Dec 082014
 

ಈ ಸಮಸ್ಯೆಯ ಸಾಲಿಗೆ ನಿಮ್ಮ ಪೂರಾಣವನ್ನು ನೀಡಿರಿ

ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ

  109 Responses to “ಪದ್ಯಸಪ್ತಾಹ ೧೨೮: ಸಮಸ್ಯಾಪೂರಣ”

  1. ದಯೆಯಿಟ್ಟು ಛ೦ದಸ್ಸು ಇತ್ಯಾದಿ ತಿಳಿಸಿದರೆ ನಮ್ಮ೦ತಹ ಪಾಮರರಿಗೆ ಮೊದಲ ಹೆಜ್ಜೆಯನ್ನಾದರೂ ಇಡಲು ಅನುಕೂಲವಾದೀತು…

    • ಇದು ಮತ್ತೇಭವಿಕ್ರೀಡಿತ ಎಂಬ ವೃತ್ತ. ಇದರ ವಿವರಗಳೆಲ್ಲ ಪದ್ಯಪಾನದ ಪಾಠ್ಯಕ್ರಮದಲ್ಲಿಯೇ ಇದೆ. ಸಾವಕಾಶವಾಗಿ ನೋಡಿರಿ. ಮುಖ್ಯವಾಗಿ ಛಂದಸ್ಸಿನ ಪಾಠಗಳ ಲೇಖನಸಾಮಗ್ರಿಯನ್ನು ಗಮನಿಸಿರಿ.

  2. ಇದೊಂದು ಸರಳ-ಸುಲಭ ಪರಿಹಾರ.

    ಮಣಿಮಂಜೀರಘನಸ್ವನಂ, ಪ್ರಚಪಲಪ್ರೇಕ್ಷಾತಡಿತ್ಕಾಂತಿ, ಪೋ-
    ಷಣಕಾರಿಸ್ಮಿತವೃಷ್ಟಿ, ಬರ್ಹಸುರಚಾಪಂ ಶಂಖಬಾಲಾಕೆ ಭೂ-
    ಷಣಮಾಗಳ್ ಮಳೆಗಾಲದಂತೆ ಸುಳಿಯಲ್ ಶ್ರೀಕೃಷ್ಣನ್; ಆ ಭ್ರಾಂತಿಯಿಂ
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ!!

    {ಶ್ರೀಕೃಷ್ಣನು ತನ್ನ ಗೆಜ್ಜೆಗಳ ಸದ್ದು, ನೋಟದ ಹೊಳಪು, ನಗೆಯ ಧಾರೆ, ನವಿಲುಗರಿ, ಪಾಂಚಜನ್ಯಾದಿಗಳಿಂದ ಗುಡುಗು, ಮಿಂಚು, ಮಳೆ, ಮಳೆಬಿಲ್ಲು, ಬೆಳ್ಳಕ್ಕಿಗಳ ಸಾಲು ಮುಂತಾದ ಕಾರ್ಗಾಲದ ಅಂಗಗಳಿಂದ ಕೂಡಿ ಮೂಡಿದಾಗ ಭ್ರಮೆಗೊಂಡ ಸೋಗೆ(ನವಿಲು) ವರ್ಷಾಕಾಲವೇ ಬಂತೆಂದು ಮರುಳಾಗಿ ಕುಣಿಯಿತೆಂಬ ತಾತ್ಪರ್ಯವಿಲ್ಲಿದೆ.}

    • ಸರಳಂ ಮೇಣ್ ಸುಲಭಂ ಗಡೆಂದು ಗಣಿಸಲ್ಕೆಂತಕ್ಕುಮೀ ಶಿಲ್ಪದೊಳ್
      ತರಳರ್ ನಾಂ ಬರೆಯಲ್ಕೆ ಕಷ್ಟಮಕಟಾ! ಸಾಧುಪ್ರಬಂಧಂಕೃತಂ 🙂

      • ಪರಿಹಾರಸ್ಫುರಣಂ ಗಡಂ ಸರಳಮೆಂದೆಂ; ಪದ್ಯಸಂಪೂರ್ತಿಗಂ
        ಚಿರಸಿದ್ಧಂ ಹರಿಲೀಲೆಯೆಂದು ಸುಲಭಂ ತಾನಾಯ್ತು ವಾಗ್ಗುಂಫನಂ:-)

  3. (ಪ್ರಾಣಿಗಳು ತಮ್ಮ ಸ್ವಭಾವವನ್ನು ಸುಲಭವಾಗಿ ಬಿಡಲಾರವು ಎಂಬ ಹಿನ್ನಲೆಯಲ್ಲಿ ಈ ಪೂರಣ. ಶೈಲಿ ಸುಮಾರಾಗಿದೆ ಎನ್ನಿಸಿದರೂ ಹಾಕುತ್ತಿದ್ದೇನೆ. ಹೇಗೆ ಉತ್ತಮಪಡಿಸಬಹುದೆಂದು ಬಲ್ಲವರು ದಯವಿಟ್ಟು ಸೂಚಿಸಿ)

    ಉಣಿಸಂ ನೀಡಿರೆ ತಾಯಿವಕ್ಕಿ ಸಿಸುಗಂ ಮಾಣೆಂದು ಬಾಯ್ಮುಚ್ಚಿರಲ್
    ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ಪುಲಿಂ ತಿಂದಿರಲ್
    ಮಣಲೊಳ್ ಮಂದಿರಮಂ ತಿಮಿಂಗಿಲಮೊದಲ್ ಮೀನ್ಗಳ್ತಳೆರ್ದಾಗಲೇ
    ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ

    ಕಣ್ಣುಕಾಣದ ಮರಿಹಕ್ಕಿಗಳು ತಾಯಿ ಹಕ್ಕಿ ತಂದುಕೊಟ್ಟದ್ದನ್ನೆಲ್ಲ ತಿನ್ನುತ್ತವೆಯೇ ಹೊರತು ನಿರಾಕರಿಸುವುದಿಲ್ಲ. ನಾಯಿ ಬಾಲ ನೆಟ್ಟಗಿಟ್ಟು ನಡೆಯುವುದಿಲ್ಲ. ಹುಲಿ ಹುಲ್ಲು ತಿನ್ನುವುದಿಲ್ಲ. ಜಲಚರಗಳಾದ ಮೀನು ಮೊದಲಾದುವು ಮರಳಿನಲ್ಲಿ ವಾಸಿಸಲಾರವು – ಒಂದುವೇಳೆ ಇವೆಲ್ಲಾ ನಡೆದಾಗ, ಕಾರ್ಗಾಲದಲ್ಲಿ ಕುಣಿಯಬೇಕಾದ ನವಿಲೂ, ಅದಕ್ಕೆ ಮೊದಲೇ ಕುಣಿದೀತು.

    • ಸ್ವಲ್ಪ ತಾತ್ವಿಕ ವಿಚಾರ.. ಮೊದಲ ಮೂರು ಪಾದಗಳಲ್ಲಿ ಮೂಲಭೂತ ಅಸಾಧ್ಯತೆಗಳು ಉಕ್ತವಾಗಿವೆ. ಆದರೆ ಮಳೆಗೆ ಮುನ್ನ ನವಿಲು ಕುಣಿಯುವುದೇ ಇಲ್ಲವೆ? (ನನಗೆ ಗೊತ್ತಿಲ್ಲ) . ಇದೊ೦ದು ಹಗುರವಾದ ಸ೦ಗತಿಗೆ ಅಷ್ಟು ಗ೦ಭೀರ ಉಕ್ತಿಗಳನ್ನು ಕೊಡುವುದು ಸರಿಯಾದೀತೆ?

      • ನಿಮ್ಮ ಪ್ರಶ್ನೆ ಯುಕ್ತವಾಗೇ ಇದೆ ನೀಲಕಂಠ ಅವರೆ – ಆದರೆ ಇಲ್ಲಿ “ಹೇಗಾದರೂ” ಮಾಡಿ ಪದ್ಯಪೂರಣ ಮಾಡಬೇಕೆಂಬ ಭಾವವೇ ಹೆಚ್ಚಾಗಿ, ಇದನ್ನು ಮಾಡಿದ್ದಾಯ್ತು 🙂

    • ಇದು ದಲ್ ಸಲ್ವುದು ಯುಕ್ತಮಾರ್ಗದೆ ಸಮಸ್ಯಾಪೂರಣಕ್ಕುತ್ತರಂ
      (ಪುಲಿ ಎಂಬುದು ‘ಇ’ಕಾರಾಂತ ಶಬ್ದ. ಹಾಗಾಗಿ ಬಿಂದು ಬರುವುದಿಲ್ಲ.)

      • ಹಾ, ಪುಲಿಂ ಅನ್ನುವುದು ಸರಿಯಿಲ್ಲ ಎಂದು ಅನ್ನಿಸಿತ್ತು, ಆದರೆ ಸರಿಯಾಗಿ ಬೇರೆ ಪದ ಹೊಳೆಯದೇ ಅದನ್ನೇ ಬರೆದಿದ್ದೆ. ಆಮೇಲೆ ಸ್ವಲ್ಪ ಬದಲಾಯಿಸಿ ಬರೆದ ಉತ್ತರವಿಲ್ಲಿದೆ , ನೋಡಿ:

        ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ
        ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ
        ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್
        ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ

  4. ತುಣಿಯಲ್ಕಿಲ್ಲ ಪಿಯೂಸಿ ಮೆಟ್ಟಿಲನು ವೇಳ್ಕುಂ ಬಾಲೆ ವಿದ್ಯಾರ್ಥಿಗ-
    ಳ್ಗುಣಿಸಲ್ ಪ್ರೇಮದ ತುತ್ತ ಮುದ್ದಿನೊಳು ಪಪ್ಪಾಮಮ್ಮಿ ಬೆಪ್ಪಾಗುವರ್
    ಕಣೆ ಬಿಟ್ಟಂ ಮದನಂ ವಿಳಾಸದಲಿ ಬಾಲರ್ಮೀಸೆ ಮೆಲ್ಮೂಡುವಲ್
    ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ

    ಕಾರ್ಗಾಲಕ್ಕಿಂತಲೂ ಮುನ್ನ ಮಯೂರ ಮಯೂರಿಗಾಗಿ ನರ್ತಿಸುವುದಾದರೆ ಮೀಸೆ ಚಿಗುರುವ ಮುನ್ನ ತರುಣರು ತರುಣಿಗಾಗಿ ಕುಣಿಯಬಾರದೇ?

    ಬಹಳದಿನಗಳಿಂದ ಪದ್ಯಪಾನದಲ್ಲಿ ಭಾಗವಹಿಸದೆ ಹಳಗನ್ನಡ ಹೊಸತಾಗಿದೆ.ಪದ್ಯವೂ ಪೇಲವವಾಗಿದೆ… ದಯವಿಟ್ಟು ಸೈರಿಸಿಕೊಳ್ಳಿ

    • ಅಡ್ಡಿಯಿಲ್ಲ; ಪದ್ಯವು ಮಹನೀಯವಾಗದಿದ್ದರೂ ಸಹನೀಯವಾಗಿದೆ ಹೃದಯರಾಮ! 🙂

  5. ಕಣೆಯಂ ವೂಡಿರೆ ಕಾವನಾಣ್ಮಬರವಂ ಕಾಯುತ್ತುಮೌತ್ಕಂಠ್ಯದಿಂ
    ಪೆಣಮಾಗಿರ್ದ ವಿಯೋಗಿನೀಗಣಮರಂ ಬಾನೊಳ್ ಘನಾಭ್ರಾಳಿ ಸಂ-
    ದಣಿಸಲ್ ಕಾಂತಸಮಾಗಮಾಹಮರರೇ ! ಬಂತೆನ್ನುತಾಗಳ್ ಕರಂ
    ಕುಣಿದಿರ್ಕುಂ ನಲವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ!!

    ವಿಯೋಗಿನೀಗಣಂ + ಅರಂ (ಶೀಘ್ರವಾಗಿ)
    ಪೆಣಮಾಗಿರ್ದ – ಸತ್ತಂತಾಗಿದ್ದ (ವಿರಹಿಣಿಯರ ದಶ ಅವಸ್ಥೆಗಳಲ್ಲಿ ಕೊನೆಯದ್ದು)
    ಸೋಗೆಸೊಗದೊಳ್ – ನವಿಲುಗಳ ಸೊಬಗಿನಿಂದ ಅಥವಾ ಆನಂದದಿಂದ (ನವಿಲುಗಳ ರೀತಿಯಲ್ಲಿ ಎಂಬ ಭಾವ). ಸೊಗಶಬ್ದಕ್ಕೆ ಸ್ವಲ್ಪ ದೂರದ ಅರ್ಥ ಕಲ್ಪಿಸಿದಂತಾಯಿತೋ ಎಂಬ ಅಳುಕಿನೊದಿಗೆ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ 
    ಕಾಮಸಂತಪ್ತ ವಿರಹಿಣಿಯರ ಸಮೂಹ ಆಗಸದಲ್ಲಿ ಕಾರ್ಮೋಡಗಳು ಕವಿದಿರುವುದನ್ನು ಕಂಡಾಗ ಇನಿಯನ ಆಗಮನ ಸನ್ನಿಹಿತವಾಯಿತೆಂಬ ಸಂತಸದಿಂದ ಮಳೆಗಾಲಕ್ಕೆ ಮುನ್ನವೇ ನವಿಲುಗಳಂತೆ ಕುಣಿದಾಡಿತು ಎಂಬ ತಾತ್ಪರ್ಯ.

    • ಕುಣಿದಿರ್ಕುಂ ಭವದೀಯಕಲ್ಪನೆಗಳಿಂ ಮಚ್ಚಿತ್ತಮುಂ ಮೆಚ್ಚುತುಂ 🙂

      • ನವೀನಕ್ರಮದ ಈ ಪರಿಹಾರವು ಕ್ಲಿಷ್ಟವಾದರೂ ಸ್ವೀಕಾರ್ಯ:-)

    • ಮನದೊಳ್ ಸಂತಸವಾಯ್ತು ನಿಮ್ಮ ಕವಿತಾಶೂರತ್ವವಂ ನೋಡುತಾ |

  6. ಮಣಿಯುತ್ತುಂ,ಬಿರುಸಾದ ಗಾಳಿಯಲೆಯಲ್, ಸೊಂಪಾದ ಕಲ್ಪದ್ರುಮಂ,
    ಚಣಮುಂ ತಂಗದೆ ತೂಗೆ ತನ್ನ ಶಿರಮಂ ಲೋಲಾಡಿ,ನರ್ತಿಪ್ಪವೋಲ್ |
    ಗೆಣೆಯರ್ ಕಂಡಿದ ಪೇಳ್ಗುಮಾಪ್ತಜನರೊಳ್,ಸಂತೋಷದಿಂ ಪಿಗ್ಗುತುಂ,
    “ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ” ||

    • ತು೦ಬ ಮನೋಹರ ಚಿತ್ರ!!!!

      • ನೀಲಕಂಠರಿಗೆ ಧನ್ಯವಾದಗಳು.

    • ಅರರೇ! ನೂತನಮಾರ್ಗಮಲ್ತೆ ಪರಿಹಾರಕ್ಕಂ ನಮಿಪ್ಪೆಂ ಸದಾ.. 🙂

      • ಅರರೇ! ಕೊಪ್ಪಲತೋಟರಿಂತೊರೆಯೆ ತೋಷಿಪ್ಪೆಂ,ಸದಾ ವಂದಿಪೆಂ 🙂

    • ಸರಿಯೆಂಬೆಂ; ಸೊಗಸಾದುದೆಂಬೆನಿದಕಾಂ ಚೆಲ್ವಾದುದೀ ಪೂರಣಂ

      • ನಮಿಪೆಂ ಪದ್ಯದ ಪೂರಣಂ ಸರಿಯೆನಲ್ ಸೌಹಾರ್ದದಿಂ ಸೋದರರ್

  7. ವಿನೋದವಾಗಿ ….

    ತಣಿದಿರ್ಕಳ್ ಧರಿಸಿಂತುತಾಂ ಪ್ರಥಮಕಂ ನಾವೀನ್ಯ ವಿನ್ಯಾಸ ಭೂ-
    ಷಣಮಂ,ರೇಷ್ಮೆದುಕೂಲವಂ, ಮಣಿಯುತುಣ್ಮಿಂತಿಂದೆಸಂಕೀರ್ಣದೊಳ್
    ಮೊಣಕಾಲ್ ಮೇಲದನೆತ್ತುತುಂ ನಡೆದಿರಲ್ ಬಾಲಾಮಣಿಂ, ತನ್ನೊಡಂ
    ಕುಣಿದಿರ್ಕುಂ ನಲವಿಂದೆ ಸೋಗೆಸೊಗದೊಳ್,ಕಾರ್ಗಾಲಕಿಂ ಮುನ್ನಮೇ !!

    ಸೋಗೆ = ಉಟ್ಟ ಸೀರೆಯ ಉದ್ದವಾದ ನೆರಿಗೆ

    (ಮೊದಲ ಬಾರಿ ಸೀರೆಯುಟ್ಟು, ನಡೆಯಲು ಬಾರದೆ ನೆರಿಗೆಯನ್ನು ಮೇಲೆತ್ತಿಹಿಡಿದು (ಒದ್ದೆಯಾಗುವುದೇನೋ ಎಂಬಂತೆ !?) ನಡೆವ – ನಲಿವ ಬಾಲೆಯ ಚಿತ್ರಣ )

    • ಉಶಾ ಅವರೆ, ಕಲ್ಪನೆ ಚೆನ್ನಾಗಿದೆ…

    • ಕಲ್ಪನೆ ಚೆನ್ನಾಗಿದೆ. ರೇಷ್ಮೆದುಕೂಲ ಬಹುಶಃ ಅರಿಸಮಾಸವಾಗುತ್ತದೆ. ಬಾಲಾಮಣಿ ಎಂಬುದು ಇ ಕಾರಾಂತಶಬ್ದ ಹಾಗಾಗಿ ಬಿಂದು ಬರುವುದಿಲ್ಲವಲ್ಲ…

      • ಹೌದು; ಕಲ್ಪನೆ ಸೊಗಸಾಗಿದೆ; ಮಣಿಂ ಎಂಬುದನ್ನು ತಿದ್ದಬೇಕಿದೆ.

      • ಧನ್ಯವಾದಗಳು ಗಣೇಶ್ ಸರ್ , ಕೊಪ್ಪಲತೋಟ,
        ನಡೆದಿರಲ್ “ಬಾಲಾಟದಿಂ” – ಸರಿಯಾಗುವುದೇ?

  8. ಬಣಮಾಗಿರ್ದ ವಿಶಾಲ ನೀಲ ನಭಮಂ ನೋಡುತ್ತಿರಲ್ ಪಕ್ಷಿಗಳ್
    ಚಣದೊಳ್ ಛಂಗನೆ ಪಾರುತುಂ ಭ್ರಮೆಯ ಮೇಘಾಕಾರಮಂ ಪೊಂದಿರಲ್
    ಗಣಿಸಲ್ ಮೌಢ್ಯದಿ ವರ್ಷದಾಗಮನಕಂ ತಾಂ ರೆಂಕೆಯಂ ಬಿಚ್ಚುತುಂ
    ಕುಣಿದಿರ್ಕುಂ ನಲಿವಿಂದೆ ಸೋಗೆ ಬನದೊಳ್ ಕಾರ್ಗಾಲಕುಂ ಮುನ್ನಮೇ

    • ಸೊಗದಿಂದಂ ಕುಣಿಸಿರ್ಪಿರಲ್ತೆ ನವಿಲಂ ಸಂಭ್ರಾಂತಿ ಯಂ ತೋರುತುಂ 😉

      • ಓಮೆಂದೊಪ್ಪಿಗೆಯಿತ್ತೆನೀಗಳಿದಕಂ ಚೆಲ್ವಾದುದೀ ಪೂರಣಂ

  9. ಅಬ್ಬ!!! ಅ೦ತು ಇ೦ತು ಮೂರು ಸಾಲು ಹೆಣೆಯುವಷ್ಟರಲ್ಲಿ ಮತ್ತೇಭದೊಡನೆ ಕ್ರೀಡಿಸಿದ೦ತಾಯ್ತು. ನನ್ನ ಮೊದಲ ಕನ್ನಡ ವರ್ಣವೃತ್ತ. ತಪ್ಪಿದ್ದರೆ ದಯವಿಟ್ಟು ತಿದ್ದಬೇಕು.
    ವನವಾಸದ ಕೊನೆಕೊನೆಯಲ್ಲಿ ಭೀಮನ ಮನಃಸ್ಥಿತಿ… ಮಳೆಗಾಳಿ ಮೋಡಗಳನ್ನು ಹೊತ್ತೆರಗುವ೦ತೆ ತಾನೆ೦ದು ರಣದಲ್ಲಿ ಗದೆಯನ್ನು ಹೊತ್ತು ಪ್ರಹಾರದ ಸುರಿಮಳೆಗೈವೆನೋ ಎ೦ಬ ಕಾತರದಿ೦ದ ಮೀಸೆಯನ್ನು ಕುಣಿಸುತ್ತಿದ್ದುದು, ಅವನ ಆ ಸಮರವರ್ಷರ್ತು ಬಹ ಮುನ್ನವೇ ನವಿಲು ಕುಣಿಯುವ೦ತಿತ್ತು.

    ಗುಣಿಸುತ್ತು೦ ಕಲಿಭೀಮನಿರ್ದನಧಟಿ೦ ತಾನೆ೦ದುಮೆ೦ದು೦ ಮಹ-
    ದ್ರಣಮ೦ ಪೊಕ್ಕು ಗದಾಪ್ರಘಾತವೆರೆವೆ೦ ಕಾರ್ಗಾಳಿ ಮೈದೋರ್ವವೋಲ್
    ಕುಣಿಸುತ್ತು೦ ಪೊದೆಮೀಸೆರೆಕ್ಕೆಗಳನು೦ ತತ್-ದೃಶ್ಯಮೆ೦ತಿರ್ಕೆನಲ್
    ಕುಣಿದಿರ್ಕು೦ ನಲಿವಿ೦ದೆ ಸೋಗೆ ಸೊಗದೊಳ್ ಕಾರ್ಗಾಲಕಿ೦ ಮುನ್ನಮೇ

    • ಒಳ್ಳೆಯ ಪರಿಹಾರ..

    • ನೀಲಕಂಠ(ಮಯೂರ)ಸಮಸ್ಯೆಯನ್ನಿದೊ ನೀಲಕಂಠರೆ ಪೂರಿಸಲ್
      ಲೀಲೆಯಾದುದು; ಮಾಲೆಯಾದುದು ಪದ್ಯಪಾನವಿಧಾತ್ರಿಗಂ 🙂

  10. ಹೆಣಗಾಡಿರ್ದಿರೆ ಭೂಮಿ ಬೆಂದು ಧಗೆಯಿಂದುತ್ಕೃಷ್ಟತಾಪಾಗ್ನಿಯೊಳ್
    ಚಣವೊಂದಾಗಿರೆ ದೀರ್ಘ ವರ್ಷದವೊಲೇ ತಂಗಾಳಿಯಸ್ಪರ್ಶದಿಂ
    ಮಣಿದಿರ್ದುಂ ಪಡುವಾಣ್ಮ ಲೋಗಬೆತೆಗಂ ಸುಂಯ್ಗುಟ್ಟುತುಂ ಬಂದಿರಲ್
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ
    (ಬಿಸಿಲಿನಲ್ಲಿ ಭೂಮಿಯು ಬೇಯುತ್ತಿರೆ, ಗಾಳಿಯು ಜನದ ಸಂಕಟವನ್ನು ತಣಿಸಲು ಬಂದಾಗ, ಮರಗಳ ಸೋಗೆಯು ಕುಣಿಯಿತು)

    • ಚೆನ್ನಾಗಿದೆ ಕಾಂಚನಾ ಅವರೆ, ಎರಡನೇ ಸಾಲಿನಲ್ಲಿ ಒಂದು ಲಘು ಕಡಿಮೆಯಾಗಿದೆ. …typo ಅನ್ಸುತ್ತೆ…

    • ಪರಿಹಾರಮಾರ್ಗ ಚೆನ್ನಾಗಿದೆ.. ಲೋಕಬೆತೆ ಅರಿಸಮಾಸವಾಗುತ್ತದೆ. ಲೋಗಬೆತೆ ಎಂದು ಮಾಡಬಹುದೇನೋ. (ಎರಡೂ ತದ್ಭವಗಳಾಗುವ ಕಾರಣ ಸಾಧುವಾಗಬಹುದು) “ದೀರ್ಘವರ್ಷದವೊಲೇ” ಎಂದರೆ ಇನ್ನಷ್ಟು ಚೆನ್ನ. ಮೊದಲ ಪಾದದಲ್ಲಿ ವಿಸಂಧಿಯೂ ಆಗಿಬಿಟ್ಟಿದೆ

    • ಉತ್ಕೃಷ್ಟತಾಪಾಗ್ನಿ ಎಂದು ತಿದ್ದಬೇಕು.

      • ನನ್ನ ಸರಣಿ ತಪ್ಪುಗಳನ್ನು ತಿದ್ದಿರುವೆನೆಂದು ಭಾವಿಸಿದ್ದೇನೆ 🙂

  11. ತೃಣದಂತಾಗುತೆ ಬಾಡಿ ಪೋದ ಮೊಗತಾಂ ಜೀವಂತಮಾಗಿರ್ದುದುಂ
    ಗುಣಸಂಪನ್ನೆಯ ಕೂಡಮೇಳವಿಸಿರಲ್ ಪ್ರಸ್ತಾಪ ಬಾಂಧವ್ಯದಂ
    ಗೆಣೆಗಾರರ್ ಸಲೆ ಮೋಜಿನಿಂದೆ ನುಡಿದರ್ ಚಾಪಲ್ಯಮಂ ಹಂಗಿಸಲ್
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ!
    (ಮದುವೆಗೂ ಮುನ್ನಣ ಗೆಳೆಯನಲ್ಲಿಯ ಉತ್ಸಾಹವನ್ನು ಹಂಗಿಸಿದ್ದು..)

  12. ಎಣಿಸಲ್ಕಾ ಪದಿಮೂರು ಚೈತ್ರ ನವಮಿಗಳ್ ಸಂದುದಂ ಜ್ಞಾಪಿಸು
    ತ್ತಣಿಮಾಳ್ದಾ ಪದಿನಾಲ್ಕರೊಳ್ ಸುಗುಣೆಯು೦ ಶ್ರೀ ರಾಮನಂ ಪೂಜಿಸಲ್ I
    ಪಣತೊಟ್ಟಿರ್ದ ಶಿಖಿದ್ವಯ೦ಗಳವು ಅತ್ಯುತ್ಸಾಹದಿ೦ ನರ್ತಿಸಲ್
    ಕುಣಿದಿರ್ಕು೦ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಲಕಿ೦ ಮುನ್ನಮೇ II

    ಸೋಗೆ = ತೆಂಗಿನ / ಅಡಿಕೆ ಗರಿ

    ಇದು ಪಂಚವಟಿಯ ಪರ್ಣ ಮಂದಿರದಲ್ಲಿ, ತಮ್ಮ ೧೪ ನೆಯ ವರ್ಷದ ವನವಾಸದಲ್ಲಿ ಸೀತಾ, ಲಕ್ಷ್ಮಣರು ಶ್ರೀ ರಾಮನ ಜನ್ಮ ದಿನವನ್ನು ಆಚರಿಸುತ್ತಿರುವ ಕಲ್ಪನೆ.ಅಲ್ಲಿ ವನವಾಸ ಮುಗಿಯುವುದೆಂಬ ಉತ್ಸಾಹವೇ ಮುಖ್ಯ . ಆಗ ಅಲ್ಲೇ ಇದ್ದ ಪ್ರಾಣಿ ಪಕ್ಷಿ ಸಂಕುಲಗಳು; ಗಿಡ, ಮರ( ಪದ್ಯದಲ್ಲಿ ನವಿಲುಗಳು ಮತ್ತು ತೆಂಗಿನ ಮರಗಳು ಮಾತ್ರವಿದೆ 🙂 ) ,ಬಳ್ಳಿಗಳು ಆ ದಿನವನ್ನು ವಿಶೇಷವಾಗಿ ಅಭಿವ್ಯಕ್ತಿ ಪಡಿಸಿಕೊಂಡು ಆಚರಿಸಿಕೊಂಡವು ಎನ್ನುವುದು ಕಲ್ಪನೆಯ ತಾತ್ಪರ್ಯ .

    • ಭಾಗ್ಯಲಕ್ಷ್ಮಿಯವರೆ, ನಿಮ್ಮ ಪದ್ಯದ ಮೊದಲನೇ ಸಾಲಿನಲ್ಲಿ “ನವಮಿಗಳ್” ಎಂಬಲ್ಲಿ… ನನನಾ – ನಾನಾನ ನಾನಾನನಾ ಆಗಬೇಕು… ಅದೇರೀತಿ, “ಸುಗುಣೆಯು೦” ಇಲ್ಲಿಯೂ ಸಹ…

      • ಧನ್ಯವಾದಗಳು . ‘ಚೈತ್ರ ಬರಿಸಂಗಳ್ ‘ ಅಂದರೆ ಸರಿಯಾಗುವುದೇ ? . ”ಸುಗುಣೆಯು೦” ಅನ್ನುವಲ್ಲಿ ತಪ್ಪಿದೆಯೇ ?

        • ಕ್ಷಮಿಸಿ, ಸುಗುಣೆಯುಂ ಸರಿಯಾಗಿತ್ತು…

        • ಚೈತ್ರಬರಿಸಂ ಅರಿಸಮಾಸಂ 😉

          • ಪೂರಣಕ್ರಮವು ತುಂಬ ಚೆನ್ನಾಗಿದೆ. ಆದರೆ ಪದ್ಯರಚನಾಶೈಲಿ ಮಾತ್ರ ಮತ್ತೂ ಮಾಗಬೇಕಿದೆ.

          • ಅದೇ ವಿಷಯದಲ್ಲಿ ಸಂಶಯವಿತ್ತು . ಇದು ಸರಿ ಪಡಿಸುವ ಯತ್ನ …

            ಎಣಿಸಲ್ಕಾ ಪದಿಮೂರು ಚೈತ್ರ ನವಮೀ ಜನ್ಮೋತ್ಸವಾಮೋದಮೆ೦
            ದಣಿಮಾಳ್ದಾ ಪದಿನಾಲ್ಕರೊಳ್ ಸುಗುಣೆಯು೦ ಶ್ರೀ ರಾಮನಂ ಪೂಜಿಸಲ್ I
            ಪಣತೊಟ್ಟಿರ್ದ ಶಿಖಿದ್ವಯ೦ಗಳವು ಅತ್ಯುತ್ಸಾಹದಿ೦ ನರ್ತಿಸಲ್
            ಕುಣಿದಿರ್ಕು೦ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಲಕಿ೦ ಮುನ್ನಮೇ II

            ಕೆಲವೊಮ್ಮೆ ಸಮಾಜದ ಕೆಲವೊಂದು ಘಟನೆಗಳು ಅರಿ ಸಮಾಸವನ್ನು , ವ್ಯಾಕರಣ ದೋಷಗಳನ್ನು ಸಮರ್ಥಿಸುವ೦ತಿದ್ದರೆ …. ? ತಪ್ಪೇ ಸರಿಯೆಂದು ತೋರುವುದು.

          • @ R. Ganesh Sir,
            ಆಚಾರ್ಯರ ಅಭಿಪ್ರಾಯಗಳಿಗೆ ಗೃಹಿಣಿ ವೃಂದದ ಓರ್ವ ವಿದ್ಯಾರ್ಥಿಯಾಗಿ ಧನ್ಯವಾದಗಳು .

  13. ಈ ಗಣಕ ಯಂತ್ರವನ್ನು ಮಕ್ಕಳಾಟಿಕೆಯಾಗಿ ಮಾಡಿಕೊಂಡು TRAIL & ERROR METHOD ನಲ್ಲಿ ಏನೋ ಹುಡುಕುವಾಗ ಸಿಕ್ಕಿದ್ದು ಈ ಬ್ಲಾಗ್. ಅತ್ಯಂತ ಸಾಮಾನ್ಯ ಬುದ್ಧಿಯುಳ್ಳ ಗೃಹಿಣಿಯಾದ ನನಗೆ ಕನ್ನಡ ಕಾವ್ಯದ ಬಗ್ಗೆ ನಿಮ್ಮ ಬ್ಲಾಗ್ ಕುತೂಹಲ ಮೂಡಿಸಿದೆ. ನಾವೂ ಕಲಿಯಬಹುದಾ? ಬರೆಯಲಂತೂ ಸಾಧ್ಯವಿಲ್ಲ. ಗೊತ್ತಿದೆ. ಓದಿಯಾದರೂ ಸಂತೋಷಪಡಬಹುದು. ಮನಸ್ಸಿಗೆ ಸುಖವಾಗುವ ಹಾಗೆ ತುಸು ಕಾಲ ಕಳೆದ ತೃಪ್ತಿಗೆ ಅವಕಾಶ ಸಿಗುವಂತೆ, ದಯವಿಟ್ಟು ತಮ್ಮ ಹಿಂದಿನ ಪಾಠಗಳನ್ನು ನೋಡುವ ಬಗೆ ತಿಳಿಸಿ ದ್ರೋಣಾಚಾರ್ಯರೇ.

    • ದ್ರೋಣರು ತಿಳಿಸುವುದಿಲ್ಲ. ಏಕಲವ್ಯರೇ ನೋಡಿ ಕಲಿಯಬೇಕು. 🙂
      ಆದರೆ ಇಲ್ಲಿ ಯಾರೂ ದ್ರೋಣರಿಲ್ಲ 🙂
      ಇಲ್ಲಿ ಹೆಚ್ಚಿನ ಪಕ್ಷ ಇರುವವರು ಸಾಮಾನ್ಯ ಬುದ್ಧಿಯುಳ್ಳವರೇ, ಹಾಗಾಗಿ ನಿಮಗೆ ಆ ಭಯ ಬೇಡ. ಬರೆಯಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ಎರಡು ವರ್ಷದ ಹಿಂದೆ ಮೊದಲ ಪದ್ಯ ಬರೆದವರು ಇಂದು ನೂರಾರು ಪದ್ಯಗಳನ್ನು ಆಗಲೇ ಬರೆದಾಗಿದೆ ಮತ್ತು ಬರೆಯುತ್ತಿದ್ದಾರೆ.
      ಈ ತಾಣದ ಮೇಲಿನ ತುದಿಯ ಮೆನುಗಳಾದ – ಪದ್ಯವಿದ್ಯೆ, ಅಲಂಕಾರ ಪರಿಚಯ – ಗಳಲ್ಲಿರುವ ವೀಡಿಯೋ ತರಗತಿಗಳನ್ನು ನೋಡಿ ಮತ್ತು ಅಲ್ಲಿರುವ ಕೆಲವು ಲಿಖಿತ ಪುಸ್ತಕಗಳನ್ನು ಓದಿ. ಬಹಳ ಬೇಗ ಪದ್ಯವೊಂದನ್ನು ರಚಿಸಿ ಪೋಸ್ಟ್ ಮಾಡುತ್ತೀರಿ ಎಂದು ಭಾವಿಸಿದ್ದೇವೆ.

  14. ಮಣಿದಿರ್ಪರ್ ಮನತುಂಬಿರಲ್ ಭಕುತಿಯಿಂ ಷಷ್ಟೀಸಮಾರಂಭದೊಳ್
    ತಣಿದಿರ್ಪಂ ಪಣೆಗಣ್ಣನಾತ್ಮಜನವಂ ಜಾತ್ರಾಮಹೋತ್ಸವದಿಂ
    ಘನಮೇಘಾಸ್ವನಮಂ ಬೆಳ್ಳಿಯ ರಥದಾ ಚಕ್ರಂಗಳಂ ಮಾಡಿರಲ್
    ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ

    ರಘುವಂಶದ ಮೊದಲನೆಯ ಸರ್ಗದ ದಿಲೀಪ ಸುದಕ್ಷಿಣೆಯರ ಆಶ್ರಮಗಮನದ ಚಿತ್ರಣ ಮತ್ತು ಇತ್ತೀಚೆಗೆ ನಡೆದ ಸುಬ್ರಹ್ಮಣ್ಯ ಷಷ್ಟಿಯ ಜಾತ್ರೆಯಿಂದ ಸ್ಫೂರ್ತಿ ಪಡೆದ ಪದ್ಯ.ಸಜ್ಜನರಾವ್ ವೃತ್ತದಲ್ಲಿರುವ ಸ್ವಾಮಿಗೆ ಮಾರ್ಗಶಿರ ಷಷ್ಟಿಯಂದು ಬೆಳ್ಳಿರಥದ ಮೆರವಣಿಗೆ ನಡೆಯುತ್ತದೆ. ಆ ರಥದ ಚಕ್ರಗಳು ಮಾಡಿದ ಶಬ್ದವು ಗುಡುಗಿನ ಶಬ್ದದ ಹಾಗೆ ಕೇಳಿಸಿ ಹತ್ತಿರದಲ್ಲಿದ್ದ ನವಿಲುಗಳು ಕುಣಿದವು ಎಂಬ ಕಲ್ಪನೆ. ಅವತ್ತು ನವಿಲುಗಳು ಇಲ್ಲದಿದ್ದರೂ ನವಿಲಿನ ಗರಿಗಳನ್ನೂ ,ಅವುಗಳಿಂದ ಮಾಡಿದ ಬೀಸಣಿಗೆಗಳನ್ನು ಮಾರುತ್ತಿದ್ದರು.ಅದನ್ನು ನೋಡಿ ಒಂದು ರೀತಿಯ ದುಃಖವೇ ಆಯಿತು.

    • Good imagery. Lines two and three needs prosodic fine tuning

      • ಧನ್ಯವಾದಗಳು ಚಂದ್ರಮೌಳಿಯವರೆ. ಈಗ ಸರಿಯಾಗಿದೆಯೇ ತಿಳಿಸಿರಿ.

        ಮಣಿದಿರ್ಪರ್ ಮನತುಂಬಿರಲ್ ಭಕುತಿಯಿಂ ಷಷ್ಟೀಸಮಾರಂಭದೊಳ್
        ತಣಿದಿರ್ಪಂ ಪಣೆಗಣ್ಣನಾತ್ಮಜನವಂ ಜಾತ್ರಾಮಹೋತ್ಸಾಹದಿಂ
        ಘನಮೇಘಸ್ವನಮಂದು ದಿವ್ಯರಥದಾ ಚಕ್ರಂಗಳಿಂ ಮೂಡಿರಲ್
        ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ

  15. ಅಣಿಗೊಂಡುಂ ಜರುಗಿದ್ದಿರಲ್ ಬೆಸೆದುದಾ ವೈವಾಹ ಹೇಮಂತದೊಳ್,
    ಎಣೆಯಿಂದಲ್ ನೆರವೇರಿರಲ್ ಬಸಿರಿಗಂ ಸೀಮಂತಕಾರ್ಯಂಗಳಾ-
    ಚಣ ಮಂದಸ್ಮಿತ ಚೆಲ್ವಿನಾಮೊಗದೊಳುಂ, ನಾಚಿಂತುನೀರಾಗಿರಲ್,
    ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್! ಕಾರ್ಗಾಲಕಿಂ ಮುನ್ನಮೇ !!

    (ಸೋಗೆ = ಕಣ್ಣಿನ ತುದಿಗೆ ತಿದ್ದಿದ ಕಾಡಿಗೆಯ ಗೆರೆ)

    ಎಣೆಯಿಂದಲ್ ನೆರವೇರಿರಲ್ ಸಿಸುವಿಗಂ ನಾಮಾಂಕನಂ ಚಂದದಿಂ
    ತಣಿದುಂತಾಂ ಮುದುಡಮ್ಮನಾ ಮಡಿಲನುಂ ಪೋಕ್ಕಂದು ಪೆಚ್ಚಾಗುತುಂ
    ಮಣಿಮಾಲಾಭರಣಂಗಳೊಳ್ ಬೆರಗಿನಿಂದಾಡಿರ್ಕೆ ಕಂದಮ್ಮನುಂ
    ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್! ಕಾರ್ಗಾಲಕಿಂ ಮುನ್ನಮೇ !!

    (ಸೋಗೆ = ಮಡಿಲು / ಅಮ್ಮನ ಮಡಿಲು)

    ಹೇಮಂತದಲ್ಲಿ ವಿವಾಹವಾಗಿ, ಕಾರ್ಗಾಲಕ್ಕೆ ಮುನ್ನವೇ ನಡೆದ ಸೀಮಂತ / ನಾಮಕರಣದ ವರ್ಣನೆ !!

    • ಸೋಗೆ ಎಂಬುದರ ವಿವಿಧಾರ್ಥಗಳನ್ನು ಬಳಸಿಕೊಂಡಿದ್ದು ಚೆನ್ನಾಗಿದೆ.

      • ಅಹುದಹುದು….ಒಳ್ಳೆಯ ಕಲ್ಪನೆಗಳು. ಬಹುಶಃ ಸ್ತ್ರೀಯರಿಗೇ ಹೊಳೆಯಬಲ್ಲ ಚೆಲುವಾದ ಚಮತ್ಕಾರಗಳು.

  16. ಗಣದೊಳ್ ತಾಂ ದ್ವಿಪಮೆಲ್ಲಮುಂ ನಡೆದಿರಲ್ಕಂತಾ ಮದಂಬೊತ್ತು ಮೇಣ್
    ನೊಣಗಳ್ ಪಾರಿರೆ ಕರ್ಣಕಂ ರಸಮಿದೆಂತೆಂಬಾಸೆಯಿಂ ಪೀಡೆಯಿಂ
    ದಣಿವನ್ನಂ ಮಿಗೆ ಬೀಸಿರಲ್ ಗುಡುಗಿದೇಂ ಬಂದಿರ್ದುದೇನೆಂದು ದಲ್
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ
    (ಮತ್ತವಾದ ಆನೆಗಳೆಲ್ಲವೂ ಸಮೂಹದಲ್ಲಿ ಹೋಗುತ್ತಿರುವಾಗ, ಅವುಗಳ ಗಂಡಸ್ಥಲವನ್ನು ರಸವೆಂಬ ಆಸೆಯಿಂದ ನೊಣಗಳು ಮುತ್ತುತ್ತಿರುವಾಗ ಅವುಗಳನ್ನು ಓಡಿಸಲು, ದಣಿವಾಗುವವರೆಗೆ ಕಿವಿಯನ್ನು ಬೀಸುವಾಗ ಉಂಟಾದ ಶಬ್ದವನ್ನು ಕೇಳಿ ‘ಇದೇನು ಗುಡುಗೇ ಬಂತೆ?’ ಎಂದು ನವಿಲು ಸೊಗದಿಂದ ನಲವಿಂದ ಕಾರ್ಗಾಲಕ್ಕಿಂತಲೂ ಮೊದಲೇ ಕುಣಿದಿತ್ತು )

    • ಆಹಾ! ಎಲ್ಲಿಂದ ಎಲ್ಲಿಗೆ link ಕೊಟ್ಟಿದ್ದೀಯಪ್ಪಾ ಕೊಪ್ಪಲತೋಟದ ಮತ್ತೇಭಗಳ ಧಾಳಿ ಚೆನ್ನಾಗಿದೆ…

    • your spotlight vids today in germany are unbelievably poor. do you want to draw people away from yt?the competion has warner and the music vids on the startpage.some turks still watch turkish soap opera here according to your charts.everybody else seems to be on the run.is it still worth uploading vids here?all my work here for nothing.and yt features pimple videos in Germany.unbelievable. partners that can`t do.

  17. ಗುಣಿಯಾಗಿರ್ಪನ ಚಾರುದತ್ತನ ಗುಣಕ್ಕಂ ಸೋಲ್ತು ರಾಗಾನ್ವಿತಳ್
    ಮಣಿಯುತ್ತಂತು ವಸಂತಸೇನೆ ಕನಕನ್ಯಾಸಂಗುಡಲ್, ರೂಪದಿಂ
    ಕ್ಷಣದೊಳ್ ಹರ್ಷಿತನಾದನಂ ನಿರುಕಿಪಂ ಮೈತ್ರೇಯನೇ ಪೇಳ್ದಪಂ
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ|
    (ಗುಣವಂತನಾದ ಚಾರುದತ್ತನ ಗುಣಕ್ಕೆ ಮಾರುಹೋದ ವಸಂತಸೇನೆ ಅನುರಾಗದಿಂದ ಮಣಿದು ಅವನಲ್ಲಿ ಕನಕನ್ಯಾಸವನ್ನು ಕೊಡಲು ಬಂದಾಗ, ಅವಳ ರೂಪದಿಂದ ಕ್ಷಣದಲ್ಲಿಯೇ ಹರ್ಷಿತನಾದ ಚಾರುದತ್ತನನ್ನು ಕಂಡು ಮೈತ್ರೇಯ “ನಲವಿಂದ ಮಳೆಗಾಲಕ್ಕೂ ಮೊದಲೇ ನವಿಲು ಕುಣಿಯುತ್ತಿದೆ’ಎಂದನು.)

  18. ಮಣಿಯಂ ಪೋಲ್ತ ಪತಾಕೆಯಂ ತಳೆದು ರಾಜದ್ರಾಜಗಾಂಭೀರ್ಯದಿಂ-
    -ದಣಮುಂ ಬಾಗದೆ ಬೀಗುತುಂ ನಡೆದಿರಲ್ ಪೆಣ್ಸೋಗೆಯಂ ಕಾಣುತುಂ
    ಮಣಿಸಲ್ ಮನ್ಮಥಬಾಣಪೀಡಿತತನು ಪ್ರಾವೃಟ್-ಪ್ರಿಯಂ ಚಂಚಲಂ
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ!
    (ಮಣಿಯಂತೆ ಇರುವ ಪತಾಕೆಯನ್ನು (ತಲೆಯಲ್ಲಿ) ತಳೆದು,ರಾಜದ್ರಾಜಗಾಂಭೀರ್ಯದಿಂದ, ಸ್ವಲ್ಪವೂ ಬಾಗದೇ ಬೀಗುತ್ತಾ ನಡೆದಿರುವಾಗ, ಒಂದು ಹೆಣ್ಣು ನವಿಲನ್ನು ಕಂಡು,ಅದನ್ನು ಮಣಿಸಲು ಮನ್ಮಥಬಾಣಪೀಡಿತವಾದ ದೇಹವುಳ್ಳ, ಮಳೆಗಾಲವನ್ನು ಪ್ರೀತಿಸುವ ಚಂಚಲವಾದ ನವಿಲು ಕಾರ್ಗಾಲಕ್ಕೂ ಮುನ್ನವೇ ಸೊಗದಿಂದ ನಲವಿಂದ ಕುಣಿದಿತ್ತು.)

  19. ಮಣಿಸಲ್ ಪಲ್ಲವಕೀರ್ತಿಕೇತನಮನೇ “ನೋಂತಿರ್ಪ ಶರ್ಮಂ” ಸ್ವಯಂ
    ರಣವೀರರ್ಕಳನೆಲ್ಲರಂ ಕಳಿದು ಸಾರಿರ್ಪಾಗಳಾ ವಾರ್ತೆಯಂ
    ಘೃಣಿಗಂ ಸಾಕಿದ ತಂದೆಗಂ ತಿಳುಪುತುಂ ದೂತಂ ಸ್ವಯಂ ಪೇಳ್ದಪಂ
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ|
    (ಪಲ್ಲವರ ಕೀರ್ತಕೇತನವನ್ನು ಮಣಿಸಲೆಂದು ವ್ರತತೊಟ್ಟ “ಮಯೂರಶರ್ಮ” ರಣವೀರರೆಲ್ಲರನ್ನು ಕಳಿದು(ಕೊಂದು) ಬಂದಾಗ ಆ ವಾರ್ತೆಯನ್ನು ಅವನ ಸಾಕು ತಂದೆಗೆ ತಿಳುಹಿಸುತ್ತ ದೂತ ಹೀಗೆ “ಮಳೆಗಾಲ ಬರುವುದಕ್ಕೂ ಮೊದಲೇ ಮಯೂರ ನಲವಿಂದ ಕುಣಿಯುತ್ತಿದೆ” ಎಂದು ಹೇಳುತ್ತಾನೆ.)

    • ಸೂಪರ್ ಪೂರಣ ಕೊಪ್ಪಲತೋಟ….. ನೋಂತಿರ್ಪ ಶರ್ಮಂ 😉 😀

    • very unique and superb. but, mayUra word is not in the samasye line. So, we have to imagine even dhoota is making a gamya roopaka(comparing suggestively Mayura verma and sOge) here 🙂

    • ಚೀದಿಶ್ರೀಶರೀರ್ವರಿಗೂ ಧನ್ಯವಾದಗಳು.. ದೇವುಡು ಅವರ ಮಯೂರ ಕಾದಂಬರಿಯಲ್ಲೋ, ಅಥವಾ ಅದನ್ನು ಆಧರಿಸಿ ಮಾಡಿದ ಚಲನಚಿತ್ರದಲ್ಲೋ
      “ಮಯೂರಶರ್ಮ ಸುಖವಾಗಿ ಶ್ರೀಶೈಲವನ್ನು ತಲುಪಿದ” ಎಂಬ ವಿಷಯವನ್ನು ಈಶಭಟ್ಟರಿಗೆ ತಿಳಿಸುವ ದೂತ “ನವಿಲು ತನ್ನ ಬಳಗವನ್ನು ಸೇರಿತು” ಎಂದು ಹೇಳುವಂತೆ ಚಿತ್ರಿಸಿದ್ದು ನೆನಪಿಗೆ ಬಂತು. ಹಾಗಾಗಿ ‘ನೋಂತಿರ್ಪ ಶರ್ಮ’ನನ್ನು ಸೋಗೆ ಎಂದು ಬಳಸಿಕೊಂಡೆ 😉

    • ಇದೇ ಯೋಚನೆ ನನಗೂ ಬಂದಿತ್ತು. ನಾನು ಕಾರ್ಗಾಲ ಎಂದರೆ ಕೇಡುಗಾಲ ಅಂತಲೂ ಆಗಬಹುದು, ಶ್ಲೇಷ ಒಪ್ಪುತ್ತದೆ ಎಂದು ಯೋಚಿಸಿದ್ದೆ. ಅದು ಪಲ್ಲವರ ಮಾತು ಆಗುತ್ತದೆ. ಕೊಪ್ಪಲತೋಟರಿಗೆ ಸಸ್ನೇಹ ಅಭಿನಂದನೆಗಳು

    • koppalatOTa ‘ನೋಂತಿರ್ಪ ಶರ್ಮಂ’… 😉

  20. ಯಾವುದೋ ಒಂದು ಸೋಗೆ ಹಾಗೆ ಆಡಿದರೆ, ಇಡಿಯ ಸಂಕುಲಕ್ಕೇ ಕಲಂಕವೆ? ಆಗುತ್ತಪ್ಪ ಎಂಥವರಿಗೂ ವಿಭ್ರಮೆ!
    ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ
    ಗಣಿಸಲ್ ದೋಷಮೆನುತ್ತುಮೊಂದು ನವಿಲಂತಾಡಿರ್ದಿರಲ್ ಸಾಧುಮೇಂ?
    ಕುಣಿದಾವೇನನಿತೇ ವಲಂ ನವಿಲುಗಳ್ ಮಿಕ್ಕೆಲ್ಲ ಹುಚ್ಚೆದ್ದು ತಾಂ
    ಗುಣಿಗುಂ ತಪ್ಪದ ಚಿತ್ತವಿಭ್ರಮಮುಮಾ ಕಞ್ಜಾರದೊಳ್ ಕ್ಷಮ್ಯಮೈ||

    • ನಿಮ್ಮೀ ಮಾರ್ಗಕಮಾವಗಂ ಸಲುವರಾರ್ ರಂಪಾಖ್ಯರಿಂಪೆಂಬೆನಾಂ 🙂

      • ಸುಮ್ಮಾನಂ ಗಡ; ಹಾದಿರಂಪರ ಕವಿತ್ವಂ ಸುಂದರಂ ಸ್ವಾಭಿಜಾ-
        ತ್ಯಮ್ಮೂಡಲ್ (ಸು+ಆಭಿಜಾತ್ಯಂ+ಮೂಡಲ್) ಪ್ರಕೃತಪ್ರಯತ್ನದೆ ಮದೀಯಂ ಮಾನಸಂ ಮೋದದಿಂ
        ದುಮ್ಮಾನಕ್ಕಿನಿಸಿಲ್ಲದಾಗಳೆಡೆ; ಈ ಸದ್ಬೋಧೆಯಿಂ ಹರ್ಷಿಕುಂ||

        • Thanks for giving 75% marks – ತ್ರಿಪಾದಶಾರ್ದೂಲ!
          ನವಿಲಂಥ ನವಿಲೆ ಅಂತು
          ಬವಣೆಗೊಳಲ್, ಮೇಣಮೋಹಕ ಮಿಗದ ಪಾಡೇಂ?
          ರವಮೇ ಗಾಯನ ಹುಲಿಯೊಳ್
          ತಿವಿತಮೆ ನಾಟ್ಯಮೆನಲಚ್ಚರಿಯೆ ತ್ರೈಪಾದ್ಯಂ (three legged dance)|| 🙂

          • ಕೊಪ್ಪಲತೋಟನ ಪದ್ಯಪಾದವನ್ನೇ ನಾನು ಮೂರು ಸಾಲುಗಳ ಮೂಲಕ ಪೂರೈಸಿದ್ದು! ಬೇಕಿದ್ದಲ್ಲಿ ಆದಿಪ್ರಾಸವನ್ನೇ ಗಮನಿಸಿ ನೋಡಿರಿ!!

          • ಗಣೇಶರೆ,
            ಕ್ಷಮೆ ಕೋರುತ್ತೇನೆ.

      • Tnx koppalatOTa

        • ಕ್ಷಮೆಯಂ ಕೋರುವುದೇತಕಯ್ ಗೆಳೆಯ! ನಿಮ್ಮೀ ಮಾತು ಮನ್ಮಾನಸ-
          ಕ್ಕಮಮಾ ಭಾರಮದಾಗದೇಂ? ಲಘುವಿನೋದಕ್ಕಾಸ್ಪದಂ ಸಲ್ಲದೇ?
          ಹಿಮಗಂಭೀರತೆಯಾಗೆ ತಾಣಮಿದು ಕೇಳಯ್ ಪದ್ಯಪಾನಂ
          ಸಖರ್
          ಕ್ರಮದಿಂ ಜಾರಿಕೊಳಲ್ಕೆ ಯತ್ನಿಸರೆ ಪೇಳಿಂ ನಮ್ಮ ಸೌಹಾರ್ದದಿಂ?

    • I withdraw my apologies. Let padyapaana prosper greatly. But,
      ಲಘುವಿನೋದಕ್ಕಾಸ್ಪದಂ ಭವದ್ಮತಮಿರಲ್
      ನಘನಹಾಸ್ಯಮನೊಂದನುಂ ಮಾತ್ರಮೇ|
      ಮಘ(wealth)ಮೆಂದರಿತನನಾಗೀಗಳೆಚ್ಚರಿಸದಿರೆ
      ಅಘವ ಗೈಯುವನಲ್ತೆ ನಿರ್ವಿಘ್ನದಿಂ|| 🙁

  21. ಗಣದೊಳ್ ಖೇಚರಯೋಷೆಯರ್ ಧರಣಿಗಂ ಸಾರಲ್ ವಿಹಾರಕ್ಕೆ ಪೂ-
    ಗಣೆಯಂ ಬಿಲ್ವಿಡಿದಂತೆ ಕಾಣ್ಬುದವರಾ ವಸ್ತ್ರಂಗಳಿಂ ರತ್ನಭೂ-
    ಷಣದಿಂ, ದಿಟ್ಟಿಯ ಕರ್ಪೆ ಮೇಘಚಯದಂತೆಯ್ದಾಗಳಾ ಭ್ರಾಂತಿಯಿಂ
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ!
    (ಗುಂಪುಗೂಡಿಕೊಂಡು ಖೇಚರವನಿತೆಯರು ಭೂಮಿಗೆ ವಿಹಾರಕ್ಕೆಂದು ಬರಲು, ಅವರ ವಸ್ತ್ರಭೂಷಣಗಳಿಂದ ಕಾಮನೇ ಬಿಲ್ಲು ಹಿಡಿದಂತೆ ಕಾಣುತ್ತಿತ್ತು. ಅವರ ಕಣ್ಣ ದೃಷ್ಟಿಯ ಕಪ್ಪಿನಿಂದ ಮೋಡಗಳೆ ಬಂದುವು ಎಂಬ ಭ್ರಾಂತಿಯಿಂದ ನಲವಿಂದ ನವಿಲು ಕುಣಿದಿತ್ತು)

    • ಕೊಪ್ಪಲತೋಟನ ಐದು ಅಭಿನವ-ಅಭಿರಾಮಪೂರಣಗಳಿಂದ ನಲಿದ ನನ್ನ ಮನೋಮಯೂರವು ಈ ರೀತಿಯ ಪ್ರತಿನವಪೂರಣವನ್ನು ನಿವೇದಿಸುತ್ತಿದೆ:

      ಸೃಣಿಮುಕ್ತೇಭದ ಪಾಂಗಿನಿಂ ಪ್ರತಿಭೆಯುಂ ಪಾಂಡಿತ್ಯಮುಂ ಭಟ್ಟನಾ
      ಅಣಿಯಾಗಲ್ಕವಧಾನವಾರ್ಷುಕದಿನಂ ಮೇಣ್ ದೂರಮಿರ್ದಾಗಳುಂ|
      ಗುಣಿಗಳ್ಗೀ ನವಪದ್ಯಪಂಚಕಮಯೂರಂ ಮೋದಮೀಯಲ್ಕಿದೋ!
      ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ||

    • ಖೇಚರಯೋಷೆಯರ್ – ಶಬ್ದಾಪವ್ಯಯ!
      ಮಾತ್ರಂ ’ಯೋಷೆ’ಯರೆಂದು ಪೇಳ್ದೊಡಮದೇ ಸಾಕಿತ್ತು ಭಟ್ಟಯ್ಯ ಕೇಳ್
      ಪತ್ರಂ ತಾನಿರದಿರ್ದೊಡೇಂ ನಭದೆ ತೇಲಾಡರ್ದಳಾವಳ್ ಗಡಾ? 😉

  22. Somashekhara sharmaru yaako kaanisalillavalla kshemavaagiddare taane

    • Sharmaru Germany-gEnU hOgilla 🙂 muMbaruva aShTAvadhAnada AyOjaneyalli muLugiddAre.

    • NamaskAra badarinAthare, How are you doing, work pressure from few weeks, otherwise all good 🙂

      Here is my attempt for samasye

      ದಣಿದಿರ್ಪಾರ್ತಮಯೂರನರ್ಕನೆಸೆಗಲ್ ಸಂತಾಪಮಂ ತೀಕ್ಷ್ಣದಿಂ
      ವ್ರಣಪಾದಾಂಘ್ರಿಯನೂರಲೊಲ್ಲೆನೆನುತುಂ ವಕ್ರಪ್ಲುತಂಗೆಯ್ಯುತೊ-
      ರ್ಚಣದೊಳ್ ಚುಯ್ಯಿಪ ದಗ್ಧನಿರ್ಪನೆಲನಂ ಮೀಂಟಲ್ಕೆ ತೋರ್ಗುಂ ಗಡಾ
      ‘ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ’

      • ಪ್ರಿಯ ಸೋಮಾ! ಪಾದ ಮತ್ತು ಅಂಘ್ರಿ ಎರಡೂ ಕಾಲನ್ನೇ ಕುರಿತ ಪದಗಳು.ಯಾವುದಾದರೂ ಒಂದು ಸಾಕು:-) ಇಲ್ಲವಾದರೆ ಪುನರುಕ್ತಿದೋಷ ಬಂದೀತು. ಪದ್ಯದ ಕಲ್ಪನೆ ಚೆನ್ನಾಗಿದೆ. ಆದರೆ ಅದೇಕೋ ಪದ್ಯರಚನಾಶಯ್ಯೆ (ಅಂದರೆ ಪದ್ಯದ ಪದಬಂಧ-ವಾಕ್ಯರಚನಾಕ್ರಮ ಇತ್ಯಾದಿ) ಸ್ವಲ್ಪ ಬಳಸಾಯಿತು (Winding); ಪ್ರಯತ್ನಘಟಿತವೆಂಬಂತೆ (Efforted) ತೋರಿದೆ. ಹಿಂದೆ ಎಷ್ಟೋ ಬಾರಿ ತುಂಬ ಒಳ್ಳೆಯ ಶೈಲಿಯಲ್ಲಿ ಮಿಂಚಿದ ನಿನಗೆ ನಿನ್ನ ಹದವಾದ ಜಾಡನ್ನು ಮತ್ತೆ ತುಳಿಯಲು ಕಷ್ಟವಾಗದು.

        • ಗಣೇಶ್ ಸರ್,

          ಹೌದು, ನನಗೂ ಅನ್ನಿಸುತ್ತಿದೆ, ಇದಕ್ಕೆ ನನ್ನಿಂದ ಕಡಿಮೆಯಾಗಿರುವ ಪದ್ಯರಚನೆಯ ಸಂಖ್ಯೆಯೇ ಕಾರಣ. ಮತ್ತೆ ಮತ್ತೆ ಬರೆಯುತ್ತಿದ್ದರೆ ರಚನೆಯ ಹದವು ನಿಲ್ಲುತ್ತದೆ 🙂
          ಶೀಘ್ರದಲ್ಲೇ ಇದಕ್ಕೊಂದು ಉಪಾಯವನ್ನು ಹುಡುಕುತ್ತೇನೆ

  23. ಮಣಭಾರಂ ಮನಮಾಗೆ ಖೇದವಡರಲ್ ವ್ಯಾಸಂಗವೈತಾಳಿಯಿಂ
    ದುಣಿಸುಂ ಬಲ್ ರುಚಿಹೀನಮಾದುದರಿಂ ಪ್ರೀತ್ಯಾಭಿಲಾಷಾಂಗಿಗಂ
    ಅಣುಮಾತ್ರಂ ಸುಖಮಿಲ್ಲದೊಂಟಿ ಬದುಕೊಳ್ ಸಾಂಗತ್ಯದಾಪೇಕ್ಷೆಯಿಂ
    ಕುಣಿದಿರ್ಕುಂ ನಲವಿಂದೆ ಸೋಗೆ ಸೊಗದಿಂ ಕಾರ್ಗಾಲಕಿಂ ಮುನ್ನಮೇ
    ವ್ಯಾಸಂಗ=ವಿಯೋಗ
    ವೈತಾಳಿ=ಬಿರುಗಾಳಿ

    • ಸ್ವರಗಳು (ಉಣಿಸು, ಅಣು ಮಾತ್ರಂ)ವೃತ್ತ (ವೃತ್ತನಿಚಯ)ದ ನಡುವೆ ಬಂದದ್ದು ವಿಸಂಧಿದೋಷವಲ್ಲವೇ?.. ಅಥವಾ ವೃತ್ತಗಳು ನಾಲ್ಕುಸಾಲಿನಲ್ಲೇ ಇರಬೇಕೆಂದು ನಿಯಮವಿಲ್ಲದ ಕಾರಣ ಇದು ಸ್ವೀಕೃತವೇ?

      • ೨ನೇ ಸಾಲಿನ ವಿಸಂಧಿ ದೋಷವನ್ನು ತಿದ್ದಿದ್ದೇನೆ. ಮೂರರಲ್ಲಿ ದೋಷವಿದ್ದಂತಿಲ್ಲ. ಧನ್ಯವಾದಗಳು.

        • ಅಣುಮಾತ್ರಂ….ಎಂಬ ಆರಂಭದಲ್ಲಿಯೂ ಮೂರನೆಯ ಸಾಲಿನ ಕೊನೆಯಿಂದ ಸಂಧಿಯನ್ನು ಮಾಡಬೇಕು.

  24. ಕ್ಷಮಿಸಿ, ತಪ್ಪೆಂದು ಗೊತ್ತು ಆದರೂ ಇಲ್ಲಿ ಪೋಸ್ಟ್ ಮಾಡ್ತಾ ಇದ್ದೀನಿ…. ಗದಾಯುದ್ಧದ ಈ ಕೆಳಗಿನ ಭಾಗ ಯಾವ ಛಂದೋ ಪ್ರಕಾರದಲ್ಲಿದೆ ದಯವಿಟ್ಟು ತಿಳಿಸುವಿರೇನು..? ನಿಮ್ಮ ಪಾಠಗಳನ್ನೆಲ್ಲಾ ಗಮನಿಸಿದೆನು ಎಲ್ಲೂ ‘ನನನನನಾನನನಾನನಾನನನಾನನಾ…’ ಮಾದರಿ ಸಿಗಲಿಲ್ಲ.. ಆರಂಭ ಚಂಪಕಮಾಲೆಯ ಹಾಗೆಯೇ ಇದೆ..

    “ಕುರುಕುಲಶೋಣಿತಪಾದಪದ್ಮತಳಂ ತಳೋ
    ದರಿಗೆ ವೃಕೋದರನಾಗಿಪಂ ಕಚಬಂಧಬಂ-
    ಧುರತೆಯನಾತನ ಪೂಣ್ದ ಪೂಣ್ಕೆ ಶಿಲಾತಳಾ-
    ಕ್ಷರಮೆನಿಸಿರ್ಪ ಜನೋಕ್ತಿಯಂ ಪುಸಿ ಮಾೞ್ಪನೇ” – 1.71

  25. ಪಣೆಗಣ್ಣಂತನುಜಾರಿಮೋಹರದೆ ಕಾಣಲ್ಬಾಣಗಳ್ ಬಾನಿನೊಳ್
    ಕಣೆಗಂಡವ್ಮಳೆತೊಟ್ಟು ಬೀಳ್ವವೊಲು ಕೇಕೀಕಣ್ಗಳಿಂಪಾಗುವೊಲ್
    ರಣರಂಗಮ್ಮತಿವೃಷ್ಟಿಕಾಣಿಸುತಲಾಯ್ತುಂ ಬಾನುಮುಂಗಾರಿನೊಲ್
    ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ

    ಷಣ್ಮುಖ ನ ಯುದ್ಧದ ಸಂದರ್ಭದಲ್ಲಿ ಅಸುರೀ ಸೇನೆಯಿಂದ ಮೇಲೆ ಕಾಣಿಸಿಕೊಂಡ ಬಾಣನಿಚಯವು ಮಳೆಗಾಲವನ್ನು ನೆನಪಿಸುವಂತಾಗಿ, ಷಣ್ಮುಖನವಾಹನವಾದ ನವಿಲು ಕಾರ್ಗಾಲಕ್ಕಿಂತ ಮುನ್ನವೆ ನರ್ತಿಸಲು ಆರಂಭಿಸಿತು.

  26. ಮಣಿಮೂಲಾಕ್ಷರಮಾಲೆಯುಂ ಸರಿದುದಾ ಲೀಲಾವಿಧಾನಂ ಸುರಾ-
    ಗಿಣಿ ಗಾನಾಮೃತ ಧಾರೆಯಿಂ ಸುರಿದುದಾ ಲೋಲಾವಿಶೇಷಂ ನಿಜಂ
    ಗುಣಶೀಲಾಗ್ರಣಿಶಾರದಾಂ ಗುಣಿಸಿರಲ್ ವೀಣಾವಿಕಾಸಂ ಸದಾ
    ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ ।।

    ನದಿಯಬಳಿ ಕಲ್ಲುಬಂಡೆಯಮೇಲೆ ಕುಳಿತ ವೀಣಾಪಾಣಿ – ಸರಸ್ವತಿ ಜೊತೆಯವಳ ನವಿಲಿನ ಚಿತ್ರವನ್ನು ಕಂಡು ಆಶುವಾಗಿ ಬಂದ ಪದ್ಯ !!

Leave a Reply to ಭಾಲ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)