Sep 292011
 

ಅನುರೂಪದಾ ಪಂಚಮಾತ್ರೆಗಳ ಚೌಪದಿಯ –
ಲನುಭಾವದಿಂದೀ ಸಮಸ್ಯೆ ಬಿಡಿಸಿ |
ತನುವಿಶೇಷದೊಳಿರುವುದಶ್ಲೀಲತೆಯೆ ಭಾಸ

“ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ||

ಇದು ಸದ್ಯದಲ್ಲಿ ನಡೆದ ಅಷ್ಟಾವಧಾನದಲ್ಲಿ ಕೊಟ್ಟ ಸಮ್ಮಸ್ಯೆ.. ಅಶ್ಲೀಲದಂತೆ ತೋರುವ ಮೇಲಿನ ಸಾಲಿನ (ಕೊನೆಯ ಸಾಲು) ಹಿಂದಿನ ೩ ಸಾಲುಗಳನ್ನು ಪೂರೈಸಿರಿ.

ಪದ್ಯ ಓದುವ ಧಾಟಿ

Sep 142011
 

ಇದು ಗಣೇಶ ರವರು ಕೊಟ್ಟ ಸಮಸ್ಯೆ

ಬರಿಯ ಭಾಮಿನಿಯಲ್ಲಿ ಸಾಗು-
ತ್ತಿರುವ ಕಾವ್ಯಕುತೂಹಲದಿ ಜನ
ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ
ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು
ತರದೆ ಭಾಮಿನಿಯನ್ನು ನೋಡರು
ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್”!!

ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ.
ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ.
ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ!

ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆ
ಮೂಡುವೆಣ್ಣಿನ ಕೆಂಪು ರಸವಾಗಿರೆ
ಮೋಡಿಮಾಡುವ ಮಲರಲಂಕೃತಿಗಳೆನಿಸಿರಲು
ನೋಡಿ ನಸುಕಿನ ಕವನ ನವನವೀನ

Sep 072011
 

ಸೆಳೆಹಿತದಿಕಸ ಶರಧಿಸೇರುಗೆ
ಕೆಳೆಹಿತದಧಮ ಹಿರಿದುಕಾಂಬುಗೆ
ಕಳೆಹಿತದಭಾಮಿನಿಯು ಶರಣಗೆ ದಾರಿ ತೋರುವಳು
ತಳೆದೆನೀಗಲೆ ಕಾವ್ಯ ಸಂಶಯ
ಗೆಳೆಯಹಿತಜನರಿದನು ಪರಿಕಿಸಿ
“ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು”
ಮೊದಲು, ಸಮಸ್ಯೆಯನ್ನು
“ನಳನಳಿಸದೆಯೆ ಸೋತರವರು ಪ್ರಕೃತೀಶ್ವರರು”
ಎಂಬುದಾಗಿರಿಸಿದ್ದೆ. ಅದರಲ್ಲಿ ಚ್ಛಂದೋದೋಷವಿತ್ತು.
ಗಣೇಶರ ಸಲಹೆಯಂತೆ, ಅದನ್ನು ಬದಲಿಸಿದ್ದೇನೆ.
ಸಮಸ್ಯೆ – ಭಾಮಿನಿಯಲ್ಲಿ ಕೊನೆಯ ಸಾಲು ಬರುವಂತೆ
“ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು”

Sep 032011
 

ಸ್ನೇಹಿತರೇ,

ಇನ್ನೊಂದು ಸಮಸ್ಯೆ…

“ಅದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ”

ನಾಳೆ ಭಾನುವಾರವಿದೆ… ಎಲ್ಲರು ಪ್ರಯತ್ನಿಸಬೇಕಾಗಿ ವಿನಂತಿ 🙂

ನಾಳೆ ರಾತ್ರಿ ನನ್ನ ಪರಿಹಾರ post ಮಾಡುತ್ತೇನೆ

Sep 012011
 

ನಾವುಮಿತ್ರರು ಪಯಣ ಬೆಳೆಸಿರೆ

ಭಾವ ಕಲಕುವ ಸಾಲು ಕಂಡೆವು

“ರಾವಣಾಗಮನವನುಕಾದಳುಸೀತೆಕಾತುರದಿ”

ತಾವು ಕಾವ್ಯದಿ ಚತುರ ಮತಿಗಳು

ಸಾವಕಾಶದಲಿದನು ಚಿಂತಿಸಿ

ಬೇವಸಾಲಿಗೆಬೆಲ್ಲಬೆರೆಸುತಹಿತವನುಣಿಸುವಿರಾ?

ಭಾಮಿನಿ ಕೊನೆ ಸಾಲು – “ರಾವಣಾಗಮನವನುಕಾದಳುಸೀತೆಕಾತುರದಿ”