ಸಂಜೀವರ ಪದ್ಯ:
ಅಳೆಯುವೇನೆನ್ನ ನೀನೀಯಳತೆಗೋಲಿನೊಳೆ?
ಕಳೆ! ನಿನ್ನ ತಿಳಿವಾದರೋ ಪಳತು ಕಾಣಾ
ತುಳಿದಿಳೆಯನಳೆದಿಹನು ಜಗವನಾಳುವವ ನಿ
ನ್ನಳೆಯೇನು? ತಾಳು ತಾಳೆಂದೆಂದಿಗುಂ
———
ರಾಮಚಂದ್ರರ ಪದ್ಯ:
ಮುದದೆ ಸದನವ ಕಟ್ಟೆ ಮಕ್ಕಳೆತ್ತಲೊ ಪೋಗ-
ಲುದಕವಿಲ್ಲದ ಭವ್ಯ ಬಾವಿಯಂತೆ|
ನದಿಗೆ ಸೇತುವೆ ಕಟ್ಟೆ ತಾನೆತ್ತೊ ಪರಿದಪುದು
ಮದುವೆ ಪಳತಾಗಿರ್ದ ಕೂರ್ಮೆಯಂತೆ||
———
ಸೋಮಶೇಖರರ ಪದ್ಯಗಳು:
ಲಕ್ಷಾಂತರದ ಪಣದ ಜನ್ನದಿಂ ಜನಿಸಿತುಂ
ದಕ್ಷೆತೆಯನೆಸಗಿ ನಿಂತಯ್, ಮನುಜರೋಳ್|
ದೀಕ್ಷೆಯಿರ್ಪೊಡಮೀಕ್ಷೆ ಮಿತಿಯರಿವನರುಪಿ ನೀಂ
ಸಾಕ್ಷಿಯಾದಪೆಯಲ್ತೆ ಚಿರಕಾಲಕಂ||
ಚಾಚಿರಲ್ ಬಾಹುವಿಂ ಪಿಡಿದೆಯೇನಿರ್ದಡಂ
ತೋಚಿಕೆಯನನುಸರಿಸುತುಂ ಬಳೆದಯಯ್|
ಔಚಿತ್ಯಮುಳಿದಿರ್ಪ ವಾಗ್ವಿಲಾಸದ ತೆರದಿ
ಪೇಚಿಗಂ ಮಾದರಿಯವೊಲ್ ನಿಂದೆಯೇಂ??
ಆತುರದೆ ವಿಧ್ವಂಸನಂಗೆಯ್ವುದೊಂದು ಬಗೆ
ಪಾತಾಲನೊಳ್ ನೂಂಕುವೊಂದು ಬಗೆಯಯ್|
ಘಾತಿಸಲ್ ನದಿಗಿರ್ಪ ನೇರ್ಪ ಬಗೆ ದಾಂಟಿಪಂ-
ಗಾತುಕೊಳ್ಳದ ದಿವ್ಯನಿರ್ಲಕ್ಷ್ಯಮೇ??
ಪಿಂತೆಂದೊ ದರ್ಪದಿಂ ನಿರ್ಮಿಸಲ್ ಮೂರ್ತಿಯಂ
ಸ್ವಂತಿಕೆಯನುಳಿದ ಧೂರ್ತನವೆಸರಿನೊಳ್|
ನಿಂತು ನೋಳ್ಪುದೆ ಲೋಗಮಂಟಿರದ ನೆನಹುಗಳ
ಕಂತೆಯಂ ತನ್ನಾರ್ದ್ರಭಾವದಿಂದಂ||
ನದಿಯುಂ ಸೇತುವೆಯುಂ ಗಡ
ಮುದದಿಂ ಗೈವುದು ಪರೋಪಕಾರಮನೆಸಗಲ್|
ಹೃದಯದೆ ಮಚ್ಚರಮೀರ್ವರೊ-
ಳುದಯಂಗೈಯ್ಯುತೆ ವಿರೋಧಿಸಲ್ ಗತಿಯೆಂತಯ್||
——–