ಅಂಶ ಛಂದಸ್ಸು

 

ಅಂಶ ಛಂದಸ್ಸುಗಳು, ಕನ್ನಡದ ಜಾನಪದ ಕವಿತೆಗಳಲ್ಲಿ ಹೇರಳವಾಗಿ ಉಪಯೋಗಿಸಲ್ಪಟ್ಟು, ಬಹಳ ಜನಪ್ರಿಯ ಸ್ಥಾನವನ್ನು ಗಳಿಸಿವೆ. ಛಂದಸ್ಸುಗಳಲ್ಲಿ, ಗಣಗಳ ಲೆಕ್ಕವು ಶ್ರವಣವಾಗಿಯೇ ಹೊರತು ಬರೆದಂತಲ್ಲ. ಅಂದರೆ, ಪದ್ಯಗಳನ್ನು ಹಾಡುವಾಗ ಕೆಲವು ಲಘುಗಳನ್ನೂ ಎಳೆದು ಹಾಡುವುದರಿಂದ, ಗುರುವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಅಂಶಛಂದಸ್ಸುಗಳ ಪದ್ಯಗಳು ಬ್ರಹ್ಮ, ವಿಷ್ಣು ಮತ್ತು ರುದ್ರ ಎಂಬ ಗಣಗಳ ವಿನ್ಯಾಸವಾಗಿರುತ್ತವೆ. ಗಣಗಳಿಗೆ, ಸಂಸ್ಕೃತದಲ್ಲಿ ಹಾಗು ತೆಲಗಿನಲ್ಲಿ ಬೇರೆ ನಾಮಾಂಕಿತಗಳಿವೆ. ಕೆಳಗಿನ ಪಟ್ಟಿಯುಗಣಗಳ ವಿನ್ಯಾಸ ಹಾಗು ಉದಾಹರಣೆಗಳನ್ನು ನಿರೂಪಿಸುತ್ತದೆ.

ಬಂಧ / ವಿನ್ಯಾಸಗಳಲ್ಲಿ ಮೊದಲೆರಡು ಮೂಲಬಂಧಗಳು. ಉಳಿದವು ಲಘುವನ್ನು ಎಳೆದು ಶ್ರಾವ್ಯದಲ್ಲಿ ಗುರುವಿನಂತೆ ಮಾಡಲು ಬೇಕಾಗುವ ವಿನ್ಯಾಸಗಳು. ಮುಂದಿನ ಉದಾಹರಣೆ ನೋಡಿದರೆ ಇವು ಹೆಚ್ಚು  ಸ್ಪಷ್ಟವಾಗುವವು.

ಗಣ

ಬಂಧ/ವಿನ್ಯಾಸ

ಉದಾಹರಣೆ

ಬ್ರಹ್ಮ (ಸಂ:ಕಾಮ; ತೆ:ಇಂದ್ರ)

ನಾ

ನಾ ನಾ

ನಾs

s

ಸುರಪಂ

ಬ್ರಹ್ಮಂ

ವಿಷ್ಣು (ಸಂ:ರತಿ; ತೆ:ಸೂರ್ಯ)

ನಾ ನಾ

ನಾ ನಾ ನಾ

ನಾ s

ss

s ನಾ

ನಾ ನಾ s

ನಾs s

ನಾs ನಾ

ನಳಿನಾಕ್ಷಂ

ಲಕ್ಷ್ಮೀಶಂ

ರುದ್ರ (ಸಂ:ಬಾಣ; ತೆ:ಚಂದ್ರ)

ನಾ ನಾ ನಾ

ನಾ ನಾ ನಾ ನಾ

(ಇಲ್ಲಿ ಕೂಡ ಮೇಲಿನ ಗಣಗಳಂತೆ ಲಘುವನ್ನು ಎಳೆದು ಮಾಡುವ ವಿನ್ಯಾಸಗಳು ಬರಬಹುದು)

ಗಣಸಂಗೋಪಂ

ಗಂಗಾಧಾರಂ

ಛಂದಸ್ಸುಗಳ ಪದ್ಯ ರಚನೆಯಲ್ಲಿ, ಗಣಗಳಿಗೆ ಹೊಂದುವಂತೆ ಪದಗಳನ್ನು ಬಳಸಿದರೆ ಒಳ್ಳೆಯದು.

ಕೆಳಗೆ ಕೆಲವು ಜನಪ್ರಿಯ ಅಂಶ ಚಂದಸ್ಸುಗಳ ವಿವರಣೆಯಿದೆ.

. ಸಾಂಗತ್ಯ

೧ನೆ ಪಾದ:: ವಿಷ್ಣು ವಿಷ್ಣು ವಿಷ್ಣು ವಿಷ್ಣು

೨ನೆ ಪಾದ:: ವಿಷ್ಣು ವಿಷ್ಣು ಬ್ರಹ್ಮ

೩ನೆ ಪಾದ:: ವಿಷ್ಣು ವಿಷ್ಣು ವಿಷ್ಣು ವಿಷ್ಣು

೪ನೆ ಪಾದ:: ವಿಷ್ಣು ವಿಷ್ಣು ಬ್ರಹ್ಮ

ಉದಾಹರಣೆ::

ಕಾಲವ | ನೆಳ್ಳಷ್ಟೂ | ಪೋಲುಮಾ | ಡದೆಕಾರ್ಯ

ಶೀಲನಾ | ಗಿದ್ದೊಂದು | ಘಳಿಗೆ

ಕಾಲನ್ನು | ಚಾಚಿಮೈ | ಮರೆವಾಗ | ಲೇಬಂದ

ಮೇಲಧಿ | ಕಾರಿಯು | ಬಳಿಗೆ

ಉದಾಹರಣೆಯಲ್ಲಿ, ಮೇಲ್ನೋಟಕ್ಕೆ, ವಿಷ್ಣು, ಬ್ರಹ್ಮಗಣಗಳ ನಿಯಮಕ್ಕನುಸಾರವಾಗಿ ಮಾತ್ರೆಗಳ ಲೆಕ್ಕ ಸರಿಯಾಗಿ ಕಾಣಿಸುವುದಿಲ್ಲ. ಆದರೆ ಅದನ್ನು ಎಳೆದು ಓದುವ ರೀತಿಯಲ್ಲಿ ಬರೆದಾಗ ಸಂಶಯ ನಿವಾರಣೆಯಾದೀತು. ಮೇಲಿನ ಪದ್ಯದಲ್ಲಿ ಎಳೆಯಬೇಕಾದ ಸ್ಥಳಗಳಲ್ಲಿ, ‘s’ ಅನ್ನು ಹಾಕಿದರೆ ಇಂತಾಗುತ್ತದೆ::

ಕಾಲss | ನೆಳ್ಳಷ್ಟೂ | ಪೋಲುsಮಾ | ಡದೆಕಾರ್ಯs

ಶೀಲsನಾ | ಗಿದ್ದೊಂದುs | ಘಳಿಗೆs:

ಕಾಲನ್ನುs | ಚಾಚಿsಮೈ | ಮರೆವಾಗs | ಲೇಬಂದs

ಮೇಲsಧಿs | ಕಾರಿsಯುs | ಬಳಿಗೆs

ಅಂದರೆ::

ಕಾಲಾವಾ ನೆಳ್ಳಷ್ಟೂ ಪೋಲೂ ಮಾಡದೆಕಾರ್ಯಾ

ಶೀಲಾನಾಗಿದ್ದೊಂದೂ ಘಳಿಗೇ

ಕಾಲನ್ನೂ ಚಾಚೀ ಮೈಮರೆವಾಗಾಲೇ ಬಂದಾ

ಮೇಲಾಧೀಕಾರೀಯೂ ಬಳಿಗೇ

. ತ್ರಿಪದಿ

೧ನೆ ಪಾದ:: ವಿಷ್ಣು ವಿಷ್ಣು ವಿಷ್ಣು ವಿಷ್ಣು

೨ನೆ ಪಾದ:: ವಿಷ್ಣು  ಬ್ರಹ್ಮ ವಿಷ್ಣು ವಿಷ್ಣು

೩ನೆ ಪಾದ:: ವಿಷ್ಣು  ಬ್ರಹ್ಮ ವಿಷ್ಣು

ಮೊದಲ ಸಾಲಿನಲ್ಲಿ ಒಂದನೆ ಹಾಗು ಮೂರನೆ ಗಣಗಳು ಪ್ರಾಸದಲ್ಲಿರಬೇಕು.

ಉದಾಹರಣೆ::

ಸಾಲss | ಕೊಂಬಾಗs | ಹಾಲೋಗs |ರುಂಬಂತೆs

ಸಾಲಿss | ಬಂದುs | ಸೆಳೆವಾಗsಕಿಬ್ಬsದಿs

ಕೀಲ್ಮುsರಿs | ದಂತೆs | ಸರ್ವಜ್ಞs

. ಸೀಸ ಪದ್ಯ

ಸೀಸಪದ್ಯಗಳು ತೆಲಗಿನಲ್ಲಿ ಬಹಳ ಜನಪ್ರಿಯವಾಗಿವೆ. ಸೀಸಪದ್ಯದಲ್ಲಿ ಒಟ್ಟು ಎರಡು ಭಾಗಗಳಿರುತ್ತವೆ. ಮೊದಲನೆಯದುಸೀಸಚೌಪದಿ (ಸಾಲುಗಳು). ನಂತರ ಬರುವ ಚೌಪದಿಗೆ ಗೀತಪದ್ಯವೆಂದು ಹೆಸರು. ಇದರಲ್ಲಿ ೨ ಬಗೆ – ಆಟವಲದಿಅಥವಾತೇಟಗೀತಿ“.ಛಂದಸ್ಸಿನ ಬಂಧಗಳು ಹೀಗಿವೆ::

ಸೀಸ::

೧ ರಿಂದ ೪ನೆ ಸಾಲಿನವರೆಗೆ:: ವಿಷ್ಣು ವಿಷ್ಣು ವಿಷ್ಣು ವಿಷ್ಣು ವಿಷ್ಣು ವಿಷ್ಣು  ಬ್ರಹ್ಮ  ಬ್ರಹ್ಮ

ಉದಾಹರಣೆ ::

ಭಾವವಿಸ್ತಾರಕ್ಕೆ ಬಹುವಾಗ್ವಿಲಾಸಕ್ಕೆ ಸೀಸಪದ್ಯದ ಹಾದಿ ಸಿದ್ಧಸೂತ್ರ
ತೀವಲ್ಕೆ ಸಾನೆಟ್ಟಿನೆಲ್ಲ ಜೀವಸ್ಫಾರವಿಲ್ಲಿ ಸಲ್ಲುವುದಯ್ ಪ್ರಫುಲ್ಲವಿವರ|
ನಾವೆ ಸಾಗರದಲ್ಲಿ ನಲಿವ ಹಾಗೆ ವಿಶೇಷಕಲ್ಪನೋತ್ಸಾಹಕ್ಕೆ ಶಿಲ್ಪವಿದುವೇ
ನಾವೆಲ್ಲರೂ ಸೇರಿ ನವಕಾವ್ಯಮಂ ರಚಿಸೆ ಹಾಸುಬೀಸಿನ ಹೆಜ್ಜೆ ಲೇಸೆನಿಪುದಯ್||

(ಇನ್ನು ಗೀತಪದ್ಯ)||

ಇಂತು ಸೊಗಸಾದ ಕವಿತಾನುಕೀರ್ತನಾರ್ಹ-
ಕಾಂತಮಾಧ್ಯಮಂ ಸಂದಿರಲ್ ಕವಿಕುಲಜರೇ!
ಚಿಂತೆಯೇಕೆ? ಪ್ರಸನ್ನವೈಚಿತ್ರ್ಯಭರಿತ-
ತಂತುವಂಮ್ ಕೊಂಡು ರಚಿಸಿರಯ್ ತಕ್ಕ ಕವಿತೆ!!

ವಿ.ಸೂ: ಸೀಸ ಮತ್ತು ಎರಡೂ ಬಗೆಯ ಗೀತಪದ್ಯಗಳಿಗೆ ತೆಲುಗಿನಲ್ಲಿ ಆದಿಪ್ರಾಸದ ನಿಯಮವಿಲ್ಲ. ಅದರೆ ಯತಿಸ್ಥಾನದಲ್ಲಿ ಅಕ್ಷರಮೈತ್ರಿಯ ವಡಿ ಬರಲೇಬೇಕೆಂಬ (ತೆಲುಗಿನಎಲ್ಲ ಬಗೆಯ ಛಂದಸ್ಸುಗಳಿಗೂ ಇರುವ ಅನುಲ್ಲಂಘನೀಯನಿಯಮ) ಕಟ್ಟಲೆಯುಂಟು. ಕನ್ನ್ದದಲ್ಲಿ ಯತಿ ಅಥವಾ ಯತಿಮೈತ್ರಿಯ ವಡಿ ನಿಯಮವಿಲ್ಲ. ಆದರೆ ಆದಿಪ್ರಾಸವುಂಟು. ಇಲ್ಲಿಯ ಉದಾಹರಣೆಗಳಲ್ಲಿ  ತೆಲುಗು-ಕನ್ನಡ ನಿಯಮಗಳನ್ನೆರಡನ್ನು ಸುಮ್ಮನೆ ದಿಗ್ದರ್ಶಕವಾಗಿ ಪಾಲಿಸಲಾಗಿದೆ. ಆದರೆ ಅನೇಕಕನ್ನಡಕವಿಗಳು ತೆಲುಗಿಲ್ಲಿರುವ ಪ್ರಾಸರಹಿತತೆ ಮತ್ತು ಕನ್ನಡದಲ್ಲಿರುವ ಯತಿಮೈತ್ರೀರಾಹಿತ್ಯಗಳೆಡನ್ನೂ ಬಳಸಿಕೊಂಡು ಬಲು ಸುಲಭವಾಗಿ ತೊಡಕಿಲ್ಲದ ಸೀಸ-ಗೀತಪದ್ಯಗಳನ್ನು ರಚಿಸಿರುವುದುಂಟು. ಅಲ್ಲದೆ ಈ ಸೀಸ-ಗೀತಗಳನ್ನು ಪೂರ್ಣಪ್ರಮಾಣದ ಮಾತ್ರಾಛಂದಸ್ಸಾಗಿಯೂ ರೂಪಾಂತರಗೊಳಿಸಿರುವುದುಂಟು. ಆಗ ಸೀಸವು ಪಂಚಮಾತ್ರಾಚೌಪದಿಯೇ ಆಗುತ್ತದೆ; ಗೀತಗಳು ಕ್ರಮವಾಗಿ ೩+೩+೩+೫+೫/೩+೩+೩+೩+೩ ಎಂಬ ಆಟವೆಲದಿ ಹಾಗೂ ೩+೫+೫+೩+೩ ಎಂಬ ತೇಟಗೀತಿಯಾಗುತ್ತವೆ. ಒಟ್ಟಿನಲ್ಲಿವು ಬಲುಬಗೆಯ ವೈವಿಧ್ಯ-ಸಾಧ್ಯತೆಗಳನ್ನು ಗಳಿಸಿವೆ. ಹದವರಿತು ವಿನಿಯೋಗಿಸುವ ವಿವೇಕ ಕವಿಗಿರಬೇಕು, ಅಷ್ಟೆ:-)

ಆಟವೆಲದಿ::

೧ನೆ ಹಾಗು ೩ನೆ ಸಾಲುಗಳು:: ಬ್ರಹ್ಮ  ಬ್ರಹ್ಮ  ಬ್ರಹ್ಮ  ವಿಷ್ಣು  ವಿಷ್ಣು

೨ನೆ ಹಾಗು ೪ನೆ ಸಾಲುಗಳು:: ಬ್ರಹ್ಮ  ಬ್ರಹ್ಮ  ಬ್ರಹ್ಮ  ಬ್ರಹ್ಮ  ಬ್ರಹ್ಮ

ಆಟವೆಲದಿಗೆ ಉದಾಹರಣೆ:

ಆಟವೆಲದಿಯೆಂದು ಆಂಧ್ರವಾಙ್ಮಯದಲ್ಲಿ
ಪಾಟಿಸಿರ್ಪರಲ್ತೆ ವಾಣಿನಿಯರಂ|
ಪಾಟಲಾಂಗಿಯಿವಳು ಪಾಟವಂದೋರ್ದಪಳ್
ಚಾಟುಚರಿತೆಯಿಂದೆ ಘಾಟುಗೊಂಡು!!
(ವಾಣಿನಿ = ನರ್ತಕಿ, ಆಟವೆಲದಿಯೆಂದರೆ ನರ್ತಕಿಯೆಂದೇ ಅರ್ಥ)

ತೇಟಗೀತಿ::

೧ ರಿಂದ ೪ನೆ ಸಾಲಿನವರೆಗೆ:: ಬ್ರಹ್ಮ  ವಿಷ್ಣು  ವಿಷ್ಣು  ಬ್ರಹ್ಮ  ಬ್ರಹ್ಮ

ತೇಟಗೀತಿಗೆ ಉದಾಹರಣೆ:

ತೇಜಮೆಸೆಯಲ್ಕೆ ಮಾತಿನೊಳ್ ತೇಟಗೀತಿ
ಭ್ರಾಜಿಸಿರ್ಪಾಗಳಲ್ಲವೇ ಭಾವ್ಯಸುಗತಿ!
ಓಜೆಯಿಂ ಸೀಸಪದ್ಯಾಂತಕೋತು ಬರಲು
ಸಾಜಮಕ್ಕುಂ ಕವಿತ್ವಕಾಂಭೋಜವಾಜಿ!!

(ತೇಟಗೀತಿ ಎಂದರೆ ತಿಳಿಯಾದ ಹಾಡು ಎಂದು ಅರ್ಥ. ಹೀಗೆ ಎಲ್ಲ ಚೆಲುವಾಗಿ ಸಂದರೆ ಕಾವ್ಯದ ಕುದುರೆಯು ಪ್ರಸಿದ್ಧವಾದ ಕಾಂಭೋಜಾಶ್ವವೇ ಆಗುತ್ತದೆಂದು ತಾತ್ಪರ್ಯ)

  16 Responses to “ಅಂಶ ಛಂದಸ್ಸು”

  1. ಆಟವೆಲದಿಗೆ ಉದಾಹರಣೆ:

    ಆಟವೆಲದಿಯೆಂದು ಆಂಧ್ರವಾಙ್ಮಯದಲ್ಲಿ
    ಪಾಟಿಸಿರ್ಪರಲ್ತೆ ವಾಣಿನಿಯರಂ|
    ಪಾಟಲಾಂಗಿಯಿವಳು ಪಾಟವಂದೋರ್ದಪಳ್
    ಚಾಟುಚರಿತೆಯಿಂದೆ ಘಾಟುಗೊಂಡು!!
    (ವಾಣಿನಿ = ನರ್ತಕಿ, ಆಟವೆಲದಿಯೆಂದರೆ ನರ್ತಕಿಯೆಂದೇ ಅರ್ಥ)

    ತೇಟಗೀತಿಗೆ ಉದಾಹರಣೆ:

    ತೇಜಮೆಸೆಯಲ್ಕೆ ಮಾತಿನೊಳ್ ತೇಟಗೀತಿ
    ಭ್ರಾಜಿಸಿರ್ಪಾಗಳಲ್ಲವೇ ಭಾವ್ಯಸುಗತಿ!
    ಓಜೆಯಿಂ ಸೀಸಪದ್ಯಾಂತಕೋತು ಬರಲು
    ಸಾಜಮಕ್ಕುಂ ಕವಿತ್ವಕಾಂಭೋಜವಾಜಿ!!

    (ತೇಟಗೀತಿ ಎಂದರೆ ತಿಳಿಯಾದ ಹಾಡು ಎಂದು ಅರ್ಥ. ಹೀಗೆ ಎಲ್ಲ ಚೆಲುವಾಗಿ ಸಂದರೆ ಕಾವ್ಯದ ಕುದುರೆಯು ಪ್ರಸಿದ್ಧವಾದ ಕಾಂಭೋಜಾಶ್ವವೇ ಆಗುತ್ತದೆಂದು ತಾತ್ಪರ್ಯ)

    • ಉದಾಹರಣೆಗಳಿಗಾಗಿ ಧನ್ಯವಾದಗಳು. ಇವನ್ನು ಹಾಗು ನೀವು ಕಳಿಸಿದ ಸೀಸ ಪದ್ಯದ ಉದಾಹರಣೆಯನ್ನು ವಿವರಣೆ ಸಹಿತ ಮೇಲಿನ ಪುಟದಲ್ಲಿ ಅಳವಡಿಸಲಾಗಿದೆ.

  2. ಜನಪದ ಸಾಂಗತ್ಯದಲ್ಲಿ ಫೇಸ್ ಬುಕ್ ಅಳವಡಿಸುವ ಒಂದು ಪ್ರಯತ್ನ ಹೀಗಿದೆ: [ದಯವಿಟ್ಟು ತಪ್ಪುಗಳಿದ್ದರೆ ನಮೂದಿಸುವುದು] ರಾಶಿ=ಭಾರೀ, ಬಹಳ ಎಂಬರ್ಥದಲ್ಲಿ ಈ ಪದಪ್ರಯೋಗ.

    ಫೇಸೂ ಪುಸ್ತಕದೋಳು ರಾಶೀಹರಟುತಲಿದ್ದ
    ಕೂಸೂಗಳೆಲ್ಲಾರೂ ಸೇರಿ
    ಲೇಸಾಗಿ ಕಟ್ಟುತ್ತಾ ಗುರಿಯಿಲ್ಲದಾ ಸಂಘ
    ಪಾಸುಮಾಡಲು ಸಮಯ ದಾರಿ !

  3. ತ್ರಿಪದಿಯನ್ನು ಆಟೋ ಚಾಲಕ-ಮಾಲಕರ ನಡುವೆ ಬಳಸಿದರೆ ಹೇಗೆ ? :

    ಚಾಲಕನು ಚಲಿಪಾಗ ಗಾಡಿಯೇ ತನದಂತೆ !
    ಮಾಲಿಕನು ಬಂದು ಕರೆದಾಗ ಮೈಯ್ಯೆಲ್ಲ
    ಜೋಲಿ ಹೊಡೆದಂತೆ -ಗರ್ಮಜ್ಞ

  4. ೧) ಸಾಂಗತ್ಯ-ತ್ರಿಪದಿಗಳಿಗೆ ಹೋಲಿಸಿದರೆ ಸೀಸಪದ್ಯಗಳಲ್ಲಿ ವಿಷ್ಣು-ಬ್ರಹ್ಮಗಣಗಳ ರಚನೆ ತುಸು ಭಿನ್ನ ಎಂದು ಕೇಳಿದ್ದೇನೆ. ಇದನ್ನು ದಯವಿಟ್ಟು ವಿವರಿಸಬೇಕು. ಸೀಸಪದ್ಯದಲ್ಲಿ ಕರ್ಷಣವಿರಬಾರದೆ?
    ೨) ಸೀಸಪದ್ಯವನ್ನು ಮಾತ್ರಾಗಣದಂತೆಯೇ ನಡೆಸಬೇಕೆಂದೂ, ಅದರ ವಿಷ್ಣುಗಣದಲ್ಲಿ ನನನನನ ಹಾಗೂ ನಾನನನ ವರ್ಜ್ಯ ಎಂದು ಕೇಳಿದ್ದೇನೆ. ಸೀಸಪದ್ಯದ ಬ್ರಹ್ಮಗಣದ ಸಾಧ್ಯತೆಗಳಾವುವು?

    • ನಿಮ್ಮ ಅಭಿಪ್ರಾಯಗಳೆಲ್ಲ ಸಾಧುವಾಗಿವೆ. ಸೀಸಪದ್ಯದಲ್ಲಿ ಕರ್ಷಣವು ಸರ್ವಥಾ ವರ್ಜ್ಯವೆಂದೇನಿಲ್ಲ. ಆದರೆ ಅತಿಕರ್ಷಣದಿಂದ ಅಲ್ಲಿಯ ಬಿಗಿ-ಸೊಗಗಳು ತಗ್ಗುತ್ತವೆ. ವಿಷ್ಣುಗಣಗಳ ಸಾಮಾನ್ಯನಿಯಮ ಇಲ್ಲಿಯೂ ಸಲ್ಲುತ್ತದೆ. ಇದೇ ರೀತಿ ಬ್ರಹ್ಮಗಣದ್ದೂ.
      ಹೀಗಾಗಿ ವಿಷ್ಣುವು ನನನಾನ, ನಾನಾನ, ನಾನನಾ, ನನನನ ಎಂದಾಗುತ್ತದೆ. ಕಡೆಯ ವಿನ್ಯಾಸವು ಕರ್ಷಣವಿಲ್ಲದೆ ಸೊಗಯಿಸದು. ಇದು ಹೆಚ್ಚಾಗಿ ಬಂದರೆ ಸೀಸಪದ್ಯದ ಪಂಚಮಾತ್ರಾಗಣಸಮತ್ವವು ಹದಗೆಟ್ಟು ಆ ಮಟ್ಟಿಗೆ ಶ್ರುತಿಕಟುತ್ವವು ತಲೆದೋರುತ್ತದೆ. ಇನ್ನು ಬ್ರಹ್ಮಗಣವು ನನನ, ನಾನ, ನಾನಾ ಎಂದು ಮೂರೇ ಬಗೆ. ಇವು ಮೂರೂ ಬಗೆಗಳು ಸೀಸಪದ್ಯಕ್ಕೆ ಸ್ವಾಗತಾರ್ಹವೇ ಆಗಿವೆ. ಕನ್ನಡದಲ್ಲಿ ಒಳ್ಳೆಯ ಅಂಶಸೀಸಪದ್ಯಕ್ಕೆ ಮಾದರಿಗಳು ಹೆಚ್ಚಾಗಿಲ್ಲ. ನನ್ನ ಕೆಲವೊಂದು ಅವಧಾನ ಮತ್ತಿತರ ಕಾವ್ಯಗಳಲ್ಲಿ ನೋಡಬಹುದೇನೋ. ಆದರೆ ತೆಲುಗಿನಲ್ಲಿ ಶ್ರೀನಾಥ, ನಾಚನ ಸೋಮನ, ರಾಮರಾಜಭೂಷಣ, ಕಾಣಾದಂ ಪೆದ್ದನ ಸೋಮಯಾಜಿ, ಕರುಣಶ್ರೀ ಮೊದಲಾದವರು ಅತ್ಯುತ್ತಮಗತಿಯ ಸೀಸಪದ್ಯಗಳಿಗೆ ಹೆಸರಾಗಿದ್ದಾರೆ.

      • ಕ್ಷಮಿಸಬೇಕು; ವಿಷ್ಣುಗಣವಿನ್ಯಾಸದಲ್ಲಿ ನನನನಾ ಎಂಬ ಮತ್ತೊಂದು ಮಾತ್ರಾಸಮತ್ವಸಾಧ್ಯತೆಯೂ ಇದೆ. ಇದೂ ಸೇರಿದಂತೆ ಒಟ್ಟು ನಾಲ್ಕು ಬಗೆಯ ಪಂಚಮಾತ್ರಾಸಮತ್ವದ ವಿಷ್ಣುಗಣವಿನ್ಯಾಸಸಾಧ್ಯತೆಯುಂಟು. ನನನನ ಎಂಬುದು ವಿಷ್ಣುಗಣದ ಒಂದು ಅಂಗೀಕೃತಸಾಧ್ಯತೆಯೇ ಹೌದಾದರೂ ಇಲ್ಲಿ ಪಂಚಮಾತ್ರಾಸಮತೆಯೆಂಬುದಿಲ್ಲ. ಅದನ್ನು ಕೇವಲ ಕರ್ಷಣದಿಂದ ಮಾತ್ರ ತರಲು ಸಾಧ್ಯ.

  5. ಡಿ ವಿ ಜಿ ಅವರ ಶ್ರೀರಾಮ ಪರೀಕ್ಷಣಂ ಅಹಲ್ಯೆಯ ಪ್ರಶ್ನೆ ಯ ಛಂದಸ್ಸು(ಕಂದ ಬಿಟ್ಟು) ಸೀಸ ಪದ್ಯವಾ?

    • ಹೌದು; ಇದು ಮಾತ್ರಾಸೀಸಪದ್ಯದ ಪ್ರಭೇದವೆನ್ನಬೇಕು.

  6. […] ಅಂಶಚ್ಛಂದಸ್ಸಿನ ಹಲವು ಪ್ರಕಾರಗಳು. ಪದ್ಯಪಾನ ಜಾಲತಾಣದಲ್ಲಿ ಅಂಶಚ್ಛಂದಸ್ಸಿನ ಬಗ್ಗೆ […]

  7. ಸಾಂಗತ್ಯ ಆದ್ಯಕ್ಷರ ಹೊರತು ಪಡಿಸಿ ಬೇರೆ ಸ್ಥಳಗಳಲ್ಲಿ ಸ್ವರಾಕ್ಷರಗಳನ್ನು ಬಳಸಬಾರದ

    ಕುಂದಣ ಭೋಗ
    (ಸಾಂಗತ್ಯ)

    ಬಳ್ಳಿಯ ಹೋಲುವ ಚಲುವೆಯು ಬಂದಳು
    ಬೆಳ್ಳನೆ *ಉ*ಡುಗೆಗಳುಟ್ಟು
    ಮಲ್ಲಳಿಯಂತಹ ಮನಸಿನ ಸುಂದರಿ
    ಬೆಳ್ಳಿಯಗೆಜ್ಜೆಯ ತೊಟ್ಟು

    ಬಂಧುರ ನೀಗುವ ದೇವರ ಪೂಜೆಗೆ
    ಬಂದಳು ಹೂವನ್ನರಸಿ
    ಚಂದದಿಯರಳಿದ ಕುಸುಮವ ಬಿಡಿಸುತ
    *ಅಂ*ದದ ಬುಟ್ಟಿಯೊಳಿರಿಸಿ

    ನಡೆದಳು ತುಳಸಿಯ ಗಿಡಗಳ ಸನಿಹಕೆ
    ಕುಡಿಗಳ ಕೀಳಲು ಬಯಸಿ
    *ಒ*ಡನೆಯೆ ಚುಚ್ಚಿತು ಕಾಲಿಗೆ ಮುಳ್ಳದು
    *ಇ*ಡಿಸಿತು ಕಣ್ಣೀರು ತರಿಸಿ

    *ಅ*ಮ್ಮನ ನೆನೆದಳು ನೋವನು ಮರೆಯಲು
    *ಒ*ಮ್ಮೆಗೆ ದವಡೆಯ ಕಚ್ಚಿ
    ಘಮ್ಮನೆ ನಿಂತಳು *ಅ*ರೆಚಣ ಹಾಗೆಯೆ
    ಸುಮ್ಮನೆ ಕಣ್ಣನು ಮುಚ್ಚಿ

    ಹೆಜ್ಜೆಯ ಮೇಲಕೆ *ಎ*ತ್ತುತಲಾಗಲು
    ಜಜ್ಜರ ಮುಳ್ಳನು ಕಂಡು
    ಹೆಜ್ಜೆಯ ನಿಡದಲೆ ಕಿತ್ತೆಸೆಯುತಲದ
    *ಉ*ಜ್ಜಿದಳ್ ಕಲ್ಲನು ಕಂಡು

    ನಂದನ ಕಂದನನನುದಿನ ಪೂಜಿಸೆ
    ಸುಂದರ ಹೂವನ್ನರ್ಪಿಸುತ
    ಚಂದಣದಂದಣದೊಳಗಣ ಕೂಡಿಪ
    ಕುಂದಣ ಭೋಗವ ಕೊಡುತ

    ಶ್ಯಾಮ

    • ಅಂಶಕ್ಕೆ ಮಾತ್ರವಲ್ಲ, ಮಾತ್ರಾ-ವೃತ್ತಗಳಿಗೂ ಈ ನಿಯಮ ಅನ್ವಯಿಸುತ್ತದೆ: ಸಂಧಿಯಾಗುವಂತಿದ್ದರೆ, ಸಂಧಿಯನ್ನು ಮಾಡದಿರುವುದು ವಿಸಂಧಿದೋಷವೆನಿಸುತ್ತದೆ. ಸಹಜವಾಗಿಯೇ ಪದ್ಯದ ಮೊದಲ ಪಾದದ ಮೊದಲ ಅಕ್ಷರಕ್ಕೆ ಇದು ಅನ್ವಯಿಸುವುದಿಲ್ಲ. ಉದಾ: ’ಅಮ್ಮನ ನೆನೆದಳು…’

      ಪದ್ಯದ ಉಳಿದ ಪಾದಗಳ ಮೊದಲ ಅಕ್ಷರಗಳಿಗೆ ಇದು ಅನ್ವಯವಾಗುತ್ತದೆ. ಉದಾ. ನಿಮ್ಮ ಎರಡನೆಯ ಪದ್ಯದಲ್ಲಿ ಬಿಡಿಸುತ+ಅಂದದ=ಬಿಡಿಸುತಂದದ ಎಂದು ಮಾಡಲೇಬೇಕು. ಆಗ ಒಂದು ಮಾತ್ರೆಯಷ್ಟು ಕಡಮೆಯಾಗುತ್ತದೆ. ಸರಿಪಡಿಸಬೇಕು. ನಿಮ್ಮ ಪದ್ಯಗಳಲ್ಲಿನ ಇತರ ಸಂಧಿಯಾಗಿಸಲೇಬೇಕಾದ ಸಂದರ್ಭಗಳು:
      1. ಮುಳ್ಳದು+ಇಡಿಸಿತು=ಮುಳ್ಳದಿಡಿಸಿತು
      2. ಮರೆಯಲು+ಒಮ್ಮೆಗೆ=ಮರೆಯಲೊಮ್ಮೆಗೆ
      3. ನಿಂತಳು+ಅರೆಚಣ=ನಿತಳರೆಚಣ
      4. ಮೇಲಕೆ+ಎತ್ತಲಾಗದು=ಮೇಲಕೆತ್ತಲಾಗದು

      ಈ ಕೆಳಗಿನ ಸಂದರ್ಭಗಳಲ್ಲಿ ಸಂಧಿಯಾಗಿಸಿದರೂ ಮಾತ್ರಾಗಣಿತ ವ್ಯತ್ಯಯವಾಗದು. ಆಗ ಹೇಗೂ ಉಳಿಸಿಕೊಳ್ಳಬಹುದು:
      1. ಬಯಸಿ+ಒಡನೆಯೆ=ಬಯಸಿದೊಡನೆಯೆ (೭ ಮಾತ್ರೆಗಳು)
      2. ಅದ+ಉಜ್ಜಿದಳ್=ಅದನುಜ್ಜಿದಳ್ (೭ ಮಾತ್ರೆಗಳು)
      3. ಬೆಳ್ಳನೆ+ಉಡುಗೆ=ಬೆಳ್ಳನೆಯುಡುಗೆ (೭ ಮಾತ್ರೆಗಳು)
      —-
      ಬಂದಳು/ ಹೂವನ್ನ/ರಸಿ: ಕೊನೆಯ ಗಣ ಅಪೂರ್ಣವಾಗಿದೆ
      —–
      ಅಂಶದಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಕರ್ಷಣಕ್ಕೆ ಅವಕಾಶವಿದೆಯೆಂದು ಲಗಾದಿಯನ್ನು ಬಳಸುವಂತಿಲ್ಲ (ನಿಮ್ಮ ಪದ್ಯಗಳಲ್ಲಿ ಲಗಾದಿಗಳಿಲ್ಲ.)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)