Apr 242011
 

ಸಕ್ಕರೆಸವಿಯನು ಪೂರ್ವಾಶ್ರಮದಲಿ
ಅಕ್ಕರೆಸೂಸುತ ತವರಿಗೆ ಬೀರಿಹೆ
ಉಕ್ಕಿಸುತಮ್ಮನ ಪ್ರೀತಿಯ ಪೂರಣೆ ನೀನೇಯಾಗಿರುವೆ |
ಬಿಕ್ಕುತಯೊಳಗಡಿಯಿರಿಸುತ ನಲ್ಮೆಯ-
ಸಿಕ್ಕಲಿ ಸಿಲುಕಿಸಲೆಮ್ಮಯ ಮನಗಳ
ಹೊಕ್ಕುತಲಣ್ಣನ ಹೃದಯವ ಪಡೆದಿಹೆ ನೀನೇ ವಿಜಯವನು ||

Apr 232011
 
ಕುಲ್ಮೆ ಛಂದೋರಚನೆಯೆನುತಿರೆ
ತಾಳ್ಮೆಯಿಂದಂಕುರವನಿರಿಸಿಹ
ಗೆಯ್ಮೆಯಲ್ಪಕೆ ಕವಿಯ ಮಾಡಿಹ ಗುರುಗೆ ಶರಣೆಂದೆ |
ನಲ್ಮೆನುಡಿಗಳನರುಹಲೆನ್ನಯ
ಬಲ್ಮೆಯಿಮ್ಮಡಿಗೊಳಿಸಿದಾತಂ
(ಬಲ್ಮೆಯಂ ಮಡಿಮಾಡಿದಾತಂ-)
ಗೊಲ್ಮೆನಮನವು ‘ರಾಮ’-‘ಸೋಮ’ಗೆ ಕೂಡಿ ‘ಶತಶ್ರುತ’ಗೆ |
-ರಜನೀಶ
Apr 232011
 

ಮಿಂಗೆಡಿವಾಡು ವಿಭುಡನಿ
ಮಿಂಗುಟೆದಿಯು ಗರಳಮನಿಯು ಮೇಲನಿ ಪ್ರಜಕುನ್
ಮಿಂಗಮನೆ ಸರ್ವಮಂಗಳ
ಮಂಗಳ ಸೂತ್ರಂಬುನೆಂತ ಮದಿನಮ್ಮಿನದೋ

ನುಂಗುವನಾರ್‍ ನಿಜಪತಿಯೆನೆ
ನುಂಗುವುದೇಂ ಗರಳಮೆಂದು, ಜನಹಿತಕೆಂದುಂ
ನುಂಗೆನಲು ಸರ್ವಮಂಗಳೆ
ಮಂಗಳಸೂತ್ರ ವನದೆಷ್ಟು ನೆರೆನಂಬಿದಳೋ

Apr 222011
 

ಸಕ್ಕರೆಸವಿಯನು ಪೂರ್ವಾಶ್ರಮದಲಿ
ಯಕ್ಕರೆಸೂಸುತ ತವರಿಗೆ ನೀಡಲು
ಉಕ್ಕಿದ ಅಮ್ಮನ ಪ್ರೀತಿಗೆ ನೀನೇ ಪೂರಣೆಯಾಗಿರುವೆ |
ಬಿಕ್ಕುತಯೊಳಗಡಿಯಿರಿಸುತ ನಲ್ಮೆಯ-
ಸಿಕ್ಕಲಿ ಸಿಲುಕಿಸಲೆಮ್ಮಯ ಮನಗಳ
ಹೊಕ್ಕುತಲಣ್ಣನ ಹೃದಯವ ನೀನೇ ವಿಜಯವ ಪಡೆದಿರುವೆ ||
(*ಅತ್ತಿಗೆ – ಅನ್ನಪೂರ್ಣೆ, ಅಣ್ಣ – ವಿಜಯ)
-ರಜನೀಶ

Apr 142011
 

ಹಲಸು ಮಾವುಗಳೆಂಬ ಹಣ್ಣುಗ –
ಳಿಳೆಯ ಸೊಗಸುಗಳಲ್ಲಿ ಶ್ರೇಷ್ಠವ –
ದುಳಿದ ರುಚಿಗಳನೆಲ್ಲ ಬಡಿಯುತ ನರ್ತಿಪುದು ಮುದದಿ ||
ಚಳಿಯು ಮುಗಿಯುವ ಕಾಲ ಬಂದೊಡೆ
ಸೆಳೆಯುತೆಲ್ಲರ ತಮ್ಮೆಡೆಗೆ ಮನು –
ಕುಲದ ಜಿಹ್ವೋದರಗಳನ್ನಾಳುತಲಿ ನಿರ್ಭಯದಿ || ೧ ||

ಬದಿಗೆ ಪಾಕಗಳೆಲ್ಲ ಸರಿಯಲಿ
ಕದದ ಹಿಂದೋಡಡಗಿಕೊಳ್ಳಲಿ
ಸದೆದಹಂಗಳ ತಳೆದ ಮೌನವು ನಾಕು ತಿಂಗಳನಕ ||
ಕದಡಿ ಸಿಹಿಯುಳಿಯಾ ಸಮಾಗಮ –
ವದಕದಮೃತವ ಭೂರಿ ಭರಿಸಿದ
ಪದಗಳೀ ಹಣ್ಣುಗಳ ತಳದಲಿ ಬಾಳ್ವೆ ಸಾಕವಕೆ || ೨ ||

ಬೊಕ್ಕೆ ಹಲಸನು ಜಗೆವ ಕಾತರ
ಚೆಕ್ಕೆ ರಸಗಳ ಸವಿಯು ಮುಂದಿರೆ
ಹೆಕ್ಕಿ ತೆಗೆಯುವ ಚಾಕರಿಯದೆಷ್ಟಿದ್ದರೇನಹಹ ||
ಉಕ್ಕಿ ಹರಿವ ಪಚನ ರಸಂಗಳ
ದಕ್ಕಿಸಲುವೇಂ ಹಸಿವ ಹಲಸುಂ
ಲೆಕ್ಕ ಮೀರಿದ ಮೌಲ್ಯವದು ತನಿರಸಗಳೌತಣವು || ೩ ||

ಕಚ್ಚಿ ಮಾವನು ತಿನ್ನುವಾ ಪರಿ
ಸ್ವಚ್ಚ ನೆಕ್ಕಿ ಮೊಳಕೈಗಳನಕ
ಹೆಚ್ಚಿ ತಿನ್ನುವ ತಾಳ್ಮೆಯಾದರೊ ನಮಗೆ ಬಲು ಕಷ್ಟ ||
ಕೊಚ್ಚಿ ಮಾಡಿದ ಶೀಕರಣಿಗಳು
ಗಚ್ಚಲರಡಿದ ಮಾವಿನಪ್ಪಳ
ಬೆಚ್ಚನೆಯ ಋತುವಿನಲಿ ಮಾವುಗಳಿರದ ದಿನವೇಕೆ? || ೪ ||

ಮಾವ ಜಾತಿಯೆ – ತೋತ, ರಸ, ಮಲ –
ಗೋವ, ಹಾಪುಸ, ಮಾಣಿ, ಮಲಿಕವೊ
ಯಾವುದಿರಲೀಶಾಡೊ ಗಾಂಟಿಯೊ, ಇವೆಲ್ಲವೆಮಗಮೃತ ||
ಮಾವಿನಣ್ಣಿನ ಸುಖವೆ ಮಿಗಿಲು
ಮಾವನೆಣ್ಣಿನ ಭೋಗ ರಾಸಕೆ
ಯಾವ ತಡೆಯಿಲ್ಲದೆಯೆ ದಕ್ಕುವುದಾತ್ಮ ತೃಪ್ತತೆಯು || ೫ ||

ಮಾವಿನಾನಂದವನು ಬಣ್ಣಿಸ –
ಲಾವ ಭಾಷೆಯ ಸೃಷ್ಟಿ ಮಾಡಲ –
ದಾವ ಪದಗಳ ಹುಡುಕಿ ತರಲೀ ಮಿತದ ಧರಣಿಯಲಿ ||
ಭಾವಕೆಡೆಗೊಡದೆಯೆಲೆ ಸವಿಯುವೆ ಮಿತದ ಸಮಯದಲಿ [… ಸೀಮಿತದ ಸಮಯದಲಿ] || ೬ ||

* ಕೊನೆಯ ಪದ್ಯ ಖಂಡ ಭಾಮಿನಿಯಲ್ಲಿದೆ

– ರಾಮಚಂದ್ರ

Apr 092011
 

ಅದತೋರಿಸಿದತೋರಿಸೆನುವೆನಿತು ಮಾನಿನಿಯ-
ರೆದಿರು ತಾನೆಡೆಬಿಡದೆ ಹರಡಿ ಮಡೆಸುತಲಿರಲು
ಕದದೊಳಗಿನಾಸೀರೆಗೀಬಣ್ಣಕಾಸೆರಗಲಿದರಂಚ ವಿನ್ಯಾಸಗಳ್ |
ಚೆದುರಿ ಪರಕಿಸೆ ವನಿತೆಯೊಂದೊಂದನರಿವೆಗಳ
ಪದರ ದರ್ಪಣವಿದಿರು ಹಿಡಿದೆಸೆಯುತಿರೆ ಪಣಿಕ-
“ನಿದನುಡುವ ಯೋಗ್ಯತೆಯನೀನಾರಿ ಪಡೆದಿಲ್ಲ”ವೆಂದೆನುತ ಮನದಿ ನಕ್ಕ ||

Apr 092011
 
ಲಂಚ ಕೋರರು ಮೆರೆವ ಸಡಗರ
ವಂಚನೆಯು ತಾರಕವನೇರಿರೆ
ಕೊಂಚವೇ ನಿರ್ಭಿಡೆಯು ಜನರಿಗದಿಲ್ಲವೇನಕಟ ||
ಸಂಚು ಮಾಡಿಹ ಕಳ್ಳ ಕೊರಮರ
ಹೊಂಚಿ ದೋಚುವ ಹೀನ ಮನುಜರ
ನಂಚಿನಿಂ ಬಂಧಿಸಲದಾಶಿಪ ಸಾಸಿರೆಗೆ* ನಮನ || ೧ ||

ಸಾಕು ಸಾಕೆಂದಾದ ಸಮಯದಿ
ಲೋಕದುನ್ನತಿ ಶೋಕಿಸುತಲಿರೆ
ಮೂಕದನಿಗಳಲುದಯಿಸಿದನೀ ರಂಧ್ರದೊಂಗಿರಣ ||
ಲೋಕಪಾಲದ ನಿಯಮ ಜನತೆಯ
ಬೇಕು ಬೇಡಗಳನಳವಡಿಸಿರೆ
ಹಾಕಲಿರುವುದು ಹುಚ್ಚು ಕುದುರೆಗೆ ಭಯದ ಕಡಿವಾಣ || ೨ ||
*ಸಾಸಿರೆ = ಹಜಾರೆ 🙂
[ಇಷ್ಟವಿದ್ದವರು ಇದನ್ನು ಇನ್ನೂ ಮುಂದುವರಿಸಿ – ಸಾಕಷ್ಟು ಬೆಳೆಸಬಹುದು]
– ರಾಮಚಂದ್ರ
Apr 042011
 

ಯುಗವು ಕಳೆದಿರೆ ಯುಗವು ಬರುತಿರೆ
ಜಗದಿ ನೋವನು ನಲಿವನೊಂದೇ
ನಗೆಯ ಮೊಗದಲೆದರಿಸುವುದರಲಿ ಹಬ್ಬದಾದರ್ಶ (ಪರ್ವಸಾರ್ಥಕ್ಯ)
ಹಗುರಬಗೆಯಲಿ ಭಾವ ಲತೆಗಳು
ಚಿಗುರಿ ಕವನದ ಫಲಗಳರಳುತ
ಸಿಗಲಿ ರಸಿಕಗೆ ಭಾವನಾವೀನ್ಯದಲಿ ರಸದೂಟ

Apr 022011
 

ವರುಷದಂತೆಯೆ ಮರಳಿ ವಾಸಂತಪಲ್ಲವವು
ಬರೆಯಲರಳುತಲಿಹುದು ಹೊಸಯುಗದ ಕಾವ್ಯವನು
ಖರಲೇಖನಿಯ ನಿಬ್ಬಿಗೆರೆಸಿ ಮಿದುಹಸಿರನ್ನು
ಬಾ ರಮಣಿ ಮಧುವೀಂಟು ಮೀಂಟು ವೀಣೆಯ ತನುವ.

ನೋವು ನಲಿವಿನ ಧರ್ಮ ಕಾಲನಿಬ್ಬಗೆಯಂತೆ
ಬೇವು ಬೆಲ್ಲದ ಹದವು ಬಾಳ ಋತವನಿವಾರ್ಯ
ಕಾವುದಾತನ ಕರ್ಮ ಕಾಯುವುದು ಭವಕಾರ್ಯ
ನಾವು ಬಯಸುವ ನೆಮ್ಮದಿಯ ಜೀವ ಸಂಕುಲಕೆ.

ತುಂಬು ಸಿಹಿ ಫಸಲುಕ್ಕಿ ಸುಗ್ಗಿ ತುಂಬಲಿ ಕಣಜ
ನಂಬುಗೆಯ ಪದ ಬಂಧಿಸಲಿಯೆಮ್ಮ ಜನಪದವ
ಅಂಬ! ಹಸಿವೆನ್ನುತಲಿ ಮಕ್ಕಳಳದಿರಲೆಂದು
ದುಂಬಿ ಗುನುಗುನುನಾದವರಳಲುದ್ಯಾನಗಳಲ್ಲಿ.

ಉತ್ತರೋತ್ತರಕೊಳಿತ ಬಯಸುತ್ತ ಸುಖಿಸೋಣ
ಮತ್ತೆ ಚೈತ್ರದ ಕಾಲಕಾನೊ ನೀನೋ ಕಾಣೆ..