Aug 052012
 

ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ ::

ಆಟಿಗೆಯ ಮಾರಟಗಾರ್ತಿ

ಚಿತ್ರದ ಕೃಪೆ – ಅಂತರ್ಜಾಲ

  27 Responses to “ಪದ್ಯಸಪ್ತಾಹ – ೩೨ – ಚಿತ್ರಕ್ಕೆ ಪದ್ಯ”

 1. ಆಟಿಕೆಗೆ ಕಟ್ಟಿರುವಂತಹುದೇ ದಾರವೆರಡನ್ನು ತನ್ನ ಎಡ ತೋಳಿಗೆ ಕಟ್ಟಿಕೊಂಡಿದ್ದಾಳೆ. ಹೇಗೆ ಇವಳು ಆಟಿಕೆಯ ದಾರವನ್ನು ಎಳೆದರು ಅದು ಪಟಗುಟ್ಟುತ್ತದೆಯೋ, ಅಂತೆಯೇ…

  ತಮಟೆಯನ್ನೆಳೆಯಲ್ಕೆಳೆಯೊಂದನುಂ
  ಕುಮುದದಾನನೆ ಕಟ್ಟಿಹೆ ಚಂದದಿಂ|
  ಸುಮುದದಿಂದಲಿ ಹೆಜ್ಜೆಯನಿಕ್ಕಲೇ
  ನು ಮುಗುದೆ, ಸ್ವನಕರ್ಕಶದಾಟಿಕಂ||

  ಎಳೆಗಳನ್ನೆರಡನ್ನೆಡತೋಳನುಂ
  ಬೆಳಗುವಂದದಿ ಕಟ್ಟಿಹೆ ಚಂದದಿಂ|
  ಕೆಳೆಯರೀರ್ವರುಮಂತೆಯೆ ಮೋಹದಿಂ
  ದೆಳೆಯಲಂತೆಯೆ ನೀ ವಟಗುಟ್ಟುವಳ್||

  (ದ್ರುತವಿಲಂಬಿತ)

  • ಪ್ರಸಾದು –

   ಕಂಡಾಮೋಹಕ ಪೆಣ್ಣ ವಸ್ತ್ರದೆಡೆಯೊಳ್ ಜೋತಾಡೆ ಚೆಂಬಳ್ಳಿಗಳ್
   ಬೆಂಡಾಗೀಯದೆ ನಿಮ್ಮ ಚೆಂದ ಮುಖಮಂ ಮಾತಾಡಿಸಲ್ಕೆಳ್ದೊಡೇಂ ? 🙂

  • ಸ್ತುತಮಲಾ ತವ ಕಲ್ಪನೆ ನಿರ್ನೆರಂ
   ದ್ರುತವಿಲಂಬಿತವೃತ್ತಮಯಂ ನಿಯಂ-
   ತ್ರಿತಮತೀವರಸಾತ್ಮಕರೂಪದಿಂ
   ಜ್ತೆಗೊಳಿಪ್ಪುದು ವ್ಯಾಕೃತಿಯುಕ್ತಿಯಂ||

   • ಕಡೆಯ ಸಾಲು ತಪ್ಪಾಗಿ ಟಂಕಿತವಾಗಿದೆ. ದಯಮಾಡಿ ಹೀಗೆ ಓದಿಕೊಳ್ಳುವುದು:

    ಜತೆಗೊಳಿಪ್ಪುದು ವ್ಯಾಕೃತಿಯುಕ್ತಿಯಿಂ

  • ರಾಮ್,
   ನಲ್ವಾತಂ ನುಡಿಯಲ್ಕೆ ನಾಲಗೆಯನುಂ| ನಿನ್ಮಾತಿನಂತಾಡಿಸಲ್|
   ಖಲ್ವಾಟಂ ದಿಟ ನಾನು ಹೆಡ್ಡನಲವೈ| ಮಾತಾಡ್ವುದಾ ನಾರಿ ಕೈ|

  • ಮಾನನೀಯ,
   ಹಿಂದೆ ನಾನು ’ಕಿಲ’ ಎಂಬ ಸಂಸ್ಕೃತಪದ ಬಳಸಿದ್ದಕ್ಕೆ ಅಸಾಧುವೆಂದಿದ್ದಿರಿ. ಈಗ ತಾವು ’ತವ’ ಎಂಬ ಶುದ್ಧಸಂಸ್ಕೃತಪದ ಬಳಸಿದ್ದೀರಿ. ಏನಾದರೂ ವ್ಯತ್ಯಾಸವಿದೆಯೆ, ’ವ-ಮ-ಯೋರಭೇದಃ’ ಎಂಬುದನ್ನುಳಿದು?

  • If the last paada of the 1st verse is scripted as
   ನು ಮುಗುದೆ, ಪ್ರಣವಂ ಪಟಗುಟ್ಟುಗುಂ (ಪ್ರಣವ = ಪಣವ = ತಮಟೆ),
   it rhymes with ವಟಗುಟ್ಟುವಳ್ in last paada of 2nd verse.

 2. ಢವಢಢವಢವಮೆನುತ ಶಬ್ಧದೆ
  ಸವೆಸುತಲಿ ತಾನೊ೦ದದಾಟಿಕೆ
  ಯುವತಿಸೆಳೆವೊಲ್ ಜನರ ಬುಟ್ಟಿಯ ಕಾಣದಾಟದೆಡೆ
  ಅವಯವಿಗಳ೦ ಮಾಯೆಯ೦ತೆಯೆ
  ಛವಿಗಳ೦ ತೋರುತಲಿ ಸ೦ತತ
  ಭವದೆಡೆಗದದೃಷ್ಟದಾಟಕೆ ಸೆಳೆಯುತಿಹಳಲ್ತೇ

  • ಚೆಲುವೆನಿಸುವ ನಿಬಂಧನೆಯಿದಯ್
   ಫಲಿತಮೆನಲೇಂ ಪ್ರತಿಭೆಯಾ; ದು-
   ರ್ಲಲಿತಮೆನಲೇಂ ಕವಿತೆಯಾ, ಸೋಮಪ್ರಭಾಮುಖಿಯಾ!!

  • ಅನುಪಮದುಪಮೆಯ ಬೆದಕಿಹೆ ಚಳಿಗದಿ
   ರನೆ, ಮೊದಲಿಗನದು ಬರಿ ಕುಹಕ|

   1) ಮೊದಲಿಗನು – ನಾನೇ. ಈ postingಲ್ಲಿ ಮೊದಲ ಪದ್ಯ ಬರೆದವನು.
   2) ಚತುರ್ಮಾತ್ರಾಚೌಪದಿಯ ಅರ್ಧಭಾಗ – ಸರ್ವಲಘು.

   • ಪ್ರಸಾದು ಧನ್ಯವಾದಗಳು,
    ಆದರೆ “ಮೊದಲಿಗನದು ಬರಿ ಕುಹಕ” ಎ೦ಬುದನ್ನು ಒಪ್ಪುವುದಿಲ್ಲ 🙂
    ಪದ್ಯಕ್ಕೆ ಗಣೇಶ್ ಸರ್ ನಮ್ಮೆಲ್ಲರ ಅಭಿಪ್ರಾಯವನ್ನು ಬಿ೦ಬಿಸಿದ್ದಾರೆ
    ಅತೀವರಸಾತ್ಮಕರೂಪದಿಂ ಜತೆಗೊಳಿಪ್ಪುದು ವ್ಯಾಕೃತಿಯುಕ್ತಿಯಿಂ

 3. ಜನಪದ ಶೈಲಿಯಲ್ಲಿ ಅರ್ಧಛಂದಸ್ಸಿನಲ್ಲಿ ಈ ಪ್ರಯತ್ನ :

  ಜಗವನಾಳುವ ಶಕ್ತಿ ಮಾರಾಟ ನೆಪದಲ್ಲಿ
  ಜಗುಲಿsಮೇಲಿಂದಾಚೆ ನೋಡ್ಯಾsಳ | ನಸುನಕ್ಕು
  ಬಗೆಬಗೆಯ ಆಟಿಕೆ ತೋರ್ಯಾsಳ

  ಪಾತಾಳ ಭೂ ತಲ ಸುತಲ ತಲಾತಲ
  ಅತಲ ವಿತಲ ಎಲ್ಲಾ ಗಮನಿsಸಿ| ನಿಲ್ಲುತ್ತ
  ನೇತಾರನೆಂಬುದ ಮರೆತಾsಳ !!

  ತನ್ನದ್ದೇ ಪ್ರತಿರೂಪ ಸೂರಪ್ಪ ಸಾಗರ
  ಭಿನ್ನವಾಗಿರ್ಪಂತೇ ತೋರಿsಸಿ | ಜನಕೆಲ್ಲ
  ಕನ್ನಡಿಯೊಳ ಗಂಟು ಆಗ್ಯಾsಳ !!

 4. ಈ ಚಿತ್ರಕ್ಕೆ “ದೋ ಆಂಖೇ ಬಾರ ಹಾಥ್” ಎಂಬ ಹಿಂದೀ ಚಲನಚಿತ್ರದ ಈ ಹಾಡು ಪ್ರೇರಣೆಯಾಗಿರಬಹುದು :: http://www.youtube.com/watch?v=cklw6hwDdyg&feature=related

 5. “ಭುವನ ಸುಂದರಿ” (ಪ್ರಕೃತಿ ಮಾತೆಯಲ್ಲದೆ ಮತ್ತಾರು?!)

  ಹೇಗೆ ಕಾಣಲಿ ತಾಯೆ ನಿನ್ನ ಅವ್ಯಕ್ತ
  ಭೂನಭವ ವ್ಯಾಪಿಸಿಹ ನಿನ್ನ ಅಸ್ತಿತ್ವ |
  “ಭುವನಸುಂದರಿ” ಭವ್ಯ ನಿನ್ನ ವ್ಯಕ್ತಿತ್ವ
  ಸರ್ವಾಂಗ ಭೂಷಿತವು ನಿನ್ನ ರೂಪತ್ವ |
  ಏನು ಏನೇ ನೀನಾ ನಿರಾಭರಣ ಸುಂದರಿ?
  ನಾ ಕಂಡೆನೆಲೆ ನಿನ್ನ ಸರ್ವಾಭರಣ ವೈಖರಿ ||

  ಕರಿ ಮುಗಿಲ ಹೆರಳಿಗೆ ಸಪ್ತವರ್ಣದ ದಂಡೆ
  ಅಕ್ಕಪಕ್ಕದಿ ಅಲ್ಲೇ ಸೂರ್ಯಚಂದ್ರರ ಕಂಡೆ |
  ಮಿನುಗುತಿದೆ ಕಿವಿ ಹಾಲೆ ಸಪ್ತ ನಕ್ಷತ್ರದೋಲೆ
  ಮೊಗವ ಮುತ್ತಿದೆಯಲ್ಲೆ ಕರಿ ಕುರುಳ ಲೀಲೆ |
  ನಸು ತಿರುಗಲೆ ಚಲುವೆ, ಎಲ್ಲೆ ಬೈತಲೆ ಬೊಟ್ಟು ?
  ನಸುನಗುತಲಿಹೆ ಹಣೆಗೆ ಕೆಂದಾವರೆ ತಿಲಕವಿಟ್ಟು ||

  ಮುಂಜಾವು ಮುಸ್ಸಂಜೆ ನಿನ್ನ ಕೆನ್ನೆಯ ಕೆಂಪು
  ಹಚ್ಚಿಸಿದೆ ಹೆಚ್ಚಿಸಿದೆ ನಿನ್ನ ತುಟಿಗೂ ಕೆಂಪು |
  ಕೆಂಪುಕೊಕ್ಕ ಹಸಿರುಗಿಣಿ ನಿನ್ನ ಮೂಗಿನ ನತ್ತು
  ಒಪ್ಪು ತಂತೇ ಕಡಲಂಚು ಕಾಡಿಗೆಯನಿತ್ತು |
  ಕಪ್ಪು ಹಸು ಕರುವಿಟ್ಟ ಗುಳಿ ಗಲ್ಲದ ಬೊಟ್ಟು
  ದೃಷ್ಟಿ ತೆಗೆಯಲೇ ನಿನಗೆ ನಟಿಕೆ ನೀವಳಿಸಿಟ್ಟು ||

  ನೀ ಉಟ್ಟ ಪಚ್ಚೆ ಪಟ್ಟೆ ಸೀರೆಯ ಒಡಲು
  ಹೊನ್ನ ಕುಸುಮವು ತಂದ ಕಲೆ ಕುಸುರಿ ಸೆರಗು |
  ಸೆರಗ ಅಂಚಿನ ಕಟ್ಟು, ತೂಗು ಗರಿಗಳ ಕುಚ್ಚು
  ಅಬಬ್ಬ ಈ ಉಡುಗೆ ನನ್ನ ಅಚ್ಚು ಮೆಚ್ಚು |
  ಹೊಂದುತಿದೆ ಬಳಿಯ ಮಣ್ಣ ರವಿಕೆಯ ಕಣವು
  ಶ್ರೀಗಂಧ ಪರಿಮಳದ ಮೃದು ಮಧುರ ಘಮವು ||

  ಬಗೆ ಬಣ್ಣದ ಹೂವ ರತ್ನ ಕಂಠಭರಣ
  ಬೆಳ್ಳಕ್ಕಿಯ ಸಾಲು ಮುತ್ತ ತೋಮಾಲೆ ಕಾಣ |
  ಹಬ್ಬಿ ತಬ್ಬಿದ ಬಳ್ಳಿ ನಿನ್ನ ವಂಕಿ ಒಡ್ಯಾಣ
  ತೊಡಿಸಿವೆ ನಿನ್ನ ಕೈಗೆ ಹಸಿರು ಕಡಗ ಕಾಣ |
  ಅಲೆಯ ಉಂಗುರ ತೊಟ್ಟ ನಿನ್ನ ಕರಚರಣ
  ತೊನೆಯುವ ತೆನೆಕಾಳು ಕಾಲ್ಗೆಜ್ಜೆ ಕಾಣ ||

  ನಿಂತಿರುವೆ ನೀಹೊತ್ತು ಜೀವಜಗದಾಭಾರ
  ನಡೆದಿರುವೆ ನೀಗೊತ್ತು ಕಟ್ಟಿ ಮಮತೆಯದಾರ |
  ಹೊತ್ತಿರುವೆ ನೀಶಿರದಿ ಮಾರನಾಟಿಕೆ ಬುಟ್ಟಿ
  ಎಳೆದಿರುವೆ ನೀಕರದಿ ಮಾಯೆಯಾಟಕೆ ಕಟ್ಟಿ |
  ನೀನಲ್ಲವೇ ಭವದ ಮಾರಾಟಗಾರ್ತಿ
  ನಾಬಲ್ಲೆ ನೀ ಭುವಿಯ ನಿಜ ಮಾಟಗಾರ್ತಿ ||

  ಚಂದ ತೋರಿದ ನಿನಗೆ ನಾ ಋಣಿಯೆ ತಾಯೆ
  ಛಂದಸ್ಸು ಇಲ್ಲದಿರೆ ಕ್ಷಮೆಯಿರಲಿ ಕಾಯೇ ||

 6. ರಚನೆ ಚೆನ್ನಾಗಿದೆ. ಇದು ಸರಳರಗಳೆಯೇ ಆಗಿದೆ. ಆದರೆ ದಯಮಾಡಿ ಪ್ರಾಸ ಸಹಿತವಾದ ಛಂದಸ್ಸಿನಲ್ಲಿ ಪದ್ಯವನ್ನು ರಚಿಸಲ್ ಯತ್ನಿಸಿರಿ, ಶ್ರೀಶ ಅವರೆದಂತೆ ಮೊದಲಿಗೆ ಛಂದಸ್ಸಿನ ಪಾಠಗಳನ್ನು ಚೆನ್ನಾಗಿ ಗಮನಿಸಿಕೊಳ್ಳಿರಿ. ತಪ್ಪದೆ ಪದ್ಯಪಾನಕ್ಕೆ ಬರೆಯುತ್ತಿರಿ:-)

  • ಗಣೇಶ್ ಸರ್,
   ಸರಳ”ರಗಳೆ” ಮೆಚ್ಚಿದಕ್ಕೆ ಧನ್ಯವಾದಗಳು. “ದ್ವಿತೀಯ ವಿಘ್ನ” ವಾಗದಿರಲೆಂದು ಬರೆದದ್ದು. ನಿಮ್ಮ ಸಲಹೆ ನನಗೆ ಮತ್ತಷ್ಟು ಸ್ಫೂರ್ತಿ ತಂದಿದೆ.
   ಪದ್ಯಪಾಕ ಕಲಿತು ಪದ್ಯಪಾನಕ್ಕೆ ಬರೆವೆ. ಕಾಲೇಜು ದಿನಗಳಲ್ಲಿ ಕನ್ನಡ ಕಲಿತದ್ದು, ಹಳೆಗನ್ನಡ ಬಳಸುವ ಬಗೆ ತಿಳಿಸಿ.
   ವಂದನೆಗಳು

 7. ಹೆಣ್ಣೋ ಹೊನ್ನೋ ಮಣ್ಣೋ
  ಕಾಣೋ ಕಣ್ಣಿಗೆ ಅಪ್ಯಾಯಮಾನ!
  ಒಲವಿನ ಚೆಲುವಿಗೆ
  ಅಂದವು ತಾ ದೇದಿಪ್ಯಮಾನ!
  ಒನಪು ಒಯ್ಯಾರ ಕಟಿಯ ತಿರುವು
  ಅಂದವ ಕಂಡರೆಲ್ಲಾ ಮರೆವು!
  ಶಿರದಿ ಪುಟ್ಟಿ ಬಿಂಕದ ನಡಿಗೆ
  ಕಂಡವರೆದೆ ಅಗೋ ಪ್ರೀತಿಯೆಡೆ!
  ಗೆಜ್ಜೆ ಕಾಲ್ಗಳು ತೊಳಪ ಮೀನ್ಖಂಡಗಳು
  ಹೆಜ್ಜೆಯಿರಿಸೆ ಪುಡಿಪುಡಿ ಭಾವಗಳು
  ತುಂಬಿದೆದೆಯೊಲು ನೂರು ಉದ್ಗಾರ
  ಕಣ್ಣಲಿ ಕಣ್ ಬೆರೆಸೆ ಜೀವ ಝೆಂಕಾರ!

 8. ಕೃಷ್ಣಜನ್ಮಾಷ್ಟಮಿಯ ಪುಣ್ಯದಿನಕ್ಕೆ:

  ಅಷ್ಟಮಿಯೆ ಧನ್ಯೆ ನೀಂ ಪರ
  ಮೇಷ್ಠಿಯೊಸೆದನಂದು [ನಿನ್ನ] ಸೈಪುವೆರ್ಚಿದ ಪರಿಯೇ!
  ಮುಷ್ಟಿಹಿಡಿಯಾಯ್ತು ಪೌರ್ಣಿಮೆ-
  ಯಷ್ಟೂ ಪೂರ್ಣೇಂದುಕೋಟಿಯನುಡಿದ ಭಾಗ್ಯಂ
  [ಒಸೆ = ಅನುಗ್ರಹಿಸು, ಉಡಿ = ಮೊಳಕೆಯೊಡೆ ಸೈಪು = ಪುಣ್ಯ]

 9. ಹೊನ್ನೂರ ಜನ ಹೊನ್ನು ಮೊಗೆದಿತ್ತು ನೀ ಹೊತ್ತ ಹೊರೆಯ ತಗ್ಗಿಸುವರೆಂದೆಣಿಸಿರುವೆಯಾ?
  ಮೊನ್ನೆಗೇ ಹಳತಾದ ಮಣ್ಣಿನಾಟಿಕೆಯೆಂದು ಮೂಗುಮುರಿಯುವರೌ ಮಗುದೆ ಜೋಕೆ
  ನಿನ್ನ ಕಷ್ಟಗಳ ಮುತ್ತಿನಹಾರದ ಹೊಳಪನೊಂದೀಸು ಕಾಣರೀ ಕುರುಡು ಮಂದಿ
  ನಿನ್ನೂರ ಮಂದಿ ಮೆಚ್ಚುವ ಬಟ್ಟೆ ಬೆಳ್ಳಿಗಳು ಸೆಳೆವುದೇನಿವರ ಕಣ್? ಮರುಳೆ ನೀನು

  ನೆಲದ ಕಂಪನೆ ಮೈದಾಳಿ ಹೀರಿ ಬೆಳೆದು
  ಬಲಿತ ಸಂಸ್ಕೃತಿಯನೆಳೆದು ಬಲಿಗೆ ತರಲು
  ಹಿಂದೆ ದಮ್ಮಡಿ ಮೊಳಗಿತು ಚರಮ ನಾದ
  ಮುಂದೆ ಕಂತುವ ನೇಸರು ಕಾಣದಾದ

 10. ಬಗೆ ಬಗೆ ಕನಸನು ಮನಸಲಿ ತುಂಬುವ
  ಹೊಸ ಹೊಸ ಆಟಿಗೆ ಮಾರಲು ತಂದಿಹೆ
  ಗಿರಿ ಗಿರಿ ತಿರುಗುವ ಬಣ್ಣದ ಬುಗುರಿ
  ಸರಿಗಮ ಸದ್ದಿನ ಬಿದಿರಿನ ಬಾಸುರಿ
  ಕಣ್ಣಿನ ರೆಪ್ಪೆಯ ರಪ್ಪನೆ ಮುಚ್ಚುವ
  ಪುಟಾಣಿ ಲಂಗದ ಜಪಾನಿ ಗೊಂಬೆ
  ಹೊಸ ಹೊಸ ರೀತಿಯ ಕೀಲಿಯ ಗೊಂಬೆ
  ಮಕ್ಕಳಿಗೆಂದೇ ಮಾರಲು ಬಂದೆ
  ಲಾಗವ ಹಾಕುವ ಮಂಗನ ಜೋಡಿ
  ತಿರ್ರನೆ ತಿರುಗುವ ತಿರುಸಿನ ಬಂಡಿ
  ಧಡಧಡ ಸದ್ದಿನ ಮುದ್ದಿನ ಆನೆ
  ಮುಸುಮುಸುಗುಟ್ಟುವ ಅಡವಿಯ ಕಡವೆ
  ದೂರದ ದೇಶದ ದುಬಾರಿ ಗೊಂಬೆ
  ನಮ್ಮಯ ಮಕ್ಕಳಿಗೆಂದೇ ತಂದೆ
  ಸರ ಸರ ಹರಿಯುವ ಹಸಿರಿನ ಹಾವು
  ತರ ತರ ಬಣ್ಣದ ಸುಂದರ ಹೂವು
  ಇಲಿಯನು ಹಿಡಿಯುವ ಸೊಕ್ಕಿನ ಬೆಕ್ಕು
  ಬೆಕ್ಕಿನ ಹಾಲಿಗೆ ಬೆಲ್ಲದ ಮುಕ್ಕು
  ಬಗೆಬಗೆ ಗೊಂಬೆಯ ಬುಟ್ಟಿಯ ಹೊತ್ತು
  ಮಾರಲು ನಮ್ಮಯ ಹೊಟ್ಟೆಗೆ ತುತ್ತು
  ತಿಪ್ಪೆಯ ಕೆದರುವ ಜಂಬದ ಕೋಳಿ
  ಕುಣಿಕುಣಿದಾಡುವ ಮೊಲಗಳ ಜೋಡಿ
  ಕಾಗೆಯ ಗೂಡಿನ ಜೀವನ ಗುಟ್ಟು
  ಕೋಗಿಲೆ ಮೊಟ್ಟೆಯು ಮಾಡಿದೆ ರಟ್ಟು
  ಅಕ್ಕರೆ ಮಗುವಿನ ಸಕ್ಕರೆ ನಿದ್ದೆಗೆ
  ಬಗೆಬಗೆ ಬಣ್ಣದ ಆಟಿಗೆ ತಂದಿಹೆ
  ಹಗಲಿನ ನಿದ್ದೆಯ ಗತ್ತಿನ ಗೂಗೆ
  ಕೋಗಿಲೆ ಮರಿಯನು ಸಾಕುವ ಕಾಗೆ
  ಟಮಟಮ ಸಾರುವ ತಿಮ್ಮನ ತಮಟೆ
  ತಮ್ಮನ ಅಳುವನು ನಿಲಿಸುವ ಜಾಗಟೆ
  ಮಗುವಿನ ನಿದ್ದೆಯ ಮುದ್ದಿನ ನಗುವಿಗೆ
  ಸದ್ದೇ ಮಾಡದ ಗೊಂಬೆಯ ತಂದಿಹೆ
  ಸಿಡುಕಿನ ಮುಸುಡಿಯ ಕೆಡುಕಿನ ಮಿಡತೆ
  ಬಣ್ನದ ಕುಡಿಕೆಯ ಮಣ್ಣಿನ ಮಡಕೆ
  ನೆಗೆಯುತ ಕೆನೆಯುವ ಹಾರುವ ಕುದುರೆ
  ಹಾರುತ ನೆಗೆಯುವ ಸುಂದರ ಚಿಗರೆ
  ಮಕ್ಕಳ ಕಣ್ಣಿನ ಮಿಟುಕದ ನೋಟಕೆ
  ಚಿಟಿಕೆ ಹೊಡೆಯುವ ಬೊಂಬೆಯ ತಂದಿಹೆ
  ಹಾವನು ಕುಕ್ಕುವ ಕೊಕ್ಕಿನ ಗರುಡ
  ಹಕ್ಕಿಯ ಒದೆಯುವ ಬೇಟೆಯ ಗಿಡುಗ
  ಕಡಲಿನ ಅಲೆಯಲಿ ತೇಲುವ ಹಡಗು
  ಬೊಂಬೆಯ ಕಾಲಿನ ಹೊಳೆಯುವ ಕಡಗ
  ಮಕ್ಕಳ ಮೋಜಿನ ಮಾಟದ ಆಟಕೆ
  ಹೊಸ ಹೊಸ ಆಟಿಗೆ ಮಾರಲು ಬಂದಿಹೆ

 11. ಜಯ ಪ್ರಕಾಶರೇ :),

  ಚೆನ್ನಾಗಿದೆ ಭಾವ, ಪದ್ಯಪಾನದ ಪಾಠಗಳನ್ನು ಗಮನಿಸಿರಿ ಅಭಿಜಾತಛ೦ದಸ್ಸುಗಳಲ್ಲಿ ಬರಿಯುವ ಪ್ರಯತ್ನ ಮಾಡಿರಿ ಎ೦ದು ಕೇಳಿಕೊಳ್ಳುತ್ತೇನೆ.

  ಚೆ೦ದಮಿಹ೦ತ್ಯಪ್ರಾಸವದಿರ್ಕು೦
  ಪೊ೦ದಿದೆಭಾಪೆನೆಕಲ್ಪನೆ ಹೃದ್ಯ೦
  ಕು೦ದಿಹುದಾದಿಯಪ್ರಾಸವದೇಕಯ್?
  ಛಾ೦ದಸಬ೦ಧವು ಪದ್ಯಕೆ ಬೇಕಯ್!

 12. Pl read first line as:
  ಚೆ೦ದಮಿಹ೦ತ್ಯದಪ್ರಾಸವದಿರ್ಕು೦

  • ಸೋಮ ರವರಿಗೆ ವಂದನೆಗಳು,ಪದ್ಯಪಾನದ ವಿಡಿಯೋ ತರಗತಿಗಳ ಪ್ರಭಾವವೇ ಅಂತ್ಯಪ್ರಾಸದ ಪ್ರಸಾದ. ಭಾಷಾಶಾಸ್ತ್ರ ಬರಿ ವಿಡಿಯೋ ತರಗತಿಗಳಿಂದ ಕಲಿಯುವ ಸಾಮರ್ಥ್ಯ ನನ್ನಲ್ಲಿಲ್ಲ.ಈ ಸಂಬಂಧವಾಗಿ ಮಾಹಿತಿ ಕೊಡಿ. ಶತಾವಧಾನಿಗಳಿಗೆ ಪ್ರಣಾಮಗಳು.

   • ಜಯಪ್ರಕಾಶರೆ,

    ಮೊದಲ್ಗೆ ಪ್ರಾಸ೦ ತ್ರಾಸೆನಿ-
    ಪುದು ಸಹಜ೦ ಸ೦ತತ೦ ಪ್ರಯತ್ನ೦ ಗಯ್ಯಲ್
    ಮುದದಿ೦ ಪೊಳೆವುದದೊರೆಯಯ್
    ಬದಿಯೊಳ್ ದೂಡುತಲಿ ಮನದ ದುಗುಡವನೀಗಳ್

    ಪ್ರಯತ್ನಿಸುತ್ತಲಿರಿ… ಮಾರ್ಗ ತ೦ತಾನೆ ಸುಲಭವಾಗುತ್ತದೆ 🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)