Jun 142011
 

5 5 5 5
5 5 5 3
5 5 5 5
5 5 5 1

ಘಂಟೆಗಳ ಮುಳ್ಳೊಂದು ನಿಮಿಷಗಳಿಗೊಂದು, ನಾ
ಭಂಟ ಕ್ಷಣಕೆನೆವೊಂದು ದುಡಿಯೆ, ಅನ್ಯೋನ್ಯ
ನಂಟಿನರಿವಲಿ ಸಮಯಸೂಚಿತಾ ಸಾಗುವೆನೆ
ಜಂಟಿ ದಾಂಪತ್ಯವನುಸರಿಸು ಜಾಣ(ಣೆ) |೧|

ಬೇರೊಂದರಿಂದಹುದೆ ಕಾಂಡವಷ್ಟೆಯೆ ಸಾಕೆ

ನೀರ ಹೀರುವ ಬೇರೆ ಸಸ್ಯಕಾಧಾರ
ಸಾರದೂಟವು ಎಲೆಗಳಿನ್ದೆಂಬ ತೆರೆದಿ ಸಂ-
ಸಾರ ಕೆಲಸದಿ ಮೇಲು-ಕೀಳೆಮ್ಬುದಿಲ್ಲ |೨|
ಆಗಸದಿ ಧಗಧಗಸೆ ಸೂರ್ಯ ಭೂಮಿಗೆ ಬೆಳಕು
ಸಾಗರದಿ ಮುಳುಗೆ ರವಿ ಚಂದಿರನೆ ಗತಿಯು
ಸಾಗುವುದು ಒಂದಳಿಯೆನಿನ್ನೊಂದರಿಂ ಚಕ್ರ-
ವಾಗುಮಂತೆಯೆ ಸುಳಿಯೆ ದುಗುಡಾನ್ಯಗೆ |೩|
ಕುಲಗಳೆರಡನು ಹೆಣಿಪ ಸೇತುವೆಯೆ ಪತಿಪತ್ನಿ
ಚಲಿಪರಾಚೀಚೆ ಜನ ಬಾಂಧವ್ಯ ಬೆಳೆಯೆ
ಕಲಹ ನಿಮ್ಮೀರ್ವರಲಿ ಸೇತುವೆಯ ಬುಡ ಕುಸಿಯೆ
ಜಲಸಮಾಧಿಯೆ ನೋಡು ಬಾಂಧವ್ಯಗಳ್ |೪|

ಇದನ್ನು ಸಾಕಷ್ಟು ಬೆಳೆಸ ಬಹುದು 🙂

Jun 122011
 

ಬಾಬಾ ರಾಮದೇವ ಇಂದು ಸರ್ಕಾರ ಅವರ ಬೇಡಿಕೆಗಳನ್ನ ಈಡೇರಿಸದಿದ್ದರು ಉಪವಾಸ ಮುಗಿಸಬೇಕಾಯ್ತು, ಆದರೆ ಬಾಬಾ ರಾಮ್ದೇವ್ ಅವರ ಪ್ರಯತ್ನ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಿದೆ… ಇದರ ಹಿನ್ನೆಲೆಯಲ್ಲಿ ಒಂದು ಪದ್ಯ.

ಸಾವಿರದ (1000) ಜನ ಶಾಂತ ಧರಣಿಯ
ಕೋವಿಧರದಳವಟ್ಟಿ ಚೆದುರಿಸೆ
‘ಬಾವಿ’ ಜಲಿಯಾವಾಲಭಾಗಿನ ನೆನಪು ಹಸಿರಾಯ್ತು
ಸಾವಿರದ (ಸಾವು ಇರದ) ಚಳುವಳಿಗೆ ಕಿಚ್ಚನು
ಕೋವಿದರ ಸಮ್ಮತಿಯ ಬಲದಲಿ
ಭಾವಿಯಾಡಳಿತವನು ತಿದ್ದಲು ನಾಂದಿಯೀ ಘಟನೆ


Jun 092011
 
ಸುನೀತಾ ಅವರ ಪರವಾಗಿ ಇಲ್ಲಿ ಹಾಕಿದ್ದೇನೆ

ಚಂದಿರ ನಿನ್ನಯ ಚೆಲುವನು ಬಣ್ಣಿಸೆ ಪದಗಳು ಎನಗಿಲ್ಲ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲುವೆ ಚಿತ್ರಿಪರಾರಿಲ್ಲ ||

ದಿನದಿನ ಬೆಳೆಯುತ ಬೆಳಕನು ಚೆಲ್ಲುತ ಬಾನಲಿ ನೀನಿರುವೆ
ನಿನ್ನನೆ ನೋಡುತಲಂದವ ಸವಿಯುತ ರಜನಿಯ ನಾ ಕಳೆವೆ ||

ಒಂದೆಡೆ ನಿಲ್ಲದೆ ಅಲ್ಲಿಂದಿಲ್ಲಿಗೆ ಸರಿಯುವೆ ನೀನೇಕೆ?
ಮೋಡಗಳೊಂದಿಗೆ ಓಡುವ ತೆರದಲಿ ಕಾಣುವೆಯದು ಏಕೆ? ||

ತಾರೆಯು ಸಾವಿರ ಮಿನುಗಲು ಬಾನಲಿ ನಿನಗದು ಸಮವೇನು?
ನೀನೊಂದಿಲ್ಲದ ಬಾನದು ರಸಿಕಗೆ ಸವಿಯಲು ಬಹುದೇನು? ||

ದಿನಕರನುದಯಿಸಲಡಗುವೆ ಎಲ್ಲೀ ಹಗೆತನ ನಿನಗೇಕೆ?
ಹಗಲೊಳು ನಿನ್ನನು ಕಾಣುವ ಭಾಗ್ಯವದಿಲ್ಲವು ನಮಗೇಕೆ? ||

ತಂಪನೆ ಕಿರಣವ  ನೀಡುವ ನಿನ್ನನು ಕುಮುದಿನಿ ಬಯಸುವುದು
ಹುಣ್ಣಿಮೆ ಬೆಳಕನು ಚೆಲ್ಲಲು ಚಂದದಿ ಸಾಗರ ಉಕ್ಕುವುದು ||

ಬೆಳ್ಳಿಯ ಚಂದಿರ ನಿನ್ನಯ ಚೆಲುವಿಗೆ ಹೋಲಿಕೆಯೇನಿಲ್ಲ
ನಿನ್ನಯ ರೂಪವ ಸವಿಯದ ಮನುಜರು ಭೂಮಿಯ ಮೇಲಿಲ್ಲ ||

– ಸುನೀತಾ

Jun 032011
 
ನಿನಗಾಗಿ ನಾ ಪಡುವೆನೆನಲಾದ ಕಷ್ಟಗಳ –
ವೆನಗಾದ ಸಂತೋಷದಣುಮಾತ್ರವು  ||
ನಿನ ಸ್ವಾಗತದ ನಗುವಿನಪ್ಪುಗೆಯ ಸಂತಸಕೆ
ನನ ದುಡಿತದಾ ದುಗುಡ ತೃಣಮಾತ್ರವು  || ೧ ||

ಪೂರಣಿಸಿದೇಯೆನ್ನ ಭಾವಗಳ ನ್ಯೂನತೆಯ
ಸಾರವನು ದೊರಕಿಸಿದೆ ನೀನೀ ಬಾಳಿಗೆ ||
ಬಾರ ಕುಡಿಯೇ ವಂಶ ಸಾರಾಂಶದಾ ಮಿಡಿಯೆ
ತಾರ ಬದುಕಿಗೆ ನೀ ಮಹೋತ್ಸಾಹವಾ || ೨ ||

ಬಾಡಿ ಜ್ವರದಿಂ ನೀನು ನರಳಿದ್ದ ರಾತ್ರಿಯಲಿ
ಮಾಡಿದ್ದ ಸೇವೆಯನೆ ಹಿರಿದೆಂದೆನು ||
ಕಾಡಿರುವ ಸಂಕಟವನಾನನುಭವಿಸುವಾಗ
ನೋಡಿ ನಿನ ಸೈರಣೆಯ ಕಿರಿದಾದೆನು ||‌‌ ೩ ||

ಜೀವನದಲೆಷ್ಟೆಷ್ಟು  ಅಡೆತಡೆಗಳೇ ಬರಲಿ
ನೋವು ಸಾವಿನ ದಡಕೆ ಕರೆದೊಯ್ಯಲಿ ||
ಭಾವನೆಯ ಸೇತುವೆಯ ಕಟ್ಟಿರಲು ನಿನ್ನೊಡನೆ
ಯಾವ ಸೆಡೆಯಿಲ್ಲದೆಯೆಯೆದೆಯೊಡ್ಡುವೆ || ೪ ||

ನನಗಿಂತ ನೀ‌ ಜಾಣ (ಣೆ), ನನಗಿಂತ ನೀ ಶಾಣ (ಣೆ)
ನನಗಿಂತ ನೀ ಚೆಂದ, ನೀ ಚದುರನು (ಚದುರೆಯು) ||
ನಿನ ಪರಿಣಿತಿಗಳಾಟ ಪಾಠಗಳ ವಲಯದಲಿ
ಯೆನಗೇ ಸ್ವತಃ ಸಂದದನುಭಾವವು || ೫ ||

ಒಂದೊಂದರಿಂದೊಂದು ಸುಖ ದುಃಖಗಳು ಬರುವು –
ದೆಂದೆಂಬ ಮಾತುಗಳನಾನೊಪ್ಪೆನು
ಬಂದಿಳಿದೆ ನೀ ಭುವಿಗೆ ಕಾಮದುತ್ತುಂಗದಲಿ
ತಂದಿರುವೆ ಸುಖಗಳ ಪರಂಪರೆಗಳ || ೬ ||

– ರಾಮಚಂದ್ರ

೫ ಮತ್ರಾ ಗಣದ ಛಂದಸ್ಸು  : 
೫ + ೫ + ೫ + ೫
೫ + ೫ + ೫ + ೨