Oct 012012
 

ಈ ಕೆಳಗಿನ ಕಥೆಯ ಸ್ಫೂರ್ತಿಯಿಂದ ತಕ್ಕದಾದ ಪದ್ಯಗಳನ್ನು ರಚಿಸಿರಿ. ಬೇಕಿದ್ದರೆ ಕಥೆಯಲ್ಲಿರುವ ೩ – ೪ ಸನ್ನಿವೇಶಗಳಲ್ಲಿ ಯಾವುದಾದರು ಬಿಟ್ಟು, ಯಾವುದನ್ನಾದರೂ ನಿಮ್ಮ ಕಲ್ಪನೆಯಂತೆ ವಿಸ್ತರಿಸಿ  ರಚಿಸಿರಿ.

ಸಂದರ್ಭ

ಯೋಗಾನಂದ ಎಂಬ ರಾಜನಿಗೆ ವರರುಚಿಯೆಂಬ ವಿದ್ಯಾವಂತನೂ, ಪ್ರತಿಭಾವಂತನೂ ಆದ ಮಂತ್ರಿಯಿದ್ದನು. ಯಾವುದೋ ಕಾರಣಕ್ಕೆ,  ಚಾಣಾಕ್ಷನೂ, ದೇಶಪ್ರೇಮಿಯೂ ಆದ ಶಕಟಾಲನೆಂಬ ಇನ್ನೊಬ್ಬ  ಮಂತ್ರಿಯನ್ನೂ ಅವನ ಮನೆಯವರನ್ನೂ ವರರುಚಿಯು ಹಾಳುಬಾವಿಗೆ ದೂಡಿಸಿದ್ದು, ಶಕಟಾಲನು ಮುಯ್ಯಿ ತೀರಿಸಿಕೊಳ್ಳಲು ಜೀವ ಹಿಡಿದುಕೊಂಡಿದ್ದನು.

ಕಥೆ

ಈ ಕಥೆಯನ್ನು ಹೇಳುತ್ತಿರುವವನು “ವರರುಚಿ”

ಕಾಲಕ್ರಮದಲ್ಲಿ ಯೋಗಾನಂದನು ಕಾಮಿಯೂ ವಿಶೃಂಖಲನೂ ಆದನು. ಆದ್ದರಿಂದ ಶಕಟಾಲನ ಸಹಾಯವಿರುವುದು ಒಳ್ಳೆಯದೆಂದು ನಾನು ಅವನನ್ನು ಎತ್ತಿ ತರಿಸಿ ಮತ್ತೆ ಮಂತ್ರಿಯಾಗಿ ಮಾಡಿದೆ. ಅವನು ಕಾಲವನ್ನು ನಿರೀಕ್ಷಿಸುತ್ತಾ ನಮ್ರನಾಗಿ ನಡೆದುಕೊಳ್ಳುತ್ತಿದ್ದನು.

ಒಂದು ದಿನ ಯೋಗಾನಂದನು (ರಾಜನು) ಊರ ಹೊರಗೆ ಸಂಚಾರ ಮಾಡುತ್ತಾ ಗಂಗೆಯಲ್ಲಿ ಐದು ಬೆರಳುಗಳೂ ಕೂಡಿಕೊಂಡಿದ್ದ ಒಂದು ಹಸ್ತ ಮೇಲಕ್ಕೆ ಎದ್ದಿರುವುದನ್ನು ನೋಡಿದನು. ಕೂಡಲೆ ನನ್ನನ್ನು ಕರೆಸಿ ಅದೇನು ಎಂದು ಕೇಳಿದನು. ನಾನು ಅದಕ್ಕೆ  ಪ್ರತಿಯಾಗಿ ಎರಡು ಬೆರಳುಗಳನ್ನು ತೋರಿಸಲು, ಆ ಹಸ್ತವು ಅದೃಶ್ಯವಾಯಿತು. ರಾಜನಿಗೆ ಇನ್ನೂ ಆಶ್ಚರ್ಯವಾಗಿ ಅದರ ಅರ್ಥವನ್ನು ಕೇಳಿದನು. ನಾನು “ಐದು ಜನ ಒಟ್ಟುಗೂಡಿದರೆ ಈ ಜಗತ್ತಿನಲ್ಲಿ ಅಸಾಧ್ಯವಾಗಿರುವುದೂ ಉಂಟೇ? ಎಂದುಆ ಹಸ್ತವು ಸೂಚಿಸಿತು. ನಾನು “ಒಂದೇ ಮನಸ್ಸಿನ ಇಬ್ಬರು ಸೇರಿದರೂ ಸಾಕು. ಯಾವುದೂ ಅಸಾಧ್ಯವಾಗುವುದಿಲ್ಲ” ಎಂದು ಎರಡು ಬೆರಳನ್ನು ತೋರಿಸಿದೆ – ಎಂದೆನು.

ಒಂದುಸಾರಿ ಯೋಗಾನಂದನ ರಾಣಿಯು ಕೆಳಗೆ ಹೋಗುತ್ತಿದ್ದ ಒಬ್ಬ ಬ್ರಾಹ್ಮಣನನ್ನು ನೋಡಿದಲು. ಅವನೂ ಕತ್ತೆತ್ತಿ ನೋಡಿದನು. ಅಷ್ಟು ಮಾತ್ರಕ್ಕೇ ಅವನು ಆ ಬ್ರಾಹ್ಮಣನನ್ನು ಕೊಲ್ಲಿಸಲು ಆಜ್ಞೆ ಮಾಡಿದನು. ಅವನನ್ನು ವಧ್ಯ ಭುಮಿಗೆ ಕರೆದುಕೊಂಡು ಹೋಗುತ್ತಿರುವಾಗ ಅಂಗಡಿಯಲ್ಲಿದ್ದ ಒಂದು ಸತ್ತ ಮೀನು ಅದನ್ನು ನೋಡಿ ನಕ್ಕಿತು. ಅದು ರಾಜನಿಗೆ ತಿಳಿಯಿತು. ಆಗ ವಧೆಯನ್ನು ನಿಲ್ಲಿಸಿ ರಾಜನು ಆ ಸತ್ತ ಮೀನು ನಕ್ಕದ್ದು ಹೇಗೆ, ಏಕೆ ಎಂದು ಕೇಳಿದನು. ಮರುದಿನ ಬೆಳೆಗ್ಗೆ ಹೋಗಿ ನಾನು “ಅಂತಃಪುರದ ತುಂಬ ಗಂಡಸರಿದ್ದಾರೆ; ಅದು ತಿಳಿಯದೆ ರಾಜನು ನಿರಪರಾಧಿಯಾದ ಒಬ್ಬ ಬ್ರಾಹ್ಮಣನನ್ನು ಕೊಲ್ಲಿಸುತ್ತಿದ್ದಾನಲ್ಲ” ಎಂದು ನಕ್ಕಿತು – ಎಂದು ಹೇಳಿದೆ. ಆದ್ದರಿಂದ ಆ ಬ್ರಾಹ್ಮಣನು ಬದುಕಿಕೊಂಡನು.

ಮತ್ತೊಂದು ಸಾರಿ ಒಬ್ಬ ಚಿತ್ರಗಾರನು ಯೋಗಾನಂದನ ಮತ್ತು ಅವನ ಹೆಂಡತಿಯ ಚಿತ್ರವನ್ನು ಬರೆದನು. ಅದು ಸಜೀವದಂತೆ ತೋರುತ್ತಿತ್ತು. ನಾನು ಅದನ್ನು ನೋಡಿ, ಮಿಕ್ಕ ಲಕ್ಷಣಗಳಿಂದ ರಾಣಿಯ ಸೊಂಟದ ಹತ್ತಿರ ಒಂದು ಮ್ಮಚ್ಚೆಯನ್ನು ಊಹಿಸಿ ಬರೆದೆ. ಆಗ ಚಿತ್ರವು ಪೂರ್ಣವಾಯಿತೆಂದು ರಾಜನು “ಇದು ರಹಸ್ಯವಾಗಿರುವ ಸಂಗತಿ; ಇವನಿಗೆ ಹೇಗೆ ಗೊತ್ತಾಯಿತು? ಇವನಿಗೆ ಅಂತಃಪುರದೊಳಗೆ ಪ್ರವೇಶವಿದ್ದಿರಬೇಕು. ಅಂತಃಪುರದೊಳಗ್ಗೆ ಗಂಡಸರಿದ್ದದ್ದನ್ನೂ ಇವನು ಹೀಗೆಯೇ ತಿಳಿದಿರಬೇಕು” ಎಂದು ಭ್ರಾಂತಿಪಟ್ಟು , ನನ್ನ ಮೇಲೆ ಕೋಪಗೊಂಡು, ನನ್ನನ್ನು ಕೊಲ್ಲಿಸುವಂತೆ ಶಕಟಾಲನಿಗೆ ಆಜ್ಞೆ ಮಾಡಿದನು.

ಕಥೆಯ ಕೃಪೆ – ಕಥಾಸರಿತ್ಸಾಗರ ಮೂಲದ ಕನ್ನಡಲ್ಲಿ ಸಂಕೀರ್ಣ-ಸಂಗ್ರಹಗ್ರಂಥವಾದ ಎ.ಅರ್. ಕೃಷ್ಣಶಾಸ್ತ್ರಿಗಳ ಕಥಾಮೃತ

Aug 122012
 

ಕಥಾ ಸರಿತ್ಸಾಗರದಿಂದ ಆಯ್ದ ಕಥೆಯೊಂದು ಹೀಗೆ ಶುರುವಾಗುತ್ತದೆ.

ವತ್ಸದೇಶದ ಕೌಶಾಂಬಿಯೆಂಬ ನಗರದಲ್ಲಿ ಶತಾನೀಕನೆಂಬ ರಾಜನು ಆಳುತ್ತಿದ್ದನು. ಅವನಿಗೆ ವಿಷ್ಣುಮತಿಯೆಂಬ ರಾಣಿಯಿದ್ದಳು. ಅವಳಲ್ಲಿ ಸಹಸ್ರಾನೀಕನೆಂಬ ಮಗನು ಹುಟ್ಟಿದನು. ಶತಾನೀಕನು ಅವನಿಗೆ ಸಕಾಲದಲ್ಲಿ ಯುವರಾಜ ಪಟ್ಟ ಕಟ್ಟಿ ಹೆಸರು ಮಾತ್ರಕ್ಕೆ ರಾಜ್ಯಭಾರವನ್ನು ಹೊತ್ತಿದ್ದನು. ದೇವಾಸುರ ಯುದ್ಧದಲ್ಲಿ, ಇಂದ್ರನಿಗೆ ಸಹಾಯ ಮಾಡಲು ಹೋಗಿ, ಯುದ್ಧದಲ್ಲಿ, ಶತಾನೀಕನು ಮಡಿದನು.

ಮುಂದೆ ಸಹಸ್ರಾನೀಕನು ರಾಜನಾಗಿ ಅಯೋಧ್ಯಾಧಿಪತಿಯಾದ ಕೃತವರ್ಮನ ಮಗಳು ಮೃಗಾವತಿಯನ್ನು ಮದುವೆ ಮಾಡಿಕೊಂಡನು. ಅವಳು ಗರ್ಭವತಿಯಾಗಿ ರಕ್ತದ ಕೊಳದಲ್ಲಿ ಮೀಯಬೇಕೆಂದು ಅಪೇಕ್ಷೆ ಪಟ್ಟಳು. ರಕ್ತಕ್ಕೆ ಬದಲಾಗಿ ಅರಗಿನ ರಸದಿಂದ ಒಂದು ಕೊಳವನ್ನು ತುಂಬಿಸಿ ರಾಜನು ಅವಳ ಬಯಕೆಯನ್ನು ಸಲ್ಲಿಸಿದನು. ಅದರಲ್ಲಿ ಸ್ನಾನ ಮಾಡುತ್ತಿದ್ದವಳನ್ನು ಒಂದು ಮಾಂಸಖಂಡವೆಂದು ಭಾವಿಸಿ, ಗರುಡವಂಶದ ಪಕ್ಷಿಯೊಂದು ಹೊತ್ತುಕೊಂಡು ಹೋಯಿತು…

ಈ ಕಥೆಯನ್ನು ಛಂದೋಬದ್ಧ ಪದ್ಯರೂಪದಲ್ಲಿ ನಿರೂಪಿಸಿರಿ ಹಾಗು ನಿಮ್ಮ ಕಲ್ಪನೆಯಂತೆ ಮುಂದುವರಿಸಿ, ವಿಸ್ತರಿಸಿ, ಪೂರ್ಣಗೊಳಿಸಿರಿ

ಕಥೆಯ ಕೃಪೆ – ಎ.ಅರ್. ಕೃಷ್ಣ ಶಾಸ್ತ್ರಿಗಳ ಕಥಾಮೃತ             ಚಿತ್ರದ ಕೃಪೆ – www.pbase.com

Jun 242012
 

ಕಥಾಸರಿತ್ಸಾಗರದಲ್ಲಿ ಬರುವ ಈ ಕೆಳಗಿನ ಪ್ರಸಂಗವನ್ನಾಧರಿಸಿ ಪದ್ಯಗಳನ್ನು ಬರೆಯಿರಿ.

  • ಇಲ್ಲಿರುವ ಪ್ರಸಂಗವನ್ನು ಬೇಕೆಂದಂತೆ ವಿಸ್ತರಿಸಿ.
  • ಸಾಧ್ಯವಾದಷ್ಟೂ ವರ್ಣನೆಗಳನ್ನು ಅಳವಡಿಸಿರಿ
  • ಕನಿಷ್ಠ ೪-೫ ಪದ್ಯಗಳನ್ನಾದರೂ ಬರೆಯಿರಿ.
  • ಪೂರ್ತಿ ಮುಗಿಸಲಾಗದಿದ್ದರೆ, ಎಷ್ಟು ಬರೆದಿದ್ದೀರೋ, ಅಷ್ಟೇ ಹಾಕಿ
  • ಛಂದಸ್ಸುಗಳ ಆಯ್ಕೆ ನಿಮ್ಮದೇ !

ಪ್ರಸಂಗ ::

ವ್ಯಾಡಿ, ಇಂದ್ರದತ್ತ ಹಾಗು ವರರುಚಿ ಎಂಬ ಮೂವರು ಸಬ್ರಹ್ಮಚಾರಿಗಳು (ಒಂದೇ ಗುರುವಿನ ಬಳಿ ಕಲಿಯುತ್ತಿರುವವರು) ಗುರುದಕ್ಷಿಣೆಗಾಗಿ ಒಂದು ಕೋಟಿ ಹೊನ್ನು ಕೊಡುವುದು ಬರುತ್ತದೆ. ನಂದರಾಜನು ಇದನ್ನು ಕೊಟ್ಟಾನು ಎಂದು ಮೂವರೂ ಒಟ್ಟಿಗೆ ಅಲ್ಲಿ ಹೋಗುತ್ತಾರೆ. ಆಷ್ಟರಲ್ಲಿ ರಾಜನು ಮೃತನಾಗುತ್ತಾನೆ. ಆಗ ಇಂದ್ರದತ್ತನು ತಾನು ರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡುವುದಾಗಿಯೂ, ವರರುಚಿ ಬಂದು ಯಾಚಿಸಿದಾಗ ತಾನು ಹಣ ಕೊಡುವುದಾಗಿಯೂ ಹೇಳುತ್ತಾನೆ. ಈ ಮಧ್ಯೆ ಆತನ ಶರೀರವನ್ನು ಒಂದು ಮಂದಿರದೊಳಗಿರಿಸಿ ವ್ಯಾಡಿಯು ಕಾಯುವುದು ಎಂದೂ, ಕೆಲಸದನಂತರ ಇಂದ್ರದತ್ತನು ತನ್ನ ಶರೀರಕ್ಕೆ ಮರಳುವುದು ಎಂಬ ಯೋಜನೆಯಾಗುತ್ತದೆ.

ರಾಜನು ಮರಳಿ ಜೀವ ಪಡೆದು ಯಾಚಕನಾದ ವರರುಚಿಗೆ ಒಂದು ಕೋಟಿ ಹೊನ್ನುಗಳನ್ನು ಕೊಡಲು ಮಂತ್ರಿಯಾದ ಶಕಟಾಲನಿಗೆ ಆದೇಶಿಸುತಾನೆ. ರಾಜನು ಮರಳಿ ಜೀವ ಪಡೆದದ್ದನ್ನೂ, ಕೂಡಲೇ ದೊಡ್ಡ ಮೊತ್ತವನ್ನು ಯಾಚಕನಿಗೆ ಕೊಟ್ಟದ್ದನ್ನೂ ಕಂಡು ಸಂಶಯಗೊಂಡ ಮಂತ್ರಿಯು, ಚಿಕ್ಕವನಾದ ರಾಜಕುಮಾರ ವಯಸ್ಸಿಗೆ ಬರುವವರೆಗೂ ರಾಜನ ಜೀವ ಕಾಪಾಡುವ ತಂತ್ರ ಹೂಡಿ, ರಾಜ್ಯದಲ್ಲಿರುವ ಎಲ್ಲಾ ಹೆಣಗಳನ್ನೂ ಸುಡಿಸಿಬಿಡುತ್ತಾನೆ. ಇದರಲ್ಲಿ ಇಂದ್ರದತ್ತನ ಶವವೂ ಸುಟ್ಟುಹೋಗಿ, ಇಂದ್ರದತ್ತನು ರಾಜನ ಶರೀರದಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತಾನೆ.