Jan 092017
 

ಸಂಕ್ರಾಂತಿಯ ಯಾವುದಾದರೂ ಅಯಾಮವನ್ನು ವಿವರಿಸಿ ಪದ್ಯಗಳನ್ನು ರಚಿಸಿರಿ

  47 Responses to “ಪದ್ಯಸಪ್ತಾಹ ೨೩೭: ವರ್ಣನೆ”

  1. ಸಂಕ್ರಾತಿ (ಸಂಕ್ರಾಂತಿ ಅಲ್ಲ!) ಎಂಬುವಳಿವೆ ಹಲವಾರು ’आया-माँ’ಗಳಿದ್ದರು. ಇನ್ನೂ ಒಬ್ಬಳು ಬೇಕಾಗಿದ್ದಿತು ಅವಳಿಗೆ.
    ಸೀಸಪದ್ಯ|| ಸಂಕ್ರಾತಿಯೆಂಬುವಳಿಗಿದ್ದರುಂ ಹಲವರಾಯಾಗಳಿನ್ನೊಬ್ಬಳನು ಬಯಸಿರ್ಪಳು
    ಯಾರ್ಯಾರನೋ ಕೇಳ್ದೊಡಾರುಮಾರನ್ನು ಪರಿಚಯಿಸದಿರ್ದ್ದಿದ್ದುಬಿಟ್ಟರು ತಾವುಗಳ್|
    ಪ್ಲೇಸ್ಮೆಂಟಿನೇಜೆನ್ಸಿ, ಪೇಪರೊಳು ಜಾಹೀರು ಗೈದಿರ್ಪಳಿಂತೇನೊ ಸರ್ಕಸ್ಸನುಂ
    ಕೊನೆಗೊಬ್ಬಳೈದಿ ತಾನಿವಳನ್ನೆ ಇಂಟರ್ವ್ಯು ಮಾಡಿರ್ಪಳಾ ಮೋದಮಂ ಪೇಳ್ವೆನೈ||
    ತಾಟಗಿತ್ತಿ (ತೇಟಗೀತಿ) ಯಜಮಾನಿ: “ಏನ ಮೇಣೇನ ಮಾಳ್ಪೆ ನೀ ಕೆಲಸ ಪೇಳೌ
    ಕೊಡುವೆ ಅದನಽನುಸರಿಸುತ್ತೆ ಸಂಬಽಳವನಾಂ|”
    ಅಭ್ಯರ್ಥಿ: “ಪೇಳು ಮೊದಲಿಂಗೆ ನೀನೇನ ಮಾಳ್ಪೆ ಎಂದು
    ಬಾಕಿ ಕಾರ್ಯಕ್ಕೆ ತಕ್ಕಂತೆ ಕೇಳ್ವೆ ನಾನು||”

    • ಸಂಕ್ರಾಂತಿಯೇ, ಮೇಲಿನ ಪದ್ಯ ಲೆಕ್ಕಕ್ಕಿಲ್ಲ ಪ್ರಸಾದು 🙂

    • ಚೆನ್ನಾಗಿದೆ 🙂 ಸೀಸದ ರೀತಿಯನ್ನು ಕಲಿಯಲು ಇನ್ನೊಂದು ಉದಾಹರಣೆ ಸಿಕ್ಕಿತು.

  2. ಚಿಮುಟಲ್ ಮಾಘಮ್ ಸೃಷ್ಟಿಯ
    ನಮರಲ್ ತುಹಿಮವದು ಸೈನ್ಯದೊಲ್ಲ್ ರವಿಯೀಗಳ್ |
    ಸಮರಂಗಯ್ಯಲಶಕ್ಯಮ್
    ಯಮಮೀ ಶೀತಮೆನುತುಂ ಮಕರಮಂ ಪೊಕ್ಕಂ||

    ಛಳಿಯನ್ನು ತಾಳಲಾರದೆ ಸೂರ್ಯನು ಮಕರದ( ಮೊಸಳೆ, ಮಕರರಾಶಿ ) ಹೊಟ್ಟೆಯಲ್ಲಿ ಆಶ್ರಯಪಡೆದನು(ಸಂಕ್ರಾಂತಿ)

    • ’ರಮಿಸಲ್’ಗಿಂತ ’ಚಿಮುಟಲ್’ ಎಂದರೆ ಸರಿಯಾದೀತು.
      (ಸೈನ್ಯದೊಲ್, ತುಹಿನಮದು, ಯಮಮೀ)
      ಕಲ್ಪನೆ/ಪದ್ಯ ಚೆನ್ನಾಗಿದೆ

    • ಚೆನ್ನಾಗಿದೆ ಕಲ್ಪನೆ

      • ಧನ್ಯವಾದಗಳು, ಪದ್ಯವನ್ನು ಬದಲಿಸಬೇಕೆಂದಾಯಿತು 🙁

        • ನೀನು ಬದಲಾಯಿಸಿದ್ದು ಭಾಷೆಯನ್ನು. ಸೋಮ ಹೊಗಳಿರುವುದು ಕಲ್ಪನೆಯನ್ನು. ಅವರ ಮಾತಿಗೆ ಚ್ಯುತಿಯಿಲ್ಲ 😉

    • ನಿಮ್ಮ ಪದ್ಯ ಚೆನ್ನಾಗಿದೆ. ದಯವಿಟ್ಟು ಮೂಲ ಪದ್ಯವನ್ನು ಬದಲಿಸದೇ ತಿದ್ದಿದ ಪದ್ಯವನ್ನು ಬೇರೆಯಾಗಿ ಹಾಕಿದರೆ ನನ್ನಂತಹ ವಿದ್ಯಾರ್ಥಿಗಳಿಗೆ ಸರಿ ತಪ್ಪು ತಿಳಿಯುತ್ತದೆ. ಕೆಲವೊಮ್ಮೆ ಪ್ರತಿದಿನ ಪದ್ಯಪಾನಕ್ಕೆ ಭೇಟಿ ನೀಡಲು ಆಗುವುದಿಲ್ಲ. ಧನ್ಯವಾದಗಳು.

  3. ಸಿತತಿಲಮೆಲ್ಲಮಂ ಸುರಿದು ಬಾಣಲೆಯೊಳ್ ಬಿಸಿಮಾಡುತಿರ್ದು ಮೇಣ್
    ಚತುರಕರಂಗಳಾಡಿಸುತೆ ಪಾಕವನುಣ್ಣಿಸಲೆಂತ ಸೋಜಿಗಂ!
    ಜತನದೆ ಮೈಮನಂ ಭರಿಸಿಕೊಳ್ಳುತುಮೆಳ್ಳುಗಳೆಲ್ಲಮೊಪ್ಪುಗುಂ
    ಸಿತವಿಧುಸಾರ್ಥದೊಲ್ ಬೆಳೆಯುತುಂ ದಿನದಿಂದೆ ದಿನಕ್ಕೆ ಚಂದದಿಂ!

    (ಸಂಕ್ರಾಂತಿಯಲ್ಲಿ ನಮ್ಮೂರಲ್ಲಿ ಎಳ್ಳು(ತಿಳಗುಳ್) ಮಾಡುವ ವಿಧಾನವಿದು. ಎಳ್ಳಿನ ಮೇಲೆ ಸಕ್ಕರೆಪಾಕವನ್ನು ಸ್ವಲ್ಪಸ್ವಲ್ಪವೇ ಹಾಕುತ್ತ,ದಿನದಿನವೂ ಅದನ್ನು ಹೆಚ್ಚಿನ ಕಾಳಜಿಯಿಂದ ಮಾಡುವದೇ ಚೆಂದ. ಹಾಗೆ ಎಳ್ಳನ್ನು ಮೈದುಂಬಿಕೊಳ್ಳುವ ಚಂದ್ರಸಾರ್ಥಕ್ಕೆ ಹೋಲಿಸಿದ್ದೇನೆ)

    • ಚೆನ್ನಾಗಿದೆ

    • ಚೆನ್ನಾಗಿದೆ. ದಿನದಿಂದ ಎಂಬುದು ಹಳಗನ್ನಡದ ಸರಿಯಾದ ರೂಪವೇ? (ತಿಳಿಯದೇ ಕೇಳುತ್ತಿದ್ದೇನೆ.)

      • ಧನ್ಯವಾದ. ದಿನದಿಂದೆ ದಿನಕ್ಕೆ ಎಂದು ಮಾದಿದ್ದೇನೆ,ಸ್ವಲ್ಪಮಟ್ಟಿಗೆ ಸರಿಯಾದೀತೆಂದು 🙂

  4. ಸಂಕ್ರಾಂತಿಯಂದು ಅಂದದ ಸೀರೆಯನ್ನುಟ್ಟು ಎಳ್ಳನ್ನು ಬೀರಲು ಬರುವ ನೀರೆಯರನ್ನು ಕುರಿತು –

    ಕರದೊಳೊಪ್ಪಿರೆ ಕಂತುಚಾಪವು
    ಕರಿಗಮನವನೆ ಪಿಡಿದು ನಡೆಯೆ ಮ
    ಕರಪತಾಕನ ಚಿತ್ತಹರಸಂದೇಶದೊಲು ಪಥದಿ
    ಸೆರಗುಗಳು ಪಟಪಟಿಸುತಿರೆ ಹಾ!
    ವರವಸಂತಧ್ವಜಿನಿಯಂತಿರೆ
    ಸರಸಭಾಮಿನಿಯರ ಸಮೂಹವು ಸಂಕ್ರಮಣಸವದಿ

  5. ಸೂರ್ಯ ಧನು ರಾಶಿಯಿಂದ ಮಕರರಾಶಿಗೆ ಬದಲಾಗುವ ಹಬ್ಬವಾದ್ದರಿಂದ, ಸ್ವಲ್ಪ ಮಟ್ಟಿಗೆ ಮಂಜ ಅವರ ಪದ್ಯದಿಂದ ಸ್ಫೂರ್ತಿ ಪಡೆದು ಈ ಪದ್ಯವನ್ನು ಬರೆದಿದ್ದೇನೆ.ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ.
    ತೆಂಕಣದ ದೇಶ=ದಕ್ಷಿಣ ಭಾರತ

    ಶಂಕರನು ಶಿವಧನುವಿನಿಂದಿನನ ಬಾಣವಂ
    ಬೆಂಕಿಯುಂಡೆಯನದನು ತಾ ಬಿಟ್ಟಿರಲ್
    ಮಂಕಾಗೆ ಮಕರರಾಕ್ಷಸನದನು ನುಂಗುತಲಿ
    ತೆಂಕಣದ ದೇಶಕದೆ ಪರ್ವವಾಯ್ತೆ?

  6. ನವಹರುಷ ಸಂಕ್ರಾಂತಿ ತರಲು ಬಾಲೆಯರೆಲ್ಲ
    ಹವಣಿಸುತ ಕಾದಿಹರೆ ಸಿಹಿಕಾಳಿಗೆ ?
    ಕವನಿಸಲು ಸಾಧ್ಯವೇಂ ಶುಭಪತ್ರಗಳ ಚೆಲ್ವ?
    ಸವಿಸವಿದು ಕುಣಿಯುತಿಹ ಪರಿಯ ನೋಡು

    (ಶುಭಪತ್ರ ಎಂದರೆ ಗ್ರೀಟಿಂಗ್ ಕಾರ್ಡ ಎಂದಾಗಬಹುದೇ?)

    • ಚೆನ್ನಾಗಿದೆ ಅಂಕಿತಾ, ಬಾಲಕರು ಹವಣಿಸುವುದಿಲ್ಲವೋ ಸಂಕ್ರಾಂತಿಗಾಗಿ? 🙂

  7. ಕಡುವೇಸಗೆಯೊಳೊರ್ವನಾಲಯವ ನಿರವಿಸಿಹ
    ಕಡೆಗಿರಿಸಿ ಬಾಗಿಲಂ ಪೂರ್ವದಿಕ್ಕ| (ಅನ್ವಯ: ಪೂರ್ವದಿಕ್ಕ ಕಡೆಗೆ ಬಾಗಿಲನ್ನಿರಿಸಿ)
    ಅಡಿಯಿಡಲು ಸಂಕ್ರಮಣ, ಸಾರಿ ಸೂರ್ಯನುಮತ್ತ
    ಎಡೆಗುತ್ತರಕೆ ತಿರುಗಿತಯ್ಯೊ ಬಾಗಿಲ್!!

    • ಅದಕ್ಕೇ ಉತ್ತರಕ್ಕೆ ಬಾಗಿಲನ್ನಿಡಬೇಕು, ಪೂರ್ವ ಶಾಖ, ಉತ್ತರ ಬೆಳಕು ಎನಂತೀರ ಪ್ರಸಾದು

  8. ಕರಿಯೆಳ್ಳ ನೆನೆಯಿಕ್ಕಿ ಬಸಿಯು
    ತರಿವಿಯೊಳಿರಿಸಿ ಬಡಿಬಡಿದು ನೆಲಕಂ ತೀಡಲ್ ।
    ಪರಿವಡೆದು ಬಿಳ್ಚುಗೊಂಡುದ
    ಪುರಿದುಂ ಸಂಕಲಿಪುದಿಂತುಟದ ಬೀರೆಳ್ಳೊಳ್ ।।

    ಸಂಕ್ರಾತಿ ಬಂತೆಂದರೆ ಆಗ ಅಮ್ಮ ಕರಿಎಳ್ಳನ್ನು ತಿಕ್ಕಿ-ತೀಡಿ ಬೆಳ್ಳಗಾಗಿಸುತ್ತಿದ್ದ ಪ್ರಕ್ರಿಯೆಯ ವರ್ಣನೆ. (ಇಂದು ಶರ್ಮರ ಮನೆಯಿಂದ ಹಬ್ಬಕ್ಕೆ ಬೆರೆಸಿದೆಳ್ಳನ್ನು ಕೊಂಡುತಂದಾಗ ಹಾಗೆ ನೆನಪಾಯಿತು)

    • ಉಷಾ ಅವರೆ, ನಮಗಿಲ್ಲವೋ ಶರ್ಮನ ಮನೆ ಬಿಳಿ ಎಳ್ಳು ? 🙂

  9. I am in charge of the pantry in my home. February onwards there will be no takers for yaLLu. To save it from gathering fungus, I will have to segregate its constituents and recycle them separately.
    ಖಿನ್ನನಾಂ ಕಳೆಯೆ ಮಾಸವದು ಸಂಕ್ರಾಂತಿಯಿಂ
    ಎನ್ನಮನೆಯುಗ್ರಾಣಮಿರುತೆನ್ನ ಕ್ಷೇತ್ರಂ|
    ಬನ್ನದಿಂ ಮಿಕ್ಕ ಯಳ್ಳಿಂದಲಾರಿಸಬೇಕು
    ಇನ್ನಿಲ್ಲದೊಲು ಬೆಲ್ಲ-ತೆಂಗು-ಶೇಂಗಾ||

    • ಎಳ್ಳು ಉಳಿದರೆ ನಮ್ಮ ಮನೇಲಿ ಚಟ್ಣಿಪುಡಿ ಮಾಡ್ತಾರೆ, ನೀವು ಮಾಡೊಲ್ವೆ?

    • ಪ್ರಸಾದ್ ಸರ್, ಇದೊಳ್ಳೆ “sumಕ್ರಾಂತಿ” ಎಳ್ಳಾಯಿತು !!
      ಉಳಿದ ಎಳ್ಳನ್ನ ಗೊಜ್ಜಿಗೂ ಹಾಕಬಹುದು ಅಲ್ಲವೇ ?!

    • ಆಪಾಟಿ ಬೆಲ್ಲವಿರುವುದನ್ನು ಚಟ್ಣಿಪುಡಿ/ಗೊಜ್ಜನ್ನಾಗಿ ಮಾಡಲಾಗುವುದೆ? ನಮ್ಮ ಮನೆಯಲ್ಲಂತೂ ಎಂದೂ ಮಾಡಿಲ್ಲ. ಆರಿಸಿ ಆಯಾ ಡಬ್ಬಿಗಳಿಗೆ ಹಾಕಿದ್ದೇನೆ ಒಮ್ಮೊಮ್ಮೆ.

  10. ಪರಿಪರಿಯ ಮಂಟಪ ಮಹಿಮೆ,
    ಸಿರಿ ತುಳಸಿಯಕಟ್ಟೆ ಕಟ್ಟಣೆ, ನವಿಲ ನಿಲುವುಂ ।
    ಮರಿಯಾನೆದಿರಸಿನೊಳ್ ಸ-
    ಕ್ಕರೆಯಚ್ಚದೆಳೆಯರಿಗಚ್ಚುಮೆಚ್ಚದು ನಿಚ್ಚo ।।

    ಮರದೆ ಕೊರೆದಚ್ಚಿನೊಳೆರೆದ
    ಪರಿಪಾಕದೊಳೆರಕಹೊಯ್ದುದಚ್ಚದನೆಲ್ಲo ।
    ಮರೆಯೊಳಿಡಲಬ್ಬೆ ತಾಂ ಮುಂ-
    ಬರು ಸಂಕ್ರಾಂತಿವರೆಗಂತು ಮಿಕ್ಕುದು ನಿಚ್ಚo ।।

    ಮಂಟಪ, ತುಳಸಿಕಟ್ಟೆ, ನವಿಲು, ಆನೆ… ಹೀಗೆ ವಿಧವಿಧ ಆಕಾರದ ಸಕ್ಕರೆಯಚ್ಚು ಮಕ್ಕಳಿಗೆ ಬಲುಪ್ರಿಯ. ಹಬ್ಬಕ್ಕೆ ತಯಾರಿಸಿದ ಅಚ್ಚನ್ನು ಹಬ್ಬದವರೆಗೂ ಉಳಿಸಲು ಕೊಡದೆ ಮುಚ್ಚಿಡುವಳಲ್ಲ, ಅಮ್ಮ !!

  11. ಎಳ್ಳನುಂ ಬೆಲ್ಲವಂ ಮೆಲ್ದೊಡೆಂ ಸಂಕ್ರಾಂತಿ-
    ಯೊಳ್ಳೊಳ್ಳೆಮಾತನುಂ ತ್ವಚೆಕಾಂತಿ ತರಿಸುತಂ
    ಮೆಲ್ಲಗುದುರಿಸುತ ಹುಳ ಹಸುವಿನಾ ಮೈಯಿಂದ
    ಬಲ್ಲವರೆ ಬಲ್ಲರೈ ಈಯಂದಚಂದವಂ

    • ಹಸುವಿನ ವಿಷಯ ಚೆನ್ನಾಗಿ ಗಮನಿಸಿಕೊಂಡಿದ್ದೀಯೆ, ಚೆನ್ನಾಗಿದೆ

  12. ಆಕಾಶಭಾಜನದಿ ತಾರೆಯೆಳ್ಳನು ಬೀರಿ
    ಚಂದ್ರಗುಡಖಂಡವನು ಮಧ್ಯದಲ್ಲಿರಿಸಿ |
    ರಜನಿಯಂಗನೆ ಬರಲು ದಿನಕರನದೆಲ್ಲವನು
    ಸಾವಿರದ ಕರಗಳಿಂ ಬರಿದುಗೈದ ||

    ಭಾಜನ=ಪಾತ್ರೆ
    ಗುಡಖಂಡ = ಬೆಲ್ಲದ ತುಂಡು
    ಕರ = ಕಿರಣ, ಕೈ

    ರಾತ್ರಿಯೆನ್ನುವ ಹೆಣ್ಣು ಆಕಾಶವೆಂಬ ಪಾತ್ರೆಯಲ್ಲಿ ನಕ್ಷತ್ರಗಳೆಂಬ ಎಳ್ಳನ್ನು ಬೀರಿ, ಮಧ್ಯದಲ್ಲಿ ಚಂದ್ರನೆಂಬ ಬೆಲ್ಲದ ತುಂಡನ್ನು ಇರಿಸಿಕೊಂಡು ಬಂದಾಗ ಸೂರ್ಯನು ಅದೆಲ್ಲವನ್ನೂ ತನ್ನ ಕರಗಳಿಂದ (ಕಿರಣ, ಕೈ) ಬರಿದು ಮಾಡಿದನು. 🙂

    • ಈ ಪದ್ಯದಲ್ಲಿ ಪ್ರಾಸವನ್ನು ಬಿಟ್ಟಿರುವುದಕ್ಕೆ ಕ್ಷಮೆಯಿರಲಿ.

      • ನಮಸ್ಕಾರ ಅವಧಾನಿಗಳೆ, ಹೇಗಿದ್ದೀರಿ?
        ಬೆಲ್ಲದಚ್ಚು (ಕೆಂಚಗೆ – ಏಕಪ್ರಕಾರದ್ದು) ಸಕ್ಕರೆಅಚ್ಚಾಗಿ(ಬೆಳ್ಳಗೆ – ವಿವಿಧವಾದದ್ದು) ಸಂಕ್ರಾಂತಿಗೆ ಪ್ರಶಸ್ತವಾಗಿದೆ ಬಿಡಿ !!
        – ಅಪ್ರಸ್ತುತ ಪ್ರಸಂಗಿ

    • _/\_

    • ಕಲ್ಪನೆ ತುಂಬಾ ಇಷ್ಟವಾಯ್ತು ಅವಧಾನಿಗಳೆ 🙂

    • ಆಹಾ ಬಹಳ ಚೆನ್ನಾದ ಕಲ್ಪನೆ ಮಹೇಶಾವಧಾನಿಗಳೆ, ತಾವು ಹೀಗೇ ಭಾಗವಹಿಸುತ್ತಿರಬೇಕೆಂದು ವಿನಂತಿಸುತ್ತೇನೆ _/\_

  13. ಎಳ್ಳು ಬೆಲ್ಲವು ಬೇಕು ನೆಂಟರಿಷ್ಟರು ಬೇಕು
    ಕೂಡೋ ಕೂಟದ ಕುರುಹು ಊರೆಲ್ಲವಿರಬೇಕು|
    ನಾಟ್ಯ ವಾದ್ಯವು ಬೇಕು ಮೃಷ್ಟಾಹ್ನವೂ ಬೇಕು
    ಸಂಕ್ರಾಂತಿಯಾ ಸೊಬಗು ಜಗ ಸವೆಯಬೇಕು||

    • ಇದು ಲಲಿತರಗಳೆ. ನಿಮ್ಮ ಪದ್ಯವೂ ಸರಳಲಲಿತವಾಗಿದೆ. ಅಭಿನಂದನೆಗಳು. ಕೆಲವೊಂದು….
      1. /ಕೂಡೋ ಕೂ/ ಒಂದು ಮಾತ್ರೆ ಹೆಚ್ಚು ಇದೆ. /ಕೂಡುಕೂ/ಟದ ಎಂದು ಸವರಬಹುದು
      2. ಮೃಷ್ಟಾನ್ನ (ಹ್ನx)
      3. ಸಂಕ್ರಾಂತಿಯ(ಯಾx)……….ಸವಿ(ವೆx)
      4. ಕೊನೆಯ ಪಾದದಲ್ಲಿ ಮಾತ್ರಾಗಣಿತ ತಪ್ಪಿದೆ: ಸಂಕ್ರಾಂತಿಸೊಬಗನ್ನು ಜಗವು ಸವಿಯಲುಬೇಕು|| ಎಂದು ಸವರಬಹುದು

      • ತಮ್ಮ ಹಿತನುಡಿಗಳಿಗೆ ಅಭಿನಂದನೆಗಳು. ಪಾದಗಳಲ್ಲಿದ್ದ ಲೋಪದೋಷಗಳಿಗೆ ಕ್ಷಮೆ ಯಾಚಿಸುತ್ತೇನೆ. ನನ್ನ ಮುಂಬರುವ ಪದ್ಯಗಳಲ್ಲಿ ತಮ್ಮ ಮಾತುಗಳನ್ನು ಗಣನೆಗೆ ತೆಗೆದುಕೊಂಡು ರಚಿಸುತ್ತೇನೆ. ತಮ್ಮ ಹಿತನುಡಿಗಳನ್ನು ಸದಾ ಎದುರು ನೋಡುತ್ತೇನೆ.

  14. ಸಕ್ಕರೆಯಚ್ಚಿನ ಸವಿಯಂ
    ತಕ್ಕರೆಯಿಂದೆಳ್ಳು ಬೆಲ್ಲಮಂ ಬೀರುವನ-
    ಮ್ಮಕ್ಕಾ ತಂಗಿಯರ್ನಲವಿಂ
    ದುಕ್ಕಿಸಲೆಂದೆಂದು ನೇಹ ಬಾಂಧವ್ಯಗಳಂ

Leave a Reply to Kanchana Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)