Dec 152014
 

ವಸಂತತಿಲಕದ ಈ ಕೆಳಗಿನ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣ ಮಾಡಿರಿ

‘ಅಜರಾಮರಂ ದಲ್’

  58 Responses to “ಪದ್ಯಸಪ್ತಾಹ ೧೨೯: ಪದ್ಯಪೂರಣ”

  1. ಇಂದ್ರವಜ್ರ|| ತಪ್ಪಾದುದೋ ಕಾಗುಣಿತಂ (ದಲ್)ಪದಕ್ಕಂ,
    ಮುಪ್ಪುಂ-ಯುವಾವಸ್ಥೆಯು-ಜನ್ಮ-ಸಾವೇ-
    ನೊಪ್ಪಂ ಬದುಂಕಂ ಸಲೆ ಗೈವುದೆಂಬೆಂ!
    ಸಪ್ಪೆ ಸ್ಥಿರಂ ತಾನ್ ‘ಅಜರಾಮರಂ dull’!! 🙂

    • ಚೆನ್ನಾದ ಪದ್ಯಂ ಪೊಣ್ಮಲ್ ಪ್ರಸಾದೂ!
      ಬಿನ್ನಾಣಮಾಯ್ತಯ್ ವಾಗ್ದೇವಿಯಾರ್ಪುಂ|
      ಸನ್ನಾಹಮಾಗಲ್ಕಿನ್ನಿಂಥ ವೃತ್ತಂ
      ಬನ್ನಂಬಡಲ್ಕೇನಿರ್ಕುಮೀಗಳ್||

      ಒಳ್ಳೆಯ ಪದ್ಯಕ್ಕೆ ಧನ್ಯವಾದ

  2. ಪ್ರಾಣಪ್ರಿಯರ್ ಸಹೃದಯರ್ ಕೆಳೆಯಾಗೆ ರಸ್ಯಾ-
    ಕ್ಷೀಣಾನುಭಾವ್ಯಕಲೆಗಳ್ ಕಲೆಯಲ್ಕೆ ವಿಶ್ವ-
    ತ್ರಾಣೋಪಮಂ ಪ್ರವಸನಂ ಜತೆಗೂಡಲ್ ಆಗಳ್
    ಜಾಣಲ್ತೆ ಬಾಳ್ತೆ ಬೆಳಗಲ್ಕಜರಾಮರಂ ದಲ್||

    (ಪ್ರಿಯಜನರೂ ಸಹೃದಯರೂ ಆದ ನೇಹಿಗರು ನಮ್ಮೊಡನೆ ಸದಾ ಇದ್ದಲ್ಲಿ, ಎಲ್ಲ ಬಗೆಯ ಕಲೆ ಮತ್ತವುಗಳ ಪೂರಕಶಾಸ್ತ್ರಗಳೂ ನಮ್ಮದಾದಲ್ಲಿ, ಜಗತ್ತನ್ನೆಲ್ಲ ಗಾಳಿಯಂತೆ ಸುತ್ತುವ ರೋಚಕಪ್ರವಾಸಲೀಲೆಗಳು ನಮಗೊದಗಿದಲ್ಲಿ ಆಗ ಮಾತ್ರ ಅಜರಾಮರವಾದ ಬಾಳು ಆಪ್ಯಾಯನವಾಗುತ್ತದೆ)

    • (ಆದಿ-ಆದ್ಯಕ್ಷರ-ಪ್ರಾಸಗಳನ್ನು ಪಾಲಿಸಿಲ್ಲ) ಅಷ್ಟೆಲ್ಲ ಆಯುಸ್ಸು-ಅವಕಾಶಗಳು ಪ್ರಾಪ್ತವಾದರೆ:
      ಬ್ರಹ್ಮಾಂಡಮೆಲ್ಲಮನು ನಾಂ ಕ್ರಮಿಸಿರ್ದು ಮೇಣಿಂ
      ಕಾವ್ಯಂಗಳಂ-ಹೃದಯ(science/ಶಾಸ್ತ್ರ)ಮೆಲ್ಲವ ಪೀರಲಾಗಳ್|
      ಸಾಹಿತ್ಯಮಂ ಸೃಜಿಸಿಯೇನನಿತುಂ ಬದುಂಕಲ್
      ಸದ್ಯಸ್ಕದೊಳ್ ಪದಮನೊಂದನು ಪೇಳ್ಗುಮೇಂ ನಾಂ||

  3. ನಾನಾ ಎ೦ಬುದು ಸ೦ಸ್ಕೃತವಾಗಿದ್ದರೆ ಸರಿ. ಕನ್ನಡವಾಗಿದ್ದರೆ ಇದೊ೦ದು ಮಹಾಕವಿ(ಪಿ) ಪ್ರಯೋಗವೆ೦ದು ಒಪ್ಪಿಕೊಳ್ಳಬೇಕಾಗಿ ವಿನ೦ತಿ.. 🙂
    ಇದೊ೦ದು ರಸ-ಸ್ತೋತ್ರ 🙂

    ನಾನಾವಿಶೇಷವಿಭವಾದಿನಿಜೈಕಮೂಲ೦
    ನಾನಾಪದೋಪಪದಪಾದಸದೈಕಲಕ್ಷ್ಯ೦
    ನಾನಾರ್ಥಭಾವಸುವಿಚಾರಘನೈಕಸಾರ೦
    ನಾನಾತ್ವರೂಪಿರಸಮಾದ್ಯಜರಾಮರ೦ ದಲ್

    • ಪೂರಣ ಚೆನ್ನಾಗಿದೆ. ನಾನಾ ಪದವು ಸಂಸ್ಕೃತದ್ದೇ ಹೌದು.

      • ಓಹ್, ಹೌದು.. ಈಗ ನೆನಪಾಗುತ್ತಿದೆ.
        ಪಿಬರೇ ರಾಮರಸ೦…..
        ಪೂರಿತ ನಾನಾವಿಧ ಫಲವರ್ಗ೦..

  4. ಅರಿಸೇನೆಗಳಂ ಬಿಡದಿರಿ
    ದಿರಿದರಿಕೇಸರಿಯನೇವನೋ ಕನ್ನಡದೊಳ್?
    ಹರಿಸಖನೊಳ್ ಕವಿ ಪೋಡಿಸಿ
    ಬರೆದಿರೆ ಪೆಂಪದಜರಾಮರಂ ದಲ್ ದೊರೆಯಾ!

    ಅರಿಕೇಸರಿ ಒಬ್ಬ ಸಾಮಾನ್ಯ ಸಾಮಂತ ದೊರೆ, ಪಂಪ ಅವನನ್ನು ಅರ್ಜುನನಿಗೆ ಹೋಲಿಸಿ ಬರೆದಾಗ ಆತನ ಕೀರ್ತಿಯು ಅಜರಾಮರವಾಯಿತು.

    • ಪದ್ಯವು ತುಂಬ ಚೆನ್ನಾಗಿದೆ. ದತ್ತಪದ್ಯಪಾದಭಾಗವನ್ನು ಕಂದಕ್ಕೆ ಹೊಂದಿಸಿದ ಜಾಣ್ಮೆ ಸ್ತುತ್ಯ.

  5. ಮನುಜನ್ಮವುಂ ದೊರಕುದೆಂತಭಿರಾಮಮುಂ ಕಾಣ್
    ಕೊನೆಗಾಣದಾಮಿಷಗಳಂ ಬದಿಗೊತ್ತಿ ಕೊಂಚಂ
    ಘನಸಾರ ಕಾರ್ಯಮೆಸಗಲ್ಕನುರಕ್ತಿಯಿಂದಲ್
    ತನುವೆತ್ತ ಜೀವಿತಮಿದುಂಮಜರಾಮರಂ ದಲ್ ।।

    ಇಂತಿದು “ವಸಂತಕಲಿಕ” ವಾಗಿದೆಯಲ್ಲವೇ?

    • ಪ್ರಯತ್ನವು ಸ್ತುತ್ಯವಾಗಿದೆ. ಕೆಲವೊಂದು ಸವರಣೆಗಳು ಬೇಕಿವೆ. ಉದಾ:
      …………………..ದೊರೆವುದೆಂತಭಿರಾಮಮುಂ……….
      …………………….ದಾಮಿಷಮನೇ……………………
      ………………………………………………………….
      ………………..ಜೀವಿತಮಿದೇ ಅಜರಾ………………..

      • ಧನ್ಯವಾದಗಳು ಗಣೇಶ್ ಸರ್,

        ತಿದ್ದಿದ ಪದ್ಯ:
        ಮನುಜನ್ಮವುಂ ದೊರೆವುದೆಂತಭಿರಾಮಮುಂ ಕಾಣ್
        ಕೊನೆಗಾಣದಾಮಿಷಮನೇ ಬದಿಗೊತ್ತಿ ಕೊಂಚಂ
        ಘನಸಾರ ಕಾರ್ಯಮೆಸಗಲ್ಕನುರಕ್ತಿಯಿಂದಲ್
        ತನುವೆತ್ತ ಜೀವಿತಮಿದೇ ಅಜರಾಮರಂ ದಲ್ ।।

  6. Suśrutasaṃhita is a classical treatise on surgery, and Dalhaṇa has penned a commentary on it.
    ಉಪೇಂದ್ರವಜ್ರ|| ನರೋತ್ತಮಂ ಸುಶ್ರುತ ಪೇಳ್ದ ಸೂತ್ರಂ
    ವಿರೋಗಕಂ ಸಿದ್ಧಮೆನುತ್ತುಮೆಂದಂ
    ನರಂ ಗಡಿರ್ಪಂ ಭವದೊಳ್ ಸದೈವಾ-
    ಜರಾಮರಂ – ದಲ್ಹಣನಿಂತು ಪೇಳ್ದಂ||

    • ಯಾಕೋ ಡಲ್ ಆದಂತಿದ್ದೀರಲ್ಲ ಪ್ರಸಾದು!! ಅವನು ದಲ್ಹಣನಲ್ಲ, ಡಲ್ಹಣ!………….

      • ಆ ಡಲ್ಹಣನಂತೂ ಸರಿ. ಅವನ ನಂತರ ಬಂದೊಬ್ಬ ’ದಲ್ಹಣ’, ’ಹಾದಿರಂಪ’ ಇತ್ಯಾದಿ ನಾಮಾಖ್ಯನೂ ಸುಶ್ರುತನನ್ನು ಅನುಮೋದಿಸಿಹನು 😉
        ಆ ಡಲ್ಹಣಂ ಸುಶ್ರುತನ್ನನುಸರಿಸಿದ ವೋಲ್
        ಈಡಾದನಾತನ ವಶಕ್ಕೀತನೈ|
        ಓಡಿರ್ದಮೇಲೆನಿತೊ ಶತಕಗಳು, ಭವದೀಯ,
        ವೇಡಿಕೆಯ ದಲ್ಹಣಂ-ಹಾದಿರಂಪಂ||

  7. (To hum) ಆಕ್ಷ್ವೇಡನಕ್ಕನುವಿಹಾ ವರಕಾವ್ಯದೊಳ್ ತಾಂ
    ಇಕ್ಷ್ವಾಕು-ಶೀಘ್ರಗ-ಕಕುತ್ಸ್ಥ-ದಿಲೀಪ-ಮಾಂಧಾ-
    ತಾ, ಕ್ಷ್ವೇಡ(wicked)ನಗ್ನಿವರನಂ ಕವಿ ಪಾಡಿಸಲ್ (role) ಮೇಣ್
    ಇಕ್ಷ್ವಾಕುವಂಶದೊಳಗೀ ಅಜ-ರಾಮರಂ ದಲ್||

  8. ನೂರಾರು ಕಷ್ಟಂಗಳು ಬಂದರುಂಡುಂ
    ಬೇರಿರ್ದರಿಂದಂ ದಿಟ ‘ಸತ್ಯ’ವಿಂದುಂ
    ಪಾರಾಗುತುಂ ತಾಂ ಮಿನುಗುತ್ತಲಿರ್ಕುಂ
    ತಾರಾರ್ಕನಂತಲ್ಕಜರಾಮರಂ ದಲ್!

  9. ಹುಟ್ಟಿಂದೆ ಹುಟ್ಟಿರಲು, ತಾಯ್ಮಗುವಂದ ಬಂಧಂ-
    ನಿಟ್ಟಾಯು ಸೃಷ್ಟಿಯೊಳೆ, ನೆತ್ತರನೇಯ್ದರಿಂದಂ|
    ಮೆಟ್ಟಿರ್ದೊಡೇಂ ಕಠಿಣಕಾಲವ ಮರ್ತೆಮತ್ತಂ
    ಥಟ್ಟೆಂದು ಸೀಳುಗುಮದೇಮಜರಾಮರಂ ದಲ್?||

    • ಸೀಳುಗುಮದೇಂ ಎಂದು ಸವರಿಸಿದರೆ ಛಂದಸ್ಸು ಸರಿಯಾಗುವುದು. ಸ್ವಲ್ಪ ಹಳಗನ್ನಡದ ಛಾಪು ಹೆಚ್ಚಾಗಬೇಕು:-)

  10. ಕಾಯಾಗೆ ಪೂವ ಜನನಂ ಪಣ್ಣಾಗಿ ಫಲಮಾಗಿ ಮತ್ತಂ
    ತಾಯಂತೆ ಕಾದು ಬಸಿರಂ ಸಸಿಯಾಗೆ ಮಾಳ್ಗುಂ
    ಮಾಯಾ ವಿಶೇಷ ಭವದೊಳ್ ಗಡ ಜೀವಚಕ್ರಂ
    ಸಾಯುತ್ತೆ ಪುಟ್ಟೊ ಪರಿಯಿಲ್ಲಜರಾಮರಂ ದಲ್

    • ಎಲ್ಲ ಸರಿ; ಆದರೆ ಪಣ್ಣಾಗಿ ಎಂಬುದು ಫಲಮಾಗಿ ಎಂದರೆ ಛಂದಸ್ಸು ಸರಿಯಾಗುವುದು.

  11. ಬಹುಪತ್ನಿವಲ್ಲಭನವಂ ಮಧುಗೋಪಕೃಷ್ಣಂ
    ಸಹಧರ್ಮಪತ್ನಿಯನೆತಾಂ ವನಕಟ್ಟೆ ರಾಮಂ
    ತಹಬಂದಿ ಗಂಗೆಯೊಡನಾತನುಮಾಮಹೇಶಂ
    ಸಹಬಾಳ್ಪಪೆಣ್ಣೊಲುಮೆಯೆಂತಜರಾಮರಂ ದಲ್

    (ವಿವಿಧ ದಾಂಪತ್ಯದ ನೆಲೆಗಳಲ್ಲಿ – ಹೆಣ್ಣಿನೊಲುಮೆಯ ಅಜರಾಮರತೆಯನ್ನು ಸಾರುವ ಪ್ರಯತ್ನ)

    • ಸಹವಾಸಿ ಪೆಣ್ಣೊಲುಮೆ…ಎಂದು ತಿದ್ದಿದರೆ ಚೆನ್ನಾಗುವುದು; ಅರಿಸಮಾಸದ ದೋಷ ತಪ್ಪುವುದು.

      • ಧನ್ಯವಾದಗಳು ಗಣೇಶ್ ಸರ್, “ಸಹಿಸಿರ್ಪ” ಪೆಣ್ಣೊಲುಮೆ – ಎಂದು ಮೊದಲು ಬರೆದಿದ್ದೆ. ದೇವ ದಾಂಪತ್ಯದೊಡನೆ ಹೋಲಿಸಿ ಮನುಜ ದಾಂಪತ್ಯ “ಅಜರಾಮರ” ಎಂದು ಹೇಳುವ ಉದ್ದೇಶವಿತ್ತು , ಪದ್ಯದಲ್ಲಿ ಪೂರ್ಣ ತರಲು ಸಾಧ್ಯವಾಗಲಿಲ್ಲ.

  12. ಸಂಗೀತ ನೃತ್ಯ ರಸಕಾವ್ಯಗಳೀವ ತೋಷಂ
    ಸಂಗಾತಿ ನೀಳ್ಪ ಮುದಮುಂ ಮಿಗೆ ಬಾಳರಾಗಂ
    ಬೆಂಗಾವಲಾದ ಕೆಳೆಯರ್, ತನು-ವಂಶಜಾತರ್
    ಸಿಂಗಾರಮಾಗೆ ಸುಖವಿನ್ನಜರಾಮರಂ ದಲ್

    • ಎನ್ನಾದಿಪದ್ಯದ ಸಮಸ್ತಮನೋವಿಲಾಸಂ
      ನಿನ್ನೊಂದು ಪದ್ಯಕಿದಕಾದುದೆ ರಾಮಚಂದ್ರ? 🙂

      • ನಾಕಾಣದಿರ್ದೆನಪರೂಪದಮಾದಿಪದ್ಯಂ
        ಜೀಕಿರ್ದೆನಲ್ತೆ ಸರಕನ್ನಜರಾಮರಕ್ಕಂ
        ತಾಕಿರ್ದುದೆನ್ನ ಮತಿಗಂ ಹಿತನೀಳ್ಪಕೋಶಂ
        ಏಕಾತ್ಮಭಾವನೆಲೆಯನ್ನಿದು ತೋರದಿರ್ಕೇಂ?

  13. ಪ್ರೌಢದೇವರಾಯನ ಸಂಪದ್ಭರಿತವಾದ ಆಳ್ವಿಕೆಯನ್ನು ನೋಡಿ ಅಬ್ದುಲ್ ರಜಾಕ್ ತನ್ನ ದೇಶದಲ್ಲಿ ಈ ರೀತಿ ಹೇಳಿರಬಹುದು.

    ಬಳ್ಳಂಗಳಳ್ಸುರಿದುವಾ ನವರತ್ನವಜ್ರಂ!
    ಕೊಳ್ಳೆಪ್ರಜಾದಿಜನರಿಂ ನೆರೆದಾಪಣಂಗಳ್!
    ತಳ್ಳಲ್ಕೆನೂಂಕದಿರಿಮೆಂದಳವಿತ್ತನೀಕಂ
    ಗೊಳ್ಳಲ್ ಧರಿತ್ರಿಪತಿಯಲ್ಲಜರಾಮರಂ ದಲ್

    ಬಳ್ಳಬಳ್ಳಗಳಲ್ಲಿ ಸುರಿದು ಮಾರಾಟಗೊಳ್ಳಲ್ಪಡುವ ವಜ್ರವೈಢೂರ್ಯಗಳನ್ನು ಕೊಳ್ಳಲು ಜನರಿಂದ ನೆರೆದ ಅಂಗಡಿಗಳು, ಜನರು ಜನರನ್ನು ತಳ್ಳಾಡಲು ‘ನೂಂಕದಿರಿ’ ಎಂದು ಹೇಳುವ ಜನರನ್ನು ಹೊಂದಿರುವ ಈ ಸನ್ನಿವೇಶವು ಅಲ್ಲಿನ ರಾಜನನ್ನು ಅಜರಾಮರನನ್ನಾಗಿಸಿದೆ.

  14. || ವಸಂತತಿಲಕವೃತ್ತ ||

    ಪುಟ್ಟಿರ್ಪವಂಗೆ ಮರಣಂ ಧ್ರುವಮಿರ್ಪುದೆಂದುಂ
    ನೆಟ್ಟಿರ್ದ ಕರ್ಮಸುಮವೃಕ್ಷದ ಪಣ್ಗಳಂ ತಾ- |
    ನೊಟ್ಟೈಸಿ ಬುತ್ತಿಯನೆ ಕಟ್ಟಿರಲಾತ್ಮನಾಗಳ್
    ಬಿಟ್ಟಿರ್ಕುಮೆಂತದನಿರುತ್ತಜರಾಮರಂ ದಲ್ ? ||

    (ಪುಟ್ಟಿರ್ಪವಂಗೆ ಎಂದುಂ ಮರಣಂ ಧ್ರುವಂ ಇರ್ಪುದು. ಆತನ್ ನೆಟ್ಟಿರ್ದ ಕರ್ಮಸುಮವೃಕ್ಷದ ಪಣ್ಗಳನೊಟ್ಟೈಸಿ ಬುತ್ತಿಯಂ ಕಟ್ಟಿರಲ್, ಮರಣಮಂ ಪೊರ್ದಿದಾಗಳ್ , ಆತ್ಮನಿರುತ್ತೆ ಅಜರಾಮರಂ, ಕರ್ಮಫಲಂಗಳ ಬುತ್ತಿಯನೆಂತು ಬಿಟ್ಟಿರ್ಕುಂ ?)

    • ಆಹಾ! ವಸಂತತಿಲಕಂ ಪರಿಣಾಮರಮ್ಯಂ

      • ಪದ್ಯಕ್ಕೆ ಮೆಚ್ಚಿಗೆಯ ಸೂಸಿರೆ ನೀಂ,ನಮಿಪ್ಪೆಂ

  15. ವೇದಾಂತ ವಿದ್ಯೆ ಜಗಕಿತ್ತಿಹ ಸಾರತತ್ತ್ವಂ
    ಮೇಧಾವಿ ಮಾಂತರನೆ ಪೆತ್ತಿಹ ಜೀವಸತ್ತ್ವಂ
    ತಾದಾತ್ಮ್ಯ ಭಾವವನೆ ಬಿತ್ತಿಹ ಸಾರ್ಥಕತ್ವಂ
    ಪ್ರಾದೇಶ “ಭಾರತ”ವುತಾಂ ಅಜರಾಮರಂ ದಲ್ ।

    • ಸಾರ್ಥಕತ್ವ ಪದ ಸಲ್ಲುವುದೇ?

      • ಹೌದು, ಸರಿಹೊಂದುತ್ತಿಲ್ಲವೆನಿಸುತ್ತಿದೆ. ಇಂತಿದ್ದ ಪದ್ಯದ ಸಾಲುಗಳು
        ತಾದಾತ್ಮ್ಯ ಭಾವವನೆ ಬಿತ್ತಿಹ ಸಾರ್ಥಕತ್ವಂ / ಪ್ರಾಧಾನ್ಯವಿತ್ತ ಘನವೆತ್ತಿಹ ನಾಯಕತ್ವಂ –
        ಅದಲುಬದಲಾದರೆ ಸರಿಯಾದೀತು? ತಿದ್ದಿದ ಪದ್ಯ:

        ವೇದಾಂತ ವಿದ್ಯೆ ಜಗಕಿತ್ತಿಹ ಸಾರತತ್ತ್ವಂ
        ಮೇಧಾವಿ ಮಾಂತರನೆ ಪೆತ್ತಿಹ ಜೀವಸತ್ತ್ವಂ
        ತಾದಾತ್ಮ್ಯ ಭಾವವನೆ ಬಿತ್ತಿಹ ನಾಯಕತ್ವಂ
        ಪ್ರಾದೇಶ “ಭಾರತ”ವುತಾಂ ಅಜರಾಮರಂ ದಲ್ ।

        ಪ್ರತಿಕ್ರಯಿಸಿ ಪ್ರೋತ್ಸಾಹಿಸುತ್ತಿರುವ ತಮಗೆ ಧನ್ಯವಾದಗಳು.

        • ಸಾರ್ಥಕತ್ವ ಎಂಬ ಪ್ರಯೋಗವು ವ್ಯಾಕರಣಶುದ್ಧ ಮತ್ತು ನಿಮ್ಮ ಪದ್ಯದಲ್ಲಿ ಯುಕ್ತವಾಗಿಯೇ ಬಳಕೆಯಾಗಿದೆ ಕೂಡ.

          • ಹೌದೇ, ಗಣೇಶ್ ಸರ್? ಹಾಗಾದರೆ ಅದನ್ನೇ ಪಡೆದುಕೊಳ್ಳುತ್ತೇನೆ.
            “ತಾದಾತ್ಮ್ಯ ಭಾವವನೆ ಬಿತ್ತಿಹ ಸಾರ್ಥಕತ್ವಂ” – ಧನ್ಯವಾದಗಳು.

  16. ನೂರಾರು ಪದ್ಯಗಳಸಂಗ್ರಹಿಸಿರ್ಪ ಕಾವ್ಯಂ
    ತೋರಿರ್ಪುದೈ ಜಗಕೆ ಮಾದರಿಯೆಂಬುವೊಲ್ ಇ
    ನ್ನಾರಿಂತ ಭಾರತವ ಚಿತ್ರಿಪನೀ ಕುಮಾರಂ
    ಸಾರಿರ್ಪೆನೀತನೆಕಣಾ! ಅಜರಾಮರಂ ದಲ್

  17. ಕಣ್ಣಿಂದ ಕಾಣದೆಯು ಕಂದನ ರಕ್ಷಿಸಿರ್ಪಳ್
    ಪೆಣ್ಣಾಗಿ ನೋವತಡೆವಳ್ ಪೊಸ ಜೀವಕೆಂದುಂ
    ಹಣ್ಣಾದಳೈ ದಿನವು ಬನ್ನದ ಕೂಳನುಂಡೀ
    ಮಣ್ಣೊಳ್ ಸಮಸ್ತರೊಳು ತಾಯ್ ಅಜರಾಮರಂ ದಲ್

    • ಚೀದಿ – ತಾಯಲ್ತು ತಾಯತನ ತಾನಜರಾಮರಂ ದಲ್ 🙂

      • ಹೌದು ರಾಮ್… ಅದೇ ನನ್ನ ಪದ್ಯದ ಆಶಯವಾಗಿತ್ತು. . ಛಂದಸ್ಸಿಗೆ ಹೊಂದಿಸಕ್ಕಾಗದೆ ಹೀಗಾಯ್ತು….

  18. ಮರ=ಗಿಡ
    Pathogens (ಅಣುಕೀಟ) develop resistance to antibiotics, wherefore we have been witness to the evolution of more and more potent antibiotics (ಪ್ರತಿಜೈವಿಕ) in modern medicine. In stark contrast, the traditional aloe vera (ಕತ್ತಾಳೆ=ಅಜರಾ) still serves as an antibiotic in Ayurvedic surgery.
    ನಾಳಿಲ್ಲವಿಂದಿಗಿನದೀ ಪ್ರತಿಜೈವಿಕಂ ತಾಂ
    ತಾಳುತ್ತೆ ಕೊಬ್ಬಿಹವು ಕೇಳ್ ಅಣುಕೀಟಗಳ್ ದಲ್|
    ಪೇಳಯ್ಯ ಮೇಲೆನಿಸದೇಂ ಬಹುಕಾಲದಿಂ ತಾಂ
    ತಾಳಿರ್ಪ ಮೂಲಿಕೆಯುಮೀ ಅಜರಾ-ಮರಂ ದಲ್||

  19. ಲೇಸಿಂದೆ ಭಟ್ಟಿಸಿದ ರೂಪ ವಿಶುದ್ಧ ಸಾರಂ
    ಕೂಸಾದುದಲ್ತೆ ಮಮ ಮೂಲಗುಣ, ಸ್ವಭಾವಂ
    ವಾಸಕ್ಕಿದಿರ್ಕು ಜಡದೇಹ ಪ್ರಸಾರಕೆಂಬೊಲ್ [ಶಿ.ದ್ವಿ]
    ನಾ ಸತ್ತರೆನ್ನತನ ಮೇಣಜರಾಮರಂ ದಲ್

  20. ಅಜರಾಮ = ಕುರುಬ = ಕುರಿಗಳನ್ನು ರಮಿಸುವವನು
    ಕವಿವಾಣಿ ನಿಚ್ಚಮದು ಜನಮೆಂದು ಕುರಿಗಳೈ
    ಕವಿಸುವರಸಾಧುಯತಿಯರು ತಿಮಿರಮಂ|
    ಲವಮಾರೆ ಬುಧರೆ? ಆಸಾರಾಮರಂದರನು
    ಬವರದೊಳ್ ಘಾತಿಸಜರಾಮರಂ ದಲ್||

  21. ಕಾಂತಾರಕಟ್ಟೆ ಸತಿಯಂ ಸುಖಮಿತ್ತ ರಾಮಂ
    ಕಾಂತಾವಿಯೋಗದೊಳಜಂ ನಿಜಸಾವ ಕಂಡಂ
    ವೃತ್ತಾಂತಮಂ ಕಥಿಸಿ ತೋರ್ಕುಮೆಂದು ಲೋಕಂ
    ಚಿತ್ತಾಂತರಂಗಪರಿಗೆಂದಜ,ರಾಮರಂ ದಲ್!

  22. ಇರ್ದಂ ಸುರಾರಿಯನಿಲಾತ್ಮಜ ರಾಮರಂದ
    ಲ್ಲಾರ್ದಾ ವಿಭೀಷಣನಸೋದರನಿಕ್ಕೆ ತಾಂ ಕೊಂ-
    ದಿರ್ದುಂ ದಶಾನನಸೈನ್ಯಮನೆಲ್ಲಮಂ ತಾ-
    ಗಿರ್ದುಂ ಧರಿತ್ರಿಯೊಳಡಂಗಿದ ಶಂಕೆರೂಪಿಂ

    ಇರ್ದಂ ಸುರಾರಿ,
    (ಅನಿಲಾತ್ಮಜ, ರಾಮರ್ ಅಂದಲ್ಲಿ ಆರ್ದು ಆ ವಿಭೀಷಣನ ಸೋದರನಿಕ್ಕೆ, ತಾಂ ಕೊಂದಿರ್ದುಂ, ದಶಾನನ ಸೈನ್ಯಮನೆಲ್ಲಮಂ ತಾಗಿರ್ದುಂ,)
    ಧರಿತ್ರಿಯೊಳಡಂಗಿದ ಶಂಕೆ ರೂಪಿಂ

    ಆಂಜನೇಯ ಹಾಗೂ ರಾಮರು, ರಾವಣನನ್ನು ಕೊಂದರೂ, ರಾವಣನ ಅಸುರೀ ಸೈನ್ಯವನ್ನೆಲ್ಲಾ ತಾಗಿದರೂ, ರಾಕ್ಷಸನೊಬ್ಬ ಶಂಕೆ ಎಂಬ ರೂಪಿನಲ್ಲಿ ಭೂಮಿಯಮೇಲೆ ಉಳಿದುಕೊಂಡ. ರಾಮ ಶಂಕೆಯನ್ನು ಕೊಲ್ಲಲಾಗಲಿಲ್ಲ.

  23. ಸಂಕಾಶದಿಂ ಜರುಗಿರಲ್ ಬುವಿಬಾನಬಂದಂ
    ಸಂಕೋಚದಿಂ ಜಗುಳಿರಲ್ ಹಿಮರಾಶಿಯಂದಂ
    ಸಂಕಲ್ಪದಿಂ ಜಳಕಿರಲ್ ಜಲದಾಂತರಂಗಂ
    ಸಂಕೀರ್ಣದೊಳ್ ಜಗವುತಾಂ ಅಜರಾಮರಂ ದಲ್ ।।

  24. ಪ್ರಸಾದುರವರನ್ನು ಅನುಕರಿಸಿ ಬರೆಯುವುದಾದರೆ……

    ಮುಳ್ಗಿರ್ಪಂ ಹನುಮಂತಂ
    ಕಳ್ಗುಡಿದಿರ್ಪನೆನೆ ರಾಮ ಮಂತ್ರಾಕರದೊಳ್ |
    ಪಾಳ್ಗುಡಿಗೊಡೆಯನನರಿದುಂ
    ಸೊಲ್ಗುಂ “ಬಾಯಿನಜ ರಾಮ “RUM” ದಲ್, ಕುಡಿವಂ”. ||

    ರಾಮನಾಮದಿಂದ ಮಧುಪಾನಮಾಡಿದವನಂತೆ ಉನ್ಮತ್ತನಾದ ಹನುಮಂತನು , ರಾಮನ ಬಗ್ಗೆ ಅರಿವಿದ್ದರೂ, “ಬಾ ಇನಜ ರಾಮ “RUM” ದಲ್, ಕುಡಿಯೋಣ”ವೆಂದು ಸುಗ್ರೀವನಿಗೆ ಕರೆಗೊಡುವನು….

    ಇನಜ -ಸುಗ್ರೀವ

Leave a Reply to hrudaya raama Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)