Apr 212015
 

Bonzai

  74 Responses to “ಪದ್ಯಸಪ್ತಾಹ ೧೪೭: ಚಿತ್ರಕ್ಕೆ ಪದ್ಯ”

  1. ಮರನೇ! ಕುಬ್ಜತೆವೆತ್ತು ಪೂತು ಮೆರೆವೈ ಮೇಣ್ ಪಣ್ತು ತೋರಲ್ಕದೇ
    ತರ ಚೆಲ್ವೋ! ಮಗುವೊಂದು ತಾಳ್ದು ಬಸಿರಂ ತೋರ್ದಂತೆವೊಲ್ ಬಾಳ್ತೆಯೊಳ್
    ನೆರಳಾಗಲ್ ಪಲವರ್ಗೆ ಮತ್ತೆ ನೆಲೆಯಾಗಲ್ ಜೀವಿಗಳ್ಗಾಗಳೇ
    ಕೊರೆಯಿಲ್ಲಂ ಸಫಲತ್ವಮಕ್ಕುಮದರಿಂದಂ ವಂಚಿಸಲ್ಪಟ್ಟೆಯಾ!!
    (ಹೇ ಮರನೇ! ಕುಬ್ಜತೆಯನ್ನು ಹೊಂದಿ ಹೂತಳೆದು ಮೆರೆಯುತ್ತೀಯಾ, ಹಣ್ಣಾಗಿ ತೋರುವಾಗ ಅದೇತರ ಚೆಲುವು! ಮಗುವೊಂದು ಬಸಿರನ್ನು ತಾಳ್ದಂತೆ ತೋರುವುದು! ಬಾಳಿನಲ್ಲಿ ಹಲವರಿಗೆ ನೆರಳಾಗಲು, ಹಾಗೆಯೇ ಜೀವಿಗಳ್ಗೆ ನೆಲೆಯಾದರೆ ಆಗ ಕೊರತೆಯಿಲ್ಲದೆ ಸಫಲತ್ವವುಂಟಾಗುತ್ತದೆ(ಇಲ್ಲದಿದ್ದರೆ ಸ+ಫಲ ಅಷ್ಟೆ). ಅದರಿಂದ ವಂಚಿಸಲ್ಪಟ್ಟೆಯಾ!?

  2. ಪಾಪ, ಆ ಮರವೇನು ಮಾಡೀತು ಕೊಪ್ಪಲತೋಟರೆ?!!

    ಬೆಳೆದೌನ್ನತ್ಯವಿಲಾಸದೊಳ್ ಮೆರೆವೆನೆ೦ಬಾಕಾ೦ಕ್ಷೆಯಿರ್ದು೦ ಕೆಲ-
    ರ್ಗೊಲಿಯಲ್ಕೊಲ್ಲದ ಭಾಗ್ಯಮೈ ತರುಗಳ೦ ಭಾ೦ಡ೦ಗಳೊಳ್ ನಟ್ಟು ನಾವ್
    ಬೆಳೆಸಿರ್ಪ೦ದಮಿದೈ, ಕೆಲರ್ ಗರಿಕೆ ಪುಲ್ಲ೦ತಕ್ಕಟಾ ಕುಬ್ಜರಾ-
    ಗುಳಿದಿರ್ಪರ್ ವಿಪುಲಾವಕಾಶಮಿರಲು೦, ಮೇಳೈಸಲಾರ್ ಬಲ್ಲರಯ್!

  3. ರಕ್ಷಣೆಯಬ್ಬೆಯದಿರೆ ಮುಂ
    ದಕ್ಷರಶ:ಮಾನ್ಯರಪ್ಪವೊಲ್ ದಿಟ ನವಜಾತರ್,
    ಕಕ್ಷೆಯೊಳಿರ್ದೊಡಮವನಿಯ
    ವೃಕ್ಷ ,ತರು ಲತಾದಿಗಳ್ ಬಳೆದು ಫಲಮೀಯ್ಗೇಂ?
    (ಭೂಮಿಯ ರಕ್ಷೆಯಲ್ಲಿ ಬೆಳೆಯದ ಗಿಡದ ಬೆಳವಣಿಗೆ ಕುಂಠಿತವಾಗಿದೆಯೇ?)

  4. ಉದ್ಭವಗೊಂಡದೊ ಮೂರುತಿ
    ಯುದ್ಭಿಜದೊಳುವಿಂತು ಮೂಡುದುದ್ಯಾನದೊಳುಂ ।
    ತದ್ಭವವಿದುವೈ ಮಾರುತಿ
    ಯುದ್ಭ್ರಾಂತಗೊಳಿಸುದುದೆಮ್ಮನುನ್ಮೀಲಿತದಿಂ ।।

  5. ಬೇಲಿಯೇ ತಾನೆದ್ದು ಪೊಲವನ್ನು ಮೇವುದಂ
    ಕಾಲsವು ಕಂಡಾಯ್ತು ಎಂದೋ|
    ಖಾಲಿಗೈಯುತ್ತಿಹುದು ಕಾಂಡವೆ ತಾನಿಲ್ಲಿ
    ಮೇಲಿರ್ಪ ರೆಂಬೆಗಳ ನುಂಗಿ!!
    The stem is like a human/animal with a head consisting of only mouth, and it is in the process of swallowing the branches 🙂

  6. ಜನಿಸುವೊಡೇನದಾವ ಜಗಮೋ ಕುಲಮೋ ಸಮಯ೦ ಗಡಾವುದೆ೦-
    ದೆಣಿಸಿದೆಯೇ೦ ಲಲಾಟಲಿಖಿತ೦ ಪಳಿಯಲ್ಕೆರವಾದುದೇ೦, ಸ್ವಜೀ-
    ವನವನದೊಳ್ ಸ್ವಕೀಯಮೆನಿತಿರ್ಪುದೊ ನೀರ್ನೆಲಗಾಳಿಕೂಳುಗಳ್
    ತಣಿದದರಿ೦ ವಿಕಾಸಮೆನಿತೋ ದೊರೆಕೊಳ್ವುದು, ಚಿ೦ತಿಸಲ್ಕದೇ೦

  7. वामनोऽसि महावृक्ष ! भाण्डे किमिह वर्धसे ।
    पृथिव्यां वर्धमानस्त्वं त्रैविक्रम्यमवाप्नुयाः ॥
    (ಸಂಸ್ಕೃತದಲ್ಲೇ ತಲೆಯೋಡುವುದು. ಕ್ಷಮಿಸಬೇಕು!)

    • ಚೆನ್ನಾಗಿದೆ..ಚಿತ್ರಕ್ಕೆ ಪದ್ಯದಲ್ಲಿ ಭಾಷೆಯ ನಿಬಂಧನೆಯೇನೂ ಇಲ್ಲವಲ್ಲ 🙂

  8. ಹಂಡೆಯೊಳಿರ್ದರೆ ಮಂಡೂ
    ಕಂ ಡಂಬರಮ ನರಿಗೇಂಹೊರ ಜಗದನೆಂದುಂ?
    ಕುಂಡದೆ ಕುಂದಿರೆ ಸಸಿಯುಂ
    ಕಂಡುಣುಗೇಂ ಲೋಕದಳ್ತಿಯ ಬಿಡದೆಡೆಯಿಂದಂ?

  9. ಕರಿಯಂ ಕನ್ನಡಿಯೊಳ್ ನಿರೂಪಿಸಲದಿನ್ನೆಂತಿರ್ಪುದೋ ಅಂತೆಯೀ
    ತರುವಂ ಕುಂಡದೆ ಕಂಡರಿಪ್ಪ ಕತಮೆಂದಾಂ ಚಿಂತಿಪೆಂ ದೋಷಮೇಂ?
    ಪರಮಾತ್ಮಂ ಸಿಗದಾಗೆ ತತ್ಪ್ರತಿಮೆಯಂ ಕಯ್ಕೊಳ್ಳರೇಂ ಮಾನವರ್?
    ಧರಣೀಜಕ್ಕನುಜಾತನಂತೆಸೆವುದೀ ಸಂಕ್ಷಿಪ್ತಸಾಲಂ ವಲಂ||

    ಮುನ್ನಾ ವಾಮನಮೂರ್ತಿ ಜನ್ನದೆಡೆಯೊಳ್ ತ್ರೈವಿಕ್ರಮಪ್ರಕ್ರಮಾ-
    ಪನ್ನಂ ಮೇವರೆದಂ ಗಡಾ ವಿಟಪಿ! ನೀಂ ನಿನ್ನೊಂದು ತ್ರೈವಿಕ್ರಮೋ-
    ದ್ಭಿನ್ನಾಕಾರಮನಿಂತು ವಾಮನತೆಯಿಂ ಕುರ್ಗಿಪ್ಪ ಕೈವಲ್ಯಮೇಂ?
    ಬನ್ನಂಬಟ್ಟ ಭವತ್ಸುಮೂಲಗತಿಯಂ ಭಾವಿಪ್ಪ ದುಃಖಾರ್ತಿಯಾಮ್||

    • ಇದುಮಲ್ಲಂ ಗಡ ಬಿಂಬಮಲ್ತೆ ಇದು ತತ್ಪ್ರತ್ಯಕ್ಷರೂಪಂ ನಿಜಂ
      ಬೆದಕಲ್ ಧೂರ್ತರ ಕಲ್ಪನಾವಿಕಲತಾರೂಕ್ಷಕ್ಕು ಸಿಲ್ಕಿರ್ಪುದೈ

  10. ನರಸಿಂಹನಂದು ಪಡಿಮೂಡಿದಂದದಿಂ
    ನರಶಾಖಿಯಿಂದು ಬೆಳಗಿರ್ಪುದಿಲ್ಲಿ ವಿ-
    ಸ್ತರಿಸಲ್ಕೆ ಶಕ್ತಿಯಿರದಿರ್ದೊಡಂ ಸಮ-
    ಸ್ತರ ನೇತ್ರಕೌಮುದಿಯವೊಲ್ ಮನೋಹರಂ||

  11. ಅ೦ಕುಡೊ೦ಕಿನ ಈ ಕುಬ್ಜ ಮರ ಮತ್ತು ಅದಕ್ಕೆ ಅ೦ಟಿಕೊ೦ಡಿರುವ ಲತೋಪಮವನ್ನು ಕ೦ಡು ಜನ್ನನ ಯಶೋಧರ ಚರಿತೆ ನೆನಪಾಯಿತು 🙂

    ಸ್ವೀಯಸುಧಾ೦ಶುರೂಪವರನ೦ ಸುಗುಣಾ೦ಬುಧಿಯ೦ ಸುಶೋಭನ೦
    ಶ್ರೀಯುವತೀಕಟಾಕ್ಷಪರಿಪೋಷಿತನ೦ ಸಿತಕೀರ್ತಿಕಾ೦ತನ೦
    ಸ್ವೀಯಸುಖಾ೦ತ್ಯದಿ೦ದುಳಿದು ದುರ್ಮತಿಯಿ೦ ನಡೆದಷ್ಟವ೦ಕನೊಳ್
    ಕಾಯಮನೊಡ್ಡಿದಳ್, ತರುಲತಾದಿಗಳೊಳ್ ಗಡದೇ ವಿಕಾರಮೇ೦!

  12. ಬೇರು ತೋರಿರಲಿಂತದಾಳಕಿಳಿಯದೆಯಂತು
    ವೇರುದೆಂತದುವಿಳೆಯ ಸಾರಸತ್ವಂ ।
    ಕೋರೆಗೊಂಡದೊ ರೆಂಬೆ ಸೂರೆಗೊಂಡಿದುದೆಂಬೆ
    ನಾರತಿಳಿವಳಿಕೆಗಿದು ಸಾರ್ಥಕತ್ವಂ ।।

  13. ಕಾಂಚನ-ಕೊಪ್ಪಲತೋಟ-ಉಷಾ-ನೀಲಕಂಠ-ಪ್ರಸಾದು ಮುಂತಾದ ಎಲ್ಲರ ಕಲ್ಪನೆಗಳೂ ಬಂಧಗಳೂ ಚೆನ್ನಾಗಿವೆ. ಅಭಿನಂದನೆಗಳು. ಇನ್ನೂ ಪೂರ್ಣವಾಗಿ ಬಿಡದ ನನ್ನ ಕೈಬೆರಳಿನ ನೋವಿನ ಕಾರಣ ಸಾಮೂಹಿಕಪ್ರತಿಕ್ರಿಯೆ ಸಲ್ಲಿಸಿದ್ದೇನೆ. ದಯಮಾಡಿ ಅನ್ಯಥಾ ಭಾವಿಸದಿರಿ.

  14. ಕಗ್ಗ೦ಟಿರ್ಪಾ ವೃಕ್ಷ೦
    ಕುಗ್ಗಿರ್ಪೆಮ್ಮೀ ಮನಕ್ಕಮಲ್ಲ್ತೇ೦ ಸಾಮ್ಯ೦
    ಮುಗ್ಗಾಗಿರ್ಪೀ ಕಗ್ಗ೦
    ಸಗ್ಗಕ್ಕೆ೦ದು೦ ಮನ೦ಗೊಳಲ್ಕ೦ಡಿಲ್ಲ೦

    • “ಮನಕ್ಕಮಲ್ತೇಂ…..” ಎಂದು ಸವರಿಸಿದರೆ ಸಾಧುವಾದೀತು.

    • ಮನ೦ಗೊಳಲ್ಕ೦ಡಿಲ್ಲವೆ?
      ಕಂಡರಿಯದೆ ಚಿತ್ರಮನುಂ
      ಖಂಡಕವನಮನ್ನುಮೀಪರಿಯೊರೆದೆಯಯ್ಯಾ!
      ಮುಂಡವಿರುದ್ಧಾಗ್ರದೊಳಿ
      ರ್ಪಂಡನು ನಿರುಕಿಸಿ ಪುನಾರಚಿಸಳೊಳಿತಯ್ಯಾ|| 😉

  15. ಕಾಲೂರಿರ್ಪುದು ಕಲ್ನೆಲಂ, ತನುವೊ ಕೌಟಿಲ್ಯಾತಿರೇಕಂ ಕರಂ;
    ಮೇಲಿನ್ನಿರ್ಪ ನವಪ್ರವಾಲವಲಯಾಲಂಕಾರಮೇನುಜ್ಜ್ವಲಂ!
    ಸೋಲುತ್ತುಂ ನಿನಗಾಗಿ ತುಯ್ವ ಲತೆಯಾ ಲಾವಣ್ಯಮೇಂ ಗಣ್ಯಮೋ!
    ಜಾಲಿಕ್ಕುಂ ತರುವೇ! ತದಿಯವಿಕಟಾನಂದಂ ಮದೀಯಾತ್ಮಮಂ||

    ತೆವಳುವ ನರನಂತೆ ಕಾಣ್ಗುಮೀ ಸಾ-
    ಲವರಂ ಮಂಡಿಯ ಮೇಲೆ ದೀನದೀನಂ|
    ಪ್ರವಿಲಸದಮಲಪ್ರವಾಲವಾಲ್ಲ-
    ಭ್ಯವಿತೀರ್ಣಶ್ರಮದಿಂದಮೆಂತೊ ಎಂತೋ!

    ದ್ರುಮಸುಮತಿಯಿವಳ್ ಪಲ್ಲವ-
    ಸಮೂಹಪತಿಯಂ ಶಿರಸ್ಸಿನೊಳ್ ತಳೆಯುತ್ತುಂ|
    ಕ್ರಮಿಸಿದಳೇಂ ಕಟುಪಥಮಂ
    ನಮಿಸುವಳೇನಾ ಲತಾವನಿತೆ ಕಂಡಿವಳಂ?

    • ಅನ್ಯಾಯ೦ ಗಡ! ಎಮ್ಮ ಪದ್ಯ೦ಗಳ್ಗೆ ಮಾರ್ನುಡಿಯಲ್ ಬೆರಳ್ ನೊ೦ದಿರ್ಪ ನೆಪ೦. ಈಗಳಾ ಸರಸತಿಯೆ ಬರೆದಳೇ೦ ಭವದ೦ಕಿತದೊಳೀ ಸುಮಹತ್ಪದ್ಯ೦ಗಳ೦?!!

      • ಗೆಳೆಯರೊರ್ವರ್ ಬಂದು ಕಂಡೆನ್ನ ಕಷ್ಟಮಂ
        ತಿಳಿಗೊಳಿಸಿದರ್ ನೀಲಕಂಠ! ಕೃತಿಯಂ|
        ಕಳೆಗುಂದಿರಲ್ ವೆರಲ್, ವಾಗ್ದೇವಿಯೊಲವಿಂ ಬ-
        ಹಳಸಾಹ್ಯಮಿತ್ತ ಕಲ್ಪನೆಯೆ ಸೊಗಸಯ್!!

        • ಮಿತ್ರರವರನಾಂ ಬಲ್ಲೆಂ!
          ಚಿತ್ರಮೆನಿಪ್ಪಂತೆ ಸೂಚಿಯೊಳ್ ಚುರ್ಚುತೆ ಸರ್-
          ವತ್ರದ ನೋವಂ ಕಾಶಿಯ
          ಯಾತ್ರೆಗೆ ಕಳುಪಿರ್ಪರಲ್ತೆ! ವಂದಿಪೆನವರ್ಗಾಂ!

          • ಅರ್ಥವಾಗಲಿಲ್ಲ ಕೊಪ್ಲತೋಟಾ!

          • ಆ ಮಿತ್ರರನ್ನು ನಾನು ಬಲ್ಲೆ. ಆಶ್ಚರ್ಯ ಆಗುವಂತೆ ಸೂಜಿಯಲ್ಲಿ ಚುಚ್ಚುತ್ತ ಸರ್ವತ್ರದ ನೋವನ್ನೂ ಕಾಶೀಯಾತ್ರೆಗೆ (ದೂರಕ್ಕೆ) ಕಳುಹಿಸಿಬಿಡುತ್ತಾರಲ್ಲ.. ಅವರಿಗೆ ನಾನು ವಂದಿಸುತ್ತೇನೆ 🙂

    • ಗಣೇಶ್ ಸರ್,
      ಪದ್ಯಗಳೆಲ್ಲ ಒಂದಕ್ಕಿಂತ ಒಂದು ಚೆನ್ನಾಗಿವೆ. ನಿಮಗೆ “ದೀನ”ನಾಗಿ ಕಂಡದ್ದು ನನಗೆ “ದಾನಿ”ಯಾಗಿ ಕಂಡಿದೆ !!

      ಮಾನವನೇಂ ಮೇಣುದ್ಭಿಜ
      ದಾನವನೇಂ ದೈವರೂಪಧಾರಣನೇಂ ಕಾಣ್
      ದೀನಾಧೀನಂ ಕುಬ್ಜಂ
      “ದಾನಿ”ಯುತಾಂ ವಕ್ರಧಾರಿ !! ಮರದಿಂ ಮರದೊಲ್ ।।

      “ದಾನಿ” = Vase (Wooden) !!

      • ಆಹಾ! ಎಂಥ ಒಳ್ಳೆಯ ಪದ್ಯ!! ಭಾವ-ಭಾಷೆ ಎರಡೂ ಸೊಗಸಾಗಿವೆ.

  16. || ಖಚರಪ್ಲುತವೃತ್ತ || (ಗಿಡದ ಸ್ವಗತ )

    ಭೂಮಿಯೊಳ್ ನಲವಿಂದಿರುತಿರ್ದೆನ್ನಂ, ಕೃಷಿಯಿಂದೆ ವಿನೋದಿಸಲ್,
    ಭಾಮೆಯರ್ ನಯನಂದಣಿಸಲ್,ಕುಬ್ಜಂಗೊಳಿಸುತ್ತೆ ವಿಕಾರಿಪರ್ |
    ಸಾಮಜಂ ಕುಳಿತಿರ್ಪವೊಲೇ ಕಾಣಲ್,ಬೆತೆಯಿಂದೆ ವಿಲಾಪಿಪೆಂ,
    ಕಾಮಿಪೆಂ ದಿನಮುಂ, ಬೆಳೆಯಲ್ ಬಾಳೊಳ್,ನಿಜದಿಂದೆ ವಿರಾಜಿಸಲ್ ||

    • Shakuntala madam, couple of doubts –
      * Should it not be “bruhattaagi”? You have applied jashttva sandhi over kannada word “aagi”.
      * Also correct one is “ವಿಲಪಿಪೆಂ”, and not “ವಿಲಾಪಿಪೆಂ”, right?
      Please give a footnote of meaning of whole padya.

      • ಹೌದು ನೀಲಕಂಠರೆ. ಬೃಹದಾಗಿ ಎಂಬುದು ತಪ್ಪೆಂದು ಸರಿಪಡಿಸಲು ಬಂದಾಗ ನಿಮ್ಮ ಸಂದೇಹಗಳು ಕಂಡವು. ನಿಜದಿಂದೆ ವಿರಾಜಿಸಲ್ – ಎಂದು ಸವರಿದ್ದೇನೆ. ವಿಲಾಪಿಪೆಂ – ಸರಿಯೋ ತಪ್ಪೋ ತಿಳಿದಿಲ್ಲ.
        ವಿನೋದಿಸು, ವಿಷಾದಿಸು,ವಿಕಾರಿಸು,ವಿರಾಜಿಸು ಎಂಬ ಪದಗಳನ್ನು ಗಮನಿಸಿದಾಗ ವಿಲಾಪಿಸು ಎಂಬುದು ಸರಿಯಿರಬಹುದೆಂದು ಭಾವಿಸಿ ಬರೆದೆ.ವಿಲಾಪಿಸುತ್ತೇನೆ ಎಂಬುದು ವಿಲಪಿಪೆಂ ಆಗುವುದೋ ಏನೋ…ಹಾಗಾದಾಗ ವಿಕಾರಿಪರ್ ಎಂಬುದು ವಿಕರಿಪರ್ ಆಗುವುದೇ ?

        ಪದ್ಯದ ಅರ್ಥ : ಭೂಮಿಯಲ್ಲಿ( ನೆಲದಲ್ಲಿ) ಹುಟ್ಟಿ ಸಂತೋಷದಿಂದ ಇರುತ್ತಿದ್ದ ನನ್ನನ್ನು ಭಾಮೆಯರು ಕೃಷಿಯಿಂದ ವಿನೋದವನ್ನು ಪಡೆಯಲು, ಕಣ್ಣುಗಳನ್ನು ತಣಿಸಲು( ವೀಕ್ಷಕರ) ನನ್ನನ್ನು ಕುಬ್ಜನನ್ನಾಗಿಸಿ ವಿಕಾರಗೊಳಿಸುತ್ತಾರೆ. ನಾನು ಕುಳಿತಿರುವ ಆನೆಯಂತೆ ಕಾಣುತ್ತಿರಲು, ದುಃಖವಾಗಿ ರೋದಿಸುತ್ತೇನೆ. ಬಾಳಿನಲ್ಲಿ ನೈಜವಾಗಿ ಬೆಳೆದು ವಿರಾಜಿಸಲು ದಿನವೂ ಬಯಸುತ್ತೇನೆ.

        • ವಿಲಪಿಪೆಂ ಮತ್ತು ವಿಲಾಪಿಪೆಂ ಎಂಬೆರಡೂ ಸಾಧುರೂಪಗಳೇ. ’ಲಪ’ ಮತ್ತು ’ಲಾಪ’ ಎಂಬೆರಡೂ ರೂಪಗಳಿವೆ. ಆದರೆ ವಿಕರಿಪ ಎಂಬುದು ಅಸಾಧು.

          • ಸಹೋದರರೆ, ಧನ್ಯವಾದಗಳು.

  17. ಕಾನನದ ರಾಜನನು ಸಣ್ಣನೆ
    ಬೋನಿನೊಳು ಕೂಡಿಟ್ಟು ಹಿರಿ ಕಾ –
    ಡಾನೆಯನು ಹಳ್ಳಕ್ಕೆಕೆಡಗಿರ್ಪಕಟ ವಿಕಟತೆಯು
    ಮೀನ ಸಾಗರದಾಳ ವಿಸ್ತರ
    ಯಾನವನು ಪೆಟ್ಟಿಗೆಯ ಗಾಜಿಗ –
    ದೇನ ಪೇಳ್ವದು ಸಂಕುಚಿತಗೊಳಿಪೀ ವಿಕಾರತೆಗಂ

    ಕಟ್ಟ ನಡತೆಯ ನೆಪದೆ ಕುಗ್ಗಿಸಿ
    ದಟ್ಟ ಸಾಮರ್ಥ್ಯಗಳ ಸಾಧ್ಯತೆ
    ಕುಟ್ಟಿ ಮಟ್ಟಿಸಿ ಯೋಗ್ಯರನು ಹುಲುಮನುಜರಾಗಿಪವೋಲ್
    ಮುಟ್ಟುತಾಗಸವೇರುವಾಸೆಯ
    ಪಟ್ಟ ಭವ್ಯೋತ್ತುಂಗವೃಕ್ಷನ
    ಪುಟ್ಟಕುಂಡದೊಳಕ್ಕಿಪ ಕ್ರೂರತೆಗೆ ಧಿಕ್ಕಾರ
    🙁

    • ಬಲುದಿನಗಳ ಬಳಿಕ ರಾಮ್ ಬರೆದ ಭಾಮಿನೀಷಟ್ಪದಿಯನ್ನು ಕಂಡು ಮುದವಾಯಿತು. ಭಾವ-ಬಂಧಗಳೆಲ್ಲ ಚೆನ್ನಾಗಿವೆ. ಆದರೆ ಈ ಪರಿಯ ಸೀರಿಯಸ್ ನೆಸ್ ಬೇಕೇ? :-):-)

      • ಹತ್ತಾರು ಜನರು ವರ್ಷಾನುಗಟ್ಟಲೆ ನೂರಾರು ಪದ್ಯಗಳನ್ನು ಬರೆಯುತ್ತಿರುವ ಈ ತಾಣದಲ್ಲಿ, ಯಾರು ಯಾವ ಛಂದಸ್ಸು ಯಾವಾಗ ಬಳಸಿದರು ಎಂದೆಲ್ಲಾ ನೆನಪಿಡುವಷ್ಟು ಪ್ರೀತಿಯಿಟ್ಟಿರುವ ಸಹೃದಯತೆಗೆ ಧನ್ಯವಾದಗಳು

        ಇನ್ನು ಈ ಚಿತ್ರದ ಮಟ್ಟಿಗೆ ಹೇಳುವುದಾದರೆ, ಪಂಜರದ ಗಿಳಿ, ಕುಬ್ಜಗೊಳಿಸಿದ ಬೊನ್ಸಾಯ್ ವೃಕ್ಷಗಳು, ಈ ತರಹದ ವಿಷಯಗಳಲ್ಲಿ ಕರುಣಾರಸವೊಂದೇ ಸ್ಫುರಿಸುತ್ತದೆ. ಬೆಳೆಯಲೂ ಕೊಡದೆ, ಸಾಯಲೂ ಕೊಡದೆ ಅವುಗಳಿಗೆ ಚಿತ್ರಹಿಂಸೆ ನೀಡುವ ಭಾವವೊಂದೇ ಉಳಿಯುತ್ತದೆ. ಆದ್ದರಿಂದ ಕೊಂಚ ಸೀರಿಯಸ್ ಪದ್ಯಗಳು 🙂

  18. ಹಸಿರ ಬಯಸುತೆ ಕಸಿಯನೆಸಗೆನೆ
    ಹೊಸತು ಮರ್ಮದ ಪಾತ್ರವೋ !
    ಉಸಿರನುಳಿಸೆನೆ ಹಸಿರು ಮೊರೆವೊಲು
    ಹೊಸೆದ ವರ್ಮದ ಸೂತ್ರವೋ (ವರ್ಮರ ಚಿತ್ರವೋ) !!

    ಆವ ಮಾನವ ಮರುಕ ತಂದುದು, ಮೊರೆಯ ಮುಂದಲೆ ಮರವನು …. !!

  19. ಪ೦ದಿಯಿದೆಯೇ೦ ರಸಾತಳ-
    ದಿ೦ದ೦ ಶಾಖೋಪಶಾಖೆಗಳ ವೇದ೦ಗ-
    ಳ್ಗ೦ದಿತ್ತು ಮುಕ್ತಿಯ೦ ನ-
    ಲ್ವಿ೦ದ೦ ಮೂರ್ಧಾ೦ಗದೊಳ್ ಧರಿಸಿ ತ೦ದಿರ್ಕು೦

    • ಪಂದಿಯಿದೇಂ ಎಂಬುದೇ ಸಾಧುರೂಪ. ಹೀಗಾಗಿ ಮೊದಲ ಸಾಲನ್ನು
      “ಪಂದಿಯಿದೇಂ ವಸುಧಾ(ಧರಣೀ)ತಳ….”ಎಂದು ತಿದ್ದಿದಲ್ಲಿ ಒಳಿತು.

    • ಸಖತ್ ಐಡಿಯ. ತುಂಬ ಚಿನ್ನಾದ ಕಲ್ಪನೆ. ಒಳ್ಳೆಯ ಪದ್ಯಕ್ಕಾಗಿ ಧನ್ಯವಾದಗಳು.

  20. ನೆಟ್ಟರಾರೀ ವಪುಕುರೂಪಿಯ
    ದಿಟ್ಟನಲ್ಲಂ ಫಲವಿಹೀನಂ
    ಸೊಟ್ಟದಿಟ್ಟಿಯ ಕುಬ್ಜತೆಯದೊಂದಗ್ಗಳದ ಹೊರತು|
    ಕುಟ್ಟಿ ಪಳಗನ್ನಡದ ತರುವಂ
    ಪುಟ್ಟಿಸುತೆ ಮಸುಳಿಸುವ ಕಬ್ಬವ-
    ನಟ್ಟಹಾಸವ ಗೈವ ಗಾಂಪರಿಗಿದುವೆ ಚೆಲುವಾಯ್ತು||
    dwarfishness(meanness) is its only qualification. 🙂

    • ಪದ್ಯಭಾವ ಸುಂದರವಾಗಿದೆ; ನುಡಿಜೋಡಣೆಯೂ ಚೆಲುವಾಗಿದೆ. ಆದರೆ ವಪುಕುರೂಪಿ ಎಂಬುದು ಸಮಾಸವಾಗಿ ಬಂದರೆ ಅಸಾಧುಶಬ್ದ.

  21. ಪಾತಾಳದಾಳದಿಂ ಪುಟಿದೇಳ್ವ ಪೂರ್ವತನ-
    ದೈತೇಯರೂಪದ ಸರೀಸೃಪದವೊಲ್|
    ಬೀತ ಬಡಗಿಡುವಿಲ್ಲಿ ಕುಂಡದೆಡೆ ಕೈಚೆಲ್ಲಿ
    ಸೋತು ಸೊಪ್ಪಾದುದೇಂ ಚೋದ್ಯಮಲ್ತೇ!!

    (ಈ ಬಡ ಗಿಡವು ನೆಲದಾಳದಿಂದ ಸಿಡಿದೇಳುವ ಯಾವುದೋ ಕಾಲದ ದೈತ್ಯಸರೀಸೃಪದಂತೆ ಕಾಣುತ್ತಿರುವುದೊಂದು ಚೋದ್ಯವೆಂಬ ಭಾವವಿಲ್ಲಿದೆ)

  22. ಉಡದವೊಲಿರ್ಪ ಗಿಡಮಿದೈ
    ಬುಡದಿಂ ಮುಡಿವರೆಗು ನವ್ಯ ರೂಪಂಗಳಿರಲ್
    ಪಡೆಯಲ್ ಪೊಸ ಬಗೆಯಂ ತಾನ್
    ಉಡಕುಂ ದಿಗ್ಭ್ರಮೆಯ ಮೂಡಿಸುವವೊಲುಮಿರ್ಕುಂ

    • ಪದ್ಯವೂ ಅದರ ಇಂಗಿತವೂ ಚೆನ್ನಾಗಿವೆ. “…….ಮುಡಿವರೆಗೆ….” ಎಂದು ಸವರಿಸಿದರೆ ಒಳಿತು.

  23. ಲಿಲ್ಲಿ ಹೂಗಳಿಗೆದುರು ಗಿಡ,ಬಳ್ಳಿ ಜೊತೆ ಜೊತೆಗೆ
    ಲಿಲ್ಲಿ ಪುಟ್ಟಿನೊಳು ಗಲಿವರನ ಕಂಡಂತೆ I
    ಬಲ್ಲವರೆ ಬಾಗಿಸಿದ ಕಲ್ಲು ಹಾಸಿನ ಕಲೆಯು
    ನಲ್ಲಿ ನೀರಿನೊಳುಲಿವ ಕುಬ್ಜ ಮೂರ್ತಿ II

    • ಬಲ್ಲಿದ ಭಾಲರ ಚೆಲ್ವಿನ
      ಮಲ್ಲಿಗೆಮಾಲೆಯವೊಲಿರ್ಪ ಸೊಲ್ಲಿನ ಬ೦ಧ೦
      ಘಲ್ಲನೆ ಬಾಲರ ಪಾಲಿನ
      ಗಲ್ಲವರಳ್ವ೦ದದ೦ತೆ ಚೆ೦ದದ ಪದ್ಯ೦

      • ಬಲ್ಲಿದಳು ನಾನಲ್ಲ.
        ಪದ್ಯ ಚೆನ್ನಾಗಿದೆ . ಧನ್ಯವಾದಗಳು

    • ಭಾಲ ಮೇಡಮ್, ಎರಡನೆ ಪಾದದಲ್ಲಿ ಎರಡು ಮಾತ್ರೆಗಳು ಹೆಚ್ಚಾಗಿವೆಯಲ್ಲ…

      • ಬಲ್ಲಿದರು ಬಳಸಿರುವ ಕಗ್ಗದಲಿ ಚೌಪದಿಯು (ಮಂಕುತಿಮ್ಮನ ಕಗ್ಗ )
        ಸಲ್ಲಿಸಿದೆ ಮಾತ್ರೆಗಳ ಹತ್ತು ಮತ್ತೆಂಟು II

    • ಒಳ್ಳೆಯ ಕಲ್ಪನೆಯ ಒಳ್ಳೆಯ ಪದ್ಯಕ್ಕಾಗಿ ಧನ್ಯವಾದ. ಈಚೆಗೆ ಹೆಚ್ಚಾಗಿ ಕಾಣುತ್ತಿಲ್ಲವಲ್ಲಾ? ಎಲ್ಲ ಕ್ಷೇಮ ತಾನೆ?

      • ಧನ್ಯವಾದಗಳು ಸರ್ . ಕ್ಷೇಮವೆ . ಬರೆಯಲು ಬೇಕಾಗಿರುವ ಆಸಕ್ತಿ ಎಂಬ ಅರ್ಹತೆ ಕಡಿಮೆಯಾಗಿರುವುದಷ್ಟೆ ಕಾರಣ .ಈ ವರೆಗೆ ಆಸಕ್ತಿಯಿರುವ ಇತರ ಕಾರ್ಯಗಳನ್ನು ಬದಿಗಿರಿಸಿದ್ದೆ . 🙂

  24. ಗ್ರಹನಕ್ಷತ್ರ೦ಗಳದೇ೦
    ಗೃಹ೦ಗಳನೆಣಿಸುವೆಯೋ, ಮನುಷ್ಯನ ಮನಮ೦
    ಗ್ರಹಿಸಲ್ಕ೦, ಪುಟ್ಟಿ ಬೆಳೆದ
    ಗೃಹಮ೦ ನೋಳ್ಪುದಲ, ಕಲ್ಲು ಕಾ೦ಡದ ಸಾಮ್ಯ೦!

    ಬೆಣಚುಕಲ್ಲುಗಳ ಮಧ್ಯೆ ಬೆಳೆದ ಮರದ ಬಡ್ಡಿಯೂ ದೊಡ್ಡ ಬೆಣಚುಕಲ್ಲಿನ೦ತೆಯೇ ಇದೆ. ನಮ್ಮನ್ನು ಬೆಳೆಸುವ ವಾತಾವರಣವೂ ನಮ್ಮ ಮನಸ್ಸನ್ನು ರೂಪಿಸುವುದಲ್ಲವೇ?

    • ನಿಮ್ಮ ಸೂಕ್ಷ್ಮಪರಿಶೀಲನಶಕ್ತಿಯೂ ಪದ್ಯರಚನೆಯಲ್ಲಿ ಮಿಂಚುವ ಆಭಿಜಾತ್ಯಬಲವೂ ಸುತರಾಂ ಸ್ತುತ್ಯ.

    • ಪದ್ಯ ತುಂಬಾ ಇಷ್ಟವಾಯಿತು ನೀಲಕಂಠ. ಇದೇ ಇಂಗಿತದಿಂದ ಇಂಬುಗೊಂಡು ಮತ್ತೊಂದು ಚಿತ್ರಕ್ಕೆ-ಪದ್ಯ,
      (ಕುಂಡದಲ್ಲಿನ ಮರ “ದೀಪಕಣಿಗಿಲೆ”ಯೇ(?) ಎಂದು ಪರಿಗಣಿಸಿ)

      ತಣಿನೆಲದಿಂದೆ ಬೇರ್ಪಡುತೆತಾಂ ಕಳೆಯಂ ತಳೆದಂತರಾಳದೊಳ್
      ಬೆಣಚಿನಕಲ್ಗಳಾ ನುಣುಪಿನೊಳ್ ನುಸುಳಿಂತು ನೋಂಪಿನೊಳ್
      ಮಣ ಹೆಣಗಾಟದೊಳ್ ಪಸರುತುಂ ಪರಿಪಾಟದೆ ವಿಸ್ತರಂಗೊಳಲ್
      ಕಣಗಿಲೆವೃಕ್ಷದೊಳ್ ಮಿಣುಕುದೇಂ ಬಿಡುದಾ ಸುಮ “ದೀಪ”ದೋಲುತಾಂ ।।

      (ವಾಸ್ತವದಿಂದ ದೂರವಾದ ಈಗಿನ ಮಕ್ಕಳ ಬೆಳವಣಿಗೆಯ ಬಗ್ಗೆ)

      • ನನ್ನ ಕ೦ದದ ಕೊರಳಿಗೊ೦ದು ಚ೦ಪಕಮಾಲೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು! 🙂

  25. ಹುಟ್ಟಿ ಬೆಳೆದ ವಾತಾವರಣದ, ಈಗಲೂ ಆ ವಾತಾವಾರಣನ್ನು ಕೊಡುತ್ತಿರುವ ‘ಕೆಲವು ಮಹನೀಯರ’ ಪ್ರಭಾವ ಸರ್! ಧನ್ಯವಾದಗಳು 🙂

  26. ಮುದುಡಿ ಕುಗ್ಗಿರ್ಪಳುಕ ಕಾಣೆ ನಿನ್ನೊಳು ತರುವೆ,
    ಬದಿಯ ಸಂಗಿಗಳೆಲ್ಲ ಕುಸುಮಿಸುವೆಡೆ
    ಮುದವ ಪೊಂದುವ ಮನಮೆ ನಿನ್ನದೆಂಬೆಯ ತರಳೆ,
    ಹೊದೆದು ಪಚ್ಚೆಯ ನಿಂದು ಕಷ್ಟಗಳೆಡೆ!

  27. विट्पी-भूत-वैकुन्ठ-
    पाद-भार-नमच्छिरः ।
    अनुकरोति बलिं बद्धं
    वृक्षोयमिति मे मतिः ॥

    The tree, bent in prostration and its head trying to bear the weight of its branches which are acting like the foot of Vishnu, enacts the part of Bali and looks like sinking slowly into the ground.
    vaikunTha = VishNu.

    विष्णुर्नारायणः कृष्णो वैकुण्ठो विष्टरश्रवाः ।

    • one akshara extra in 3rd paada. Will correct sometime

      • Idea of the verse is great! But two small corrections:
        “……….namacchiraaH” is the right usage as it should be an adjective to vRShaH, a masculine gender word.
        Also “……anukartaa baliM……” may be a correction suggested.

  28. ಕಾಂಡದ ನಿಃಸ್ವಾರ್ಥ:
    ದೇವಮೂಲಮಿತ್ತ ಕಸುವನಾವುದನ್ನುಮಿರಿಸಿಕೊಳದೆ
    ಪೂವು-ಕೊಂಬೆ-ಪರ್ಣ-ಫಲಕೆ ಮೇವೊಳಿತ್ತು ನೀಂ|
    ಕಾವುದೊಂದೆ ಕಾರ್ಯಮೆನ್ನದೆನುತೆ ಮಮತೆಯನ್ನು ತೊರೆದು
    ನೋವ ನುಂಗಿ ಕಾಂಡ ನೀನು ಕುಬ್ಜಮಾದೆಯೇಂ?

  29. ಕಠಿನದ ಯೋಗಾಸನಮಂ
    ಮಠಮಂ ತೊರೆದಿರ್ದು ಸಾಧನಂಗೈಯಲ್ ನೀಂ |
    ಹಠದಿಂ,ಲಾಭಮನರಿವೆಂ
    ಜಠರಕೆ ಮೇಣ್ ಪಸಿರ ಬಾಳನೈದುವ ಪರಿಯಂ ||

    ( ಮಠವನ್ನು( ಭೂಮಿಯನ್ನು) ತೊರೆದಿದ್ದು ಕಠಿಣವಾದ ಯೋಗಾಸನವನ್ನು ನೀನು ಹಠದಿಂದ ಸಾಧಿಸಲು,ಜಠರಕ್ಕೆ ಇದರಿಂದಾಗುವ ಲಾಭವನ್ನು ಮತ್ತು ಹಸಿರಾದ ಬಾಳನ್ನು ಹೊಂದುವ ಪರಿಯನ್ನು ತಿಳಿಯುವೆನು)

    • ಮುಂದಿವರಿದು ಆ ಸಸ್ಯಕ್ಕೆ ಹೀಗೆ ಹೇಳಬಹುದು. ಇದು ನನ್ನ ಮಾತು. ತಮ್ಮ ಪರವಾಗಿ ಹೇಳಿಲ್ಲ:
      ಪರಿಯಿಂದೊಳಿತಿಂತಹುದು ಜ
      ಠರಕೆಂದರುಹಿರ್ದೊಡಂ ಹಠದ ಯೋಗದೆ ನೀಂ|
      ಅರಿವೆಂ ಮಾತ್ರಮೆ, ನಡೆಸೆಂ.
      ಕುರಿಯೆಂದೆಣಿಸೆನ್ನ ನೀಂ ಮಠವ ಹತ್ತಿಸದಿರ್|| 😀

  30. ಸರಿಗಟ್ಟುವರಾರಿರ್ಪರ್
    ಧರೆಯೊಳ್ ಗತ್ತಿಂ ದೆ ಮೆರೆವ ಜೀವರ ನಡುವೊಳ್,
    ಮರೆತುಂ ಮರನೆಂಬುದನುಂ
    ತರುಬಳಿ ಯೊಡನಿಂತು,ಬೆರೆತ ಸೊಬಗಂ ನಿನ್ನಾ!
    (ತಾನು ಮರವೆಂಬ ಅಹಮಿಕೆಯನ್ನು ಮೆರೆಯದೇ ಎಲ್ಲರೊಡನೆ ಬೆರೆತ ಸೊಬಗನ್ನು ಸರಿಗಟ್ಟುವರಾರ್?)

Leave a Reply to Neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)