Feb 192014
 

ವಸ್ತು: ಸರಸ್ವತೀಸ್ತುತಿ

ಛಂದಸ್ಸು:ಅನುಷ್ಟುಪ್

ಬಂಧ:ಪುಷ್ಪಗುಚ್ಛಬಂಧ

pushpaguchha

ಛಂದಸ್ಸು:ಚಂಪಕಮಾಲೆ

ಬಂಧ:ಕುಂಡಲಿತನಾಗಬಂಧ

kundalita1000

 

ಛಂದಸ್ಸು:ಸ್ರಗ್ಧರಾ

ಬಂಧ:ಕವಿ-ಬಂಧನಾಮಗರ್ಭೀಕೃತ ಮಹಾಪದ್ಮಬಂಧ

padmabandha

Feb 022013
 

ಎಲ್ಲ ಪದ್ಯಪಾನಿಗಳಿಗೆ ನಮಸ್ಕಾರ. ಈ ವೇದಿಕೆಯಲ್ಲಿ ಹಲವು ಹತ್ತು ಬಾರಿ ಅರಿಸಮಾಸ, ಶಿಥಿಲದ್ವಿತ್ವ, ಹಳಗನ್ನಡ/ನಡುಗನ್ನಡವ್ಯಾಕರಣಶುದ್ಧತೆ ಇತ್ಯಾದಿ ವಿಚಾರಗಳು ಚರ್ಚೆಗೆ ಬರುತ್ತಿವೆ ಮತ್ತು ಎಲ್ಲವೂ ತುಂಬ ಆರೋಗ್ಯಕರವಾದ ನಿರಭಿನಿವಿಷ್ಟವೂ ಆದ ಅಧ್ಯಯನ ಮತ್ತು ಜಿಜ್ಞಾಸೆಗಳಿಂದ ಕೂಡಿದ್ದು, ಪರಸ್ಪರ ಕೊಡುಕೊಳ್ಳುವಿಕೆಯ ಮೈತ್ರೀಭಾವದಿಂದಲೇ ಸಾಗಿವೆ. ಈ ಸೌಖ್ಯ-ಸಂತೋಷಗಳಿಗಾಗಿ ಎಲ್ಲ ಗೆಳೆಯರಿಗೂ ಧನ್ಯವಾದ. ಆದರೆ ಕೆಲವೊಮ್ಮೆ ಹಳೆಯ ಚರ್ಚೆಗಳೇ ಮರುಕಳಿಸುವಾಗ ಒಂದುಮಟ್ಟದ ಸ್ಪಷ್ಟೀಕರಣವನ್ನು ನೀಡುವುದು ಹಾಗೂ ಪದ್ಯಪಾನದ ಸಾಮಾನ್ಯರೀತಿಯ ನಿಲವನ್ನು ನಿವೇದಿಸುವುದು ಯುಕ್ತವೆಂದು ತೋರಿ ಈ ವಿವರಣೆ:

ಎಲ್ಲರೂ ಬಲ್ಲಂತೆ ಪದ್ಯಪಾನವು ಅಭಿಜಾತಪದ್ಯರಚನೆಯನ್ನೂ ಅದರ ಆಸ್ವಾದ, ಪ್ರಸಾರ ಮತ್ತು ಸಂವಿಭಾಗವನ್ನೂ(ಹಂಚಿಕೊಳ್ಳುವಿಕೆ) ಆಸಕ್ತರ ಮನದಲ್ಲಿ ನೆಲೆಯಾಗಿಸಲು ಹುಟ್ಟಿದ ಅನೌಪಚಾರಿಕ ಸ್ನೇಹಕೂಟ. ಇಂಥ ಪದ್ಯರಚನೆಯು ಸಾವಿರ ವರ್ಷಗಳಿಗೂ ಮಿಕ್ಕ ಕನ್ನಡಸಾಹಿತ್ಯಪರಂಪರೆಯನ್ನು ಅವಲಂಬಿಸಿದೆ. ಇಲ್ಲಿ ಹಳಗನ್ನಡ, ನಡುಗನ್ನಡಗಳೆರಡೂ ಉಂಟು.ಹೊಸಗನ್ನಡವಂತೂ ನಮ್ಮ ಕಾಲದ್ದೇ ಆಗಿ ಇದ್ದೇ ಇದೆ. ಈ ವೇದಿಕೆಯಲ್ಲಿ ಸೇರುವ ನಮ್ಮೆಲ್ಲರ ಉದ್ದೇಶವೂ ನಮ್ಮ ನಮ್ಮ ಭಾಷೆ-ಛಂದಸ್ಸು-ಶೈಲಿ-ವ್ಯಾಕರಣ-ಅಲಂಕಾರಗಳ ಅರಿವು-ಅನ್ವಯಗಳನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವುದರಲ್ಲಿದೆ. ಹೀಗಾಗಿ ನಾವಿಲ್ಲಿ ಸಾಮಾನ್ಯವಾಗಿ  ಪಾಲಿಸುವ ನಿಯಮಗಳೆಂದರೆ ವೃತ್ತ-ಕಂದಗಳನ್ನು ’ಕೂಡಿದಮಟ್ಟಿಗೂ’ ಹಳಗನ್ನಡದಲ್ಲಿಯೂ ಷಟ್ಪದಿ-ಚೌಪದಿ-ಸಾಂಗತ್ಯ-ತ್ರಿಪದಿ-ಸೀಸ-ರಗಳೆ ಮುಂತಾದುವನ್ನು ನಡುಗನ್ನಡದಲ್ಲಿಯೂ ರಚಿಸಬೇಕು; ಲಕ್ಷಣಕ್ಕಿಂತ ಲಕ್ಷ್ಯಕ್ಕೆ (ಕೇವಲ ವ್ಯಾಕರಣದ ನಿಯಮಗಳಿಗಿಂತ ಮಹಾಕವಿಗಳ ಪ್ರಯೋಗಕ್ಕೆ) ಹೆಚ್ಚಿನ ಬೆಲೆಯನ್ನು ನೀಡಬೇಕು; ಹಾಗೂ ಔಚಿತ್ಯವನ್ನು ಗಮನದಲ್ಲಿರಿಕೊಂಡು ಪ್ರಾಯಿಕವಾಗಿ ಶಿಷ್ಟರೂಪಗಳನ್ನೇ ಆದರಿಸಬೇಕೆಂಬುದಾಗಿದೆ.  ಹಾಗೆಂದ ಮಾತ್ರಕ್ಕೆ ಜಾನಪದಪ್ರಯೋಗಗಳಿಗೆ ನಿಷೇಧವೇನಿಲ್ಲ. ಆದರೆ ಅವೆಲ್ಲ ಸಂದರ್ಭೋಚಿತವಾಗಿ ಬರಬೇಕು.ವಿಶೇಷತಃ ಅವುಗಳಿಗೆ ಸಹಜವೂ ಸುಂದರವೂ ಆದ ಛಂದಸ್ಸುಗಳೆನಿಸಿದ ಸಾಂಗತ್ಯ, ತ್ರಿಪದಿ, ಏಳೆ ಮುಂತಾದುವುಗಳಲ್ಲಿ. ಒಟ್ಟಿನಲ್ಲಿ ಛಂದಸ್ಸು ಪ್ರಾಯಿಕವಾಗಿ ನಮ್ಮ ಪದ್ಯಪಾನದ ಪದ್ಯಗಳ ಭಾಷೆಯನ್ನು ನಿರ್ದೇಶಿಸುತ್ತದೆಂದರೆ ಯುಕ್ತವಾದೀತು. ಈ ನಿಲವನ್ನು ವಿದ್ವಾಂಸರಾದ ಡಾ|| ಟಿ.ವಿ. ವೇಂಕಟಾಚಲಶಾಸ್ತ್ರಿಗಳು ಒಮ್ಮೆ ನನಗೆ ಮನವರಿಕೆಮಾಡಿದ್ದರು. ಇದು ಪ್ರಸಿದ್ಧಪೂರ್ವಸೂರಿಗಳಾದ ಡಿವಿಜಿ,ಗೋವಿಂದಪೈ, ಬೀಯಂಶ್ರೀ, ಬೇಂದ್ರೆ, ಕುವೆಂಪು, ಪುತಿನ, ತೀನಂಶ್ರೀ, ಕೆ.ಕೃಷ್ಣಮೂರ್ತಿ ಮುಂತಾದವರಿಗೂ ಒಪ್ಪಿಗೆಯಾದ ಮಾರ್ಗ.

ಈ ಸಂದರ್ಭದಲ್ಲಿ ಮಹಾಕವಿಗಳನ್ನು ಮಾತ್ರ ನಚ್ಚಬೇಕೆಂಬುದು ಹೌದಾದರೂ “ಮಹಾಕವಿಪ್ರಯೋಗ’ವೆಂದು ಹೆಸರಾಗಿರುವ ಹಲಕೆಲವು ಎದ್ದುತೋರುವ ವ್ಯಾಕರಣವಿರುದ್ಧರೂಪಗಳನ್ನು ಬಲುಮಟ್ಟಿಗೆ ಮುಟ್ಟದಿರುವುದು ಯುಕ್ತ. ಜೊತೆಗೆ ಕುಮಾರವ್ಯಾಸನಂಥ ವರಕವಿಯನ್ನು – ಭಾಷೆಯ ಮಟ್ಟಿಗೆ – ಕಣ್ಣು ಮುಚ್ಚಿಕೊಂಡು ಕುರುಡಾಗಿ ಅನುಸರಿಸದಿರುವುದು ಹಾಗೂ ಹರಿದಾಸರ ಮತ್ತು ಜಾನಪದಕವಿಗಳ ಪ್ರಯೋಗಗಳನ್ನು ಮನಸ್ವೀ ಬಳಸದಿರುವುದು ಯೋಗ್ಯ. ಏಕೆಂದರೆ ನಾವೆಲ್ಲ ಅಭ್ಯಾಸಿಗಳು; ಭಾಷೆ-ಛಂದಸ್ಸು-ಅಲಂಕಾರಗಳಂಥ ಸಾಹಿತ್ಯವಿದ್ಯೆಯ ’ರೂಪ’ವನ್ನು ಚೆನ್ನಾಗಿ ಅರಿತು ಆ ಬಳಿಕ (ಅಥವಾ ಜೊತೆಜೊತೆಗೇ ಎಂದರೆ ಮತ್ತೂ ಸರಿಯಾದೀತು:-) ಅದರ ’ಸ್ವರೂಪ’ವೆನಿಸಿದ ರಸ-ಧ್ವನಿಗಳನ್ನು ಎಟುಕಿಸಿಕೊಳ್ಳುವುದು ಯುಕ್ತ. ಇದಕ್ಕೆ ಕಾರಣವಿಷ್ಟೆ; ಅಪ್ಪಟ ಪ್ರತಿಭೆಗೆ ಯಾವುದೇ ನಿಯಮದ ಸಂಕೋಲೆಯಿಲ್ಲ ಅದರೆ ಇವುಗಳ ಹೂಮಾಲೆಗಳ ಅಲಂಕಾರವಿರುತ್ತದೆ; ಅರ್ಥಾತ್ ಯಾವ ನಿಯಮಗಳು ಆರಂಭಿಕರಿಗೆ ಕಟ್ಟುಗಳೋ ಅವೇ ಪಾರಂಗತರಿಗೆ ಆಕಲ್ಪಗಳು (ಒಡವೆಗಳು). ಹೀಗೆ  ಒಳ್ಳೆಯ ವ್ಯುತ್ಪತ್ತಿಪ್ರಾಪಕವಾದ ನಿಯಮಗಳೇ ಇಲ್ಲದೆ, ಕೇವಲ ತಮತಮಗಿದೆಯೆಂದು ತೋರುವ  ಪ್ರತಿಭಾಬಲದಿಂದಲೇ ಕವನಿಸುವವರಿಗಾಗಿ ಪದ್ಯಪಾನವು ಯಾವುದೇ ಬಗೆಯಲ್ಲಿ ಆಕರ್ಷಕವೇದಿಕೆಯಲ್ಲವೆಂಬುದು ಸ್ವಯಂವೇದ್ಯ:-) ಹಾಗೆಂದು ಇಲ್ಲಿಯ ಕವಿತೆ ಕೇವಲ ನಿಯಮಯಮನಿಗಳನಿಗಡಿತವೆಂದೂ ಚಂಡಿಸಬೇಕಿಲ್ಲ. ಅತಿವಾದಗಳೆರಡನ್ನೂ ಬರಿಯ ಜಾಣ್ಮೆಯಿಂದಲ್ಲದೆ ಕಾಣ್ಮೆಯಿಂದ ಪರಿಹರಿಸಿಕೊಂಡು ಸಾಗುವ ಹಂಬಲ ನಮಗೆ. ಏಕೆಂದರೆ ಕನ್ನಡವು ಯಾವುದೇ ಜೀವದ್ಭಾಷೆಯ ಹಾಗೆ ಜಡವಲ್ಲ, ಹಾಗೆಂದು ವಿಶೃಂಖಲವೂ ಅಲ್ಲ. ಇದೊಂದು ಚಲನಶೀಲವಾದರೂ ಸ್ಥಿರತೆಯುಳ್ಳ  ಸತ್ತ್ವ (Dynamic equilibrium). ಇಲ್ಲಿ ನಮ್ಮ ಕಾವ್ಯವಾಣಿಯ ಔಚಿತ್ಯಪೂರ್ಣವಾದ ಆಭಿಜಾತ್ಯಕ್ಕೆ ಕುಂದಾಗದಂತೆ ಎಲ್ಲರೊಡನೆ ಒಂದಾಗುವ ಹವಣು ನಮ್ಮದಾಗಬೇಕಿದೆ. ಇದಕ್ಕೆ ಎಲ್ಲ ಪದ್ಯಪಾನಿಗಳ ಸಹಕಾರ ಬೇಕು.

Mar 102012
 

ಪದ್ಯ ಕಲಿಕೆಯ ಪಾಠಗಳಿಗೆ ಒಂದು ಹೊಸದನ್ನು ಕೂಡಿಸಲಾಗಿದೆ. ಈ ಪಾಠವು ಅಂಶ ಛಂದಸ್ಸಿನದ್ದಾಗಿದ್ದು, ಜಾನಪದದಲ್ಲಿ ಜನಪ್ರಿಯವಾಗಿರುವ ಸಾಂಗತ್ಯ, ತ್ರಿಪದಿ ಮತ್ತು ಸೀಸ ಪದ್ಯಗಳ ಛಂದೋಬಂಧಗಳನ್ನು ತಿಳಿಸುತ್ತದೆ. ಪಾಠವು ಮೇಲಿನ “ಪದ್ಯ ವಿದ್ಯೆ” ಯ ಕೆಳಗೆ  ಲಭ್ಯವಿದೆ ಹಾಗೂ ಇಲ್ಲಿ ಕ್ಲಿಕ್ಕಿಸುವುದರಿಂದಲೂ ಸಿಗುತ್ತದೆ.

Feb 242012
 

ಛಂದೋಬದ್ಧ ಪದ್ಯ ರಚನಾಸಕ್ತರಿಗೋಸ್ಕರ ಇನ್ನು ಕೆಲವು ಕಲಿಕೆಯ ಸಾಮಗ್ರಿಯನ್ನು ಪದ್ಯಪಾನದಲ್ಲಿ ಅಳವಡಿಸಲಾಗಿದೆ. ಇವು – ನರಸಿಂಹಾಚಾರ್ಯರು, ಕಾಳಿದಾಸನ ರಘುವಂಶದಿಂದ ಕನ್ನಡಕ್ಕೆ ಅನುವಾದಿಸಿರುವ ಎರಡು ಸರ್ಗಗಳು – “ದಿಲೀಪ ಚರಿತೆ” ಹಾಗು “ಅಜ ನೃಪ ಚರಿತೆ“. ಇವುಗಳಲ್ಲಿ ಪದ್ಯಗಳು ಸರಳ ಸುಂದರವಾಗಿದ್ದು, ಪದ್ಯ ರಚನಾಕಾರರಿಗೆ ಉತ್ತಮ ಸಾಮಗ್ರಿಯಾಗಬಹುದೆಂಬ ಭಾವದಿಂದ ಇಲ್ಲಿ ಹಾಕಿದ್ದೇವೆ.

ಇವುಗಳನ್ನು ಉಳಿದ “ಕಲಿಕೆಯ ಸಾಮಗ್ರಿ” ಪುಟಕ್ಕೂ ಕೂಡಿಸಲಾಗಿದೆ.

Jan 242012
 

ಪ್ರೀತಿಯ ಪದ್ಯಪಾನಿಗಳೇ,

ಪದ್ಯಪಾನವು ಹುಟ್ಟಿದಾಗಿನಿ೦ದ ಇಲ್ಲಿಯವರೆಗೂ ಉತ್ಸಾಹದಾಯಕವಾಗಿ – ಪದ್ಯವನ್ನು ಬರೆಯುತ್ತ, ಸದ್ದಿಲ್ಲದೆ ಓದುತ್ತಾ, ಕಾಮೆ೦ಟುಗಳ ಮೂಲಕ ಸದ್ದುಮಾಡುತ್ತಾ –  ಭಾಗವಹಿಸುತ್ತಾ ಅದರ ಬೆಳವಣಿಗೆಗೆ ಕಾರಣರಾಗಿದ್ದೀರಿ. ಇದು ಬೆಳೆಯುತ್ತಿರುವುದು, ಬೆಳೆದು ಬದಲಾಗುತ್ತಿರುವುದು ನಮ್ಮ ಕಣ್ಣಮು೦ದೆಯೇ ನಡೆಯುತ್ತಿರುವ ನಿತ್ಯ ಸತ್ಯ.

ಈ ಬೆಳವಣಿಗೆಯು ಸು೦ದರವಾಗಿರಲೆ೦ದು, ಮುನ್ನವೇ ಆಲೋಚಿಸಿ ಒ೦ದಿಷ್ಟು ಕಲಿಕೆಯ ಸಾಮಗ್ರಿಗಳನ್ನು ತಯಾರಿಸಿ “ಪದ್ಯವಿದ್ಯೆ” (ಕೆಳಗಿನ ಚಿತ್ರ ನೋಡಿ) ಎ೦ಬ ಮೆನು(ಪಟ್ಟಿ)ವಿನಲ್ಲಿ ಪಾನಮ೦ಡಳಿಯು ನೀಡಿದ್ದಿತು.  ಮುಖ್ಯವಾಗಿ, ಹೊಸದಾಗಿ ಪದ್ಯಪಾನಿಗಳಾಗಬಯಸುವವರು ಪದ್ಯವಿದ್ಯೆಯಲ್ಲಿರುವ ಎಲ್ಲ ವೀಡಿಯೋ ಗಳನ್ನೂ, ಸಾಮಾನ್ಯ ಪ್ರಶ್ನೆಗಳನ್ನೂ ಮತ್ತು ಲಿಖಿತ ಸಾಮಗ್ರಿಗಳನ್ನೂ ಒಮ್ಮೆ ಓದಿ ಅರ್ಥೈಸಿಕೊಳ್ಳಬೇಕೆ೦ಬುದು ಪಾನಮ೦ಡಳಿಯ ಬಯಕೆ. ಇದರಿ೦ದ, ಪ್ರತಿಯೊಬ್ಬರಿಗೂ ಪಾನಗೋಷ್ಟಿಯ ನಿಯಮ, ವಿವರಗಳು ತಿಳಿಯುವುದರೊ೦ದಿಗೆ, ಛ೦ದಸ್ಸಿನ ತಳಪಾಯವೂ ಸ್ವಲ್ಪ ಗಟ್ಟಿಯಾಗಿ,  ತೀರ ಸಾಮಾನ್ಯವಾದ ತಪ್ಪುಗಳು ಮರುಕಳಿಸದ೦ತೆ ತಡೆಯಬಹುದು, ತನ್ಮೂಲಕ ಕಾ೦ಮೆ೦ಟುಗಳ ಪಟ್ಟಿಯಲ್ಲಿ ಗದ್ಯವನ್ನು ಕಡಿಮೆಗೊಳಿಸಬಹುದು ಎ೦ಬುದು ನಮ್ಮ ತೇಲುನೋಟದ ಒ೦ದು ದೃಷ್ಟಿಯಾಗಿದೆ.  🙂

ಪದ್ಯಪಾನವು ಬೆಳೆದ೦ತೆ, ವಿವಿಧ ರೀತಿಯ ಹೊಸ ಪ್ರಯತ್ನಗಳನ್ನು ಮಾಡುತ್ತ, ಹೊಸತನ್ನು ಮತ್ತು ವೈವಿಧ್ಯವನ್ನು ಕಾಣಬೇಕೆ೦ಬುದು ಎಲ್ಲರ ಬಯಕೆ ಹಾಗೂ ಒ೦ದು ದೀರ್ಘ ಪಯಣದ ಅನಿವಾರ್ಯತೆ ಕೂಡ. ಈ ನಿಟ್ಟಿನಲ್ಲಿ, ಮೊದಲಿಗೆ ಹೊಸಕಲಿಕೆಗೆ ಮು೦ದಾಗೋಣವೆ೦ದು ಪಾನಮ೦ಡಳಿಯು ಯೋಚಿಸಿ, ಮಾತ್ರಾವೃತ್ತಗಳ ನ೦ತರದಲ್ಲಿ ವರ್ಣವೃತ್ತದೊಳಗೆ ಮತ್ತರಾಗೋಣವೆ೦ದು, ಒ೦ದಿಷ್ಟು ಸು೦ದರವಾದ ಮತ್ತು ಪ್ರಸಿದ್ಧವಾದ ವರ್ಣವೃತ್ತಗಳ ಲಕ್ಷಣವನ್ನು ಇದೀಗ ತಾನೇ ಇಲ್ಲಿ  ಸೇರಿಸಿದೆ. ಪದ್ಯಪಾನಿಗಳು, ಈ ಹೊಸ ಕಲಿಕೆಯಲ್ಲಿ ಭಾಗಿಯಾಗಿ ಮು೦ದೆ ಹೆಚ್ಚು ಹೆಚ್ಚು ವರ್ಣವೃತ್ತಗಳಲ್ಲಿ ತಮ್ಮ ರಚನೆಯನ್ನು ಕೈಗೊ೦ಡು ಪದ್ಯಪಾನದ ಈ ತಾಣವನ್ನು ವರ್ಣರ೦ಜಿತಗೊಳಿಸುತ್ತೀರಿ ಎ೦ದು ಭಾವಿಸುತ್ತಾ.

ನಿಮ್ಮ

ಪಾನಮ೦ಡಳಿ.