Nov 302011
 

೧೫ ದಿನಗಳಿಗೊಮ್ಮೆ ಒಂದು ಸರತಿಗೆ ೫ ಸಮಸ್ಯೆಗಳನ್ನು ಗೊಂಚಲಾಗಿ ಕೊಡುವುದೆಂದು ಮಾತನಾಡಿದ್ದೆವು. ಆ ಪ್ರಕಾರ, ಡಿಸೆಂಬರಿನ ಮೊದಲ ಪಕ್ಷಕ್ಕೆ ಸಮಸ್ಯೆಗಳು ಹೀಗಿವೆ

ಸಮಸ್ಯಾಪೂರ್ಣ ::

ಕಂದ ಪದ್ಯದ ಕೊನೆಯ ಸಾಲು ಹೀಗಿದೆ – “ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ“. ಉಳಿದ ಸಾಲುಗಳನ್ನು ಪೂರೈಸಿರಿ

ದತ್ತಪದಿ ::

walk, rock, lock, lake (ವಾಕ್, ರಾಕ್, ಲಾಕ್, ಲೇಕ್) – ಈ‌ ಪದಗಳು ಸಾಲಿಗೊಂದರಂತೆ ಬರುವಂತೆ ಪಂಚಮಾತ್ರಾ ಚೌಪದಿಯಲ್ಲಿ ಸರಸ್ವತಿಯನ್ನು ಸ್ತುತಿಸಿರಿ

ವರ್ಣನೆ ::

ಕವಿತೆಯ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ರಚಿಸಿರಿ

ಲಹರಿ ::

ಯಾವುದಾದರು ಪದ್ಯವನ್ನು ಬರೆಯಿರಿ

ಚಿತ್ರಕ್ಕೆ ಕವಿತೆ ::

ಈ ಚಿತ್ರಕ್ಕೆ ಸೂಕ್ತ ಪದ್ಯ ಬರೆಯಿರಿ – ಛಂದಸ್ಸು ನಿಮ್ಮ ಆಯ್ಕೆ

 

  145 Responses to “ಪದ್ಯಪಕ್ಷ – ೧”

  1. ಸಮಸ್ಯೆಯ ಪೂರಣ ::
    ಮೋಡಂಗಳಲ್ಲಿ ನೀರಂ
    ಕೂಡಿಸಿ ಕಳುಹುವನದೆಲ್ಲ ಕಡೆಗುಂ ಸೂರ್ಯಂ |
    ಕಾಡದೆ ಕಾರ್ಯವ ಗದ್ದಲ
    ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ ||

    ಉಳಿದ ಭಾಗಗಳನ್ನು ಮುಂದಿನ ಸಂಚಿಕೆಗಳಲ್ಲಿ (ಕಾಮೆಂಟುಗಳಲ್ಲಿ) ಪೂರೈಸುವೆ

  2. ದತ್ತಪದಿಯಲ್ಲಿ ಸರಸ್ವತಿವಂದನೆ:

    ನಮಿಪೆವಾಗ್ದೇವತೆಯೆ ಸುಜ್ಞಾನದಾತೆಯೆ ಕೊ-
    ಡುಮತಿಯ ಭವನಿರಾಕರಣದೆಡೆಗೆ ನೀಂ
    ಗಮನಿಸೆನಲಾಕುಲದೆ ಚಿರವನಚಿರವನು ಹಂ-
    ಸಮತಿಪ್ರತಿಭೆಯೊಲೇಕ ಮನವಮಾಡೌ

    ಗಮನಿಸೆನಲಾಕುಲದೆ = ಗಮನಿಸೆನಲ್ + ಆಕುಲದೆ = ಗಮನಿಸೆನಲು ಗಲಿಬಿಲಿಯಲ್ಲಿ (ಜಗದ ಗಲಿಬಿಲಿಯಲ್ಲಿ ಎಂದು ಅರ್ಥೈಸಬೇಕು)
    ಪ್ರತಿಭೆಯೊಲೇಕ = ಪ್ರತಿಭೆಯೊಲ್ + ಏಕ

    ಗಮನಿಸೆನಲಾಕುಲದೆ = ಗಮನಿಸೆನಲ್ + ಆಕುಲದೆ = ಗಮನಿಸೆನಲು ಗಲಿಬಿಲಿಯಲ್ಲಿ (ಜಗದ ಗಲಿಬಿಲಿಯಲ್ಲಿ ಎಂದು ಅರ್ಥೈಸಬೇಕು)
    ಪ್ರತಿಭೆಯೊಲೇಕ = ಪ್ರತಿಭೆಯೊಲ್ + ಏಕ

  3. ದತ್ತಪದಿಯಲ್ಲಿ ಸರಸ್ವತಿವಂದನೆ:

    ನಮಿಪೆವಾಗ್ದೇವತೆಯೆ ಸುಜ್ಞಾನದಾತೆಯೆ ಕೊ-
    ಡುಮತಿಯ ಭವನಿರಾಕರಣದೆಡೆಗೆ ನೀಂ
    ಗಮನಿಸೆನಲಾಕುಲದೆ ಚಿರವನಚಿರವನು ಹಂ-
    ಸಮತಿಪ್ರತಿಭೆಯೊಲೇಕ ಮನವಮಾಡೌ

    ಗಮನಿಸೆನಲಾಕುಲದೆ = ಗಮನಿಸೆನಲ್ + ಆಕುಲದೆ = ಗಮನಿಸೆನಲು ಗಲಿಬಿಲಿಯಲ್ಲಿ (ಜಗದ ಗಲಿಬಿಲಿಯಲ್ಲಿ ಎಂದು ಅರ್ಥೈಸಬೇಕು)
    ಪ್ರತಿಭೆಯೊಲೇಕ = ಪ್ರತಿಭೆಯೊಲ್ + ಏಕ

    ಗಮನಿಸೆನಲಾಕುಲದೆ = ಗಮನಿಸೆನಲ್ + ಆಕುಲದೆ = ಗಮನಿಸೆನಲು ಗಲಿಬಿಲಿಯಲ್ಲಿ (ಜಗದ ಗಲಿಬಿಲಿಯಲ್ಲಿ ಎಂದು ಅರ್ಥೈಸಬೇಕು)
    ಪ್ರತಿಭೆಯೊಲೇಕ = ಪ್ರತಿಭೆಯೊಲ್ + ಏಕ

    • ಸೋಮರ ಪದ್ಯರಚನಾಪಾಟವವು ಸ್ತವನೀಯವೇ ಸರಿ. ಚಿತ್ರಕ್ಕೆ ಪದ್ಯ ಸೊಗಸಾಗಿದೆ. ಆದರೆ ದತ್ತಪದಿಯಲ್ಲಿ ಛಂದಃಪದಗತಿ ಮತ್ತು ಭಾಷಾಪದಗತಿಗಳು ಹದವಾಗಿ ಬೆಸೆದುಕೊಂಡಿಲ್ಲ. ಆದುದರಿಂದ ಪದ್ಯಗತಿಯಲ್ಲಿ ಹಲವು ವೇಳೆ ಎಡವುವಂತಾಗಿದೆ. ಈ ಸಮಸ್ಯೆಯು ಅನೇಕಕವಿಗಳಿಗೇ ಇರುವಂಥದ್ದು. ಮಾತ್ರಾಛಂದಸ್ಸುಗಳು ಅದೊಂದು ಬಗೆಯಲ್ಲಿ ರಚನೆಗೆ ಸುಲಭವಾದರೂ ಅವುಗಳಲ್ಲಿ ಗತಿಸುಭಗತೆಯನ್ನು ಸಾಧಿಸಿಕೊಳ್ಳಲು ಹೆಚ್ಚಿನ ಅವಧಾನ ಬೇಕು. ಏಕೆಂದರೆ ಭಾಷಾನಿರಪೇಕ್ಷವಾದ (ಅಂದರೆ ಭಾಷೆಯ ಹಂಗೇ ಇಲ್ಲದ) ಬರಿಯ ಮಾತ್ರಾಛಂದೋಗತಿಯ ಸತಾನವಿನ್ಯಾಸವನ್ನೂ ಛಂದೋನಿರಪೇಕ್ಷವಾದ ಬರಿಯ ಭಾಷಾಪದಗಳನ್ನೂ ಸರಿದೂಗಿಸಿಕೊಂಡು ಹದವಾದ ಪದ್ಯಗತಿಯನ್ನು ಸಾಧಿಸಬೇಕೆಂದರೆ ತುಂಬ ನಿಶಿತವಾದ ಪದ್ಯಗತಿಪ್ರಜ್ಞೆ ಬೇಕು. ಇದು ಅಭಿಜಾತಶೈಲಿಯಲ್ಲಿ ರಸವತ್ತ್ಕೃತಿಗಳನ್ನು ಬರೆದ ಮಹಾಕವಿಗಳ ಸುಂದರಕವಿತೆಗಳನ್ನು ಎಚ್ಚರವಿರಿಸಿ, ಆಯಾ ಪದ್ಯಗಳ ಛಂದೋಗತಿಯೂ ಅರ್ಥಸ್ವಾರಸ್ಯವೂ ಎದ್ದುತೋರುವಂತೆ ನಮ್ಮಲ್ಲಿಯೇ ನಾವು ಓದಿಕೊಂಡಾಗ ಸ್ಫುರಿಸುತ್ತದೆ. ಈ ಬಗೆಗೆ ಪದ್ಯಪಾನದಲ್ಲಿಯೇ ಕೆಲವು ಅಭಿಜಾತಕವಿತಾವಾಚನಗಳನ್ನು ಧ್ವನಿಮುದ್ರಿಸಿ ಬಿತ್ತರಿಸೋಣ. ಇದಾದರೋ ನಮ್ಮಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕಾವ್ಯವಾಚನದಂತಲ್ಲ. ಏಕೆಂಂದರೆ ಈ ಹೊತ್ತು ನಮ್ಮಲ್ಲಿ ಪ್ರಸಿದ್ಧವಿರುವ ಕಾವ್ಯವಾಚನಕ್ರಮದಲ್ಲಿ ಛಂದೋಗತಿಯು ಎದ್ದು ತೋರುವಂಥ ಪಠನವಿಲ್ಲ. ಇಲ್ಲಿರುವುದೇನಿದ್ದರೂ ರಾಗರಂಜಿತವಾದ, ಛಂದೋಗತಿಸ್ಫುರಣರಹಿತವಾದ ವಿತಾಲಗಾನ. ಕೆಲವೊಮ್ಮೆ ಸಂಗೀತಗಾರರೂ ನರ್ತನಗಾಯಕರೂ ತಾಳಸಹಿತವಾಗಿ ವೃತ್ತ-ಕಂದಾದಿಗಳನ್ನು ಹಾಡುವರಾದರೂ ಅವರಲ್ಲಾರಿಗೂ ಛಂದೋಗತಿಯ ಅರಿವಿಲ್ಲ, ಆಯಾ ಗತಿಗಳ ಸ್ಫುರಣೆಯಾಗುವಂಥ ಪಠನ-ಗಾನಕ್ರಮಗಳ ಪರಿಚಯವೇ ಇಲ್ಲ. ಹೀಗಾಗಿ ಈ ತೊಡಕು
      ಬಗೆಹರಿಯುವುದು ಮತ್ತೂ ಕಷ್ಟವಾಗಿದೆ. ಇರಲಿ, ಇಂಥ ತೊಡಕುಗಳನ್ನೆಲ್ಲ ಬಿಡಿಸಲೆಂದೇ ನಮ್ಮ ಈ ಪದ್ಯಪಾನವಿರುವುದು:-) ಇಲ್ಲಿ ಕ್ರಮವಾಗಿ ಆ ಎಲ್ಲ ಕ್ಲೇಶಗಳ ನಿವಾರಣೆಯತ್ತ ಗಮನ ಹರಿಸೋಣ.
      ಕಲವೊಮ್ಮೆ ಕಾಣ್ಮೆಯಿಲ್ಲದ ಬರಿಯ ಜಾಣ್ಮೆಯಿಂದ safe play ಮಾಡಲೆಂದು ಆಯಾ ಛಂದಃಪದಘಟಕಗಳಿಗೆ ಸರಿಯಾಗಿರುವ ಭಾಷಾಪದಘಟಕಗಳನ್ನು ಹುಡುಕಿ ಹುಡುಕಿ ಇರಿಸುವ ಕೆಲಸವನ್ನು ಹಲವರು ಆರಂಭಕರು ಮಾಡುವುದುಂಟು. ಇದು ಆರಂಭದಲ್ಲಿ ಅನಿವಾರ್ಯವೂ ಕ್ಷಮ್ಯವೂ ಹೌದು. ಆದರೆ ಕಈ ಪಲಗಲು ಈ ದಾರಿ ಸರ್ವಥಾ ಸರಿಯಲ್ಲ. ಇಲ್ಲಿ ಎರಡು ಬಗೆಯ ತೊಡಕುಗಳಿವೆ. ಒಂದು: ಛಂದೋಗಣಗಳಿಗೆ ಹರಕಬಲಿಯನ್ನಿತ್ತ ಹಾಗೆ ಹೆಕ್ಕಿ ಹೆಕ್ಕಿ ಶಬ್ದಗಳನ್ನಿಡುವುದು ತೀರ ಕಷ್ಟವಾಗುತ್ತದೆ. ಏಕೆಂದರೆ ಯಾವುದೇ ಭಾಷೆಯಲ್ಲಿಯೂ ಇಂಥ ಸರ್ವಚ್ಛಂದೋನುಸಾರಿಯಾದ ಪದಗಳ ಭಂಡಾರವಿರುವುದಿಲ್ಲ. ಇನ್ನೊಂದು: ಈ ಪರಿಯ ರಚನೆಯಿಂದ ಪದ್ಯವು ತುಂಬ ಯಾಂತ್ರಿಕವಾಗುತ್ತದೆ, ಏಕತಾನತೆಯ ರೊಚ್ಚು ಕೇಳುಗರ ಮನಸ್ಸಿನಲ್ಲಿ ಬಲುಬೇಗ ಮೂಡುತ್ತದೆ. ಒಂದರ್ಥದಲ್ಲಿ ನೋಡಿದರೆ ಈ ಎರಡು ದೋಷಗಳೂ ನಮ್ಮ ಪಾಲಿಗೆ ವರಗಳು! ಏಕೆಂದರೆ ಒಂದು ಇನ್ನೊಂದಕ್ಕೆ antidote! ಆದುದರಿಂದ ಚೆನ್ನಾದ ಗತಿಸುಭಗತೆಯಿರುವ ಪದ್ಯಗಳನ್ನು ಬರೆಯುವುದೇ ಸುಲಭ ಮತ್ತು ಸುಂದರ!! ಈ ದಿಕ್ಕಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಲಿ.

      • ಗಣೇಶ್ ಸರ್,

        ಧನ್ಯವಾದಗಳು. ಪದ್ಯಗತಿಪ್ರಜ್ಞೆಯ ಪ್ರಾಮುಖ್ಯದ ಬಗ್ಗೆ ಮತ್ತು ಪದಗಳನ್ನು ಗಣಗಣಕ್ಕೆ ಬಲಿ ಕೊಡುವುದರಿಂದಾಗುವ ಶುಷ್ಕತೆಯ ಬಗ್ಗೆ ನಿಮ್ಮ ಟಿಪ್ಪಣಿ ಕಲಿಯುವವರಿಗೆ ಬಹಳ ಅನುಕೂಲ ವಾಗುವಂತಿದೆ. ನೀವು ಹೇಳಿದ ಹಾಗೆ ಬೇರೆ ಬೇರೆ ಛಂದಸ್ಸುಗಳಿಗೆ ಉದಾಹರಣೆಯಾಗಿ ಉತ್ತಮ ಛಂದೋಗತಿಯ ಪದ್ಯಗಳ ಧ್ವನಿ ಮುದ್ರಿಕೆಗಳನ್ನು ಪದ್ಯಪಾನದಲ್ಲಿ ಹಾಕಬಹುದು, ಇದು ಕಲಿಯುವವರಿಗೆ ಬಹಳ ಸಹಕಾರಿಯಾಗುತ್ತದೆ ಮತ್ತು ಕೇಳುಗರಿಗೆ ಪದ್ಯಗತಿಯ ಸೌಂದರ್ಯ ತಿಳಿಯುತ್ತದೆ.

        ಒಂದಷ್ಟು ಸವರಣೆಯ ಪ್ರಯತ್ನ ಮಾಡಿದ್ದೇನೆ:

        ನೀವು ಹೇಳುವ ಹಾಗೆ ಓದಿಕೊಂಡಾಗ ನನಗೆ ಲಘು ಬಾಹುಳ್ಯವಿರುವ ಮೂರನೇ ಪಾದದ ಉತ್ತರಾರ್ಧ ಹಾಗು ನಾಲ್ಕನೇ ಪಾದದ ಪೂರ್ವಾರ್ಧದಲ್ಲಿ ತೊಡಕಿದೆಯೆನಿಸುತ್ತದೆ.

        ನಮಿಪೆವಾಗ್ದೇವತೆಯೆ ಸುಜ್ಞಾನದಾತೆಯೆs
        ತಮನಿರಾಕರಣದೆಡೆ ದುಡಿಸೆನ್ನನು
        ಗಮನಿಸೆನಲಾಕುಲದೆ ಚಿರವನಚಿರವನು ನಡೆ-
        ಸುಮನವನು ತಿಳಿವಿನಲ್ಲೇಕಪಥದಿ

      • >>>ಈ ಬಗೆಗೆ ಪದ್ಯಪಾನದಲ್ಲಿಯೇ ಕೆಲವು ಅಭಿಜಾತಕವಿತಾವಾಚನಗಳನ್ನು ಧ್ವನಿಮುದ್ರಿಸಿ ಬಿತ್ತರಿಸೋಣ.
        ಗಣೇಶರೆ, ಇದು ತುಂಬಾ ಉತ್ತಮ ಮಾರ್ಗ. ನೀವು ರಾಮಚಂದ್ರರ ಮನೆಯಲ್ಲಿ, ಕೆಲವು ಪದ್ಯಗಳನ್ನು ಪಠಿಸಿದಾಗ, ನನ್ನ ಮೈಯಲ್ಲಿನ ರೋಮವೆಲ್ಲಾ ನೆಟ್ಟಗಾಗಿತ್ತು. ಅದೊಂದು ಮರೆಯಲಾಗದ ಅದ್ಭುತವಾದ ಅನುಭವ.

  4. ತಂದೆ ಮತ್ತು ಮಗನ ಚಿತ್ರದ ಮೇಲೆ:

    ಗುರುವಿಂ ಬೆವರ್ಪನಿಗಳೊಳ್
    ಮೆರುಗುಮಡಕವುಂ ಶಿಶುಂಗಳೇಳಿಗೆಗಲ್ತೆs
    ಕಿರಣಂಗಳ ಪ್ರತಿಫಲನಂ
    ಶರಧಿಯೊಳೊರೆಯಲ್ ಪತಂಗನುದಯಂ ಕಾಮ್ಬಂ

    ಗುರು: ತಂದೆ
    ಮೆರುಗುಮಡಕವುಂ: ಮೆರಗು ಅಡಕವು
    ಪತಂಗ: ಸೂರ್ಯ

  5. ಕಡಲ ಹೆಗಲ ಮೇಲಿನ ಸೂರ್ಯ
    ಆದಂತೆ ತುಸುಹೊತ್ತಲಿ ಮಾಯ
    ತಂದೆ ಹೆಗಲ ಮೇಲೇರಿದ ಕುವರ
    ಆಗಲಾರನು ಬಲು ದೂರ
    ತಂದೆ-ಮಗನ ಸಂಬಂಧವದು ಬಲು ಮಧುರ

    • ಷೊಸ ಗೆಳೆಯರಿಗೆ ಸ್ವಾಗತ. ತಮ್ಮ ರಚನೆಯ ಕಲ್ಪನೆ ಚೆಲುವಾಗಿದೆ. ಆದರೆ ಪದ್ಯಪಾನದ ಪ್ರಧಾನೋದ್ದೇಶವೇ ಛಂದೋಬದ್ಧಕವಿತೆಗಳ ರಚನಾಪದ್ಧತಿಯ ಉಜ್ಜೀವನ. ಆದುದರಿಂದ ತಾವು ದಯಮಾಡಿ ಸದ್ಯದ ’ಪದ್ಯಪಕ್ಷ’ದಲ್ಲಿ ನಮೂದಾಇರುವ ನಿಯಮಗಳನ್ನು ಅನುಸರಿಸಿ ರಚಿಸಬೇಕಾಗಿ ಕೋರಿಕೆ.

      • Thank you for the comment. I will correct it next time i get inspiration, hopefully soon.

        • ಕಡಲ ಹೆಗಲ ಮೇಲ ಸೂರ್ಯ
          ಆಗುವಂತೆ ಕ್ಷಣದಿ ಮಾಯ
          ತಂದೆ ಹೆಗಲ ಮೇಲೆ ಕುಳಿತ
          ಮಗನು ಆಗಲಾರ ದೂರ
          ತಂದೆ ಮಗನ ಸಂಬಂಧ
          ವಂತು ಬಲುವೆ ಮಧುರ ಮಧುರ

          • ಆತ್ಮೀಯರೇ,
            ನಿಮ್ಮ ಎರಡನೆಯ ಪ್ರಯತ್ನ ದಿಟವಾಗಿ ಉತ್ತಮ. ಆದರೆ ಪ್ರಾಸದ ಲೋಪವಾಗಿದೆ ಮತ್ತು ಅಲ್ಲಲ್ಲಿ ವಿಸಂಧಿದೋಷವೊದಗಿದೆ.ಇವನ್ನು ಕ್ರಮೇಣ ಸರಿಡಿಸಿಕೊಳ್ಳಿರಿ. ದಯಮಾಡಿ ನಮ್ಮ ಪದ್ಯವಿದ್ಯೆ ಹಾಗೂ ಇನ್ನಿತರ ಮೂಲಪಾಠಗಳನ್ನು ಎಚ್ಚರದಿಂದಗಮನಿಸಿರಿ. ನಿಮ್ಮ ಪ್ರಕೃತರಚನೆಯು ತ್ರಿಮಾತ್ರಾಗಣಘಟಿತವಾದ ಪ್ರಾಸರಹಿತರಗಳೆಯ ರೂಪವೆನ್ನಬಹುದು.

  6. ಸಮಸ್ಯಾಪೂರ್ಣ

    ಆಡಿಯು ಮಾಡದವ ನಧಮ
    ಮಾಡುವೆ ನಾನೆಂದುಮಾಳ್ಪವನು ಮಧ್ಯಮ, ತಾ
    ಮಾಡುವ ನಾಡದೆ, ಸದ್ದನು
    ಮಾಡದೆ,ಮಾಡುವುದೆ ಸಜ್ಜನರಗುಣಮಲ್ತೇ

    ದತ್ತಪದಿ :

    ನುತಿಪೆನೆನೆ ನುಡಿಯಿಂದ ರಸನೆ ವಾಗ್ರಸ ಭಿಕ್ಷೆ
    ಸ್ತುತಿಪರಾಕ್ ಗಾನಕ್ಕೆ ನಿನ್ನದೇ ರಕ್ಷೆ
    ಮತಿ ಕಲಾಕೃತಿ ಶಿಲ್ಪಕಧಿದೇವತೆಯೆ ನೀನು
    ನುತಿಗೈಯಲೇಕೆ ಕೈಗೂಸುಮಾತೆಯ ತಾನು

    ವರ್ಣನೆ

    ಎತ್ತಣಿಂದಲೊ ಬಂದು ಮಣ್ಣೊಳು
    ಬಿತ್ತ ಬೆಳೆದೆತ್ತರಕೆ ಫಲ ನೀ
    ಡುತ್ತ ರಸದೌತಣವ ನುಣಿಸುವ ತೆರದಿ ರಸಕವಿತೆ
    ಹೊತ್ತಿ ಕಿಡಿ ಚಿತ್ರಗಳು ಮೂಡುತ
    ಚಿತ್ತ ಮಾಗುಲು ಹೊಮ್ಮುವುದು ಮತಿ
    ಕೆತ್ತಿ ಪದಶಿಲ್ಪಗಳ ರಸಭಾವಗಳಿಗಸುಮೂಡಿ

    ಲಹರಿ

    ಭಾವನೆಗೆ ’ಬಲಮೆದುಳು’, ಎಡ’ಮೆದುಳು’ ಕಾರ್ಯಕ್ಕೆ
    ಸಂವೇದನೆಗೆ ’ಬಲವು’, ಲೆಕ್ಕ-ಗಣಿತಕೆಡ
    ಭಾವ ಪೌರಸ್ತ್ಯತೆಗೆ , ಪಾಶ್ಚಾತ್ಯ ತಾರ್ಕಿಕತೆ
    ಸೇರ್ವ ಯೋಜನೆಯು ಸರಿ-ಬೆಪ್ಪುಬೊಮ್ಮ

    ಚಿತ್ರಕ್ಕೆ ಕವಿತೆ

    ಆಕಾಶ ನೋಡಲಿಕೆ ನೂಕುನುಗ್ಗಲದೇಕೆ
    ಬೇಕೇನು ಸಾಮರಸ್ಯಗಳ ರಸ ಬಿಂಬ
    ಸಾಕುಹೆಗಲೇರಲಕ್ಕರೆಯಿಂದ ತಂದೆ-ಮಗ
    ಸಾಗರನತಲೆಯೇರೆ ಸೂರ್ಯಬಿಂಬ

    • Chandramouly avare,
      tumba chennagide sir 🙂

    • ಚಂದ್ರಮೌಳಿಯವರು ಎಲ್ಲವನ್ನೂ ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿಶೇಷತಃ ಅವರ ವರ್ಣನೆ ಹಾಗೂ ದತ್ತಪದಿಗಳ ಭಾವ-ಬಂಧಗಳು ಸರಸವಾಗಿವೆ, ಸಾರ್ಥಕವಾಗಿವೆ. ತೂಮ್ಬ ಸಹಜವಾಗಿ ಸಮಸ್ಯೆ ಮತ್ತು ದತ್ತಪದಿಗಳ ಬಿಕ್ಕಟ್ಟನ್ನು ಬಗೆಹರಿಸಿದ್ದಾರೆ. ಅವರ ಸ್ವೋಪಜ್ಞಕವಿತೆಯು ಸಾರ್ವಕಾಲಿಕಸತ್ಯವನ್ನು ಬಿಂಬಿಸಿದೆ. ಇಲ್ಲಿಯ ಪೌರ್ವಾತ್ಯ ಎನ್ನುವ ಪದವು ಅಪಾಣಿನೀಯವಾದುದರಿಂದ ಪೌರಸ್ತ್ಯ ಎಂದು ಸವರಿಸಿಕೊಳ್ಳಬಹುದು. ಆದರೆ ಆಗ ಆದಿಪ್ರಾಸಕ್ಕೆ ಕುತ್ತು ಬರುತ್ತದೆ. ಈ ಬಗೆಗೆ ಚಂದ್ರಮೌಳಿಯವರೇ ಸ್ವಯಂ ಸವರಿಸಲು ಶಕ್ತರು:-)

      • ಅವಧಾನಿಗಳ ಪ್ರೋತ್ಸಾಹ ಮತ್ತು ಸೂಚನೆಗಳಿಗೆ ಧನ್ಯವಾದಗಳು. ’ಪೌರ್ವಾತ್ಯ ’ಪದ ಬದಲಿಸಿ, ಪೌರಸ್ತ್ಯ ಮಾಡಿದ್ದೇನೆ. ಬೆಳಿಗ್ಗೆ ಪದ್ಯಗಳನ್ನು ಸಂಕಲಿಸುತ್ತಿಂದ್ದತೆ, ಅಂತರ್ಜಾಲ ಸಂಪರ್ಕ ಕಡಿದು,ಚಿತ್ರಕ್ಕೆ ಕವಿತೆ’ ಯನ್ನು ಹಾಕಿರಲಿಲ್ಲ. ಈಗ ಸೇರೆಸಿದೆ. ಭಾಮಿನಿ ಷಟ್ಪದಿಯ ಮೂರನೆಯ ಸಾಲಿನಲ್ಲಿ, ರಸದೌತಣವ ’ನೀಡುವ ’ಎಂದಿದ್ದುದನ್ನು,ಪುನರುಕ್ತಿಯಾಗದಂತೆ, ಅರ್ಥಪೂರ್ಣವಾಗಲು, ರಸದೌತಣವ ’ನುಣಿಸುವ ’ ಮಾಡಿದ್ದೇನೆ. ಅಂತೂ ಬಹಳ ಕಾಲದ ಮೇಲೆ ’ಪ್ರಶ್ನಪತ್ರಿಕೆ’ ಯನ್ನು ಉತ್ತರಿಸುವ ಅವಕಾಶ ಕಲ್ಪಿಸಿದ ರಾಮಚಂದ್ರರಿಗೆ ನಮನ..

    • This really very beautiful poem. A wonderful and yet intimately simple way of showcasing the affection of father and son. A poem so small in size has much to suggest and much more to enjoy!

  7. ಭಾಮಿನಿಯಲ್ಲಿ ಕವಿತೆಯ ಬಗ್ಗೆ

    ಸುಪ್ತಮನದೊಳಗನುಭವವು ನೆಲೆ-
    ಸುತ್ತ ಪೋಪುದು ಕೆಲವು ವ್ಯಕ್ತಾ-
    ವ್ಯಕ್ತ ಹಲವೆನಮೂರ್ತಪದರದಿ ಗುಹೆಗಳಾಳದಲಿ
    ಎತ್ತಣದೊ ಭಾವನೆಯದೊಡೆಯಲು
    ಕತ್ತಲಿನ ಗುಹೆಬೀಗಬಾಗಿಲ
    ಸುತ್ತ ಹೆಣೆಯೆ ಸ್ಫುರಣೆಗೈವುದು ಕವಿತೆ ರೂಪದಲಿ

    • Quite an original expression based on a good idea that touches the frontiers of serous thoughts. But the language has to be burnished here and there. I think, a short course of haLagannaDa/naDugannaDa grammar is welcoming to one and all:-)

      • ಗಣೇಶ್ ಸರ್,

        ಹಳೆಗನ್ನಡ ಮತ್ತು ನಡುಗನ್ನಡ ವ್ಯಾಕರಣದ ಪಾಠಗಳು ನಮಗೆ ಬಹಳ ಉಪಯುಕ್ತವಾಗುತ್ತದೆ. ಈ ಪಾಠಗಳನ್ನು ಎದಿರುನೋದುತ್ತಿದ್ದೇವೆ:)

  8. ಸಮಸ್ಯ ಪೂರಣ, ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ಒಂದು ಪದ್ಯ:

    ತೊಡಿಸಸಿಗಳಂ ನೆಡೆ ಕಾ-
    ಪಾಡೆನೆ ನೀರೆರೆದವಕ್ಕೆ ಪೋಷಿಸೆ ಸತತಂ
    ನಾಡಿಗೊಳಿತನಂ ಸ್ವಾರ್ಥವ
    ಮಾಡದೆ ಮಾಡುವುದೆ ಸಜ್ಜನರ ಗುಣವಲ್ತೆ

    • typo correction

      ಸಮಸ್ಯಾಪೂರಣ, ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ಒಂದು ಪದ್ಯ:

      ತೋಡಿಸಸಿಗಳಂ ನೆಡೆ ಕಾ-
      ಪಾಡೆನೆ ನೀರೆರೆದವಕ್ಕೆ ಪೋಷಿಸೆ ಸತತಂ
      ನಾಡಿಗೊಳಿತನಂ ಸ್ವಾರ್ಥವ
      ಮಾಡದೆ ಮಾಡುವುದೆ ಸಜ್ಜನರ ಗುಣವಲ್ತೆ

      • A very good poorana, quite original in idea and execution. But the third line may be changed so: naaDiMgoLitaM svaarthava…..

        • ಗಣೇಶ್ ಸರ್,

          ಸರಿಪಡಿಸಿದ್ದೇನೆ,

          ತೋಡಿಸಸಿಗಳಂ ನೆಡೆ ಕಾ-
          ಪಾಡೆನೆ ನೀರೆರೆದವಕ್ಕೆ ಪೋಷಿಸೆ ಸತತಂ
          ನಾಡಿಂಗೊಳಿತಂ ಸ್ವಾರ್ಥವ
          ಮಾಡದೆ ಮಾಡುವುದೆ ಸಜ್ಜನರ ಗುಣವಲ್ತೆ

  9. ಲಹರಿ: ಈಗ ಮಧ್ಯ ರಾತ್ರಿಯಾಗಿದೆ (ನಿದ್ರಾದೇವಿಗೆ ವಂದನೆ ಸಲ್ಲಿಸುವ ಲಹರಿಯೇ ಸರಿ :-))

    ಧಾವಿಸುವ ಮನಸಿಂಗೆ ದಣಿದಿರುವ ದೇಹಕ್ಕೆ
    ಯಾವಳಿಂದಾಧಾರ ನಿತ್ಯವಿಹುದೋ,
    ಸಾವಿರದ ನಾಮರೂಪಗಳನೊಮ್ಮೆಲೆ ದೇವಿ
    ಸಾವಿನಂಚಿಗೆ ದೂಡು ನಮಿಪೆನಮ್ಮ

    ಮನಸ್ಸು ಉಲ್ಲಾಸಗೊಳ್ಳುವ ಘಾಡ ನಿದ್ರೆಯನ್ನು (ನನ್ನ ಸ್ಮೃತಿಯ ಮಟ್ಟಿಗಿರುವ ನಾಮರೂಪಗಳನ್ನು ಮರೆಮಾಡಿ) ಕರುಣಿಸು ಎನ್ನುವ ಪ್ರಾರ್ಥನೆ

  10. ಕಾಡುವ ಬಿಸಿಲಿನೊಳ್ ಬೆಂದಗೆ,
    ನೀಡುಮೆನಾಶ್ರಯಮನೆಂದುಸುರದಂತೆ ಮರಂ
    ಬೇಡಿದವಂಗುಪಕಾರಮ-
    ಮಾಡದೆ ಮಾಡುವದು ಸಜ್ಜನರ ಗುಣಮಲ್ತೇ

    [ಬೇಡಿದವ = ಬಯಸಿದವ ]

  11. ಚಿತ್ರಕವಿತೆಗೆ ಇನ್ನೊಂದು ಪ್ರಯತ್ನ

    ಸಾಗರನೊಳುದಯಿಸುವ ರವಿಯನೋಡುಲು ಕಂದ-
    ಗಾಗೆ ಭಯವಲೆಗಳಿಂ, ಹೆಗಲೇರಲು
    ರಾಗದಲೆಗಳೊಲಕ್ಕರೆಯಸೂಸೆ ತಂದೆಯು ಸ-
    ರಾಗದಿಂ ನಲ್ಮೆಯಭಯವನಿತ್ತಿಹಂ

    • Typo again:)

      ಸಾಗರನೊಳುದಯಿಸುವ ರವಿಯನೋಡುಲು ಕಂದ-
      ಗಾಗೆ ಭಯವಲೆಗಳಿಂ, ಹೆಗಲೇರಲು
      ರಾಗದಲೆಗಳೊಲಕ್ಕರೆಯಸೂಸಿ ತಂದೆಯು ಸ-
      ರಾಗದಿಂ ನಲ್ಮೆಯಭಯವನಿತ್ತಿಹಂ

  12. ದತ್ತಪದಿಯಲ್ಲಿ ಸರಸ್ವತಿಯ ವರ್ಣನೆ

    ದೇವಿ ನಿನ್ನಯ ಕಣ್ಣ ಕಿರುನೋಟದಿಂ ವಾಕ್ಕು
    ಭಾವನಾ ರಾಕೇಂದುವೊಲ್ ಸ್ಫುರಿಪುದು |
    ಪೀವರ ಸ್ತನಯುಗಳೆ ಪಾಲಾಕರರಿಗಂಬೆ
    ಪಾವನೆ ಜ್ಞಾನದಶಲಾಕವು ನಿನೆದೆವಾಲು
    ಜೀವ ಲೇಖವ ನೀಡು ಮಡಿಲೇರಲು ||

    ರಾಕೇಂದು = ಹುಣ್ಣಿಮೆಯ ಚಂದ್ರ
    ಪೀವರ – ದೊಡ್ಡದು
    ಪಾಲಾಕರ = ಪಾಲ + ಆಕರ = (ಜ್ಞಾನದ) ಹಾಲಿನ ದಾಹ :: ಇದು ಅರಿಸಂಧಿಯಾದ್ದರಿಂದ ಬಿಡಲಾಗಿದೆ

    ಲಹರಿ – ಕರಾಗ್ರೇ ವಸತೇ … ಶ್ಲೋಕದ ಬಗ್ಗೆ
    ಕರಗಳಲಿ ವಾಸಿಪರೆ ಸಿರಿ ವಿದ್ಯೆ ಶಕ್ತಿಯರು ?
    ಮರಮರಳಿ ನೋಡಿ ಕರೆದರೆ ವೊಲಿವರೆ ?
    ವರಭಾಗ್ಯದಾತೆಯರ, ಬೆವರ ಕಾಣಿಕೆ ಪ್ರಿಯರ
    ಬರಗೊಂಬ ಮರ್ಮ ಕೈಗೆಲಸದಲಿದೆ ||

    • ರಾಮ್ ಅವರ ಪದ್ಯದ ಭಾವ ಚೆನ್ನಾಗಿದೆ. ಆದರೆ ಸಣ್ಣ ಹಾಗೂ ಕಿರು ಪದಗಳು ಒಂದೇ ಅರ್ಥದವಾದುವು. ಹೀಗಾಗಿ ಇಲ್ಲಿ ಪುನರುಕ್ತಿದೋಷ ಬಂದಿದೆ. ಮೊದಲ ಶಾಲಿನ ಕಡೆಗೆ ವಾಕು ಎಂಬ ಪದ ಬಂದಿದೆ. ಇದು ಬಹುಶಃ ವಾಕ್ಕು ಎಂದಾಗಬೇಕೇನೋ. ಅಲ್ಲದೆ ಪಾಲಾಕರ ಎಂಬ ಪದವು ಅರಿಸಂಧಿ. ಇದು ಪಾಲಿನಾಕರ ಎಂದೇ ಆಗುತ್ತದೆ.

      • ಮೊದಲೆರಡು ಲೋಪಗಳನ್ನು ಸರಿಪಡಿಸಿದ್ದೇನೆ. ಆಕರ ಅಂಬುದಕ್ಕೆ ಕನ್ನಡ ನಿಘಂಟಿನಲ್ಲಿ ಅರ್ಥ ಕೊಟ್ಟದ್ದರಿಂದ ಅದು ಕನ್ನಡವೇ ಎಂದು ತಿಳಿದೆ. ಪಾಲಿನಾಕರ ಮಾಡಿದರೆ, ದತ್ತಪದಿ ಕೆಡುತ್ತದೆ. ಬೇರೆ ಪದ ಉಪಯೋಗಿಸಿದರೆ ಕೊನೆಯ ಎರಡು ಸಾಲುಗಳೆ ಬದಲಾಗಬೇಕಾದೀತು. ಆದ್ದರಿಂದ ಅದನ್ನು ಸ್ವಲ್ಪ ನೋಡಿ ಸರಿಪಡಿಸುತ್ತೇನೆ.

      • ಪಾಲಾಕರ ಎಂದಿದ್ದ ಸಾಲನ್ನು ಬದಲಿಸಿದ್ದೇನೆ.

  13. ಭಾಮಿನಿ ಷಟ್ಪದಿಯಲ್ಲಿ ಕವಿತೆಯ ವರ್ಣನೆ
    ಜೇನುಗೂಡಿನ ನಿಯತ ಬಂಧದಿ
    ಕಾನಕುಸುಮಗಳಧರ ಶೋಧಿಸಿ
    ತಾನೆಯನುಭವದಲ್ಲಿ ಬೆರೆಸುತ ಮಧುವ ಹನಿಗರಿಸಿ |
    ತ್ರೀಣಿ ಲೋಕಂಗಳಲೆಯುನ್ನತ
    ಮಾನವರ ಚಿತ್ತವನೆ ಚೋದಿಪ
    ಪಾನ ರಸದೌತಣವದಾಗಿಹ
    ಜೇನೆ ಕವಿತೆಯು, ಗೂಡೆ ಛಂದವು ಕವಿಯೆ ಮಧುಕರನು ||

    • ತ್ರೀಣಿ ಲೋಕ ಎನ್ನುವ ಪದಪ್ರಯೋಗವು ಅಸಾಧು. ಆದುದರಿಂದ ಇದನ್ನು ಮಾರ್ಪಡಿಸಬೇಕು. ಏಕೆಂದರೆ ಸಂಸ್ಕೃತದ ವಚನ-ವಿಭಕ್ತಿ-ಪ್ರತ್ಯಯಳಿರುವ ಇಂಥ ಪದಗಳನ್ನು ವ್ಯಸ್ತಪ್ರಯೋಗವಾಗಿ ಬಳಸುವುದಿಲ್ಲ. ಏನಿದ್ದರೂ ತ್ರಿಲೋಕ ಎಂಬ ಪ್ರಯೋಗವೇ ಪ್ರಸಿದ್ಧ, ಶುದ್ಧ.

      • ತ್ರೀಣಿ ಯನ್ನು ಸರಿಪಡಿಸಿದ್ದೇನೆ. “ಚೋದಿಪ” ಉಪಯೋಗ ಸಾಧುವೆಂದು ಆಶಿಸುತ್ತೇನೆ 🙂

  14. seeing the words given in dattapadi i was tempted into my first trial. 😛

    काव्यद्राक्षालताधारा धवला कमलासना |
    पद्मदलेक्षणा या वै सा वाग्देव्यै नमो नमः ||

    ಛಂದಸ್ಸು ಮುಖ್ಯವಾದರೂ ದತ್ತಪದಿಯಲ್ಲಿ ಕೊಟ್ಟಿರುವ ಪದಗಳನ್ನು ತರಿಸುವುದು ಇನ್ನೂ ಮುಖ್ಯವೆಂದು ಭಾವಿಸಿ ಪಂಚಮಾತ್ರಾ ಚೌಪದಿ ಎಂಬ ನಿಬಂಧನೆಯನ್ನು ಗಾಳಿಗೆ ತೂರಿ ಕನ್ನಡದ ಬದಲು ಸಂಸ್ಕೃತದಲ್ಲಿ ಅನುಷ್ಟುಪ್ ನಲ್ಲಿ ಒಂದು ಸರಳವಾದ ಪ್ರಯತ್ನ ಮಾಡಿದ್ದೇನೆ. ನಿರ್ಬಂಧದ ಉಲ್ಲಂಘನೆಯನ್ನು ಮನ್ನಿಸಿ.

    • ನಿಮ್ಮ ಪ್ರಯತ್ನ ಸ್ತುತ್ಯ. ಆದರೆ ದತ್ತಪದಗಳೆಲ್ಲಿವೆಯೆಂಬುದು ತಿಳಿಯದಾಗಿದೆ. ಅಲ್ಲದೆ ಮೂರನೆಯ ಪಾದದ ಪದ್ಮದಲೇಕ್ಷಣಾ ಎಂಬ ಪದವು ಛಂದಸ್ಸಿನ ಲಕ್ಷಣದ ’ಲೆಕ್ಕ’ದಪ್ರಕಾರ ಸರಿಯಿದ್ದರೂ ಗತಿಗೆ ಎಡವನ್ನು ತಂದಿದೆ. ಈ ಬಗೆಗೆ ನನ್ನ ಪಾಠಗಳನ್ನು ಗಮನಿಸಿರಿ. ಇದು ಪದ್ಮಪತ್ರೇಕ್ಷಣಾ ಎಂದಾದಲ್ಲಿ ಸರಿಯಾಗುವುದು. ಅಲ್ಲದೆ ಕಡೆಯ ಪಾದದಲ್ಲಿ ಸ್ವಲ್ಪ ವ್ಯಾಕರಣದೋಷವಾಗಿದೆ. ಇದನ್ನು ಸವರಿಸಿದರೆ ’ಸಾ ವಾಗ್ದೇವೀ ಪ್ರಣಮ್ಯತೇ’ ಎಂದು ಬದಲಿಸಬಹುದು. ಇದರ ಬಗೆಗೆ ನೇರವಾಗಿ ಸಂಪರ್ಕಿಸಿದರೆ ವಿವರಿಸಬಲ್ಲೆ. ಇಲ್ಲಿ ತುಂಬ ಸ್ಥಳವೂ ಸಮಯವೂ ಬೇಕಾದಾವು.

      • ನಿಮ್ಮ ಜೊತೆ ಚರ್ಚಿಸಿದ ಮೇಲೆ ನಿಮ್ಮ ಸಲಹೆಯಂತೆ ಹೀಗೆ ಬದಲಿಸಿದ್ದೇನೆ

        काव्यद्राक्षालताधारा धवला कमलासना |
        पद्मलीलेक्षणा या वै सा वाग्देवी प्रणम्यते ||

        ಸಂಯುಕ್ತಾಕ್ಷರಗಳ ಮಧ್ಯದಲ್ಲಿ ಕೊಟ್ಟ ಪದಗಳನ್ನು highlight/bold/emphasis ಇತ್ಯಾದಿ ಮಾಡುವುದು ಕಷ್ಟವಾದ್ದರಿಂದ ಇಲ್ಲಿ ಗುರುತಿಸಿದ್ದೇನೆ.
        द्राक्षा ಪದದಲ್ಲಿ ರಾಕ್(rock) ಬಂದಿದೆ
        धवला कमलासना ಪದಗಳ ನಡುವೆ ಲಾಕ್(lock) ಬಂದಿದೆ
        लीलेक्षणा ಪದದಲ್ಲಿ ಲೇಕ್(lake) ಬಂದಿದೆ
        वाग्देवी ಪದದಲ್ಲಿ ವಾಕ್(walk) ಬಂದಿದೆ

        • Good. But in vaagdEvi, instead of vaak we have vaag!! In any verse, we have to execute saMdhi-s without exception and hence vaak+dEvI becomes vaagdEvI. But this is not the intended word is it not:-)

          • i’ll replace वाग्देवी with वाक्प्रदा

          • accidently pressed submit before completing..

            i’ll keep the sandhi rule in mind for all future verses.. now vAkpradA i think fits properly to the requirement 🙂

          • i also noticed vAgdevatE vAgrasA used in other verses so used vAgdevi..

            finally i’ve changed the verse in this form

            काव्यद्राक्षालताधारा धवला कमलासना |
            पद्मलीलेक्षणा देवी नमस्तुभ्यञ्च वाक्प्रदा ||

  15. ಪದ್ಯಪಕ್ಷಕ್ಕೇಕೋ ನಿರೀಕ್ಷಿತಪ್ರಮಾಣದ ಪ್ರತಿಕ್ರಿಯೆಗಳು ಬರುತ್ತಿಲ್ಲವೆಂದು ನನಗನಿಸಿದೆ. ನಮ್ಮ ಕವನರಚನಚಣರಾದ ಗೆಳೆಯರಿಗೆಲ್ಲ ಬಳಲಿಕೆಯಾಯ್ತೇ? ಬೇಸರವಾಯ್ತೇ?:-) ಆದುದರಿಂದ ನನಗಾದ ’ಬೇಸರ’ವನ್ನಿಲ್ಲಿಯ ಅನುಷ್ಟುಪ್ ಶ್ಲೋಕಗಳ ಮೂಲಕ ಹಂಚಿಕೊಳ್ಳುತ್ತಿದ್ದೇನೆ:

    ಪದ್ಯಪಕ್ಷಂಗಳಂ ಸಾರ್ಚುತ್ತಾದ್ಯವಿದ್ಯಾವಿನೋದಮಂ|
    ಹೃದ್ಯಮಾಗಿರಿಸಲ್ ನೋಂತರ್ ಪದ್ಯಪಾನದೆ ನೇಹಿಗರ್||

    ಆದೊಡೇತಕೊ ನಾಂ ಕಾಣೆಂ ಸೋದರರ್ ಕವನಾದರರ್|
    ಮೋದದಿಂದಧಿಕರ್ ಬಂದೀ ಹಾದಿಗಾಗದೆ ಪೋದರೇಂ?

    ಸಮಸ್ಯಾದಿಗಳಂ ಲೀಲಾಕ್ರಮದಿಂ ಪರಿಹಾರಿಸಲ್|
    ಸಮೆಯಲ್ ಕಬ್ಬಮಂ ನೈಜೋದ್ಯಮಕಲ್ಪನೆಯೊಳ್ಪಿನಿಂ||

    ಕೌತುಕಂಗೊಂಡದೇತಕ್ಕೋ ಪ್ರೀತಿಯಿಂ ಬಾರದಾದರೇ|
    ಚೇತನಕ್ಕಾದವರ್ ಮಿತ್ರರ್ ಬೀತುದೆನ್ನ ಮನಸ್ಸುಮಂ||

  16. ಲಹರಿ:
    ಅವಧಾನಿಗಳಲ್ಲಿ ಕ್ಷಮೆಕೋರುತ್ತಾ…

    ಕಳೆದು ಹೋಗಿದೆ ಪಕ್ಷವರ್ಧವು
    ಎಳೆಸುತಾಪದ ರಚನೆಯಾಟವ |
    ಮತಿಯಿದೋಡದು ಕನಸು ಬೀಳದು
    ಗತಿಯಲವಧಾನಿಯಸಮನಿಸಲ್ ||

    ಸಮಸ್ಯಾ ಪೂರ್ಣ:

    ನೋಡುತ ಸನಿಹದ ದೀನರ
    ಪಾಡನು ಕೆಳೆತನವಮಾಡಿ ಮಿಡಿಯುತ ಮನದೊಳ್ |
    ಮಾಡುವ ದಾನಗಳನಿನಿತು
    ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ ||

    ಕೀಲಕ- ದಾನಗಳನ್ ಇನಿತುಮ್ + ಆಡದೆ

  17. ಕವಿತೆಯ ವರ್ಣನೆ
    ಮನದ ಭಾವನೆಯೆಲ್ಲ ಚಿಮ್ಮುತ
    ಕೆನೆದು ಬಂದಿರೆ ಋತುವ ರೂಪದ –
    ಲನವರತವೀ ಪ್ರಕೃತಿಯೆನ್ನುವ ಕವಿತೆ ಬರೆಯುತಿಹ |
    ಅನುಪಮದ ಕೌಶಲವ ಮೆರೆಯಲು
    ಕೊನರಿಸಿಪ ಹಲಜೀವಸರ್ಗವ –
    ನಿನಿತು ಪಾದವಳೆತನಳಿಸಿ ಕವಿ ಹೊಸದ ಕವನಿಸುತ ||

    • ಕಾಂಚನ ಅವರೇ, ನಿಮ್ಮ ಭಾಮಿನಿಯ ಭಾವ-ಭಾಷೆ-ಬಂಧಗಳೆಲ್ಲ ಸೊಗಸಾಗಿವೆ. ಕಡೆಯ ಸಾಲಿನಲ್ಲಿ ಎಲ್ಲೋ ಸ್ವಲ್ಪ ಸವರಿಸಬೇಕೋ, ಬೆರಳಚ್ಚಿನ ತೊಡಕೋ ಆದಂತಿದೆ. ದಯಮಾಡಿ ಸವರಿಸಿರಿ.

      • ಧನ್ಯವಾದಗಳು. ಸವರಿಸಿದ ಕೊನೆಯ ಸಾಲಿನೊಡನೆ, ಪದ್ಯ ಇಂತಾಗಿದೆ (ಸರಿಯಾಗಿರಬಹುದೆಂದು ಅಂದುಕೊಂಡಿದ್ದೇನೆ) ::
        ಮನದ ಭಾವನೆಯೆಲ್ಲ ಚಿಮ್ಮುತ
        ಕೆನೆದು ಬಂದಿರೆ ಋತುವ ರೂಪದ –
        ಲನವರತವೀ ಪ್ರಕೃತಿಯೆನ್ನುವ ಕವಿತೆ ಬರೆಯುತಿಹ |
        ಅನುಪಮದ ಕೌಶಲವ ಮೆರೆಯಲು
        ಕೊನರಿಸಿಪ ಹಲಜೀವಸರ್ಗವ –
        ನಿನಿತು ಪಾದಗಳನ್ನೊರೆಸುತೆಯೆ ಹೊಸತ ರಚಿಸುತಿಹ ||

  18. ದತ್ತಪದಿ:
    ವೀಣಾವಿನೋದಿನಿಯೆ, ಕಮಲಾಕ್ಷಿ ಶಾರದೆಯೆ
    ಗುಣದಸಂಪದಕೆಲ್ಲ ನೀ ಗವಾಕ್ಷಿ
    ಮಣಿದು ಬಂದಿಹೆನಿಂದು ಗುಣವರಾಕ್ಷಯಸಿಂಧು
    ಕಾಣಿಸೆನ್ನೊಳು ಕಲೇಕ್ಷಕದೃಷ್ಠಿಯಂ

    • “ನನಗೆ art appreciation ಗುಣವನ್ನು ಕರುಣಿಸು” ಎಂದು ಕೇಳಿಕೊಳ್ಳುವ ಪದ್ಯ. ಕಲಾ + ಈಕ್ಷಕ = ಕಲೇಕ್ಷಕ (ಈಕ್ಷಕ = ನೋಡುವ) “ಗುಣವರಾಕ್ಷಯಸಿಂಧು” ಪ್ರಯೋಗ ಸಾಧುವೇ? ಇಲ್ಲಿ ವರ = boon ಎಂಬ ಅರ್ಥದಲ್ಲಿ ಬಳಸಿದ್ದೇನೆ.

    • ತುಂಬ ಚೆಲುವಾದ, ಅನವದ್ಯವಾದ ದತ್ತಪದಿ. ಮುಖ್ಯವಾಗಿ ದತ್ತಪದಗಳನ್ನು ಅರ್ಧಾಕ್ಷರರೂಪದಲ್ಲಿಯೇ ಅಳವಡಿಸಿದ ಚಾತುರಿ ಗಮನಾರ್ಹ.

    • ಹೊಳ್ಳ, ಚೆನ್ನಾಗಿದೆ ದತ್ತಪದಿಯ ಪರಿಹಾರ, ಸರಸ್ವತಿಯನ್ನು ಕೇಳಬೇಕಾದ ವರ ಇದೆ ಸರಿ:-)

    • ಗಣೇಶರೆ, ಸೋಮ, ಧನ್ಯವಾದಗಳು. ಮೊದಲ ಬಾರಿಗೆ ಚೌಪದಿಯ ಚಪ್ಪರದಲ್ಲಿ, ಪಂಚಮಾತ್ರಾಸಾಕ್ಷಿಯಾಗಿ, ಸಹೃದಯರ ಉಪಸ್ಥಿತಿಯಲ್ಲಿ ದತ್ತಪದಿ ‘ತುಳಿದಿದ್ದೇನೆ’ :). Divorce ಆಗದಿರಲಿ ಎಂಬುದೇ ಆಕಾಂಕ್ಷೆ.

      • ಕವಿತಾಕಾಂತೆ ದಲೊರ್ಮೆ ಕಯ್ವಿಡಿದಳೆಂದಾಗಳ್ ವಿವಾಹಕ್ರಮಂ
        ಸವಿಯಕ್ಕುಂ ಪದಮೊಂದರಿಂದೆ ಶತಸಾಹಸ್ರಂಬರಂ ಸರ್ವದಾ
        ನವಲೋಲ್ಲಾಸದ ಪಾದಪಾದಗತಿಗಳ್ ರಾಸಿಕ್ಯದಿಂ ಕಾವ್ಯಸಂ-
        ಭವಮಪ್ಪನ್ನೆಗಮೊಪ್ಪುತಿರ್ಕುಮದರಿಂ ನೀಂ ಕಾತರಂ ಗೊಳ್ವುದೇ?

        ಮಾರ್ಗಕಾವ್ಯರಮೆ ದೇಸಿಯೊಳ್ಪಿನಿಂ-
        ದಾರ್ಗೆ ಸಲ್ವಳೊ ಅವರ್ಗೆ ಬರ್ಪುದೇಂ
        ಸರ್ಗಹೀನಗತಿ? ಮೇಣ್ ವಿದೇಶದಾ
        ಮಾರ್ಗಮೋಹಿನಿಯೆ ಪದ್ಯಪಾನಿಕೆ?

        ಭರ್ಗನೆಂತು ನಿಜಭಾಮೆಯಂ ಸದಾ
        ಸ್ವರ್ಗಸೌಖ್ಯಸುಧೆಯಂ ಸ್ವದೇಹದೊಳ್
        ವರ್ಗಮಾಗದವೊಲೊಪ್ಪಿ ತಾಳ್ದನಂ
        ತಾರ್ಗೆ ತಾನೆ ಮಿಗೆ ದಕ್ಕಳೀಕೆ ಪೇಳ್!

        • ಗಣೇಶರೆ, ಮನಮುಟ್ಟುವ ಸಂದೇಶಕ್ಕಾಗಿ ಧನ್ಯವಾದಗಳು. ಜೊತೆಗೆ ಪದ್ಯದಲ್ಲಿರುವ ಒತ್ತಕ್ಷರಗಳು ಒಂದು ರೀತಿಯ ಗಾಂಭೀರ್ಯವನ್ನು ತಂದಿಂತನಿಸುತ್ತದೆ. ’ರ್’ಕಾರದ ಆಗಮನವೂ ಒಂದು ಬಿಗಿಯನ್ನು ತಂದಂತನಿಸುತ್ತದೆ. ಈ ರೀತಿಯ ಬಂಧ ಸಾಧಿಸಲು ಈ ಪದ್ಯದ ಮರ್ಮವನ್ನರಿಯುವುದೊಂದೇ ಮಾರ್ಗವೆನಿಸುತ್ತದೆ 🙂
          ಉಳಿದ ಓದುಗರಿಗಾಗಿ ಕೆಲವು ಪದಾರ್ಥಗಳು [ದಲ್ = ನಿಸ್ಸಂದೇಹವಾಗಿ, ಅನ್ನೆಗಂ = ಆ ವರೆಗೆ ಭರ್ಗ = ಈಶ್ವರ (ಕಾಂತಿ ಎನ್ನುವ ಅರ್ಥವೂ ಇದೆ) ಸರ್ಗ = ಸ್ವರ್ಗ. ಒಳ್ಪು = ಹೊಳಪು.]

  19. ಲಹರಿ: ಗ್ರಹಣದ ಬಗ್ಗೆ

    ಚಂದ್ರಮನುಂ ಪುಣ್ಣಿಮೆಯೊಳ್
    ಪೊಂದಿರ್ಪ ಸುಧಾರಸಂಸೆಳೆಯುವೊಲ್ ರಾಹುಂ
    ಚೆಂದದಿನೇಳಿಗೆ ಪಡೆದವ-
    ಗೆಂದುಂ ತಪ್ಪದು ಖಳರ್ಗಳಿಂ ಧೂರ್ತತೆಯುಂ

    • ರಚನೆಯ ಕಲ್ಪನೆ ಸೊಗಸಾಗಿದೆ. ಆದರೆ ರಾಹುಂ ಎನ್ನುವ ರೂಪಕ್ಕೆ ವ್ಯಾಕರಣದ ಅನುಮತಿಯಿಲ್ಲ. ಅಕಾರೇತರಪದಗಳು ಪ್ರಥಮವಿಭಕ್ತಿಯಲ್ಲಿರುವಾಗ, ಸಮುಚ್ಚಯಾರ್ಥಕವಿರುವಾಗ ಯಂ ಅಥವಾ ವುಂ ಬರುವುವಲ್ಲದೆ ಬರಿಯ “ಂ” ಬರುವುದಿಲ್ಲ.

      • ಗಣೇಶ್ ಸರ್,

        o, ವುಂ ಮತ್ತು ಯಂ ಬಳಕೆ ತಿಳಿಯಿತು.
        ಆದರೆ ಅನುಸ್ವಾರದ ನಿಯಮಗಳು ಇನ್ನು ನನಗೆ ಪೂರ್ಣವಾಗಿ ಅರ್ಥವಾಗಿಲ್ಲ, ಈ ಬಗ್ಗೆ ಮುಂದಿನ ಪಾಠದಲ್ಲಿ ಮಾಹಿತಿ ಕೊಟ್ಟರೆ ಕಲಿಕೆಗೆ ಉಪಯುಕ್ತವಾಗುತ್ತದೆ:-)

        ಪದ್ಯ ಸವರಿಸಿದ್ದೇನೆ:

        ಚಂದ್ರಮನುಂ ಪುಣ್ಣಿಮೆಯೊಳ್
        ಪೊಂದಿರ್ಪ ಸುಧಾರಸಂಸೆಳೆಯುವೊಲ್ ದೈತ್ಯರ್
        ಚೆಂದದಿನೇಳಿಗೆ ಪಡೆದವ-
        ಗೆಂದುಂ ತಪ್ಪದು ಖಳರ್ಗಳಿಂ ಧೂರ್ತತೆಯುಂ

        • ಸೋಮ – ಪದ್ಯ ಚೆನ್ನಾಗಿದೆ 🙂
          ಅನುಸ್ವಾರದ ನಿಯಮ ನಾನು ತಿಳಿದಿಕೊಂಡಿದ್ದು ಹೀಗೆ. “ಸೀತೆ”, “ರವಿ” ಎಂಬ ನಾಮಪದಗಳನ್ನು, ಸೀತೆಂ, ರವಿಂ ಎಂದು ಮಾಡಲಾಗುವುದಿಲ್ಲ. ಸೀತೆಯುಂ, ರವಿಯುಂ ಎಂದೇ ಮಾಡಬೇಕಾಗುತ್ತದೆ.
          “ಸಮುಚ್ಚಯಾರ್ಥಕವಿರುವಾಗ” – ಇದು ಏನೆಂದು ನನಗರ್ಥವಾಗಲಿಲ್ಲ [ಆದರೆ ಅರ್ಥವಾದ ಹಾಗಾಯ್ತು]. ಗಣೇಶರು ಉದಾಹರಣೆಗಳಿಂದ ಅರ್ಥೈಸಿದರೆ ಅರ್ಥವಾದೀತು. 🙂

  20. 1. ಸಮಸ್ಯಾಪೂರಣ-

    ಆಡಿಯುಮಾಡಿದ ಕಾರ್ಯಂ
    ಮಾಡದೆ ದುರ್ಜನರು ಮಾಳ್ಪುದೋ ವಿಪರೀತಂ|
    ಮಾಡುವ ಕಾರ್ಯವನೇನನು-
    ಮಾಡದೆ ಮಾಡುವುದೆ ಸಜ್ಜನರ ಗುಣವಲ್ತೆ||

    2.ದತ್ತಪದಿ

    ಸಕಲ ಜಗಮೇ ನಡೆವುದು ನಿನ್ನಿಂ ಸದ್’ವಾಕ್’ಯ
    ನಿಕ’ರಾಕ’ರೇ ಬೃಹಸ್ಪತಿ ಪ್ರೀತೆ
    ಸುಕಮ’ಲಾಕ’ರಮನ್ನಿದನ್ನರ್ಪಿಪೆ ಮಾತುಗ
    ಳಕಲಂಕ ಹೊಮ್ಮಿಸ’ಲೇಕೆ’ ವಿಳಂಬ?

    3.ಕವಿತೆಯ ವರ್ಣನೆ

    ಕವಿತೆ ವಾಣಿಯ ಪುತ್ರಿ ನೀಂ ನವ
    ಯುವತಿ ಸಾಲಂಕೃತಳು ಛಂದೋ
    ದ್ಭವಳು ಕವಿಮನಜಾತೆ ವಾಹಿನಿ ಗತಿಯ ಶೋಭೆಯಲಿ
    ನವಿರಿನಿಂ ಭವ ಸಕಲ ಮರೆಸಿಂ
    ಕವಿಯ ಭಾವಸಮಾಧಿಹೇತುವು
    ಭವದಲಮೃತಸಮಾನ ನಿಧಿ ನೀಂ ಮಾನಿಸರಿಗಲ್ತೇ||

    4. ಭಕ್ತಿಲಹರಿ :-

    ಪರಮ ಪಾವನ ಪಿತನೆ ಪೀತಾಂ
    ಬರವ ಧರಿಸಿಹ ಪುಣ್ಯ ಪೂತನೆ
    ಹರಿಯೆ ಪೆದೆಯಾಕರ್ಣ ಸೆಳೆದುಂ ಶರವ ಪೇರಿಪನೆ
    ನರರ ಪೈಕಿಯ ಪೊರೆಯೊ ಪೋರಟೆ
    ವಿರಸ ನೀಗುತ ಪೌರುಷಾಂಕಿತ
    ನಿರುವೆ ದೇವನೆ ಪಂಕಜಾಕ್ಷಾಪಃ ಸ್ವಭಾವಿಯು ನೀ||
    (ಪ,ಪಾ,ಪಿ,ಪೀ… ಎಲ್ಲಾ ಕಾಗುಣಿತಗಳೂ ಬರುವಂತೆ ಪ್ರಯತ್ನಿಸಿದ್ದೇನೆ. ದಯವಿಟ್ಟು ತಪ್ಪಿದಲ್ಲಿ ತಿದ್ದಿ ಹೇಳಿರಿ)

    5. ಚಿತ್ರಕ್ಕೆ ಪದ್ಯ

    ರವಿಯಾವಸಾನ ತೋರಿಂ
    ಭವದೊಳುದಯಿಸುತ್ತಿಹಂಗೆ ಪಿತ ತಾ ಪೇಳ್ದಂ
    ಜವದಿಂ “ಸೀ ಸನ್ ಗೋಸ್, ನವ್
    ಇವನಿಂಗ್ ಕಮ್ಸ್. ವಾಟ್ ? ಯು ಸೇ ಇಟೊನ್ಸೆಂ’ದೆನುತಂ!!

    • ನಿಮ್ಮ ಪ್ರಯತ್ನ ಸುತರಾಂ ಸ್ತುತ್ಯ. ಆದರೆ ಇಲ್ಲಿಯ ಪದ್ಯಗಳಲ್ಲಿ ಹಲವಾರು ವ್ಯಾಕರಣದೋಷಗಳಾಗಿವೆ. ಇವನ್ನು ಇಲ್ಲಿ ವಿವರಿಸಲು ಯೆಡೆಯಿಲ್ಲ. ದೂರವಾಣಿಯಲ್ಲಿ ವಿಸ್ತರಿಸಿ ವಿವರಿಸಬಹುದು

      • ಧನ್ಯವಾದಗಳು ಗಣೇಶ್ ಸರ್,, ಈಗ ನಿಮಗೆ ಸಮಯಾವಕಾಶವಿದ್ದಲ್ಲಿ ಕರೆ ಮಾಡುವೆ!!??

    • ಕೊಪ್ಪಲತೋಟರೆ,
      ನಿಮ್ಮ ಪೂರಣಗಳು ಚೆನ್ನಾಗಿದೆ. ಪ, ಪಾ… ತರಿಸಿರುವ ಭಾಮಿನಿ ಬಹಳ ಸುಂದರ

  21. ಗಣೇಶ ಕೊಪ್ಪಲತೋಟರೆ,
    ನಿಮ್ಮ ಭಾಮಿನಿಯ ಪದ್ಯಗಳು ನನಗೆ ಬಹಳ ಇಷ್ಟವಾದವು – ವಿಶೇಷತಃ ಕವಿತೆಯ ವರ್ಣನೆ. ಭಕ್ತಿ ಲಹರಿಯಲ್ಲಿ ಪ, ಪಾ, ಪಿ, ಪೀ ಗಳನ್ನು ತಂದಿರುವುದೂ ಬಹಳ ಚೆನ್ನಾಗಿದೆ.

    ಇನ್ನು ಪಂಚ ಮಾತ್ರಾ ಚೌಪದಿಯ ದತ್ತ ಪದಿಯಲ್ಲಿ ::
    ಸಕಲಜಗ + ಮೇನಡೆವು + ದುನಿನ್ನಿಂ ಸದ್’ವಾಕ್’ಯ – ಲಗಂ (ಲಘು, ಗುರು) ಬಂದಿದೆ
    ನಿಕ’ರಾಕ’ರೇ ಬೃಹಸ್ಪತಿ ಪ್ರೀತೆ – ಇಲ್ಲಿ ತುದಿಯಲ್ಲಿ ಒಂದು ಮಾತ್ರೆ (ಕೊನೆಯ ಊನ ಗಣ) ಕಡಿಮೆಯಾಗಿದೆ
    ಸುಕಮ’ಲಾ+ ಕ’ರಮನ್ನಿ + ದನ್ನರ್ಪಿ+ ಪೆ ಮಾತುಗ – ಲಗಂ ಬಂದಿದೆ
    ಳಕಲಂಕ ಹೊಮ್ಮಿಸ’ಲೇಕೆ’ ವಿಳಂಬ? – ಮಾತ್ರೆಗಳ ಸಂಖ್ಯೆ; ಗಣಗಳ ಒಡೆಯುವಿಕೆ ಗಮನಿಸಿರಿ

    • ಧನ್ಯವಾದಗಳು ಸರ್..
      ಇದು ನನ್ನ ಮೊಟ್ಟಮೊದಲ ಚೌಪದಿಯಾದ ಕಾರಣ ನಿಯಮಗಳ ಬಗ್ಗೆ ಸರಿಯಾಗಿ ಚಿಂತಿಸಲಾಗಲಿಲ್ಲ. ಈರೀತಿ ಸರಿಪಡಿಸುವ ಯತ್ನ ಮಾಡಿದೆ.
      ಸಕಲಜಗ ನಿನ್ನಿಂ ನಡೆವುದಲ್ತೆ ಸದ್ವಾಕ್ಯ
      ನಿಕರಾಕರೇ ಬೃಹಸ್ಪತಿಯಪ್ರಿಯೆ
      ಸುಕಮಲಾಕರಮನ್ನಿದನ್ನರ್ಪಿಸುವೆ ಮಾತ
      ಲಕಲಂಕ ಕೊಡಲೇಕೆ ಈ ವಿಳಂಬಂ

      • ಗಣ – ಮಾತ್ರೆಗಳ ದೋಷಗಳು ಕಳೆದಿವೆ. ಪೂರಣ ಚೆನ್ನಾಗಿದೆ 🙂

  22. ಚಿತ್ರಕ್ಕೆ ಕವಿತೆ
    ಘನತೆ ಗಂಭೀರತೆಯ ಹಿರಿಮೆಯು
    ಇನನದನುದಿನದುದಯ ತೇಜವು
    ಮನದಲೊತ್ತುವುದಚ್ಚು ತಮ್ಮ ಗುಣಂಗಳಾ ಭಾವ |
    ಇನಿದು ಸಾರಗಳೀ ಮಹಿಮೆಯಿಂ
    ಕನಿಸು ಕಂದನೆ ವಂಶದೇಳ್ಗನೆ
    ದಿನವು ನಿನ್ನದೆ, ಹೆಗಲ ಭದ್ರತೆಯಿಂದ ನೀನೇರು ||

    ಇನ = ಸೂರ್ಯ
    ಇನಿದು = ಅಮೃತ, ರುಚಿ, ಸಿಹಿಯಾದ
    ಕನಿ = ಹೊಳೆ, ಪ್ರಕಾಶ
    ಏಳ್ಗ = ಏಳ್ಗೆಯನ್ನು ತರುವವನು [ಈ ಪದ ನಿಘಂಟಿನಲ್ಲಿಲ್ಲ, ಈ ಪ್ರಯೋಗ ಸಾಧುವೋ ಅಲ್ಲವೋ ತಿಳಿದಿಲ್ಲ !]

    • ಏಳ್ಗ ಎನ್ನುವ ರೂಪ ಪ್ರಯೋಗದಲ್ಲಿಲ್ಲ. ನೀವು ಬಯಸುವ ಅರ್ಥದಲ್ಲಿ ಈ ಪದವನ್ನು ಬಳಸುವ ಬಗೆಗೆ ಸ್ವಲ್ಪ ಚಿಂತಿಸಬೇಕು:-)

      • ವಂಶದೇಳ್ಗೆಯೆ ಅಂದು ಮೊದಲು ಬರದಿದ್ದು, ನಂತರ ವಂಶದೇಳ್ಗ ಎಂಬ ಉಪಯೋಗ ಉಚಿತವೆನಿಸಿತು. ಹಾಗಾಗಿ ವಂಶದೇಳ್ಗನೆ ಎಂದು ಮಾಡಿದೆ.
        ಪ್ರಯೋಗದಲ್ಲಿಲ್ಲದ ಪದವೊಂದನ್ನು, ವ್ಯಾಖ್ಯಾನವಿಲ್ಲದೆಯೂ ಅರ್ಥವಾಗುವಹಾಗಿದ್ದರೆ, ಉಪಯೋಗಿಸಬಹುದೇ? ಅದಕ್ಕೆ ನಿಯಮಗಳೇನಾದರೂ ಇವೆಯೆ?

        • ಏಳ್ಗ ಎನ್ನುವ ಪದಪ್ರಯೋಗವು ಯುಕ್ತವೇ ಅದೀತೆಂದು ನನ್ನ ಅನಿಸಿಕೆ. ಏಕೆಂದರೆ ಕೇಳ್ಮೆ, ಕೇಳುಗ; ಬಾಳ್ತೆ, ಬಾಳುಗ; ಕೊಳ್ಗೆ,ಕೊಳ್ಳುಗ; ಸೊಲ್ಮೆ, ಸೊಲ್ಲಿಗ ಇತ್ಯಾದಿ ರೂಪಗಳಿರುವಂತೆ ಇದನ್ನೂ ಗ್ರಹಿಸಬಹುದೆನಿಸುತ್ತದೆ. ಈ ಬಗೆಗೆ ಮತ್ತಷ್ಟು ಬೆಳಕು ಹಾಯಿಸಬಲ್ಲವಿಗೆ ಸ್ವಾಗತ

  23. ವರ್ಣನೆ:

    ಜೀವನದೊಳೀ ಬಿಸಿಲ ಬೇಗೆಗೆ
    ಭಾವಜನದನುಭವದ ಬಿಂದುವಿ-
    ನಾವಿ ತೀವಲು ಮೋಡ ಕಟ್ಟಿತು ಮನದ ಮುಗಿಲಿನೊಳು
    ತಾವು ಕವಿತೆಯೆ, ಮಿಂಚಿನಂದದಿ
    ಸೈವೆಳಗೆ ಮನದೊಳಗೆ, ಆಹಾ!
    ದಾವ ತಗ್ಗಿಪ ಕಾವ್ಯವರ್ಷಿಸೆ ನಲಿಯೆ ಭೂಲೋಕಂ

    [ತೀವು = ತುಂಬು, ಸೈವೆಳಗು = ಸೈಬೆಳಗು, ಚೆನ್ನಾಗಿ ಬೆಳಗು]

    • ರವೀಂದ್ರ – ಭಾವ, ಅನುಭವಗಳ ವರ್ಷದ ಕಲ್ಪನೆಯಾ(ಗಿಸಿ)ದ ಕೆವಿತೆ ಸೊಗಸಾಗಿದೆ.

    • ಚೆಲುಗವಿತೆಯಂ ಹೆಣೆದ ಚಾತುರಿ,
      ಗೆಲುಗವಿತೆಯಂ ಸಮೆದ ಮಾಧುರಿ,
      ಮೆಲುಗವಿತೆಯಂ ಮಸೆದ ಮಾದರಿ ಸಾಧು ಸಾಧು ಕಣಾ!
      ಅಲಘುಭಾವಗಳೋಜೆಯಂ ನಿರ್-
      ಮಲಘನಾತ್ಮಸಮೂರ್ಜೆಯಂ ನಿ-
      ಶ್ಚಲಘನಸ್ತನಿತಾಜಿಯಂ ಕವನಿಸಿದೆಯಯ್ ಗೆಳೆಯಾ!!

      • holla, tumba chennagide ee kalpane:)

      • ಗಣೇಶರೆ,
        ಇದು ಕೇಸರಿಬಾತನ್ನು ಬಾದಾಮಿ ಬರ್ಫಿ ಹೊಗಳಿದ ಹಾಗಾಯ್ತು. ಈ ಪದ್ಯದ ಸೊಗಸು ಆದಿ ಅನು ಪ್ರಾಸಗಳ ಸೊಬಗು ರಮಣೀಯ. ೧,೨,೩ ಮತ್ತು ೪.೫ನೇ ಸಾಲಿನಲ್ಲಿ, ಲಘು ಗುರುಗಳೂ ಒಂದೇ ಹದದಲ್ಲಿ ಬಂದು, ಒಪ್ಪವಾಗುಟ್ಟ ಸೀರೆಯ ಸೆರಗಿನ ನೆರಿಗೆಯನ್ನು ನೆನಪಿಸುತ್ತಿದೆ. ಸುಂದರಿ ದರ್ಪಣದಲ್ಲಿ, ತನ್ನ ಸೌಂದರ್ಯಕ್ಕೆ ಮೆಚ್ಚಿ ತಾನೇ ಹೊಗಳಿಕೊಂಬಂತೆ, ಈ ಪದ್ಯ ತನ್ನನ್ನೇ ನೋಡಿ ರಚಿಸಿಕೊಂಡಿತೋ ಎನ್ನುವ ಸಂಶಯ 🙂
        ಓಜೆ = ಸಾಲು, ಕ್ರಮ. ಊರ್ಜ = ಶಕ್ತಿ, ಪ್ರಯತ್ನ , ಅನಿತು = ಅಷ್ಟು ಆಜಿ = ಯುದ್ಧ.

  24. ಸಮಸ್ಯಾಪೂರ್ಣ:
    ಮಾಡಿದನೆ ದಾನವಂ? ಮುಂ-
    ದಾಡಿದನೆ ಭರವಸೆಯಂ? ಸುದಾಮಗೆ ನೋವೇನ್?
    ಜಾಡನರಿಯನೇನ್ ಕೃಷ್ಣನ
    ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ

    • ಪರಿಹಾರಗಳೀ ಸಾಲ್ಗಂ
      ಪರಿಮಿತವಿಧದಿಂದೆ ಸಲ್ವುವಾದೊಡಮದರೊಳ್|
      ಸರಸೋದಾರವಿನೂತ್ನ-
      ಸ್ಫುರಣದೆ ನೀನೊರೆದ ಪದ್ಯಮಿದು ದಲ್ ಹೃದ್ಯಂ||

    • holla, tumba chennagide:)

  25. ಪ್ರಿಯ ಮಿತ್ರರೆ,
    ಈ ಪಕ್ಷಕ್ಕೆ ನನ್ನ ದೇಣಿಗೆ (!):

    ಕವಿತೆಗೊಪ್ಪುವ ಭಾವನಾಡಿಯ
    ದವಿತುಕೊಂಡಿಹುದೆಂದು ನಮ್ಮೀ
    ಕವಿಯ ಚಿತ್ತಕ್ಷೋಭೆಗೊಳಿಸುವ ಪ್ರಶ್ನೆ ಬಾಧಿಸಲು
    ರವಿಯ ತೇಜವದಿಲ್ಲ ನಭದೊ
    ಳ್ಕವಿದ ಮೋಡದ ಮಧ್ಯವಿದ್ಯು
    ನ್ನಿವಹ ಕಾಣಿಸೆ ಛಂದಗತಿಯಲದಿಂದ್ರಮಂದಾರ |

    ಕೂಡಿರೆ ಸದ್ಗುಣ ಶಾಂತಿಯ
    ಗೂಡಿಗೆ ಸತ್ಯದ ಸುಬುದ್ಧಿಯ ತಣ್ಣೆರಳದು ತಾಂ
    ಕಾಡದು ಪಕ್ಕಿಯಮಂತೆಯೆ
    ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ |

    ಧನ್ಯವಾದ,
    ವಿವೇಕ

    • ಎರಡನೆಯ ಪಾದದಲ್ಲಿ ಬಹುಶಃ ಕಣ್ಮರೆವೆಯಿಂದ ಒಂದು ಮಾತ್ರೆಯಷ್ಟು ಹೆಚ್ಚಾಗಿದೆ. ಆದುದರಿಂದ ಅದನ್ನು ಹೀಗೆ ಸವರಿಸಬಹುದು:
      ………ಸತ್ಯದ ಸುಬುದ್ಧಿ ತಣ್ನೆಳಲೆನೆ ತಾಂ|……..
      ಕಾಡದು ಪಕ್ಕಿಯನಂತೆಯೆ

      • ನಿನ್ನೆಯೇ ನನ್ನ ಮೆಚ್ಚುಗೆಯನ್ನು ದಾಖಲಿಸಬೇಕೆಂದಿದ್ದೆನಾದರೂ ಅನವಧಾನದಿಂದ ಆಗಲಿಲ್ಲ, ಮನ್ನಿಸಿರಿ.
        ವಿವೇಕಾನಂದರ ಕವಿತೆಯ ವಿಶೇಷತೆಯಿರುವುದು ಕೇವಲ ಅವರ ಕಲ್ಪನೆಯಲ್ಲಿ ಮಾತ್ರವಲ್ಲದೆ ಅವರು ಹೆಣೆದಿರುವ ನಿಬಿಡಬಂಧದಲ್ಲಿಯೂ ಇದೆ. ಇದನ್ನು ಪದ್ಯಪಾನದ ಅಭ್ಯಾಸಿಮಿತ್ರರೆಲ್ಲ ಗಮನಿಸಬೇಕೆಂದು ವಿನಂತಿ.

    • ಪ್ರಿಯ ವಿವೇಕ – ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಪದ್ಯಗಳು ಸೊಗಸಾಗಿವೆ. 🙂

    • ದೇಣಿಗೆ ಭರ್ಜರಿಯಾಗಿದೆ ವಿವೇಕಾನಂದರೆ. ನಿಮಗೆ ಈ ಪಕ್ಷದಲ್ಲೀಗ ಕಾಯಂ ಸದಸ್ಯತ್ವ 🙂

  26. ಮಾಡದಿರಲಾಗದಿದಕಟ
    ಕಾಡುತಿಹುದಿದೆನ್ನನೆನ್ನದೆಲೆ ಗೋಳಿಡದೇ|
    ಆಡುತ್ತಾಡುತೆ ಗದ್ದಲ
    ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ||

    ಮೂರನೆಯ ಸಾಲು ಸ್ವರಾಕ್ಷರದಿಂದ ಆರಂಭವಾಗಿದೆ. ಸಾಧುವೆ?

    • ಇಲ್ಲ. ಸಂಧಿಯಾಗಿಸದೆ ಪದ್ಯರಚನೆಯೇ ಸಾಗದು. ಗದ್ಯದಲ್ಲಿ ಸಂಧಿ ಐಚ್ಛಿಕ. ಆದರೆ ಪದ್ಯದಲ್ಲಿ ಇದು ಅನಿವಾರ್ಯ.
      ಎರದನೆಯ ಪಾದದಲ್ಲಿ ಸ್ವಲ್ಪ ಎಡವು ತೋರಿದೆ. ಸ್ವಲ್ಪ ಸವರಿಸಿ

  27. 20-19-20-17 (ಕಗ್ಗ) ಮಾದರಿ: ವಾಕ್, ರಾಕ್, ಲಾಕ್, ಲೇಕ್

    ವಾಕರಿಕೆ ಬಂದೊಡಂ ಪೊಡೆಕೆಟ್ಟೊಡಂ ಸರಿಯೆ
    ರಾಕ್ಷಸಿಯಿವಳ ಕೈಯ ಪಾಕವನುಣದಿಹೆನೆ|
    ಲಾಕ್ಷಣಿಕವನರಸಲ್ ಮಾಡಲ್ ಹಲಾಕು ಸ
    ಲ್ಲೇಖನವೆ ಗತಿಯಳಲೆಕಾಯಿರದೊಡಂ||

    • ಸಲ್ಲೇಖನವ್ರತ – ಆಮರಣಾಂತ ಉಪವಾಸವಿರುವ ವ್ರತ. ನಾಟ್ಯರಾಣಿ ಶಾನ್ತಲೆ ಮಾಡಿದ್ದಳು.

    • ಸರಸ್ವತಿಯ ಸ್ತುತಿ ಮಾಡಬೇಕಿತ್ತಲ್ಲವೆ:-)
      ಇರಲಿ, ಪದ್ಯದ ಆಶಯವೇನೆಂದು ತಿಳಿಯುತ್ತಿಲ್ಲ. ದಯಮಾಡಿ ವಿವರಿಸಿರಿ

      • ಇದು ಕಗ್ಗದ ಮಾದರಿ – ೨೦-೧೯-೨೦-೧೭. ವಾಸ್ತವವಾಗಿ ಛಾಯಾಗ್ರಾಹಕ ಸೆರೆಹಿಡಿಯಬೇಕಾದ್ದು ಸೂರ್ಯದೀಪ್ತಿಯಿಂದ ಬೆಳಗುವ ವಸ್ತುಗಳನ್ನು. ಇವನು ಅ ಬೆಳಕಮೂಲವನ್ನೇ ಸೆರೆಹಿದಿಹನಲ್ಲ, ಇವನು ಬರಿಯ ಛಾಯಾಚಿತ್ರಕಾರನೊ ಅಥವಾ ಕವಿಯೋ? (ಸದ್ಯವಿವನಿಗೆ ಗೌಣ – ಹತ್ತಿರದಲ್ಲಿ ಇರುವ ಆ ಇಬ್ಬರನ್ನು ಬರಿಯ ಸಿಲ್ಹಟ್ ಮಾಡಿದ್ದಾನೆ. ಗಣಿಸದೆ ಇನದೀಪ್ತಗಳನು, ಅನವದ್ಯವಾದ ಇನನೆ ಸೆರೆಹಿಡಿದಿಹನು. ಇಲ್ಲಿ ’ಇನನನೆ’ ಎಂದಾಗಬೇಕೇನೋ?)

      • ಅಯ್ಯೊ! ಸರಸ್ವತಿಸ್ತುತಿ ಮಾಡಬೇಕೆಂಬುದನೆ ಗಮನಿಸದೆ ಹೋದೆ.
        ಪದ್ಯದ ಅರ್ಥ: ವಾಕರಿಕೆ ಬಂದರೂ, ಹೊಟ್ಟೆ ಕೆಟ್ಟರೂ, ಈ ರಾಕ್ಷಸಿ ಮಾಡಿಬಡಿಸಿದ್ದನ್ನು ಉಣ್ಣದಿರಲಾದೀತೆ? ಅದರಲ್ಲಿ ಆ ಲಕ್ಷಣವಿಲ್ಲ, ಈ ಲವಣವಿಲ್ಲ, ಉಪ್ಪುಪ್ಪು ಸಪ್ಪೆ ಎಂದು ರಾಗ ಎಳೆದು, ಬಡಿಸಿದ್ದನ್ನು ಬಿಸುಟರೆ (ಹಲಾಕು), ಸಲ್ಲೇಖನವೆ ಗತಿ. ಆದ್ದರಿಂದ ಅದನ್ನು ಉಣಬೇಕು, ಮೇಲೊಂದಿಷ್ಟು ಅಳಲೆಕಾಯಿ ಕಷಾಯ ಕುಡಿದು ಹೊಟ್ಟೆಸರಿಮಾಡಿಕೊಳ್ಳುತ್ತಿರಬೇಕು.

      • ಆದಿಪ್ರಾಸವೂ ಅನಾದಿಪ್ರಾಸವಾಗಿದೆಯಲ್ಲ!!

  28. ಕವಿತೆಯ ಬಗೆಗೆ ಭಾಮಿನಿಷಟ್ಪದಿಯಲ್ಲಿ:

    ಕವಿತೆ ದಕ್ಕದು ನಾ ಜಗಣಗಳ
    ಸವರಲಾರೆನು ಕಂದಗಳ ಛಂ
    ದವಿರದೆಡೆ ಮೇಣ್ ವ್ಯಾಕರಣ ಸಿಂಹಗಣ ಯತಿಗಳನು|
    ತವಕಿಸುತಲುದ್ಯಮಿಸೆ ಕಾಡುತ
    ಲಿವೆ ನಿಯಮಗಳು ಹಾರಿ ಕಲ್ಪನೆ
    ಕವಿಯುವುದು ಮಂಕಿನ್ನು ಕೊನರೀತು ಕವನವದೆಂತು||

    • ತುಂಬ ಸೊಗಸಾದ ಕವಿತೆ. ನಿಜಕ್ಕೂ ಬಹಳ ರಮಣೀಯವಾಗಿದೆ. ಸ್ವಾನುಭವದ ಸಾರವಿಲ್ಲಿ ಹಾಸ್ಯದ ಹೊನಲಾಗಿ ಹರಿದಿದೆ. ಕೇವಲ ಕಡೆಯ ಸಾಲಿನ ತುದಿಯನ್ನಷ್ಟೇ ಸವರಿಸಬೇಕಿದೆ:
      ……………..ಮಂಕಿನ್ನು ಕವನವದೆಂತು ಕೊನರುವುದು?

      ಕವಿತೆಯ ಮೇಲೀ
      ನವಲವಿನೋದದ
      ಕವನವನೊರೆಯುವ ನಿಮ್ಮೆಸಕಂ|
      ಸ್ತವನಾರ್ಹಮೆ ದಲ್
      ಕವನಾರ್ಹಮೆ ದಲ್!
      ಸವಿಯಿಂ ಶರಷಟ್ಪದಿಯನಿದಂ||

      • ಧನ್ಯವಾದಗಳು. ಆಗಲೇ ಬರೆಯಬೇಕೆಂದಿದ್ದೆ. ಏಕೋ ಆ ಕೊನೆಯ ಭಾಗ ಸರಿಯಿಲ್ಲವೆಂದು. ಸಾಕಷ್ಟು ಕಸರತ್ತು ಮಾಡಿದ್ದರೂ ಸರಿಯಾಗಿರಲಿಲ್ಲ. ನೀವು ಸೂಚಿಸಿರುವುದು ’discarded’ನಲ್ಲಿದೆ. ಅದೇಕೆ ಹಾಗೆ ಮಾಡಿದೆನೋ ತಿಳಿಯದು.

  29. ಲಹರಿ:

    ಹಲವೌಡವಗಳೊಳಿದು ವಾಗ್ಗೇಯರ ಪ್ರಿಯಂ
    ಕಿಲ ಶಂಕರಾಭರಣಜನ್ಯವೀ ರಾಗಂ|
    ಖಿಲವು ಮಧ್ಯಮನಿಷಾದವಾರೋಹಣದೊಳೆನೆ
    ಬಿಲಹರಿಯನುಣಬಡಿಸಿದಂತೆಯಹುದೆ||

    (’ಕವಿತೆ’ ಕುರಿತ ಈ ಮೇಲಿನ ಪದ್ಯದ ಜಾಡೇ ಇದರದೂ! ಕ್ಷಮಿಸಿ)

    • ಕಲ್ಪನೆ ಸ್ಪಷ್ಟವಾಗಲಿಲ್ಲವಾದರೂ ಸೊಗಸಿನ ಸ್ಫುರಣ ಸ್ಫುಟವಾಗಿದೆ. ಆದರೆ ಸ್ವಲ್ಪ ಸವರಣೆ ಬೇಕಿದೆ:
      ….ಖಿಲವಾಗೆ ಮಧ್ಯಮ-ನಿಷಾದಂಗಳೇರಿನೊಳ್
      ಬಿಲಹರಿಯನುಣಬಡಿಸಿದಂತಪ್ಪುದೇಂ?
      (ಏರು ಎಂದರೆ ಆರೋಹಣವೆಂದು ತಿಳೀಯಬೇಕು)

      • ಏರ್. ಧನ್ಯವಾದಗಳು.
        ಇರುವ ಹಲವಾರು ಔಡವ ರಾಗಗಳಲ್ಲಿದೊಂದು. ವಾಗ್ಗೇಯಕಾರರಿಗೆ ಪ್ರಿಯವಾದ್ದು…… ಹೀಗೆ ಬರಿಯ ವಿವರಗಳನ್ನು ನೀಡಿದರೆ, ರಾಗ ಕೇಳಿಸಿದಂತಾಯ್ತೆ? ಒಳ್ಳೆಯ ಕವನವೇನಲ್ಲ.

        • ಪ್ರಸಾದರು ಮನ್ನಿಸಬೇಕು; ನಿನ್ನೆಯ ನನ್ನ ಪ್ರತಿಕ್ರಿಯೆಯಲ್ಲಿ ಹಲವಾರು ಸಂಗತಿಗಳನ್ನು ಬಿಟ್ಟಿದ್ದೆ. ಮೊದಲಿಗೆ ಬಿಲಹರಿ ರಾಗವು ಆದ್ಯಂತ ಔಡವವಲ್ಲ. ಕೇವಲ ಅದರ ಆರೋಹಣದಲ್ಲಿ ಮಾತ್ರ ಐದು ಸ್ವರಗಳಿದ್ದು (ಸ ರಿಗ ಪ ಧ ಸ) ಅವರೋಹಣದಲ್ಲಿ ಏಳೂ ಸ್ವರಗಳಿರುತ್ತವೆ. ಇದು ಋಜುಮೂರ್ಛನೆಯ ರಾಗ. ಆರೋಹದಲ್ಲಿ ಮೋಹನ ಹಾಗೂ ಅವರೋಹದಲ್ಲಿ ಶಂಕರಾಭರಣಗಳ ಸ್ವರಗಳಿವೆಯೆಂದರೆ ಸರಳವಾದೀತು:-)
          ಎರಡನೆಯ ಪಾದದಲ್ಲಿ ಬಳಸಿರುವ “ಕಿಲ” ಪದವು ಸಂಸ್ಕೃತದ ಅವ್ಯಯ. ಇದನ್ನು ಕನ್ನಡದಲ್ಲಿ ಬಳಸುವಂತಿಲ್ಲ. ಕೇವಲ ಕೆಲವೇ ಸಂಸ್ಕೃತದ ಅವ್ಯಯಗಳಿಗೆ ವಿನಾಯಿತಿ ಇದೆ (ಉದಾ: ಉಚ್ಚ, ನೀಚ, ಪ್ರತ್ಯಕ್, ತಿರ್ಯಕ್, ಉದಕ್, ಅವಾಕ್, ಪ್ರಾಕ್, ಅರ್ವಾಕ್,ಇತ್ಯಾದಿ ದಿಗ್ವಾಚಕಶಬ್ದಗಳು; ಮಾ, ನ, ಅಥವಾ, ಪರಂತು, ವಾ ಯಥಾ-ತಥಾ ಮುಂತಾದುವು). ಕಿಲ, ಖಲು, ಯದಿ, ತರ್ಹಿ, ಹ, ವೈ ಇತ್ಯಾದಿಗಳಿಗೆ ಅವಕಾಶವಿಲ್ಲ.ನಿಜ, ಈ ಬಗೆಗೆ ಹಲವು ತೆರನಾದ ವಾದಗಳನ್ನು ಪರ-ವಿರೋಧವಾಗಿ ಮಾಡಬಹುದು. ಆದರೆ ಪೂರ್ವದ ಮಹಾಕವಿಗಳ ಪ್ರಯೋಗಗಳಿಗೆ ನಾವು ಬಹುಮಟ್ಟಿಗೆ ಬದ್ಧರಾಗಬೇಕಲ್ಲವೆ!

          • ಶ್ರಮ-ಸಮಯ ತೆಗೆದುಕೊಂಡು ಇಷ್ಟು ತಿಳಿಸಿರುವಿರಿ. ಬರಿಯ ಧನ್ಯವಾದ ಹೇಳಲಾರೆ. ಇನ್ನುಮೇಲೆ ವಿಕಿಪೇಡಿಯ ನೋಡುವುದಿಲ್ಲ.

  30. 3ನೆಯ ಪಾದ ೩ನೆಯ ಗಣದಲ್ಲಿ ಲಗಂ ನುಸುಳಿತು…

  31. ಹಲವೌಡವಗಳೊಳಿದು ವಾಗ್ಗೇಯರ ಪ್ರಿಯಂ
    ಕಿಲ ಶಂಕರಾಭರಣಜನ್ಯವೀ ರಾಗಂ|
    ಖಿಲವು ಮಧ್ಯಮನಿಷಾದಗಳಾರೊಹದೊಳೆನ
    ಲ್ಬಿಲಹರಿಯನುಣಬಡಿಸಿದಂತೆಯಹುದೆ||

  32. ಸೂರ್ಯಾಸ್ತದ ಚಿತ್ರವನ್ನು ನೋಡುತ್ತ ಕುಳಿತಿದ್ದೇನೆ. ಏನೂ ಹೊಳೆಯುತ್ತಿಲ್ಲ.

    • ರಂಗನಾಥ! ಸಖವರ್ಯ! ನೋಳ್ಪುದಯ್
      ರಂಗುರಂಗಿನಿನನಸ್ತಮಾಂಕಮಂ|
      ಸಾಂಗಮಾಗಿಯೆ ನಿಸರ್ಗಶಾಲೆಯೊಳ್
      ಪೊಂಗಿಬರ್ಪುದಲ ಕಾವ್ಯಮಾಗಳೇ!!

      ( ಪೂರ್ವಸೂರಿಗಳಾದ ಕಾಳಿದಾಸ, ಭಾರವಿ, ಮಾಘ, ಶ್ರೀಹರ್ಷ, ಕುಮಾರದಾಸ, ರತ್ನಾಕರ, ಶಿವಸ್ವಾಮಿ ಮುಂತಾದವರೆಲ್ಲ ಸೂರ್ಯಾಸ್ತವನ್ನು ರಥೋದ್ಧತಾ ಹಾಗೂ ಇದಕ್ಕೆ ತೀರ ಹತ್ತಿರವಾದ ಸ್ವಾಗತಗಳಂಥ ವೃತ್ತಗಲನ್ನೇ ಬಳಸಿದ್ದ ಕಾರಣ ನಾನೂ ಇಲ್ಲಿ ರಥೋದ್ಧತೆಯನ್ನೇ ಬಳಸಿದ್ದೇನೆ.)

      • ಪಾದಾಂತ್ಯಗಣದಲ್ಲಿ ’ಲಗಂ’ ಇರುವ 5+5+6ರ ಯಾವ ಛಂದವಿದು?

      • ಮಾನನೀಯ,

        ನಿಮ್ಮ ಉತ್ತೇಜನಪದ್ಯದ ಆದ್ಯಕ್ಷರಗಳನ್ನೇ ಬಳಸಿಕೊಂದು ಬರೆದಿದ್ದೇನೆ. ೨೦-೨೧-೨೦-೨೧ ಅನುಮತವೆ?

        ಮಂಗನಂತಾಗಿ ರಂಗ ಕರಚಿಲ್ಲಿ ಕುಳಿತನು
        ರಂಗೆಲ್ಲಿನ್ನಸ್ತದ ಕರಾಳವನೆ ಕಾಣುತಿಹನು|
        ಸಾಂಗನಾದನಿದೊ ತಾನೀಗ ಕೂರ್ಮನಾದನ್
        ಪುಂಗಿಯೂದಿದುದೆ ಬಂತು ಬರಲಿಲ್ಲವಯ್ ಪಾವು||

    • ಪ್ರಸಾದ್,
      ತಂದೆ ಮಗನೊಡನಿರುವ ದೃಶ್ಯವ
      ದೆಂದು ಜನರಿಗೆ ತೋರದೇ ಸಂ –
      ಬಂಧಗಳ ಸಮರಸತೆಯಾ ಸಮಭಾವ ಲಹರಿಗಳಾ |
      ಸಂಧಿ ಸಮಯವದಸ್ತಕಲ್ಲದೆ
      ಮುಂದೆಯುದಯಕು ಮತ್ತೆ ಬರುತಿರ –
      ಲಂದದಾ ಕಡಲಾಟದೊಡೆ ಇಹ ಮಿಗಿಲ ಸಾಮಗ್ರಿ ||

      • @ Ram
        ಸರಿಯೆ ಚಿತ್ರದೊಳಿಹರ್ ತಂದೆ ಮೇಣಾತ್ಮಜರ್
        ಬರೆದೊಡಂತೆಯೆ ಸೊಗಯಿಸುವುದೆ ರಾಮಾ|
        ತೆರೆದು ನೋಡದೆ ಬಗೆಯನಿದ್ದುದ್ದನಿದ್ದಂತೆ
        ಯೊರಲಿದೊಡೊದೆಯುವರೆದ್ದೆದೆಗೆ ನೋಡಾ||

        • ಪ್ರಸಾದ್,
          ಎದೆಗೊದೆವರಿಲ್ಲಿಲ್ಲ ಸದೆಬಡಿವರಿವರಲ್ಲ
          ಒದೆದರಾದರೆಯದುವು ಕುಂಡೆಗಲ್ತೆ |
          🙂

          • ರಾಮ್,
            ಒದ್ದೊಡೆದೆಗೆ ಪೊಂಗಿ ಬಹುದು ಕಲ್ಪನೆ
            ಗದ್ದುಗೆಯಲ್ತದು ಭಾವಗಳಿ|
            ಗೊದ್ದೊಡೆ ನೀ ಪೇಳ್ದಂಗಕಣಿಗೊಳೈ
            …………………………………… ನೀಂ||

          • ಪ್ರಸಾದ್,
            ಭೌತಶಾಸ್ತ್ರದ ನಿಯಮದನುಸಾರದೊಳ್ ಬಲವು
            ಹೇತುಪ್ರೇರಕವಲ್ತೆ ಸಮರೇಖೆಯೊಳ್ ?
            ಆತುಗೊಂಡಿರೆ ಕಲ್ಪನೆಯ ಭಾವ ಮುಂಡದೊಳು
            ಮಾತನುದುರಿಸಲೊದೆತವಂಡಿಗಲ್ತೆ ??
            🙂

          • ರಾಮ್, ವೆರಿ ಸ್ಮಾರ್ಟ್!
            ಭೌತಶಾಸ್ತ್ರದ ಪ್ರಕಾರ ಯಾವುದೇ ಎರಡು ಬಿಂದುಗಳು ಸಮರೇಖೆಯಲ್ಲಿರುತ್ತವೆ. ಹಾಗೆಂದು ಈ ತುದಿಯಲ್ಲಿ ಒದ್ದು ಇನ್ನೆಲ್ಲೋ ಇರುವ ಆ ಇನ್ನೊಂದು ತುದಿಯಲ್ಲಿರುವುದನ್ನು ಉದುರಿಸಲು ಸಾದ್ಯವೆ?
            ಭೌತಶಾಸ್ತ್ರದ್ದಿದನ್ವಯವೈಪರೀತ್ಯಮಂ
            ಕೌತುಕಮದೊಂದುಮಿಲ್ಲಿಲ್ಲ ಕೇಳೌ|
            ಭೌತದೀರ್ಬಿಂದುಗಳ್ಸಮರೇಖವೆಲ್ಲು ಪೇ
            ಳೌ ತುಳಿಯುತಿಲ್ಲಿಳುಕಲಲ್ಲಕ್ಕುಮೇ||
            ಈರ್ = ಎರಡು
            ಇಳುಕಲು = ಕೆಡವಲು, ಉದುರಿಸಲು

  33. ಚಿತ್ರಕ್ಕೆ ಪದ್ಯ:

    ಪದ್ಯಕಾರನೊ ಛಾಯಕಾರನೊ ತಿಳಿಯದೀತ
    ಸದ್ಯವಿವನಿಗೆ ಗೌಣ ದಿಟ್ಟಿಹ ದಿಗಂತವ|
    ಹೃದ್ಯ ವಸ್ತುಗಳ ಗಣಿಸದಿನದೀಪ್ತಗಳನನ
    ವದ್ಯವಾದಿನನೆ ಗ್ರಹಿಸಿಹನೇಕೋ||

    • ಛಂದವಾವುದೊ? ಬಂಧವಾವುದೊ?
      ಒಂದು ತಿಳಿಯುತ್ತಿಲ್ಲವಯ್!!!…. “-_-“

  34. ಲಹರಿ ಭಾಗಕ್ಕೆ
    ಪ್ರಸಿದ್ಧ ಸಂಸ್ಕೃತ ಪದ್ಯವಾದ “कार्येषु दासी … रूपेषु लक्ष्मी ….” ಇಂದ ಪ್ರೇರಿತವಾದ ಪದ್ಯವಿದು. ತಿದ್ದುಪಡಿಯ ನಂತರ ಹಾಕಿದ್ದೇನೆ. ಮಂದಾಕ್ರಾಂತಾ ಛಂದಸ್ಸಿನಲ್ಲಿದೆ

    काचित्कन्या सरलवनिता स्निग्धवर्णा मृगाक्षी
    गीतासक्ता ललितवदना चेतनाकर्षिका चेत्
    स्वास्थ्योल्लासं नयतु सततं मानसे सर्वथा सा
    चायेवार्या चरतु मधुरा पार्श्वसंस्था ममापि

    • correction : last line should’ve been
      छायेवार्या चरतु मधुरा पार्श्वसंस्था ममापि

  35. ಲಹರಿ ವಿಭಾಗಕ್ಕೆ ಮತ್ತೊಂದು ಪದ್ಯ.
    ಈಗ ಚಳಿಗಾಲವಾದ್ದರಿಂದ ಮಂದಾಕ್ರಾಂತಾ ಛಂದಸ್ಸಿನಲ್ಲಿ ಋತು ವರ್ಣನೆ. ಗಣೇಶರ ಸೂಚನೆಯಂತೆ ಮಾರ್ಪಡಿಸಿದ್ದೇನೆ. ಆದರೂ ತಪ್ಪುಗಳು ನುಸುಳಿದ್ದರೆ ಅವೆಲ್ಲ ಸ್ವಯಂಕೃತ

    हेमन्तर्तौ हरिसुवसतिः पूर्णमाच्छादिता वै
    कूर्मो भूत्वा कमलनयनस्संहरत्यङ्गमन्तः |
    श्रीः तत्पत्नी धनिकनिलये वित्तकोषे व्यगूहत्
    निर्मोकेऽहिः प्रविशतिपुनश्शीतलेनापसर्तुम् ||

  36. Raghavendra, mandakranta shlokas are very good 🙂

    What does निर्मोकेऽहिः mean

    • @ಸೋಮ
      ಧನ್ಯವಾದಗಳು 🙂
      निर्मोक —> ಕಳಚಲ್ಪಟ್ಟ ಹಾವಿನ ಚರ್ಮ ಅಥವಾ ಹಾವಿನ ಪೊರೆ
      अहि —–> ಹಾವು

  37. ಕವಿತೆಯ ಬಗೆಗೆ ಭಾಮಿನಿಯಲ್ಲಿ:

    ಬರೆಯೆ ಛ೦ದದೆಲೆಯಲಿ ಸಾಲ೦
    ಕರದಿ ಘಮಿಪ ವ್ಯ೦ಜನ೦ಗಳ,
    ಸರಸದೌಚಿತ್ಯದಲಿ, ರಸಿಕರ ರೀತಿ ಗೊಪ್ಪುವವೊಲ್ |
    ಬೆರೆಸಿ ವಕ್ರೋಕ್ತಿವಿಷಯಾನ್ನಕೆ
    ಮೆರೆಯೆ ಕವಿಬಾಣಸಿಗಪಾಚಕನ ಸೃಷ್ಟಿಯು
    ಮೊರೆದ, ಕಬ್ಬಮನು೦ಡ ಸಹೃದಯ ದನಿಯ ತೇಗಿನಲಿ ||

    • ಶ್ರೀಶ – ರಸಮಯ ಊಟದ ಉಪಮೆ ಚೆನ್ನಾಗಿದೆ

    • ಹಸಿವಾಗ್ತಿದೆ!

    • ಶೀಶರ ಕಲ್ಪನೆ ಚೆಲುವಾಗಿದೆ. ಆದರೆ ಹಲವೆಡೆ ಪದ್ಯದ ಗತಿಯು ಕುಂಠಿಸಿದೆ. ಮಾತ್ರೆಗಳ “ಶ್ಯಾನುಭೋಗರ”ಲೆಕ್ಕವೇನೋ ಸರಿಯಿದೆ:-) ಆದರೆ ಕವಿಯ ಕಿವಿ ಮಾತ್ರ ಸ್ವಲ್ಪ ಕೆಪ್ಪಾಗಿದೆ!!
      ಕವಿಬಾಣಸಿಗಸೃಷ್ಟಿ ಎಂಬುದು ಅರಿಸಮಾಸ:-) ಕವಿಪಾಚಕನ ಸೃಷ್ಟಿ ಎಂದಲ್ಲಿ ಮತ್ತೂ ಸೊಗಸಾದೀತು.

      • ನೀವು ಪ್ರತಿಯೊಬ್ಬರ ಪದ್ಯವನ್ನೂ ಆಸ್ಥೆಯಿ೦ದ ನೋಡಿ ಪ್ರತಿಕ್ರಿಯೆ/ತಿದ್ದುಪಡಿಯನ್ನು ಹೇಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯ(luxury)….ನಿಮ್ಮ ಸಮಯವನ್ನು ಆದಷ್ಟು ಕಡಿಮೆ ಪೋಲುಮಾಡಿಸುವತ್ತ ನಾವುಗಳು ಮು೦ದುವರೆಯುವುದಾಗಲಿ ಎ೦ದುಕೊಳ್ಳುತ್ತೇನೆ…

        ಕರ್ತೃವಿಗರಿಯದ೦ತೆ, ಅವನರಿಯು ನಡೆಸುವ ಗೆರಿಲ್ಲಾ ಎ೦ದರೆ ಈ ಅರಿಸಮಾಸ…..ಸರಿಪಡಿಸಿದ್ದೇನೆ…”ಶ್ಯಾನುಭೋಗರ ಲೆಕ್ಕಾಚಾರ” ಸ್ವಲ್ಪ ತಿಣುಕಾಟದ ಫಲ….ಸ್ವಲ್ಪ ಸಮಾಧಾನದಿ೦ದ ಬರೆದಿದ್ದರೆ “ಗಣಿತೆ”ಯ ಬದಲು “ಕವಿತೆ”ಯ ಕರೆಯಬಹುದಿತ್ತು….ಮು೦ದೆ ಪ್ರಯತ್ನಿಸುವೆ….

  38. ಸಂತುಲಿತಮಧ್ಯಾವರ್ತಗತಿಯೆಂದು ಶಾಸ್ತ್ರೀಯವಾಗಿ ಗುರುತಿಸಲ್ಪಟ್ಟ; ೩+೫, ೩+೫, ೩+೫, ಗುರು ಎಂಬ ಮಾತ್ರಾವಿನ್ಯಾಸದಲ್ಲಿ ಮೈದಳೆದ ಬಲುಸೊಗಸಾದ ಛಂದಸ್ಸಿನಲ್ಲಿ ಪದ್ಯಗಳನ್ನಿಲ್ಲಿ ನಿವೇದಿಸುತ್ತಿದ್ದೇನೆ. ಇದರ ಮೂಲ ಸಂಸ್ಕೃತದ ರಥೋದ್ಧತವೃತ್ತದಲ್ಲಿದೆ. ಕನ್ನಡಕ್ಕಿದು ಪಂಪಭಾರತದಷ್ಟೇ ಪ್ರಾಚೀನ. ಯಕ್ಷಗಾನಗಳಲ್ಲಿಯೂ ವಿಶ್ರುತ. ನವೋದಯಕವಿತೆಯಲ್ಲಿ ಆಚಾರ್ಯ ಬಿಎಂಶ್ರೀ ಅವರು ಮೊದಲು ತಮ್ಮ ಇಂಗ್ಲಿಷ್ ಗೀತಗಳಲ್ಲಿದನ್ನು ಬಳಸಿದರಾದರೂ ಬೇಂದ್ರೆಯವರಿದನ್ನು ತಮ್ಮ ಅನೇಕಕವಿತೆಗಳ ಮೂಲಕ ಜನಪ್ರಿಯಗೊಳಿಸಿದರು. ವಿಶೇಷತಃ ಅವರ ಕನ್ನಡಮೇಘದೂತವು ಈ ಛಂದಸ್ಸಿನ ಮೂಲಕ ಲೋಕವಿಶ್ರುತವಾಯಿತು. ಅವರು ಬರಿಯ ಅಂತ್ಯಪ್ರಾಸವನ್ನು ಪಾಲಿಸಿದ್ದಾರೆ.ನಾನು ಆದ್ಯಂತಪ್ರಾಸಗಳೆರಡನ್ನೂ ತಂದಿದ್ದೇನೆ.

    ರಾಮಚಂದ್ರರೇ! ರಂಗನಾಥರೇ! ಪದ್ಯಪಾನದಲ್ಲರುವ
    ಕ್ಷೇಮಕಾರಿ ವೈನೋದವಿದ್ಯೆಗೆ ಸ್ವಾಗತಸುಮ ಚೆಲ್ಲಿ|
    ಪ್ರೇಮದಿಂದ ಬರಲೆಂಬೆನಾದರೂ ಸೊಂಟದಿಂದ ಕೆಳಗೆ
    ವಾಮಮಾರ್ಗದೊಳ್ ಬಾರದಿರ್ಕೆ, ತಾಣವಿದು ಬಾಳ್ಗೆ ಬೆಳಗೆ!!

    ದಿಟ, ವಿನೋದಮಯಪದವಿದ್ಯೆಯಲ್ಲಿಲ್ಲವಾವ ವಾದ
    ಸ್ಫುಟವಿಲಾಸವಿರೆ ನುಡಿಯ ಬೆಡಗಿಗಶ್ಲೀಲ-ಶೀಲಭೇದ|
    ಕಟುವೆನಿಸದೆ ಮೇಣಿರ್ಕೆ ತಾಣವಿದು ಸರ್ವಜನಸಮಾನ
    ಕುಟುಕದಿರುವ ಹೆಜ್ಜೇನಿನಂತೆ ಸವಿಯಕ್ಕೆ ಪದ್ಯಪಾನ||

    • ಗಣೇಶ್ ಸರ್,
      ನೀವು ಊರಲ್ಲಿಲ್ಲದಾಗ ಒಮ್ಮೆ ಇದೆ ಛಂದಸ್ಸಿನಲ್ಲಿ ಒಂದು ಪದ್ಯ ಪ್ರಯತ್ನಿಸಿದ್ದೆ, ನಿಮಗೊಂದುಸತಿ ತೋರಿಸೋಣ ಅಂತ ಲಿಂಕ್ ಹಾಕ್ತಿದೀನಿ:

    • @ Ram
      ಗೆದ್ದೆನೈ! ಗುರುವ ತಾಕೀತೊಳೆನ್ನಯನಾಮ
      ವೆದ್ದು ಕಾಣಿಸದೆಲಿಹುದೈ ಮರೆಯೊಳು|
      ಕದ್ದು ವಂದಿಸುವೆನಮಿತದಿನೆನ್ನ ಸಖನೆ ಮುಂ
      ದಿದ್ದೆನಗೆ ರಕ್ಷೆ ನೀಡಿದೈ ರಾಮಾ||

    • ಮಾ,
      ’ಅರುವ’ ಎಂದರೇನು? (ಮೊದಲ ಸಾಲು – ರಾಮಚಂದ್ರರೇ! ರಂಗನಾಥರೇ! ಪದ್ಯಪಾನದಲ್ಲರುವ)

    • ದಯಮಾಡಿ ಮನ್ನಿಸಿರಿ;’ಪದ್ಯವಿದ್ಯೆ’ಯು ಪದವಿದ್ಯೆ ಎಂದು ತಪ್ಪಾಗಿ ಅಂಕನಗೊಂಡಿದೆ.

      • ಮತ್ತೊಮ್ಮೆ ಮನ್ನಿಸಿರಿ; ಅದು ಅರುವ ಅಲ್ಲ; ಇರುವ ಎಂದಾಗಬೇಕು!!
        ಮುದ್ರಾರಾಕ್ಷಸವಿಲಾಸ:-)

  39. ಚಿತ್ರಕ್ಕೆ ಪದ್ಯ:
    ಗುರುಚಿತ್ರಕಾರ ನಭನೀಲವೇಷ್ಮದೊಳ್
    ಕರಕೋಟಿಯಿಂದ ಸುರಿಯಲ್ಕೆ ವರ್ಣಮಂ
    ಸುರಿಬಣ್ಣದಿಂ ಶರಧಿ ರಂಗೆನಿಪ್ಪುದಂ
    ನರಲೋಕ ನೋಡುತಿದೆ ನಾಲ್ಕುಕಣ್ಗಳಿಂ

    • ಮಂಜುಭಾಷಿಣಿ ಛಂದಸ್ಸಿನಲ್ಲಿ ಪ್ರಯತ್ನಿಸಿದ್ದೇನೆ.
      ಇಲ್ಲಿ ಸುರಿಬಣ್ಣ = ಚಿತ್ರಕಾರ ಚಿತ್ರ ಬಿಡಿಸುವಾಗ ನೆಲದ ಮೇಲೆ ಸುರಿಯುವ ಬಣ್ಣ.
      ವೇಷ್ಮ = ಬಟ್ಟೆ.

    • ಅತಿಸುಂದರಂ ಗತಿಸಮುಜ್ಜ್ಜ್ವಲಂ ಭವ-
      ನ್ಮತಿನಿರ್ಮಿತಂ ಕವಿತೆ ಹೊಳ್ಳ! ಭಾವಿಸಲ್|
      ಹಿತಭಾಷೆ-ಭಾವಗಳ ಚಾರುಮಿಶ್ರಣಂ
      ಸ್ತುತಿಪಾತ್ರಮಲ್ತೆ ದಿಟ ಮಂಜುಭಾಷಿಣೀ||

      • ಗಣೇಶರೆ ಧನ್ಯವಾದಗಳು, ತನನಾನನಾನ ತನನಾನನಾನನಾ ಎನ್ನುವ ಗತಿಗೆ ಹೊಂದಿಕೊಂಡ ಮೇಲೆ, ಬರೆಯುವುದು ಸ್ವಲ್ಪ ಸುಲಭವಾಯ್ತು.

    • ನಿಮ್ಮ ಕಲ್ಪನೆ ತು೦ಬ ಚೆನ್ನಾಗಿದೆ….ರಥೋದ್ಧತಕ್ಕೆ ಎರಡು ಲಘು ಮು೦ದೆ ಸೇರಿದರೆ ಆಗುವ ಮ೦ಜುಳವಾದ ವ್ಯತ್ಯಾಸ ಮ೦ಜುಭಾಷಿಣಿಯಿ೦ದ ನಿರೂಪಿತವಾಗಿದೆ…

  40. ಅರರೆ ! ಮನಸಿಗೆ ಮುದವ ನೀಯುವ
    ಹಿರಿಯ ವಿಷಯವು ಕಿರಿಯದಾಗಿದೆ
    ಬೆರೆಸಲಂಕಾರಗಳ ಕವಿತೆಯು ಮುದವು ನೀಡುವುದು
    ಮರವು,ಪಕ್ಷಿಯು, ಗಿಡವು ,ಪೃಥ್ವಿಯು
    ಬರೆವ ವಸ್ತುವದಾಗಿಬಿಟ್ಟಿದೆ
    ಹೊರತು ಬೇರೆಯ ವಿಷಯ ಸಿಕ್ಕರೆ ಕವನ ಬಲುಪೊರ್ಲು

Leave a Reply to Chandramowly Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)