Nov 302011
 

೧೫ ದಿನಗಳಿಗೊಮ್ಮೆ ಒಂದು ಸರತಿಗೆ ೫ ಸಮಸ್ಯೆಗಳನ್ನು ಗೊಂಚಲಾಗಿ ಕೊಡುವುದೆಂದು ಮಾತನಾಡಿದ್ದೆವು. ಆ ಪ್ರಕಾರ, ಡಿಸೆಂಬರಿನ ಮೊದಲ ಪಕ್ಷಕ್ಕೆ ಸಮಸ್ಯೆಗಳು ಹೀಗಿವೆ

ಸಮಸ್ಯಾಪೂರ್ಣ ::

ಕಂದ ಪದ್ಯದ ಕೊನೆಯ ಸಾಲು ಹೀಗಿದೆ – “ಮಾಡದೆ ಮಾಡುವುದೆ ಸಜ್ಜನರ ಗುಣಮಲ್ತೇ“. ಉಳಿದ ಸಾಲುಗಳನ್ನು ಪೂರೈಸಿರಿ

ದತ್ತಪದಿ ::

walk, rock, lock, lake (ವಾಕ್, ರಾಕ್, ಲಾಕ್, ಲೇಕ್) – ಈ‌ ಪದಗಳು ಸಾಲಿಗೊಂದರಂತೆ ಬರುವಂತೆ ಪಂಚಮಾತ್ರಾ ಚೌಪದಿಯಲ್ಲಿ ಸರಸ್ವತಿಯನ್ನು ಸ್ತುತಿಸಿರಿ

ವರ್ಣನೆ ::

ಕವಿತೆಯ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ರಚಿಸಿರಿ

ಲಹರಿ ::

ಯಾವುದಾದರು ಪದ್ಯವನ್ನು ಬರೆಯಿರಿ

ಚಿತ್ರಕ್ಕೆ ಕವಿತೆ ::

ಈ ಚಿತ್ರಕ್ಕೆ ಸೂಕ್ತ ಪದ್ಯ ಬರೆಯಿರಿ – ಛಂದಸ್ಸು ನಿಮ್ಮ ಆಯ್ಕೆ

 

Nov 252011
 

ಕನ್ನಡ ಕಾವ್ಯದ ಮುಖ್ಯ ಪ್ರಕಾರಗಳಲ್ಲೊಂದಾದ ವಚನಗಳ ಶೈಲಿಯಲ್ಲಿ ಈ ಎರಡು ಬರಹ.

ಹಿನ್ನೆಲೆ:  ಇತ್ತೀಚಿಗೆ ಕೇಳಿಬರುತ್ತಿರುವ “ಕನ್ನಡ ಶುದ್ಧೀಕರಣ”ದ ಕೂಗು, ಅದರ ಹಿಂದಿರುವ ಭಾಷೇತರ ದುರುದ್ದೇಶಗಳಿಂದ ನುಡಿಯ ನಿಜದ ಸೊಗಸು ಕೆಡುವುದೆಂಬ ಕಳಕಳಿ.

(೧)
ಕಾಗೆ ಕರುಬಿ ಮಾವಿನ ಚಿಗುರುಂಡೊಡೆ
ಬಾಯಿ ಕಹಿಗೊಂಡಿತ್ತಲ್ಲದೆ
ಕೋಗಿಲೆಯ ಸೊಲ್ಲು ದೊರಕೊಂಡಿತೇ
ಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ?
ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ
ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ
ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? ನುಡಿ ಕನ್ನುಡಿಯೇ?
ನುಡಿಯೊಳನುಡಿತವ ಕೇಳದೆ ಮಿಡಿತವನರಿಯದೆ
ನಾನೀನೆಂದು ಗಳಹುವ ಬಾಯಿಬಡುಕರನೇನೆಂಬೆನಯ್ಯಾ
ದಮ್ಮಪುರದ ಮಂಜಯ್ಯಾ ನಿಮ್ಮ ನುಡಿಯೆಮಗೆ ಶರಣು.

(೨)
ಈ ನುಡಿ ಕನ್ನುಡಿಯೆಂಬರು
ಮತ್ತಾನುಡಿ ಪರನುಡಿಯೆಂಬರು,
ತೊದಲುವ ಕಂದನ ನುಡಿಯಾವುದಯ್ಯಾ
ಬಿರಿವೂವಿನ, ಚೆಲುನಗುವಿನ, ಎದೆಯೊಲವಿನ ನುಡಿಯಾವುದಯ್ಯಾ
ನುಡಿವುಟ್ಟುವ, ಹೊಮ್ಮುವ, ನೆಗೆಯುವ, ಚಿಮ್ಮುವ ಜೀವದ ನಡೆಯರಿಯದೆ,
ಪೆಣಕೆ ದಾರವನಿಕ್ಕಿ ಜಾತಿಯ ಹೊಲಸುಂಬರಯ್ಯಾ
ಅಯ್ಯಾ ನಿಮ್ಮ ಕರುಣೆಯದಾವ ನುಡಿ
ಕಡುಮೌನವದಾವ ನುಡಿ ಪೇಳಾ ದಮ್ಮಪುರದ ಮಂಜಯ್ಯಾ

Nov 202011
 

 

ಚಂದ್ರ ಮತ್ತು ಕಡಲು – ಏನುಂಟು ನಿಮ್ಮ ಭಾವ,  ಈ ನಂಟಿನ ಬಗ್ಗೆ ಕವನಿಸಿ

 

ಉಡುಪ ವಾರಧಿಯ ನುಬ್ಬಿಪಂ ; ಮುದಂ-

ಬಡಲು ಸಾಗರನಿಗದೇನು ಕಾರಣಂ?

ಒಡಲಕೂಸು ಕಡಲಿಂಗೆ ಚಂದ್ರಮಂ

ಕಡಲಿಗುಂಟು ಶಶಿಮೋಹ  ವರ್ಧಿಸಲ್

(ಛಂದಸ್ಸು:   ಮತ್ತ ಕೋಕಿಲ.  ಪ್ರಯೋಗಾಕಾಂಕ್ಷಿಗಳು ತ್ವರೆಮಾಡಬಹುದು)

 

 

Nov 042011
 

ರಾಮಾಯಣ, ಮಹಾಭಾರತ, ಕಾಳಿದಾಸನ ಮಹಾಕಾವ್ಯಗಳೆಲ್ಲವನ್ನೂ ಮೂಲದಲ್ಲಿ ಓದಿ ಮುಗಿಸಿದ ಗೆಳೆಯನ ಕುರಿತು ಬರೆದ ಪದ್ಯಗಳು ::

ಮೇಲೆ ತೇಲುತ ಸಾಗರಂಗಳ
ಮೂಲೆಯಲ್ಲಳುಕುತ್ತ ಮೆರೆಯದೆ
ಆಳಗಳನೆಲ್ಲವನು ಶೋಧಿಸಿ ಮಥಿಸಿದಾ ಶೂರ |
ಮೂಲ ಗ್ರಂಥಂಗಳ ಪಠನವೀ
ಕಾಲಗಳಲಪರೂಪವಾಗಿರೆ
ಪಾಲು ಕದಳೀ ಫಲದವೋಲ್ ಕಳೆದಿರ್ಪನೀ ಧೀರ ||

ಪರುಠವಿಸುತ ಕುಶಾಗ್ರಮತಿಯ –
ನ್ನರಸಿ ಸತ್ಯಾಂಶಂಗಳೆಳೆಗಳ –
ನೆರಕವೆರೆದಿಹ ತರ್ಕಗಳ ಚಿರ ತತ್ವಗಳ ಬೆಳಗಿ |
ಸರಸ  ಹಾಸದ ಸರಳ ಸಖ ಸುಮ –
ಧುರ ಸರಾಗ ಗುಣಂಗಳಾ ಗಣಿ
ಹರಳೊ ಮುತ್ತಿನ ಮಣಿಯೊ ಹವಳದ ಶಿಲೆಯೊ ನಾನರಿಯೆ ||