May 112014
 

ಅಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ

  141 Responses to “ಪದ್ಯಸಪ್ತಾಹ ೧೦೮: ಸಮಸ್ಯಾಪೂರಣ”

  1. ಪಹರೆಯಿರುತೆ ಸೀಮೆಯ ಕಾ
    ದಿಹ ಯೋಧರ ಶೌರ್ಯ-ಸಂಕಟಗಳಂ ನೆನೆದುಂ|
    ಮಹನೀಯರವಿತೃಗಳ್, ಸದ- (ಅವಿತೃ=protector)
    ವಹಿತರ್, ಸಂಭಾವ್ಯರೆಂದು ಪೊರೆದಂ ರಾಜಂ|| (ಅವಹಿತ=occupied, engaged)

    • ಒಳ್ಳೆಯ ಪೂರಣ. ಅವಿತೃ ಎಂಬ ವಿರಳಪ್ರಚುರವಾದರೂ ಸೊಗಸಾದ ಪದದ ಪ್ರಯೋಗ ಚೆನ್ನಾಗಿದೆ. ಆದರೆ ಸ್ವಲ್ಪ ಹಳಗನ್ನಡದ ಹದ ಮತ್ತೂ ಹೆಚ್ಚಾದಲ್ಲಿ ಒಳಿತು.

    • ಅವಹಿತ ಒಳ್ಳೆಯ ಕೀಲಕ ಪ್ರಸಾದು

  2. ಮಹಿಯಂ ಪಾಲಿಸಲೆಂದುಂ
    ವಿಹಿತಂ ನಿಸ್ಸ್ವಾರ್ಥವಿದ್ವದಭಿಮತಮೆನುತುಂ |
    ಕಹಿನುಡಿ-ಸವಿಪುರುಳಿಂ ಸ-
    ಲ್ವ ಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ||

    (ನಿರ್ಭೀಕ-ನಿಸ್ಸ್ವಾರ್ಥಿಗಳಾದ ವಿದ್ವದ್ವಿವೇಕಿಗಳ ಹಿತೇಂಗಿತವುಳ್ಳದ್ದಾದರೂ ಕಟುವೆನಿಸುವ ಮಾತುಗಳನ್ನು ರಾಜನಾದವನು ಕೇಳಬೇಕೆಂಬ ಇಂಗಿತವಿಲ್ಲಿದೆ)

    • ಕಹಿಯ ‘ಅಹಿತ’ವನ್ನು ಒಡೆದು ‘ಹಿತ’ ವಾಗಿಸಿರುವ ಪೂರಣ ಬಹಳ ವಚೆನ್ನಾಗಿದೆ ಸರ್

    • ಕಹಿಯ ಕವಚದೊಳು ಸವಿಯನೇ ಉಣಿಪರಲ್ತೆಲಾಪ್ತರೆಮಗೆಂ-
      ದಿಹಿರಿ ನಿಮ್ಮವಚನಮದುಮಾಯ್ತೀಗ ಕಹಿಯುಳಿರ್ದ ಮಿಷ್ಟಂ|

  3. ಕಹಿಸೋಲಂ ತಾನುಂಡುಂ
    ಬಹುಬೇಸತ್ತನರಸಂ;ಬಯಸುತುಂ ಗೆಲವಂ
    ಗಹನೋಪಾಯದೆ,ಶತ್ರುವಿ
    ಗಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ

  4. ಸಹಕಾರವಗೈವೆನುತುಂ
    ಕಹಿಕೃತ್ಯಗಳಿಂ ಪ್ರಪಂಚಿಸಲ್ ದುರ್ಮತಿಗಳ್|
    ಸಹಚರಿಸಲ್ ಮರುಳಾಗಿಸು
    ತಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ|

  5. ತಹಿಯಾಗಲ್ ವ್ಯಸನಂಗಳ್
    ಸಹಜತೆಯಿಂ ದೂರಮಾಗೆ ನೈತಿಕಮಾರ್ಗಂ
    ಕಹಿಯಾಗಲ್ ಗುರುವಚನಂ,
    ಅಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ

    • ತಹಿ ಎಂದರೆ ಏನು?

      • ಜೊತೆ,ಒಡನಾಟ,-ಇವು “ತಹಿ” ಗೆ ನಿಘಂಟಿನಲ್ಲಿ ದೊರೆತ ಪದಗಳು. ಬೇರೆ ಭಾಷೆಯದೋ ಗೊತ್ತಿಲ್ಲ.

        • ತಹಿ ಎಂಬ ಪದವು ನಾನು ಬಲ್ಲ ಕನ್ನಡ-ಸಂಸ್ಕೃತಗಳಲ್ಲಿ ಈ ಅರ್ಥದಲ್ಲಿರುವಂತೆ ತೋರದು:-)

          • Kittel ನಲ್ಲಿ ತಹಿ ಶಬ್ಧಕ್ಕೆ Union, Company ಎಂದು ಕೊಟ್ಟಿದ್ದಾರೆ

          • ಹಾಗಿದ್ದಲ್ಲಿ ಇದು ಬೇರೆಯ ಭಾಷೆಯದೆಂದೇ ಆಯಿತು! 🙂

    • ಪೂರಣ ಯಾಕೆ? ಸಮರ್ಥನೆ ಓಕೆ 🙂

  6. ಬಹುಮುಖಮಂಪೊತ್ತ ಬುಧರ್
    ಬಹಿರಂಗದೆಕಣ್ಗೆಮಣ್ಣನೆಸೆದ ಖಳರ ಈ|
    ವಹಿವಾಟುಗಳರಿಯದೆ ತಾ
    ನಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ|

  7. ಗ್ರಹಗತಿ ತಲೆಕೆಳಕಾಗಲ್
    ಅಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ
    ಸಹನೆಯ ಮೀರುತ ಬಂದಾ
    ಗ್ರಹಿಸಲ್ ಯುದ್ಧಕ್ಕೆತನ್ನಮಿತ್ರನ ಪಡೆಯಂ|

    ಸಿಹಿ ಮಾತುಗಳನ್ನಾಡುತ
    ಕಹಿ ಚಿಂತನೆಗಳನುಚಿತ್ತದೊಳ್ ನೂಂಕುತಿರಲ್|
    ಗ್ರಹಣವು ಪಿಡಿದವೊಲಾಯ್ತೇ?
    ಅಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ

  8. ಸಹಿಸದೆ ಸವತಿಯರಂ,ತಾನ್-
    ಕುಹಕಂಗೈಯುತುಮಸೂಯೆಯಿಂದವರಂ ಕಾಂ-|
    ಬ,ಹಿರಿಯ ಮಡದಿಯ ದೃಷ್ಟಿಯೊ-
    ಳಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ||

    • ಒಳ್ಳೆಯ ಅಭಿನವಪರಿಹಾರ; ಅಭಿನಂದನೆಗಳು.

      • ಸಹೋದರರಾದ ಶತಾವಧಾನಿಗಳಿಗೆ ಧನ್ಯವಾದಗಳು.

    • ಅದ್ಭುತವಾದ ಪರಿಹಾರ 🙂

      • ಸಹೋದರರಾದ ಸೋಮರಿಗೆ ಧನ್ಯವಾದಗಳು.

    • ಪುಣ್ಯಂ ನೀಮಾವಾಹನಗೊಂಡಿರಿ
      ಗಣ್ಯನೆನಿಸಿದಾ ರಾಜನೊಳು!
      ಗುಣ್ಯರೆನಿಸಿದಾ ಸವತಿಯರನು ಮೇಣ್
      ಗೌಣ್ಯಳನಾ ಪಿರಿಯಳನುಳಿದು!!

  9. ಇಹದೊಳ್ ಜನಹಿತ ಮರೆತುಂ
    ಬಹುವಿಧ ಹಗರಣದೊಳಿಂತು ಮುಳುಗಿರೆ ರಾಜ್ಯಂ ।
    ಸಹಕರಿಸಿಹ ಪರವಾನಗಿ
    ರ(ಸ)ಹಿತರ್ ಸಂಭಾವ್ಯರೆಂದು ಪೊರೆದಂ “ರಾಜಂ” ।।

    2G/3G… ರಾಜನನ್ನು ಸ್ವಲ್ಪ ನೆನಪಿಸಿಕೊಳ್ಳಿ !!

  10. ಇಹದೊಳ್ ಜನಹಿತ ಕಾರ್ಯದೆ
    ಬಹಳಂ ತೊಡಗುತೆ ಸಹಾನುಭೂತಿಯೊಳಿಂತುಂ ।
    ಸಹಯೋಗವ ತಾವೀವ ಪ-
    ರಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ।।

    ಪರಹಿತರ್ = ಪರೋಪಕಾರಿಗಳು

  11. ವಿಹಿತಾವಿಹಿತವಿವೇಕಿಗ-
    ಳಹಿತಾವನಿಜಯರಹಸ್ಯಮನೊರೆದು ಪೊರೆವರ್ |
    ಮಹಿತರ್ ದ್ರುಹಿಣಸುತರ್ ಮದ-
    ರಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ||

    ಇದು ನನ್ನ ಚೊಚ್ಚಲ premature ಕಂದ….

    ಬ್ರಾಹ್ಮಣರು ಎಂಬುದಕ್ಕೆ ದ್ರುಹಿಣಸುತರ್ ಎಂದದ್ದು ಸರಿಯೇ ? ತಪ್ಪಾಗಿದ್ದರೆ ಆ ಪಾದವನ್ನು ಹೀಗೆ ಮಾಡಿಕೊಳ್ಳಬಹುದು –
    ‘ಮಹಿತರ್ ಮಹಿಯೊಳ್ ತೃಷ್ಣಾ-‘

    • ಉಭಯಸಾಧ್ಯತೆಗಳೂ ಸಾಧುವಾಗಿವೆ. ತಾವು ಅವಿವಾಹಿತರಾಗಿಯೇ ಇಷ್ಟು ಸುಂದರವೂ ನಿರ್ದುಷ್ಟವೂ ಆದ ಚೊಚ್ಚಲ”ಕಂದ” ಕ್ಕೆ(ನಿಗೆ) ಜನ್ಮ ನೀಡಿದುದಕ್ಕಾಗಿ ಅಭಿನಂದನೆಗಳು:-)

      • ಧನ್ಯವಾದಗಳು ಸರ್..
        ತಾವು ನನ್ನನ್ನು ಮತ್ತೆ ಬಹುವಚನದಲ್ಲಿ ಸಂಬೋಧಿಸುತ್ತಿರುವಿರೇಕೆ ? ಹೀಗಾದರೆ ನಾನು ನಿಮ್ಮನ್ನು ಗುರುಗಳೇ ಎಂದು ಸಂಬೋಧಿಸುತ್ತೇನೆ ನೋಡಿ ಮತ್ತೆ 😀 😀

        • ಅಬ್ಬಬ್ಬಾ !! ಆ ಕೆಲಸವನ್ನು ಮಾತ್ರ ಮಾಡಬೇಡ
          ಕೇಯೂರಂ ಭುಜಭೂಷಣ-
          ಮಾಯತಮತಿಲಘುಮನೋಜ್ಞಮೆಂದಾನ್ ಎಣಿಸಲ್ |
          ಮಾಯೂರಕಮಣಿಖಚಿತಂ
          ಮಾಯಿಕಮತಿಗುರುವೆನಲ್ಕೆ ಧರಿಸುವುದೆಂತಯ್ !!

          • ’ಕಂದ’ರ್ಗಂ ತಂದೆಗಳೆನೆ
            ಸಂದರ್ಭದ ಶುದ್ಧಿಯಂತೆ ತಾವ್ ಎಂದೆನುತೇ |
            ಸಂದುದು ಮತ್ಸಂಬೋಧನೆ
            ಕುಂದಿಡಲಿನ್ನೇಕೆ? ಸಾಕು ಗುರು-ಕಿರಿಕಿರಿಗಳ್ 🙂

    • ಬಹಳ ಚೆನ್ನಾಗಿದೆ

    • ಅವನಿಜಯ ಎಂದರೇನು?

  12. ಮಹನೀಯಪದಕಕೆಂದು-
    ದ್ವಹನದ ಸಭೆಯೊಳ್ ನಿಯುಕ್ತರಂ ಚರ್ಚಿಸಲಾ
    ಬಹುತಿಥಮತದಾತರನು-
    ಗ್ರಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ

    ಮಹನೀಯಪದಕ – ಪುರಶ್ರೇಷ್ಠಪದಕ
    ಉದ್ವಹನದ ಸಭೆ – charged gathering
    ನಿಯುಕ್ತ – nominee
    ಬಹುತಿಥ – ಬಹುವಾಗಿರುವ
    ಮತ – vote

    • ಪೂರಣಪದ್ಧತಿಯು ಅಭಿನವವಾಗಿದೆ; ಅಭಿನಂದನೆಗಳು. ಆದರೆ ವ್ಯಾಕರಣರೀತ್ಯಾ ಅನುಗೃಹೀತ ಎಂದೇ ಆಗಬೇಕಲ್ಲದೆ ಅನುಗ್ರಹಿತ ಎಂದಾಗದು.

    • ಅನುಗ್ರಹಿತರ್ ಎನ್ನುವುದನ್ನು ಅನುಗ್ರ-ಹಿತರ್ (ಎಂದರೆ ಉಗ್ರರಲ್ಲದವರಿಗೆ ಹಿತವಾಗಿರುವವರು) ಎಂದು ಮಾಡಿಕೊಂಡರೆ ಸರಿಯಾಗಬಹುದಲ್ಲವೇ?

      • ನಾನು ಮಾಡಿದ ಎಡವಟ್ಟಿನಲ್ಲಿಯೂ ಒಂದು ಅರ್ಥವನ್ನು ಕಂಡುಹಿಡಿದ ನಿಮ್ಮ ವಿದ್ವತ್ತೆಗೆ ನಮಸ್ಕಾರ ಸುಧೀರ್ ಸರ್ 🙂

      • Wow!! That IS Sudheer !!!

    • ಭಾಷ್ಯಕಾರರಿಗೆ ನಮೋ

  13. ಕುಹುಕದೆ ಪಳಗಿರೆ ದುರುಳಂ
    ಸಹವಾಸಮಮಾಳ್ದು ಕರ್ಣರಂತರ,ಒಲವಂ
    ಬಹುಪೆರ್ಚುದೋರಿ,ಕೌರವ
    ರ ಹಿತರ್,ಸಂಭಾವ್ಯರೆಂದು ಪೊರೆದಂ ರಾಜಂ(ಕೌರವಂ)

    • ಸಹವಾಸಂಗಯ್ದು ಕರ್ಣನಂತಪ್ಪರೊಳೇ |
      ಬಹುಮಾನಮಿಡುತೆ ಕೌರವ-
      ……………………………………….. ||

      ಹೀಗೆ ಸವರಿಸಿದರೆ ವ್ಯಾಕರಣದೃಷ್ಟ್ಯಾ ಒಳಿತು.

      • ಧನ್ಯವಾದಗಳು. ವಿಷಯವನ್ನು ಸರಿಯಾಗಿ ಅರುಹಲಾಗಿದ್ದಿಲ್ಲ. 🙂

  14. ಮಹಿತರ್ಗಳರನು ಮರೆಯುತ
    ಲಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ |
    ಅಹಿಗಳ ಸರಸದಲಿಕೆಣಕಿ
    ದಹಿತುಂಡಿಕಸುತನ ಹಾಗೆ ಮೂಢಂ ಸತ್ತಂ ||

    • This is to show that, strictly speaking, this is not a samasye since it is plausible that some immature king could actually have done that. Infact, as history shows, many have.

      • ಕರ್ತುಮಕರ್ತುಂ ಶಕ್ತಂ
        ಕರ್ತುಂ ಪರಮನ್ಯಥಾsಪಿ ಶಕ್ತಂ ಧೀರಂ |
        ಭರ್ತನಲಾ ಕವಿತೆಗೆ, ಸಂ-
        ಹರ್ತನಲಾ ಏಕತಾನಪಥಕೆ ಸುಧೀರಂ 🙂

        ಇದೀಗ ಹಿಂದಿಗಿಂತ ನಿಮ್ಮ ಪದ್ಯಗಳಲ್ಲಿ ಹಳಗನ್ನಡದ ಹದ ಹೆಚ್ಚಿದೆ; ಅಭಿನಂದನೆಗಳು. ನಿಮ್ಮ ಪದ್ಯವನ್ನು ಮತ್ತೂ ಹಳಗನ್ನಡೀಕರಿಸಿದರೆ ಹೀಗಿರಬಹುದು:
        ಮಹಿತರ್ಕಳನೇ ಮರೆಯುತು-
        ಮಹಿತರ್ ………………………………….. |
        ಅಹಿಗಳನೊಲವಿಂ ಕೆಣಕು-
        ತ್ತಹಿತುಂಡಿಕಸುತನ ರೀತಿ ಮೂಢಂ ಸತ್ತಂ ||

        ಅಹಿತುಂಡಿಕನನ್ನು ತಂದಿರುವ ಪರಿ ಅರ್ಥಕ್ಕೂ ಪ್ರಾಸಕ್ಕೂ ತುಂಬ ಸೊಗಸಾಗಿ ಒದಗಿದೆ.

    • Good one Sudheer.

  15. ಸಹಜಾತರ್ ಮುನಿಸಿಂ ರಣ-
    ಕಹಳೆಯನೂದುತ್ತೆ ಯುದ್ಧಕಾಹ್ವಾನಿಸಿರಲ್,|
    ಕಹಿಯನಳಿಸಲ್ಕೆ ಪಾಲಿ-
    ತ್ತಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ||

    • ಆಹಾ! ತುಂಬ ಚೆನ್ನಾಗಿದೆ 🙂

      • ಸಹೋದರರಾದ ಚೀದಿಯವರಿಗೆ ಧನ್ಯವಾದಗಳು.ನಿಮ್ಮ ಪದ್ಯಗಳು ಒಳ್ಳೆಯ ಕಲ್ಪನೆ,ಭಾವನೆಗಳಿಂದ ಕೂಡಿ ಸೊಗಸಾಗಿರುತ್ತವೆ. 🙂

    • ಸೊಗಸಾದ ಪ್ರಾಸಾದಿಕ-
      ಸುಗುಣೋಕ್ತಿಯ ಪದ್ಯಮಲ್ತೆ ಪ್ರಾಸದ ಸೊಗಮುಂ |
      ನಗುವೊಗುವಂದದೆ ಸಂದಿರೆ
      ಬಗೆಗೊಳಿಸದದಾರ್ಗೆ ತಾನೆ ವರಕವಯಿತ್ರೀ !!

      • ಸೋದರರೆಂದಿರೆ ಸುಂದರ-
        ಮಾದ ಕವಿತೆಯೆಂದು,ವಿನಯದಿಂ ನಮಿಪೆಂ.ನೀಮ್- |
        ಪಾದಾಂತ್ಯದೊಳೆನಗಿತ್ತಿ-
        ರ್ಪಾದರದ ಬಿರುದದು ಸಾಧುವೆಂತೆಂದರಿಯೆಂ ! || 🙂

        • ಬಿರುದಂ ಗಳಿಸಿದ ಜನರಾ
          ಬಿರುದಿನ ಪುರುಳರಿಯವೇಳ್ಕುಮೆಂಬರೆ ತಂಗೀ !
          ಅರಿವುದೆ ಗುಲಾಬಿ ತಾಂ ಸುಮ-
          ಧರೆಯೊಳ್ ಪೂಗಳ್ಗೆ ರಾಣಿಯೆಂಬಗ್ಗಳೆಯಂ ?

        • ಸರಿಯೆಂಬೆಂ,ನಿಮ್ಮೀ ಸ-
          ದ್ವರಕವಿತೆಯನೋದಿ ಹರುಷಮಾಯ್ತಾ ಬಿರುದಂ-|
          ಸರಸತಿಯೆ ನೀಡಿದಂತಿರೆ-
          ಪರಸುತೆ,ಸಲ್ಲಿಪೆನನಂತನಮನಂಗಳನಾಂ || 🙂

    • ಬಹಳ ಚೆನ್ನಾಗಿದೆ

      • ಸಹೋದರರಾದ ಸೋಮರಿಗೆ ಧನ್ಯವಾದಗಳು.ನಿಮ್ಮ ಪೂರಣಗಳೆಲ್ಲವೂ ಚೆನ್ನಾಗಿವೆ. 🙂

  16. ಗ್ರಹಿಸಲ್ ವಿಷಯಂಗಳಸಂ
    ಗ್ರಹಿಸಿರ್ಪ ನೃಪನಗುಣತ್ರಯಮಕಪಟರ್ ನಿ|
    ಗ್ರಹಿಸಲ್ ಮೋಸದೆ ರಾಜ್ಯಮ
    ನಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ|

    ಗುಣತ್ರಯ – ಮೂರೂ ಗುಣಗಳನ್ನು ಬಲ್ಲವರಾಗಿ ಎಂದರ್ಥ

    • ಪೊಸ ಪೊಸ ಪೂರಣತೋರಣ-
      ದೊಸಗೆಯನಿಂತೊಡನೆಯೊಡನೆ ನೀಳ್ವಾ ಚೀದೀ !
      ಪಸುರಾದುದು ನಿನ್ನ ಕವನ-
      ವಿಸರಂ ಬೇಸಗೆಯ ಪಗೆಯ ಕಾಲದೊಳಿದರೊಳ್ !!

  17. ಮಹಿಮಾನ್ವಿತ ಚಾಣಕ್ಯನ
    ಬಹುದೂರಾಲೋಚನಾತ್ಮಕೋಕ್ತಿಯ ಬಲದಿಂ
    ಸ್ವಹಿತಮೆ ಸಲ್ಗೆಂದೆನ್ನುತು
    ಮಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ||
    (ಮಹಿಮಾನ್ವಿತನಾದ ಚಾಣಕ್ಯನ ದೂರಾಲೋಚನೆಯ ಮಾತುಗಳಿಂದ ತನ್ನ ಹಿತವೇ ಆಗುತ್ತದೆ ಎಂದು ರಾಜ ಶತ್ರುಗಳನ್ನೂ ಯೋಗ್ಯರೆಂದು ಪೊರೆದ )

    ಚಂದ್ರಗುಪ್ತ ಪದ್ಯದಲ್ಲಿ ಬಂದಿಲ್ಲವಾದರೂ ರಾಜ ಶಬ್ದದಿಂದ ಅನ್ವಯಿಸಿಕೊಳ್ಳಬಹುದೆಂದುಕೊಳ್ಳುತ್ತೇನೆ.

    • ಒಳ್ಳೆಯ ಪೂರಣಮಂ ನೀ-
      ಳ್ದಳ್ಳೆರ್ದೆದೊರೆಗಳ್ಗೆ ಧೈರ್ಯದೀಕ್ಷೆಯನಿತ್ತಾ|
      ಕಳ್ಳಿಯುಮೊದವಲ್ ವೃತಿಗಿ-
      ನೊಳ್ಳಿತೆನುವ ವಿಷ್ಣುಗುಪ್ತಪಥಕಾದೆಯೆಲಾ !!

      • ಪಲತೆರದಾ ಪರಿಹಾರಂ
        ಗಳನೀಕ್ಷಿಸಿ ಚಿಂತಿಸುತ್ತೆ ಪುಡುಕಲ್ ದೊರೆಯಲ್
        ಬಳಸಿದೆನದರಂ ನೀಂ ಮೆ
        ಚ್ಚಲಾಯ್ತು ಸಂತೋಷಮಂತು ವಂದನೆ ನಿಮಗಂ||

    • ಬಹಳ ಚೆನ್ನಾಗಿದೆ ಕೊಪ್ಪಲತೋಟ 🙂

    • ಪದ್ಯಗಳ ಬಗೆಗೆ ಹೇಳುವುದೇನಿದೆ! ಪದ್ಯಸಂಭಾಷಣೆ ತುಂಬ ಚೆನ್ನಾಗಿದೆ.

  18. ದಹಿಸಲೆನೆ ವೈರಮಂ ದಲ್
    ಕಹಿಯಮಳಿಸಿ, ನೆರೆಯ ಪಾಕ್ ನೊಡನೆಯುಂ ಪಿರಿದುಂ
    ಸಹನೆಯಡಿಯಿರಿಸಿ ನಡೆದಂ,
    ಅಹಿತರ್,ಸಂಭಾವ್ಯರೆಂದು ಪೊರೆದಂ ರಾಜಂ! 🙂

    • ನಡೆದಂ + ಅಹಿತರ್ = ನಡೆದನಹಿತರ್ ಎಂದು ಸಂಧಿಯಾಗಬೇಕು. ಹೀಗಾದರೆ ಛಂದಸ್ಸು ಕೆಡುತ್ತದೆ.
      ಕಹಿಯನಳಿಸಿ ಎಂದು ಹೇಳುವುದು ಸಾಧುರೂಪ.
      ಛಂದಸ್ಸಿನ ದೃಷ್ಟಿಯಿಂದ ಯಾವುದೇ ತಪ್ಪಿಲ್ಲವಾದರೂ ಒಟ್ಟಂದದ ಪದ್ಯಗತಿಯಲ್ಲಿ ಹಿತವಾದ ನಡೆ ತೋರುತ್ತಿಲ್ಲ. ಇಲ್ಲಿರುವ ತುಂಬ ಲಘುಗಳು ಗಣಸಮವಾಗಿ ಬಾರದೆ ಉಳಿದ ಕಾರಣ ಈ ಲೋಪ ತಲೆದೋರಿದೆ.

      • ತಮ್ಮ ಅಮೂಲ್ಯವಾದ ಸಲಹೆಗಳಿಗೆ , ಸಹನೆಗೆ ಧನ್ಯವಾದಗಳು.
        ಸರಿಪಡಿಸುವ ಪ್ರಯತ್ನವನ್ನು ಮಾಡಿದ್ದೇನೆ. 🙂
        ದಹಿಸಲ್ಕೆ ವೈರಮಂ ದಲ್
        ಕಹಿಯಂ ತಾಂ ತೊರೆಯುತುಂ ನೆರೆಯ ಪಾಕಿನೊಡಂ
        ಸಹನೆಯಡಿಯಿಟ್ಟು ಪೋಗುತು
        ಮಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ!

        • ಕಹಿಯಂ ತಾಂ ತೊರೆಯುತುಂ…. ಎಂದು ತಿದ್ದಿದಲ್ಲಿ ಮತ್ತೂ ಒಳಿತು.

  19. ಸಹನೆಯೊಳಿರ್ಪಂ ಗಡ ವನ-
    ರುಹಮಂ ತಿಂಬನಿವನೆಂದು ಮುಳಿದಂ ಭೀಮಂ
    ಕುಹಕದ್ಯೂತಸಭೆಯೊಳಾ
    ಅಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ

    ಭೀಮ ತಮ್ಮ ಪರಿಸ್ಥಿತಿಗೆ ಧರ್ಮರಾಯನೇ ಕಾರಣವೆಂದು ಅವನನ್ನು ವನವಾಸದಲ್ಲಿ ಮೂದಲಿಸುವ ಬಗೆಯ ಪೂರಣ

    ವನರುಹ – wild grass

    • ಪರಿಹಾರ ತುಂಬ ಚೆನ್ನಾಗಿದೆ. ಪದ್ಯದ ಶೈಲಿಯೂ ಚೆನ್ನಾಗಿದೆ. ಆದರೆ ವನರುಹ ಎಂಬುದಕ್ಕೆ ಕೋಶ-ಲೋಕಪ್ರಸಿದ್ಧಿಯಿರುವುದು ಕಮಲವೆಂದೇ. ಹೀಗಾಗಿ ಶ್ಲೇಷಮೂಲವಾದ ಅಥವಾ ಮತ್ತಾವುದೇ ಚಿತ್ರಕವಿತೆಯಂಥ ಅನಿವಾರ್ಯತೆಯೋ ಶಬ್ದಶಕ್ತಿಮೂಲಧ್ವನಿಸಂದರ್ಭವೋ ಬಂದಾಗ ಈ ಬಗೆಯಲ್ಲಿ ರೂಢ್ಯರ್ಥವನ್ನು ಮೀರಿದ ಯೋಗಾರ್ಥವನ್ನುಳ್ಳ ಪದಗಳ ಪ್ರಯೋಗ ಯುಕ್ತವಾದೀತು. ಇನ್ನುಳಿದೆಡೆ ಇಂಥವು ಸರಿ(ವಿ)ಯಾಗವು.

      • ಹೌದು ಗಣೇಶ್ ಸರ್, ಪ್ರಾಸಾಕ್ಷರದಲ್ಲಿ ಹೊಸದನ್ನ ತರುವಲ್ಲಿ ಆದದ್ದು, ಹೀಗೆ ಬದಲಾಯಿಸಿದ್ದೇನೆ

        ಸಹನೆಯೊಳಿರ್ಪಂ ಗಡ ವನ-
        ರುಹಕೃಷ್ಣೆಯ ತಪನದೆನುತೆ ಮುಳಿದಂ ಭೀಮಂ
        ಕುಹಕದ್ಯೂತಸಭೆಯೊಳಾ
        ಅಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ

        🙂

        • ತಪನದೆನುತೆ ಎಂಬುದು ವ್ಯಾಕರಣದೃಷ್ಟ್ಯಾ ಅಸಾಧುರೂಪ. ಅದು ತಪನದಿನೆನುತೆ ಅಥವಾ ತಪದಿನೆನುತೆ ಎಂದೋ ಆಗಬೇಕು. ಆದರೂ ಅಲ್ಲಿ ರಚನಾಶೈಥಿಲ್ಯವಿದೆ; ಗತಿಸುಭಗತೆ ತೋರುತ್ತಿಲ್ಲ.

          • ಮರಳಿ ಯತ್ನವ ಮಾಡುತ್ತಿದ್ದೇನೆ ಗಣೇಶ್ ಸರ್, ಪರಿಶೀಲಿಸಿ:

            ಕುಹಕದ್ಯೂತಸಭೆಯೊಳಾ
            ಅಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ
            ಸಹನೆಯ ಸೊಲ್ಲನರುಪಿ ವನ-
            ರುಹಮುಖಿಯಂ ಬವಣಿಸಿರ್ಪುದೇನೌನ್ನತ್ಯಂ

          • ಇದೀಗ ನಿಜಕ್ಕೂ ಪದ್ಯವು ಅನವದ್ಯವಾಯಿತು, ಕವಿಹೃದ್ಯವಾಯಿತು !!

          • ಧನ್ಯವಾದಗಳು ಗಣೇಶ್ ಸರ್ 🙂

  20. ಮಹಿಳಾರತ್ನರ್ ತಾಪಮ-
    ಸಹಮಾನ-ಕುವಲಯ-ಸಮ-ರಸೂರ್ಯಂಪಶ್ಯರ್ |
    ಸಹಧರ್ಮಿಣಿಯರ್ ಕಲ್ಮಷ-
    ರಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ||

    ರಾಜ = ರಾಜ ಹಾಗೂ ಚಂದ್ರ
    ರಾಣಿಯರು ಕುವಲಯಕ್ಕೆ ಹೋಲಿಸಲ್ಪಟ್ಟಿದ್ದಾರೆ.

    (ತಾವರೆಯು ಕೆಸರಿನ ಸಂಬಂಧವನ್ನು ಹೊಂದಿ, ಸೂರ್ಯನ ಕಿರಣಗಳಿಂದ ಅರಳುತ್ತದೆ.
    ಅದಕ್ಕೆ ವಿರುದ್ಧವಾಗಿ ಕುವಲಯವು ಸೂರ್ಯನ ಕಿರಣಗಳಿಂದ ಬಾಡುತ್ತದೆ ಹಾಗೂ ಚಂದ್ರನ ಕಿರಣಗಳನ್ನು ಹಿತವೆಂದು ಭಾವಿಸುತ್ತದೆ)

    • ತುಂಬ ಒಳ್ಳೆಯ ಪೂರಣ. ” ……ತಾಪಾಸಹಮಾನ……” ಎಂದು ಒಂದೇ ಸಮಾಸವನ್ನು ಮಾಡಿದರೆ ಯುಕ್ತ.

  21. ಸಹಮತಿಯಿನಿತಿಲ್ಲ ಸಮರ
    ದಹನಕ್ರಿಯೆಯೊಂದೆ ಸಲ್ಗುಮೆನಲಾಗಮಿಸಲ್
    ಸಿಹಿಯಿಂಬನುವೆತ್ತಸುಹೃ- (ಸಿಹಿಯಿಂಬನುವೆತ್ತ ಸುಹೃ-)
    ತ್ಪ್ರಹಿತರ್, ಸಂಭಾವ್ಯರೆಂದು ಪೊರೆದಂ ರಾಜಂ

    ಸಿಹಿಯಿಂಬನುವೆತ್ತ = ಸಿಹಿಯಾದ ಪ್ರೀತಿಯ ಮಾತುಗಳನ್ನು ತರುತ್ತಿರುವ (ದೂತರು)
    ಪ್ರಹಿತರ್ – ಕಳುಹಿಸಿಕೊಟ್ಟವರು (ಎಂದು ಮಾಡಬಹುದೆ??)
    ಅಸುಹೃತ್ಪ್ರಹಿತರ್ = ಶತ್ರುವಿನಿಂದ ಸಂಧಾನದ ವಾರ್ತೆಯೊಂದಿಗೆ ಬಂದವರು
    (ಸುಹೃತ್ಪ್ರಹಿತರ್ = ಇತರ ಮಿತ್ರರಿಂದ ಸಂಧಾನದ ವಾರ್ತೆಯೊಂದಿಗೆ ಬಂದವರು)

    • ಸಿಹಿದೌತ್ಯ ಎಂಬುದು ಅರಿಸಮಾಸವಾಯ್ತಲ್ಲಾ ಸೋಮಣ್ಣಾ!!

      • ಹೌದು ಗಣೇಶ್ ಸರ್ ಅರಿಸಮಾಸವಾಗಿದೆ, ಮೂಲದಲ್ಲೇ ಬದಲಿಸಿದ್ದೇನೆ 🙂

  22. ಆನಂತ್ಯಸ್ಯ ಕಿಮಸ್ತಿ ದೇಶಿಕ ಭವಾನ್ ದೃಷ್ಟಾಂತಮೇಕಂ ವದ-
    ತ್ವಿತ್ಯೇವಂ ಪ್ರಣಿಪತ್ಯ ಸಾದರಮಥೋ ಪಪ್ರಚ್ಛ ಶಿಷ್ಯೋ ಗುರುಮ್ |
    ತ್ವಂ ಕರ್ಣಾಟಶತಾವಧಾನಿಜನಿತಾಃ ಪದ್ಯಪ್ರಜಾಃ ಪಶ್ಯ ಭೋ
    ಸ್ಸ್ವಾ0ತೇವಾಸಿನಮೇವಮಾಹ ಸ ಗುರುಃ ಶಿಷ್ಯೋsಪಿ ಹರ್ಷೀ ಬಭೌ ||
    😀 😀

    • ತದ್ಯುಜ್ಯತ ಏವ | ಯತಃ “ಸೂತೇ ಸೂಕರಯುವತೀ ಸುತಶತಮತ್ಯಂತದುರ್ಭಗಂ ಝಟಿತಿ” ಇತಿ ಕಿಲಾಹುಸ್ತತ್ರ ಭವಂತೋ ಮಹಾಂತೋ ನಿಗಮಾಂತದೇಶಿಕಾಃ | 🙂

      • ಪರಂ ನಾತ್ರಾಯಮಸ್ಮಾಕಂ ‘ಶಿಷ್ಯಃ’ ವೇದಾಂತದೇಶಿಕಮಪೃಚ್ಛತ್ | ತಥಾಪಿ ಶೋಭತ ಏವ ಏತಾದೃಶೀ ವಾಕ್ ಭವಾದೃಶಾಂ ಮುಖೇ , ಯತೋ ಹಿ, ಉಕ್ತಂ ಕಿಲ ನ್ಯಾಯಮಂಜರ್ಯಾಮ್ –
        “ಅಸಂಖ್ಯೈರಪಿ ನಾತ್ಮೀಯೈರಲ್ಪೈರಪಿ ಪರಸ್ಥಿತೈಃ |
        ಗುಣೈಃ ಸಂತಃ ಪ್ರಹೃಷ್ಯoತಿ ಚಿತ್ರಮೇಷಾಂ ವಿಚೇಷ್ಟಿತಮ್ ||” 😀

  23. ಸಿಹಿಮಾತುಗಳಿಂ ಕೆಟ್ಟಸ
    ಲಹೆಯಂನೀಡುತೆವಿಶಂಕೆಯಂಪುಟ್ಟಿಸುವೊಲ್|
    ಪ್ರಹರಿಸುತಿರ್ಪುದನರಿತೂ
    ಅಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ|

  24. ಬಹುಲಾಯಸದಿಂ ಕರೆಯುತೆ
    ಮಹಿಯಂ ಜಸಪೆರ್ಮೆಯಾಂತ ಪೃಥುಭೂಪಂ ಧೀ-
    ಮಹಿಮರ್ ಮುನಿಗಳ್ ವೇನಂ-
    ಗಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ

    ಪೃಥುಮಹಾರಾಜನು ಕಷ್ಟಪಟ್ಟು ಭೂಮಿಯನ್ನು ಕರೆದು ಯಶಸ್ಸನ್ನು ಗಳಿಸಿ ಧೀರರಾದ (ಬುದ್ಧಿಯೇ ಯಾರ ಮಹಿಮೆಯೋ ಅವರು), ವೇನನಿಗೆ ಅಹಿತರಾದ ಮುನಿಗಳನ್ನು ಸಂಭಾವ್ಯರೆಂದು ತಿಳಿದು ಸತ್ಕರಿಸಿದನು.

    (ಭಾಗವತದಲ್ಲಿ ಬರುವ ಕಥೆ: ವೇನನು ಒಬ್ಬ ದುಷ್ಟರಾಜ. ಅವನ ಕಷ್ಟಗಳನ್ನು ತಾಳಲಾರದೆ ಭೂದೇವಿಯು ತನ್ನ ಸಂಪತ್ತನ್ನೆಲ್ಲ ತನ್ನಲ್ಲಿಯೇ ಅಡಗಿಸಿಕೊಂಡು ಬರಗಾಲವನ್ನು ಉಂಟುಮಾಡಿದಳು. ಆಗ ಋಷಿಗಳು ವೇನನನ್ನು ಕೊಂದು ಅವನ ಶರೀರದಿಂದ ಪೃಥುವನ್ನು ಸೃಜಿಸಿದರು. ಪೃಥುವು ಭೂಮಿಯನ್ನು (ಹಸುವಿನ ರೂಪದಲ್ಲಿ) ಕರೆದು ಅವಳಲ್ಲಿ ಅಡಗಿದ್ದ ಸಂಪತ್ತನ್ನು ಹೊರಗೆ ತೆಗೆದನು)

    • ವೇನಂಗಹಿತರ್ ಎಂಬ ಕೀಲಕ ಬಹಳ ಚೆನ್ನಾಗಿದೆ

      • ಹೌದು ಸೋಮ; ಶ್ರೀಲಲಿತಾ ಅವರ ಪೂರಣಪದ್ಧತಿಯೂ ಪದ್ಯಶೈಲಿಯೂ ಚೆನ್ನಾಗಿವೆ. ಅವರು ಹೆಚ್ಚು ಹೆಚ್ಚಾಗಿ ಪದ್ಯಪಾನಿಗಳಾಗಲಿ.

      • ಧನ್ಯವಾದಗಳು ಸರ್. ಹೆಚ್ಚಾಗಿ ಬರೆಯಲು ಪ್ರಯತ್ನಿಸುತ್ತೇನೆ.
        ಧನ್ಯವಾದಗಳು ಸೋಮ.

  25. ಸ್ತುತಿಸುತ ಶಿವಪಾರ್ವತಿಯರ್
    ಶಬ್ದಾರ್ಥಾವಿವ ವಿವಿಕ್ತ-ಸಂಸ್ಥಿತಿ-ರಹಿತರ್ ||
    ಸಂಭಾವ್ಯರೆಂದು ಪೊರೆದಂ
    ರಾಜಂ ಕವಿಕುಲಕೆ ಕಾವ್ಯಮಂ ನಿಜಕೃತಿಯಂ ||

    ಕನ್ನಡದಲ್ಲಿ ಪ್ರಾಸವನ್ನು ಬಿಡಬಹುದಾದರೆ, ಅನ್ವಯಕ್ಲೇಶವನ್ನು ಸಹಿಸಿಕೊಳ್ಳಬಹುದಾದರೆ, ನನ್ನ ಒಂದು ಪ್ರಯತ್ನ. ಈ ರೀತಿ ದೂರಾನ್ವಯ ಮಾಡಬಹುದೇ?

    ಶಿವಪಾರ್ವತಿಯರ್ ಶಬ್ದಾರ್ಥಾವಿವ ವಿವಿಕ್ತ-ಸಂಸ್ಥಿತಿ-ರಹಿತರ್ ಸಂಭಾವ್ಯರೆಂದು ಸ್ತುತಿಸುತ
    ಕವಿಕುಲಕೆ ರಾಜಂ ನಿಜಕೃತಿಯಂ ಕಾವ್ಯಮಂ ಪೊರೆದಂ

    • ಸುಧೀರ್ ಸರ್, ಅದ್ಭುತವಾಗಿದೆ, ಈ ರೀತಿಯ ಸಾಧ್ಯತೆಗಳನ್ನು ತೋರಿಸಲು ಪ್ರಾಸವನ್ನು ತ್ಯಜಿಸಿದರೆ ಯಾರು ತಾನೆ ಆಕ್ಷೇಪಿಸುತ್ತಾರೆ. ಮೆಚ್ಚಿಗೆ ಸೂಚಿಸಲೇಬೇಕು 🙂

      • ದಿಟವೇ ಸೋಮನೆಂದಂತೆ ಈ ಪರಿಯ ಸ್ವಾರಸ್ಯವನ್ನೂ ವೈಚಿತ್ರ್ಯ-ನಾವೀನ್ಯಗಳನ್ನೂ ತರಬಲ್ಲ ಸಾಧ್ಯತೆಯಿದ್ದಾಗ ಪ್ರಾಸಲೋಪ-ದೂರಾನ್ವಯಾದಿಗಳೆಲ್ಲ ತೀರ ಗೌಣವಾಗುತ್ತವೆ. ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ ಎಂಬ ಮಾತು ನೆನಪಾಗುತ್ತದೆ.
        ಇಂಥ ಸ್ವೋಪಜ್ಞರಸಸಾಹಸಗಳೆಲ್ಲ ಸುಧೀರನ ಸೂತ್ತೆಂದು ಮತ್ತೆ ಮತ್ತೆ ಸಾಬೀತಾಗುವುದು ನಮ್ಮ ಭಾಗ್ಯ.

    • “ನಾಕಪ್ರಯಾಣಪಾಥೇಯ” ದ ಸುಧೀರ್ ತಾವೇ ಇರಬೇಕು ಎಂದುಕೊಳ್ಳುತ್ತೇನೆ. ತಮ್ಮ ಪದ್ಯಗಳು ತುಂಬ ಚೆನ್ನಾಗಿವೆ.

      ‘ರಮಂತೇ ಸುಧಿಯೋ ಯಸ್ಮಿನ್ ಸ ಸುಧೀರ ಇತೀರಿತಃ |’ 😀

  26. ಭಾಷೆಯಲ್ಲಿ ಕೊರೆ ಇದೆ.

    ವಿಹಿತರ್ ಕಟ್ಟಾಳುಗಳು ನೆ-
    ಗಹಿರಲ್ ನಿಜಭಾಗದೆಲ್ಲ ಭಾರಂ ಮೇಣಾ|
    ಚಹಬಿಕರಿಕಜ್ಜಮನ್ನುಮ
    ಪಹಿತರ್ (entrusted) ಸಂಭಾವ್ಯರೆಂದು ಪೊರೆದಂ ರಾಜಂ (ನ.ಮೋ.)||
    ————-
    Second/third gen Indians in Latin America and Africa are craving to return to India due to unrest there:
    ಅಹಿತವು ಪರದೇಶವು ನಾವ್
    ಬಹೆವಿನ್ನಲ್ಲಿಗೆಮಗಾಶ್ರಯವ ನೀಡಿರೆನಲ್|
    ಕುಹಕಿಸದೆ ಕೈಪಿಡಿಯುತಾ
    ಜಹಿತರ್ (forsaken) ಸಂಭಾವ್ಯರೆಂದು ಪೊರೆದಂ ರಾಜಂ (ನ.ಮೋ)||

    ಮಹನೀಯ ಕಾರ್ಯಗಳ ಗೈ-
    ದಹಿತರನುಂ ಧರ್ಮಮಾರ್ಗಕೆಳೆತಂದಿರ್ಪೀ|
    ಬಹುಮಾನ್ಯರ್, ನಿಸ್ಸ್ವಾರ್ಥರ್,
    ಮಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ||

    ಅಹ! ಏನೀ ನೃತ್ಯವಿಲಾ-
    ಸಹಿತಂ ಮೃಗನಯನಿಯರ್ ಮನೋಹರರಿವರೈ|
    ಬಹುತೋಷದಿಂದಲೀ ನೇ-
    ತ್ರಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ||

    • ತುಂಬ ಒಳ್ಳೆಯ ಪೂರಣಗಳು; ವಿಶೇಷತಃ ಮೊದಲ ಹಾಗೂ ಕಡೆಯ ಪದ್ಯಗಳ ಕಲ್ಪನೆ ಬಲುಸೊಗಸಾಗಿವೆ.

  27. ಒಂದು ಪ್ರಯತ್ನ: (ಕಂದದಲ್ಲಿ ಕಥೆ)

    ಮಹಿಯಂ ಮೋಹಿಸಿ ನಿಜಸಖ
    ರಹಿವಿಷದಿಂ ಕೊಲ್ಲಲೆಳೆಸಲರಿತರಿಜನರೀ
    ಕಹಿಯಂ ದೊರೆಗಂ ತಿಳಿಪಿದ
    ರಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ||

    • ಆಹಾ! ಪುಟ್ಟಕಂದದ(ನ)ಲ್ಲಿ ಅದೆಷ್ಟು ದೊಡ್ಡ ಕಥೆಯನ್ನು ಹೇಳುವ ಸಾಮರ್ಥ ಬಂದಿದೆ!!
      ತುಂಬ ಒಳ್ಳೆಯ ಪೂರಣ ಮತ್ತು ಭಾಷಾಶೈಲಿ.

    • ಬಹಳ ಚೆನ್ನಾಗಿದೆ

  28. ಇನ್ನೊಂದು:
    ಮಹಿಯಂಗಳಿಸುವ ಸಮರಂ
    ಕಹಿಯಾಯ್ತಯ್ ಹಿಂಸೆಯ ಗರದಿಂದಾ ದೊರೆಗಂ |
    ಸಹಜೀವನಮದು ವರಮೆಂ
    ದಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ||

    • ಒಳ್ಳೆಯ ಪೂರಣ; ಪದ್ಯಶೈಲಿಯೂ ಚೆನ್ನಾಗಿದೆ.

    • ರಾಘವೇಂದ್ರ ಚೆನ್ನಾಗಿದೆ,

      2ನೇ ಪಾದದ ಮೂರನೇಯ ಗಣದಲ್ಲಿ ಸರ್ವಲಘುವಿದ್ದರೂ ಪ್ರಥಮಾಕ್ಷರದ ನಂತರ ಯತಿ ಬಂದಿಲ್ಲವಲ್ಲವೇ, ಗಮನಿಸಿರಿ

      • ರಾಗ-ಸೋಮರಿಗೆ ಧನ್ಯವಾದಗಳು… ಈ ಸವರಣೆ ಹೇಗಿದೆ?

        ಮಹಿಯಂಗಳಿಸುವ ಸಮರಂ
        ಕಹಿಯಾಯ್ತಯ್ ಮೃತ್ಯುಗರಲದಿಂ ಮೌರ್ಯನಿಗಂ |
        ಸಹಜೀವನಮದು ವರಮೆಂ
        ದಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ ||

  29. Encouraging widow remarriage
    ಅಹಿತಕದಾರು ನಿಪಾತರ್
    ರಹಿತಪತಿಯರಾದರಲ್ತೆ ನವವೈವಾಹರ್|
    ಮಹನೀಯದ ಗುಣಮೆರೆದ ಪ-
    ದಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ||
    ಪದಕೋಶವು ಪದಹಿತ=substitute for husband ಎಂದಷ್ಟೇ ಹೇಳಿದೆ. ನಾನು ಅದನ್ನು substitute for deceased husband ಎಂದು ಗ್ರಹಿಸಿದ್ದೇನೆ. ಇದು ಅಸಾಧುವೆಂದಾದರೆ, ನಿಯೋಗಾರ್ಥದಲ್ಲಿ ಪರಿಹಾರ ಇಂತಿದೆ:
    ರಹಿತವೆ ರೇತವು ತನ್ನೊಳು!
    ಮಹಿಗಂ ಕೊಡಮಾಡೆ ರಾಣಿಯು ಪ್ರಜೆಗಳನುಂ|
    ನಿಹಿತಕೆ ರೇತಮನೀವ ಪ-
    ದಹಿತರ್ ಸಂಭಾವ್ಯರೆಂದು ಪೊರೆದಂ (ಪಾಂಡು)ರಾಜಂ||

  30. ಮಹಿಯನ್ನಾಳ್ದೀಗಿಂತಾ-
    ಗಿಹರಲ್ತಪದೆಸೆಯಿನಿಂದೆ ಪಾಂಡವರೆನುತುಂ|
    ಬಹುಲಕ್ಷೇತ್ರಾರ್ಥಗೃಹವಿ-
    ರಹಿತರ್ ಸಂಭಾವ್ಯರೆಂದು ಪೊರೆದಂ (ವಿರಾಟ)ರಾಜಂ||
    (ಬಹುಲ=abundant. ಕ್ಷೇತ್ರ+ಅರ್ಥಗೃಹ=ರಾಜ್ಯ+ಕೋಶ. ವಿರಹಿತರ್=deprived)

  31. Encouraging karmaTha-vaidikas
    ಇಹದೊಳ್ ಧರ್ಮಾಚರಣಮೆ
    ರಹದಾರಿ ಪರಕ್ಕೆನುತ್ತಲಗ್ನಿಯ ಕಾಯಲ್|
    ಬಹುಜತನದಿಂದಲಾ ಪ್ರಾ-
    ಜಹಿತರ್ ಸಂಭಾವ್ಯರೆಂದು ಪೊರೆದಂ ರಾಜಂ||
    (प्राजहित m. a गार्हपत्य fire maintained during a longer period of time)

  32. Catalogue 🙂
    ಮಹನೀಯರ್, ಧರ್ಮಿಷ್ಠರ್,
    ಮಹಿಮರ್, ದೇಶಿಕ, ತಪಸ್ವಿ, ಸೈನಿಕ, ಗೋಪರ್ (cowherds),
    ರಹಿ(loner)ಸನ್ಯಾಸಿಯು (ಇವರೆಲ್ಲ) ಪಾತಕ-
    ರಹಿತರ್, (ಹಾಗಾಗಿ) ಸಂಭಾವ್ಯರೆಂದು ಪೊರೆದಂ ರಾಜಂ||

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)