Aug 262013
 

ಶ್ರೀ ರಾ. ಗಣೇಶರ ಈಚಿನ ಶತಾವಧಾನದಲ್ಲಿ ಪೃಚ್ಛಕರಾದ ಶ್ರೀಮತಿ ಶ್ರೀಲಲಿತಾ ರೂಪನಗುಡಿಯವರು ನೀಡಿದ ದತ್ತಪದಿಯಿದು: ವಿವಿಧ ಭಾಷೆಗಳಲ್ಲಿ ’ಮಳೆ’ಯ ಸಮಾನಾರ್ಥಕ ಪದಗಳಾದ ವಾನ (Telugu), ಅಮೆ (Japanese), ಯಾಮೂರ್ (Turkish), ರಿಯನ್‍ (Afrikaans)ಗಳನ್ನು ಬಳಸಿ ಬರಗಾಲವರ್ಣನೆ ಮಾಡಿ. ಛಂದೋವೈವಿಧ್ಯವಿರಲಿ.

Aug 112013
 

कर्णाटभाषायां आदिकविरिति प्रसिद्धस्य पम्पमहाकवेः पद्येन उद्धृतमिदं शार्दूलविक्रीडितवृत्तपादस्य अन्तिमभागं ‘संसारसारोदयम्‘ उपयुज्य संस्कृतभाषायां पद्यानि रचयामः |

This month we shall compose sanskrit verses in śārdūlavikrīḍita meter utilising the phrase ‘saṁsārasārodayam‘ taken from a verse written by pampa, famously known as ādikavi of kannada.

ಆದಿಕವಿ ಪಂಪನ ಶಾರ್ದೂಲವಿಕ್ರೀಡಿತ ವೃತ್ತದಲ್ಲಿರುವ ಪದ್ಯದಿಂದ ಆಯ್ದ ಭಾಗ ‘ಸಂಸಾರಸಾರೋದಯಂ‘ ಅನ್ನುವ ಪಾದಭಾಗವು ಸಮಸಂಸ್ಕೃತ ಕನ್ನಡದಲ್ಲಿರುವುದರಿಂದ ಅದನ್ನು ಉಪಯೋಗಿಸಿ ಕನ್ನಡದಲ್ಲೂ  ಆಸಕ್ತರು ಪದ್ಯಪೂರಣ ಮಾಡಬಹುದು.

Aug 102013
 

ಶತಾವಧಾನಿ ಗಣೇಶರು ಈ ವಾರದ ಪದ್ಯರಚನೆಯ ಬಗ್ಗೆ ಕೆಳಕಂಡಂತೆ ಸೂಚನೆಗಳನ್ನು ಕೊಟ್ಟಿದ್ದಾರೆ, ಗಮನಿಸಿರಿ ಮತ್ತು ಎಂದಿನಂತೆ ಉತ್ಸಾಹದಿಂದ ಭಾಗವಹಿಸಿರಿ.

ಸಂಭಾಷಣೆಯು ಗದ್ಯದ ಗುತ್ತಿಗೆಯೇ ಆದರೂ ಪದ್ಯದಲ್ಲಿ ಕೂಡ ಅದು ಆಗೀಗ ಸುಳಿಯುವುದುಂಟು. ಅಭಿಜಾತ(classical)ಕವಿತೆಯಲ್ಲಿ ಸಂಭಾಷಣಾತ್ಮಕತೆಯು ದಿಟವಾಗಿ ಕವಿಗೆ ಸವಾಲು. ಏಕೆಂದರೆ ಛಂದಸ್ಸಿನ ಕಟ್ಟು, ವ್ಯಾಕರಣದ ನಿಟ್ಟು, ಪ್ರಾಸಾದಿಗಳ ಪೆಟ್ಟು (:-) ಮುಂತಾದುವೆಲ್ಲ ಕವಿಯನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಆದರೂ ಇಂಥ ಸಾಧನೆಯನ್ನು ಮಾಡಿದಾಗಲಲ್ಲವೇ ಸಿದ್ಧಿಯ ಹಿಗ್ಗು; ವೆಗ್ಗಳಗಳು!

ಆದುದರಿಂದಲೇ ಪದ್ಯಪಾನದ ಈ ಸಂಚಿಕೆಯಲ್ಲಿ ಪದ್ಯಪಾನಿಗಳಿಗೆಲ್ಲ ಸಂಭಾಷಣಪದ್ಯವನ್ನು ರಚಿಸುವ ಸಂದರ್ಭ ಬಂದಿದೆ. ಸಂಭಾಷಣಪದ್ಯರಚನೆಗೆ ಚೆನ್ನಾಗಿ ಒಗ್ಗಿಬರುವಂಥ ಸುಲಭವೂ ವ್ಯಾಪಕವೂ ಆದ ಛಂದಸ್ಸುಗಳು ಹಲವಾರು. ಮುಖ್ಯವಾಗಿ ಸೀಸಪದ್ಯ, ಭಾಮಿನೀ-ವಾರ್ಧಕಷಟ್ಪದಿಗಳು, ಚೌಪದಿ, ಕಂದ, ಸಾಂಗತ್ಯ, ಅನುಷ್ಟುಪ್ ಶ್ಲೋಕ, ಶಾರ್ದೂಲ-ಮತ್ತೇಭವಿಕ್ರೀಡಿತಗಳು, ಚಂಪಕ-ಉತ್ಪಲಮಾಲೆಗಳು, ರಗಳೆ ಮುಂತಾದುವನ್ನು ಹೆಸರಿಸಬಹುದು. ದೊಡ್ಡ ಸಂವಾದಗಳಿಗೆ ದೊಡ್ಡ ಛಂದಸ್ಸುಗಳೂ ಚಿಕ್ಕವಕ್ಕೆ ಚಿಕ್ಕವೂ ಸಹಜವಾಗಿ ಒದಗಿಬರುತ್ತವೆ. ಮಾದರಿಯಾಗಿ ಕೆಲವೊಂದು ಪದ್ಯಗಳಿಲ್ಲಿವೆ: ೧. ರಾಘವಾಂಕನ ಹರಿಶ್ಚಂದ್ರಕಾವ್ಯದಿಂದ ಆಯ್ದ ವಿಶ್ವಾಮಿತ್ರ-ಹರಿಶ್ಚಂದ್ರರ ಸಂವಾದಸಂದರ್ಭದ ಒಂದು ಪದ್ಯ.(ಇಲ್ಲಿ ಸಂವಾದವನ್ನು ಎತ್ತಿ ತೋರಿಸಲು ಸಂಧಿಯನ್ನು ಬಿಡಿಸಲಾಗಿದೆ. ಎಲ್ಲೆಡೆ ಸಂಧಿಯನ್ನು ಮಾಡಿಕೊಂಡರೆ ಇಡಿಯ ಪದ್ಯವು ಛಂದೋಧಾಟಿಯಲ್ಲಿ ಸಾಗುವುದು)

’ನಡೆ ರಥವನೇರಿಕೊಳ್’ ’ಒಲ್ಲೆನ್’ ಏಕೊಲ್ಲೆ?’ ’ಪರ-

ರೊಡವೆಯೆನಗಾಗದು’ ’ಏಕಾಗದು?’ ’ಆನಿತ್ತೆನ್’ ’ಇ-

ತ್ತಡೆ?’ ‘ಕೊಳಲು ಬಾರದು’ ‘ಏಂ ಕಾರಣಂ?’ ’ಬಾರದೆಮಗಂ ಪ್ರತಿಗ್ರಹ ಸಲ್ಲದು’ |

’ಕಡೆಗೆ ನಿನ್ನೊಡವೆಯಲ್ಲವೆ?’ ’ಅಲ್ಲವು’ ಏಕಲ್ಲ?’

ಕೊಡದ ಮುನ್ನೆನ್ನೊಡವೆ ಕೊಟ್ಟ ಬಳಿಕೆನಗೆಲ್ಲಿ

ಒಡವೆ?’ ಎಂದರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿಗೊಟ್ಟನು || (VIII-೬೬)

 

೨.ನನ್ನ ಅವಧಾನವೊಂರಲ್ಲಿ  ಅಪ್ರಸ್ತುತಪ್ರಸಂಗಿಗಳ ಹಾಗೂ  ನನ್ನ ನಡುವೆ ಸಾಗಿದ ಸಂವಾದಪದ್ಯ.

’ಮರೆವಾಯ್ತೇ ಅವಧಾನಿ?’ ’ನಿಮ್ಮ ಸಿರಿಯಾ ಸತ್ತ್ವಂ’ ’ಅದೇಂ ದೇಶಮೋ?’

ಒರೆದೆಂ ಕಾಲಮನಾಂ’ ’ಚಮತ್ಕೃತಿಯಿದೇಂ?’ ’ಸರ್ವಾವಧಾನೋಚಿತಂ’ |

’ಸರಿ’ ’ಎತ್ತಲ್?’ ’ಮುಗುಳೆತ್ತಲಾನುಂ’ ’ಅರರೇ! ನೀಂ ಮಾಳ್ಪಿರೇಂ ಕಬ್ಬಮಂ?’

’ಕೊರೆಯೇನೆನ್ನೊಳ್?’ ’ಅದೇಕೆ, ನೀಂ ಕೊರೆದಿರಲ್ ಬೆಚ್ಚಿರ್ಪುವಾ ಕಾಗೆಗಳ್ !!’

 

೩.ಗಂಡ-ಹೆಂಡಿರ ಸಂವಾದವೊಂದನ್ನು ಎಸ್.ವಿ. ಪರಮೇಶ್ವರಭಟ್ಟರು ಹೀಗೆ ಅಂತ್ಯಪ್ರಾಸಮಾತ್ರದ ಸಾಂಗತ್ಯದಲ್ಲಿ ಕಂಡರಿಸಿದ್ದಾರೆ:

’ಜ್ಯೋತಿಷಿಯೆಂದನು ಬಡತನವಿಹುದಂತೆ

ನನಗೆ ನಲ್ವತ್ತರ ವರೆಗೆ’ |

’ಆಮೇಲೆ?’ ’ಆ ಮೇಲೆ ಒಗ್ಗಿಹೋಗುವುದಂತೆ

ಬಡತನದೊಳೆ ಬಾಳ್ವುದೆಮಗೆ’ ||

Aug 032013
 

ಕಂದ ಪದ್ಯದ ಸಮಸ್ಯೆಯ ಸಾಲು ಹೀಗಿದೆ :: ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ [ಮೂಗಿಲಿ ಎಂದರೆ ಚಿಕ್ಕ ಗಾತ್ರದ ಉದ್ದ ಮೂತಿಯ ಇಲಿಯೆಂದು ಅರ್ಥ]

ಪದ್ಯದ ಉಳಿದ ಸಾಲುಗಳನ್ನು ರಚಿಸಿ, ಈ ಸಮಸ್ಯೆಯನ್ನು ಸರಿಪಡಿಸಿರಿ.