ಹೃದ್ಯವಾಗಿಸುವಾನುಮೋದನೆ
ಸದ್ಯ ತಂದಿಹ ಕಂದನೋಪನಯನದ ಶುಭ ಕಾರ್ಯ ||
ಖಾದ್ಯ ಚೋದ್ಯದ ಮಿತದ ಹಿತದಿಂ
ದಧ್ಯಯನ ದಿನನಿತ್ಯ ಸಂಧ್ಯಾs
[ಅಧ್ಯವಸನವು ಮಿಡಿಯುತಲಿ ನಿನ ದೇಹ ಮನಗಳಲಿ]
ರಾಧ್ಯ ಸವಿತಾ ಪಿತೃಋಷಿಂಗಳ ವಂದನೆಯ ಪರಿಯು || ೧ ||
ನುಡಿಯು ಸತ್ಯದ ಮೇಲೆ ನಿಲ್ಲಲಿ
ಕೊಡದೆಯವಕಾಶವನಧರ್ಮಕೆ
ಕಡು ವಿವೇಕವು ಹೊಳೆಯುತಲಿ ಧೀ ಶಕ್ತಿ ಬೆಳೆಮೆಯಲಿ ||
ಬಿಡದೆ ಮನೆತನ ಸಂಪ್ರದಾಯವ
ಕಡಿಯುತಲಿ ಕಡಿದಾದ ಕಷ್ಟವ
ಮಡಗು ನೀ ಹಿರಿದಾದ ಹೆಸರನು ಮನೆಗೆ ಗುರುಕುಲಗೆ || ೨ ||
ಕಾಯು ನೀ ನಿನ ಧರ್ಮ ಕರ್ಮವ
ಬಾಯಿ ಮನಸಿನ ವಿಮಲ ಸೌಷ್ಠವ
ಪಾಯಸದ ತರ ದಕ್ಕುವುದು ಮಿಗೆ ಸುಖದ ಸಂಪದವು ||
ತಾಯಿ ತಂದೆಯು ಮತ್ತಥಿತಿಗಳ
ಕಾಯೊ ಗುರುವೂ ದೇವರೆಂ ತಿಳಿ
ಮಾಯೆಯಾ ಜಗ ತಾನೆ ಸಲ್ವದು ನಿನಗೆ ಹಿಡಿತದಲಿ || ೩ ||
ಬೆರೆಸಿ ಪಾಠದ ಜೊತೆಗೆಯಾಟಗ
ಳರಸಿ ಕಲೆಗಳ ಸೂಕ್ಷ್ಮ ಪದರವ
ಗುರುಗಳುತ್ತಮ ಪ್ರಜೆಯು ನೀನಾಗೆನ್ನ ಕಣ್ಮಣಿಯೇ ||
ಕರುಣದಿಂ ನೀ ಕಾಣು ದೀನರ
ವರುಷ ಕಳೆದಿಹ ಹಳೆಯ ಮನುಜರ
ಯೆರೆಯುತಲಿ ತಂಪೆಲರ ಜನತೆಗೆ ಸುಗುಣ ಸನ್ಮತಿಯೇ || ೪ ||
ಪುರುಷ ಶ್ರೇಷ್ಠರ ವಂಶದಲ್ಲಿನ
ಹಿರಿಯ ಪುಣ್ಯದ ಶಕ್ತಿ ಬೆನ್ನಿನ
ಲಿರಲು ಹರಿನೀ ಸ್ನಾತಕತೆಯೆಡೆ ಹಗುರ ಮನಸಿನಲಿ ||
ಹರಕೆ ಶಕ್ತಿಯಪಾರ ಬಲದಿಂ
ದುರಿಸು ನಿನ್ನಯ ಜ್ಞಾನ ದೀವಿಗೆ
ಸರಸ ಸಾರಸ್ವತದ ಸಮದಿಂದುತ್ತಮೋತ್ತಮನು || ೫ ||
– ರಾಮಚಂದ್ರ