Jun 242012
 

ಕಥಾಸರಿತ್ಸಾಗರದಲ್ಲಿ ಬರುವ ಈ ಕೆಳಗಿನ ಪ್ರಸಂಗವನ್ನಾಧರಿಸಿ ಪದ್ಯಗಳನ್ನು ಬರೆಯಿರಿ.

  • ಇಲ್ಲಿರುವ ಪ್ರಸಂಗವನ್ನು ಬೇಕೆಂದಂತೆ ವಿಸ್ತರಿಸಿ.
  • ಸಾಧ್ಯವಾದಷ್ಟೂ ವರ್ಣನೆಗಳನ್ನು ಅಳವಡಿಸಿರಿ
  • ಕನಿಷ್ಠ ೪-೫ ಪದ್ಯಗಳನ್ನಾದರೂ ಬರೆಯಿರಿ.
  • ಪೂರ್ತಿ ಮುಗಿಸಲಾಗದಿದ್ದರೆ, ಎಷ್ಟು ಬರೆದಿದ್ದೀರೋ, ಅಷ್ಟೇ ಹಾಕಿ
  • ಛಂದಸ್ಸುಗಳ ಆಯ್ಕೆ ನಿಮ್ಮದೇ !

ಪ್ರಸಂಗ ::

ವ್ಯಾಡಿ, ಇಂದ್ರದತ್ತ ಹಾಗು ವರರುಚಿ ಎಂಬ ಮೂವರು ಸಬ್ರಹ್ಮಚಾರಿಗಳು (ಒಂದೇ ಗುರುವಿನ ಬಳಿ ಕಲಿಯುತ್ತಿರುವವರು) ಗುರುದಕ್ಷಿಣೆಗಾಗಿ ಒಂದು ಕೋಟಿ ಹೊನ್ನು ಕೊಡುವುದು ಬರುತ್ತದೆ. ನಂದರಾಜನು ಇದನ್ನು ಕೊಟ್ಟಾನು ಎಂದು ಮೂವರೂ ಒಟ್ಟಿಗೆ ಅಲ್ಲಿ ಹೋಗುತ್ತಾರೆ. ಆಷ್ಟರಲ್ಲಿ ರಾಜನು ಮೃತನಾಗುತ್ತಾನೆ. ಆಗ ಇಂದ್ರದತ್ತನು ತಾನು ರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡುವುದಾಗಿಯೂ, ವರರುಚಿ ಬಂದು ಯಾಚಿಸಿದಾಗ ತಾನು ಹಣ ಕೊಡುವುದಾಗಿಯೂ ಹೇಳುತ್ತಾನೆ. ಈ ಮಧ್ಯೆ ಆತನ ಶರೀರವನ್ನು ಒಂದು ಮಂದಿರದೊಳಗಿರಿಸಿ ವ್ಯಾಡಿಯು ಕಾಯುವುದು ಎಂದೂ, ಕೆಲಸದನಂತರ ಇಂದ್ರದತ್ತನು ತನ್ನ ಶರೀರಕ್ಕೆ ಮರಳುವುದು ಎಂಬ ಯೋಜನೆಯಾಗುತ್ತದೆ.

ರಾಜನು ಮರಳಿ ಜೀವ ಪಡೆದು ಯಾಚಕನಾದ ವರರುಚಿಗೆ ಒಂದು ಕೋಟಿ ಹೊನ್ನುಗಳನ್ನು ಕೊಡಲು ಮಂತ್ರಿಯಾದ ಶಕಟಾಲನಿಗೆ ಆದೇಶಿಸುತಾನೆ. ರಾಜನು ಮರಳಿ ಜೀವ ಪಡೆದದ್ದನ್ನೂ, ಕೂಡಲೇ ದೊಡ್ಡ ಮೊತ್ತವನ್ನು ಯಾಚಕನಿಗೆ ಕೊಟ್ಟದ್ದನ್ನೂ ಕಂಡು ಸಂಶಯಗೊಂಡ ಮಂತ್ರಿಯು, ಚಿಕ್ಕವನಾದ ರಾಜಕುಮಾರ ವಯಸ್ಸಿಗೆ ಬರುವವರೆಗೂ ರಾಜನ ಜೀವ ಕಾಪಾಡುವ ತಂತ್ರ ಹೂಡಿ, ರಾಜ್ಯದಲ್ಲಿರುವ ಎಲ್ಲಾ ಹೆಣಗಳನ್ನೂ ಸುಡಿಸಿಬಿಡುತ್ತಾನೆ. ಇದರಲ್ಲಿ ಇಂದ್ರದತ್ತನ ಶವವೂ ಸುಟ್ಟುಹೋಗಿ, ಇಂದ್ರದತ್ತನು ರಾಜನ ಶರೀರದಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತಾನೆ.

  20 Responses to “ಪದ್ಯಸಪ್ತಾಹ – ೨೬ – ಕಥನ ಕವನ”

  1. ಅಂಡಲೆಯಲೇತಕೊ ತರಳ
    ಕಂಡುಕೊ ನೆಲೆ ನೀನು ಗುರು ಗಣೇಶರೊಳೀಗಳ್|
    ಭಂಡಜಲುಮಕಿನ್ನಿರದೈ
    ಗಂಡವದೆಂದ ಕುಲದೈವ ಗುಡ್ಡದ ರಂಗಂ||

    ಇಲ್ಲವು ಪೆರ್ಚೆನ್ನಯದೇ
    ನೆಲ್ಲವು ಬೋಧೆ ಗುರುವಿಂದೆ ಕೇಳಿರಿ ನೀವ್ಗಳ್|
    ಸೊಲ್ಲೆನ್ನದಾತ ಸವರಲು
    ಹೊಲ್ಲವು ಹಿಂಗುತೆ ಕೊನರ್ದುದು ಮುಸಲಮತಿ ತಾಂ||

    ಗುರುವಾತನಿಂತು ನಡಸುತೆ
    ತರಗೆಲೆಯಂದದಲೆಯುತ್ತಲಿದ್ದಗೆ ಮಾರ್ಗಂ|
    ಸರಿದೋರಲು ವರಪದಗಳಿ
    ಗೆರಗಾದಿಲೆ ಪೇಳ್ವೆನಾನಿದೀ ಕಿರುಗಾವ್ಯಂ||

    ಸೂತನೈದಿಂತೆಂದ ಶೌನಕ-
    ತಾತ ಕೇಳೀ ರೋಚಕ ವಿವರ
    ಪೂತ ಸಬ್ರಹ್ಮಚರರ ಸಮಾವರ್ತವಾಯ್ತಿಂದು|
    ಕೌತುಕದ ವಿಷಯ ಗುರುದಕ್ಷಿಣೆ
    ಘಾತಿಗೊಳಿಸಿತು ಮೂರು ಛಾತ್ರರ
    ದಾತ ಬೇಡೆ ವ್ಯಾಡಿ-ವರರುಚಿ-ಯಿಂದ್ರದತ್ತರೊಳು||೧||

    ಸ್ವಲ್ಪವಲ್ಲವು ಗುರುವು ಕೇಳಿದ
    ಕಲ್ಪವೆಲ್ಲವು ಶ್ರಮಿಸೆ ತೀರದ
    ಬಲ್ಪು ಕಾಣಿಕೆ ಕೋಟಿ ವರಹವು ಹೊನ್ನ ರೂಪಿನೊಳು|
    ತಲ್ಪದಲ್ಲುರುಳಿದರು ನಿದ್ರೆಯ
    ದಲ್ಪವೂ ಸಾರದಿದೆ ದೇವನೆ
    ಕಲ್ಪನಾತೀತವಿದೆ ಲೋಭವು ಬೋಧವೃಂದದೊಳು||೨||

    ನಿಜದಸಾಧುವೆ ಗುರುವಿನಾಣತಿ
    ಯಜನಗೈವೆವು ಕಲಿಕೆಯೆಲ್ಲವ
    ಬಿಜಯಗೈದತ್ರಯವು ನಾವ್ಗಳ್ ಗುರುವು ನುತಿಪಂತೆ|
    ಭುಜಿಸಲಾವಸಮರ್ಥರಾದೊಡೆ
    ಯುಜಿಸುತಿದ್ದರೆ ಛಾತ್ರಕೆಮ್ಮನು
    ತಿಜಗವಂದಿತ ಕಾರ್ಯಗೌರವಕೆಮ್ಮನೆಣಿಸುವನೆ||೩||

    ಧೃತಿಗೆಡದೆ ಛಾತ್ರರ್ವೆರಸಿ ದು
    ಸ್ಥಿತಿಯ ಚಿಂತಿಸಿ ನಿರ್ಧರಿಸೆ ಭೂ
    ಪತಿಯನರಸಲು ಬಿಚ್ಚುಗೈಯ ಮಹಾನುಭಾವನನು|
    ಮಿತಿಯೆ ಕಾಣದೆ ಮಾನಗೈವನು
    ಯತಿಯ ತೆರನಾವ್ ಚಾಚೆ ಕೈಯನು
    ನುತಿಗೆ ಪಾತ್ರನು ಸತ್ಕೃತಿಗೆ ಹಿಂದೆಗೆಯ ನಂದರಸನ್||೪||

    ಗುರುವಿನಾಣತಿ ಪಡೆದು ಪೊರಟು
    ತ್ತರದ ದಿಕ್ಕೊಳು ಸಾರ್ದರೈ ಬಾ
    ಲರವಿಯುನ್ಮುಖನಾಗಿರಲ್ ಪೂರ್ವಕ್ಷಿತಿಜದೊಳಗಂ|
    ಶರದೃತುವ ಕಾಲವದು ಪೋರರು
    ತೆರತೆರನ ತರುಲತೆಗಳೆಲ್ಲವ
    ನಿರುಕಿಸುತಗಣ್ಯ ಖಗಮಿಗಗಳ ರಮ್ಯಕಾನನದೆ||೫||

    ತಿರೆಯು ತಣಿದಾಗಿತ್ತು ಮಳೆಯೊಳು
    ಬಿರಿದುದಾಗಸವೀಗ ತೋರಲು
    ಕಿರಿಯಹಿರಿಯ ಗ್ರಹಗಳಲ್ಲದೆ ತಾರೆಸಂಕುಲವಂ|
    ಕುರಿತು ಮಗಧವ ಭರದೆ ಸಾಗುತೆ
    ಪರಿಪರಿಯಿನಾಶ್ರಮದೆ ತಂಗುತೆ
    ಹರಿಬರಾತಿಥ್ಯವನು ಸವಿಯುತೆ ಮುಂದೆ ಸಾಗಿದರು||೬||

    ದೇವಸೀಮೆಯ ವಿಪಿನದೊಳು ಹಾ
    ಯ್ದಾ ವರಕುವರರೂರ ಸೇರಲು
    ಕಾವ ದೇವನದೇಕೊ ಕಾಯ್ದಿರಿಸಿದ್ದ ಕೆಡುಕನ್ನು|
    ಹೇವ ಸುದ್ದಿಯು ಛಾತಿಸೀಳಿತು
    ಭಾವವುಡುಗಿತು ಧೀರಕುವರರ
    ಸಾವು ಸಂಭವಿಸಿತ್ತು ನಂದನ, ನೆಲವೆ ಕುಸಿದಿತ್ತು||೭||

    ಮೂವರೊಳಗಗ್ರೇಸರನಿಹನ
    ದಾವಕಾಲಕು ಮತಿಯ ನೀಗದ
    ಜೌವನದ ತೇಜದೊಳು ಕಂಗೊಳಿಪಿಂದ್ರದತ್ತನವನ್|
    ಬೇವಸವ ಕಳೆಯುತೆ ವಯಸ್ಯರ
    ಜೀವಿತಾಶೆಗೆ ಜೀವತುಂಬುತ
    ತೀವಿದಘಟದೆ ಪಾರುಗಾಣಲು ಪೇಳ್ದನಿಂತಾಗ||೮||

    ಅಕಟವೇಕೀ ಚಿಂತೆ ತೆಗೆಯಿರಿ
    ಸಕಲವಿದ್ಯೆಗಳೊಳಗೆ ನಾವೊಂ
    ದಕಲತಂತ್ರವ ಕಲಿತೆವಲ್ಲವೆ ಹೊಗಲು ಪರಕಾಯ|
    ಮಿಕಮಿಕನೆ ಹೊರಳಿಸದೆ ನಿಮ್ಮಂ
    ಬಕವ ದಕ್ಕಿಹುದೆನ್ನಿಯವಸರ
    ಮುಕುತಜೀವನರಾಗಲಾವಾ ವರಭಗೀರಥನೊಲ್||೯||

    ಪಾರ್ವೆ ಬಿಟ್ಟಾನೆನ್ನ ದೇಹವ
    ಸೇರ್ವೆ ನಾ ನಂದನ ಶರೀರವ
    ಗರ್ವ ಮೆರೆವೆನು ಬಳಸಿ ಶಕ್ತಿಯ ಗುರುಗಳೆರೆದುದನು|
    ದೂರ್ವವರ್ಪಿಸಿ ಗಣಪನಿಂದಾ
    ಪಾರ್ವತಿಯು ಕಾವಂತೆ ಕಾಯವ
    ತೀರ್ವನಕವೆನ್ನೆಸಕ ವಂದಿಸಿ ಬೇಡಿಕೊಳ್ಳುವೆನು||೧೦||

    ವ್ಯಾಡಿ ಕಾಯುತೆ ಪಿಂಡವೆನ್ನಯ
    ಬಾಡದಂದದೆ ಕಾಪಿಡುತ್ತಲಿ
    ನಾಡಿಮಿಡಿತವ ನಂದರಸನೊಳ್ ಮತ್ತೆ ಮೀಟಿರಲಾನ್|
    ನೋಡಿ ಸಮಯವ ವರರುಚಿಯು ಕೊಂ
    ಡಾಡುತೆನ್ನನು ಬೇಡುವಾಟವ
    ನಾಡಿ ಪಡೆಯಲಿ ಕೋಟಿ ಟಂಕವನಟ್ಟೆ ಗುರುಋಣವ||೧೧||

    ಮಂದಿರಂಗಳನರಸಿ ಪಾಳ್ಬಿ
    ದ್ದೊಂದರೊಳ್ಗಿಟ್ಟಿಂದ್ರಶವವನು
    ಕಂದದಂದದು ನಾಲುವತ್ತರ ಮೇಲಿನೆಂಟು ದಿನ|
    ತಂದು ಗ್ರಂದಿಗೆ ಗೈದು ತಂತ್ರವ
    ಮುಂದೆ ದತ್ತನು ಮರಳೆ ಕಾಯ್ದರು
    ಚಂದಿರನ ಚಲನೆಯನು ಗಮನಿಸಿ ಪಾಡ್ಯದಾದಿಯಿನಿಂ||೧೨||

    ಇತ್ತ ನಂದನ ಸಾವ ಶೋಕದಿ
    ಸುತ್ತ ನೆರೆದಿರೆ ಬಂಧುವರ್ಗವು
    ಹೊತ್ತುಮೀರಲು ದಹನಕಾರ್ಯಕೆ ಚಟ್ಟಕಟ್ಟಿರಲು|
    ಎತ್ತಲೆಳಸಲು ನಾಲ್ಕು ಜನಗಳು
    ಸತ್ತು ಹೆಣವಾಗಿದ್ದ ರಾಜನು
    ಕತ್ತ ಕೊಂಕಿಸುತೆದ್ದು ಕುಳಿತನು ನಿದ್ದೆ ತಿಳಿದಂತೆ||೧೩||

    ಬೆಚ್ಚಿಬಿದ್ದರು ಸುತ್ತನೆರೆದರು
    ಕಚ್ಚಿಹಿಡಿದರು ತಮ್ಮತುಟಿಗಳ
    ನೆಚ್ಚರೈದಿದ ರಾಜ ತಿಳಿಯನು ನಡೆದುದೇನೊಂದೂ|
    ಪೆಚ್ಚುಗೊಳ್ಳದೆ ಮಂತ್ರಿಯಾದವ
    ನೆಚ್ಚರದೊಳಿರ್ದಿಂತು ಸಾರ್ದನು
    ಸಚ್ಚರಿತನೃಪ ಮರಳಿಬಂದಿಹ ಜವನ ಬಾಯಿಂದ||೧೪||

    ದಕ್ಷಮಂತ್ರಿಯು ಯುಕ್ತಿಯಿಂದಲಿ
    ರಕ್ಷಕನೆದುರು ತೋರದೇನನು
    ಚಕ್ಷುಮಿಟುಕಿಸದಾಡಳಿತವನು ಮುಂದುವರಿಸಿದನು|
    ಭಿಕ್ಷು ದತ್ತಂಗಷ್ಟೆ ತೃಪ್ತಿ
    ತ್ರ್ಯಕ್ಷರವ ಜಪಿಸುತಲಿ ಸುಮ್ಮನೆ
    ಯಕ್ಷನೆಂಬಂತಿರ್ದು ಕಾದನು ಬರವ ವರರುಚಿಯ||೧೫||

    ದಿನವೆರಡು ಕಳೆದಿತ್ತು ರಾಜನು
    ಘನಮಹಾಪಂಡಿತರೊಡನೆ ಮಂ
    ಥನದೊಳಿದ್ದಾಗೈದಿ ನಮಿಸುತೆ ಭೃತ್ಯನಿಂತೆಂದ|
    ವನದೊಳಿಂ ಬಂದಿಹನದೊರ್ವನು
    ಜನಪಗಾಶೀರ್ವದಿಸಿ ಮೇಣ್ ತಾ
    ಕನಕವಾಶಿಸುತಿಹನು ತುಂಬಿಸೆ ತನ್ನ ಗುರುಋಣವ||೧೬||

    ಆಪ್ತರಿಂದೊಡಗೂಡಿ ರಾಜನು
    ದೀಪ್ತಿಯಿಂದಲಿ ಬೀಗುತೈದುತೆ
    ತೃಪ್ತಿಯಿಂದಲಿ ನೋಡಿ ತಣಿದನು ತನ್ನ ಸಹಚರನ|
    ತಪ್ತಹೃದಯವ ತೆರೆಯಲಾಗದು
    ಗುಪ್ತದೊಳೆ ಸಂವಹಿಸ ಬೇಕಿದೆ
    ಸಪ್ತಗಿರಿಯಾವಾಸನೆನ್ನನದೇಕೆ ಕಾಡಿಹನೋ||೧೭||

    ಕಪಟಭಾವದೆ ರಾಜ ಪೊಡೆಯನು
    ನೆಪಕೆ ಬಾಗಿಸಿ ಸಖಗೆ ವಂದಿಸು
    ತಪರಿಮಿತದೊಳು ತೋರಿ ಭಕ್ತಿಯ ಸೌಖ್ಯಕೇಳಿರಲು|
    ಜಪಿಸುತಾಶೀರ್ವಚನವರಸಗೆ
    ತಪಸಿಯರುಹಲು ತನ್ನಯೆಸಕವ
    ನೃಪನು ನಿರ್ದೇಶಿಸಿದ ಶಕಟಾಲನಿಗೆ ಸನ್ನೆಯೊಳೆ||೧೮||

    ಸಾರ್ವುದೀಗಳತಿಥಿಗೃಹಕೆ ತಾ
    ವೋರ್ವರೇ ಕೊಂಡೊಯ್ವುದಾಗದು
    ಹೋರ್ವ ಭಟರನು ಕಾಪಿಗಿಟ್ಟೇರ್ಪಾಟು ಮಾಡುವೆವು|
    ಗರ್ವದಾ ಗುರುಕುಲವ ಬಲ್ಲೆವ
    ಥರ್ವಮುನಿಗಳು ಸೌಖ್ಯವಲ್ತೆಲ
    ಪೂರ್ವಕಾಗಮಿಸೆಮ್ಮಸೌಧವ ಪೂತಗೈದಿಹಿರಿ||೧೯||

    ರಾಜನಾಜ್ಞೆಯ ಮೀರ್ವುದುಂಟೇ
    ರಾಜಗುರುವೊಳು ಪೇಳಿ ಮಂತ್ರಿಯು
    ವಾಜಿಪಡೆಯನು ಸಾವಕಾಶದೆ ಸಜ್ಜುಗೊಳಿಸಿದನು|
    ಸೋಜಿಗವಿದೀ ಸಂಗತಿಯಿರಲು
    ಮೋಜ ನೋಡುತ ಸುಮ್ಮನಿರುವೆನೆ
    ರಾಜ ಪೇಳ್ದಾಶ್ರಮವು ಯಾವುದದಾನರಿಯದಿರ್ದು||೨೦||

    ಬಹಳವೇನೂ ತ್ರಾಸಬಡದೆಲೆ
    ಗಹನವೆನಿಪೀ ತಿಸರಗಂಟೊಳಿ
    ನಹಿತ ಸಂಚನು ಬಯಲಿಗೆಳೆದನು ಮಂತ್ರಿ ಶಕಟಾಲ|
    ಮಹಿಮೆ ಪೆರ್ಚೋ ದೇಶದೆಲ್ಲದ
    ರಿಹದೆ ಮೂವರದಭ್ಯುದಯವೋ?
    ಮಹಿಮ ಪೇಳೆಂದುಜ್ಜುಗಿಸಿದನು ತಂತ್ರ ರೂಪಿಸಲು||೨೧||

    ತಡವ ಮಾಡದೆ ಆಣತಿಸಿದನು
    ಹುಡುಕಿ ಶವ ಗುಹೆ-ನಗ-ಮನೆಗಳಲಿ
    ಸುಡಲವೆಲ್ಲವನೊಂದನುಂ ಬಿಡದರ್ಧವುಂ ಬಿಡದೆ|
    ಬಿಡದೆ ಹುಡುಕಲು ತಾನೆ ನಿಂತನು
    ಕೆಡದ ಪಾಂಗಿಂ ಕಾವಲಿದ್ದೆಡೆ
    ಮಡಿಯ ಶವವ ದ್ವಾರದಂಚಲಿ ಬೆಂಕಿಯಾಡದೆಡೆ||೨೨||

    ಯೋಜನೆಯು ನಿಷ್ಫಲವದಾಗೆ ಪ
    ರಾಜಯದಿ ಪೊತ್ತಾನತಾನನ
    ರಾಜಭವನಕೆ ಮರಳಿ ಬಂದರು ಗೆಳೆಯರೀರ್ವರು ತಾವ್|
    ಹಾ! ಜೊತೆಯವನ ಕಳೆದುಕೊಂಡವ
    ನಾ ಜನಕರಿಗೆ ತಿಳಿಪೆವೆಂತೋ
    ಯೋಜನೆಯೆನಿತೊ ಸಾಗಬೇಕಿದೆ ಬರುವೆವೆಂದಿರಲು||೨೩||

    ಪೂಜೆಯೆನ್ನದು ರಾಷ್ಟ್ರಕಾವುದ
    ದೋಜವರ್ಯರು ಹರಸಿರೆನ್ನನು
    ತೇಜಿಯಿಂದಲಿ ಧರ್ಮ ಪಸರಿಸುಗಾರ್ಯಪಥದೊಳಗೆ|
    ರಾಜಕುವರನು ಬಾಲನಿನ್ನೂ
    ಮೋಜ ಮೀರುತೆ ವರ್ಧಿಪನಕಂ
    ಸಾಜ ತಾವದು ರಾಜ್ಯ ನಡೆಪುದು ನಂದರೂಪಿನೊಳು||೨೪||

    ನೈಜ ಭಾವದೆ ಮಂತ್ರಿಯಿಂತೆನೆ
    ರಾಜಗುರುವೂ ಹರಸುತವರನು
    ವಾಜಿರಥವನು ಸಜ್ಜುಗೊಳಿಸುತೆ ಬೀಳುಗೊಟ್ಟಿರಲು|
    ಭಾಜನರು ನಾವ್ ದೈವನಿಯಮ
    ಕ್ಕಾ ಜವನಕರ್ಮವದು ತೀರಿರೆ
    ವಾಜಪೇಯವ ಕಲೆತು ಗೈದರು ವರ್ಷ ಕಳೆದಂದು||೨೫||
    ~ ಶಂ ~

    ಒಂದರ್ಥದಲ್ಲಾಂ ವರನಾರಣಪ್ಪನ್
    ಮಿಂದಾತ ಪಾಡಲ್ ಹಸಿಬಟ್ಟೆಯಾರಲ್
    ಇಂದಿಷ್ಟು ಪದ್ಯಂ ಬರೆಯಲ್ಕದೆಷ್ಟೋ
    ಬೆಂದಿರ್ಪೆ, ವಸ್ತ್ರಂ ಬೆಮರಿಂದಲಾರ್ದ್ರಂ

  2. ಬಾಲಭಾಷೆಯ೦ ಕ್ಷಮಿಸಿರಯ್ 🙂

    ಮಲಗಲೊಲ್ಲೆನೆ೦ಬ ಮಗುವ ತೊಡೆಯ ಮೇಲೆ ವಾಲಿಸಿ
    ಸುಲಭದೊಳ್ಗೆ ಪೇಳ್ದಳಜ್ಜಿ ಕಥೆಯಮವನ ಲಾಲಿಸಿ
    ಗುರುಕುಲದೊಳಗಿರ್ದರಿ೦ದ್ರದತ್ತ ವ್ಯಾಡಿ ವರರುಚಿ
    ಪರಮಶಿಷ್ಯರೆ೦ದುಮೆಲ್ಲರಿವರ ಕರೆಯುತಿರ್ದರಯ್
    ದಿನವುಮವರು ಸೊಗದೆ ಕಲೆಯೆ ಗುರುಕುಲದೊಳ್ ಪಾಠಗಳ್
    ಘನದ ವೇದಶಾಸ್ತ್ರಗಳನುಕಲಿತರೆ೦ಟು ವರ್ಷದೊಳ್
    ಶ್ರವಣ ಮನನ ನಿಧಿಧ್ಯಾಸನಗಳ ನಿತ್ಯ ಕ್ರಮದೊಳು
    ವಿವಿಧ ಸಿದ್ಧಿಗಳನುಮವರು ಬಿಡದೆ ವಶದೆ ಪಡೆದರು
    ಗುರುವು ಪರಮ ಶಿಷ್ಯರುಗಳ ಕರೆದನಿ೦ತು ಪೇಳಲು
    ಗುರಿಯಮಧ್ಯಯನದೆ ಸಾಧಿಸಿರ್ಪನೀವೆ ಧನ್ಯರು
    ಸಿಗರು ಶಿಷ್ಯರುಗಳು ನಿಮ್ಮ ಪ್ರತಿಭೆ ಪೋಲುವ೦ದದಿ
    ಸೊಗವದಿರಲಿ ನಿಮ್ಮಮಾರ್ಗ ಹರನುನಿಮ್ಮ ರಕ್ಷಿಪ೦
    ಗುಣವನೆಮಗೆ ನೀಳ್ದಗುರುವನೆ೦ತು ನಾವು ಭಜಿಪೆವಯ್
    ಋಣವ ತೀರ್ಪ ಮಾರ್ಗಮೆನಿತು ಚರ್ಚಿಸಿದರ್ ಶಿಷ್ಯರು
    ತಣಿಸೆ ತಿಳಿವ ತೃಷೆಯಮಿವರುಮಲ್ತೆ ಜ್ಞಾನದುದಧಿಯು
    ಪಣವನೊ೦ದುಕೋಟಿ ದಕ್ಷಿಣೆಯನು ನೀಡಲುಚಿತವು
    ದಾನಪಡೆಯೆ ಯೋಗ್ಯನಾರು? ನ೦ದನಲ್ತೆ ಶ್ರೀಯುತ೦
    ಬಾನ ಪೋಲ್ವುದವನ ಚರಿತೆಯದಿಪನೆಡೆಗೆ ಪೋಗುವ೦
    ಒಡನೆ ಪೋದರರಮನೆಯೆಡೆ ಕ೦ಡರಲ್ಲಿ ದೃಶ್ಯಮ೦
    ಉಡುಗಿಪೋಯಿತವರ ಬಲವು ಕ೦ಡು ಮಡಿದ ರಾಜನ೦
    ಇನಿತು ಕರುಣೆ ತೋರಲಿಲ್ಲ ವಿಧಿಯು ನಮಗದೆನ್ನುತಾ
    ಎನಿತು ದಕ್ಷಿಣೆಯನು ತೀರ್ಪೆವೆ೦ದು ಬಾನ ನೋಡುತಾ
    ಕುಳಿತರಲ್ಲೇ ಕಾಲಕಳೆಯಿತವರಿಗೇನು ತೋಚದು
    ಸುಳಿಯವೋಲು ಋಣವು ಕಾ೦ಬುತಿಹುದು ಹಿ೦ಡಲುಸಿರದು (ಸುಳಿ = ನೀರಿನ ಸುಳಿ)
    ಹದವು ತಪ್ಪಿ ಮನದೆ ಯೋಚನೆಗಳು ಸುಳಿಯಲೊಬ್ಬಗೆ
    ತದನುಸಾರ ಪೇಳ್ದನಯ್ಯ ತ೦ತ್ರಮೊ೦ದ ವರರುಚಿ
    ಹೇಗು೦ಮಿ೦ದ್ರದತ್ತನರಿವ ಪರರಕಾಯ ಪೊಕ್ಕುದ೦
    ಪೋಗಲವನಿಮಾತ್ಮ ರಾಜನಲ್ಲಿ ರಾಜ ಬದುಕುವ೦
    ನಾನು ರಾಜನಲ್ಲಿ ಕೋಟಿ ವರಹ ಬೇಡೆ ಬರುವೆನು
    ತಾನು ವರಹಗಳನುಮಿ೦ದ್ರದತ್ತನೆನೆಗೆ ನೀಡುವ೦
    ದೇಹಮಿ೦ದ್ರದತ್ತಮಿಲ್ಲೆ ಮ೦ದಿರದೊಳು ತ್ಯಜಿಸಲಿ
    ಬೇಹುಗಯ್ಯೆ ವ್ಯಾಡಿಯದನು ದತ್ತನಾತ್ಮ ಮರುಳಲಿ
    ಸಾಹಸಿಗಳು ಮ೦ತ್ರದ೦ತೆ ಪಡೆಯೆ ಕೋಟಿ ವರಹವ೦
    ಆಹ, ಅಧಿಪನೆನಿತುಮರಳಿಬ೦ದನೆ೦ಬ ಚೋದ್ಯಮ೦
    ಮ೦ತ್ರಿಯು ಶಕಟಾರನಿ೦ಗದೆನಿತೊ ಗ್ರಹಣವಾಯಿತಯ್
    ತ೦ತ್ರಮವನು ಹೂಡಿದ೦ ರಾಜ್ಯದೇಳ್ಗೆಗ೦, ಮೃತರ್
    ದಹನಮಾಡೆ ರಾಜ್ಯದೊಳ್ಗಾತ್ಮ ರಾಜನೊಳ್ ಸದಾ
    ಇಹುದು ಚಿಕ್ಕರಾಜ ತರುಣನಾಗೆ ಕಾಲಮಿರ್ಪುದಯ್
    ಸುಡಲು ಭಟರು ಮೃತರ ದೇಹ ಮ೦ದಿರದೊಳ್ಗಿರ್ಪನಾ
    ಹುಡಗನನ್ನು ದಹಿಸಲಿ೦ದ್ರದತ್ತನಾತ್ಮ ಬ೦ಧಿಯು
    ನೋಡೆಕ೦ದನನ್ನು ಪ್ರೇಮದಿ೦ದಲಜ್ಜಿ ತಟ್ಟುತಾ
    ಮೋಡಿ ಕಥೆಯು ಬೀರ್ವುದಲ್ತೆ ಸ್ವಪ್ನದೊಳ್ಗೆ ಸಾಗುತಾ

  3. Prasad, Souma…very nice work..you are filling the stomach of this problem.

  4. ೧. ಸ್ವರ್ಗಪರೀಕ್ಷಣಂ

    ಸಗ್ಗಸಿರಿಯಂ ಪೇಳಿ ದಣಿವುದೇಂ ಬಗೆಯು, ಪೊಸ
    ಸುಗ್ಗಿಯೇ ದಿನದಿನವು ನುಗ್ಗಿದಂತಿರೆ ಹಿಗ್ಗು,
    ಬುಗ್ಗೆಯುತ್ಸಾಹದಿಂ ಅಗ್ಗಳದ ಓಜೆಯಿಂ
    ಎಗ್ಗಳಿಂ ಸೆಳೆಯುತಿದೆ ಪುಣ್ಯಾತ್ಮರಂ
    [ಎಗ್ಗಳ = ಆಧಿಕ್ಯ, ವಿಶೇಷ]

    ಅಂಕುಡೊಂಕುಗಳಿಲ್ಲ ಶಂಕೆಬಿಂಕಗಳಿಲ್ಲ
    ಮಂಕುತನಮಣಮಿಲ್ಲ ಕೊಂಕುಮಾತುಗಳಿಲ್ಲ
    ಸಂಕುಲವೆ ಲೋಕಹಿತಚಿಂತೆಯಲಿ ತಾನಿರುತೆ
    ಝೇಂಕರಿಸುತಿದೆ ಋತದ ಹಿತಭಾವದಿಂ

    ಪೆಂಪಿನೊಳ್ ಕಮಲೆಯಂ ಕಂಪಿನೊಳ್ ಜಾಜಿಯಂ
    ಸೊಂಪಿನೊಳ್ ಮಲ್ಲಿಗೆಯ ಮೀರಿಸುವ ಪೂಗಳಂ
    ಸಂಪಿಲ್ಲಮೆಂದು ಮೂಗುಮುರಿಯುವರೆಡೆಯಲ್ಲಿ
    ಕಂಪಿಸುವ ನನಗಿಲ್ಲಿ ಬಣ್ಣಿಸಲು ಪದಮೆಲ್ಲಿ?

    ದೂರದರ್ಶನದೆದುರು ಕುಳಿತು ಕೊಳೆಯುವರಿಲ್ಲ
    ದೂರದರ್ಶಕದಿಂದೆ ಭೂತಾರೆರವಿಯರಂ
    ಸಾರೆಯಿಂ ನೋಡುತ್ತೆ ವಿಸ್ಮಯಂಗಳನರಿತು
    ನೀರವದ ಸಾರ್ಥವಂ ಅರಸುತಿಹರಾಸ್ಥೆಯಿಂ

    ಬಡತನವದೊಂದಕ್ಕೆ ಆಲಸ್ಯರಾಯಂಗೆ
    ಕುಡುಕನೆನೆ ತೇಲುವುದು ಗಾಳಿಮರಮೊಂದೆ
    ಹಿಡಿಹಿನಲ್ಲಿರ್ಪುದು ದ್ವೇಷಮೊಂದೆಯೆ ಬಾಯಿ
    ಬಡುಕನೋರ್ವನೆ ದುಂಬಿ ಮತ್ತೆ ಬೇರಿಲ್ಲಂ
    [ಹಿಡಿಹು = ಸೆರೆ, ಬಂಧನ]

    ಅಂತೆಯೀ ಸೊಗಸನ್ನು ಸವಿಯುತ್ತೆ ಬರುಬರುತ
    ಪಂತಿಯರಮನೆಗಳಂ ಐರಾವತಾವಾಸ
    ಮಂ ತಳುವಿನಿಂ ನೋಡಿ, ಸುರಚಾಪಮಂ ಸವರಿ
    ನಿಂತೆನಾಂ ಚಾರು ಉದ್ಯಾನಮಂ ಕಂಡು
    [ತಳುವು = ಸಾವಕಾಶ]

    ಬಿಜ್ಜೆಗರ್ ಗೀತೆಯಂ ಬಿನ್ನಣಿಗರಾದಿಯಾ
    ಕಜ್ಜಮಂ ಕಬ್ಬಿಗರ್ ಕವಿಗುರುವ, ಚಿಣ್ಣರುಂ
    ಸಜ್ಜಾಗುತವಧಾನದಾಟಕುಂ, ನೆರೆದಿರ್ಪ
    ಸಜ್ಜನರ ಚಿಂತನೆಯ ಗೌಜು ಸೊಗಮತ್ತು

    • ರವೀಂದ್ರ, In 2nd verse:
      1) ಮಂಕುತನಮಣಮಿಲ್ಲ – Is it ಮಂಕುತನಮಣುಮಿಲ್ಲ? Else 1 Indian Maund (ಮಣ) = 12.70058636 kgs! Or does ಅಣಮಿಲ್ಲ mean something else?
      2) ಋತದಹಿತಭಾವದಿಂ – Is it ಋತದ (space) ಹಿತಭಾವದಿಂ? Else it will mean ಋತದ+ಅಹಿತಭಾವದಿಂ

      Sorry for picking up on spellos 😉

      • ಪ್ರಸಾದರೆ, ಒಂದಿಷ್ಟೂ ಇಲ್ಲ ಎಂಬರ್ಥದಲ್ಲಿ ಅಣಮಿಲ್ಲ. ‘ಕ್ಷಯಮಣಮಿಲ್ಲ’ ಎಂದು ಪೂರ್ವಕವಿಪ್ರಯೋಗ.

    • 5th verse – ಬಡತನವದೊಂದಕ್ಕೆ… Too good

      If you are really zooming into kathaasaritsaagara, then you have started focussing from satellite camera!

    • On second thoughts, if I rephrase the above lines thus:

      If you are really zooming into – kathaasaritsaagara|
      then you have started to focus from – the satellite camera||

      it almost conforms to an anonymous chandassu: 5+5+5+ನನಾನನಾ|ನಾನನ

    • I notice that you have taken quite some liberty with the UnagaNa-s of the 4th pAda-s; in some you have gone all the way to the last mAtre.

      You have not had UnagaNa-s in 2nd pAda-s, except in the good 5th verse. I think you should add one guru here for uniformity sake.

      All this if the structure is panchamATraa-chaupadi! Is it something else?

      • I notice that you have taken quite some liberty with the UnagaNa-s of the 4th pAda-s; in some you have gone all the way to the 5th mAtre.

      • ಪ್ರಸಾದರೆ,
        ಅಣಮಿಲ್ಲ ಎಂಬುದನ್ನು ಮುದ್ದಣನಿಂದ ಎತ್ತಿದ್ದೇನೆ. ಶ್ರೀರಾಮಾಶ್ವಮೇಧಂ ಹೀಗೆ ಆರಂಭವಾಗುತ್ತದೆ “ಓವೋ! ಕಾಲಪುರುಷಂಗೆ ಗುಣಮಣಮಿಲ್ಲಂ ಗಡ! ನಿಸ್ತೇಜಂ ಗಡ!….”
        ಋತದಹಿತಭಾವದಿಂ – ಅರ್ಥವೇ ತಲೆಕೆಳಗಾಗಿದೆ. ಸರಿಪಡಿಸಿದ್ದೇನೆ.
        ಊನಗಣಗಳ ಬಗ್ಗೆ ನಿಮ್ಮ ಅಭಿಪ್ರಾಯ ಸಾಧು. ಒಂದು ನಿಯಮಕ್ಕೆ ನಿಲ್ಲಿಸುವುದೇ ಉತ್ತಮವೇನೋ? ಸರಿಪಡಿಸುತ್ತೇನೆ.
        ಕಥೆಯ shooting ಅನ್ನು ದೇವಲೋಕದಿಂದ ಆರಂಭಿಸಿ, ಭೂಮಿಗೆ ಹಸ್ತಾಂತರಿಸಿ, ಮತ್ತೆ ದೇವನಗರಿಯಲ್ಲಿ ಮುಗಿಸುವ ಇರಾದೆ.
        ಕಥೆಯು ಲಕ್ಷ್ಮಿ ಸರಸ್ವತಿಯರ ವಿರಸದ extended ಭಾಗವೆಂದು ಹೇಳುವ ಪ್ರಯತ್ನ. ನನ್ನ ಆಲಸ್ಯ ಕರಗಿ ಶಾಯಿಯಾದಾಗೆಲ್ಲ, ಬರೆದು ೧-೨ವಾರದಲ್ಲಿ ಮುಗಿಸುವ ಆಶೆಯಿದೆ.

  5. ವಾರ ಮುಗಿದು ಬೇರೊಂದು ಅಭ್ಯಾಸ ಶುರುವಾಗಿದ್ದರೂ ಸಹ, ಎಲ್ಲರೂ ಈ ವಿಷಯಕ್ಕೆ ಗಮನ ನೀಡಬೇಕಾಗಿ ಕೋರಿಕೆ

  6. ಪಿಂತೆ ಕುಂದಾದ್ರಿಯಲಿ ಹರನೊಲಿದು ಗಿರಿಜೆಗೇ
    ಕಾಂತದಲಿ ಪೇಳ್ದ ಕಥೆಯಂ
    ನಿಂತು ಮರೆಯಲ್ಲಿ ಕೇಳ್ದೊಮ್ಮೆಗಂ ಪತ್ನಿಗಂ
    ಸ್ವಂತಮೆಂದರುಹಲಾಪಂ ||೧||

    ಭುವಿಗೆ ಬಂದಿಳಿದನೈ ಶಾಪಮಂ ಪಡೆದನೈ
    ಭವನ ಭಟ ಪುಷ್ಪದಂತಂ
    ಭವದ ಬವಣೆಯ ಮಾಸು ತೊಗಲಿಗಿರಲೊಳ ತಿರುಳ
    ಛವಿಯು ಕಂತಿಲ್ಲವಿನಿತುಂ ||೨||

    ಒರೆದೆನಾದೊಡೆಯೊಮ್ಮೆಯೊರೆವೆನಲ್ಲದೆಯಾಡೆ
    ಮರುವಾತನೆನಲು ವರ್ಷಂ
    ವರರುಚಿಯ ಪೆಸರಾಂತು ವರಕುಸುಮಪುರವಾಸಿ
    ಮೆರೆವೇಕಸಂಧಿಗ್ರಾಹಿ ||೩||

    ಗುರುವಿನುಪದೇಶಮಂ ಮುಮ್ಮಡಿಸಿ ಹಂಚಿದಂ
    ಪೊರೆದಂ ಪ್ರಭಾವದಿಂದಂ
    ಗುರುಬಂಧುಗಳನಿಂದ್ರದತ್ತನಂ ವ್ಯಾಡಿಯಂ
    ಬೆರಗೆ ಬಲ್ಲವರಿಗಿಲ್ಲಿ ||೪||

    ಕಲಿತವಿದ್ಯೆಗೆ ತೆರಂ ಕೋಟಿ ಹೊನ್ನಿನ ಹೊರೆಯ
    ಕಲಿಪಿದವಗೀಯಲೆಳಸಿ
    ಕಲೆವುದಾದೊಡೆ ನಂದ ರಾಜನಿಂ ಕಲೆವುದೆಂ
    ದಲೆದರಾ ರಾಜನೆಡೆಗಂ ||೫||

    (ಸಶೇಷ)

    • ಪಳೆಯ ವಸ್ತುವಿದೆಂದು ಮರೆತು ಮುಂದೋಡದೆಯೆ
      ಬೆಳೆಸಲ್ಕೆ ತೊಡಗಿರ್ಪಗಂ ನಮಿಪೆ ನಾಂ |
      ಸೆಳೆಯಲೆಮ್ಮನು ಹೊಳ್ಳ ಜೀವ ಕಾವ್ಯಗಳಿನ್ನು
      ಮಳೆ, ಗಾಳಿ ಹೊರಗೆಳೆವವಂಕುರಗಳೊಲ್ ||

    • ಜೀವೆಂ,
      1) good take off.
      2) 3rd verse is good.
      3) ಪಂಚಮಾತ್ರಾಗಣದಲ್ಲಿ
      ’೫-೫-೫-೫
      ೫-೫-೫-ಗುರು’ ಇರುತ್ತದೆ.
      ಇಲ್ಲಿ
      ’೫-೫-೫-೫
      ೫-೫-ಗುರು’ ಮಾತ್ರ ಇದೆಯಲ್ಲ? ಇದು ಯಾವುದು?

      • ಧನ್ಯೋಸ್ಮಿ ಪ್ರಸಾದು. ಈ ಪದ್ಯಗಳ ಛಂದಸ್ಸು ಅಪ್ರಯತ್ನತಃ ಮೂಡಿದ್ದು – ಮೊದಲೆರಡು ಸಾಲುಗಳು ತೋರಿದ ರೂಪದಲ್ಲಿಯೇ ಮುಂದುವರೆಸಿದೆ.

        take off ಏನೋ ಆಯಿತು, ಆದರೆ altitudeಗೆ ಏರುವುದು ತಡವಾಗುತ್ತಿದೆ. ಇಡಿಯ ಪ್ರಸಂಗವನ್ನು ಪದ್ಯಕ್ಕಿಳಿಸುವ ಇರಾದೆಯಿದೆ; ಎಷ್ಟರ ಮಟ್ಟಿಗೆ ನಡೆಯುವುದೋ ಕಾದು ನೋಡಿ 🙂

    • ನಂದನಿರ್ಪನಯೋಧ್ಯೆಯ ಬೀಡಿನಲ್ಲಿ ರಘು
      ನಂದನನ ನಾಡಿನಲ್ಲಿ
      ಬಂದೆವೆಂದೊಡನೆಮ್ಮನಾದರಿಸಿ ಯಾಚನೆಯ
      ತಂದಿರಿಸನೇನಲ್ಲಿಯೆ? ||೬||

      ಎಂದು ಬಗೆದಂದೆ ಸಾಕೇತಮಂ ಕುರಿತು ನಡೆ
      ತಂದರಾ ಮಿತ್ರತ್ರಯರ್
      ಸಂದಣಿಯ ಪಾಳೆಯದ ತೋರಣದ್ವಾರದೊಳ
      ತಂದರಾ ಯುವಯಾಚಕರ್ ||೭|

      ಓರಣದ ಗೂಡಾರಗಳ ಸಾಲಿನಿಂ ಬೃಹ
      ದ್ವಾರಣಂಗಳ ಶಾಲೆಯಿಂ
      ಹೋರುಬಂಟರು ಕಾದುವಂಗಳಂಗಳಿನಶ್ವ
      ನೇರಿದರ ಬಿರುಸೋಟದಿಂ ||೮||

      ಸರಯೂ ನದೀ ತೀರಮಂ ಪಿಡಿದು ಬಳೆದ ವಿ
      ಸ್ತರದ ಕಂಗೊಳ್ವ ನಗರಂ
      ತರಣಿಕುಲಜಾತರೂರಿನ ಗಾಡಿಗೆಣೆಯ ಸುರ
      ಪುರದ ಪಾಂಗಿನ ಪಾಳೆಯಂ ||೯||

      ಸುರಪುರಿಯೊಳಿಂದ್ರ ಭವನಂ ಮೇರು ಶಿಖರ ಹಿಮ
      ಗಿರಿಗಳೊಳಗೆಸೆವುದೆಂತು
      ನೆರೆದ ಪಟವಾಸಗಳ ನಡುವಿನೊಳ್ ಮೆರೆದುದೈ
      ಅರಸನಾವಸಮಂತು ||೧೦||

      (ಸಶೇಷ)

    • ಬಳಿಸಾರ್ದ ಸಬ್ರಹ್ಮಚಾರಿಗಳನೊಳಗುಯ್ದು
      ತೊಳೆದವರ ಪಾದಂಗಳಂ
      ಕಳೆಯೆ ದಣಿವಿತ್ತು ತಣ್ಣೀರು ಬೆಲ್ಲಂಗಳಂ
      ಜಳಕಮಂ ತೀರ್ಚಿ ಬನ್ನಿಂ ||೧೧||

      ಕೈಕೊಳ್ಳಿ ನಿತ್ಯಕರ್ಮಂಗಳಂ ತಪಗಳಂ
      ಕೈಕೊಳ್ಳಿರಾತಿಥ್ಯಮಂ
      ಕೈಕೊಳ್ಳಿ ವಿಶ್ರಾಮಮಂ ಶ್ರಾಂತರೈ ನೀವು
      ಕೈಕೊಂಡಿರೀ ಯಾತ್ರೆಯಂ ||೧೨||

      ಒಳ್ಪಿನಿಂ ಸಂದಿಹುದೆ ನಿಮ್ಮ ವಿದ್ಯಾರ್ಜನೆಯು
      ಒಳ್ಪಿನಿಂ ಗುರುವಪ್ಪರೆ
      ಪೇಳ್ವುದಾಂ ನಿಮ್ಮಡಿಯೊಳೇನನೊಪ್ಪಿಸಲೆಂದು
      ಕೊಳ್ವುದೆಮ್ಮಯ ಸೇವೆಯಂ ||೧೩||

      ಅಂತೆಮ್ಮನುಪಚರಿಸಿ ಸಲ್ಲಿಸಲು ಯಾಚನೆಯ
      ನೆಂತು ನೀಗದು ಗುರುಋಣ
      ಇಂತು ಮನದೊಳೆ ಮಂಡಿಗೆಯ ಮೆದ್ದ ತರುಣರಿಗೆ
      ಕಂತಿತಾಸೆಯು ನಿಜದಲಿ ||೧೪||

      ಕುಸುಮಪುರದರಸ ವೈವಸ್ವತನ ಭಟನಿತ್ತ
      ಬೆಸನ ಮನ್ನಿಸಿ ನಡೆದನೈ
      ಬಿಸುಟನೈ ಪಾರ್ಥಿವನು ಪಾರ್ಥಿವವ ನಸುಕಿನೊಳು
      ಮಸಣವಾದುದು ಪಾಳೆಯ ||೧೫||

      (ಸಶೇಷ)

  7. ೨ ಸ್ತ್ರೀಕಲಹಂ
    ಅನಿತುದೂರದೊಳಿಂದೆ ಜೋಡಿತಾರೆಗಳಂತೆ
    ವಿನಯವಾರಿಧಿ ಸರಸ್ವತಿ ಮತ್ತೆ ಲಕ್ಷ್ಮಿಯರ್
    ಧನವಿದ್ಯೆಗಧಿಪರೊಡಗೂಡಿ ಸಂತಸದಿಂದೆ
    ಸನಿಹದೊಳ್ ಕುಳಿತು ಹರಟುತಿಹರಾಳ್ತೆಯೊಳ್

    ಚಣದೊಳೇ ಬಿಸಿಲಾರಿ ಮೋಡವಾವರಿಪಂತೆ
    ನುಣುಪಾರಿ ಮಾತಲ್ಲಿ ಬಣಗೇರಿ ಮನದಿ ಮೇ
    ಣಣಕದಿಂ ಚುಚ್ಚುತ್ತೆ ವಿರಸದಿಂ ಮುಳಿಯುತ್ತೆ
    ಗುಣವನೇ ಪಣವಿಡುವ ಸನ್ನಹದೊಳಿರ್ಪರೇನ್?

    ವಿದ್ಯೆಯಾಕಾಂಕ್ಷಿಗೂ ರಾಜರೇ ಗತಿಯಾಯ್ತು
    ಪದ್ಯದಿಂ ತುಂಬುವುದೆ ಹೊಟ್ಟೆ ಲೋಗಿಗರಿಂಗೆ
    ಉದ್ಯತರ್ ಸಹಜದಿಂ ಗಡಮೆನ್ನನರಸುವರ್
    ಸದ್ಯಮಿವರಿಂದೆ ಸಂಗತಮೆನಲ್ ವಿಷ್ಣುಸತಿ
    [ಉದ್ಯತ = ಪ್ರಯತ್ನಶೀಲ]

    ಕುರುಡುನೋಟದ ಮಾತ ಕೇಳಲಾರೆನು ಗೆಳತಿ
    ಅರಿಗಳಾರನು ತಡೆವ ಮಾರ್ಗಮಂ ತೋರುತಲ್
    ಅರಿವನೇರಿಸಿ ಶೋಕಭಯವನಾರಿಪ ಗಡದ-
    ಪರಿಗ್ರಹಿಗಳ ಪರಿಯನರಿಯೆಂದಳೀ ರಾಣಿ

    ದೇಶದೇಶದಿ ಕದನ ಸೋದರರ ಒಳಜಗಳ
    ನಾಶವಾದರು ಮುಗಿಯದೈ ಕೋಪ ತಾಪಗಳು
    ಆಶೆಗುಂ ಮಿತಿಯಿಲ್ಲ, ತೃಪ್ತಿಯೂ ಮೊದಲಿಲ್ಲ
    ಈಶನಾಣೆಗು ಬಲ್ಲೆ ಸಿರಿದಾಹದೋಜೆಯಂ

    ಎನ್ನಬಗೆ ಗೆದ್ದವಗೆ ಸಿರಿಗಳಿಕೆ ಕಷ್ಟವೇನ್
    ಹೊನ್ನಮಳೆಯನೆ ತರುವರಿಚ್ಚೆಯಾದೊಡೆ ನಿಜಂ
    ಇನ್ನುಮಾತುಗಳೇನು? ನೀನೆ ನೋಡೆಲೆ ಸಾಕು
    ಮುನ್ನಮಾಗಲಿಯೆಂದು ವಾಗ್ದೇವಿಯುಸಿರಿದಳ್
    [ಮುನ್ನ = ಆರಂಭ]

    ಸ್ತ್ರೀಕಲಹದಿಂ ಕುದ್ದು ಹೊರಬಂದ ಭಾಸ್ಕರಂ
    ಭೀಕರದ ಕಿರಣದಿಂ ಬಿಳಿಮೋಡಮಂ ಸುಡಲು
    ಸೀಕಲಾದಾಮೋಡ ತಾನಳುತಲಿಳಿವಂತೆ
    ಸೀಕರದ ಹನಿಯಲಿಳೆ ಪಸುರಿನಿಂ ಹಸನಾಯ್ತು
    [ಸೀಕಲು = ಸೀದು ಹೋಗು, ಕರಕು, ಸೀಕರ = ತುಂತುರು]

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)