Feb 252013
 

ಕುಮಾರವ್ಯಾಸನ ಈ ಪದ್ಯದ ವಿಡಂಬನ (parody) ಮಾಡಿರಿ. ಛಂದಸ್ಸು ನಿಮ್ಮ ಆಯ್ಕೆಯದು.

ಹಲಗೆಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ|
ಬಳಸಿಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ||

This is what I got when I looked up ‘PARODY’ in Monier Williams dictionary:

पशुगायत्री A parody of the sacred गायत्री whispered into the ear of a sacrificial animal:पशु-पाशाय विद्महे शिरश्-छेदाय धीमहि

तन् नः पशुः प्रचोदयात्|

Feb 182013
 

ಈ ಸಮಸ್ಯೆಯ ಉಳಿದ ಸಾಲುಗಳನ್ನು ಒದಗಿಸಿ ಸಮಸ್ಯೆಯನ್ನು ಪರಿಹರಿಸಿ

ಸಂಸ್ಕೃತದಲ್ಲಿ

दश भवन्ति मनोभवसायकाः   (द्रुतविलम्बिता)

ಕನ್ನಡದಲ್ಲಿ ಪೂರಣ ಮಾಡಬಯಸುವವರಿಗೆ

ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ

ಅಥವಾ

ಮನ್ಮಥನ ಬಳಿ ಹತ್ತುಬಾಣಗಳಿರುವುದೇ ನಿಜವೈ  (ಭಾಮಿನೀ ಷಟ್ಪದಿ)

 

Feb 042013
 

Dagger (ಡಾಗರ್/ಡ್ಯಾಗರ್), Gun, Long, Acid (ಆಸಿಡ್) – ಈ ಪದಗಳನ್ನು ಬಳಸಿ ಸತ್ಯಭಾಮೆಯ ಸೆಡವಿಗೆ  ಕಾರಣವನ್ನು ಹೇಳಬೇಕು – 19.01.2013ರಂದು ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ನಡೆದ ಶ್ರೀ ರಾ. ಗಣೇಶರ ಅಷ್ಟಾವಧಾನದಲ್ಲಿ ನಾನು ಕೊಟ್ಟ ದತ್ತಪದಿ ಇದು. ಅಂದು ಅವಧಾನಿಗಳ ಪರಿಹಾರ ಇಂತಿತ್ತು:

ಕೊಂಡಾಗರ್ಭ ರವಿಪ್ರಸಾದವಿಭವಪ್ರಖ್ಯಾತಿಯಂ ಪ್ರೀತಿಯಂ

ತೊಂಡಾಗಲ್ ತ್ರಿಜಗನ್ಮನೋಹರವಪುಸ್ಸಂಹಾರದಿಂ ಭಾರದಿಂ|

ಪಾಂಡಿತ್ಯಂ ಕುಲನಾರಿಯಾ ಕಲಹದೊಳ್ ಕಾಲಾಂಗುಲೀತರ್ಜಿತಳ್

ಚಂಡಾಲಿಪ್ರತಿಮಾನಳಾ ಸಿಡುಕಿಗಂ ಶ್ರೀಕೃಷ್ಣನೇ ಕಾರಣಂ||

Feb 022013
 

ಎಲ್ಲ ಪದ್ಯಪಾನಿಗಳಿಗೆ ನಮಸ್ಕಾರ. ಈ ವೇದಿಕೆಯಲ್ಲಿ ಹಲವು ಹತ್ತು ಬಾರಿ ಅರಿಸಮಾಸ, ಶಿಥಿಲದ್ವಿತ್ವ, ಹಳಗನ್ನಡ/ನಡುಗನ್ನಡವ್ಯಾಕರಣಶುದ್ಧತೆ ಇತ್ಯಾದಿ ವಿಚಾರಗಳು ಚರ್ಚೆಗೆ ಬರುತ್ತಿವೆ ಮತ್ತು ಎಲ್ಲವೂ ತುಂಬ ಆರೋಗ್ಯಕರವಾದ ನಿರಭಿನಿವಿಷ್ಟವೂ ಆದ ಅಧ್ಯಯನ ಮತ್ತು ಜಿಜ್ಞಾಸೆಗಳಿಂದ ಕೂಡಿದ್ದು, ಪರಸ್ಪರ ಕೊಡುಕೊಳ್ಳುವಿಕೆಯ ಮೈತ್ರೀಭಾವದಿಂದಲೇ ಸಾಗಿವೆ. ಈ ಸೌಖ್ಯ-ಸಂತೋಷಗಳಿಗಾಗಿ ಎಲ್ಲ ಗೆಳೆಯರಿಗೂ ಧನ್ಯವಾದ. ಆದರೆ ಕೆಲವೊಮ್ಮೆ ಹಳೆಯ ಚರ್ಚೆಗಳೇ ಮರುಕಳಿಸುವಾಗ ಒಂದುಮಟ್ಟದ ಸ್ಪಷ್ಟೀಕರಣವನ್ನು ನೀಡುವುದು ಹಾಗೂ ಪದ್ಯಪಾನದ ಸಾಮಾನ್ಯರೀತಿಯ ನಿಲವನ್ನು ನಿವೇದಿಸುವುದು ಯುಕ್ತವೆಂದು ತೋರಿ ಈ ವಿವರಣೆ:

ಎಲ್ಲರೂ ಬಲ್ಲಂತೆ ಪದ್ಯಪಾನವು ಅಭಿಜಾತಪದ್ಯರಚನೆಯನ್ನೂ ಅದರ ಆಸ್ವಾದ, ಪ್ರಸಾರ ಮತ್ತು ಸಂವಿಭಾಗವನ್ನೂ(ಹಂಚಿಕೊಳ್ಳುವಿಕೆ) ಆಸಕ್ತರ ಮನದಲ್ಲಿ ನೆಲೆಯಾಗಿಸಲು ಹುಟ್ಟಿದ ಅನೌಪಚಾರಿಕ ಸ್ನೇಹಕೂಟ. ಇಂಥ ಪದ್ಯರಚನೆಯು ಸಾವಿರ ವರ್ಷಗಳಿಗೂ ಮಿಕ್ಕ ಕನ್ನಡಸಾಹಿತ್ಯಪರಂಪರೆಯನ್ನು ಅವಲಂಬಿಸಿದೆ. ಇಲ್ಲಿ ಹಳಗನ್ನಡ, ನಡುಗನ್ನಡಗಳೆರಡೂ ಉಂಟು.ಹೊಸಗನ್ನಡವಂತೂ ನಮ್ಮ ಕಾಲದ್ದೇ ಆಗಿ ಇದ್ದೇ ಇದೆ. ಈ ವೇದಿಕೆಯಲ್ಲಿ ಸೇರುವ ನಮ್ಮೆಲ್ಲರ ಉದ್ದೇಶವೂ ನಮ್ಮ ನಮ್ಮ ಭಾಷೆ-ಛಂದಸ್ಸು-ಶೈಲಿ-ವ್ಯಾಕರಣ-ಅಲಂಕಾರಗಳ ಅರಿವು-ಅನ್ವಯಗಳನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವುದರಲ್ಲಿದೆ. ಹೀಗಾಗಿ ನಾವಿಲ್ಲಿ ಸಾಮಾನ್ಯವಾಗಿ  ಪಾಲಿಸುವ ನಿಯಮಗಳೆಂದರೆ ವೃತ್ತ-ಕಂದಗಳನ್ನು ’ಕೂಡಿದಮಟ್ಟಿಗೂ’ ಹಳಗನ್ನಡದಲ್ಲಿಯೂ ಷಟ್ಪದಿ-ಚೌಪದಿ-ಸಾಂಗತ್ಯ-ತ್ರಿಪದಿ-ಸೀಸ-ರಗಳೆ ಮುಂತಾದುವನ್ನು ನಡುಗನ್ನಡದಲ್ಲಿಯೂ ರಚಿಸಬೇಕು; ಲಕ್ಷಣಕ್ಕಿಂತ ಲಕ್ಷ್ಯಕ್ಕೆ (ಕೇವಲ ವ್ಯಾಕರಣದ ನಿಯಮಗಳಿಗಿಂತ ಮಹಾಕವಿಗಳ ಪ್ರಯೋಗಕ್ಕೆ) ಹೆಚ್ಚಿನ ಬೆಲೆಯನ್ನು ನೀಡಬೇಕು; ಹಾಗೂ ಔಚಿತ್ಯವನ್ನು ಗಮನದಲ್ಲಿರಿಕೊಂಡು ಪ್ರಾಯಿಕವಾಗಿ ಶಿಷ್ಟರೂಪಗಳನ್ನೇ ಆದರಿಸಬೇಕೆಂಬುದಾಗಿದೆ.  ಹಾಗೆಂದ ಮಾತ್ರಕ್ಕೆ ಜಾನಪದಪ್ರಯೋಗಗಳಿಗೆ ನಿಷೇಧವೇನಿಲ್ಲ. ಆದರೆ ಅವೆಲ್ಲ ಸಂದರ್ಭೋಚಿತವಾಗಿ ಬರಬೇಕು.ವಿಶೇಷತಃ ಅವುಗಳಿಗೆ ಸಹಜವೂ ಸುಂದರವೂ ಆದ ಛಂದಸ್ಸುಗಳೆನಿಸಿದ ಸಾಂಗತ್ಯ, ತ್ರಿಪದಿ, ಏಳೆ ಮುಂತಾದುವುಗಳಲ್ಲಿ. ಒಟ್ಟಿನಲ್ಲಿ ಛಂದಸ್ಸು ಪ್ರಾಯಿಕವಾಗಿ ನಮ್ಮ ಪದ್ಯಪಾನದ ಪದ್ಯಗಳ ಭಾಷೆಯನ್ನು ನಿರ್ದೇಶಿಸುತ್ತದೆಂದರೆ ಯುಕ್ತವಾದೀತು. ಈ ನಿಲವನ್ನು ವಿದ್ವಾಂಸರಾದ ಡಾ|| ಟಿ.ವಿ. ವೇಂಕಟಾಚಲಶಾಸ್ತ್ರಿಗಳು ಒಮ್ಮೆ ನನಗೆ ಮನವರಿಕೆಮಾಡಿದ್ದರು. ಇದು ಪ್ರಸಿದ್ಧಪೂರ್ವಸೂರಿಗಳಾದ ಡಿವಿಜಿ,ಗೋವಿಂದಪೈ, ಬೀಯಂಶ್ರೀ, ಬೇಂದ್ರೆ, ಕುವೆಂಪು, ಪುತಿನ, ತೀನಂಶ್ರೀ, ಕೆ.ಕೃಷ್ಣಮೂರ್ತಿ ಮುಂತಾದವರಿಗೂ ಒಪ್ಪಿಗೆಯಾದ ಮಾರ್ಗ.

ಈ ಸಂದರ್ಭದಲ್ಲಿ ಮಹಾಕವಿಗಳನ್ನು ಮಾತ್ರ ನಚ್ಚಬೇಕೆಂಬುದು ಹೌದಾದರೂ “ಮಹಾಕವಿಪ್ರಯೋಗ’ವೆಂದು ಹೆಸರಾಗಿರುವ ಹಲಕೆಲವು ಎದ್ದುತೋರುವ ವ್ಯಾಕರಣವಿರುದ್ಧರೂಪಗಳನ್ನು ಬಲುಮಟ್ಟಿಗೆ ಮುಟ್ಟದಿರುವುದು ಯುಕ್ತ. ಜೊತೆಗೆ ಕುಮಾರವ್ಯಾಸನಂಥ ವರಕವಿಯನ್ನು – ಭಾಷೆಯ ಮಟ್ಟಿಗೆ – ಕಣ್ಣು ಮುಚ್ಚಿಕೊಂಡು ಕುರುಡಾಗಿ ಅನುಸರಿಸದಿರುವುದು ಹಾಗೂ ಹರಿದಾಸರ ಮತ್ತು ಜಾನಪದಕವಿಗಳ ಪ್ರಯೋಗಗಳನ್ನು ಮನಸ್ವೀ ಬಳಸದಿರುವುದು ಯೋಗ್ಯ. ಏಕೆಂದರೆ ನಾವೆಲ್ಲ ಅಭ್ಯಾಸಿಗಳು; ಭಾಷೆ-ಛಂದಸ್ಸು-ಅಲಂಕಾರಗಳಂಥ ಸಾಹಿತ್ಯವಿದ್ಯೆಯ ’ರೂಪ’ವನ್ನು ಚೆನ್ನಾಗಿ ಅರಿತು ಆ ಬಳಿಕ (ಅಥವಾ ಜೊತೆಜೊತೆಗೇ ಎಂದರೆ ಮತ್ತೂ ಸರಿಯಾದೀತು:-) ಅದರ ’ಸ್ವರೂಪ’ವೆನಿಸಿದ ರಸ-ಧ್ವನಿಗಳನ್ನು ಎಟುಕಿಸಿಕೊಳ್ಳುವುದು ಯುಕ್ತ. ಇದಕ್ಕೆ ಕಾರಣವಿಷ್ಟೆ; ಅಪ್ಪಟ ಪ್ರತಿಭೆಗೆ ಯಾವುದೇ ನಿಯಮದ ಸಂಕೋಲೆಯಿಲ್ಲ ಅದರೆ ಇವುಗಳ ಹೂಮಾಲೆಗಳ ಅಲಂಕಾರವಿರುತ್ತದೆ; ಅರ್ಥಾತ್ ಯಾವ ನಿಯಮಗಳು ಆರಂಭಿಕರಿಗೆ ಕಟ್ಟುಗಳೋ ಅವೇ ಪಾರಂಗತರಿಗೆ ಆಕಲ್ಪಗಳು (ಒಡವೆಗಳು). ಹೀಗೆ  ಒಳ್ಳೆಯ ವ್ಯುತ್ಪತ್ತಿಪ್ರಾಪಕವಾದ ನಿಯಮಗಳೇ ಇಲ್ಲದೆ, ಕೇವಲ ತಮತಮಗಿದೆಯೆಂದು ತೋರುವ  ಪ್ರತಿಭಾಬಲದಿಂದಲೇ ಕವನಿಸುವವರಿಗಾಗಿ ಪದ್ಯಪಾನವು ಯಾವುದೇ ಬಗೆಯಲ್ಲಿ ಆಕರ್ಷಕವೇದಿಕೆಯಲ್ಲವೆಂಬುದು ಸ್ವಯಂವೇದ್ಯ:-) ಹಾಗೆಂದು ಇಲ್ಲಿಯ ಕವಿತೆ ಕೇವಲ ನಿಯಮಯಮನಿಗಳನಿಗಡಿತವೆಂದೂ ಚಂಡಿಸಬೇಕಿಲ್ಲ. ಅತಿವಾದಗಳೆರಡನ್ನೂ ಬರಿಯ ಜಾಣ್ಮೆಯಿಂದಲ್ಲದೆ ಕಾಣ್ಮೆಯಿಂದ ಪರಿಹರಿಸಿಕೊಂಡು ಸಾಗುವ ಹಂಬಲ ನಮಗೆ. ಏಕೆಂದರೆ ಕನ್ನಡವು ಯಾವುದೇ ಜೀವದ್ಭಾಷೆಯ ಹಾಗೆ ಜಡವಲ್ಲ, ಹಾಗೆಂದು ವಿಶೃಂಖಲವೂ ಅಲ್ಲ. ಇದೊಂದು ಚಲನಶೀಲವಾದರೂ ಸ್ಥಿರತೆಯುಳ್ಳ  ಸತ್ತ್ವ (Dynamic equilibrium). ಇಲ್ಲಿ ನಮ್ಮ ಕಾವ್ಯವಾಣಿಯ ಔಚಿತ್ಯಪೂರ್ಣವಾದ ಆಭಿಜಾತ್ಯಕ್ಕೆ ಕುಂದಾಗದಂತೆ ಎಲ್ಲರೊಡನೆ ಒಂದಾಗುವ ಹವಣು ನಮ್ಮದಾಗಬೇಕಿದೆ. ಇದಕ್ಕೆ ಎಲ್ಲ ಪದ್ಯಪಾನಿಗಳ ಸಹಕಾರ ಬೇಕು.