Jan 082018
 

  44 Responses to “ಪದ್ಯಸಪ್ತಾಹ ೨೮೯: ಚಿತ್ರಕ್ಕೆ ಪದ್ಯ”

  1. ರವಿರಾಜತೆಗಿದು ಮುಕುಟ-
    ಚ್ಛವಿಯೆನೆ ಕಾಣ್, ಕವಿ ಪತಂಗಮಂ ಮುನ್ನೀಳ್ದಂ!
    ಬುವಿಯೊಡೆತನಂಗಳೆಲ್ಲಂ
    ಪವನಕ್ಕೆರವಾದ ಪುಲ್ಲೆನುತ್ತಿದಕೊಲ್ದಂ

    ರವಿಯ ರಾಜತ್ವಕ್ಕೆ ಇದು ಮುಕುಟ ಎಂಬಂತೆ ಕವಿಯೊರ್ವ ಈ ಪತಂಗವನ್ನು ರವಿಯೆಡೆಗೆ ಹಾರಿಸುತ್ತಿದ್ದಾನೆ. ಈ ಭೂಮಿಯ ದೊರೆತನಗಳೆಲ್ಲ ಗಾಳಿಗೆ ಸಿಕ್ಕ ಹುಲ್ಲಿನ ತೆರ ಎಂದು ತಿಳಿದು ಅವನಿದಕ್ಕೆಳಸಿದ್ದಾನೆ.

    • ಬಹಳ ಚೆನ್ನಾಗಿದೆ

    • (ಬುವಿ+ಅರಸೊತ್ತಿಗೆಯು+ಎಲರಿಂ)
      ಬುವಿಯರಸೊತ್ತಿಗೆಯೆಲರಿಂ
      ನವೆವುದುಮೆಂದರಿತುಮೇಂ ಪ್ರಯೋಜನಮಾಯ್ತಯ್|
      ಕವಿಗದೆ ಗಾಳಿಯೊದಗಿತೇ
      ರವಿಮುಕುಟಕ್ಕೇರಿಸಲ್ ಕಿರೀಟಮನಯ್ಯೋ!!

  2. ಮೇಲೇರುವಕಾತುರದೊಳ್
    ನೀಲಪತಂಗಂ ಗಭಸ್ತಿಮಾನನ ಸೋಂಕಲ್|
    ತೇಲಿ ಗಗನದೊಳಗೇರಿತು
    ಕಾಲನವೋಲ್ ಸೂತ್ರಧಾರಿ ತಡೆಯುತಲಿರ್ದಂ ||

    • ಗಗನದೊಳಗೇರಿತು -> ಗಗನದೊಳೇರ್ಗುಂ ಮಾಡಬಹುದು ಹಳಗನ್ನಡದ ದೃಷ್ಟಿಯಿಂದ, ಚೆನ್ನಾಗಿದೆ

  3. ನೀಲಗಗನದೊಳ್ ತೋರ್ಪೀ
    ಲೀಲೆಯನೇವೇಳ್ವೆನೇಱಿ ಪಾಱ್ವ ಪತಂಗಂ
    ಬಾಲನ ಬಸಮಾದತ್ತೇಂ
    ಬಾಲಮನಾಡಿಸುತುಮಾಡಿ ಕುನ್ನಿಯ ಪದನೊಳ್

    • ಚೆನ್ನಾಗಿದೆ ಜೀವೆಂ, ಬಸಮಾದತ್ತೇಂ ಅಂದರೆ?

    • ಕುನ್ನಿಗೊಂದೇ ಬಾಲವಿನ್ನೊಂದನೆಲ್ಲಿಂದೆ
      ಚೆನ್ನಿಗನೆ ತಂದೆಯೋ ಪೇಳುಗೀಗಳ್|
      ತಿನ್ನಲೊಂದೇ ಬಾಯಿ ತಾನಿರಲು ಅಂಗವೆರ-
      ಡಿನ್ನೇಕೊ ಮರೆಯೊಳಾ ಬಾಲದೊಳ್ ಪೇಳ್??

      • ಹಿಂಚದಲೆ ಬೇಸರಿಸದಲೆ ನೀ
        ವಿಂಚು ಇಂಚನು ಟೀಕೆ ಗೆಯ್ವಿರಿ
        ಕೊಂಚವೂ ಸಂಕೋಚ ಬೇಡವೆ ಅಂಗಗಳ ಬಗ್ಗೆ?
        ಮಿಂಚಿನಂದದೊಳಿತ್ತಲತ್ತಲು
        ಸಂಚರಿಸಲೆರಡಂತೆ ತೋರ್ಪುದು
        ಪೊಂಚಿ ನೋಡಿರಿ ಕುನ್ನಿ ಬಾಲವನಾಡಿಸುವ ಜವಮಂ

  4. ಅಂದಿಗೊರ್ವನು ಸೂರ್ಯನಂ ಸಾರಿ ಮೋರೆಯಂ
    ಕೆಂದಾಗಿ ದುಂಡಾಗಿ ಮಾಡಿಕೊಂಡಂ|
    ಇಂದಿಗೀ ಪಟಮದೇ ಕಜ್ಜಕುಜ್ಜುಗಿಸುತ್ತೆ
    ಪೊಂದಿಹುದು ಪೆಚ್ಚಾಗಿ ಕಪ್ಪೆಕಾಲಂ||

    • ಇದೇನು ಪ್ರಸಾದು, ಪಟವನ್ನು ಕಪ್ಪೆಗೆ ಹೋಲಿಸುವುದೇ? ಎನ್ನೋಣವೆಂದಿದ್ದೆ :D, ಸೂಕ್ಷ್ಮವಾಗಿ ಗಮನಿಸಿದಾಗ ನನಗೂ ಪಟ, ಮತ್ತು ಬಾಲಂಗೋಚ್ಚಿ ಕಪ್ಪೆಯು ತೇಲಿದ ಹಾಗೆ ಕಾಣುತ್ತಿದೆ 🙂

    • Hahhaaa

  5. ದೂರದೂರಿನೊಳಿರ್ಪ ಹೊಳೆವ ಮುತ್ತನು ಕಂಡು
    ಹಾರಲೆಳಸಿರ್ಪುದೀ ಮನದ ಪಟವು..
    ದಾರಪಿಡಿದವನದನು ಕಡಿವನೆಂಬುದ ಮರೆಯು-
    -ತೇರಿಹುದು ಬೆಂಕಿಯುಂಡೆಯನೆ ಬಯಸಿ

  6. ಬಿಳಿವಣ್ಣದೆ ಪಲವಣ್ಣಮ-
    ನೊಳಕೊಂಡಿರ್ಪಂತೆ ಕೈತವಂಗೈವನಿಗೆಂ-
    ದಿಳೆಯಿಂ ಬಣ್ಣದಪಟಮಂ
    ಬೆಳಗುತಲಾರತಿಯನೀವುದೇ ಹದನಂ ದಲ್

  7. ನೋಡಾರೆ ಕಲಿಯೆಯೇಂ ಸೂರ್ಯನಂ ಸಾರ್ದರೆಂ-
    ತೀಡಾಗುವರು ದುರ್ದೆಸೆಗಮೆನ್ನುತುಂ|
    ಖೋಡಿಮೋಡವದೋಡುತೋಡುತಂತೆಯೆ ಕರಗಿ
    ಕೋಡಿಹರಿವುದುಮಿಳೆಗೆ ನೀರಾಗುತುಂ||

  8. ಸೂತ್ರಮಂ ಪಿಡಿಯೆ ನಾಂ ಬಿಡಿಸಿಕೊಳೆ ಯತ್ನಿಸುವೆ
    ಮಿತ್ರನಂ ಸಾರ್ವ ಕಾತುರದಿ ನೀನೈ|
    ಚಿತ್ರಮೇನೆಂಬೆ ಬಿಡುಗಡೆಯಗೊಳಿಸಲು ಸೇರ್ವೆ
    ಧಾತ್ರಿಯನು ತೊರೆದೆಲ್ಲ ಕೆಚ್ಚನೇಕೋ||

  9. ಬೆರಗ ಬಣ್ಣಂಗಳಿಂದಿರುವೆನಾ ಮೋಡವದು
    ಬರಿದೆ ಬಿಳಿಯೆಂದು ಹಂಗಿಪೆಯ ಪಟವೆ|
    ಕರಗಲಾ ಮೋಡವಾಗಳ್ ದಿಗಂತದೆ ನೋಡು
    ಮಿರುಗುಬಣ್ಣಗಳಿಂದ್ರಧನುವೈಭವಂ||

  10. ನಭವನವಿಕಸಿತಸೂರ್ಯ
    ಪ್ರಭಾಕುಸುಮಮಂ ಪತಂಗಮಾಗುತೆ ಪಟತಾ-
    -ನಭಿರಾಮತೆಯಿಂ ಪೊಂದ-
    -ಲ್ಕಭಿಗಮಿಸುತಿರಲ್ಕದನ್ನೆ ಬಿದಿಸೆಳೆದಿದೆಯೇಂ?

    • ’ನಭವನವಿಕಸಿತಸೂರ್ಯಪ್ರಭಾಕುಸುಮ’ ಚೆನ್ನಾಗಿದೆ. ಮಧ್ಯದಲ್ಲಿ ’ಅದನ್ನೆ’ ಎಂದಿರುವುದು ಕೊಂಚ ಕರ್ಕಶವಾಗಿದೆ ಅಷ್ಟೆ 🙂 ನಿಮ್ಮ ಪದ್ಯವೂ ಪ್ರತಾಪ ಸಿಂಹರ ಪದ್ಯವೂ (#೨) ಸುಮಾರು ಒಂದೇ ಜಾಡಿನಲ್ಲಿವೆ. ತಪ್ಪೇನಲ್ಲ.

      • +1 🙂

      • ಒಂದೇ ಜಾಡು: ಇಬ್ಬರೂ ಒಬ್ಬಳೇ ವಧುವನ್ನು ಇಷ್ಟಪಟ್ಟರಂತೆ. “ಎರಡೂ ದದ್ದ ಹೊರಕ್ ಹಾಕು” ಎಂದು ಹೇಳಿ ಅದೇ ಹೋದ್ಲಂತೆ ಅವ್ಳು!

    • +2 🙂

  11. ಚಂದದ ಪಟಮಂ ಗೆಯ್ದೆಂ
    ಮಂದಿಗದಂ ತೋರ್ಗುಮೆನುತಲೆಸೆಯಲ್ಕನಿಲ-
    ಸ್ಯಂದನದಿಂದನಲಾಕರ-
    ಮೆಂದೇ ಪೋಪುದಲ ಶೂನ್ಯದೃಷ್ಟಿಯೆ ಕಾಣ್ಗುಂ

    ಚಂದದ ಪಟವನ್ನು ಮಾಡಿ ಜನರಿಗೆ ತೋರಿಸಲು ಹೋದರೆ ಸೂರ್ಯನೆಡೆಗೆ ಪಟವು ಗಾಳಿಯಿಂದ ಒಯ್ಯಲ್ಪಡಲು (ಸೂರ್ಯಕಾಂತಿಯನ್ನು ನೋಡಲಾಗದೆ) ಕಣ್ಣಿಗೆ ಶೂನ್ಯವೇ ಕಾಣುತ್ತಿದೆ

    ಅನಿಲಸ್ಯಂದನ – air flow
    ಅನಲಾಕರ – ಸೂರ್ಯ

    • ಸರಿಯಾಗಿ ಹೇಳಿದಿರಿ. ವೇದಾಂತಿಗಳ ಪ್ರಕಾರ ಜಗತ್ತೆಲ್ಲವೂ ಶೂನ್ಯ. ಕಣ್ಣಿಗೆ ಕಾಣುತ್ತಿರುವ ಆ ಸೂರ್ಯ, ಮೋಡ, ಆಗಸ, ಗಾಳಿಪಟ, ಸೂತ್ರ, ಸೂತ್ರಧಾರ – ಎಲ್ಲವೂ ಶೂನ್ಯ 😉

    • shuunya-dRSTi?? shuunya-dRshya?

  12. ರಂಗೇರೆ ವಿವಾಹದೆ ಬಾ-
    ನಂಗಳದೊಳ್ ಮುಗಿಲಿನಂತರಪಟದ ಮರೆಯೊಳ್
    ಸಿಂಗರಿಸೆ ರವಿ”ವರ”ಗೆ ಬಾ-
    ಸಿಂಗವ ಕಟ್ಟುದೆ ಸುಸೂತ್ರದಿಂ ಬಗೆ ಹಸ್ತo !!

    • ಆಹಾ ಚೆನ್ನಾಗಿದೆ! ಬಗೆ-ಹಸ್ತ ಸಮಾಸವೇ? ಬಗೆ – ಹೃದಯ ಎಂಬರ್ಥದಲ್ಲಿ ಬಳಸಿದ್ದಾ? ಬಗೆಗೈಯಿಂ ಎಂದಾದರೆ ಅರಿ ತೊಲಗೀತು 🙂

      • ಧನ್ಯವಾದಗಳು ನೀಲಕಂಠ ,
        ಅದು “ಬಲಹಸ್ತo” (ಪ್ರಸಾದ್ ಸರ್, ಎಲ್ಲಿ ಎಡಗೈಯ್ಯೋ / ಬಲಗೈಯ್ಯೋ ಅಂತ ಪರೀಕ್ಷಿಸಿಯಾರೋ ಅಂತ ಈ “ಬಗೆ ಹಸ್ತ o” !!)

        “ಸೂರ್ಯ”ನ ಮದುವೆಯ ಸಂದರ್ಭ – ಮೋಡ ಹರಡಿ “ಅಂತರಪಟ ” ಹಿಡಿದಿದೆ – ಬೆಟ್ಟ “ಬಾಸಿಂಗ” ಕಟ್ಟಲು ಕೈ ಚಾಚಿದೆ ಎಂಬ ಕಲ್ಪನೆ ! ಹಾಗಾಗಿ “ಗಿರಿಹಸ್ತ o” ಸರಿಹೋದೀತೆ ?

        • 🙂 ಇದೆಲ್ಲ ನಡೆಯುವುದು ಕವಿಯಿಂದಾದ್ದರಿಂದ ಕವಿಹಸ್ತಂ ಎಂದುಬಿಡಿ!

    • bahaLa chennagide

      • ಧನ್ಯವಾದಗಳು ಸೋಮ , ನೀಲಕಂಠ (ಗಮನಿಸಿರಲಿಲ್ಲ )
        “ಕವಿಹಸ್ತo” ಚೆನ್ನಾಗಿದೆ !!

        ರಂಗೇರೆ ವಿವಾಹದೆ ಬಾ-
        ನಂಗಳದೊಳ್ ಮುಗಿಲಿನಂತರ ಪಟದ ಮರೆಯೊಳ್
        ಸಿಂಗರಿಸೆ ರವಿವರಗೆ ಬಾ-
        ಸಿಂಗವ ಕಟ್ಟುದೆ ಸುಸೂತ್ರದಿಂ ಕವಿಹಸ್ತo !!

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)