ಕವಯಿತ್ರಿಗಿರುವ ಅನುಭವ ಸಂಪತ್ತು ಈ ವಿಷಯದಲ್ಲಿ ಕವಿಗಿಲ್ಲದಿರುವುದರಿಂದ, ಈ ವಿಷಯವನ್ನು ಕೊಟ್ಟು ಲಿಂಗತಾರತಮ್ಯ ಮಾಡಬಹುದೇ? ಆದರೂ ಕವಿಗಿರುವ ಕಲ್ಪನಾಸ್ವಾತಂತ್ರ್ಯವನ್ನು ತುಸು (ದುರು)ಪಯೋಗ ಪಡಿಸಿಕೊಂಡಿದ್ದೇನೆ. ಇದರಲ್ಲಿ ’ಬುರುಡೆ’ಯಿದ್ದರೆ ತಾಯಂದಿರು ಮನ್ನಿಸಿ.
ಮುಗಿಲ ಮೊದಲನೆ ಮಳೆಗೆ ನೆನೆದ ಮಣ್ಣಿನ ಕಂಪು
ಮುಗಿದ ಹಚ್ಚನೆ ಮೊಗ್ಗು ಬಿರಿವ ಕೆಂಪು
ಬಗೆ-ಮೈಗಳುಬ್ಬೆ ಮೊದಲಬ್ಬೆತನದಾ ಪೆಂಪು
ನಗೆಸೂಸಿ ಹರಡುತಿದೆ ಮನೆಗೆ ತಂಪು.
ಮಂಜುನಾಥ ಕೊಳ್ಳೇಗಾಲರು ಪ್ರಸ್ತುತ ವಸ್ತುವಿನ ಕಲ್ಪನಾಭಾಂಡಾರದ ಕೊಳ್ಳೆಯನ್ನೇ ಹೊಡೆದಿದ್ದಾರೆ ! ತಿಂಗಳುರುಳಿದಂತೆ ಭಾವಿಮಾತೆಯರಲ್ಲಾಗುವ ಬದಲಾವಣೆಯನ್ನು ಸಂಕೇತಿಸುವ ಛಂದೋವೈವಿಧ್ಯತೆ ಮುದಾವಹ. ಸೂಕ್ಷವಾಗಿ ಗಮನಿಸಿದಲ್ಲಿ ವೃತ್ತೋತ್ಸಾಹಗಳ ಲಯವರ್ಧನೆ ಅರ್ಥಪೂರ್ಣ. ಈರೀತಿಯ ಸಂವೇದನಾಗ್ರಹಣ ಪರಕಾಯಪ್ರವೇಶಪ್ರಾವೀಣ್ಯತೆ ಅಗತ್ಯವಾದ ಕವಿಶಕ್ತಿಗಳೇ ಆಗಿವೆ. ಎರಡನೆಯ ಪದ್ಯದ ಎರಡನೆಯಸಾಲಿನಲ್ಲಿ ಒಂದು ಗಣ ಉತ್ಪಲಮಾಲೆಗೆ ಹೆಚ್ಚಾದರೂ ಅರ್ಥಗರ್ಭಿತವಾಗಿದೆ.
ನಿಮ್ಮ ಪ್ರೋತ್ಸಾಹ ತುಂಬುವ ಮಾತುಗಳಿಗೆ ನಾನು ಆಭಾರಿ. ನಿಮ್ಮ ಸಲಹೆಯಂತೆ ಭಾಮಿನಿಯಲ್ಲೊಂದು ಪ್ರಯತ್ನ. ಕುಂದು ಕೊರತೆಗಳನ್ನು ತೋರಿಸಿಕೊಡಿರೆಂಬ ಕೋರಿಕೆ.
ಕಂದ ಬರುವನು ತಂದು ಕೊಡುವನು
ಚಂದ ದಿನವೊಂಬತ್ತು ತಿಂಗಳ-
ಲೆಂದು ಭಾಮಿನಿ ಕಾಯುತಿದ್ದರೆ ಬರುವ ದಿನಗಳನು
ಬಂದುವೋಕರಿಕೆಯಾ ದಿನಗಳು
ತಂದವೋ ಕಂಡಿರದ ಹಿಂಸೆಯ-
ಲೆಂತು ತಾಳ್ವುದೊ ಮುಂದೆ ಎನಿಸಿತು ಮೂರು ತಿಂಗಳಲಿ
ಹಂಸಾನಂದಿಯವರೆ,
ಛಂದಸ್ಸಿನ ಒಂದೆರಡು ತೊಡಕುಗಳು ನನಗೆ ಕಂಡಿದ್ದು ::
– ೪ನೇ ಸಾಲಿನಲ್ಲಿ ೩ ನೆಯ ಗಣ “ಕೆಯಾ” ಎಂದಾಗುತ್ತದೆ. ಇಲ್ಲಿ ಲಗಂ ಬಂದಿರುವುದರಿಂದ ಧಾಟಿಯಲ್ಲಿ ಓದುವಾಗ ತೊಡಕೆನಿಸುತ್ತದೆ
– ಕೊನೆಯ ಸಾಲಿನಲ್ಲಿ ಆದಿಪ್ರಾಸ ತಪ್ಪಿದೆ ಹಾಗು ಒಂದು ವಿಸಂಧಿ (ಆಗುವ ಸಂಧಿಯನ್ನು ಮಾಡದಿರುವುದು) ದೋಷವಿದೆ
ಬರಿಯ ತೊಡಕುಗಳನ್ನೆ ತೋರಿದ್ದಕ್ಕೆ ಕ್ಷಮೆಯಿರಲಿ 🙂
ಲಗಂ ವಿನ್ಯಾಸವಿರುವ ಈ ಸಾಲನ್ನು “ಬಂದುವೋಕರಿಕೆಯ ದಿನಂಗಳು” ಎಂದು ಸವರಿಸಲೊಳ್ಳಿತಪ್ಪುದು!!
ಇನ್ನು ಕಡೆಯ ಸಾಲಿನ ಪ್ರಾಸದ ವಿಷಯ ಅಷ್ಟಾಗಿ ಮಹತ್ತ್ವದಲ್ಲ. ಆದರೂ ಸವರಿಸಿದರೆ;
“ದಂದುಗವನಿನ್ನೆಂತು ತಾಳ್ವುದೊ ಮೂರುತಿಂಗಳಲಿ” ಸಲ್ಲಬಹುದೇನೋ!
ಅಂದಹಾಗೆ, ಕೇಳಿದೊಡನೆಯೇ ಭಾಮಿನಿಯನ್ನು ರೂಪಿಸಿದ ಹಂಸಾನಂದಿಯವರಿಗೆ ವಂದನೆಗಳು.
ಚಂದ್ರಮೌಳಿಯವರ ಮಾತಿಗೆ ನನ್ನದೂ ಸಾಧುವಾದಗಳಿವೆ:-)
ಆದರೆ ಸೂರಿಂಗಳು ಎನ್ನುವ ಪ್ರಯೋಗ ಅಸಾಧು. ಅಕಾರಾಂತಪುಂಲಿಂಗದ ಪದಗಳಿಗೆ ಮಾತ್ರ ಬಿಂದು ಬರುತ್ತದೆ.
ಉದಾ: ರಾಮಂಗೆ, ಹರಂಗೆ…ಇತ್ಯಾದಿ
ಕೆಲವೊಮ್ಮೆ ಬಾಳಿಂಗೆ, ಮರನಿಂಗೆ, ನಲವಿಂಗೆ ಇತ್ಯಾದಿಳಲ್ಲಿಯೂ ಬಿಂದುವಿನ ಆಗಮನಕ್ಕೆ ಅವಕಾಶವಿದೆ.
ಈ ಸಾಲನ್ನು ……ಪೂರ್ವಸೂರಿಗಳುಮಿಲ್ಲಿಲ್ಲ ಎಂದು ಸವರಿಸಬಹುದು
In the 4th paada, ‘aShTaroLe’ would be a better choice for ‘rabhasadali’. AdyakShara recast:
ಭ್ರಷ್ಟಲೋಗರ ವಿಷಯ ಕೇಳುತಭಿಮನ್ಯುವೊಲು
ಪುಷ್ಟದಾ ಭ್ರೂಣ ತಾ ಪೇಳ್ದುದಿಂತು|
ಅಷ್ಟಮದ ಗರ್ಭವಿದಿನೊರ್ಮಾಸ ತಡೆಯ ತಾ
ಯಷ್ಟರೊಳೆ ಪೊಂದದಿರು ಲಿಂಗಬದಲಿ||
This is the third revision of this verse. In the first she was in her 6th month (mUrmAsa taDeye tAyi). In the second she came to the seventh (eermAsa taDeye tayi). Now she is in her eigth (ormAsa taDeye tAyi). There is no more scope for improvising!
ಪ್ರಸಾದ್ – ನಿಮ್ಮ ಕಾಲ್ಪನಿಕ ಕಂದನ ಇನ್ನಿತರ ಚಿಂತೆಗಳು ::
ತಾಯಿ ಲಿಂಗವಂ ಬದಲಿಕೊಂಡರವಳಾಗಳೆಂದು ತಂದೆ
ಬಾಯಿ ತೆರೆದರವಳನ್ನೊ, ನನ್ನೊ, ಹೇಗೆಂದು ಕರೆಯಲಾನು |
ಆಯಿ ‘ಬಾರೊ’ ಮೇಣಪ್ಪ ‘ಹೋಗೆ ನೀ’ನೆಂಬವಾಂತರಗಳು
ಸಾಯೊವರೆಗು ಬಿಡಲಾರವೆನಗೆ ಬರಿ ಜನ್ಮಕಲ್ಲ ಮುಕ್ತಿ ||
ದಂದುಗದ ಬದುಕಿನೊಳು ಭಾವಿಸ –
ಲೊಂದು ಸುಖಕಿನ್ನೊಂದು ಕಷ್ಟವು
ಚೆಂದದಿಂದಿಹ ಹೆಣ್ಣು ಮಗುವನು ನನಗೆ ಕೊಡೆ ನೀನು
ಬಂದ ಕಷ್ಟವನೆಲ್ಲ ಸಹಿಪೆನು
ನಂದದಂತಿಹ ಬಾಳ ಜ್ಯೋತಿಯ
ತಂದು ಕೊಡಲಿಹ ನನ್ನ ಮುದ್ದಿನರಗಿಣಿಯು ನೀನಹೆ
ಸುನೀತಾ ಅವರೆ,
ನೀವು ನನಗೆ ಕಳುಹಿಸಿದ ಪದ್ಯವನ್ನು ನಿಮ್ಮ ಹೆಸರಿನಲ್ಲೆಯೆ ಹಾಕಿದ್ದೇನೆ.
ಪದ್ಯಗಳಲ್ಲಿ ಹಲವೆಡೆ ಲಗಂ ಬಂದಿರುವುದರಿಂದ ಓದುವುದಕ್ಕೆ ಸ್ವಲ್ಪ ತೊಡಕಾಗುತ್ತದೆ. ಇದನ್ನು ಗಮನಿಸಿ ಸರಿಪಡಿಸಿರಿ.
ದಂದುಗದ ಬದುಕಿನೊಳು ಭಾವಿಸ-
ಲೊಂದು ಸುಖಕಿನ್ನೊಂದು ಕಷ್ಟವು
ಚಂದದಿಂದಿಹ ಹೆಣ್ಣುಮಗುವನು ನನಗೆ ಕೊಡೆ ನೀನು
ಬಂದ ಕಷ್ಟವನೆಲ್ಲ ಸಹಿಪೆನು
ನಂದದಂತಿಹ ಬಾಳ ಜ್ಯೋತಿಯ
ತಂದು ಕೊಡಲಿಹ ನನ್ನ ಮುದ್ದಿನ ರಮಣಿ ನೀನಲ್ತೆ
ಸುನೀತಾ ಅವರ ಬರೆಹ ಬಲುಮಟ್ಟಿಗೆ ಅನವದ್ಯ. ಆದರೆ ಪದಗಳ ಮೂಲಕ ಮೂರು-ನಾಲ್ಕರ ಮಾತ್ರಾಗಣಗಳು ಶ್ರುತಿಗೆ ಹಿತವಾಗುವ ಪರಿಯಲ್ಲಿ ಒಡೆದುಕೊಳ್ಳದಿರುವುದು ಅಲ್ಲಲ್ಲಿ ಕಾಣುವ ತೊಡಕು. ಇದಕ್ಕಾಗಿ ಬೇಸರಿಸಬೇಕಿಲ್ಲ, ಎದೆಗುಂದಲೂ ಬೇಕಿಲ್ಲ. ಮತ್ತೆ ಮತ್ತೆ ಮಹಾಕವಿಗಳ ಅಯಾ ಛಂದಸ್ಸಿನ ಪದ್ಯಗಳನ್ನು ಮತ್ತೆ ಮತ್ತೆ ಗತಿಶುದ್ಧಿಯಿಂದ ತಮಗೇ ಕೇಳುವ ಹಾಗೆ ಹಾಡಿಕೊಳ್ಳುವ ಮೂಲಕ ಈ ತೆರನಾದ ತಪ್ಪುಗಳನ್ನು ಸುಲಭವಾಗಿ ಮೀರಬಹುದು.
ಕಾಂಚನಾ ಅವರ ರಚನೆ ಬಲುಸೊಗಸಾಗಿದೆ. ಇಲ್ಲಿಯ ಕಲ್ಪನೆಗಳೂ ಅಭಿರಾಮ. ಒರ್ವ ಕವಯಿತ್ರಿಗಷ್ಟೇ ಸುಲಭದಲ್ಲಿ ಎಟುಕಬಲ್ಲ ಭಾವಗಳೂ ಭಣಿತಿಗಳೂ ಇಲ್ಲಿವೆ.
ಪದ್ಯಪಾನದ ಕವಿ, ಕವಯಿತ್ರಿಯರಿಗೆ ’ಬಳೆಗಾರ ಚೆನ್ನಯ್ಯ’ ನ ನೆನಪು ಬಂದಂತಿಲ್ಲ. ಹಾಗೆಯೇ ಬಸುರಿತನ ಬರೀ ವಾಕರಿಕೆ, ಸುಸ್ತಿಗೆ ಸೀಮಿತವಾದದ್ದಲ್ಲವೆಂದು ನನ್ನ ಅನಿಸಿಕೆ, ಅನುಭವ ಕೂಡ. ಸೀಮಂತದ ಸಂಭ್ರಮ, ಬಳೆತೊಡಿಸುವ ಸಡಗರ, ಹಸಿರು ಸೀರೆ, ಬಳೆ, ಮಲ್ಲಿಗೆ ಹೂಗಳ ಅಲಂಕಾರ , ಚಕ್ಕುಲಿ , ಹುರಿಗಾಳು ಮೊದಲಾದ ಕರಿದ ತಿಂಡಿಗಳು, ಹುಟ್ಟುವ ಮಗು ಹೇಗಿರಬಹುದು ಇದರ ಬಗ್ಗೆ ಚರ್ಚೆ – ಒಂದೇ, ಎರಡೇ, ಆಹಾ, ನನ್ನ ಮಗನಿಗೇ ಮದುವೆ ಮಾಡುವ ವಯಸ್ಸಾಗಿದ್ದರೂ ಇದೆಲ್ಲಾ ನಿನ್ನೆ ಮೊನ್ನೆ ನಡೆದಂತಿದೆ. ಚೊಚ್ಚಲ ಬಸುರಿನಲ್ಲಿ ನಾನು ನನ್ನ ಮನೆಯವರಿಗೆ ಹೇಳುತ್ತಿದ್ದಿದು ಇಷ್ಟೇ – ನಾನಂತೂ ಇನ್ನೂ ಹತ್ತು ಸಲ ಬಸುರಿಯಾಗಲೂ ಹೆದರುವುದಿಲ್ಲ – ನೀವೆಲ್ಲಾ ನನ್ನ ಜೊತೆಯಿರುವವರೆಗೂ…..
ಮಂಜುನಾಥರೆ,
ನೀವು ತೋರಿದ ಕೆಲವು ತಪ್ಪುಗಳನ್ನು ತಿದ್ದಿದ್ದೇನೆ. ಜೊತೆಗೆ, ನಿಮ್ಮ ಮುಕ್ತ ಅಭಿಪ್ರಾಯವೇ ನಮಗೆ ಊರುಗೋಲು. ಇಷ್ಟಕ್ಕೂ ನೀಮ್ಮಂತಹ ಪದ್ಯವೇ(ಮ)ತ್ತರು ತಪ್ಪು ತೋರಿದ್ದನ್ನೂ ನಮ್ಮ ಜೀವನ ರೆಸ್ಯೂಮೆಗೆ ಹೆಮ್ಮೆಯಿಂದ ಸೇರಿಸಿಕೊಳ್ಳ ಬಹುದು. ಅದೊಂದು ತರಹ, ಸಿನಿಮಾದಲ್ಲಿ ಐಶ್ವರ್ಯ ರೈಯತ್ತರ ಗುದ್ದಿಸಿಕೊಳ್ಳುವ ಪಾತ್ರಕ್ಕೂ ನೂಕುನುಗ್ಗಲಿದ್ದಂತೆ :).
ಕೊನೆಯ ಪದ್ಯವೇ ನನಗಿಷ್ಟವಾದ ಪದ್ಯ. ಮನುಷ್ಯ ತನ್ನ ಆತ್ಮೀಯರ ಹತ್ತಿರವಷ್ಟೇ ತನ್ನ ಅಂತರಂಗವನ್ನು ತೆರೆಯುತ್ತಾನೆ, ಅದರಲ್ಲೂ ಒಂದಿಷ್ಟನ್ನು ತನಗೇ ಇರಿಸಿಕೊಂಡು. ಆದರೆ, ತನ್ನೋಳಗಿರುವ ಜೀವ ತನ್ನ ಮನೋಭಿಲಾಷೆಗಳನ್ನೆಲ್ಲಾ ನೋಡುತ್ತಿದೆ ಎಂಬ ಭಾವವೇ, ತಾಯಿ ಮಗುವಿನ ಪ್ರೇಮ ವೃಕ್ಷಕ್ಕಿರುವ ಬೀಜವೇನೋ ಎಂಬುದನ್ನು ಹೇಳುವ ಪ್ರಯತ್ನ. (ನೀರನಿತ್ತೊಸಗೆ, ರಸಿಕಪ್ರೇಮದ ಕಾಣಿಕೆ, ಅಂತರಂಗದ ಸ್ನೇಹಿತ, ಇಲ್ಲ ಇಲ್ಲ ಅದೂ ನಾನೂ ಬೇರೆಯಲ್ಲವೆಂಬ ಅದ್ವೈತದತ್ತ ಆಕೆಯ ಯೋಚನೆ ಸಾಗುವುದೇನೋ ಎಂಬ ಕಲ್ಪನೆ). ಆದರೆ, ಹೇಳುವಲ್ಲಿ ಎಡವಿದ್ದೇನೆ. ಮತ್ತೇಭದಲ್ಲಿ ಕೈ ಪಳಗಿದ ಮೇಲೆ ಮತ್ತೆ ಪ್ರಯತ್ನಿಸುತ್ತೇನೆ.
ಶ್ರೀಮಂಜುನಾಥ್ ಮತ್ತು ಶ್ರೀಚಂದ್ರಮೌಳಿಯವರ ಬೆಲೆಯುಳ್ಳ ಸಲಹೆ-ಸೂಚನೆಗಳು ಪದ್ಯಪಾನಿಗಳಿಗೆಲ್ಲ ವರವಾಗಿವೆಯಲ್ಲದೆ ನನಗೂ ವಿದ್ವತ್ಸಹೃದಯರ ಸಾಹಚರ್ಯದ ಸುಖವನ್ನು ನೀಡಿವೆ ಮತ್ತು ಸಾಕಷ್ಟು ಭಾರವನ್ನೂ ಇಳಿಸಿವೆ:-) ಹೀಗಾಗಿ ಹೊಳ್ಳರೊಟ್ಟಿಗೆ ನನ್ನದೂ ನಮನ ಕೊಳ್ಳೇಗಾಲರಿಗೆ! ಎಲ್ಲಕ್ಕಿಂತ ಮಿಗಿಲಾಗಿ ಕೆಲವೇ ದಿನಗಳಲ್ಲಿ ಸಹಜಪ್ರತಿಭಾಶಾಲಿಗಳಾದ ನಮ್ಮ ತರುಣಮಿತ್ರ ರವೀಂದ್ರಹೊಳ್ಳರು ಈ ಪ್ರಮಾಣದ ಕವಿತೆಯನ್ನು ಸಿದ್ಧಿಸಿಕೊಂಡಿರುವುದು ನಮ್ಮೆಲ್ಲರಿಗೆ (ವಿಶೇಷವಾಗಿ ನನಗೆ ಎಂದರೆ ನನಗೇನೋ ಹೆಮ್ಮೆ:-) ಹರ್ಷದ ಸಂಗತಿ.
ಈ ಪ್ರಮಾಣದಲ್ಲಿ
ಈ ಸಾಲು ಕುಮಾರವ್ಯಾಸನದು; ವನಪರ್ವದಲ್ಲಿ ಬರುತ್ತದೆಂಮ್ದು ನನ್ನ ನೆನಪು. ಪ್ರಾಯಶಃ ನಿಮಗೂ ಇದು ಗೊತ್ತಿದ್ದು, ಬರೆಯುವ ಓಘದಲ್ಲಿ ಪಂಪ (ಮತ್ತೇಭವಿಕ್ರೀಡಿತದಂಥ ವೃತ್ತದ ಚರ್ಚೆಯಲ್ಲಿದ್ದ ಕಾರಣ) ಮುನ್ನುಗ್ಗಿದ್ದಾನೆನಿಸುತ್ತದೆ:-)

ಬೆಚ್ಚನೆ ರಾತ್ರೆಯೊಳ್ ಮನದಿ ಶಂಕೆಯು ಹಿಗ್ಗುತ ಚುಚ್ಚಿ ಕಾಡಿರಲ್
ಬೆಚ್ಚುತ ಚಿಂತಿಪಳ್ ಮಗುವಿದೇಂ ಮಲಗಿಪ್ಪುದೊ ಸತ್ತುದೊ ಕಾಣೆನೇ ಶಿವಾ
ಮುಚ್ಚಿದ ಕಂಗಳೊಳ್ ನಿದಿರೆ ಬಾರದೆ ಬೇಗುದಿ ಭಾರವಾಗಿರಲ್
ಕೆಚ್ಚನೆ ಕಾಲೊಳೊದ್ದು ಬಸಿರಂ ತನಯಂ ಹಿರಿ ಚಿಂತೆನೀಗಿದಂ
ಕಂದಂ ಬಸಿರೊದೆವಂದಂ
ಬಂಧುರಮೀ ತಾಯ್ ಕುಲಾವಿಗನಸಿನ ಚಂದಂ
ಕಂದಂ ನಸುನಗುವೋಲ್ ಮೇಣ್
ಮುಂದೋಡುತ ಬಿಳ್ದು ಭೋರಿಡುವವೋಲ್ ನೆನೆವಳ್
ಮೆರೆವಳ್ ಮೋದದಿ ಮತ್ತೆ ಮೈಯ ಮರೆವಳ್ ಮತ್ತಾಲಸಂ ಬಾಧಿಸಲ್
ಒರಗುತ್ತುಂ ಕಿರು ಮಂಚದೊಳ್ ನಲುಮೆ ತೋಳ್ ಸಾಂಗತ್ಯಮಂ ಧೇನಿಪಳ್
ಕಿರಿದೊಂದೇ ಕ್ಷಣದೊಳ್ ಮನೋನಯನದೊಳ್ ಕಂದಂ ನಗುತ್ತೈತರಲ್
ಸಿರಿಯಂ ಕಂಡವೊಲಾಗಿ ಕಂಡ ಕನಸೊಳ್ ತೇಲುತ್ತಲಾನಂದಿಪಳ್
ಮೊದಲಿನ ಹಿಗ್ಗದು ಆಗಸಮುಟ್ಟಲ್
ಬೆದರುವ ಭಯವದು ಮೈ ಮನ ತಟ್ಟಲ್
ಬಗೆಬಗೆ ಬಯಕೆಯ ತೆನೆಯೊಡೆಯುತಿರಲ್
ಚಿಗುರುವ ಲತೆಯೊಲ್ ಬಸಿರದು ಬೆಳೆಯಲ್
ತೆಗೆವಾ ನೋವದು ಬೆಳೆದಿರೆ ಒಡಲೊಳ್
ಬಗೆಯೊಳ್ ಕಂದಂ ನೋವ ಮರೆಸಿರಲ್
ಬೆವರುತ ಸುಖದೊಳ್ ಬೆದರುತ ಭಯದೊಳ್
ನವೆವಳ್ ಬೆಳೆವಳ್ ಚೊಚ್ಚಲ ಬಸಿರೊಳ್
ಲಿಂಗವೈಷಮ್ಯಂಗಳಿಲ್ಲವ –
ಲಿಂಗದಾ ತಾರತಮವಿಲ್ಲವ-ದಂಗದಲೆ ಕವಿಯೆಲ್ಲವನು ತಾ
ನಿಂಗಿಸುವನೇನನುಭವಂಗಳ ಮಣ್ಣ ತಡಿಕೆಯಲಿ? |
ಹೆಂಗಸಲಿ ಗಂಡಸರ ಗುಣಗಳು
ಹೆಂಗಳೆಯ ಭಾವವು ಪುರುಷರಲಿ
ಸಂಗಡವೆ ತಳೆದಿರ್ಪುದವನೀ ನೆಪದಿ ತೋರಿದಿರಿ ||
ಚೆಂದದಾ ಛಂದದಲೆ ಮಮತೆಯ
ಬಂಧಿಸುತ ಬರೆದಿರುವಿರಲ್ಲವೆ
ಮುಂದೆಯಾಗುವ ಬಸುರಿಯರಿಗಿದು ಭಾವ ಕೈಪಿಡಿಯೆ?
🙂
ಹೌದು. ಅವರು ಎಲ್ಲವನ್ನೂ ಕೈಪಿಡಿಯಷ್ಟು ಪ್ರಮಾಣದಲ್ಲಿ ಬರೆಯುತ್ತಾರೆ. ನನ್ನದೂ ಹೆಚ್ಚೂ-ಕಮ್ಮಿ ಅಷ್ಟೇ ಆಗುತ್ತೆ, notes ಎಲ್ಲ ಸೇರಿ!
ತಾರತಮ ಎನ್ನುವುದು ವ್ಯಾಕರಣಶುದ್ಧರೂಪವಲ್ಲ. ಲಿಂಗವೈಷಮ್ಯಂಗಳಿಲ್ಲದ…. ಎಂದು ಸವರಿಸಬಹುದು.
ಧನ್ಯವಾದಗಳು. ಸವರಿಕೆ ಮಾಡಿದ್ದೇನೆ.
ಮಂಜುನಾಥ ಕೊಳ್ಳೇಗಾಲರು ಪ್ರಸ್ತುತ ವಸ್ತುವಿನ ಕಲ್ಪನಾಭಾಂಡಾರದ ಕೊಳ್ಳೆಯನ್ನೇ ಹೊಡೆದಿದ್ದಾರೆ ! ತಿಂಗಳುರುಳಿದಂತೆ ಭಾವಿಮಾತೆಯರಲ್ಲಾಗುವ ಬದಲಾವಣೆಯನ್ನು ಸಂಕೇತಿಸುವ ಛಂದೋವೈವಿಧ್ಯತೆ ಮುದಾವಹ. ಸೂಕ್ಷವಾಗಿ ಗಮನಿಸಿದಲ್ಲಿ ವೃತ್ತೋತ್ಸಾಹಗಳ ಲಯವರ್ಧನೆ ಅರ್ಥಪೂರ್ಣ. ಈರೀತಿಯ ಸಂವೇದನಾಗ್ರಹಣ ಪರಕಾಯಪ್ರವೇಶಪ್ರಾವೀಣ್ಯತೆ ಅಗತ್ಯವಾದ ಕವಿಶಕ್ತಿಗಳೇ ಆಗಿವೆ. ಎರಡನೆಯ ಪದ್ಯದ ಎರಡನೆಯಸಾಲಿನಲ್ಲಿ ಒಂದು ಗಣ ಉತ್ಪಲಮಾಲೆಗೆ ಹೆಚ್ಚಾದರೂ ಅರ್ಥಗರ್ಭಿತವಾಗಿದೆ.
ಚಂದ್ರಮೌಳಿಯವರೇ, ವೃತ್ತೋತ್ಸಾಹಗಳ ಲಯವರ್ಧನೆ ಕುರಿತ ತಮ್ಮ ಸೂಕ್ಷ್ಮಾವಲೋಕನ ಧನ್ಯತೆಯನ್ನು ತಂದಿತು. ಧನ್ಯವಾದ.
ಹೌದಲ್ಲ, ಉತ್ಫಲಮಾಲೆಯ ಎರಡನೆಯ ಸಾಲಿನಲ್ಲಿ ಒಂದು ಗಣ ಹೆಚ್ಚಾಗಿದೆ. ಸರಳವಾಗಿ ಸವರಿಸಬಹುದಾದರೂ ಅದೇಕೋ ಇದನ್ನು ಮಾತ್ರ ಸವರಿಸಲು ಮನಸ್ಸೊಪ್ಪುತ್ತಿಲ್ಲ.
ಆರರ ಮೇಲಿನೊಂದು ಗಣ ದೋಷಮದುತ್ಫಲ ಮಾಲೆಗೆಂದಪರ್
ಮೀರಿರೆ ಪದ್ಯದಂದಗಿಡುಗುಂ ಸರಿ ತೋರದು ಛಂದಕೆಂದಿರಲ್
ಆರನೆ ಕಾಲ್ವೆರಲ್ ದೊರೆಯ ಕಂದನ ಚಂದವ ಕೀಳುಗಟ್ಟಿತೇಂ
ಮೀರಿದ ಭಾರಮುತ್ಫಲಿತ ಗರ್ಭಕೆ ಶೋಭೆಯ ತರ್ಪುದೇ ದಿಟಂ
ಹೆಚ್ಚಿನ ಗಣ, ಗರ್ಭಸ್ಥ ಶಿಶುವಿನ ಪ್ರತೀಕವೆಂದು ಅದನ್ನು ಹಾಗೇ ಉಳಿಸಿಕೊಳ್ಳುತ್ತೇನೆ.
ಇದು ಶ್ರೀ ಭೈರಪ್ಪನವರ ‘ನೆಲೆ’ಯಿಂದ ಕದ್ದ ಐಡಿಯ.
ಗರ್ಭವಾಸದೊಳಾನುಮಿಂತಿದ್ದುದರಿಯದೆಲೆ
ಗರ್ಭಸ್ಥಶಿಶುವೊಳಾತಂಕಿತಂಗೆ|
ನಿರ್ಭಯಂ ಪೇಳಿ ಸತಿ ತನ ಪೊಡೆಯ ಮುಕುರದಿಂ
ದರ್ಭಕದೆ ತನ್ನನ್ನೆ ನೋಡುತಿರ್ದಳ್||
ಚೊಚ್ಚಲ ಬಸುರಿನ ಬಗೆಯಂ
ಬಿಚ್ಚಳಿಸುವವೊಲ್ ಸಮಸ್ತಸಹೃದಯಮನಮುಂ|
ಮೆಚ್ಚೆಂಬಂದದೆ ನುಡಿವೆ-
ಣ್ಗುಚ್ಚರಿಸಿದ ಮಂಜುನಾಥ! ನಿಮಗಾಂ ಸೋಲ್ತೆಂ||
ಮಂಜುನಾಥರ ಕ್ಷಮೆ ಕೋರಿ:
ಶ್ರೀ ಗಣೇಶರೆ,
ಎನ್ನಯ ಪದ್ಯದನಂತರ ನುಡಿದಿಹ
ಮನ್ನಣೆ ಮಾತಹುದೆನಗಲ್ತೆ|
ಬನ್ನವದೇತಕೆ ಗೈದಿರಿ ರಂಗಗೆ
ಸನ್ನುತಿ ಸಲ್ಲಿಸಿ ಮಂಜನಿಗೆ||
ನನ್ನ ಪ್ರಯತ್ನ. ಎರಡನೇ ಅರ್ಧದಲ್ಲಿರುವ ದೋಷವನ್ನು ಮನ್ನಿಸಿ 🙂
ಮೊದಲ ಮಳೆಯಾ ಸೊಗಸು
ಮೊದಲ ಬಸಿರಿನ ಹಿತವು
ಹದವಾದ ರೆಂಬೆಯಲಿ ಮೊಗ್ಗಿನರಳು |
ಚದುರಿತಾಗಸದಿ ತುಂ-
ಬಿದ್ದ ಕರಿ ಮೋಡಗಳು
ಕಂದ ಚಂದಿರ ಬುವಿಗೆ ಬರುವ ಮೊದಲು ||
ಮಂಜುನಾಥರ ಮೊದಲ ಪದ್ಯಕ್ಕೂ ಇದಕ್ಕೂ ಹೋಲಿಕೆಯಿರುವುದಾದರೂ ಅದು ಕಾಕತಾಳೀಯ.
ಒಂದು ತಪ್ಪನ್ನು ತಿದ್ದುವ ಪ್ರಯತ್ನ:
ಮೊದಲ ಮಳೆಯಾ ಸೊಗಸು
ಮೊದಲ ಬಸಿರಿನ ಹಿತವು
ಹದವಾದ ರೆಂಬೆಯಲಿ ಮೊಗ್ಗಿನರಳು |
ಚದುರಿತಾಗಸದಿ ತುಂ-
ಬಿದ ಕಾರಮೋಡಗಳು
ಕಂದ ಚಂದಿರ ಬುವಿಗೆ ಬರುವ ಮೊದಲು ||
ಇನ್ನೊಂದು ತಪ್ಪನ್ನಡಗಿಸುವ ಪ್ರಯತ್ನ:
ಮೊದಲ ಮಳೆಯಾ ಸೊಗಸು
ಮೊದಲ ಬಸಿರಿನ ಹಿತವು
ಹದವಾದ ರೆಂಬೆಯಲಿ ಮೊಗ್ಗಿನರಳು |
ಚದುರಿತಾಗಸದಿ ತುಂ-
ಬಿದ ಕಾರಮೋಡಗಳು
ಮುದದಿ ಕಂದನು ಬುವಿಗೆ ಬರುವ ಮೊದಲು ||
ತೊಗೊಳ್ಳಿ ಸ್ವಾಮಿ ಇನ್ನೊಂದು ಕುಸುಮವನ್ನು:
ಹದಿಹರೆಯದಾ ಹೆಣ್ಣ
ಮುದವೀವ ಮೊಗ ಸೊಗಸು
ಪದುಮವನು ಸುತ್ತುವಾ ದುಂಬಿ ಸೊಗಸು |
ಚದುರು ಮೋಡದ ನಡುವೆ
ಬಿದಿಗೆ ಚಂದಿರ ಸೊಗಸು
ಮೊದಲ ಬಸುರಿನ ಹೆಣ್ಣ ಬಯಕೆ ಸೊಗಸು ||
ಹಂಸಾನಂದಿಗಳಿತ್ತ ಪದ್ಯದ ಸೊಗಂ ಸತ್ಕಾವ್ಯಮೆಂದೊಪ್ಪುಗುಂ
ಹಂಸಾಸ್ಕಂದಿತಶಾರದಾಭ್ರದೆ ಸಮುನ್ಮೀಲಿಪ್ಪ ಬಾಲೇಂದುಭಾ-
ವಂ ಸಮ್ಮೋದಕೆ ಸಲ್ವುದೆಂಬುದೆ ದಿಟಂ; ನಾಂ ಕೋರಲೇ ಕೋರ್ಕೆಯೊ-
ದಂ? ಸಂಪನ್ನಮೆನಿಪ್ಪ ಕೌಸುಮಮಿದಂ ನೀಂ ಕಂದನೊಳ್ ತೋರಿರಯ್:-)
ಹಂಸಾನಂದಿಗಳ ಪದ್ಯರಚನಾಕ್ರಮದಲ್ಲಿ ಪಳಗಿದ ಹಾಗೂ ಕಲ್ಪನೆಗಳನ್ನು ಕಮನೀಯವಾಗಿ ಕೊನರಿಸುವ ಕೈವಾಡವನ್ನು ಕಂಡಾಗ ಅವರು ಕುಸುಮವನ್ನು ಭಾಮಿನಿಗೆ ತೊಡಿಸಲೆಂದು ನನ್ನ ಬೇಡಿಕೆ:-)
ಗಣೇಶರೆ,
ನಿಮ್ಮ ಪ್ರೋತ್ಸಾಹ ತುಂಬುವ ಮಾತುಗಳಿಗೆ ನಾನು ಆಭಾರಿ. ನಿಮ್ಮ ಸಲಹೆಯಂತೆ ಭಾಮಿನಿಯಲ್ಲೊಂದು ಪ್ರಯತ್ನ. ಕುಂದು ಕೊರತೆಗಳನ್ನು ತೋರಿಸಿಕೊಡಿರೆಂಬ ಕೋರಿಕೆ.
ಕಂದ ಬರುವನು ತಂದು ಕೊಡುವನು
ಚಂದ ದಿನವೊಂಬತ್ತು ತಿಂಗಳ-
ಲೆಂದು ಭಾಮಿನಿ ಕಾಯುತಿದ್ದರೆ ಬರುವ ದಿನಗಳನು
ಬಂದುವೋಕರಿಕೆಯಾ ದಿನಗಳು
ತಂದವೋ ಕಂಡಿರದ ಹಿಂಸೆಯ-
ಲೆಂತು ತಾಳ್ವುದೊ ಮುಂದೆ ಎನಿಸಿತು ಮೂರು ತಿಂಗಳಲಿ
ಹಂಸಾನಂದಿಯವರೆ,
ಛಂದಸ್ಸಿನ ಒಂದೆರಡು ತೊಡಕುಗಳು ನನಗೆ ಕಂಡಿದ್ದು ::
– ೪ನೇ ಸಾಲಿನಲ್ಲಿ ೩ ನೆಯ ಗಣ “ಕೆಯಾ” ಎಂದಾಗುತ್ತದೆ. ಇಲ್ಲಿ ಲಗಂ ಬಂದಿರುವುದರಿಂದ ಧಾಟಿಯಲ್ಲಿ ಓದುವಾಗ ತೊಡಕೆನಿಸುತ್ತದೆ
– ಕೊನೆಯ ಸಾಲಿನಲ್ಲಿ ಆದಿಪ್ರಾಸ ತಪ್ಪಿದೆ ಹಾಗು ಒಂದು ವಿಸಂಧಿ (ಆಗುವ ಸಂಧಿಯನ್ನು ಮಾಡದಿರುವುದು) ದೋಷವಿದೆ
ಬರಿಯ ತೊಡಕುಗಳನ್ನೆ ತೋರಿದ್ದಕ್ಕೆ ಕ್ಷಮೆಯಿರಲಿ 🙂
ರಾಮಚಂದ್ರರೆ, ಧನ್ಯವಾದಗಳು. ಈ ರೀತಿ ತಿದ್ದಿ ಹೇಳಿಕೊಡುವವರು ಇರುವರೆಂಬ ಕಾರಣಕ್ಕೆ ತಾನೇ ಇಲ್ಲಿ ಬರೆಯಹೊರಟಿದ್ದು! ಕ್ಷಮೆ ಕೇಳಬೇಕಾದ ಮಾತೇ ಇಲ್ಲ!
ಲಗಂ ವಿನ್ಯಾಸವಿರುವ ಈ ಸಾಲನ್ನು “ಬಂದುವೋಕರಿಕೆಯ ದಿನಂಗಳು” ಎಂದು ಸವರಿಸಲೊಳ್ಳಿತಪ್ಪುದು!!
ಇನ್ನು ಕಡೆಯ ಸಾಲಿನ ಪ್ರಾಸದ ವಿಷಯ ಅಷ್ಟಾಗಿ ಮಹತ್ತ್ವದಲ್ಲ. ಆದರೂ ಸವರಿಸಿದರೆ;
“ದಂದುಗವನಿನ್ನೆಂತು ತಾಳ್ವುದೊ ಮೂರುತಿಂಗಳಲಿ” ಸಲ್ಲಬಹುದೇನೋ!
ಅಂದಹಾಗೆ, ಕೇಳಿದೊಡನೆಯೇ ಭಾಮಿನಿಯನ್ನು ರೂಪಿಸಿದ ಹಂಸಾನಂದಿಯವರಿಗೆ ವಂದನೆಗಳು.
ಸರಳ ಕುಸುಮಗಳಲ್ಲಿ
ವಿರಳ ಭಾವವ ತುಂಬಿ
ತರಳೆ ಬಸಿರಿನ ಸೊಬಗ ಮೆರೆಸಿರುವಿರಿ |
ಅರಳು ಮಲ್ಲಿಗೆಯಂತೆ
ಪುರುಳ ಮಧುರತೆಯಂತೆ
ಮರುಳ ಮಾಡಿವೆ ನಿಮ್ಮ ಪದ ಸುಮಗಳು ||
ಬೇರೊಂದು ದೃಷ್ಠಿಕೋನ 🙂 ::
ಹೊರಳೆ ಜಾಗವದಿಲ್ಲವುರುಳಲಾಗುವುದಿಲ್ಲ
ಪೊರಪೋಗೊ ದಾರಿಯದು ಕಾಣಸಿಗದಲ್ಲ |
ಮರಳಿ ತಳೆದಿಹದಲ್ಲದೀ ಗರ್ಭದಾ ಬಿಗಿತ-
ವರಳೆ ಹಿಗ್ಗಿಪ ಬಲವ ನೀಡೆನಗೆ ತಾಯ್ || ೧ ||
ಇಕ್ಕಟ್ಟಿನಾ ಜಾಗ ಮೊದಲಾರು ಕಾಣದಿಹ
ಮಿಕ್ಕಂತೆ ಪೂರ್ವ
ಸೂರಿಂಗಳಿಲ್ಲಿಲ್ಲಸೂರಿಗಳುಮಿಲ್ಲಿಲ್ಲ|ತಕ್ಕ ದಾರಿಯ ತೋರೊ ರೂವಾರಿತನವೆನ್ನ
ಚಿಕ್ಕ ಭುಜಗಳ ಮೇಲೆ ಪೊರಿಸಿರ್ಪರೇಂ? || ೨ ||
ತಮ್ಮ ತಂಗಿಯರಿನ್ನು ಮುಂದೆ ಜನ್ಮವ ತಳೆಯ –
ಲೆಮ್ಮ ವಂಶದ ಬಲವ ವರ್ಧಿಸಲ್ಕೆ |
ಅಮ್ಮ ನಿನ್ನಯ ಕರುಣವೆನಗಿರಲಿಯೆಂದೆಂದು
ಹೆಮ್ಮಗನ(ಳ) ಸ್ಥಾನವನಿಭಾಯಿಸಲ್ಕೆ || ೩ ||
ಪೂರ್ಣತೆಯನವತರಿಸೆ, ತಾಯ್ಗೆ ತಾಯ್ತನ ಕಲಿಸೆ
ವರ್ಣನಾತೀತದಾನಂದವನು ಹರಿಸೆ |
ಕರ್ಣ ಚಕ್ಷುಂಗಳಿಗೆ ಸಂತಸವ ಭರಿಸಲ್ಕೆ
ಪರ್ಣಶಾಲೆಯಲಿಳಿವೆ ಮುಂಜಾನೆಯೊಳ್ || ೪ ||
ರಾಮಚಂದ್ರರ ಈ ಪದ್ಯಗಳು ಲಲಿತ ಮನೋಹರವಾಗಿವೆ. ಅವರ ಸಹಜವಾದ ಹಾಸ್ಯಪ್ರಜ್ಞೆ ಮರೆಯಲ್ಲಡಗಿ ಅಲ್ಲಲ್ಲಿ ಇಣುಕಿನೋಡುವುದು ಸ್ವಾರಸ್ಯಕರ.
ಚಂದ್ರಮೌಳಿಯವರ ಮಾತಿಗೆ ನನ್ನದೂ ಸಾಧುವಾದಗಳಿವೆ:-)
ಆದರೆ ಸೂರಿಂಗಳು ಎನ್ನುವ ಪ್ರಯೋಗ ಅಸಾಧು. ಅಕಾರಾಂತಪುಂಲಿಂಗದ ಪದಗಳಿಗೆ ಮಾತ್ರ ಬಿಂದು ಬರುತ್ತದೆ.
ಉದಾ: ರಾಮಂಗೆ, ಹರಂಗೆ…ಇತ್ಯಾದಿ
ಕೆಲವೊಮ್ಮೆ ಬಾಳಿಂಗೆ, ಮರನಿಂಗೆ, ನಲವಿಂಗೆ ಇತ್ಯಾದಿಳಲ್ಲಿಯೂ ಬಿಂದುವಿನ ಆಗಮನಕ್ಕೆ ಅವಕಾಶವಿದೆ.
ಈ ಸಾಲನ್ನು ……ಪೂರ್ವಸೂರಿಗಳುಮಿಲ್ಲಿಲ್ಲ ಎಂದು ಸವರಿಸಬಹುದು
ಮೌಳಿಯವರಿಗು, ಗಣೇಶರಿಗು ಧನ್ಯವಾದಗಳು. ಸೂರಿಂಗಳನ್ನು ಸರಿ ಮಾಡಿದ್ದೇನೆ.
ಭಾಮಿನಿಯಲ್ಲಿ ಇನ್ನೊಂದು ಪ್ರಯತ್ನ:
ತಿಂದುದೊಂದೂ ದಕ್ಕದಂತಿರ
ಲೆಂತು ಕಳೆವಳೊ ಬರುವ ದಿನಗಳ
ನೊಂದು ಅರಿಯದ ತರಳೆ ಉಣ್ಣದೆ ಸೊರಗಿ ಪೋಗಿಹಳು
ಕಂದ ಹುಟ್ಟುವುದಾರು ಮಾಸದಿ
ಚಂದ ಕನಸುಗಳನ್ನೆ ಕಾಣುತ
ಕುಂದುಗಳ ಮರೆವೆನ್ನುವಾ ಮುಡಿವನ್ನು ತಾಳಿಹಳು
ಅಭಿಮನ್ಯುವೊಲು ಲೋಗರದ ಸುದ್ದಿಗಳ ಕೇಳ್ದು
ಶುಭವಶುಭವಂ ಭ್ರೂಣ ಪೇಳ್ದುದಿಂತು|
ಲಭಿಸುವುದು ಮುಕುತಿ ತಾಯ್ ಮೂರ್ತಿಂಗಳೊಳು ನನಗೆ
ರಭಸದಲಿ ಪೊಂದದಿರು ಲಿಂಗಬದಲಿ||
ತಾನು ಗರ್ಭದಲ್ಲಾರು ತಿಂಗಳಿರೆ ತಾಯಿ ಲಿಂಗವನ್ನು
ಏನಕೇನ ತಾ ಬದಲಗೊಳ್ಳಿಪಳದೆಂದು ತಿಳಿವ ಕಂದಂ |
ಬಾನ ಕೆಳಗೆ, ಭೂಗರ್ಭದಲ್ಲಿ, ಹದಿನಾರು ಲೋಕಗಳಲು
ಏನು ಹುಡುಕಿದರು ಸಿಗುವುದೊಬ್ಬನವನೇಕಮೇವ ರಂಗಂ ||
🙂
ರಂಗಂ ನಗೆಗಬ್ಬದ ಚದು
ರಂಗಂ ವಿಜ್ಞಾನ-ಕಾವ್ಯಗಳ ಸಮ ಸಂಗಮ
ಭಂಗಂ ರಾಮ ಶರ ಸಮರ
ಭಂಗಂ ಬಿನ್ನಣವ ಮೆಟ್ಟಿ ಮುರಿವಂ ಸಿಂಗಂ
ಕಮನೀಯಕಂದಪದ್ಯ-
ಕ್ರಮನೀತವಿನೀತಚರಿತ! ಮಾಂಜವನಾಥಾ!!
ನಮನೀಯಪದ್ಯವಿದರೊಳ್
ನಮನೀಯಮದೇಂ ದ್ವಿತೀಯಪಾದಾಂತ್ಯಲಘೂ???
(ಮಂಜು=ಮಧುರ, ಸುಂದರ ಇತ್ಯಾದಿ; ಇದಕ್ಕೆಲ್ಲ ಸಂಬಂಧಿಸಿದುದು ಮಾಂಜವ. ಇದು ತದ್ಧಿತವೆಂಬ ವ್ಯಾಕರಣರೂಪ. ಯದುವಿಗೆ ಸಂಬಂಧಿಸಿದುದು ಯಾದವ ಎನ್ನುವ ಹಾಗೆ)
ಗಣೇಶರೇ ಧನ್ಯವಾದ. ಕಿರುದೋಷವಿದಕ್ಕೆ ಕ್ಷಮೆಯಿರಲಿ, ಏಕೆಂದರೆ:
ಗಣನೆಗೆ ಸಿಲ್ಕದಕಾರದ
ಗುಣಮಗಣಿತಮಲ್ತೆ’ಭಂಗ’ಭಂಜನದೀಕಾ
ರಣದಿಂ ಕಿರುದೋಷದಿ ಹಿರಿ
ಗುಣ ಸಂಪದಮದನೆ ಕೊಳ್ವ ಚಪಲಕೆ ಬಿದ್ದೆನ್
’ಸಂಗಂ’ ಗುರ್ವಂತಮೆನಲ್
ಭಂಗಂ ಕಳೆಯಲ್ಕಕಾರ ಮಾತ್ರವ ಪೊರೆಯಲ್
ಭಂಗಮೆ ಪೇಳೀ ಲೋಗರ
ಭಂಗಂ ಕಳೆವ ಕರುಣಾಳುವಾ ಗುರುವಲ್ತೇ?
ಮತ್ತೆ ನೋಡಿದ್ದರಲ್ಲಿ ಈ ತಿದ್ದುಪಡಿ ಅಗತ್ಯವೆನಿಸಿತು:
ಗಣನೆಗೆ ಸಿಲ್ಕದಕಾರದ
ಗುಣಮಗಣಿತಮಲ್ತೆ’ಭಂಗ’ಭಂಜನದೀಕಾ
ರಣದಿಂ ಲಘುದೋಷದಿ ’ಗುರು’
ಗುಣ ಸಂಪದಮದನೆ ಕೊಳ್ವ ಚಪಲಕೆ ಬಿದ್ದೆನ್
’ಸಂಗಂ’ ಗುರ್ವಂತಮೆನಲ್
ಭಂಗಂ ಕಳೆಯಲ್ಕಕಾರ ಮಾತ್ರವ ’ಪೊರೆ’ಯಲ್
ಭಂಗಮೆ ಪೇಳೀ ಲೋಗರ
ಭಂಗಂ ಕಳೆವ ಕರುಣಾಳುವಾ ಗುರುವಲ್ತೇ?
Ram,
‘ಅವನೇಕಮೇವ ರಂಗ’ಮೆನುವಲ್ಲಡಗಿಸಿರು
ವವಹೇಲನವೆನಗಂ ತಿಳಿಯದಿಹುದೆ|
ಜವದೊಳದ ‘ರಂಗನವಿವೇಕಮೆ’ನ್ನುತೆ ತಿರುಚಿ
ಸವರೆ ಸಿದ್ಧಸ್ಥಿತಿಯೊಳಿರಿಸಿರುವಿರೈ||
Manjunath,
Sri Ganesh has called you ಮಾಂಜವನಾಥಾ
ಎರಡನೆ ಪಾದದೆ ಎಡವಲು ಮಂಜಾ
ಗುರುಗಳು ಹಾಕಿದರದೊ ಮಾಂಜ|
ಜರೆದರುಮಿಲ್ಲಾ ರಮಿಸಿದರಿಲ್ಲಾ
ಮೆರೆಸುವ ತನ್ನದೆ ನಿಯಮಗಳ||
ಪ್ರಸಾದರೇ, ಸೂಪರ್ 🙂
ಗುರುವೆನಲದು ಸರಳಮಲ್ತು
ಪರಮಸೂಕ್ಷ್ಮವಿಹುದಲಾ
ಪರಿಕಿಸು ’ನಮನೀಯ’ ಪದವ
ನೊರೆವರೆರಡು ಅರ್ಥಮಂ
Prasad,
ಏಕಮೇವ ನೀವೆಂದು ಪೇಳಿರಲ್ ತಳೆದಿರೇನು ಬಿಂಕ
ಏಕೊ ಕಾಣೆ ನಿಮ್ಮೀತಪಾಸಣೆಯ ವೈಪರೀತ್ಯ ರಂಗ |
ಹಾಕಿ ಭೂತಗನ್ನಡಿಯ ನೋಡಿದಿರಿ ‘ವಿವೇಕಾವಿವೇಕ’
ನೂಕಿ ಬಿಟ್ಟೆ ನಾ ನಿಮ್ಮ ಪೊಗಳುವಾ ಸಾಹಸಾತಿರೇಕ ||
😉
ಬಯಸುವಿಯಾದರೆ ವಿಕಟದ ಕಬ್ಬಂ
ಜಯಗರೆಯುವುದನು ಮರೆಯದಿರೈ|
ಮೂರನೆಯ ಸಾಲಿನಲ್ಲಿ ’ಇನ್ನು’ ತಂದರೆ ಅರ್ಥಸ್ಪಷ್ಟತೆ ಹೆಚ್ಚುತ್ತದೆ.
ಅಭಿಮನ್ಯುವೊಲು ಲೋಗರದ ಸುದ್ದಿಗಳ ಕೇಳ್ದು
ಶುಭಮಶುಭಮಂ ಭ್ರೂಣ ಪೇಳ್ದುದಿಂತು|
ಲಭಿಪುದಿನ್ನೀರ್ತಿಂಗಳೊಳಗೆನಗೆ ಮುಕುತಿ ತಾಯ್
ರಭಸದಲಿ ಪೊಂದದಿರು ಲಿಂಗಬದಲಿ||
In the 4th paada, ‘aShTaroLe’ would be a better choice for ‘rabhasadali’. AdyakShara recast:
ಭ್ರಷ್ಟಲೋಗರ ವಿಷಯ ಕೇಳುತಭಿಮನ್ಯುವೊಲು
ಪುಷ್ಟದಾ ಭ್ರೂಣ ತಾ ಪೇಳ್ದುದಿಂತು|
ಅಷ್ಟಮದ ಗರ್ಭವಿದಿನೊರ್ಮಾಸ ತಡೆಯ ತಾ
ಯಷ್ಟರೊಳೆ ಪೊಂದದಿರು ಲಿಂಗಬದಲಿ||
This is the third revision of this verse. In the first she was in her 6th month (mUrmAsa taDeye tAyi). In the second she came to the seventh (eermAsa taDeye tayi). Now she is in her eigth (ormAsa taDeye tAyi). There is no more scope for improvising!
ಪ್ರಸಾದ್ – ನಿಮ್ಮ ಕಾಲ್ಪನಿಕ ಕಂದನ ಇನ್ನಿತರ ಚಿಂತೆಗಳು ::
ತಾಯಿ ಲಿಂಗವಂ ಬದಲಿಕೊಂಡರವಳಾಗಳೆಂದು ತಂದೆ
ಬಾಯಿ ತೆರೆದರವಳನ್ನೊ, ನನ್ನೊ, ಹೇಗೆಂದು ಕರೆಯಲಾನು |
ಆಯಿ ‘ಬಾರೊ’ ಮೇಣಪ್ಪ ‘ಹೋಗೆ ನೀ’ನೆಂಬವಾಂತರಗಳು
ಸಾಯೊವರೆಗು ಬಿಡಲಾರವೆನಗೆ ಬರಿ ಜನ್ಮಕಲ್ಲ ಮುಕ್ತಿ ||
ಅವಳನ್ನೊ, ನನ್ನೊ = ಅವಳನ್ನೊ / ಅವನನ್ನೊ 🙂
ಸಾಯೊವರೆಗುಮನಿತೆಲ್ಲ ಚಿಂತೆಗಳ್ ಕಾಡುವುದು
ಈಯುವ ಕಲಾಪದಾನಂತರದೊಳೈ|
😉
ಫಲವತಿಯು ನಾನೆಂಬ ಸುದ್ದಿಯ
ನಲವಿನಲರುಹಲೆನ್ನಯ ಪತಿಯು
ತಳುವದೆನ್ನನು ಬರಸೆಳೆದಪ್ಪಿ ಹರುಷದುಬ್ಬಿನಲಿ
ಕಳುಹಲದೆಂತು ತವರಿಗೆ ಬಿಟ್ಟಿ –
ರಲರಿಯೆನರೆ ಕ್ಷಣವು ನಿನ್ನನು
ಹಲವರೆಂಬರು ಹೆಣ್ಣಿಗದು ಮರುಜನ್ಮ ಖಂಡಿತದಿ
ದಂದುಗದ ಬದುಕಿನೊಳು ಭಾವಿಸ –
ಲೊಂದು ಸುಖಕಿನ್ನೊಂದು ಕಷ್ಟವು
ಚೆಂದದಿಂದಿಹ ಹೆಣ್ಣು ಮಗುವನು ನನಗೆ ಕೊಡೆ ನೀನು
ಬಂದ ಕಷ್ಟವನೆಲ್ಲ ಸಹಿಪೆನು
ನಂದದಂತಿಹ ಬಾಳ ಜ್ಯೋತಿಯ
ತಂದು ಕೊಡಲಿಹ ನನ್ನ ಮುದ್ದಿನರಗಿಣಿಯು ನೀನಹೆ
ಸುನೀತಾ ಅವರೆ,
ನೀವು ನನಗೆ ಕಳುಹಿಸಿದ ಪದ್ಯವನ್ನು ನಿಮ್ಮ ಹೆಸರಿನಲ್ಲೆಯೆ ಹಾಕಿದ್ದೇನೆ.
ಪದ್ಯಗಳಲ್ಲಿ ಹಲವೆಡೆ ಲಗಂ ಬಂದಿರುವುದರಿಂದ ಓದುವುದಕ್ಕೆ ಸ್ವಲ್ಪ ತೊಡಕಾಗುತ್ತದೆ. ಇದನ್ನು ಗಮನಿಸಿ ಸರಿಪಡಿಸಿರಿ.
ಬಹಳ ಕಾಲದ ಬಳಿಕ ನಮ್ಮೀ
ಮಹಿತಮೆನ್ನುವ ಪದ್ಯಪಾನಕೆ
ವಹಿಲದಲಿ ಬಂದಿಹ ಸಹೋದರಿಗಿದುವೆ ನಲ್ಬರವು|
ಅಹಹ! ಕಲ್ಪನೆಯೊಳ್ಳಿತಾಗಿದೆ
ವಿಹಿತವಿದು ವನಿತಾಜನಕೆ ಮೇಣ್
ಸಹಿಸಿಕೊಳುವುದು ಸವರಣೆಗಳನು ಮಾಳ್ಪ ಸಲಹೆಗಳ:-)
ರಾಮಚಂದ್ರರು ನುಡಿದ ಪರಿಯೊಳು
ತಾಮಸಕ್ಕೆಡೆಯಾಗದಂದದಿ
ನೀಮೆಸಗುವುದು ಸವರಣೆಗಳನು ಕಳೆದು ಜಗಣಗಳ|
ಕ್ಷೇಮವಪ್ಪುದದಾಗ ಕವಿತಾ-
ಕಾಮಿನಿಗೆ ಪದ್ಯಾವಧಾನ-
ಸ್ವಾಮಿನಿಗೆ ಮೇಣ್ ಮಿಶ್ರಗತಿಯಭಿಮಾನಿ ಭಾಮಿನಿಗೆ||
ಭಾಮಿನಿಗೆ ಮನವೊಲಿದು ನಲ್ನುಡಿಯನಾಡಿದಿರಿ
ತಾಮಸದ ಕವನದಲು ಗುಣವನ್ನೆ ಗಣಿಸಿದಿರಿ
ಕಮನೀಯ ಭಾವಗಳ ಪದಗಳಲಿ ತುಂಬಿಹಿರಿ
ಪಾಮರಳ ರಚನೆಗತಿ ನಲ್ಬರವ ಕೋರಿದಿರಿ
ನಮನಗಳು ವಾಕ್ಪತಿಗೆ ಸವಿನಯದ ಸರಸತಿಗೆ
ಜಗಣಗಳ ಕಳೆದು ಸರಿಪಡಿಸಿದ ಪದ್ಯಗಳಿಂತಿವೆ:
ಫಲವತಿಯು ನಾನೆಂಬ ಸುದ್ದಿಯ
ನಲವಿನಲರುಹಲೆನ್ನಯ ಪತಿಯು
ತಳುವದೆನ್ನಯ ತೋಳ ಬಂಧಿಸಿ ಹರುಷದುಬ್ಬಿನಲಿ
ಕಳುಹ ಬಯಸೆನು ನಿನ್ನ ತವರಿಗ-
ಗಲಲರಿಯೆನರೆಘಳಿಗೆ ಮಾನಿನಿ
ಹಲವರೆಂಬರು ಹೆಣ್ಣಿಗದು ಮರುಜನ್ಮ ಖಂಡಿತದಿ
ದಂದುಗದ ಬದುಕಿನೊಳು ಭಾವಿಸ-
ಲೊಂದು ಸುಖಕಿನ್ನೊಂದು ಕಷ್ಟವು
ಚಂದದಿಂದಿಹ ಹೆಣ್ಣುಮಗುವನು ನನಗೆ ಕೊಡೆ ನೀನು
ಬಂದ ಕಷ್ಟವನೆಲ್ಲ ಸಹಿಪೆನು
ನಂದದಂತಿಹ ಬಾಳ ಜ್ಯೋತಿಯ
ತಂದು ಕೊಡಲಿಹ ನನ್ನ ಮುದ್ದಿನ ರಮಣಿ ನೀನಲ್ತೆ
ಎನಿತು ಸೊಗಸಿನ ಮುದದ ಚಣಕಿಂ
ತೆನಿತು ಚಂದದ ಕಟ್ಟು ಹಾಕಿದಿ
ರನಿತು ಸೌಖ್ಯಂಗಳು ಮೆರೆಯೆ ತಾಯ್-ತಂದೆತನಗಳಲಿ
ಮನದೊಳೊಡೆದಿಹ ಬಯಕೆ ಮೊಗ್ಗದು
ಇನಿಯೆಯೊಡಲೊಳಗರಳಲಿನಿಯನ
ಮನವರಳಿ ಕುಣಿಯುವುದು ಮೋಡವ ಕಂಡ ನವಿಲಂತೆ
ಕೂಸ ಕಾಣುವೆನೆಂಬ ಹಂಬಲ
ಲಾಸ್ಯವಾಡಿರಲವನ ಮೊಗದಲಿ
ಮಾಸಿ ಪೋಪುದು ನಸುಕ ತಳಮಳ ವಾಕರಿಕೆ ಜೊತೆಗೆ |
ಬೆಸುಗೆ ಬೆಸೆದು ಸುಭದ್ರವಾಗಲ್
ನಶಿಸಿ ಪೋಗಲ್ನಡುವಿನಂತರ
ವಸುಧೆಯಲ್ಲಿಯೆ ಪರಮ ಸುಖ ತಮದೆಂದು ಹಿಗ್ಗುವರು ||
ಬಗೆಬಗೆಯ ಖಾದ್ಯಗಳ ಬಯಕೆಯೆ
ಉಗಮವಾಗಲ್ ಬಿಡದ ಹಿರಿಯರು
ದುಗುಡವವಳಿಂ ದೂರವಟ್ಟಿಪುದವನ ಬಾಹುಗಳು |
ಮಗಳು ಚೊಚ್ಚಲ ಬಸುರಿಯೆಂದು ಸ-
ಡಗರದಲವಳ ತವರಿಗೊಯ್ವರು
ಸಿಗುವುದಲ್ಲಿಯು ಸಗ್ಗಸುಖವೇ ಪತಿಯ ವಿರಹದಲೂ ||
ಸುನೀತಾ ಅವರ ಬರೆಹ ಬಲುಮಟ್ಟಿಗೆ ಅನವದ್ಯ. ಆದರೆ ಪದಗಳ ಮೂಲಕ ಮೂರು-ನಾಲ್ಕರ ಮಾತ್ರಾಗಣಗಳು ಶ್ರುತಿಗೆ ಹಿತವಾಗುವ ಪರಿಯಲ್ಲಿ ಒಡೆದುಕೊಳ್ಳದಿರುವುದು ಅಲ್ಲಲ್ಲಿ ಕಾಣುವ ತೊಡಕು. ಇದಕ್ಕಾಗಿ ಬೇಸರಿಸಬೇಕಿಲ್ಲ, ಎದೆಗುಂದಲೂ ಬೇಕಿಲ್ಲ. ಮತ್ತೆ ಮತ್ತೆ ಮಹಾಕವಿಗಳ ಅಯಾ ಛಂದಸ್ಸಿನ ಪದ್ಯಗಳನ್ನು ಮತ್ತೆ ಮತ್ತೆ ಗತಿಶುದ್ಧಿಯಿಂದ ತಮಗೇ ಕೇಳುವ ಹಾಗೆ ಹಾಡಿಕೊಳ್ಳುವ ಮೂಲಕ ಈ ತೆರನಾದ ತಪ್ಪುಗಳನ್ನು ಸುಲಭವಾಗಿ ಮೀರಬಹುದು.
ಕಾಂಚನಾ ಅವರ ರಚನೆ ಬಲುಸೊಗಸಾಗಿದೆ. ಇಲ್ಲಿಯ ಕಲ್ಪನೆಗಳೂ ಅಭಿರಾಮ. ಒರ್ವ ಕವಯಿತ್ರಿಗಷ್ಟೇ ಸುಲಭದಲ್ಲಿ ಎಟುಕಬಲ್ಲ ಭಾವಗಳೂ ಭಣಿತಿಗಳೂ ಇಲ್ಲಿವೆ.
ವನಿತೆಯೊಡಲೊಳು ಬಿರಿದ ಮೊಗ್ಗದು
ತನುಮನವ ಹಿಗ್ಗಿಸುತಲಾ ಮನ
ದಿನಿಯಗಂ ಮೊಗವರಳಿಸುತ ಮುದದಿಂದ ಮುಂದರಿದು
ಮನೆಯ ತುಂಬಿದ ಹಿಗ್ಗು ತೌರಿನ
ಮನೆಗೆ ಹರಿದಿರಲಾ ರಸೌಘವ
ನೆನೆಯುತನುಭವಿಸುತಲೆಮಗೆ ಬಡಿಸಿದಿರಿ ಭಾವಗಳ
ಗಣೇಶರಿಗೂ, ಮಂಜುನಾಥರಿಗೂ ಮಚ್ಚುಗೆ ಹಾಗು ಪ್ರೋತ್ಸಾಹಕ್ಕೆ ಧನ್ಯವಾದಗಳು.
ಪದ್ಯಪಾನದ ಕವಿ, ಕವಯಿತ್ರಿಯರಿಗೆ ’ಬಳೆಗಾರ ಚೆನ್ನಯ್ಯ’ ನ ನೆನಪು ಬಂದಂತಿಲ್ಲ. ಹಾಗೆಯೇ ಬಸುರಿತನ ಬರೀ ವಾಕರಿಕೆ, ಸುಸ್ತಿಗೆ ಸೀಮಿತವಾದದ್ದಲ್ಲವೆಂದು ನನ್ನ ಅನಿಸಿಕೆ, ಅನುಭವ ಕೂಡ. ಸೀಮಂತದ ಸಂಭ್ರಮ, ಬಳೆತೊಡಿಸುವ ಸಡಗರ, ಹಸಿರು ಸೀರೆ, ಬಳೆ, ಮಲ್ಲಿಗೆ ಹೂಗಳ ಅಲಂಕಾರ , ಚಕ್ಕುಲಿ , ಹುರಿಗಾಳು ಮೊದಲಾದ ಕರಿದ ತಿಂಡಿಗಳು, ಹುಟ್ಟುವ ಮಗು ಹೇಗಿರಬಹುದು ಇದರ ಬಗ್ಗೆ ಚರ್ಚೆ – ಒಂದೇ, ಎರಡೇ, ಆಹಾ, ನನ್ನ ಮಗನಿಗೇ ಮದುವೆ ಮಾಡುವ ವಯಸ್ಸಾಗಿದ್ದರೂ ಇದೆಲ್ಲಾ ನಿನ್ನೆ ಮೊನ್ನೆ ನಡೆದಂತಿದೆ. ಚೊಚ್ಚಲ ಬಸುರಿನಲ್ಲಿ ನಾನು ನನ್ನ ಮನೆಯವರಿಗೆ ಹೇಳುತ್ತಿದ್ದಿದು ಇಷ್ಟೇ – ನಾನಂತೂ ಇನ್ನೂ ಹತ್ತು ಸಲ ಬಸುರಿಯಾಗಲೂ ಹೆದರುವುದಿಲ್ಲ – ನೀವೆಲ್ಲಾ ನನ್ನ ಜೊತೆಯಿರುವವರೆಗೂ…..
ರಸಪೂರ್ಣೋಕ್ತಿಯದಲ್ತೆ ಗದ್ಯತನುವೊಳ್ ಗಾಯತ್ರಿಯಿಂ ಪದ್ಯದೊಂ-
ದೆಸಕಂ ತೋರುವ ಪಾಂಗಿನಿಂದೆ ಬಗೆಗೊಂಡತ್ತೆಂಬೆನಾಂ ಮೋದದಿಂ-
ದಸಮಾನಂ ಗಡ ತಾಯ್ತನಕ್ಕೆಳಸುವೀ ದಿವ್ಯೋತ್ಸುಕತ್ವಂ ಕರಂ
ಪೊಸದೆಂದೆಂದುಮೆನಿಪ್ಪ ಭಾವಕಿದಕಾಂ ನೀಳ್ದೆಂ ಸ್ತವಾಂಭೋಜಮಂ||
ತಾಯ್ತನಮೆಂಬ ವಸ್ತುವೆನಿತೆನ್ನಿತೊ ಕಲ್ಪನೆಯೊಪ್ಪುತಿರ್ಪ ನಲ್-
ಸುಯ್ತದ ಕಬ್ಬದಿಬ್ಬಣಮನೇ ಪ್ರಕಟಂಬಡಿಸುತ್ತಲಿರ್ಕುಮೀ
ತುಯ್ತದ ನೂರುನೂರುತೆರನಂ ಬಗೆಗಾಣಿಪ ಜಾಣಜಾಡೆ ಲಾ-
ಗಾಯ್ತಿನ ದೋಹದಾದಿಗಳ ವರ್ಣನೆ ಮೇಣಿದಕೆಲ್ಲೆಯಿಲ್ಲವಯ್||
ತುಂಬಾ ತಡವಾಗಿ ನನಗಿಷ್ಟವಾದ ವಿಷಯದ ಬಗ್ಗೆ ಮತ್ತೇಭದಲ್ಲಿ:
ನಸುಕೊಳ್ ಪೂವನು ದುಂಬಿ ಚುಂಬಿಸುವ ರಾಗೋತ್ಸಾಹವಂ ಕಂಡು ಕೆಂ-
ಪೊಸರಲ್ ಮಾನಿನಿ, ನೀರನಿತ್ತೊಸಗೆಯಂ ಜೀವಾಂಕುರಂ ಮುಟ್ಟಲಾ
ರಸಿಕಪ್ರೇಮವೆ ತನ್ನೊಳೀ ತನುವೊಳಾವಿರ್ಭಾವಮಂ ಕಂಡಿತೆಂ-
ದುಸುರಲ್ ಪ್ರಜ್ಞೆಯು, ಯೋಚಿಸುತ್ತ ಮನದೊಳ್ ರೋಮಾಂಚನಂ ತಾಳುವಳ್
ಭರದಿಂ ಗರ್ಭವ ಪೊತ್ತು ಸುತ್ತುತಿಹಳಂ ಮಾರ್ಜಾರಿಯಂ ನೋಡುವಳ್
ಬೆರಗೊಳ್, ಪೂಗರು ಕತ್ತ ಚಾಚಿ ಮೊಲೆವಾಲಂಪೀರ್ವುದಂ ನೋಡುತಲ್
ಮರೆವಳ್ ತನ್ನಿರವಂ, ಪಿಪೀಲಸರಮಂಡಂ ಪೊತ್ತುದಂ ನೋಡುತಲ್
ವರವೈ ಜೀವನ ಮಾರ್ಗಮೆಂದು ಬಗೆದುಂ ಕಿಬ್ಬೊಟ್ಟೆಯಂ ತೀಡುವಳ್
ತನುವಂ ತುಂಬುತಲೆನ್ನಬಾಳಕುಡಿಯೆನ್ನಾಲೋಚನಾಧಾರೆಯಂ
ಮನಗಾಣುತ್ತಲಿದೆನ್ನಿಸುತ್ತಲದುವೆತಾನೊಬ್ಬಂಟಿಯೆಂಬ ಭಾ-
ವನೆಯುಂ ಭಂಜಿಸೆ, ತನ್ನೊಳಾನು ಮರುಜನ್ಮಪ್ರಾಪ್ತಿಯಂ ಹೊಂದುವೆಂ
ದೆನಿಸಲ್ ಕಾಮಿನಿ ಸಾವಗೆದ್ದ ನವಭಾವೋನ್ಮಾದದೊಳ್ ಶೋಭಿಪಳ್.
ಆಹ, ಏನು ಭಾವಕ್ಕೆ ಸರಿಗಟ್ಟುವ ಭಾಷೆಯ ಓಘವೋ! ಸೊಗಸು ಸೊಗಸು.
ಕೆಲವು ಸಣ್ಣಪುಟ್ಟ ಕಣ್ತಪ್ಪುಗಳನ್ನು ಸರಿಪಡಿಸುವುದಿದೆ:
ನಸುಕಲ್ -> ನಸುಕೊಳ್ ಎಂದರೆ ಸೂಕ್ತ
ಮೊಲೆಪಾಲಂ -> ಮೊಲೆವಾಲಂ
ಜೀವಕುಡಿ – ಅರಿಸಮಾಸ (ಬಾಳ ಕುಡಿ, ಉಸಿರ್ ಕುಡಿ ಆದೀತು)
“ಮನಗಾಣುತ್ತಲಿದೆ…” – ಕೊನೆಯ ಪದ್ಯದ ಮೂರನೆಯ ಪಾದದ ನಡೆ ಕುಂಟುತ್ತಲಿದೆ
ಮೊಸರನ್ನವ ಸವಿಯದೆ ಬರಿ
ಕಿಸುರಂ ಕಾಣುವನಿದೇಂ ಪಿಸುಣನೆನ್ನದಿರಿಂ
ಮೊಸರೊಳ್ ಬೆರೆತಾ ಕಿಸುರಂ
ಬಸಿದೆಸೆಯಲ್ ರಸನೆಗಲ್ತೆ ಬಲು ರುಚಿ ಮೊಸರೊಳ್
tumba chennagide hoLLa:)
ಮಂಜುನಾಥರೆ,
ನೀವು ತೋರಿದ ಕೆಲವು ತಪ್ಪುಗಳನ್ನು ತಿದ್ದಿದ್ದೇನೆ. ಜೊತೆಗೆ, ನಿಮ್ಮ ಮುಕ್ತ ಅಭಿಪ್ರಾಯವೇ ನಮಗೆ ಊರುಗೋಲು. ಇಷ್ಟಕ್ಕೂ ನೀಮ್ಮಂತಹ ಪದ್ಯವೇ(ಮ)ತ್ತರು ತಪ್ಪು ತೋರಿದ್ದನ್ನೂ ನಮ್ಮ ಜೀವನ ರೆಸ್ಯೂಮೆಗೆ ಹೆಮ್ಮೆಯಿಂದ ಸೇರಿಸಿಕೊಳ್ಳ ಬಹುದು. ಅದೊಂದು ತರಹ, ಸಿನಿಮಾದಲ್ಲಿ ಐಶ್ವರ್ಯ ರೈಯತ್ತರ ಗುದ್ದಿಸಿಕೊಳ್ಳುವ ಪಾತ್ರಕ್ಕೂ ನೂಕುನುಗ್ಗಲಿದ್ದಂತೆ :).
ಕೊನೆಯ ಪದ್ಯವೇ ನನಗಿಷ್ಟವಾದ ಪದ್ಯ. ಮನುಷ್ಯ ತನ್ನ ಆತ್ಮೀಯರ ಹತ್ತಿರವಷ್ಟೇ ತನ್ನ ಅಂತರಂಗವನ್ನು ತೆರೆಯುತ್ತಾನೆ, ಅದರಲ್ಲೂ ಒಂದಿಷ್ಟನ್ನು ತನಗೇ ಇರಿಸಿಕೊಂಡು. ಆದರೆ, ತನ್ನೋಳಗಿರುವ ಜೀವ ತನ್ನ ಮನೋಭಿಲಾಷೆಗಳನ್ನೆಲ್ಲಾ ನೋಡುತ್ತಿದೆ ಎಂಬ ಭಾವವೇ, ತಾಯಿ ಮಗುವಿನ ಪ್ರೇಮ ವೃಕ್ಷಕ್ಕಿರುವ ಬೀಜವೇನೋ ಎಂಬುದನ್ನು ಹೇಳುವ ಪ್ರಯತ್ನ. (ನೀರನಿತ್ತೊಸಗೆ, ರಸಿಕಪ್ರೇಮದ ಕಾಣಿಕೆ, ಅಂತರಂಗದ ಸ್ನೇಹಿತ, ಇಲ್ಲ ಇಲ್ಲ ಅದೂ ನಾನೂ ಬೇರೆಯಲ್ಲವೆಂಬ ಅದ್ವೈತದತ್ತ ಆಕೆಯ ಯೋಚನೆ ಸಾಗುವುದೇನೋ ಎಂಬ ಕಲ್ಪನೆ). ಆದರೆ, ಹೇಳುವಲ್ಲಿ ಎಡವಿದ್ದೇನೆ. ಮತ್ತೇಭದಲ್ಲಿ ಕೈ ಪಳಗಿದ ಮೇಲೆ ಮತ್ತೆ ಪ್ರಯತ್ನಿಸುತ್ತೇನೆ.
ಹೊಳ್ಳರ ಪದ್ಯಕಂ ಸಹೃದಯೋಚಿತಮಾಗಿಯೆ ಮಂಜುನಾಥರೊಂ-
ದೊಳ್ಳಿತನೊಲ್ದ ಮೈತ್ರಮನವೀಯುವವೊಲ್ ಸಲೆ ನೀಳ್ದುದಲ್ತೆ ಪೆಂ-
ಪುಳ್ಳ ಪ್ರತಿಕ್ರಿಯಾಪ್ರತಿಮಪದ್ಯಮದೊಂದಿರೆ ಗದ್ಯಮಾರ್ಗದಿಂ
ಕೊಳ್ಳಿರೆನುತ್ತೆ ಸೂಚನೆಗಳಂ ಕವಿಮಾರ್ಗಕಿವೇ ನೆಳಲ್ಗಳಯ್!!
ಶ್ರೀಮಂಜುನಾಥ್ ಮತ್ತು ಶ್ರೀಚಂದ್ರಮೌಳಿಯವರ ಬೆಲೆಯುಳ್ಳ ಸಲಹೆ-ಸೂಚನೆಗಳು ಪದ್ಯಪಾನಿಗಳಿಗೆಲ್ಲ ವರವಾಗಿವೆಯಲ್ಲದೆ ನನಗೂ ವಿದ್ವತ್ಸಹೃದಯರ ಸಾಹಚರ್ಯದ ಸುಖವನ್ನು ನೀಡಿವೆ ಮತ್ತು ಸಾಕಷ್ಟು ಭಾರವನ್ನೂ ಇಳಿಸಿವೆ:-) ಹೀಗಾಗಿ ಹೊಳ್ಳರೊಟ್ಟಿಗೆ ನನ್ನದೂ ನಮನ ಕೊಳ್ಳೇಗಾಲರಿಗೆ! ಎಲ್ಲಕ್ಕಿಂತ ಮಿಗಿಲಾಗಿ ಕೆಲವೇ ದಿನಗಳಲ್ಲಿ ಸಹಜಪ್ರತಿಭಾಶಾಲಿಗಳಾದ ನಮ್ಮ ತರುಣಮಿತ್ರ ರವೀಂದ್ರಹೊಳ್ಳರು ಈ ಪ್ರಮಾಣದ ಕವಿತೆಯನ್ನು ಸಿದ್ಧಿಸಿಕೊಂಡಿರುವುದು ನಮ್ಮೆಲ್ಲರಿಗೆ (ವಿಶೇಷವಾಗಿ ನನಗೆ ಎಂದರೆ ನನಗೇನೋ ಹೆಮ್ಮೆ:-) ಹರ್ಷದ ಸಂಗತಿ.
ಈ ಪ್ರಮಾಣದಲ್ಲಿ
ಧನ್ಯೋಸ್ಮಿ.
“ಐಶ್ವರ್ಯ ರೈಯತ್ತರ ಗುದ್ದಿಸಿಕೊಳ್ಳುವ ಪಾತ್ರಕ್ಕೂ ನೂಕುನುಗ್ಗಲು” ಕಲ್ಪಿಸಿಕೊಂಡೇ ಸಿಕ್ಕಾಪಟ್ಟೆ ನಗುತ್ತಿದ್ದೇನೆ 🙂
ತಮಗೆ ಮತ್ತೇಭದಲ್ಲಿ ಕೈ ಪಳಗಿಲ್ಲವೆಂಬುದು ನೀವು ಹಾಗೆ ಹೇಳಿದಮೇಲೇ ಗೊತ್ತಾದದ್ದು. ಪಳಗದೆಯೇ ಇಷ್ಟು, ಇನ್ನು ಪಳಗಿಬಿಟ್ಟರೆ!
ಗಣೇಶರೇ ಧನ್ಯವಾದ; ಸಹೃದಯ ದರ್ಶನ ಫಲವಲಾ ಸಾಹಿತ್ಯ ತರುವಿಂಗೆ (ಪಂಪ ಖಂಡಿತಾ ಕ್ಷಮಿಸುತ್ತಾನೆ)
ಈ ಸಾಲು ಕುಮಾರವ್ಯಾಸನದು; ವನಪರ್ವದಲ್ಲಿ ಬರುತ್ತದೆಂಮ್ದು ನನ್ನ ನೆನಪು. ಪ್ರಾಯಶಃ ನಿಮಗೂ ಇದು ಗೊತ್ತಿದ್ದು, ಬರೆಯುವ ಓಘದಲ್ಲಿ ಪಂಪ (ಮತ್ತೇಭವಿಕ್ರೀಡಿತದಂಥ ವೃತ್ತದ ಚರ್ಚೆಯಲ್ಲಿದ್ದ ಕಾರಣ) ಮುನ್ನುಗ್ಗಿದ್ದಾನೆನಿಸುತ್ತದೆ:-)
ಓ ಹೌದಲ್ಲ! ಇದು ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ ಬರುವ ಮಾತು. ನೆನಪಿಸಿದ್ದಕ್ಕೆ ಧನ್ಯವಾದ.
ಪಂಪ ಕ್ಷಮಿಸದೇ ಏನು ಮಾಡುತ್ತಾನೇಳಿ. ಸುಕಾಸುಮ್ಮನೇ ನಮ್ಮ ನಾರಣಪ್ಪನ ಮುನಿಸಿಗೆ ಪಕ್ಕಾದೆನಲ್ಲಾ!