ಗರ,ದರ,ಸರ,ಕರ ಈ ಪದಗಳನ್ನು ಉಪಯೋಗಿಸಿ ಸಮುದ್ರ ಮಥನವನ್ನು ಕುರಿತು ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ಬರೆಯಿರಿ
(ಶ್ರೀ ಕೃಷ್ಣರಾಜ ಅವರು ಶತಾವಧಾನದಲ್ಲಿ ನೀಡಿದ ದತ್ತಪದಿ)
ಸದ್ಯದ ಶತಾವಧಾನದಲ್ಲಿ ಶ್ರೀ ಬಿ. ಆರ್. ಪ್ರಭಾಕರ್ ರವರು ನೀಡಿದ ಸ್ರಗ್ವಿಣೀ ಛಂದಸ್ಸಿನ ಈ ಸಮಸ್ಯೆಗೆ ನಿಮ್ಮ ಪೂರಣಗಳನ್ನು ನೀಡಿರಿ ::
ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ
[ಸಾಗರವು ಆಳದಲ್ಲಿ ಮೊಳಕಾಲಿನಷ್ಟೇ ಎಂಬ ಭಾವ]
ಈ ಸಮಸ್ಯೆಯ ಉಳಿದ ಸಾಲುಗಳನ್ನು ಒದಗಿಸಿ ಸಮಸ್ಯೆಯನ್ನು ಪರಿಹರಿಸಿ
ಸಂಸ್ಕೃತದಲ್ಲಿ
दश भवन्ति मनोभवसायकाः (द्रुतविलम्बिता)
ಕನ್ನಡದಲ್ಲಿ ಪೂರಣ ಮಾಡಬಯಸುವವರಿಗೆ
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ
ಅಥವಾ
ಮನ್ಮಥನ ಬಳಿ ಹತ್ತುಬಾಣಗಳಿರುವುದೇ ನಿಜವೈ (ಭಾಮಿನೀ ಷಟ್ಪದಿ)
Dagger (ಡಾಗರ್/ಡ್ಯಾಗರ್), Gun, Long, Acid (ಆಸಿಡ್) – ಈ ಪದಗಳನ್ನು ಬಳಸಿ ಸತ್ಯಭಾಮೆಯ ಸೆಡವಿಗೆ ಕಾರಣವನ್ನು ಹೇಳಬೇಕು – 19.01.2013ರಂದು ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ನಡೆದ ಶ್ರೀ ರಾ. ಗಣೇಶರ ಅಷ್ಟಾವಧಾನದಲ್ಲಿ ನಾನು ಕೊಟ್ಟ ದತ್ತಪದಿ ಇದು. ಅಂದು ಅವಧಾನಿಗಳ ಪರಿಹಾರ ಇಂತಿತ್ತು:
ಕೊಂಡಾಗರ್ಭ ರವಿಪ್ರಸಾದವಿಭವಪ್ರಖ್ಯಾತಿಯಂ ಪ್ರೀತಿಯಂ
ತೊಂಡಾಗಲ್ ತ್ರಿಜಗನ್ಮನೋಹರವಪುಸ್ಸಂಹಾರದಿಂ ಭಾರದಿಂ|
ಪಾಂಡಿತ್ಯಂ ಕುಲನಾರಿಯಾ ಕಲಹದೊಳ್ ಕಾಲಾಂಗುಲೀತರ್ಜಿತಳ್
ಚಂಡಾಲಿಪ್ರತಿಮಾನಳಾ ಸಿಡುಕಿಗಂ ಶ್ರೀಕೃಷ್ಣನೇ ಕಾರಣಂ||
ಈ ಬರುವ ವಾರದಲ್ಲಿ ಕುಮಾರವ್ಯಾಸ ಜಯಂತಿ. ಆ ನಿಟ್ಟಿನಲ್ಲಿ “ನಾರಣ”(ನಾರಣಾ ಎಂದರೂ ಆದೀತು) ಎಂದು ಪ್ರತಿಪಾದದ ಮೊದಲಲ್ಲಿಯು ಇಟ್ಟು (ಯಮಕಾಲಂಕಾರ) ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯ ಬರೆಯಿರಿ. ಈ ಪದ್ಯವು ಕುಮಾರವ್ಯಾಸನಬಗ್ಗೆಯೊ ಅಥವಾ ಅವನಿಗೆ ಸಂಬಂಧ ಪಟ್ಟ ಯಾವುದೋ ವಿಷಯದ ಬಗ್ಗೆಯೊ ಇದ್ದಲ್ಲಿ ಒಳಿತು.
ಮತ್ತೇಭ ವಿಕ್ರೀಡಿತ ಛಂದಸ್ಸಿನ ಈ ಸಮಸ್ಯಾಪಾದವನ್ನು ಪದ್ಯದ ಉಳಿದ ಪಾದಗಳನ್ನು ಪೂರೈಸಿ ಪರಿಹರಿಸಿರಿ ::
ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
ಈಮೇಲ್, ಚಾಟ್, ಗ್ರಾಮ್, ಫೋನ್(ಅಥವಾ ಪೋನ್) ಈ ಪದಗಳನ್ನು ಉಪಯೋಗಿಸಿ ವಕ್ರಮಾರ್ಗದ ರಾಜಕಾರಣಿಯು ಉದಯೋನ್ಮುಖ ರಾಜಕಾರಣಿಗೆ ಕೊಡುವ ಕಿವಿಮಾತನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ವಿವರಿಸಿ.
(ರಾಘವೇಂದ್ರ ಹೆಬ್ಬಳಲು ಅವರು ಶತಾವಧಾನದಲ್ಲಿ ನೀಡಿದ ದತ್ತಪದಿ)
ಮಂಗಳಮಂಟಪದ ವೇದಿಕೆಯಲ್ಲಿ ಶತಾವಧಾನಿಗಳು ಮತ್ತು ಪೃಚ್ಛಕವಿದ್ವಾಂಸರು.
ಮೊತ್ತ ಮೊದಲ ತುಂಬುಗನ್ನಡದ ಶತಾವಧಾನದ ಅಭೂತಪೂರ್ವ ಯಶಸ್ಸಿನ ಮತ್ತಿನಲ್ಲಿರುವ ಪದ್ಯಪಾನಿಗಳೇ, ನಿಮ್ಮ ನಶೆಗೆ ಕಾರಣವೇನೆ೦ಬುದನ್ನೇ ಈ ವಾರ ಪದ್ಯವಾಗಿಸಿ. ಹೊಸ ಸದಸ್ಯರು ಆದಷ್ಟುಮಟ್ಟಿಗೆ ’ಪದ್ಯವಿದ್ಯೆ’ಯನ್ನು ನೋಡಿ, ವೀಡಿಯೋ ತರಗತಿಗಳನ್ನು ಕೇಳಿ ನ೦ತರ ರಚನೆಯಲ್ಲಿ ತೊಡಗಿಕೊಂಡರೆ ಒಳ್ಳೆಯದು.
ಇದೇ ಸಂದರ್ಭದಲ್ಲಿ, ಈ ಒ೦ದು ಐತಿಹಾಸಿಕ ಕ್ಷಣಗಳನ್ನು ಅನುಭವಿಸಲು ಮತ್ತು ಅದಕ್ಕೆ ಸಾಕ್ಷಿಯಾಗಲು ನೆರವಾದ ಎಲ್ಲ ವೀಕ್ಷಕರಿಗೂ ಪದ್ಯಪಾನದ ಪರವಾಗಿ ಅನ೦ತಾನ೦ತ ವಂದನೆಗಳು.
ಇ೦ತಹಾ ಒಂದು ಮಹಾಯಶಸ್ಸಿಗೆ ಕಾರಣವಾದರೂ ಈ ಕಾರ್ಯಕ್ರಮವನ್ನು ನೋಡಲಾಗದೇ ಪರದೆಯ ಹಿಂದೆಯೇ ಉಳಿದ ಪದ್ಯಪಾನದ ನನ್ನ ಅಣ್ಣ, ತಮ್ಮ, ಅಕ್ಕ ಮತ್ತು ತಂಗಿಯರಿಗೆ ಏನೆಂದು ಹೇಳುವುದು. ಮಾತಿಲ್ಲ, ಹೃದಯತುಂಬಿಬರುತ್ತಿದೆಯಷ್ಟೆ.
ಇದೇ ವರ್ಷದ ಆದಿಯಲ್ಲಿ ಶುರುವಾದ ಈ ಕಾರ್ಯಕ್ರಮದ ಕಲ್ಪನೆ-ಯೋಜನೆಗಳು ಈ ಮಟ್ಟಕ್ಕೆ ಬ೦ದು ಮುಟ್ಟಿ, ಪ್ರಪ೦ಚದಾದ್ಯ೦ತ ಸಹೃದಯರು ಕೂತು ನೋಡುವಂತಾಗಿದೆಯೆಂದರೆ, ಇದರ ಹಿಂದಿನ, ಕೈ, ತಲೆ ಮತ್ತು ಮನಸ್ಸುಗಳು ಎಂತಹಾ ನಿಸ್ವಾರ್ಥತೆಯಿಂದ ದುಡಿದಿರಬೇಕೆಂಬುದನ್ನು ನೀವೆಲ್ಲರೂ ಊಹಿಸಬಲ್ಲಿರಿ. ಜೊತೆಗೆ ಆ ರೀತಿಯ ನಿಸ್ವಾರ್ಥತೆ ಮತ್ತು ಅಗಾಧವಾದ ಪ್ರೀತಿಯ ಕೇಂದ್ರ ಯಾರೆಂದುಕೂಡ ಮತ್ತೆಹೇಳಬೇಕಿಲ್ಲ.
ಹೀಗೆ ಅನೇಕರೀತಿಯಲ್ಲಿ ನಮಗೆ ನೆರವಾದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಈ ಎಲ್ಲರಿಗೂ ನಮ್ಮ ಅನಂತಾನಂತ ವಂದನೆಗಳು:
೧. ಇನ್ಫೋಸಿಸ್ ಪ್ರತಿಷ್ಠಾನ – ಉದಾರ ಧನ ಮತ್ತು ಪ್ರೀತಿಯ ಪ್ರೋತ್ಸಾಹ ನೀಡಿ ಹರಸಿದ್ದಕ್ಕೆ ನಮನಗಳು. ಸುಧಾಮೂರ್ತಿಯವರಿಗೆ ಮತ್ತು ಅವರನ್ನು ಪದ್ಯಪಾನಕ್ಕೆ ಪರಿಚಯಿಸಿದ ಲಕ್ಷ್ಮೀ ಉಪಾಧ್ಯಾಯ ಅವರಿಗೆ.
೨. ಅಭಿನವ ಡಾನ್ಸ್ ಕಂಪನಿ ಮತ್ತು ಪ್ರಭಾತ್ ಕಲಾವಿದರು – ರ೦ಗವಿನ್ಯಾಸ, ಬೆಳಕು, ಧ್ವನಿ ಮತ್ತು ನಮ್ಮ ಬೆನ್ನು ತಟ್ಟಿ ಜೊತೆಜೊತೆಗೇ ನಡೆದು ಹಾರೈಸಿದ ರಾಜೇಂದ್ರ ಮತ್ತು ನಿರುಪಮಾರವರು.
೩. ಆರ್. ವಿ. ಸಂಸ್ಕೃತ ಅಧ್ಯಯನಕೇಂದ್ರ – ಉಚಿತವಾಗಿ ಮಂಗಳಮಂಟಪವನ್ನು ನೀಡಿದ್ದಲ್ಲದೆ, ಕಾರ್ಯಕ್ರಮಕ್ಕೆ ಯಾವುದೇ ರೀತಿಯ ವಿಘ್ನವಾಗದಂತೆ ನೋಡಿಕೊಂಡ ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಸಿಬ್ಬಂದಿಗೆ, ಪ್ರಾಂಶುಪಾಲರಾದ ಎ.ಎಸ್.ಜಲಜಾರವರಿಗೆ ಮತ್ತು ವಿಶೇಷವಾಗಿ ನಮ್ಮ ಹಿತೈಷಿಗಳಾದ ಡಾ|| ಎಸ್. ರಂಗನಾಥ್ ಅವರಿಗೆ.
೪. ಧಾತು, ಬೆಂಗಳೂರು – ಕಾರ್ಯಕ್ರಮದ ಆಯೋಜನೆಯ ಪ್ರತಿಹಂತದಲ್ಲಿಯೂ ಅವರ ಅನುಭವಗಳನ್ನು ಧಾರೆಯೆರೆದು, ಕಲ್ಪನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಹಕರಿಸಿದ ಮತ್ತು ಮೆರವಣಿಗೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಹಾಗೂ ಅಚ್ಚುಕಟ್ಟಾಗಿ ನಿರೂಪಣೆಯನ್ನು ನಡೆಸಿಕೊಟ್ಟ ಅನುಪಮ ಮತ್ತು ವಿದ್ಯಾಶಂಕರ್ ಹೊಸಕೆರೆ.
೫. ವಿನೋದ್ ಕುಮಾರ್ – ಶತಾವಧಾನದ ಕೆಲಸಗಳಿಗೆ ಚಾಲನೆ ದೊರೆತದ್ದೇ ಅವಧಾನಿಗಳ ಫೋಟೋಶೂಟ್ ನಿಂದ. ಅವಧಾನಿಗಳ ಫೋಟೋಗಳು ಇಂದು ಅನೇಕ ಪತ್ರಿಕೆಗಳಲ್ಲಿ ಮತ್ತು ಪುಸ್ತಕ, ಪೋಸ್ಟರ್ ಗಳಲ್ಲಿ ರಾರಾಜಿಸಲಿಕ್ಕೆ ಕಾರಣರಾದ ವಿನೋದ್ ಕುಮಾರ್.
೬. ವಿನಯ್ ಹೆಗ್ಗಡೆ – ಅವಧಾನ ಕಲೆ ಮತ್ತು ಶತಾವಧಾನಸಂಶನ ಪುಸ್ತಕದ ಮುಖಪುಟವಿನ್ಯಾಸ ಮತ್ತು ಅದ್ಭುತವಾದ ಪೋಸ್ಟರ್ ಗಳ ವಿನ್ಯಾಸಮಾಡಿಕೊಟ್ಟ ವಿನಯ್ ಹೆಗ್ಗಡೆ.
೭. ಶ್ರೀಶ ಕೂದುವಳ್ಳಿ – ಕಾರ್ಯಕ್ರಮದ ವೀಡಿಯೋ ಸೆರೆಹಿಡಿದು ಪ್ರಪಂಚದಾದ್ಯಂತ ರಸಿಕರು ನೋಡಲು ಸಾಧ್ಯವಾಗುವಲ್ಲಿ ಸಹಕರಿಸಿದ, ಶ್ರೀಶ ಮತ್ತು ಶ್ರೀವತ್ಸ ತಂಡ.
೮.ಸಾಹಿತ್ಯಸಿಂಧುಪ್ರಕಾಶನ – ನಮ್ಮ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮುದ್ರಿಸಿಕೊಟ್ಟ ರಾಷ್ಟ್ರೋತ್ಥಾನದ ಸಾಹಿತ್ಯಸಿಂಧುಪ್ರಕಾಶನ.
೯. ರಾಘವೇಂದ್ರ ಹೆಗ್ಗಡೆ – ಶತಾವಧಾನದ ಆಯೋಜನೆಯ ಮೂಲಕಲ್ಪನೆಯನ್ನೇ ಎತ್ತರಿಸಿದ ಹಾಗೂ ರಂಗಸಜ್ಜಿಕೆ ಮತ್ತಿತರ ಕಾರ್ಯಗಳಲ್ಲಿ ಸಹಕರಿಸಿದ ಸಕಲಾ ಸ್ಟೂಡಿಯೋದ ರಾಘವೇಂದ್ರ ಹೆಗ್ಗಡೆ.
೧೦. ಗಾಯತ್ರಿ ಪ್ರಿಂಟ್ಸ್ – ಅಚ್ಚುಕಟ್ಟಾಗಿ ಆಹ್ವಾನ ಪತ್ರಿಕೆ, ಬ್ಯಾಡ್ಜ್, ಸ್ಟಿಕರ್ ಮತ್ತಿತರೆ ಮುದ್ರಣಕಾರ್ಯಗಳಲ್ಲಿ ಸಹಕರಿಸಿದ ನಮ್ಮವರೇ ಆದ ರಜನೀಶ.
೧೧. ಶ್ರೀನಿಧಿ ಕೇಟರರ್ಸ್ – ಕಾರ್ಯಕ್ರಮದಲ್ಲಿ ಊಟೋಪಚಾರದ ಹೊಣೆಹೊತ್ತ ಶ್ರೀನಿಧಿ ಕೇಟರರ್ಸ್.
೧೨. ನಮ್ಮ ಸ್ಮರಣಸಂಚಿಕೆಗೆ ಲೇಖನ ಬರೆದುಕೊಟ್ಟ ಮತ್ತು ಆಶೀರ್ವಚನಗಳನ್ನು ನೀಡಿದ ಎಲ್ಲ ಹಿರಿಯರು.
೧೩. ಕಾರ್ಯಕ್ರಮದ ಆಧಾರಸ್ತಂಭಗಳಾದ ಪೃಚ್ಛಕವಿದ್ವಾಂಸರು.
೧೪. ಪ್ರತಿಹಂತದಲ್ಲಿಯೂ ನಮಗೆ ಸಲಹೆ ಸಹಕಾರಗಳನ್ನಿತ್ತ ನಮ್ಮ ಸಲಹಾಸಮಿತಿಯ ಸದಸ್ಯರಾದ – ಪ್ರೊ|| ಪಿ.ವಿ. ಕೃಷ್ಣಭಟ್, ತಿಮ್ಮಪ್ಪ ಭಟ್ ಮತ್ತು ಶ್ರೀನಿವಾಸ ರಾಜು ಅವರು..
೧೫. ಈ ಕಾರ್ಯಕ್ರಮಕ್ಕೆ ಪ್ರೇರಣೆ, ಪ್ರೀತಿ, ಉತ್ಸಾಹವನ್ನು ತುಂಬಿದ ನಮ್ಮ ಸಲಹಾಸಮಿತಿಯ ಸದಸ್ಯರೂ ಆದ ನಮ್ಮೆಲ್ಲರಿಗೆ ಆತ್ಮೀಯರಾದ ಡಾ|| ಎಸ್. ಆರ್. ರಾಮಸ್ವಾಮಿಯವರು.
ಈ ರಸದೌತಣವನ್ನು ನಮಗೆ ಉಣ ಬಡಿಸಿದ, ನಮ್ಮೆಲ್ಲರನ್ನು ಮೂರುದಿನಗಳಕಾಲ ಮಂತ್ರಮುಗ್ಧರನ್ನಾಗಿಸಿದ ಮತ್ತು ನಮ್ಮ ಇಂದಿನ ಮೇರೆಮೀರಿದ ಆನಂದಕ್ಕೆ ಕಾರಣರಾದ, “ಶತಾವಧಾನಶಾರದಾಶಾರದಶರ್ವರೀಶಶಾಂಕ” ರಿಂದ ಈಗ ನಮ್ಮ ಮೇಲೆ ಇರುವ ಆನಂದದ ಋಣವನ್ನು ಕಡಿಮೆಗೊಳಿಸಲು ನಾವೆಲ್ಲ ಕೂಡಿ ಮು೦ದೆ ಇದೇ ರೀತಿಯಲ್ಲಿ ಶ್ರಮಿಸೋಣ, ಸಾಹಿತ್ಯ, ಸಂಸ್ಕೃತಿ, ಕಲಾಲೋಕದಲ್ಲಿ ಏನಾದರೂ ಸಾಧಿಸೋಣ ಎಂದು ಆಶಿಸುತ್ತಾ.
~ಪದ್ಯಪಾನಿ(ಎಲ್ಲರ ಪರವಾಗಿ)
ವಿ.ಸೂ. ಪದ್ಯಪಾನದ ಮುಂದಿನಕಾರ್ಯಕ್ರಮಗಳಿಗೆ ಸಹಕಾರ ನೀಡುವ ಮನಸ್ಸಿದ್ದಲ್ಲಿ ಇಲ್ಲಿ ನೋಡಿ.
ಪದ್ಯಪಾನದಲ್ಲಿ ಪುಷ್ಪೋತ್ಸವ! ನಿಮಗಿಷ್ಟವಾದ ಹೂವಿನ ಬಗೆಗೆ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿ.
ಪದ್ಯನಿದರ್ಶನಂ – ೪:
ಪಂಪನ ಆದಿಪುರಾಣದಿಂದ (ಚಂಪಕಮಾಲೆ):
ಎಸೞ್ಗಳನೆಯ್ದೆ ಕಂಡರಿಸಿ ಮುತ್ತಿನೊಳಲ್ಲಿ ಸುವರ್ಣಚೂರ್ಣಮಂ
ಪಸರಿಸಿ ಕೇಸರಾಕೃತಿಯೊಳಲ್ಲಿಗೆ ಕರ್ಣಿಕೆಯಂದಮಾಗೆ ಕೀ
ಲಿಸಿ ಪೊಸತಪ್ಪ ಮಾಣಿಕದ ನುಣ್ಬರಲಂ ಮಧು ಮನ್ಮಥಂಗೆ ಬ
ಣ್ಣಿಸಿ ಸಮೆದಂತೆ ತೋಱುವುದು ಪೂಗಳೊಳೇಂ ಸುರಹೊನ್ನೆ ಚೆನ್ನಮೋ
[ಉಚ್ಛಾರದಲ್ಲಿ ೞ್ ಳ್ ಗೂ, ಱ್ ರ್ ಗೂ ಸಮೀಪ.]
ಎಯ್ದೆ = ಚೆನ್ನಾಗಿ, ವಿಶೇಷವಾಗಿ. ಕರ್ಣಿಕೆ = ಹೂವೊಂದರ ನಟ್ಟನಡುವಿನ ಭಾಗ. ನುಣ್ಬರಲಂ = ನುಣ್ + ಪರಲಂ, ಪರಲಂ = ನುಣ್ಣಗಿರುವ ಚೂರು
ಎಸೞ್ಗಳ = ಶಿಥಿಲದ್ವಿತ್ವವಿರುವುದರಿಂದ, ಇಲ್ಲಿ ಎಲ್ಲವೂ ಲಘುವೇ ಆಗಿರುತ್ತವೆ. ಚಿತ್ರ ಇಲ್ಲಿದೆ.
ಶತಾವಧಾನಸಂಭ್ರಮಂ:
ಇನ್ನುಂದು ವಾರದಲ್ಲಿ ಶತಾವಧಾನಾರಂಭ. ವಿವರಗಳು ಇಲ್ಲಿವೆ.
ಕನಸೊಳ್ ಕೊಂಡಿಹ ಸಾಲಮಂ ನನಸಿನೊಳ್ ತೀರ್ಚಿರ್ಪುದೇ ಸಮ್ಮತಂ
ಈ ಸಮಸ್ಯೆಯನ್ನು ಮತ್ತೇಭವಿಕ್ರೀಡಿತದಲ್ಲಿ ಪರಿಹರಿಸಿ. ಈ ಛಂದಸ್ಸಿನ ಗತಿ ಹೀಗಿದೆ:
ನನನಾನಾನನನಾನನಾನನನನಾ|ನಾನಾನನಾನಾನನಾ
ಗತಿಗಾಂಭೀರ್ಯದತುಂಬುಚೆಲ್ವುಮೆರೆಯಲ್ಮತ್ತೇಭವಿಕ್ರೀಡಿತಂ
ಪದ್ಯನಿದರ್ಶನಂ ೩:
ರನ್ನನ ಗದಾಯುದ್ಧದಿಂದ:[ಮತ್ತೇಭವಿಕ್ರೀಡಿತ]
ಎನಿತುಂ ದ್ರೌಪದಿ ಮುಕ್ತಕೇಶಿ ನಮೆವಳ್ ತದ್ದುಃಖಮಂ ಕಂಡು ಕಂ-
ಡೆನಿತುಂ ಸೈರಿಪೆವಾನುಮೆನ್ನನುಜರುಂ ಪಾಂಚಾಲಿಯಂ ನೋಡಿ ನೀಂ
ಮನದೊಳ್ ನೋವುದುಮಿಲ್ಲ ನಿಷ್ಕರುಣಿಯಯ್ ನೀನಿಂತಿರಾನನ್ನೆಗಂ
ಮುನಿಸಂ ತೀರ್ಚಿ ನರೇಂದ್ರವೈರಿತರುವಂ ನಿರ್ಮೂಲನಂ ಮಾಡುವೆಂ
[ಸೈರಿಪೆವಾನುಮೆನ್ನನುಜರುಂ = ಸೈರಿಪೆವ್ ಆನುಮ್ ಎನ್ನನುಜರುಂ, ನೀನಿಂತಿರಾನನ್ನೆಗಂ = ನೀನಿಂತಿರೆ ಆನ್ ಅನ್ನೆಗಂ]
ಹಳಗನ್ನಡ ವಿಭಕ್ತಿಪ್ರತ್ಯಯಗಳು ೧:
ರಾಮನು = ರಾಮಂ, ರಾಮನೂ = ರಾಮನುಂ, ರಾಮನನ್ನು = ರಾಮನಂ ರಾಮನಿಂದ = ರಾಮನಿಂ, ರಾಮನಿಂದಂ, ರಾಮನಿಂದಲ್ ರಾಮನಿಗೆ = ರಾಮಗಂ, ರಾಮಕ್ಕಂ, ರಾಮನ = ರಾಮನ, ರಾಮನಲ್ಲಿ = ರಾಮನೊಳ್. ಓ ರಾಮ = ರಾಮನೆ!, ರಾಮನೇ!, ರಾಮ!, ರಾಮಾ!.


