May 272012
 

ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ” – ಎಂಬ ಸಾಲುಳ್ಳ ಕಂದ ಪದ್ಯವನ್ನು ಪೂರಣಿಸಿ

ಹಲ್ಲು, ಕಾಲಿಂದ ಹುಟ್ಟಿ ಕಿವಿಯನ್ನು ಕಡಿಯಿತು ಎಂಬ “ಅರ್ಥವಿರದ ಹೇಳಿಕೆಯಂತೆ” ತೋರುವ ಸಾಲಿಗೆ ಅರ್ಥವನ್ನು ನೀಡುವ ಪದ್ಯ ರಚಿಸಿರಿ

 

  49 Responses to “ಪದ್ಯಸಪ್ತಾಹ – ೨೨ – ಸಮಸ್ಯೆ”

  1. ಅಂತ್ಯಪ್ರತ್ಯಯ ಧಾತುಗ
    ಳಾಂತಿರೆ ಕೃತ್ಪ್ರತ್ಯಯಂ ತದುದ್ಭವ ಪದಗಳ್
    ನಿಂತಿರೆ ವಿಕಾರದಿಂದ ಕೃ-
    ದಂತಂ ಪದದಿಂದೆ ಪುಟ್ಟಿ ಕಡಿಯಿತು ಕಿವಿಯಂ

  2. ಗೊಂತನೆಡವಿ ಮುಗ್ಗರಿಸಲ್
    ದಂತಂ ಮುರಿಯಲ್ ಕೃದಂತನಿರ್ಮಿತಿ ಕಿವಿನೋ-
    ವಾಂತುದು ನೋವಿಗೆನೆಂಟ ಕೃ
    ದಂತಂ, ಪದದಿಂದೆ ಪುಟ್ಟಿ ಕಡಿಯಿತು ಕಿವಿಯಂ

    ಗೊಂತು= ಪಶುಗಳನ್ನು ಕಟ್ಟಿಹಾಕುವ ಗೂಟ, ಮುಗ್ಗರಿಸು = ಮುಖಕೆಳಗಾಗಿ ಬೀಳು ಕೃದಂತ = ಕೃತಕ ದಂತ

  3. ಅಂತಕಭೀಮನೆನಲ್ ಮರ-
    ಣಾಂತ್ಯದಿ ಕಾಲುಗಳ ಬಾಯ್ಗೆ ಸಂಧಿಸಿ ಮುರಿದಂ
    ಇಂತಳಿದಂ ಕಿಮ್ಮೀರಂ
    ದಂತಂ ಪದದಿಂದೆ ಪುಟ್ಟಿ ಕಡಿಯಿತು ಕಿವಿಯಂ

  4. ದಂತವ ಪೋಲ್ವಾ ತೊಡವಂ
    ದಂತಿಯ ಕಾಲೆಲುಬಿನಿಂದ ಮಾಡಿಸಿ ಕಿವಿಗಾ
    ದಂತಾಭರಣವ ಚುಚ್ಚಲು
    ದಂತಂ ಪದದಿಂದೆ ಪುಟ್ಟಿ ಕಡಿಯಿತು ಕಿವಿಯಂ

    • ಅಂತೂ ಎಂತೆಂತೋ ದುರ್-
      ದಾಂತಮ್ ಗಡಿದಿ ಸಮಸ್ಯೆಯೆನುವೊಡೆ ಲೀಲಾ-
      ಸ್ವಾಂತಂ “ಕವಿಚಂದ್ರಂ” ಚತು-
      ರಂ ತಾಂ ಚತುರಂಗದಿಂದೆ ಪರಿಹರಿಸಿದಪಂ!!!
      (ಚತುರ್+ಅಂಗ = ನಾಲ್ಕು ಬಗೆಯಾಗಿ ಪರಿಹಾರ:-)

      • ತಂತುಗಳೆಲ್ಲ ಮಿಡಿವವೊಲ್
        ಮಂತಾಡಿಸುವೀ ಸವಾಲು ಮಿದುಳಿಗೆ ಪದುಳಂ
        ಸ್ವಂತಿಕೆ ಸಮಸ್ಯೆ ನೀಳ್ದ ಮ
        ಹಾಂತನದೇ ಸ್ತುತ್ಯಮೊದವೆ ಪೂರಣ ಭಾಗ್ಯಂ,

  5. ಮೌಳಿಯವರ ಪೂರಣಗಳು ಬಹಳ ಸೊಗಸಾಗಿವೆ. 🙂
    ನನ್ನದೊಂದು ಸಣ್ಣ ಪ್ರಯತ್ನ ::

    ಮಂಥರೆಯಲ್ಲಿ ಕುತಂತ್ರದೊ
    ಳೀಂತುದು ಕೇಡಿನ ವಿಚಾರ “ಪಾಳ್ಗೆಡಿಪುವುದೌ”
    ಅಂತಂದು ಸಾರೆ ಕಥೆಗಳ
    ದಂತಂ ಪದದಿಂದೆ ಪುಟ್ಟಿ ಕಡಿಯಿತು ಕಿವಿಯಂ

    [ರಾಮ ಪಟ್ಟಾಭಿಷೇಕದ ಹಿನ್ನೆಲೆ – ಮಂಥರೆ, “ಪಾಳ್ಗೆಡಿಪುವುದೌ” ಎಂಬ ಪದದಿಂದ ಶುರು ಮಾಡಿದ, ದಂತ ಕಥೆಗಳಿಂದ ಕೈಕೇಯಿಯ ಕಿವಿ ಕಚ್ಚಿದಳು ಎಂಬರ್ಥ]

  6. ನನ್ನದೊಂದು ಕೆಟ್ಟ ಪ್ರಯತ್ನ

    ಕಾಲ್ಚೆಂಡಾಟದಿ ಬಿದ್ದವ
    ನಶಿರಂ ನುಗ್ಗಿದೆದುರಾಳಿ ಎಡವುತ ತುಳಿಯಲ್
    ಅವನ ಕೆರದೊಳಳವಡಿಸಿದ
    ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ

    • ಸುಚರ – ಕಲ್ಪನೆ ಚನ್ನಾಗಿದೆ. 🙂
      ಆದಿಪ್ರಾಸವನ್ನು ಉಳಿಸಿಕೊಂಡರೆ ಚೆನ್ನ. ಮೂರನೇ ಸಾಲಿನಲ್ಲಿ ಒಂದು ಮಾತ್ರೆ ಕಮ್ಮಿಯಾಗಿದೆ.

      • ಧನ್ಯವಾದಗಳು. ಆದಿಪ್ರಾಸಕ್ಕೆ ಮತ್ತೆ ಪ್ರಯತ್ನಿಸುತ್ತೇನೆ.
        ಮಾತ್ರೆ ಲೆಕ್ಕ ಸರಿಯಿದೆಯನಿಸಿತು.
        http://padyapaana.com/?page_id=438 ಪ್ರಕಾರ ಪ್ರಥಮ ಪ್ರಯತ್ನ ಮಾಡಿದೆ.
        ಇರಲಿ ಇನ್ನೊಮ್ಮೆ ಪರೀಕ್ಷಿಸುತ್ತೇನೆ.

        • ಹೌದು ಮೂರನೆಯ ಸಾಲಿನ ಲೆಕ್ಕ ಸರಿಯಿದೆ. ನಾನು ನೋಡುವಾಗ “ಳಳ” ಗಳನ್ನು ಒಂದೇ ಎಂದು ಕಂಡು ತಪ್ಪು ಅಭಿಪ್ರಾಯವಿತ್ತೆ 🙁

          • ನಿಂತ ಬಳಿಯೇ ಸುಳಿದು ತಾ
            ಬಂತೆಂದು ಕತ್ತರಿ ಹೊಡೆಯೆ ಕಾಲ್ಚೆಂಡಿಗೆ ಆ
            ಗುಂತಕನಿಗೆ ತಾಗಿ ಕೆರದ
            ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ

            ಅದೇ ಕಲ್ಪನೆಯ ಮುಂದುವರೆಯಿಸಿ ಆದಿಪ್ರಾಸದ ಕಂದ.
            ಫುಟ್ ಬಾಲ್ ಆಟದಲ್ಲಿ scissor shot (bicycle shot) ಬಹಳ ಪ್ರಸಿದ್ಧ. ಅದನ್ನು ಹೊಡೆಯಲು ಯತ್ನಿಸಿದಾಗ ಆಟಗಾರನ shoes ನಲ್ಲಿಯ spikes ಇನ್ನೊಬ್ಬನ ಕಿವಿಗೆ ತಾಗಿತು ಎಂಬುದು.

          • ಸುಚರ – ನಿಮ್ಮ ಪ್ರಯತ್ನ ಶ್ಲಾಘನೀಯ. ಕಲ್ಪನೆ ಸೊಗಸಾಗಿದೆ.

            ೨ನೆಯ ಸಾಲಿನ ೨ನೇ ಗಣೆ ಜಗಣವಾಗಿದೆ – “ದು+ಕತ್+ತ”
            ಅದೇ ಸಾಲಿನಲ್ಲಿ ಕೊನೆಯ ಗಣದಲಿ “ಡಿಗೆ ಆ” ಎಂಬಲ್ಲಿ, ಸಂಧಿಯಾಗುವುದಿದ್ದರೂ ಮಾಡದೀದ್ದುದರಿಂದ, ವಿಸಂಧಿ ದೋಷವಾಗುತ್ತದೆ. ಇವುಗಳನ್ನು ಸರಿಪಡಿಸುವುದು ನಿಮಗೇನೂ ಕಷ್ಟವಾಗಲಾರದು

          • ನಿಂತ ಬಳಿಯೇ ಸುಳಿದು ತಾ
            ಬಂತೆಂದುಂ ಕತ್ತರಿಸಲು ಕಾಲ್ಚೆಂಡಂ ಆ
            ಗುಂತಕನಿಗೆ ತಾಗಿ ಕೆರದ
            ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ

            ನಿಮ್ಮ ಪರಿಶೀಲನೆಗೆ ಧನ್ಯವಾದಗಳು. ತಿದ್ದಲು ಪ್ರಯತ್ನಿಸಿದ್ದೇನೆ. ಆದರೂ ಪೂರ್ಣ ವಿಶ್ವಾಸವಿಲ್ಲ. ತಿಳಿಸಿದರೆ ಮತ್ತೆ ತಿದ್ದುತ್ತೇನೆ. ವಿಸಂಧಿಯ ವಿಷಯ ತಿಳಿಯಲಿಲ್ಲ

          • ಸುಚರ – ಮತ್ತೊಮ್ಮೆ ನೀಡುತ್ತಿರುವ ಪ್ರತಿಕ್ರಿಯೆಗಾಗಿ ಕ್ಷಮಿಸಿ.
            ಈಗ ೨ನೆ ಸಾಲಿನಲ್ಲಿ ಹೊಸ ದೋಷ ಅಂಕುರಿಸಿದೆ. ೨ನೆ ಸಾಲಿನ ೩ ನೆಯ (ಮಧ್ಯದ) ಗಣ ಜಗಣ ಅಥವಾ ಸರ್ವ ಲಘುವಾಗಿರಬೇಕು. ಸರ್ವ ಲಘುವಾದಿದ್ದಾಗ ::
            “ಎರಡನೆಯ ಹಾಗು ನಾಲ್ಕನೆಯ ಸಾಲುಗಳಲ್ಲಿ ಮಧ್ಯದ (ಮೂರನೆಯ) ಗಣದಲ್ಲಿ ಸರ್ವಲಘುಗಳು ಬರಬಹುದೆಂದು ಹೇಳಿದೆಯಷ್ಟೆ. ಈ ಗಣಗಳಲ್ಲಿ ಸರ್ವಲಘು ಗಣ ಬಂದಾಗ ಮೊದಲ ಮಾತ್ರಾಕ್ಷರದ ಬಳಿಕ ಯತಿಸ್ಥಾನವಿರಬೇಕೆಂಬುದು ಕಡ್ಡಾಯ. ಅಂದರೆ ಮೊದಲ ಮಾತ್ರಾಕ್ಷರಕ್ಕೆ ಒಂದು ಪದ ಮುಗಿದು ಉಳಿದ ಮೂರು ಮಾತ್ರೆಗಳ ಒಂದು ಪದ ಬರಬೇಕು. ಇಲ್ಲದಿದ್ದರೆ ಸಾಲಿನಲ್ಲಿ ಯತಿಭಂಗವಾಗಿ ಧಾಟಿಯಲ್ಲಿ ಓದುವಾಗ ತೊಡಕಾಗುತ್ತದೆ.”

            ಇನ್ನು ವಿಸಂಧಿ ದೋಷವೆಂದರೆ, ಸಂಧಿಯಾಗುವ ಕಡೆಗೆ ಅದನ್ನು ಮಾಡದಿರುವುದು. ನಿಮ್ಮ ಪ್ರಯತ್ನದಲ್ಲಿ ಹೀಗಿತ್ತು : “ಕಾಲ್ಚೆಂಡಿಗೆ ಆ”. ಇಲ್ಲಿ ಸಂಧಿಯಾದಾಗ ಕಾಲ್ಚೆಂಡಿಗಾ ಅಂದಗುತ್ತದೆ ಹಾಗು ಮಾತ್ರಾ ಗಣಗಳ ಲೆಕ್ಕ ಕೆಡುತ್ತದೆ.

        • ಮತ್ತೊಮ್ಮೆ ಧನ್ಯವಾದಗಳು. ತೊಂದರೆಗೆ ಕ್ಷಮಿಸಿ.

          ಮರಳಿ ಯತ್ನವ ಮಾಡಿದೆ

          ನಿಂತ ಬಳಿಯೇ ಸುಳಿದು ತಾ
          ಬಂತೈ ಪದಚೆಂಡು ಕತ್ತರಿ ಹೊಡೆಯೆ ನುಸಿದಾ
          ಗುಂತಕನಿಗೆ ತಾಗಿ ಕೆರದ
          ದಂತಂ ಪದದಿಂದೆ ಪುಟ್ಟಿಕಡಿದುದು ಕಿವಿಯಂ

          • ಸರಿಯಾಗಿದೆ. ನಿಮ್ಮ ಪ್ರಯತ್ನಕ್ಕಾಗಿ ಅಭಿನಂದನೆಗಳು 🙂

          • ಧನ್ಯವಾದಗಳು. 🙂

  7. ಹಿಂತಿರುಗಿ ಮಂಡಿಯಲೆ ಹನು
    ಮಂತನೊಲು ನೆಲದಲೆ ಕುಂತು ಪೇಳ್ದನ್ “ಲೌಯೂ”
    ಕಾಂತೆಯು ಭಾರಿಸೆ, ಭಗ್ನಿತ
    ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ

    [ಕಪಾಳ ಮೋಕ್ಷದಿಂದ ದಂತ ಭಗ್ನನಾದವನ ಕಿವಿಯಲ್ಲಿನ್ನೂ ringing sound ಇದ್ದುದ್ದರಿಂದ ದಂತಕ್ಕೆ ಕಿವಿಯ ಸಂಬಂಧವಿದೆ]
    [ಪದ ಅಂದರೆ ಇಲ್ಲಿ “ಲೌಯೂ’ ಎಂದವನುಲಿದ ಪದ – ಪಾಪ, ಕಾಂತೆಯ ಪದವಲ್ಲ]
    🙂

    • ಭಂಜಿತ ಎನ್ನುವುದು ಸಾಧುರೂಪ. ಭಜ್ ಧಾತುವಿನ ಭೂತಕೃದಂತರೂಪವು ಭಗ್ನ ಎಂಬುದಾದರೂ ಇದು ಪ್ರೇರಣಾರ್ಥಕವಾದಾಗ (ಅಂದರೆ ಮುರಿದದ್ದು ಎಂದಲ್ಲ, ಮುರಿಯಿಸಿದ್ದು ಎಂಬುವುದು) ಭಂಜಿತ ಎಂದಾಗುತ್ತದೆ. ಅಂತೂ ಈ ಕೃದಂತದಿಂದ ನನ್ನೀ ಪದಗಳು ರಾಮ್ ಅವರ ಕಿವಿಗಳನ್ನು ಕಡಿಯುತ್ತಿವೆ!!!!

      • ಭಗ್ನ ಕೃದಂತದಿಂದಾದ ಗಣೇಶರ ಕಡಿತವು ಹಿತವಾಗಿಯೇ ಇದೆ. 🙂
        “ಮುರಿದ” ಎಂಬ ಅರ್ಥವೇ “ಮುರಿಯಿಸಿದ” ಎಂಬುದಕ್ಕಿಂತ ಸಾಧುವೆನಿಸುತ್ತದೆ. ಹಾಗಾಗಿ ಸರಿಪಡಿಸಿದ ಪದ್ಯ ::

        ಹಿಂತಿರುಗಿ ಮಂಡಿಯಲೆ ಹನು
        ಮಂತನೊಲು ನೆಲದಲೆ ಕುಂತು ಪೇಳ್ದನ್ “ಲೌಯೂ”
        ಕಾಂತೆಯು ಭಾರಿಸೆ, ಮುರಿದಿಪ
        ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ

        • ಬಂತೀಗತಿ ತವ ಬಂಟನ
          ಸ್ವಂತಿಕೆ ವೀರಾಸನಕ್ಕದಯ್ಯೋವಿಧಿಯೇ
          ಇಂತಿಪ್ಪ ರಾಮ ಕವನಕೆ
          ದಂತಂಗಳು ಸೂಸುವ ನಗು ಬಂತೈ ರಾಮಾ :)-

  8. ಸಂತಸದಲೆ ಮಲಗಿರ್ದನ್
    ಸಂತನ್ ವನದೊಳಪರಾಹ್ನದೂಟದ ಬಳಿಕಂ
    ಶಾಂತಿಯು ಕಲಕಿರಲೇಡಿಯ
    ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ

    [ಏಡಿಯು ಕಾಲಲ್ಲಿರುವ ಚಿಮಟಗಳಿಂದ ಕಚ್ಚುವುದರಿಂದ …]

  9. ಕಾಂತೆಯ ಮೊಗದೊಳ್ ನಾಟ್ಯವೆ
    ಬಂತುಂ ಕುಣಿಯುತ ಸರಾಗದೊಳ್ ತಾ ಪಾಡ್ವಳ್
    “ತಾಂತೋಂ”, “ಧೀಂತಾಂ”, “ಕಿಟತಾಂ”,
    “ದಂತಂ” ಪದದಿಂದೆ ಪುಟ್ಟಿ ಕಡಿಯಿತು ಕಿವಿಯಂ

    • Good one. It is different and original.

    • ರಾಮ್, ಚಂದ್ರಮೌಳಿಯವರು ಹೇಳಿದಂತೆ ಇದು ತುಂಬ ಸ್ವೋಪಜ್ಞವಾದ ಪರಿಹಾರ ಸಾಭಿನಂದನಧನ್ಯವಾದಗಳು. ಆದ್ರೆ ಕೆಲವೊಂದು ಸಣ್ಣ ಭಾಷಾಪ್ರಯೋಗಲೋಪಗಳನ್ನು ಸವರಿಸಿಕೊಳ್ಳಬಹುದು:
      ಕಾಂತೆಯ………….
      ಬಂತಯ್ ಕುಣಿಯುತೆ ಸರಾಗದಿಂ ಮಿಗೆ ಪಾಡಲ್|
      …………………………….
      …………………………………………………….||

    • ಮೌಳಿ ಹಾಗು ಗಣೇಶರಿಗೆ ಧನ್ಯವಾದಗಳು. ಗಣೇಶರ ಉತ್ತಮ ಸಲಹೆಯ ಸಾಲನ್ನು ಬಳಸಿ, ಪದ್ಯ ಇಂತಾಗಿದೆ ::

      ಕಾಂತೆಯ ಮೊಗದೊಳ್ ನಾಟ್ಯವೆ
      ಬಂತಯ್ ಕುಣಿಯುತೆ ಸರಾಗದಿಂ ಮಿಗೆ ಪಾಡಲ್ |
      “ತಾಂತೋಂ”, “ಧೀಂತಾಂ”, “ಕಿಟತಾಂ”,
      “ದಂತಂ” ಪದದಿಂದೆ ಪುಟ್ಟಿ ಕಡಿಯಿತು ಕಿವಿಯಂ ||

  10. ಎಂತಾಯಿತೀರಕುತ ಹಾ
    ಕಾಂತೇ ಎಂತೆನಲು ಪೇಳಿದಳು ಧಾವಿಸಿ ನಾ
    ಸಂತಸದಿ ತೋಟದೊಳು ಬಂ
    ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ

    ಹೊಸ ಪ್ರಯತ್ನ. ದೋಷವಿರಬಹುದು.
    ಪುಟ್ಟಿ – ಬುಟ್ಟಿ
    ಪದದಿಂದೆ – ಹಾದಿಯಲ್ಲಿ

    ಪ್ರಿಯನಿಗಾಗಿ ಓಡಿ ಬರುವಾಗ ತೋಟದದಾರಿಯಲ್ಲಿ ಬುಟ್ಟಿ ತಾಗಿತು

  11. ग्रासाय रसभावानामष्टादशभुजीभवन् ।
    ओङ्कारो नाट्यवेदस्य स वः पायान्महानटः ॥
    May the cosmic dancer, the divine syllable ‘OM’ with which the Veda of dance commences, protect you. He becomes eighteen-armed to grasp as it were the subtleties of nine rasas and nine bhavas.

  12. ದಂತಿಗಮಾ ಪೆಸರಿತ್ತುದ
    ನಂತನಿನಾ ಗಂಗೆಯಿಂತು ಪರಿದಳ್ ಶ್ವಾನಮ
    ದಿಂತೆಸೆದುದು ನೆರೆ ಮುನಿಸೊಳ್ –
    ದಂತಂ; ಪದದಿಂದೆ ಪುಟ್ಟಿ; ಕಡಿದುದು ಕಿವಿಯಂ

    • ಕೊಂಚ ತಿದ್ದಿದ್ದೇನೆ:

      ದಂತಿಗಮಾ ಪೆಸರಿತ್ತುದ
      ನಂತನಿಮಾ ಗಂಗೆಯಿಂತು ಪರಿದಳ್ ಶ್ವಾನಮ
      ದಿಂತೆಸೆಗಿತಲಾ ಮುನಿಸೊಳ್
      ದಂತಂ; ಪದದಿಂದೆ ಪುಟ್ಟಿ; ಕಡಿದುದು ಕಿವಿಯಂ

    • ಮತ್ತೊಮ್ಮೆ ತಿದ್ದಿದ್ದೇನೆ:

      ದಂತಿಗಮಾ ಪೆಸರಿತ್ತುದ
      ನಂತನಿನಾ ಗಂಗೆಯಿಂತು ಪರಿದಳ್ ಮುಳಿಸಿಂ
      ದಿಂತೆಸಗಿತಲಾ ಶ್ವಾನಂ –
      ದಂತಂ; ಪದದಿಂದೆ ಪುಟ್ಟಿ; ಕಡಿದುದು ಕಿವಿಯಂ

  13. ಈ ಬಾರಿಯ ಸಮಸ್ಯೆ ಬಗ್ಗೆ ಬಹಳ ರೀತಿ ಯೋಚಿಸಿದರೂ ಸರಿಯಾದ ಉಪಾಯ ಹೊಳಿಯಲೇ ಇಲ್ಲ ಹೀಗಿರುವಾಗ, ಚ೦ದ್ರಮೌಳಿ ಮತ್ತು ರಾಮಚ೦ದ್ರರ ಅನೇಕ ಪರಿಹಾರಗಳನ್ನು ನೋಡಿ ಆನ೦ದಿಸುತ್ತ ಮತ್ತು ಜೀವೆ೦, ಸುಚರಾ ಅವರ ಪ್ರಯತ್ನವನ್ನು ಮೆಚ್ಚಿ ನನ್ನದೊ೦ದು ‘ದ್ರಾವಿಡ ಪ್ರಾಣಾಯಾಮದ’ ಯತ್ನ:

    ಮನೆಯ ಜ೦ತಿಯಮೇಲೆ ಆಗ೦ತುಕವಾಗಿ ಬ೦ದ ಗಿಳಿಯನ್ನು ಹಿಡಿಯಲು ವಿಫಲವಾದ ಪುಟ್ಟ ಹುಡುಗಿಯ ಪ್ರಯತ್ನ, ಈ ಸಮಸ್ಯೆಯನ್ನು ಬಗೆಹರಿಸಲು ಹೊರಟ ನನ್ನಪ್ರಯತ್ನವನ್ನೇ ಬಿ೦ಬಿಸುತ್ತಿದೆ… 🙂

    ಜ೦ತಿಯ ಮೇಲಿಹ ಗಿಳಿಯ೦
    ಸ್ವ೦ತಿಸಿಕೊಳಲ್ಮಡಿಕೋಲ ತಿವಿದಳ್ ಸತತ೦
    ನಿ೦ತಲ್ಲೆ ಮೀ೦ಟುತಿರೆ ಮರ-
    ದ೦ತ೦ ಪದದಿ೦ದೆ ಪುಟ್ಟಿ, (ಗಿಳಿಯು ಪುಟ್ಟಿಗೆ) ಕಡಿಯಿತು ಕಿವಿಯ೦

    ಕೊಳಲ್ಮಡಿಕೋಲ = ಕೊಳಲ್ ಮಡಿಕೋಲ (ಮಡಿಯ ಬಟ್ಟೆ ಹರವಲು ಉಪಯೋಗಿಸುವ ಕೋಲು)

    • ಕೊಳಲ್ಮಡಿಕೋಲ – ಎರಡು ಜಗಣ ಬಂದಿವೆಯಲ್ಲ?

      • ಜೀವೆ೦:),

        ಹೌದು ೨ ಜಗಣವಾಗಿಬಿಟ್ಟಿದೆ, ಮೊದಲನೆಯದನ್ನ ಸರ್ವಲಘು ಮಾಡಿದ್ದೇನೆ, ತಿಳಿಸಿದ್ದಕ್ಕೆ ಧನ್ಯವಾದಗಳು
        ಹಾಗೆಯೇ ೩ನೇಯ ಸಾಲಿನಲ್ಲಿ ಗಣಗಳು ಸರಿಯಾಗಿ ಹೊ೦ದಿಕೊ೦ಡಿರಲಿಲ್ಲ, ಸರಿಮಾಡಿದ್ದೇನೆ…

        ಜ೦ತಿಯ ಮೇಲಿಹ ಗಿಳಿಯ೦
        ಸ್ವ೦ತಿಸಿಕೊಳಲು ಮಡಿಕೋಲ ತಿವಿದಳ್ ಸತತ೦
        ನಿ೦ತಲೆ ಮೀ೦ಟುತಲಿರೆ ಮರ-
        ದ೦ತ೦ ಪದದಿ೦ದೆ ಪುಟ್ಟಿ, ಕಡಿಯಿತು ಕಿವಿಯ೦

        ಇನ್ನು… ಅರ್ಥ ಸ್ಪಷ್ಟತೆ ಸರಿಯಿಲ್ಲವೆನಿಸುತ್ತದೆ 🙁

  14. ಸಂತತಿಯ ಮೋಹ ಮಾಯೆಯೊ
    ಳೆಂತುಟು ಪೆರರೊಳ್ ಪೊಗಳ್ದೆನೀ ಕಲಿಪುತ್ರಂ
    ಇಂತಿದೊ! ಪೆರ್ಮೆಯೊಳಾನೆಂ
    ದಂತಂ ಪದದಿಂದೆ ಪುಟ್ಟಿ ಕಡಿದುದು ಕಿವಿಯಂ
    [ಮಗನನ್ನು ಪೊಗಳಾಡ್ದ ತಂದೆಯು, critisism ಗಳನ್ನು ಕೇಳಬೇಕಾದಾಗ ಆಡುವ ಮಾತು]

    • ಪೆರ್ಮೆಯೊಳ್ ಆನ್ ಎಂದಂತಂ …ಪದ ಅರ್ಥ ಸ್ಪಷ್ಟವಾಗಲಿಲ್ಲ ರವಿಂದ್ರರೇ…ನಿಮ್ಮ ಉದ್ದೇಶಿತ ಅರ್ಥ ಆನ್ ಎಂದಂತನ್ನುವನ್ ಎಂದಿದ್ದರೂ ಸಮಸ್ಯೆಯ ಪದಗಳಿಗೆ ಅನ್ವಯವಾಗುತ್ತಿಲ್ಲ ಎನಿಸುತ್ತಿದೆ.

  15. ಆನೆಂದಂತಂ = ನಾನು ಹೇಳಿದಂತಹ ಎಂಬ ರೂಪ ಆಗುತ್ತದೆಯ? ಹಾಗಾದಲ್ಲಿ, ನಾನು ಹೊಗಳಿದ ಮಾತುಗಳಿಂದಲೇ ಹುಟ್ಟಿ, ಕರ್ಣಕಠೋರವಾದ ಮಾತುಗಳು ನನ್ನನ್ನು ತಿವಿಯುತ್ತಿವೆ ಎಂದು ಹೇಳುವ ಯತ್ನ. “ಅಹಾಹ! ಹೇಳ್ತಿದ್ಯಲ್ಲಾ ನಿನ್ನ ಮಗ ತುಂಬಾ ಸುಬಗಅಂತ…ಈಗ್ ನೋಡು…’ ಎಂಬಂತಹ ಮಾತುಗಳು..ತುಂಬಾ ಎಳದು ಮಾಡಿದ ಪರಿಹಾರ.. ಅದೇ ಸಮಸ್ಯೆಯಾಗಿದೆ 🙁

  16. ಪ್ರಿಯ ರವೀಂದ್ರ,
    ಆನೆಂದಂಥ ಅಥವಾ ಅನೆಂದಂತಹ ಎಂದಾಗ ನಿಮ್ಮ ಉದ್ದೇಶಿತಾರ್ಥ ಬರುತ್ತದೆ. ಈ ಸಮಸ್ಯೆಯ ಕ್ಲಿಷ್ಟತೆಗೆ, ’ ದಂತ ’ ಕೀಲಕಪದವಾಗಿದ್ದು, ಒಂದು ಮಿತಿಯನ್ನು ಒಡ್ದಿದೆ. ಆದ್ದರಿಂದ, ಕೃದಂತ, ದಂತ, ನಂತೋಂದಂತಂ …ಈ ಪದ ಪ್ರಯೋಗಗಳು ಅರ್ಥಕೊಡುತ್ತವೆ. ನಿಮ್ಮ ಪ್ರಯತ್ನ ಶ್ಲಾಘನೀಯ. ಕ್ಲಿಷ್ಟಸಮಸ್ಯೆಗಳ ಪೂರಣಸಾಧ್ಯತೆ ಮಿತಸಂಖ್ಯೆಗಳಲ್ಲಿರುವುದರಿಂದ, ಅಧಿಕಪೂರಣಗಳ ಅಭಾವ ಪ್ರತಿಭೆಯ ಲೋಪವಲ್ಲ. ಅತಿಸುಲಭದ ೨೩ನೇ ಸಮಸ್ಯೆ ನಿಮ್ಮಮುಂದಿದೆ. ಪ್ರಥಮತಾಂಬೂಲ ನಿಮ್ಮದೇ ಆಗಲಿ.

  17. ಈತಂಗೆಲ್ಲಿಯದರ್ಹತೆ
    ಯುತ್ತುಂಗಕ್ಕೇರಲಲ್ಲದಿರೆ ದೊರೆಪುತ್ರಂ|
    ದಂತಂ ಹಿಗ್ಗದೆ, ಭಟರೆಂ
    ದಂತಂ ಪದದಿಂದೆ ಪುಟ್ಟಿ, ಕಡಿದುದು ಕಿವಿಯಂ||

    ಯೋಚಿಸಬೇಡಿ. ಉತ್ತರಾರ್ಧಕ್ಕೆ ವಿವರಣೆ ಇಲ್ಲಿದೆ. ಹೊಗಳುಭಟ್ಟರು ಎಂದಂತಹ (ಹೇಳಿದ) ಪದಗಳಿಂದ ಹುಟ್ಟಿದ ದಂತದ ಹಿಗ್ಗು, ಈ ಕಿವಿಯಿಂದ ಆ ಕಿವಿಯವರೆಗೆ (ear to ear) ವಿಸ್ತರಿಸಿ, ಕೊನೆಯ molar ಹಲ್ಲುಗಳು ಅವನ ಕಿವಿಗಳನ್ನೇ ಕಚ್ಚಿದವು! I know it is far-fetched. So is the samasyApAda.

  18. ಎರಡನೆಯ ಪಾದ ಆದಿಪ್ರಾಸ ತಪ್ಪಿತೇನೋ?

  19. ಸವರಿದ್ದೇನೆ.
    ಈತಂಗೆಲ್ಲಿಯದರ್ಹತೆ
    ಯಾ ತುಂಗಕ್ಕೇರಲಲ್ಲದಿರೆ ದೊರೆಪುತ್ರಂ|
    ದಂತಂ ಹಿಗ್ಗದೆ, ಭಟರೆಂ
    ದಂತಂ ಪದದಿಂದೆ ಪುಟ್ಟಿ, ಕಡಿದುದು ಕಿವಿಯಂ||

    • I have honed the AdiprAsa and rectified an arisamAsa:
      ಎಂತುಂಟೀತನಿಗರ್ಹತೆ
      ಯುಂ ತುಂಗಕ್ಕೇರಲಲ್ಲದೊಡೆ ನೃಪಸೂನುಂ|
      ದಂತಂ ಹಿಗ್ಗದೆ, ಭಟರೆಂ
      ದಂತಂ ಪದದಿಂದೆ ಪುಟ್ಟಿ, ಕಡಿದುದು ಕಿವಿಯಂ||

  20. ’ನೃಪತನಯಂ’ ಎಂಬ ಒಂದು ಸವರಣೆ ಬೇಕಿದೆ. ಉಳಿದಂತೆ ಪದ್ಯದ ರಚನೆ ಹಾಗೂ ಪರಿಹಾರದ ಕ್ರಮದಲ್ಲಿ ಎಲ್ಲವೂ ಸಲೆ ಸೊಗಸು. ಇದು ಅತ್ಯಂತ ವಿನೂತನಸ್ವೋಪಜ್ಞ ಪರಿಹಾರ. ಮಿಗಿಲಾದ್ ಧನ್ಯವಾದಗಳು.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)