Apr 132014
 

ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ

  48 Responses to “ಪದ್ಯಸಪ್ತಾಹ ೧೦೪: ಸಮಸ್ಯಾಪೂರಣ”

  1. ನಿಪುಣನಾಂ ಪಣಮನಿನಿತುಂ ದಾನಮಂ ಗೆಯ್ಯೆ-
    ನಪರನಾರಾಯಣಂ ಸಲ್ವೆನೆಂದುಂ
    ಅಪರಲೋಕಕೆ ಪೋಗೆ ಮುಟ್ಟದೆಯೆ ಕುಡುತಿರ್ಪ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ||

    ಅಪರನಾರಾಯಣ- ಇನ್ನೊಬ್ಬ ಶ್ರೀಪತಿ (ಲಕ್ಷ್ಮಿಯ ಒಡೆಯ)
    (ಬಳಕೆಯಲ್ಲಿರುವ ಬಹುಪ್ರಸಿದ್ಧ ಪರಿಹಾರಮಾರ್ಗವನ್ನೇ ಅನುಸರಿಸಿದ್ದೇನೆ.)

  2. ವಿಪರೀತ ದಾಹಿಯುಂ ಕೊಡುಗುಮೇಂ ದೀನಂಗೆ?
    ಕಪಟತೆಯ ಮೆರೆಯುತಲ್, ನವನವೀನ
    ನೆಪಮಮೀವುದರೊಳ್ಪಣಮಕುಡಲ್ಕೆ, ದಿಟದಿಂ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ?
    (ನೆಪವನ್ನು ಪೇಳುವದರಲ್ಲಿ ಉದಾರ,ಹಣವನ್ನು ಕೊಡುವ ಸಮಯದಲ್ಲಿ)

  3. ಉಪವಾಸದಿಂ ಬಳಲಿ,ಪಸಿವಿನಿಂ ಕಂಗೆಟ್ಟು,
    ಅಪರಾಹ್ನದೊಳ್ ಬರ್ಪ ಭಿಕ್ಷಾರ್ಥಿಗೆ | –
    ಕೃಪೆದೋರಿ ಬಡಿಸದಿರಲಾ ನರನ ದುರ್ಗುಣಂ,
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ? ||

    • ಪದ್ಯ ಚೆನ್ನಾಗಿದೆ. ಆದರೆ ಅಪರಾಹ್ಣ ಎಂಬುದು ಸಾಧುರೂಪ.

      • ಸಹೋದರ ಶತಾವಧಾನಿಗಳಿಗೆ ಧನ್ಯವಾದ.
        ಅಪರಾಹ್ಣ ಹಾಗೂ ಅಪರಾಹ್ನಗಳಲ್ಲಿ ಯಾವುದು ಸರಿಯೆಂಬ ಬಗ್ಗೆ ಗೊಂದಲವಿತ್ತು.ಅರ್ಥಕೋಶದಲ್ಲಿ(ಕಿಟ್ಟೆಲ್), ಅಪರಾಹ್ಣ,ಪೂರ್ವಾಹ್ಣ ಪದಗಳಿವೆಯಾದರೂ, ಮಧ್ಯಾಹ್ನವೂ ಇದ್ದು, ಅಹ್ಣವಿಲ್ಲದೆ ಅಹ್ನಕ್ಕೆ ಮಾತ್ರ ಅರ್ಥವಿದೆ.ಹೀಗಾಗಿ ಅಪರಾಹ್ನವೆಂಬುದೂ ಸರಿಯಿರಬಹುದೆಂದುಕೊಂಡಿದ್ದೆ. ಸಂದೇಹನಿವಾರಣೆಗಾಗಿ ಧನ್ಯವಾದಗಳು.

  4. ಶತಾವಧಾನಿಗಳ ಆಶು ಪರಿಹಾರ,

    ನಿಪುಣತೆಯಿನರ್ಥಮಂ ಸಾಧುವಿದ್ಯಾವಿಭವ-
    ವಿಪುಲತೆಯಿನಾರ್ಜಿಸುತ್ತೊಲ್ಮೆಯಿಂದಂ|
    ಸ್ವಪಣಮೆಂಬಂತೆ ಮತ್ತದನೀವ ಕಾರ್ಪಣ್ಯ-
    ಕೃಪಣನೌದಾರ್ಯಕ್ಕೆ ಸಮನಿರ್ಪುದೇಂ?

    (ಕಾರ್ಪಣ್ಯ-ಕೃಪಣ = ಜಿಪುಣತನಕ್ಕೆ ಜಿಪುಣತನವನ್ನು ಮಾಡುವವನು; ಅಥಾತ್ ಉದಾರಿ:-)

  5. ಉಪಕಾರಮಂ ಗಯ್ದೆನೆನುತೆ ಗಡ ಪೊಂದುವಂ
    ವಿಪುಲೆಯೊಳ್ ಖ್ಯಾತಿಯಂ ನೇತಾರನುಂ
    ಸಫಲಮಪ್ಪಂ! ವ್ಯಯಿಸಿ ತಾಂ ಜನದ ಸೊತ್ತಮೀ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ?

    • ಮೊದಲ ಸಾಲನ್ನು ದಯಮಾಡಿ ತಿದ್ದಿರಿ:

      “ಉಪಕಾರಮಂ ಗಯ್ದೆನೆನುತೆ ಗಡ ಪೊಂದುವಂ” ಹೀಗೆ….

  6. ತಪಮೆಂಬುವೊಲ್ ಪೂಗಳಿಂ ಸುಧೆಯನರಸುತುಂ
    ಜಪಮೆಂಬೊ ಝುಯ್ ರವಮನೇ ಪಾಡುತುಂ
    ವಿಪಿನದೊಳ್ ಪಗಲಿರುಳು ಗೈವಾ ಭ್ರಮರನೆಂಬ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ?

    ತಾನು ತಿನ್ನದೆಯೆ ಕೃಪಣತೆಯಿಂದ ಸಂಪಾದಿಸಿದ ಮಧುವನ್ನು ಕರಡಿ/ಮನುಷ್ಯರಿಗಾಗಿ ಇಡುವ ದುಂಬಿಯ ಔದಾರ್ಯತೆಯ ಬಗ್ಗೆ

    • ಪ್ರಿಯ ಸೋಮ,

      ನಿನ್ನ ಕಲ್ಪನೆ ನಿಜಕ್ಕೂ ಅಭಿನವ ಮತ್ತು ಅಭಿರಾಮ. ಸ್ವಲ್ಪಮಾತ್ರದ ತಿದ್ದುಗೆ ಬೇಕಿದೆ ಅಷ್ಟೆ:
      ತಪಮೆಂಬವೊಲ್……………………………
      ಜಪಮೆಂಬವೊಲ್ ನೈಜಗುಂಜನನಮನೇ |
      ವಿಪಿನದೊಳಗಾವಗಂ ಗಯ್ವ ಭ್ರಮರನೆಂಬ
      ………………………………………….||

  7. ಕಪಿಲಾಸಹಸ್ರಮಂ ದಾನಕೊಂಬರು ತಾನು
    ಸ್ವಪುಲಾಕಮಾತ್ರಮಂ ಪರರಿಗೀಯಂ |
    ಸ್ವಪರತಾವೇತಾಲಕಿಂತುದಾರನುಮಪ್ಪ
    ಕೃಪಣನೌದಾರ್ಯಕ್ಕೆ ಸಮನಿರ್ಪುದೇಂ ||

    ಯಾವ ಛಂದಸ್ಸು ಇದು ?

    • ಪ್ರಿಯ ಕೇಯೂರ್,
      ಒಳ್ಳೆಯ ರಚನೆ; ಅಭಿನಂದನೆಗಳು. ಇದು ಪಂಚಮಾತ್ರಾಗಣಘಟಿತವಾದ ಅರ್ಧಸಮಚತುಷ್ಪದಿ. ಕನ್ನಡಕ್ಕೆ ತುಂಬ ಒಗ್ಗಿಬಂದ ಛಂದಸ್ಸು.

    • ಕೇಯೂರ, ಛಂದೋನಾಮ ತಿಳಿಯದೆ?

      ಸುಪೆಸರಿಂ ತಿಳಿಯುವುದುಮೆಲ್ಲರಿಂಗೆಂದವಳ (ಪದ್ಯಕನ್ಯೆ/ಛಂದೋಕನ್ಯೆ)
      ಕಪಟದಿಂ ವರಿಸಿಹೆಯ ಮಾತ್ರರೂಪಿಂ|
      ಸ್ವಪರತಾವೈತಾಲಕಿದಕಿಂತಲುಂಟೆ ಪೇ
      ಳಪರತರ ದೃಷ್ಟಾಂತ -ಹಾದಿರಂಪ||

  8. ಕಾಳಿದಾಸನನ್ನು ಗೌಣಮಾಡಿ ಯಕ್ಷನಿಗೆ ಪ್ರಾಮುಖ್ಯತೆ ಕೊಟ್ಟಿರುವುದಕ್ಕೆ ಕ್ಷಮೆಯಾಚಿಸುತ್ತಾ, ಎಂದಿನಂತೆ ಪ್ರಾಸಕ್ಕೆ ಬೇರೆಯವರ ಪದಗಳನ್ನು ದೋಚುತ್ತಾ 😛

    ತಪಿಸುತಿರ್ದೊಡೆ ತಾನು ಸತಿವಿರಹದಲಿ ಭಾವ-
    ವಿಪುಲರಸಕಾವ್ಯವನು ಬಡಿಸಿ ಜಗಕೆ |
    ನೆಪವಾಗಿ ತಾ ದೌತ್ಯಕಾವ್ಯಸರಣಿಗೆ ಯಕ್ಷ-
    ಕೃಪಣನೌದಾರ್ಯಕ್ಕೆ ಸಮನಿರ್ಪುದೇಂ ||

    ತಾನು ವಿರಹಾವಸ್ಥೆಯಲ್ಲಿ ಇದ್ದರೂ ನಮಗೆಲ್ಲ ರಸವತ್ತಾಗಿ ಮೇಘಪಥವನ್ನು ವರ್ಣಿಸಿ ಔದಾರ್ಯವನ್ನು ಯಕ್ಷ ತೋರಿಸಿದ್ದಾನೆಂಬ ಪೂರಣ. ಇಲ್ಲಿ ಕೃಪಣಕ್ಕೆ ಜಿಪುಣತನದ ಅರ್ಥ ಬಳಸದೆ ದೈನ್ಯ(pitiable/miserable) ಅರ್ಥ ಬಳಸಿದ್ದೇನೆ

    • ತುಂಬ ಒಳ್ಳೆಯ ಕಲ್ಪನೆ. ಆದರೆ ಸೋಮನೂ ನೀನೂ ಔದಾರ್ಯತೆ ಎಂಬ ಅಸಾಧುಪ್ರಯೋಗವನ್ನು ವಿವರಣೆಯ ವೇಳೆಯಲ್ಲಿ ಮಾಡಿದ್ದೀರಿ. ಅದು ಉದಾರತೆ ಅಥವಾ ಔದಾರ್ಯ ಎಂದೇ ಆಗಬೇಕಲ್ಲದೆ ಎರಡು ಪ್ರತ್ಯಯಗಳು ಬಾರವು.

  9. ನಚಿಕೇತ ಮತ್ತು ಅವನ ತಂದೆ ವಾಜಶ್ರವನ ದಾನದ ಸಂದರ್ಭವನ್ನಾಧರಿಸಿದ ರಚನೆ.

    ಉಪದೇಶ ನೀಡುವಗುರುವೆನಿಸಿರೆ, ದಾನದೊಳ್
    ಕಪಟದಿಂ ನೀಡಿರೆ ಮುದಿಹಸುಗಳ ತಾಂ
    ತಪದಿಂದೆ ನುಡಿದನಾ ನಚಿಕೇತನೀಪರಿಯ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ?

    • ರಚನೆಯ ಇಂಗಿತ ಮತ್ತು ಅದರಲ್ಲಿಯ ವ್ಯಂಗ್ಯಗಳು ಚೆನ್ನಾಗಿವೆ. ಆದರೆ ಮೊದಲೆರಡು ಸಾಲುಗಳಲ್ಲಿ ಗತಿಹಿತವಿಲ್ಲ; ಗಣಸಮತ್ವವೂ ಜಾರಿದೆ. ದಯಮಾಡಿ ಸವರಿಸಿರಿ.

      • ಧನ್ಯವಾದಗಳು. ಹೀಗೆ ತಿದ್ದಿದ್ದೇನೆ. ಸರಿಯಿದೆಯೇ ತಿಳಿಸಿರಿ.

        ಉಪದೇಶವಂ ಮಾಳ್ಪ ನೀನಾತ್ಮ ವಂಚಿತಂ
        ಕಪಟದಿಂ ನೀಳ್ವೆಯೈ ಮುದಿಹಸುಗಳಂ
        ತಪದಿಂದೆ ನುಡಿದನಾ ನಚಿಕೇತನೀಪರಿಯ
        ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ?

        • ಇದೀಗ ಪದ್ಯವು ಸರ್ವಾರ್ಥದಿಂದಲೂ ಅನವದ್ಯವಾಗಿದೆ.

  10. ಉಪಕಾರಮಂ ಗೈಯೆ ಕಾಲದೊಳ್ ಸುರಿವನುಂ
    ವಪು,ವಿಪಿನ,ಜೀವಕೆನೆ ಜಲಧರಂ ತಾಂ
    ತಪಸಿಯೊಲ್ ಭುವಿಯನುಂ ಕಾಯುತಿರ್ಪಾಗಸದ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ?

    • ಪದ್ಯಭಾವ ಸುಲಭವಾಗಿ ಗೃಹೀತವಾಗುತ್ತದಾದರೂ:
      ೧) ‘ಉಪಕಾರಮಂ ಗೈಯೆ’ ಎಂದರೆ, (ಪರ+)ಉಪಕಾರರೂಪವಾಗಿ ತಾನೇ ಧಾರೆ ಸುರಿಸುತ್ತಾನೆ ಎಂದು ಮಾತ್ರವಲ್ಲದೆ, ಇತರರು ಆಗಸಕ್ಕೆ ಉಪಕಾರ ಮಾಡಿದರೆ ಅವನು ಪ್ರತ್ಯುಪಕಾರರೂಪವಾಗಿ ಧಾರೆ ಸುರಿಸುತ್ತಾನೆ ಎಂದೂ ಅರ್ಥವಾಗುತ್ತದೆ.
      ೨) ‘ಆಗಸದ ಕೃಪಣನ’ ಎಂದರೆ ಆಗಸ ಹಾಗೂ ಕೃಪಣರು ವಿವಿಕ್ತವ್ಯಕ್ತಿಗಳಾಗಿ ಉಳಿಯುತ್ತಾರೆ. ಆಗಸರೂಪದ ಕೃಪಣ ಎಂದಾಗದು. ಅಥವಾ, ಆಗಸದಲ್ಲಿರುವ ಕೃಪಣನು ‘ಮೋಡ’ ಎಂಬ ಭಾವವೆ?

      • ನಿಗದಿತ ಕಾಲದಲ್ಲಿ ಮಾತ್ರವೇ ಮಳೆಯನ್ನು ಸುರಿಸುವುದರಿಂದ ಜಿಪುಣನೆಂದೂ,ನಮಗೆಲ್ಲ ನೀರನ್ನು ಕೊಡುವುದರಿಂದ ಉದಾರಿಯೆಂದೂ, ಮೋಡವನ್ನುದ್ದೇಶಿಸಿಯೇ ನಾನು ಹೇಳಿರುವುದು. 🙂

  11. ಅಪರೂಪಗನುಜರೊಡೆ ಹಂಚಿತಿಂಬಲು ಬಾಲ
    ಕೃಪಣಗೌದಾರ್ಯಕ್ಕೆ ಮನಮಿರ್ಪುದೇಂ ?!
    ಅಪಘಾತ ಸಮಯದೊಳು ಜೀವವುಳಿದಿರೆ ಕಾಲ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ ?

    • ತುಂಬ ಚೆನ್ನಾಗಿದೆ.

      • ಧನ್ಯವಾದಗಳು ಪ್ರಸಾದ್ ಸರ್,
        ಬಾಲ್ಯದಲ್ಲಿ ಮನಸಿಲ್ಲದ ಮನಸ್ಸಿನಿಂದ ತಂಗಿಯರೊಡನೆ ಬಿಸ್ಕತ್,ಪೆಪ್ಪರ್ ಮೆಂಟ್ ಹಂಚಿಕೊಳ್ಳುತಿದ್ದ ನೆನಪಿನ / ಜಿಪುಣ ಅಂದ್ರೆ ಜಿಪುಣ ಈ ಕಾಲ … ಸಾಲಿನ ಪ್ರೇರಣೆಯಿಂದ ಬಂದ ಪದ್ಯ !

  12. ನೃಪತಿಯಿತ್ತರದರಿದೆ ದೇವನಿತ್ತೊಡೆ ಪೊಸತೆ
    ಕಪಿಲೆಪಾಲುಣಿಸಲದು ವೈಚಿತ್ರ್ಯಮೆ
    ಚಪಲಮಂ ಮೀರಿ ಸಮೆದೊಂದು ಬಿಡಿಗಾಸೀವ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ

  13. ಬರಿಸಪೂರ್ಣಂ ಭುವಿಯ ಜಲಮನೆಲ್ಲಂ ರವಿಯ
    ಕಿರಣದಿಂಬಿಂ ಸೆಳೆದು ಬೆಳ್ಮೋಡದೊಳ್ ನೆರಪಿ
    ಧರೆಯ ಜೀವಂಗಳಂ ಬಿಸಿಲಜಳದೊಳ್ಮಿಸಿಸಿ ಗರ್ವದಿಂ ಪೊಳೆದ ಮೇಘಂ |
    ಬರಗಾಲ ಸಲೆ ಕಳೆಯೆ ಪಲ್ಮಸೆದ ಸಿಡಿಲಿನ
    ಬ್ಬರಕಳ್ಕಿ ಬೆರ್ಚಿತನ್ನೊಡಲ ನೀರ್ಮಣಿಗಳಂ
    ಸುರಿಸಿಳೆ ಜನಂಗಳಂ ಹರ್ಷಿಸಿದ ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ? ||

    ವರ್ಷವಿಡಿ ಕೃಪಣನಂತೆ ಭುವಿಯ ಮೇಲಣ ಜಲವನ್ನು ಸಂಗ್ರಹಿಸಿದ ಮೋಡ, ಬರಗಾಲಮುಗಿದಾಗ ಸಿಡಿಲನ ಅಬ್ಬರಕ್ಕೆ ಹೆದರಿ, ಗಾಬರಿಗೊಂಡು ತನ್ನೊಡಲಲ್ಲಿ ಸಂಗ್ರಹಿಸಿದ ನೀರ ಹನಿಗಳನ್ನೆಲ್ಲ ಧರೆಗೆ ಸುರಿಯಿತು… ತನ್ನೆಲ್ಲವನ್ನು ಬಿಟ್ಟುಗೊಟ್ಟ ಮೋಡದ ಔದಾರ್ಯಕ್ಕೆ ಸಮ ಇರುವುದೇ?

    • ಜಲವೆಲ್ಲಮಂ*

    • ಮಾನವಕೃಪಣರನ್ನು ಬೆದರಿಸುವವರು ಯಾರೂ ಇಲ್ಲವೆಂಬ ಧ್ವನಿ ಚೆನ್ನಾಗಿದೆ. ವಾರ್ಧಕ್ಯಕ್ಕೆ ಅಳವಡಿಸಿಕೊಂಡಿರುವದು very thoughtful.
      ಮಿಸಿಸಿ=ಮೀಸಿಸಿ?

      • ಧನ್ಯವಾದ ಪ್ರಸಾದು,
        ಮಿಸಿಸು – ಮೀಯಿಸು (ಶಬ್ಧಕೋಶದಲ್ಲಿ ಮಿಸಿಸು ಎಂದೇ ಇದೆ)
        ಸ್ನಾನ ಮಾಡಿಸು, ಮಜ್ಜನ ಮಾಡಿಸು

  14. ಜಪಿಸುತಿರೆ ಲಕುಮಿಯನುಮನುದಿನವು ಸೆಟ್ಟಿ ತಾ
    ನುಪಚಾರಮಂ ಮಾಡರಿಯನೆಂದಿಗುಂ|
    ನೆಪಗಳಾ ಸಿರಿಯನ್ನು ತೆಗೆತೆಗೆದು ನೀಡಿರ್ಪ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ|

  15. ಉಪಕಾರಮೆಂದೊಡದು ದಾನತಾನಲ್ಲ ಪರ-
    ಮಪದಕಂತದುವೆ ಧರ್ಮದ ಕಜ್ಜವು|
    ತಪಿಸಿ ತನಗೀಯರೆನ್ನುತಲಿ ತಾನೀಯದನೆ (ಈಯದವನೆ)
    ಕೃಪಣ(ನು. ಔ)ನೌದಾರ್ಯಕ್ಕೆ ಸಮಮಿರ್ಪುದೇಂ?| (ಔದಾರ್ಯಕ್ಕೆ ಸಮಂ ಏಂ?)

    ದಾನದಲ್ಲಿ ದಾತೃ-ಆದಾತೃಗಳೆಂಬ ಮಜಲುಗಳಿವೆ. ಧರ್ಮದಲ್ಲಿ ಅಂಥದ್ದೇನೂ ಇಲ್ಲ.

    • ಋಣಮುಕ್ತನಾಗಲೆಳಸುವೊಡೆ ಕಾರ್ಪಣ್ಯಮೇ-
      ನೆಣಿಸಲಾಗದಲುತ್ತರಾರ್ಧಮಪ್ಪೆನ್

    • ಆವಗಂ ಚಾಟೂಕ್ತಿಯನ್ನರಸದೆಲೆ ನೋಡಿ
      ತೀವಿದರ್ಥವ ಗ್ರಹಿಸಿ ಗಾಂಭೀರ್ಯದಿಂ|

      ಇದನ್ನೆ ಶ್ರೀ ಬಿ.ಜಿ.ಎಲ್. ಸ್ವಾಮಿಯವರ ಪರಿಭಾಷೆಯ ಗದ್ಯದಲ್ಲಿ ಹೇಳುವುದಾದರೆ: ನಿನ್ನ ಚೇಷ್ಟೆ ತುಂಟಾಟಗಳನ್ನೆಲ್ಲ ಬಿಟ್ಟು ಗಂಭೀರವಾಗಿ ನೋಡಯ್ಯ. ಅರ್ಥ ಕಾಣುತ್ತೆ 😉

  16. ಪುರಂದರದಾಸರ ಬಗ್ಗೆ ಒಂದು ಪದ್ಯ

    ನವಕೋಟಿಗೊಡೆಯದಾದವನನಂ ಸತಿಯವಳ್
    ಭವನಾಶ ಪಥಕೊಯ್ದು ಧನ್ಯಳಾಗೆ, ಮತಿಗಂ
    ಕವಿದಿರ್ಪದಜ್ಞಾನವಂ ನೀಗಿ ಸುಜ್ಞಾನವಂ ತೋರ್ಪ ದಾರಿಯೊಳ್ ತಾಂ
    ಸವಿಗಾನದೊಳ್ ಭಜನೆಯೊಳ್ ದೈವವಂ ನುತಿಸಿ
    ಭುವಿಯೊಳಷ್ಟೈಶ್ವರ್ಯಮಂ ದಾನದೊಳ್ ನೀಡಿ
    ಬವನಾಸಿಯಂ ಪಿಡಿದು ಬೋಧಿಸಿದ ಕೃಪಣನೌದಾರ್ಯಕ್ಕೆ ಸಮನಿರ್ಪುದೇಂ

    ಬವನಾಸಿ – (ದಾಸರು ಉಪಯೋಗಿಸುವ) ಭಿಕ್ಷಾಪಾತ್ರೆ

  17. ನಿಪುಣಮತಿ, ಬಲ, ಧೈರ್ಯ, ಸಂಸ್ಕಾರ, ರೂಪಗಳ
    ವಿಪರೀತ ಕೈಹಿಡಿದು ಕೊಟ್ಟಾತ್ಮಭೂ |
    ತಪನೀಯಸಮಗುಣದ ಸಖರ ನೀಡಿದನೆನಗೆ –
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ?

    ಆತ್ಮಭೂ = ಬ್ರಹ್ಮ, ತಪನೀಯ = ಚಿನ್ನ

    • ನನ್ನ ಪದ್ಯಗಳಲ್ಲಿ ಹಳೆಗನ್ನಡ ಇಲ್ಲವೆಂದು ತಗಾದೆ ತೆಗೆಯುವವರಿಗೆ ನಾನು ಮುಂಜಾಗ್ರತೆಯಿಂದ ಹೇಳುವುದೇನೆಂದರೆ, ಇನ್ನು ೩೦೦ ವರ್ಷಗಳಾದ ಮೇಲೆ ನಾನು ಬರೆದಿರುವುದೇ ಹಳೆಗನ್ನಡವಾಗುತ್ತದೆ.
      ಕಾಲೋಹ್ಯಯಂ ನಿರವಧಿರ್ವಿಪುಲಾ ಚ ಪೃಥ್ವೀ 🙂

    • ನನ್ನನ್ನು ಹೊಗಳಿದ ಪದ್ಯವನ್ನು ಟೀಕಿಸುವುದು ಸರಿಯಲ್ಲ. ಆದರೇನು ಮಾಡಲಿ?
      ಮೂರುನೂರೇಕೆ ಸಂವತ್ಸರಂಗಳು ಬೇಕು
      ಮೀರಲರ್ವಾಚೀನಗುಣಮನಿದು ಕೇಳ್|
      ಸಾರಮಿಲ್ಲದಿರೆ ನೀಂ ಪೇಳ್ದವೋಲೀ ಪದ್ಯ
      ಪಾರಪ್ಪುದೊಂದಿರುಳೊಳ್ನೇಪಥ್ಯಕಂ|| 🙂

      ಸಾರವಿಲ್ಲ (ಭಾಷೆ) ಎಂದು ಹೇಳಿದವರು ನೀವು. ನಾನಲ್ಲ. ಪದ್ಯವಂತೂ ಚೆನ್ನಾಗಿದೆ.

      ಟಿಪ್ಪಣಿಯಲ್ಲಿ ಹೇಳಿರುವುದು ಅಂತಿದ್ದಾಗ್ಯೂ, ಪದ್ಯದ ಪೂರ್ವಾರ್ಧದಲ್ಲಿನ ತಮ್ಮ ಆತ್ಮಪ್ರತ್ಯಯ ಶ್ಲಾಘನೀಯ! 😉

      ತಾವು ಮಾತ್ರ ಬಂಗಾರವನ್ನು ಹೊಳೆವ ಒಡವೆಗಳಾಗಿ ಮಾಡಿಸಿ ತೊಟ್ಟುಕೊಂಡು (ನಿಪುಣಮತಿ, ಬಲ…), ನಮ್ಮನ್ನು ಮಾತ್ರ ಆ dull and gross ರೂಪದ ಬಂಗಾರಕ್ಕೆ ಹೋಲಿಸಿ, ಇಷ್ಟುಮಾತ್ರದ ಕೃಪಣತ್ವ ತೋರಿಸಿಬಿಟ್ಟ ದೇವರು ಎಂದಿರುವುದು ಬಹಳ ಮಾರ್ಮಿಕವಾಗಿದೆ 🙂

      • ನಾನು ಆತ್ಮಪ್ರತ್ಯಯವನ್ನು ತೋರಿಸಲು ಬರೆಯಲಿಲ್ಲ. ನನ್ನ ಪದ್ಯದ ಆಶಯ:
        (ಧಾರಾಳವಾಗಿ ಕೈ ಬಿಚ್ಚಿ ಕೊಡಬಹುದು. ಜಿಪುಣತನದಿಂದ ಕೈ ಹಿಡಿದು ಹಿಡಿದು ಕೊಡಬಹುದು.)
        ಬ್ರಹ್ಮನು ನನಗೆ ರೂಪ, ಗುಣ, ಇತ್ಯಾದಿಗಳನ್ನು ಕೊಡುವಾಗ ಕೈ ಹಿಡಿದು ಕೊಟ್ಟು ಕೃಪಣನ ಹಾಗೆ ತೋರಿದರೂ, ಒಳ್ಳೆಯ ಸ್ನೇಹಿತರನ್ನು ಕೊಡುವಾಗ ಬಹಳ ಔದಾರ್ಯವನ್ನು ಮೆರೆದಿರುವನು.

        • ಓಹ್. ಕ್ಷಮಿಸಿ. ’ಕೈಹಿಡಿದು’ ಎಂಬುದನ್ನು ನಕಾರಾತ್ಮಕವಲ್ಲದೆ ಸಕಾರಾತ್ಮಕವಾಗಿ (ಕೈ ಹಿಡಿದು ನಡೆಸಿದ ಎಂಬಂತೆ) ಗ್ರಹಿಸಿದೆ. ಈಗ ಪದ್ಯವು ಇನ್ನೂ ಆಪ್ಯಾಯನವಾಯಿತು. ತಪ್ಪಾಗಿ ಗ್ರಹಿಸಿದ್ದಕ್ಕಾಗಿ ಮತ್ತೊಮ್ಮೆ ಕ್ಷಮೆ ಕೋರುವೆ.

          • ಹಾಗೇನೂ ಇಲ್ಲ. ಸಣ್ಣ ಪದ್ಯದಲ್ಲಿ ಆಶಯವನ್ನು ಸ್ಫುಟವಾಗಿ ತರಲು ಆಗದೆ ಇದ್ದದ್ದು ನನ್ನ ಅಶಕ್ತಿ. ಆಶಯವನ್ನು ವಿವರಿಸಿ ಮೊದಲೇ ಬರೆದಿದ್ದರೆ ಸರಿಯಾಗುತ್ತಿತ್ತೋ ಏನೋ

          • था क्या उधर ठीक होने का?
            गर अर्थ दिये होते गाने का
            गुंजाइश न होती मुझे पछताने का
            और प्रत्यय मेरे गिरजाने का 🙂

    • ಪ್ರಿಯ ಸುಧೀರ್! ಎಂದಿನಂತೆ ನಿನ್ನದು ಸದಾ ಅತ್ಯುತ್ತಮ-ಅನೂಹ್ಯ-ಸರಸ-ಪೂರಣ.
      ಜೊತೆಗೆ ನಿನ್ನ ನ್ನುಡಿಯು ಹಳಗನ್ನಡವಾಗುವ ಪರಿಯನ್ನು ಕಂಡಾಗಲಂತೂ ಮತ್ತು ಚಮತ್ಕೃತನಾದೆ:-) ನಿನ್ನದೇ ವಾಕ್ಸಂಯಮವನ್ನು ಆಧರಿಸಿ ನನ್ನದೊಂದು ಪೂರಣ:

      ಉಪವನಾಯಿತಮಿರ್ದುಮುತ್ತಮಕವನಕಲಾ-
      ವಿಪಿನಂ ಸುಧೀರ ! ನಿನಗಂ; ಶ್ಲೋಕಿಸಲ್ |
      ತ್ರಪೆಯೇಕೊ? ಭಾವಿಸಲ್ ನಿನ್ನಂಥ ಸರಸವಾ-
      ಕ್ಕೃಪಣನೌದಾರ್ಯಕ್ಕೆ ಸಮನಿರ್ಪುದೇಂ?

      ಅರಿಯಲಾಗದೆಯೇ ಸುಧೀರನ
      ಪರಮವಿನಯೋನ್ನತಿಯನಯ್ಯೋ !
      ಜರೆದು ಜರಿದಿರೆ ಕಾವ್ಯಪಥದೊಳ್
      ಮರುಳ ಹಾದಿಯ ರಂಪರೇ!! 🙂

  18. ಉಪಕಾರವೆಸಗನವ ತನಗೆತಾ ವ್ಯಯಿಸನೈ
    ಸೊಪನದೊಳು ಬಿಡಿಗಾಸು ನೀಡನವನುಂ ।
    ವಿಪುಲಗಳಿಕೆಯನಿಂತು ಕಡೆಗೀವ ಕಡುಪಾಪಿ
    ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ ।।

    *ಕಡುಪಾಪಿ – ನತದೃಷ್ಟ !!

    • ‘ಸೊಪನದೊಳುಮವನೀಡ ಬಿಡಿಗಾಸನುಂ’ ಎಂದರೆ ಅವಧಾರಣ ಸರಿಯಿರುತ್ತದೆ.
      ಆದರೆ ಇದು ಕೊಪ್ಪಲತೋಟರ ಪದ್ಯದ ಅನುಕರಣೆಯಾಯಿತಲ್ಲ!

Leave a Reply to ಗಾಯತ್ರಿ ಇಂದಾವರ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)