Aug 102020
 

ಶ್ರೀಧರ ಸಾಲಿಗ್ರಾಮರ ಪರಿಹಾರಗಳು:
ಕಂದರಮಂ ಬಳಸುತ್ತುಂ
ಮುಂದಕ್ಕಂ ನದಿಗಳೊಟ್ಟುಗೂಡುತೆ ಸಾಗಲ್|
ಸಂದೆಗಮಿರದಾಗಿದೊ ಕಾ-
ಣೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||

ಪೊಂದಿಸುತುಂ ದಿಟ್ಟಿಯನೊ-
ಪ್ಪಂದಂಗೊಂಡೆರಡು ಕಂಗಳೀಕ್ಷಿಪುದೆಂದುಂ|
ಮುಂದಿರ್ಪುದನೈಕ್ಯತೆಯಿಂ-
ದೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||

ಸಂದಿರೆ ಗಾಯಕರ ಜುಗ-
ಲ್ಬಂದಿಯೊಳರಿತೊರ್ವರೊರ್ವರೊಳ್ ಶ್ರುತಿ ಸೇರಲ್|
ಸಂದೆಗಮಿರದೊಕ್ಕೊರಲಂ-
ತೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ||
——–
ನೀಲಕಂಠ ಕುಲಕರ್ಣಿಯವರ ಪರಿಹಾರ:
ಕುಂದದ ಗಣಿತಂ ಬಹಳಾ-
ನಂದಮನೀಯ್ಗುಂ ಬಹುತ್ವಮಂ ತೋರದೆಯೇ|
ಗೊಂದಲಮೆನಿಸದು ಸಂಖ್ಯೆಯ-
ನೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ||
(ಬಹುತ್ವವನ್ನು ತೋರದೇ ಒಂದು ಕೂಡಿಕೆಗೆ ಒಂದೇ ಮೊತ್ತವನ್ನು ಕೊಡುತ್ತದೆ ಗಣಿತ. ಬೇರೆ ಬೇರೆ ಮೊತ್ತವಲ್ಲ)
——-
ಕಾಂಚನಾರವರ ಪರಿಹಾರ:
ಪೊಂದಿಸಿಕೊಳ್ಳುತೆ ಪಕ್ಷಗ-
ಳೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ-|
ಪಂದಿಕುರಿನಾಯ್ನರಿಗಳಾ!
ಬಂದೊಡನೊಂದೆಡೆ, ಸಮಾನರೀ ಘಟಬಂಧಂ!!
——–
ಉಷಾರವರ ಪರಿಹಾರಗಳು:
ಛಂದೋಬದ್ಧಂ ವೃತ್ತಂ,
ಸಂದ ಪ್ರಸ್ತಾರದೊಳ್ ಗುರುಲಘುಗಣನಕಂ|
ಮುಂದಾಗಲ್ ಪ್ರತಿಪಾದದೊ-
ಳೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ||
(ವೃತ್ತದ ಪ್ರತಿಪಾದದಲ್ಲೂ ಮಾತ್ರೆಗಳ ಮೊತ್ತ ಒಂದೇ)
——-
ಸೋಮಶೇಖರ ಶರ್ಮರ ಪರಿಹಾರ:
ಈಗಾಗಲೇ ಒಂದು ಕೊಲೆಗೆ ಖಳನಾಯಕನಿಗೆ ನೇಣು ಶಿಕ್ಷೆಯಾಗಿದ್ದಾಗ…
ಬಂದೆಯ ಕುನ್ನಿಯೆ ಸದೆಯುವೆ-
ನೆಂದಂ ಖಳನಾಯಕಂ ರಿಪುವನೊದೆಯುತ್ತುಂ|
ಸಂದಿದೆ ನೇಣೆನಗಿನ್ನೇ-
ನೊಂದಕೆ ಮತ್ತೊಂದು ಕೂಡಲೊಂದೇ ಮೊತ್ತಂ||
——
ಸುಧೀರ ಕೇಸರಿಯವರ ಪರಿಹಾರ:
अनुयुक्त also means asked,
भवति is also ಸಂಭೋಧನೆ to a lady,
आचार्या is a lady teacher
आचार्ययानुयुक्तो ह्येकं चैकेनुयुक्तम्-अथ किं भवति?
शिष्यो ब्रूते “त्रि भवत्यैकं चैकेनुयुक्तम्-एकं, भवति!”
1+(1+1)

Jul 122020
 

ಶಶಿಕಿರಣ್ ರವರ ಪರಿಹಾರ:
ವಿಕತ್ಥನೋದ್ವರ್ಜಿತಮುದ್ಘವೃತ್ತಿಂ
ಜಿತಾರಿಷಟ್ಕಂ ಶಮಸಂಪದೀಡ್ಯಮ್|
ಬುದ್ಧಂ ನಿಭಾಲ್ಯೋಚಿತಮೇವಮಾಹು-
ರ್ಜಾಜ್ವಲ್ತಿ ವಜ್ರಂ ನ ಕದಾಪಿ ಲೋಕೇ||
ಸ್ವಪ್ರತಿಷ್ಠೆಯ ಲೇಶವೂ ಇಲ್ಲದ, ಅರಿಷಡ್ವರ್ಗವನ್ನು ಗೆದ್ದ, ಶಮವೆಂಬ ಸಂಪತ್ತಿಗೇ ಪೂಜ್ಯನಾದ ಬುದ್ಧನನ್ನು ಕಂಡವರು ಈ ಸಮುಚಿತವಾದ ಮಾತನ್ನಾಡಿದರು–ವಜ್ರವೆಂದೂ ಕಣ್ಣುಕೋರೈಸದು.

ಕಾಂಚನಾರವರ ಪರಿಹಾರ:
ಮಜ್ಜನಂಗೊಳುತೆ ಭಕ್ತಿಯಬ್ಧಿಯೊಳ್,
ಸಜ್ಜನಂ ನುಡಿವನಂತೆ, “ದೇವಿಯೀ|
ಬಿಜ್ಜೆಯಿಂದೊಗೆದ ವಕ್ತ್ರದಿಂ ಮಿಗಿಲ್
ಬಜ್ಜರಂ ಬೆಳಗದಿರ್ಪುದೆಂದಿಗುಂ||”

ರವೀಂದ್ರಹೊಳ್ಳರ ಪರಿಹಾರ:
ವಜ್ಜೆಯಾದ ನವಕೋಟಿದರ್ಪದೊಳ್
ಮಜ್ಜಿತಂ ಕೃಪಣಮಾನಿವಾಸನಯ್|
ಬಿಜ್ಜೆಯೊಂದೊಲಿಯೆ ದಾಸನಾಗಲಾ
ಬಜ್ಜರಂ ಬೆಳಗದಿರ್ಪುದೆಂದಿಗುಂ||
(ಮಾ=ಶ್ರೀ. ಶ್ರೀನಿವಾಸನಾಯಕನು ಪುರಂದರದಾಸನಾದ ಪರಿಹಾರ. ಒಂದು ಸ್ವಾರಸ್ಯ: ಬಿಜ್ಜೆ ಒಲಿಯೆ – ಅವಿದ್ಯೆ ಹೋಗಿ ವಿದ್ಯೆ ಎಂಬುದೊಂದು, ಆತನ ಮಡದಿಯ ಹೆಸರು ಸರಸ್ವತಿ ಎಂಬುದೊಂದು)

ವೀಣಾ ಉದಯನರ 2 ಪರಿಹಾರಗಳು:
जाज्वल्ति वज्रं न कदापि लोके
संतो महान्तो निवसन्ति यत्र।
इत्येव निश्चित्य मणीन् स्वदेशं
म्लेच्छा नयन्ति स्म नु भारतात् ते?!
ಸಂತ ಮಹಂತರು ನೆಲೆಸಿದ ಭಾರತದಲ್ಲಿ ವಜ್ರಗಳು ಬೆಳಗುವುದಿಲ್ಲ ಎಂದೇ ನಿಶ್ಚಯಿಸಿ ಮ್ಲೇಚ್ಛರು ನಮ್ಮ ಭೌತಿಕಸಂಪತ್ತನ್ನು ಸೂರೆಗೊಂಡು ತಮ್ಮ ದೇಶಕ್ಕೆ ಕೊಂಡೊಯ್ದರೇ?

रसस्वरूपस्य परात्मनः सा
भा हृद्गता चेत् प्रतिभा तदैव।
नान्तर्गता चेत् द्युमणेः प्रभा तत्
जाज्वल्ति वज्रं न कदापि लोके।।
ರಸಸ್ವರೂಪನಾದ ಪರಮಾತ್ಮನ ಕಿರಣ (ಅಥವಾ ಒಂದು ಕಿರಣವಾದರೂ) ಯಾರ ಹೃದಯಕ್ಕೆ ತಾಕುತ್ತದೋ/ತಾಕಿದಾಗಲೇ ವ್ಯಕ್ತಿ ಪ್ರತಿಭೆಯುಳ್ಳವನಾಗುತ್ತಾನೆ.(ಪ್ರತಿಭೆಗೆ reflect ಅಂತಲೂ ಅರ್ಥ). ಅಂತೆಯೇ, ಸೂರ್ಯನ ಪ್ರಭೆಯೇ ಇಲ್ಲದೆ ವಜ್ರಕ್ಕೆ ಪ್ರತಿಭೆ(reflection)ಯಿಲ್ಲ.

Jul 072020
 

ವೀಣಾರವರ ಪರಿಹಾರ:
ಕ್ಷಿತಿಗಾ ಸಗ್ಗದಿನಿಳಿದೀ
ರತಿಪತಿಯೂಡೆ ಘೃತಸಿಕ್ತಭೋಜ್ಯಂಗಳಮೋ!
ಸುತನೋ ಬೆಣ್ಣೆಯ ಮುದ್ದೆಯೊ!
ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
ಭೂಮಿಗಿಳಿದ ಮನ್ಮಥನಂತಿರುವ ಸುತನಿಗೆ ಚೆನ್ನಾಗಿ ಘೃತಭೋಜನವನ್ನು ಮಾಡಿಸಲು ಅವನು ಗುಂಡುಗುಂಡಗೆ ಬೆಣ್ಣೆಮುದ್ದೆಯಂತಾದ..

ಕಾಂಚನಾರವರ ಪರಿಹಾರ:
ಸುತನಿಂ ಕೊಂಡಾಯುಷ್ಯಮ
ನತಿಯಾಶೆಯೊಳಾ ಯಯಾತಿವಡೆವಂತೆಳಸಂ|
ಕೈತವಮಾದೊಡೆ ನೋಡೌ!
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ||

ಉಷಾರವರ ಪರಿಹಾರ-೧:
ಅತಿಶಯದಾಲೋಡನದೀ
ಗತಿಯೊಳ್ ಬೆಳ್ಪುಂಡೆಯೋಲುಗಲ್ ತೆರೆಯುಲಿಯೊಳ್|
ಕ್ಷಿತಿಜದೆ ತಾಂ ಕಡಲಣುಗಂ
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!!
ಘೃತ = ನೀರು, ಕಡಲಣುಗ = ಚಂದ್ರ, ಕಡೆದ ಸಾಗರದ ನೀರಿನಿಂದ ಬಂದ ಚಂದ್ರನು ಬೆಣ್ಣೆಯಂತ ಬಿಳಿಯ ಉಂಡೆ

ಉಷಾರವರ ಪರಿಹಾರ-೨:
ಕೃತಕೃತ್ಯಮಾದ ಚೌರ್ಯದ
ಕತದಿಂ ಗಡಮಬ್ಬೆಗಂತು ಜಗಮಂ ತೋರ್ದಾ-|
ಸುತಗಂ ಕಟುವಾಯ್ ಲಾಲಾ-
ಘೃತದಿಂ ನವನೀತಮಪ್ಪ ಪರಿಯೇ ಸೊಗಮೈ!!
*ಲಾಲಾಘೃತ=ಲಾಲಾರಸ (ಸಾಮಾನ್ಯವಾಗಿ ಮಕ್ಕಳ ಜೊಲ್ಲನ್ನು ’ತುಪ್ಪ’ ವೆನ್ನುವ ವಾಡಿಕೆ ಅಲ್ಲವೇ?) ಕದ್ದುಮೆದ್ದ ಕಳ್ಳ ಕೃಷ್ಣನ ಬಾಯಿ ಬೆಣ್ಣೆಯಾದ ಕಲ್ಪನೆ

ರವೀಂದ್ರಹೊಳ್ಳರ ಪರಿಹಾರ:
ಜಿತದಿಂದಶ್ವಿನಿಗಳ್ ಪ-
ನ್ನತಿಕೆಯಿನೂಡಿಸೆ, ತ್ರಿಶಂಕುದೇಹಂ ದಿವ್ಯಾ-|
ಮೃತಸಂಪೋಷಿತದೈವೀ-
ಘೃತದಿಂ ನವನೀತಮಪ್ಪ ಪರಿಯೇ ಸೊಗಸಯ್||
(ನವನೀತಮಪ್ಪ = ನವನ್+ಈತಂ+ಅಪ್ಪ ಎಂದೂ ಪದಚ್ಛೇದ ಮಾಡಬಹುದು)

Jul 052020
 

ಕಾಂಚನಾರ ಪರಿಹಾರ:
ಮರಗುವ ಕೆಲವಾತೊಳ್ ರಾಜಗೇಹಕ್ಕೆ ಕಾಡಿಂ,
ಭರತನೆ ಕರೆದೊಯ್ಯಲ್! ರಾಮನೊಪ್ಪುತ್ತೆ ಪೋದಂ|
ವರಪಿತನಜಪುತ್ರಂ ಸಾವನಪ್ಪಿರ್ಪುದಂ ತಾ
ನರೆಚಣದೊಳೆ ಕಾಣಲ್ ಚಿತ್ತನೇತ್ರಂಗಳಿಂದಂ!|
(ಶೋಕಭರಿತವಾದ ಭರತನ ಮಾತುಗಳೇ ರಾಮನನ್ನು ಅಯೋಧ್ಯೆಗೆ ಕರೆದೊಯ್ದಿತ್ತು.)

Jul 042020
 

ರವೀಂದ್ರಹೊಳ್ಳರ ಪರಿಹಾರ:
ಏಕೆಂದುಂ ಬರೆದವನುಂ
ಸಾಕೆಂದುಂ ಕೇಳುತಿರ್ಪನರಿಯದ ಕವಿಗಳ್
ಲೋಕದ ಸಮ್ಮೇಳನದೊಳ್
ಮೂಕಂ ಪಾಡಲ್ಕೆ ಕಿವುಡನಾಲಿಸುತಿರ್ದಂ
(ಬರೆದವನಿಗೆ ಬರೆದದ್ದೇಕೆಂದು ಗೊತ್ತಿಲ್ಲ, ಕೇಳುಗನಿಗೆ ಸಾಕೆಂದು ಹೇಳಲೂ ತಿಳಿಯದ ಸಾಹಿತ್ಯಸಮ್ಮೇಳನದ ಗತಿ)

ಕಾಂಚನಾರ ಪರಿಹಾರ:
ನಾ ಕಾಣುತಿರ್ಪೊಡಂ ಚಾ
ಲಾಕಿ ಕ್ರೈಸ್ತಗುರುವರ್ಯನಾ ಕಪಟಕರಂ|
ತಾಕಲ್, ನಡೆದಂ ಹೆಳವಂ!
ಮೂಕಂ ಪಾಡಲ್ಕೆ! ಕಿವುಡನಾಲಿಸುತಿರ್ದಂ!|
(ಮತಾಂತರದ ನಾಟಕ)

ಉಷಾರವರ ಪರಿಹಾರ:
ಲೋಕದೊಳತಿ ಸಾಮಾನ್ಯಂ
ಮೂಕಾಭಿನಯಂ ಸಲಲ್ ಶ್ರವಣಸಾಧನದೊಳ್|
ಏಕಾಂಗಿಯಿನೇಕಾಂಕದೆ
ಮೂಕಂ ಪಾಡಲ್ಕೆ ಕಿವುಡನಾಲಿಸಿರ್ಪಂ!!
ಇಅರ್ ಫೋನ್ ಧರಿಸಿದ ಏಕಾಂಗಿ (ಕಿವುಡ) – (ಇಅರ್ ಫೋನ್ ಕನೆಕ್ಟ್ ಆದ ತಕ್ಷಣ ಮ್ಯೂಟ್ ಆಗುವ – ಮೂಕ ) ಮೊಬೈಲ್ ನಲ್ಲಿ ಮುಳುಗಿರುವ “ಏಕಾಂಕ”ದ ಪೂರಣ

Jul 042020
 

ಕಾಂಚನಾರ ಪರಿಹಾರ:
ಕುಣಿಯಲಮ್ಮದು ಸೋಗೆ ಜಗತ್ತಿನೊಳ್,
ಮಣಿದು ಬೇಡಿದರಾದೊಡನುಂ ನರರ್!
ಗಣಿಸುತೀ ಪರಿ ಕಂಟಕಮಂ ದಿಟಂ
ತಣಿದರೆಂದೊ ಮಯೂರದ ವೇಷದೊಳ್!|
ನರರು ನೋಡಬಯಸಿ ಬೇಡಿಕೊಂಡರೂ ಸೋಗೆಯು ಕುಣಿಯುವುದಿಲ್ಲವೆಂದು ಎಂದೋ ಮಯೂರನೃತ್ಯವನ್ನು ರೂಢಿಸಿಕೊಂಡಿದ್ದಾರೆ

ವೀಣಾ ಉದಯನರ ೨ ಪರಿಹಾರಗಳು:
शिवताण्डवमीक्षितं स्मर-
न्ननुकृत्य स्खलितः पुरः स्त्रियः।
गत इत्युपहासपात्रताम्
प्रचलाकी न हि वेत्ति नर्त्तनम्।।1

निजपिञ्छमपाहरत्पुरा-
पहरेदन्नकलेद्य मे त्विति।
यदुबाल-कलिङ्गनर्तनात्
प्रचलाकी न हि वेत्ति नर्त्तनम्।।2

Jul 042020
 

ನೀಲಕಂಠ ಕುಲಕರ್ಣಿಯವರ ೨ ಪರಿಹಾರಗಳು:
ವ್ಯೋಮವಿಚಿತ್ರತೆಯೆನಲೀ
ನೇಮದೆ ಖಗ್ರಾಸಭಾಸ್ಕರಗ್ರಹಣಂ ತಾಂ|
ಕ್ಷೇಮದೆ ಸರಿಯಲ್ಕರರೇ
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||೧

ಹೋ ಮಣ್ತಿಂದೆಯೊ ನೀನೆನು-
ತಾ ಮಾತೆ ಯಶೋದೆ ನೋಡೆ ಬಾಯೊಳ್ ಸೃಷ್ಟಿ-|
ಸ್ತೋಮಮನೆ ತೋರಿ ಯದುಕುಲ-
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||೨
ತಾಯಿಗೆ ತನ್ನ ವಿಶ್ವರೂಪವನ್ನು ತೋರುತ್ತ ಯದುಕುಲಸೋಮ ತಾನು ಸೂರ್ಯನನ್ನು ಹೆತ್ತುದನ್ನು ತೋರಿದನು

ಕಾಂಚನಾರವರ ಪರಿಹಾರ:
ವಾಮವದನನಾ ಪೌರ್ಣಿಮೆ
ಸೋಮಂ, ಪ್ರಸವಿಸಿದನಲ್ತೆ ಸೂರ್ಯನೀಗಳ್!
ಭಾಮೆಯನಾಗಮನದೊಳಾ
ಕಾಮಿಯ ಚಿತ್ತದೊಳೆ ವೆಂಕೆಯಿಡುತೆ ವಿರಹದಾ||

ವೀಣಾ ಉದಯನರ ಪರಿಹಾರ-೧ – ಸ್ಯಮಂತಕಮಣಿಪ್ರಸಂಗ:
ರಾಮೆಯೊಡನೆ ಕರಿಗುಹೆಯಿಂ-
ದಾ ಮಣಿಯಂ ಪಿಡಿದುಂ ತಾಂ ಕೃಷ್ಣ ಬರಲ್ಕಾ|
ತಾಮಸಜನರಿಂತೆಂದರ್
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||

ವೀಣಾ ಉದಯನರ ಪರಿಹಾರ-೨
ನೇಮದೆ ಧ್ಯಾನದೊಳಿರಲಾ
ಕಾಮಂ ಬರೆ ಕೆಣಕೆ ತಪವ ನಿಲಿಸಲ್, ರುಷೆಯಿಂ|
ರಾಮಾ! ಧಗೆಯಾಯ್ತಯ್ಯೋ!
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್||

ಶಕುಂತಲಾ ಮೊಳೆಯಾರರ ಪರಿಹಾರ:
ತಾಮಸದಿಂದಿರೆ ನಿಜದೊಳ್,
ಸೀಮಾತೀತದೊಳೆ ದೀಪ್ತಿಯಂ ಜಗಕೀಯಲ್,|
ನೇಮದೆ ಪಡೆದವನಿಂದಂ, (ನೇಮದೆ ಪಡೆಯುತೆ ರವಿಯಿಂ)
ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್।।

ಉಷಾ ಉಮೇಶರ ಪರಿಹಾರ-೧:
ಕೋಮಳಮಮಮಾ ಕಂದಂ
ಬಾಮದ ಮುಖಚಂದ್ರದಿಂದೆಸೆದ ರವಿನೇತ್ರಂ|
ಭ್ರೂಮಧ್ಯದೆಡಬಲದೆ ಕಾಣ್
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್!!
(ಬಾಮ = ಮನೋಹರ)

ಉಷಾ ಉಮೇಶರ ಪರಿಹಾರ-೨:
ಭೂಮಿಯೊಳು ಕಾಲಗಣನದ
ನೇಮಮಿದುಂ, ಹೊತ್ತು ’ತಿಂಗಳು’ ಹೆರುದು ’ದಿನ’ವಂ|
ಸಾಮಂ ಕಾಣ್ ’ಪದ’ದೊಳ್ ಗಡ
ಸೋಮಂ ಪ್ರಸವಿಸಿದನಲ್ತೆ ಸೂರ್ಯನನಾಗಳ್!!
(ತಿಂಗಳು = ಚಂದ್ರ, ದಿನ = ಸೂರ್ಯ)

Jul 032020
 

1) ಶ್ರೀಲಲಿತಾ ರೂಪನಗುಡಿಯವರ ಪರಿಹಾರ:
पितृवनतटे भर्त्रा साकं विहृत्य समागत-
प्रियकर-कराल्लब्धोन्मत्तं निपीय कपर्दिनः ।
परिचर-सती संभोज्यार्थं त्वघोर-समाहृतं
पिशितमशितं कृत्वा हृष्टा ललास मृगी मुदा ॥
ಉನ್ಮತ್ತ – ದತ್ತೂರ. ಶಿವನೊಡನೆ ಸ್ಮಶಾನದಲ್ಲಿ ವಿಹರಿಸುತ್ತಿದ್ದ ಅವನ ಪರಿಚರನಾದ ಜಿಂಕೆಯು ಮರಳಿ ಬರುವಾಗ ತನ್ನ ಪತ್ನಿಗೆ ಭಾಂಗವನ್ನೂ ಮಾಂಸವನ್ನೂ ತಂದು ಕೊಟ್ಟಿತು ಎಂದು ಆಶಯ. ಇದು ನನ್ನ ಪರಿಹಾರವಲ್ಲ – ನನ್ನ ಮಗಳದು. ಅದನ್ನೇ ಪರಿಷ್ಕರಿಸಿ versify ಮಾಡಿದ್ದೇನೆ. ಗಣೇಶ್ ಸರ್ ಅದನ್ನು ಮತ್ತೂ ಸ್ವಲ್ಪ ತಿದ್ದಿದ್ದಾರೆ.

2) ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ-೧:
ಹರಿಕರಿಗಳೊಳ್ ವೈರಂ ದೂರಂಗೊಳಿಪ್ಪ ತಪೋವನಂ
ಮೆರೆಗುಮಿಳೆಯೊಳ್ ದೌಷ್ಟ್ಯಂಬೆತ್ತೀ ಸ್ಥಲಂ, ಬಿಯದಂ ಕುಡಲ್|
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ
ಚಿರದೆ ಕಲಿವರ್ ಸರ್ವರ್ ತಾಮಾಶ್ರಯಂ ಪಡೆದರ್ಕಳಿಂ||
(ಸಿಂಹ- ಆನೆಗಳ ವೈರವನ್ನು ದೂರಗೊಳಿಸುವ ತಪೋವನವೂ, ದುಷ್ಟತೆಯನ್ನು ಪ್ರಸವಿಸಿದ ಈ ಸ್ಥಲವೂ ಭೂಮಿಯಲ್ಲಿದೆ. ಇಲ್ಲಿ ವ್ಯಾಧ/ಕಟುಕ ಕೊಟ್ಟಾಗ ಜಿಂಕೆ ಒಲವಿಂದ ಮಾಂಸವನ್ನು ತಿಂದಿತು. ತಮಗೆ ಆಶ್ರಯವನ್ನು ಕೊಟ್ಟವರಿಂದಲೇ ಎಲ್ಲರೂ ಕಲಿತುಕೊಳ್ಳುತ್ತಾರೆ)

3) ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ-೨ (ಸುಧೀರ್ ಅವರು ಕೊಟ್ಟ ಒಂದು ಐಡಿಯಾದಂತೆ)
ತರಣಿ ತೆರಳಲ್ ಕಾಡೊಳ್ ಬೇಡರ್ ಸಮೀಕ್ಷಿಸಿ ಬೇಂಟೆಯೊಳ್
ದೊರೆತುದಡುತುಂ ಪಂಚಲ್ ಪೊಂದಲ್ ಮೊಲಂಗಳನೊಲ್ಲದೇ
ತರಳನಿಕರಂ ಪಕ್ವಂಗೊಂಡಿರ್ಪುದಂ ಸಲೆ ಪೊಂದುತುಂ
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ||
(ಸೂರ್ಯಾಸ್ತ ಆಗಿದೆ. ಕಾಡಿನಲ್ಲಿ ಬೇಡರು ಬೇಟೆಯಲ್ಲಿ ದೊರೆತಿರುವುದನ್ನು ನೋಡಿ ಬೇಯಿಸಿ ಹಂಚುವಾಗ ತಮ್ಮ ಪಾಲಿಗೆ ಬಂದ ಮೊಲಗಳನ್ನು ಒಲ್ಲದೇ, “ತರಳನಿಕರಂ” ಹರಿಣಿಯ ಒಲವಿಂ ಪಕ್ವಂಗೊಂಡಿರ್ಪುದಂ ಸಲೆ ಪೊಂದುತುಂ ಜಲಕ್ಕನೆ ಮಾಂಸಮಂ ತಿಂದತ್ತು- ತರಳರ ಗುಂಪು, ಜಿಂಕೆಯ ಮಾಂಸದ ಮೇಲಿನ ಪ್ರೀತಿಯಿಂದ, ಬೇಯಿಸಿದ ಅದನ್ನು ತಿಂದಿತು)

4) ಕಾಂಚನಾರವರ ಪರಿಹಾರ-೧:
ಬೆರೆತು ಬೆಳೆಯಲ್ ವ್ಯಾಘ್ರವ್ರಾತಂಗಳೊಳ್ ಮಿಗಮೊಂದು ತಾಂ
ಕರುಣೆಯೊಡನೀ ಕ್ರೂರತ್ವಂ ಸಾಜದಿಂದೊಡಗೂಡಿರಲ್
ತೊರೆಯೆ ದಿಟದಿಂ ಸಸ್ಯಾಹಾರಂ, ಮೊಲಂ ಬಲಿಯಾಗಿರಲ್
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ||
(ಹುಲಿಯ ಗುಂಪಿನಲ್ಲಿ ಬೆಳೆದ ಹರಿಣಿ…)

5) ಕಾಂಚನಾರವರ ಪರಿಹಾರ-೨:
ನರಿಯೊ ವೃಕಮೋ ಪೆರ್ಬಾವೋ! ತಾಂ ಸಸಾರದೆ ಸಿಲ್ಕಲಾ
ಚಿರತೆಯಮಮಾ ಸ್ವಾದಕ್ಕೆಂದುಂ ಮಿಗಂಗಳನಾಂತಿರಲ್,
ಸುರಿದ ತೆರದಿಂ ಬೆಂಗಾಡೊಳ್ವರ್ಷಮಂದೆದುರಾದೊಡಂ
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ!
ಉಳಿದೆಲ್ಲ ಪ್ರಾಣಿಗಳು ಸುಲಭವಾಗೆ ಆ ಕಾಡಿನಲ್ಲಿ ದೊರೆಯುತ್ತಿರಲಾಗಿ, ತನ್ನ ಸ್ವಾದಕ್ಕೆಂದು ಮೃಗಗಳನ್ನವಲಂಬಿಸಿದ್ದ ಚಿರತೆಗೊಮ್ಮೆ ಬೆಂಗಾಡಿ ನಲ್ಲಿ ಮಳೆ ಸುರಿದಂತೆ ಹರಿಣಿಯು ಎದುರಾದಾಗ ಮಾಂಸವನ್ನು ತಂದಿತು.

6) ಸುಧೀರ ಕೇಸರಿಯವರ ಪರಿಹಾರ:
झटिति वमनं वारं वारं, सुभोज्यधिया पुनः|
पिशितमशितं, कृत्वा हृष्टा ललास मृगी मुदा॥

7) ಉಷಾರವರ ಪರಿಹಾರ:
ಹರಿಣಶಿರದಿರ್ಪಂತಾಶೃಂಗಂ ತರಾವರಿ ತುಂಡೆನಲ್
ಕರುಳಕುಡಿಯುಂ ಪೊಂದಲ್ಕೆಂದುಂ ವಿಚಿತ್ರದ ಕೊಂಬನೇ|
ಮರುಳಮದೊ ತಾಂ ಗರ್ಭಂ ಮೈವೆತ್ತುದಾ ಮಮತಾಮಯೀ
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ!!
ಹರಿಣದ ಕೊಂಬು ಒಂದು ಬಗೆಯ ತುಂಡು ಎಂದು ತಿಳಿದು, ತನ್ನ ಮಗುವಿಗೆ ಕೊಂಬು ಬರಲೆಂದು ಮರುಳು ಹರಿಣಿ ತುಂಡು ~ ಮಾಂಸವನ್ನು ತಿಂದಿತು!!

Jul 032020
 

1) ಶ್ರೀ ರಾ. ಗಣೇಶರ ಪರಿಹಾರ:
ಪದಪಿಂ ಪಾರ್ವತಿಯಂದು ಚಂದದ ತಪಸ್ಸಂ ಗೆಯ್ದು ಸರ್ವೇಶನಂ
ಸದಯಾನಂದನಚೈತ್ರನಂ ಮದುವೆಯಾಗಲ್ಕೆಂದು ನೋನಲ್ ಸ್ವಯಂ|
ಚಿದಚಿದ್ರೂಪಧರಂ ಸಮೀಪಿಸಿ ಕರಂಗೊಳ್ವಾಗಳೆಂಬರ್ ಬುಧರ್
ನದಿಯಂ ಕಂಡೊಡನೋಡಿಬಂದುದೊಲವಿಂದಂ ಸೇರ್ದುದಯ್ ಸಾಗರಂ||

2) ಶಶಿಕಿರಣ್ ರವರ ಪರಿಹಾರ:
ಕಲ್ಯಸ್ಫಾಯದತೀವ್ರರಾಗವಿಗಲದ್ವೈಶದ್ಯಕಲ್ಪಾಂ ಕವಿ-
ಸ್ಫೂರ್ತಿಸ್ಫೂರ್ಜಿತವಕ್ರವಾಗನುಕೃತಿಂ ತಾಂ ಕೃತ್ರಿಮತ್ವಾತಿಗಾಮ್|
ಸ್ಮೃತ್ವಾ ಸ್ಮೇರತತಿಂ ಪಿತಾ ಪ್ರಿಯಶಿಶೋರ್ಲೀನಕ್ಲಮಃ ಸ್ಯಾತ್ತಥಾ
ಸಿಂಧುಂ ಸತ್ವರಮೀಕ್ಷ್ಯ ತತ್ತನುತನೌ ಸಂಲೀಯತೇ ಸಾಗರಃ||
(ಮುಂಜಾನೆ ಎಲ್ಲೆಡೆ ಹರಡಿರುವ ನವುರಾದ ಕೆಂಪಿನಲ್ಲಿಯ ವಿಶದತೆಯಂತಿರುವ, ಕವಿಯ ಸ್ಫೂರ್ತಿಯಿಂದ ಮಿಂಚಿದ ವಕ್ರತೆಯನ್ನು ಹೋಲುವ, ಕೃತ್ರಿಮತೆಯ ಲೇಶವೂ ಇಲ್ಲದ ಮಗುವಿನ ನಗುವನ್ನು ನೆನೆದು ಹೇಗೆ ತಂದೆ ತನ್ನ ಶ್ರಮವನ್ವು ಕರಗಿಸಿಕೊಳ್ಳುವನೋ ಹಾಗೆ–ನದಿಯನ್ನು ಕಂಡ ಸಮುದ್ರ ಅದರಲ್ಲಿ ಲೀನವಾಗುತ್ತದೆ.

3) ಕಾಂಚನಾರವರ ಪರಿಹಾರ-೧:
ಎದುರೊಳ್ ಬಂದರನೀಕ್ಷಿಸುತ್ತುಮವಳೇ ಬಂದಿರ್ಪಳೆಂದಭ್ದಿಯಾ,
ಪದಪಿಂದೋಡುತೆ ಬಂದೊಡೇನು! ಸತತಂ ನೈರಾಶ್ಯದಿಂ ಸಾಗಿರಲ್,|
ಮುದಮಂ ನೀಡುತುಮಂತು ಬೆಟ್ಟಮಿಳಿಯಲ್, ವೀಚೀಕರಂ ಬೀಸುತುಂ,
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ||
ಅವಳೇ (ನದಿ) ಬಂದಿರಬಹುದೆಂದು ತಿಳಿದು, ಎದುರು ಬಂದವರನ್ನು ನೋಡುತ್ತಲೋಡೋಡಿ ಬಂದು ನಿರಾಶನಾಗಿ ಪಿಂದಿರುಗುತ್ತುಮಿರಲಾಗಿ, ಕಡೆಗೂ ಬೆಟ್ಟದಿಂದಿಳಿದವಳನ್ನು ವೀಚೀಕರದಿಂದ ಸ್ವಾಗತಿಸಿತು

4) ಕಾಂಚನಾರವರ ಪರಿಹಾರ-೨:
ಹೃದಯೋತ್ಕರ್ಷಣದಿಂದೆ ಕೃಷ್ಣನ ತೆರಂ ತಾನಾಗವೇಳ್ಕೆನ್ನುತುಂ,
ಮುದದಿಂ ಪೊತ್ತಿರೆ ಜಂತುವಂ ಪವಳಮಂ ರತ್ನಂಗಳಂ ಗರ್ಭದೊಳ್,
ಪದಪಿಂ ತನ್ನೆಡೆಗೈದಳಂ ತ್ಯಜಿಪುದೇಂ!ಪೆಣ್ಣೆಂದು ದಾಕ್ಷಿಣ್ಯದಿಂ!
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ

5) ಕಾಂಚನಾರವರ ಪರಿಹಾರ-೩:
ಇದು ಕಾಂತಾರದ ಪಣ್ಣನರ್ತಿಯೊಳೆ ತಾಂ ತಿಂಬೊಂದು ಚಾಪಲ್ಯಮೋ!
ಮುದದಿಂ ವಾರಿಯಪೂರ್ವಮಾಧುರಿಯನೇ ಪೀರಲ್ಕೆ ಸನ್ನಾಹಮೋ!
ಪುದುವಾಳ್ದರ್ಕಳ ವಾರ್ತೆಯಂ ಜಗದೊಳಿಂದಾಲಿಪ್ಪ ಸದ್ಭಾವಮೋ!
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ
(ನದಿಯು ಹೊತ್ತು ತರುವ ಹಣ್ಣುಗಳನ್ನು ತಿನ್ನುವಾಸೆಯೋ!, ನದಿಯ ನೀರಿನ ಸಿಹಿಯನ್ನು ಹೀರುವ ಆಸೆಯೋ! ನದಿಯ ಇಕ್ಕೆಲದಲ್ಲಿದ್ದ ಕೂಡಿಬಾಳುವವರ ಕ್ಷೇಮಸಮಾಚಾರವನ್ನು(ವಾರ್ತೆ) ಅರಿವ ಒಳ್ಳೆಯತನವೋ!… ನದಿಯನ್ನು ಕಂಡು, ಅಚಲವಾದ ಸಾಗರ….)

6) ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ:
ಅದು ದಲ್ ವಿಷ್ಣುಪದೋತ್ಥಮಾಗಿ ಕವಿಯಾ ಸದ್ಭಾಜನಕ್ಕೈದು ಮ-
ತ್ತಿದೊ ಹೈಮಾಚಲಗಾಮಿಯಾಯ್ತು ಜವದಿಂ ವಿಶ್ವೇಶಮಸ್ತಸ್ಥಿತಂ|
ಪದಪಿಂದೆಯ್ದಿರೆ ವೀಚಿಹಸ್ತಗಳೊಳಂ ತಾಂ ಸ್ವಾಗತಂ ಗೆಯ್ಯುತುಂ
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ||
(ಅದು ವಿಷ್ಣುವಿನ ಕಾಲಿನಿಂದ ಹುಟ್ಟಿದ್ದು, ಅಲ್ಲಿಂದ ಬ್ರಹ್ಮನ ಭಾಜನಕ್ಕೆ ಬಂದು, ಶಿವನ ತಲೆಯಲ್ಲಿ ನಿಂತು ಹಿಮಾಲಯದಲ್ಲಿ ಹರಿದು ಬಂದುದು, ಎಂದು ಅದನ್ನು ತನ್ನ ತರಂಗಗಳೆಂಬ ಕೈಗಳಿಂದ ಸ್ವಾಗತಿಸುತ್ತಾ ಸಾಗರವೇ ನದಿಯನ್ನು ಸೇರಿತು)

7) ಉಷಾರವರ ಪರಿಹಾರ:
ಮೃದುಲಂ ಮೋಹಕಮಾದಮುದ್ದುಗರುವುಂ ಚೈತನ್ಯಮಂ ಪೊಂದುತುಂ
ಪದಮಂಮೆಟ್ಟದೆಮೆಟ್ಟುತುಂ ಜಿಗಿಜಿಗಿಲ್ದುಂತಾನದಂಬಾಯೆನಲ್ |
ಮುದದಿಂ ಧಾವಿಸಿ ಗೋವೊಡಂ ಮೊಲೆಗೊಡಲ್ ಸಾಮಾನ್ಯಮೇನಂತುಟೇ
ನದಿಯಂ ಕಂಡೊಡನೋಡಿ ಬಂದುದೊಲವಿಂದಂ ಸೇರ್ದುದಯ್ ಸಾಗರಂ ||
ನದಿಯು ಸಾಗರದಿಂದ ಹುಟ್ಟುವ “ಮರಿ”ಯೇ ಅಲ್ಲವೇ?!!