Apr 292012
 

ಗಡ್ಡಂ ಬೋಳಿಸಿಕೊಳ್ ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

ಶಾರ್ದೂಲ ವಿಕ್ರೀಡಿತ ಛಂದಸ್ಸಿನ ಪದ್ಯದ ಯಾವುದಾದರೊಂದು ಸಾಲು ಹೀಗಿರುವಂತೆ ಪದ್ಯ ರಚಿಸಿರಿ

[ ಶಾ.ವಿ :: ನಾನಾನಾನನನಾನನಾನನನನಾ | ನಾನಾನನಾನಾನನಾ ]

  44 Responses to “ಪದ್ಯಸಪ್ತಾಹ – ೧೮ – ಸಮಸ್ಯೆ”

  1. ಅಡ್ಡಂಬೇಕಿದು ನಾಥ, ಹಿಂಸೆ, ಪನಸಂ ಮುತ್ತಿಟ್ಟವೋಲ್ ನೀರಸಂ
    ಕಡ್ಡಾಯಂಬಿದೆ ಕೇಳು ಮುಟ್ಟಗೊಡೆನಾ ’ದೂರಂ’ಬೆನಲ್, ತಕ್ಷಣಂ
    ಜಡ್ಡಾಗಿರ್ದ ಕಪೋಲ ಕೇಶಗಳ ಕ್ಷೌರಾಚಾರ್ಯ ನಿರ್ಮೂಲಿಸಲ್
    ಗಡ್ಡಂ ಬೋಳಿಸಿ, ಕೊಳ್ ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ”

    • ಮೂರನೆಯ ಸಾಲಿನಲ್ಲಿ ’ಕ್ಷೌ|ರಾಚಾರ್ಯ’ ಎಂಬಲ್ಲಿ ಯತಿಭಂಗವಾಗಿದೆಯಲ್ಲವೆ? ಅಲ್ಲದೆ, ಹಿಂದಿನ ಅಕ್ಷರಕ್ಕೆ (ಳ) ಗುರುತ್ವವೂ ಬಂತಲ್ಲವೆ? ಅಥವಾ ’ಕ್ಷೌ’ ಶಿಥಿಲದ್ವಿತ್ವವೊ?

    • ೧) ’ದೂರಂ’ಬೆನಲ್ – ಇಲ್ಲಿ ’ಅಂಬು’ವಿನ ಪ್ರಸ್ತುತತೆ ಏನು ತಿಳಿಸಿ.
      ೨) ’ಕ್ಷೌರಾಚಾರ್ಯ ನಿರ್ಮೂಲಿಸಲ್’ ಹಾಗೂ ’ಗಡ್ಡಂ ಬೋಳಿಸಿ’ – ಪುನರಾವರ್ತನವಾಯಿತಲ್ಲವೆ? ’ಬೋಳಿಸಿದ ಗಡ್ಡವನ್ನು ಕೊಟ್ಟ’ ಎಂದಿದ್ದರೆ ದ್ವಿರುಕ್ತಿ ಇರುತ್ತಿರಲಿಲ್ಲ. ಅಲ್ಲವೆ?
      ೩) ಎರಡನೆಯ ಹಾಗೂ ಮೂರನೆಯ ಪಾದಗಳಲ್ಲಿ ಆದಿಪ್ರಾಸ ವ್ಯತ್ಯಯ ಮಾಡಿಕೊಂಡಿದ್ದೀರಿ ಅಲ್ಲವೆ?

      • ಕ್ಷೌರಾಚಾರ್ಯ …ಸಾಲನ್ನು ಓದುವಾಗ ಕ್ಷೌರ – ಆಚಾರ್ಯ ಎಂಬ ಅರ್ಥದ್ವನಿಸಲಿಯೆಂದೇ ಹಾಗೆ ಮಾಡಿದ್ದೇನೆ. ದೂರಂ+ಎನಲ್ = ದೂರಂಬೆನಲ್. ಅಂಬುಶಬ್ದವಿಲ್ಲ. ಕ್ಷೌರಾಚಾರ್ಯ ನಿರ್ಮೂಲಿಸಿದ್ದು, ಕಪೋಲಕೇಶಗಳನ್ನ ನಂತರ ಗಡ್ಡವನ್ನ…ಪ್ರಾಸನಿಯಮದಲ್ಲಿ ತೊಂದರೆಯಿಲ್ಲ. ಡ ಕಾರ ಒತ್ತಕ್ಷರವಾಗಿ ಡಿ ಡ ಡೆ ಸಹ ಆಗಬಹುದು. ಸ್ಪಂದನಕ್ಕೆ ಧನ್ಯವಾದಗಳು. ಮತ್ತು ವಿವರಣೆ ಬೇಕಾದಲ್ಲಿ, ದೂರವಾಣಿಯೇ ಸಮರ್ಪಕ.

  2. ದಡ್ಡ೦ ಸು೦ದರನಿರ್ಪನೆ೦ಬ ಭ್ರಮೆಯೊಳ್ ಕಲ್ಯಾಣಮ೦ ಗಯ್ಯೆ ತಾ೦
    ಹೆಡ್ಡ೦ ತಾ೦ ವ್ಯವಹಾರದೊಳ್ಗದಿರಲಾ ಸ೦ಸಾರದೊಳ್ ಪೆಣ್ಣಿನಾ
    ಕಡ್ಡಾಯ ಕ್ರಮಗಳ್ ತಳಿರ್ದು, ಪಣವು೦ ಕ್ಷೌರಾ೦ತ್ಯದೊಳ್ ಮಿಕ್ಕುದಾ
    ಗಡ್ಡಂ ಬೋಳಿಸಿ, ಕೊಳ್! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

    ವ್ಯವಹಾರದಲ್ಲಿ ಅಯೋಗ್ಯನಾದ ಗ೦ಡನು ಹೆ೦ಡತಿಯಿ೦ದ ಕ್ಷೌರಕ್ಕೂ ಕೂಡ ಹಣ ಪಡೆದು, ಉಳಿದ ಚಿಲ್ಲರೆಯನ್ನು ಸಹ ಅವಳಿಗೆ ಕೊಟ್ಟ 🙂

  3. ಬುಡ್ಡೀ ದೀಪದ ಮಬ್ಬಿನೊಳ್ಬರೆದಪರ್ ಕಣ್ ಹುಬ್ಬು ಡೊಂಕಪ್ಪುದೌ,
    ಅಡ್ಡಾಗಿರ್ಪುದು ಗೂಟನಾಮ ಫಣದೊಳ್ ; ಮೇಕಪ್ಪು ಬಣ್ಣಂಗಳೋ
    ಜಿಡ್ಡಾಗಲ್ಕದನುಪ್ಪನುಜ್ಜಿ ತೆಗೆಯೌ; ಗೋಂದಿಂದೆ ಪತ್ತಿರ್ಪುದೀ
    ಗಡ್ಡಂ – ಬೋಳಿಸಿಕೊಳ್ ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

    ನಾಟಕದಲ್ಲಿ ಋಷಿಯ ಪಾತ್ರ ತೊಟ್ಟ ಹೆಂಡತಿಯ ವೇಷದ ಬಗ್ಗೆ ಗಂಡನಾಡಿದ ಮೆಚ್ಚುನುಡಿಗಳು

    • ಜೀವೆಂ – ನಾಟಕದ ಹೆಣ್ಣು, ಗಡ್ಡವನ್ನು ಬಿಚ್ಚಿಡು ಎನ್ನುವ ಬದಲು ಬೋಳಿಸಿಕೊಳ್ಳು ಎಂಬ ಗಂಡನ ನುಡಿಗಳು ಸ್ವಾರಸ್ಯಕರವಾಗಿವೆ. 🙂

      • ರಾಮಚಂದ್ರ, ಗೋಂದು ಗಟ್ಟಿಯಾಗಿದ್ದಲ್ಲಿ ಕ್ಷೌರವೇ ಗತಿಯಲ್ಲವೇ? 🙂 ಧನ್ಯೋಸ್ಮಿ.

        • Excellent parihara!!

        • ಜೀವೆಂ – ಗೋಂದು ಇರದಿದ್ದರೂ, ತಮಾಶೆಗೆಂದು (tongue-in-cheek) ಬೋಳಿಸಿಕೊಳ್ಳು ಎಂದರೂ ಸ್ವಾರಸ್ಯವೇ. 🙂

        • ನಿಜ ರಾಮಚಂದ್ರ 🙂 ಡಾ|| ಶಂಕರರಿಗೆ ನಮನಗಳು, ಧನ್ಯೋಸ್ಮಿ.

  4. ಅಡ್ಡಂ ಜ್ಞಾನವದಿರ್ದುದಾಗ ಸತಿಯಳ್| ಮುತ್ತನ್ನಿಡಲ್ ನಾಥಗಂ
    ಗಡ್ಡಂ ಚುಚ್ಚಲು ಕೊಂಕಿಸುತ್ತೆ ಹುರುಬಂ| ಪೋಗೆಂದಳಾ ಭಾಮೆಯಳ್
    ಹೆಡ್ಡಂ ನಾನಹೆ ನಿತ್ಯ ಮಾಡದೆಲಿಹೆಂ| ಕ್ಷೌರಂ ಮಹಾಲಸ್ಯದಿಂ
    ಗಡ್ಡಂ ಬೋಳಿಸಿ “ಕೊಳ್” ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

    • ಪ್ರಸಾದು – ಒಳ್ಳೆಯ ಪೂರಣ. 🙂

      • ನನ್ನ ಎಷ್ಟೋ ಪದ್ಯಗಳಿಗೆ ನೀವು ಹೀಗೆ ಬೆನ್ನುತಟ್ಟಿರಲಿಲ್ಲವಾಗಿ, ಇದು ನಿಜಕ್ಕೂ ಮುದಾವಹ!

        • ನಿಮ್ಮೊಡನೆ ನಡೆಸಿದ ಎಷ್ಟೋ ಚಾಟು ಪದ್ಯಗಳ ಸಂಭಾಷಣೆಗಳು, ಮೆಚ್ಚುಗೆಯಿಂದ ಹುಟ್ಟಿದ್ದೇ ಆಗಿರುತ್ತವೆ. 🙂
          ಆದರೂ ಸ್ಪಷ್ಟವಾಗಿ ಹೇಳದಿದ್ದಲ್ಲಿ ಅದು ಖಂಡಿತಾ ನನ್ನ ತಪ್ಪೇ ಸರಿ. 🙁

  5. ಪಡ್ಡಂ ತಿನ್ನುತ ಬಂಧುಮಿತ್ರರೊಡನೇಂ ಆಟಂಗಳನ್ನಾಡುತಾ
    ಸೆಡ್ಡಂವೊಡ್ಡುತರೆಲ್ಲರುತ್ಸುಕತೆಯೊಳ್ ಮೋಜಿಂದಲಾಸ್ವಾದಿಸಲ್
    ಆಡ್ಡಂಬ್-ಶರ್ಡಲಿ ಹಾವಭಾವದೊಳಗೇಂ ತೋರಿರ್ದಳಾ ವಾಕ್ಯಮಂ
    “ಗಡ್ಡಂ ಬೋಳಿಸಿಕೊಳ್” ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

    [ ಆಡ್ಡಂಬ್-ಶರ್ಡಲಿ = ಆ dumb-charade ಲಿ ]

    • ರಾಮ್,

      dumb-charade ತ೦ದು ಆದೇ ಪದವನ್ನು ಆದಿಪ್ರಾಸಕ್ಕು ಅಳವಡಿಸಿದ್ದೀರಿ. ನಿಮ್ಮ ಪೂರಣ ಬಹಳ ಹಿಡಿಸಿತು 🙂

  6. ಚ೦ದ್ರಮೌಳಿ, ಜೀವೆ೦, ಪ್ರಸಾದು ಅವರ ಪೂರಣಗಳು ಬಹಳ ಚೆನ್ನಾಗಿದೆ 🙂

  7. ಎಲ್ಲರ ಪರಿಹರಕ್ರಮ-
    ಮುಲ್ಲಸಿಪಂತಿರ್ಪುದಲ್ತೆ ನವ್ಯತೆಯಿಂದಂ|
    ಸಲ್ಲಲಿತಕಲ್ಪನೆಗಳಿಂ
    ಚೆಲ್ಲುವರಿದ ಪದ್ಯಪಾನಮಿದು ರಸಪಾನಂ||

    ಆದೊಡಮಲ್ಲಲ್ಲಿಯ ಭಾ-
    ಷೋದಿತಶೈಥಿಲ್ಯಹಲ್ಯಮಂ ಕಂಡಾಗಳ್|
    ಮೋದದ ಮೈರೇಯದೆಡೆಯೊ-
    ಳೋದಿನ ನೆನಪಾದ ರೀತಿ ಕಸಿವಿಸಿಯಕ್ಕುಂ:-)||

    (ಹಲ್ಯ=ದೋಷ, ಮೈರೇಯ=ಒಂದು ಬಗೆಯ ತೀಕ್ಶ್ಣವಾದ ಮದ್ಯ)

  8. ಪತ್ನಿ ಬಂಗಾರವನ್ನು ಕೇಳಿದಾಗ, ಕುಟುಕಿಯಾಡುವ ಪತಿ:

    ದುಡ್ಡಂ ನೇಮದಿ ಕಷ್ಟನಷ್ಟತೆರದಿಂ ಸಂಪಾದಿಸುತ್ತಿರ್ಪನಂ
    ವಿಡ್ಡೂರಂಗಳ ಭಾದೆ ಭಾರ್ಯೆಯರಿಯಳ್ ಬಂಗಾರಮಂ ಯಾಚಿಸಲ್
    ಕಡ್ಡಂ ಸೈರಿಸಿ ಹಲ್ಲ ಕಚ್ಚಿ, “ದುಡಿದಿರ್ಪೀ ಗಂಟನುಂ ಈಗಲೀ-
    ಗಡ್ಡಂ ಬೋಳಿಸಿ ಕೊಳ್” ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

    ವಿಡ್ಡೂರ = ತೊಂದರೆ
    ಕಡ್ಡ = ಕೋಪ
    ಅಡ್ಡ = ಅರ್ಧ
    ಗಂಟನುಂ ಈಗಲೀಗೆ ಅಡ್ಡಂ ಬೋಳಿಸಿ ಕೊಳ್

    • ಓಹೋ… ಏನ್, ಹೊಳ್ಳ ತು೦ಬಾ ದಿನಗಳ ನ೦ತರ…
      ಪದ್ಯ ಬಹಳಚೆನ್ನಾಗಿದೆ!

      ದಯವಿಟ್ಟು ಬಿಡುವು ಮಾಡಿಕೊ೦ಡು ಬರಿಯಪ್ಪ… 🙂

    • ಪುನರಾಗಮಿಸಿರೆ ಹೊಳ್ಳಂ
      ಮನಮೆಂಬೀ ಬರದ ಬುವಿಗೆ ಬಂದುದು ಹಳ್ಳಂ|
      ಅನುವಾಗುವುದೇಂ ಕಳ್ಳಂ
      ಜನತೆಗೆ ನೀಡಲ್ಕೆ ಕವಿತೆಯಾ ಮಿಗೆ ಬಳ್ಳಂ?

    • ನಸುನಗುತ ಬರವಿತ್ತು ಹೊಸಬಗೆಯ ಗುರಿಯಿತ್ತು
      ಕಸುವಿತ್ತ ಸೋಮಂಗಣೇಶರಿಂಗೆ
      ಹೊಸಬರಿಗೆ ಹಳಬರಿಗೆ ಗೆಳೆಯರಿಗೆ ವಂದಿಸುತೆ
      ಹೊಸಹುರುಪಿನಿಂದಲೇ ಬಂದಿರುವೆನೈ

      ಆಹಾ! ಪದ್ಯಪಾನ ಹೊಸ ಚಿಗುರು ಬೇಸಿಗೆಯ ಬಿಸಿಲನ್ನ ಮರೆಸಿದೆ. ಹೊಸ ವೈವಿಧ್ಯಗಳು ಬಾಯಾರಿಕೆಯನ್ನ ತಣಿಸಿದೆ. ಶಂಕರರ ಆಗಮನದಿಂದ ವೈಕುಂಟದ ಸಿರಿಯೇ ಧರೆಗಿಳಿಸಿದೆ. ಎಲ್ಲಾ ಒಟ್ಟಿಗೆ ಸೇರಿ, ಈ ಮಳೆಗಾಲದಲ್ಲಿ ಒಳ್ಳೆಯ ಪೈರನ್ನೇ ಹರಿಸೋಣ 🙂

      ಅಮವಾಸ್ಯೆ ಹುಣ್ಣಿಮೆಗೊಮ್ಮೆ ಬರುವ ನನ್ನ ಬಗ್ಗೆ ಒಂದು ಅಣಕವಾತು
      ಅಕ್ಷರನಾಥಂ ರವಿತ-
      ನ್ನಕ್ಷವ ತೊರೆಯನ್, ಸಮಾನನಾಮದ ಹೊಳ್ಳಾ
      ಪಕ್ಷಕು ಇಲ್ಲೈ, ನೀಂ ಬರೆ
      ದಕ್ಷಿಣದೊಳ್ ಭಾನುಬಿಂಬಮಿಂದುದಿಸಿತಲಾ

  9. ಬುಡ್ಡಾ ಮಿಲ್ ಗಯವೆನ್ನುತಾ ಮದನಿಕಾ ತಾಯಲ್ಲಿ ಗೋಳಾಡಿರಲ್
    ಅಡ್ಡಾದಿಡ್ಡಿಯ ಮಾತನಾಡದಿರು ಆಧಾರ್ ಕಾರ್ಡಿದೆಯೆಂದಾಗಲೇ
    ಚಡ್ಡೀ ವೇಷವ ಬಿಚ್ಚಿ ಪತ್ರದೊಡನೇ ವೋಡುತ್ತ ಪಾರ್ಲಾರಿನೊಳ್
    ಗಡ್ಡಂ ಬೋಳಿಸಿ, ಕೊಳ್ ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

    ಮದನಿಕಾ – ಹುಡುಗಿಯ ಹೆಸರು.
    ವ್ಯಾಖ್ಯ್ಶಾನವೇನು ಬೇಕಾಗಿಲ್ಲವೆನಿಸುತ್ತದೆ.

    • ಆಧಾರ್ ಕಾರ್ಡಿನಲ್ಲಿ ಇರುವ ವಯಸ್ಸನ್ನು (ತಾನು ಇನ್ನೂ ಚಿಕ್ಕವನು ಎಂದು) ತೋರಿಸಲು ನಮ್ಮ ಹೀರೋ ಓಡುತ್ತಾನೆ.

    • ಒಂದು ಚಿಕ್ಕ ವ್ಯಾಖ್ಯಾನ:

      ಆಧಾರ್ ಕಾರ್ಡಿನಲ್ಲಿ ಇರುವ ವಯಸ್ಸನ್ನು (ತಾನು ಇನ್ನೂ ಚಿಕ್ಕವನು ಎಂದು) ತೋರಿಸಲು ನಮ್ಮ ಹೀರೋ ಓಡುತ್ತಾನೆ.

    • ಎರಡನೆ ಸಾಲಿನಲ್ಲಿ ಛಂದಸ್ಸಿನ ದೋಷವಿರುವಂತಿದೆ.
      ಪದ್ಯದ ಅರ್ಥದಲ್ಲಿ ಸಂಶಯ – ಅವನು ಮದನಿಕೆಗೆ “ಗಡ್ಡಂ ಬೋಳಿಸಿಕೊಳ್” ಎಂದೇಕೆ ಹೇಳಿದ ಎಂದು ತಿಳಿಯಲಿಲ್ಲ. ಹೆಂಡತಿಯೊಡನೆ ಏನಾದರೂ ಪಣ ತೊಟ್ಟಿದ್ದನೇ?
      ಹಾಗು, ಮೂರನೆಯ ಸಾಲು ಕೂಡ ಒಂದು ಹೊಸ ಸಮಸ್ಯೆಯಂತೆಯೇ ಇದೆ 🙂

      • ಧನ್ಯವಾದಗಳು.

        ಮದನಿಕಾ ಎಂಬ ಹುಡುಗಿಗೆ (ಬಹುಶ್ಃ ಗಡ್ಡದ ಕಾರಣದಿಂದ ) ವಯಸ್ಸಾದಂತಿರುವ ಹುಡುಗನೊಡನೆ ಮದುವೆ ನಿಶ್ಚಯವಾಗುತ್ತದೆ. ಆವಳು ಈ ಹುಡುಗ ಮುದುಕ(ಬುಡ್ಡಾ)ನಂತಿದ್ದಾನೆ ಎಂದಾಗ ಆ ಹುಡುಗ ತನಗಿನ್ನೂ ವಯಸ್ಸಾಗಿಲ್ಲ ಎಂದು ಸಮರ್ಥಿಸಿಕೊಳ್ಳುವದಕ್ಕೆ ಆಧಾರ್ ಪತ್ರವನ್ನು ತೋರಿಸುವುದಕ್ಕೆಂದು, ಚಡ್ಡಿ ಹಾಕಿಕೊಂಡಿದ್ದವನು , ಅದನ್ನು ಬದಲಾಯಿಸಿ, ವೇಗವಾಗಿ ಓಡುತ್ತಾ ಪಾರ್ಲರ್ ಗೆ ಹೋಗಿ ತನಗಿದ್ದ ಗಡ್ಡವನ್ನು ತೆಗೆಸಿಕೊಂಡು, ಆ ಹುಡುಗಿಗೆ ಆಧಾರ್ ಪತ್ರವನ್ನು ಕೊಡುತ್ತಾನೆ.
        ಎರಡನೆ ಸಾಲಿನಲ್ಲಿ ಛಂದಸ್ಸಿನ ದೋಷ – ಯಾವುದು ತಿಳಿಯಲಿಲ್ಲ.

        ಬುಡ್ಡಾ ಮಿಲ್ ಗಯವೆನ್ನುತಾ ಮದನಿಕಾ ತಾಯಲ್ಲಿ ಗೋಳಾಡಿರಲ್
        ಅಡ್ಡಾದಿಡ್ಡಿಯ ಮಾತನಾಡದಿರು,ಆಧಾರ್ ಕಾರ್ಡಿದೆಯೆಂದಾಗಲೇ
        ಚಡ್ಡೀ ವೇಷವ ಬಿಚ್ಚಿ ಪತ್ರದೊಡನೇ ವೋಡುತ್ತ ಪಾರ್ಲಾರಿನೊಳ್
        ಗಡ್ಡಂ ಬೋಳಿಸಿ, ಕೊಳ್ ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

        • ವಿವರಣೆಗೆ ಧನ್ಯವಾದಗಳು 🙂
          ಎರಡನೆ ಸಾಲು ಇಂತಿದೆ ::
          ಅಡ್ಡಾದಿಡ್ಡಿಯ ಮಾತನಾಡದಿರು,ಆಧಾರ್ ಕಾರ್ ಡಿದೆ ಯೆಂದಾಗಲೇ
          ಒಂದು ಲಘು ಹೆಚ್ಚಾಗಿದೆ.

          • ಈಗ ಸರಿಯಾಗಿರಬಹುದು:

            ಬುಡ್ಡಾ ಮಿಲ್ ಗಯವೆನ್ನುತಾ ಮದನಿಕಾ ತಾಯಲ್ಲಿ ಗೋಳಾಡಿರಲ್
            ಅಡ್ಡಾದಿಡ್ಡಿಯ ಮಾತನಾಡದಿರು,ಆಧಾರ್ ಕಾರ್ಡುವುಂಟೆನ್ನುತಲ್
            ಚಡ್ಡೀ ವೇಷವ ಬಿಚ್ಚಿ ಪತ್ರದೊಡನೇ ವೋಡುತ್ತ ಪಾರ್ಲಾರಿನೊಳ್
            ಗಡ್ಡಂ ಬೋಳಿಸಿ, ಕೊಳ್ ! ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

  10. त्वद्वेणी दृढबन्धनाद्वितनुते मन्मूर्ध्नि कान्त व्यथां
    तामीषत् श्लथयेति शैलसुतया सोल्लुण्ठमुक्तो हरः ।
    सोऽप्यर्धाङ्गगताम् “अये मुखशशिच्छायाविघातोद्यतं
    श्मश्रुं भामिनि ते वपे”त्यकथयत्प्रेयान्निजप्रेयसीम् ॥

    “Your braid, my lord, is tied so tightly, it causes me a headache. Pray loosen it a little”, thus playfully chided by Parvati, Shiva replied back to her, occupant of his left half, thus “My dear, your beard destroys the beauty of our moon-face. Pray, do away with it”
    The idea is that since Shiva and Parvati share the same body, the onus of loosening the braid and shaving the beard has to fall on both. Parvati puts the onus of the former on Shiva and Shiva playing the same card puts the onus of the latter on Parvati

    • Shankar – This is excellent. Such solutions can only come from you. Thanks so much for the extra effort of translating the samasye also into Sanskrit.

    • ವೀಣಾಕ್ವಾಣಗುಣೇನ ವಾಣ್ಯಲಮಲಂ; ಮಾ ಮಾ ರಮೇ ಪಾದಯೋ-
      ಸ್ಸಂವಾಹೇ ಸ್ವನಿತೇನ ಕಂಕಣಗಣವ್ಯಾಲೋಲಿತೇನಾಂಜಸಾ|
      ಮಂಜೀರೇ ಪ್ರತಿಮುಂಚ ಗೌರಿ ನಟನೇ ಶ್ರೋತವ್ಯಮಸ್ಮನುದೇ
      ಕಾವ್ಯಂ ಶಂಕರಸತ್ಕವೇರಿತಿ ವದಂತ್ಯರ್ಘಂ ತ್ರಯೀಮೂರ್ತಯಃ||

      ಶಂಕರನ ಕವಿತೆ ಯಾವುದೇ ವಸ್ತುವಿಗೂ ಆಭಿಜಾತ್ಯ-ಆನಂದಗಳನ್ನು ತರುತ್ತದೆಂಬ ನಮ್ಮ ನಂಬುಗೆ ಮತ್ತೆ ಮತ್ತೆ ನಿಜವಾಗುತ್ತಿದೆ:-)

      • मुक्त्वा मात्सर्यमार्य स्तुवति भवति मां यच्छिरो नम्रमेत
        त्तत्र व्रीडैव हेतुः परम इति जनो मन्यते नैतदेवम् ।
        किन्तु श्रीशारदाम्बाकरकलितशुकत्रोटिकोटिच्छटाकौ
        त्वत्पादौ द्रष्टुमिच्छोर्मम नमनकृते मार्गणायास एषः ॥

        When you, far removed from envy, praise me, I look down and peaple think I am embarrassed. But believe me Sir, this is an attempt to search for your
        feet which I wish to salute – feet as crimson as the beak of the sportive parrot which Sarasvathi fondles.

    • In just one word (अर्धाङ्गगताम्), you have clarified that this is about अर्धनारीश्वर!

    • ಆಹಾ! ಅದ್ಭುತವಾದ ಪೂರಣ ಮತ್ತು ಅಭಿನ೦ದನೆ ಪದ್ಯಗಳು… ಬಹಳ ಚೆನ್ನಾಗಿದೆ:)

    • Dear Shankar – I am completely spellbound and flabbergasted at your mind blowing imagination expressed in the poem. Very great work.. 🙂

  11. ಗಿಡ್ಡಂ ಸುಂದರಿಯಾತಳೆಂದರಿತವನ್ ಸಂತೋಷಗೊಂಡಿರ್ದನುಂ
    ದುಡ್ಡಂ ಕೊಟ್ಟರು ಕಾಣದಾಯ್ತು ಹಸಿತಂ ಮಾಳ್ತಿದ್ದರೂ ಹಾಸ್ಯಮಂ
    ಸೆಡ್ಡಂ ತೊಟ್ಟವನಾಗಿ ಹಾಸಹರಿಸಲ್, ತೆಂಗಂ ಪಿಡಿರ್ದಾಕೆಗಂ
    “ಗಡ್ಡಂ ಬೋಳಿಸಿಕೊಳ್” ಎನುತ್ತೆ ನುಡಿದಂ ಪ್ರೇಯಂ ನಿಜಪ್ರೀತೆಗಂ

    [ ಪ್ರಿಯತಮೆಯ ಮೊಗದಲ್ಲಿ ನಗುವು ಮಾಯವಾಗಿರಲು, ತೆಂಗಿನ ಗಡ್ಡವ ಬೋಳಿಸಿಕೊಳ್ ಎಂದನು ]

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)