Apr 142011
 

ಹಲಸು ಮಾವುಗಳೆಂಬ ಹಣ್ಣುಗ –
ಳಿಳೆಯ ಸೊಗಸುಗಳಲ್ಲಿ ಶ್ರೇಷ್ಠವ –
ದುಳಿದ ರುಚಿಗಳನೆಲ್ಲ ಬಡಿಯುತ ನರ್ತಿಪುದು ಮುದದಿ ||
ಚಳಿಯು ಮುಗಿಯುವ ಕಾಲ ಬಂದೊಡೆ
ಸೆಳೆಯುತೆಲ್ಲರ ತಮ್ಮೆಡೆಗೆ ಮನು –
ಕುಲದ ಜಿಹ್ವೋದರಗಳನ್ನಾಳುತಲಿ ನಿರ್ಭಯದಿ || ೧ ||

ಬದಿಗೆ ಪಾಕಗಳೆಲ್ಲ ಸರಿಯಲಿ
ಕದದ ಹಿಂದೋಡಡಗಿಕೊಳ್ಳಲಿ
ಸದೆದಹಂಗಳ ತಳೆದ ಮೌನವು ನಾಕು ತಿಂಗಳನಕ ||
ಕದಡಿ ಸಿಹಿಯುಳಿಯಾ ಸಮಾಗಮ –
ವದಕದಮೃತವ ಭೂರಿ ಭರಿಸಿದ
ಪದಗಳೀ ಹಣ್ಣುಗಳ ತಳದಲಿ ಬಾಳ್ವೆ ಸಾಕವಕೆ || ೨ ||

ಬೊಕ್ಕೆ ಹಲಸನು ಜಗೆವ ಕಾತರ
ಚೆಕ್ಕೆ ರಸಗಳ ಸವಿಯು ಮುಂದಿರೆ
ಹೆಕ್ಕಿ ತೆಗೆಯುವ ಚಾಕರಿಯದೆಷ್ಟಿದ್ದರೇನಹಹ ||
ಉಕ್ಕಿ ಹರಿವ ಪಚನ ರಸಂಗಳ
ದಕ್ಕಿಸಲುವೇಂ ಹಸಿವ ಹಲಸುಂ
ಲೆಕ್ಕ ಮೀರಿದ ಮೌಲ್ಯವದು ತನಿರಸಗಳೌತಣವು || ೩ ||

ಕಚ್ಚಿ ಮಾವನು ತಿನ್ನುವಾ ಪರಿ
ಸ್ವಚ್ಚ ನೆಕ್ಕಿ ಮೊಳಕೈಗಳನಕ
ಹೆಚ್ಚಿ ತಿನ್ನುವ ತಾಳ್ಮೆಯಾದರೊ ನಮಗೆ ಬಲು ಕಷ್ಟ ||
ಕೊಚ್ಚಿ ಮಾಡಿದ ಶೀಕರಣಿಗಳು
ಗಚ್ಚಲರಡಿದ ಮಾವಿನಪ್ಪಳ
ಬೆಚ್ಚನೆಯ ಋತುವಿನಲಿ ಮಾವುಗಳಿರದ ದಿನವೇಕೆ? || ೪ ||

ಮಾವ ಜಾತಿಯೆ – ತೋತ, ರಸ, ಮಲ –
ಗೋವ, ಹಾಪುಸ, ಮಾಣಿ, ಮಲಿಕವೊ
ಯಾವುದಿರಲೀಶಾಡೊ ಗಾಂಟಿಯೊ, ಇವೆಲ್ಲವೆಮಗಮೃತ ||
ಮಾವಿನಣ್ಣಿನ ಸುಖವೆ ಮಿಗಿಲು
ಮಾವನೆಣ್ಣಿನ ಭೋಗ ರಾಸಕೆ
ಯಾವ ತಡೆಯಿಲ್ಲದೆಯೆ ದಕ್ಕುವುದಾತ್ಮ ತೃಪ್ತತೆಯು || ೫ ||

ಮಾವಿನಾನಂದವನು ಬಣ್ಣಿಸ –
ಲಾವ ಭಾಷೆಯ ಸೃಷ್ಟಿ ಮಾಡಲ –
ದಾವ ಪದಗಳ ಹುಡುಕಿ ತರಲೀ ಮಿತದ ಧರಣಿಯಲಿ ||
ಭಾವಕೆಡೆಗೊಡದೆಯೆಲೆ ಸವಿಯುವೆ ಮಿತದ ಸಮಯದಲಿ [… ಸೀಮಿತದ ಸಮಯದಲಿ] || ೬ ||

* ಕೊನೆಯ ಪದ್ಯ ಖಂಡ ಭಾಮಿನಿಯಲ್ಲಿದೆ

– ರಾಮಚಂದ್ರ

  7 Responses to “ಹಲಸು – ಮಾವು”

  1. ಆಹಾ ಮಾವು ಹಲಸು ಚಪ್ಪರಿಸುವಂತಹ combination 🙂

  2. maavigU ondu padya ittiddare….anta annistade..

    muddaada padyagalu…

  3. ಕಣಾದ :: ನಿಮ್ಮ ಅನಿಸಿಕೆಯಂತೆಯೇ ಮಾವಿನ ಬಗ್ಗೆ ಎರಡು ಪದ್ಯಗಳನ್ನು ಜೋಡಿಸಿದ್ದೇನೆ. ಫದ್ಯಗಳು ಇಂತಿವೆ ::

    ಕಚ್ಚಿ ಮಾವನು ತಿನ್ನುವಾ ಪರಿ
    ಸ್ವಚ್ಚ ನೆಕ್ಕಿ ಮೊಳಕೈಗಳನಕ
    ಹೆಚ್ಚಿ ತಿನ್ನುವ ತಾಳ್ಮೆಯಾದರೊ ನಮಗೆ ಬಲು ಕಷ್ಟ ||
    ಕೊಚ್ಚಿ ಮಾಡಿದ ಶೀಕರಣಿಗಳು
    ಗಚ್ಚಲರಡಿದ ಮಾವಿನಪ್ಪಳ
    ಬೆಚ್ಚನೆಯ ಋತುವಿನಲಿ ಮಾವುಗಳಿರದ ದಿನವೇಕೆ? || ೪ ||

    ಮಾವ ಜಾತಿಯೆ – ತೋತ, ರಸ, ಮಲ –
    ಗೋವ, ಹಾಪುಸ, ಮಾಣಿ, ಮಲಿಕವೊ
    ಯಾವುದಿರಲೀಶಾಡೊ ಗಾಂಟಿಯೊ, ಇವೆಲ್ಲವೆಮಗಮೃತ ||
    ಮಾವಿನಣ್ಣಿನ ಸುಖವೆ ಮಿಗಿಲು
    ಮಾವನೆಣ್ಣಿನ ಭೋಗ ರಾಸಕೆ
    ಯಾವ ತಡೆಯಿಲ್ಲದೆಯೆ ದಕ್ಕುವುದಾತ್ಮ ತೃಪ್ತತೆಯು || ೫ ||

  4. ಭರದಿ ಸಾಗಿದೆ ಚೂತಷಟ್ಪದಿ
    ಸರಿಯೆ, ನಾಲ್ಕೈದನೆಯ ಪದ್ಯಗ
    ಳೊರೆಯೆ ಸುಲಭದಿ ’ನಣ್ಣು’’ನೆಣ್ಣ’ನು ಹಣ್ಣುಮಾಡಿಸಿರಿ

  5. ಮೌಳಿಯವರೆ ::

    ಹಣ್ಣು ಮಾಡುವುದೆಂತು ’ನೆಣ್ಣ’ನು ?
    ’ನಣ್ಣ’ದುಪಯೋಗವದು ತಪ್ಪೇ ?
    ಕಣ್ಣು ಬಿಡುತಿಹೆ ಸಲಹೆ ತಿಳಿಯದೆ ಕೊಂಚ ವಿಸ್ತರಿಸಿ ||

  6. ಯಾವಪದ ಪದ್ಯಕ್ಕೆ ಮಾತಿಗ
    ದಾವಪದಸರಿ ತಿಳಿದು ಬಳಸಲು
    ಮಾವಿನಣ್ಣದುಮಾತಿಗೇಸರಿ ’ಹಣ್ಣು ತಾನೀಗ‘.
    "ಮಾವು ಹಣ್ಣಾದಂತೆ ರಸರುಚಿ
    ಮಾವನಣುಗಿಯ ಸರಸ ರಾಸದ
    ಭಾವಸೌಖ್ಯರಸಪ್ರವಾಹಸ್ವೇಛ್ಚೆ ನಿಜತೃಪ್ತಿ"

Leave a Reply to K.B.S Ramachandra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)