Apr 102017
 

ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನಡೆದ ಶತಾವಧಾನಿ ಗಣೇಶರ ಅವಧಾನದಲ್ಲಿ (೦೮-೦೧-೨೦೧೭) ಕೇಳಿದ ಸಮಸ್ಯೆಯ ಸಾಲು ಈ ಸಪ್ತಾಹದ ವಸ್ತು:

ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ

 

 

  26 Responses to “ಪದ್ಯಸಪ್ತಾಹ ೨೫೦: ಸಮಸ್ಯಾಪೂರಣ”

  1. ಪಿತಗಂಮರ್ಬುದರೋಗಮುಲ್ಬಣಿಸುತುಂ ಬಾಳಾಗಿರಲ್ ದುಸ್ತರಂ
    ಗತಿಗಾಣಲ್ಕವತಾಂ ದಯಾಮರಣವಂ ಬೇಡಿರ್ಪೊಡಂ ಬೇಗೆಯೊಳ್
    ನುತ ವೈದ್ಯo ಸುತಗೊಪ್ಪಿಸಲ್ಕದಕೆ ಸಾಸಂಬಟ್ಟು ಸೋಲ್ದುo ಗಡಾ
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾoಗಿಯಂ ।।

    (ಕ್ಯಾನ್ಸರ್ ಪೀಡಿತ ತಂದೆ ದಯಾಮರಣ ಬೇಡಿರಲು – ಅದಕ್ಕೆ ವೈದ್ಯ ಮಗನನ್ನು ಒಪ್ಪಿಸಲು ಹೆಂಡತಿಯ ಮೊರೆಹೋದವ)

    • Nice idea. ಪಿತಗಂಮರ್ಬುದ… – here sandhi will occur as ಪಿತಗಮರ್ಬುದ…. ಸುತ – punarukti.

      • ಧನ್ಯವಾದಗಳು ನೀಲಕಂಠ, ತಿದ್ದಿದ ಪದ್ಯ:

        ಪಿತಗಂತರ್ಬುದರೋಗಮುಲ್ಬಣಿಸುತುಂ ಬಾಳಾಗಿರಲ್ ದುಸ್ತರಂ
        ಗತಿಗಾಣಲ್ಕವತಾಂ ದಯಾಮರಣವಂ ಬೇಡಿರ್ಪೊಡಂ ಬೇಗೆಯೊಳ್
        ನುತ ವೈದ್ಯo ಸುಕುಮಾರಗೊಪ್ಪಿಸೆನೆ ಸಾಸಂಬಟ್ಟು ಸೋಲ್ದುo ಗಡಾ
        ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾoಗಿಯಂ ।।

  2. ರತನಾಗಿರ್ದೊಡೆ ಪಾಪಕರ್ಮತತಿಯೊಳ್ ಪ್ರಾಗ್ಜ್ಯೋತಿಶಾಧೀಶ ತಾ-
    ನತಿಗರ್ವಾವಹದಿಂದೆ ಕೃಷ್ಣನಸುವಂ ಪೀರ್ವಂತೆವೋಲ್ ಸಾರ್ದನೈ|
    ಚ್ಯುತನಾರಾಯಣದೇವ ತಾನೊರಗುತುಂ ತಾನೆಂತೊ ಭಾಮಾಂಕದೊಳ್
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ||
    ನರಕಾಸುರನನ್ನು ಕೃಷ್ಣ ಕೊಲ್ಲಲು ಹೋದಾಗ ನಾರಾಯಣಾಸ್ತ್ರ ಪ್ರಯೋಗದಿಂದ ಕೃಷ್ಣ ಮೂರ್ಛೆಹೋಗುತ್ತಾನೆ. ಆಗ ಸತ್ಯಭಾಮೆ ನರಕನನ್ನು ಕೊಲ್ಲುತ್ತಾಳೆಂಬ ಪಾಠವೂ ಪ್ರಚಲಿತವಿದೆ. ನರಕಾಸುರ ವಿಷ್ಣು(ಕೃಷ್ಣ )-ಭೂದೇವಿ(ಸತ್ಯಭಾಮೆ) ಯರ ಮಗ.

  3. ಸುತನಿಂ ಸಾವ ಸುಯೋಗಮೊಂದೆನಗಿರಲ್ ಸಂತಾನಮಪ್ಪನ್ನೆಗಂ
    ಸತಿಯಿಂ ಕಾಪಿಡಲೀಗಳಿಂತು ಮನನೊಂದಿರ್ಪಾ ನರೇಶಂ ಗಡಾ
    ಚಿತೆಯಂತಿರ್ಪ ಸುವಾರ್ತೆಯಂತಿಳಿಸೆ ಕೌಸಲ್ಯಾ ಪ್ರಸೂತಂ ಕರಂ
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ

    ಶ್ರವಣ ಕುಮಾರನ ತಂದೆಯಿಂದ ತನಗೊದಗಿದ ಶಾಪವನ್ನು ಸಂತಾನಾಪೇಕ್ಷೆಯಿಂದ ಸುವಾರ್ತೆಯೆಂದು ಪತ್ನಿಯಲ್ಲಿ ಮುಚ್ಚಿಟ್ಟು ಈಗ ರಾಮನು ಕಾಡಿಗೆ ಹೋಗುತ್ತಿರಲಾಗಿ , ತನ್ನ ಸಾವು ನಿಶ್ಚಿತವೆಂದು ತಿಳಿದು ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪದಿಂದ ಕೌಸಲ್ಯೆಯಲ್ಲಿ ಕ್ಷಮಿಸೆನ್ನುವ ಪ್ರಸಂಗವನ್ನು ಬರೆಯಲು ಪ್ರಯತ್ನಿಸಿರುವುದು

  4. ಶತಪಾಪೋದಿತ ದರ್ಪದಿಂ ಮೆರೆದಿರಲ್ ತಾಂಮೀರುತುಂ ದೈತ್ಯರಂ
    ಹತಭಾಗ್ಯಂ ವಿಧಿಲೀಲೆಯೊಳ್ ಸಿಲುಕಿದಂ ಕೋತ್ವಾಲನಾಗಲ್ ಸುತಂ
    ಮತಿಯೊಳ್ ಬಂದುದದೊಂದು ಚಿಂತನೆ ಗಡಾ ತಾನಾಗಿರಲ್ ಕೈವಶಂ
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ

    ಅನೇಕ ಕನ್ನಡ ಚಿತ್ರಗಳಲ್ಲಾಗುವಂತೆ ಕಳ್ಳನ ಮಗನೇ ಪೋಲೀಸ್ ಆಗಿ ತಂದೆಯನ್ನು ಶಿಕ್ಷಿಸಬೇಕಾಗಿ(encounter) ಬಂದಾಗ ತಂದೆ ರಕ್ಷಣೆಗೋಸ್ಕರ ತನ್ನ ಹೆಂಡತಿಯ ಮೊರೆಹೋಗುತ್ತಾನೆ ಅನ್ನುವ ಪ್ರಯತ್ನ.(ಕೈವಶಂ ಅರಿಸಮಾಸವೆ? ಬೇರೇನಾದರೂ ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ)

  5. ಪಿತನಂ ಮೀರ್ದನಿವಂ ಕುಕೃತ್ಯದೊಳು ಸಾರ್ಥಕ್ಯಂಗಳಂ ಸಾಧಿಸಲ್
    ಹತಿಸಿರ್ಪಂ ಸಹಜಾತರಂ ದುರುಳ ನಿರ್ದಾಕ್ಷಿಣ್ಯದೌರಂಗನಿಂ
    ಧೃತಿಗೆಟ್ಟಂ ಸೆರೆಯಲ್ಲಿರಲ್ ಶಹಜಹಾನಳ್ಕಾಡೆ ಗೋಳಾಡುತುಂ
    ಸುತನಿತಂದೆಗಮಂತ್ಯಮೈದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ

  6. ಗತಿಶೀಲಂ ರವಿ ಕಾರ್ಯಕಾರಣನುತಾಂ ನೈಸರ್ಗಿಕಾರಂಬಕಂ,
    ಸತಿ ಮೇಣ್ ಭೂರಮೆ, ಬೀಜಕಲ್ತೆ ಬೆಳೆತಾಂ ತತ್ಪುತ್ರನುಂ, ಬೀಜಮಾ-
    ವೃತ ಬೀಜಂ ಮೊಳೆಗಾಣುತಂತು ತೆನೆಗೂಡಲ್ ಸಾರಗೊಂಡುಂ ಸದಾ
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿರ್ಪನರ್ಧಾoಗಿಯಂ ।।

    ಆರಂಬ = ವ್ಯವಸಾಯ
    ಬೆಳೆಯ(ಮಗನ) ಹುಟ್ಟಿನಿಂದಾಗಿ – ಬೀಜದ(ತಂದೆಯ)ಸಾವು => ಮೊಳಕೆ , ಅದಕ್ಕಾಗಿ ಭೂಮಿಯನ್ನು ಬೇಡುವ ಸೂರ್ಯ !!

  7. ಸುತನಿಂ ತಂದೆಗಮಂತ್ಯಮೆಯ್ದಿರಲ್,ಅವಂ ಪ್ರಾರ್ಥಿಪ್ಪನರ್ಧಾಂಗಿಯಂ-
    ಮತಿಯಂ ಪೇಳುತೆ ಭಾಷ್ಪಮಂ ಸವರುತುಂ ಸಂತೈಸುತುಂ ತಾಳ್ಮೆಯಿಂ
    ಮಿತಿಯಂ ಮೀರದವೋಲೆ ಚಿತ್ರಗೃಹದೊಳ್ ಹತ್ತಿಕ್ಕುತಾಕ್ರಂದಮಂ
    ಕತೆಯಂ ಬಣ್ಣಿಸಿಬಾಳಿಸುತ್ತೆ, ದುಗುಡಂ ಕೈಕೇಯಿಯೊಳ್ ತೀರ್ಚುತುಂ!

    (ಚಿತ್ರಮಂದಿರದಲ್ಲಿ ಸುತನಿಂದಾಗೇ ತಂದೆಯ ಸಾವಾದದ್ದನ್ನು ನೋಡುತ್ತ,ಹೆಂಡತಿಯು ಭಾವುಕಳಾದಾಗ…..)

  8. ಮೃತಸಂಜೀವಿನಿ ಮಂತ್ರಮಂ ಕಲಿಗುಮೆಂದಾ ದೈತ್ಯಕಾಪಟ್ಯದಿಂ
    ಹತನಾಗಲ್ ಕಚ ಸೀಳುತಾರ್ಯನುದರಂ ತಾನಾದನಾಚಾರ್ಯಜಂ
    ನುತವೈರಾಗ್ಯನ ದೇವಯಾನಿ ಚಿರಗಾಢಾಲಿಂಗನಂ ಗೈದಿರಲ್
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿರ್ಪನರ್ಧಾoಗಿಯಂ

    ಕಚ-ದೇವಯಾನಿಯರ ಕಥೆಯಾಧಾರಿತ ಪೂರಣ. ಮದುವೆಯಾಗಿರದಿದ್ದರೂ ಗಾಢಾಲಿಂಗನದಲ್ಲಿದ್ದುದರಿಂದ, ಅವಳು ಆತನ ಅರ್ಧಾಂಗಿ ಎಂದು ಪರಿಗಣಿಸಲಾಗಿದೆ. ಇದಕ್ಕೆ ಆಕ್ಷೇಪವಿದ್ದರೆ, ಸಮಸ್ಯೆಯ ಸಾಲನ್ನು ಕೊಂಚ ಬದಲಿಸಿ ಹೀಗೆ ಓದಿಕೊಳ್ಳಬಹುದು:
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿರ್ಪನೈ ಕಾಂತೆಯಂ 🙂

    • who was considered as whose ardhaangi? We never see Devayaani and Kaca were in embrace. From your verse I could only aptly sense that Kaca was regarded as son of Shukra as he came out of his body.

    • ಸಂಜೀವನೀಮಂತ್ರ ಆಗಬೇಕು. ಸಂಜೀವಕಮಂತ್ರ ಎಂದು ಬದಲಿಸಬಹುದು.

  9. ಜಿತನಾಗಲ್ಕಿಹ ಯೋಧಯೂಥದೊಳಗಂ ಭೂಮೀಶನಿಚ್ಛಾಸುತಂ /
    ಮಿತಶಕ್ತಂ ಕಲಿಯೋರ್ವ ಯುದ್ಧದೊಳಗಂ ಪೃಥ್ವೀಶ ಪ್ರಾಣಾಂತಕಂ //
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ /
    ಮತಿವಂತಂ ಚದುರಂಗದಾಟ ಚತುರಂ ನಂಬಿಪ್ಪನಾ ರಾಣಿಯಂ //

    (ಇದು ಚದುರಂಗದಾಟದಲ್ಲಿ ಬರಬಹುದಾದ ಒಂದು ಸಂದರ್ಭ. ರಾಜನಿಗೆ ತನ್ನ ಸೈನಿಕರೆಲ್ಲರೂ ಮಕ್ಕಳ ಸಮಾನರು. ಅವರಲ್ಲೊಬ್ಬ ಸೈನಿಕ ರಾಜನ ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಅಂದರೆ ಆ ಪದಾತಿಯಿಂದ ಆಟ ಸೋಲುವ ಹಂತದಲ್ಲಿದೆ. ಆಗ ರಾಜನು ತನ್ನ ಸತಿಯಾದ ರಾಣಿಯನ್ನು ಜೀವ ಉಳಿಸೆಂದು ಕೇಳುತ್ತಾನೆ. ಇದನ್ನು ಗಮನಿಸಿದ ಆಟಗಾರ ರಾಣಿಯನ್ನು ನಡೆಸಿ ಆಟ ಗೆಲ್ಲುತ್ತಾನೆ).

  10. ಸುತರಾಂ ಕಾಣದೆ ವಂಶವರ್ಧಕನನೇ ಕಂಗೆಟ್ಟು ಪೋಗಿರ್ಪೊಡಂ,
    ಮಿತಿಯಂ ಮೀರಿದ ತೋಷಮುಣ್ಣಿಸುತುಮಾ ಸಂದರ್ಭದೊಳ್ ಪುಟ್ಟಿದಾ
    ಸುತನಿಂ ತಂದೆಗಮಂತ್ಯಮೆಯ್ದಿರಲವಂ, ಪ್ರಾರ್ಥಿಪ್ಪನರ್ಧಾಂಗಿಯಂ-
    “ಹಿತಮಕ್ಕುಂ ತಮಗೆಂದುಮಾತನ ಪೆಸರ್ ತಾಮಿಟ್ಟೊಡಂ ಕಂದಗಂ”

    (ಮಗನಿಗೆ ಸಂತಾನವಿಲ್ಲೆಂದು ಪರಿತಪಿಸುತ್ತಿರುವಾಗ, ಮೊಮ್ಮಗನ ಜನನವು ಸಂತೋಷವನ್ನಿತ್ತು ಪ್ರಾಣವನ್ನೇ ಘಾತಿಸಿಬಿಟ್ಟಿರಲಾಗಿ,ಮಗನು ತನ್ನ ಹೆಂಡತಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾನೆ”ತಂದಯ ಹೆಸರನ್ನೇ ಮಗನಿಗೆ ಇಡೋಣ ,ಹಿತವಾಗುತ್ತದೆ”)

  11. ನತದೃಷ್ಟಂ ಧೃತರಾಷ್ಟ್ರನಂಧಮತಿ ಪುತ್ರಂ ಸೋಲನುಣ್ಣಲ್ಕೆ ಭಾ-
    ರತ ಯುಧ್ಧಂ ಕೊನೆಯಾಗೆ ಧರ್ಮಜನೆ ಪಟ್ಟಕ್ಕೇರಿರಲ್  ಸೈಪಿನಿಂ
    ಸುತನಿಂ ತಂದೆಗಮಂತ್ಯಮಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ
    “ಹತರಾದರ್ ಕುರುಪುತ್ರರೆಲ್ಲರೆನಗುಂ ಸಾವಂ ಕುಡೈ ದೇವಿಯೇ

  12. ಗತ ವೈಭೋಗದ ಗುಂಗಿನಿಂ ಮೊರೆತಿರಲ್ ಮುನ್ನೀರಿನೊಲ್ ಚಿತ್ತವಂ
    ಧೃತಿಯಿಂ ನಿಲ್ಲಿಸಶಕ್ಯನಿರ್ದನವನಂ ಕಂದರ್ಪನೇ ಪೊಕ್ಕಿರಲ್/
    ಗತಿಯಾರಿಲ್ಲದೊಡಂ ಮುಮುಕ್ಷು ಪುರುಷಂ ತಾನಲ್ಲಿಯೇ ನಿಂತಿರಲ್
    ಸುತನಿಂ ತಂದೆಗಮಂತ್ಯಮಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ//

    ಮನಸ್ಸಿನ ಮಗ ಕಾಮ . ಅದು ಬ್ರಹ್ಮವಸ್ತುವಿಗೇ ಹಾತೊರೆಯುತ್ತಿರುವುದರಿಂದ ಬ್ರಹ್ಮವನ್ನು ಮನದ ಅರ್ಧ ಅಂಗವನ್ನು ಹಂಚಿಕೊಂಡಿರುವುದು ಎನ್ನಲಡ್ಡಿಯಿಲ್ಲವಷ್ಟೇ? ವಿರಾಗಿಯೋರ್ವನ ಮನ ಕಾಮವಶವಾದಾಗ (ಮಗನಿಂದಲೇ ತಂದೆಗೆ ಅಂತ್ಯ ಬಂದಾಗ) ಆತ ಬ್ರಹ್ಮವನ್ನು ಪ್ರಾರ್ಥಿಸಿದನು.

  13. ವಿನೋದವಾಗಿ:

    ಅತಿಯಾಪ್ತರ್ ಪತಿಪತ್ನಿಗಳ್ ಜತೆಯೊಳಿರ್ಪರ್ ಬೀಸುಗಲ್ಲಂತವರ್
    ಗತಿಶೀಲಳ್ ಸತಿ ಮೇಣ್ ಜಡಂ ಪುರುಷತಾಂ ಸಾಗಿರ್ಕು ಸಂಸಾರವುಂ
    ಪ್ರತಿಗಾಳಂ ಪುಡಿಗುಟ್ಟುತುಂ ಸರಿಸಲುಂ ಸುತ್ತುತ್ತೆ ಸುತ್ತಂ ಗಡಾ
    ಸುತನಿಂ ತಂದೆಗಮಂತ್ಯಮೆಯ್ದಿರ,ಲವಂ ಪ್ರಾರ್ಥಿಪ್ಪನರ್ಧಾoಗಿಯಂ !!

    ಬೀಸುವ ಕಲ್ಲಿನ ಕಲ್ಪನೆ!!
    ಪುಡಿಗುಟ್ಟು = ನಾಶಮಾಡು
    (ಸುತನಿಂ ತಂದೆಗಮಂತ್ಯಮೆಯ್ದಿರೆ ~ ಕಾಳು ಒಡೆದು ಪುಡಿಯಾಗುವ ಪ್ರಕ್ರಿಯೆಗೆ – ಕೆಳಗಿನ ಕಲ್ಲು ಮೇಲಿನ ಕಲ್ಲನ್ನು ವಿನಂತಿಸುವ ಕಲ್ಪನೆ !! )

    • ಸ್ವಲ್ಪ ಬದಲಾವಣೆಗಳೊಂದಿಗೆ:

      ಅತಿಯಾಪ್ತರ್ ಪತಿಪತ್ನಿಯೋಲ್ ಜತೆಯೊಳಿರ್ಪವ್ ಬೀಸುಗಲ್ಗಳ್ ಸದಾ
      ಗತಿಶೀಲಳ್ ಸತಿ ಮೇಣ್ ಜಡಂ ಪುರುಷ ತಾಂ ಸಾಗಿರ್ಕು ಸಂಸಾರವುಂ ।
      ಪ್ರತಿಗಾಳಂ ಪುಡಿಗುಟ್ಟುತುಂ ಸರಿಸಲುಂ ಸುತ್ತುತ್ತೆ ಸುತ್ತಲ್ ಗಡಾ
      ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾoಗಿಯಂ !!

  14. ಮಗನು ಒಪ್ಪಿದ ವಧುವು ಅಪ್ಪನೆಗೆ ಒಪ್ಪಿಗೆಯಿರಲಿಲ್ಲ…
    ತಂದೆ: “ಮತಿನೀಗಿರ್ಪೆಯ, ಅನ್ಯಮಾವ ವಧುವೂ ಸಿಕ್ಕರ್ದೆಲಿರ್ದಿರ್ಪಳೇಂ?”
    ಮಗ: “ಖತಿಮಾಳ್ಪೆಂ ತಡೆಯೊಡ್ಡೆ ನೀಂ ಮದುವೆಗಂ ನಾನಾಕೆಗೆಂದುಂ ವರಂ|”
    ಸುತನಿಂ ತಂದೆಗಮಂತ್ಯ(“ಖತಿಮಾಳ್ಪೆಂ”)ಮೆಯ್ದಿರಲವಂ, ಪ್ರಾರ್ಥಿಪ್ಪನರ್ಧಾಂಗಿಯಂ:
    ತಂದೆ: “(ಅಯ್ಯೋ) ಸತಿ ನೀ ಪೆತ್ತೆ ಇದೆಂಥ ಪುತ್ರಘನನಂ, ಶಿಂಡಾಡುವಂಥಾತನಂ (ಚಂಡಿಹಿಡಿಯುವವನು)||”

  15. ಸ್ಮೃತಿಹೀನಂಗತಿಯಾಗೆ ದರ್ಪಮದರಿಂ ಕ್ರೋಧಾಗ್ನಿಯಾ ಪುತ್ರನೊಳ್
    ಹುತಮಂ ನುಂಗುತೆ ಹಬ್ಬುವಾ ರೀತಿಯೊಳ್ ಗಾಂಢೀವಿಯಂ ಸೀಳಿರಲ್,
    ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ,
    ಸತಿಯಂ ಪ್ರಾಣವಿಧಾತೆಯಂ ಭುಜಗಳಂ, ವಿಜ್ಞಾತ ವೃತ್ತಾಂತ ತಾಂ

    ಪೂರ್ವವೃತ್ತಾಂತವನ್ನು ಮರೆತು ಮೆರೆದಾಡಿದ ಅರ್ಜುನನ್ನು ಬಭ್ರುವಾಹನ ಕೊಂದಾಗ,ಉಲೂಪಿಯ ಸಹಾಯದಿಂದ ಮರುಜೀವ ಪಡೆದಿರಲು, ಹಿಂದಿನ ನೆನಪು ಮರುಕಳಿಸಿ, ಕ್ಷಮಿಸುವಂತೆ ಉಲೂಪಿ/ಚಿತ್ರಾಂಗದೆಯನ್ನು ಪ್ರಾರ್ಥಿಸಿದ ಸಂದರ್ಭವನ್ನು ಚಿತ್ರಿಸುವ ಪ್ರಯತ್ನ.

    • Nice idea! ಹಬ್ಬುವಾ should be parbuvaa. there is a miss of chandas in ರೀತಿಯೊಳ್ . we can make it teradoLam.

      • Thank you sir..Here is the corrected verse
        ಸ್ಮೃತಿಹೀನಂಗತಿಯಾಗೆ ದರ್ಪಮದರಿಂ ಕ್ರೋಧಾಗ್ನಿಯಾ ಪುತ್ರನೊಳ್
        ಹುತಮಂ ನುಂಗುತೆ ಪರ್ಬುವಾ ತೆರದೊಳಂ ಗಾಂಢೀವಿಯಂ ಸೀಳಿರಲ್,
        ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ,
        ಸತಿಯಂ ಪ್ರಾಣವಿಧಾತೆಯಂ ಭುಜಗಳಂ, ವಿಜ್ಞಾತ ವೃತ್ತಾಂತ ತಾಂ

Leave a Reply to ಭಾಲ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)