Jan 012012
 

ಈ ಚಿತ್ರಕ್ಕೆ ಒಪ್ಪುವ ಕವಿತೆ ಬರೆಯಿರಿ ::

AnantaPadmanaabha

ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿಯ ದೇವಸ್ಥಾನದಲ್ಲಿರುವ ಚಿನ್ನದ ಮೂರ್ತಿ

  37 Responses to “ಪದ್ಯ ಸಪ್ತಾಹ – ೧ – ೨೦೧೨ :: ಚಿತ್ರಕ್ಕೆ ಕವಿತೆ”

  1. ಯೋಗನಿದ್ರೆಯೊಳಿರ್ದೊಡೇ೦ ಸಿರಿಯು ನಿನಗಲ್ತ-
    ದಾಗೆ ಚೋದ್ಯಕೆ ಮೂಲ ವ್ಯಾಕುಲರ್ಗೆ
    ಸಾಗುವುದದೇಮವರ ಕುಹುಕಗಳು? ನಿನಮುಂದೆ
    ಬಾಗದಿನೆ ಪೋಗಲವರಿಗೆ ಶಕ್ಯವೇ?

    ನಿನಗಲ್ತದಾಗೆ = ನಿನಗೆ ಅಲ್ತೆ? ಅದು ಆಗೆ

    • ಸೋಮ, ಚೆನ್ನಾಗಿದೆ. “ಶಕ್ಯವೇ” ಗಿಂತ ಶಕ್ಯಮೇ ಅಂದರೆ ಇನ್ನೂ ಚೆನ್ನ ಎಂದನಿಸುತ್ತದೆ.

      • ಹೊಳ್ಳ, ಸರಿಪಡಿಸಿದ್ದೇನೆ

        ಯೋಗನಿದ್ರೆಯೊಳಿರ್ದೊಡೇ೦ ಸಿರಿಯು ನಿನಗಲ್ತ-
        ದಾಗೆ ಚೋದ್ಯಕೆ ಮೂಲ ವ್ಯಾಕುಲರ್ಗೆ
        ಸಾಗುವುದದೇಮವರ ಕುಹುಕಗಳು? ನಿನಮುಂದೆ
        ಬಾಗದಿನೆ ಪೋಗಲವರಿಗೆ ಶಕ್ಯಮೇ?

  2. ಹೊಕ್ಕುಳಲಿ ಬೊಮ್ಮನಿರೆ ಪಕ್ಕದಲಿ ಮುಕ್ಕಣ್ಣ
    ಚೊಕ್ಕದಿಂ ಪವಳಿಸಿರೆ ಮೂರ್ವರುಂ, ಜಗಕೆಲ್ಲ
    ನಿಕ್ಕ ಚಿನ್ನವದಲ್ತೆ! ಮರ್ಮಜ್ಞ

  3. ಈ ಹೊಳೆವ ಮಂಗಳ ಮೂರುತಿಯ ಮುಖದಲ್ಲೂ ಏಕೋ ಏನೋ ಕಂಡೂ ಕಾಣದ ದುಗುಡವಿದ್ದಂತಾಗಿ, ಈ ಪೂರಣ:

    ಕಮಲದಾ ಮೊಗದವನೆ
    ಕಮಲದಾ ಕಣ್ಣವನೆ
    ಕಮಲಜನ ಹೊಕ್ಕುಳಲಿ ಹಡೆದಿರುವನೇ!
    ಸುಮನಸನೆ ನಿನ್ನಂದ-
    ದಮಲ ಮುಖ ಕಂದಿದ್ದು
    ಕಮಲೆ ಬಳಿಯಿಲ್ಲೆಂಬ ಕೊರತೆಯಲ್ಲೇ?

    • ಆಹ, ಸೊಗಸಾದ ಪೂರಣ. ಹೃದ್ಯ.

      ಕಮಲೆ ಬಳಿಯಿಲ್ಲೆಂಬ
      ಸುಮನಸನ ಬೇಸರದ
      ಸುಮದ ನವಿರಿನ ಭಾವದೆಳೆಯ ಪಿಡಿದು
      ರಮಿಸುತಂ ಲಲ್ಲೆಯಿಂ
      ಕಮಲ ವದನನನೀ ಕು
      ಸುಮ ಷಟ್ಪದಿಯೊಳದಂ ನೀಗಿಸುವಿರೇಂ?

    • Really good versification. I completely agree with Sri. Manjunaath

  4. ಹಂಸಾನಂದಿಯವರೊಂದಿಗೆ ನನ್ನ ತಗಾದೆ ಇದೆ:

    ಕ್ಷೀರದಾ ಸಾಗರವು ತಾರೆಗಳು ಸುತ್ತಲುಂ
    ತೀರ ಸನಿಹದೊಳವನ ಕಾಂತೆಯಿಹಳು|
    ಗೌರತೇಜವು ಮುಚ್ಚಿಹುದು ತಾರೆ ಮೇಣ್ ಸತಿಯ
    ಖೀರುಣಿಸಲಿಹಳಲ್ಲೆ ಬಳಿಯೆ ಕಾದು||

    • ಅಕಟ ಏನನ್ಯಾಯ ರಮೆಯ ತೇಜಸ್ಸಿಗಂ
      ಪ್ರಕಟದೊಳ್ ಮಿಗಿಲಾಯ್ತೆ ಪಾಲ ತೇಜಂ!
      ವಿಕಟವೀ ಹೋಲಿಕೆಯೆ ಲಕುಮಿಗಾದಪಮಾನ
      ಶಕಟ ಮರ್ದನ ಹರಿಯೆ ನೋಡಿಕೊಂಬಂ|| 😉 😉

      • LoL

      • ಇಷ್ಟು ಚೆನ್ನಾಗಿರುವ ಪದ್ಯದಲ್ಲಿ ದೋಷ ಇರಲು ಸಾಧ್ಯವಿಲ್ಲ. ಮೊದಲ ಸಾಲಿನ ಎರಡನೆಯ ಪದ ಸ್ವರಾಕ್ಷರದಿಂದ ಆರಂಭವಾಗಿರುವುದಕ್ಕೆ ಯಾವುದೋ provision ಇರಲೇಬೇಕು. ದಯವಿಟ್ಟು ಅರುಹಿ. ‘ಅಕಟವನ್ಯಾಯವಿದು’ – ಇದರಲ್ಲಿ ‘ಏನನ್ಯಾಯ’ ಎಂಬುದರಲ್ಲಿರುವ force ಇಲ್ಲ.

        • ಪ್ರಸಾದು, ಧನ್ಯವಾದ. ಮೊದಲನೆಯದಾಗಿ ಮೊದಲ ಸಾಲಿನ ಎರಡನೆಯ ಪದ ಸ್ವರಾಕ್ಷರದಿಂದ ಪ್ರಾರಂಭವಾಗಬಾರದೆಂಬ ಯಾವ ನಿಯಮವೂ ಇದ್ದಂತಿಲ್ಲ (ಶ್ರೀ ಗಣೇಶರು ತಿಳಿಯಪಡಿಸಬೇಕು). ಅಲ್ಲಿ ತೋರಿಸಬಹುದಾದ ದೋಷವೆಂದರೆ ವಿಸಂಧಿ ದೋಷ, ಅಂದರೆ ಹಿಂದಿನ ಪದ ಸ್ವರಾಕ್ಷರದಿಂದ ಕೊನೆಯಾಗಿರುವಾಗ ಮುಂದಿನ ಪದ ಸ್ವರಾಕ್ಷರದಿಂದ ಶುರುವಾಗುವುದು ದೋಷ, ಬದಲಿಗೆ ಅದು ಹಿಂದಿನ ಪದದೊಡನೆ ಸಂಧಿಯಾಗಬೇಕು. ಆದರೆ ಇದು ಕೇವಲ ಸಾಂದರ್ಭಿಕ ನಿಯಮವೆಂದೇ ನನ್ನ ಭಾವನೆ. ಸಂಧಿಯಾಗುವ ಸಂದರ್ಭವಿದ್ದೂ ಸಂಧಿಯಾಗದೇ ಓದುವಿಕೆಗೆ ತೊಡಕಾಗುವಂತಿದ್ದರೆ ಮಾತ್ರ ಅದು ದೋಷ, ಹಾಗಲ್ಲದೇ ಸಂಧಿಯಾದರೇ ಅದು ಅಸಹಜವಾಗಿ ತೊಡಕಾಗುವಂತಿದ್ದರೆ ಅಲ್ಲಿ ಸಂಧಿ ಮಾಡಬಾರದೆಂದು ನನ್ನ ಅನಿಸಿಕೆ. ಕೆಲವು ಉದಾಹರಣೆಗಳನ್ನು ಕೊಡುತ್ತೇನೆ:

          “ಮುದದಿಂದ ಎಮ್ಮ ಒಳತಿರುಳನು ಅರಿತು”
          “ಒಲವ ಸೂಸುವ ಇನಿಯ”
          “ಇನ್ನು ಬಾರದ ಅಂಚೆ”
          “ಲಕುಮಿಗೆ ಆದ ಅಪಮಾನ”

          ಇವಕ್ಕಿಂತ
          “ಮುದದಿಂದೆಮ್ಮೊಳ ತಿರುಳನರಿತು”
          “ಒಲವ ಸೂಸುವಿನಿಯ”
          “ಇನ್ನು ಬಾರದಂಚೆ”
          “ಲಕುಮಿಗಾದಪಮಾನ”

          ಎಂದು ಸಂಧಿಯಾಗಬೇಕಾದ್ದು ಹೆಚ್ಚು ಸಹಜ. ಹಾಗಲ್ಲದೇ ಮೇಲಿನಂತೆ ಬೇರೆಬೇರೆ ಇಟ್ಟರೆ ಅದು ಅಸಹಜವೆಂದು ತೋರಿ ವಿಸಂಧಿ ದೋಷವೆನಿಸುವುದು.

          ಹಾಗಲ್ಲದೆ:
          “ಕಾಣಲಾ ಅರವಿಂದ ವದನನ”
          “ಬಂದೆನಾ ಆಹವದ ದಳ್ಳುರಿಗೊಂಡೆನಾ”

          ಇವನ್ನು
          “ಕಾಣಲಾರವಿಂದ ವದನನ”
          “ಬಂದೆನಾಹವದ ದಳ್ಳುರಿಗೊಂಡೆನಾ”

          ಹೀಗೆ ಸಂಧಿಮಾಡಿದರೆ ಒಂದೋ ಅಸಹಜವಾಗುತ್ತದೆ, ಇಲ್ಲವೇ ಕೆಲವು ವಿವರಗಳೇ ಹೋಗಿಬಿಡುತ್ತವೆ (ಎರಡನೆಯ ಉದಾಹರಣೆಯಲ್ಲಿ “ಆ ಆಹವದ” ಎಂದಿದ್ದುದು ಬರೀ “ಆಹವದ” ಆಗಿಬಿಟ್ಟಿತು). ಇಂಥೆಡೆ ಸಂಧಿಮಾಡದೇ ಪ್ರತ್ಯೇಕವಾಗಿ ಇಡುವುದೇ ಸೂಕ್ತವೆನಿಸುತ್ತದೆ.

          ಆದರೆ,
          “ಬಾರನೇ ಇಂದೆನ್ನ ಸದನಕೆ”
          “ಬಂದಳಾ ಇಂದುಮುಖಿ ನಗುತಲಿ”
          “ನಸುನಗುತ ಬಂದಳು ಇಂದುಮುಖಿ”

          ಇವುಗಳನ್ನು ಹಾಗೆಯೇ ಇಡಬಹುದು, ಅಥವಾ
          “ಬಾರನೇಯಿಂದೆನ್ನ ಸದನಕೆ”
          “ಬಂದಳಾಯಿಂದುಮುಖಿ ನಗುತಲಿ”
          “ನಸುನಗುತ ಬಂದಳಿಂದುಮುಖಿ”

          ಎಂದೂ ಛಂದಸ್ಸಿನ ಸಂದರ್ಭಕ್ಕೆ ತಕ್ಕಂತೆ ಸಂಧಿಮಾಡಲೂ ಬಹುದು. ಎರಡೂ ಆಯಾ ಸಂದರ್ಭಕ್ಕೆ ತಕ್ಕಂತೆ ಸರಿಯೇ.

          ಮತ್ತೆ, ವಿಸಂಧಿ ದೋಷದ ತಾಂತ್ರಿಕ ವಿವರಗಳನ್ನು ನಾನು ಅರಿಯೆ. ಸಹಜ ಓಟದ ದೃಷ್ಟಿಯಿಂದ ಇದು ಹೀಗಿರಬಹುದೆಂದು ನನ್ನ ಅನಿಸಿಕೆ. ಈ ವಿಷಯದಲ್ಲಿ ಶ್ರೀ ಗಣೇಶರೇ ನಮಗೆ ಶರಣ್ಯ. ಅವರು ಏನು ಹೇಳುವರೋ ತಿಳಿಯಲು ಉತ್ಸುಕನಾಗಿದ್ದೇನೆ.

          • ಮಂಜುನಾಥರ ಅಭಿಪ್ರಾಯಗಳೆಲ್ಲ ಸರಿಯಾಗಿವೆ. ಅವರ ಸಲಹೆಗಳೂ ಸರಿಯಾಗಿವೆ. ತುಂಬ ಒಪ್ಪವಾಗಿ ಸಂಧಿ-ವಿಸಂಧಿಗಳ ಬಗೆಗೆ ತಿಳಿಸಿದ್ದಾರೆ. ನಮ್ಮೆಲ್ಲರ ಧನ್ಯವಾದಗಳು.

          • ಮಂಜುನಾಥರೆ,

            ಸ್ವರಾಕ್ಷರದಿಂದ ಪ್ರಾರಂಭವಾಗುವ ಅಕ್ಷರಗಳನ್ನು ಪಾದದ ಮಧ್ಯೆ ಹೇಗೆ ಬಳಸಬೇಕೆಮ್ಬುದರ ಬಗ್ಗೆ ನಿಮ್ಮ ಕಾಮೆಂಟ್ ಬಹಳ ಉಪಯುಕ್ತವಾಗಿದೆ ಧನ್ಯವಾದಗಳು.

      • ಬಲು ಸುಂದರ. ೨ ಅಕ್ಷರಗಳನ್ನು ಆದಿಪ್ರಾಸದಲ್ಲಿರಿಸಿದ ಚಾತುರ್ಯವದು ರಮಣೀಯ. “ಶಕಟ ಮರ್ದನ ಹರಿಯೆ ನೋಡಿಕೊಂಬಂ” – ಎಂಥಾ ಗಂಡೆದೆಯನ್ನೂ ಹೆದರಿಸುವ ಸಾಲು :).

      • ಅವನ ಕೋರೈಸುವ ಕಾಂತಿಯಲ್ಲಿ ಸಾಗರ, ಆಗಸ, ತಾರೆ, ಪಕ್ಕದಲ್ಲಿ ಕುಳಿತ ಸತಿ ಎಲ್ಲರೂ ಮರೆಯಾದಂತೆ, ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಾಗ ಆ dazzleನಿಂದಾಗಿ ಅವನ ಕಣ್ಣೇ ಹಿಂಗಿಹೋಯಿತು! ಅವನು ಕನ್ನಡಿಯಲ್ಲಿ ನೋಡಿದ್ದೇಕೆಂದರೆ ‘ನೋಡಿಕೊಂಬಂ’ ಎಂದು ಒಬ್ಬ ಭಕ್ತ ಹೇಳಿದ್ದರಿಂದ.
        ನೋಡಿಕೊಂಡಂ ನಡೆಸೆ ಭಕುತನಿಂಗಿತವನುಂ
        ತೀಡಿದೆನ್ನಾನನಂ ಮುಕುರದೊಳಗಂ|
        ತೋಡಿಕೊಳನಾರೊಳುಂ ದಿಟ್ಟಿ ಪಿಂಗಿದ ಪರಿಯ
        ಗಾಡಿಗೆಡುಹನು ಹಿಡಿದ ಹಾಸುಗೆಯನುಂ||
        (ಗಾಡಿಗೆಡುಹ = ಶಕಟಮರ್ದನ)

        • ಸಿರಿಯಂ ತಂಪಿಡುತಿಂತು ಶ್ರೀಹರಿಯ ಪೆಂಪಂ ಕೇಡಿಗೊಯ್ದಿಕ್ಕುತೀ
          ಪರಿಯೊಳ್ ಶೌರಿಯ ಕೋಪಮಂ ಕೆರಳಿಸುತ್ತಿಂತೀ ಪ್ರಸಾದರ್ ನೃಕೇ
          ಸರಿಯೆಂದಾದವತಾರಮಂ ಮರೆತರೈ ಪೋ ಕಷ್ಟಮೀ ಕಷ್ಟನಂ
          ಹರಿಯೇ ಕಾಪಿಡಲಕ್ಕುಮಲ್ತೆ ಕರುಣಾ ಸಂದೋಹನಾತಂ ಗಡ!

          • ಒಟ್ಟರ್ಥ ತಿಳಿಯಿತು. ಪೋ ಮತ್ತು ಸಂದೋಹನ್ ಈ ಎರಡು ಪದಗಳ ಅರ್ಥ ತಿಳಿಸಿ.
            ಇದು ಯಾವ ವೃತ್ತ?

          • ಪೋ ಎಂಬುದು ಹತಾಶೆಯ ಭಾವ. ಸಿರಿಗೆ ಅಪಮಾನಿಸಿದಿರೆಂದರೆ ಅದನ್ನು ಸರಿಪಡಿಸಿ ಈಗ ಹರಿಗೆ ಅಪಹಾಸ್ಯ! ತಮ್ಮನ್ನು ’ತಿದ್ದು’ವುದು ಕಷ್ಟವೆಂದು ಕವಿಗೆ ಹತಾಶೆ, ಅದಕ್ಕೇ “ಪೋ ಕಷ್ಟಂ” ಇನ್ನು “ಈ ಕಷ್ಟನಂ” ಎಂದುದು ತಮ್ಮನ್ನೇ 🙂 ತಮ್ಮನ್ನು ಹರಿಯ ಕ್ರೋಧದಿಂದ ರಕ್ಷಿಸುವುದು ತನ್ನಿಂದ ಸಾಧ್ಯವಿಲ್ಲ, ಹರಿಯೇ ಕಾಪಾಡಬೇಕೆಂದು ಕವಿ ಕೈಚೆಲ್ಲಿದ್ದಾನೆ 😉 😉

            ಇದು ಮತ್ತೇಭವಿಕ್ರೀಢಿತ ವೃತ್ತ.

          • ಓಹ್ ಕ್ಷಮಿಸಿ, ಸಂದೋಹ = (ಹಾಲಿನ) ಸಾರ, ಖನಿ, ಸಮುದ್ರ ಇತ್ಯಾದಿ ಭಾವಗಳನ್ನು ಕೊಡುತ್ತದೆ. ಕರುಣಾ ಸಂದೋಹ = ಕರುಣೆಯ ಕಡಲು

  5. ಶ್ರೀದೇವಿಭೂದೇವಿಯರೊಡೆಯಂ, ನಾಭಿಯೊಳ
    ಮಾಧೇಯನಾಗಿಪಂ ಹೇಮಗರ್ಭಂ
    ಆ ದಾತನಿಗೊಡವೆಯಗೊಡವೆಯೇಂ? ಲೋಕಜನ
    ಸಾಧಾರಣರ ಧನ್ಯತೆಯ ಕುರುಹಿದಲ್ತೇ?

    • hoLLa chennagide 🙂

    • ಹೊಳ್ಳರೆ! ನಿಮ್ಮ ಪದ್ಯದ ಗತಿ ತೀರ ಕೆಟ್ಟಿದೆ:-)

      • ಗಣೇಶರೆ,
        ಗತಿಯ ಅಧೋಗತಿಗೆ ಕಾರಣಗಳು ಇವಿರಬಹುದೇ?
        >ಸಾಧಾರ|ಣರ ಧನ್ಯ|ತೆಯ ಕುರುಹಿ|ದಲ್ತೇ?
        ಇದು ಪದಗಳ ಓಘಕ್ಕೆ ತಕ್ಕುದಾಗಿಲ್ಲ.
        ಸಾಧಾ|ರಣರ| ಧನ್ಯತೆಯ| ಕುರುಹಿ|ದಲ್ತೇ?
        ಇದು ಈ ಸಾಲಿನ ಧಾಟಿ. ಇದು ಪಂಚಮಾತ್ರೆಗೆ ಒಗ್ಗುತ್ತಿಲ್ಲ.

        >ಆ ದಾತನಿಗೊಡವೆಯಗೊಡವೆಯೇಂ? ಲೋಕಜನ
        ತುಂಬಾ ಲಘುಗಳಿಂದಾಗಿ, ಬಿಗುವಿಲ್ಲವಾಗಿದೆ. ಇಲ್ಲೂ ಪಂಚಮಾತ್ರೆಯ ಧಾಟಿ ಕಾಣಿಸುತ್ತಿಲ್ಲ.
        ಆ ದಾತನಿ|ಗೊಡವೆಯ|ಗೊಡವೆಯೇಂ? ಲೋಕಜನ (೬,೪ ರ ಧಾಟಿಯಲ್ಲಿದೆ)

        ಇನ್ನಷ್ಟಿದ್ದರೆ ತಿಳಿಸಿ ಕೊಡಿ.

  6. ಆದಿಶೇಷನನ್ನೇ
    ಗಾದಿಯಾಗಿಸಿಕೊಂಡ-
    ಗಾಧ ನಿದ್ದೆಯಲಿರುವವೊಲ್ ನಟಿಸುತಿಹೆ |
    ಯಾದಿಯಿಟ್ಟು ಯುಗಗಳು –
    ಪಾಧಿಯಿಂ ಮೀಯುತಲಿ
    ಬಾಧಿಸುತ ದುಷ್ಟರಂ ಚಕ್ರ ಪಿಡಿದು ||

    • ಛಂದಸ್ಸು?????

    • ಕುಸುಮ ಷಟ್ಪದಿಯಲ್ಲಿ ಮಾಡಿದ್ದ ಪ್ರಯತ್ನ. ಒಂದು ಲಗಂ ಇದ್ದು, ೩ ಸಾಲಿನಲ್ಲಿ ಊನ ಗಣದಲ್ಲಿ ೨ ಲಘು ಮಾತ್ರೆಗಳಿದ್ದವು. ಸರಿಪಡಿಸಿದ ಪದ್ಯ ಹೀಗಿದೆ ::
      ಆದಿಶೇಷನನೀಗ
      ಗಾದಿಯಾಗಿಸಿಕೊಂಡ-
      ಗಾಧ ನಿದ್ದೆಯಲಿರುವವೊಲ್ ನಟಿಪೆಯೇ ?|
      ಯಾದಿಯಿಟ್ಟು ಯುಗಗಳು –
      ಪಾಧಿಯಿಂ ಮೀಯುತಲಿ
      ಬಾಧಿಸುವೆ ದುಷ್ಟರಂ ಚಕ್ರ ಪಿಡಿದೇ ||

  7. ಹೊಕ್ಕುಳ ಹೂವೊಳು ಹುಟ್ಟಿನ ಹೊಗರೇಂ!
    ದಕ್ಕಿರೆ ಪೂಜೆಗೆ ಮುಗಿವಿನ ಬಗೆಯುಂ|
    ಅಕ್ಕಜಮಾಗದೆ ಪನ್ನಗಶಯನಾ!
    ಸುಕ್ಕದ ನಿನ್ನೀ ಹೊನ್ನಿನ ನಗೆಯುಂ?

    • ಆಹಾ, ಸೊಗಸು. ಆದರೂ,

      ಅಕ್ಕಜಮೆಂದಜ ಪಿತಗಂ
      ಜಕ್ಕಿಸಿ ಪೇಳ್ವೀ ಗಣೇಶರಳವಂ ನೋಡಲ್
      ಬೆಕ್ಕಸಗೊಳ್ಳುತೆ ಮನದೊಳ್
      ಲೆಕ್ಕಿಸುತಿಹೆನಿವರ ಮರ್ಮಮೇನಿಹುದೆನುತಂ

    • ಶ್ರೀ ಗಣೇಶ್‍ರವರೆ,
      ಪದ್ಯದ ಅರ್ಥವನ್ನು ತಿಳಿಸುವುದು ಒಳ್ಳೆಯದು ಎಂದು ನಮಗೆಲ್ಲ ಹೇಳಿದ್ದಿರಿ. ಅರ್ಥವಿಲ್ಲದ (ನನ್ನಂಥವರ) ಪದ್ಯಗಳಿಗೆ ಮಾತ್ರವಲ್ಲದೆ, ಪ್ರೌಢತೆಯಿಂದಾಗಿ ಅರ್ಥವಾಗದ (ನಿಮ್ಮಂಥವರ) ಪದ್ಯಗಳಿಗೂ ಈ ಮಾತು ಅನ್ವಯವಾಗುತ್ತದೆ. ದಯವಿಟ್ಟು ‘ಮುಗಿವಿನ ಬಗೆ’ ಮತ್ತು ‘ಅಕ್ಕಜ’ – ಇವುಗಳ ಅರ್ಥ/ಸಂದರ್ಭ ತಿಳಿಸಿ. ಅಗೊಳಿ, ಕೊಳ್ಳೇಗಾಲರಿಗೇ ಪೂರ್ತಿ ಅರ್ಥವಾಗಿಲ್ಲ.

      • ಪ್ರಸಾದರೇ ನಿಮ್ಮ ವಾಕ್ಯದಲ್ಲೊಂದು ಟೈಪೋ ಇದ್ದಂತಿದೆ. “ಕೊಳ್ಳೇಗಾಲರಿಗೇ ಪೂರ್ತಿ ಅರ್ಥವಾಗಿಲ್ಲ” ಇದು ಬಹುಶಃ “ಕೊಳ್ಳೇಗಾಲರಿಗೆ ಪೂರ್ತಿ ಅರ್ಥವಾಗಿಲ್ಲ” ಎಂದಿರಬೇಕಲ್ಲವೇ? 🙂

        ಹಾಗೂ ಕೊಳ್ಳೇಗಾಲರಿಗೆ ಅರ್ಥವಾಗಿಲ್ಲ ಎಂದರೆ ಆಶ್ಚರ್ಯವೇನಿಲ್ಲ; ಇನ್ನೂ ಕೊಳ್ಳೇಗಾಲರಿಗೂ ಅರ್ಥವಾಗಿದೆ ಎಂದರೆ, ಅದೊಂದು ವಿಚಿತ್ರವೆನ್ನಬಹುದು 😉 😉

        ಮುಗಿವೋ ಪೊನ್ನಗೆಯೋ ನೆರೆ
        ಜಗದೀಶನದೆಲ್ಲ ಸಂಪದವಿದೀ ಜಗದೊಳ್
        ಬಗೆಯೊಳಮಕ್ಕಜ ಬರೆಸೋ
        ಜಿಗಮಲ್ತೆ ನರಂಗೆ ಪೇಳಿ ನೀವೀ ಚಣದೊಳ್

  8. ಸ್ವಲ್ಪ ಸವರಿದ್ದೇನೆ:
    ಕ್ಷೀರದಾ ಸಾಗರವು ಸುತ್ತಲುಂ ತಾರೆಗಳು
    ತೀರ ಸನಿಹದೊಳವನ ಸತಿಯಳಿಹಳು|
    ಗೌರತೇಜನ ತೇಜವೆಲ್ಲವಂ ಮಸಗಿಹುದು
    ಖೀರುಣಿಸುತದೊ ಪತ್ನಿ ಬಳಿಯೊಳಿಹಳು||

    • ಈಗಲಾ ಸಿರಿಸತಿಯು ಖತಿಯಿಳಿದು ನಗುತಿಹಳು
      ಸಾಗುತೈತರೆ ಸೊಗಸಿನೀ ಸವರಣೆ
      ಬಾಗಿ ನಮಿಸುತ ಹರಿಯ ಬೇಡಿಕೊಳ್ಳೈ ಸಖನೆ
      ನಾಗಶಯನನು ನಿನ್ನ ನೋಡಿಕೊಂಬಂ

      • What a way to dilute ‘ನೋಡಿಕೊಂಬಂ’! And the corresponding change from ಶಕಟ ಮರ್ದನ to ನಾಗಶಯನ! Wah!

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)