Oct 162016
 

ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್

  89 Responses to “ಪದ್ಯಸಪ್ತಾಹ ೨೨೪: ಸಮಸ್ಯಾಪೂರಣ”

  1. ಅತಿಕಷ್ಟಮಿರಲ್ ಗೃಹದೊಳ್
    ಗತಿಸಲ್ ಸುಖಸಂಪದಂಗಳಾ ಗರುಡನವೋಲ್/
    ಧೃತಿಯಿಂ ಸೇವಿಸಿ ಲಕ್ಷ್ಮೀ
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್//

    ಮನೆಯ ಸುಖ ಸಂಪತ್ತುಗಳೆಲ್ಲ ಗರುಡನಂತೆ ವೇಗವಾಗಿ ಹಾರಿಹೋದಾಗ ಸಾಧ್ವಿಯು ( ಗೃಹಿಣಿ) ವಿಷ್ಣುವನ್ನು ಸೇವಿಸಿ ತಂದೆಯಂತೆ ಕಾಣುವುದು ಉತ್ತಮ.
    ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ.

    • ಚೆನ್ನಾಗಿದೆ.

    • “ಇನ್ನುಮೇಲೆ ನೀನು ನನಗೆ ತಂದೆ” ಎಂದು ಗಂಡನಿಗೆ ಹೇಳಿದರೆ ಅದು ಶಿಕ್ಷೆಯಲ್ಲವೆ? Henceforth let us be friends ಎಂದಂತೆ!
      ಹಾರಿದವು ಸಂಪದಂಗಳೆನುತ್ತೆ ಲಕ್ಷ್ಮಿ ತಾಂ
      ಕ್ಯಾರೆ ಎಂದೆನ್ನದೆಲೆ ಪೋಗುಗೇಂ ಪತಿಯಂ|
      ಘೋರೋಪದೇಶವಿದು ಮಾದರಿಯಿದೆನಿಸದೈ
      ನಾರಿವೃಂದಕೆ ಮಾರಕಪ್ರಾಯಮೈ|| 🙂

  2. ಕುತುಕಂ ಸಲ್ಗೇನಿದರೊಳ್!!
    ಹತನಂ ಗೈಯಲ್ಕೆ ಜಟಿಲ ಸಂದೇಹಮನುಂ
    ಯತಿಯಾಜ್ಞವಲ್ಕ್ಯರಂದಂ,
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್!

  3. ಚತುರಮತಿ ತಾಂ ಪತಿಯನೊಲಿ-
    ದತಿಶಯದೊಳೆ ಮಿತ್ರನಲ್ಲನೆನುತಲಿ ಮುದದಿಂ |
    ಸುತನೆನುತಲಿ ಮೇಣ್ ಪಲವೆಡೆ
    ಪತಿಯಂ ಪಿತನೆನುತೆ ಸಾಧ್ವಿ (ಕಾಂತೆ) ಕಾಂಬುದೆ ಸೊಗಮಯ್ ||

    (ಮಿತ್ರನಲ್ಲ = ಮಿತ್ರ , ನಲ್ಲ)

  4. ನುತಿಪಂತೆ ಸಕಲಲೋಕಂ
    ಜತನದೊಳಾಳುತಿರೆ ರಾಜ್ಯಮಂ!,ಪೆರ್ಮೆಯೊಳೇ
    ನತಿಸುತ್ತಾದರದಿಂದಂ
    ಪತಿಯಂ ಪಿತನೆನುತೆ ಸಾದ್ವಿ ಕಾಂಬುದೆ ಸೊಗಮಯ್!

    (ಪತಿಯಾದವನು ತನ್ನ ರಾಜ್ಯವನ್ನು ಬಹಳ ಚೆನ್ನಾಗಿ ಆಳುತ್ತಿರಲಾಗಿ,ಹೆಮ್ಮೆ,ಆದರವುಕ್ಕೇರಿ , ತನ್ನ ಪತಿಯೇ ದೊಡ್ಡವನೆಂಬ ಭಾವವನ್ನು ಸಾಧ್ವಿಯು ತಳೆಯುವುದು ಸೊಗಂ)

  5. ಜಿತಹೃದನೊಳಿಟ್ಟ ಸಲ್ಗೆಯ
    ನೆ,ತಿರಸ್ಕರಿಪಂತೆ ನಟಿಸುತಾಢ್ಯರ ನಡುವೊಳ್,
    ಮತಿಯಂ ನಿಯಂತ್ರಿಸುತೆ,ಹಾ!!
    ಪತಿಯಂ ಪಿತನೆನುತೆ ಸತಿಯು ಕಾಂಬುದೆ ಸೊಗಮಯ್!!

  6. ಅತಿಯಾಗುತಿರಲರಿಗಳಹಂ
    ಕೃತಿ, ಜತನದೊಳೀ ಜನರ್ಗಳಂ ತಂದೆಯವೋಲ್
    ಧೃತಿಯಿಂ ಪೊರೆದಿರ್ಪೀ ಜನ-
    -ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್

    ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ.(ಜನಪತಿ=ನಮ್ಮ ದೇಶದ ಪ್ರಧಾನಮಂತ್ರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದದ್ದು)

    • ಬಹಳ ಚೆನ್ನಾಗಿದೆ. ಮೊದಲ ಸಾಲಿನಲ್ಲಿ ಒಂದು ಮಾತ್ರೆ ಹೆಚ್ಚಾಗಿದೆ. ಅತಿಯಾಗಲ್ ರಿಪುಗಳಹಂ… ಮಾಡಬಹುದೇನೋ .

      • ಧನ್ಯವಾದಗಳು _/\_. ನಿಮ್ಮ ಸಲಹೆಯಂತೆ ತಿದ್ದಿದ ಪದ್ಯ ಇಲ್ಲಿದೆ.

        ಅತಿಯಾಗಲ್ ರಿಪುಗಳಹಂ
        ಕೃತಿ, ಜತನದೊಳೀ ಜನರ್ಗಳಂ ತಂದೆಯವೋಲ್
        ಧೃತಿಯಿಂ ಪೊರೆದಿರ್ಪೀ ಜನ-
        -ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್

  7. ಕುತಕಂ ಸಾವಿತ್ರಿವಿಧಂ!
    ಚತುರತೆಯಿಂ ಪಾತಿವ್ರತ್ಯಮನುಳಿಸಿಕೊಂಡಳ್| (ಶಿ.ದ್ವಿ.)
    ನುತಿಸುತ್ತೆ ದಕ್ಷಿಣಾಶಾ-
    ಪತಿಯಂ(ಯಮ) ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  8. ವ್ರತನಿಯಮಮೆನ್ನುತುಂ ಸಂ-
    ತತಿಯಂ ಪೊಂದಲ್ ಪ್ರಸಕ್ತಿಯಿಂ ನಿತ್ಯಂ ತಾಂ|
    ಸತತಮಿದೊ ಸುತ್ತುತೆ ವನ-
    ಸ್ಪತಿಯಂ(ಅರಳಿಮರ) ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  9. “ಕೃತಕೆಲ್ಲಕೆ ಪಿತನೀತ ಗ-
    ಣತಿಯೊಳೆನಗಮುಂ. ಕಲತ್ರವಾನೀತಂಗೆ ಭ-|
    ಣಿತಿಯಿಂ ಮಾತ್ರಂ – ತತ್ತ್ವದೆ.
    ನುತಿಪೆಂ ನಮಿಪೆನಿದೊ ಪ್ರಜಾ-(ಶಿ.ದ್ವಿ.)
    ಪತಿಯಂ(ಬ್ರಹ್ಮ)” ಪಿತನೆನುತೆ ಸಾಧ್ವಿ(ಸರಸ್ವತಿ) ಕಾಂಬುದೆ ಸೊಗಮಯ್||

  10. “ಅತಿಜನ್ಮವಿತ್ತನೆನಗಂ
    ಜತನದೆ ಕಡೆದೆನ್ನ ಪ್ರತಿಮೆಯಂ ಕಾಣೀತಂ|” (ಶಿ.ದ್ವಿ.)
    ಜಿತದಿಂ ವಂದಿಸುವಳಲೆ ಸ್ಥ-(ಶಿ.ದ್ವಿ.)
    ಪತಿಯಂ(ಶಿಲ್ಪಿ) ಪಿತನೆನುತೆ ಸಾಧ್ವಿ(ಶಾನ್ತಲೆ) ಕಾಂಬುದೆ ಸೊಗಮಯ್||

  11. (ಯಾಜ್ಞವಲ್ಕ್ಯ)ನೃತಮನೊಡನಿಳಿದು ವಾದಕೆ
    ಮತಿಯಂ ಮೆರೆವಗ್ರದೊಳ್ ಕರಗಳಂ ಮುಗಿವಳ್(ವಾಚಕ್ನವಿ ಗಾರ್ಗಿ)|
    ನುತಿಸುತ್ತೆ ತಾನದೊ ಸಭಾ-
    ಪತಿಯಂ ಪಿತನೆನುತೆ ಸಾಧ್ವಿ(ವಾದಾರ್ಥಿ) ಕಾಂಬುದೆ ಸೊಗಮಯ್||

  12. ಪತಿಯಾಧಾರಂ ಕುಲಕಂ(family)
    ಜತನದೆ ತೂಗಿಪ ಕುಟುಂಬಮನುಮೆನ್ನುತ್ತುಂ|
    ಶ್ರುತಿಯಿಂ ನಡೆಯುತ್ತುಂ, ಕುಲ-
    ಪತಿಯಂ(ಮನೆಯ ಯಜಮಾನ) ಪಿತ(Lord)ನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  13. ನುತಿಪಳ್ ದೇವರ್ಕಳರನ-
    ದಿತಿ-ಶಿವ-ಪಾರ್ವತಿ-ಗಣೇಶ-ತಿಮ್ಮಪ್ಪರನುಂ|
    ಜೊತೆಗಂ ತಾನಾ ಸೇನಾ-
    ಪತಿಯಂ(ಕಾರ್ತಿಕೇಯ) ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  14. ಗತಿಯಂ ತೂಗಿಸೆ ಒಲೆಯಂ-
    ಚಿತಿಯುರಿಯತ್ತಿರಲುಬೇಕುಮಲ್ತೆ ದಿನದಿನಂ|
    ಪತಿಯುಂ ಲಾಭಗಳಿಸೆ ಧನ-
    ಪತಿಯಂ(ಕುಬೇರ) ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  15. ರಾಜನು ಚಿಕ್ಕವನಾದರೂ ಪ್ರಜೆಗಳೆಲ್ಲರಿಗೂ ತಂದೆ
    ಜತನದೆ ಕಾಯ್ವಂ ಪ್ರಜೆಯಂ
    ಚತುರಂ ರಾಜನನುಶಾಸನದೊಳೆಂದೆಂದುಂ|
    ಪತಿತರ ಕಾಯ್ವೀ ದಕ್ಷನೃ-
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  16. ಚ್ಯುತಗೊಳ್ಳುತ್ತುಂ ನೌಕೆಯು
    ಪತನಂ ಕಣ್ಮುಂದೆ ತೋರೆ ಭೀತರುಮೆಲ್ಲರ್|
    ಖತಿಯಂ ತಪ್ಪಿಸೆ ನೌಕಾ-
    ಪತಿಯಂ ಪಿತನೆನುತೆ ಸಾಧ್ವಿ(a female voyager) ಕಾಂಬುದೆ ಸೊಗಮಯ್||

  17. “ಜತನದೆ ಕಾಯೋ ದೇವಾ
    ಸತಿಸೌಭಾಗ್ಯಂಗಳಂ ಕುಡೆಯ ನೀನೆನಗಂ|”
    ಘೃತದೀಪವನಿರಿಸುತೆ ವೃಷ-
    ಪತಿಯಂ(ಶಿವ) ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  18. ಅತಿಯಾಯ್ತಯ್ ಮಳೆ ಶಿವಶಿವ!
    ಖತಿಗೊಳಿಸೈ ಸಾಕು ವರ್ಷಧಾರೆಯ ನೀನೈ|
    ಸೃತಿಗೈ ರಶ್ಮಿಯನೆಂದಹ-(ಶಿ.ದ್ವಿ.)
    ರ್ಪತಿಯಂ(ಸೂರ್ಯ) ಪಿತನೆನುತೆ ಸಾಧ್ವಿ(ರೈತ ಹೆಂಗುಸು) ಕಾಂಬುದೆ ಸೊಗಮಯ್||

  19. “ಗತಿ ನೀನೇ ಎನಗೆಂದುಂ
    ಜತನದೆ ಸಲಹೈ ನಿವಾರ್ಯಮಾಗುಗೆ ದುಃಖಂ|”
    ಜಿತದಿಂ ತಾನಾ ಲಕ್ಷ್ಮೀ-
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  20. ಪಿತನುಂ ಗತಾಯುವಾಗಲ್
    ಗತಿಸಿದ ಪಿತನಕ್ಕರೆಯಂ ಮೀರಿದ ಅಳ್ಕರೆ-
    ಯಿತ್ತಿಪ ಅಂಬೆಯ ಎರಡನೆ / ಇಮ್ಮಡಿ-
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್
    ______________
    ತಂದೆ ಸತ್ತನಂತರ ತಾಯಿ ಮರುವಿವಾಹವಾಗಿ ಬಂದ ಮಲತಂದೆಯು
    ಹೆಚ್ಚಿನ ಪ್ರೀತಿಯನ್ನು ತೋರಿಸಿ ತಂದೆ ಎನಿಸಿಕೊಂಡ.

    ತಾಯಿಯ ಎರಡನೆ ಪತಿ ಎಂದು ಸವರಿಸಿದ್ದೇನೆ.

    ಎರಡನೆ – ಇದು ಸರಿಯಾದ ಪದವೇ ಇಲ್ಲಿ?
    ಇಮ್ಮಡಿ ಎಂಬುದಕ್ಕೆ ಎರಡನೆಯ ಎಂಬ ಅರ್ಥವಿದೆಯೇ? ಅಥವಾ ದುಪ್ಪಟ್ಟು ಎಂದು ಮಾತ್ರ ಅರ್ಥವೇ?
    ಮೀರಿದ ಎಂದು ಬಳಸಬಹುದೇ?
    ಮೀರಿದ ಅಳ್ಕರೆ – ಸಂಧಿ ಮಾಡದೇ ಬಿಡಬಹುದೇ?
    ದಯವಿಟ್ಟು ಕಲಿಸಬೇಕು.

    • 1) ಇಮ್ಮಡಿ ಸರಿಯಾಗದು. ಎರಡನೆ ಎಂಬುದೇ ಸರಿ.
      2) ಮೀರಿದ ಎಂಬುದು ಹೊಸಕನ್ನಡ. ಕಂದಕ್ಕೆ ಹಳಗನ್ನಡವನ್ನೇ ಬಳಸಬೇಕು.
      3) ಮೀರಿದ ಅಳ್ಕರೆ – ವಿಸಂಧಿಯೆನಿಸುತ್ತದೆ. ಮೀರಿದಳ್ಕರೆ ಎಂದಾಗಬೇಕು. (ಅಂಬೆಯ ಎರಡನೆ ಎಂಬಲ್ಲಿ ಅಂಬೆಯ ಯೆರಡನೆ ಎಂಬ ಉಚ್ಚಾರಣೆ ಬರುವುದರಿಂದ ವಿಸಂಧಿಯೆನಿಸದು. ಅಲ್ಲದೆ, ಅಂಬೆಯೆರಡನೆ ಎಂದು ಸಂಧಿಯಾಗಿಸಿದರೆ, ಅದು ಅಂಬೆಯು+ಎರಡನೆ ಎಂದು ವಿಗ್ರಹವಾಗುತ್ತದೆ.)
      4) ಮೂರನೆಯ ಪಾದದ ಆದ್ಯಕ್ಷರವು ಹಯವಾಗಿದೆ. ಅದು ಸಿಂಹವಾಗಬೇಕು. ಉಳಿದಂತೆ ಪದ್ಯವು ಚೆನ್ನಾಗಿದೆ.
      5) ಕಡೆಗೆ ಒಂದು ಪ್ರಶ್ನೆ ಉಳಿದೇ ಉಳಿಯುತ್ತದೆ: ಆಕೆ ’ಸಾಧ್ವಿ’ ಎನಿಸಿದುದು ಮೊದಲನೆಯ ಗಂಡನಿಗೋ? ಎರಡನೆಯ ಗಂಡನಿಗೋ? 🙂 🙂 🙂

  21. ಗತಿಸಲ್ ಜನಕಂ ತೌರಿನ
    ಕಷ್ಟಗಳಿಂದಾದಳ್ ಜನನಿಯು ಚಿಂತಾರ್ದ್ರಳ್
    ಮಾತೆಯ ದುಃಖವ ನೀಗಿದ
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್

    ತಂದೆ ತೀರಿಕೊಂಡಾಗ ಸಾಧ್ವಿಯ ತಾಯಿಗೆ ಬಂದ ಕಷ್ಟಗಳನ್ನು ನೀಗಿಸಿದ ತನ್ನ ಪತಿಯನ್ನು ಕೃತಜ್ಞತೆಯಿಂದ ತನ್ನನ್ನು ಸಾಕಿ ಸಲಹಿದ ತಂದೆಯಷ್ಟೇ ಪ್ರೀತಿ ಗೌರವದಿಂದ ಕಂಡಳು ಎಂಬರ್ಥದಲ್ಲಿ.

  22. ಗತಿ-ಗೋತ್ರಮೊಂದಿರದ ನಿ-
    ರ್ಗತಿಕಂ,ಜಾಬಾಲಿ ಬಾಲಗಂ ಮುನಿ ”ನಿನಗ- I
    ರ್ಹತೆ ನಿನ್ನ ನುಡಿ”ಯೆನೆ ಜಗ-
    ತ್ಪತಿಯ೦ ಪಿತನೆನುತೆ ಸಾಧ್ವಿ ಕಾಂಬುದೆಸೊಗಮಯ್II

    ಇದು ಸತ್ಯಕಾಮ, ಗೌತಮನೆ೦ಬ ಮುನಿಯ ಬಳಿ ಅಧ್ಯಯನದ ಆಸೆ,ಆಸಕ್ತಿಯಿಂದ ಬರುವ ಪ್ರಸಂಗದ ಚಿತ್ರಣ — ಮುನಿ ಗೋತ್ರ ,ಪ್ರವರಗಳ ಬಗ್ಗೆ ಅವನಲ್ಲಿ ವಿಚಾರಿಸಿದಾಗ ಅದು ಅವನಿಗೆ ತಿಳಿದಿರುವುದಿಲ್ಲ . ತನ್ನ ತಾಯಿಯನ್ನು ವಿಚಾರಿದಾಗ ಪರಿಚಾರಿಕೆಯಾಗಿದ್ದಾಗ ತಾನು ಯಾವನಿಂದ ನಿನ್ನನ್ನು ಪಡೆದೆ ಎಂಬುದು ತನಗೆ ಕೂಡಾ ತಿಳಿದಿಲ್ಲವೆ೦ದೂ , ತಾನು ಜಾಬಾಲಿ ; ನೀನು ಸತ್ಯಕಾಮ ಎನ್ನುತ್ತಾಳೆ . ಅವನು, ತನ್ನ ತಾಯಿ ತನಗರುಹಿದ ಸತ್ಯವನ್ನು ಆ ಗುರುವಿಗೆ ತಿಳಿಸುತ್ತಾನೆ. . ”ಅಬ್ರಾಹ್ಮಣ ಇದನ್ನು ಹೇಳಲಾರ . ನೀನು ಸತ್ಯದಿಂದ ಕದಲಲಿಲ್ಲ .ಅದುವೇ ಈ ವಿದ್ಯೆಯನ್ನು ಕಲಿಯಲು ನಿನಗೆ ಅರ್ಹತೆ” ಎನ್ನುತ್ತಾನೆ ಮುನಿ .

    ಆಗ ಅವನ ತಾಯಿ ತನ್ನ ಪ್ರಾಮಾಣಿಕ ನುಡಿಗೆ ತನಗೆ ಆ ಭಗವಂತನೇ ಪತಿಯಾಗಿರುವನೆಂದು ತಿಳಿದು ಹರ್ಷಿಸಿದಳು ಎನ್ನುವುದು ಮೇಲಿನ ಪದ್ಯ ತಾತ್ಪರ್ಯ.

    • ಚೆನ್ನಾಗಿದೆ!

    • ಕಲ್ಪನೆ ಚೆನ್ನಾಗಿದೆ. “…..ನಿನಗರ್ಹತೆಯೈ ನಿಜನುಡಿ”ಯೆನೆ ಜಗ-ಪತಿಯ೦ ಎಂದರೆ ಭಾಷೆ ತುಸು ಹಳತಾಗುತ್ತದೆ. (ನಿಜ=ಸ್ವಂತದ)

      • ಪ್ರಸಾದ್ ಸರ್,ಭಾಷೆಯನ್ನು ಹಳತಾಗಿಸಿದ ಸಲಹೆಗೆ ಧನ್ಯವಾದಳು . ಜಗತ್ಪತಿ ಅನ್ನುವುದು ತಪ್ಪೇ ?

        • ಖಂಡಿತ ತಪ್ಪಲ್ಲ. ಆದರೆ ಆಗ ಛಂದಸ್ಸು ಕೆಡುತ್ತದೆ.

      • ”… ನಿನ್ನ ನುಡಿ”. ಅನ್ನುವಲ್ಲಿ ಅವನ ತಾಯಿಯು ಹೇಳಿಕೊಟ್ಟ ನಡತೆಯ ಬಗ್ಗೆ ಮುನಿಯ ಪ್ರಶಂಸೆಯಿದೆ ಅನ್ನುವುದು ಅಲ್ಲಿಯ ಧ್ವನಿ.ಅದಕ್ಕಾಗಿಯೇ ಅವಳು ಹರ್ಷಿಸಿದಳು .ಅಂದರೆ ಭಗವಂತನಿಗೆ ಕೃತಜ್ಞತೆ ಸಲ್ಲಿಸಿದಳು ಎಂದು ನಾನು ಬರೆದುದರರ್ಥ. ( ಮಕ್ಕಳಿಗೆ ಸ್ವತ: ತಿಳಿದಿರುವುದಿಲ್ಲ. ಮೊದಲ ಗುರುವಾದ ತಾಯಿ ಹೇಳಿಕೊಟ್ಟ ಮಾತನ್ನು ಅವನು ಹೇಳಿದ್ದಾನೆ. ಅವಳಿಗೆ ಸುಳ್ಳು ಹೇಳಿ ಮಗನನ್ನು ಸಾಗಹಾಕಬಹುದಿತ್ತು . ಆದರೆ ಅವಳು ಹಾಗೆ ಮಾಡದಿರುವುದರಿಂದಲೇ ಅವಳು ಮತ್ತು ಅವಳಮಗ ಇಬ್ಬರೂ ಮುನಿಯ ಮೆಚ್ಚುಗೆಗಳಿಸಿರುವುದು ಎಂಬುದು ಇಂಗಿತ ) ಆದ್ದರಿಂದ ಭಾಷೆಯನ್ನು ಬದಲಿಸ ಬೇಕೆಂದು ನನಗೆ ತೋರುವುದಿಲ್ಲ . ಬದಲಿಸಿದರೆ ನಾನು ಉದ್ದೇಶಿದ ಅರ್ಥ ಪಡೆದುಕೊಳ್ಳುವುದಿಲ್ಲವೆಂದು ನನ್ನ ಮತ .

        • ಅರ್ಹತೆ ಎಂಬುದನ್ನು ಅರ್ಹತೆಯೈ ಎಂದೂ (ಪ್ರತ್ಯಯವ್ಯತ್ಯಾಸ) ನಿನ್ನ ಎಂಬುದನ್ನು ನಿಜ (ಗಣಗಣಿತವನ್ನು ತೂಗಿಸಲು ಕನ್ನಡಪದದ ಬದಲು ಸಮಾನಾರ್ಥಕಸಂಸ್ಕೃತಪದ) ಎಂದೂ ಬದಲಿಸಿರುವುದನ್ನುಳಿದು, ಅರ್ಥವ್ಯತ್ಯಯವಾಗುವಂತೆ ನಾನಾವ ಬದಲಾವಣೆಯನ್ನೂ ಸೂಚಿಸಿಲ್ಲ. ಹಾಗಾಗಿ ನಿಮ್ಮ ವಿವೃತಿಗೆ ಯಾವ ಚ್ಯುತಿಯೂ ಇಲ್ಲ.

  23. ಜೊತೆಯಂ ಜೀವನಕಂ ಕೊ-
    ಟ್ಟತಿತೋಷಿಪ ಗಂಡನಬ್ಬೆಯಂ ಜನನಿಯವೊಲ್
    ನುತಿಸುತ್ತುಮೆ ಮೇಣತ್ತೆಯ
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್

    • ಆಹಾ! ಒಳ್ಳೆಯ ಕನಸು!

    • ತುಂಬ ಮಾರ್ಮಿಕವಾಗಿ ಅದೆಷ್ಟನ್ನೋ ಧ್ವನಿಸಿದ್ದೀರಿ. ಅತ್ತೆಯನ್ನು ಬರಿಯ ’ನುತಿಸಿದಳು’. ಆದರೆ ಮಾವನನ್ನು ’ಪಿತನೆನುತೆ ಕಂಡಳು’. ಕಽಲಾವಿದ!

    • ನೀಲಕಂಠರೆ, ಕಲ್ಪನೆ ಚೆನ್ನಾಗಿದೆ.”ಜನನಿಯವೊಲ್ ನುತಿಸುತ್ತುಮೆ ” ಎಂಬುದನ್ನು “ತಾಯೆಂದೇ( ತಾಯ್ ಎಂದೇ ) ನುತಿಸುತ್ತುಮೆ ” ಎಂದಾಗಿಸಿದಲ್ಲಿ ಹೆಚ್ಚು ಸರಿಯೆನಿಸುವುದೆ ?

      • ‘ಹೆಚ್ಚು ಸರಿ’ ಎಂದೇಕೆ ಹೇಳುತ್ತೀರಿ? ’ಜನನಿಯವೋಲ್’ ತಪ್ಪು ಎಂದೇ ಹೇಳಿ. ಅದು ’ಜನನಿಯು ನುತಿಸುವಂತೆ’ ಎಂದಾಗುತ್ತದೆ. ಇಲ್ಲಿ ಬೇಕಾಗಿರುವುದು ’ಜನನಿಯೆಂದು ನುತಿಸುವಂತೆ’. ನಿಮ್ಮ ಸಲಹೆ ಸರಿಯಾಗಿದೆ.

  24. ಅಪ್ಪಾ .. !! ಪ್ರಸಾದ್ ಸರ್,

    ಮಿತಿಯಿಲ್ಲದಂತೆನಿತು ಬಗೆ
    ಪತಿಗಳನುಮೆಳೆತಂದುದೊಪ್ಪ ಪೂರಣಕಪ್ಪಾ ?
    ಇತಿ ಪದ್ಯಪಾನದ ಕಿತಾ-
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದು ಸೊಗಮೇo !!

    • ಹ್ಹ ಹ್ಹ ಹ್ಹ ಧನ್ಯವಾದಗಳು. ’ಸೊಗಮಯ್’ ಎಂಬುದನ್ನು ’ಸೊಗಮೇಂ’ ಎಂದು ಪ್ರಶ್ನಾರ್ಥಕವಾಗಿಸಿರುವುದನ್ನೂ ಗಮನಿಸಿಕೊಂಡಿದ್ದೇನೆ!

  25. ನತದೃಷ್ಟ ಸೋದರಿಯರು ಗ-
    ಡ ತಬ್ಬಲಿಗಳೀರ್ವರುಂ ಜತೆಯಲಿರುವಾಗಲ್ ।
    ಜತನದೊಳು ಸಲಹುವಗ್ರಜೆ-
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್ ।।

    ಅಗ್ರಜೆಪತಿಯಂ ಸರಿಯೋ? ಅಗ್ರಜೆಯ ಪತಿಯಂ ಎಂದಾಗಕೋ?

    (ತಂದೆತಾಯಿ ಇಲ್ಲದ, ತನ್ನನ್ನು ಜೋಪಾನವಾಗಿ ಸಲಹುತ್ತಿರುವ ಅಕ್ಕನ ಪತಿಯನ್ನು ತಂದೆಯಂತೆ ಕಾಣುತ್ತಿರುವ ಸುಶೀಲೆಯ ಕಲ್ಪನೆಯಲ್ಲಿ)

    • ಅಗ್ರಜೆಪತಿಯಂ wrong. ಅಗ್ರಜೆಯ ಪತಿಯಂ right. Or agrajaapati

      • ಧನ್ಯವಾದಗಳು ನೀಲಕಂಠ,
        ಹಾಗಾದರೆ ಛಂದಸ್ಸು ತಪ್ಪುವುದು.
        ನಿನ್ನಪದ್ಯದ ಹಾಗೆ – “ಅತ್ತೆಯ ಪತಿಯಂ” ಥರ “ಅಕ್ಕನ ಪತಿಯಂ” ಎಂದು ಬದಲಾಯಿಸುತ್ತೇನೆ.

        ನತದೃಷ್ಟ ಸೋದರಿಯರು ಗ-
        ಡ ತಬ್ಬಲಿಗಳೀರ್ವರುಂ ಜತೆಯಲಿರುವಾಗಲ್ ।
        ಜತನದೊಳು ಸಲಹುವಕ್ಕನ-
        ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್ ।।

  26. ಪತಿಯಂ ಸೇರ್ವಡೆ ಶಾರದೆ –
    ಯತಿನಿರ್ಜನದೇಶದೆಡೆಯೊಳೊರ್ವಳೆ ನಡೆಯಲ್
    ಗತಿಗಡ್ಡಬಂದ ತಸ್ಕರ –
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್

    ಶ್ರೀ ಶಾರದಾದೇವಿಯವರು (ಆಗಿನ್ನೂ ಯುವತಿ) ತವರುಮನೆಯಿಂದ ದಕ್ಷಿಣೇಶ್ವರಕ್ಕೆ ನಿರ್ಜನಪ್ರದೇಶವೊಂದರಲ್ಲಿ ಒರ್ವಳೆ ನಡೆಯುತ್ತಿದ್ದಾಗ ಅಡ್ಡಬಂದ ಒಬ್ಬ ಡಕಾಯಿತನನ್ನೆ “ಅಪ್ಪ” ಎಂದು ಕರೆದು ಅವನ ಮನವನ್ನೆ ಕರಗಿಸಿಬಿಡುತ್ತಾಳೆ. ಆ ಘಟನೆಯನ್ನು ಆಧರಿಸಿದ ಪೂರಣ.

    • ಕೀಲಕಕ್ಕೆ ಸತ್ಸಂದರ್ಭವನ್ನು ಹೊಂದಿಸಿರುವುದು ಚೆನ್ನಾಗಿದೆ.

    • ಆಹಾ! ಮಾತೆಯನ್ನು ನೆನಪಿಸಿದ ಪುಣ್ಯ ನಿಮಗೆ!

      • ಪತಿಯಂ ಸುತನಂತೆಣಿಸು-
        ತ್ತತಿತಮದೊಳಗಿರ್ದ ಚೋರನಂ ಪಿತನ ತೆರಂ
        ಮತಿ ಭಾವಿಪೊಡೈದಾ ಶಿ-
        ಷ್ಯತತಿಯ ಸಂತಾನವೊಂದಿದಾಕೆಗೆ ಮಣಿದೆಂ

        • Good diction

        • ಪೂರ್ಣ ಅರ್ಥವಾಗಲಿಲ್ಲ – ಮೂರನೆಯ ಮತ್ತು ನಾಲ್ಕನೆಯ ಸಾಲುಗಳು.
          “ಅತಿಯ ಸಂತಾನವೊಂದಿದಾಕೆಗೆ ಮಣಿದೆಂ” ಎಂಬುದು ವಿವೇಕಾನಂದರ ಕುರಿತೇ ?

          ಭಾವಿಪೊಡೈದಾ ಶಿ-
          ಷ್ಯತತಿಯ
          ಈ ಸಾಲುಗಳನ್ನು ಸರಿಯಾಗಿ ಬಿಡಿಸಲು ಗೊತ್ತಾಗಲಿಲ್ಲ.
          _/^\_

  27. ಅತಿಲಂಪಟ ಕೀಚಕನಂ
    ಶತಮದವಾರಣ ಮಹಾಬಲಧರಂ ಸಿಗಿಯಲ್
    ಸತಿತಾನ್ ಮನದೊಳ್ ಬಗೆದಳ್
    “ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್”

    ಕೀಚಕನಿಂದ ಮಾನಪ್ರಾಣಗಳನ್ನು ಕಾಪಾಡಿ ಹೊಸ ಜನ್ಮವಿತ್ತು ತಂದೆಯಂತಾದ ಭೀಮನನ್ನು ದ್ರೌಪದಿ ತಂದೆಯಂತೆ ಕಂಡಳು ಎನ್ನುವ್ ಅರ್ಥದಲ್ಲಿ ಬರೆದ್ದಿದ್ದೇನೆ. ದಯವಿಟ್ಟು ತಪ್ಪುಗಳಿದ್ದಲ್ಲಿ ತಿಳಿಸಿ,ತಿದ್ದುವಲ್ಲಿ ಸಹಕರಿಸಿ.

    • ತತ್ತ್ವತಃ ಹೀಗೆ ಅನ್ವಯಿಸಬಹುದಾದರೂ ದ್ರೌಪದಿಯ ಈ ಪ್ರಸಂಗದಲ್ಲಿ ಅಷ್ಟು ಸಮಂಜಸವಾಗಿ ಕಾಣುತ್ತದೇನೋ ಇಲ್ಲವೋ… ಪದ್ಯ ಚೆನ್ನಾಗಿದೆ.

      • ಅವಳು ಭೀಮನನ್ನು ಹಾಗೆ ಕಾಣುವುದು ಸ್ವಲ್ಪಕಾಲ ಮಾತ್ರ – ಅವನು ಪ್ರತಿಜ್ಞೆಯನ್ನು ನೆರವೇರಿಸಿದ ಕಾವು ಇರುವವರೆಗೆ. ಹಾಗಾಗಿ ಇಷ್ಟೆಲ್ಲ ಟೀಕೆ/ವಾರ್ತ್ತಿಕೆ/ವಾಕ್ಯಾರ್ಥ/ವಿಮರ್ಶೆಗಳು ಬೇಕಾಗಿಲ್ಲವೇನೋ 😉

  28. ಪತಿಯಿಂ ಶಾಪಮನೊಂದಿ,
    ಸ್ಥಿತಿಯೊಳಹಲ್ಯೆ ಶಿಲೆಯಾಗಿರಲ್, ದೈನ್ಯದಧೋ-|
    ಗತಿಯನಳಿಸಿರ್ದ ಸೀತಾ-
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್ ||

    • Good episode chosen. I have thought of 13 keelakas. Beats me why I couldn’t think of such a simple one! Simply superb.

      • ಧನ್ಯವಾದಗಳು ಹಾದಿರಂಪರೆ. 🙂

      • ಪ್ರಸಾದ್ ಸರ್, ಶಕುಂತಲಾ
        ನಿಮ್ಮಿಬ್ಬರ ಸುಂದರ ಪೂರಣ / ಪ್ರತಿಕ್ರಿಯೆ ಮಧ್ಯೆ ನನ್ನದೊಂದು ಸಣ್ಣ “ಕಿತಾಪತಿ” !!
        ಶಕುಂತಲಾ, ಆಗಿನ್ನೂ “ರಾಮ” – “ಸೀತಾಪತಿ” ಆಗಿರಲಿಲ್ಲವೇನೋ ಅಲ್ಲವೇ ?!
        ಪ್ರಸಾದ್ ಸರ್, ನೀವು – “ಸೀತ” + ಆ ಪತಿಯಂ – ಎಂದು ಬಿಡಿಸಿ ಬರೆಯಬಹುದೇನೋ ಅಂತ ಅಂದುಕೊಂಡಿದ್ದೆ !!

        • ಉಷಾ ಅವರೆ, ಮದುವೆಯು ಸ್ವರ್ಗದಲ್ಲೇ ನಡೆಯುವುದರಿಂದ ರಾಮನು ಹುಟ್ಟಿನಿಂದಲೂ ಸೀತಾಪತಿಯೇ. ಅವನ ಗುರುತಿನ ಚೀಟಿಯಲ್ಲಿ (ಐಡಿ ಕಾರ್ಡಿನಲ್ಲಿ) ಸೀತಾಪತಿಯೆಂಬ ಹೆಸರಿದೆ. 🙂

        • ಸೀತಾಪತಿ ಎಂಬಲ್ಲಿ ’ಆದವನು’ ಎಂದೂ ಇಲ್ಲ ’ಆಗುವವನು’ ಎಂದೂ ಇಲ್ಲ. ’ಸೀತ ಆ ಪತಿಯಂ’ ಎಂದರೆ ಏನು? ’ಸೀದುಹೋದ’ ಎಂದೆ? ’ನೆಗಡಿ’ ಎಂದೆ?

        • ನನ್ನ RTI ಪ್ರಶ್ನೆಗೆ ಸ್ವರ್ಗಲೋಕ ದಿಂದ proof ಸಿಕ್ಕಿದೆ, ಪ್ರಸಾದ್ ಸರ್ ! ವಿನಾಕಾರಣ ನಿಮ್ಮ ಗಂಭೀರ ಸಂಭಾಷಣೆಯ ಮಧ್ಯೆ ಒಂಟಿ ಸೀನು “ಸೀತ”ದಕ್ಕೆ ಕ್ಷಮೆಯಿದೆ ಅಲ್ಲವೇ ?
          “ರಘುಪತಿ ರಾಘವ ರಾಜಾರಾಮ್ । ಪತಿತ ಪಾವನ ಸೀತಾರಾಮ್ ।।”

  29. These keelakas won’t go with kanda. Hence adapted.

    ಚಿತೆಯವೋಲುರಿದಿರಲ್ ಭಾರತವು ದ್ವಾದಶದ
    ಶತಮಾನದೊಳು ಮ್ಲೇಚ್ಛವೈರದಿಂದಂ|
    ಧೃತಿಮೆರೆದು ರಾಷ್ಟ್ರಮಂ ಕಾಯ್ದ ಛತ್ರಪತಿಯಂ(ಶಿವಾಜಿ)
    ಪಿತನೆನುತೆ ಸಾಧ್ವಿ ಕಾಂಬುವುದೆ ಸೊಗಮಯ್||

    ಜೊತೆಗೂಡಿ ನಿಜರ(ಕುಟುಂಬದವರ), ವಾಲ್ಮೀಕಿಯ ಜಯಂತಿಯಂ
    ಜತನದಿಂದಾಚರಿಸಿದಳಂದೊರ್ವಳು|
    ಮತಿನೀಡು ಮಕ್ಕಳಿಂಗೆಂದು ಗೋತ್ರಪತಿಯಂ(ಮೂಲಪುರುಷ)
    ಪಿತನೆನುತೆ ಸಾಧ್ವಿ ಕಾಂಬುವುದೆ ಸೊಗಮಯ್||

  30. ಯತಿಯಿಂ ಶಾಪವ ಪಡೆದಂ
    ಹತನಪ್ಪನೆನುತೆ ಮನಃಪ್ರಿಯೆಯ ತಾಂಸೇರಲ್//
    ಖತಿಯೊಳ್ಮುಳುಗಿದರ್ ಪೃಥಾ
    ಪತಿಯಂ ಪಿತನೆನುತೆಸಾಧಿ್ವಕಂಡುದೆಸೊಗಮಯ್//

    ಮಾದ್ರಿಯನ್ನು ಕುರಿತಾಗಿ ಬರೆದದ್ದು. ತಪ್ಪಿದ್ದರೆ ತಿದ್ದಬೇಕಾಗಿ ವಿನಂತಿ.

  31. ಪತಿತಾನ್ ಕರ್ತವ್ಯಪರಂ
    ಸತಿಯಂ ಕ್ಷಿತಿಗರ್ಭಜಾತಳವಳಂ ತೊರೆಯಲ್
    ಕ್ಷಿತಿಯೊಲ್ ಪೊರೆದಿರ್ದಾಮುನಿ
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್

    ಭೂಗರ್ಭಜಾತಳಾದ ಸೀತೆಯನ್ನು ರಾಮನು ತೊರೆದಾಗ ಅವಳನ್ನು ಭೂಮಿ(ತಾಯಿ)ಯಂತೆ ಪೊರೆದ ವಾಲ್ಮೀಕಿ ಮಹರ್ಷಿಯನ್ನು ತಂದೆಯಂತೆ ಕಂಡಳು(ಅಥವಾ ಕಾಣಬಹುದು) ಎನ್ನುವ ಪ್ರಯತ್ನ.ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ, ತಿದ್ದಿ.

  32. ಗತಿಯಾರೆನ್ನುತ ಭಾಮೆಯ –

    -ಳುತಿರಲ್. ಸರಸರನೆ ಬಂಧು ಮನೆಗಂ ಬಂದಂ

    ಮತಿಯಿಂದೋರಲ್ ಬಲು ಸಿಂ –

    -ಪತಿಯಂ. ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್
    sympathy

  33. ಸ್ಮಿತವದನದ ಸುಂದರಿಯಂ
    ಪತಿಯಂ ತೊರೆದಾಕೆಯ೦ ಪೊರೆವೆ ತಾನೆನುತುಂ I
    ಮತಿಯ೦ ಮರುಳ್ಗೊಳಿಸಿದುಪ –
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್II

    ಹಣಕ್ಕಾಗಿ ಅನೈತಿಕ ಸಂಬಂಧ ಇಟ್ಟುಕೊಂಡ ‘ಸಾಧ್ವಿ’ ಎ೦ಬ ಹೆಸರಿನ ಹೆಂಗುಸು

  34. ಸತಿಯಿರೆ ಸಂತತಿಯಿಲ್ಲದ
    ಬೆತೆಯಿಂ, ಪತಿ ಕೊಳ್ಳೆ ಮಗಳನಾಶಿಸಿ ದತ್ತಿಂ,|
    ಋತದಿಂ ಸೇವಿಸುತುಂ ದಂ-
    ಪತಿಯಂ, ಪಿತನೆಂದು ಸಾಧ್ವಿ ಕಾಂಬುದೆ ಸೊಗಮಯ್||

    ( ದಂಪತಿ= ಮನೆಯ ಯಜಮಾನ )

    • ಅನರ್ಥಕೋಶ: ಯಾವ ಪತಿಗೆ ದಂ ಇದೆಯೋ ಅವನೇ ದಂಪತಿ! On second thoughts, ಎಲ್ಲ ಪತಿಗಳಿಗೂ ದಂ ಇರುತ್ತದೆ: ಮೊದಮೊದಲು ಧೈರ್ಯದ ದಂ, ವಯಸ್ಸಾದಮೇಲೆ ದಮ್ಮು!

      • ಹಾಗಾದರೆ ವಯಸ್ಸಾದ ಮೇಲೆ ದಂಪತಿಯು ಸೀತಾಪತಿ( ಸೀತ ಆ ಪತಿ)ಯಾಗುತ್ತಾನೆ ಎಂಬುದು ನಿಮ್ಮ ಅಭಿಪ್ರಾಯ……

  35. ಅತಿಶಯಮೀ ದಾಂಪತ್ಯ ಭ-
    ರತಖಂಡದೊಳು, “ಸತಿ” ನರ್ಮದೆಯ ಜನನಿಯವೊಲ್ ।
    ಜತೆ ಸಾಗುತಲಿರ್ಪ “ಪತಿ” ತ-
    ಪತಿಯಂ ಪಿತನೆನುತೆ ಸಾಧ್ವಿ ಕಾಂಬುದು ಸೊಗಮಯ್ ।।

    ಭಾರತ ದೇಶದ ಮಧ್ಯ ಭಾಗದಲ್ಲಿ ಜೊತೆಜೊತೆಯಾಗಿ ಹರಿದು ಅರಬ್ಬೀಸಮುದ್ರ ಸೇರುವ “ದಂಪತಿ” ನದಿಗಳು – “ನರ್ಮದ – ತಪತಿ”ಯ ಬಗ್ಗೆ

  36. ಅಮ್ಪಕ= an entertainment given to friends at their departure

    ಸಿತಮಲ್ಲಿಕಾಪ್ರಸೂನಭ-(ಪ್ರಸೂನ=ಹೂವು)
    ರಿತಹಾರವ ತೊಟ್ಟು ಬಂದನಂ ಕಂಡಿನ್ನುಂ|
    ಜಿತದಿಂ ಜೀವಿಪ ಪರ್ವಕೆ (Retired life)
    ಪತಿಯಮ್ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್||

  37. ಮಥಿಸುತೆ ನರಕಾಸುರನಂ
    ಸತಿಪಟ್ಟಮನಿತ್ತು ಭೀಕರ ನರಕದಿಂ ತಾ-
    -ನತಿಶಯದಿಂ ಪೊರೆದಿಹ ಯದು-
    -ಪತಿಯಂ ಪಿತನೆನುತೆ ಸಾಧ್ವಿ ಕಾಂಬುದೆ ಸೊಗಮಯ್

    ನರಕಾಸುರನನ್ನು ಕೊಂದು,ನರಕದಂತಿದ್ದ ಸೆರೆಯಿಂದ ಪಾರುಮಾಡಿ ಹೊಸ ಜನ್ಮವನ್ನೂ ಜೊತೆಗೆ ಸತಿಪಟ್ಟವನ್ನೂ ಇತ್ತ ಶ್ರೀಕೃಷ್ಣನನ್ನು ಪತಿಯಂತೆ ಕಾಣುವುದಕ್ಕಿಂತ ತಂದೆಯಂತೆ ಕಾಣುವುದೇ ಸರಿ ಎಂದು ಹದಿನಾರು ಸಾವಿರ ಸ್ತ್ರೀಯರಲ್ಲೊಬ್ಬಳು ತಕ್ಷಣಕ್ಕೆ ಅಂದುಕೊಂಡಳು ಅನ್ನುವ ಭಾವದಲ್ಲಿ ಬರೆದದ್ದು.(ನನ್ನ ಹಿಂದಿನ ಪದ್ಯದಂತೆಯೇ ಈ ಪ್ರಸಂಗಕ್ಕೆ ಈ ಪರಿಹಾರ ಅಷ್ಟು ಉಚಿತವೋ ಅಲ್ಲವೋ ಗೊತ್ತಿಲ್ಲ). ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ.

    • ಪದಪ್ರೌಢಿ ಹಾಗೂ ಖಂಡಪ್ರಾಸಗಳು ಚೆನ್ನಾಗಿರುವುದರಿಂದ ಔಚಿತ್ಯವೆಲ್ಲ ಗೌಣ.

Leave a Reply to ಭಾಲ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)