೆಲ್ಲಾ ಜರಿಯುತ್ತಾನೆ. ಆ ಸಮಯದಲ್ಲಿ, ಅವನು ಅಣ್ಣನಿಗೆ, ಹೀಗೆ ಹೇಳಿರಬಹುದೆ?

    ಅಗ್ರಜನೆ, ಹಿತದ ಮಾತಿನ ಸೊಳ್ಳೆ ಕಚ್ಚಲು ದು
    ರಾಗ್ರಹದ ಕಪಿಗೆಯೆಚ್ಚರಾಗುವುದೇ?
    ಆಗ್ರಹದಿ ಹೇಳುವೆನು, ಕಾಮಮುದವಿಳಿಯುವುದು
    ಸುಗ್ರೀವನೆಡಗಾಲ ಶುನಕ ಕಚ್ಚಲ್

  7. computer science ನಲ್ಲಿ approximation algoritm ಒಂದು ವಿಶಿಷ್ಟ ಶಾಖೆ. ಅಲ್ಲಿ ಉತ್ತರ ಸರಿಯಾಗಿರದಿದ್ದರೂ, ಸಮೀಪವಾಗಿರುತ್ತದೆ. ನನ್ನದೋದು approximation solution 🙂

    ಅಗ್ರಜನ ಮೆಚ್ಚುಗೆಯು, ಸತಿರಾಜ್ಯ ನೆಮ್ಮದಿಯು
    ಸುಗ್ರೀವನ ಸುಕಾಲಶುನಕ ನೆಕ್ಕಲ್
    ವ್ಯಗ್ರನಾಗಿಹನಣ್ಣ, ಓಡುವುದೆ ಪರಿಹಾರ
    ಸುಗ್ರೀವನೆಡಗಾಲಕುನ್ನಿ ಕಚ್ಚಲ್

    ಎಡಗಾಲ = ಅಕಾಲ, ಕೆಟ್ಟಕಾಲ ಎಂಬುದಾಗಿದೆ. ಆದರೆ ಕನ್ನಡ ಪದ. ಆದ್ದರಿಂದ ಈ ಬದಲಾವಣೆ.
    ಸುಕಾಲಶುನಕ = ಸುಕಾಲವೆಂಬ ಶುನಕ
    ಎಡಗಾಲಕುನ್ನಿ = ಎಡಗಾಲವೆಂಬ ಕುನ್ನಿ

    • ರವೀಂದ್ರ – ವ್ಯಾಖ್ಯಾನವಿಲ್ಲದೆ ಅರ್ಥ ತೋರಿರಲಾರದು. ಆದರೂ ಚೆನ್ನಾಗಿದೆ. ಕಲ್ಪನೆ ನನಗೆ ಮೆಚ್ಚುಗೆಯಾಯಿತು

  8. ಸುಗ್ರಾಸ ತಿನಿಸುಗಳ ಬಂಡಿ ಹೊಡೆಯುತಲೂರಿ-
    ನುಗ್ರಾಣ ತಲುಪಿತಿರೆ ಘಾಸಿಗೊಂಡ
    ಕುಗ್ರಾಮದಿಂ ಬಂದ ಹಸಿವಿನಿಂ ಬಸವಳಿದ
    ಸುಗ್ರೀವನೆಡಗಾಲಶುನಕ ಕಚ್ಚಲ್

    ಅನ್ವಯ ಸರಿಯಾಗಿ ಮಾಡಿಕೊಳ್ಳಬೇಕಾಗಿ ವಿನಂತಿ…
    ಬಸವಳಿದಿರುವುದು ನಾಯಿ
    ಕಚ್ಚಿಸಿಕೊಂಡವನು ಸುಗ್ರೀವ (ಬಂಡಿ ಒಡೆಯ)

  9. ಸಂಗ್ರಾಮ ವಿಷಯದಾ ನವರಾತ್ರಿ ದರ್ಶನದ –
    ಲಗ್ರೇಸರರ ಗೊಂಬೆಗಳು ಮೆರೆದಿರೆ |
    ಗಾಗ್ರಂಗಳನು ತೊಟ್ಟ ಲಲನೆಯರು ಚೀರಿದರು
    ಸುಗ್ರೀವನೆಡಗಾಲ ಶುನಕ ಕಚ್ಚಲ್ ||

    • ರಾಮ್, ‘ಗಾಗ್ರಂಗಳು’ ಪ್ರಯೋಗ ನೋಡಿ ತುಂಬಾ ನಗು ಬಂತು. ಚೆನ್ನಾಗಿದೆ ಪರಿಹಾರ 🙂

    • ರಾಮ್,
      ಇದನ್ನು ಓದಿದಾಗ, ನಮ್ಮೂರ ಹುಲಿವೇಷಧಾರಿಗಳ ನೆನಪಾಯ್ತು. ಅವರಿಗೂ, ಬೀದಿನಾಯಿಗಳಿಗೂ, ಪ್ರತಿವರ್ಷದ ಸಮರ.

    • ಇದೊಂದು ಹಾಸ್ಯಚಮತ್ಕೃತಿ. ರಾಮಚಂದ್ರರು ಗಣೇಶರಸೂಚನೆಯನ್ನು ಸರಿಯಾಗಿಯೇ ಗ್ರಹಿಸಿದ್ದಾರೆ. ಅವರಮೊದಲಪದ್ಯದಲ್ಲಿ ಸಾಧಾರಣಾರ್ಥವಿದ್ದರೂ ಪೂರಣವಿಧಾನ ಚೆನ್ನಾಗಿದೆ. ’ಸುಗ್ರಾಸಗಳನುಂಡು ಬೆಳೆದಿರ್ದ ಕುನ್ನಿಯು –
      ವ್ಯಗ್ರಾತಿರೇಕಗೊಂಡಿತ್ತು …ಇಲ್ಲಿ ಕುನ್ನಿಯದು – ವ್ಯಗ್ರಾತಿ.. ಮಾಡಿದರೆ, ’ಕುನ್ನಿಯು-ವ್ಯಗ್ರಾ’- ಈ ತೊಡಕು ದೂರವಾಗುತ್ತದೆ. ಕಾಂಚನ ಅವರ ಪದ್ಯಪೂರಣವೂ ಗಮನಾರ್ಹ. ಅಲ್ಲಿ ಸಂಧಿಸಾಧ್ಯತೆಯನ್ನು ಗಮನಿಸಿದಲ್ಲಿ ಪದ್ಯದ ಬಂಧಸರಿಹೋದೀತು. ಉದಾ: ಕೂಗಲಾಕ್ಷಣದಲ್ಲಿ.. ಅಗ್ರಜನವಂ ತಾನದಕ್ಕರೆಯನುಜನಲ್ತೆ…
      ರವೀಂದ್ರರ ’ಲಕ್ಷ್ಮಣಕ್ರೋಧಭಾಷಣ’ ಕಲ್ಪನೆಯಲ್ಲಿ ನಾವೀನ್ಯತೆಯಿದೆ. ಅಲ್ಲಿ “ರಾಗ್ರಹದ ಕಪಿಗೆಯೆಚ್ಚರಾಗುವುದೇ?” ..ರಾಗ್ರಹದಕಪಿಗೆಚ್ಚರವದೆಲ್ಲಿದೆ..ಮಾಡಿದರೆ ಎರಡನೆಯಸಾಲಿನ ಗಣಬಲಸರಿಯಾಗುತ್ತದೆ. ರವೀಂದ್ರರ ಎರಡನೆಯಪದ್ಯಪೂರಣ, ಶುನಕ ನೆಕ್ಕಲ್-ಕಚ್ಚಲ್ approximation algoritm ಬಹಳಸೊಗಸಾದ ಕಲ್ಪನೆ. ಸೋಮಶೇಖರ್ ಸುಗ್ರೀವನನ್ನು ಬಂಡಿಯೊಡೆಯನನ್ನಾಗಿಸಿ ಚಮತ್ಕರಿಸಿದ್ದಾರೆ – ಈ ಕಲ್ಪನಯೂ ಚೆನ್ನ. ಕೊನೆಗೆ, ರಾಮಚಂದ್ರರು, ಸೂಚನೆಯನ್ನು ಪೂರ್ಣವಾಗಿ ಅರ್ಥೈಸಿ, ಗಾಗ್ರವನ್ನೂ ತೊಡಿಸಿ ಸೊಗಸಾದ ಪೂರಣಮಾಡಿದ್ದಾರೆ.
      ಪೂರಣ ಹೀಗಿದೆ.
      ಒಂದು ಅಗ್ರಹಾರದ ಮುಖ್ಯ ಬೀದಿಯಲ್ಲಿ ತೊಗಲುಗೊಂಬೆಯಾಟ ನಡೆದಿತ್ತು. ರಾಮಾಯಣದ ಆಟಮುಗಿದಾಗ ನಡುರಾತ್ರಿದಾಟಿದ್ದು, ಕಲಾವಿದರೆಲ್ಲ ಆಯಾಸದಿಂದ, ಬೊಂಬೆಗಳನ್ನೂ ಪರಿಕರಗಳನ್ನೂ, ಪೆಟ್ಟಿಗೆಯಲ್ಲಿ ಎತ್ತಿಡದೆ, ಹಾಗೆಯೇ ಮಲಗಿಬಿಟ್ಟರು. ಅಲ್ಲಿ ಚೆಲ್ಲಿಹರಡಿದ್ದ ಬೊಂಬೆಗಳಲ್ಲಿ, ಸುಗ್ರೀವನ ತೊಗಲುಗೊಂಬೆ ಕೊಂಚ ಈಚೆಗೆಸರಿದಿದ್ದು, ಅದನ್ನು ಕಂಡ ನಾಯಿ ಸುಗ್ರೀವನ ಕಾಲಿಗೆ ಬಾಯಿಹಾಕಿತು.

      ಅಗ್ರಹಾರದ ಮುಖ್ಯವೀಥಿಯೊಳಗಾರಾತ್ರಿ
      ನಿಗ್ರಹದಿ ಬೊಂಬೆಯಾಟವನಾಡಿರಲ್
      ವಿಗ್ರಹಗಳೆತ್ತಿಡಲು ಮರೆತು ಮಲಗಲು ನಟರು
      ಸುಗ್ರೀವನೆಡಗಾಲ ಶುನಕ ಕಚ್ಚಲ್

Leave a Reply to cmowly Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)