Mar 012015
 

ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ದ್ಯೂತದ ವರ್ಣನೆಯನ್ನು ಮಾಡಿರಿ

  97 Responses to “ಪದ್ಯಸಪ್ತಾಹ ೧೪೦: ವರ್ಣನೆ”

  1. भारते नैषधे द्यूतः कथानिर्देशकस्स्वयम् |
    खलोऽपि वन्दनीयस्सः यदि काव्ये स्थितस्सदा ||

    द्यूतः भारते नैषधे स्वयं कथानिर्देशकः यदि सदा काव्ये स्थितः सः खलः अपि वन्दनीयः |

    both in mahabharata and naishadha dice-play is the director of the story. So even though it is wicked, if it always stays/appears in poetry (not in real life), it is worthy of praise

    • ದ್ಯೂತದಲ್ಲಿ ಮೊದಲೇ ಗೆದ್ದುಬಿಟ್ಟಿರಿ 😉 ಚೆನ್ನಾಗಿದೆ..

  2. ಆಡಬಾರದು ಜೂಜನೆಂಬರು
    ನೋಡಬಾರದು ಪಗಡೆಯೆಂಬರು
    ಆಡಿದರೆ ದಿನಕೊಮ್ಮೆಯೇ ಚದುರಂಗ ವೆನ್ನುವರು |
    ಇದರ ತಿಳಿಯದೆ ಕೌರವನು ಛಲ
    ದಿಂದ ಆಡಿದ ಜೂಜನದರಲಿ
    ಗೆದ್ದರೂ ಯುದ್ಧದಲಿ ಸೋತನು ದುಷ್ಟಛಲದಿಂದ ||

    • ಶ್ರುತಿಪ್ರಿಯರಿಗೆ ಪದ್ಯಪಾನಕ್ಕೆ ಸ್ವಾಗತ. ಒಳ್ಳೆಯ ಪ್ರಯತ್ನ. ಪ್ರಾಸದಲ್ಲಿ ತುಸು ಸವರಣೆ ಬೇಕಷ್ಟೆ. ಮೇಲೆ ‘learn prosody – ಪದ್ಯವಿದ್ಯೆ’ ಎಂಬ ಲಿಂಕ್ ಇದೆ. ಅಲ್ಲಿನ ದೃಶ್ಯ-ಶ್ರವ್ಯಪಾಠಗಳನ್ನು ಗಮನಿಸಿಕೊಂಡು ಪ್ರಯತ್ನವನ್ನು ಮುಂದುವರಿಸಿ.
      ಉತ್ತರಾರ್ಧದಲ್ಲಿ ದ್ವಿತೀಯಾಕ್ಷರಪ್ರಾಸ ಸರಿಯಾಗಿದ್ದರೂ (ಪೂರ್ವಾರ್ಧದ ಪ್ರಾಸಾಕ್ಷರ ಬೇರೆಯಾಗಿದ್ದೂ), ಆದ್ಯಕ್ಷರಪ್ರಾಸ ವ್ಯತ್ಯಯಗೊಂಡಿದೆ.

      ಛಂದಸ್ಸನ್ನುಳಿದು ಮುಖ್ಯವಾದ ಭಾಷಾದೋಷವೆಂದರೆ: ಪಗಡೆಯನು+ಎಂಬರು=ಪಗಡೆಯನೆಂಬರು ಎಂದಾಗಬೇಕು.
      ಪಗಡೆಯೆಂಬರು=ಪಗಡೆಯು+ಎಂಬರು > ಪಗಡೆಯು ನೋಡಬಾರದು

      ಹೀಗೊಂದು ಸವರಣೆ:
      ಆಡಬಾರದು ಜೂಜನೆಂಬರು
      ನೋಡಬಾರದು ಪಗಡೆಯಂ ಮೇಣ್
      ಆಡಿದೊಡೆ ದಿನಕೊಮ್ಮೆ ಸಲ್ಲುಗೆ ಚೋದ್ಯಚದುರಂಗಂ|
      ಖೋಡಿಕೌರವನಿದನು ತಿಳಿಯದೆ
      ಕೇಡನೊಂದನೆ ಬಗೆದು ಕೆಟ್ಟನ-
      ಖಾಡದೊಳು ಗೆಲ್ದೇಂ ಸಮರದೊಳ್ ಸೋತು ಸತ್ತಂ ತಾಂ||

      • ಧನ್ಯವಾದ ಪ್ರಸಾದರಿಗೆ. ಸೂಕ್ತ ಸಲಹೆ ನೀಡಿದ್ದಕ್ಕೆ.

  3. ದ್ಯೂತದ ಸೆಳೆತಕೆ ಸಿಲ್ಕಿ
    ಖ್ಯಾತರದಂ ಪೋಷಿಪರ್ದಿಟಂ ಕ್ರೀಡೆಯವೊಲ್
    ಘಾತಮ ಲೆಕ್ಕಿಸಿದೆ ಧನ-
    ಸ್ಯೂತಕೆ ಮೇಣ್ ಮುಗ್ಧ ಬಂಧು ಜನಕೆಂದೆಂದುಂ||

    • ಕಾಂಚನಾ ಅವರೇ, “ಪೋಷಿಪರ್,ಕ್ರೀಡೆಯ” ಇಲ್ಲಿ ಸ್ವಲ್ಪ ಸವರಣೆ ಬೇಕಿದೆಯಲ್ಲವೇ?

    • ಚೆನ್ನಾಗಿದೆ. ಒಂದು ಸವರಣೆ.. ದಿಟಂ ಆಗಬೇಕು. ಇಲ್ಲದಿದ್ದರೆ ಅರಿಸಮಾಸ ಆಗುತ್ತದೆ 😉

  4. ದ್ಯೂತಮಿದು ಯುದ್ಧದ ಪೆಡ೦-
    ಭೂತಮೆನೆ ಮಹಾಕುಲಾ೦ತಕನವೊಲ್ ಬೆಳೆದಾ
    ಘಾತಕರ ಕೂಟಮ೦ ಖ-
    ದ್ಯೋತನ ಸುತನ ಪುರಕಟ್ಟಿದುದು, ಚಿರವ೦ದ್ಯ೦

    ದುರ್ಯೋಧನಾದಿಗಳ ವಿನಾಶಕ್ಕೆ ಕಾರಣವಾದ ದ್ಯೂತ ಚಿರವ೦ದ್ಯ!

  5. ದ್ಯೂತದ ಜಾಲವುಂ ಪಗಡೆಹಾಸೊಳು ಬೀಸಿದ ದಾಳದಾಟವುಂ
    ದ್ಯೋತಕವಿಂತು ಜೀವನ ಸಾಗುತೆ ಸಲ್ಲುವ ಹುಟ್ಟುಸಾವಿಗಂ,
    ನೀತಿಯರೀತಿ, ನಾಲ್ಕುಬಗೆಬಣ್ಣದೆ,ನಾಲ್ದೆಸೆಯೊಳ್ಗೆ ಸುತ್ತುತುಂ
    ಸೋತಿಹ ಕಾಯ್ಗಳಾಗರದೆ ಮುಟ್ಟುದುವೊಂದಿರುವಂತರಂಗವಂ ।।

    (ಪಗಡೆಯಾಟದಲ್ಲಿ ಹಾಸುಹೊಕ್ಕಾಗಿರುವ ಜೀವನದರ್ಶನವನ್ನು ಬಿಂಬಿಸುವ ಪ್ರಯತ್ನ – ಒಂದು ವೃತ್ತದಲ್ಲಿ ಪೂರ್ಣ ತರಲಾಗಲಿಲ್ಲ)

    • ಪದ್ಯ ಚೆನ್ನಾಗಿದೆ..”ದ್ಯೋತಕವಿಂತು ಜೀವನ- ಸಾಗುತೆ” ಎಂಬಲ್ಲಿ ಒಂದಕ್ಷರ ಟಂಕಿತವಾಗಿಲ್ಲ. “ಸೋತು” ಎಂಬುದು “ಸೋಲ್ತು” ಎಂದಾದಲ್ಲಿ ಇನ್ನೂ ಹೆಚ್ಚು ಒಳ್ಳೆಯದು. ಆದರೆ ಪ್ರಾಸ ತಪ್ಪುವ ಕಾರಣ ಹಾಗೇ ಇಡಬಹುದು. 😉

      • ಧನ್ಯವಾದಗಳು ಕೊಪ್ಪಲತೋಟ,
        ಹೀಗೆ ಸರಿಯಾದೀತೆ?
        ದ್ಯೂತದ ಜಾಲವುಂ ಪಗಡೆಹಾಸೊಳು ಬೀಸಿದ ದಾಳದಾಟವುಂ
        ದ್ಯೋತಕವಿಂತು ಜೀವನಕೆ, ಸಾಗುತೆ ಸಲ್ಲುವ ಹುಟ್ಟುಸಾವಿಗಂ
        ನೀತಿಯರೀತಿ, ನಾಲ್ಕುಬಗೆಬಣ್ಣದೆ ನಾಲ್ದೆಸೆಯೊಳ್ಗೆ ಸುತ್ತುತುಂ
        ಸೋತುದು ಕಾಯ್ಗಳಾಗರದೆ ಮುಟ್ಟಲುವೊಂದಿರುವಂತರಂಗವಂ ।।

  6. ಐಲೂಷಂ ಕವಷಂ ಭವತ್ಪ್ರಖರತಾಕಾಲುಷ್ಯದೊಳ್ ನೊಂದು, ನಿ-
    ರ್ಮೂಲಂಗೊಂಡಿರೆ ಬಂಧು-ಮಂದಿರ-ಸತೀಸೌಖ್ಯಂ ವಿವೇಕೋದಿತೋ-
    ದ್ವೇಲಜ್ಞಾನನದೆಂದೊ ವೇದದೊಳೆ ದೌರೋದರ್ಯಮಂ ದೂಡಿದ
    ಶ್ರೀಲಂ ತಾನಿರೆ ಜೂದೆ! ನಿನ್ನ ನೆಲೆಯಂ ಪ್ರಾಕ್ತನ್ಯಮಂ ಪೇಳ್ವುದೇಂ?

    ಲಾಸ್ವೇಗಾಸ್ ಪುರದಂತದೆಂತೊ ನಗರೀವ್ಯೂಹಂಗಳೀ ಭೂಮಿಯೊಳ್
    ಸ್ವಸ್ವಸ್ಥಾನದ ಮಾನದ ಸ್ಫುರಣೆಯಿಂದಾಕರ್ಷಣಂ ತರ್ಷಣಂ|
    ಹ್ರಸ್ವಾತೀತವಿಧಾನದಿಂ ತಳೆದಿರಲ್ಕೋ ದ್ಯೂತಮೇ! ಸ್ಫೀತಮೇ!
    ನಿಸ್ಸ್ವಶ್ವಾಸನಿರೋಧಕಾರಿಬಲಮಂ ನಿನ್ನಾ ಅದೇಂ ವೇಳ್ವೆನೋ?

    (ಋಗ್ವೇದದ ಕವಷ ಐಲೂಷನ ಅಕ್ಷಸೂಕ್ತದಿಂದ ಮೊದಲ್ಗೊಂಡು ಜೂಜಿನ ಮಾಹಾತ್ಮ್ಯವು ಇಂದಿನ ಕ್ಯಾಸಿನೋಗಳವರೆಗೆ ಅವ್ಯಾಹತವಾಗಿ ಹಬ್ಬಿರುವುದರ ಬಗೆಗೆ ಈ ಪದ್ಯದ್ವಯ)

    • ಪದ್ಯದ್ವಂದದೆ ಸಂದುದಲ್ತೆ ಭವದೀಯಜ್ಞಾನದಾ ಬಿತ್ತರಂ
      ಹೃದ್ಯಂಗಳ್ ಪದಪದ್ಧತಿ ಪ್ರಕಟಿತಂ ಸಚ್ಛೈಲಿಯುಂ ಲೀಲೆಯುಂ

      • ವಂದನಚಂದನಂ ನಿಮಗಮೀಗಳೆ ಸಂದುದು ಕೊಪ್ಲತೋಟರೇ:-)

  7. ಶರದ೦ತೇರುವ
    ಝರಿಯ೦ತಿಳಿಯುವ
    ವಿರಹವ ಕಾಡುವ ಧನಲಕ್ಷ್ಮಿ I
    ಗುರುಬಲ ಕೇಳದ
    ಹಿರಿಮೆಯ ಬೇಡದ
    ನರರದ್ಯೂತವದೇ”ಸೆನ್ ಸೆಕ್ಸ್ ” II

    ಇದು ಅಧುನಿಕ ತಂತ್ರಜ್ಞಾನದೊಂದಿಗೆ ಬೆರೆತಿರುವ ದ್ಯೂತವನ್ನು ಕವನದಲ್ಲಿ ಅಭಿವ್ಯಕ್ತಿ ಪಡಿಸುವ ಪ್ರಯತ್ನ . ಶೇರು ಮಾರುಕಟ್ಟೆಯಲ್ಲಿ ಮುಂಗಡ ಪತ್ರದಂದು , ಕಂಪೆನಿಗಳ ಪ್ರತಿ ತ್ರೈ ಮಾಸಿಕ , ವಾರ್ಷಿಕ ವರದಿಗಳ೦ದು ಹೆಚ್ಹಾಗಿ ಕಂಡುಬರುವ ಸೆನ್ಸೆಕ್ಸ್ /ನಿಫ್ಟಿ ಗ್ರಾಫ್ ನ ಏಳು ಬೀಳುಗಳ ಚಿತ್ರಣ,ಮತ್ತು ಅದೇ ರೀತಿಯಲ್ಲಿ ಹಣವನ್ನು ಮುಖ್ಯವಾಗಿ option ,future ಗಳಲ್ಲಿ ವ್ಯವಹಾರ ನಡೆಸಿ ಕಳೆದು ಕೊಳ್ಳುವವರ/ಗಳಿಸಿಕೊಳ್ಳುವವರ ಒಂದು ಚಿತ್ರಣ .
    sensex =ಸೆನ್ ಸೆಕ್ಸ್

  8. ಕಾಲಮಂ ಪೋಲುಮಾಡಲ್ಕೆ ಮತ್ತೇರಿಸುತೆ
    ಜಾಲದೊಳ್ ದೂಡುತೆಲ್ಲವ ಕಳೆವುದೈ|
    ಸಾಲಮಾಡಿಸೆ ತನ್ನೆಡೆಗೆ ಸೆಳೆವುದೀ ದ್ಯೂತ
    ವಾಳುವುದು ಸರ್ವರನು ಸೈಪಿನಿಂದ|

  9. ನೂರುಮೇಣೈದುದಾಳಂಗಳಂ ಕುಲುಕಾಡಿ
    ಭಾರತಮಹಾಕಾವ್ಯವಂ ಸೃಷ್ಟಿ ಗೈದೆ
    ವೀರಸುಭಟರ್ಗಳಂ ಜೂಜಬೆಸನಿಗಳೆನಿಸಿ
    ನಾರಿಯುಟ್ಟುಡೆಯನ್ನು ದುರುಳರಿಂ ಕಳೆದೆ

    ಧರ್ಮರಾಯಂಗೊಸೆದು ಬಂತು ಬೆಸನಿಯ ಪಟ್ಟ
    ಕರ್ಮಫಲವಂ ಕಳೆಯೆ ಕಾಡೊಳಲೆದಾಟ
    ನಿರ್ಮಾಣವಾದುದೀ ವಿಶ್ವವೇ ಜೂಜಾಗಿ
    ಮರ್ಮವೇನಿಹುದಯ್ಯ ನಿಜದ್ಯೂತಗಾರ.

    • ಚೆನ್ನಾಗಿವೆ ಪದ್ಯಗಳು. ಆದರೆ ಕೊನೆಯ ಪದ್ಯ ಕೊನೆ ಸಾಲು ‘ ನಿಜದ್ಯೂತಗಾರ’ ಎಂಬಲ್ಲಿ ದ್ವಿತ್ವವಾಗುತ್ತದೆ.

  10. ಹುಟ್ಟು ಸಾವಿನ ನಡುವ ಜೀವನದನಿಶ್ಚಯಕೆ
    ಹುಟ್ಟುನಾಯಕನಲೆ ಧೂರ್ತನೀತಂ !
    ನಿಟ್ಟೆಯಿಂ ಬರೆದ ಹಣೆಬರಹವಂ ತಿರುಚುತುಂ
    ನೆಟ್ಟನೇಂ ಭೀತಿಯಂ ಬ್ರಹ್ಮನೊಳು ತಾಂ!!

    (ಹಣೆಯ ಬರಹವನ್ನೂ ತಿರುಚಲು ಶಕ್ಯನಾದ ದ್ಯೂತ ಬ್ರಹ್ಮನಿಗೇ ಸವಾಲಾಗಿರುವನೇ?)

    • ಹೃದಯರಾಮರ ಪದ್ಯದಲ್ಲಿ ಆದಂತೆ ಇಲ್ಲಿ ಕೂಡ “ಧೂರ್ತದ್ಯೂತಂ ” ಶಿಥಿಲದ್ವಿತ್ವವಾಗುವುದಿಲ್ಲ

  11. ಮನೆಯ ವೆಳಕಂ ಕಳೆಯೆ ಬಿರುಗಾಳಿಯಂತೆ ಜೀ
    ವನಕೆ ಕಳ್ತಲೆಯ ಕೊಡುಗೆಯನಿತ್ತುವೊಲ್|
    ಧನಿಕರಂ ಬಡವರಾಗಿಸಬಲ್ಲುದೀ ದ್ಯೂತ
    ವನು ನೆಚ್ಚಿ ಬಾಳುವುದು ಮೌಢ್ಯಮಲ್ತೆ|

  12. ದಾಳಮಂ ಬೀಸುತುಂ ಮದ್ಯಮಂ ಪೀರುತುಂ
    ನಾಳಿನಾ ಚಿಂತೆಯಂ ಮಾಳ್ಪರೀ ದ್ಯೂತದೊಳ್
    ಬೋಳಿಸುತ್ತೆಲ್ಲಮಂ ಬೆತ್ತಲಾಗಿರ್ದರುಂ
    ಹಾಳುಜೂದಿಂಗೆ ಹಲ್ಗಿಂಜುತುಂ ಪೋಪರೈ

    • ಸ್ರಗ್ವಿಣೀವೃತ್ತದಲ್ಲಿ ಜೂಜನ್ನು ವರ್ಣಿಸಿದ ಪರಿಗಾಗಿ ಅಭಿನಂದನೆ. ಒಂಡೆರಡು ಸವರಣೆಗಳು:
      ……………………………………….
      ……………………………………….
      ………………….ಬೆತ್ತಲಾಗಿರ್ದೊಡಂ
      ಪಾಳುಜೂದಿಂಗೆ………….ಪಲ್ಗಿಂಜುತುಂ…….

      • ರಗ್ವಿಣಿಯಲ್ಲಿ ಜೋಡಿಗರದ ನಡುಗೆ (ಸವರಣೆಯಾದಮೇಲಂತೂ) ತುಂಬಾ ಚೆನ್ನಾಗಿದೆ ಚೇದಿ. ಧನ್ಯವಾದಗಳು ಗಣೇಶ್ ಸರ್.

        • ಚೆನ್ನಾದ ಚಿತ್ರಣವನ್ನು ಮೂಡಿಸಿದ್ದೀರಾ ಚೀಧಿ!

  13. ದ್ಯೂತಮಿದುಮುತ್ಕೃಷ್ಟಮೇ ಸೈ
    ಜಾತಿಭೇದಂಗಳುಮಿರದು ಕೇಳ್
    ನೀತಿನಿಯಮಂಗಳನುಮೀರದ ಮೋಜಿನಾಟವಿದು|
    ಸೋತು ಸುಣ್ಣಾದವರನುಂ ಮೇಣ್
    ಪ್ರೀತಿಯಿಂ ಬಾ, ಬಾರೆನುವುದೈ
    ಭೀತಿಯೇತಕ್ಕಳ್ಕದೆಯೆ ಜೂಜಾಡುವಾ ಬಾರಾ|

  14. ನಾನಾನೆಪಂಗಳಿನೆ ದೂರಕೆ ಸಾರ್ಚುತೆನ್ನಿಂ
    ಹೀನಾಯಮಾಳ್ಪರೆಲೆ ಸಜ್ಜನರೆನ್ನಬಾಳಂ !
    ಚೀನಾಂಬರಂ ತೊಡುವವರ್ ಕಿರಿದಾಸೆಯಿಂ ತಾ
    ಮಾನಂದಮೀವುಡೆಯ ಧಾರಣ ಗೈಯೆ ತಪ್ಪೇಂ ?

    (ಇದು ದ್ಯೂತದ ಅನಿಸಿಕೆ )

  15. ನೆತ್ತಮೆ ನಿನ್ನದೇ ಮಹಿಮೆಯೋ ಸಭಿಕರ್ ಬಗೆಯುತ್ತುಮಿರ್ಪರೈ
    ಎತ್ತಣಿನೆತ್ತಮಂಡಲೆಸುತಿರ್ದಪೆವೆನ್ನುತೆ ಶಾರಿಯಂ ಮದಂ-
    ಬೊತ್ತರಿವರ್ಕಳಂತಲೆವುದೆಂತುಟೊ! ಕಾಯ್ಗಳೆ ಪಣ್ತಿರಲ್ ಸ್ವಯಂ
    ಧುತ್ತನೆ ಬಿಳ್ದಪರ್ ದಿಟದ ಜಾಲದೆ ನಿರ್ಗಮಮಾರ್ಗಶೂನ್ಯದೊಳ್||
    (ನೆತ್ತಮೆ! ನಿನ್ನದು ಎಂತಹ ಮಹಿಮೆ! ಸಭಿಕರು ಮನಸ್ಸಿನಲ್ಲಿ ಬಗೆಯುತ್ತಿದ್ದಾರೆ- ಈ ಶಾರಿಯನ್ನು ನಾವು ಎಲ್ಲಿಂದ ಎಲ್ಲಿಗೆ ಅಂಡಲೆಸುತ್ತಾ ಇದ್ದೇವೆ- ಎಂದು. ಮದವನ್ನು ಹೊತ್ತ ಇವರು ಅಲೆವುದದೆಷ್ಟೊ(ಕಾಣರು) ಅಲ್ಲದೆ ಕಾಯಿಗಳು ಹಣ್ಣಾದಾಗ, ಸ್ವಯಂ ತಾವೆ ನಿರ್ಗಮಮಾರ್ಗವಿಲ್ಲದ ಜಾಲದಲ್ಲಿ ಬಿದ್ದುಬಿಡುತ್ತಾರೆ!! )

    • ಕೊಪ್ಪಲತೋಟರೆ,ಚೆನ್ನಾಗಿದೆ. ಮೊದಲನೆಯ ಪಾದದಲ್ಲಿ ಟಂಕನದೋಷವಾಗಿ ಮಾತ್ರೆಗಳು ಹೆಚ್ಚಾಗಿವೆ.ಬಗೆಯೊಳ್- ಇಲ್ಲದಲ್ಲಿ ಸರಿಯಾಗುವುದು,ಅಲ್ಲವೆ ?

      • ಓಃ… ಹೌದಲ್ಲಾ.. ಗಮನಿಸಲಿಲ್ಲ .. ತಿದ್ದುತ್ತೇನೆ. ಧನ್ಯವಾದಗಳು 🙂

        • ಪದ್ಯದ ಬಂಧವೂ ಕಲ್ಪನೆಯೂ ಸೊಗಸಾಗಿವೆ. ಅಭಿನಂದನೆಗಳು.

          • ಧನ್ಯವಾದಗಳು ಸರ್ 🙂

  16. ಮರುಳನ್ನಾಗಿಸಿತಂದು ಧರ್ಮಜನ ತನ್ನೀ ಜಾಲದೊಳ್ ಸಿಲ್ಕಿಸು
    ತ್ತರಿದುರ್ಯೋಧನಗಿತ್ತುದೈಜಯಮನೀಜೂದಾಟದೊಳ್ ಮೋಸದಿಂ
    ಗರಮಂ ಬೀರುತಲಿರ್ಪನಾ ಶಕುನಿ ಪೇಳ್ದಂತಾಡುವಾ ದಾಳಮೇ
    ಕುರುವಂಶಾಸ್ತಮಕಾಯ್ತೆ ನಾಂದಿಯೆನುತೀ ದ್ಯೂತಕ್ಕೆ ನಾಂ ವಂದಿಪೆಂ

  17. ಕೆಲರೆನ್ನಂ ದೂಷಿಪರೈ
    ಕೆಲರತ್ಯುತ್ಸುಕ್ತರಾಗಿಮೆಚ್ಚುತ್ತಿರೆ ಕೈ|
    ಕುಲುಕುತೆ ದಾಳಮನೆಸಗಲ್
    ತೆಲೆಕಳಗಾಗಿರ್ಪುದೀರ್ವರನಿಸಿಕೆ ಚಣದೊಳ್|

    • ಒಳ್ಳೆಯ ’ಗರ’ಗಳು ಬಿದ್ದಾಗ ಕಾಯ್ಗಳನ್ನು ಸರಸರನೆ ನಡಸುವ ಸಭಿಕನಂತೆ ಚೀದಿಯು
      ಪುಂಖಾನುಪುಂಖವಾಗಿ ನಾನಾಛಂದಸ್ಸುಗಳಲ್ಲಿ ಪದ್ಯಗಳನ್ನು ಹಣ್ಣಾಗುವೆಡೆಗೆ ಸಾಗಿಸುತ್ತಿರುವುದಕ್ಕಾಗಿ ಅಭಿನಂದನೆಗಳು.
      ಒಂದು ಸವರಣೆ:
      …………………
      ಕೆಲರತ್ಯುತ್ಸಾಹದಿಂದೆ……………..
      ………………………
      ……………………………………

    • ಚೀದಿ! ಪದ್ಯಂಗಳಂ ನೋಡಿ ತಡವರಿಸಿತ್ತು
      ಜೂದಿನಾ ಗರಗಳೇ ಬೀಳುವಾಗಳ್ !!

  18. ಆಸೆಗಳನೊಡ್ಡುವಳು, ಮರಮರ-
    ಳೀಸು ಯತ್ನದ ಫಲವನೊಡ್ಡುವ-
    ನೇಸು ಕಾಲದ ಜೂಜನಾಡುವರೀ ಪ್ರಕೃತಿ ನರರು
    ಬೀಸುವರು ದಾಳಗಳ ಮೇಣ್ ಗೆ-
    ಲ್ವಾಸೆಯಿ೦ದಲಿ, ಬಿತ್ತರದ ಜಗ
    ಹಾಸಿರಲು ಪಗಡೆಮನೆಯೆ೦ಬೊಲು, ಸಮಯದೆಣಿಕೆಯಲಿ

    ಸೋಲನುಣ್ಣುತ ಘಾಸಿಪಡುವನು,
    ಸೋಲನವಳಿಗೆ ಮೇಣುಣಿಸುವನು,
    ಕಾಲವುರುಳಲು ಹಣ್ಣು ಹಣ್ಣಾಗುತಲಿ ಹಿ೦ದೆಗೆವ
    ಮೇಲು ಮೇಲಿ೦ದಾಸೆಗಳನೊ-
    ದ್ದೋಲವಿಸಿ ತನ್ನಾತ್ಮವನೆ, ತಾ
    ಲೀಲೆಯೊಳೆ ನೋಡುತ್ತಲಾಟವ ಕಾ೦ಬ ಪರಸುಖವ

    ಛ೦ದೋಮಾರ್ಗವೆನ್ನನೆಳೆದಿತ್ತು ದ್ಯೂತದಿ೦ದಧ್ಯಾತ್ಮದೆಡೆ ನೋಡಾ!

    • ಒಳ್ಳೆಯ ತಿರುವು! ಚೆನ್ನಾದ ಭಾಮಿನೀಷಟ್ಪದಿಗಳನ್ನು ಬರೆದಿದ್ದೀರಿ: ಅಭಿನಂದನೆಗಳು. ದ್ಯೂತದಿಂದ ಅಧ್ಯಾತ್ಮವೆಂಬುದು ಧರ್ಮರಾಜನ ಕಾಲದಿಂದಲೇ ಕುಪ್ರಸಿದ್ಧವಲ್ಲವೇ:-)

      • ಧನ್ಯವಾದಗಳು ಸರ್! ಆ ಕುಪ್ರಸಿದ್ಧಿ ಬೇಡ 🙂

      • ಆ ಕುಪ್ರಸಿದ್ಧಿಯು ಬೇಡ-ಬೇಡೆಂಬನಿತು-
        ಮಾಕಾರ ಕೊಟ್ಟೋಯ್ತೆ ಮೊಗದಽ|
        ಯಾಕಾರೆ ಬೇಕಿತ್ತೆಂದೇಟರಮಾಗುತ್ತೆ
        ಸಾಕಾಯ್ತೆ ನೀಲಕಂಠಯ್ಯ?

  19. ‘ದ್ಯೂತಂ ಕ್ಷಾತ್ರೇಯಂ’ ಅಪ-
    ಖ್ಯಾತಿಯದಿಂತೇಕೊ ಕಾಣೆ! ಗಣಿಸೆಲ್ಲಮನುಂ|
    ಸ್ಯೂತಂ ರಾಷ್ಟ್ರಗುಣ(ಸೂತ್ರ)ದಶಾ-
    ದ್ಯೋತ(ಅದ್ಯೋತ=shining)ಭರತವರ್ಷಮಿಂತುಮಾ ಕ್ಷಾತ್ರದಿನೇ||

  20. ಅತ್ತದೊ ಧರ್ಮರಾಯನವ ತಾಂ ಕುರುಪುತ್ರನೊಡಂ ಕುತಂತ್ರದೊಳ್
    ಲೆತ್ತವನಾಡಿ, ರಾಜ್ಯದೊಡೆ ತನ್ನವರಂ ಪಣಕಿಟ್ಟು ಸೋತಿರ-
    ಲ್ಕಿತ್ತಲಡರ್ದು ಧರ್ಮಸಮಯಂ, ತಲೆದೋರಿದ ನೋವಿನಿಂದವಂ
    ಚಿತ್ತಜಚಂಚಲ ದ್ಯೂತದಿನೆ ಬೆತ್ತಲುಗೊಂಡನೆಯಂತರಾಳದೊಳ್ ।।

    (ಚತ್ತಚಾಂಚಲ್ಯದಿಂದ “ಜೂಜಿ”ನಲ್ಲಿ ಸೋತವನ ಧರ್ಮಸಂಕಟ)

    • ಉಷಾ madam, “ಚಿತ್ತಜಚಂಚಲ ದ್ಯೂ” ಶಿ.ದ್ವಿ. ಸವರಣೆ ಬೇಕೆನಿಸುತ್ತದೆ. ..

      • ಹೌದು ಚೇದಿ, ಗಮನಿಸಿರಲಿಲ್ಲ
        **ಚಿತ್ತವಿಕಾರ ಕಾರ್ಯದಿನೆ……. ಎಂದು ಬದಲಿಸಿದರೆ ಸರಿಯಾದೀತೆ?

  21. ಕಾಮವ ಕೆರಳಿ ಮನವನಾಡಿಪ
    ನೇಮನಿಷ್ಠೆಯ ಗಡಣ ಮರೆಯಿಪ
    ಭಾಮೆನೆತ್ತಕೆ ಸೋಲದಿರ್ಪರು ಹಿತವ ಕಂಡರದಾರ್?
    ಜಾಮಜಾಮಕೆ ದೆಶೆಯ ಮುರಿದರು
    ಭೂಮನೇಹದ ಬೆಸಗೆಯೊಡ್ಡುತೆ
    ಕಾಮಿಹೃದಯಕೆ ತನಿಯನೆರೆವೀ ಕಾಂತೆಗೆರಗದರಾರ್?

  22. ಭತೃಹರಿಯ ವೈರಾಗ್ಯಶತಕದ ಪದ್ಯವೊಂದನ್ನು ಆಧರಿಸಿದ ಈ ಕಂದದ ಹೂರಣವು ಅನೇಕತ್ರ ಪ್ರಸಿದ್ಧವಾಗಿದೆ. ಆದರೂ ಈ ವರೆಗೆ ಸಹಪದ್ಯಪಾನಿಗಳಾರೂ ಇದರತ್ತ ಗಮನಹರಿಸದ ಕಾರಣ ನಾನೇ ಮುಂದಾಗಿದ್ದೇನೆ. ನಾವೀನ್ಯಾಭಾವವನ್ನು ಮನ್ನಿಸುವುದು:

    ಜಗತೀಫಲಕದೆ ಜೀವರೆ
    ಬಗೆಗೊಂಡಿರೆ ಕಾಯ್ಗಳಾಗಿ, ಸೂರ್ಯೇಂದುಗಳೇ|
    ನಗುತಿರೆ ದಾಳಂಗಳೆನಲ್
    ಜಗದೀಶಂ ಕಾಳಿಯೊಡನೆ ಕೇಳಿಯೊಳಿರ್ಪಂ||

    • ಬಹಳ ಚೆನ್ನಾಗಿದೆ ಮತ್ತೆ ಹೊಸದಾಗಿಯೂ :-). ನಿಜಕ್ಕೂ ಇದು ಹೀಗೆಯೇ ಇದ್ದಿರಬಹುದೆಂದೆನಿಸದಿರದು.

    • ಆಹಾ, ನಿಜವಾಗಿಯೂ ಅತ್ಯದ್ಭುತವಾದ ಕಲ್ಪನೆ..

  23. ಪದ್ಯಪಾನದಲ್ಲಿ ನನ್ನ ಮೊದಲ ಷಟ್ಪದಿ

    ದ್ಯೂತನೆಂಬುವ ಮಾಯೆಯಾ ಭಟ-
    ನಾತತಾಯಿಗಳಾಯುಧೋತ್ತಮ-
    ನಾತಪೀತನಯಾತ್ಮಜನ ಮೇಣ್ ನಳನ ಮುಳುಗಿಸಿದಂ l
    ವೀತಕರುಣಂ ಭೂತಿಹರಣಂ
    ನೀತಿದೂರರ ಪರಮಶರಣಂ
    ಮಾತಿಗೆಮ್ಮಳಮಲ್ತದೀತನ ಪರಿಯ ವಿಸ್ತರಮಯ್ ll

    ಆತಪೀತನಯಾತ್ಮಜ – ಧರ್ಮರಾಯ

    • ಒಳ್ಳೆಯ ಶೈಲಿ. ಆದರೆ ’ಆತಪಿತನುಜ’ ಎಂದಲ್ಲವೇ ಸಾಧುರೂಪ! (ಆತಪಃ ಅಸ್ಮಿನ್ನಿತಿ ಆತಪಿನ್; ತಸ್ಯಾಪತ್ಯಂ ಪುಮಾನ್ ಆತಪಿತನಯಃ)

      • ಹೌದು ಸರ್, ಈ ಸಂದೇಹವನ್ನಿಟ್ಟುಕೊಂಡೇ ಬರೆದೆ.
        ಆತಪಿಯ ಸುತನಾತ್ಮಜನ’ ಎಂದು ತಿದ್ದಿದರೆ ಸರಿ ಹೋಗುವುದೇ

  24. ಅನಿಶ್ಚಿತತಾ ಸಿದ್ಧಾ೦ತದ ಬಗ್ಗೆ ಐನ್ಷ್ಟೈನ್ ನ ಟೀಕೆಯ ಕುರಿತು ಹಾಗೂ ಅನಿಶ್ಚಿತತೆಯ ಅನಿವಾರ್ಯತೆಯ ಕುರಿತು 🙂

    ನಿಶ್ಚಿತದಿ ದೇವನಾಡನು
    ದುಶ್ಚೇಷ್ಟೆಯ ನೆತ್ತಮ೦, ತಿಳಿವುದೆ೦ದೈನ್ಷ್ಟೈನ್
    ನಿಶ್ಚಲಮನದಿ೦ ಪೇಳ್ದನ-
    ನಿಶ್ಚಿತತಾ ತತ್ತ್ವಮ೦ ಕುರಿತು, ಹೀಗಳೆವೊಲ್

    ನಿಶ್ಚಿತಮಾವುದೊ ಕಾಣೆವ-
    ನಿಶ್ಚಿತಮಾವುದಲ ಮೇಣರಿಯಲಾದೊಡೆ ಕೇಳ್
    ನೈಶ್ಚಿತ್ಯದಿ೦ದನ೦ತ೦
    ನಿಶ್ಚಿತಮಾಗದದನ೦ತಕರ್ತ೦ ದೇವ೦!

    ನಿಶ್ಚಿತಮನಿಶ್ಚಿತಮೆನುತ
    ನಿಶ್ಚಿಯಿಸುವುದೆಮ್ಮ ಬುದ್ಧಿ, ಏ೦ ಪೇಳ್ವೆನೊ! ಯಃ –
    ಕಶ್ಚಿತರಲ ನಾವ್, ಇದು ದಲ್
    ದುಶ್ಚಿ೦ತ್ಯ೦, ದೇವನೆಮ್ಮ ಬುದ್ಧಿಗೆ ದೂರ೦!!

    ಶ್ಚಕಾರಕುಕ್ಷಿಯೆನ್ನದಿರೀ ನೀಲಕ೦ಠ೦ಗೆ 🙂

    • ’ಶ್ಚ’ಕಾರಕುಕ್ಷಿಯೆಲ್ಲಿ? ಇರುವುದು ಒಂದೇ ’ಶ್ಚ’ಕಾರ; ಒಂದು ’ಶ್ಚೇ’ಕಾರವು. ಉಳಿದೆಲ್ಲವೂ ’ಶ್ಚಿ’ಕಾರಗಳೇ!
      ನೀ ’ಶ್ಚಿ’ಪ್ರಾಸಮನೆಲ್ಲುಂ
      ವೃಶ್ಚಿಕದೊಲು ಪರಿಯಿಸೇಂ ಗಡೀ ಮಾದರಿಯೊಳ್|
      ಆಶ್ಚರ್ಯಮೀರೆಡೆಯೊಳಗ-
      ನಿಶ್ಚಯದಿಂ ’ಶ್ಚೇ’ ’ಶ್ಚ’ಮಂ ಬಳಸಿಹಿರದೇಕೋ||

      • ರ೦ಪರೆ, ನನ್ನ ಜನ್ಮರಾಶಿ ವೃಶ್ಚಿಕವೇ 🙂

      • ಗೊತ್ತಿಲ್ದೆ ಸುಮ್ಸುಮ್ಕೆ ಚಿತ್ತಕ್ಕೆ ಬಂದ್ಹಂಗೆ
        ಕೆತ್ತಿವ್ನೇನ್ಪದವಽ ಕಂಠ್ರಾಯ| ನಿನ್ಸುಳಿಯ-
        ನಿತ್ತಿತ್ಲಾಗ್ ಸಂದಾಗರಿತಿವ್ನಿ||

        • ನೀಲಕಂಠರೆ ನಿಮ್ಮ ಈ (ಚಿಚ್ಛಕ್ತಿಶ್ಚೇತನಾರೂಪದ) ನೀಳಕಂದಗಳನ್ನ ನಿಶ್ಚಿತವಾಗಿ ನಿಶ್ಚಿಂತವಾಗಿ ಓದಿ ಪ್ರತಿಕ್ರಯಿಸಲು ನಿಶ್ಚಯಿಸಿದ್ದೇನೆ !!

          • ಧನ್ಯವಾದಗಳು ಉಷಾ ಮೇಡಮ್! ನಿಮ್ಮ ಪ್ರತಿಕ್ರಿಯೆಗೆ ಅನಿಶ್ಚಿತ ಕಾಲದವರೆಗೂ ಕಾಯುತ್ತೇನೆ 🙂

    • ಒಳ್ಳೆಯ ಕಲ್ಪನೆ ಮತ್ತು ಒಳ್ಳೆಯ ಶೈಲಿಯ ಪದ್ಯಗಳು; ಧನ್ಯವಾದ.

  25. ಛಾತಿಯಿರ್ಪಜನರಲ್ತೆ ಜಾಣ್ಮೆಯಿಂ
    ದ್ಯೂತದಬ್ಧಿಯನೆ ಮೀಸಲಿಚ್ಚಿಪರ್ !
    ಜಾತವಾರಿಯಲೆಯೆಂಬವೊಲ್ ನಿಜಂ
    ಸೋತು ಗೆಲ್ಲುತಲೆ ಲೀನಗೊಂಬರೈ !!

  26. ಸನಾತನಧರ್ಮ is a federal concept. It is the sum total of ರಾಜಧರ್ಮ, ಯೋಧಧರ್ಮ, ಪ್ರಜಾಧರ್ಮ, ಶಿಕ್ಷಕಧರ್ಮ, ಛಾತ್ರಧರ್ಮ etc. etc. etc. ದ್ಯೂತಧರ್ಮ (the laws concerning gambling) is one among them.
    ಮಲ್ಲಿಕಾಮಾಲೆ|| ಆ ಸನಾತನಧರ್ಮ ತಾಂ ಬಹುಧರ್ಮದೊಟ್ಟಿನ ನಾಮವೈ
    ಜೈಸೆ ಯೋಧಗೆ ಧರ್ಮಮೊಂದಿಹುದಂತೆ ಶಿಕ್ಷಕಧರ್ಮ ಮೇಣ್|
    ದಾಸಗೊಂದು ನರಾಧಿಪಂಗಿಹುದೊಂದು ಧರ್ಮಮುಮಂತೆಯೇ
    ಮೋಸಮೆನ್ನಲು ಸಲ್ಗುಮೇಂ ಸಲೆ ದ್ಯೂತಧರ್ಮಮೆನಿಪ್ಪುದಂ||

  27. ದ್ಯೂತವನ್ನೊಂದು ನಾಟ್ಯಕ್ಕೆ ಹೋಲಿಸಿ ಇದೊಂದು ಮಲ್ಲಿಕಾಮಾಲೆ:

    ದಾಳಪಾತದ ತಾಳಲೀಲೆಗೆ ಶಾರಿನರ್ತಕಿ ನರ್ತಿಸಲ್
    ಗಾಳಿಯಂದದೆ ಜೂದುವಾಸಿನ ರಂಗದೊಳ್, ಸಭಿಕರ್ ಸಲಲ್|
    ಕೋಳುವೋಪುದೆ ರಾಗಮಾಗಿರೆ, ಗೀತಮಾಗಿರೆ ಲೋಭಮೇ
    ಗೋಳೆ ನಿರ್ವಹಣಂ ದುರೋದರನಾಟ್ಯಕಂ ಶಿವಕಾಟ್ಯಕಂ||

    (ಶಾರಿ = ಆಟದ ಕಾಯಿ, ಜೂದುವಾಸು = ದ್ಯೂತದ ಹಾಸು ಅಥವಾ ಮಣೆ,
    ಸಭಿಕ = ಜೂಜುಗಾರ ಅಥವಾ ಕಲೆಯನ್ನು ಆಸ್ವಾದಿಸಲು ಬಂದ ಸಭಾಸದ,
    ಕೋಳುವೋಪುದು = ಮೋಸಹೋಗುವುದು, ನಿರ್ವಹಣ = ಪರಿಣಾಮ, ಇದು ನಾಟಕದಲ್ಲಿ ಬರುವ ಐದು ಸಂಧಿಗಳ ಪೈಕಿ ಕಡೆಯದು. ಇಲ್ಲಿಯೇ ಇಡಿಯ ರೂಪಕದ ಸಮಾಪ್ತಿಸ್ವಾರಸ್ಯವಿರುತ್ತದೆ. ಪ್ರಕೃತದಲ್ಲಿ ಅದು ಸದಾ ಗೋಳಾಟವೆಂದು ತಾತ್ಪರ್ಯ.
    ದುರೋದರನಾಟ್ಯ = ಜೂಜೆಂಬ ನಾಟಕ, ಶಿವಕಾಟ್ಯ = ಮಂಗಳವನ್ನು ಹಾಳುಮಾಡುವಂಥದ್ದು.)

    • ರಾಗಮಾಗಿರೆ, ಗೀತಮಾಗಿರೆ ಲೋಭಮಾದುದುವೆಮ್ಮಗಂ …!!
      ಎಂಥ ಅದ್ಭುತ ಕಲ್ಪನೆ ! ಎಂಥ ಸುಂದರ ಬಂಧ !! ಬಹಳ ಸಂತೋಷವಾಯಿತು ಗಣೇಶ್ ಸರ್, ತುಂಬು
      ಹೃದಯದ ಧನ್ಯವಾದಗಳು. (ಪದ್ಯವನ್ನು ಬರೆದಿಟ್ಟುಕೊಂಡು, ಬಹಳಷ್ಟು ಹೊಸಪದಗಳನ್ನು / ಹಳೆಗನ್ನಡದ ಹದವನ್ನು ಗಮನಿಸಿಕೊಳ್ಳುತಿದ್ದೇನೆ.)

      • ಸಾರಸ್ವತಸಹೋದರಿ ಉಷಾ ಅವರಿಗೆ ಕೃತಜ್ಞತಾಂಜಲಿಗಳು.

    • ದ್ಯೂತಮಂ ಕಮನೀಯನಾಟ್ಯಕೆ ಪೋಲಿಸಿರ್ಪ ಪದಾಮೃತಂ.

      ಸಹೋದರರೆ, ಅತಿಮನೋಹರವಾದ, ಬೋಧಪ್ರದವಾದ ನಿಮ್ಮೆಲ್ಲಾ ಪದ್ಯಗಳಿಗಾಗಿ ಹೃತ್ಪೂರ್ವಕಧನ್ಯವಾದಗಳು.

    • ಕೋಳುವೋಪೆವೆ? ರಾಗರ್ ಆಗಿರೆ ಗೀತಕಾರರು ಕಾಣ್ಕೆಗಂ|

    • “ದುಗ”ದಗರವದಿಂತು ಮೊದಲೊ-
      ದಗಿರಲ್ ದ್ಯೂತದೊಳು ನಿಶ್ಚಿತವು ಜಯಮೆಂಬರ್ !
      ಬಗೆಯ ಸರಿಗರವ ತಿರುಗಿಂ-
      ತೊಗೆದುಂ ದಾಳದೊಡೆ ತಾಳಮೇಳದೆ ಗೆಲಿದರ್ !!

      (ಪಗಡೆಯಾಟದಲ್ಲಿ, ಮೊದಲ ಗರ “ದುಗ” ಬಿದ್ದಲಿ ಗೆಲ್ಲುವರೆಂಬ ಪ್ರತೀತಿ, ಅಂತೆಯೇ ಆರಂಭದಲ್ಲೇ ಎರಡು ಪದ್ಯ ಬರೆದ ಗಣೇಶ್ ಸರ್ ಜಯಶಾಲಿಯಾಗಿದ್ದಾರೆ ಅಲ್ಲವೇ?! )

      • ಸರಿಪೇಳಿರ್ಪಿರಿ ನೀಮಿದ
        ಗರದುಗಮೇ ಕಾರಣಂ ಗೆಲುವಿಗಮವರ್ಗಂ|
        ಗುರುಸಂಖ್ಯೆಯ ಕವನಗಳಿರೆ
        ಸೊರಗವೆ ನಿಜಗೌರವಕ್ಕಮಾಗಳ್ ಸೋಲೇ!! 😉

  28. ಪಗಡೆಯಾಟಮೊ ದುಗುಡದೋಟಮೊ
    ಬಿಗಡಮೊಡ್ಡುವ ರುಗ್ಣ ತಂತ್ರಮೊ
    ನೆಗಹಿ ನುಜ್ಜುಗು ಬಲಿತಬಾಳ್ತೆಯ ಪೂವ ಹಿಸುಕಿದವೊಲ್
    ಮಗುಚಿತಲೆ ಕೌಂತೇಯ ದೇಶಮೆ,
    ಪಗಲನಟ್ಟುತೆ ಜೂಜ ಮೇಘಮೆ
    ಬಗೆಯಮುಸುಕಿರೆ ಧರ್ಮಜನ ದುರ್ದಿನಮ ಕಂಡಿತಲೆ

  29. ಒಂದಂಕಿ ಲಾಟರಿ ಮರು ಹ-
    ನ್ನೊಂದಂಕಿಯೊಡಾಡುವಾ ಪರಿಯ ಗರದಾಟಂ ।
    ಸಂದಿಗ್ಧದ ಪರಿಪಾಟವಿ-
    ದುಂ ದ್ಯೂತಂ ಸಹಿತ ಜೀವಿಪರ ಪರದಾಟಂ ।।

    (“ಹನ್ನೊಂದು” ಇಲ್ಲದ, (1-12)ಹನ್ನೊಂದಂಕಿ ಗರಗಳ ಆಟ = ಪಗಡೆಯಾಟ)

    • ಮೊದಲನೇ ಪಾದದಲ್ಲಿ ಕಡೆಯ ಅಕ್ಷರ ಗುರುವಾಗುವ ಕಾರಣ ಒಂದು ಮಾತ್ರೆ ಹೆಚ್ಚಾಗಿದೆ..

      • ಚೇದಿ ಗಮನಿಸುವ ಮೊದಲು ಸರಿಪಡಿಸಬೇಕು ಅಂದುಕೊಂಡೆ …!
        (ಹೇಗೆ ತಿದ್ದುವುದೆಂದೇ ತಿಳಿಯುತ್ತಿಲ್ಲ)
        ** ಒಂದಂಕಿ ಲಾಟರಿಯ, ಹ-

  30. ವ್ಯಸನಂ ,ದ್ಯೂತದಾಟಂ ದಲ್
    ವಾಸಿಕುಂ ಭೇದತೋರದಲ್.
    ಸೂಸಿದಾ ಕೃಷ್ಣಧೂಮಂ ತಾಂ
    ಲೇಸೆಂಬುದೇಂ ಸುಧಾಗೃಹಂ?

    (ವ್ಯಸನವು ಯಾರಲ್ಲಿ ಬೇಕಾದರೂ ನೆಲೆಸಬಹುದು(ಬಡವ,ಶ್ರೀಮಂತ ಮುಂತಾದ ಭೇದವೆಣಿಸದೆ),ಕಪ್ಪಾದ ಹೊಗೆಯು ಪ್ರವೇಶವನ್ನು ಸುಧಾಗೃಹದಲ್ಲೇ ಬಯಸುವುದೇ?)

    • ನಿಮ್ಮ ಶ್ಲೋಕರಚನಪ್ರಯತ್ನವು ಸ್ತುತ್ಯ. ಆದರೆ ಮೂಲದ ಪದ್ಯದಲ್ಲಿ ಅರ್ಥಸ್ಪಷ್ಟತೆ ಅಷ್ಟಾಗಿಲ್ಲವೇನೋ…. ಅಲ್ಲದೆ ಮೊದಲ ಸಾಲಿನಲ್ಲಿ ಸಿಂಹಪ್ರಾಸ ಬಂದಿದೆ.ಉಳಿದಂತೆ ಮೂರೂ ಸಾಲುಗಳಲ್ಲಿ ಗಜಪ್ರಾಸವಿದೆ. ಸ್ವಲ್ಪ ಸವರಿಸಿದರೆ ಹೀಗಾದೀತು:
      ಮೋಸಂ ವ್ಯಸನಮೀ ದ್ಯೂತಂ
      ಭಾಸಿಕುಂ ಬಿಟ್ಟು ಭೇದಮಂ|
      ಸೂಸದೇಂ ವಹ್ನಿ ಸರ್ವತ್ರಂ
      ಮಾಸಿಪಾತ್ಮೀಯಧೂಮಮಂ||

      (ಮಾಸಿಪ = ಕಪ್ಪಾಗಿಸುವ, ಆತ್ಮೀಯ = ತನ್ನ)

      • ಧನ್ಯವಾದಗಳು. ನಿಮ್ಮೀ ಪದ್ಯವೂ ಬಹಳ ಚೆನ್ನಾಗಿದೆ.

  31. || ಮೇಘವಿಸ್ಫೂರ್ಜಿತವೃತ್ತ*||

    ನರರ್ ಮೋದಂಗೊಂಬರ್,ಪಗಡೆಯಮಲಿಂ ಜೂಜನಾಡುತ್ತೆ ಜೈಸಲ್.
    ಹರೇಕೃಷ್ಣಾ, ನೀನೇ ಪೊರೆಯೆನುತೆ, ಹಾ ! ಸಂಕಟಾಧಿಕ್ಯದಿಂ ಬೇ-|
    ಳ್ಪರೈ,ಗೆಲ್ಲಲ್ ಕೋರುತ್ತಪಜಯಮನೇ ತಾಳ್ದ ಭಗ್ನಾಶರಾಗಳ್ ,
    ಜ್ವರಂಬೊಂದಿರ್ಪಂತಾಗೆ, ವಿಧಿಲಿಖಿತಂ ಕಿಚ್ಚವೊಲ್ ತಾಪವೀಯಲ್ ||

    (*ವೃತ್ತದ ಹೆಸರನ್ನು ಸರಿಯಾಗಿ ಟಂಕಿಸಲು ತಾಂತ್ರಿಕವಾಗಿ ಸಾಧ್ಯವಾಗುತ್ತಿಲ್ಲ, ಪದ್ಯಪಾನಿಗಳು ಮನ್ನಿಸಿರಿ )

    • ದುಷ್ಕರವೃತ್ತವನ್ನು ಸಲೀಲವಾಗಿ ಸುಷ್ಠುಭಾಷೆಯಲ್ಲಿ ನಿರ್ವಹಿಸಿದ ನಿಮಗೆ ಧನ್ಯವಾದ.

      • ಸಹೋದರರೆ, ಪದ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಯುವ ಕುತೂಹಲವಿತ್ತು. ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.

  32. ಬಹುದಿನಾನಂತರಂ ತಪದಫಲದಿಂ ಪಡೆದ
    ಮಹದಾಸೆ ಪುತ್ರನುಂ, ಸಾಜವಿದಕಾಣ್ ।
    ಸಹಜದಿಂ ಸಲಹಲಪರಿಮಿತದೊಲವಿಂ ಕಡೆಗೆ
    ಸಹವಾಸದೋಷದಿಂ ಜೂಜಕಲಿತಂ ।।

    (ಅತಿಮುದ್ದಿನಿಂದ ಬೆಳೆಸಿದ ಬಾಲಕರು (ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ – ತಂದೆತಾಯಿಯಿಂದ ಹಣದೊರೆತು) , ಸಹವಾಸದೋಷದಿಂದ ಜೂಜುಕೋರರಾಗುವ ಪರಿಸ್ಥಿತಿಯ ವರ್ಣನೆ)

  33. ಅರ್ಥಮಾಯೆಯರಾಣಿ ಜೂದಿಗೆ
    ಸಾರ್ಥ ಸಮಯವ್ಯಯವು ದಿಟದೊಳ
    ನರ್ಥವೆಂಬುದನರಿಯರೇಂ ಕಾಣ್ಮೆಯಿನೆ ಜಾಣರುಗಳ್
    ವ್ಯರ್ಥಗೈಯದಲದನು, ನಿರುತ ಯ
    ಥಾರ್ಥ ಕಜ್ಜಮನೆಸಗಿ ಸಾಗಿರ
    ಲರ್ಥಪೂರ್ಣದ ನಿಧಿಯ ಕಂಡುದ ತಿಳಿಯರೇನವರು?

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)