Dec 072013
 

ಪದ್ಯಪಾನಿಗಳೇ,

ಮುಕ್ತಕಗಳನ್ನು ಬರೆಯುವಲ್ಲಿ ಕೈಪಳಗಿರುವ ಪದ್ಯಪಾನಿಗಳು ಪದ್ಯಗುಚ್ಛಗಳಲ್ಲಿ ವರ್ಣನೆಯನ್ನು ಮಾಡಬೇಕಾಗಿ ವಿನಂತಿ. ಒಂದೇ ವಸ್ತುವಿಗೆ ಹಲವಾರು ಪದ್ಯಗಳನ್ನು ಅವಿರತವಾಗಿ ಬರೆಯುವ ನಿಮ್ಮ ದಕ್ಷತೆಯನ್ನು ಈ ಕಂತಿನಲ್ಲಿ ಪ್ರದರ್ಶಿಸುವ ಸದವಕಾಶವಿದೆ.

ಈ ಕೆಳಗಿನ ನಿಯಮಗಳನ್ನು ಗಮನಿಸಿ:

  • ಐದಕ್ಕೂ(5) ಹೆಚ್ಚಿನ ಪದ್ಯಗಳಲ್ಲಿ ಪ್ರಕೃತಿಯ ಯಾವುದಾದರೂ ಒಂದು ಆಯಾಮವನ್ನು ವರ್ಣಿಸಬೇಕು. 
  • ಪರ್ಯಾಯವಾಗಿ ಪ್ರಕೃತಿವರ್ಣನೆಯ ಯಾವುದಾದರೂ ಮಹಾಕವಿಯ 5ಕ್ಕೂ ಹೆಚ್ಚಿನ ಪದ್ಯವಿರುವ ಗುಚ್ಛವನ್ನು ಅನುವಾದ ಮಾಡಾಬೇಕು.
  • ಸಂಸ್ಕೃತ ಮತ್ತು ಕನ್ನಡದಲ್ಲಿ ಪದ್ಯರಚನೆ ಮಾಡಬಹುದು

ಉದಾಹರಣೆಗೆ ಕುಮಾರವ್ಯಾಸಭಾರತದ ಆದಿಪರ್ವದಲ್ಲಿ ಬರುವ ವಸಂತವರ್ಣನೆಯನ್ನು ಕೆಳಗೆ ಕಾಣಬಹುದು:

ತೆಗೆದುದಗ್ಗದ ತಂಪು ನದಿ ಸರ
ಸಿಗಳ ತಡೆಯಲಿ ಹೆಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ
ಸೊಗಸಿದವು ನೆಳಲುಗಳು ದೂರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ

ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಟಿಕರಿಗಲಗಣಸು
ಆಗಮಿಕರದೆ ಶೂಲ ಗರ್ವಿತ
ಗೂಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ

ಫಲಿತಚೂತದ ಬಿಣ್ಪುಗಳ ನೆರೆ
ತಳಿತ ಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜ ಹಂಸಗಳು

ಜಗವ ಹೊಗೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನ ವೀ
ಧಿಗಳ ವಲಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುವಿಕ್ಕಿತು
ವಿಗಡ ಮುನಿಜನವೇನನೆಂಬೆನು ನೃಪತಿ ಕೇಳೆಂದ

ನೆನಪಿರಲಿ ಬಿಡಿ ಪದ್ಯಗಳಲ್ಲ, ಐದಕ್ಕೂ ಹೆಚ್ಚು ಪದ್ಯಗಳಲ್ಲಿ ವರ್ಣಿಸಬೇಕು… ಕಲ್ಪನೆ ಗರಿಗೆದರಲಿ…

ವಿ.ಸೂ:  ಬಹಳ ಪ್ರಯತ್ನ ಪಟ್ಟೆ ನಾಲ್ಕು ಪದ್ಯವನ್ನು ಬರೆದಿದ್ದೇನೆ, ಐದನೇಯದು ತೋಚುತ್ತಿಲ್ಲ ಎನ್ನುವ ಪರಿಸ್ಥಿತಿಯಿದ್ದರೆ, ನಾಲ್ಕನ್ನೇ ಹಾಕಿ 🙂