Dec 122016
 

ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್

  58 Responses to “ಪದ್ಯಸಪ್ತಾಹ ೨೩೩: ಸಮಸ್ಯಾಪೂರಣ”

  1. ನಾರಿಯು ದುರ್ಬಲಳೆಂಬಾ
    ಸೂರಿಗಳಂ ತಾಂ ಮಹಾಜಿರಂಗದೆ ಮಣಿಸ/
    ಲ್ಕಾರದ ವಿದ್ಯಾಪಾರಾ
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್ //

    ನಾರಿಯು ಬಲಹೀನಳು ಎಂದು ಸಾರುವ ವಿದ್ವಾಂಸರನ್ನು ರಣರಂಗದಲ್ಲಿ(ವಿದ್ವಾಂಸರ ರಣರಂಗದಲ್ಲಿ ) ಸೋಲಿಸಲು ಒಣಗದ ವಿದ್ಯೆಯ ಸಾಗರದಂತೆ ವಾಣಿಯು ವರ್ತಿಸುತ್ತಿದ್ದಾಳೆ.
    ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕು

  2. ಚಾರುಬ್ರಹ್ಮಪುರಿಯವರ್
    ಪಾರಂಗತರಲ್ತೆ ಸರ್ವವಿದ್ಯಾಂಗಗಳೊಳ್|
    ಸಾರಸ್ವತಳಿವಳುಂ (ಅಲ್ಲಿನ) ಪರಿ-
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
    ———–
    ಭೀರುಗಳೆಲ್ಲರ್ ಲಂಚವ
    ಪೀರುತೆ ವಿದ್ಯಾಲಯಂಗಳೊಳ್ ಮೂಢರನುಂ|
    ಸೇರಿಸಿಕೊಳ್ಳಲ್ ಪಕ್ಷ-
    ದ್ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
    (ಪಕ್ಷದ್ವಾರ=backdoor)
    —————
    ಈ ಬಾರಿ ಸರಸ್ವತಿಪೂಜೆಯು ಶುಕ್ರವಾರದಂದು ಬಿದ್ದು…
    ಆರಾಧನೆ ವಾಣಿಯದೀ-
    ಬಾರಿಯುಮಾಗೆ ನವರಾತ್ರದೊಳ್ಶುಕ್ರದಿನಂ|
    ಭೂರಿವಿಭೂಷಣದಿಂ ತ-
    ದ್ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
    (ತದ್ವಾರ=ಆ ವಾರ ಎಂದರೆ ಶುಕ್ರವಾರ. ಶುಕ್ರವಾರ ಅಂಗನೆ = ಲಕ್ಷ್ಮಿ)
    ————-
    ನೇರನುಡಿಯಂ ತಿಳಿವನೆ ಪು-
    ಢಾರಿಯು? ನಾಲಗೆಯೊಳೆಂತು ಪೊರಳುವಳವನಾ?
    ಜಾರುತೆ ಬೀಳುತೆ ತಾಂ ಮಧು-
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
    (ಮಧುವಾರ+ಅಂಗನೆ=Drunk damsel)

    • _/\_

    • ಪಕ್ಷದ್ವಾರ, ಮಧುವಾರಾಂಗನೆ ….ಚೆನಾಗಿದೆ ಕಲ್ಪನೆ!

    • ಪ್ರಸಾದು ಬಹಳ ಚೆನ್ನಾಗಿದೆ ಎಲ್ಲಾ ಪೂರಣಗಳು

    • ಚೆನ್ನಾಗಿವೆ. ನಿಮಗೆ ಸರ್ಚ್ ಎಂಜಿನ್ ಪಂಡಿತರು ಎಂದು ಬಿರುದು ಕೊಡಬಹುದು

      • ಧನ್ಯವಾದಗಳು. ವಿಧ್ಯುಕ್ತವಾಗಿ ಇನ್ನೂ ಕೊಟ್ಟಿಲ್ಲ ಎಂದು ಸೂಚಿಸುತ್ತಿರುವಿರ!?

        • ಮಹನೀಯರೇ,
          ನೀವು ನಿಮಗೆ ಹಾದಿರ೦ಪ ಎ೦ಬ ಅಭಿದಾನವನ್ನು ಯಾಕೆಕೊಟ್ಟದ್ದೆ೦ದು ತಿಳಿಯುತ್ತಿಲ್ಲ!
          ಇದರಲ್ಲಿ ಏನಾದರೂ ಗೂಢಾರ್ಥವಿದೆಯೇ!?

          • ನನ್ನ ಹೆಸರು ರಂ.ಪ.=ರಂಗನಾಥ ಪ್ರಸಾದ್. (ಒಮ್ಮೆ ಭೇಟಿಯಾಗಿ ನೋಡಿ, ನಾನು ರಂಪದಂತೆ ಕುಯ್ಯುತ್ತೇನೋ ಇಲ್ಲವೋ ಎಂದು!). ’ಹಾದಿ’ಯನ್ನು ಪ್ರಿಫಿಕ್ಸ್ ಮಾಡಬೇಕಾಯಿತು, ಏಕೆಂದರೆ ಮನೆಯಲ್ಲಿ ಮಾತ್ರ ರಂಪಾಟ ಮಾಡದೆ ಹಾದಿಬೀದಿಯಲ್ಲಿಯೂ (ಪದ್ಯಪಾನ) ಹಾಗೆ ಮಾಡುವುದರಿಂದ. ಇನ್ನೊಂದು ಕಾರಣವೆಂದರೆ ಇದೂ ಸಹ ’ಮಂಕುತಿ/ಮ್ಮ’ದಂತೆ ಐದುಮಾತ್ರೆಗಳ ಒಂದು ಗಣ ಹಾಗೂ ಒಂದು ಗುರ್ವಕ್ಷರವನ್ನು ಹೊಂದಿದ್ದು, ಪದ್ಯಾಂತ್ಯದ ಅಂಕಿತಕ್ಕೆ ಒದಗಿಬರುವುದು.

  3. ಕೋರಲ್ ಶ್ರದ್ಧೆಯಿನನಿಶಂ,
    ಪಾರಂಗತರಾಗೆ ವಿದ್ಯೆಯೊಳ್ ಸಾಧನೆಯಿಂ,|
    ಸಾರುತೆ ನತಜನರಂ, ಪರಿ-
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್ ||

    ( ಶ್ರದ್ಧೆಎಂಬಲ್ಲಿ ಮಹಾಪ್ರಾಣದ ಒತ್ತಕ್ಷರವಿದೆ.ಸರಿಯಾಗಿ ಟಂಕಿಸಲಾಗುತ್ತಿಲ್ಲ )

  4. ಧಾರೆಯೆರೆವೆ ವಿದ್ಯೆಯೆನ-
    ಲ್ಕೀರಸಿಕಂ ಗಾಯಕಂ ನಡೆಸೆ ಗುರುಕುಲಮಂ|
    ಮಾರಲ್ಪಣದಾಸೆಗೆ ಛೇ!!
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|

    ನೂರಾರು ಜನರ ಮತಿಯೊಳ್
    ಚಾರುಪದವನಿಡುತೆ ಮರ್ತೆ ವೇರೆಡೆಗಂ ತಾಂ|
    ಜಾರಲ್ಕುತ್ಸುಕತೆಯೊಳಿಂ
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|

    ಜಾರೆಯರೊಡಿನಿರೆ ದಿನವುಂ
    ಮೂರುಂ ಬಿಟ್ಟವನವೊಲ್ ಕುಡಿದು ಕಣ್ಮುಚ್ಚಲ್|
    ತೋರಲವನ ಮನದೊಳಗಂ
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|

    ಚಾರುಸ್ವರ ಕಲ್ಪನೆಯಂ
    ಧಾರೆಯವೊಲ್ ಪರಿಸೆ, ಪಲವು ವಾದ್ಯಗಳಿಂದಂ|
    ಜಾರುಗಮಕಮಂ ಮೂಡಿಸೆ
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|

    ಧೀರತನದೊಳಾಸ್ಥಾನದೆ
    ಚೀರಲ್ ಕವಿಯೊರ್ವನಿಂತುಮೆಸಗೆ ಸಮಸ್ಯಾ-
    ಪೂರಣದ ಕಡೆಯ ಪಾದಂ –
    “ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್”|

    ಮಾರಲ್ಕಿಟ್ಟ ಸರಕಿನಂ-
    ತೂರ ಪೊರಗೆ ಸಂತೆಯೊಳ್ ಬೆಲೆಯಕಟ್ಟಿರೆ ನೂ-
    ರಾರು ಬಗೆಯ ಪುಸ್ತಕದೊಳ್
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|

    ಆರ ಸ್ವತ್ತಲ್ಲಮಿವಳ್
    ಸಾರಸ್ವತ ಲೋಕದೊಳ್ ಕಲೆಗೆದೈವವಿವಳ್|
    ಆರುಂ ಮಣಿದೊಡನೊಲಿವಳ್
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್

    • ಚೆನ್ನಾಗಿವೆ. ನಿಮ್ಮ ೫ನೆಯ ಪದ್ಯವನ್ನು ಎಲ್ಲಾ ಸಮಸ್ಯಾಪೂರಣಗಳಿಗೂ ಬಳಸಿಕೊಳ್ಳಬಹುದು 🙂

    • ಚೀದಿ ಎಲ್ಲಾ ಪದ್ಯಗಳು ಚೆನ್ನಾಗಿದೆ, ೫ನೇ ಪದ್ಯದಲ್ಲಿ ಸಮಸ್ಯಾ ಪೂರಣ ಹೇಗಾಯ್ತು ತಿಳಿಯಲಿಲ್ಲ

    • ಎಲ್ಲವೂ ಚೆನ್ನಾಗಿವೆ. ಹಾದಿರಂಪರಿಗೇ ಪೈಪೋಟಿ ಕೊಡುತ್ತಿದ್ದೀರಾ ಹೇಗೆ?

      • ಹಾದಿರಂಪನೊಂದಿಗೆ ಬೀದಿಗಿಳಿದಿದ್ದಾರೆ ಎನ್ನೋಣವೆ?

  5. ಧಾರೆಯೊಳತಿಶಯಬಲನೊಳ್,
    ಮೇರುವಿನಂತಿರ್ಪ ಧಾರಣಾಕೃತಿಮತಿಯೊಳ್
    ಸೇರುತೆ ಪರಿದಿರ್ಪ ಹರಿ-
    -ದ್ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್

    ಧಾರೆ,ಧಾರಣೆಗಳನ್ನು ಸಿದ್ಧಿಸಿಕೊಂಡ ಕವಿಯಲ್ಲಿ, ಹರಿಯುವ ಹರಿದ್ವಾರಾಂಗನೆ=ಗಂಗೆಯಂತೆ ವಾಣಿ ವರ್ತಿಸುತ್ತಾಳೆ ಅನ್ನುವ ಪ್ರಯತ್ನ.
    ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ.
    (ref https://en.wikipedia.org/wiki/Haridwar#History)

    • ಪದ್ಯ ಚೆನ್ನಾಗಿದೆ ಅನಂತರೆ. ಸಮಾಸಪದಗಳಿರುವಲ್ಲಿ “ಧಾರೆಯೊಳತಿಶಯಬಲನೊಳ್” , “ಧಾರಣಾಕೃತಿಮತಿಯೊಳ್” ಹಾಗೂ ಹಳಗನ್ನಡಕ್ಕಾಗಿ “ಪರಿದಿರ್ಪ” ಎಂದು ಸವರಿದರೆ ಒಳಿತು.

      • ಧನ್ಯವಾದಗಳು ಶಕುಂತಲಾ ಅವರೆ _/\_.. ಮೂಲದಲ್ಲಿಯೇ ಸವರಣೆಗಳನ್ನು ಮಾಡಿದ್ದೇನೆ

    • ಕೀಲಕಕಲ್ಪನೆಯು ಚೆನ್ನಾಗಿದೆ

    • ಚೆನ್ನಾಗಿದೆ. ಇದೊಂದು ಹೊಸದಾದ ಕೀಲಕ. ಒಳ್ಳೆಯ ಪರಿಹಾರ

  6. ಜಾರದೆ,ಬಾರದೆಯಿಳೆಯೆಡೆ
    ಬೀರಿರೆ ನೋಟಮನೊಲವನರಿಯದಾ ಕೆಲಬರ್
    ಭೂರಿಯಸೂಯೆಯಿನೆಂದರ್-
    “ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್”
    (ಸರಸ್ವತಿಯ ಒಲವನ್ನು ಕಾಣದವರು ಅಸೂಯೆಯಿಂದ ಹೇಳಿದರು…)

    • ಚೆನ್ನಾಗಿದೆ ಕಾಂಚನಾ. “ಬೀರಿರೆ ” ಎಂಬುದು ” ಬೀರ್ದಿರೆ ” ಆಗಬೇಕೇನೋ. ಹಾಗಿದ್ದಲ್ಲಿ ,ಪ್ರಾಸಕ್ಕಾಗಿ “ಬೀರಲ್ ” ಎಂದು ಸವರಬಹುದು. “ಬೂರಿ” ಯು “ಭೂರಿ”ಯಾಗಬೇಕಿದೆ.

      • ಸರಿಪಡಿಸಿದೆ 🙂 ನಿಮ್ಮ ಆಗಮನವು ಸಂತಸ ತಂದಿದೆ .

      • ಚೆನ್ನಾಗಿದೆ. “ಬೀರಿರೆ” ಸರಿಯಾಗೇ ಇದೆ ”ಬೀರ್ದಿರೆ”ಗಿಂತ “ಬೀರ್ದೊಡೆ” ಹೆಚ್ಚು ಸೂಕ್ತ.

        • ಧನ್ಯವಾದಗಳು ಕೊಪ್ಪಲತೋಟರೆ.

    • ಅಸೂಯೆಯನ್ನ ಬಳಸಿದ ಪದ್ಯ ಚೆನ್ನಾಗಿದೆ 🙂

  7. ಮೀರಿದ ನಲ್ಮೆಯೊಳೆಲ್ಲರ
    ಶಾರೀರಾಸನದೊಳಿರುತುಮರ್ಚಿನೆಗೊಳ್ಳ
    ಲ್ಕಾರಿಂದು ಪೇಳುಗುಮಿದಂ-
    “ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್”

    (ಎಲ್ಲರ ಹೃದಯಮಂದಿರದಲ್ಲಿ ನೆಲೆಸಿ, ಪೂಜಿಸಿಕೊಳ್ಳುತ್ತಿರುವಾಗ, ಯಾರುಹೀಗೆ ಹೇಳುವರು-“ವಾರಾಂ……ವರ್ತಿಸುತಿರ್ಪಳ್”)

    (ಕೀಲಕವು ಶಕುಂತಲಾರಿಂದ ಬಳಸಲ್ಪಟ್ಟಿರುತ್ತಲೂ, ನನ್ನ ಪದ್ಯವನ್ನೂ ಬರೆದಿದ್ದೇನೆ:-))

    ಬೀರುತುಮಕ್ಕರವೆಳಕಂ
    ತೋರುವವೊಲ್ ಸರಿಯ ವಟ್ಟೆಯನೆನುತೆ ಚೆಲ್ವಿಂ,
    ಕೀರುತಿವೆತ್ತ ಪಿರಿಯ ಪರಿ
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್!

    (ಅಕ್ಷರಬೆಳಕನ್ನು ಚೆಲ್ಲಿ, ತಾನು ಸರಿಯಾದ ಹಾದಿಯನ್ನು ತೋರುವೆನೆನುತ್ತ, ಪರಿವಾರದ ಹಿರಿಯಳಂತೇ ವಾಣಿ ವರ್ತಿಸುತ್ತಿರುವಳು)

    • ಚೆನ್ನಾಗಿದೆ, ಮೊದಲನೆ ಪದ್ಯದ ಎರಡನೇ ಪಾದದ ಎರಡನೆಯ ಗಣ ಜಗಣವಾಗಿದೆ ಸವರಿಸಿರಿ

    • ಪರಿವಾರವೆಂಬ ಕೀಲಕವನ್ನುಈ ಸಂಚಿಕೆಯಲ್ಲಿ ಪ್ರಥಮವಾಗಿ ನಾನು ಬಳಸಿದ್ದೆಂದು ಉಲ್ಲೇಖಿಸುವ ಅಗತ್ಯವಿಲ್ಲವಾದರೂ ಹಾಗೆ ಮಾಡಿರುವುದು ನಿಮ್ಮ ಶ್ರೇಷ್ಠತೆಯನ್ನು ಸಾರುತ್ತಿದೆ ಕಾಂಚನಾ. ಪದ್ಯಾಧ್ಯಯನದ, ಪದ್ಯರಚನೆಯ ಉದ್ದೇಶವನ್ನು ನೀವು ಚೆನ್ನಾಗಿ ಅರಿತು ಸಾಧಿಸಿರುವಿರಿ. ನಿಮ್ಮ ಹಿರಿತನಕ್ಕಾಗಿ ಧನ್ಯವಾದಗಳು. ನಿಮ್ಮ ಪದ್ಯ ಚೆನ್ನಾಗಿದೆ. 🙂

    • ಚೆನ್ನಾಗಿದೆ. “ಶಾರೀರಾಸನದೊಳಿರುತುಂ….” ಎಂದು ಮಾಡಬಹುದು

  8. ಬರೆಯುವಾಗಾಗಲೀ ಮಾತನಾಡುವಾಗಾಗಲೀ ನಿಧಾನಗತಿಯಲ್ಲಿ ಚಲಿಸುವ ವಾಣಿಯು, ಆಲೋಚನೆಯಲ್ಲಿ ನಾಗಾಲೋಟದಲ್ಲಿ (horse=ಪರುದ್ವಾರ) ಸಾಗುತ್ತಾಳೆ!
    ಚೀರುತ್ತಿದ್ದೊಡಮುಂ ನಾಂ
    ಸಾರುವಳಲ್ತೆಲೆ ನಿಧಾನಗತಿಯಿಂ ಮೇಣಿಂ|
    ದೂರಾಲೋಚನೆಯೊ! ಪರು-
    ದ್ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||

  9. ನಾರಿಯಿವಳಾಗೆ ಕುಹುಕವೆ?
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪ-
    ಳ್ದಾರಿ ವಿಡುತುಮೆಂಬಾ!ಹಾ!
    ತೋರುತಿರೆ ಜ್ಞಾನಮಾರ್ಗಮಂ ,ಕರಮಿತ್ತುಂ!!

    (ಹೆಣ್ಣಿವಳೆಂದು ,ದಾರಿಯನ್ನು ತೊರೆದ ವಾರಾಂಗನೆಯೆಂಬ ಕುಹಕವೇ?? ಎಲ್ಲರಿಗೂ ಜ್ಞಾನಪಥ್ಹವನ್ನು ತೋರುತ್ತಿರುವಾಗ,ಕೈ ಪಿಡಿದು)

  10. ತಾರೆಯವೊಲ್ ಮೆರೆಯೆ ಜನರ್,
    ಪಾರಮಿರದ ಸದ್ಗುಣಂಗಳಂ ಕರುಣಿಸುತುಂ,|
    ವಾರಿಸಿ ತಮಮಂ, ಶ್ರೇಷ್ಠನಿ-
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್ ||

    ( ನಿವಾರಾಂಗನೆಯೆಂಬ ಕೀಲಕವು ಈ ಮೊದಲಿನ ಪದ್ಯಗಳಲ್ಲಿಇದುವರೆಗೂ ಬಳಕೆಯಾಗಿಲ್ಲದ ಕಾರಣ ಈ ಪದ್ಯವನ್ನು ಬರೆದಿರುವೆ.)

  11. ಮೀರಿರೆ ಪದ್ಯದ ಪಾನಂ
    ಪೀರುತಲಾಸ್ವಾದಿಸುತ್ತೆ ಸೂರೆಯ ಗೈವೀ
    ಚಾರುಕವಿಗಳಂತರದೊಳ್
    ವಾರಂಗನೆಯಂತೆ ವಾಣಿ ವರ್ತಿಸುತಿರ್ಪಳ್
    _/\_

    • ಧನ್ಯವಾದಗಳು. ತಮ್ಮ ಭಾವನೆಯನ್ನು ಮಾತ್ರ ಸ್ವೀಕರಿಸುತ್ತೇನೆ, ನಮಸ್ಕಾರವನ್ನಲ್ಲ. ಕಾರಣ, ನಾನು ಕವಿಯಲ್ಲ, ಪದ್ಯಕಾರ ಮಾತ್ರ!

  12. ಸಾರಸ್ವತ ಲೋಕದೆ ತಾಂ
    ವಾರಿಜಭವಸತಿ ಸರಸ್ವತಿ ಗಡ ! ಮರುಳ್ಗೊ-
    ಳ್ದಾರ “ಬ್ರಹ್ಮಜ್ಞಾನ”ಕೆ
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್ !!

    ಬ್ರಹ್ಮನ ಪತ್ನಿ ಸರಸ್ವತಿ – ಯಾರ “ಬ್ರಹ್ಮಜ್ಞಾನ”ಕ್ಕೆ ಮರುಳಾದಳೋ ?!!

  13. ಮಾರಾಟಕ್ಕೆನುತನಿಶಂ
    ನೂರೆನೆ ತೊದಲ್ನುಡಿಗಳಯ್ದು ನುಡಿದಪ ಪಣಿಕಂ-
    ಗಾರಾಸರೆಯೀವರ್ ಛೀ
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್

    ವೈರಿಯ ಪೊಗಳ್ದಪುದಂತೆ ಪಿ-
    ತೂರಿಯನೆಸೆವರನುಮಂತೆ ಪೊಗಳ್ದಪರ್, ಹಳಿಯಲ್
    ಭಾರತಮೆನೆ ಲೇಖಕರೊಳ್
    ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್

Leave a Reply to ಶಕುಂತಲಾ ಮೊಳೆಯಾರ ಪಾದೆಕಲ್ಲು Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)