Oct 302012
 

ತನ್ನಂ ತಾನೆ ಪೊಗಳ್ವುದು
ಬನ್ನಮದುತ್ತರನ ಪೌರುಷಂ ಚಿಃ ಪೊಲ್ಲಂ|
ಮುನ್ನಂ ಯೋಚಿಸಲಕ್ಕುಂ
ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ||

ಸಮಸ್ಯೆ: ತನ್ನಂ ತಾನೆ ಪೊಗಳಾಡಿಕೊಳ್ವುದೆ ಚೆನ್ನಂ||
ಕಂದದೊಳ್ ಪರಿಹರಿಸಿಂ

Oct 012012
 

ಈ ಕೆಳಗಿನ ಕಥೆಯ ಸ್ಫೂರ್ತಿಯಿಂದ ತಕ್ಕದಾದ ಪದ್ಯಗಳನ್ನು ರಚಿಸಿರಿ. ಬೇಕಿದ್ದರೆ ಕಥೆಯಲ್ಲಿರುವ ೩ – ೪ ಸನ್ನಿವೇಶಗಳಲ್ಲಿ ಯಾವುದಾದರು ಬಿಟ್ಟು, ಯಾವುದನ್ನಾದರೂ ನಿಮ್ಮ ಕಲ್ಪನೆಯಂತೆ ವಿಸ್ತರಿಸಿ  ರಚಿಸಿರಿ.

ಸಂದರ್ಭ

ಯೋಗಾನಂದ ಎಂಬ ರಾಜನಿಗೆ ವರರುಚಿಯೆಂಬ ವಿದ್ಯಾವಂತನೂ, ಪ್ರತಿಭಾವಂತನೂ ಆದ ಮಂತ್ರಿಯಿದ್ದನು. ಯಾವುದೋ ಕಾರಣಕ್ಕೆ,  ಚಾಣಾಕ್ಷನೂ, ದೇಶಪ್ರೇಮಿಯೂ ಆದ ಶಕಟಾಲನೆಂಬ ಇನ್ನೊಬ್ಬ  ಮಂತ್ರಿಯನ್ನೂ ಅವನ ಮನೆಯವರನ್ನೂ ವರರುಚಿಯು ಹಾಳುಬಾವಿಗೆ ದೂಡಿಸಿದ್ದು, ಶಕಟಾಲನು ಮುಯ್ಯಿ ತೀರಿಸಿಕೊಳ್ಳಲು ಜೀವ ಹಿಡಿದುಕೊಂಡಿದ್ದನು.

ಕಥೆ

ಈ ಕಥೆಯನ್ನು ಹೇಳುತ್ತಿರುವವನು “ವರರುಚಿ”

ಕಾಲಕ್ರಮದಲ್ಲಿ ಯೋಗಾನಂದನು ಕಾಮಿಯೂ ವಿಶೃಂಖಲನೂ ಆದನು. ಆದ್ದರಿಂದ ಶಕಟಾಲನ ಸಹಾಯವಿರುವುದು ಒಳ್ಳೆಯದೆಂದು ನಾನು ಅವನನ್ನು ಎತ್ತಿ ತರಿಸಿ ಮತ್ತೆ ಮಂತ್ರಿಯಾಗಿ ಮಾಡಿದೆ. ಅವನು ಕಾಲವನ್ನು ನಿರೀಕ್ಷಿಸುತ್ತಾ ನಮ್ರನಾಗಿ ನಡೆದುಕೊಳ್ಳುತ್ತಿದ್ದನು.

ಒಂದು ದಿನ ಯೋಗಾನಂದನು (ರಾಜನು) ಊರ ಹೊರಗೆ ಸಂಚಾರ ಮಾಡುತ್ತಾ ಗಂಗೆಯಲ್ಲಿ ಐದು ಬೆರಳುಗಳೂ ಕೂಡಿಕೊಂಡಿದ್ದ ಒಂದು ಹಸ್ತ ಮೇಲಕ್ಕೆ ಎದ್ದಿರುವುದನ್ನು ನೋಡಿದನು. ಕೂಡಲೆ ನನ್ನನ್ನು ಕರೆಸಿ ಅದೇನು ಎಂದು ಕೇಳಿದನು. ನಾನು ಅದಕ್ಕೆ  ಪ್ರತಿಯಾಗಿ ಎರಡು ಬೆರಳುಗಳನ್ನು ತೋರಿಸಲು, ಆ ಹಸ್ತವು ಅದೃಶ್ಯವಾಯಿತು. ರಾಜನಿಗೆ ಇನ್ನೂ ಆಶ್ಚರ್ಯವಾಗಿ ಅದರ ಅರ್ಥವನ್ನು ಕೇಳಿದನು. ನಾನು “ಐದು ಜನ ಒಟ್ಟುಗೂಡಿದರೆ ಈ ಜಗತ್ತಿನಲ್ಲಿ ಅಸಾಧ್ಯವಾಗಿರುವುದೂ ಉಂಟೇ? ಎಂದುಆ ಹಸ್ತವು ಸೂಚಿಸಿತು. ನಾನು “ಒಂದೇ ಮನಸ್ಸಿನ ಇಬ್ಬರು ಸೇರಿದರೂ ಸಾಕು. ಯಾವುದೂ ಅಸಾಧ್ಯವಾಗುವುದಿಲ್ಲ” ಎಂದು ಎರಡು ಬೆರಳನ್ನು ತೋರಿಸಿದೆ – ಎಂದೆನು.

ಒಂದುಸಾರಿ ಯೋಗಾನಂದನ ರಾಣಿಯು ಕೆಳಗೆ ಹೋಗುತ್ತಿದ್ದ ಒಬ್ಬ ಬ್ರಾಹ್ಮಣನನ್ನು ನೋಡಿದಲು. ಅವನೂ ಕತ್ತೆತ್ತಿ ನೋಡಿದನು. ಅಷ್ಟು ಮಾತ್ರಕ್ಕೇ ಅವನು ಆ ಬ್ರಾಹ್ಮಣನನ್ನು ಕೊಲ್ಲಿಸಲು ಆಜ್ಞೆ ಮಾಡಿದನು. ಅವನನ್ನು ವಧ್ಯ ಭುಮಿಗೆ ಕರೆದುಕೊಂಡು ಹೋಗುತ್ತಿರುವಾಗ ಅಂಗಡಿಯಲ್ಲಿದ್ದ ಒಂದು ಸತ್ತ ಮೀನು ಅದನ್ನು ನೋಡಿ ನಕ್ಕಿತು. ಅದು ರಾಜನಿಗೆ ತಿಳಿಯಿತು. ಆಗ ವಧೆಯನ್ನು ನಿಲ್ಲಿಸಿ ರಾಜನು ಆ ಸತ್ತ ಮೀನು ನಕ್ಕದ್ದು ಹೇಗೆ, ಏಕೆ ಎಂದು ಕೇಳಿದನು. ಮರುದಿನ ಬೆಳೆಗ್ಗೆ ಹೋಗಿ ನಾನು “ಅಂತಃಪುರದ ತುಂಬ ಗಂಡಸರಿದ್ದಾರೆ; ಅದು ತಿಳಿಯದೆ ರಾಜನು ನಿರಪರಾಧಿಯಾದ ಒಬ್ಬ ಬ್ರಾಹ್ಮಣನನ್ನು ಕೊಲ್ಲಿಸುತ್ತಿದ್ದಾನಲ್ಲ” ಎಂದು ನಕ್ಕಿತು – ಎಂದು ಹೇಳಿದೆ. ಆದ್ದರಿಂದ ಆ ಬ್ರಾಹ್ಮಣನು ಬದುಕಿಕೊಂಡನು.

ಮತ್ತೊಂದು ಸಾರಿ ಒಬ್ಬ ಚಿತ್ರಗಾರನು ಯೋಗಾನಂದನ ಮತ್ತು ಅವನ ಹೆಂಡತಿಯ ಚಿತ್ರವನ್ನು ಬರೆದನು. ಅದು ಸಜೀವದಂತೆ ತೋರುತ್ತಿತ್ತು. ನಾನು ಅದನ್ನು ನೋಡಿ, ಮಿಕ್ಕ ಲಕ್ಷಣಗಳಿಂದ ರಾಣಿಯ ಸೊಂಟದ ಹತ್ತಿರ ಒಂದು ಮ್ಮಚ್ಚೆಯನ್ನು ಊಹಿಸಿ ಬರೆದೆ. ಆಗ ಚಿತ್ರವು ಪೂರ್ಣವಾಯಿತೆಂದು ರಾಜನು “ಇದು ರಹಸ್ಯವಾಗಿರುವ ಸಂಗತಿ; ಇವನಿಗೆ ಹೇಗೆ ಗೊತ್ತಾಯಿತು? ಇವನಿಗೆ ಅಂತಃಪುರದೊಳಗೆ ಪ್ರವೇಶವಿದ್ದಿರಬೇಕು. ಅಂತಃಪುರದೊಳಗ್ಗೆ ಗಂಡಸರಿದ್ದದ್ದನ್ನೂ ಇವನು ಹೀಗೆಯೇ ತಿಳಿದಿರಬೇಕು” ಎಂದು ಭ್ರಾಂತಿಪಟ್ಟು , ನನ್ನ ಮೇಲೆ ಕೋಪಗೊಂಡು, ನನ್ನನ್ನು ಕೊಲ್ಲಿಸುವಂತೆ ಶಕಟಾಲನಿಗೆ ಆಜ್ಞೆ ಮಾಡಿದನು.

ಕಥೆಯ ಕೃಪೆ – ಕಥಾಸರಿತ್ಸಾಗರ ಮೂಲದ ಕನ್ನಡಲ್ಲಿ ಸಂಕೀರ್ಣ-ಸಂಗ್ರಹಗ್ರಂಥವಾದ ಎ.ಅರ್. ಕೃಷ್ಣಶಾಸ್ತ್ರಿಗಳ ಕಥಾಮೃತ