Nov 242012
 

ಪದ್ಯಪಾನದಲ್ಲಿ ಪುಷ್ಪೋತ್ಸವ! ನಿಮಗಿಷ್ಟವಾದ ಹೂವಿನ ಬಗೆಗೆ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿ.

 

ಪದ್ಯನಿದರ್ಶನಂ – ೪:
ಪಂಪನ ಆದಿಪುರಾಣದಿಂದ (ಚಂಪಕಮಾಲೆ):
ಎಸೞ್ಗಳನೆಯ್ದೆ ಕಂಡರಿಸಿ ಮುತ್ತಿನೊಳಲ್ಲಿ ಸುವರ್ಣಚೂರ್ಣಮಂ
ಪಸರಿಸಿ ಕೇಸರಾಕೃತಿಯೊಳಲ್ಲಿಗೆ ಕರ್ಣಿಕೆಯಂದಮಾಗೆ ಕೀ
ಲಿಸಿ ಪೊಸತಪ್ಪ ಮಾಣಿಕದ ನುಣ್ಬರಲಂ ಮಧು ಮನ್ಮಥಂಗೆ ಬ
ಣ್ಣಿಸಿ ಸಮೆದಂತೆ ತೋಱುವುದು ಪೂಗಳೊಳೇಂ ಸುರಹೊನ್ನೆ ಚೆನ್ನಮೋ
[ಉಚ್ಛಾರದಲ್ಲಿ ೞ್ ಳ್ ಗೂ, ಱ್ ರ್ ಗೂ ಸಮೀಪ.]
ಎಯ್ದೆ = ಚೆನ್ನಾಗಿ, ವಿಶೇಷವಾಗಿ. ಕರ್ಣಿಕೆ = ಹೂವೊಂದರ ನಟ್ಟನಡುವಿನ ಭಾಗ. ನುಣ್ಬರಲಂ = ನುಣ್ + ಪರಲಂ, ಪರಲಂ = ನುಣ್ಣಗಿರುವ ಚೂರು
ಎಸೞ್ಗಳ = ಶಿಥಿಲದ್ವಿತ್ವವಿರುವುದರಿಂದ, ಇಲ್ಲಿ ಎಲ್ಲವೂ ಲಘುವೇ ಆಗಿರುತ್ತವೆ. ಚಿತ್ರ ಇಲ್ಲಿದೆ.

 

ಶತಾವಧಾನಸಂಭ್ರಮಂ:
ಇನ್ನುಂದು ವಾರದಲ್ಲಿ ಶತಾವಧಾನಾರಂಭ. ವಿವರಗಳು ಇಲ್ಲಿವೆ.

Nov 172012
 

ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ

ಈ ಸಮಸ್ಯೆಯನ್ನು ಮತ್ತೇಭವಿಕ್ರೀಡಿತದಲ್ಲಿ ಪರಿಹರಿಸಿ. ಈ ಛಂದಸ್ಸಿನ ಗತಿ ಹೀಗಿದೆ:
ನನನಾನಾನನನಾನನಾನನನನಾ|ನಾನಾನನಾನಾನನಾ
ಗತಿಗಾಂಭೀರ್ಯದತುಂಬುಚೆಲ್ವುಮೆರೆಯಲ್ಮತ್ತೇಭವಿಕ್ರೀಡಿತಂ

 

ಪದ್ಯನಿದರ್ಶನಂ ೩:
ರನ್ನನ ಗದಾಯುದ್ಧದಿಂದ:[ಮತ್ತೇಭವಿಕ್ರೀಡಿತ]
ಎನಿತುಂ ದ್ರೌಪದಿ ಮುಕ್ತಕೇಶಿ ನಮೆವಳ್ ತದ್ದುಃಖಮಂ ಕಂಡು ಕಂ-
ಡೆನಿತುಂ ಸೈರಿಪೆವಾನುಮೆನ್ನನುಜರುಂ ಪಾಂಚಾಲಿಯಂ ನೋಡಿ ನೀಂ
ಮನದೊಳ್ ನೋವುದುಮಿಲ್ಲ ನಿಷ್ಕರುಣಿಯಯ್ ನೀನಿಂತಿರಾನನ್ನೆಗಂ
ಮುನಿಸಂ ತೀರ್ಚಿ ನರೇಂದ್ರವೈರಿತರುವಂ ನಿರ್ಮೂಲನಂ ಮಾಡುವೆಂ
[ಸೈರಿಪೆವಾನುಮೆನ್ನನುಜರುಂ = ಸೈರಿಪೆವ್ ಆನುಮ್ ಎನ್ನನುಜರುಂ, ನೀನಿಂತಿರಾನನ್ನೆಗಂ = ನೀನಿಂತಿರೆ ಆನ್ ಅನ್ನೆಗಂ]

 

ಹಳಗನ್ನಡ ವಿಭಕ್ತಿಪ್ರತ್ಯಯಗಳು ೧:
ರಾಮನು = ರಾಮಂ, ರಾಮನೂ = ರಾಮನುಂ, ರಾಮನನ್ನು = ರಾಮನಂ ರಾಮನಿಂದ = ರಾಮನಿಂ, ರಾಮನಿಂದಂ, ರಾಮನಿಂದಲ್ ರಾಮನಿಗೆ = ರಾಮಗಂ, ರಾಮಕ್ಕಂ, ರಾಮನ = ರಾಮನ, ರಾಮನಲ್ಲಿ = ರಾಮನೊಳ್. ಓ ರಾಮ = ರಾಮನೆ!, ರಾಮನೇ!, ರಾಮ!, ರಾಮಾ!.

Nov 092012
 

ಸರ, ಸಿರಿ, ಸುರು, ಸೆರೆ – ಇವನ್ನು ಬಳಸಿ, ಅರ್ಜುನ ಗಾಂಡೀವವನ್ನು ಬಿಡಬೇಕಾದ ಸಂದರ್ಭವನ್ನು ಚಂಪಕಮಾಲೆಯಲ್ಲಿ ವಿಸ್ತರಿಸಿ:

ಇದನ್ನು ಮುಂದುವರಿಸಿ ಸರಸರ, ಸಿರಿಸಿರಿ, ಸುರುಸುರು, ಸೆರೆಸೆರೆ – ಎಂದಿಟ್ಟೂ ಪ್ರಯತ್ನಿಸಬಹುದು.

[ ಚಂಪಕಮಾಲೆಯ ನಡೆ – ಸುಲಲಿತಶಾಂತಕಾಂತಸುಮಕೋಮಲಚಂಪಕಮಾಲೆಯಪ್ಪುಗಂ]

ಪದ್ಯನಿದರ್ಶನಂ ೨:
[ಇದಕ್ಕೆ ಮೇಲಿನ ಸಮಸ್ಯೆಗೆ ಸಂಬಂಧವಿಲ್ಲ. ಇದೊಂದು ಉದಾಹರಣೆಯ ಪದ್ಯ. ಪದ್ಯಪಾನಿಗಳು ಇವನ್ನು ಕಂಠಸ್ಥಮಾಡಿಕೊಳ್ಳುವುದಕ್ಕೆ ಯಾವುದೇ ಪೇಟೆಂಟ್ ಗಳ ಅಡ್ಡಿಇಲ್ಲ :-)]
[ಶಕುಂತಲ ನಾಟಕದ ನಾಲ್ಕನೆಯ ಅಂಕದಲ್ಲಿ ಬರುವ ಪದ್ಯದ ಅನುವಾದ – ಅನುವಾದಿಸಿದವರು ಬಸವಪ್ಪಶಾಸ್ತ್ರಿ ]
ಜಲವನದಾವಳೀಂಟಳೆರೆದಲ್ಲದೆ ನಿಮ್ಮಯ ಪಾತೆಗಂಬುವಂ
ತಳಿರ್ಗಳ ಕೊಯ್ಯಳಾವಳೊಲವಿಂ ಮಿಗೆ ಸಿಂಗರದಾಸೆಯುಳ್ಳೊಡಂ
ಅಲರ್ಗಳ ತಾಳೆ ನೀವು ಮೊದಲುತ್ಸವವಾಂತಪಳಾವಳಾ ಶಕುಂ-
ತಳೆ ಪತಿಸದ್ಮಕೈದಿದಪಳಾಕೆಗನುಜ್ಞೆಯ ನೀವುದೆಲ್ಲರುಂ||
[ಜಲವನ್ + ಅದಾವಳ್ + ಈಂಟಳ್ {ಕುಡಿಯಳ್} ಎರೆದಲ್ಲದೆ ನಿಮ್ಮಯ ಪಾತೆಗೆ ಅಂಬುವಂ, ಅಲರ್ = ಅರಳಿದ ಹೂವು.] ತಳಿರ್ಗಳ, ಅಲರ್ಗಳ – ಇಲ್ಲಿ ಶಿಥಿಲದ್ವಿತ್ವವಿದೆ.

Nov 032012
 

ಗೆಳೆಯರೇ,
ವಿದ್ವತ್ತು, ಧಾರಣೆ ಮತ್ತು ಹಾಸ್ಯಚಮತ್ಕಾರಗಳು ಕಾಲನಾಲಯದಲ್ಲಿ ಹರಿಯುವ ನದಿಗಳು. ಇವೆಲ್ಲಾ ಒಂದೇ ಕಡೆ ಸಂಗಮವಾದ ಅಪೂರ್ವ ತಾಣದಲ್ಲಿ ಅವಧಾನಿಯ ಉದಯವಾಗುತ್ತದೆ. ಅವಧಾನದ ಜುಳುಜುಳು ಸದ್ದು ಮೂಡುತ್ತದೆ. ಜಗತ್ತಿನ ಅಹಂಕಾರದ ಪೊರೆಕಳಚಿ, ವಿಭೂತಿಯ ಅನುಭವವಾಗುತ್ತದೆ. ಇಂಥಾ ಸುಸಂದರ್ಭವೊಂದು ನಮ್ಮೆದುರಿಗಿದೆ. ನಮ್ಮ ಪದ್ಯಪಾನದ ಬೆನ್ನೆಲುಬಾದ ಗಣೇಶರು ನವೆಂಬರ್ ೩೦, ಡಿಸೆಂಬರ್ ೧, ೨ಕ್ಕೆ ಶತಾವಧಾನವನ್ನು ನಡೆಸಲಿದ್ದಾರೆ. [ವಿವರಗಳು ಇಲ್ಲಿದೆ.]
ಇನ್ನು ನಮ್ಮ ಕೆಲಸ. ಪದ್ಯಪಾನಿಗಳು ಕಾಲರ್ ಮಡಚಿ, ತೊಡೆ ತಟ್ಟಿ ಸಿದ್ಧವಾಗಬೇಕಿದೆ. ಪದ್ಯಪಾನಿಗಳು ಮೊದಲಸಾಲಿನಲ್ಲಿ ಕುಳಿತು, ಹಳಗನ್ನಡ ಪದ್ಯದುದಯವನ್ನು ನೋಡುನೋಡುತ್ತಾ ಆನಂದಿಸುವಂತಾಗಬೇಕಾಗಿದೆ. ಇನ್ನು ಅರ್ಥವನ್ನು ಗದ್ಯದಲ್ಲಿ ಬಿಡಿಸುವವರೆಗೆ ಕಾದು, ತಲೆಯಾಡಿಸುವುದು, ಕುರುಡನಿಗೆ ಸೂರ್ಯೋದಯದ ಸೌಂದರ್ಯವನ್ನು ವರ್ಣಿಸಿದಂತೆಯೇ, ಪರಿಪೂರ್ಣವಾಗದು. ಆದ್ದರಿಂದ ಇನ್ನುಳಿದ ದಿನಗಳಿಗಾಗಿ, ಪದ್ಯಪಾನ ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ. ಒಂದಿಷ್ಟು ಪೂರ್ವಸೂರಿಗಳ ಪದ್ಯಗಳನ್ನು, ಚಿತ್ರಕಾವ್ಯಾದಿಗಳನ್ನೂ, ಇನ್ನಷ್ಟು ಛಂದಸ್ಸುಗಳನ್ನೂ  ನಮ್ಮದಾಗಿಸಲು ಪ್ರಯತ್ನಿಸೋಣವೆಂಬುದು ನಮ್ಮಾಸೆ.

ವರ್ಣನೆ:ಯಾವುದಾದರೂ ವಿಡಂಬನೆಯನ್ನೋ ಸಹೃದಯಪ್ರಿಯವಾಗಬಲ್ಲ ಹಾಸ್ಯವನ್ನೋ ನಿಮ್ಮ ಇಷ್ಟವಾದ ಛಂದಸ್ಸಿನಲ್ಲಿ ತಿಳಿಸಿ. ಒಂದೆರಡು ಉದಾಹರಣೆಗಳು:
ಕಾಲವನೆಳ್ಳಷ್ಟೂ ಪೋಲುಮಾಡದೆ ಕಾರ್ಯಶೀಲನಾಗಿದ್ದೊಂದು ಗಳಿಗೆ
ಕಾಲನ್ನು ಚಾಚಿ ಮೈಮರೆತಾಗಲೇ ಬಂದ ಮೇಲಾಧಿಕಾರಿಯು ಬಳಿಗೆ [ಗಣೇಶರ ರಚನೆ. ಕಾವ್ಯಕಲ್ಪದಿಂದ]

ಇನ್ನೊಂದು ಉದಾಹರಣೆ:
ಗಾಥಾಸಪ್ತಶತಿಯಲ್ಲಿ ಬರುವ ಪದ್ಯವನ್ನು, ತೀ.ನಂ.ಶ್ರೀ. ’ಭಾರತೀಯ ಕಾವ್ಯಮೀಮಾಂಸೆ’ಯಲ್ಲಿ ಹೀಗೆ ಅನುವಾದಿಸಿದ್ದಾರೆ.
ಅಯ್ಯೋ, ಗದ್ದೆಗೆ ನಾನು ಹೋಗೆನು, ನೆಲ್ಲನು
ತಿಂದುಕೊಳ್ಳಲಿ ಗಿಳಿವಿಂಡು;
ಅರಿತರಿತೂ ದಾರಿಹೋಕರು ದಾರಿಯ
ಬೆಸಗೊಳುವರು ಮತ್ತೆ,ಮತ್ತೆ.
[ಮೂಲ ಪ್ರಾಕೃತದ ಸಂಸ್ಕೃತಛಾಯೆ ಹೀಗಿದೆ:
ಕಷ್ಟಂ ನ ಯಾಮಿ ಕ್ಷೇತ್ರಂ ಖಾದ್ಯತಾಂ ಶಾಲಿರಪಿ ಕೀರನಿವಹೈಃ
ಜಾನಂತೋಪಿ ಪಥಿಕಾಃ ಪೃಚ್ಛಂತಿ ಪುನಃಪುನೋ ಮಾರ್ಗಂ||
[ಈ ಮುಗ್ಧೆ ಸುಂದರಿಯಾಗಿದ್ದು, ಪಥಿಕರಿಗೆ, ದಾರಿ ಕೇಳುವ ನೆಪದಲ್ಲಿ ಇವಳನ್ನು ಮಾತನಾಡಿಸುವುದೇ ಗುರಿ ಎಂಬ ಭಾವವಿದೆ.]

ಪದ್ಯನಿದರ್ಶನಂ:
ರನ್ನನ ಗದಾಯುದ್ಧದಿಂದ:
ಆ ರವಮಂ ನಿರ್ಜಿತ ಕಂ-
ಠೀರವರವಮಂ ನಿರಸ್ತಘನರವಮಂ ಕೋ-
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ||
[ನಿರಸ್ತ = ಮೀರಿದ, ಘನ = ಮೋಡ] [ಪುನರುಕ್ತಿದೋಷವಿಲ್ಲದೇ, ರವವನ್ನು ಪ್ರತಿಧ್ವನಿಸಿದ್ದಲ್ಲದೇ, ಕೊನೆಯ ಸಾಲಿನ ಧ್ವನಿಯನ್ನೂ ಗಮನಿಸಿ]