Jun 222014
 

ಸ್ವಾನ್, ಜಾಟರ್, ಹೀರೋ, ಪಾರ್ಕರ್ ಪದಗಳನ್ನು ಬಳೆಸಿ ನಿಮ್ಮ ಇಚ್ಛೆಯ ಕಾವ್ಯದ ಬಗೆಗೆ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯ ರಚಿಸಿ

  45 Responses to “ಪದ್ಯಸಪ್ತಾಹ ೧೧೪: ದತ್ತಪದಿ”

  1. ತುಂಬ ಹಿಂದೆ ಅವಧಾನದಲ್ಲಿ ನನಗೆದುರಾಗಿದ್ದ ಈ ದತ್ತಪದಿಯನ್ನು ಭಗವಾನ್ ವೇದವ್ಯಾಸರ ಕೂಟಶ್ಲೋಕಗಳ ಹಿನ್ನೆಲೆಯಲ್ಲಿ ರಚಿಸಬೇಕೆಂದು ನಿರ್ಬಂಧವಿದ್ದಿತು. ಆಗ ನುಡಿದ ಪದ್ಯವಿಂತಿದೆ:

    ದ್ವಿಜಪಾರ್ಕರ್ಕ್ಷಮುಖಪ್ರಪಂಚಮಿರುವನ್ನಂ ಸಲ್ವ ಸತ್ಕಾವ್ಯಮಂ
    ಸೃಜಿಸಲ್ ನೋಂತ ಮುನೀಂದ್ರಚಿಂತನಮಹೀರೋಹಾಂಬುದಂ ಭೀಮಸಾ-
    ಮಜವಕ್ತ್ರಂ ಲಿಪಿಕಾರನಾಗೆ ನಲವಿಂ ಸ್ವಾನ್ತರ್ವಿನೋದಂಗಳೊಂ-
    ದು ಜಯಂ ವ್ಯಾಸರಹಸ್ಯಮಲ್ತೆ ಜಲಜಾಟರ್ತಪ್ರಸಂಗಸ್ಥಿತಂ ||
    {(ದ್ವಿಜಪಾ……..ಮಿರುವನ್ನಂ: ದ್ವಿಜಪ = ಚಂದ್ರ, ಅರ್ಕ =ಸೂರ್ಯ, ಋಕ್ಷ = ನಕ್ಷತ್ರ, ಮುಖ = ಇತ್ಯಾದಿ, ಅಂದರೆ ಸೂರ್ಯಚಂದ್ರತಾರೆಗಳೇ ಮುಂತಾದ ಈ ಜಗತ್ತು ಇರುವ ವರೆಗೂ ಎಂದು ತಾತ್ಪರ್ಯ. ಇಲ್ಲಿ ’ಪಾರ್ಕರ’ ಬಂದಿತು.)
    (ಮಹೀರೋಹಾಂಬುದಂ =ನೆಲದಲ್ಲಿ ಬೆಳೆದ ಮರಕ್ಕೆ ಮೋಡವಾದವನು; ವ್ಯಾಸವಾಣಿಗೆ ಲಿಪಿರೂಪವನ್ನೀಯುವ ಮೂಲಕ ಆ ವಾಗ್ವೃಕ್ಷಕ್ಕೆ ನೀರೆರೆದ ಮುಗಿಲಾದವನು ಭೀಮ-ಸಾಮಜ-ವಕ್ತ್ರಂ = ಭಯಕರವಾದ ಆನೆಮೊಗದವನು, ಅರ್ಥಾತ್ ಗಣಪತಿ. ಇಲ್ಲಿ ’ಹೀರೋ’ ಬಂದಿದೆ)
    (ಸ್ವ + ಅಂತಃ + ವಿನೋದ = ತನ್ನಲ್ಲಿ ತಾನೇ ನಲಿಯುವ ಪರಿ; ಅಂದರೆ ಮಹಾಭಾರತವು ಅತ್ಮಾನಂದಕ್ಕಾಗಿ ಹೂಮ್ಮಿದ ಕೃತಿಯೆಂದು ತಾತ್ಪರ್ಯ. ಇಲ್ಲಿ ’ಸ್ವಾನ್’ ಬಂದಿದೆ.)
    (ಜಯ ಎಂಬುದು ಮಹಾಭಾರತದ ಮತ್ತೊಂದು ಹೆಸರು.ಜಲಜ + ಆಟ + ಋತ = ಕಮಲದಲ್ಲಿ ವಿಹರಿಸುವ, ಅರ್ಥಾತ್ ಬ್ರಹ್ಮನ ನಿಯಾಮಕಶಕ್ತಿ. ಇಲ್ಲಿ ಜಾಟರ್ ಬಂದಿದೆ.)}

    • ಬಹಳ ಚೆನ್ನಾಗಿದೆ ಸರ್ ನಿಮ್ಮ ಪೂರಣ 🙂

    • ದತ್ತಪದಿಯೋ! ಶಲಾಕೆಯ-
      ನಿತ್ತ ಪರಿಯಿದೋ! ಚಿಕಿತ್ಸೆಯೋ! ಪಾದದೊಳೆಂ-
      ತತ್ತಳಗಮೆನಲ್ ಸುಲಭದೊ-
      ಳೊತ್ತರಿಸಿದನೀ ಗಣೇಶಭೇಷಜಗಣ್ಯಂ||

      attaLaga = impossible ottarisu = bhEdisu, sErisu.

      • ೧) ನೋಳ್ಪ ದಿಟ್ಟಿಯಿದು ಗಡಾ ತೆಗೆ! ದತ್ತಪದಗಳನೊತ್ತರಿಸಿಹರೆಂಬೆ ನೀಂ. ಅವನಲ್ಲಲ್ಲಿರಿಸುತಿತರ ಪದಗಳನೊತ್ತರಿಸಿಹರೆಂಬೆಂ ನಾಂ. ಏಕೆಂಬೆಯೋ? ಪದಗಳನನುಸರಿಸಿ ಛಂದಸ್ಸಿನಾಯ್ಕೆ ಮೊದಲಕ್ಕುಂ; ಆ ಸಾಲ್ಗಳೊಳ್ ಮೊದಲ್ ದತ್ತಪದಗಳನೊತ್ತರಿಸಲಕ್ಕುಂ. ಏನೆಂಬೆಯೋ?

        ೨) ಖಂಡಪ್ರಾಸ ಖಂಡಾಬಟ್ಟೆ ಚೆಂದವುಂಟು ಮಾರಾಯ್ರೆ.

    • ಅಮೋಘವಾಗಿದೆ

      • ಸ್ಥಿರ ಧೀಕೃಪಾರ್ಕರುಚಿ; ಜಾ
        ಠರತೇಜಮೆ ಜನಕೆ! ಸ್ವಾನುಲಕ್ಷಣ ವಿದ್ಯಾ
        ಕರನ, ಮಹೀರೋಚನ ದ-
        ತ್ತರಚನೆ ಬಿಂದುವಲ ಕುಂಭಸಂಭವಬಲಿಗಂ

        • ಆಹಾ ಬಹಳ ಚೆನ್ನಾಗಿದೆ

        • ಅಲ್ಪಕುಕ್ಷಿಯ ಕಂದದೊಳ್ ಸಂದುದೇನಿಂತು
          ಕಲ್ಪನಾಲಹರಿ ಆಕಲ್ಪಮಾಗಿ!!

  2. ಜಗದೊಳಿದಪಾರ ಕರುಣಾಜನಕ ಕಥೆಕಾಣ
    ಬಗೆಬಗೆಯ ಜಂಜಾಟ ರಾಜಕೀಯಂ ।
    ಹಗೆತನದ ಹೋರಾಟದೊಳು ಮಹೀರೋದ(ಧ)ನದೆ
    ಮೊಗೆಮೊಗೆದು ತಂದಿಹುದು ಸ್ವಾನುಭವವಂ ।।

    ಮಹೀರೋಧ ~ ಮಹಾಭಾರತ / ಮಹೀರೋದನ ~ ರಾಮಾಯಣ !!

    • ಆಹಾ! ಅದೆಷ್ಟು ಚೆನ್ನಾಗಿ ರಾಮಾಯಣ-ಮಹಾಭಾರತಗಳನ್ನು ಒಂದೇ ಚೌಪದಿಯಲ್ಲಿ ಸುಕರ-ಸುಬೋಧರೀತಿಯಲ್ಲಿ ನುತಿಸಿದ್ದೀರಿ!! ಅಲ್ಲದೆ ದತ್ತಪದಗಳ ಸಹಜ-ಸರಳನಿಕ್ಷೇಪವೂ ಉತ್ತಮವಾಗಿದೆ; ಧನ್ಯವಾದಗಳು.

      • agree

      • ಬಹಳ ಚೆನ್ನಾಗಿದೆ ಉಷಾ ಅವರೆ

      • ಧನ್ಯವಾದಗಳು ಗಣೇಶ್ ಸರ್, ಪ್ರಸಾದ್ ಸರ್, ಸೋಮ
        ದತ್ತಪದಗಳ ಲೇಖನಿ (ಸೋಮ ಕೊಟ್ಟ “ಹೀರೋ” ಪೆನ್! ) ಮತ್ತು ಚೌಕಟ್ಟಿನಿಂದಾಗಿ ಇದು ಸಾಧ್ಯವಾಗಿದೆ. ಮನದಾಳದ ಮಹಾಕಾವ್ಯಗಳಿಗೆ “ನನ್ನದಲ್ಲದ ನನ್ನ” ಭಾವ-ಭಾಷೆ ರೂಪಗೊಂಡಿದೆ. (“ದತ್ತಪದಿ”ಯಲ್ಲದಿದ್ದಲ್ಲಿ ಪದ್ಯದ ಸ್ವರೂಪ ಬೇರೆಯೇ ಇರುತ್ತಿತ್ತು.) ಪದ್ಯಪಾನದ ಈ ಪದ್ಯ ಪ್ರಕ್ರಿಯೆ ಆನಂದ ತಂದಿದೆ. “ಅವಧಾನ” ಆಪ್ಯಾಯಮಾನವಾಗುವುದೂ ಇದೇ ಕಾರಣಕ್ಕೆ.

  3. ಕಾಲಮಂ ಪಾರ್,ಕರಂ ಸೊಗಸಿರ್ಪ ರಾಮಕಥೆ,
    ಕಾಲಿರಿಸಿಹುದು ಜಾಟರಂಗಳದೊಳೂ|
    ಶೂಲೆಗಹಿಹೀರೊಂದುಗೂಡಿಕುಂ ಜಗದೊಡನೆ-
    ಚಾಲಿಸಿ, ಸ್ವಾನಂದ ,ಸದ್ಭುದ್ದಿಯಂ||

    • ಕೆಲವೊಂದು ಪದಪ್ರಯೋಗದಲ್ಲಿ ದೋಷವಿದೆ. ಅದನ್ನು ಮುಖತಃ ಹೇಳಿ ಸವರಿಸಬಹುದು.

      • ತಮ್ಮ ಸಲಹೆಯಂತೆಯೇ,ಪದ್ಯವನ್ನು ತಿದ್ದಿದ್ದೇನೆ. ಧನ್ಯವಾದಗಳು .

  4. ಮುದವೀವೀ ಮನುಜಾಟರಮ್ಯವಿಷಯಂ ಕಾವ್ಯಾಲಿಸದ್ವಾಟಿಕಾ-
    ಪದಮೀ ಸ್ವಾಂತಸಮುದ್ವಹಂ ಕವಿಮಹೀರೋಹಂಗಳಿಂ ಕೂಡಿರಲ್ |
    ಹೃದಯಾಕಾಶದೆ ಸಂತತಂ ಪೊಳೆಯುತಿರ್ಪಾ ಬೋಧರೂಪಾರ್ಕರ-
    ಶ್ಮ್ಯುದಿತಾಭಾಪ್ರತಿಭಾಲತೆ ದ್ಯುತಿಯಿನಿರ್ಕುಂ ಮುದ್ದಣೀಯಂ ಕರಂ ||
    ಮನುಜಾಟರಮ್ಯವಿಷಯಂ = ಮನುಷ್ಯರ ವಿಹಾರಕ್ಕೆ ಯೋಗ್ಯವಾದ ವಿಷಯಗಳಿಂದ ಕೂಡಿದ.
    ಆಟ = ಸಂಚಾರ, ವಿಹಾರ.
    ಪದ = ಸ್ಥಾನ.
    ತಾತ್ಪರ್ಯ = ವ್ಯಾಸಕಾಲಿದಾಸಾದಿಕವಿಗಳೆಂಬ ಮನೋಜ್ಞವೃಕ್ಷಗಳಿಂದ ಮನೋವರ್ಧಕವೂ, ವಿಹಾರಯೋಗ್ಯವೂ ಆದ ಕಾವ್ಯಸಮೂಹವೆಂಬ ಉದ್ಯಾನದಲ್ಲಿ, ಜ್ಞಾನವೆಂಬ ಸೂರ್ಯನ ಕಿರಣಗಳಿಂದ ಪುಷ್ಟವಾದ ಮುದ್ದಣನ ಪ್ರತಿಭೆಯೆಂಬ ಲತೆ ಶೋಭಿಸುತ್ತಿದೆ ಎಂದರ್ಥ.
    ಪದ್ಯ ತುಸು ಬಡವಾಗಿದೆ ಎಂದೆನಿಸಿದರೂ ಪೋಸ್ಟ್ ಮಾಡುತ್ತಿದ್ದೇನೆ.

    • ಬಹಳ ಚೆನ್ನಾಗಿದೆ ಪೆಜತ್ತಾಯರೆ

      • ಒಳ್ಳೆಯ ಪ್ರೌಢಶೈಲಿಯ ಪದ್ಯ.ಇಂಥ ದತ್ತಪದಗಳಿಗೆ ಇದಕ್ಕಿಂತ ಉತ್ತಮಪರಿಹಾರ ಪ್ರಾಯೇಣ ಅಸಾಧ್ಯವೆಂದೇ ಹೇಳಬೇಕು.

        • ನಲ್ವಾತುಗಳಿಗೆ ನಮನಗಳು ಸರ್ 
          ಕೆಲವೊಂದು ಕಾವ್ಯದೋಷಗಳಿದ್ದುದರಿಂದ ಹಾಗಂದುಕೊಂಡೆ. ಈಗ ಸಮಾಹಿತನಾದೆ 🙂

      • ಧನ್ಯವಾದಗಳು ಸರ್ 

    • ತುಂಬ ಚೆನ್ನಾಗಿದೆ. ‘ಮನುಜಾಟರಮ್ಯವಿಷಯಂ’ ಎಂಬಲ್ಲಿ ‘ಅಟ’ ಎಂದೂ ಗ್ರಹಿಸಬಹುದೆ?

      • ಧನ್ಯವಾದಗಳು ಸರ್ 
        ಅಟ ಶಬ್ದವನ್ನು ಯಾವ ಅರ್ಥದಲ್ಲಿ ಗ್ರಹಿಸಬಹುದು ಎಂದು ತಿಳಿಯಲಿಲ್ಲ.

        • ಸಂಸ್ಕೃತದ ಆಟದಿಂದಲೇ ಕನ್ನಡದ ಆಟವೂ ಬಂದಿದೆ.

  5. ಕಾಳಿದಾಸನ ರಘುವಂಶದ ಬಗ್ಗೆ

    ಆಹಾ ಭೂಮಿಕೆಯದ್ಭುತಂ ರಘುಕುಲಪ್ರಾಸಾದದೊಳ್ ಪೊಣ್ಮ ವೈ-
    ದೇಹೀರೋಧಕದಂಕದಿಂ ವಿಧಿಯಪಸ್ವಾನಾರ್ತರಾಜಾಜನಿಂ-
    ದೂಹಾತೀತಪರಾಕ್ರಮಂ ಬಿಜಯಮುಂ ಸಾರ್ಪಾರ್ಕರಶ್ಮಿಪ್ರಭಾ-
    ವ್ಯೂಹಾಲಂಕೃತಜಾಟರಂಜಿತರಘುಕ್ಷ್ಮಾಪಾಲನೊಳ್ಪಿಂ ಗಡಾ

    ಪ್ರಾಸಾದ – ವೇದಿಕೆ
    ವೈದೇಹಿ – ಗೋವು (ನಂದಿನಿ), ರೋಧಕ – ತಡೆಯಲ್ಪಡುವ, ಅಂಕ – ಅಂಕಣ, ವೈದೇಹೀರೋಧಕದಂಕದಿಂ -> ದೀಲೀಪ-ನಂದಿನಿಯ ಅಂಕಣದಿಂದ
    ಅಪಸ್ವಾನ – ಬಿರುಗಾಳಿ, ವಿಧಿಯಪಸ್ವಾನಾರ್ತರಾಜಾಜನಿಂ – (ಪತ್ನಿ ವಿಯೋಗದ) ವಿಧಿಯ ಬಿರುಗಾಳಿಯಿಂದ ತ್ರಾಸಗೊಂಡ ರಾಜನಾದ ಅಜನಿಂದ
    ಸಾರ್ಪ – ಸೇರುವ
    ಆರ್ಕರಶ್ಮಿಪ್ರಭವ್ಯೂಹಾಲಂಕೃತಜಾಟರಂಜಿತರಘುಕ್ಷ್ಮಾಪಾಲನೊಳ್ಪಿಂ – ಸೂರ್ಯನ ರಶ್ಮಿಯ ಪ್ರಭೆಯ ವ್ಯೂಹದಿಂದ ಅಲಂಕೃತವಾದ ಜಟೆಗೆ ಸಂಬಂಧಿಸಿದ ಶೋಭೆಯ ರಘುಮಹಾರಾಜನ ಒಳ್ಪಿನಿಂದ (ಈ ಸಮಾಸದ ಬಗ್ಗೆ ನನಗೆ ಬಹಳ ಅನುಮಾನವಿದೆ… ಸರಿಯೇ?)

    • ಆಕ್ಷೇಪಮಿಲ್ಲಮಿದರೊಳ್
      ಲಕ್ಷಣಪರಿಶುದ್ಧಿಕಾಮ! ಸೋಮ! ಸ್ಥೇಮಾ!!

    • That is a graduation Soma! Really enjoyed reading it. Thanks.

    • ಆರ್ಕರಶ್ಮಿಪ್ರಭವ್ಯೂಹಾಲಂಕೃತಜಾಟರಂಜಿತರಘುಕ್ಷ್ಮಾಪಾಲನೊಳ್ಪಿಂ ಎಂಬಲ್ಲಿ ಪ್ರಭಾ ಎಂದು ದೀರ್ಘಾಕ್ಷರ ಇರಬೇಕಿತ್ತು. ಮಹೇಶ ಭಟ್ಟರ ಸೂಚನೆಯಂತೆ ಮೂಲದಲ್ಲೆ ಸವರಣೇಯನ್ನು ಮಾಡಿದ್ದೇನೆ. ಧನ್ಯವಾದಗಳು 🙂

  6. उत्साही रोपणेऽसौ नवकविकलिकासन्ततेर्बद्धदीक्षो
    ब्रह्मायं सृष्टिशीलः सहृदयहृदयाब्जाटरोचिष्णुराद्यः ।
    स्वानन्तप्रेक्षया सद्गुणतदितरयोर्वक्ति सर्वं समूलं
    प्रत्याक्षेपार्करश्मिः कुमतिविदहने चैष रागो विभाति ॥

    तात्पर्यम् – रागनामायं कविः नवकविरूपाणां कलिकानां रोपणे उत्साही बद्धदीक्षश्च । सृष्टिशीलत्वात् अयमपि ब्रह्मा । स ब्रह्मा कमलविहारी । अयं तु सहृदयानां हृदयकमले विहरन् राजते । स जगतः आद्यः, अयं तु कवीनाम् । अयं कविर्निजेन असीमज्ञानेन प्रायः सर्वविषयेषु गुणदोषविमर्शे समर्थः । कुमतीनां मतस्य दहने अस्य प्रखरता सूर्यरश्मीन् अपि अतिशेते च इति ।

    प्रत्याक्षेपशब्दः प्रत्याक्षिप्तार्थकः । कर्मणि घञ् ।

    • सौहार्दस्वर्गवीजा भवदमलवचस्स्रग्धरा दुग्धधारा
      लज्जाब्धौ मज्जयेन्मामिति कलितनतिः प्रार्थये प्रीतये ते ।

      • भवन्ति नम्रास्तरवः फलागमै-
        रितीरितं यत्कविना महौजसा ।
        ऋतं तदित्यत्र पुनः परिस्फुटं
        तनूमता सद्विनयेन धीमता ॥ 🙂

    • ಅತ್ಯಂತ ಸಹಜವಾದ ಪದ್ಯಕ್ಕಾಗಿ ಧನ್ಯವಾದಗಳು.

  7. ||ಶಾರ್ದೂಲವಿಕ್ರೀಡಿತ ವೃತ್ತ, ಉಪಮಾಲಂಕಾರ,ರೂಪಕಾಲಂಕಾರ ||

    ಸ್ವಾನಂದಂಬಡೆಯಲ್ಕೆ,ಧರ್ಮಪಥದೊಳ್ ಸಾಗಲ್ಕೆ, ರಾಮಾಯಣಂ-
    ಜ್ಞಾನಾಕಾಶದೆ ಶೋಭಿಸಲ್ ಮನನದಿಂ,ತಾಪಾರ್ಕರಮ್ಯಾಂಗದೋಲ್, |
    ಬಾನೊಳ್ ಪಾರ್ವ ನಿಜಾಟರಕ್ತವಿಹಗಂಗಳ್ ತೋಷಿಪೋಲ್ ಮೋದಿಸಲ್,
    ಮಾನಾಧಿಕ್ಯದೆ ಬಾಳೆ ಸಚ್ಚರಿಸಿ,ಹೀರೋದ್ಭಾಸದೋಲ್ ಮಂಗಳಂ ||

    (ಸ್ವಾನಂದಂಬಡೆಯಲ್ಕೆ, ಧರ್ಮಪಥದೊಳ್ ಸಾಗಲ್ಕೆ,ಮನನದಿಂ ತಾಪಾರ್ಕರಮ್ಯಾಂಗದೋಲ್ ಜ್ಞಾನಾಕಾಶದೆ ಶೋಭಿಸಲ್,ಬಾನೊಳ್ ಪಾರ್ವ ನಿಜಾಟರಕ್ತವಿಹಗಂಗಳ್ ತೋಷಿಪೋಲ್ ಮೋದಿಸಲ್,ಸಚ್ಚರಿಸಿ ಮಾನಾಧಿಕ್ಯದೆ ಬಾಳೆ,ಹೀರೋದ್ಭಾಸದೋಲ್ ಮಂಗಳಂ,ರಾಮಾಯಣಂ.)

    ಸ್ವಾನಂದಂಬಡೆಯಲ್ಕೆ=ನಿಜದ ಆನಂದವನ್ನು ಪಡೆಯಲು,
    ತಾಪಾರ್ಕರಮ್ಯಾಂಗದೋಲ್=ಸೂರ್ಯನ ಸುಂದರವಾದ ಶರೀರದಂತೆ,
    ನಿಜಾಟರಕ್ತವಿಹಗಂಗಳ್=ತಮ್ಮ ವಿಹಾರದಲ್ಲಿ ಪ್ರೀತಿಯನ್ನು ಹೊಂದಿದ ಹಕ್ಕಿಗಳು,
    ಹೀರೋದ್ಭಾಸದೋಲ್=ವಜ್ರದ ಕಾಂತಿಯಂತೆ.

    • ಶಕುಂತಲಾ ಅವರೆ, ಈ ಪದ್ಯ ಬಹಳ ಚೆನ್ನಾಗಿದೆ 🙂

      ಕೆಲವೊಂದಂಶಗಳನ್ನು ಗಮನಿಸಬೇಕು ಎನಿಸುತ್ತದೆ. ಈ ರೀತಿಯ ಪ್ರಯೋಗಗಳನ್ನು ನಾನೂ ಕೂಡ ಮಾಡುತ್ತಿರುತ್ತೇನೆ, ಶುದ್ಧವಾದ ಪ್ರಯೋಗವನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಉದಾಹರಣೇಯಾಗಷ್ಟೆ ಈ ಪದ್ಯವನ್ನು ತೆಗೆದುಕೊಂಡಿದ್ದೇನೆ.

      ಗಣೇಶ್ ಸರ್,
      1. ಸ್ವಾನಂದಂಬಡೆಯಲ್ಕೆ -> ಸ್ವಾನಂದಮಂ ಎಂದಾಗಬೇಕಲ್ಲವೇ? ಹಾಗಿದ್ದಲ್ಲಿ ಮೋಸಂಗೈದಂ, ಕೋಪಂತಾಳ್ದಂ, ಕೋಪಂಗೈದಂ, ನ್ಯಾಯಂಗೈದಂ ಇವೆಲ್ಲವೂ ಪ್ರಥಮಾವಿಭಕ್ತಿಯಾಗುವುದರಿಂದ ಅಸಾಧುವಾಗುತ್ತದೆಯಲ್ಲವೆ ತೃತೀಯಾ ಎಂದೆನಿಸುವುದಿಲ್ಲ ಅಲ್ಲವೇ.
      2. ಹಳಗನ್ನಡದಲ್ಲಿ ಈ ಕೆಳಗಿನ ರೂಪಗಳನ್ನಷ್ಟೇ ಬಳಸಬೇಕಲ್ಲವೇ?
      ಭಾಸದೋಲ್ -> ಭಾಸಿಪವೊ(ವೋ)ಲ್
      ರಮ್ಯಾಂಗದೋಲ್ -> ರಮ್ಯಾಂಗದವೊ(ವೋ)ಲ್
      ತೋಷಿಪೋಲ್ -> ತೋಷಿಪವೊ(ವೋ)ಲ್

      • ಸೋಮರೆ,ಪದ್ಯವನ್ನು ಮೆಚ್ಚಿರುವುದಕ್ಕಾಗಿ ಧನ್ಯವಾದಗಳು.
        ನಿಮ್ಮ ಸಂದೇಹಗಳಿಗೆ ನನ್ನ ಉತ್ತರ:
        1) “ಸ್ವಾನಂದಮಂ ಪಡೆಯಲ್ಕೆ”ಎಂಬುದು ಕ್ರಿಯಾಸಮಾಸವಾಗಿ “ಸ್ವಾನಂದಂಬಡೆಯಲ್ಕೆ” ಎಂದಾಗಿದೆ.ಹಾಗಾಗಿ ಇದು ತಪ್ಪಲ್ಲ.
        2)ಓಲ್,ಒಲ್,ವೋಲ್,ವೊಲ್-ಎಲ್ಲವೂ ಸಮಾನಾರ್ಥವನ್ನು ನೀಡುತ್ತವೆ.ಛಂದಸ್ಸಿಗೆ ಸರಿಹೊಂದುವಂತೆ ಇವುಗಳ ಬಳಕೆಯನ್ನು ವಿದ್ವಾಂಸರ ರಚನೆಗಳಲ್ಲಿ ಗಮನಿಸಿರುವೆ.
        ರಮ್ಯಾಂಗದ+ಓಲ್=ರಮ್ಯಾಂಗದೋಲ್,
        ಅಥವಾ
        ರಮ್ಯಾಂಗದ+ಒಲ್=ರಮ್ಯಾಂಗದೊಲ್,

        ರಮ್ಯಾಂಗದ+ವೋಲ್=ರಮ್ಯಾಂಗದವೋಲ್,
        ಅಥವಾ
        ರಮ್ಯಾಂಗದ+ವೊಲ್=ರಮ್ಯಾಂಗದವೊಲ್
        ಇವೆಲ್ಲವೂ ಸಾಧುವೆಂದೇ ಭಾವಿಸುವೆ.
        ಮಾನ್ಯ ಶತಾವಧಾನಿಗಳ ಅಭಿಪ್ರಾಯಗಳು ನನಗೂ ಬಹಳ ಬೆಲೆಯುಳ್ಳವುಗಳು.

        • ಜಿಜ್ಞಾಸೆ ತುಂಬ ಚೆನ್ನಾಗಿದೆ. ಸೋಮನ ಎರಡು ಪ್ರಶ್ನೆಗಳ ಪೈಕಿ ಮೊದಲನೆಯದಕ್ಕೆ ಶಕುಂತಲಾ ಅವರ ಉತ್ತರವು ಯುಕ್ತವಾಗಿದೆ. ಆದರೆ ಎರಡನೆಯದರಲ್ಲಿ ಭಾಗಶಃ ಸರಿಯುತ್ತರವಿದೆ. ಒಲ್, ಓಲ್ ಎಲ್ಲ ಸರಿ. ಆದರೆ ರಮ್ಯಂಗದದೊಲ್ ಸುಮದೊಲ್ ಇತ್ಯಾದಿ ರೂಪಗಳು ಹಳಗನ್ನಡದ ನಿಷ್ಕೃಷ್ಟವಾದ ವ್ಯಾಕರಣದ ಪ್ರಕಾರ ಅಸಾಧು. ಇಂಥ ಸಂಸ್ಕೃತಪದಗಳಿಗೆ ವೊಲ್(ಓಲ್) ಸೇರಿದಾಗ ಸೋಮನು ಸೂಚಿಸಿದಂಥ ರೂಪವೇ ಸಿದ್ಧಿಸುತ್ತದೆ. ಕೇವಲ ಅಗತಿಕಗತಿನ್ಯಾಯದಂತೆ ರಮ್ಯಾಂಗದದೊಲ್, ಸುಮದೊಲ್
          ಇತ್ಯಾದಿ ರೂಪಗಳು ಇಣಿಕುತ್ತವೆ.

    • ಸಹೋದರರಾದ ಶತಾವಧಾನಿಗಳೇ,
      ನೀವು ತಿಳಿಸಿದಂತೆ ನಾನು ಮೊದಲು ಗಮನಿಸಿದ ರಚನೆಗಳಲ್ಲಿಯೂ ಸಂಸ್ಕೃತಪದಗಳೊಡನೆ ವೊಲ್/ವೋಲ್ ಮಾತ್ರವೇ ಬಳಕೆಯಾಗಿರುವುದು ಕಂಡುಬಂತು.ಕನ್ನಡಪದಗಳು ಮಾತ್ರವೇ ಎರಡೂ ಬಗೆಯ ಪ್ರಯೋಗಗಳನ್ನು ಹೊಂದಿವೆ.ನಿಮ್ಮೀ ಬಹಳ ಉಪಯುಕ್ತವಾದ ವಿವರಣೆಗಳಿಗಾಗಿ ಹೃತ್ಪೂರ್ವಕಧನ್ಯವಾದಗಳು.ವಿಷಯವನ್ನು ತಪ್ಪಾಗಿ ಗ್ರಹಿಸಿ ದೋಷಯುಕ್ತಪದ್ಯವನ್ನು ರಚಿಸಿರುವುದಕ್ಕಾಗಿ ನಿಮ್ಮ ಹಾಗೂ ಇತರ ಪದ್ಯಪಾನಿಗಳ ಕ್ಷಮೆ ಕೋರುತ್ತೇನೆ.ಪದ್ಯವನ್ನು ಈ ಕೆಳಗಿನಂತೆ ಸವರಿದ್ದೇನೆ.ತಪ್ಪಿದ್ದಲ್ಲಿ ದಯಮಾಡಿ ತಿಳಿಸಿರಿ.

      ಸ್ವಾನಂದಂಬಡೆಯಲ್ಕೆ,ಧರ್ಮಪಥದೊಳ್ ಸಾಗಲ್ಕೆ,ರಾಮಾಯಣಂ-
      ಜ್ಞಾನಾಕಾಶದೆ ಶೋಭಿಸಲ್ ಮನನದಿಂ,ತಾಪಾರ್ಕರೂಪಾಂಶದಿಂ |
      ಬಾನೊಳ್ ಪಾರ್ದ ನಿಜಾಟರಕ್ತವಿಹಗಂ ತೋಷಿಪ್ಪವೋಲ್ ಮೋದಿಸಲ್,
      ಮಾನಾಧಿಕ್ಯದೆ ಬಾಳೆ ಸಚ್ಚರಿಸಿ,ಹೀರೋದ್ಭಾಸದಂತದ್ಭುತಂ ||

      • ಇದು ತುಂಬ ಸೊಗಸಾದ ಆಕೃತಿ-ಆಶಯಗಳನ್ನು ತಳೆದ ಪದ್ಯ. ಇದಕ್ಕಾಗಿ ಹಾರ್ದಿಕಾಭಿನಂದನೆಗಳು.

        • ಮಾನ್ಯ ಸಹೋದರರ ಪ್ರೋತ್ಸಾಹದ ನುಡಿಗಳಿಗೆ ವಿನಯಪೂರ್ವಕವಾದ ತುಂಬುಹೃದಯದ ಕೃತಜ್ಞತೆಗಳು.

  8. ಲೋಕಜೀವನ ಬರಿ ವ್ಯಾಪಾರ ಕರಕರೆಯು
    ಸಾಕೆನಿಪದಿಹ ಜಾಠರಾಗ್ನಿಯದುವುಂ ।
    ನೂಕದನು ಹೀರೊಂದಿನಿತು ಸವಿಯ, ಹೊಂದು ಪರಿ-
    (ಹೀರುತೊಂದಿನಿತು ಸವಿ)
    ಪಾಕದೊಳ್ ಸ್ವಾನಂದ – ಮಂಕುತಿಮ್ಮ ।।

    (ಜಾಠರಾಗ್ನಿ = ಹಸಿವು , ಸ್ವಾನಂದ = ಅಂತರಂಗದ ಆನಂದ)
    “ಕಗ್ಗದ ಸಾರವ ಸಾರುವ ಕಗ್ಗವು” – ಡಿವಿಜಿಯವರ ಅನುಮತಿ ಕೋರಿ

    ಸೋಮ ಕೊಟ್ಟ ಜಾಟರ್ ರೀಫಿಲ್ ನಲ್ಲಿ ಒತ್ತಿ (ದತ್ತ ಪದಗಳು ಹೊಂದಿದ ಸಂಭ್ರಮದಲ್ಲಿ) ಬರೆದ ಪದ್ಯ – ಒಪ್ಪಿಸಿಕೊಳ್ಳಿ !!

  9. ‘ಗಡಿಪಾರ’ ಕರತಂದ, ಜೂಜಾಟ ರಣಮಾಯ್ತು
    ಕೆಡವುತ್ತ ಯೋಧರಂ ಭಾರತದೊಳು|
    ಪೊಡವಿಯೊಳ್ ನೀಲದೇಹೀರೋಹಿಣೀಋಕ್ಷ-
    ಜಡಮಿತ(ದನಿತ) ಸ್ವಾನುಭವ ,ಯೋಗಮಾಯ್ತು||

  10. (ಗಧ್ಯ – to be seized. ಹೀರೋಕ – ಒಬ್ಬ ಕವಿ)
    ಸಂ.ಮ.ಗತಿ|| ಅಧ್ಯಯನವೆನ್ನದೆಂತೊ ನಿಮ್ನವೈ ಸ್ವಾನುಭೂತಿಯುಂ ಮೇಣ್
    ಮೇಧ್ಯಸುಖವೆ ಪೇಳಿರದೆ ಜಂಜಾಟ ರಸದ ಸಿದ್ಧಿಗೆಂಬೆಂ|
    ಗಧ್ಯ ತಾ ಗುಣಮೆನಿಸಿರೆ ಹೀರೋಕ-ಕಾಳಿದಾಸರೊಂದೆ
    ಬೋಧ್ಯಮೆಲ್ಲಕಾವ್ಯಗಳುಮಾವು ಪಾರ್ ಕರ್ಮಮೆನ್ನುತೋದಲ್||

  11. ಪುಂಜಂ ಬೈಗುಳಮಿರ್ಕೆ ಪಾರ್ಕರೆವುದಾ ವಾಕ್ಶುದ್ಧರಂ ಬದ್ಧದಿಂ
    ನಂಜಾಟರ್ದಿರೆ ನೆಪ್ಪಿಗೊಪ್ಪುದೆಮಗಾ ನಂಜಮ್ಮಪೀಯೂಷಮಾ-
    ಜಂಜಾಟಕ್ಕುಗುವಶ್ರುವೇ ರಸಮಹೀರೋಹಕ್ಕೆ ಸಂಪೋಷಣಂ
    ಹಿಂಜಲ್ ದಲ್ ಗೃಹಭಂಗನಾಮ ಸವನಂ ಸ್ವಾನಂದಗೃಹ್ಯಪ್ರಿಯಂ||

    (ಇಲ್ಲಿ ವಿರೋಧಾಭಾಸ ಅಲಂಕಾರವನ್ನು ಅಳವಡಿಸಲು ಪ್ರಯತ್ನಿಸಿದ್ದೇನೆ.
    ಪಾರ್ಕರೆ = ಅವಲೋಕಿಸಲು ಕರೆ. ಈ ಬಳಕೆ ಸಾಧ್ಯವೇ? ಆಟರ್ = (ಕ್ರಿ) ಗುಂಪಾಗು, ಮೇಲೆ ಬೀಳು. ಹಿಂಜಲ್ = ಪರೀಕ್ಷಿಸಲ್)
    ಒಂದು ಪದಕ್ಕೆ ವಿನಾಯತಿ ಇದ್ದಿದ್ದರೆ, ಮೊದಲ ಸಾಲನ್ನು –
    ಸಂಜಾತಂ ಗಡ ನಿಂದನಾತಿಶಯದೊಳ್ ವಾಕ್ಶುದ್ಧರೊಳ್ ಸಂದಿರಲ್
    ಎಂದು ಮಾಡಬಹುದಿತ್ತು :(.

Leave a Reply to Usha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)