Sep 032011
 

ಸ್ನೇಹಿತರೇ,

ಇನ್ನೊಂದು ಸಮಸ್ಯೆ…

“ಅದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ”

ನಾಳೆ ಭಾನುವಾರವಿದೆ… ಎಲ್ಲರು ಪ್ರಯತ್ನಿಸಬೇಕಾಗಿ ವಿನಂತಿ 🙂

ನಾಳೆ ರಾತ್ರಿ ನನ್ನ ಪರಿಹಾರ post ಮಾಡುತ್ತೇನೆ

  14 Responses to “ಅದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ”

  1. ಮದನ ಕ್ರೀಡೆಯಲಿದ್ದ ಕ್ರೌಂಚಗ –
    ಳದುರಿ ಬಿದ್ದವು ಬೇಡನಾಟಕೆ
    ಅದನು ನೋಡಿದ ಮುನಿಯ ಮನಸಿನಲುರಿದ ಕ್ಷೋಭಾಗ್ನಿ |
    ಉದಿತ ಶಾಪದ ಮನನ ಜನ್ಯದ
    ಸದಯ ಕೋಮಲ ಭಾವ ಲೀಲಾ
    ಕದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ ||

  2. ರಾಮ್ :),
    ವಾಲ್ಮೀಕಿಯ ಮನದಲ್ಲಿ ಉರಿದ ಕ್ಷೋಭೆ ಮತ್ತು ಕರುಣೆ, ಶಾಪ… ಬಹಳ ಚೆನ್ನಾಗಿ ಎಲ್ಲವನ್ನು ಪರಿಹಾರದಲ್ಲಿ ತರಿಸಿದ್ದೀರ. ಈ ಎಲ್ಲ ಮಿಶ್ರ ಭಾವಗಳ ತೀವ್ರತೆಯಿಂದ ಮೊದಲ ಶ್ಲೋಕವು ಬಂದಿತು ಎಂದು ತೋರಲು "ಕದರಿನೊಳು" ಎನ್ನುವ ಪ್ರಯೋಗವು ಚೆನ್ನಾಗಿದೆ

    ಬಹಳ ಚೆನ್ನಾಗಿದೆ!

    • ಸೋಮ,
      ರಾಮಚಂದ್ರ ’ಕದಿರ್’ ಎಂದಿದ್ದಾರೆ. ನೀವು ’ಕದರ್’ ಎಂದಿದ್ದೀರಿ! ಇದು ಯಾರ ಕದರ್? ವಾಲ್ಮೀಕಿಯದೋ? ರಾಮಚಂದ್ರರದೋ? ನಿಮ್ಮದೋ? ನನ್ನದೋ?

  3. ಸದೆಯೆ ರಾವಣವಾಲಿಯಂತ್ಯವು,
    ಮುದವು ಸೀತೆಯಮನಕೆಯೆನೆ ಶಕು-
    ನದಲಿ ತೋರಲು ರಾಮವಾನರ ಮಿಲನಘಟನೆಯೊಳು
    ಮದದ ವಾಲಿಯ, ಮೈಥಿಲಿಯ, ಮಾ-
    ಯದಲಿ ಕದ್ದೊಯ್ದವನ ಎಡಗ-
    ಣ್ಣದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ

    ಎಡಗಣ್ಣದಿರಿನೊಳು – ಎಡಗಣ್ಣ ಅದಿರುವಿಕೆಯೊಳು
    ರಾವಣವಾಲಿ ಅಂತ್ಯವು – ರಾವಣನ ಮತ್ತು ವಾಲಿಯ ಅಂತ್ಯವು

    ಶತಾವಧಾನಿಯವರ ಧ್ವನಿಸುರುಳಿಗಳನ್ನು ಕೇಳುತ್ತಿದ್ದಾಗ ಈ ವಸ್ತು ಗೊತ್ತಾಯಿತು.
    ಎಡಗಣ್ಣ ಅದಿರುವಿಕೆ ರಾಮ ಮತ್ತು ಸುಗ್ರೀ ವಾದಿ ವಾನರರ ಭೇಟಿಯಾದಾಗ ೩ ಮಂದಿಗೆ ಆಯಿತು ರಾವಣನಿಗೆ, ವಾಲಿಗೆ ಮತ್ತು ಸೀತೆಗೆ. ಎಡಗಣ್ಣದಿರುವುದು ಗಂಡಿಗೆ ಅಶುಭ ಹೆಣ್ಣಿಗೆ ಶುಭಾದಾಯಕವು ಎಂಬುದು ಶಕುನ 😉

    ಬೇರೆಯ ಪರಿಹಾರಗಳನ್ನೂ ಕಳುಹಿಸಿ

  4. ಒಳ್ಳೆಯ ಪರಿಹಾರಗಳು. ವಿಶೇಷತಃ ರಾಮಚಂದ್ರ ಅತಿತ್ವರೆಯಿಂದಲೇ ಪೂರಣ ಮಾಡಿದ್ದಾರೆ, ಸೋಮ ಮಾಡಿದ ನಿರೀಕ್ಷೆ ಸಫಲವಾಗಿದೆ:-)
    ಸ್ವಲ್ಪ ಸವರಣೆ:
    ಮದನಕೇಳಿಯೊಳಿದ್ದ ಕೊಂಜೆಗ-
    ಳದುರಿ ಬಿದ್ದುವು….
    ………….
    ………….
    ………..ಲೀಲೆಯ
    ಕದಿರಿನಲಿ…..

    ಇನ್ನೊಂದು ಪದ್ಯದಲ್ಲಿ;

    ಮುದವು ಸೀತೆಯ ಮನಕೆನಲು ಶಕು-
    ನದ………

    ಹೀಗೆ ಮಾಡಿದರೆ ಅರಿಸಮಾಸಗಳೂ ಅರಿಸಂಧಿಗಳೂ ಎಣೆಮೀರಿದ ಶಿಥಿಲದ್ವಿತ್ವಗಳೂ ಬಾರದೆ ಪದ್ಯದ ಬಂಧಗುಣವೂ ಅಂದ-ಚಂದಗಳೂ ಸೊಗಯಿಸುತ್ತವೆಂಬುದು ನನ್ನ ಅಭಿಮತ.

  5. ಗಣೇಶ್ – ಧನ್ಯವಾದಗಳು. ಈಗ, ಶಿಥಿಲದ್ವಿತ್ವದ ತಿಳುವಳಿಕೆ ಸ್ವಲ್ಪ ಸರಿಯಾಗಿ ಆಯಿತು. ೩ನೇ ಸಾಲಿನಲ್ಲಿ "ಕ್ಷೋಭಾಗ್ನಿ" ಎನ್ನುವಲ್ಲಿ ಕೂಡ ಹಾಗೇ ಆಗಿದೆ ಅನ್ನಿಸುತ್ತದೆ. ಅದನ್ನೂ ಸರಿಮಾಡಿದ್ದೇನೆ. ಅರಿಸಮಾಸದ ಹಿಡಿತ ಇನ್ನೂ ಸಾಕಷ್ಟು ಬಂದಿಲ್ಲ ಅನ್ನಿಸುತ್ತದೆ. ಬದಲಾಯಿಸಿದ ಪದ್ಯವನ್ನು ಹೀಗೆ ಓದಬಹುದು ::

    ಮದನಕೇಳಿಯೊಳಿದ್ದ ಕೊಂಜೆಗ –
    ಳದುರಿ ಬಿದ್ದವು ಬೇಡನಾಟಕೆ
    ಅದನು ನೋಡಿದ ಮುನಿಯ ಮನಸಿನಲುರಿದ ಶೋಕಾಗ್ನಿ |
    ಉದಿತ ಶಾಪದ ಮನನ ಜನ್ಯದ
    ಸದಯ ಕೋಮಲ ಭಾವ ಲೀಲೆಯ
    ಕದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ ||

  6. ಸಾರ್,

    > ಸೋಮ ಮಾಡಿದ ನಿರೀಕ್ಷೆ ಸಫಲವಾಗಿದೆ:-)
    🙂 ಧನ್ಯವಾದಗಳು ಸಾರ್

    ನೀವು ಹೇಳಿದ ಹಾಗೆ ಸರಿಪಡಿಸಿದ್ದೇನೆ

    ಸದೆಯೆ ರಾವಣವಾಲಿಯಂತ್ಯವು,
    ಮುದವು ಸೀತೆಯಮನಕೆನಲು ಶಕು-
    ನದಲಿ ತೋರಲು ರಾಮವಾನರ ಮಿಲನಘಟನೆಯೊಳು
    ಮದದ ವಾಲಿಯ, ಮೈಥಿಲಿಯ, ಮಾ-
    ಯದಲಿ ಕದ್ದೊಯ್ದವನ ಎಡಗ-
    ಣ್ಣದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ

  7. ಸೋಮರವರೇ,
    ನಿಮ್ಮ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರಗಳು ನಿಮ್ಮ ಬಳಗದಿಂದ ಚೆನ್ನಾಗಿ ಮೂಡಿಬರುತ್ತಿವೆ. ಅವನ್ನು ಸರಿಪಡಿಸಲು ಸಲಹೆ ಸೂಚನೆಗಳನ್ನು ಕೊಡುತ್ತಿರುವುದು ಶ್ರೀಯುತ ಶತಾವಧಾನಿ ಡಾ! ಗಣೇಶರೇ ಎಂದು ಕೊಳ್ಳುತ್ತಿದ್ದೇನೆ. ಹೀಗೆ ನಿಮ್ಮನ್ನು ರೂಪಿಸಿ ಕಾವ್ಯಗಳನ್ನು ಒಡಮೂಡಿಸಿ ಕಾವ್ಯ-ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರೇರಕ ಶಕ್ತಿಯಾಗಿರುವ ಅವರಿಗೆ ಕನ್ನಡಿಗರೆಲ್ಲರ ಪರವಾಗಿ ನನ್ನ ನಮನಗಳು.

  8. ಇದು ಮಕರ ಅವರ ಪಾಲಿಗೆ ಸಲ್ಲುವ ಪದ್ಯ. ಅವರೇ ಉತ್ತರಿಸುವ ಕೃಪೆ ಮಾಡಬೇಕು:
    ಮಕರಾಂಕಿತದಿಂ ಮರೆಯಿಸಿ
    ಸುಕರಾಂಕಿತಮಂ ಕವಿತ್ವವೈನೋದಿಕದೀ
    ಪ್ರಕರಕೆ ಬಂದವರಾರೊ? ಹಿ-
    ಮಕರಂ ಮೋಡಗಳ ಮುಸುಕನೋಸರಿಸೆ ಸೊಗಂ!!
    ರಾಮಚಂದ್ರ ಅವರಿಗೆ:

    ಇದೀಗ ಪದ್ಯ ೯೯% ಅನವದ್ಯವಾಗಿದೆ. ಕೇವಲ ೧% ತಿದ್ದುಪಡಿ;
    "ಬೇಡನಾಟಕೆ ಅದನು ನೋಡಿದ" ಎಂಬುದಕ್ಕೆ ಬದಲಾಗಿ
    ’ಬೇಡನಾಟಕ್ಕದನು ನೋಡಿದ’ ಎಂದು ಸವರಣೆ ಮಾಡಿದರೆ ಸಾಕು.
    ಏಕೆಂದರೆ ಪದ್ಯದಲ್ಲಿ ಎಲ್ಲಿಯೂ ವಿಸಂಧಿಯಿರಬಾರದೆಂದು ನಿಯಮ. ಗದ್ಯಕ್ಕೆ ಈ ವ್ರತವಿಲ್ಲ:-)ವಿಸಂಧಿದೋಷದಿಂದ ಪದ್ಯದಲ್ಲಿ ಜಾಳುತನ ಬರುತ್ತದೆಂದು ಆಲಂಕಾರಿಕರ ಅಭಿಮತ.

  9. ಗಣೇಶರಿಗೆ ::
    ಸೂಕ್ಷ್ಮ ಸವರಣೆಗೆ ( fine polishing ) ಧನ್ಯವಾದಗಳು. ಈಗ ಪದ್ಯ ನನಗೇ ಅಚ್ಚುಮೆಚ್ಚಾಗುವಂತಾಯಿತು [ಈ ಪದ್ಯದ ಗುಂಗು ಹಿಡಿದಿದೆ] 🙂

    ಒಂದು ಸಂಶಯ. ಮೊದಲೆರಡು ಸಾಲುಗಳೂ ಕೂಡ ಮುಂದಿನ ಸಾಲಿಗೆ ಜೋಡಣೆಯಾಗಿವೆ. ಇದರಿಂದ ಓದುವುದಕ್ಕೆ ಸ್ವಲ್ಪ ಹೆಚ್ಚು ಉಸಿರು ಬೇಕಾಗುತ್ತದೆ. ಹೀಗಿರುವುದು ಒಳ್ಳೆಯ ಶೈಲಿಯೋ ಹೇಗೆ? ಅಥವಾ ಈ ರೀತಿ ಆಗದಂತೆ ಪ್ರಯತ್ನ ಮಾಡಬೇಕೋ ಹೇಗೆ?

    ಬದಲಾಯಿಸಿದ ಪದ್ಯ ಈ‌ಕೆಳಗಿನಂತಿದೆ ::
    ಮದನಕೇಳಿಯೊಳಿದ್ದ ಕೊಂಜೆಗ –
    ಳದುರಿ ಬಿದ್ದವು ಬೇಡನಾಟ –
    ಕ್ಕದನು ನೋಡಿದ ಮುನಿಯ ಮನಸಿನಲುರಿದ ಶೋಕಾಗ್ನಿ |
    ಉದಿತ ಶಾಪದ ಮನನ ಜನ್ಯದ
    ಸದಯ ಕೋಮಲ ಭಾವ ಲೀಲೆಯ
    ಕದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ ||

  10. ಶ್ರೀಯುತ ಶತಾವಧಾನಿ ಡಾ! ಗಣೇಶರೇ ನನ್ನಂಥ ಸಾಮಾನ್ಯನ ಬಗ್ಗೆಯೂ ಅಸಾಮಾನ್ಯ ಅಕ್ಕರೆಯಿಂದ ಕವಿತೆ ರಚಿಸಿದ್ದೀರ ಅದು ತಮ್ಮಂಥವರಿಗೇ ಸಾಧ್ಯ. ನಾನೇನೂ ಹೇಳಿಕೊಳ್ಳುವಂಥಹ ವಿಶೇಷ ವ್ಯಕ್ತಿತ್ವದವನೇನೂ ಅಲ್ಲ, ಕೇವಲ ಕನ್ನಡದ ಬಗ್ಗೆ ಅಭಿಮಾನವಿರುವವನಷ್ಟೇ! ಚಂದನ ಧಾರಾವಾಹಿಯಲ್ಲಿ ಪ್ರಸಾರವಾದ ಮೃಚ್ಛಕಟಿಕದ ಚರ್ಚಾ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡುವ ಸೌಭಾಗ್ಯ ಈಗ ಭಾಗ್ಯನಗರ-ಹೈದರಾಬಾದಿನಲ್ಲಿ ನಿವಾಸವಾಗಿರುವ ನನಗೆ ಒದಗಿ ಬಂದಿತ್ತು. ಹಾಗೆಯೇ ಕನ್ನಡದ ಬ್ಲಾಗುಗಳನ್ನು ತಿರುವಿ ಹಾಕುತ್ತಿದ್ದವನಿಗೆ ಈ ಬ್ಲಾಗ್ ಕಣ್ಣಿಗೆ ಬಿದ್ದು ಅದರಲ್ಲಿ ಮನಸೂರೆಗೊಳ್ಳುವ ವಿವಿಧ ರೀತಿಯ ಪದ್ಯಗಳನ್ನು ಓದಿ ಆನಂದಿಸುತ್ತಿರುತ್ತೇನೆ; ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ ಏನು ಹೇಳಬೇಕೋ ತೋಚುತ್ತಿಲ್ಲ! ನನ್ನ ನಿಜ ನಾಮಧೇಯ ಶ್ರೀಧರ್ ಬಂಡ್ರಿ ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವನು; ವೃತ್ತಿಯಲ್ಲಿ ಕೃಷಿ ಸಂಶೋಧನಾ ಸಲಹೆಗಾರ. ಹೈದರಾಬಾದಿನಲ್ಲಿ ವಾಸ್ತವ್ಯವಿರುವ ಕರ್ನಾಟಕ ಮೂಲದ ಕೃಷಿ ವೃತ್ತಿಪರರ ಒಂದು ಸಂಘವನ್ನು ಏರ್ಪಡಿಸಿಕೊಂಡಿದ್ದೇವೆ – KAPA (Karnataka Agri Professionals Association). ಇದು ನನ್ನ ಸಂಕ್ಷಿಪ್ತ ಪರಿಚಯ. ನೀವು ಹೈದರಾಬಾದಿಗೆ ಕಾರ್ಯನಿಮಿತ್ತ ಬಂದಾಗ ನಿಮ್ಮನ್ನು ಭೇಟಿಯಾಗುವ ಸದವಕಾಶವನ್ನು ಒದಗಿಸಿಕೊಡಿ. ನನ್ನ ಈ-ಮೇಲ್ ವಿಳಾಸ: sridharbandri@gmail.com ಮತ್ತು ನನ್ನ ಮೊಬೈಲ್ ಸಂಖ್ಯೆ:
    (೦)೯೧೭೭೩-೯೯೪೬೩. ನಿಮಗೆ ಮತ್ತೊಮ್ಮೆ ನನ್ನ ನಮನಗಳು.

  11. ನಮಸ್ಕಾರ ಶ್ರೀಧರ್,

    ಕಾವ್ಯ ಕುತೂಹಲ ಬ್ಲಾಗ್ ಬಗ್ಗೆ ನಿಮ್ಮ ಆಸಕ್ತಿಗೆ ಧನ್ಯವಾದಗಳು 🙂

  12. ಮಕರ(ಶ್ರೀಧರ್) ಅವರಿಗೆ ಪ್ರತ್ಯೇಕವಾಗಿ ಬರೆಯುತ್ತೇನೆ. ನನ್ನ ಮಿಂಚೆಯಿಂತಿದೆ:
    avadhaniganesh@gmail.com
    ರಾಮ್, ನೀವೆಂದಂತೆ ಉಸಿರು ಹಿಡಿಯುವ ಹಾಗೆ ಓದುವ ಪದ್ಯವೇ ಕನ್ನಡದ ಸಾಂಪ್ರದಾಯಿಕಕವಿತೆಯ ಲಕ್ಷಣ:-) ಆದರೆ ಪದ್ಯದ ಗತಿಯನ್ನು ಹಿಡಿದು ಓದಿದರೆ ಉಸಿರು ಹಿಡಿಯದು.
    ಕಾವ್ಯರಸವೊಸರುತ್ತಲಿರೆ ಕವಿ-
    ಸೇವ್ಯವದು ಸಂಭಾವ್ಯವದು ಮಂ-
    ತವ್ಯವದು ಪರಿಪರಿಯಲಂಕೃತಿಲೇಹ್ಯಮೋಹಕವು
    ದಿವ್ಯನಿಬಿಡತೆಯಿರ್ಪ ಪದ್ಯವ-
    ನವ್ಯವಹಿತವಿಧಾನದಿಂ ನೀಂ
    ಸವ್ಯವಾಗಿಯೆ ಪಠಿಸೆ ಗಂಟಲು ಹಿಡಿಯದೆಂದೆಂದೂ
    (ಪದ್ಯವನು+ಅವ್ಯವಹಿತ(=ತಡೆಯಿಲ್ಲದೆ)ಎಂದು ಪದಚ್ಛೇದ ಮಾಡಿಕೊಳ್ಳಬೇಕು)

  13. तस्याभ्याशे तु मिथुनं चरन्तमनपायिनं। ददर्श भगवान्स्तत्र क्रौंचयोश्चारुनिस्स्वनं। ಇದರಿಂದ ಪ್ರೇರಿತನಾಗಿ ’ಅದಿರೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ’ಯನ್ನು ಪರಿಹರಿಸಿದ್ದೇನೆ (ಆದ್ಯಕ್ಷರ ಪ್ರಾಸ ಪಾಲಿಸಿಲ್ಲ). ಭಾಮಿನಿಯ ಸಾಲನ್ನು ಪಂಚಮಾತ್ರಾಗಣಕ್ಕೆ ಅಳವಡಿಸಿಕೊಳ್ಳುವ ಸಲುವಾಗಿ ಒಂದಕ್ಷರವನ್ನು (ಯು) ಸೇರಿಸಿಕೊಂಡಿದ್ದೇನೆ.

    ಪರಿಕಿಸುತೆ ಕೊಂಜೆಗಳ ನಲವಿನಾಟವನೆಲ್ಲ
    ಮಿಡಿದು ಮನವನದರೊಳೆ ಲೀನಗೊಳಿಸಿ|
    ವಿಹಗಯುಗದೋಲಗದ ಲಾಸ್ಯಸದಿರಿನೊಳು ಹುದು
    ಗಿಸಿದ ಕಥೆಯಂಕುರವ ವಾಲ್ಮೀಕಿಯು||
    (ಸದಿರ್ – ನಾಟ್ಯಪ್ರಕಾರ)

Leave a Reply to makara Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)