Dec 102018
 

  12 Responses to “ಪದ್ಯಸಪ್ತಾಹ ೩೩೭: ಚಿತ್ರಕ್ಕೆ ಪದ್ಯ”

  1. ಅವರಿಬ್ಬರೂ ನಗುಮುಖದಿಂದೇನಿಲ್ಲ; ಮುಖಗಳು ಸಿಂಡರಿಸಿಕೊಂಡಂತೆಯೇ ಇವೆ.
    ಮಂಜುಭಾಷಿಣಿ||
    ಎನಿತೋದಲೇಂ ನರರು ಜ್ಞಾನವಂತರೇಂ
    ಬಿನದಂಬಡರ್, ತಿಳಿದರಲ್ಲ, ಗಾವಿಲರ್|
    ಸಿನಿಕರ್, ನಗಲ್ ಗಡರಿಯರ್, ನರಾಧಮರ್
    ಕನಲುತ್ತೆ ರೇಗುವರುಮೊರ್ವರೊರ್ವರೊಳ್||

  2. ಒಂದೆರಡು ಪುಸ್ತಕಗಳು ಖಾಲಿ ಇವೆ. ಅವನ್ನು ಆಯ್ದು ಓದಿದವರಲ್ಲಿ ಬುದ್ಧಿ ಇರುತ್ತದೆ. ಅದು ಬಿಟ್ಟು, ಕಪಾಟಿನಲ್ಲಿರುವುದನ್ನೆಲ್ಲ ಓದಿದರೇನು?
    ದ್ರುತವಿಲಂಬಿತ||
    ಇರುವುದೆಲ್ಲವನೋದಿದೊಡೇನೆಲೋ
    ಅರಿವು ಪೆರ್ಚುವುದೇಂ ಹೊರೆಯೊಂದರಿಂ|
    ತೆರವುಗೊಂಡಿಹ ಪುಸ್ತಕವನ್ನುಮಾರ್
    ಶಿರದೆ ಪೊತ್ತಿಹರೆನ್ನುತೆ ನೋಡೆಲೋ||

  3. ಕಂಠಪೂರ್ತಿ ಕುಡಿಯುವುದಕ್ಕೂ ಕಂಠದ ಮಟ್ಟದವರೆಗೆ ಓದುವುದಕ್ಕೂ ಏನು ವ್ಯತ್ಯಾಸ?
    (ಅಲಿ=ಹೆಂಡ. ಕುಂಠ=Stupid)
    ಕಂಠಪೂರ್ತ್ಯಲಿಯ ಕುಡಿದವನು ಕೈಮುಗಿಯುತು-
    ತ್ಕಂಠೆಯಿಂ ನಮಿಸುವಂ ಬ್ರಹ್ಮನಿಂಗಂ| (ಬ್ರಹ್ಮ ನಿಂಗೆ ಜೋಡುಸ್ತೀನಿ ಎಂಡ ಮುಟ್ಟಿದ್ ಕೈನ)
    ಕಂಠಪಾಠವ ಮಾಡಿ ಕುಂಠನಾದವನು ವೈ-
    ಕುಂಠಪತಿಗೆರಗುವನೆ – ಹಾದಿರಂಪ||

  4. ಪುಸ್ತಕಾಲಯದಂಥ ಮಸ್ತಕಂಗಳಯುಗಳ
    ಕುಸ್ತಿಮಾಡಲು ಸಿದ್ಧವಾಗಿರುವುದಿಲ್ಲಿ!
    ಸುಸ್ತುಗೊಳಿಸುವರಾರೊ
    ಬೇಸ್ತು ಬೀಳುವುದಾರೊ
    ಮಸ್ತಿಷ್ಕಯುಗ್ಮದೀ ಕದನದಲ್ಲಿ!!

    • Lakshmi Natasha Prasad!
      ನರಸಿಂಹನಿಂದೆಂತುಮಾದಂ ನತಾಶ ಪೇಳ್
      ಕರಡ ತಿದ್ದುವ ಚಾಳಿ ಮೈ.ವರ್ಡಿಗಂ (Microsoft Word and similar apps)|
      Girija ಎಂಬಳ ಪೆಸರನವಳ ಪತಿ ಟಂಕಿಸಿರೆ
      (Garage)ಗರಜೆಂದದನು ವರ್ಡು ತಿದ್ದುವೋಲೇ!!

  5. ಪುಸ್ತಕಾಲಯದಂಥ ಮಸ್ತಕಂಗಳಯುಗಳ
    ಕುಸ್ತಿಮಾಡಲು ಸಿದ್ಧವಾಗಿರುವುದಿಲ್ಲಿ!
    ಸುಸ್ತುಗೊಳಿಸುವರಾರೊ
    ಬೇಸ್ತು ಬೀಳುವುದಾರೊ
    ಮಸ್ತಿಷ್ಕಯುಗ್ಮದೀ ಕದನದಲ್ಲಿ!!

  6. ಬಂದಿತಯ್ಯೋ ಫೈನಲೆಕ್ಸಾಮ್
    ಗೊಂದಲದಗೂಡಾಯ್ತು ಮಸ್ತಕ
    ಚಂದದಲಿ ಒಟ್ಟಿರುವೆ ಪುಸ್ತಕ ಪ್ಯೂರು ಡೆಕೊರೇಷನ್
    ಮುಂದು ಕುಳಿತವ ಜಾಣನಾಗಿರೆ
    ಚೆಂದವಿರೆಕೈ ಬರಹವವನದು
    ಬಂದ ಇನ್ವಿಜಿಲೇಟರ್ ಕೃಪೆಯಿರೆ ಢುಂಕಿ ತಪ್ಪೀತು

  7. ರಾಗಣೇಶರು ಕನ್ನಡಿಯ ಮುಂ
    ದೋಗೆ ಕಾಣುವ ಸ್ಪಷ್ಟ ಚಿತ್ರಣ
    ವೀಗ ಕಂಡಂತಾಯಿತೆಮಗಿದೆ ಸಂತಸದ ದಿನವು
    ಜಾಗವಿದೆಯೇಂ ವೇಯ್ಲು ಕೆಪಿಲರಿ-
    ಗೀಗ ತಲೆಯಲಿ ಪುಸ್ತಕಗಳೇ
    ಜಗ್ಗಿ ಗಿಡಿದಿಹ ಶೀರ್ಷವಿದುವೋ ಸಾಟಿಯಿದಕಿಲ್ಲ

  8. ಬಲು ಶಾಸ್ತ್ರ ವಿವರಗಳು ಬರಿಯ ಪುಸ್ತಕದೊಳಿರೆ
    ಫಲವೇನು ಅದರಿಂದ? ಒಳ್ಳೆ ಕಾರ್ಯಗಳ
    ಸಲುವಾಗಿ ಇದ್ದರದು ಸದಾ ಮಸ್ತಕದೊಳಗೆ
    ಸಲೆ ಕಾಯುವುದು ನಿನ್ನ! ಮುದ್ದುರಂಗ

    • ಬಲು ಶಾಸ್ತ್ರ, ಒಳ್ಳೆ ಕಾರ್ಯ – ಅರಿಸಮಾಸಗಳು. ಹೀಗೊಂದು ಸವರಣೆ:
      ಹಲವಿರಲು ಶಾಸ್ತ್ರ-ಕಾವ್ಯವು ಬರಿಯ ಪುಸ್ತಕದೆ
      ಫಲಮಿಲ್ಲಮದರಿಂದೆ ಜಡವಹುದದು|
      ಚಲನಶೀಲದಿನಿದ್ದೊಡದು ನಿನ್ನ ಮಸ್ತಕದೆ
      ಸಲೆ ಕಾವುದೆಂದೆಂದು ಮುದ್ದುರಂಗ||

  9. ರೆಕ್ಕೆಯು ಬಲಿಯದ ಹಾರಲು ಕಲಿಯದ
    ಹಕ್ಕಿಯ ಎಳೆಮರಿ ನಾನು
    ಸಿಕ್ಕುತ ಮುಳ್ಳಿನ ಕಳ್ಳಿಯ ಪೊದೆಗದು
    ಬಿಕ್ಕುತ ಅಳಲಿಟ್ಟೆನೇನು?

    ಕನಸಿನ ಬಾಳಿಗೆ ನನಸಿನ ಗೂಡಿಗೆ
    ರಣರಣ ಬಿಸಿಲಿಗೆ ಧಣಿವು
    ಮಣಮಣ ಜೆಲ್ಲಿಯ ಹೊತ್ತಿಹ ಕೂಲಿಯ
    ಹಣದಲೆ ನನ್ನಯ ಕಲಿವು

    ಓದುವ ಗೀಳಿನ ಬಯಕೆಯ ಹುಚ್ಚೊಳ
    ವೇದನೆ ಸಹಿಸತ ಬೆಳೆದೆ
    ಬಾಧಿಸ ಕಷ್ಟದ ಸರಪಳಿ ಮುರಿಯುತ
    ಬೇಧಿತ ಬದಕನ ತಳೆದೆ

    ಹಿಂದಣ ಬೆನ್ನಿಗೆ ಹಂಗಿಸ ಚೂರಿಯು
    ಮುಂದಣ ಹೊಗಳತ ಇದ್ದೊ
    ಕುಂದುತ ಹೊಗಳಿಗೆ ಕಂದದೆ ತೆಗಳಿಗೆ
    ಕಂದಕ ದಾಟುತ ಎದ್ದೊ

    ನನ್ನಯ ಹಾದಿಯು ನನ್ನದು ಎನುತಲೆ
    ನನ್ನಯ ಪಾಡಿಗೆ ನಾನೂ
    ನಿನ್ನೆಯ ನೆನೆಯುತ ನಾಳೆಯ ಕಾಣದೆ
    ಸೊನ್ನೆಯ ಸಾಧಿಸತಿಹೆನು

    ✍ಸಂತೋಷ್ ನಾಗರತ್ನಮ್ಮಾರ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)