Jul 022017
 

ಆಕೃತಿ ರಾಮಚಂದ್ರು ವಿರಹಾಕೃತಿ ಕನ್ಬೊಮತೀರು ಸ್ವಾಮಿ ಚಾ-
ಪಾಕೃತಿ ಕನ್ನುಲನ್ ಪ್ರಭು ಕೃಪಾಕೃತಿ ಕೈಶಿಕಮಂದು ರಾಮ ದೇ-
ಹಾಕೃತಿ ಸರ್ವದೇಹಮುನ ಯಂದುನ ರಾಘವವಂಶಮೌಳಿ ಧ-
ರ್ಮಾಕೃತಿ ಕೂರುಚುನ್ನ ವಿಧಮಂತಯು ಸ್ವಾಮಿ ಪ್ರತಿಜ್ಞಮೂರ್ತಿಯೈ

(ಶ್ರೀಮದ್ರಾಮಾಯಣಕಲ್ಪವೃಕ್ಷಮು, ಸುಂದರಕಾಂಡಮು, ಪರರಾತ್ರಖಂಡಮು)

ಆಕೃತಿ ರಾಮಚಂದ್ರ ವಿರಹಾಕೃತಿ ಪುರ್ಬಿನ ಬಾಗು ರಾಮ ಚಾ-
ಪಾಕೃತಿ ಕಂಗಳೊಳ್ ಪ್ರಭು ಕೃಪಾಕೃತಿ ಕೈಶಿಕೆಯಲ್ಲಿ ರಾಮ ದೇ-
ಹಾಕೃತಿ ಸರ್ವದೇಹದೊಳಗೆಲ್ಲವು ರಾಘವವಂಶಮೌಳಿ ಧ-
ರ್ಮಾಕೃತಿ ಕೂರ್ತಭಂಗಿವಿಧಮೆಲ್ಲವು ಸ್ವಾಮಿ ಪ್ರತಿಜ್ಞಮೂರ್ತಿಯೈ

ಕಲ್ಪನೆಯೆಂದರೆ, ಒಂದು ಹೊಸ ದೃಕ್ಕೋನ. ಎಲ್ಲರಿಗೂ ತಿಳಿದ ವಿಷಯಗಳನ್ನು ಕುರಿತು ತಿಳಿಯದ ಹೊಸ ಅಂಶವನ್ನು ಆವಿಷ್ಕರಿಸಬಲ್ಲ ಚಾತುರ್ಯ. ಸೀತಾನ್ವೇಷಣೆಗಾಗಿ ಸಮುದ್ರತರಣಮಾಡಿ ಲಂಕೆಯನ್ನು ಸೇರಿದ ಮಾರುತಿ, ರಾತ್ರಿಯೆಲ್ಲಾ ಲಂಕೆಯನ್ನು ಶೋಧಿಸಿ ಕೊನೆಗೆ ಅಶೋಕವನದಲ್ಲಿ ಸೀತೆಯನ್ನು ಮೊದಲಸಲ ನೋಡಿದಾಗ, ಅಲ್ಲಿ ಕಂಡದ್ದು ರಾಮತತ್ತ್ವಕ್ಕೆ ಅಭಿನ್ನವಾದ ಸೀತೆಯ ರೂಪ. ಸೀತೆಯನ್ನು ನೋಡಿದಾಗ ಅಲ್ಲಿ ಶ್ರೀರಾಮನೇ ಕಂಡುಬರುತ್ತಾನೆ. ಇದು ರಾಮನ ಏಕಪತ್ನೀವ್ರತ ಮತ್ತು ಸೀತೆಯ ಪಾತಿವ್ರತ್ಯದ ಪರಿಪಕ್ವತೆಯ ಪ್ರತೀಕವಾಗಿದೆ. ಸೀತೆಯು ಹನುಮನಿಗೆ ಕಂಡದ್ದು ಹೇಗೆ? ಆ ವರ್ಣನೆಯಲ್ಲಿನ ಹೊಸತನ ಈ ಪದ್ಯದ್ದು.

ಮಾರುತಿಯು ಸೀತೆಯನ್ನು ನೋಡಿದಾಗಿನ ಸಂದರ್ಭದ ಸಹಜಸುಂದರಭಾವದ ವಾಲ್ಮೀಕಿವರ್ಣನೆಯಿದು: “ಆಕೆ ಕಾಂತಿವಿಹೀನಳು, ದುಃಖಿತಳು. ಧೂಳುತುಂಬಿದ ಕೇಶ. ತನ್ನ ಪುಣ್ಯವು ಕ್ಷೀಣಿಸಿ ನೆಲಕ್ಕೆ ಬಿದ್ದ ನಕ್ಷತ್ರದಂತೆ ಇದ್ದಾಳೆ. ನಿಜಸಚ್ಚಾರಿತ್ರವೇ ಸೀತೆಯ ಐಶ್ವರ್ಯವಾದರೂ, ಭರ್ತೃದರ್ಶನಾವರೋಧವು ಅವಳ ಇಂದಿನ ಬಡತನವಾಗಿದೆ. ರಾವಣನ ಬಂಧಿಯಾಗಿ ತನ್ನ ಬಂಧುಜನರಿಂದ ದೂರವಾಗಿ, ಆಕೆ ಸಿಂಹಗಳು ಅಡ್ಡಗಿಸಿದ ಕರಿಣಿಯಂತಿದ್ದಳು. ನಿರಾಭರಣೆಯದರೂ ಸುವಿಭಕ್ತ ಅಂಗಗಳಿಂದ ಶೋಭಿಸುತ್ತಿದ್ದ ಆ ಮೈಥಿಲಿಯನ್ನು ಮಾರುತಿಯು ನೋಡಿದ.” ರಾಮಾಯಣದರ್ಶನದಲ್ಲೂ ಇಂಥ ವರ್ಣನೆಯೇ ಇದೆ. ಆ ಸಂದರ್ಭವನ್ನು ಕುವೆಂಪು ಹೀಗೆ ಕಂಡಿದ್ದಾರೆ:

ಹತ್ತೆ ಸಾರಿರ್ದಳಂ ಕಂಡಾಕೆಯಂ, ಆ
ಕೃಶಾಂಗಿಯಂ, ಮೀಹಮಿಲ್ಲದ ಮಲಿನಗಾತ್ರೆಯಂ,
ವಿವಿಧಭಾವಕ್ರಕಚಪೀಡನಕೆ ಸಿಲ್ಕಿತೊ
ಸಮೀರಜಾತ್ಮಂ! ಸಂತೋಷವುಕ್ಕಿತದನಿಕ್ಕಿ
ದುಃಖಧೂಮಂ ತುಂಬಿದತ್ತದನಿರಿದು ಸೀಳ್ದು
ಉಜ್ಜ್ವಲಿಸಿತುರಿ ರೋಷಭೀಷಣವಿಷಾದದಾ:
“ಇವಳಹುದೆ ಆ ದೇವಿ,….
……………
“ಅಯ್ಯೊ, ದಾಶರಥಿ
ಬಣ್ಣಿಸಿದ ತನ್ನ ದಯಿತೆಯ ಚಿತ್ರವೆಲ್ಲಿ? ಈ
ದೀನದುಃಖಿನಿಯೆಲ್ಲಿ? ಬರ್ಚಿಸಿದ ಚೆಲ್ವೆಸೆವ
ಚಿತ್ರಪಟಮಂ ಮಸಿಯ ಕೈ ಹಿಸುಗಿ ಬಿಸುಟಂತೆ
ತೋರ್ಪಳೀ ಮಹಿಳೆ!

ವಾಲ್ಮೀಕಿಯ ವರ್ಣನಾಮಾರ್ಗವನ್ನೇ ಹಿಡಿಯದೆ, ಈ ಸಂದರ್ಭವನ್ನು ತಮ್ಮ ಸ್ವೋಪಜ್ಞತೆಯಿಂದ ಮತ್ತೂ ಬೆಳಗಿಸುವ ವಿಶ್ವನಾಥರ ವರ್ಣನೆಯನ್ನು ಅವರ ಅನೇಕ ಪದ್ಯಗಳಲ್ಲಿ ಕಾಣಬಹುದು. ಇಲ್ಲಿ ವಿವೇಚಿಸುತ್ತಿರುವ ಪದ್ಯಕ್ಕೆ ಮೊದಲೇ ಹನುಮ ಕಂಡ ಸೀತಾವರ್ಣನೆಗೆ ಹಲವಾರು ಪದ್ಯಗಳನ್ನೇ ಕವಿ ಮೀಸಲಿಟ್ಟಿದ್ದಾರೆ. ಆ ಪದ್ಯಗಳ ಭಾವವಿನೂತ್ನತೆಯ ಸೊಗಸು ಮನನೀಯವಾಗಿದೆ.

⦁ ಪ್ರಳಯಜಲಧಿಯಲ್ಲಿನ ಬಾಡಬಾಗ್ನಿಯ ವೃಕ್ಷಮೂಲದ ಭೀಕರಪ್ರದೇಶದಲ್ಲಿ ಸೋಮಕಾಸುರನು ಬಂದಾಗ ಕಳವಳಪಡುತ್ತಿದ್ದ ತ್ರಯೀಕಾಂತೆಯಂತೆ ಇದ್ದಳು (ವೇದಸ್ವರೂಪಿಣಿಯಾದ ಸೀತೆ).
⦁ ಹಿರಣ್ಯಾಕ್ಷನು ಭೂಮಿಯನ್ನು ಚಾಪೆಯಂತೆ ಸುತ್ತಿ ಕೊಂಡೊಯ್ದಾಗ, ಅವನ ಕೋರೆಗಳು ಮೈಯೆಲ್ಲಾ ಗೀಚಿ, ಮೇಲೆ, ಕೆಳಗೆ ವಾಲುತ್ತಿರುವ ಧಾರುಣೀಸುಂದರಿಯಂತಿದ್ದಳು.
⦁ ಪರಮದುರಹಂಕ್ರಿಯಾಶಿಖಾಭಾಸುರನಾಗಿ ತಾನೇ ಸರ್ವೇಶ್ವರನೆಂದು ತರ್ಜನೆಮಾಡುವ ಹಿರಣ್ಯಕಶಿಪುವಿನ ಸಭಯೆಲ್ಲಿ, ಸರ್ವಪ್ರಳಯಭೀತಿಯನ್ನು ಕಾಣುವ ವಿಷ್ಣುಭಕ್ತೆಯಂತಿದ್ದಳು.
⦁ ಬಲೀಂದ್ರನ ರಾಜ್ಯಭಾರದಲ್ಲಿ ತೃಣದಂತೆ ಕೃಶೀಭೂತವಾದ ಸ್ವರ್ಗಲಕ್ಷಿಯಂತಿದ್ದಳು.
⦁ ಉಂಡಮನೆಗೆ ಎರಡು ಬಗೆಯುವ ಕಾರ್ತವೀರ್ಯನ ಪರಾಕ್ರಮಕ್ಕೊಳಗಾಗಿ ’ಅಂಬಾ’ ಎಂದು ಭಯಪಟ್ಟು ಅರಚುವ ಆತಿಥ್ಯದೇವತೆಯಂತೆ (ಕಾಮಧೇನು) ಇದ್ದಳು.
⦁ ನಲ್ದೆಸೆಯಲ್ಲೂ ವಿಪರೀತವಾಗಿ ಅಗೆಯುವಂತೆ ಬೀಸುವ ಗಾಳಿಗೆ ಜಲಚರಗಳು ಮಟ್ಟದಿಂದ ಮೇಲೆದ್ದು ವಾರಿಬಂಧವನ್ನು ಚೂರುಚೂರಾಗಿಸಿದಾಗ ಆ ಬಿಂದುಸಮೂಹಭಾವವೇ ದೈನ್ಯಮೂರ್ತಿಯಾಗಿ ತೇಲಾಡುವ ತಟಾಕವೋ ಎಂಬಂತಿದ್ದಳು.

ಹನುಮಂತನಿಗೆ ಸೀತೆ ಹೀಗೆಲ್ಲ ಕಂಡಳು ಎಂಬಂಥ ನವೀನ ಕಲ್ಪನೆಗಳನ್ನು ಮಾಡಿಯೂ ಕವಿಗೆ ತೃಪ್ತಿಯಿಲ್ಲ. ಪ್ರಸ್ತುತ ನಾವು ಗಮನಿಸುತ್ತಿರುವ ಪದ್ಯದಲ್ಲಿ ಮತ್ತೂ ಹೊಸರೀತಿಯ ಕಲ್ಪನೆ ಗರಿಗೆದರಿದೆ.

ಮಾರುತಿ ದೂರದಿಂದ ನೋಡಿದ. ಆಕೆಯ ಆಕಾರ ರಾಮಚಂದ್ರನ ವಿರಹವೇ ಮೈವೆತ್ತಂತೆ ಇತ್ತು. (ಶ್ರೀರಾಮನೆಂದರೆ ಯಾರೋ ನನಗೆ ಸಂಪೂರ್ಣವಾಗಿ ತಿಳಿದಿದೆಯೆಂದು ಭಾವಿಸಿದ್ದೆ. ಈಕೆಯನ್ನು ನೋಡಿ, ನನಗೇನೇನೂ ತಿಳಿದಿರಲಿಲ್ಲ ಎಂದು ಈಗ ಅರ್ಥವಾಯಿತು. ಸೀತೆಯನ್ನು ಅರ್ಥಮಾಡಿಕೊಳ್ಳದೆ ಶ್ರೀರಾಮನು ಪೂರ್ಣವಾಗಿ ಅರ್ಥವಾಗುವುದಿಲ್ಲ – ’ಸೀತನೆರುಂಗಕುಂಡ ರಘುಶೇಖರುಡರ್ಥಮುಗಾಡು ಪೂರ್ತಿಗಾ’ ಎಂದು ಹನುಮನೇ ಮುಂದೆ ಹೇಳುತ್ತಾನೆ). ಇನ್ನು ಸೀತೆ, ರಾಮಚಂದ್ರನ ವಿರಹಾಕೃತಿಯಾಗಿ, ಒಂದು ವಿಯೋಗಭಾವದ ಮುದ್ದೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನು? ಸೀತಾರಾಮರ ಪರಸ್ಪರಾನುಬಂಧ ಆ ರೀತಿಯದು. ಹತ್ತಿರಕ್ಕೆ ಬಂದು ಮುಖವನ್ನು ಕಂಡಾಗ, ಆಕೆಯ ಹುಬ್ಬುಗಳೆರಡೂ ಸೇರಿ ರಾಮಸ್ವಾಮಿಯ ಧನಸ್ಸೇನೋ ಎನ್ನುವಂತಿದ್ದವು. ಕೃಪಾಸಮುದ್ರನಾದ ಶ್ರೀರಾಮನ ಕೃಪೆಯಲ್ಲವೂ ಸೀತೆಯ ಕಣ್ಣುಗಳಲ್ಲಿ ಗೂಡುಕಟ್ಟಿಕೊಂಡಿದೆಯೋ ಎನ್ನುವಂತೆ ಆಕೆಯ ಕಣ್ಣುಗಳಲ್ಲಿ ಕೃಪಾಕಾರವೆಂಬುದು, ದಾಂಪತ್ಯೇಕತ್ವಭಾವನಾಸೂಚಕ. ಆಕೆಯ ದಟ್ಟವಾದ ಕೇಶಪಾಶ, ಅದರ ನೀಲವರ್ಣಚ್ಛಾಯೆ, ನೀಲ ಮೇಘಶ್ಯಾಮನಾದ ರಾಮನ ದೇಹಾಕೃತಿಯನ್ನೇ ಹೋಲುತ್ತಿದೆ. ಅಥವಾ, ಶ್ರೀರಾಮನ ದೇಹವರ್ಣ ಸೀತೆಯ ಕೇಶಗಳಲ್ಲಿ ಸೇರಿಕೊಂಡಿತೋ ಎನ್ನಬಹುದೇ? ಸೀತೆ ಧರ್ಮಸ್ವರೂಪಿಣಿ. ಆಕೆಯ ದೇಹಸರ್ವಸ್ವವೂ ರಘುವಂಶಮೌಳಿಯ ಧರ್ಮಾಕೃತಿಯೇನೋ ಎನ್ನುವಂತಿತ್ತು. ಸಲಕ್ಷಣರಘುವಂಶದ ಧರ್ಮದಂತೆಯೇ ಆಕೆಯ ದೇಹವೂ ಸಲಕ್ಷಣವಾದದ್ದು. ರಾಮನ ಪ್ರತಿಜ್ಞೆಯೇ ದೃಢವಾಗಿ ಅಲ್ಲಿ ಕುಳಿತಿದೆಯೇನೋ ಎನ್ನುವಂತೆ, ಆಕೆ ಕುಳಿತ ಭಂಗಿಯ ರೀತಿ, ರಾವಣನ ನಿರ್ಮೂಲಕ್ಕಾಗಿ ಗೈದ ಶ್ರೀರಾಮನ ಪ್ರತಿಜ್ಞೆಯ ನಿಶ್ಚಯದಂತೆ ನಿಶ್ಚಲವಾಗಿ, ಸುಸ್ಥಿರವಾಗಿತ್ತು.
ದೈಹಿಕವಾಗಿ ಸೀತಾರಾಮರು ಪರಸ್ಪರ ದೂರವಾಗಿದ್ದರೂ ಜೊತೆಯಲ್ಲೇ ಇದ್ದಾರೆ ಎನ್ನುವ ಆಲೋಚನೆ ಹೊಸತು.

ಹುಬ್ಬುಗಳನ್ನು ಬಿಲ್ಲಿಗೂ, ಹೆರಳ ಸೌಂದರ್ಯವನ್ನು ಕಪ್ಪಾದ ದುಂಬಿಗೂ ಹೋಲಿಸುವುದು ಸಾಮಾನ್ಯವಾದರೂ, ಸೀತೆಯ ಹುಬ್ಬುಗಳು ರಾಮನ ಧನಸ್ಸು, ಕುರುಳಬಣ್ಣ ರಾಮನ ಶರೀರಕಾಂತಿ ಎನ್ನುವುದು ಅಸಾಮಾನ್ಯವಾದ ಹೋಲಿಕೆ. ಅಲ್ಲದೆ ಶ್ರೀರಾಮನ ಬಿಲ್ಲಿನಂಥ ಆ ಹುಬ್ಬುಗಳು ಗಂಟಿಕ್ಕಿ, ಆಕೆ ಕೋಪಗೊಂಡರೆ ರಾವಣನ ನಾಶವೂ ಖಚಿತ ಎಂಬ ಧ್ವನಿಯೂ ಅಲ್ಲಿದೆ. ಕಣ್ಣು, ಹುಬ್ಬು, ಹೆರಳನ್ನು ವರ್ಣಿಸಿ ದೇಹವೆಲ್ಲಾ ಧರ್ಮಾಕಾರವೆನ್ನುವುದೂ, ಕುಳಿತ ಭಂಗಿಯನ್ನುನೋಡಿದರೆ ರಾಮನ ಪ್ರತಿಜ್ಞೆಯು ನೆನಪಿಗೆ ಬರುವುದೆನ್ನುವುದೂ ಸಾಮನ್ಯಕವಿಗಳು ಮಾಡಲಾಗದ ಕಲ್ಪನೆ. ಇದೊಂದು ಸೀತಾರಾಮರ ಅದ್ವೈತವನ್ನು ನಿರೂಪಿಸುವ ಪದ್ಯ. ಅದ್ವೈತತತ್ತ್ವವನ್ನು ಗೂಢವಾಗಿ ಹೇಳುವ ವಿಶ್ವನಾಥರ ಇಂಥ ಕಲ್ಪನೆಗಳು ಕಲ್ಪವೃಕ್ಷದಲ್ಲಿ ಸಾಕಷ್ಟಿವೆ.

ಅವಧಾನವಿದ್ಯೆಯಲ್ಲಿ ಅಪ್ರತಿಮರೆನಿಸಿದ್ದ ತಿರುಪತಿ-ವೇಂಕಟೇಶ್ವರಕವಿಗಳಲ್ಲಿ ಒಬ್ಬರಾದ, ಚೆಳ್ಳಪಿಳ್ಳ ವೇಂಕಟಶಾಸ್ತ್ರಿಗಳು ವಿಶ್ವನಾಥ ಸತ್ಯನಾರಾಯಣರ ಗುರುಗಳು. ಅವರು ತಮ್ಮ ಶಿಷ್ಯನನ್ನು ಕುರಿತು ಹೇಳಿದ ಪದ್ಯವಿದು.

“ನಾ ಮಾರ್ಗಮ್ಮುನು ಕಾದು, ವೀನಿ ದರಯನ್ ನಾ ತಾತ ಮುತ್ತಾತಲಂ
ದೇ ಮಾರ್ಗಮ್ಮುನು ಕಾದು; ಮಾರ್ಗಮದಿಯಿಂಕೇದೋ ಯನಂಗಾ ವಲೆನ್|
ಸಾಮಾನ್ಯುಂಡನರಾದು ವೀನಿ ಕವಿತಾ ಸಮ್ರಾಟ್ವ್ತ ಮಾ ಹೇತುವೈ,
ಯೀ ಮಚ್ಛಿಷ್ಯುನಿ ದಾ ವರಿಂಚಿನದಿ, ನೇನೆಂತೇ ಮುದಂಬಂದೆದನ್||” *

“ಇವನ ಕವಿತ್ವಮಾರ್ಗ ನನ್ನದಲ್ಲ. ಹಾಗೆ ನೋಡಿದರೆ ನನ್ನ ತಾತ ಮುತ್ತಾತರದೂ ಅಲ್ಲ. ಪೂರ್ವದ ಯಾವ ಕವಿಗಳದ್ದೂ ಅಲ್ಲ. ಇವನ ಕವಿತಾಮಾರ್ಗ ಬೇರೆಯೇ ಎನ್ನಬೇಕಾಗಿದೆ. ಇವನು ಸಾಮಾನ್ಯನಲ್ಲ. ಆ ಕಾರಣದಿಂದಲೇ ಈ ಕವಿಸಮ್ರಾಟ್ ಪಟ್ಟ ನನ್ನ ಶಿಷ್ಯನನ್ನು ವರಿಸಿದೆ. ನನಗದೆಷ್ಟು ಸಂತೋಷವೋ!”

ಆ ನಂತರದ ತೆಲುಗಿನ ಆಧುನಿಕ ಮಹಾಕವಿ ಶ್ರೀಶ್ರೀ, ಹಲವು ಸಂದರ್ಭಗಳಲ್ಲಿ ಕಟುವಾಗಿ ವಿಮರ್ಶಿಸಿದ್ದರೂ ವಿಶ್ವನಾಥರನ್ನು ಕುರಿತು ಒಮ್ಮೆ ಹೇಳಿದ್ದು ಹೀಗೆ.

“ಮಾಟ್ಲಾಡೇ ವೆನ್ನೆಮುಕ
ಪಾಟ ಪಾಡೇ ಸುಷುಮ್ನ
ನಿನ್ನಟಿ ನನ್ನಯಭಟ್ಟು
ನೇಟಿ ಕವಿ ಸಾಮ್ರಾಟ್ಟು
ಗೋದಾವರಿ ಪಲುಕರಿಂತ
ಕೃಷ್ಣಾನದಿ ಪುಲಕರಿಂತ
ಕೊಂಡವೀಟಿ ಪೊಗಮಬ್ಬು
ತೆಲುಗುವಾಳ್ಳ ಗೋಲ್ಡುನಿಬ್ಬು
ಅಕಾರಾದಿ ಕ್ಷಕಾರಾಂತಂ
ಆಸೇತು ಮಹಿಕಾವಂತಂ
ಅತಗಾಡು ತೆಲುಗುವಾಡಿ ಆಸ್ತಿ
ಅನವರತಂ ತೆಲುಗುವಾಡಿ ಪ್ರಕಾಸ್ತಿ
ಛಂದಸ್ಸು ಲೇನಿ ಈ ದ್ವಿಪದ
ಸತ್ಯಾನಿಕಿ ನಾ ಉಪದ.”

(ಕನ್ನಡ ರೂಪ)

(“ಮಾತನಾಡುವ ಬೆನ್ನೆಲುಬು
ಹಾಡು ಹೇಳುವ ಸುಷುಮ್ನ
ನಿನ್ನೆಯ ನನ್ನಯಭಟ್ಟ
ಇಂದಿನ ಕವಿಸಾಮ್ರಾಟ
ಗೋದಾವರಿ ಮಾತನಾಡಿಸಿದಂತೆ
ಕೃಷ್ಟಾನದಿ ಪುಳಕಗೊಂಡಂತೆ
ಕೈಲಾಸಶಿಖರದ ಹೊಗೆಮಬ್ಬು
ತೆಲುಗರ ಗೋಲ್ಡು ನಿಬ್ಬು
ಅಕಾರಾದಿ ಕ್ಷಕಾರಾಂತ
ಆಸೇತು ಮಹಿಕಾವಂತ
ಆತ ತೆಲುಗಿನವನ ಆಸ್ತಿ
ಅನವರತ ತೆಲುಗಿನವನ ಪ್ರಕಾಸ್ತಿ
ಛಂದಸ್ಸಿಲ್ಲದ ಈ ದ್ವಿಪದ
ಸತ್ಯಕ್ಕೆ ನನ್ನ ಉಪದ (ಕಾಣಿಕೆ)

—————————————-

*ಮಾತ್ರಾಸೀಸ|| ಮಾತ್ರಮೆನದಲ್ಲಮೀತನ ಕವಿತ್ವದ ಮಾರ್ಗಮೆನ್ನಜ್ಜಮುತ್ತಜ್ಜರದುಮಲ್ಲವು
ಚಿತ್ರಕವಿಗಳ ರೀತಿಯಲ್ಲಮೀತನ ರೀತಿಯನುಕರಿಸನಾವ ಪೂರ್ವದ ಕವಿಗಳಂ|
ಸೂತ್ರಮೀತನದನ್ಯ ಮಾರ್ಗಮೇ ಅನ್ಯಾನ್ಯ ಸಾಮಾನ್ಯರೊಳು ಗಣತಿಯಾಗನೀತಂ
ಸೌತ್ರಕವಿಯೆನಿಸಿಹೀ ನಿಜಶಿಷ್ಯನದರಿಂದೆ ಸುಕವಿಸಮ್ರಾಟಪಟ್ಟವನೈದಿಹಂ||

ಆಟವೆಲದಿ|| ತೋಷನ್ನದುಂಟೆ ಮೇರೆಯು ಪೇಳು ಪೀ-
ಯೂಷಪಾನಸಮವು ಛಾತ್ರಭಾಗ್ಯಂ|
ಭೂಷಣಪ್ರಾಯರುಮೀಪರಿಯ ಶಿಷ್ಯರುಮಲ್ತೆ
ಶೇಷಗುರುಗಳಿಂಗೀ ಭಾಗ್ಯಮುಂಟೆ||) (ಪದ್ಯಾನುವಾದ: ಹಾದಿರಂಪ)

ಈ ಪದ್ಯಪರಿಚಯದ ಕರಡನ್ನು ಶೋಧಿಸಿದ್ದಲ್ಲದೆ, “ನಾ ಮಾರ್ಗಮ್ಮುನು ಕಾದು…” ಸೀಸಪದ್ಯವನ್ನು ಕನ್ನಡಿಸಿ, ಮೇಲೊಂದು ಆಟವೆಲದಿಯ ಸೊಂಪನ್ನೂ ತೊಡಿಸಿ ನೆರವಾದ “ಹಾದಿರಂಪ” ರಿಗೆ ನಾನು ಋಣಿಯಾಗಿದ್ದೇನೆ.