Oct 042011
 

ಈ ದ್ರಕಾರವಿದೇನು? ಈ ಸಮಸ್ಯೆಯದೇನು?
ಕ್ಷುದ್ರವೋ ರಸಯುತವೊ ತಿಳಿಯದಾಯ್ತು
ಅದ್ರಿಜೆಯೆ ಸಾಕ್ಷಿ ನಾ ಪೂರಣವಗೈದಿಲ್ಲ
“ಭದ್ರಕಾಳಿಯು ಬೆದರಿ ಮಾಯವಾದಳ್”

  26 Responses to “ಸಮಸ್ಯೆ : ಭದ್ರಕಾಳಿಯು ಬೆದರಿ ಮಾಯವಾದಳ್”

  1. ಭದ್ರಕೋಟೆಯ ಕೆಲದ ಕಳ್ಳಗಿಂಡಿಯ ನುಸುಳೆ
    ಕ್ಷುದ್ರ ರಿಪುಸೈನಿಕರ್ ಮುಂದೊತ್ತಿರಲ್
    ರೌದ್ರದಿಂ ತಲೆಗಳಂ ಛಿದ್ರಿಸುತಿಹಳ ಕಂಡು
    ಭದ್ರಕಾಳಿಯೆ ಬೆದರಿ ಮಾಯವಾದಳ್

  2. ಮಂಥುನಾಥರೇ, ಪ್ರಥಮ ಪೂರಣದಲ್ಲಿ, ಓಬವ್ವನ ಸಾಹಸಗಾದೆ ಓಜಸ್ವಿಯಾಗಿ, ಸಲಕ್ಷಣವಾಗಿ ಮೂಡಿಬಂದಿದೆ.

  3. ನುಡಿದ ಮಾತಂತೆ ತನ್ನಗ್ರಜನ ಭುಜವ ಸುಡ
    ದತ್ತಿಗೆಯ ಮುಡಿಯನ್ಹಿಡಿದೆಳೆದಾಡಿದ
    ದಾಯಾದಿಯ ಕರುಳ ಕರದೊಳಿಡಿದವನಿಂದೇ
    ಭದ್ರಕಾಳಿಯು ಬೆದರಿ ಮಾಯವಾದಳು

  4. ಸಮರ್ಥ ಹೆಗ್ಗಡೆಯವರೇ,

    ಭೀಮನ ಪ್ರತಿಜ್ಞಾಪಾಲನೆಯ ರೌದ್ರಭಾವವನ್ನು ಸಮರ್ಥವಾಗಿ ಗ್ರಹಿಸಿದ್ದೀರಿ. ಛಂದಸ್ಸಿನ ಲಕ್ಷಣವನ್ನು ಗಮನಿಸಿ, ಪ್ರಾಸಬದ್ಧವಾಗಿಸಿ ಪದ್ಯವನ್ನು ಸರಿಪಡಿಸಬೇಕಿದೆ. ಎರಡು ಮತ್ತು ಮೂರನೆಯಸಾಲಿನಲ್ಲಿ ಗಣಗಳ ತೊಡಕಿದೆ. ನಿಮ್ಮ ಪೂರಣದ ಸುಳಿವನ್ನೇ ಹಿಡಿದು, ಹೀಗೆ ಬದಲಾಯಿಸಬಹುದು.

    ’’ಛಿದ್ರ ದುಃಶ್ಶಾಸನೋದರ” – ಭೀಮಸಂಗ್ರಾಮ
    ’ರೌದ್ರ ರಕ್ತಾಸ್ವಾದ’ – ಕರುಳಮಾಲೆ
    ವಿದ್ರಾವಿತರು ಸೈನ್ಯದುಭಯರೆಲ್ಲರು ನೋಡೆ
    ಭದ್ರಕಾಳಿಯು ಬೆದರಿ ಮಾಯವಾದಳ್

    ವಿದ್ರಾವಿತರು = ಯುದ್ಧಮಾಡುವುದನ್ನು ಬಿಟ್ಟುಓಡಿಹೋದವರು

  5. ಚಂದ್ರಮೌಳಿಯವರೇ,ಎರಡು ಮತ್ತು ಮೂರನೇ ಸಾಲಿನ ತೊಡಕು ತಿಳಿಯುತ್ತಿಲ್ಲ. ಇದು ನನ್ನ ಮೊದಲ ಯತ್ನ. ದಯವಿಟ್ಟು ವಿವರಿಸುವಿರಾ?
    ಇನ್ನೊಂದು ಪ್ರಯತ್ನ ಹೀಗಿದೆ: ದಯವಿಟ್ಟು ನಿರ್ದೇಶಿಸಿ.
    ಶಾಂತಸುಂದರನ ಶಿರವನಂಡುಗೊಳುವೆನೆಂದು
    ಎಣಿಸಿಂದುವನಿಳಿಸಲ್ ಸಂಚಿನಿಂಕಾ
    ಯಲ್ಪರಶಿವಂ ತಾಂಡವಕೆಳಸಲರಿತು ಶಶಿಯೆ
    ಭದ್ರ, ಕಾಳಿಯು ಬೆದರಿ ಮಾಯವಾದಳು.
    ಅಂಡುಗೊಳ್-ಆಕ್ರಮಿಸು

    ಶಿವನ ತಲೆಯ ಮೇಲೇರಿ ಕೂರಲು ಚಂದ್ರನನ್ನು ಇಳಿಸಿ ತಾನು ಕೂರಬೇಕೆಂದು ಸಂಚಿನಿಂದ ಹೊಂಚುಹಾಕಿ ಕಾಯುತ್ತಿರುವಾಗ, ತಾಂಡವಕ್ಕೆ ತಯಾರಾದ ಶಿವನನ್ನು ಕಂಡು ಅವನ ಶಿರಸ್ಸಿನಲ್ಲಿ ಶಶಿಯೇ ಭದ್ರನೆಂದರಿತು ಕಾಳಿಯು ಬೆದರಿ ಮಾಯವಾದಳು. ಎಂಬ ಅರ್ಥ ನನಗೆ ಕಂಡಿದೆ. ದಯವಿಟ್ಟು ತಿಳಿಸಿ.

    • ನಿಮ್ಮ ಕಲ್ಪನೆಗಳು ಚೆನ್ನಾಗಿವೆ. ಅದನ್ನು ಪದ್ಯರೂಪಕ್ಕಿಳಿಸಲು, ಸ್ವಲ್ಪ ಹೆಚ್ಚಿನ ಅಭ್ಯಾಸ ಬೇಕು. ಮಂಕುತಿಮ್ಮನ ಕಗ್ಗ, ಮರುಳಮುನಿಯನಕಗ್ಗ ಇಂಥ ಚೌಪದಿಗಳನ್ನು ಲಯಬದ್ಧವಾಗಿ ಹಾಡಿಕೊಂಡರೆ, ಛಂದದ ಓಟ, ಅಂತರ್ಗತವಾದ ಪಂಚಮಾತ್ರಾಣಗಳ ಯೋಜನೆ ಸ್ಪುರಿಸುತ್ತದೆ.ಛಂದಸ್ಸಿನ ಪ್ರಾಥಮಿಕ ನಿಯಮಗಳ ಶಿಕ್ಷಣ ಸಹ ಅಗತ್ಯ.

  6. ಸಮರ್ಥರೇ, ಇಲ್ಲಿ ಕಾಣುವ ತೊಡಕನ್ನು ಸರಳಗೊಳಿಸಿ ಹೇಳಲೆತ್ನಿಸುತ್ತೇನೆ.

    ಈ ಛಂದಸ್ಸು ಹೆಸರೇ ಸೂಚಿಸುವಂತೆ ಪಂಚಮಾತ್ರೆಯ ಚೌಪದಿ. ಇದರ ಅರ್ಥ ಸಾಲೊಂದರಲ್ಲಿ ಇಪ್ಪತ್ತು ಮಾತ್ರೆಯಿರಬೇಕೆಂದಷ್ಟೇ ಅಲ್ಲ, ಅದು ಐದೈದು ಮಾತ್ರೆಯ ಗಣಗಳಾಗಿರಬೇಕೆಂದು. ಈ ದೃಷ್ಟಿಯಿಂದ ಮೇಲಿನ ಸಾಲುಗಳನ್ನು ನೋಡೋಣ:

    ೨೨೧೧ ೧೧೧ ೧೧೧೧೧೧೧೨೨ = ೨೦
    ದಾಯಾದಿಯ ಕರುಳ ಕರದೊಳಿಡಿದವನಿಂದೇ

    ಆದರೆ ಇದನ್ನು ಐದೈದಾಗಿ ವಿಭಜಿಸಿ ನೋಡೋಣ:
    ೨೨೧ | ೧ ೧೧೧ ೧| ೧೧೧೧೧ | ೧೨೨ | = ೨೦
    ದಾಯಾದಿ| ಯ ಕರುಳ ಕ| ರದೊಳಿಡಿದ| ವನಿಂದೇ|

    ಇಲ್ಲಿ ಗಮನಿಸಿದರೆ ಪ್ರತಿ ಗಣದ ಕೊನೆಯಲ್ಲೂ ಪದವೊಂದು ಒಡೆದು ಅರ್ಥಕ್ಕೆ ಭಂಗಬಂದಿರುವುದು ಸ್ಪಷ್ಟ. ಹಾಗೇ “ಯ ಕರುಳ ಕ” ಎಂಬ ಗುಂಪಿನಿಂದಲೂ ಅರ್ಥಕ್ಕೆ ಭಂಗಬಂದಿರುವುದು ಸ್ಪಷ್ಟ. ಈಗ ಛಂದೋಭದ್ದವಾದ ಮತ್ತೊಂದು ಉದಾಹರಣೆ ನೋಡೋಣ:

    ೧೧೧೧೧ | ೧೧ ೨೧ | ೧೧೧೧೧ | ೧೧ ೨೧ | = ೨೦
    ನಗುವುಸಹ| ಜದ ಧರ್ಮ| ನಗಿಸುವುದು| ಪರಧರ್ಮ|

    ೧೧೧೧೨ | ೧೧ ೧೧೧ | ೧೧೧೧೧ | ೨ ೧ | = ೧೮
    ನಗುವನೋ| ಡುತ ನಗುವು| ದತಿಶಯದ| ಧರ್ಮ|

    ಪದಗಳು ಕೂಡಿದಮಟ್ಟಿಗೂ ಒಂದು ಅಥವ ಎರಡು ಗಣದೊಳಗೆ ಮುಕ್ತಾಯವಾಗಿ ಮುಂದಿನ ಗಣಕ್ಕೆ ಹೊಸ ಪದ ಶುರುವಾಗುತ್ತದೆ (“ನಗುವು ಸಹ|ಜದ ಧರ್ಮ| ನಗಿಸುವುದು| ಪರಧರ್ಮ” ಹೀಗೆ; ಆದರೆ “ನಗುವುಮಾ|ನವನಧ|ರ್ಮವಾದುದ|ರಿಂದಲ್ತೆ|” ಅಲ್ಲ). ಜೊತೆಗೆ ಐದು ಮಾತ್ರೆಯ ವಿವಿಧ ನಡೆಗಳು (೨-೩, ೩-೨ ಇತ್ಯಾದಿ) ಒಂದರೊಡನೊಂದು ಸಮರಸವಿರುವಂತೆ ಅಣಿಗೊಂಡಿರುತ್ತವೆ – ತನನನನ, ತಾನನನ, ತನನಾನ, ತಾನಾನ, ತಾನನಾ, ತನನನಾ ಇತ್ಯಾದಿ. ಆದರೆ ತನಾನನ, ತನಾನಾ ಎಂದು ಗಣದ ಮೊದಲ ಮಾತ್ರೆ ಲಘು, ಕೂಡಲೇ ಗುರು ಬರುವಂಥ ಗಣಗಳು ಬರಬಾರದು, ಅದು ಛಂದದ ಓಟಕ್ಕೆ ತೊಡಕಾಗುತ್ತದೆ.

  7. ಚಂದ್ರಮೌಳಿಯವರೇ, ಇದು ನಿಜವಾಗಿಯೂ ಹೊಸ ವಿಚಾರ. ತಮ್ಮ ವಿವರಣೆ ಸ್ವಲ್ಪ ಮಟ್ಟಿಗೆ ತಿಳಿದಿದೆಯೆಂದುಕೊಳ್ಳುತ್ತೇನೆ. ಪೂರ್ಣ ತಿಳಿದರೆ ದೋಷವಿಲ್ಲದೆ ಬರೆಯಲೆತ್ನಿಸುತ್ತೇನೆ..
    ಧನ್ಯವಾದಗಳು…

    • ಸಮರ್ಥರೇ,

      ಮಂಜುನಾಥರ ವಿವರಣೆಯ ಜೊತೆಗೆ, ಪದ್ಯದ ಸಾಲುಗಳಲ್ಲಿನ ತೊಡಕು ಹೀಗಿದೆ.

      ದತ್ತಿಗೆಯ ಮುಡಿಯನ್ಹಿಡಿದೆಳೆದಾಡಿದ = ಮುಡಿಯನ್ ಹಿಡಿ ಇಲ್ಲಿ ಜಗಣ (ಲ-ಗು-ಲ) ಬಂದು, ಒಂದಕ್ಷರ ಹೆಚ್ಚಾಗುತ್ತದೆ .ಮುಡಿಯಹಿಡಿದೆಳೆದಾಡಿದ ಎಂದು ಮಾಡಿದರೆ ಸರಿ.
      ದಾಯಾದಿಯ ಕರುಳ ಕರದೊಳಿಡಿದ ವನಿಂದೇ= ಇಲ್ಲಿಯೂ “ವನಿಂದೇ” ಎಂಬಲ್ಲಿ ಜಗಣ ಬಂದಿದೆ. ಮತ್ತೇನಾದರೂ ಸಂದೇಹ ವಿದ್ದರೆ ತಿಳಿಸಿ.

  8. ಕದ್ರುವರ್ಣದದಾಳ ಬುದ್ಧಿಬಲ ಮೀರಿಸಿರೆ
    ನಿದ್ರಿಪರು ಗರಬಡಿದ ಕುರುಹಿರಿಯರು
    ಭದ್ರೆಯನು ಹಿಡಿದೆಳೆವುದನು ನೋಡಿ, ಕುರುವಂಶ
    ಭದ್ರಕಾಳಿಯು ಬೆದರಿ ಮಾಯವಾದಳ್

    • ಇಲ್ಲಿ ಭದ್ರಕಾಳಿ = auspicious, good, fortunate form of Kali. ಎಂಬ ಅರ್ಥದಲ್ಲಿ ಬಳಸಿದ್ದೇನೆ. ಜೊತೆಗೆ, ವಿಕಿಪೀಡಿಯಾದಲ್ಲಿ, Kāli is considered the goddess of time and change. ಎಂಬುದಾಗಿ ಇದೆ. ಆ ಅರ್ಥದಲ್ಲಿ ಭದ್ರಕಾಳಿ = good time ಎಂಬುದಾಗಿ ಅರ್ಥೈಸಬಹುದೇನೊ? ತಪ್ಪಿದ್ದರೆ ತಿಳಿಸಿ.

      • ರವೀಂದ್ರರೆ,

        ಸಂದರ್ಭದ ಕಲ್ಪನೆ ಚೆನ್ನಾಗಿದೆ. ನನಗೆ ತೋರಿದಂತೆ, ಪದ್ಯರಚನೆಯಲ್ಲಿನ ಅತಿಕಷ್ಟವಾದ ಭಾಗವೆಂದರೆ, ಹೆಚ್ಚಿನ ವಿವರಣೆ ಇಲ್ಲದೆ ಓದಿದೊಡನೆ ಅರ್ಥವಾಗುವಂತೆ ಬರೆಯುವುದು. ನೀವು ನೀಡಿರುವ ಅರ್ಥೈಕೆ ಸರಿಯಾಗಿದೆ. ನಾನಾರ್ಥಗಳಲ್ಲಿ ಯಾವದೋ ಒಂದನ್ನು, ನಿರ್ದೇಶಿತ ಅರ್ಥ ಎಂದು ಹೇಳಬಹುದು. Meaning is not the words. It is in our mind of interpretation. ಭದ್ರಕಾಳಿಯು ಬೆದರಿ ಎಂಬೆರಡು ಪದಗಳು ಸೂಚಿಸುವ ಭಾವವೇನು ? ಎಲ್ಲರನ್ನೂ ಭಯಪಡಿಸುವ ಘೋರರೂಪ ತಾನೇ ಬೆದರಿತು ಎಂದು. ಇಂಥ ಅಸಂಭಾವ್ಯತೆ ಇದ್ದಾಗಲೇ ಅದು ಸಮಸ್ಯೆ ಎನಿಸಿಕೊಳ್ಳುತ್ತದೆ. ’ಭದ್ರಕಾಳಿಯು ಬರಲು ಬೆದರೋಡಿದರ್ ’ ಎಂಬುದು ಸಮಸ್ಯೆಯಾಗಲಾರದು. ಅದು ಸಹಜ ಸಂಭಾವ್ಯ. ಅಲ್ಲಿ, ಹೆಚ್ಚಂದರೆ ಒಂದು ಸಂದರ್ಭದ ಕಥೆ ಹೆಣೆದು ರಂಜಿಸಬಹುದಷ್ಟೆ. ನಿಮ್ಮ ಪದ್ಯರಚನೆ ಸಲಕ್ಷಣವಾಗಿದೆ. ನಿದ್ರಿಪರು ಗರಬಡಿದ ಕುರುಹಿರಿಯರು ಎಂಬಲ್ಲಿ, (ಬಹುಷಃ ಅಪ್ರಯತ್ನಪೂರ್ವಕವಾಗಿ) ಶಬ್ದಾಲಂಕಾರ ಬಂದಿದೆ. ಗರಬಡಿಯುವುದೆಂದರ ದಾಳವನ್ನುರುಳಿಸಿ ಹೆಚ್ಚಿನ ಮೌಲ್ಯದ ’ಗರ’ ವನ್ನು ಪಡೆಯುವುದು ಎಂಬ ಅರ್ಥವೂ ಇದೆಯಲ್ಲವೆ!.

        • ಧನ್ಯವಾದಗಳು ಮೌಳಿಯವರೆ, ನೀವು ಹೇಳಿದಂತೆ, ಸಭೆಯಲ್ಲಿದ್ದವರಿಗೆಲ್ಲಾ, ಒಂದೊಂದು ’ಗರ’ ಬಡಿದಿತ್ತನಿಸುತ್ತದೆ. ಧೃತರಾಷ್ಟ್ರನಿಗೆ ಮತ್ತು ದುಷ್ಟಚತುಷ್ಟಯರಿಗೆ ನಂಜು(=ಗರ) ಬಡಿದಿದ್ದರೆ, ಪಾಂಡವರಿಗೆ ಮತ್ತು ಭೀಷ್ಮದ್ರೋಣಾದಿಗಳಿಗೆ ದೆವ್ವ(=ಗರ)ಬಡಿದಿದೆ. ಶಕುನಿಗೆ ಪಗಡೆಯ ಸಂಖ್ಯೆಗಳದೇ (=ಗರ) ಆಲೋಚನೆ.

  9. ಭದ್ರಕಾಳಿಯ ಕುರಿತು ಇನ್ನೊಂದು:

    ನಿದ್ರೆಯೊಳ್ ಮರೆತೊಮ್ಮೆ ‘ಅವಳ’ ಹೆಸರುಸಿರಲದು
    ಮುದ್ರಿಸುವುದೇ ‘ಇವಳ’ ಕಿವಿಯಮೇಲೆ!
    ರೌದ್ರರೂಪವ ತಳೆದ ಸತಿಯಬ್ಬರಕೆ ನಡುಗಿ
    ಭದ್ರಕಾಳಿಯೆ ಬೆದರಿ ಮಾಯವಾದಳ್

    ಸೂ: ಇದು ಸ್ವಾನುಭವವಲ್ಲ, ಸುಮ್ಮನೆ ತಮಾಷೆಗೆ 🙂

    • ಅವಳಿವಳ ಕಳವಳವ ತಳಮಳವನೋದುತಲಿ
      ಸವತಿಮತ್ಸರಕಿಂದು ಗಳಗಳಿಸುವೆ 🙂

  10. ಮಂಜುನಾಥರೇ,
    ಇತ್ತೀಚೆಗೆ ನಿಮ್ಮ ಕವನಗಳನ್ನು ಪದ್ಯಪಾನದಲ್ಲಿ ನೋಡುತ್ತಿದ್ದೇನೆ. ನಿಮ್ಮ ವಿಮರ್ಶೆ ಹಾಗು ಸೂಚನೆಗಳೂ ಕೂಡ ಬಹಳ ಚೆನ್ನಾಗಿರುತ್ತವೆ. ನಿಮ್ಮ ಭಾಗವಹಿಸುವಿಕೆಯಿಂದ ಪದ್ಯಪಾನದ ಅಂದ ಹೆಚ್ಚಿದೆಯೆಂದರೂ ಅತಿಶಯೋಕ್ತಿಯಾಗಲಾರದು ಎಂದುಕೊಳ್ಳುತ್ತೇನೆ. ಹೀಗೆಯೇ ನಿಮ್ಮಂದ ರಸಪಾಕ ಮುಂದುವರೆಯಲಿ. ಆದರೆ ನೀವು ಪ್ರಾರಂಭಿಸಿದ “ಕರ್ಣಾಟ ಭಾರತ ಕಥಾಮಂಜರಿ”ಯನ್ನು ಅರ್ಧಕ್ಕೇಕೆ ನಿಲ್ಲಿಸಿದ್ದೀರೆಂದು ಅರ್ಥವಾಗಲಿಲ್ಲ. ದಯಮಾಡಿ ಅದರ ಉಳಿದ ಭಾಗಗಳನ್ನು ಪೂರೈಸುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿ. ಧನ್ಯವಾದಗಳೊಂದಿಗೆ.

    • ಶ್ರೀಧರರೇ, ನಿಮ್ಮ ಅಭಿಮಾನಕ್ಕೆ ಧನ್ಯವಾದ.

      ಹೌದು, ಕರ್ಣಾಟಭಾರತ ಕಥಾಮಂಜರಿಯ ನಮ್ಮ ಯೋಜನೆ ನೆನೆದಾಗಲೆಲ್ಲಾ ಅದೊಂದು ರೀತಿಯ ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತದೆ. ವಿಪರೀತ ವೈಯಕ್ತಿಕ ಕೆಲಸದೊತ್ತಡದ ಕಾರಣ ಇದರೆಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಅನೇಕ ಉತ್ಸಾಹಿಗಳು ಸಂಗ್ರಹಿಸಿ ಕಳುಹಿಸಿದ ಸುಮಾರು ೨-೩ ಸಂಧಿಗಳಷ್ಟು ಸಾಹಿತ್ಯ ಕರಡು ತಿದ್ದುವಿಕೆಗಾಗಿ ನನ್ನ ಬಳಿ ಬಾಕಿಯಿದೆ. ಇದರ ಕಡೆ ಆದಷ್ಟು ಬೇಗ ಗಮನ ಹರಿಸಬೇಕೆಂದು ನನ್ನ ಆಶೆ ಕೂಡ. ಪ್ರಯತ್ನಿಸುತ್ತೇನೆ.

  11. ಚಂದ್ರ ಪ್ರಭೆ ಭುವಿಯಲ್ಲಿ ಚಂದದಿಂ ಬೆಳಗಿರಲು
    ಚಂದ್ರಧರನೇ ಬಂದನೆಂದು ತಿಳಿದು |
    ರುದ್ರನರ್ತನದಲ್ಲಿ ಹೀನಾಯ ಸೋಲುಂಡ
    ಭದ್ರಕಾಳಿಯು ಬೆದರಿ ಮಾಯವಾದಳ್ ||

    ಶಿವನೊಡನೆ ನಾಟ್ಯದಲ್ಲಿ ಸೋತ ಕಥೆ ಇಲ್ಲಿದೆ :: http://en.wikipedia.org/wiki/Kali

  12. ಕ್ಷುದ್ರವಾಮಾಚಾರಿಯುಗ್ರತಪವಂಗೈದು
    ತದ್ರೂಪವಂ ಪಡೆದು ಕಾಳಿಯಾಗೆ
    ರುದ್ರಕೋಪವ ತೋರೆ ದಿಟದ ದೇವಿಯು ಕಳ್ಳ-
    ಭದ್ರಕಾಳಿಯು ಬೆದರಿ ಮಾಯವಾದಳ್

    ಹಳೆ ಹೊಸಗನ್ನಡಗಳು ಮಿಶ್ರವಾಗಿವೆ.ಮೂರನೆಯ ಸಾಲಲ್ಲಿ ರುದ್ರಕೋಪವ(ನ್ನು) ಎನ್ನುವಲ್ಲಿ ರುದ್ರಕೋಪಂ(ಪ್ರಥಮಾ) ಮಾಡಬಹುದೇ? ಎರಡನೆಯ ಸಾಲಿನಲ್ಲಿರುವ ಕಾಳಿಯಾಗೆ ಹಾಗೂ ಮೂರನೆಯ ಸಾಲಿನ ತೋರೆ ಎನ್ನುವ ಪ್ರಯೋಗಗಳು ಹಳಗನ್ನಡದಲ್ಲಿ ಸಾಧುವೇ? ಬೇರೇನಾದರೂ ತಪ್ಪುಗಳಿದ್ದಲ್ಲಿ(ಹಾಗೂ ಪ್ರಸ್ತುತ ತಪ್ಪುಗಳನ್ನು ತಿದ್ದುವ ವಿಧಾನವನ್ನೂ) ದಯವಿಟ್ಟು ತಿಳಿಸಿ.

    • ಕ್ಷುದ್ರವಾಮಾಚಾರಿಯುಗ್ರತಪಮಂ ಗೈದು
      ತದ್ರೂಪಮಂ ಪಡೆದು ಕಾಳಿಯಾಗೆ
      ರುದ್ರಕೋಪಂದೋರೆ ದೇವಿಯಾಗಳ್ ಮಿಥ್ಯೆಯೀ
      ಭದ್ರಕಾಳಿಯು ಬೆದರಿ ಮಾಯವಾದಳ್

      ಮೂಲಸಮಸ್ಯಾಪಾದದಲ್ಲಿಯೇ ಹಳಗನ್ನಡ ಶಿಥಿಲವಾಗಿದೆ. ಆದರೂ ತಮ್ಮ ತಿಳಿವಳಿಕೆಗಾಗಿ ತಿದ್ದಿದ ಪದ್ಯ ಹಾಕಿದ್ದೇನೆ. ತಮ್ಮ ಸಂಶಯಗಳಲ್ಲದೇ ಕಳ್ಳ-ಭದ್ರಕಾಳಿ ಅರಿಸಮಾಸವಾಗುತ್ತದಾದ್ದರಿಂದ, ಬದಲಾಯಿಸಿದ್ದೇನೆ. ದಿಟದ ದೇವಿ ಅನ್ನುವ ಆವಶ್ಯಕತೆ ಇಲ್ಲ. ದೇವಿ ಎಂಬುದೇ ನಿಜಾರ್ಥವನ್ನು ಕೊಡಬಲ್ಲುದು.

      • ಧನ್ಯವಾದಗಳು ಸರ್ _/_. ನಿಮ್ಮ ಪದ್ಯದ ಮೂರನೆಯ ಪಾದದಲ್ಲಿ ಎರಡು ಮಾತ್ರೆ ಜಾಸ್ತಿಯಾಗಿದೆಯಲ್ಲವೇ?
        ಬಹುಶಃ ಹೀಗೂ ಮಾಡಬಹುದೆನ್ನಿಸುತ್ತದೆ. ತಪ್ಪಿದ್ದರೆ ತಿಳಿಸಿ

        ರುದ್ರಕೋಪಂದೋರೆ ಮಹದೇವಿಯಾಕ್ಷುದ್ರ(ಕಪಟ)
        ಭದ್ರಕಾಳಿಯು ಬೆದರಿ ಮಾಯವಾದಳ್

        • ಸರ್ವಂ ಬಲವತಾಂ ಪಥ್ಯಂ!

          • ಪ್ರಸಾದರೇ, ನನ್ನ ಕಳೇಬರವನ್ನು ಕಾಣದ ಅನಂತರಿಗೆ ಈ ರೀತಿ ಬೆದರಿಕೆ ತೋರಿಸಬಾರದು. ಅದನ್ನು ಕಂಡ ನಿಮಗಾದರೂ ಗೊತ್ತಿರಬೇಕಿತ್ತು ನಾನೆಷ್ಟು ಬಲವತ್ತೆಂಬುದು!

        • ಓಹ್ ಹೌದು. ಆದರೆ ಮಹದೇವಿ ಶುದ್ಧರೂಪವಲ್ಲ. ರುದ್ರಕೋಪಂದೋರಲಾ ದೇವಿ ಮಿಥ್ಯೆಯೀ… ಎಂದು ತಿದ್ದಬಹುದು 🙂 ಆ ಈ ಎಂಬ ಸ್ಪಷ್ಟ ನಿರ್ದೇಶನವೂ ಸಿಗುತ್ತದೆ.

          • ಇಬ್ಬರಿಗೂ ಧನ್ಯವಾದಗಳು 🙂
            ಅಂತೂ ಮೂಲಸಮಸ್ಯೆಯೊಂದೇ ಅಲ್ಲದೆ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆದ ಪೂರಣ ಇಲ್ಲಿದೆ.

            ಕ್ಷುದ್ರವಾಮಾಚಾರಿಯುಗ್ರತಪಮಂ ಗೈದು
            ತದ್ರೂಪಮಂ ಪಡೆದು ಕಾಳಿಯಾಗೆ
            ರುದ್ರಕೋಪಂದೋರಲಾ ದೇವಿ ಮಿಥ್ಯೆಯೀ
            ಭದ್ರಕಾಳಿಯು ಬೆದರಿ ಮಾಯವಾದಳ್

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)