Jan 042016
 

  61 Responses to “ಪದ್ಯಸಪ್ತಾಹ ೧೮೩: ಚಿತ್ರಕ್ಕೆ ಪದ್ಯ”

  1. ಕುಂಕುಮರಾಗರಂಜಿತರಜೋರಚಿತಪ್ರಣಯಾಂಕಮೇಂ ಮನೋ-
    ಜಾಂಕಣಖೇಲಮೇಂ ಸುರಪಥಕ್ಕೆ ವಸುಂಧರೆಯಿಂತು ಸೂಚಿಪಳ್
    ಬಿಂಕದ ಲಾಸ್ಯದಿಂ ನಿಜಮನೋರಥಮಂ ರತಿಯಂ ಮನೋಜ್ಞಮೇ-
    ನಂಕಿಪೆನೀ ವಿಚಿತ್ರಚರಿಯಂ ಕವಿಗಂಕಿತಮಾಗೆ ಚಿತ್ತದೊಳ್

    ತನ್ನ ಪ್ರೇಮವನ್ನು ಆಕಾಶಕ್ಕೆ ಸೂಚಿಸಲು ವಸುಂಧರೆಯು ಕುಂಕುಮದ ಧೂಳಿಯಿಂದ ರಚಿಸಿದ ಚಿತ್ತಾರದ ಗುರುತೋ, ಮನ್ಮಥನ ಮನೆಯಂಗಣದ ಕೇಳಿಯೋ, ಇದು ಕವಿಚಿತ್ತಕ್ಕೆ ಬಲು ಆಕರ್ಷಕವಾಗಿದೆ.

  2. ಬುಸುಗುಡುತಿರ್ಪ ನಾಗಫಣಿಯೊಳ್ ಪೊಳೆಯಲ್ ಮಣಿ,ಕೆಚ್ಚು ರೊಚ್ಚಿನಿಂ
    ದೆಸೆವ ಮಹಾಬ್ಧಿಯೊಳ್ ಮಿರುಗೆ ಚೆಂಬವಳಂಗಳ ಮಾಲೆಯಂದದಿಂ,
    ಮಸಣದೊಳಿರ್ಪಭಸ್ಮಧರನಳ್ತಿಯಿನಪ್ಪಿರೆ ಚೆಲ್ವಚಂದ್ರಮಂ,
    ಬೆಸುಗೆಯನೊದ್ದು ನಿಂದ ನಗನೊಳ್ ನೆಲೆಗೊಳ್ಳೆ , ಸರಾಗಮೊಪ್ಪದೇಂ!

  3. ಉರಿಯೇನೀ ಪರಿ ನೀರಿನಂತೆಸಗಿತೇಂ ಮೇಣ್ ಗಾಳಿಯಂದಂ ವಸುಂ-
    ಧರೆವೊತ್ತಂಗಚಯಕ್ಕೆ ಮೆತ್ತಿತೆ ರಜೋರೂಪಿಂದೆ ಮತ್ತಿಂ ಮಗುಳ್
    ಮೊರೆದಿತ್ತೇಂ ಗಗನಾವಕಾಶಚರಿಯೆಂಬೊಲ್ ಪಂಚಭೂತಂಗಳೊಳ್
    ಪಿರಿದೆಂದೆನ್ನಿಸಿಕೊಂಬ ಕಾಂಕ್ಷೆಯೊಳೆ ತಾನಗ್ನಿ ಪ್ರಚಂಡವ್ರತಂ

    ಪಂಚಭೂತಗಳಲ್ಲಿ ತಾನೇ ಮೇಲು ಎಂದು ಹೊಗಳಿಸಿಕೊಳ್ಳಲು ಅಗ್ನಿ ಈ ತೆರನಾಗಿ ನೀರಿನಂತೆ ಹರಿಯಿತೋ, ಗಾಳಿಯಂತೆರಗಿತೋ, ಧರೆಯ ಮೈಗೆ ಮಣ್ಣಾಗಿ ಒರಗಿತೋ, ಗಗನಕ್ಕೆ ನೆಗೆದು ಮೊರೆಯಿತೋ!! ಇದು ಬಹಳ ಪ್ರಚಂಡವ್ರತಿ

  4. ಸಿಟ್ಟದು ತನ್ನಯ ಹುಟ್ಟಿನ ಗುಣವದ,
    ಬಿಟ್ಟಿರಲಾರೆನೆನ್ನುತೆ – ಬಾಳ್ವೊಡೆ
    ಮುಟ್ಟೆ ಬರ್ಪರೆ ಜನ ನಿನ್ನ!

    • ಬಹುಶಃ ’ಮುಟ್ಟೆ ಬ/ರ್ಪರೆ ಜ/ನ ನಿನ್ನ’ ಎಂದು ನಿಮ್ಮ ಗಣವಿಂಗಡಣೆ. ’ನ ನಿನ್ನ’ ಎಂಬುದು ಜಗಣವಾಯಿತು. ಅಂಶದಲ್ಲಿಯೂ ಇದು ಸಲ್ಲದು. ’ಮುಟ್ಟೆ ಬ/ರ್ಪರೆ/ ಜನ ನಿನ್ನ’ ಎಂದು ವಿಂಗಡಿಸಿ, ಮಧ್ಯದ ಗಣಕ್ಕೆ ೧/೨ ಮಾತ್ರೆಯಷ್ಟು ಸೇರಿಸಿದರೆ ಶ್ರುತಿಹಿತವಾಗಿರುತ್ತದೆ.

  5. Ignorance is bliss
    ಎನಿತಿಹುದೊ ಪ್ರಖರದಿಂ ಜ್ಯೋತಿಯನಿತೇ ಬೆನ್ನೊ-
    ಳಿನ ಕಳ್ತಲದು ಗಾಢಮದರಿಂದೆ ನೀಂ|
    ಅನವರತಮೆನ್ನವೊಲ್ ಜ್ಞಾನಾಗ್ನಿಯಂ ’ಮಿತದೆ’
    ಮಿನುಗುವೊಲ್ ಬಾಳಿಸೈ – ಹಾದಿರಂಪ|| 🙂

  6. ಪದ್ಯಸಪ್ತಾಹ ನೂರರವತ್ತಮೂರರೊಳ-
    ಗುದ್ಯಮಿಸಿಹೆವುಮಿಂತಹುದೆ ಬೆಟ್ಟಕೆ|
    ಸಾದ್ಯಂತ ನೀನದನೆ ಓದಿಕೊಳ್ಳೈ ಸೋಮ
    ಸದ್ಯಕಾನೊಂದುವೆನು ವಿಶ್ರಾಂತಿಯಂ|| 😉
    http://padyapaana.com/?p=2608

  7. ಇಳೆಯೊಳಪಚಾರಮಂ ಗೈಯೆ ದುರುಳರ್ಕಳಿಂ
    ಬಳಲಿ ಸೋಲ್ತಿರ್ಪ ಭೂದೇವಿ ನೊಂದು
    ಖಳರ ಹಡೆದುದಕೆ ಕೋಪಾಗ್ನಿಯ ಜ್ವಾಲೆಯ
    ನ್ನೊಳಗಿಂದಲೊಡನೆ ಬಿಕ್ಕುತ್ತಿರ್ಪಳೈ

  8. ಮೇಲೆದ್ದ ಧೂಮವು ಮನುಷ್ಯಮುಖಾಕೃತಿಯಲ್ಲಿದ್ದು, ಅದರ ಕಣ್ಣುಗಳು ಬುದ್ಧನದಂತೆ ಧ್ಯಾನನಿಮೀಲಿತವಾಗಿವೆ ಹಾಗೂ ತುಟಿಯಲ್ಲಿ ಮಂದಸ್ಮಿತವು ಮೂಡಿದೆ.
    ಪ್ರಮದಾಕ್ರಾಂತ|| ಒಳಗೇ ನೀನಿನ್ನೆಗಮಸಹದಿಂ(impatient) ಕುದ್ದುಕುದ್ದಿರ್ದುಮಿಂದುಂ
    (stream)ಪೊಳೆವೋಲ್ ನಿಸ್ತಾರಗೊಳುತೆರಚಲ್ ವಹ್ನಿಸಂರಂಭಮನ್ನುಂ (fire gusts)|
    ಕುಳಿತಿರ್ಪ ಧ್ಯಾನಿಯಮಿತವನೊಲ್(ಬುದ್ಧ) ಪಾವಕಂ ರೂಪುಗೊಂಡುಂ
    ನಳಿಪಾ ವಕ್ತ್ರಂ, ನಸುನಗುತಿಹೋಷ್ಠಂ ವಲಂ ಸ್ಪಷ್ಟಮಿರ್ಕುಂ||

    • ನನಗಾವ ಬುದ್ಧನೂ ಮಹಾವೀರನೂ ಕಾಣುತ್ತಿಲ್ಲ

      • ದರ್ಶನವು ಅವರವರ ಕರ್ಮ-ಸಂಸ್ಕಾರಾನುಸಾರವಿರುತ್ತದೆ. But still, take a close look at the fumes and discern a face that is facing the top right corner of your screen.

        • ಆಹಾ … ಹೌದು, ಅದ್ಭುತ, ಸುಂದರ. ನಿಮ್ಮ (ಹದ್ದಿನ) ಕಣ್ಣೋಟಕ್ಕೆ ಶರಣು ಶರಣು!!

  9. ಚಿಂತೆಯಿಲ್ಲವೈ ಕಂದರೆನ್ನ ಕಾಲ್ತುಳಿವೊಡೆಂದು ನಗುತ,
    ಪಿಂತೆ ತೊಟ್ಟ ಕೊಳೆಬಟ್ಟೆ ಯಿಂದೆ,ಸಂತೃಪ್ತಿಯನ್ನು ಪಡುತ,
    ಕಂತು ಪೋಪ ದುರವಸ್ಥೆಗಳೊಳು ಸಮಚಿತ್ತಳಾಗಿ ನಿಂತ
    ಶಾಂತೆ!ನಿನ್ನ ಪೊಸ ಭಾವವನ್ನು ಜನರಿಂದು ತಾಳರಲ್ಲಾ!
    (ಎಲ್ಲವನ್ನೂ ಸಹಿಸುಕೊಂಡು ಬಾಳುತ್ತಿದ್ದ ಭೂತಾಯೇ, ನಿನ್ನ ಇಂದಿನ ಸ್ಥಿತಿಯನ್ನು(ಸಿಡುಕುವ),ಜನತೆ ಸಹಿಸದಾಗಿದೆ)
    ದುರವಸ್ಥೆ=ಚಳಿ,ಬಿಸಿಲು,ಮಳೆ…
    ಕೊಳೆಬಟ್ಟೆ=ಹಳೆಯ,ಧೂಳು ಹಿಡಿದ ಸಸ್ಯ…

  10. ಪೀತಾಂಬರಿ ತಾ ಸುಖದಲಿ ಮಲಗಿರೆ
    ಮಾತೆಯವಳಿಲ್ಲದಾಕಾಲದಲಿಂ
    ಪೂತನಿ ಕರುಣಾಮಯಿಯಂದದಲಿಯೆ ಮನೆಯೆಡೆ ಬಂದಿಹಳು
    ದಾತನವನರಿತನೈ ವಿಷರಾಕ್ಷಸಿಯಾಕೆ ವಿ-
    ನೀತಗೆ ಪಾಲುಣಿಸೆ ಬರಲು, ವಿಷ ಪಿರಲ್
    ಪೂತನಿಯಸ್ಥನದಿಂದೆಂ ಭೀಕರ ಚಿಮ್ಮುತಲಿಹುದಾಗ್ನಿ(ಅನೇಕ ದೋಷಗಳಿವೆ. ದಯವಿಟ್ಟು ತಿಳಿಸಿ)

    • ಪೀತಾಂಬರ ಪುಲ್ಲಿಂಗ, ಮಾತೆಯವಳಿಲ್ಲ – ಗಣವಿಭಾಗದಲ್ಲಿ ಲಗಂ ವಿನ್ಯಾಸ ಬಂದಿದೆ (ನಾಲ್ಕು ಮಾತ್ರೆಗಳ ಗಣಗಳು ತಾನೆ?), ಕಾಲದಲಿಂ – ರೂಪ ತಪ್ಪು, ಕಾಲದಲಿ, ಕಾಲದೊಳ್, ಕಾಲದೊಳಗೆ ..
      ಕರುಣಾಮಯಿಯಂದದಲಿಯೆ – …ಯಂದದಲೇ. ಕೃ಼ಷ್ಣ ಯಾಕೆ ವಿನೀತ ಆದ? ವಿಷಮಂ ಪೀರಲ್, ವಿಷಂಬೀರಲ್. ಸ್ತನ, ಸ್ಥನ ಅಲ್ಲ. ಸ್ತನದಿಂದಂ. ಭೀಕರಮಾಗಿ ಎಂದೇನಾದರೂ ಆಗಬೇಕು. ಭೀಕರ ಎಂಬುದು ವಿಶೇಷಣವಾದಾಗ ನೀನು ಬಳಸಿದ ಹಾಗೆ ಬಳಸಬಹುದು. ಇಲ್ಲಿ ಕ್ರಿಯಾವಿಶೇಷಣ ತಾನೇ? ಚಿಮ್ಮುತಲಿಹುದಗ್ನಿ.

      ಇದೆಲ್ಲ ಸರಿ, ಹೀರಿದ ವಿಷವೆಲ್ಲ ಕೃಷ್ಣನ ಹೊಟ್ಟೆಯೊಳಗೆಯೇ ಹೋಯಿತಲ್ಲ. ಈ ರೀತಿ ಬೆಂಕಿಯ ಹಾಗೆ ಹೊರಗೇಕೆ ಬಂತು? 🙂

      ಈ ಷಟ್ಪದಿಯ ಹೆಸರೇನು? ಶರ, ಕುಸುಮ?

      • ಪೀತಾಂಬರ ತಾಂ ಮುದದಲಿ ಮಲಗಿರೆ ಮಾತೆಯಿರದ ಕಾಲದೊಳಗೆ ಕಂಸನ ದೂತೆಯು ಕರುಣಾ ಮಯಿಯಂದದಲೇ ಮನೆಯೆಡೆ ಬಂದಿಹಳು ದಾತನ ಕಾಣುತ ವಿಷರಾಕ್ಷಸಿಯುಂ ಪೂತನಿ ಪಾಲುಣಿಸಲ್ ವಿಷ ಪೀರ್ದುಂ ಪೂತನಿ ಸ್ತನದಿ ಭೀಕರಮಾಗಿಯೆ ಚಿಮ್ಮುತಲಿಹುದಾಗ್ನಿ (ಸರ್. ಈಗಲಾದರೂ 35% ಅಂಕ ಸಿಗಬಹುದೇ? ವಿಷ ಹೀರಿದ ನಂತರ -ಉಳಿದ ವಿಷ ಚಿಮ್ಮಿದ್ದು. ಎಂಬ ಕಲ್ಪನೆ. ಇದು ಪರಿವರ್ಧಿನಿ ಷಟ್ಪದಿ. ಹೂ.ಬಾಣ ( ಕುಸುಮ. ಶರ) ಅಲ್ಲ.

        • ಪೂತನಿಸ್ತನದಿ: 5+3 ಮಾತ್ರೆಗಳಾದವಲ್ಲ!
          (ಚಿಮ್ಮುತಲಿಹುದಗ್ನಿ)

        • ಅಂಕಂಗಳ ಮಾತೇಕೌ ಬಗೆಯೊಳ-
          ಗಂಕಿತೆ ನೀನೆಂದುಂ ಕವನಿಪರೀ
          ಅಂಕಣಮಂ ಸಿಂಗರಿಪ ಸುರಂಗಿನ ರಂಗದ ವಲ್ಲಿಯವೊಲ್ 🙂

  11. ಪೊಗೆಯುಗುಳುತೆ ಪರ್ವತಮಾ
    ಗಗನದೊಳೆತ್ತೆತ್ತೆತ್ತರಕ್ಕೆ ತನ್ನೊಳರೂಪಂ
    ಜಗಕೆಲ್ಲಂ ದೋರುತಲಿ-
    ಬ್ಬಗೆಯಾಗಗ್ನಿಯೊಳುಬೂದಿಯಾಗಿಹುದಲ್ತೇ

  12. ಜ್ವಲದಗ್ನಿಪ್ರಖರಪ್ರತಾಪಹತಿಯಿಂ ಕಂದಿರ್ದು ಸಾದ್ಯಂತಮುಂ
    ನಲುಗಿರ್ಪೀ ಗಿರಿ ಶೃಂಗಭಂಗದಳಲಿಂ ಸುಯ್ದತ್ತು, ಲೋಕಂಗಳೊಳ್
    ತಲೆಯೆತ್ತಿರ್ಪರ ಕೀರ್ತಿ ಕಂದಿ ಸಮೆಯಲ್ಕೆತ್ತೆತ್ತಲುಂ ಕಳ್ತಲೇ
    ತಲೆಯಾಡಿರ್ಪವೊಲಾಯ್ತು, ಲೋಕನಯಮೇ ವೈಚಿತ್ರ್ಯದಿಂ ಚಿತ್ರಿತಂ

    ಜನರ ಮಧ್ಯೆ ತಲೆಯೆತ್ತಿ ತಿರುಗುವವರ ಕೀರ್ತಿಯ ಕಳಸವೇನಾದರೂ ಕಳಚಿ ಬಿದ್ದರೆ ಅವರಿಗೆ ಸುತ್ತಲೂ ಕತ್ತಲೆಯೇ ಮುತ್ತಿರುವಂತೆ, ಅಗ್ನಹತಶೃಂಗದ ಈ ಬೆಟ್ಟದ ಚಿತ್ರವಿಂತಿದೆ.

  13. ಉಣಿಸಂ ನೀಳಲು ದೇವವರ್ಗಕರೆ!ಮುಂದಾಗಿರ್ಪ ಸನ್ನಾಹಮೋ!
    ತಣಿಸಲ್ ಲೋಕದ ಕಳ್ತಲಂ ,ರವಿಯೊಡಂ ಕೈನೀಡ್ವೆನೆಂಬಿಚ್ಛೆಯೋ!
    ಕ್ಷಣದೊಳ್ ಶುಧ್ಧತೆಯನ್ನು ತೋರಿಮೆರೆಯಲ್ಕೀ ದಿವ್ಯ ಸಂಸ್ಪರ್ಶಮೋ!
    ಎಣೆಯಂ ಮೀರಲುದಾರವೃತ್ತಿಯಿಳೆಯೇ! ಆಶ್ಚರ್ಯಸಂದೋಹಮೈ!

    • ಚೆನ್ನಾಗಿದೆ, ಒಂದೆರಡು ಚಿಕ್ಕ ದೋಷಗಳ ಹೊರತು. ಏನರ್ಥ?

      • ಅಗ್ನಿಯ ಮೂಲಕ ದೇವತೆಗಳಿಗೆ ಆಹಾರವನ್ನು ನೀಡಲು ಮಾಡಿಕೊಂಡ ತಯಾರಿಯೋ?ಸೂರ್ಯನ ಜೊತೆಗೆ ಕೈವೊಡ್ಡಿ ಕತ್ತಲನ್ನು ತೊಡೆಯುವ ಆಸೆಯೋ?ಅಗ್ನಿಸ್ಪರ್ಶದಿಂದೆದ್ದು ಬಂದು ಶುಧ್ಧತೆಯನ್ನು ತೋರುವ ಹವಣೋ?!ಎಣೆಯನ್ನು ಮೀರಿದ ಈ ನಿನ್ನ ಉದಾರನಡೆಯು ನಿಜಕ್ಕೂ ಅಚ್ಚರಿಯ ಸಂದೋಹವೇ ಸರಿ(ಇಳೆಯೇ!)

  14. (ಭೂಮಿಯ ಮೇಲೆ ಮಾನವರಿಂದಾಗುತ್ತಿರುವ ಅನ್ಯಾಯಗಳನ್ನು ತಾಳಲಾದರ ಭೂಮಿ ತನ್ನೆದೆಯ ಬೇಗೆಯನ್ನೇ ಹೊರಗೆ ಕಾರಿದಳೇ?)

    ಹೊಟ್ಟೆಯುರಿಯಿತೆ ತಾಯೆ ನಿನ್ನಯ
    ನಿಟ್ಟುಸಿರ ಕೇಳುವರೆಯಿಲ್ಲದೆ?
    ಸುಟ್ಟರೇ ಮಾನವರು ನಿನ್ನಯ ಸಹನೆ ಕರುಣೆಗಳ?
    ಕೆಟ್ಟ ಖಳಜನರೆನ್ನ ಮೂರಾ-
    ಬಟ್ಟೆಯಾಗಿಸಿಹರೈಯೆನ್ನುತ
    ಒಟ್ಟು ಚೆಲ್ಲಿದೆಯೇನು ನಿನ್ನೆದೆಯೊಳಿಹ ಬೇಗೆಯನು?

    • ಚೆನ್ನಾಗಿದೆ ಕಲ್ಪನೆ ಹಂಸಾನಂದಿಯವರೆ. ಐದನೇ ಸಾಲಿನಲ್ಲಿ ಒಂದು ಲಗಂ ಗಣ ಬಂದಿದೆ.

      • ಧನ್ಯವಾದಗಳು 🙂

        ಮೂರಾ
        -ಬಟ್ಟೆಯಾಗಿಸುತಿಹರುಯೆನ್ನುತ

        ಅಂದು ಬದಲಾಯಿಸಿಕೊಳ್ಳುವೆ 🙂

        • ಸಂಧಿ ಕೆಡುತ್ತದಲ್ಲ… ಮೂರಾ-
          ಬಟ್ಟೆಯಾಗಿಸುತಿರ್ಪರೆನ್ನುತ… ಎಂದು ಮಾಡಬಹುದು.

    • ಕೆಟ್ಟ ಖಳ = ಒಳ್ಳೆಯವ 😉

      • ಛೇ ಛೇ… ಕೆಟ್ಟ ಅಸಹ್ಯ ಎಂದು ಹೇಳುವುದಿಲ್ಲವೇ, ಹಾಗೆ 🙂

      • ಅಥವಾ, ಕೆಟ್ಟದಾಗಿ ಆ್ಯಕ್ಟಿಂಗ್ ಮಾಡುವ ಖಳನಾಯಕ ಎಂಬರ್ಥದಲ್ಲಿ..

  15. ಅರಿಗಳಂ ನಿಗ್ರಹಿಸಬಲ್ಲೆವೆಂಬವರೊಳೇ
    ಗರಿಬಿಚ್ಚಿ ಕುಣಿವ ಕೋಪಾವೇಶಗಳ್,
    ಬರಿಗಲ್ಲು ,ಶಿಲೆಗಳಿಂದಾದ ಪರ್ವತನೊಳಿಂ
    ತುರವಣಿಸೆ ಪೆರ್ಮೆಯೇನಾಶ್ಚರ್ಯಮೇಂ!

    (ಅರಿನಿಗ್ರಹ ಶಕ್ತಿಯಿರುವ ಮಾನವರಲ್ಲೇ ಕೋಪ..ಮುಂತಾದ ಅರಿಗಳು ಗರಿಬಿಚ್ಚಿ ಕುಣಿವಾಗ , ಬರಿಯ ಕಲ್ಲಿನಿಂದಾದ ಪರ್ವತ ದಲ್ಲಿ ಕೋಪ..ವಿಜೃಂಭಿಸಿರುವದರಲ್ಲಿ ಹೆಚ್ಚುಗಾರಿಕೆ,ಆಶ್ಚರ್ಯವಾದರೂ ಏನು!)

    • ಆಗ್ರಹದೊಳೆದುರಾದ ಅರಿಗಳಂ ನಿಗ್ರಹಿಸೊ ವ್ಯಾಘ್ರನಿವನೋ … ಇದರಿಂದ ಪ್ರಭಾವಿತವಾದದ್ದೇ? 🙂

  16. ಅರೆರ ! ಏನೀ ಚಿತ್ರಮಿದುವುಂ
    ಮರೆಯಲಾರರು ಕುಪಿತ ಮನದವ-
    ರುರಿಯುತೇಳುವ ಸಿಡಿಲ ಜ್ವಾಲಾಮುಖಿಯು ನಾವೆಲ್ಲ
    ದುರುಳ ವಿಷಯವೆ ತನುವ ತುಂಬಿರೆ-
    ಲರಿವ ಮೊದಲೇ ಸಿಡಿದು ಬಿಟ್ಟಿರೆ
    ಬರಿಯೆ ತಲೆಯದು ಸಿಡಿಯುತೇಳುವ ಚಿತ್ರದಂತಾಯ್ತು

    • To achieve prAsa by spilling a word to the next line is called khaNDaprAsa (3rd and 5th lines). It indicates that you have graduated to the next level. There are a few errors in the verse though. Neelakanta will show up soon to guide you in these matters. Keep working.

      • ಅಯ್ಯಯ್ಯೋ, ಏನಿದು ರಂಪರೇ? !! ನಾನೇನಿಲ್ಲಿ appointed instructor ಆ? ಅಥವಾ ಇವನೊಬ್ಬ ರಂಧ್ರಾನ್ವೇಷಕ ಎಂದು ಕುಟುಕುತ್ತಿದ್ದೀರೋ?

        • ಇವೆರಡೂ ನಿಮಗೆ ನೀವೇ ಕೊಟ್ಟುಕೊಂಡ ತಲೆಚೀಟಿಗಳು. ಹಿಂದೊಮ್ಮೆ ನನ್ನ ತಿದ್ದುಗೆಯನ್ನು ನೀವು ತಿದ್ದಿದ್ದಿರಿ – ಸಕಾರಣವಾಗಿ. ಆದ್ದರಿಂದ ನೀವೇ ತಿದ್ದುವುದೊಳಿತು.

    • ಇದುವುಂ ಸರಿಯಾಗಲಾರದು. ಚಿತ್ರಮಿದನಯ್ ಎನ್ನಬಹುದು. ಸಿಡಿಲ ಜ್ವಾಲಾಮುಖಿಯು… ಎಂಬಲ್ಲಿ ಲಲಗಂ ಗಂಗಂಲಲಲ ಎಂಬ ವಿನ್ಯಾಸ ಬರುತ್ತದೆ. ಇದು ಜ್ವಾ ಒತ್ತಕ್ಷರದ ಕಾರಣದಿಂದ. ಉರಿಯುವ ಜ್ವಾಲಾಮುಖಿಯವೊಲ್ ಸಿಡಿವರಾವೆಲ್ಲ… ಎಂದು ತಿದ್ದಬಹುದು.
      ತುಂಬಿರಲರಿವ ಮೊದಲೇ.
      ಇನ್ನು ಅರ್ಥಸೂಕ್ಷ್ಮತೆಯ ಬಗ್ಗೆ, ದುರುಳ ವಿಷಯವೆ ತನುವ ತುಂಬುವುದು ಹೇಗೆ? ವಿಷಯಗಳು ತುಂಬುವುದು ಮನಸ್ಸನ್ನು 🙂

      ಇಷ್ಟಲ್ಲದೇ ಈಗಲೇ ನೀನು ಈ ತೆರ ಮನಸ್ಸು, ಮನೋಭಾವ ಇತ್ಯಾದಿ ಬರೆಯುತ್ತಿರುವುದನ್ನು ಕಂಡು ವಿಶೇಷತಃ ನನಗೆ ಖುಷಿಯ ವಿಷಯ! ಈಗಾಗಲೇ ನನಗೆ ಇಲ್ಲಿ ವೇದಾಂತಿ ಎಂಬ ಪಟ್ಟ ಬಂದಿದೆ. ನಿನ್ನ ಜೊತೆಯಾಯಿತು ಇನ್ನು ಮುಂದೆ 🙂

    • ಅರರೇ, ಅರೆರ ಬಿಟ್ಟುಬಿಟ್ಟೆನಲ್ಲ! ಅದು ಅರರೆ ಆಗಬೇಕು. ಅಂದಹಾಗೆ ಅರರೆ, ಅಮಮಾ ಇವು ಕೊಪ್ಪಲತೋಟರ copyright. ಬಳಸುವಾಗ ಹುಷಾರಾಗಿರು 🙂

  17. || ತಾಮರಸ(ಲಲಿತಪದ)ವೃತ್ತ||

    ಒಡಲಿನ ಕಿಚ್ಚನೆ ಚಿಮ್ಮಿಸಿ ಕೆಚ್ಚಿಂ,
    ಸುಡಲೆನೆ ಷಡ್ವಿಧವೈರಿಗಳಂ, ಜಂ-|
    ಜಡಮನೆ ನೀಗುತೆ ಮುಕ್ತಿಯನೈದಲ್,
    ಕಡುತಪಮಂ ಸಲೆ ಗೈವುದೆ ಬೆಟ್ಟಂ ?! ||

    • ಲಲಿತಪದಂ ಮೊಳೆಯಾರರ ಪದ್ಯಂ
      ಕಲಿತನವೀನಗತಿಛ್ಛವಿಯುಕ್ತಂ 🙂

    • (ಅಚಲ)ಚಲರಹಿತಂ ಸಲೆ ತಾಪಸಿಯೆಂದಿಂ-
      ತುಲಿದಿರೆ ಮೌಲಿಕವೃತ್ತಿಯ(ವ್ಯಾಖ್ಯೆ) ರೂಪಿಂ|
      ಒಂದು ನವವೃತ್ತಪರಿಚಯವೂ ಆಯಿತು, ಧನ್ಯವಾದ.

    • ನೀಲಕಂಠರಿಗೆ ಹಾಗೂ ಪ್ರಸಾದರಿಗೆ ಧನ್ಯವಾದಗಳು.

      ನಮಿಪೆನತೀವದ ನಮ್ರತೆಯಿಂದಂ 🙂

  18. If Indra had not wielded his vajrAyudha to clip the wings of mountains, they would have temporarily relocated to the Himalayas to cool themselves whenever they contacted fever!
    ಈಶಂ(Indra) ಪೂರ್ವದೆ ವಜ್ರದಸ್ತ್ರಮನುಮೀಡಾಡುತ್ತುಮಾವೇಶದಿಂ
    ನಾಶವ್ಯಾಜನುಮಾಗದಿರ್ದಿರೆ ಕಕುದ್ಮಂತಂಗಳಂ(mountain) ರೆಂಕೆಗಂ|
    (Himalaya)ದೇಶಕ್ಕೈದುತುಮುತ್ತರಕ್ಕೊರುಮೆ ತಾಪಂ ತೀವಿದಾಗೆಲ್ಲಮುಂ
    ಲೇಶಂ ಶೈತ್ಯಮನೊಂದಿ ನಂದಿಸಿರವೇಂ ಕಾಳ್ಗಿಚ್ಚನೆಂದೆಂದಿಗುಂ||

  19. ಗೆಲುವೆನೆನ್ನುತೆ ಲೋಕವನೆಲ್ಲಮಂ
    ಛಲದೆ ಪೋಗುವ ರಾಜರವೊಲ್ ದಿಟಂ,
    ಜ್ವಲಿಪ ಕಿಚ್ಚನೆ ಕಾರುತಲಿರ್ದೊಡಂ
    ನಲುಮೆಯಂ ಗಿಡಬಳ್ಳಿಗಳಪ್ಪುಗೇಂ!

  20. ಪಗೆಯ ಮುಸುಂಕೊಳ್ ಭಯವೀ-
    ಬಗೆಯ ಕುಸುಂಕುರುವಿನೊಳ್ ಪೊಗೆಯನುಗುಳುತೆ ತಾಂ
    ಜಗವಂ ದಹಿಸುದುದೇಂ ಮೇಣ್
    ಅಗಡಿಸುತುರಿದ ಪಗೆತಾಂ ಭಯದೊಳುಡುಗಿದುದೇಂ ।।

    ಕುಸುಂಕುರು = ಅಡಗುದಾಣ / ಸಾಂದ್ರತೆ
    ಅಗಡಿಸು = ದಾಂಧಲೆ ಮಾಡು

    “ಭಯೋತ್ಪಾದನೆ” ಬಗೆಗಿನ ಪದ್ಯ.
    ಏನೀ ಚಿತ್ರ? – ದ್ವೇಷದಲ್ಲಿ ಹುಟ್ಟಿದ ಭಯದ ಧಗೆಯೋ ? / ಭಯದೊಳಡಗಿದ ದ್ವೇಷದ ಬಗೆಯೋ?

    • ಚೆನ್ನಾಗಿದೆ ಮೇಡಮ್ 🙂 ಆದರೆ ಸ್ವಲ್ಪ ಲಘುನೈರಂತರ್ಯ ಆಯಿತು.

Leave a Reply to hamsanandi Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)