Jun 092012
 

“ಶವ”, “ಚಿತೆ”, “ಚಟ್ಟ”, “ಮಡಕೆ”  – ಈ ಪದಗಳನ್ನು ಬಳಸಿ ರುಕ್ಮಿಣೀಕಲ್ಯಾಣದ ವರ್ಣನೆಯ ಪದ್ಯಗಳನ್ನು ರಚಿಸಿರಿ

  46 Responses to “ಪದ್ಯಸಪ್ತಾಹ – ೨೪ – ದತ್ತ ಪದಿ”

  1. ಹರಿಯಯ್ ರುಕ್ಮಿಯ ಪಾಶವ
    ತೊರೆವೆ೦ ಜೀವವನುಚಿತೆಯನೇರುತಲೆನಲಾ
    ಸುರಮ೦ದಿರದೊಳ್ ಚಟ್ಟನೆ
    ಕರಗಳಿಮಡಕೆಲೆಯು ಬೀಳ್ವವೊಲಿನಿಯ ಸೆಳೆದ೦

    ಕರಗಳಿಮಡಕೆಲೆ = ಕರಗಳಿ೦ ಅಡಕೆಲೆ = ಕರಗಳಿ೦ದ (ದೇವಸ್ಥಾನಕ್ಕೆ ನೈವೇದ್ಯಕ್ಕಾಗಿ ತ೦ದ) ಎಲೆ ಅಡಿಕೆ

    • Else, here is a substitute 4th pAda:
      ದೇವನೆ ನೀಡಬೇಕುಮಡಕೆಲ್ಕಳೆದಿರ್ಪುದಕಾನೆ ಮಾನಕಂ

  2. ಉತ್ಪಲಮಾಲೆ
    ನಾನನನಾನ ನಾನ ನನನಾನನನಾ ನನನಾನ ನಾನನಾ

    ಕೈವಶವಾದ ತಾನು ವರನಾರದನ ಸ್ತುತಿಗಿಂತು ಭೀಷ್ಮಕಂ
    ಕೇವಲ ಕೃಷ್ಣ ಯುಕ್ತನಿವಳಿಂಗೆನೆ, ವಂಚಿತೆಯೀಕೆ ರುಕ್ಮಿಯಿಂ
    ಗೋವಳನೆತ್ತುತೊಯ್ದನಲೆ ಚಟ್ಟನೆ ರುಕ್ಮಿಣಿಯಂ ಸರಾಗದಿಂ
    ದೇವನೆ ನೀಡಬೇಕುಮಡಕೆಲ್ಕಳೆದಾಂತೆಗೆ ವಾರಣಂ ವರಂ

    ನೀಡಬೇಕುಮಡಕೆಲ್ಕಳೆದಾಂತೆಗೆ = ನೀಡಬೇಕುಂ ಅಡಕೆಲ್ ಕಳೆದ ಆಂತೆಗೆ. ಇಲ್ಲಿ ಆಂತೆ = ಅಹಂತೆ ಆಗುತ್ತದೆಯೆ?

  3. By the way, Bheeshmaka is Rukmini’s father

  4. Somaaa,
    You beat me! I only had to save 16 minutes.

    • ಪ್ರಸಾದು :),

      ಇದೇನು ವೇಗದ ಸ್ಪರ್ದೆಯೇ? ಹಾಗಿದ್ದರೂ ಉತ್ಪಲಮಾಲೆಯನ್ನು ನೀವು ನಿಭಾಯಿಸಿರುವುದರಿ೦ದ, ಮು೦ಚೆ ಮುಗಿಸಿದ ಕ೦ದನಾಟವು ನಿಮ್ಮ ಪ್ರಯತ್ನದ ಮು೦ದೆ ಗೌಣವೇ ಆಗುತ್ತದೆ. ನೀವೆ ಗೆದ್ದಿರುವಿರಿ 🙂

    • ವಿಪ್ರೋತ್ತಮರ್ಗಳಿರಾ! ಅರಿತೆಂ, ವಿವಾಹಭೋಜನನಿಮಿತ್ತಮಲ್ತೆ ಈ ಸ್ಪರ್ಧೆ? 🙂

  5. ಸೋಮ, ನಿಮ್ಮ ಪೂರಣದ ವಿಧಾನ, ಅಡಕ, ಭಾವದ ಹದ, ಛಂದೋಲಾಲಿತ್ಯ ಇತ್ಯಾದಿಗಳೆಲ್ಲ ತುಂಬ ಚೆನ್ನಾಗಿವೆಯಾದರೂ ಇನ್ನೂ ಸ್ವಲ್ಪ ಹಳಗನ್ನಡದ ಪರಿಮಳವಿದ್ದಲ್ಲಿ ಒಳಿತು:-) ನೀವು ಮತ್ತೂ ಸಮರ್ಥರಾದ ಕಾರಣ ಈ ನಿರೀಕ್ಷೆ ನನ್ನದು:-)

    ಪ್ರಸಾದು, ನಿಮ್ಮ ಉತ್ಪಲಮಾಲೆ ನನಗೆ ತುಂಬಾ ಮುದವನ್ನಿತ್ತಿತು. ಮುಖ್ಯವಾಗಿ ನಿಮ್ಮ ಪದ್ಯಶೈಲಿಯ ಪಾಕ ತುಂಬ ಸೊಗಯಿಸಿದೆ. ಕೊನೆಯ ಸಾಲಿನಲ್ಲಿ ಮಡಕೆಯನ್ನು ತರುವಲ್ಲಿ ಸ್ವಲ್ಪ ವ್ಯಾಕರಣ ಎಡವಿ ಮಡಕೆ ಒಡಕಾಗಿದೆ:-). ಉಳಿದಂತೆ ಮತ್ತೂ ಹಳಗನ್ನಡದ ಬಿಗಿ ತರಲು ಒಂದೆರಡು ಸವರಣೆ:
    ಕೈವಶವಾಗೆ ತಾನೆ…………………………………
    ………………………………………………….
    …………………………………………………..
    ದೇವನೆ ನೀಡವೇಳ್ಕುಮಡಕೆಲ್ಲಿಯದೋ ಹಿತಮಾಗೆ ಸಲ್ವುದಯ್||

    • ಧನ್ಯವಾದಗಳು ಗಣೇಶ್ ಸರ್,
      ಖ೦ಡಿತ ಪ್ರಯತ್ನಿಸುತ್ತೇನೆ ಸರ್:)

    • M,
      ’ಹಳಗನ್ನಡಕರಣ’ಕೆ ಸ್ಪಷ್ಟವಾದ clue ಇತ್ತಿರಿ. ಕೃತಜ್ಞನಾಗಿದ್ದೇನೆ.

  6. ಕಿಡಿಯೊಡೆವಂ ಸುದರ್ಶನಮೆ ಕೇಶವರುಕ್ಮಿಣಿಯರ್ವಿವಾಹಕೆಂ
    ದೊಡನಡೆವಗ್ಗಿಯಂತುರಿಯೆ ಚಟ್ಟಳೆಯಿಂ ಸುಳಿಗಾಳಿ ಶೋಭನಂ
    ಪಡೆನುಡಿದಾಡೆ ಮುಂಚಿ ತೆರಳುತ್ತಿಹುದಶ್ವಮೆ ವಿಪ್ರರಂತಿರಲ್
    ಮಡಕೆರಗುತ್ತೆ ಪೋಪರರಿರಾಜರೆದುರ್ಗೆ ಮುಹೂರ್ತಮೊಪ್ಪಿತೈ

    [ಚಟ್ಟಳೆ = ಅತಿಶಯ ಮಡ = ಹಿಮ್ಮಡಿ]

    • ಅನಿತರಾಧಾರಣಗುಣ-
      ಘನಮೀ ಭವದೀಯದತ್ತಪದಕವಿತೆ ಗಡಂ|
      ಮನನೀಯಂ ನೂತನತೆಯ-
      ಅನುರಣಿಸಲ್ ಪಳೆಯ ಕನ್ನಡದ ಕಂಪೆಸೆಯಲ್||

    • Thanks Sir. Kanda is so beautiful.

  7. ಜೀವೇಶ ವಚನಮಂ ಭೂ-
    ದೇವಂತರೆ, ಕರವಪಿಡಿಯೆ ಸುಖ ವಂಚಿತೆಯಂ
    ವೈವಾಹದಿ ಚಟ್ಟನೆ ಹರಿ
    ಧಾವಿಸಿ ರಿಪುಗಳಮಡಕೆ ಸರಾಗದೊಳೊಲಿದನ್

  8. ಜಗಣದ ಬದಲ್ ಸಮಚರಣ
    ದ ಗಣ-ನಡುವಿನದೊ/ಳು ಯತಿಯ/ಗತ್ಯವದಿಂತುಂ|
    ೧) ಅಲ್ಲವೆ ಮೌಳಿಯವರೆ? ಅಥವಾ ಬೇರೆ ನಿಯಮಗಳಿವೆಯೆ?
    ೨) ನಾನು ಪುರಾಣಾದಿಗಳನ್ನು ಓದಿಕೊಂಡಿಲ್ಲ. ಜೀವೇಶ ಯಾರು, ಭೂದೇವ ಯಾರು ದಯವಿಟ್ಟು ತಿಳಿಸಿ.

    • ಪ್ರಸಾದು,

      ನೀವೆಂದಂತೆ ನಾಲ್ಕನೆಯ ಚರಣದಲ್ಲಿ ಯತಿ ಬಂದಿಲ್ಲ. ಆದರೆ ಉಳಿದಂತೆ ಪದ್ಯ ಅನವದ್ಯ. ಜೀವೇಶನೆಂದರೆ ಪ್ರಾಣೇಶನೇ, ಅರ್ಥಾತ್ ಶ್ರೀಕೃಷ್ಣ. ಭೂದೇವನೆಂದರೆ ರುಕ್ಮಿಣಿಯ ಸಂದೇಶವನ್ನು ಹೊತ್ತು ತಲಪಿಸಿದ ಬ್ರಾಹ್ಮಣ ಅಗ್ನಿದ್ಯೋತ.

      • ಪರಿಣಯ ಕೇಶವ ರುಕ್ಮಿಣಿ
        ಯರ ಪದ್ಯದಿ ಯತಿಯು ನಾಚಿ ತೆರೆಮರೆಯಾಗಲ್
        ಮರಳಿಪೆ ಚಟ್ಟನೆ ತಿಳಿದೇ
        ಬರೆದಂ ಭಾವಪ್ರದಾನಮಡಕೆನೆ, ನಮನಂ

        ಜೀವೇಶ ವಚನಮಂ ಭೂ-
        ದೇವಂತರೆ, ಕರವಪಿಡಿಯೆ ಸುಖ ವಂಚಿತೆಯಂ
        ವೈವಾಹದಿ ಚಟ್ಟನೆ ಹರಿ
        ಧಾವಿಸೆ ರುಕ್ಮಿಣಿಯರಕ್ಷೆ ರಿಪುಗಳಮಡಕೇ

    • ಅಕ್ಷರಯತಿ ಗಣಯತಿ ಸಂ
      ರಕ್ಷಣೆಯಿಂ ಚೆಂದಕಂದ ರಕ್ಷಿಪುದದ, ನಿರ್-
      ಲಕ್ಷಿಸಿ ಕೆಲವರು ತಿಳಿದೇ
      ಪಕ್ಷಾಂತರಗೈವರರ್ಥಪಾಕದ ನಲವಿಂ

  9. ಹುಟ್ಟಿನಲಿ ನನ್ನಗ್ರಜನು, ನಾ
    ಪಟ್ಟ ಪ್ರೇಮದ ಪರಿವೆಯಿಲ್ಲದೆ
    ಅಟ್ಟುವನು ಧೂರ್ತನೆಡೆಗೆನ್ನನು ನೆಪದ ಮದುವೆಯಲಿ |
    ಕಟ್ಟದಿರೆ ನೀನೆನಗೆ ತಾಳಿಯ
    ಸುಟ್ಟಿ ಪೋಗುವುದಮರ ಪ್ರೇಮವು
    ಚಟ್ಟದಾ ಶವ ಚಿತೆಯನೇರ್ವುದು ಮಡಕೆಯಗ್ನಿಯೊಡೆ ||

    ಪ್ರೇಕ್ಷಿಸಿದನವನೀಶ ವನಿತೆಯ,
    ಲಕ್ಷಣವತಿಯಪಾರ ದುಗುಡವ –
    ನೀ ಕ್ಷಣದೆ ಕರೆದೊಯ್ಯಲುಚಿತೆಂದೆಂದು ನಿರ್ಧರಿಸಿ |
    ಪಕ್ಷಿ ಮಡಕೆಯೊಳಿರ್ದ ಕೂಳ –
    ನ್ನೀಕ್ಷಿಸಲು ಚಟ್ಟೆಂದು ಕದಿವೊಡೆ
    ಅಕ್ಷಿ ಮಿಟುಕಲೆ ಹಾರಿಸಿದ ಮಂದಿರದೆ ರುಕ್ಮಿಣಿಯ ||

    • bringing upame to include datta pada does really show the lateral thinking involved….In datta padi, our mind always think about only 2 things…the subject and the datta pada…..if we make ourselves free and find some alankaras like these…it would look like very effortless and natural….

      bringing all the 4 in one line is simply superb 🙂

    • ರಾಮ್, ತುಂಬಾ ಚೆನ್ನಾಗಿದೆ. “ಚಟ್ಟದಾ …ಯೊಡೆ” ಎಂಬುದು – ಪರರೊಂದಿಗಿನ ತನ್ನ ಮದುವೆಯ ನೀರಸತನವನ್ನೆ ಹೇಳುತ್ತಿದೆಯೇ (ಹಸೆಯನ್ನೇ ಚಿತೆಗೆ ಹೋಲಿಸುತ್ತಾ) ಅಥವಾ, ಮೈದೊರೆವೆಂಬುನ್ಮಾದದ ತರವೇ? ’ಪಟ್ಟ ಪ್ರೇಮದ’ ಬದಲು “ಕೂರ್ಮೆ” “ನಲ್ಮೆ” ಎಂದರೆ ಒಂದು ಮಾತ್ರೆಯುಳಿಯುತ್ತದೆ. “ಆಹಾರ ಮಡಕೆ” ಅರಿಸಮಾಸವಾಯ್ತೇ? “ಮಡಕೆಕೂಳನುಂ” ಎಂದು ಮಾಡಬಹುದೇನೋ?

      • Ram, superb!!! I had never thought about bringing all the four words in one line so well as you have done. Like Shreesha, me too is spell bound by this marvel.
        Regarding the second verse, i agree with Holla.

    • 🙂
      ಅಣಿಗೊಳಿಪೆ ನಾಂ ನಿಮ್ಮ ಸಲಹೆಯ
      ಮಣಿವೆ ನಿಮ್ಮಯ ಮೆಚ್ಚು ನುಡಿಗಂ
      ಹಣತೆ ದೀಪಕೆ ತುಪ್ಪವಾಗಿಹುದೀ ಪ್ರಶಂಸನವು

      ರವೀಂದ್ರ ಕೇಳಿದ್ದರಿಂದ ಕೊಂಚ ವ್ಯಾಖ್ಯಾನ ::
      ಮೊದಲ ಪದ್ಯ ರುಕ್ಮಿಣಿ ಕೃಷ್ಣನಿಗೆ ಕಳುಹಿಸಿದ ಸಂದೇಶ. ಮದುವೆ ಬಹಳ ಹತ್ತಿರ ಬಂದು ಸಮಯ ಮೀರುತ್ತಿರುವುದರಿಂದ, ಹಾಗೂ ಅವಳ ಪ್ರೇಮ ಒಮ್ಮುಖವಾದ್ದರಿಂದ, ಅವಳ ಕೃಷ್ಣಪ್ರೇಮದ ಅಂತರ್ಭಾವದ ಶವ ಆಗಲೇ ಜೀವ ಕಳೆದು ಚಟ್ಟದ ಮೇಲಿದೆ. ಕೃಷ್ಣ ಬಂದು ತಾಳಿ ಕಟ್ಟಿದರೆ, ಜೀವ ಬರುತ್ತದೆ – ಇಲ್ಲವಾದಲ್ಲಿ ಅವಳ ಮದುವೆಯ ಹೋಮವೇ ಮಡಕೆಯ ಅಗ್ನಿಯಾಗಿ ಆ ಶವ ಚಿತೆಯನ್ನೇರಿ ಸುಟ್ಟು ಹೋಗುತ್ತದೆ (with no chance of recovery after that) ಎಂಬ ರುಕ್ಮಿಣಿಯ ನುಡಿಯ ಕಲ್ಪನೆ.

      [ಪ್ರೇಮ, ಪ್ರೀತಿ – ಇವುಗಳನ್ನು ಉಪಯೋಗಿಸಿದಾಗೆಲ್ಲಾ – ಅದೂ‌ ಭಾಮಿನಿ ಷಟ್ಪದಿಯಲ್ಲಿ – ಶಿಥಿಲ ದ್ವಿತ್ವದ ಭಾಸವಾಗಿ ತಪ್ಪುಗಳಾಗುತ್ತವೆ. ಅವನ್ನು ಸರಿಪಡಿಸುವೆ. ಅರಿಸಮಾಸವನ್ನು ಸರಿಮಾಡಿದ್ದೇನೆ ]

      • ಭಾಮಿನಿಯೊಳು ಪ್ರೀತಿಯನು ನೀಂ
        ರಾಮ ತೋರೈ ಪ್ರೇಮವನು ಸಂ
        ಗ್ರಾಮವಪ್ಪುದು ಮನೆಯೊಳಲ್ಲದೆ ಭಾಮಿನಿಗೆ ಮುಳಿಸುಂ
        ಸಾಮ ಭೇದಂಗಳಿಗೆ ಮಾಣದೆ
        ಕೋಮಲೆಯುಮುದ್ದಾಮ ದಾನಂ
        ಭೂಮಿಯೊಳು ದಂಡಪ್ರಣಾಮಂ ಬೇಡುವುದು ಖಚಿತಂ

        • ಈ ನನ್ನ ಗದ್ಯವನ್ನು ಚೋದ್ಯ ಮಾಡಿದ್ದೀರಿ 🙂

          [ಪ್ರೇಮ, ಪ್ರೀತಿ – ಇವುಗಳನ್ನು ಉಪಯೋಗಿಸಿದಾಗೆಲ್ಲಾ – ಅದೂ‌ ಭಾಮಿನಿ ಷಟ್ಪದಿಯಲ್ಲಿ – ಶಿಥಿಲ ದ್ವಿತ್ವದ ಭಾಸವಾಗಿ ತಪ್ಪುಗಳಾಗುತ್ತವೆ. ]

          ಪ್ರೇಮ ಮೇಣ್ ದ್ವಿತ್ವಗಳ ಶಿಥಿಲತೆ
          ಭಾಮಿನಿಯ ಕಂಗೆಡಿಪಲಾರವು
          ನೇಮದೊಳ್ ಸುಚರಿತ್ರ ಕಾಂತನ ಸಂಗ ದೊರಕಿರಲು
          ಸಾಮ ನೀತಿಯೊಳೀ ವಿಚಾರವ
          ಪಾಮರರು ಹೆಚ್ಚೊರೆಯದಿರಲಾ –
          ರಾಮ ಜೀವನ ಸಾಧ್ಯವರ್ಪುದು ಸಂಶಯಕ್ಕೆಡೆಯೆ?
          🙂

          • ದ್ವಿತ್ವದ ಶಿಥಿಲತೆಯೆಂದೊಡದುಮೇಕತೆಯ ಸಾ
            ಧ್ಯತ್ವಮಲ್ಲದೆಲಹುದದಿನ್ನದೇನು|
            ಅತ್ವರವುಳಿದು ಬೆರೆಯೆ ಲೇಸೆಂಬೆ ಭಾಮೆಯಳೊ
            ಳು ತ್ವಕ್ಕು ಬೇರ್ಪಡದದಂದದೊಳಗಂ||

          • ದ್ವಿತ್ವದ ಶಿಥಿಲತೆಯೆಂದೊಡದುಮೇಕತೆಯ ಸಾ
            ಧ್ಯತ್ವಮಲ್ಲದೆಲಿರ್ಗುಮಿನ್ನದೇನು|
            ಅತ್ವರವುಳಿದು ಬೆರೆಯೆ ಲೇಸೆಂಬೆ ಭಾಮೆಯಳೊ
            ಳು ತ್ವಕ್ಕು ಬೇರ್ಪಡದದಂದದೊಳಗಂ||

          • ಸ್ಫೂರ್ತಿ: ಭೈರಪ್ಪನವರ ‘ಮಂದ್ರ’: ಏರ್-ಪೋರ್ಟಿನಲ್ಲಿ ಬೀಳ್ಗೊಳ್ಳುವ ಮುನ್ನ ಮೋಹನಲಾಲ ಮತ್ತು ಲಾರೆನ್ ಸ್ಮಿತ್ (ಭೂಪಾಲಿ) ‘ಕಿತ್ತರ ಬರದಂತೆ ಚುಂಬಿಸಿದರು.’

          • ಸ್ಫೂರ್ತಿ: ಭೈರಪ್ಪನವರ ಮಂದ್ರ ಕಾದಂಬರಿ – ಮೋಹನಲಾಲ್ ಮತ್ತು ಲಾರೆನ್ ಸ್ಮಿತ್ (ಭೋಪಾಲಿ) ಏರ್-ಪೋರ್ಟಿನಲ್ಲಿ ಬೀಳ್ಗೊಳ್ಳುವ ಮುನ್ನ ‘ಕಿತ್ತರೆ ಬರದಂತೆ ಚುಂಬಿಸಿದರು.’

          • ನನ್ನ ಪದ್ಯದಲ್ಲಿನ ದ್ವಿತ್ವ, ಮತ್ತು ಸಾಧ್ಯತ್ವಗಳು ಸರಿಯಾಗಿದೆ ತಾನೆ? ಅವು ದ್ವಿತ್ತ್ವ ಮತ್ತು ಸಾಧ್ಯತ್ತ್ವ ಅಲ್ಲ ತಾನೆ?

    • ಅದ್ಭುತ

      • ಸುಚರಾ, ನಿಮ್ಮ ‘ಅದ್ಭುತ’ ಎಂಬ ಉದ್ಗಾರ ಮೊದಲು ಜೀವೆಂರವರೆಗೆ, ನಂತರ ರಾಮಚಂದ್ರರಿಗೆ, ಈಗ ನನಗೆ ಸಂದಿತು. ಮುಂದೆ, ನನ್ನ ಪದ್ಯದ ಮೇಲೆ ಯಾರು ಟಿಪ್ಪಣಿ ಮಾಡುತ್ತಾರೋ ಅವರಿಗೆ ಸಲ್ಲುತ್ತದೆ. ಒಳ್ಳೆ positioning!

    • ಸರಿಪಡಿಸಿದ ಪದ್ಯಗಳು ಹೀಗಿವೆ ::

      ಹುಟ್ಟಿನಲಿ ನನ್ನಗ್ರಜನು, ನಾ
      ನಿಟ್ಟ ನಲ್ಮೆಯ ಪರಿವೆಯಿಲ್ಲದೆ
      ಅಟ್ಟುವನು ಧೂರ್ತನೆಡೆಗೆನ್ನನು ನೆಪದ ಮದುವೆಯಲಿ |
      ಕಟ್ಟದಿರೆ ನೀನೆನಗೆ ತಾಳಿಯ
      ಸುಟ್ಟಿ ಪೋಗುವುದೆನ್ನ ಸತ್ವವು
      ಚಟ್ಟದಾ ಶವ ಚಿತೆಯನೇರ್ವುದು ಮಡಕೆಯಗ್ನಿಯೊಡೆ ||

      ಪ್ರೇಕ್ಷಿಸಿದನವನೀಶ ವನಿತೆಯ,
      ಲಕ್ಷಣವತಿಯಪಾರ ದುಗುಡವ –
      ನೀ ಕ್ಷಣದೆ ಕರೆದೊಯ್ಯಲುಚಿತೆಂದೆಂದು ನಿರ್ಧರಿಸಿ |
      ಪಕ್ಷಿ ಮಡಕೆಯೊಳಿರ್ದ ಕೂಳ –
      ನ್ನೀಕ್ಷಿಸಲು ಚಟ್ಟೆಂದು ಕದಿವೊಡೆ
      ಅಕ್ಷಿ ಮಿಟುಕಲೆ ಹಾರಿಸಿದ ಮಂದಿರದೆ ರುಕ್ಮಿಣಿಯ ||

    • ರಾಮ್ ಬಹಳ ಹಿಡಿಸಿತು ನಿಮ್ಮ ಪದ್ಯಗಳು 🙂 ತು೦ಬಾಚೆನ್ನಾಗಿದೆ

  10. ಗುಡಿಯೊಳು ಚಟ್ಟನವತರಿಸಿ
    ಅಡಿಯಿಡಲಾವಂಚಿ ತೆಕ್ಕೆಯೊಳು ರುಕ್ಮಿಣಿಯಂ
    ತೊಡೆಮಡಕೆಯಿಮ್ಮಪಹರಿಸಿ
    ತಡೆದಾರುಕ್ಮಂಗೆ ಕೇಶವಪನಂ ಮಾಳ್ದಂ

    ದೋಷಗಳ ತೋರಿದರೆ ತಿದ್ದುವೆನು.

    • Your poem is really good. Barring few grammatical liberties taken, the verse is doing a nice justice to the given dattapadi
      Pl do participate more and more in padyapaanna

      • ಧನ್ಯವಾದಗಳು ಸಾರ್. ಪದ್ಯಪಾನಿಗಳ ಸಹಕಾರದೊಂದಿಗೆ ನನ್ನ ಪ್ರಯತ್ನವನ್ನು ಮುಂದುವರೆಸುತ್ತೇನೆ. ಕಲಿಯುವುದು ಬಹಳಷ್ಟಿದೆ.

    • ೧) ವಂಚಿ ಎಂದರೆ ವಂಚಿಸುವವನು ಎಂದೆ?
      ೨) ತೊಡೆಮಡಕೆಯಿಂ?

      • ವಂಚಿ ಎಂದರೆ ಇಲ್ಲಿ ವೇಣು ವಾದಕ – ಕೃಷ್ಣ ಎಂದು ತೆಗೆದು ಕೊಂಡಿದ್ದೇನೆ

        ತೊಡೆಮಡ – ಎರಡು ಅರ್ಥಗಳನ್ನು ತೆಗೆದು ಕೊಂಡಿದ್ದೇನೆ – ೧ ಸವಾರಿಯ ಒಂದು ಕ್ರಮ ೨. ಸಲಿಗೆ ; ಆತ್ಮೀಯತೆ
        ಆದರೆ ತೊಡೆಮಡಕೆ ಎನ್ನುವ ಪ್ರಯೋಗ ಸರಿಯೋ ತಪ್ಪೋ ತಿಳಿಯದು.

  11. ರಾಮ್ ಅವರಿ೦ದ ಸ್ಪೂರ್ತಿಹೊ೦ದುತ್ತಾ ಒ೦ದು ಪ್ರಯತ್ನ

    ಮೆರ್ಚಿದಳ್ ರುಕ್ಮಿಣಿಯು ಕೃಷ್ಣನ-
    ಮೆರ್ಚಿದ೦ ಶಿಶುಪಾಲ ಕುಹಕವ
    ಚರ್ಚೆಗನುಗುಣಗೈಯದೆನೆ ರುಕ್ಮಿಯಮನವನೊಲಿದು
    ಬೆರ್ಚಿದಾ ಕನ್ಯೆಯನಪಹರಿಸಿ
    ತೀರ್ಚಲಾ ಖೇಡಿಗನ, ಪಾಪವು
    ಪೆರ್ಚಿತೇಳ್ ಮಡಕೆಯೊಳು ಚಟ್ಟನೆ ಕೇಶವನೆಣಿಪ ತಾ೦

    ಕೃಷ್ಣನಮೆರ್ಚಿದ೦ = ಕೃಷ್ಣನ೦ ಎರ್ಚಿದ೦

  12. ಪದ್ಯಪಾನಿಗಳಿಗೆ ನಮಸ್ಕಾರಗಳು. ಶ್ರೀಯುತ ಶ.ಗಣೇಶರಿಗೆ ನಮನಗಳು.
    ನನ್ನ ಪದ್ಯರಚನಾಕೌಶಲ್ಯವು ಅಂಕುರಾವಸ್ಥೆಯಲ್ಲಿದೆಯಷ್ಟೆ.
    ಆದರೂ ೧೮ರ ನನಗೆ ‘ಪಾನ’ ಲಭ್ಯವೆಂಬ ನಂಬಿಕೆಯಿಂದ ಪ್ರಯತ್ನಿಸಿದ್ದೇನೆ;

    ರುಕ್ಮನ ಸ್ವಗತ ;

    ಶವವಾಯ್ತೆ ಶಿಶುಪಾಲಕಲ್ಯಾಣದೆನ್ನಾಸೆ
    ಕವಲಾಯ್ತೆಮನ ತಣಿದಚಿತೆಯಂಥ ಮೊಗಕೆ |
    ಚಟ್ಟಕಟ್ಟುವೆ ಪೆಣ್ಣಕದ್ದವಗೆ ನಾನೆನ್ನ
    ಜುಟ್ಟಕೊಯ್ದನೆ ಮಡಕೆಯಾಗೆ ಮಂಡೆ ||

    • ಸ್ವಾಗತವದೀಶ್ವರಗೆ, ರುಕ್ಮ ಸ್ವಗತದೊಡನೆ
      ಯಾಗತದೆಳೆಯ ಗೆಳೆಯ ಮಿತ್ರರಿಂಗೆ
      ರಾಗ ಭೋಗದ ಯೋಗದೀತಾಣದೊಳಗಿನ್ನ್ನು
      ಸಾಗಲೆಮ್ಮೊಡೆ ಪದ್ಯದಾ ಪಾನವು

      ಪದ್ಯ ಸೊಗಸಾಗಿದೆ. ನಾಲ್ಕು ಸಾಲುಗಳಲ್ಲೂ ಒಂದೇ ಪ್ರಾಸವಿದ್ದರೆ, ಇನ್ನೂ ಚೆನ್ನ.

  13. ಕುಶದಮೊನೆ ಯಂಕುರವೆ ಕೌಶಲದ ಹರಿತ ವಂ-
    ಕುಶಮಿಲ್ಲ ’ವಾಶಿಷಂಗೆ’ ನೆ ಕಾವ್ಯರಚನಾ
    ಸ್ಪಶಕೆ ರಸಪದ್ಯಪಾನಕ್ಕಿದೇ ಸ್ವಾಗತಂ
    ವಶಮಕ್ಕೆ ಪದ್ಯವಿದ್ಯಾರ್‍ಣವಸುಯಾನ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)